ವಾರ್ತಾ ಮತ್ತು ಪ್ರಸಾರ ಸಚಿವಾಲಯ

'ಪೈ ಪೈ ಸೆ ಗರೀಬ್ ಕಿ ಭಲೈ' (ಪೈಸೆ ಪೈಸೆಯೂ ಬಡವರ ಅನುಕೂಲಕ್ಕಾಗಿ) ನೀತಿಯೊಂದಿಗೆ ಸರಕಾರ ಕಾರ್ಯನಿರ್ವಹಿಸುತ್ತಿದೆ: ಕೇಂದ್ರ ಸಚಿವ ಶ್ರೀ ಅಶ್ವಿನಿ ವೈಷ್ಣವ್


ಶ್ರೀ ಅಶ್ವಿನಿ ವೈಷ್ಣವ್ ಅವರು ʻ9 ವರ್ಷ - ಸೇವೆ, ಸುಶಾಸನ, ಬಡವರ ಕಲ್ಯಾಣʼ ಎಂಬ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿದರು

9 ವರ್ಷಗಳಲ್ಲಿ ಭಾರತ ದುರ್ಬಲ ಐದರಿಂದ ಅಗ್ರ ಐದನೇ ಸ್ಥಾನಕ್ಕೆ ಏರಿದೆ: ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್

ಪ್ರಧಾನಿ ಮೋದಿ ಅವರು ಭಾರತದ ತ್ರಿವರ್ಣವನ್ನು ವಿಶ್ವದ ಪ್ರಬಲ ಧ್ವಜವನ್ನಾಗಿ ಮಾಡಿದ್ದಾರೆ: ಶ್ರೀ ಠಾಕೂರ್

Posted On: 27 MAY 2023 4:33PM by PIB Bengaluru

ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ `9 ವರ್ಷ- ಸೇವೆ, ಸುಶಾಸನ, ಬಡವರ ಕಲ್ಯಾಣʼ ಎಂಬ ರಾಷ್ಟ್ರೀಯ ಸಮಾವೇಶವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಠಾಕೂರ್, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಹಾಯಕ ಸಚಿವ ಡಾ.ಎಲ್.ಮುರುಗನ್ ಉಪಸ್ಥಿತರಿದ್ದರು. ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಮತ್ತು ಪ್ರಸಾರ ಭಾರತಿಯ ಸಿಇಓ ಶ್ರೀ ಗೌರವ್ ದ್ವಿವೇದಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು 2014ಕ್ಕೆ ಮೊದಲಿದ್ದ ಸರ್ಕಾರದ ಕಾರ್ಯಕ್ಷಮತೆಯನ್ನು ಹಾಲಿ ಸರ್ಕಾರದೊಂದಿಗೆ ಹೋಲಿಸಿ ತುಲನಾತ್ಮಕ ಪ್ರಸ್ತುತಿಯನ್ನು ನೀಡಿದರು. ಹಿಂದಿನ ಆಡಳಿತದ ಪ್ರಯತ್ನಗಳು ಹಗರಣಗಳಿಗೆ ಸಮಾನಾರ್ಥಕವಾಗಿದ್ದವು. ಪ್ರಸ್ತುತ ಸರ್ಕಾರವು 'ಪೈ ಪೈ ಸೆ ಗರೀಬ್ ಕಿ ಭಲೈ' (ಪ್ರತಿ ಪೈಸೆ ಬಡವರ ಅನುಕೂಲಕ್ಕಾಗಿ) ನೀತಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಬಡವರು ಮತ್ತು ನಿರ್ಗತಿಕರನ್ನು ಆಧಾರಸ್ತಂಭವಾಗಿಟ್ಟುಕೊಂಡು ಕೇಂದ್ರ ಸರಕಾರ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಸರಕಾರದ ಕಾರ್ಯವಿಧಾನದಲ್ಲಿ ಈ ನೀತಿಯು ಪ್ರತಿಬಿಂಬಿತವಾಗಿದೆ ಎಂದು ಅವರು ಹೇಳಿದರು.

ಸ್ವಂತ ಮನೆ ಹೊಂದುವುದು ಬಡ ವ್ಯಕ್ತಿಯ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರುವ ವಿಷಯವಾಗಿದೆ ಎಂದು ಸಚಿವರು ಒತ್ತಿಹೇಳಿದರು. ಆ ನಿಟ್ಟಿನಲ್ಲಿ ಇಂದು ʻಪ್ರಧಾನ ಮಂತ್ರಿ ಆವಾಸ್ ಯೋಜನೆʼಯಡಿ ದೇಶದಲ್ಲಿ 3.5 ಕೋಟಿ ಮನೆಗಳನ್ನು ನಿರ್ಮಿಸಲಾಗಿದ್ದು, ಇದು ಬಡವರ ಜೀವನದಲ್ಲಿ ಗುಣಾತ್ಮಕ ಬದಲಾವಣೆಯನ್ನು ತಂದಿದೆ.

ಪ್ರತಿ ಮನೆಗೆ ಕೊಳವೆ ನೀರಿನ ಸಂಪರ್ಕ ನೀಡುವ ಕಲ್ಪನೆಯನ್ನು ಸದಾ ದೈತ್ಯ ಸವಾಲೆಂದು ಪರಿಗಣಿಸಲಾಗಿತ್ತು. ಈ ನಿಟ್ಟಿನಲ್ಲಿ ಎಂದಿಗೂ ಪ್ರಯತ್ನಗಳು ನಡೆದಿರಲಿಲ್ಲ. ಆದರೆ, ಪ್ರಧಾನಿಯವರು ಇದನ್ನು ಸವಾಲಾಗಿ ತೆಗೆದುಕೊಂಡರು ಮತ್ತು ಇಂದು 12 ಕೋಟಿ ಜನರು ನೀರಿನ ಸಂಪರ್ಕವನ್ನು ಹೊಂದಿದ್ದಾರೆ ಎಂದು ಸಚಿವರು ಹೇಳಿದರು. ಇದೇ ವೇಳೆ, ಸಾಂಪ್ರದಾಯಿಕ ಒಲೆಗಳ ಸಂಕಟವನ್ನು ಕೊನೆಗೊಳಿಸಲು ಸರಕಾರ ಶ್ರಮಿಸಿದ್ದು, 9.6 ಕೋಟಿ ಕುಟುಂಬಗಳಿಗೆ ಎಲ್‌ಪಿಜಿ ಅನಿಲ ಸಿಲಿಂಡರ್‌ಗಳನ್ನು ಒದಗಿಸಿದೆ ಎಂದು ಅವರು ಹೇಳಿದರು.

ಕೋವಿಡ್ -19 ಸಾಂಕ್ರಾಮಿಕ ರೋಗದ ಸಂಕಷ್ಟಗಳ ವಿರುದ್ಧ ಹೋರಾಡಲು ಜಗತ್ತು ಹೆಣಗಾಡುತ್ತಿರುವಾಗ, 80 ಕೋಟಿ ಜನರಿಗೆ ಉಚಿತ ಪಡಿತರವನ್ನು ನೀಡುವ ಬೃಹತ್ ಸವಾಲನ್ನು ಸರ್ಕಾರವು ಜಯಿಸಿದೆ ಎಂದು ಅವರು ಹೇಳಿದರು. ಎಲ್ಲರನ್ನೂ ಒಳಗೊಂಡ ಬೆಳವಣಿಗೆಯ ಸೂಚಕಗಳಾದ ಶೌಚಾಲಯಗಳಂತಹ ಮೂಲಭೂತ ಮಾನವ ಅಗತ್ಯಗಳ ಬಗ್ಗೆ ಯಾವುದೇ ಸರಕಾರವು ಸ್ವಾತಂತ್ರ್ಯ ದಿನಾಚರಣೆಯ ಭಾಷಣಗಳಲ್ಲಿ ಮಾತನಾಡಿಲ್ಲ. ಆದರೆ ಪ್ರಧಾನಿ ಮೋದಿ ಅವರು ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ ಪ್ರತಿ ಮನೆಯಲ್ಲೂ ಶೌಚಾಲಯಗಳ ನಿರ್ಮಾಣದ ಬಗ್ಗೆ ಮಾತನಾಡಿದರು. ಇದು ಇಂದು 11.72 ಕೋಟಿ ಶೌಚಾಲಯಗಳ ನಿರ್ಮಾಣದೊಂದಿಗೆ ಮಹಿಳಾ ಸುರಕ್ಷತೆ ಮತ್ತು ನೈರ್ಮಲ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನು ನಾವು ಕಾಣಬಹುದಾಗಿದೆ ಎಂದು ಸಚಿವರು ತಿಳಿಸಿದರು.

ಭಾರತವು ಇಂದು ʻಆಯುಷ್ಮಾನ್ ಭಾರತ್ʼ ಅಡಿಯಲ್ಲಿ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯನ್ನು ನಡೆಸುತ್ತಿದೆ. ಇದು ಅಗತ್ಯವಿರುವವರಿಗೆ ಐದು ಲಕ್ಷ ರೂ.ಗಳವರೆಗೆ ಉಚಿತ ವೈದ್ಯಕೀಯ ಆರೈಕೆಗೆ ಸೌಲಭ್ಯವನ್ನು ಒದಗಿಸುತ್ತದೆ. ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ಜನರ ಸಂಖ್ಯೆಯು ಅಮೆರಿಕ ಮತ್ತು ರಷ್ಯಾದ ಒಟ್ಟು ಜನಸಂಖ್ಯೆಗಿಂತ ಹೆಚ್ಚಾಗಿದೆ ಎಂದು ಶ್ರೀ ವೈಷ್ಣವ್ ಹೇಳಿದರು.

ಸಾಮಾಜಿಕ ನ್ಯಾಯವನ್ನು ತುಷ್ಟೀಕರಣದಿಂದ ದೂರವಿರಿಸಿ,  ಅದನ್ನು ಸಬಲೀಕರಣದ ಕಡೆಗೆ ಕೊಂಡೊಯ್ಯುವ ಮೂಲಕ ಸಾಮಾಜಿಕ ನ್ಯಾಯಕ್ಕೆ ಹೊಸ ವ್ಯಾಖ್ಯಾನವನ್ನು ನೀಡಿದ ಕೀರ್ತಿ ಪ್ರಧಾನ ಮಂತ್ರಿಯವರಿಗೆ ಸಲ್ಲುತ್ತದೆ ಎಂದು ಶ್ರೀ ವೈಷ್ಣವ್ ಹೇಳಿದರು.

ದೇಶೀಯ ಮೂಲಸೌಕರ್ಯವು 2014 ರಿಂದ ಈಚೆಗೆ ಅಭೂತಪೂರ್ವ ಬದಲಾವಣೆಗೆ ಸಾಕ್ಷಿಯಾಗಿದೆ. ಈ ಹಿಂದೆ ಸರಿಯಾದ ಮನಸ್ಥಿತಿ ಮತ್ತು ಆಲೋಚನಾ ಪ್ರಕ್ರಿಯೆಯ ಕೊರತೆಯಿಂದಾಗಿ ಇದು ಕಾಣೆಯಾಗಿತ್ತು ಎಂದು ಸಚಿವರು ಹೇಳಿದರು. 2014ರವರೆಗೆ ನಿರ್ಮಿಸಲಾದ ಒಟ್ಟು ವಿಮಾನ ನಿಲ್ದಾಣಗಳ ಸಂಖ್ಯೆ 74 ಆಗಿತ್ತು. ಆದರೆ, 9 ವರ್ಷಗಳಲ್ಲಿ 74 ವಿಮಾನ ನಿಲ್ದಾಣಗಳ ನಿರ್ಮಾಣ ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದರು. ಸ್ವಾತಂತ್ರ್ಯದ ನಂತರ ದೇಶದಲ್ಲಿ 91 ಸಾವಿರ ಕಿಲೋಮೀಟರ್ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ, 2014ರಿಂದ ಈಚೆಗೆ ಸುಮಾರು 54 ಸಾವಿರ ಕಿಲೋಮೀಟರ್ ರಸ್ತೆ ನಿರ್ಮಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. 2014ರವರೆಗೆ ಭಾರತದಲ್ಲಿ ಯಾವುದೇ ಜಲಮಾರ್ಗಗಳಿರಲಿಲ್ಲ. ಆದರೆ ಇಂದು ಇಂದು 111 ಜಲಮಾರ್ಗಗಳನ್ನು ಹೊಂದಿದೆ. ಭಾರತದ ರೈಲ್ವೆ ನಿಲ್ದಾಣಗಳು ವಿಮಾನ ನಿಲ್ದಾಣಗಳಂತಹ ವಿಶ್ವದರ್ಜೆಯ ಸೌಲಭ್ಯಗಳನ್ನು ಇಂದು ಹೊಂದಿವೆ ಎಂದು ಸಚಿವರು ಹೇಳಿದರು.

ಭಾರತವು ದೀರ್ಘಕಾಲದವರೆಗೆ ವಿಶ್ವ ಆರ್ಥಿಕ ಶ್ರೇಯಾಂಕದಲ್ಲಿ ಹಿಂದುಳಿದಿತ್ತು, ಆದರೆ ಇಂದು ಭಾರತವು 5ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದು ನಿಂತಿದೆ ಎಂದು ಸಚಿವರು ಹೇಳಿದರು. ಮುಂದಿನ ಎರಡು ವರ್ಷಗಳಲ್ಲಿ ಭಾರತವು 4ನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ ಮತ್ತು ಮುಂದಿನ ಆರು ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದರು.

ರಾಷ್ಟ್ರೀಯ ಭದ್ರತೆ ಕುರಿತಾಗಿ ಸರ್ಕಾರದ ಅಚಲ ಬದ್ಧತೆಯ ಬಗ್ಗೆ ಮಾತನಾಡಿದ ಸಚಿವರು, ಈ ಹಿಂದೆ ಭಾರತವು ದೊಡ್ಡ ಭಯೋತ್ಪಾದಕ ಚಟುವಟಿಕೆಗಳ ಬಲಿಪಶುವಾಗುತ್ತಿತ್ತು, ಆದರೆ ಇಂದು ದೇಶವು ದಾಳಿಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯ ಮತ್ತು ಇಚ್ಛೆಯನ್ನು ಹೊಂದಿದೆ ಎಂದು ಹೇಳಿದರು.

ಸಮಾವೇಶದಲ್ಲಿ ನೆರೆದಿದ್ದ ಸಭಿಕರನ್ನುದ್ದೇಶಿಸಿ ಮಾತನಾಡಿದ ಶ್ರೀ ಅನುರಾಗ್ ಠಾಕೂರ್ ಅವರು, ಕಳೆದ ಒಂಬತ್ತು ವರ್ಷಗಳಲ್ಲಿ ಭಾರತದ ಸಾಮಾನ್ಯ ಜನರ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆ ಕಂಡುಬಂದಿದೆ. ಸರ್ಕಾರದ ಸಾಧನೆಗಳು ಜನರ ನಿರೀಕ್ಷೆಗಳನ್ನು ಮೀರಿದೆ ಎಂದು ಹೇಳಿದರು. ಈ ಹಿಂದೆ ಭಾರತವು ಭ್ರಷ್ಟಾಚಾರದಿಂದ ಕೂಡಿದ ದುರ್ಬಲ ಮತ್ತು ಶಿಥಿಲಾವಸ್ಥೆಯ ಆರ್ಥಿಕತೆಯಾಗಿತ್ತು, ಇಂದು ಅದು ದುರ್ಬಲ ಐದರ ಮಟ್ಟದಿಂದ ವಿಶ್ವದ ಅಗ್ರ ಐದು ಆರ್ಥಿಕತೆಗಳ ಪಟ್ಟಿಗೆ ಸೇರಿದೆ ಎಂದು ಹೇಳಿದರು.

ಈ ಹಿಂದೆ ಸರ್ಕಾರದ ಯೋಜನೆಗಳ ಪ್ರಯೋಜನಗಳು ಕೆಲವೇ ಜನರಿಗೆ ಮಾತ್ರ ತಲುಪುತ್ತಿದ್ದವು, ಆದರೆ ಇಂದು ಸರ್ಕಾರವು ʻಅಂತ್ಯೋದಯʼ ಧ್ಯೇಯವಾಕ್ಯದೊಂದಿಗೆ ಕಾರ್ಯನಿರ್ವಹಿಸುತ್ತಿದೆ, ಅಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣಕ್ಕೂ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು. ಶೇ.27ರಷ್ಟು ಜನರನ್ನು ಬಡತನದಿಂದ ಮೇಲೆತ್ತಿರುವ ನಮ್ಮ ಪ್ರಯತ್ನಗಳ ರಹಸ್ಯ ಇರುವುದು ಇದರಲ್ಲೇ ಎಂದೇ ಸಚಿವರು ಉಲ್ಲೇಖಿಸಿದರು. ಸೇವಾ ಪ್ರಜ್ಞೆ, ದೊಡ್ಡ ಆಲೋಚನೆಗಳು, ಉತ್ತಮ ಆಡಳಿತ, ತಂತ್ರಜ್ಞಾನದ ಒಳಹರಿವು ಹಾಗೂ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಅಳವಡಿಕೆಯು ಸಾರ್ವಜನಿಕ ಸೇವೆಗಳು ಕೊನೆಯ ಮೈಲಿವರೆಗೂ ತಲುಪುವುದಕ್ಕೆ ನೆರವಾಗಿವೆ ಎಂದರು.

ವಸಾಹತುಶಾಹಿ ಗತಕಾಲದ ಪರಂಪರೆಯನ್ನು ತೊಡೆದುಹಾಕಿ, ಆಧುನಿಕ ಮತ್ತು ದೇಶೀಯ ಚಿಹ್ನೆಗಳನ್ನು ಅಳವಡಿಸಿಕೊಳ್ಳುವಲ್ಲಿ ಸರ್ಕಾರ ಸ್ಥಿರ ಪ್ರಯಾಣ ಮುಂದುವರಿಸಿದೆ ಎಂದು ಸಚಿವರು ಹೇಳಿದರು. ಇದು ʻಕರ್ತವ್ಯ ಪಥʼ ನಿರ್ಮಾಣ ಮತ್ತು ಹೊಸ ಸಂಸತ್ತಿನ ನಿರ್ಮಾಣದಲ್ಲಿ ಈ ವಿಷಯ ಸ್ಪಷ್ಟವಾಗಿದೆ ಎಂದು ಸಚಿವರು ಹೇಳಿದರು.

ಈ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಯುವಕರ ಪಾತ್ರ ನಿರ್ಣಾಯಕವಾಗಿದೆ ಎಂದು ಪ್ರಧಾನಿ ಹೇಳಿರುವ ಮಾತನ್ನು ಸಚಿವರು ಒತ್ತಿ ಹೇಳಿದರು. ಈ ನಿಟ್ಟಿನಲ್ಲಿ, ಭಾರತವು ಇಂದು ಸುಮಾರು ಒಂದು ಲಕ್ಷ ನವೋದ್ಯಮಗಳು ಮತ್ತು ನೂರಕ್ಕೂ ಹೆಚ್ಚು ಯೂನಿಕಾರ್ನ್‌ಗಳನ್ನು ಹೊಂದಿರುವ ಮುಲುಗಲ್ಲು ಸಾಧಿಸಿದೆ ಎಂದ ಸಚಿವರು ಇದಕ್ಕಾಗಿ ಯುವಕರನ್ನು ಸಚಿವರು ಶ್ಲಾಘಿಸಿದರು.

ಒಂದು ಕಡೆ ʻಹರ್ ಘರ್ ತಿರಂಗʼಕ್ಕಾಗಿ ಪ್ರಧಾನಿಯವರ ಕರೆಗೆ ದೇಶವು ಸ್ಪಂದಿಸಿದರೆ, ಅದೇ ತ್ರಿವರ್ಣ ಧ್ವಜವನ್ನು ಇತರ ದೇಶಗಳಲ್ಲಿದ್ದ ಭಾರತೀಯ ವಿದ್ಯಾರ್ಥಿಗಳು ʻಆಪರೇಷನ್ ಗಂಗಾʼ ಸಮಯದಲ್ಲಿ ಸಂಘರ್ಷ ವಲಯದಿಂದ ಹೊರಬರಲು ಬಳಸಿದ್ದಾರೆ ಎಂದು ಸಚಿವರು ಹೇಳಿದರು. ಸಮೀಕ್ಷೆಗಳು ಪ್ರಧಾನಿಯವರನ್ನು ಅತ್ಯಂತ ಜನಪ್ರಿಯ ನಾಯಕ ಎಂದು ಬಣ್ಣಿಸುತ್ತವೆಯಾದರೂ, ಮೋದಿ ಅವರು ವಾಸ್ತವವಾಗಿ ತ್ರಿವರ್ಣ ಧ್ವಜವನ್ನು ವಿಶ್ವದ ಪ್ರಬಲ ಧ್ವಜವನ್ನಾಗಿ ಮಾಡಿದ್ದಾರೆ ಎಂದು ಶ್ರೀ ಠಾಕೂರ್ ಹೇಳಿದರು.

ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು ದಿನದ ವಿವಿಧ ವಿಷಯಾಧಾರಿತ ಅಧಿವೇಶನಗಳಿಗೆ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು. ಸಮಾಜದ ವಿವಿಧ ವರ್ಗಗಳ ಪ್ರೇಕ್ಷಕರನ್ನೂ ಅವರು ಸ್ವಾಗತಿಸಿದರು.

ʻಸರ್ಕಾರದ 9 ವರ್ಷಗಳ ರಾಷ್ಟ್ರೀಯ ಸಮಾವೇಶʼದ ಉದ್ಘಾಟನಾ ಸಮಾವೇಶ ಮತ್ತು ಸಮಾರೋಪದ ನಂತರ ಮೂರು ವಿಷಯಾಧಾರಿತ ಅಧಿವೇಶನಗಳು ನಡೆಯಲಿವೆ.

ಹಿರಿಯ ಪತ್ರಕರ್ತರಾದ ಶ್ರೀ ನಿತಿನ್ ಗೋಖಲೆ ಅವರು ನಡೆಸಿಕೊಡಲಿರುವ "ಮುನ್ನಡೆಯುತ್ತಿರುವ ಭಾರತ" ಅಧಿವೇಶನ 1 ರಲ್ಲಿ ಕೆಳಕಂಡವರು ಭಾಗವಹಿಸಲಿದ್ದಾರೆ.

  • ಸುನಿಲ್ ಭಾರ್ತಿ ಮಿತ್ತಲ್, ಸ್ಥಾಪಕರು ಮತ್ತು ಅಧ್ಯಕ್ಷರು, ಭಾರ್ತಿ ಎಂಟರ್ಪ್ರೈಸಸ್
  • ಸಂಗೀತಾ ರೆಡ್ಡಿ, ಅಪೋಲೋ ಆಸ್ಪತ್ರೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕರು
  • ದೇಬ್‌ಜ್ಞಾನಿ ಘೋಷ್, ನಾಸ್ಕಾಮ್ ಅಧ್ಯಕ್ಷರು
  • ಸುರ್ಜಿತ್ ಭಲ್ಲಾ, ʻಅಂತರರಾಷ್ಟ್ರೀಯ ಹಣಕಾಸು ನಿಧಿʼಯ ಭಾರತದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕರು
  • ಸೌಮ್ಯ ಕಾಂತಿ ಘೋಷ್, ಗ್ರೂಪ್ ಮುಖ್ಯ ಆರ್ಥಿಕ ಸಲಹೆಗಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
  • ದೀಪಾ ಸಯಲ್, ಅಧ್ಯಕ್ಷರು ಮತ್ತು ಬೆಂಬಲ ಮುಖ್ಯಸ್ಥರು, ಐಡಬ್ಲ್ಯೂಐಎಲ್ ಇಂಡಿಯಾ

 

ಅಧಿವೇಶನ 2: ಪತ್ರಕರ್ತೆ ರಿಚಾ ಅನಿರುದ್ಧ್ ನಡೆಸಿಕೊಟ್ಟ ʻಜನ್ ಜನ್ ಕಾ ವಿಶ್ವಾಸ್ʼ ಅಧಿವೇಶನದಲ್ಲಿ ಕೆಳಕಂಡ ಅತಿಥಿಗಳು ಭಾಗವಹಿಸಲಿದ್ದಾರೆ:

  • ನವಾಜುದ್ದೀನ್ ಸಿದ್ದಿಕಿ, ನಟ
  • ಸಿಂಥಿಯಾ ಮೆಕ್ ಕ್ಯಾಫ್ರಿ, ʻಯುನಿಸೆಫ್ʼನ ಭಾರತದ ಪ್ರತಿನಿಧಿ
  • ಕಿರಣ್ ಮಜುಂದಾರ್ ಶಾ, ಕಾರ್ಯನಿರ್ವಾಹಕ ಅಧ್ಯಕ್ಷೆ, ಬಯೋಕಾನ್ ಲಿಮಿಟೆಡ್ (ವಿಡಿಯೋ ಸಂದೇಶ)
  • ಪದ್ಮಶ್ರೀ ಶಾಂತಿ ತೆರೇಸಾ ಲಕ್ರಾ, ನರ್ಸ್
  • ನಿಖತ್ ಝರೀನ್, ಬಾಕ್ಸರ್
  • ಅನಿಲ್ ಪ್ರಕಾಶ್ ಜೋಶಿ ಮತ್ತು ಪರಿಸರವಾದಿ ಹಾಗೂ ʻಸೀಕೋʼ ಸಹ ಸಂಸ್ಥಾಪಕಿ ದಿವ್ಯಾ ಜೈನ್.

 

ಸೆಷನ್ 3: ಕೆಳಕಂಡ ಅತಿಥಿಗಳೊಂದಿಗೆ ʻರೆಡ್ ಎಫ್‌ಎಂʼ ರೇಡಿಯೋ ಜಾಕಿ ರೌನಾಕ್ ಅವರು ʻಯುವ ಶಕ್ತಿ: ಗಾಲ್ವನೈಸಿಂಗ್ ಇಂಡಿಯಾʼ ಅಧಿವೇಶನ ನಡೆಸಿಕೊಡಲಿದ್ದಾರೆ:

  • ರಿತೇಶ್ ಅಗರ್ವಾಲ್, ಸಿಇಒ, ʻಓಯೋ ರೂಮ್ಸ್ʼ
  • ರಿಷಬ್ ಶೆಟ್ಟಿ, ನಟ
  • ಅಮನ್ ಅಲಿ ಬಂಗಾಶ್, ಸಂಗೀತಗಾರ
  • ವೀರೇನ್ ರಾಸ್ಕ್‌ಕ್ವಿನ್ಹಾ, ಭಾರತ ಹಾಕಿ ತಂಡದ ಮಾಜಿ ನಾಯಕ
  • ಯಶೋಧರಾ ಬಜೋರಿಯಾ, ನಿರ್ದೇಶಕಿ, ಎಸ್ಪ್ರೆಸೊ ಟೆಕ್ನಾಲಜೀಸ್
  • ಅಖಿಲ್ ಕುಮಾರ್, ಬಾಕ್ಸರ್

****



(Release ID: 1927741) Visitor Counter : 119