ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಗುಜರಾತ್ ನ ಅಹಮದಾಬಾದ್ ನಲ್ಲಿ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನಮಂತ್ರಿ ಭಾಗವಹಿಸಿದರು


"ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ಸುವರ್ಣ ಮಹೋತ್ಸವ ಆಚರಣೆಯು ಅದರ ಅದ್ಭುತ ಪ್ರಯಾಣದಲ್ಲಿ ಒಂದು ಹೆಗ್ಗುರುತಾಗಿದೆ"

"ಅಮುಲ್ ಭಾರತದ ಪಶುಪಾಲಕರ ಶಕ್ತಿಯ ಸಂಕೇತವಾಗಿದೆ"

"ದೂರಗಾಮಿ ಚಿಂತನೆಯೊಂದಿಗೆ ತೆಗೆದುಕೊಳ್ಳುವ ನಿರ್ಧಾರಗಳು ಕೆಲವೊಮ್ಮೆ ಭವಿಷ್ಯದ ಪೀಳಿಗೆಯ ಅದೃಷ್ಟವನ್ನು ಹೇಗೆ ಬದಲಾಯಿಸಬಹುದು ಎಂಬುದಕ್ಕೆ ಅಮುಲ್ ಒಂದು ಉದಾಹರಣೆಯಾಗಿದೆ"

"ಭಾರತದ ಹೈನುಗಾರಿಕೆ ಕ್ಷೇತ್ರದ ನಿಜವಾದ ಬೆನ್ನೆಲುಬು ನಾರಿ ಶಕ್ತಿ"

"ಇಂದು ನಮ್ಮ ಸರ್ಕಾರವು ಮಹಿಳೆಯರ ಆರ್ಥಿಕ ಶಕ್ತಿಯನ್ನು ವೃದ್ಧಿಸಲು ಬಹುಮುಖಿ ಕಾರ್ಯತಂತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ"

"ನಾವು 2030 ರ ವೇಳೆಗೆ ಕಾಲು ಮತ್ತು ಬಾಯಿ ರೋಗವನ್ನು ನಿರ್ಮೂಲನೆ ಮಾಡಲು ಕೆಲಸ ಮಾಡುತ್ತಿದ್ದೇವೆ"

"ರೈತರನ್ನು ಇಂಧನ ಉತ್ಪಾದಕರು ಮತ್ತು ರಸಗೊಬ್ಬರ ಪೂರೈಕೆದಾರರನ್ನಾಗಿ ಪರಿವರ್ತಿಸಲು ಸರ್ಕಾರ ಗಮನಹರಿಸಿದೆ"

"ಗ್ರಾಮೀಣ ಆರ್ಥಿಕತೆಯಲ್ಲಿ ಸರ್ಕಾರವು ಸಹಕಾರದ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸುತ್ತಿದೆ"

"ದೇಶದಾದ್ಯಂತ 2 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಸಹಕಾರ ಸಂಘಗಳ ಸ್ಥಾಪನೆಯೊಂದಿಗೆ ಸಹಕಾರ ಚಳುವಳಿ ವೇಗವನ್ನು ಪಡೆಯುತ್ತಿದೆ"

Posted On: 22 FEB 2024 12:43PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್ ನ ಮೊಟೆರಾದಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ (ಜಿಸಿಎಂಎಂಎಫ್) ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು. ಪ್ರಧಾನಮಂತ್ರಿಯವರು ಈ ಸಂದರ್ಭದಲ್ಲಿ ಆಯೋಜಿಸಲಾದ ವಸ್ತುಪ್ರದರ್ಶನವನ್ನು ವೀಕ್ಷಿಸಿದರು ಮತ್ತು ಸುವರ್ಣ ಮಹೋತ್ಸವ ಕಾಫಿ ಟೇಬಲ್ ಪುಸ್ತಕವನ್ನು ಬಿಡಿಗಡೆ ಮಾಡಿದರು. ಜಿಸಿಎಂಎಂಎಫ್ ಸಹಕಾರಿ ಸಂಸ್ಥೆಗಳ ಸ್ಥಿತಿಸ್ಥಾಪಕತ್ವ, ಉದ್ಯಮಶೀಲತಾ ಮನೋಭಾವ ಮತ್ತು ರೈತರ ದೃಢ ಸಂಕಲ್ಪಕ್ಕೆ ಸಾಕ್ಷಿಯಾಗಿದೆ, ಇದು ಅಮುಲ್ ಅನ್ನು ವಿಶ್ವದ ಪ್ರಬಲ ಡೈರಿ ಬ್ರ್ಯಾಂಡ್ ಗಳಲ್ಲಿ ಒಂದನ್ನಾಗಿ ಮಾಡಿದೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ (ಜಿಸಿಎಂಎಂಎಫ್) ಸುವರ್ಣ ಮಹೋತ್ಸವ ಆಚರಣೆಗೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು ಮತ್ತು 50 ವರ್ಷಗಳ ಹಿಂದೆ ಗುಜರಾತಿನ ರೈತರು ನೆಟ್ಟ ಸಸಿ ಪ್ರಪಂಚದಾದ್ಯಂತ ಶಾಖೆಗಳನ್ನು ಹೊಂದಿರುವ ದೈತ್ಯ ಮರವಾಗಿ ಬೆಳೆದಿದೆ ಎಂದು ಹೇಳಿದರು.  ಶ್ವೇತ ಕ್ರಾಂತಿಯಲ್ಲಿ ‘ಪಶು ಧನ್ʼ ಕೊಡುಗೆಯನ್ನು ಗುರುತಿಸಲು ಅವರು ಮರೆಯಲಿಲ್ಲ.

ಸ್ವಾತಂತ್ರ್ಯದ ನಂತರ ಭಾರತದಲ್ಲಿ ಹಲವಾರು ಬ್ರ್ಯಾಂಡ್ ಗಳು ಹೊರಹೊಮ್ಮಿದರೂ, ಅಮುಲ್ ಗೆ ಸಮಾನವಾದ ಯಾವುದೂ ಇಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು. "ಅಮುಲ್ ಭಾರತದ ಪಶುಪಾಲಕರ ಶಕ್ತಿಯ ಸಂಕೇತವಾಗಿದೆ, ಅಮುಲ್ ಎಂದರೆ ನಂಬಿಕೆ, ಅಭಿವೃದ್ಧಿ, ಸಾರ್ವಜನಿಕ ಸಹಭಾಗಿತ್ವ, ರೈತರ ಸಬಲೀಕರಣ ಮತ್ತು ಸಮಯಕ್ಕೆ ತಕ್ಕಂತೆ ತಾಂತ್ರಿಕ ಪ್ರಗತಿ" ಎಂದು ಪ್ರಧಾನಿ ಹೇಳಿದರು. ಅಮುಲ್ ಆತ್ಮನಿರ್ಭರ ಭಾರತದ ಸ್ಫೂರ್ತಿ ಎಂದು ಶ್ರೀ ಮೋದಿ ಹೇಳಿದರು. ಜಗತ್ತಿನ 50ಕ್ಕೂ ಹೆಚ್ಚು ದೇಶಗಳಿಗೆ ಅಮುಲ್ ಉತ್ಪನ್ನಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಸಂಸ್ಥೆಯ ಸಾಧನೆಗಳನ್ನು ಪ್ರಸ್ತಾಪಿಸಿದ ಪ್ರಧಾನಿ, 18,000ಕ್ಕೂ ಹೆಚ್ಚು ಹಾಲು ಸಹಕಾರಿ ಸಮಿತಿಗಳು, 36,000 ರೈತರ ಜಾಲ, ದಿನಕ್ಕೆ 3.5 ಕೋಟಿ ಲೀಟರ್ ಹಾಲು ಸಂಸ್ಕರಣೆ ಮತ್ತು ಜಾನುವಾರು ಸಾಕಣೆದಾರರಿಗೆ 200 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆನ್ಲೈನ್ ಪಾವತಿ ಮಾಡಲಾಗುತ್ತಿದೆ ಎಂದರು. ಸಣ್ಣ ಜಾನುವಾರು ಸಾಕಣೆದಾರರ ಈ ಸಂಸ್ಥೆಯು ಮಾಡುತ್ತಿರುವ ಮಹತ್ವದ ಕೆಲಸವು ಅಮುಲ್ ಮತ್ತು ಅದರ ಸಹಕಾರಿಗಳ ಬಲವನ್ನು ಹೆಚ್ಚಿಸಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು.
ದೂರದೃಷ್ಟಿಯಿಂದ ಕೈಗೊಂಡ ನಿರ್ಧಾರಗಳಿಂದ ಆಗುವ ಪರಿವರ್ತನೆಗೆ ಅಮುಲ್ ಒಂದು ಉದಾಹರಣೆಯಾಗಿದೆ ಎಂದು ಪ್ರಧಾನಿ ಹೇಳಿದರು. ಅಮುಲ್ ನ ಮೂಲವು ಸರ್ದಾರ್ ಪಟೇಲ್ ಅವರ ಮಾರ್ಗದರ್ಶನದ ಖೇಡಾ ಹಾಲು ಒಕ್ಕೂಟದಲ್ಲಿದೆ ಎಂದು ಅವರು ನೆನಪಿಸಿಕೊಂಡರು. ಗುಜರಾತ್ ನಲ್ಲಿ ಸಹಕಾರಿ ಸಂಸ್ಥೆಗಳ ವಿಸ್ತರಣೆಯೊಂದಿಗೆ, ಜಿಸಿಎಂಎಂಎಫ್ ಅಸ್ತಿತ್ವಕ್ಕೆ ಬಂದಿತು. ಸಹಕಾರಿ ಸಂಸ್ಥೆಗಳು ಮತ್ತು ಸರ್ಕಾರದ ನಡುವಿನ ಸಮತೋಲನಕ್ಕೆ ಇದು ಉತ್ತಮ ಉದಾಹರಣೆಯಾಗಿದೆ ಮತ್ತು ಅಂತಹ ಪ್ರಯತ್ನಗಳು 8 ಕೋಟಿ ಜನರಿಗೆ ಉದ್ಯೋಗ ನೀಡುವ ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವಾಗಿ ನಮ್ಮನ್ನು ರೂಪಿಸಿವೆ ಎಂದು ಅವರು ಹೇಳಿದರು. ಕಳೆದ 10 ವರ್ಷಗಳಲ್ಲಿ ಹಾಲಿನ ಉತ್ಪಾದನೆಯು ಸುಮಾರು 60 ಪ್ರತಿಶತದಷ್ಟು ಹೆಚ್ಚಾಗಿದೆ ಮತ್ತು ತಲಾ ಹಾಲು ಲಭ್ಯತೆ ಸುಮಾರು 40 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. ಜಾಗತಿಕ ಸರಾಸರಿ 2 ಪ್ರತಿಶತಕ್ಕೆ ಹೋಲಿಸಿದರೆ ಭಾರತೀಯ ಡೈರಿ ಕ್ಷೇತ್ರವು ವರ್ಷಕ್ಕೆ 6 ಪ್ರತಿಶತದಷ್ಟು ಬೆಳೆಯುತ್ತಿದೆ ಎಂದು ಪ್ರಧಾನಿ ಹೇಳಿದರು.

10 ಲಕ್ಷ ಕೋಟಿ ರೂ.ಗಳ ಹೈನುಗಾರಿಕೆ ವಲಯದಲ್ಲಿ ಮಹಿಳೆಯರ ಪ್ರಾಮುಖ್ಯತೆಯನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. 70 ರಷ್ಟು ಮಹಿಳೆಯರೇ ನಡೆಸುತ್ತಿರುವ ಹೈನುಗಾರಿಕೆ ವಲಯದ ವಹಿವಾಟು ಗೋಧಿ, ಅಕ್ಕಿ ಮತ್ತು ಕಬ್ಬಿನ ಒಟ್ಟು ವಹಿವಾಟಿಗಿಂತ ಹೆಚ್ಚು ಎಂದು ಅವರು ಹೇಳಿದರು. “ಈ ನಾರಿ ಶಕ್ತಿಯು ಹೈನುಗಾರಿಕೆ ಕ್ಷೇತ್ರದ ನಿಜವಾದ ಬೆನ್ನೆಲುಬು. ಇಂದು ಭಾರತವು ಮಹಿಳಾ ನೇತೃತ್ವದ ಅಭಿವೃದ್ಧಿಯೊಂದಿಗೆ ಮುನ್ನಡೆಯುತ್ತಿರುವಾಗ, ಅದರ ಹೈನುಗಾರಿಕೆ ಕ್ಷೇತ್ರದ ಯಶಸ್ಸು ಒಂದು ದೊಡ್ಡ ಸ್ಫೂರ್ತಿಯಾಗಿದೆ" ಎಂದು ಅವರು ಹೇಳಿದರು. ವಿಕಸಿತ ಭಾರತದ ಪಯಣದಲ್ಲಿ ಮಹಿಳೆಯರ ಆರ್ಥಿಕತೆಯನ್ನು ಸುಧಾರಿಸುವ ಅಗತ್ಯವನ್ನು ಒತ್ತಿಹೇಳಿದ ಪ್ರಧಾನಮಂತ್ರಿ, ಮುದ್ರಾ ಯೋಜನೆಯ 30 ಲಕ್ಷ ಕೋಟಿ ರೂ.ಗಳ ಸಹಾಯದಲ್ಲಿ 70 ಪ್ರತಿಶತ ಮಹಿಳಾ ಉದ್ಯಮಿಗಳು ಪಡೆದುಕೊಂಡಿದ್ದಾರೆ ಎಂದರು. ಅಲ್ಲದೆ, ಸ್ವಸಹಾಯ ಗುಂಪುಗಳಲ್ಲಿ ಮಹಿಳೆಯರ ಸಂಖ್ಯೆ 10 ಕೋಟಿ ದಾಟಿದೆ ಮತ್ತು ಅವರು 6 ಲಕ್ಷ ಕೋಟಿ ರೂ. ಗೂ ಹೆಚ್ಚು ಆರ್ಥಿಕ ಸಹಾಯವನ್ನು ಪಡೆದಿದ್ದಾರೆ. 4 ಕೋಟಿ ಪಿಎಂ ಆವಾಸ್ ಮನೆಗಳಲ್ಲಿ ಹೆಚ್ಚಿನವು ಮಹಿಳೆಯರ ಹೆಸರಿನಲ್ಲಿವೆ. 15,000 ಸ್ವಸಹಾಯ ಗುಂಪುಗಳಿಗೆ ಡ್ರೋನ್ ಗಳನ್ನು ನೀಡಲಾಗುತ್ತಿರುವ ಮತ್ತು ಸದಸ್ಯರಿಗೆ ತರಬೇತಿ ನೀಡಲಾಗುತ್ತಿರುವ ನಮೋ ಡ್ರೋನ್ ದೀದಿ ಯೋಜನೆಯ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು.

ಗುಜರಾತ್ ನ ಡೈರಿ ಸಹಕಾರಿ ಸಮಿತಿಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಡೈರಿಯಿಂದ ಬರುವ ಆದಾಯವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವಿತರಿಸುವ ಬಗ್ಗೆ ಪ್ರಸ್ತಾಪಿಸಿದರು. ಜಾನುವಾರು ಸಾಕಣೆದಾರರು ಈ ಪ್ರದೇಶದಲ್ಲಿ ಹಣವನ್ನು ಹಿಂಪಡೆಯಲು ಸಹಾಯವಾಗುವಂತೆ ಹಳ್ಳಿಗಳಲ್ಲಿ ಮೈಕ್ರೋ ಎಟಿಎಂಗಳನ್ನು ಸ್ಥಾಪಿಸುತ್ತಿರುವ ಅಮುಲ್ ನ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ಪಶುಪಾಲಕರಿಗೆ ರುಪೇ ಕಿಸಾನ್ ಕ್ರೆಡಿಟ್ ಕಾರ್ಡ್ ಗಳನ್ನು ಒದಗಿಸುವ ಯೋಜನೆಗಳ ಕುರಿತು ಅವರು ಪ್ರಸ್ತಾಪಿಸಿದರು ಮತ್ತು ಪಂಚಪಿಪ್ಲಾ ಮತ್ತು ಬನಸ್ಕಾಂತದಲ್ಲಿ ನಡೆಯುತ್ತಿರುವ ಪ್ರಾಯೋಗಿಕ ಯೋಜನೆಯ ಬಗ್ಗೆ ತಿಳಿಸಿದರು.

ಭಾರತವು ತನ್ನ ಹಳ್ಳಿಗಳಲ್ಲಿ ನೆಲೆಸಿದೆ ಎಂಬ ಗಾಂಧೀಜಿಯವರ ಮಾತುಗಳನ್ನು ಸ್ಮರಿಸಿದ ಪ್ರಧಾನಿ, ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು. ಹಿಂದಿನ ಸರ್ಕಾರ ಗ್ರಾಮೀಣ ಆರ್ಥಿಕತೆಯ ಬಗ್ಗೆ ಶಿಥಿಲ ಧೋರಣೆ ಹೊಂದಿತ್ತು, ಈಗಿನ ಸರ್ಕಾರ ಗ್ರಾಮದ ಪ್ರತಿಯೊಂದು ಕ್ಷೇತ್ರಕ್ಕೂ ಆದ್ಯತೆ ನೀಡಿ ಪ್ರಗತಿ ಸಾಧಿಸುತ್ತಿದೆ ಎಂದು ತಿಳಿಸಿದರು. “ಸಣ್ಣ ರೈತರ ಜೀವನವನ್ನು ಸುಲಭಗೊಳಿಸಲು, ಪಶುಸಂಗೋಪನೆಯ ವ್ಯಾಪ್ತಿಯನ್ನು ವಿಸ್ತರಿಸಲು, ಜಾನುವಾರುಗಳಿಗೆ ಆರೋಗ್ಯಕರ ಜೀವನವನ್ನು ಸೃಷ್ಟಿಸಲು ಮತ್ತು ಹಳ್ಳಿಗಳಲ್ಲಿ ಮೀನುಗಾರಿಕೆ ಮತ್ತು ಜೇನುಸಾಕಣೆಯನ್ನು ಉತ್ತೇಜಿಸಲು ಸರ್ಕಾರವು ಗಮನಹರಿಸುತ್ತಿದೆ”ಎಂದು ಪ್ರಧಾನಿ ಹೇಳಿದರು. ಜಾನುವಾರು ಸಾಕಣೆದಾರರು ಮತ್ತು ಮೀನು ಸಾಕಣೆದಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳು. ಹವಾಮಾನ ಬದಲಾವಣೆಯನ್ನು ನಿಭಾಯಿಸಬಲ್ಲ ಆಧುನಿಕ ಬೀಜಗಳನ್ನು ರೈತರಿಗೆ ಒದಗಿಸುವ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಹೈನುಗಾರಿಕೆಯಲ್ಲಿ ಜಾನುವಾರುಗಳ ಸುಧಾರಣೆಯ ಗುರಿ ಹೊಂದಿರುವ ರಾಷ್ಟ್ರೀಯ ಗೋಕುಲ್ ಮಿಷನ್ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿದರು. ಕಾಲುಬಾಯಿ ಜ್ವರದಿಂದ ಜಾನುವಾರುಗಳು ಎದುರಿಸುತ್ತಿರುವ ತೊಂದರೆ ಮತ್ತು ಪಶುಪಾಲಕರಿಗೆ ಆಗುತ್ತಿರುವ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ನಷ್ಟವನ್ನು ತಡೆಯುವ ಸರ್ಕಾರದ ಪ್ರಯತ್ನದ ಮೇಲೆ ಬೆಳಕು ಚೆಲ್ಲಿದ ಪ್ರಧಾನಿಯವರು, 15,000 ಕೋಟಿ ರೂ. ಮೌಲ್ಯದ ಉಚಿತ ಲಸಿಕೆ ಕಾರ್ಯಕ್ರಮವನ್ನು ಪ್ರಾರಂಭಿಸಿದ ಬಗ್ಗೆ ತಿಳಿಸಿದರು. ಇದರಲ್ಲಿ ಇದುವರೆಗೆ 7 ಕೋಟಿಗೂ ಹೆಚ್ಚು ಲಸಿಕೆಗಳನ್ನು ಹಾಕಲಾಗಿದೆ ಎಂದರು. "ನಾವು 2030 ರ ವೇಳೆಗೆ ಕಾಲು ಬಾಯಿ ರೋಗವನ್ನು ನಿರ್ಮೂಲನೆ ಮಾಡಲು ಕೆಲಸ ಮಾಡುತ್ತಿದ್ದೇವೆ" ಎಂದು ಪ್ರಧಾನಮಂತ್ರಿ ಹೇಳಿದರು.

ಕಳೆದ ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ಜಾನುವಾರುಗಳಿಗೆ ಸಂಬಂಧಿಸಿದ ನಿರ್ಧಾರವನ್ನೂ ಪ್ರಧಾನಿ ಪ್ರಸ್ತಾಪಿಸಿದರು. ದೇಶೀಯ ಜಾತಿಗಳನ್ನು ಉತ್ತೇಜಿಸಲು ರಾಷ್ಟ್ರೀಯ ಜಾನುವಾರು ಮಿಷನ್ ಅನ್ನು ತಿದ್ದುಪಡಿ ಮಾಡಲು ಸಂಪುಟ ನಿರ್ಧಾರವನ್ನು ತೆಗೆದುಕೊಂಡಿದೆ. ಕೃಷಿಯೋಗ್ಯವಲ್ಲದ ಭೂಮಿಯನ್ನು ಮೇವಿನ ಉದ್ದೇಶಕ್ಕೆ ಬಳಸಲು ಆರ್ಥಿಕ ನೆರವು ನೀಡಲಾಗುವುದು. ಜಾನುವಾರುಗಳ ರಕ್ಷಣೆಗಾಗಿ ವಿಮಾ ಕಂತುಗಳನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ ಎಂದು ಅವರು ಹೇಳಿದರು.

ಗುಜರಾತ್ ನಲ್ಲಿ ಜಲ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಪ್ರಧಾನಿ, ಸೌರಾಷ್ಟ್ರ ಮತ್ತು ಕಚ್ ನಲ್ಲಿ ಬರಗಾಲದ ಸಂದರ್ಭದಲ್ಲಿ ನೀರಿನ ಕೊರತೆಯಿಂದ ಸಾವಿರಾರು ಪ್ರಾಣಿಗಳು ಸಾವನ್ನಪ್ಪಿದಾಗ ಅನುಭವಿಸಿದ ಕಷ್ಟಗಳನ್ನು ವಿವರಿಸಿದರು. ನರ್ಮದಾ ನೀರು ಈ ಪ್ರದೇಶಗಳನ್ನು ತಲುಪಿದ ನಂತರದ ಪರಿವರ್ತಕ ಪರಿಣಾಮವನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, "ನರ್ಮದಾ ನೀರಿನ ಆಗಮನದ ನಂತರ ಅಂತಹ ಪ್ರದೇಶಗಳ ಭವಿಷ್ಯ ಬದಲಾಗಿದೆ" ಎಂದು ಹೇಳಿದರು. ಈ ಕ್ರಮವು ಈ ಪ್ರದೇಶಗಳಲ್ಲಿನ ಜನರ ಜೀವನದಲ್ಲಿ ಮತ್ತು ಕೃಷಿ ಪದ್ಧತಿಗಳಲ್ಲಿ ಗಮನಾರ್ಹ ಸುಧಾರಣೆಗಳನ್ನು ತಂದಿದೆ. ಭವಿಷ್ಯದಲ್ಲಿ ಇಂತಹ ಸವಾಲುಗಳು ಎದುರಾಗದಂತೆ ನೋಡಿಕೊಳ್ಳಲು ನಾವು ಶ್ರಮಿಸುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು, ನೀರಿನ ಕೊರತೆಯನ್ನು ಪರಿಹರಿಸಲು ಮತ್ತು ರಾಷ್ಟ್ರವ್ಯಾಪಿ ಗ್ರಾಮೀಣ ಆರ್ಥಿಕತೆಯನ್ನು ವೃದ್ಧಿಸಲು ಸರ್ಕಾರದ ಸಕ್ರಿಯ ಕ್ರಮಗಳ ಬಗ್ಗೆ ಅವರು ಒತ್ತಿ ಹೇಳಿದರು. ಸರ್ಕಾರವು 60 ಕ್ಕೂ ಹೆಚ್ಚು ಅಮೃತ ಸರೋವರ ಜಲಾಶಯಗಳ ನಿರ್ಮಾಣದಿಂದ ದೇಶದ ಗ್ರಾಮೀಣ ಆರ್ಥಿಕತೆಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ ಎಂದು ಅವರು ಹೇಳಿದರು.

ಆಧುನಿಕ ತಂತ್ರಜ್ಞಾನದೊಂದಿಗೆ ಹಳ್ಳಿಗಳಲ್ಲಿನ ಅತಿಸಣ್ಣ ರೈತರನ್ನು ಬೆಸೆಯುವುದು ನಮ್ಮ ಪ್ರಯತ್ನವಾಗಿದೆ ಎಂದು ಪ್ರಧಾನಿ ಮೋದಿ ಅವರು ತಾಂತ್ರಿಕ ಪ್ರಗತಿಯ ಮೂಲಕ ಸಣ್ಣ ರೈತರನ್ನು ಸಬಲೀಕರಣಗೊಳಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು. "ಗುಜರಾತ್ ನಲ್ಲಿ, ಇತ್ತೀಚಿನ ವರ್ಷಗಳಲ್ಲಿ ಸೂಕ್ಷ್ಮ ನೀರಾವರಿಯ ವ್ಯಾಪ್ತಿಯಲ್ಲಿ ನಾವು ಬಹುಪಟ್ಟು ಹೆಚ್ಚಳವನ್ನು ಕಂಡಿದ್ದೇವೆ" ಎಂದು ಅವರು ಹನಿ ನೀರಾವರಿಯಂತಹ ಸಮರ್ಥ ನೀರಾವರಿ ವಿಧಾನಗಳನ್ನು ಉತ್ತೇಜಿಸುವ ಸರ್ಕಾರದ ಪ್ರಯತ್ನಗಳನ್ನು ಎತ್ತಿ ತೋರಿಸಿದರು. ಅವರ ಹಳ್ಳಿಗಳ ಹತ್ತಿರದಲ್ಲಿಯೇ ರೈತರಿಗೆ ವೈಜ್ಞಾನಿಕ ಪರಿಹಾರಗಳನ್ನು ಒದಗಿಸಲು ಲಕ್ಷ ಕಿಸಾನ್ ಸಮೃದ್ಧಿ ಕೇಂದ್ರಗಳ ಸ್ಥಾಪನೆ ಮಾಡಿರುವುದನ್ನು ಶ್ರೀ ಮೋದಿ ಪ್ರಸ್ತಾಪಿಸಿದರು. ಸಾವಯವ ಗೊಬ್ಬರಗಳನ್ನು ತಯಾರಿಸಲು ರೈತರಿಗೆ ಸಹಾಯ ಮಾಡಲು ಪ್ರಯತ್ನಗಳು ನಡೆಯುತ್ತಿವೆ, ಅವುಗಳ ಉತ್ಪಾದನೆಗೆ ನಿಬಂಧನೆಗಳನ್ನು ಮಾಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು.

"ನಮ್ಮ ಸರ್ಕಾರವು ರೈತರನ್ನು ಇಂಧನ ಉತ್ಪಾದಕರು ಮತ್ತು ರಸಗೊಬ್ಬರ ಪೂರೈಕೆದಾರರನ್ನಾಗಿ ಪರಿವರ್ತಿಸುವತ್ತ ಗಮನಹರಿಸಿದೆ" ಎಂದು ಪ್ರಧಾನಿ ಮೋದಿ ಅವರು ಹೇಳಿದರು, ಗ್ರಾಮೀಣ ಆರ್ಥಿಕತೆಯನ್ನು ವೃದ್ಧಿಸುವಲ್ಲಿ ಸರ್ಕಾರದ ಬಹುಮುಖಿ ವಿಧಾನವನ್ನು ಎತ್ತಿ ತೋರಿಸಿದರು. ರೈತರಿಗೆ ಸೋಲಾರ್ ಪಂಪ್ ಗಳನ್ನು ಒದಗಿಸುವುದರ ಜೊತೆಗೆ, ಜಮೀನಿನಲ್ಲಿ ಸಣ್ಣ ಪ್ರಮಾಣದ ಸೋಲಾರ್ ಘಟಕಗಳನ್ನು ಸ್ಥಾಪಿಸಲು ಸಹಾಯವನ್ನು ವಿಸ್ತರಿಸಲಾಗುತ್ತಿದೆ ಎಂದು ಪ್ರಧಾನಿ ಮೋದಿ ವಿವರಿಸಿದರು, ಕೃಷಿಯಲ್ಲಿ ಸುಸ್ಥಿರ ಇಂಧನ ಪರಿಹಾರಗಳಿಗೆ ಸರ್ಕಾರದ ಬದ್ಧತೆಯನ್ನು ಅವರು ಒತ್ತಿಹೇಳಿದರು.

ಇದಲ್ಲದೆ, ಗೋಬರ್ ಧನ್ ಯೋಜನೆ ಅಡಿಯಲ್ಲಿ ಪಶುಸಂಗೋಪನಾ ರೈತರಿಂದ ಹಸುವಿನ ಸಗಣಿ ಖರೀದಿಸುವ ಯೋಜನೆಯನ್ನು ಜಾರಿಗೆ ತರುವುದಾಗಿ ಪ್ರಧಾನಿ ಮೋದಿ ಘೋಷಿಸಿದರು, ಇದು ವಿದ್ಯುತ್ ಉತ್ಪಾದನೆಗೆ, ಜೈವಿಕ ಅನಿಲ ಉತ್ಪಾದನೆಗೆ ಅನುಕೂಲವಾಗಲಿದೆ ಎಂದರು. "ಬನಸ್ಕಾಂತದಲ್ಲಿ ಅಮುಲ್ ಜೈವಿಕ ಅನಿಲ ಸ್ಥಾವರಗಳ ಸ್ಥಾಪನೆಯು ಈ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ" ಎಂದು ಡೈರಿ ವಲಯದಲ್ಲಿ ಯಶಸ್ವಿ ಉಪಕ್ರಮಗಳ ಉದಾಹರಣೆಗಳನ್ನು ಅವರು ಉಲ್ಲೇಖಿಸಿದರು. 

"ನಮ್ಮ ಸರ್ಕಾರವು ಗ್ರಾಮೀಣ ಆರ್ಥಿಕತೆಯಲ್ಲಿ ಸಹಕಾರದ ವ್ಯಾಪ್ತಿಯನ್ನು ಗಮನಾರ್ಹವಾಗಿ ವಿಸ್ತರಿಸುತ್ತಿದೆ" ಎಂದು ಪ್ರಧಾನಿ ಮೋದಿ ಹೇಳಿದರು, ಸಹಕಾರಿ ಸಂಘಗಳನ್ನು ಆರ್ಥಿಕ ಬೆಳವಣಿಗೆಯ ಚಾಲಕರನ್ನಾಗಿ ಉತ್ತೇಜಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು. "ಪ್ರಥಮ ಬಾರಿಗೆ ಕೇಂದ್ರ ಮಟ್ಟದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯವನ್ನು ಸ್ಥಾಪಿಸಲಾಗಿದೆ" ಎಂದು ಪ್ರಧಾನಿ ಮೋದಿ ತಿಳಿಸಿದರು. "ದೇಶದಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಸಹಕಾರಿ ಸಂಘಗಳನ್ನು ಸ್ಥಾಪಿಸುವುದರೊಂದಿಗೆ, ಸಹಕಾರಿ ಆಂದೋಲನವು ವೇಗವನ್ನು ಪಡೆಯುತ್ತಿದೆ" ಎಂದು ಪ್ರಧಾನಿ ಮೋದಿ ಹೇಳಿದರು. ಕೃಷಿ, ಪಶುಸಂಗೋಪನೆ ಮತ್ತು ಮೀನುಗಾರಿಕೆಯಂತಹ ಕ್ಷೇತ್ರಗಳಲ್ಲಿ ಈ ಸಂಘಗಳನ್ನು ರಚಿಸಲಾಗುತ್ತಿದೆ. ನಮ್ಮ ಸರ್ಕಾರವು 'ಮೇಡ್ ಇನ್ ಇಂಡಿಯಾ' ಉಪಕ್ರಮದ ಮೂಲಕ ಉತ್ಪಾದನೆಯಲ್ಲಿ ಸಹಕಾರ ಸಂಘಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು, ತೆರಿಗೆ ಪ್ರೋತ್ಸಾಹ ಮತ್ತು ಹಣಕಾಸಿನ ಮೂಲಕ ಸರ್ಕಾರದ ಬೆಂಬಲವನ್ನು ಅವರು ಒತ್ತಿ ಹೇಳಿದರು. ಈ ಸಹಕಾರಿ ಸಂಸ್ಥೆಗಳಿಗೆ ತೆರಿಗೆ ಪ್ರೋತ್ಸಾಹದ ಮೂಲಕ ಮೇಡ್-ಇನ್-ಇಂಡಿಯಾ ಉತ್ಪಾದನೆಯ ಭಾಗವಾಗಲು ಪ್ರೋತ್ಸಾಹಿಸಲಾಗುತ್ತಿದೆ. 10 ಸಾವಿರ ರೈತ ಉತ್ಪಾದಕ ಕೇಂದ್ರ (ಎಫ್ ಪಿ ಒ) ಗಳ ಪೈಕಿ 8 ಸಾವಿರ ಈಗಾಗಲೇ ಕಾರ್ಯನಿರ್ವಹಿಸುತ್ತಿವೆ, ಇವು ಸಣ್ಣ ರೈತರ ದೊಡ್ಡ ಸಂಸ್ಥೆಗಳಾಗಿವೆ ಮತ್ತು “ಸಣ್ಣ ರೈತರನ್ನು ಉತ್ಪಾದಕರಿಂದ ಕೃಷಿ ಉದ್ಯಮಿಗಳಾಗಿ ಪರಿವರ್ತಿಸುವ ಧ್ಯೇಯ” ಹೊಂದಿವೆ ಎಂದು ಅವರು ಹೇಳಿದರು. ಪಿಎಸಿಗಳು, ಎಫ್ ಪಿ ಒ ಗಳು ಮತ್ತು ಇತರ ಸಹಕಾರಿ ಸಂಸ್ಥೆಗಳು ಕೋಟ್ಯಂತರ ರೂಪಾಯಿಗಳ ನೆರವು ಪಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು. ಕೃಷಿ ಮೂಲಸೌಕರ್ಯಕ್ಕಾಗಿ ಆರಂಭಿಸಿರುವ 1 ಲಕ್ಷ ಕೋಟಿ ರೂಪಾಯಿ ನಿಧಿಯ ಬಗ್ಗೆಯೂ ಅವರು ಪ್ರಸ್ತಾಪಿಸಿದರು.

30 ಸಾವಿರ ಕೋಟಿ ರೂಪಾಯಿಗಳ ನಿಧಿಯೊಂದಿಗೆ ಜಾನುವಾರು ಮೂಲಸೌಕರ್ಯಕ್ಕೆ ದಾಖಲೆಯ ಹೂಡಿಕೆಯ ಕುರಿತು ಪ್ರಧಾನಿ ಮಾತನಾಡಿದರು. ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಈಗ ಬಡ್ಡಿಯಲ್ಲಿ ಹೆಚ್ಚಿನ ರಿಯಾಯಿತಿ ದೊರೆಯುತ್ತಿದೆ ಎಂದರು. ಹಾಲಿನ ಘಟಕಗಳ ಆಧುನೀಕರಣಕ್ಕೆ ಸರಕಾರವೂ ಸಾವಿರಾರು ಕೋಟಿ ರೂ. ವೆಚ್ಚ ಮಾಡುತ್ತಿದೆ. ಈ ಯೋಜನೆಯಡಿಯಲ್ಲಿ ಇಂದು ಸಬರಕಾಂತ ಹಾಲು ಒಕ್ಕೂಟದ ಎರಡು ಬೃಹತ್ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ಇದು ದಿನಕ್ಕೆ 800 ಟನ್ ಗಳಷ್ಟು ಪ್ರಾಣಿಗಳ ಮೇವನ್ನು ಉತ್ಪಾದಿಸುವ ಆಧುನಿಕ ಘಟಕವನ್ನು ಸಹ ಒಳಗೊಂಡಿದೆ ಎಂದು ಅವರು ಹೇಳಿದರು.

"ನಾನು ವಿಕಸಿತ ಭಾರತದ ಬಗ್ಗೆ ಮಾತನಾಡುವಾಗ ನಾನು ಸಬ್ಕಾ ಪ್ರಯಾಸ್ ನಲ್ಲಿ ನಂಬಿಕೆ ಇಡುತ್ತೇನೆ" ಎಂದು ಪ್ರಧಾನಿ ಹೇಳಿದರು. ಭಾರತವು ಸ್ವಾತಂತ್ರ್ಯದ 100 ನೇ ವರ್ಷವನ್ನು ತಲುಪಿದಾಗ ಅಮುಲ್ 75 ವರ್ಷಗಳನ್ನು ಪೂರ್ಣಗೊಳಿಸುತ್ತದೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ವೇಗವಾಗಿ ಹೆಚ್ಚುತ್ತಿರುವ ಜನಸಂಖ್ಯೆಯ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸುವಲ್ಲಿ ಈ ಸಂಸ್ಥೆಯ ಪಾತ್ರವನ್ನು ಎತ್ತಿ ತೋರಿಸಿದರು. ಮುಂದಿನ 5 ವರ್ಷಗಳಲ್ಲಿ ಅಮುಲ್ ತನ್ನ ಸ್ಥಾವರಗಳ ಸಂಸ್ಕರಣಾ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದರು. “ಇಂದು ಅಮುಲ್ ವಿಶ್ವದ ಎಂಟನೇ ಅತಿದೊಡ್ಡ ಡೈರಿ ಕಂಪನಿಯಾಗಿದೆ. ನೀವು ಇದನ್ನು ಆದಷ್ಟು ಬೇಗ ವಿಶ್ವದ ಅತಿದೊಡ್ಡ ಡೈರಿ ಸಂಸ್ಥೆಯನ್ನಾಗಿ ಮಾಡಬೇಕು. ಸರ್ಕಾರ ಎಲ್ಲ ರೀತಿಯಲ್ಲೂ ನಿಮ್ಮೊಂದಿಗಿದೆ ಮತ್ತು ಇದು ಮೋದಿಯವರ ಗ್ಯಾರಂಟಿ”. 50 ವರ್ಷಗಳ ಮೈಲಿಗಲ್ಲನ್ನು ತಲುಪಿದ್ದಕ್ಕಾಗಿ ತಮ್ಮ ಶುಭ ಹಾರೈಕೆಗಳನ್ನು ತಿಳಿಸಿದ ಪ್ರಧಾನಮಂತ್ರಿಯವರು ತಮ್ಮ ಮಾತು ಮುಕ್ತಾಯಗೊಳಿಸಿದರು.

ಗುಜರಾತ್ ರಾಜ್ಯಪಾಲ ಶ್ರೀ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಪಟೇಲ್, ಕೇಂದ್ರ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ರಾಜ್ಯ ಸಚಿವ ಶ್ರೀ ಪರ್ಶೋತ್ತಮ್ ರೂಪಾಲಾ ಮತ್ತು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದ ಅಧ್ಯಕ್ಷ ಶ್ರೀ ಶಾಮಲ್ ಬಿ ಪಟೇಲ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 1.25 ಲಕ್ಷಕ್ಕೂ ಹೆಚ್ಚು ರೈತರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡರು.

***


(Release ID: 2008141) Visitor Counter : 111