ಪ್ರಧಾನ ಮಂತ್ರಿಯವರ ಕಛೇರಿ

​​​​​​​ಜಾಗತಿಕ ಸಾಗರ ಇಂಡಿಯಾ ಶೃಂಗಸಭೆ 2023; ಪ್ರಧಾನಿ ಉದ್ಘಾಟನೆ


'ಅಮೃತ ಕಾಲದ ಮುನ್ನೋಟ 2047' ಅನಾವರಣ – ಇದು ಭಾರತೀಯ ಸಾಗರ ನೀಲಿ ಆರ್ಥಿಕತೆಯ ನೀಲನಕ್ಷೆ

23,000 ಕೋಟಿಗೂ ಹೆಚ್ಚು ಮೌಲ್ಯದ ರಾಷ್ಟ್ರ ಯೋಜನೆಗಳಿಗೆ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ

ಗುಜರಾತ್‌ನ ದೀನದಯಾಳ್ ಬಂದರು ಪ್ರಾಧಿಕಾರದಲ್ಲಿ ಟ್ಯೂನ ಟೆಕ್ರಾ ಡೀಪ್ ಡ್ರಾಫ್ಟ್ ಟರ್ಮಿನಲ್‌ಗೆ ಶಂಕುಸ್ಥಾಪನೆ

ಸಾಗರ ವಲಯದಲ್ಲಿ ಜಾಗತಿಕ ಮತ್ತು ರಾಷ್ಟ್ರೀಯ ಪಾಲುದಾರಿಕೆಗಾಗಿ 300ಕ್ಕೂ ಹೆಚ್ಚು ತಿಳಿವಳಿಕೆ ಪತ್ರಗಳ ಸಮರ್ಪಣೆ

"ಬದಲಾಗುತ್ತಿರುವ ವಿಶ್ವ ಕ್ರಮದಲ್ಲಿ, ಜಗತ್ತು ಹೊಸ ಆಕಾಂಕ್ಷೆಗಳೊಂದಿಗೆ ಭಾರತದತ್ತ ನೋಡುತ್ತಿದೆ"

"ಸಮೃದ್ಧಿಗಾಗಿ ಬಂದರುಗಳು ಮತ್ತು ಪ್ರಗತಿಗಾಗಿ ಬಂದರುಗಳು" ಎಂಬ ಸರ್ಕಾರದ ದೃಷ್ಟಿಕೋನವು ನೆಲ ಮಟ್ಟದಲ್ಲಿ ಪರಿವರ್ತನೀಯ ಬದಲಾವಣೆಗಳನ್ನು ತರುತ್ತಿದೆ"

"ಮೇಕ್ ಇನ್ ಇಂಡಿಯಾ - ಮೇಕ್ ಫಾರ್ ದಿ ವರ್ಲ್ಡ್" ನಮ್ಮ ಮಂತ್ರವಾಗಿದೆ

"ನಾವು ಭವಿಷ್ಯದತ್ತ ಸಾಗುತ್ತಿದ್ದೇವೆ, ಅಲ್ಲಿ ನೀಲಿ ಆರ್ಥಿಕತೆಯು ಹಸಿರು ಗ್ರಹವನ್ನು ರಚಿಸುವ ಮಾಧ್ಯಮವಾಗಿದೆ"

"ಭಾರತವು ತನ್ನ ಅತ್ಯಾಧುನಿಕ ಮೂಲಸೌಕರ್ಯಗಳ ಮೂಲಕ ಜಾಗತಿಕ ಮಟ್ಟದ ನೆಚ್ಚಿನ ತಾಣ ಆಗುವತ್ತ ಸಾಗುತ್ತಿದೆ"

"ಅಭಿವೃದ್ಧಿ, ಜನಸಂಖ್ಯಾಶಾಸ್ತ್ರ, ಪ್ರಜಾಪ್ರಭುತ್ವ ಮತ್ತು ಬೇಡಿಕೆಯ ಸಂಯೋಜನೆಯು ಹೂಡಿಕೆದಾರರಿಗೆ ಒಂದು ಅವಕಾಶವಾಗಿದೆ"

Posted On: 17 OCT 2023 11:54AM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬೈನಲ್ಲಿಂದು “ಜಾಗತಿಕ ಸಾಗರ  ಇಂಡಿಯಾ ಶೃಂಗಸಭೆ 2023”ರ 3ನೇ ಆವೃತ್ತಿಯನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಿದರು. ಭಾರತೀಯ ಕಡಲ ನೀಲಿ ಆರ್ಥಿಕತೆಯ ನೀಲನಕ್ಷೆಯಾದ ‘ಅಮೃತ ಕಾಲದ ಮುನ್ನೋಟ 2047’ ಅನ್ನು ಸಹ ಪ್ರಧಾನಿ ಅನಾವರಣಗೊಳಿಸಿದರು. ಈ ಭವಿಷ್ಯದ ಯೋಜನೆಗಳಿಗೆ ಅನುಗುಣವಾಗಿ, ಪ್ರಧಾನ ಮಂತ್ರಿ ಅವರು ನೀಲನಕ್ಷೆ ಅನಾವರಣಗೊಳಿಸಿದರು, ರಾಷ್ಟ್ರಕ್ಕೆ ಸಮರ್ಪಿಸಿದರು. ಭಾರತೀಯ ಕಡಲ ನೀಲಿ ಆರ್ಥಿಕತೆಗಾಗಿ 'ಅಮೃತ ಕಾಲದ ಮುನ್ನೋಟ 2047'ರೊಂದಿಗೆ ರೂಪಿಸಲಾದ ಸುಮಾರು 23,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಯೋಜನೆಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ದೇಶದ ಸಾಗರ ವಲಯದಲ್ಲಿ ಹೂಡಿಕೆ ಆಕರ್ಷಿಸಲು ಈ ಶೃಂಗಸಭೆಯು ಅತ್ಯುತ್ತಮ ವೇದಿಕೆ ಒದಗಿಸುತ್ತದೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, “ಜಾಗತಿಕ ಸಾಗರ ಇಂಡಿಯಾ ಶೃಂಗಸಭೆ 2023”ರ 3ನೇ ಆವೃತ್ತಿಗೆ ಗಣ್ಯರನ್ನು ಸ್ವಾಗತಿಸಿದರು. 2021ರಲ್ಲಿ ಶೃಂಗಸಭೆ ನಡೆದಾಗ ಇಡೀ ಜಗತ್ತು ಕೋವಿಡ್ ಸಾಂಕ್ರಾಮಿಕದ ಅನಿಶ್ಚಯದಿಂದ ಹೇಗೆ ನಾಶವಾಯಿತು ಎಂಬುದನ್ನು ಅವರು ನೆನಪಿಸಿಕೊಂಡರು. ಇದೀಗ ಹೊಸ ಜಗತ್ತು ಹೊಸ ಆದೇಶದೊಂದಿಗೆ ರೂಪುಗೊಳ್ಳುತ್ತಿದೆ. ಬದಲಾಗುತ್ತಿರುವ ವಿಶ್ವ ಕ್ರಮದಲ್ಲಿ, ಹೊಸ ಆಕಾಂಕ್ಷೆಗಳೊಂದಿಗೆ ಜಗತ್ತು ಭಾರತದತ್ತ ನೋಡುತ್ತಿದೆ. ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ವಿಶ್ವದಲ್ಲಿ ಭಾರತದ ಆರ್ಥಿಕತೆಯು ನಿರಂತರವಾಗಿ ಬಲಗೊಳ್ಳುತ್ತಿದೆ. ಭಾರತವು ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದಾಗುವ ದಿನ ದೂರವಿಲ್ಲ. ಜಾಗತಿಕ ವ್ಯಾಪಾರದಲ್ಲಿ ಸಮುದ್ರ ಮಾರ್ಗಗಳ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನ ಮಂತ್ರಿ, ಕೊರೊನಾ ನಂತರದ ಜಗತ್ತಿನಲ್ಲಿ ವಿಶ್ವಾಸಾರ್ಹ ಜಾಗತಿಕ ಪೂರೈಕೆ ಸರಪಳಿಯ ಅಗತ್ಯವಿದೆ ಎಂದರು.

ಭಾರತದ ಕಡಲ ಸಾಮರ್ಥ್ಯಗಳು ಯಾವಾಗಲೂ ಜಗತ್ತಿಗೆ ಪ್ರಯೋಜನಕಾರಿಯಾಗಿದೆ ಎಂಬುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಕ್ಷೇತ್ರವನ್ನು ಬಲಪಡಿಸಲು ಕೈಗೊಂಡ ಯೋಜನಾಬದ್ಧ ಕ್ರಮಗಳನ್ನು ಪ್ರಧಾನಿ ಪಟ್ಟಿ ಮಾಡಿದರು. ಪ್ರಸ್ತಾವಿತ ಭಾರತ-ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್‌ ವಿಷಯಕ್ಕೆ ಸಂಬಂಧಿಸಿದಂತೆ ಐತಿಹಾಸಿಕ ಜಿ-20 ಶೃಂಗಸಭೆಯಲ್ಲಿ ಒಮ್ಮತದ ಪರಿವರ್ತನೀಯ ಪರಿಣಾಮಗಳು ಕಂಡುಬಂದಿವೆ. ಹಿಂದಿನ ವ್ಯಾಪಾರ ಮಾರ್ಗ(ಸಿಲ್ಕ್ ರೂಟ್)ವು ಅನೇಕ ದೇಶಗಳ ಆರ್ಥಿಕತೆಯನ್ನು ಬದಲಿಸಿದಂತೆ, ಈ ಕಾರಿಡಾರ್ ಕೂಡ ಜಾಗತಿಕ ವ್ಯಾಪಾರದ ಚಿತ್ರಣವನ್ನೇ ಬದಲಾಯಿಸುತ್ತದೆ. ಮುಂದಿನ ಪೀಳಿಗೆಯ ಮೆಗಾ ಪೋರ್ಟ್, ಇಂಟರ್ ನ್ಯಾಷನಲ್ ಕಂಟೈನರ್ ಟ್ರಾನ್ಸ್ ಶಿಪ್ ಮೆಂಟ್, ದ್ವೀಪ ಅಭಿವೃದ್ಧಿ, ಒಳನಾಡಿನ ಜಲಮಾರ್ಗಗಳು ಮತ್ತು ಬಹುಮಾದರಿ ವ್ಯಾಪಾರಿ ತಾಣಗಳನ್ನು ಇದರ ಅಡಿ ಕೈಗೊಳ್ಳಲಾಗುವುದು, ಇದು ವ್ಯಾಪಾರ ವೆಚ್ಚದಲ್ಲಿ ಕಡಿತಕ್ಕೆ ಕಾರಣವಾಗುತ್ತದೆ ಮತ್ತು ಪರಿಸರ ಅವನತಿಯು ಸರಕು ಸಾಗಣೆ ದಕ್ಷತೆಯನ್ನು ಸುಧಾರಿಸುತ್ತದೆ, ಉದ್ಯೋಗಗಳನ್ನು ಸೃಷ್ಟಿಸುತ್ತದೆ. ಈ ಅಭಿಯಾನದ ಭಾಗವಾಗಲು ಮತ್ತು ಭಾರತಕ್ಕೆ ಸೇರಲು ಹೂಡಿಕೆದಾರರಿಗೆ ಉತ್ತಮ ಅವಕಾಶವಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು.

ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಸಂಕಲ್ಪ ಈಡೇರಿಸಲು ಇಂದಿನ ಭಾರತ ಶ್ರಮಿಸುತ್ತಿದೆ.  ಸರ್ಕಾರವು ಪ್ರತಿಯೊಂದು ವಲಯದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತಿದೆ. ಭಾರತದ ಸಾಗರ ವಲಯವನ್ನು ಬಲಪಡಿಸಲು ಸರ್ಕಾರ ಹಲವು ಕೆಲಸಗಳ ನಿರ್ವಹಿಸಿದೆ. ಕಳೆದ ದಶಕದಲ್ಲಿ, ಭಾರತದ ಪ್ರಮುಖ ಬಂದರುಗಳ ಸಾಮರ್ಥ್ಯ ದ್ವಿಗುಣಗೊಂಡಿದೆ. ದೊಡ್ಡ ಹಡಗುಗಳ ಪುನಶ್ಚೇತನ ಸಮಯವು 2014ರಲ್ಲಿ ಇದ್ದ 42 ಗಂಟೆಗಳಿಗೆ ಹೋಲಿಸಿದರೆ 24 ಗಂಟೆಗಳಿಗಿಂತ ಕಡಿಮೆಯಾಗಿದೆ. ಹೊಸ ರಸ್ತೆಗಳ ನಿರ್ಮಾಣ ಕೈಗೊಳ್ಳಲಾಗಿದೆ. ಬಂದರು ಸಂಪರ್ಕ ಹೆಚ್ಚಿಸಲು ಮತ್ತು ಕರಾವಳಿ ಮೂಲಸೌಕರ್ಯ ಬಲಪಡಿಸಲು ಸಾಗರಮಾಲಾ ಯೋಜನೆಯನ್ನು ಸಹ ಕೈಗೊಳ್ಳಲಾಗಿದೆ. ಈ ಎಲ್ಲಾ ಪ್ರಯತ್ನಗಳು ಉದ್ಯೋಗಾವಕಾಶ ಹೆಚ್ಚಿಸುತ್ತಿವೆ, ಇದರಿಂದ ಬದುಕಲು ಸುಲಭವಾಗುತ್ತಿವೆ ಎಂದು ಪ್ರಧಾನಿ ಹೇಳಿದರು.

"ಸಮೃದ್ಧಿಗಾಗಿ ಬಂದರುಗಳು ಮತ್ತು ಪ್ರಗತಿಗಾಗಿ ಬಂದರುಗಳು" ಎಂಬ ಸರ್ಕಾರದ ದೃಷ್ಟಿಕೋನವು ನೆಲ ಮಟ್ಟದಲ್ಲಿ ಪರಿವರ್ತನೀಯ ಬದಲಾವಣೆಗಳನ್ನು ತರುತ್ತಿದೆ", 'ಉತ್ಪಾದನೆಗಾಗಿ ಬಂದರುಗಳು' ಎಂಬ ಮಂತ್ರವನ್ನು ಸಹ ಪ್ರೋತ್ಸಾಹಿಸಲಾಗುತ್ತಿದೆ. ಸರಕು ಸಾಗಣೆ ವಲಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ಮೂಲಕ ಆರ್ಥಿಕ ಉತ್ಪಾದಕತೆ ಹೆಚ್ಚಿಸಲು ಸರ್ಕಾರವು ಪ್ರಮುಖ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕರಾವಳಿ ಬಂದರು ಮಾದರಿಗಳನ್ನು ಭಾರತದಲ್ಲಿ ಆಧುನೀಕರಿಸಲಾಗುತ್ತಿದೆ. ಕಳೆದ ದಶಕದಲ್ಲಿ ಕರಾವಳಿ ಸರಕು ಸಾಗಣೆಯ ದಟ್ಟಣೆ ದ್ವಿಗುಣಗೊಂಡಿದೆ, ಇದರಿಂದಾಗಿ ಜನರಿಗೆ ವೆಚ್ಚ-ಪರಿಣಾಮಕಾರಿ ಸರಕು ಸಾಗಣೆ ಆಯ್ಕೆಯನ್ನು ಒದಗಿಸುತ್ತದೆ. ಭಾರತದಲ್ಲಿ ಒಳನಾಡು ಜಲಮಾರ್ಗಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ, ರಾಷ್ಟ್ರೀಯ ಜಲಮಾರ್ಗಗಳ ಸರಕು ನಿರ್ವಹಣೆ 4 ಪಟ್ಟು ಹೆಚ್ಚಾಗಿದೆ. ಕಳೆದ 9 ವರ್ಷಗಳಲ್ಲಿ ಸರಕು ಸಾಗಣೆ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ ಭಾರತ ಸುಧಾರಣೆ ಕಂಡಿದೆ ಎಂದರು.

ಹಡಗು ನಿರ್ಮಾಣ ಮತ್ತು ದುರಸ್ತಿ ವಲಯದ ಮೇಲೆ ಸರ್ಕಾರ ನೀಡಿರುವ ಗಮನ ಕುರಿತು ಪ್ರಧಾನಿ ಮಾತನಾಡಿದರು. ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್ ಭಾರತದ ಸಾಮರ್ಥ್ಯಕ್ಕೆ ಪುರಾವೆಯಾಗಿದೆ. “ಮುಂಬರುವ ದಶಕದಲ್ಲಿ ಭಾರತವು ಅಗ್ರ 5 ಹಡಗು ನಿರ್ಮಾಣ ರಾಷ್ಟ್ರಗಳಲ್ಲಿ ಒಂದಾಗಲಿದೆ. ‘ಮೇಕ್ ಇನ್ ಇಂಡಿಯಾ - ಮೇಕ್ ಫಾರ್ ದ ವರ್ಲ್ಡ್’ ಎಂಬುದು ನಮ್ಮ ಮಂತ್ರ” ಎಂದು ಪ್ರಧಾನಿ ಹೇಳಿದರು. ಕಡಲ ಕ್ಲಸ್ಟರ್‌ಗಳ ಮೂಲಕ ಕ್ಷೇತ್ರದ ಎಲ್ಲ ಪಾಲುದಾರರನ್ನು ಒಟ್ಟುಗೂಡಿಸಲು ಸರ್ಕಾರ ಕೆಲಸ ಮಾಡುತ್ತಿದೆ. ಅನೇಕ ಸ್ಥಳಗಳಲ್ಲಿ ಹಡಗು ನಿರ್ಮಾಣ ಮತ್ತು ದುರಸ್ತಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು. ಹಡಗು ಮರುಬಳಕೆ ಕ್ಷೇತ್ರದಲ್ಲಿ ಭಾರತ ಈಗಾಗಲೇ 2ನೇ ಸ್ಥಾನದಲ್ಲಿದೆ. ಈ ವಲಯಕ್ಕೆ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆ ಕಾರ್ಯತಂತ್ರದ ಮೂಲಕ ಭಾರತದ ಪ್ರಮುಖ ಬಂದರುಗಳಲ್ಲಿ ಇಂಗಾಲ ತಟಸ್ಥಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ. "ನಾವು ಭವಿಷ್ಯದ ಕಡೆಗೆ ಚಲಿಸುತ್ತಿದ್ದೇವೆ, ಅದು ನೀಲಿ ಆರ್ಥಿಕತೆಯು ಹಸಿರು ಗ್ರಹವನ್ನು ರಚಿಸುವ ಮಾಧ್ಯಮವಾಗಿದೆ".

ಸಾಗರ ವಲಯದ ದೊಡ್ಡ ಪಾಲುದಾರರು ದೇಶವನ್ನು ಪ್ರವೇಶಿಸಲು ಅನುಕೂಲವಾಗುವಂತೆ ಭಾರತದಲ್ಲಿ ಕೆಲಸ ನಡೆಯುತ್ತಿದೆ. ಅಹಮದಾಬಾದ್‌ನ ಗಿಫ್ಟ್ ಸಿಟಿ ಇದಕ್ಕೆ ಉದಾಹರಣೆಯಾಗಿದೆ. ಅದೇ ಸಮಯದಲ್ಲಿ ರಿಯಾಯಿತಿಗಳನ್ನು ನೀಡುವಾಗ ಹಣಕಾಸು ಸೇವೆಯಾಗಿ ಹಡಗು ಗುತ್ತಿಗೆಯನ್ನು ಪ್ರಾರಂಭಿಸಲಾಗಿದೆ.  ವಿಶ್ವದ 4 ಜಾಗತಿಕ ಹಡಗು ಗುತ್ತಿಗೆ ಕಂಪನಿಗಳು ಗಿಫ್ಟ್ ಐಎಫ್‌ಎಸ್‌ಸಿಯಲ್ಲಿ ನೋಂದಾಯಿಸಿಕೊಂಡಿವೆ. ಈ ಶೃಂಗಸಭೆಯಲ್ಲಿ ಉಪಸ್ಥಿತರಿರುವ ಇತರ ಹಡಗು ಗುತ್ತಿಗೆ ಕಂಪನಿಗಳಿಗೆ ಗಿಫ್ಟ್ ಐಎಫ್‌ಎಸ್‌ಸಿಗೆ ಸೇರುವಂತೆ ಅವರು ಕರೆ ನೀಡಿದರು.

"ಭಾರತವು ವಿಶಾಲವಾದ ಕರಾವಳಿ, ಬಲವಾದ ನದಿ ಪರಿಸರ ವ್ಯವಸ್ಥೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹೊಂದಿದೆ, ಇದು ಕಡಲ ಪ್ರವಾಸೋದ್ಯಮಕ್ಕೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತದೆ". ವಿಶ್ವ ಪರಂಪರೆಯ ಭಾರತದಲ್ಲಿ ಸುಮಾರು 5 ಸಾವಿರ ವರ್ಷಗಳಷ್ಟು ಹಳೆಯದಾದ ಲೋಥಲ್ ಡಾಕ್‌ಯಾರ್ಡ್ ಅನ್ನು ಉಲ್ಲೇಖಿಸಿದರು. ಅದನ್ನು 'ಕ್ರೇಡಲ್ ಆಫ್ ಶಿಪ್ಪಿಂಗ್' ಎಂದು ಕರೆಯಲಾಗುತ್ತಿತ್ತು. ಈ ವಿಶ್ವ ಪರಂಪರೆಯನ್ನು ಸಂರಕ್ಷಿಸಲು ಮುಂಬೈ ಸಮೀಪದ ಲೋಥಲ್‌ನಲ್ಲಿ ರಾಷ್ಟ್ರೀಯ ಸಾಗರ ಪರಂಪರೆಯ ಸಂಕೀರ್ಣವನ್ನು ಸಹ ನಿರ್ಮಿಸಲಾಗುತ್ತಿದೆ. ಇದು ಪೂರ್ಣಗೊಂಡ ನಂತರ ನಾಗರಿಕರು ಭೇಟಿ ನೀಡಬೇಕು ಎಂದು ಪ್ರಧಾನಿ ಒತ್ತಾಯಿಸಿದರು.

ಭಾರತದಲ್ಲಿ ಕಡಲ ಪ್ರವಾಸೋದ್ಯಮ ಉತ್ತೇಜಿಸಲು ವಿಶ್ವದ ಅತಿ ಉದ್ದದ ನದಿ ವಿಹಾರ ಸೇವೆ ಆರಂಭಿಸಲಾಗುತ್ತಿದೆ. ಮುಂಬೈನಲ್ಲಿ ಮುಂಬರುವ ಇಂಟನ್ ನ್ಯಾಷನಲ್ ಕ್ರೂಸ್ ಟರ್ಮಿನಲ್ ಮತ್ತು ವಿಶಾಖಪಟ್ಟಣಂ ಮತ್ತು ಚೆನ್ನೈನಲ್ಲಿ ಆಧುನಿಕ ಕ್ರೂಸ್ ಟರ್ಮಿನಲ್ ಗಳನ್ನು ಅವರು ಪ್ರಸ್ತಾಪಿಸಿದರು. "ಭಾರತವು ತನ್ನ ಅತ್ಯಾಧುನಿಕ ಮೂಲಸೌಕರ್ಯಗಳ ಮೂಲಕ ಜಾಗತಿಕ ಕ್ರೂಸ್ ಹಬ್ ಆಗುವತ್ತ ಸಾಗುತ್ತಿದೆ" ಎಂದು ಪ್ರಧಾನಿ ಹೇಳಿದರು.

ಅಭಿವೃದ್ಧಿ, ಜನಸಂಖ್ಯಾಶಾಸ್ತ್ರ, ಪ್ರಜಾಪ್ರಭುತ್ವ ಮತ್ತು ಬೇಡಿಕೆಯ ಸಂಯೋಜನೆಯನ್ನು ಹೊಂದಿರುವ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಿದೆ. "2047ರ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ಭಾರತವಾಗುವ ಗುರಿಯತ್ತ ಸಾಗುತ್ತಿರುವ ಸಮಯದಲ್ಲಿ, ಇದು ನಿಮಗೆ ಸುವರ್ಣಾವಕಾಶವಾಗಿದೆ". ಭಾರತಕ್ಕೆ ಬಂದು ಸೇರಲು ಜಾಗತಿಕ ಹೂಡಿಕೆದಾರರಿಗೆ ಮುಕ್ತ ಆಹ್ವಾನ ನೀಡಿ, ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಶ್ರೀ ಸರ್ಬಾನಂದ ಸೋನೋವಾಲ್ ಉಪಸ್ಥಿತರಿದ್ದರು.

ಹಿನ್ನೆಲೆ
ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಅವರು ಭಾರತೀಯ ಕಡಲ ನೀಲಿ ಆರ್ಥಿಕತೆಯ ದೀರ್ಘಾವಧಿಯ ನೀಲನಕ್ಷೆ 'ಅಮೃತ ಕಾಲದ ಮುನ್ನೋಟ 2047' ಅನಾವರಣಗೊಳಿಸಿದರು. ನೀಲನಕ್ಷೆಯು ಬಂದರು ಸೌಲಭ್ಯಗಳನ್ನು ಹೆಚ್ಚಿಸುವ ಗುರಿ ಹೊಂದಿರುವ ಕಾರ್ಯತಂತ್ರದ ಉಪಕ್ರಮಗಳನ್ನು ವಿವರಿಸುತ್ತದೆ, ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುತ್ತದೆ ಮತ್ತು ಅಂತಾರಾಷ್ಟ್ರೀಯ ಸಹಭಾಗಿತ್ವವನ್ನು ಸುಲಭಗೊಳಿಸುತ್ತದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಅನುಗುಣವಾಗಿ, ಪ್ರಧಾನ ಮಂತ್ರಿ ಅವರು ಮುನ್ನೋಟವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಭಾರತೀಯ ಕಡಲ ನೀಲಿ ಆರ್ಥಿಕತೆಗಾಗಿ 'ಅಮೃತ್ ಕಾಲ್ ವಿಷನ್ 2047'ರೊಂದಿಗೆ ರೂಪಿಸಲಾದ 23,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಯೋಜನೆಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಿದರು.

ಗುಜರಾತ್‌ನ ದೀನದಯಾಳ್ ಬಂದರು ಪ್ರಾಧಿಕಾರದಲ್ಲಿ 4,500 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಿರುವ ಟ್ಯೂನ ಟೆಕ್ರಾ ಆಲ್-ವೆದರ್ ಡೀಪ್ ಡ್ರಾಫ್ಟ್ ಟರ್ಮಿನಲ್‌ ಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು. ಈ ಅತ್ಯಾಧುನಿಕ ಗ್ರೀನ್‌ಫೀಲ್ಡ್ ಟರ್ಮಿನಲ್ ಅನ್ನು ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುವುದು. ಅಂತಾರಾಷ್ಟ್ರೀಯ ವ್ಯಾಪಾರ ಕೇಂದ್ರವಾಗಿ ಹೊರಹೊಮ್ಮುವ ಸಾಧ್ಯತೆಯಿರುವ ಈ ಟರ್ಮಿನಲ್, 18,000 ಇಪ್ಪತ್ತು ಅಡಿ ಸಮಾನ ಘಟಕಗಳನ್ನು ಮೀರಿದ ಮುಂದಿನ-ಪೀಳಿಗೆಯ ಹಡಗುಗಳನ್ನು ನಿರ್ವಹಿಸುತ್ತದೆ.  ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ ಮೂಲಕ ಭಾರತೀಯ ವ್ಯಾಪಾರಕ್ಕೆ ಪ್ರವೇಶ ದ್ವಾರವಾಗಿ ಕಾರ್ಯ ನಿರ್ವಹಿಸುತ್ತದೆ. ಸಾಗರ ವಲಯದಲ್ಲಿ ಜಾಗತಿಕ ಮತ್ತು ರಾಷ್ಟ್ರೀಯ ಪಾಲುದಾರಿಕೆಗಾಗಿ 7 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ 300ಕ್ಕೂ ಹೆಚ್ಚು ತಿಳುವಳಿಕೆ ಪತ್ರಗಳನ್ನು (ಎಂಒಯು) ಪ್ರಧಾನ ಮಂತ್ರಿ ಸಮರ್ಪಿಸಿದರು.

ಶೃಂಗಸಭೆಯು ದೇಶದ ಅತಿದೊಡ್ಡ ಕಡಲ ಕಾರ್ಯಕ್ರಮವಾಗಿದೆ. ಯುರೋಪ್, ಆಫ್ರಿಕಾ, ದಕ್ಷಿಣ ಅಮೆರಿಕ ಮತ್ತು ಏಷ್ಯಾ (ಮಧ್ಯ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಬಿಮ್‌ಸ್ಟೆಕ್ ಪ್ರದೇಶ ಸೇರಿದಂತೆ) ರಾಷ್ಟ್ರಗಳನ್ನು ಪ್ರತಿನಿಧಿಸುವ ಜಾಗತಿಕ ಮಟ್ಟದ ಸಚಿವರ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ. ಶೃಂಗಸಭೆಯಲ್ಲಿ ಜಾಗತಿಕ ಸಿಇಒಗಳು, ಉದ್ಯಮ ನಾಯಕರು, ಹೂಡಿಕೆದಾರರು, ಅಧಿಕಾರಿಗಳು ಮತ್ತು ಇತರೆ ಜಾಗತಿಕ ಪಾಲುದಾರರು ಭಾಗವಹಿಸಲಿದ್ದಾರೆ. ಇದಲ್ಲದೆ, ಹಲವಾರು ಭಾರತೀಯ ರಾಜ್ಯಗಳ ಸಚಿವರು ಮತ್ತು ಇತರೆ ಗಣ್ಯರು ಶೃಂಗಸಭೆಯನ್ನು ಪ್ರತಿನಿಧಿಸುತ್ತಾರೆ.

3 ದಿನಗಳ ಶೃಂಗಸಭೆಯು ಭವಿಷ್ಯದ ಬಂದರುಗಳು ಸೇರಿದಂತೆ ಕಡಲ ವಲಯದ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಿದೆ. ಇಂಗಾಲ ಹೊರಸೂಸುವಿಕೆ ನಿಯಂತ್ರಣ; ಕರಾವಳಿ ಹಡಗು ಮತ್ತು ಒಳನಾಡಿನ ಜಲ ಸಾರಿಗೆ; ಹಡಗು ನಿರ್ಮಾಣ; ದುರಸ್ತಿ ಮತ್ತು ಮರುಬಳಕೆ; ಹಣಕಾಸು, ವಿಮೆ ಮತ್ತು ಮಧ್ಯಸ್ಥಿಕೆ; ಕಡಲ ಸಮೂಹಗಳು; ನಾವೀನ್ಯತೆ ಮತ್ತು ತಂತ್ರಜ್ಞಾನ; ಕಡಲ ಸುರಕ್ಷತೆ ಮತ್ತು ಭದ್ರತೆ; ಮತ್ತು ಕಡಲ ಪ್ರವಾಸೋದ್ಯಮ, ದೇಶದ ಸಾಗರ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸುವ ವಿಷಯ ಕುರಿತಂತೆ ಶೃಂಗಸಭೆಯು ಅತ್ಯುತ್ತಮ ವೇದಿಕೆ ಒದಗಿಸುತ್ತದೆ.

ಮೊದಲ ಸಮುದ್ರಯಾನ ಭಾರತ ಶೃಂಗಸಭೆಯನ್ನು 2016ರಲ್ಲಿ ಮುಂಬೈನಲ್ಲಿ ನಡೆಸಲಾಯಿತು. 2ನೇ ಸಮುದ್ರಯಾನ ಶೃಂಗಸಭೆಯು ವರ್ಚುವಲ್ ರೂಪದಲ್ಲಿ 2021 ರಲ್ಲಿ ನಡೆದಿತ್ತು.

*****



(Release ID: 1968426) Visitor Counter : 106