ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಭಾರತ - ಭೂತಾನ್ ನಡುವಿನ ಎನರ್ಜಿ ಪಾಲುದಾರಿಕೆ ಕುರಿತ ಜಂಟಿ ದೂರದರ್ಶಿ (ಜಾಯಿಂಟ್ ವಿಷನ್) ಹೇಳಿಕೆ

Posted On: 22 MAR 2024 5:20PM by PIB Bengaluru

ಭಾರತ ಮತ್ತು ಭೂತಾನ್ ದೇಶಗಳು ನಂಬಿಕೆ, ಸದ್ಭಾವನೆ ಮತ್ತು ಪರಸ್ಪರ ತಿಳುವಳಿಕೆಯಿಂದ ಕೂಡಿದ ಹಾಗೂ ಸ್ನೇಹಮಯವಾದ ಅನುಕರಣೀಯ ದ್ವಿಪಕ್ಷೀಯ ಸಂಬಂಧವನ್ನು ಹೊಂದಿವೆ.  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಪ್ರಧಾನಮಂತ್ರಿ ದಾಶೋ ತ್ಶೆರಿಂಗ್ ತೊಬ್ಗೇ ಅವರು ಥಿಂಪುವಿನಲ್ಲಿ ಮಾರ್ಚ್ ೨೨ರಂದು ನಡೆದ ದ್ವಿಪಕ್ಷೀಯ ಮಾತುಕತೆಯಲ್ಲಿ ಹಲವಾರು ವಿಷಯಗಳ ಮೇಲೆ ಫಲಪ್ರದ ಮತ್ತು ವ್ಯಾಪಕವಾದ ಚರ್ಚೆಗಳನ್ನು ನಡೆಸಿದರು. ಜೊತೆಗೆ ಉಭಯ ನಾಯಕರು ಎರಡೂ ದೇಶಗಳ ನಡುವಿನ ಅಸಾಮಾನ್ಯ ದ್ವಿಪಕ್ಷೀಯ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.

ಭೂತಾನ್‌ನ ಜಲವಿದ್ಯುತ್ ಕ್ಷೇತ್ರದ ಅಭಿವೃದ್ಧಿಯಲ್ಲಿ ಮತ್ತು ಈ ಪ್ರದೇಶದಲ್ಲಿ ಇಂಧನ ಭದ್ರತೆಯನ್ನು ಸಾಧಿಸಲುಉಭಯ ದೇಶಗಳ ನಡುವಿನ ಶುದ್ಧ ಇಂಧನ ಪಾಲುದಾರಿಕೆಯ ಗಣನೀಯ ಕೊಡುಗೆಯನ್ನು  ಉಭಯ ನಾಯಕರು ಸ್ಮರಿಸಿದರು. ಇಂಧನ ಯೋಜನೆಗಳ ಅನುಷ್ಠಾನದಲ್ಲಿ ಭೂತಾನ್ ಕಂಪನಿಗಳು ಮತ್ತು ತಾಂತ್ರಿಕ ಏಜೆನ್ಸಿಗಳ ಸಾಮರ್ಥ್ಯ ವೃದ್ಧಿಸುತ್ತಿರುವುದನ್ನು ಪ್ರಧಾನ ಮಂತ್ರಿ ಮೋದಿ ಶ್ಲಾಘಿಸಿದರು.  ಇದಕ್ಕೆ ಪ್ರತಿಯಾಗಿ ಪ್ರಧಾನ ಮಂತ್ರಿ ಟೋಬ್‌ಗೇ ಅವರು ಇತ್ತೀಚಿನ ವರ್ಷಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿನ ಭಾರತದ ಗಮನಾರ್ಹ ಬೆಳವಣಿಗೆಗಾಗಿ ಪ್ರಧಾನ ಮಂತ್ರಿ ಮೋದಿ ಅವರನ್ನು ಅಭಿನಂದಿಸಿದರು. ಜೊತೆಗೆ ಅಂತರರಾಷ್ಟ್ರೀಯ ಸೌರ ಒಕ್ಕೂಟ ಸ್ಥಾಪನೆ ಮತ್ತು ಭಾರತದ ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್‌ನಂತಹ ಉಪಕ್ರಮಗಳನ್ನು ಉತ್ತೇಜಿಸುವಲ್ಲಿ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದರು. 

ಉಭಯ ಪ್ರಧಾನ ಮಂತ್ರಿಗಳು ಇಂಧನ ಕ್ಷೇತ್ರದಲ್ಲಿನ ದ್ವಿಪಕ್ಷೀಯ ಸಹಕಾರದ ಎಲ್ಲಾ ಅಂಶಗಳನ್ನು ಪರಿಶೀಲಿಸಿದರು. ಉಭಯ ದೇಶಗಳು ಜಂಟಿಯಾಗಿ ಜಾರಿಗೊಳಿಸಿರುವ ವಿದ್ಯುತ್ ಯೋಜನೆಗಳು ಉತ್ತಮವಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಭೂತಾನ್‌ನ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡುತ್ತಿರುವ ಕುರಿತು ತೃಪ್ತಿ ವ್ಯಕ್ತಪಡಿಸಿದರು. 720 ಮೆಗಾವ್ಯಾಟ್ ಸಾಮರ್ಥ್ಯದ ಮಂಗ್ಡೆಚು ಜಲವಿದ್ಯುತ್ ಯೋಜನೆಯ ಯಶಸ್ಸಿನ ಆಧಾರದ ಮೇಲೆ ಉಭಯ ನಾಯಕರು ಈ ವರ್ಷ 1020 ಮೆಗಾವ್ಯಾಟ್ ಪುನಟ್ಸಂಗ್ಚು-II ಹೈಡ್ರೋ-ಎಲೆಕ್ಟ್ರಿಕ್ ಯೋಜನೆಯನ್ನು ಕಾರ್ಯಾರಂಭಿಸಲು ಎದುರು ನೋಡುತ್ತಿದ್ದಾರೆ. ಈ ಯೋಜನೆಯ  ಅತ್ಯುನ್ನತ  ತಾಂತ್ರಿಕತೆ ಮತ್ತು  ಕಾಸ್ಟ್ ಎಫೆಕ್ಟಿವನೆಸ್ ಕುರಿತು ತಜ್ಞರ ಮಟ್ಟದಲ್ಲಿ ನಡೆದ ಚರ್ಚೆಗಳನ್ನು ಉಭಯ ಪಕ್ಷಗಳು ಸ್ವಾಗತಿಸಿದವು. 

 ಇಬ್ಬರೂ ಪ್ರಧಾನ ಮಂತ್ರಿಗಳು ಕೆಳಗಿನ ಅಂಶಗಳನ್ನು ಒಪ್ಪಿಕೊಂಡರು:

(i) ಭಾರತ-ಭೂತಾನ್ ನಡುವಿನ ಇಂಧನ ಕ್ಷೇತ್ರದಲ್ಲಿನ ಪಾಲುದಾರಿಕೆಯು ಉಭಯ ದೇಶಗಳ ಇಂಧನ ಭದ್ರತೆಯನ್ನು ಹೆಚ್ಚಿಸುವ ಮೂಲಕ, ಅವುಗಳ ಆರ್ಥಿಕತೆಯನ್ನು ಬಲಪಡಿಸುತ್ತವೆ. ಆ ಮೂಲಕ ಉದ್ಯೋಗ ಸೃಷ್ಟಿ, ರಫ್ತು ಆದಾಯದಲ್ಲಿ ಹೆಚ್ಚಳಕ್ಕೆ ಅನುವು ಮಾಡಿಕೊಡುವುದಲ್ಲದೆ ಉಭಯ ದೇಶಗಳ ಕೈಗಾರಿಕಾ ಮತ್ತು ಆರ್ಥಿಕ ಸಾಮರ್ಥ್ಯಗಳ ಅಭಿವೃದ್ಧಿಗೆ ಕೊಡುಗೆ ನೀಡುವ  ಸಾಮರ್ಥ್ಯವನ್ನು ಹೊಂದಿದೆ.

(ii) ಹೊಸ ಇಂಧನ ಯೋಜನೆಗಳ ಅಭಿವೃದ್ಧಿ ಮತ್ತು ವಿದ್ಯುಚ್ಛಕ್ತಿ ವ್ಯಾಪಾರದ  ಮೂಲಕ ಪರಸ್ಪರರಿಗೆ ಪ್ರಯೋಜನಕಾರಿಯಾಗಿರುವ ಈ ದ್ವಿಪಕ್ಷೀಯ ಶುದ್ಧ ಇಂಧನ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಅಭೂತಪೂರ್ವ ಅವಕಾಶಗಳಿವೆ.

(iii)  ಭಾರತೀಯ ಕಂಪನಿಗಳನ್ನು ಸ್ಟ್ರಾಟೆಜಿಕ್ ಪಾಲುದಾರರನ್ನಾಗಿಸುವ ಮೂಲಕ ಜಲ-ವಿದ್ಯುತ್, ಸೌರ ಮತ್ತು ಗ್ರೀನ್ ಹೈಡ್ರೋಜನ್ ಕ್ಷೇತ್ರಗಳಲ್ಲಿ ಹೊಸ ವಿದ್ಯುತ್ ಯೋಜನೆಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಲು ಈ ಪಾಲುದಾರಿಕೆ ಸಹಾಯ ಮಾಡುತ್ತದೆ. 

(iv) ಜಲಾಶಯದ ಅವಲಂಬಿತ ಜಲ ವಿದ್ಯುತ್ ಯೋಜನೆಗಳು ಸೇರಿದಂತೆ  ಹೊಸ ಯೋಜನೆಗಳ ಅನುಷ್ಠಾನ ವಿಧಾನಗಳ ಕುರಿತು ಎರಡೂ ಸರ್ಕಾರಗಳು ಪರಿಶೀಲಿಸಿ ಅಂತಿಮಗೊಳಿಸಲು  

(v) ಭೂತಾನ್‌ನ ಹೊಸ ಮತ್ತು ಮುಂಬರುವ ಜಲ-ವಿದ್ಯುತ್ ಯೋಜನೆಗಳಿಗೆ ಭಾರತದ ಹಣಕಾಸು ಸಂಸ್ಥೆಗಳಿಂದ ಹೂಡಿಕೆ ಮತ್ತು ಭೂತಾನ್ ನಲ್ಲಿ ಉತ್ಪಾದಗೊಳ್ಳುವ ವಿದ್ಯುತ್ ಮಾರಾಟಕ್ಕೆ ಮಾರುಕಟ್ಟೆ ಒದಗಿಸುವಲ್ಲೂ ಅಗತ್ಯವಾದ ನೆರವನ್ನು ಭಾರತ ನೀಡಲಿದೆ. 

(vi) ಎರಡೂ ದೇಶಗಳ ನಡುವಿನ ವಿದ್ಯುತ್ ವಿನಿಮಯ ಕಾರ್ಯಕ್ರಮವು ಈ ಪ್ರದೇಶದಲ್ಲಿ ಇಂಧನ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದನ್ನು ಮುಂದುವರಿಸುತ್ತದೆ. ಈ ನಿಟ್ಟಿನಲ್ಲಿ, ಭಾರತವು ತನ್ನ ದೇಶೀಯ ನಿಯಮಗಳು ಮತ್ತು ಕಾರ್ಯವಿಧಾನಗಳಿಗೆ ಅನುಗುಣವಾಗಿ ಭೂತಾನ್ ವಿದ್ಯುತ್ ಉತ್ಪಾದಕರಿಗೆ ಮಾರುಕಟ್ಟೆ ಒದಗಿಸಲು ನೆರವು ನೀಡಲಿದೆ. ಪರಸ್ಪರ ಒಪ್ಪಿಗೆ ಮತ್ತು  ಸೂಕ್ತ ವಿತರಣಾ ಕೇಂದ್ರಗಳ ಮೂಲಕ ಈ ಪ್ರೋಕ್ರಿಯೆ ನಡೆಯಲಿದೆ. 

(vii) ವಿಕಸನಗೊಳ್ಳುತ್ತಿರುವ ಇಂಧನ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ಭೂತಾನ್‌ನ ಇಂಧನ ಯೋಜನೆಗಳಲ್ಲಿ ಹೂಡಿಕೆಗಳನ್ನು ಸಕ್ರಿಯಗೊಳಿಸಲು ನಿಯಮಿತ ಸಮಾಲೋಚನೆಗಳನ್ನು ನಡೆಸುವುದು ಮತ್ತು ಗಡಿಯಾಚೆಗಿನ ವಿದ್ಯುತ್‌ ವ್ಯಾಪಾರವನ್ನು ಸುಗಮಗೊಳಿಸಲು ಯತ್ನಿಸುವುದು. 

(viii) ವಿವಿಧ ದೇಶಗಳ  ಅಂತರ್ -ಸಂಪರ್ಕಕ್ಕೆ ದಾರಿಯಾಗುವ ಆ ಮೂಲಕ ಎಲ್ಲ ಸ್ಟೇಕ್ ಹೊಲ್ದರ್ ಗಳ ಪರಸ್ಪರ ಪ್ರಯೋಜನಕ್ಕಾಗಿ  ಹೆಚ್ಚಿನ ಉಪ-ಪ್ರಾದೇಶಿಕ ಇಂಧನ ಸಹಕಾರಕ್ಕಾಗಿ ಕೆಲಸ ಮಾಡುವುದು. 

(ix) ಸಾಮರ್ಥ್ಯ ಅಭಿವೃದ್ಧಿ, ನೀತಿಗಳು ಮತ್ತು ತಂತ್ರಜ್ಞಾನಗಳ ಕುರಿತು ಮಾಹಿತಿ ವಿನಿಮಯ, ಮತ್ತು ಇಂಧನ ಸಮರ್ಥ ತಂತ್ರಜ್ಞಾನಗಳ ಸಂಶೋಧನೆ, ಅಭಿವೃದ್ಧಿಯ ಮೂಲಕ ಇಂಧನ ದಕ್ಷತೆ ಮತ್ತು ಸಂರಕ್ಷಣೆ ಕ್ಷೇತ್ರಗಳಲ್ಲಿ  ವಿದ್ಯುತ್ ಸಹಕಾರವನ್ನು ಬಲಪಡಿಸಲು.

ಇಬ್ಬರೂ ಪ್ರಧಾನ ಮಂತ್ರಿಗಳು ಪರಸ್ಪರ ಪ್ರಯೋಜನಕ್ಕಾಗಿ ಜಂಟಿ ವಿಷನ್ ಹೇಳಿಕೆಯ ಆಧಾರದ ಮೇಲೆ ವಿದ್ಯುತ್ ಯೋಜನೆಗಳು ಮತ್ತು ಇತರೆ ಉಪಕ್ರಮಗಳ ಅನುಷ್ಠಾನವನ್ನು ತ್ವರಿತಗೊಳಿಸಲು ಒಪ್ಪಿಕೊಂಡರು.

*****


(Release ID: 2016370) Visitor Counter : 74