ಪ್ರಧಾನ ಮಂತ್ರಿಯವರ ಕಛೇರಿ

FIPIC III ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮಾರೋಪ ಹೇಳಿಕೆಯ ಅನುವಾದ

Posted On: 22 MAY 2023 2:32PM by PIB Bengaluru

ಗಣ್ಯರು, ಮಹನೀಯರೇ,

ಈಗಾಗಲೇ ನೀವು ನೀಡಿರುವ ಅಭಿಪ್ರಾಯಗಳಿಗೆ ತುಂಬಾ ಧನ್ಯವಾದಗಳು. ಈಗ ನಡೆಯುತ್ತಿರುವ ಚರ್ಚೆಗಳಿಂದ ಹೊರಹೊಮ್ಮಿದ ವಿಚಾರಗಳನ್ನು ನಾವು ಖಂಡಿತವಾಗಿ ಪರಿಗಣಿಸುತ್ತೇವೆ. ಪೆಸಿಫಿಕ್ ದ್ವೀಪ ದೇಶಗಳ ಅಗತ್ಯತೆಗಳನ್ನು ಮತ್ತು ಕೆಲವು ಆದ್ಯತೆಗಳನ್ನು ಈಗಾಗಲೇ ನಾವು ಹಂಚಿಕೊಂಡಿದ್ದೇವೆ. ಈ ಎರಡೂ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಈ ವೇದಿಕೆಯ ಮುಖಾಂತರ ಎಲ್ಲ ರೀತಿಯ ಪ್ರಯತ್ನಗಳನ್ನು ಕೈಗೊಳ್ಳಲು ನಾವು ಮುಂದುವರಿಯುತ್ತೇವೆ. ಫೋರಂ ಫಾರ್ ಇಂಡಿಯಾ ಪೆಸಿಫಿಕ್ ಕೋಆಪರೇಷನ್ - FIPIC ಜೊತೆಗಿನ ನಮ್ಮ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು, ನಾನು ಕೆಲವು ಹೇಳಿಕೆಗಳನ್ನು ನೀಡಲು ಬಯಸುತ್ತೇನೆ.

1. ಪೆಸಿಫಿಕ್ ಪ್ರದೇಶದಲ್ಲಿ ಆರೋಗ್ಯ ರಕ್ಷಣೆಯನ್ನು ಹೆಚ್ಚಿಸಲು, ನಾವು ಫಿಜಿಯಲ್ಲಿ ಸೂಪರ್-ಸ್ಪೆಷಾಲಿಟಿ ಕಾರ್ಡಿಯಾಲಜಿ ಆಸ್ಪತ್ರೆಯನ್ನು ಸ್ಥಾಪಿಸಲು ನಿರ್ಧರಿಸಿದ್ದೇವೆ. ಈ ಆಸ್ಪತ್ರೆಯು ತರಬೇತಿ ಪಡೆದ ಸಿಬ್ಬಂದಿ, ಆಧುನಿಕ ಸೌಲಭ್ಯಗಳು ಮತ್ತು ಮೂಲಸೌಕರ್ಯಗಳೊಂದಿಗೆ ಸುಸಜ್ಜಿತವಾಗಿರುತ್ತದೆ ಮತ್ತು ಇದು ಇಡೀ ಪ್ರದೇಶಕ್ಕೆ ಜೀವಸೆಲೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ಮೆಗಾ ಗ್ರೀನ್ಫೀಲ್ಡ್ ಯೋಜನೆಯ ಸಂಪೂರ್ಣ ವೆಚ್ಚವನ್ನು ಭಾರತ ಸರ್ಕಾರ ಭರಿಸಲಿದೆ.

2. ಎಲ್ಲಾ 14 ಪೆಸಿಫಿಕ್ ದ್ವೀಪ ರಾಷ್ಟ್ರಗಳಲ್ಲಿ ಡಯಾಲಿಸಿಸ್ ಘಟಕಗಳನ್ನು ಸ್ಥಾಪಿಸಲು ಭಾರತ ನೆರವು ನೀಡುತ್ತದೆ.

3. ಎಲ್ಲಾ 14 ಪೆಸಿಫಿಕ್ ದ್ವೀಪ ದೇಶಗಳಿಗೆ ಸಮುದ್ರ ಆಂಬ್ಯುಲೆನ್ಸ್ಗಳನ್ನು ಒದಗಿಸಲಾಗುವುದು.

4. 2022 ರಲ್ಲಿ, ನಾವು ಫಿಜಿಯಲ್ಲಿ ಜೈಪುರ ಫುಟ್ ಕ್ಯಾಂಪ್ (ಜೈಪುರ ಕೃತಕ ಕಾಲು ಜೋಡಣೆ) ಅನ್ನು ನಡೆಸಿದ್ದೇವೆ. ಈ ಶಿಬಿರದಲ್ಲಿ 600ಕ್ಕೂ ಹೆಚ್ಚು ಜನರಿಗೆ ಕೃತಕ ಅಂಗಗಳನ್ನು ಉಚಿತವಾಗಿ ನೀಡಲಾಯಿತು. ಸ್ನೇಹಿತರೇ, ಈ ಉಡುಗೊರೆಯನ್ನು ಪಡೆದವರು ನಿಜಕ್ಕೂ ಮರು ಜೀವನದ ಉಡುಗೊರೆಯನ್ನು ಪಡೆದಂತೆ ಭಾವಿಸುತ್ತಾರೆ.

PIC ವಲಯಕ್ಕಾಗಿ ಈ ವರ್ಷ ಪಪುವಾ ನ್ಯೂಗಿನಿಯಾದಲ್ಲಿ (PNG) ಜೈಪುರ ಫುಟ್ ಶಿಬಿರವನ್ನು ಆಯೋಜಿಸಲು ನಿರ್ಧರಿಸಿದ್ದೇವೆ. 2024 ರಿಂದ, ಪೆಸಿಫಿಕ್ ದ್ವೀಪ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಈ ರೀತಿಯ ಎರಡು ಶಿಬಿರಗಳನ್ನು ಆಯೋಜಿಸಲಾಗುತ್ತದೆ.

5. ಭಾರತದಲ್ಲಿ ಜನೌಷಧಿ ಯೋಜನೆಯ ಮೂಲಕ, 1800 ಕ್ಕೂ ಹೆಚ್ಚು ಉತ್ತಮ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಕೈಗೆಟುಕುವ ಬೆಲೆಯಲ್ಲಿ ಜನರಿಗೆ ಒದಗಿಸಲಾಗುತ್ತಿದೆ. ಉದಾಹರಣೆಗೆ, ಮಾರುಕಟ್ಟೆಯ ಬೆಲೆಗಳಿಗೆ ಹೋಲಿಸಿದರೆ ಜನೌಷಧಿ ಕೇಂದ್ರಗಳಲ್ಲಿ ಮಧುಮೇಹ ನಿಯಂತ್ರಣ ಔಷಧವು 90% ರಷ್ಟು ಕಡಿಮೆ ದರದಲ್ಲಿ ಲಭ್ಯವಿದೆ. ಇತರ ಔಷಧಿಗಳೂ 60% ರಿಂದ 90% ವರೆಗೆ ರಿಯಾಯಿತಿ ದರದಲ್ಲಿ ಲಭ್ಯವಿವೆ. ನಿಮ್ಮ ದೇಶಗಳಿಗೆ ಇದೇ ರೀತಿಯ ಜನೌಷಧಿ ಕೇಂದ್ರಗಳನ್ನು ಆರಂಭಿಸಲು ನಾನು ಪ್ರಯತ್ನಿಸುತ್ತೇನೆ. 

6. ಮಧುಮೇಹದಂತಹ ರೋಗಗಳನ್ನು ತಡೆಗಟ್ಟುವಲ್ಲಿ ಯೋಗವು ಹೆಚ್ಚು ಪರಿಣಾಮಕಾರಿ ಎಂದು ವೈಜ್ಞಾನಿಕ ಅಧ್ಯಯನಗಳು ಹೇಳಿವೆ. ಯೋಗಾಭ್ಯಾಸ ಮಾಡಲು ಉತ್ತೇಜಿಸುವ ಕಾರ್ಯಕ್ರಮಗಳನ್ನು ನಿಮ್ಮ ದೇಶಗಳಲ್ಲಿ ರೂಪಿಸಲು ಯೋಗ ಕೇಂದ್ರಗಳನ್ನು ಸ್ಥಾಪಿಸಲು ನಾವು ಪ್ರಯತ್ನಿಸುತ್ತೇವೆ.

7. PNG ಯಲ್ಲಿ ಮಾಹಿತಿ ತಂತ್ರಜ್ಞಾನ - IT ಗಾಗಿ ಉತ್ಕೃಷ್ಟತೆಯ ಕೇಂದ್ರವನ್ನು ಅಪ್ಗ್ರೇಡ್ ಮಾಡಲಾಗುವುದು ಮತ್ತು "ಪ್ರಾದೇಶಿಕ ಮಾಹಿತಿ ತಂತ್ರಜ್ಞಾನ ಮತ್ತು ಸೈಬರ್ಸೆಕ್ಯುರಿಟಿ ಹಬ್" ಆಗಿ ಪರಿವರ್ತಿಸಲಾಗುವುದು.

8. ಫಿಜಿಯ ನಾಗರಿಕರಿಗಾಗಿ 24x7 ತುರ್ತು ಸಹಾಯವಾಣಿಯನ್ನು ಸ್ಥಾಪಿಸಲಾಗುವುದು ಮತ್ತು ಎಲ್ಲಾ PIC ದೇಶಗಳಲ್ಲಿ ಇದೇ ರೀತಿಯ ಸೌಲಭ್ಯವನ್ನು ಸ್ಥಾಪಿಸಲು ಸಹಾಯ ಮಾಡಲು ನಾವು ಮುಂದಾಗುತ್ತೇವೆ.

9. ನಾನು ಪ್ರತಿ ಪೆಸಿಫಿಕ್ ದ್ವೀಪ ದೇಶದಲ್ಲಿ SME ವಲಯದ ಅಭಿವೃದ್ಧಿ ಯೋಜನೆಗೆ ಒತ್ತು ನೀಡುತ್ತೇನೆ ಮತ್ತು ಅದಕ್ಕೆ ನೆರವು ಒದಗಿಸುತ್ತೇನೆ. ಈ ಯೋಜನೆಯಡಿಯಲ್ಲಿ, ಯಂತ್ರೋಪಕರಣಗಳು ಮತ್ತು ತಂತ್ರಜ್ಞಾನದ ಸರಬರಾಜುಗಳನ್ನು ಒದಗಿಸಲಾಗುತ್ತದೆ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಲು ಸಾಮರ್ಥ್ಯ-ವರ್ಧನೆಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.

10. ಪೆಸಿಫಿಕ್ ದ್ವೀಪದ ಮುಖ್ಯಸ್ಥರ ನಿವಾಸಗಳನ್ನು ಸೌರಶಕ್ತಿ ಚಾಲಿತ ಮನೆಗಳಾಗಿ ಪರಿವರ್ತಿಸುವ ಯೋಜನೆಯನ್ನು ನೀವೆಲ್ಲರೂ ಮುಕ್ತ ಮನಸ್ಸಿನಿಂದ ಸ್ವೀಕರಿಸಿದ್ದೀರಿ. ನಾವು ಈಗ ಎಲ್ಲಾ FIPIC ದೇಶಗಳಲ್ಲಿ ಕನಿಷ್ಠ ಒಂದು ಸರ್ಕಾರಿ ಕಟ್ಟಡವನ್ನು ಸೌರಶಕ್ತಿ ಚಾಲಿತ ಕಟ್ಟಡವನ್ನಾಗಿ ಪರಿವರ್ತಿಸುತ್ತೇವೆ.

11. ನೀರಿನ ಕೊರತೆಯ ಸಮಸ್ಯೆಯನ್ನು ಪರಿಹರಿಸಲು, ಪ್ರತಿ ಪೆಸಿಫಿಕ್ ದ್ವೀಪದ ದೇಶದಲ್ಲಿ ನಿರ್ಲವಣೀಕರಣ ಘಟಕಗಳನ್ನು ಒದಗಿಸಲು ಸಂಕಲ್ಪ ಮಾಡಿದ್ದೇವೆ.

12. ಸಾಮರ್ಥ್ಯ ವೃದ್ಧಿಗೆ ನಮ್ಮ ದೀರ್ಘಾವಧಿಯ ಬದ್ಧತೆಯನ್ನು ಮುಂದುವರಿಸುತ್ತಾ, ನಾನು ಇಂದು ಪೆಸಿಫಿಕ್ ದ್ವೀಪ ರಾಷ್ಟ್ರಗಳಿಗೆ "ಸಾಗರ್ ಅಮೃತ್ ವಿದ್ಯಾರ್ಥಿವೇತನ" ಯೋಜನೆಯನ್ನು ಪ್ರಕಟಿಸುತ್ತೇನೆ. ಈ ಕಾರ್ಯಕ್ರಮದ ಅಡಿಯಲ್ಲಿ, ಮುಂದಿನ ಐದು ವರ್ಷಗಳಲ್ಲಿ 1000 ITEC ತರಬೇತಿ ಅವಕಾಶಗಳನ್ನು ಒದಗಿಸಲಾಗುವುದು.

ಗಣ್ಯರೇ, ಮಹನೀಯರೇ,

ಇಂದು, ನಾನು ಇಲ್ಲಿ ನನ್ನ ಹೇಳಿಕೆಗಳನ್ನು ಸಮಾಪ್ತಿಗೊಳಿಸುತ್ತೇನೆ. ಈ ವೇದಿಕೆ ಜತೆಗೆ ನನಗೆ ವಿಶೇಷವಾದ ಬಾಂಧವ್ಯವಿದೆ. ಇದು ಗಡಿಗಳನ್ನು ಮೀರಿ ಸವಾಲು ಮೆಟ್ಟುವ ಮಿತಿಯಿಲ್ಲದ ಸಾಮರ್ಥ್ಯವನ್ನು ಗುರುತಿಸುತ್ತದೆ. ಮತ್ತೊಮ್ಮೆ, ಇಲ್ಲಿ ಉಪಸ್ಥಿತರಿರುವ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.

ಮುಂದಿನ ಬಾರಿ ನಿಮ್ಮನ್ನು ಭಾರತದಲ್ಲಿ ಸ್ವಾಗತಿಸುವ ನಮಗೆ ಅವಕಾಶ ಭಾಗ್ಯ ನಮಗಿದೆ ನಾನು ಭಾವಿಸುತ್ತೇನೆ.

ಧನ್ಯವಾದಗಳು!

ಹಕ್ಕು ಸ್ವಾಮ್ಯ- ಇದು ಪ್ರಧಾನಮಂತ್ರಿಗಳ ಹೇಳಿಕೆ ಅನುವಾದವಾಗಿದೆ. ಮೂಲ ಹಿಂದಿಯಲ್ಲಿ ನೀಡಲಾಗಿದೆ.
 

****(Release ID: 1929246) Visitor Counter : 74