ಹಣಕಾಸು ಸಚಿವಾಲಯ
ಪಿಎಂ ಆವಾಸ್ ಯೋಜನೆ ನಗರ 2.0 ಅಡಿಯಲ್ಲಿ 10 ಲಕ್ಷ ಕೋಟಿ ರೂ.ಗಳ ಹೂಡಿಕೆಯೊಂದಿಗೆ 1 ಕೋಟಿ ನಗರ ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳ ವಸತಿ ಅಗತ್ಯಗಳನ್ನು ಈಡೇರಿಸಲಾಗುವುದು
ಕೈಗಾರಿಕಾ ಕಾರ್ಮಿಕರಿಗೆ ವಸತಿ ನಿಲಯ ಮಾದರಿಯ ವಸತಿಯೊಂದಿಗೆ ಬಾಡಿಗೆ ಮನೆಗಳನ್ನು ಪಿಪಿಪಿ ಮಾದರಿಯಲ್ಲಿ ಸುಗಮಗೊಳಿಸಲಾಗುವುದು: ಶ್ರೀಮತಿ ನಿರ್ಮಲಾ ಸೀತಾರಾಮನ್
'ನಗರಗಳನ್ನು ಬೆಳವಣಿಗೆಯ ಕೇಂದ್ರಗಳಾಗಿ' ಅಭಿವೃದ್ಧಿಪಡಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ಜೊತೆ ಸೇರಿ ಕೆಲಸ ಮಾಡಲಿದೆ
100 ದೊಡ್ಡ ನಗರಗಳಿಗೆ ನೀರು ಸರಬರಾಜು, ಒಳಚರಂಡಿ ಸಂಸ್ಕರಣೆ ಮತ್ತು ಘನತ್ಯಾಜ್ಯ ನಿರ್ವಹಣಾ ಯೋಜನೆಗಳು ಮತ್ತು ಸೇವೆಗಳನ್ನು ಉತ್ತೇಜಿಸಲಾಗುವುದು
ಮುಂದಿನ ಐದು ವರ್ಷಗಳಲ್ಲಿ ಪ್ರತಿ ವರ್ಷ 100 ಸಾಪ್ತಾಹಿಕ 'ಹಾತ್ಸ್'ಗಳ ಅಭಿವೃದ್ಧಿಗೆ ಬೆಂಬಲ ನೀಡಲು ಸರ್ಕಾರ ಉದ್ದೇಶಿಸಿದೆ
ಹೆಚ್ಚಿನ ಸ್ಟ್ಯಾಂಪ್ ಡ್ಯೂಟಿ ವಿಧಿಸುವುದನ್ನು ಮುಂದುವರಿಸುವ ರಾಜ್ಯಗಳಿಗೆ ದರಗಳನ್ನು ಮಿತಗೊಳಿಸಲು ಪ್ರೋತ್ಸಾಹಿಸುವುದು
Posted On:
23 JUL 2024 12:44PM by PIB Bengaluru
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಸಂಸತ್ತಿನಲ್ಲಿ 2024-25ರ ಕೇಂದ್ರ ಬಜೆಟ್ ಅನ್ನು ಮಂಡಿಸುತ್ತಾ, "ದೇಶವನ್ನು ಬಲಿಷ್ಟವಾದ ಅಭಿವೃದ್ಧಿ ಮತ್ತು ಸರ್ವಾಂಗೀಣ ಸಮೃದ್ಧಿಯ ಹಾದಿಯಲ್ಲಿ ಕೊಂಡೊಯ್ಯಲು ಜನರು ನಮ್ಮ ಸರ್ಕಾರಕ್ಕೆ ಅನನ್ಯ ಅವಕಾಶವನ್ನು ನೀಡಿದ್ದಾರೆ" ಎಂದು ಹೇಳಿದರು.
ಪಿಎಂ ಆವಾಸ್ ಯೋಜನೆ
ಪಿಎಂ ಆವಾಸ್ ಯೋಜನೆಯ ಬಗ್ಗೆ ಮಾತನಾಡಿದ ಕೇಂದ್ರ ಸಚಿವರು, ಪಿಎಂ ಆವಾಸ್ ಯೋಜನೆಯಡಿ ದೇಶದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಮೂರು ಕೋಟಿ ಹೆಚ್ಚುವರಿ ಮನೆಗಳನ್ನು ಘೋಷಿಸಲಾಗಿದೆ, ಇದಕ್ಕಾಗಿ ಬಜೆಟ್ ನಲ್ಲಿ ಅಗತ್ಯ ಹಂಚಿಕೆಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು. ಪಿಎಂ ಆವಾಸ್ ಯೋಜನೆ ನಗರ (ಅರ್ಬನ್) 2.0 ಅಡಿಯಲ್ಲಿ, 1 ಕೋಟಿ ನಗರ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ವಸತಿ ಅಗತ್ಯಗಳನ್ನು 10 ಲಕ್ಷ ಕೋಟಿ ರೂ.ಗಳ ಹೂಡಿಕೆಯೊಂದಿಗೆ ಈಡೇರಿಸಲಾಗುವುದು ಎಂದು ಅವರು ಹೇಳಿದರು. ಇದರಲ್ಲಿ ಮುಂದಿನ 5 ವರ್ಷಗಳಲ್ಲಿ 2.2 ಲಕ್ಷ ಕೋಟಿ ರೂ.ಗಳ ಕೇಂದ್ರ ನೆರವು ಸೇರಿದೆ. ಕೈಗೆಟುಕುವ ದರದಲ್ಲಿ ಸಾಲ ನೀಡಲು ಅನುಕೂಲವಾಗುವಂತೆ ಬಡ್ಡಿ ಸಬ್ಸಿಡಿಯನ್ನು ಸಹ ಕಲ್ಪಿಸಲಾಗಿದೆ ಎಂದೂ ಅವರು ಹೇಳಿದರು.
ಬಾಡಿಗೆ ವಸತಿ
ಬಾಡಿಗೆ ವಸತಿಗಳ ಬಗ್ಗೆ ಮಾತನಾಡಿದ ಕೇಂದ್ರ ಸಚಿವರು, "ಕೈಗಾರಿಕಾ ಕಾರ್ಮಿಕರಿಗೆ ವಸತಿ ನಿಲಯ ಮಾದರಿಯ ವಸತಿಯೊಂದಿಗೆ (ಡಾರ್ಮೆಟ್ರಿ) ಬಾಡಿಗೆ ಮನೆಗಳನ್ನು ವಿಜಿಎಫ್ ಬೆಂಬಲ ಮತ್ತು ಆಂಕರ್ ಕೈಗಾರಿಕೆಗಳ ಬದ್ಧತೆಯೊಂದಿಗೆ ಪಿಪಿಪಿ ಮಾದರಿಯಲ್ಲಿ ಸುಗಮಗೊಳಿಸಲಾಗುವುದು" ಎಂದು ಹೇಳಿದರು. ವರ್ಧಿತ ಲಭ್ಯತೆಯೊಂದಿಗೆ ದಕ್ಷ ಮತ್ತು ಪಾರದರ್ಶಕ ಬಾಡಿಗೆ ವಸತಿ ಮಾರುಕಟ್ಟೆಗಳಿಗೆ ನೀತಿಗಳು ಮತ್ತು ನಿಬಂಧನೆಗಳನ್ನು ಸಕ್ರಿಯಗೊಳಿಸಲಾಗುವುದು ಎಂದು ಅವರು ಹೇಳಿದರು.
ಬೆಳವಣಿಗೆಯ ಕೇಂದ್ರಗಳಾಗಿ ನಗರಗಳು
'ನಗರಗಳನ್ನು ಬೆಳವಣಿಗೆಯ ಕೇಂದ್ರಗಳಾಗಿ' ಅಭಿವೃದ್ಧಿಪಡಿಸಲು ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ಕೆಲಸ ಮಾಡುತ್ತದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಹೇಳಿದರು. "ಆರ್ಥಿಕ ಮತ್ತು ಸಾರಿಗೆ ಯೋಜನೆ ಹಾಗು ನಗರ ಯೋಜನೆಗಳನ್ನು ಬಳಸಿಕೊಂಡು ನಗರ ಪ್ರದೇಶಗಳ ಕ್ರಮಬದ್ಧ ಅಭಿವೃದ್ಧಿಯ ಮೂಲಕ ಇದನ್ನು ಸಾಧಿಸಲಾಗುವುದು" ಎಂದು ಕೇಂದ್ರ ಸಚಿವರು ಹೇಳಿದರು.
ಪರಿವರ್ತನಾತ್ಮಕ ಪರಿಣಾಮದೊಂದಿಗೆ ಅಸ್ತಿತ್ವದಲ್ಲಿರುವ ನಗರಗಳ ರಚನಾತ್ಮಕ ಬ್ರೌನ್ ಫೀಲ್ಡ್ (ಈ ಹಿಂದೆ ಬಳಸಲಾಗುತ್ತಿದ್ದ ಅಥವಾ ಅಭಿವೃದ್ಧಿ ಮಾಡಲಾಗಿದ್ದ ಆದರೆ ಈಗ ಹಳೆಯದಾಗಿರುವ) ಪುನರಾಭಿವೃದ್ಧಿಗಾಗಿ, ನೀತಿಗಳು, ಮಾರುಕಟ್ಟೆ ಆಧಾರಿತ ಕಾರ್ಯವಿಧಾನಗಳು ಮತ್ತು ನಿಯಂತ್ರಣವನ್ನು ಸಕ್ರಿಯಗೊಳಿಸಲು ಸರ್ಕಾರ ಚೌಕಟ್ಟನ್ನು ರೂಪಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು ತಮ್ಮ ಕೇಂದ್ರ ಬಜೆಟ್ ಭಾಷಣದಲ್ಲಿ, 30 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ 14 ದೊಡ್ಡ ನಗರಗಳಿಗೆ ಸಾರಿಗೆ ಆಧಾರಿತ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನ ಮತ್ತು ಹಣಕಾಸು ಕಾರ್ಯತಂತ್ರದೊಂದಿಗೆ ಘೋಷಿಸಿದರು.
ನೀರು ಸರಬರಾಜು ಮತ್ತು ನೈರ್ಮಲ್ಯ
ನೀರು ಸರಬರಾಜು ಮತ್ತು ನೈರ್ಮಲ್ಯದ ಬಗ್ಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವರು, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳು ಮತ್ತು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕುಗಳ ಸಹಭಾಗಿತ್ವದಲ್ಲಿ 100 ದೊಡ್ಡ ನಗರಗಳಿಗೆ ಲಾಭ ಮತ್ತು ಯಶಸ್ಸು ತರುವಂತಹ ಯೋಜನೆಗಳ ಮೂಲಕ ಉತ್ತೇಜಿಸುತ್ತದೆ ಎಂದು ಹೇಳಿದರು. ಈ ಯೋಜನೆಗಳಲ್ಲಿ ಸಂಸ್ಕರಿಸಿದ ನೀರನ್ನು ನೀರಾವರಿಗೆ ಬಳಸಲು ಮತ್ತು ಹತ್ತಿರದ ಪ್ರದೇಶಗಳಲ್ಲಿನ ಕೆರೆಗಳನ್ನು ತುಂಬಿಸಲು ಸಹ ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ಸಾಪ್ತಾಹಿಕ 'ಹಾತ್ಸ್' (ವಾರದ ಆಹಾರ ಸಂತೆ)
ಬೀದಿ ಬದಿ ವ್ಯಾಪಾರಿಗಳ ಬದುಕನ್ನು ಪರಿವರ್ತಿಸುವಲ್ಲಿ ಪಿಎಂ ಸ್ವನಿಧಿ ಯೋಜನೆಯ ಯಶಸ್ಸಿನ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷಗಳಲ್ಲಿ ಆಯ್ದ ನಗರಗಳಲ್ಲಿ 100 ಸಾಪ್ತಾಹಿಕ 'ಹಾತ್ಸ್' ಅಥವಾ ಬೀದಿ ಬದಿ ಆಹಾರ ತಾಣಗಳ ಅಭಿವೃದ್ಧಿಗೆ ಬೆಂಬಲ ನೀಡುವ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ಶ್ರೀಮತಿ ನಿರ್ಮಲಾ ಸೀತಾರಾಮನ್ ಘೋಷಿಸಿದರು.
ಸ್ಟ್ಯಾಂಪ್ ಡ್ಯೂಟಿ
ಎಲ್ಲರಿಗೂ ಅನುಕೂಲವಾಗುವಂತೆ ದರಗಳನ್ನು ಮಿತಗೊಳಿಸಲು ಹೆಚ್ಚಿನ ಸ್ಟ್ಯಾಂಪ್ ಡ್ಯೂಟಿ ವಿಧಿಸುವುದನ್ನು ಮುಂದುವರಿಸುತ್ತಿರುವ ರಾಜ್ಯಗಳನ್ನು ಕೇಂದ್ರ ಸರ್ಕಾರ ಪ್ರೋತ್ಸಾಹಿಸುತ್ತದೆ ಮತ್ತು ಮಹಿಳೆಯರು ಖರೀದಿಸುವ ಆಸ್ತಿಗಳ ಮೇಲಿನ ಸುಂಕವನ್ನು ಮತ್ತಷ್ಟು ಕಡಿಮೆ ಮಾಡುವುದನ್ನು ಪರಿಗಣಿಸುವಂತೆಯೂ ಅದು ಪ್ರೋತ್ಸಾಹಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವರು ಒತ್ತಿ ಹೇಳಿದರು. ಈ ಸುಧಾರಣೆಯನ್ನು ನಗರಾಭಿವೃದ್ಧಿ ಯೋಜನೆಗಳ ಅತ್ಯಗತ್ಯ ಅಂಶವನ್ನಾಗಿ ಮಾಡಲಾಗುವುದು" ಎಂದೂ ಅವರು ಹೇಳಿದರು.
*****
(Release ID: 2035677)
Visitor Counter : 58
Read this release in:
English
,
Khasi
,
Urdu
,
Marathi
,
Hindi
,
Hindi_MP
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam