ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಫ್ರೆಂಚ್ ಗಣರಾಜ್ಯದ ಅಧ್ಯಕ್ಷರೊಂದಿಗೆ ಪ್ರಧಾನಮಂತ್ರಿಯವರ ಸಭೆ

Posted On: 10 SEP 2023 11:30PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಸೆಪ್ಟೆಂಬರ್ 10ರಂದು ಹೊಸದಿಲ್ಲಿಯಲ್ಲಿ ನಡೆದ ಜಿ20 ಶೃಂಗಸಭೆಯ ನೇಪಥ್ಯದಲ್ಲಿ ಫ್ರೆಂಚ್ ಗಣರಾಜ್ಯದ ಅಧ್ಯಕ್ಷ ಘನತೆವೆತ್ತ ಶ್ರೀ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಭೋಜನ ಕೂಟದ ಸಂದರ್ಭದಲ್ಲಿ  ದ್ವಿಪಕ್ಷೀಯ ಸಭೆ ನಡೆಸಿದರು. ಭಾರತ-ಫ್ರಾನ್ಸ್ ವ್ಯೂಹಾತ್ಮಕ   ಸಹಭಾಗಿತ್ವದ  25 ನೇ ವಾರ್ಷಿಕೋತ್ಸವದ ಸ್ಮರಣಾರ್ಥ 2023 ರ ಜುಲೈ 14 ರಂದು ಫ್ರೆಂಚ್ ರಾಷ್ಟ್ರೀಯ ದಿನಾಚರಣೆಯ ಸಂದರ್ಭದಲ್ಲಿ ಗೌರವಾನ್ವಿತ ಅತಿಥಿಯಾಗಿ ಪಾಲ್ಗೊಳ್ಳಲು 2023 ರ ಜುಲೈನಲ್ಲಿ ಪ್ರಧಾನಿ ಪ್ಯಾರಿಸಿಗೆ  ಭೇಟಿ ನೀಡಿದ ನಂತರ ಅಧ್ಯಕ್ಷ ಮ್ಯಾಕ್ರನ್ ಅವರು  ಭಾರತ ಭೇಟಿ ಕೈಗೊಂಡಿದ್ದಾರೆ.

ಜಿ 20ರ  ಅಧ್ಯಕ್ಷತೆಯನ್ನು ಭಾರತ  ಯಶಸ್ವಿಯಾಗಿ  ನಿಭಾಯಿಸಿರುವುದಕ್ಕೆ ಪ್ರಧಾನಮಂತ್ರಿ ಅವರನ್ನು ಫ್ರೆಂಚ್ ಗಣರಾಜ್ಯದ ಅಧ್ಯಕ್ಷ  ಮ್ಯಾಕ್ರನ್ ಅವರು ಅಭಿನಂದಿಸಿದರು. ಈ ನಿಟ್ಟಿನಲ್ಲಿ ಫ್ರಾನ್ಸ್ ನೀಡಿದ ಬೆಂಬಲಕ್ಕಾಗಿ ಪ್ರಧಾನಮಂತ್ರಿಯವರು ಅದರ ಅಧ್ಯಕ್ಷ ಮ್ಯಾಕ್ರನ್ ಅವರಿಗೆ ಧನ್ಯವಾದ ಅರ್ಪಿಸಿದರು.

ಇಬ್ಬರೂ ನಾಯಕರು ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದರು ಮತ್ತು ಪ್ರಗತಿಯನ್ನು ಪರಿಶೀಲಿಸಿದರು. ವಿಶೇಷವಾಗಿ 'ಹೊರೈಜನ್ 2047' ಮಾರ್ಗಸೂಚಿ, ಇಂಡೋ-ಪೆಸಿಫಿಕ್ ಮಾರ್ಗಸೂಚಿ ಮತ್ತು ಪ್ರಧಾನಮಂತ್ರಿಯವರ ಇತ್ತೀಚಿನ ಭೇಟಿಯ ಸಮಯದಲ್ಲಿ ಮೂಡಿಬಂದ  ಇತರ ಫಲಿತಾಂಶಗಳ ಹಿನ್ನೆಲೆಯಲ್ಲಿ. ಈ  ಮಾತುಕತೆ ನಡೆಯಿತು. ರಕ್ಷಣಾ, ಕೈಗಾರಿಕಾ ಮತ್ತು ನವೋದ್ಯಮ ಕ್ಷೇತ್ರಗಳಲ್ಲಿ  ಸಹಕಾರ ಸೇರಿದಂತೆ ಬಾಹ್ಯಾಕಾಶ, ಎಸ್ಎಂಆರ್ ಮತ್ತು ಎಎಂಆರ್ ತಂತ್ರಜ್ಞಾನಗಳ ಅಭಿವೃದ್ಧಿಗಾಗಿ ಪಾಲುದಾರಿಕೆ ಸೇರಿದಂತೆ ಪರಮಾಣು ಶಕ್ತಿ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ನಿರ್ಣಾಯಕ ತಂತ್ರಜ್ಞಾನ, ಸಂಪರ್ಕ, ಇಂಧನ, ಹವಾಮಾನ ಬದಲಾವಣೆ, ಶಿಕ್ಷಣ, ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಸಹಕಾರ ಮತ್ತು ಜನತೆ ಹಾಗು ಜನತೆ  ನಡುವಿನ ಸಂಪರ್ಕ ಕ್ಷೇತ್ರಗಳಲ್ಲಿ ಸಹಕಾರದ ಗುರಿಗಳ ಅನುಷ್ಠಾನದ ಬಗ್ಗೆಯೂ ಅವರು ಚರ್ಚಿಸಿದರು.

ಉಭಯ ನಾಯಕರು ಇಂಡೋ-ಪೆಸಿಫಿಕ್ ವಲಯ  ಸೇರಿದಂತೆ ಪ್ರಮುಖ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ಬೆಳವಣಿಗೆಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಸುಧಾರಿತ ಬಹುಪಕ್ಷೀಯತೆಯ ಅಗತ್ಯವನ್ನು ಒತ್ತಿ ಹೇಳಿದರು. ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಸಿ) ಘೋಷಣೆಯನ್ನು ಅವರು ಸ್ವಾಗತಿಸಿದರು ಮತ್ತು ಅದರ ಅನುಷ್ಠಾನಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ಪ್ರತಿಜ್ಞೆ ಮಾಡಿದರು.

ಭಾರತದ ಯಶಸ್ವಿ ಚಂದ್ರಯಾನ -3 ಮಿಷನ್ ಗಾಗಿ ಅಧ್ಯಕ್ಷ ಮ್ಯಾಕ್ರನ್ ಅವರು ಪ್ರಧಾನಮಂತ್ರಿಯವರನ್ನು ಅಭಿನಂದಿಸಿದರು. ಇಬ್ಬರೂ ನಾಯಕರು ಭಾರತ-ಫ್ರಾನ್ಸ್ ಬಾಹ್ಯಾಕಾಶ ಸಹಕಾರದ ಆರು ದಶಕಗಳನ್ನು ಸ್ಮರಿಸಿದರು.
 

****


(Release ID: 1956599) Visitor Counter : 129