ಹಣಕಾಸು ಸಚಿವಾಲಯ

​​​​​​​ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅನುರಾಗ್ ಠಾಕೂರ್ ಅವರು ಬೆಂಗಳೂರಿನಲ್ಲಿ ಎರಡನೇ ಹಣಕಾಸು ಮತ್ತು ಕೇಂದ್ರೀಯ ಬ್ಯಾಂಕ್ ಉಪ ಗವರ್ನರ್‌ ಗಳ (ಎಫ್‌ ಸಿ ಬಿ ಡಿ) ಸಭೆಯ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು

Posted On: 22 FEB 2023 2:05PM by PIB Bengaluru

2ನೇ ಜಿ-20 ಹಣಕಾಸು ಮತ್ತು ಕೇಂದ್ರೀಯ ಬ್ಯಾಂಕ್ ಉಪ ಗವರ್ನರ್‌ ಗಳ (ಎಫ್‌ ಸಿ ಬಿ ಡಿ) ಸಭೆಯು ಕೇಂದ್ರ ವಾರ್ತಾ ಮತ್ತು ಪ್ರಸಾರ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರ ಉದ್ಘಾಟನಾ ಭಾಷಣದೊಂದಿಗೆ ಇಂದು ಬೆಂಗಳೂರಿನಲ್ಲಿ ಪ್ರಾರಂಭವಾಯಿತು.

ಭಾರತದ ಜಿ-20 ಅಧ್ಯಕ್ಷತೆಯ ಅಡಿಯಲ್ಲಿ ಮೊದಲ ಜಿ-20 ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ (ಎಫ್‌ ಎಂ ಸಿ ಜಿ) ಸಭೆಯು 2023 ರ ಫೆಬ್ರವರಿ 24 ರಿಂದ 25 ರವರೆಗೆ ಕರ್ನಾಟಕದ ಬೆಂಗಳೂರಿನಲ್ಲಿ ನಡೆಯಲಿದೆ. ಜಿ-20 ಎಫ್‌ ಎಂ ಸಿ ಬಿ ಜಿ ಸಭೆಯು ಎರಡನೇ ಜಿ-20 ಹಣಕಾಸು ಮತ್ತು ಸೆಂಟ್ರಲ್ ಬ್ಯಾಂಕ್ ಉಪ ಗವರ್ನರ್‌ ಗಳ (ಎಫ್‌ ಸಿ ಬಿ ಡಿ) ಸಭೆಗೆ ಮುಂಚಿತವಾಗಿ ಶ್ರೀ ಅಜಯ್ ಸೇಠ್ ಮತ್ತು ಆರ್‌ ಬಿ ಐ ನ ಡೆಪ್ಯುಟಿ ಗವರ್ನರ್ ಡಾ. ಮೈಕೆಲ್ ಡಿ. ಪಾತ್ರ ಅವರ ಸಹ-ಅಧ್ಯಕ್ಷತೆಯಲ್ಲಿ ನಡೆಯಿತು.

ಸಚಿವರು ತಮ್ಮ ಭಾಷಣದಲ್ಲಿ, ಹಣಕಾಸು ಟ್ರ್ಯಾಕ್ ಜಿ-20 ಪ್ರಕ್ರಿಯೆಯ ಮಧ್ಯಭಾಗದಲ್ಲಿದೆ ಮತ್ತು ಜಾಗತಿಕ ಆರ್ಥಿಕ ಸಂವಾದ ಮತ್ತು ನೀತಿ ಸಮನ್ವಯಕ್ಕೆ ಪರಿಣಾಮಕಾರಿ ವೇದಿಕೆಯನ್ನು ಒದಗಿಸುತ್ತದೆ ಎಂದು ಹೇಳಿದರು. ಜಾಗತಿಕ ಆರ್ಥಿಕ ದೃಷ್ಟಿಕೋನ ಮತ್ತು ಅಪಾಯಗಳು, ಅಭಿವೃದ್ಧಿ ಹಣಕಾಸು ಮತ್ತು ಜಾಗತಿಕ ಹಣಕಾಸು ಸುರಕ್ಷತಾ ಜಾಲ, ಹಣಕಾಸು ಸೇರ್ಪಡೆ ಮತ್ತು ಇತರ ಹಣಕಾಸು ವಲಯದ ಸಮಸ್ಯೆಗಳು, ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು, ಸುಸ್ಥಿರ ಹಣಕಾಸು, ಜಾಗತಿಕ ಆರೋಗ್ಯ ಹಣಕಾಸು ಮತ್ತು ಅಂತರರಾಷ್ಟ್ರೀಯ ತೆರಿಗೆ ಸೇರಿದಂತೆ ಅಂತರರಾಷ್ಟ್ರೀಯ ಹಣಕಾಸು ರಚನೆಯು ಹಣಕಾಸು ಟ್ರ್ಯಾಕ್‌ ನ  ಮುಖ್ಯ ಕೆಲಸಗಳಾಗಿವೆ.

ನವೆಂಬರ್ 2022 ರಲ್ಲಿ, ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಅವರಿಂದ ಜಿ-20 ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದಾಗ, ಅದು ದೇಶಕ್ಕೆ ಹೆಮ್ಮೆಯ ಕ್ಷಣವಾಗಿತ್ತು ಮತ್ತು ಹಾಗೆಯೇ ಜಿ-20 ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ನಿವಾರಿಸುವುದು ಮತ್ತು ಜಾಗತಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ಒಮ್ಮತ ರೂಪಿಸುವುದನ್ನು ಮುಂದುವರಿಸುವುದು ಭಾರತದ ಮಹತ್ತರವಾದ ಜವಾಬ್ದಾರಿಯಾಗಿದೆ.

ಶ್ರೀ ಠಾಕೂರ್ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ, ಭಾರತದ ಜಿ-20 ಅಧ್ಯಕ್ಷತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ನಮ್ಮ ಒಂದು ಭೂಮಿಯ ಸ್ವಾಸ್ಥ್ಯಕ್ಕೆ ಗಮನ ಕೇಂದ್ರೀಕರಿಸುವುದು, ನಮ್ಮ ಒಂದು ಕುಟುಂಬದಲ್ಲಿ ಸಾಮರಸ್ಯವನ್ನು ಸೃಷ್ಟಿಸುವುದು ಮತ್ತು ನಮ್ಮ ಒಂದು ಭವಿಷ್ಯಕ್ಕೆ ಭರವಸೆಯನ್ನು ನೀಡುವುದು ಅದರ ಆದ್ಯತೆಗಳಾಗಿವೆ ಎಂದರು. ಜಾಗತಿಕ ಸವಾಲುಗಳನ್ನು ಎದುರಿಸಲು ಸಹಯೋಗದ ಪ್ರಯತ್ನಗಳಿಗೆ ಭಾರತ ನೀಡುವ ಪ್ರಾಮುಖ್ಯತೆಯನ್ನು ಈ ಧ್ಯೇಯವು ಪ್ರತಿಬಿಂಬಿಸುತ್ತದೆ. ಜಾಗತಿಕ ಆರ್ಥಿಕತೆಯು ಕೋವಿಡ್-19 ಸಾಂಕ್ರಾಮಿಕ, ಆಹಾರ ಮತ್ತು ಇಂಧನದ ಅಭದ್ರತೆ, ವಿಶಾಲ-ಆಧಾರಿತ ಹಣದುಬ್ಬರ, ಹೆಚ್ಚಿದ ಸಾಲಗಳು, ಹದಗೆಡುತ್ತಿರುವ ಹವಾಮಾನ ಬದಲಾವಣೆ ಮತ್ತು ಭೌಗೋಳಿಕ ರಾಜಕೀಯ ಒತ್ತಡಗಳ ಪರಿಣಾಮಗಳನ್ನು ಎದುರಿಸುತ್ತಿದೆ. ಈ ಎಲ್ಲಾ ಬಿಕ್ಕಟ್ಟುಗಳ ಪರಿಣಾಮವು ಪ್ರಪಂಚದ ಪ್ರಮುಖ ಅಭಿವೃದ್ಧಿ ಆದ್ಯತೆಗಳ ಪ್ರಗತಿಯನ್ನು ಹಿಮ್ಮೆಟ್ಟಿಸಬಹುದು ಎಂದು ಅವರು ಹೇಳಿದರು.

ಕೇಂದ್ರೀಕೃತ ಮಾತುಕತೆ ಮತ್ತು ಸಮಾಲೋಚನೆಗಳ ಮೂಲಕ ಈ ಸವಾಲುಗಳಿಗೆ ಪ್ರಾಯೋಗಿಕ ಜಾಗತಿಕ ಪರಿಹಾರಗಳನ್ನು ಕಂಡುಹಿಡಿಯಲು ಜಿ-20 ಮಹತ್ವದ ಕೊಡುಗೆಯನ್ನು ನೀಡಬಹುದು ಮತ್ತು ಭಾರತದ ಅಧ್ಯಕ್ಷತೆಯು ಇದನ್ನು ಸಕ್ರಿಯವಾಗಿ ಸುಗಮಗೊಳಿಸಲು ಪ್ರಯತ್ನಿಸುತ್ತದೆ ಎಂದು ಶ್ರೀ ಠಾಕೂರ್ ಹೇಳಿದರು.

ಈ ಗುರಿಯನ್ನು ಈಡೇರಿಸುವ ನಿಟ್ಟಿನಲ್ಲಿ, 2023 ರ ಜಿ-20 ಹಣಕಾಸು ಟ್ರ್ಯಾಕ್ ಚರ್ಚೆಗಳು 21 ನೇ ಶತಮಾನದ ಹಂಚಿಕೆಯ ಜಾಗತಿಕ ಸವಾಲುಗಳನ್ನು ಎದುರಿಸಲು ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್‌ಗಳನ್ನು (ಎಂಡಿಬಿ) ಬಲಪಡಿಸುವುದು, 'ಭವಿಷ್ಯದ ನಗರಗಳಿಗೆ' ಹಣಕಾಸು ಒದಗಿಸುವುದು, ಆರ್ಥಿಕ ಸೇರ್ಪಡೆ ಮತ್ತು ಉತ್ಪಾದಕತೆಯ ಲಾಭಗಳಿಗಾಗಿ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಬಳಸುವುದು ಮತ್ತು  ಅಂತರರಾಷ್ಟ್ರೀಯ ತೆರಿಗೆ ಕಾರ್ಯಸೂಚಿಯನ್ನು ಮುನ್ನಡೆಸುವುದು ಇವುಗಳಲ್ಲಿ ಸೇರಿವೆ. ಜಿ-20 ರಲ್ಲಿನ ವಿವಿಧ ಕಾರ್ಯಕಾರಿ ತಂಡಗಳು ಈಗಾಗಲೇ ಈ ಪ್ರಮುಖ ಸಮಸ್ಯೆಗಳನ್ನು ಕುರಿತು ಕೆಲಸವನ್ನು ಪ್ರಾರಂಭಿಸಿವೆ ಎಂದು ಶ್ರೀ ಠಾಕೂರ್‌ ಹೇಳಿದರು.

ಡೆಪ್ಯೂಟಿಗಳ ಸಭೆಯು, 2023 ರ ಫೆಬ್ರವರಿ 24 ಮತ್ತು 25 ರಂದು ನಡೆಯುವ ಜಿ-20 ಹಣಕಾಸು ಸಚಿವರು  ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್‌ಗಳ ಸಭೆಯಲ್ಲಿ ಅನುಮೋದನೆ ಪಡೆಯುವ ಪ್ರಕಟಣೆಯನ್ನು ಅಂತಿಮಗೊಳಿಸುತ್ತದೆ. ಈ ಸಂವಹನವು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಮಸ್ಯೆಗಳ ಕುರಿತು ಜಿ-20 ರ ಸಾಮೂಹಿಕ ದೃಷ್ಟಿಕೋನವನ್ನು ಒಳಗೊಂಡಿರುತ್ತದೆ ಮತ್ತು ಪ್ರಮುಖ ಜಾಗತಿಕ ಆರ್ಥಿಕತೆಗಳ ಹಣಕಾಸು ಮಂತ್ರಿಗಳು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳೊಂದಿಗೆ ದೊಡ್ಡ ಅಂತರರಾಷ್ಟ್ರೀಯ ಸಮುದಾಯವನ್ನು ನೇರವಾಗಿ ಸಂಪರ್ಕಿಸುತ್ತದೆ. ಪ್ರಮುಖ ಜಾಗತಿಕ ಸಮಸ್ಯೆಗಳಿಗೆ ಸಂಘಟಿತ ಪರಿಹಾರಗಳ ಕುರಿತು ಜಿ-20 ದೇಶಗಳ ನಡುವಿನ ಒಮ್ಮತವು ಜಾಗತಿಕ ಆರ್ಥಿಕತೆಯು ಪ್ರಸ್ತುತ ನಿಧಾನಗತಿಯಿಂದ ಚೇತರಿಸಿಕೊಳ್ಳಲು ಮತ್ತು ಬೆಳವಣಿಗೆ ಮತ್ತು ಸಮೃದ್ಧಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ಸಾಮಾನ್ಯ ವ್ಯಕ್ತಿಗೆ ಭರವಸೆ ನೀಡುವ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ.

ಈ ನಂಬಿಕೆಯನ್ನು ಉಳಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ನೀತಿ ನಿರೂಪಕರು ಜವಾಬ್ದಾರರಾಗಿರುತ್ತಾರೆ. ಜಿ-20 ತನ್ನ ಆರಂಭದಿಂದಲೂ,  ಬಿಕ್ಕಟ್ಟಿನ ಸಮಯದಲ್ಲಿ ಒಮ್ಮತವನ್ನು ರೂಪಿಸುವಲ್ಲಿ ತನ್ನ ಸಾಮರ್ಥ್ಯವನ್ನು ಮತ್ತೆ ಮತ್ತೆ ಸಾಬೀತುಪಡಿಸಿದೆ. ಮುಂಬರುವ ಗಮನಾರ್ಹ ಅಪಾಯಗಳನ್ನು ಗ್ರಹಿಸುವ, ತಡೆಗಟ್ಟುವ ಮತ್ತು ತಯಾರಿ ಮಾಡುವ ನಮ್ಮ ಸಾಮರ್ಥ್ಯದಲ್ಲಿ ಯಶಸ್ಸು ಅಡಗಿದೆ ಎಂದು ಭಾರತದ ಅಧ್ಯಕ್ಷತೆಯು ವಿಶ್ವಾಶವಿರಿಸಿದೆ. ಇದು ಅಂತರ್ಗತ ಮತ್ತು ನವೀಕೃತ ಬಹುಪಕ್ಷೀಯತೆಗೆ ಕರೆ ನೀಡುತ್ತದೆ.

ಶ್ರೀ ಠಾಕೂರ್ ಅವರು ಬಹುಪಕ್ಷೀಯತೆಯ ಮನೋಭಾವದ ಅಗತ್ಯವನ್ನು ಒತ್ತಿ ಹೇಳಿದರು. ವಿವಾದಾತ್ಮಕ ಸಮಸ್ಯೆಗಳಿವೆ ಮತ್ತು ದೇಶಗಳು ತಮ್ಮ ದೇಶೀಯ ಆಕಾಂಕ್ಷೆಗಳನ್ನು ಸಮತೋಲನಗೊಳಿಸಬೇಕಾಗಿದೆ. ಈ ರಚನಾತ್ಮಕ ಮತ್ತು ಫಲಪ್ರದ ಚರ್ಚೆಗಳ ಮೂಲಕ, ನಾವು ಒಟ್ಟಾಗಿ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸಬಹುದು ಎಂದು ಸಚಿವರು ಹೇಳಿದರು.

Tweets from the Inaugural address::

Tweet links for I&B Minister’s Inaugural address:

*****



(Release ID: 1901411) Visitor Counter : 171