ಪ್ರಧಾನ ಮಂತ್ರಿಯವರ ಕಛೇರಿ

​​​​​​​ ಶ್ರೀ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಸಂದಿರುವುದಕ್ಕೆ  ಸಂತಸ ವ್ಯಕ್ತಪಡಿಸಿದ ಪ್ರಧಾನ ಮಂತ್ರಿಗಳು

Posted On: 23 JAN 2024 9:05PM by PIB Bengaluru

ಸಾಮಾಜಿಕ ನ್ಯಾಯದ ಹರಿಕಾರರಾದ ಶ್ರೀ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿ ನೀಡುವ ನಿರ್ಧಾರಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಕರ್ಪೂರಿ ಠಾಕೂರ್ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲೇ ತೆಗೆದುಕೊಂಡಿರುವ ಈ ನಿರ್ಧಾರವು ದೇಶವಾಸಿಗಳಿಗೆ ಹೆಮ್ಮೆ ತರುತ್ತದೆ ಎಂದು ಶ್ರೀ ಮೋದಿ ಬಣ್ಣಿಸಿದ್ದಾರೆ. ಹಿಂದುಳಿದ ಮತ್ತು ಅವಕಾಶ ವಂಚಿತರ ಉನ್ನತಿಗಾಗಿ ತಮ್ಮ ಅಚಲ ಬದ್ಧತೆ ಮತ್ತು ದೂರದೃಷ್ಟಿಯ ನಾಯಕತ್ವದ ಮೂಲಕ ಕರ್ಪೂರಿ ಠಾಕೂರ್ ಅವರು ಭಾರತದ ಸಾಮಾಜಿಕ-ರಾಜಕೀಯ ಇತಿಹಾಸದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ.

ಈ ಸಂಬಂಧ 'ಎಕ್ಸ್' ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್ ಮಾಡಿರುವ ಪ್ರಧಾನ ಮಂತ್ರಿಗಳು, " 

“ಸಾಮಾಜಿಕ ನ್ಯಾಯದ ಹರಿಕಾರ, ಮಹಾನ್ ಜನನಾಯಕ ಕರ್ಪೂರಿ ಠಾಕೂರ್ ಅವರಿಗೆ ಕೇಂದ್ರ ಸರ್ಕಾರವು ಭಾರತ ರತ್ನ ನೀಡಲು ನಿರ್ಧರಿಸಿರುವುದು ನನಗೆ ಅತೀವ ಸಂತಸ ತಂದಿದೆ. ಅದು ಸಹ ಕರ್ಪೂರಿ ಠಾಕೂರ್ ಅವರ ಜನ್ಮಶತಮಾನೋತ್ಸವ ಹೊತ್ತಿನಲ್ಲೇ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ. ಸಮಾಜದಲ್ಲಿ ಅಂಚಿನಲ್ಲಿರುವವರ ಪರವಾಗಿ ಮತ್ತು ಸಮಾನತೆ ಹಾಗೂ ಸಬಲೀಕರಣಕ್ಕಾಗಿ ನೊಂದವರ ಪರ ಧೀಮಂತ ನಾಯಕರಾಗಿ ಅವರು ನಡೆಸಿದ ನಿರಂತರ ಪ್ರಯತ್ನಗಳಿಗೆ ಈ ಪ್ರತಿಷ್ಠಿತ ಮನ್ನಣೆ ದೊರಕಿರುವುದು ಸಾಕ್ಷಿಯಾಗಿದೆ.

ದೀನದಲಿತರ ಬಲವರ್ಧನೆಗೊಳಿಸುವುದರಲ್ಲಿನ  ಅಚಲ ಬದ್ಧತೆ ಮತ್ತು ಅವರ ದೂರದೃಷ್ಟಿಯ ನಾಯಕತ್ವವು ಭಾರತದ ಸಾಮಾಜಿಕ-ರಾಜಕೀಯ ವ್ಯವಸ್ಥೆಯಲ್ಲಿ ಅಳಿಸಲಾಗದ ಹೆಗ್ಗುರುತು ಮೂಡಿಸಿದೆ. ಈ ಪ್ರಶಸ್ತಿಯು ಅವರ ಅತ್ಯುನ್ನತ ಕೊಡುಗೆಗಳನ್ನು ಗೌರವಿಸುವುದು ಮಾತ್ರವಲ್ಲದೆ, ಹೆಚ್ಚು ನ್ಯಾಯಯುತ ಮತ್ತು ಸಮ ಸಮಾಜವನ್ನು ನಿರ್ಮಿಸುವ ಅವರ ಧ್ಯೇಯವನ್ನು ಮುಂದುವರಿಸಲು ನಮಗೆ ಸ್ಫೂರ್ತಿ ನೀಡುತ್ತದೆ," ಎಂದು ಬಣ್ಣಿಸಿದ್ದಾರೆ.

***



(Release ID: 1999031) Visitor Counter : 149