ಪ್ರಧಾನ ಮಂತ್ರಿಯವರ ಕಛೇರಿ
ಸಿಲಿಗುರಿಯಲ್ಲಿ ನಡೆದ ‘ವಿಕಸಿತ ಭಾರತ್ ವಿಕಸಿತ ಪಶ್ಚಿಮ ಬಂಗಾಳ' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಇಂಗ್ಲಿಷ್ ಭಾಷಣ ಅನುವಾದ
Posted On:
09 MAR 2024 6:38PM by PIB Bengaluru
ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಶ್ರೀ ಸಿ.ವಿ. ಆನಂದ ಬೋಸ್ ಅವರೇ, ಸಂಪುಟದ ನನ್ನ ಸಹೋದ್ಯೋಗಿಗಳೇ, ನಿಸಿತ್ ಪ್ರಮಾಣಿಕ್ ಮತ್ತು ಜಾನ್ ಬರ್ಲಾ ಅವರುಗಳೇ, ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರೇ, ಸಂಸತ್ತಿನ ನನ್ನ ಸಹೋದ್ಯೋಗಿಗಳೇ, ಸುಕಾಂತ ಮಜುಂದಾರ್, ಕುಮಾರಿ ದೇಬಶ್ರೀ ಚೌಧುರಿ, ಖಗೇನ್ ಮುರ್ಮು, ರಾಜು ಬಿಸ್ತಾ , ಡಾ. ಜಯಂತ ಕುಮಾರ್ ರಾಯ್ ಅವರುಗಳೇ, ಶಾಸಕರು, ಗಣ್ಯ ಅತಿಥಿಗಳು, ಮಹಿಳೆಯರು ಮತ್ತು ಸಜ್ಜನರೇ..
ನೈಸರ್ಗಿಕ ಸೌಂದರ್ಯ ಮತ್ತು ಪ್ರಸಿದ್ಧ ಚಹಾ ತೋಟಗಳನ್ನು ಹೊಂದಿರುವ ಉತ್ತರ ಬಂಗಾಳದ ಈ ಭೂಮಿಗೆ ಬರುವುದು ನನಗೆ ಸಂತಸದ ವಿಷಯ. ಇಂದು ಇಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ನಡೆದಿದೆ. ಇದು 'ವಿಕಸಿತ ಬೆಂಗಾಲ್' ಕಡೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಈ ಅಭಿವೃದ್ಧಿ ಕಾರ್ಯಗಳಿಗಾಗಿ ಬಂಗಾಳದ ಜನರಿಗೆ, ವಿಶೇಷವಾಗಿ ಉತ್ತರ ಬಂಗಾಳದ ಜನರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಉತ್ತರ ಬಂಗಾಳದ ಈ ಪ್ರದೇಶವು ನಮ್ಮ ಈಶಾನ್ಯ ರಾಜ್ಯಗಳಿಗೆ ರಹದಾರಿ (ಗೇಟ್‌ವೇ) ಯಾಗಿದೆ. ಜೊತೆಗೆ ಇದು ನೆರೆಯ ದೇಶಗಳೊಂದಿಗೆ ವ್ಯಾಪಾರ ಕಲ್ಪಿಸುವ ಮಾರ್ಗವೂ ಆಗಿದೆ. ಆದ್ದರಿಂದ, ಕಳೆದ 10 ವರ್ಷಗಳಲ್ಲಿ ಬಂಗಾಳದ, ವಿಶೇಷವಾಗಿ ಉತ್ತರ ಬಂಗಾಳದ ಅಭಿವೃದ್ಧಿ ನಮ್ಮ ಸರ್ಕಾರಕ್ಕೆ ಆದ್ಯತೆಯಾಗಿದೆ. ಉತ್ತರ ಬಂಗಾಳದ ಅಭಿವೃದ್ಧಿಯನ್ನು ವೇಗಗೊಳಿಸಲು, ಈ ಪ್ರದೇಶದಲ್ಲಿ 21 ನೇ ಶತಮಾನದ ರೈಲು ಮತ್ತು ರಸ್ತೆ ಮೂಲಸೌಕರ್ಯವನ್ನು ನಿರ್ಮಿಸುವುದು ಅತ್ಯಗತ್ಯ. ಈ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಏಕ್ಲಖಿಯಿಂದ ಬಲೂರ್‌ಘಾಟ್, ಸಿಲಿಗುರಿಯಿಂದ ಅಲುಆಬಾರಿ ಮತ್ತು ರಾಣಿನಗರ-ಜಲಪಾಯ್ ಗುರಿ-ಹಲ್ದಿಬರಿ ನಡುವಿನ ರೈಲು ಮಾರ್ಗಗಳ ವಿದ್ಯುದ್ದೀಕರಣ ಕಾರ್ಯ ಇಂದು ಪೂರ್ಣಗೊಂಡಿದೆ. ಇದು ಉತ್ತರ ದಿನಜ್‌ಪುರ, ದಕ್ಷಿಣ ದಿನಜ್‌ಪುರ್, ಕೂಚ್ ಬೆಹಾರ್ ಮತ್ತು ಜಲಪಾಯ್ ಗುರಿ ಜಿಲ್ಲೆಗಳಲ್ಲಿ ರೈಲುಗಳ ವೇಗವನ್ನು ಹೆಚ್ಚಿಸುತ್ತದೆ. ಸಿಲಿಗುರಿ-ಸಮುಕ್ತಲಾ ಮಾರ್ಗದ ವಿದ್ಯುದ್ದೀಕರಣವು ಸುತ್ತಮುತ್ತಲಿನ ಕಾಡುಗಳು ಮತ್ತು ವನ್ಯಜೀವಿಗಳ ಆವಾಸಸ್ಥಾನಗಳಲ್ಲಿನ ಮಾಲಿನ್ಯವನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಇಂದು, ಬರ್ಸೋಯ್-ರಾಧಿಕಪೂರ್ ವಿಭಾಗದ ವಿದ್ಯುದ್ದೀಕರಣ ಕೆಲಸವೂ ಪೂರ್ಣಗೊಂಡಿದೆ. ಇದು ಪಶ್ಚಿಮ ಬಂಗಾಳ ಮಾತ್ರವಲ್ಲದೆ ಬಿಹಾರದ ಜನರಿಗೂ ಪ್ರಯೋಜನವಾಗಲಿದೆ. ರಾಧಿಕಾಪುರ ಮತ್ತು ಸಿಲಿಗುರಿ ನಡುವೆ ಹೊಸ ರೈಲು ಸೇವೆ ಆರಂಭವಾಗಿದೆ. ಬಂಗಾಳದ ಈ robust ರೈಲು ಮೂಲಸೌಕರ್ಯವು ಹೊಸ ಅಭಿವೃದ್ಧಿ ಅವಕಾಶಗಳಿಗೆ ದಾರಿ ಮಾಡಿಕೊಡುವುದರ ಜೊತೆಗೆ ಸಾಮಾನ್ಯ ಜನರ ಜೀವನದ ಗುಣಮಟ್ಟವನ್ನೂ ಸುಧಾರಿಸುತ್ತದೆ.
ಸ್ನೇಹಿತರೇ,
ಒಂದು ಕಾಲದಲ್ಲಿ ಈಶಾನ್ಯ ದಿಕ್ಕಿನತ್ತ ಸಾಗುವಾಗ ರೈಲುಗಳ ವೇಗ ಕಡಿಮೆಯಾಗುವ ಪರಿಸ್ಥಿತಿ ಇತ್ತು. ಆದರೆ ದೇಶದಾದ್ಯಂತ ರೈಲುಗಳ ವೇಗವನ್ನು ಹೆಚ್ಚಿಸುತ್ತಿರುವಂತೆಯೇ ಉತ್ತರ ಬಂಗಾಳದಲ್ಲೂ ರೈಲುಗಳ ವೇಗವನ್ನು ಹೆಚ್ಚಿಸುವುದು ನಮ್ಮ ಸರ್ಕಾರದ ಪ್ರಯತ್ನವಾಗಿದೆ. ಈದೀಗ, ಉತ್ತರ ಬಂಗಾಳದಿಂದ ಬಾಂಗ್ಲಾದೇಶಕ್ಕೂ ರೈಲ್ವೆ ಸಂಪರ್ಕವನ್ನು ಪ್ರಾರಂಭಿಸಲಾಗಿದೆ. ಮಿತಾಲಿ ಎಕ್ಸ್‌ಪ್ರೆಸ್ ನ್ಯೂ ಜಲ್ಪಾಯ್ ಗುರಿಯಿಂದ ಢಾಕಾ ಕಂಟೋನ್ಮೆಂಟ್ ವರೆಗೆ ಚಲಿಸುತ್ತಿದೆ. ಬಾಂಗ್ಲಾದೇಶದ ಸರ್ಕಾರದ ಸಹಯೋಗದಲ್ಲಿ, ನಾವು ರಾಧಿಕಾಪುರ ನಿಲ್ದಾಣದವರೆಗೆ ಸಂಪರ್ಕವನ್ನು ಹೆಚ್ಚಿಸುತ್ತಿದ್ದೇವೆ. ಈ ಜಾಲದ ಬಲವರ್ಧನೆಯೊಂದಿಗೆ, ಎರಡೂ ದೇಶಗಳ ಆರ್ಥಿಕತೆಗಳು ಪ್ರಯೋಜನ ಪಡೆಯುತ್ತವೆ. ಜೊತೆಗೆ ಈ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೂ ಗಮನಾರ್ಹ ಉತ್ತೇಜನ ಸಿಗಲಿದೆ.
ಸ್ನೇಹಿತರೇ,
ಸ್ವಾತಂತ್ರ್ಯಾ ನಂತರ, ಪೂರ್ವ ಭಾರತದ ಅಭಿವೃದ್ಧಿ ಮತ್ತು ಅದರ ಹಿತಾಸಕ್ತಿಗಳನ್ನು ದೀರ್ಘಕಾಲದವರೆಗೆ ನಿರ್ಲಕ್ಷಿಸಲಾಗಿತ್ತು. ಆದರೆ ನಮ್ಮ ಸರ್ಕಾರವು ಪೂರ್ವ ಭಾರತವನ್ನು ದೇಶದ ಅಭಿವೃದ್ಧಿಯ ಎಂಜಿನ್ ಎಂದು ಪರಿಗಣಿಸುತ್ತದೆ. ಆದಕ್ಕಾಗಿಯೇ ಈ ಪ್ರದೇಶದಲ್ಲಿ ಸಂಪರ್ಕ ಜಾಲದ (connectivity) ಅಭಿವೃದ್ಧಿಗೆ ಅಭೂತಪೂರ್ವ ಹೂಡಿಕೆ ಮಾಡಲಾಗುತ್ತಿದೆ. 2014ರ ಮೊದಲು ಸುಮಾರು 4,000 ಕೋಟಿ ರೂಪಾಯಿಗಳಷ್ಟಿದ್ದ ಬಂಗಾಳದ ಸರಾಸರಿ ರೈಲು ಬಜೆಟ್ ಈಗ ಸುಮಾರು 14,000 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಇಂದು, ಸೆಮಿ-ಹೈ-ಸ್ಪೀಡ್ ವಂದೇ ಭಾರತ್ ಎಕ್ಸ್‌ಪ್ರೆಸ್ ಉತ್ತರ ಬಂಗಾಳದಿಂದ ಗುವಾಹಟಿ ಮತ್ತು ಹೌರಾಕ್ಕೆ ಚಲಿಸುತ್ತದೆ. 500 ಕ್ಕೂ ಹೆಚ್ಚು ನಿಲ್ದಾಣಗಳನ್ನು ಆಧುನೀಕರಿಸುವ ಗುರಿಯನ್ನು ಹೊಂದಿರುವ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಸಿಲಿಗುರಿ ನಿಲ್ದಾಣವನ್ನು ಸೇರಿಸಲಾಗಿದೆ. ಕಳೆದ 10 ವರ್ಷಗಳಲ್ಲಿ, ನಾವು ಬಂಗಾಳ ಮತ್ತು ಈಶಾನ್ಯ ಪ್ರದೇಶಗಳ ರೈಲು ಅಭಿವೃದ್ಧಿ ಗತಿಯನ್ನು ಪ್ಯಾಸೆಂಜರ್ ರೈಲಿನ ವೇಗದಿಂದ ಎಕ್ಸ್‌ಪ್ರೆಸ್ ರೈಲಿನ ವೇಗಕ್ಕೆ ಕೊಂಡೊಯ್ದಿದ್ದೇವೆ. ನಮ್ಮ ಮೂರನೇ ಅವಧಿಯಲ್ಲಿ, ಇದರ ಗತಿ ಸೂಪರ್ ಫಾಸ್ಟ್ ರೈಲಿನ ವೇಗ ಪಡೆದುಕೊಳ್ಳಲಿದೆ.
ಸ್ನೇಹಿತರೇ,
ಇಂದು, ಉತ್ತರ ಬಂಗಾಳದಲ್ಲಿ 3,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ರಸ್ತೆ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ಘೋಷ್ಪುಕುರ್-ಧೂಪಗುರಿ ನಡುವಿನ ಚತುಷ್ಪಥ ರಸ್ತೆ ಮತ್ತು ಇಸ್ಲಾಂಪುರ ಬೈಪಾಸ್‌ನ ಪ್ರಾರಂಭವು ಅನೇಕ ಜಿಲ್ಲೆಗಳ ಜನರಿಗೆ ಪ್ರಯೋಜನಕಾರಿಯಾಗಲಿದೆ. ನಗರ ಪ್ರದೇಶಗಳಾದ ಜಲಪಾಯ್ ಗುರಿ, ಸಿಲಿಗುರಿ ಮತ್ತು ಮೇನಗುರಿ ಪಟ್ಟಣವು ಸಂಚಾರ ದಟ್ಟಣೆಯಿಂದ ಮುಕ್ತವಾಗಲಿದೆ. ಇದು ಸಂಪೂರ್ಣ ಈಶಾನ್ಯ ಸೇರಿದಂತೆ ಉತ್ತರ ಬಂಗಾಳದ ಸಿಲಿಗುರಿ, ಜಲಪಾಯ್ ಗುರಿ ಮತ್ತು ಅಲಿಪುರ್ದೂರ್ ಜಿಲ್ಲೆಗಳಿಗೆ ಉತ್ತಮ ರಸ್ತೆ ಸಂಪರ್ಕವನ್ನು ಒದಗಿಸುತ್ತದೆ. ಜೊತೆಗೆ ಡೋರ್ಸ್, ಡಾರ್ಜಿಲಿಂಗ್, ಗ್ಯಾಂಗ್‌ಟಾಕ್ ಮತ್ತು ಮಿರಿಕ್‌ನಂತಹ ಪ್ರವಾಸಿ ತಾಣಗಳನ್ನು ಸುಲಭವಾಗಿ ತಲುಪಲು ಸಹಾಯಮಾಡುತ್ತದೆ. ಇದನ್ನು ಬೇರೆ ರೀತಿಯಲ್ಲಿ ಹೇಳುವುದಾದರೆ, ಇಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹೊಂದುತ್ತದೆ, ಕೈಗಾರಿಕೆಗಳು ಬೆಳೆಯುತ್ತವೆ ಮತ್ತು ಈ ಪ್ರದೇಶದ ಚಹಾ ರೈತರೂ ಸಹ ಇವುಗಳ ಪ್ರಯೋಜನ ಪಡೆಯುತ್ತಾರೆ.
ಸ್ನೇಹಿತರೇ,
ಪಶ್ಚಿಮ ಬಂಗಾಳದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದೆ. ಮತ್ತೊಮ್ಮೆ, ಈ ಅಭಿವೃದ್ಧಿ ಯೋಜನೆಗಳಿಗಾಗಿ ನಾನು ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತುಂಬ ಧನ್ಯವಾದಗಳು. ಇಲ್ಲಿ ಒಂದು ಕಾರ್ಯಕ್ರಮ ಮುಕ್ತಾಯವಾಗುತ್ತಿದೆ. ಆದರೆ ನನ್ನ ಭಾಷಣ ಇನ್ನೂ ಪೂರ್ಣಗೊಂಡಿಲ್ಲ. ನನ್ನ ಮಾತು ಮುಂದುವರಿಯುತ್ತದೆ. ಇಲ್ಲಿಂದ ನಾವು ತೆರೆದ ಮೈದಾನಕ್ಕೆ (ಚುನಾವಣೆಗೆ) ಹೋಗುತ್ತಿದ್ದೇವೆ. ಅಲ್ಲಿ ನಿಮ್ಮನ್ನೆಲ್ಲ ಭೇಟಿಯಾಗುತ್ತೇನೆ ಮತ್ತು ಮುಕ್ತವಾಗಿ ಮಾತನಾಡುತ್ತೇನೆ.
ತುಂಬಾ ಧನ್ಯವಾದಗಳು
ಇದು ಪ್ರಧಾನ ಮಂತ್ರಿ ಮೋದಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಅವರು ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಿದ್ದಾರೆ.
(Release ID: 2016373)
Visitor Counter : 80
Read this release in:
English
,
Urdu
,
Marathi
,
Hindi
,
Manipuri
,
Assamese
,
Punjabi
,
Gujarati
,
Tamil
,
Telugu
,
Malayalam
,
Malayalam