ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ʻಹಿಂದಿ ದಿವಸ್’ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭ ಕೋರಿದ ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ


ಭಾರತವು ವೈವಿಧ್ಯಮಯ ಭಾಷೆಗಳ ದೇಶವಾಗಿದೆ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೆನಿಸಿರುವ ಈ ದೇಶದಲ್ಲಿ ಭಾಷೆಗಳ ವೈವಿಧ್ಯತೆಯನ್ನು ʻಹಿಂದಿʼಯು ಒಂದುಗೂಡಿಸುತ್ತದೆ ಎಂದು ಗೃಹ ಸಚಿವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ,ಭಾರತೀಯ ಭಾಷೆಗಳಿಗೆ ರಾಷ್ಟ್ರೀಯ ಮತ್ತು ಜಾಗತಿಕ ವೇದಿಕೆಗಳಲ್ಲಿ ಸೂಕ್ತ ಮಾನ್ಯತೆ ಮತ್ತು ಗೌರವ ದೊರೆತಿದೆ

ʻಹಿಂದಿʼಯು ಪ್ರಜಾಪ್ರಭುತ್ವದ ಭಾಷೆಯಾಗಿದೆ, ಇದು ವಿವಿಧ ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳನ್ನು ಮತ್ತು ಅನೇಕ ಜಾಗತಿಕ ಭಾಷೆಗಳನ್ನು ಗೌರವಿಸಿದೆ ಮತ್ತು ಅವುಗಳ ಶಬ್ದಕೋಶಗಳು, ವಾಕ್ಯಗಳು ಮತ್ತು ವ್ಯಾಕರಣ ನಿಯಮಗಳನ್ನು ಅಳವಡಿಸಿಕೊಂಡಿದೆ

ಯಾವುದೇ ದೇಶದ ಮೂಲ ಮತ್ತು ಸೃಜನಶೀಲ ಅಭಿವ್ಯಕ್ತಿಯು ಅದರ ಸ್ವಂತ ಭಾಷೆಯ ಮೂಲಕ ಮಾತ್ರ ಸಾಧ್ಯ, ಎಲ್ಲಾ ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯಾಗಿವೆ, ಅದನ್ನು ನಾವು ನಮ್ಮೊಂದಿಗೆ ಮುಂದುವರಿಸಬೇಕು

ʻಹಿಂದಿʼಯು ಬೇರೆ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸಿಲ್ಲ ಮತ್ತು ಎಂದಿಗೂ ಸ್ಪರ್ಧಿಸುವುದಿಲ್ಲ

ನಮ್ಮ ಎಲ್ಲಾ ಭಾಷೆಗಳನ್ನು ಬಲಪಡಿಸುವ ಮೂಲಕ ಮಾತ್ರ, ಬಲವಾದ ರಾಷ್ಟ್ರವನ್ನು ರಚಿಸಲು ಸಾಧ್ಯ, ಹಿಂದಿ ಎಲ್ಲಾ ಸ್ಥಳೀಯ ಭಾಷೆಗಳನ್ನು ಸಬಲೀಕರಣಗೊಳಿಸುವ ಮಾಧ್ಯಮವಾಗಲಿದೆ ಎಂಬ ಖಾತರಿ ನನಗಿದೆ

Posted On: 14 SEP 2023 9:31AM by PIB Bengaluru

ಕೇಂದ್ರ ಗೃಹ ಸಚಿವ ಮತ್ತು ಸಹಕಾರ ಸಚಿವ ಶ್ರೀ ಅಮಿತ್ ಶಾ ಅವರು ʻಹಿಂದಿ ದಿವಸ್’ ಸಂದರ್ಭದಲ್ಲಿ ದೇಶವಾಸಿಗಳಿಗೆ ಶುಭ ಕೋರಿದ್ದಾರೆ. ಭಾರತವು ವೈವಿಧ್ಯಮಯ ಭಾಷೆಗಳ ದೇಶವಾಗಿದೆ ಎಂದು ಗೃಹ ಸಚಿವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವವೆನಿಸಿರುವ ಈ ದೇಶದಲ್ಲಿ, ಹಿಂದಿಯು ಭಾಷೆಗಳ ನಡುವಿನ ವೈವಿಧ್ಯತೆಯನ್ನು ಒಂದುಗೂಡಿಸುತ್ತದೆ. ಹಿಂದಿಯು ಪ್ರಜಾಪ್ರಭುತ್ವ ಭಾಷೆಯಾಗಿದೆ ಎಂದು ಅವರು ಹೇಳಿದರು. ಇದು ವಿವಿಧ ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳನ್ನು ಮತ್ತು ಅನೇಕ ಜಾಗತಿಕ ಭಾಷೆಗಳನ್ನು ಗೌರವಿಸಿದೆ ಮತ್ತು ಅವುಗಳ ಶಬ್ದಕೋಶಗಳು, ವಾಕ್ಯಗಳು ಮತ್ತು ವ್ಯಾಕರಣ ನಿಯಮಗಳನ್ನು ಅಳವಡಿಸಿಕೊಂಡಿದೆ ಎಂದರು.

ಸ್ವಾತಂತ್ರ್ಯ ಚಳವಳಿಯ ಕಷ್ಟದ ದಿನಗಳಲ್ಲಿ ದೇಶವನ್ನು ಒಗ್ಗೂಡಿಸುವಲ್ಲಿ ಹಿಂದಿ ಭಾಷೆಯು ಅಭೂತಪೂರ್ವ ಪಾತ್ರ ವಹಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಇದು ಅನೇಕ ಭಾಷೆಗಳು ಮತ್ತು ಉಪಭಾಷೆಗಳಾಗಿ ವಿಭಜನೆಗೊಂಡಿದ್ದ ದೇಶದಲ್ಲಿ ಏಕತೆಯ ಭಾವನೆಯನ್ನು ಹುಟ್ಟುಹಾಕಿತು. ಸಂವಹನ ಭಾಷೆಯಾಗಿ ಹಿಂದಿ, ದೇಶದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 'ಸ್ವರಾಜ್ಯ' ಮತ್ತು 'ಸ್ವಭಾಷಾ' ಸಾಧಿಸುವ ಆಂದೋಲನಗಳು ದೇಶದಲ್ಲಿ ಏಕಕಾಲದಲ್ಲಿ ನಡೆಯುತ್ತಿವೆ ಎಂದು ಶ್ರೀ ಶಾ ಹೇಳಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ಮತ್ತು ಸ್ವಾತಂತ್ರ್ಯದ ನಂತರ ಹಿಂದಿಯ ಪ್ರಮುಖ ಪಾತ್ರವನ್ನು ಪರಿಗಣಿಸಿ, ಸಂವಿಧಾನದ ಶಿಲ್ಪಿಗಳು 1949ರ ಸೆಪ್ಟೆಂಬರ್ 14ರಂದು ಹಿಂದಿಯನ್ನು ಅಧಿಕೃತ ಭಾಷೆಯಾಗಿ ಅಂಗೀಕರಿಸಿದರು.

ಯಾವುದೇ ದೇಶದ ಮೂಲ ಮತ್ತು ಸೃಜನಶೀಲ ಅಭಿವ್ಯಕ್ತಿಯು ಅದರ ಸ್ವಂತ ಭಾಷೆಯ ಮೂಲಕ ಮಾತ್ರ ಸಾಧ್ಯ ಎಂದು ಗೃಹ ಸಚಿವರು ಹೇಳಿದರು. ಖ್ಯಾತ ಸಾಹಿತಿ ಭರತೇಂದು ಹರಿಶ್ಚಂದ್ರ ಅವರ ಪ್ರಸಿದ್ಧ ಕವಿತೆ “निज भाषा उन्नति अहै, सब उन्नति को मूल”, ಉಲ್ಲೇಖಿಸಿದ ಅವರು, ನಮ್ಮ ಭಾಷೆಯ ಪ್ರಗತಿಯೇ ಸರ್ವಾಂಗೀಣ ಪ್ರಗತಿಗೆ ಆಧಾರವಾಗಿದೆ ಎಂದರು. ನಮ್ಮ ಎಲ್ಲಾ ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳು ನಮ್ಮ ಸಾಂಸ್ಕೃತಿಕ ಪರಂಪರೆಯಾಗಿದ್ದು, ಅವುಗಳನ್ನು ನಾವು ನಮ್ಮೊಂದಿಗೆ ಕೊಂಡೊಯ್ಯಬೇಕಾಗಿದೆ ಎಂದು ಶ್ರೀ ಶಾ ಹೇಳಿದರು. ಹಿಂದಿಯು ಬೇರೆ ಯಾವುದೇ ಭಾರತೀಯ ಭಾಷೆಯೊಂದಿಗೆ ಸ್ಪರ್ಧಿಸಿಲ್ಲ ಮತ್ತು ಎಂದಿಗೂ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿದರು. ನಮ್ಮ ಎಲ್ಲಾ ಭಾಷೆಗಳನ್ನು ಬಲಪಡಿಸುವ ಮೂಲಕ ಮಾತ್ರ, ಬಲವಾದ ರಾಷ್ಟ್ರವನ್ನು ರಚಿಸಬಹುದು. ಎಲ್ಲಾ ಸ್ಥಳೀಯ ಭಾಷೆಗಳನ್ನು ಸಬಲೀಕರಣಗೊಳಿಸಲು ಹಿಂದಿಯು ಮಾಧ್ಯಮವಾಗಲಿದೆ ಎಂಬ ವಿಶ್ವಾಸವನ್ನು ಗೃಹ ಸಚಿವರು ವ್ಯಕ್ತಪಡಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತೀಯ ಭಾಷೆಗಳಿಗೆ ರಾಷ್ಟ್ರೀಯ ಮತ್ತು ಜಾಗತಿಕ ವೇದಿಕೆಗಳಲ್ಲಿ ಸೂಕ್ತ ಮಾನ್ಯತೆ ಮತ್ತು ಗೌರವ ದೊರೆತಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಗೃಹ ವ್ಯವಹಾರಗಳ ಸಚಿವಾಲಯದ ʻಅಧಿಕೃತ ಭಾಷಾ ಇಲಾಖೆʼಯು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ, ಭಾರತೀಯ ಭಾಷೆಗಳನ್ನು ಶ್ರೀಮಂತಗೊಳಿಸಲು ಮತ್ತು ಅವುಗಳನ್ನು ಸಾರ್ವಜನಿಕ ಆಡಳಿತ, ಶಿಕ್ಷಣ ಮತ್ತು ವೈಜ್ಞಾನಿಕ ಬಳಕೆಯ ಭಾಷೆಯಾಗಿ ಸ್ಥಾಪಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಪ್ರಧಾನ ಮಂತ್ರಿಯವರ ಮಾರ್ಗದರ್ಶನದಲ್ಲಿ, ಭಾರತೀಯ ಭಾಷೆಗಳಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ನಡುವೆ ಸಂವಹನವನ್ನು ಏರ್ಪಡಿಸುವ ಮೂಲಕ ಸಾರ್ವಜನಿಕ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.

ದೇಶದಲ್ಲಿ ʻಅಧಿಕೃತ ಭಾಷೆʼ ವಿಚಾರದಲ್ಲಿ ಆಗಿರುವ ಕೆಲಸವನ್ನು ನಿಯತಕಾಲಿಕವಾಗಿ ಪರಿಶೀಲಿಸಲು ʻಅಧಿಕೃತ ಭಾಷೆ ಸಂಸದೀಯ ಸಮಿತಿʼಯನ್ನು ರಚಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ದೇಶಾದ್ಯಂತ ಸರ್ಕಾರಿ ಕೆಲಸಗಳಲ್ಲಿ ಹಿಂದಿಯ ಬಳಕೆಯಲ್ಲಿ ಆಗಿರುವ ಪ್ರಗತಿಯನ್ನು ಪರಿಶೀಲಿಸುವ ಮತ್ತು ಅದರ ವರದಿಯನ್ನು ಸಿದ್ಧಪಡಿಸಿ ರಾಷ್ಟ್ರಪತಿಗಳಿಗೆ ಸಲ್ಲಿಸುವ ಜವಾಬ್ದಾರಿಯನ್ನು ಸಮಿತಿಗೆ ನೀಡಲಾಗಿದೆ. ಈ ವರದಿಯ 12 ನೇ ಸಂಪುಟವನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಲಾಗಿದೆ ಎಂದು ತಿಳಿಸಲು ಸಂತೋಷವಾಗಿದೆ ಎಂದು ಶ್ರೀ ಶಾ ಹೇಳಿದರು. 2014ರವರೆಗೆ ವರದಿಯ ಕೇವಲ 9 ಸಂಪುಟಗಳನ್ನು ಸಲ್ಲಿಸಲಾಗಿದೆ, ಆದರೆ ನಾವು ಕೇವಲ 4 ವರ್ಷಗಳಲ್ಲಿ 3 ಸಂಪುಟಗಳನ್ನು ಸಲ್ಲಿಸಿದ್ದೇವೆ. 2019ರಿಂದ, ಎಲ್ಲಾ 59 ಸಚಿವಾಲಯಗಳಲ್ಲಿ ʻಹಿಂದಿ ಸಲಹಾ ಸಮಿತಿʼಗಳನ್ನು ರಚಿಸಲಾಗಿದೆ ಮತ್ತು ಅವುಗಳ ಸಭೆಗಳನ್ನು ನಿಯಮಿತವಾಗಿ ಆಯೋಜಿಸಲಾಗುತ್ತಿದೆ. ದೇಶದ ವಿವಿಧ ಪ್ರದೇಶಗಳಲ್ಲಿ ಅಧಿಕೃತ ಭಾಷೆಯ ಬಳಕೆಯನ್ನು ಹೆಚ್ಚಿಸುವ ದೃಷ್ಟಿಯಿಂದ, ಇಲ್ಲಿಯವರೆಗೆ ಒಟ್ಟು 528 ʻಪಟ್ಟಣ ಅಧಿಕೃತ ಭಾಷಾ ಅನುಷ್ಠಾನ ಸಮಿತಿʼಗಳನ್ನು(ಟೋಲಿಕ್) ರಚಿಸಲಾಗಿದೆ. ವಿದೇಶಗಳಲ್ಲಿಯೂ ಸಹ, ಲಂಡನ್, ಸಿಂಗಾಪುರ, ಫಿಜಿ, ದುಬೈ ಮತ್ತು ಪೋರ್ಟ್-ಲೂಯಿಸ್‌ನಲ್ಲಿ ʻಪಟ್ಟಣ ಅಧಿಕೃತ ಭಾಷಾ ಅನುಷ್ಠಾನ ಸಮಿತಿʼಗಳನ್ನು ರಚಿಸಲಾಗಿದೆ. ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷೆಯ ಬಳಕೆಯನ್ನು ಉತ್ತೇಜಿಸಲು ಭಾರತವು ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ಮಾಹಿತಿ ನೀಡಿದರು.

'ಅಖಿಲ ಭಾರತ ಅಧಿಕೃತ ಭಾಷಾ ಸಮ್ಮೇಳನ'ವನ್ನು ಆಯೋಜಿಸುವ ಹೊಸ ಸಂಪ್ರದಾಯವನ್ನು ʻಅಧಿಕೃತ ಭಾಷಾ ಇಲಾಖೆʼಯು ಪ್ರಾರಂಭಿಸಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಮೊದಲ ʻಅಖಿಲ ಭಾರತ ಅಧಿಕೃತ ಭಾಷಾ ಸಮ್ಮೇಳʼನವನ್ನು 2021ರ ನವೆಂಬರ್ 13-14ರಂದು ಬನಾರಸ್‌ನಲ್ಲಿ ಆಯೋಜಿಸಲಾಯಿತು ಮತ್ತು ಎರಡನೇ ಸಮ್ಮೇಳನವನ್ನು 2022ರ ಸೆಪ್ಟೆಂಬರ್ 14 ರಂದು ಸೂರತ್‌ನಲ್ಲಿ ಆಯೋಜಿಸಲಾಯಿತು. ಈ ವರ್ಷ ಮೂರನೇ ಅಖಿಲ ಭಾರತ ʻಅಧಿಕೃತ ಭಾಷಾ ಸಮ್ಮೇಳನʼವನ್ನು ಪುಣೆಯಲ್ಲಿ ಆಯೋಜಿಸಲಾಗುತ್ತಿದೆ. ತಂತ್ರಜ್ಞಾನಕ್ಕೆ ಅನುಗುಣವಾಗಿ ಅಧಿಕೃತ ಭಾಷೆಯನ್ನು ಅಭಿವೃದ್ಧಿಪಡಿಸುವ ಸಲುವಾಗಿ, ಅಧಿಕೃತ ಭಾಷಾ ಇಲಾಖೆಯು ಸ್ಮರಣೆ ಆಧಾರಿತ ಅನುವಾದ ವ್ಯವಸ್ಥೆ 'ಕಾಂತಸ್ಥ' ಅನ್ನು ರಚಿಸಿದೆ ಎಂದು ಅವರು ಹೇಳಿದರು. ಹೊಸ ಉಪಕ್ರಮದ ಭಾಗವಾಗಿ, ಅಧಿಕೃತ ಭಾಷಾ ಇಲಾಖೆಯು 'ಹಿಂದಿ ಶಬ್ದ್ ಸಿಂಧು' ಎಂಬ ಶಬ್ದಕೋಶವನ್ನು ಸಹ ರಚಿಸಿದೆ. ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರಿಸಲಾದ ಭಾರತೀಯ ಭಾಷೆಗಳ ಪದಗಳನ್ನು ಸೇರಿಸುವ ಮೂಲಕ ಈ ನಿಘಂಟನ್ನು ನಿರಂತರವಾಗಿ ಶ್ರೀಮಂತಗೊಳಿಸಲಾಗುತ್ತಿದೆ. ಇಲಾಖೆಯು ಒಟ್ಟು 90,000 ಪದಗಳನ್ನು ಒಳಗೊಂಡ 'ಇ-ಮಹಾಶಬ್ಧಕೋಶ್‌' ಮೊಬೈಲ್ ಅಪ್ಲಿಕೇಶನ್ ಮತ್ತು ಸುಮಾರು 9,000 ವಾಕ್ಯಗಳ 'ಇ-ಸರಳ್' ನಿಘಂಟನ್ನು ಸಹ ತಯಾರಿಸಿದೆ ಎಂದರು.

"ಭಾಷೆಯು ಸಂಕೀರ್ಣತೆಯಿಂದ ಸರಳತೆಗೆ ಚಲಿಸುತ್ತದೆ" ಎಂದು ಭಾಷಾ ಬದಲಾವಣೆಯ ತತ್ವವು ಹೇಳುತ್ತದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ತಮ್ಮ ಅಭಿಪ್ರಾಯದಲ್ಲಿ, ಕಚೇರಿ ಕೆಲಸಗಳಲ್ಲಿ ಹಿಂದಿಯ ಸರಳ ಮತ್ತು ಸ್ಪಷ್ಟ ಪದಗಳನ್ನು ಬಳಸಬೇಕು ಎಂದು ಶ್ರೀ ಶಾ ಸಲಹೆ ನೀಡಿದರು. ಅಧಿಕೃತ ಭಾಷಾ ಇಲಾಖೆಯ ಈ ಪ್ರಯತ್ನಗಳಿಂದಾಗಿ ಮತ್ತು ಎಲ್ಲಾ ಮಾತೃಭಾಷೆಗಳ ಸಮೀಕರಣದ ಮೂಲಕ ಹಾಗೂ ಜನರ ಸ್ವೀಕಾರದೊಂದಿಗೆ ಹಿಂದಿಯು ವೈಜ್ಞಾನಿಕ ಮತ್ತು ತಾಂತ್ರಿಕ ಸ್ವೀಕಾರವನ್ನು ಸಾಧಿಸುತ್ತದೆ. ಅದು ಶ್ರೀಮಂತ ಅಧಿಕೃತ ಭಾಷೆಯಾಗಿ ಹೊರಹೊಮ್ಮುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ʻಹಿಂದಿ ದಿವಸ್ʼ ಸಂದರ್ಭದಲ್ಲಿ ಮತ್ತೊಮ್ಮೆ, ಎಲ್ಲರಿಗೂ ಅಭಿನಂದನೆಗಳು ಎಂದು ಕೇಂದ್ರ ಸಚಿವರು ಹೇಳಿದರು.

 

 

*****

 


(Release ID: 1957309) Visitor Counter : 151