ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​'ಕಾರ್ಮಿಕರ ಹಿತ, ಕಾರ್ಮಿಕರಿಗೆ ಸಮರ್ಪಿತ' ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ


ʻಹುಕುಮ್‌ಚಂದ್ ಮಿಲ್ʼನ ಕಾರ್ಮಿಕರ ಬಾಕಿ ಇರುವ ಚೆಕ್‌ಗಳ ಹಸ್ತಾಂತರ

ಖಾರ್ಗೋನ್ ಜಿಲ್ಲೆಯಲ್ಲಿ 60 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರಕ್ಕೆ ಶಂಕುಸ್ಥಾಪನೆ

"ಶ್ರಮಿಕರ ಆಶೀರ್ವಾದ ಮತ್ತು ಪ್ರೀತಿಯ ಪ್ರಭಾವ ನನಗೆ ತಿಳಿದಿದೆ"

"ಬಡವರು ಮತ್ತು ಅವಕಾಶ ವಂಚಿತರಿಗೆ ಘನತೆ ಮತ್ತು ಗೌರವ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ. ಸಮೃದ್ಧ ಭಾರತಕ್ಕೆ ಕೊಡುಗೆ ನೀಡುವ ಸಾಮರ್ಥ್ಯವಿರುವ ಸಶಕ್ತ ಶ್ರಮಿಕರ ಸೃಷ್ಟಿ ನಮ್ಮ ಗುರಿ"

" ಸ್ವಚ್ಛತೆ ಮತ್ತು ತಿನಿಸುಗಳ ಕ್ಷೇತ್ರಗಳಲ್ಲಿ ಇಂದೋರ್ ಅಗ್ರಗಣ್ಯ ನಗರ"

"ಇತ್ತೀಚಿನ ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಕಾರ್ಯನಿರತವಾಗಿದೆ"

“ಮಧ್ಯಪ್ರದೇಶದ ಜನರು 'ಮೋದಿ ಅವರ ಗ್ಯಾರಂಟಿ' ವಾಹನದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವಂತೆ ನಾನು ವಿನಂತಿಸುತ್ತೇನೆ”

Posted On: 25 DEC 2023 12:51PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ 'ಕಾರ್ಮಿಕರ ಹಿತ, ಕಾರ್ಮಿಕರಿಗೆ ಸಮರ್ಪಿತʼ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ʻಹುಕುಮ್‌ಚಂದ್ ಮಿಲ್ʼನ ಕಾರ್ಮಿಕರ ಬಾಕಿಗೆ ಸಂಬಂಧಿಸಿದ ಸುಮಾರು 224 ಕೋಟಿ ರೂ.ಗಳ ಚೆಕ್ ಅನ್ನು ಇಂದೋರ್‌ನ ʻಹುಕುಚ್‌ಚಂದ್ ಮಿಲ್‌ʼನ ಅಧಿಕೃತ ಲಿಕ್ವಿಡೇಟರ್ ಮತ್ತು ಕಾರ್ಮಿಕ ಒಕ್ಕೂಟದ ಮುಖ್ಯಸ್ಥರಿಗೆ ಹಸ್ತಾಂತರಿಸಿದರು. ʻಹುಕುಮ್‌ಚಂದ್ ಮಿಲ್‌ʼ ಕಾರ್ಮಿಕರ ದೀರ್ಘಕಾಲದಿಂದ ಬಾಕಿ ಇರುವ ಬೇಡಿಕೆಗಳ ಇತ್ಯರ್ಥಕ್ಕೆ ಈ ಕಾರ್ಯಕ್ರಮವು ಸಾಕ್ಷಿಯಾಯಿತು. ಶ್ರೀ ಮೋದಿ ಅವರು ಖಾರ್ಗೋನ್ ಜಿಲ್ಲೆಯಲ್ಲಿ 60 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರಕ್ಕೂ ಶಂಕುಸ್ಥಾಪನೆ ನೆರವೇರಿಸಿದರು.

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಇಂದಿನ ಕಾರ್ಯಕ್ರಮವು ಶ್ರಮಿಕ ಸಹೋದರ-ಸಹೋದರಿಯರ ವರ್ಷಗಳ ತಪಸ್ಸು, ಕನಸುಗಳು ಮತ್ತು ಸಂಕಲ್ಪಗಳ ಫಲವಾಗಿದೆ ಎಂದರು. ಅಟಲ್ ಜೀ ಅವರ ಜನ್ಮ ದಿನಾಚರಣೆಯಂದು ಈ ಕಾರ್ಯಕ್ರಮ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಮಧ್ಯಪ್ರದೇಶದಲ್ಲಿ ಹೊಸ ಸರ್ಕಾರ ಸ್ಥಾಪನೆಯಾದ ನಂತರ ನಡೆಯುತ್ತಿರುವ ಪ್ರಧಾನಮಂತ್ರಿಯವರ ಮೊದಲ ಕಾರ್ಯಕ್ರಮವು ಬಡವರು ಮತ್ತು ವಂಚಿತ ಶ್ರಮಿಕರಿಗೆ ಸಮರ್ಪಿತವಾಗಿದೆ ಎಂದರು. ಮಧ್ಯಪ್ರದೇಶದಲ್ಲಿ ಹೊಸದಾಗಿ ಆಯ್ಕೆಯಾದ ʻಡಬಲ್ ಎಂಜಿನ್ʼ ಸರ್ಕಾರಕ್ಕೆ ಶ್ರಮಿಕರು ತಮ್ಮ ಆಶೀರ್ವಾದವನ್ನು ನೀಡುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. "ಶ್ರಮಿಕರ ಆಶೀರ್ವಾದ ಮತ್ತು ಪ್ರೀತಿಯ ಪ್ರಭಾವದ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಮುಂಬರುವ ವರ್ಷಗಳಲ್ಲಿ ರಾಜ್ಯದ ಹೊಸ ತಂಡವು ಇಂತಹ ಅನೇಕ ಸಾಧನೆಗಳನ್ನು ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಂದೋರ್‌ನಲ್ಲಿ ಶ್ರಮಿಕರ ಹಬ್ಬದ ಅವಧಿಯಲ್ಲಿ ಇಂದಿನ ಕಾರ್ಯಕ್ರಮದ ಆಯೋಜನೆಯು ಉತ್ಸಾಹವನ್ನು ಹೆಚ್ಚಿಸಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಮಧ್ಯಪ್ರದೇಶದೊಂದಿಗೆ ಅಟಲ್ ಜೀ ಅವರ ಒಡನಾಟವನ್ನು ಒತ್ತಿ ಹೇಳಿದರು. ಅಟಲ್‌ ಜೀ ಅವರ ಜನ್ಮದಿನವನ್ನು ʻಉತ್ತಮ ಆಡಳಿತ ದಿನʼವಾಗಿಯೂ ಆಚರಿಸಲಾಗುತ್ತದೆ ಎಂದರು. ಕಾರ್ಮಿಕರಿಗೆ 224 ಕೋಟಿ ರೂ.ಗಳನ್ನು ವರ್ಗಾಯಿಸುವುದರೊಂದಿಗೆ ಅವರಿಗೆ ಸುವರ್ಣ ಭವಿಷ್ಯ ಕಾದಿದೆ ಮತ್ತು ಇಂದಿನ ದಿನಾಂಕವು ಕಾರ್ಮಿಕರಿಗೆ ನ್ಯಾಯದ ದಿನಾಂಕವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಪ್ರಧಾನಿ ಹೇಳಿದರು. ತಾಳ್ಮೆ ಮತ್ತು ಕಠಿಣ ಪರಿಶ್ರಮದ ಬಗ್ಗೆಯೂ ಪ್ರಧಾನಿ ಮೋದಿ ಒತ್ತಿ ಹೇಳಿದರು.

ಬಡವರು, ಯುವಕರು, ಮಹಿಳೆಯರು ಮತ್ತು ರೈತರು ಎಂಬ  ನಾಲ್ಕು ವರ್ಗಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಸಮಾಜದ ಬಡ ವರ್ಗಗಳನ್ನು ಉತ್ತೇಜಿಸುವ ಮಧ್ಯಪ್ರದೇಶ ಸರ್ಕಾರದ ಕ್ರಮಗಳನ್ನು ಶ್ಲಾಘಿಸಿದರು. "ಬಡವರು ಮತ್ತು ಅವಕಾಸ ವಂಚಿತರಿಗೆ ಘನತೆ ಮತ್ತು ಗೌರವ ತಂದುಕೊಡುವುದು ನಮ್ಮ ಆದ್ಯತೆಯಾಗಿದೆ. ಸಮೃದ್ಧ ಭಾರತಕ್ಕೆ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿರುವಂತಹ ಸಶಕ್ತ ಶ್ರಮಿಕ ಸಮುದಾಯದ ಸೃಷ್ಟಿಯು ನಮ್ಮ ಗುರಿಯಾಗಿದೆ", ಎಂದು ಶ್ರೀ ಮೋದಿ ಹೇಳಿದರು.

ಸ್ವಚ್ಛತೆ ಮತ್ತು ತಿನಿಸುಗಳಲ್ಲಿ ಇಂದೋರ್ ನಗರದ ಅಗ್ರಗಣ್ಯ ಸ್ಥಾನವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಇಂದೋರ್‌ನ ಕೈಗಾರಿಕಾ ಕ್ಷೇತ್ರದಲ್ಲಿ ಜವಳಿ ಉದ್ಯಮದ ಪಾತ್ರವನ್ನು ಎತ್ತಿ ತೋರಿದರು. ಇದೇ ವೇಳೆ, ʻಮಹಾರಾಜ ತುಕೋಜಿ ರಾವ್ ಬಟ್ಟೆ ಮಾರುಕಟ್ಟೆʼ ಬಗ್ಗೆ ಹಾಗೂ ಮತ್ತು ʻಹೋಲ್ಕರ್‌ʼಗಳು ನಗರದಲ್ಲಿ ಮೊದಲ ಹತ್ತಿ ಗಿರಣಿ ಸ್ಥಾಪಿಸಿದ  ಪ್ರಾಮುಖ್ಯತೆಯ ಬಗ್ಗೆ ಉಲ್ಲೇಖಿಸಿದರು. ಮಾಲ್ವಾ ಹತ್ತಿಯ ಜನಪ್ರಿಯತೆಯ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಿ, ಆಗಿನ ಕಾಲ ಘಟ್ಟವು ʻಇಂದೋರ್‌ ಜವಳಿʼಯ ಸುವರ್ಣಯುಗವಾಗಿತ್ತು ಎಂದರು. ಹಿಂದಿನ ಸರ್ಕಾರಗಳ ನಿರ್ಲಕ್ಷ್ಯದ ಬಗ್ಗೆ ವಿಷಾದಿಸಿದ ಅವರು, ಡಬಲ್ ಎಂಜಿನ್ ಸರ್ಕಾರವು ಇಂದೋರ್‌ನ ಗತ ವೈಭವವನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಭೋಪಾಲ್ ಮತ್ತು ಇಂದೋರ್ ನಡುವೆ ʻಹೂಡಿಕೆ ಕಾರಿಡಾರ್ʼ ನಿರ್ಮಾಣ, ʻಇಂದೋರ್-ಪಿತಾಂಪುರ್ ಆರ್ಥಿಕ ಕಾರಿಡಾರ್ʼ ಮತ್ತು ʻಬಹು ಮಾದರಿ ಲಾಜಿಸ್ಟಿಕ್ಸ್ ಪಾರ್ಕ್ʼ, ವಿಕ್ರಮ್ ಉದ್ಯೋಗಪುರಿಯಲ್ಲಿ ʻವೈದ್ಯಕೀಯ ಸಾಧನ ಪಾರ್ಕ್ʼ, ಧಾರ್‌ನಲ್ಲಿ ʻಪಿಎಂ ಮಿತ್ರ ಪಾರ್ಕ್ʼ, ಹಲವು ಉದ್ಯೋಗ ಸೃಷ್ಟಿಸುವ ಯೋಜನೆಗಳು ಹಾಗೂ ಆರ್ಥಿಕ ವಿಸ್ತರಣೆಯ ಬಗ್ಗೆ ಅವರು ಮಾಹಿತಿ ನೀಡಿದರು.

ಮಧ್ಯಪ್ರದೇಶದ ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ವಿಶೇಷವಾಗಿ ಒತ್ತಿ ಹೇಳಿದ  ಪ್ರಧಾನಮಂತ್ರಿಯವರು, ಅಭಿವೃದ್ಧಿ ಮತ್ತು ಪ್ರಕೃತಿಯ ನಡುವೆ ಸಮತೋಲನಕ್ಕೆ ಇಂದೋರ್ ಸೇರಿದಂತೆ ರಾಜ್ಯದ ಅನೇಕ ನಗರಗಳು ಉದಾಹರಣೆಗಳಾಗಿವೆ ಎಂದರು. ಏಷ್ಯಾದ ಅತಿದೊಡ್ಡ ಕಾರ್ಯಾಚರಣೆಯ ʻಗೋಬರ್ಧನ್ ಸ್ಥಾವರʼ ಮತ್ತು ನಗರದಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯದ ಅಭಿವೃದ್ಧಿಯ ಉದಾಹರಣೆಗಳನ್ನು ಪ್ರಧಾನಿ ಮುಂದಿಟ್ಟರು. ಖಾರ್ಗೋನ್ ಜಿಲ್ಲೆಯಲ್ಲಿ ಇಂದು 60 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಇದು ವಿದ್ಯುತ್ ಬಿಲ್‌ನಲ್ಲಿ 4 ಕೋಟಿ ರೂ.ಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ವಿವರಿಸಿದರು. ಸ್ಥಾವರಕ್ಕೆ ಹಣವನ್ನು ವ್ಯವಸ್ಥೆ ಮಾಡುವ ಪ್ರಯತ್ನದಲ್ಲಿ ಹಸಿರು ಬಾಂಡ್‌ಗಳ ಬಳಕೆಯನ್ನು ಉಲ್ಲೇಖಿಸಿದ ಪ್ರಧಾನಿ, ಇದು ಪ್ರಕೃತಿಯನ್ನು ರಕ್ಷಿಸುವಲ್ಲಿ ಜನರ ಭಾಗವಹಿಸುವಿಕೆಯನ್ನು ಖಾತರಿಪಡಿಸುತ್ತದೆ ಎಂದು ಹೇಳಿದರು

ಇತ್ತೀಚಿನ ಚುನಾವಣೆಗಳಲ್ಲಿ ನೀಡಲಾದ ಭರವಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಪ್ರಧಾನಿ ಹೇಳಿದರು. ಸರ್ಕಾರದ ಯೋಜನೆಗಳ ಪರಿಪೂರ್ಣತೆಯನ್ನು ಸಾಧಿಸುವ ಸಲುವಾಗಿ, ʻವಿಕಸಿತ ಭಾರತ  ಸಂಕಲ್ಪ ಯಾತ್ರೆʼಯು ಮಧ್ಯಪ್ರದೇಶದ ಮೂಲೆ ಮೂಲೆಯನ್ನೂ ತಲುಪುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಚುನಾವಣಾ ನೀತಿ ಸಂಹಿತೆಯಿಂದಾಗಿ ಆರಂಭಿಕವಾಗಿ ವಿಳಂಬವಾಗಿದ್ದರೂ, ಈ ಯಾತ್ರೆಯ ಅಂಗವಾಗಿ ಈಗಾಗಲೇ 600 ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಲಕ್ಷಾಂತರ ಜನರಿಗೆ ಇದರಂದ ಪ್ರಯೋಜನವಾಗಿದೆ ಎಂದು ಅವರು ಮಾಹಿತಿ ನೀಡಿದರು. 'ಮೋದಿ ಅವರ ಗ್ಯಾರಂಟಿʼ ವಾಹನದ ಸಂಪೂರ್ಣ ಲಾಭವನ್ನು ಪಡೆದುಕೊಳ್ಳುವಂತೆ ನಾನು ಮಧ್ಯಪ್ರದೇಶದ ಜನರನ್ನು ವಿನಂತಿಸುತ್ತೇನೆ ಎಂದು ಅವರು ಹೇಳಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, “ಮುಗುಳ್ನಗುವ ಮುಖಗಳು ಮತ್ತು ಶ್ರಮಿಕರ ಹೂಮಾಲೆಗಳ ಪರಿಮಳವು ಸಮಾಜದ ಸುಧಾರಣೆಗಾಗಿ ಕೆಲಸ ಮಾಡಲು ಸರ್ಕಾರಕ್ಕೆ ಸ್ಫೂರ್ತಿ ನೀಡುತ್ತಲೇ ಇರುತ್ತದೆ,ʼʼ ಎಂದರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಮೋಹನ್ ಯಾದವ್ ಅವರು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

1992ರಲ್ಲಿ ಇಂದೋರ್‌ನ ʻಹುಕುಮ್‌ಚಂದ್ ಮಿಲ್‌ʼ ಮುಚ್ಚಿಹೋದ ನಂತರ ʻಹುಕುಮ್‌ಚಂದ್ ಮಿಲ್‌ʼ ಕಾರ್ಮಿಕರು ತಮ್ಮ ಬಾಕಿ ಪಾವತಿಗಾಗಿ ಸುದೀರ್ಘ ಕಾನೂನು ಹೋರಾಟ ನಡೆಸಿದರು. ಇತ್ತೀಚೆಗೆ, ಮಧ್ಯಪ್ರದೇಶ ಸರ್ಕಾರವು ಈ ವಿಚಾರದಲ್ಲಿ ಸಕಾರಾತ್ಮಕ ಪಾತ್ರವನ್ನು ವಹಿಸಿತು. ನ್ಯಾಯಾಲಯಗಳು, ಕಾರ್ಮಿಕ ಸಂಘಗಳು ಮತ್ತು ಗಿರಣಿ ಕಾರ್ಮಿಕರು ಸೇರಿದಂತೆ ಎಲ್ಲಾ ಪಾಲುದಾರರು ಅನುಮೋದಿಸಿದ ʻಇತ್ಯರ್ಥ ಪ್ಯಾಕೇಜ್ʼ ಅನ್ನು ಯಶಸ್ವಿಯಾಗಿ ಅಂತಿಮಗೊಳಿಸಿತು. ಗಿರಣಿ ಮಾಲೀಕರಿಂದ ಕಾರ್ಮಿಕರಿಗೆ ಬರಬೇಕಾದ ಎಲ್ಲಾ ಬಾಕಿಗಳನ್ನು ಮಧ್ಯಪ್ರದೇಶ ಸರ್ಕಾರವು ಮುಂಚಿತವಾಗಿ ಪಾವತಿಸುವುದು, ಗಿರಣಿ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದು ಹಾಗೂ ಅದನ್ನು ವಸತಿ ಮತ್ತು ವಾಣಿಜ್ಯ ಸ್ಥಳವಾಗಿ ಅಭಿವೃದ್ಧಿಪಡಿಸುವುದು ಈ ಪ್ಯಾಕೇಜ್‌ನಲ್ಲಿ ಸೇರಿದೆ.

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು, ಖಾರ್ಗೋನ್ ಜಿಲ್ಲೆಯ ಸಾಮ್ರಾಜ್ ಮತ್ತು ಅಶುಖೇಡಿ ಗ್ರಾಮಗಳಲ್ಲಿ ʻಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ʼ ಸ್ಥಾಪಿಸುತ್ತಿರುವ 60 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರಕ್ಕೂ ಶಂಕುಸ್ಥಾಪನೆ ನೆರವೇರಿಸಿದರು. 308 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೊಸ ಸೌರ ವಿದ್ಯುತ್ ಸ್ಥಾವರದ ಸ್ಥಾಪನೆಯು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ಗೆ ವಿದ್ಯುತ್‌ ಬಿಲ್‌ನಲ್ಲಿ ತಿಂಗಳಿಗೆ ಸುಮಾರು 4 ಕೋಟಿ ರೂ.ಗಳನ್ನು ಉಳಿಸಲು ಸಹಾಯ ಮಾಡುತ್ತದೆ. ಸೌರ ಸ್ಥಾವರ ನಿರ್ಮಾಣಕ್ಕೆ ಧನಸಹಾಯ ನೀಡಲು ʻಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ʼ 244 ಕೋಟಿ ರೂ.ಗಳ ಹಸಿರು ಬಾಂಡ್‌ಗಳನ್ನು ಬಿಡುಗಡೆ ಮಾಡಿದೆ. ಆ ಮೂಲಕ ʻಹಸಿರು ಬಾಂಡ್ʼಗಳನ್ನು ವಿತರಿಸಿದ ದೇಶದ ಮೊದಲ ನಗರ ಸ್ಥಳೀಯ ಸಂಸ್ಥೆಯಾಗಿ ಹೊರಹೊಮ್ಮಿದೆ. 29 ರಾಜ್ಯಗಳ ಜನರು ಸುಮಾರು 720 ಕೋಟಿ ರೂ.ಗಳ ಮೌಲ್ಯದೊಂದಿಗೆ ಚಂದಾದಾರರಾಗುವ ಮೂಲಕ ಈ ಬಾಂಡ್‌ಗಳಿಗೆ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಇದರಲ್ಲಿ ಸಂಗ್ರಹವಾದ ಮೊತ್ತವು ಬಿಡುಗಡೆಯಾದ ಆರಂಭಿಕ ಬಾಂಡ್‌ಗಳ ಮೌಲ್ಯಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

*****


(Release ID: 1991121) Visitor Counter : 73