ಪ್ರಧಾನ ಮಂತ್ರಿಯವರ ಕಛೇರಿ

ಈ ಬಜೆಟ್ ವಂಚಿತರಿಗೆ ಆದ್ಯತೆ ನೀಡುತ್ತದೆ: ಪ್ರಧಾನಮಂತ್ರಿ


"ಅಮೃತ ಕಾಲದ ಮೊದಲ ಬಜೆಟ್ ವಿಕಸಿತ ಭಾರತದ ಆಕಾಂಕ್ಷೆಗಳು ಮತ್ತು ನಿರ್ಣಯಗಳಿಗೆ ಬಲವಾದ ಅಡಿಪಾಯ ಹಾಕುತ್ತದೆ"

"ಈ ಬಜೆಟ್ ವಂಚಿತರಿಗೆ ಆದ್ಯತೆ ನೀಡುತ್ತದೆ"

"ಪಿಎಂ ವಿಶ್ವಕರ್ಮ ಕೌಶಲ್ ಸಮ್ಮಾನ್ ಅಂದರೆ ಪಿಎಂ ವಿಕಾಸ್ ಕೋಟ್ಯಂತರ ವಿಶ್ವಕರ್ಮರ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆ"

"ಈ ಬಜೆಟ್ ಸಹಕಾರಿ ಸಂಸ್ಥೆಗಳನ್ನು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಯ ಕೇಂದ್ರಬಿಂದುವನ್ನಾಗಿ ಮಾಡುತ್ತದೆ"

"ನಾವು ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಪಾವತಿಯ ಯಶಸ್ಸನ್ನು ಪುನರಾವರ್ತಿಸಬೇಕಾಗಿದೆ"

"ಈ ಬಜೆಟ್ ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಬೆಳವಣಿಗೆ, ಹಸಿರು ಆರ್ಥಿಕತೆ, ಹಸಿರು ಮೂಲಸೌಕರ್ಯ ಮತ್ತು ಹಸಿರು ಉದ್ಯೋಗಗಳಿಗೆ ಅಭೂತಪೂರ್ವ ವಿಸ್ತರಣೆ ನೀಡುತ್ತದೆ"

"ಮೂಲಸೌಕರ್ಯಕ್ಕಾಗಿ ಹತ್ತು ಲಕ್ಷ ಕೋಟಿ ರೂ.ಗಳ ಅಭೂತಪೂರ್ವ ಹೂಡಿಕೆ, ಭಾರತದ ಅಭಿವೃದ್ಧಿಗೆ ಹೊಸ ಶಕ್ತಿ ಮತ್ತು ವೇಗವನ್ನು ನೀಡುತ್ತದೆ"

"2047 ರ ಕನಸುಗಳನ್ನು ಸಾಧಿಸಲು ಮಧ್ಯಮ ವರ್ಗವು ದೊಡ್ಡ ಶಕ್ತಿಯಾಗಿದೆ. ನಮ್ಮ ಸರ್ಕಾರ ಸದಾ ಮಧ್ಯಮ ವರ್ಗದ ಪರವಾಗಿ ನಿಂತಿದೆ"

Posted On: 01 FEB 2023 3:15PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಭಾರತದ ಅಮೃತ ಕಾಲದ ಮೊದಲ ಬಜೆಟ್ ವಿಕಸಿತ ಭಾರತದ ಆಕಾಂಕ್ಷೆಗಳು ಮತ್ತು ಸಂಕಲ್ಪಗಳನ್ನು ಈಡೇರಿಸಲು ಬಲವಾದ ತಳಹದಿಯನ್ನು ಹಾಕಿದೆ ಎಂದು ಹೇಳಿದ್ದಾರೆ. ಈ ಬಜೆಟ್ ವಂಚಿತರಿಗೆ ಆದ್ಯತೆ ನೀಡುತ್ತದೆ ಮತ್ತು ಮಹತ್ವಾಕಾಂಕ್ಷೆಯ ಸಮಾಜ, ಬಡವರು, ಗ್ರಾಮಗಳು ಮತ್ತು ಮಧ್ಯಮ ವರ್ಗದ ಕನಸುಗಳನ್ನು ಈಡೇರಿಸಲು ಶ್ರಮಿಸುತ್ತದೆ ಎಂದು ಅವರು ಹೇಳಿದರು.

ಐತಿಹಾಸಿಕ ಬಜೆಟ್ ಗಾಗಿ ಅವರು ಹಣಕಾಸು ಸಚಿವರು ಮತ್ತು ಅವರ ತಂಡವನ್ನು ಅಭಿನಂದಿಸಿದರು. ಸಾಂಪ್ರದಾಯಿಕ ಕುಶಲಕರ್ಮಿಗಳಾದ ಬಡಗಿಗಳು, ಲೋಹರ್ (ಕಮ್ಮಾರರು), ಸುನಾರ್ (ಅಕ್ಕಸಾಲಿಗರು), ಕುಮ್ಹಾರ್ (ಕುಂಬಾರರು), ಶಿಲ್ಪಿಗಳು ಮತ್ತು ಇನ್ನೂ ಅನೇಕರು ರಾಷ್ಟ್ರದ ನಿರ್ಮಾತೃಗಳು ಎಂದು ಪ್ರಧಾನಮಂತ್ರಿ ಬಣ್ಣಿಸಿದರು. "ಮೊದಲ ಬಾರಿಗೆ, ಈ ಜನರ ಕಠಿಣ ಪರಿಶ್ರಮ ಮತ್ತು ನಿರ್ಮಾಣಕ್ಕೆ ಗೌರವ ಸಲ್ಲಿಸಲು ದೇಶವು ಅನೇಕ ಯೋಜನೆಗಳನ್ನು ತಂದಿದೆ. ಅವರಿಗೆ ತರಬೇತಿ, ಸಾಲ ಮತ್ತು ಮಾರುಕಟ್ಟೆ ಬೆಂಬಲಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಪ್ರಧಾನ ಮಂತ್ರಿ ವಿಶ್ವಕರ್ಮ ಕೌಶಲ ಸಮ್ಮಾನ್ ಅಂದರೆ ಪಿಎಂ ವಿಕಾಸ್ ಕೋಟ್ಯಂತರ ವಿಶ್ವಕರ್ಮರ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ" ಎಂದು ಪ್ರಧಾನಮಂತ್ರಿ ಹೇಳಿದರು.

ನಗರಗಳಲ್ಲಿ ವಾಸಿಸುವ ಮಹಿಳೆಯರಿಂದ ಹಿಡಿದು ಹಳ್ಳಿಗಳವರೆಗೆ, ಉದ್ಯೋಗದಲ್ಲಿರುವ ಮಹಿಳೆಯರಿಂದ ಹಿಡಿದು ಗೃಹಿಣಿಯರವರೆಗೆ, ಸರ್ಕಾರವು ಜಲ ಜೀವನ ಅಭಿಯಾನ, ಉಜ್ವಲ ಯೋಜನೆ ಮತ್ತು ಪಿಎಂ ವಸತಿ ಯೋಜನೆ ಮುಂತಾದ ಮಹತ್ವದ ಕ್ರಮಗಳನ್ನು ಕೈಗೊಂಡಿದೆ, ಇದು ಮಹಿಳೆಯರ ಕಲ್ಯಾಣವನ್ನು ಮತ್ತಷ್ಟು ಸಬಲೀಕರಣಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ತೀವ್ರ ಸಾಮರ್ಥ್ಯ ಹೊಂದಿರುವ ವಲಯವಾದ ಮಹಿಳಾ ಸ್ವಸಹಾಯ ಗುಂಪುಗಳನ್ನು ಮತ್ತಷ್ಟು ಬಲಪಡಿಸಿದರೆ ಪವಾಡಗಳನ್ನು ಮಾಡಬಹುದು ಎಂದು ಅವರು ಒತ್ತಿ ಹೇಳಿದರು. ಮಹಿಳೆಯರಿಗಾಗಿ ಹೊಸ ವಿಶೇಷ ಉಳಿತಾಯ ಯೋಜನೆಯನ್ನು ಪರಿಚಯಿಸುವುದರೊಂದಿಗೆ ಹೊಸ ಬಜೆಟ್ ನಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ಹೊಸ ಆಯಾಮವನ್ನು ಸೇರಿಸಲಾಗಿದೆ ಎಂದು ಒತ್ತಿಹೇಳಿದ ಪ್ರಧಾನಮಂತ್ರಿ, ಇದು ಮಹಿಳೆಯರನ್ನು ವಿಶೇಷವಾಗಿ ಸಾಮಾನ್ಯ ಕುಟುಂಬಗಳ ಗೃಹಿಣಿಯರನ್ನು ಸಶಕ್ತಗೊಳಿಸುತ್ತದೆ ಎಂದರು.

ಈ ಬಜೆಟ್ ಸಹಕಾರಿ ಸಂಸ್ಥೆಗಳನ್ನು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿಯ ಕೇಂದ್ರಬಿಂದುವನ್ನಾಗಿ ಮಾಡಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸರ್ಕಾರವು ಸಹಕಾರಿ ಕ್ಷೇತ್ರದಲ್ಲಿ ವಿಶ್ವದ ಅತಿದೊಡ್ಡ ಆಹಾರ ಶೇಖರಣಾ ಯೋಜನೆಯನ್ನು ಮಾಡಿದೆ ಎಂದೂ ಅವರು ತಿಳಿಸಿದರು. ಹೊಸ ಪ್ರಾಥಮಿಕ ಸಹಕಾರಿ ಸಂಘಗಳನ್ನು ರಚಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಹ ಬಜೆಟ್ ನಲ್ಲಿ ಘೋಷಿಸಲಾಗಿದೆ. ಇದು ಕೃಷಿಯೊಂದಿಗೆ ಹಾಲು ಮತ್ತು ಮೀನು ಉತ್ಪಾದನೆಯ ಪ್ರದೇಶವನ್ನು ವಿಸ್ತರಿಸುತ್ತದೆ, ರೈತರು, ಪಶುಸಂಗೋಪನೆ ಮತ್ತು ಮೀನುಗಾರರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುತ್ತಾರೆ ಎಂದರು.

ಕೃಷಿ ಕ್ಷೇತ್ರದಲ್ಲಿ ಡಿಜಿಟಲ್ ಪಾವತಿಯ ಯಶಸ್ಸನ್ನು ಪುನರಾವರ್ತಿಸುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಬಜೆಟ್ ಡಿಜಿಟಲ್ ಕೃಷಿ ಮೂಲಸೌಕರ್ಯಕ್ಕಾಗಿ ದೊಡ್ಡ ಯೋಜನೆ ರೂಪಿಸಿದೆ ಎಂದರು.

ವಿಶ್ವವು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವನ್ನು ಆಚರಿಸುತ್ತಿದೆ ಎಂದು ತಿಳಿಸಿದ ಅವರು, ಭಾರತದಲ್ಲಿ ಅನೇಕ ರೀತಿಯ ಸಿರಿಧಾನ್ಯಗಳಿವೆ. ಸಿರಿಧಾನ್ಯಗಳು ವಿಶ್ವದಾದ್ಯಂತದ ಮನೆಗಳನ್ನು ತಲುಪುತ್ತಿರುವಾಗ ಅದಕ್ಕೆ ವಿಶೇಷ ಮಾನ್ಯತೆ ಅಗತ್ಯ ಎಂದು ಪ್ರಧಾನಮಂತ್ರಿ ಹೇಳಿದರು. "ಈ ಮಹಾನ್ ಆಹಾರಕ್ಕೆ ಶ್ರೀ-ಅನ್ನ ಎಂಬ ಹೊಸ ಗುರುತನ್ನು ನೀಡಲಾಗಿದೆ" ಎಂದು ಹೇಳಿದ ಪ್ರಧಾನಮಂತ್ರಿಯವರು, ಇದರಿಂದ ದೇಶದ ಸಣ್ಣ ರೈತರು ಮತ್ತು ಬುಡಕಟ್ಟು ರೈತರು ದೇಶದ ನಾಗರಿಕರಿಗೆ ಆರೋಗ್ಯಕರ ಜೀವನ ನೀಡುವುದರ ಜೊತೆಗೆ ಆರ್ಥಿಕ ಬೆಂಬಲವನ್ನು ಪಡೆಯಲಿದ್ದಾರೆ ಎಂದು ಒತ್ತಿ ಹೇಳಿದರು.

ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಬೆಳವಣಿಗೆ, ಹಸಿರು ಆರ್ಥಿಕತೆ, ಹಸಿರು ಮೂಲಸೌಕರ್ಯ ಮತ್ತು ಹಸಿರು ಉದ್ಯೋಗಗಳಿಗೆ ಈ ಬಜೆಟ್ ಅಭೂತಪೂರ್ವ ವಿಸ್ತರಣೆಯನ್ನು ನೀಡುತ್ತದೆ ಎಂದು ಶ್ರೀ ಮೋದಿ ಹೇಳಿದರು. ಬಜೆಟ್ ನಲ್ಲಿ ನಾವು ತಂತ್ರಜ್ಞಾನ ಮತ್ತು ಹೊಸ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಿದ್ದೇವೆ. ಇಂದಿನ ಮಹತ್ವಾಕಾಂಕ್ಷೆಯ ಭಾರತವು ರಸ್ತೆ, ರೈಲು, ಮೆಟ್ರೋ, ಬಂದರು ಮತ್ತು ಜಲಮಾರ್ಗಗಳಂತಹ ಪ್ರತಿಯೊಂದು ಕ್ಷೇತ್ರದಲ್ಲೂ ಆಧುನಿಕ ಮೂಲಸೌಕರ್ಯಗಳನ್ನು ಬಯಸುತ್ತದೆ. 2014ಕ್ಕೆ ಹೋಲಿಸಿದರೆ, ಮೂಲಸೌಕರ್ಯ ಕ್ಷೇತ್ರದಲ್ಲಿನ ಹೂಡಿಕೆ ಶೇಕಡಾ 400 ಕ್ಕಿಂತ ಹೆಚ್ಚಾಗಿದೆ", ಎಂದು ಹೇಳಿದ ಪ್ರಧಾನಮಂತ್ರಿಯವರು, ಮೂಲಸೌಕರ್ಯಕ್ಕಾಗಿ ಹತ್ತು ಲಕ್ಷ ಕೋಟಿ ರೂ.ಗಳ ಅಭೂತಪೂರ್ವ ಹೂಡಿಕೆಯ ಕುರಿತು ಒತ್ತಿ ಹೇಳಿದರು, ಇದು ಭಾರತದ ಅಭಿವೃದ್ಧಿಗೆ ಹೊಸ ಶಕ್ತಿ ಮತ್ತು ವೇಗವನ್ನು ನೀಡುತ್ತದೆ. ಈ ಹೂಡಿಕೆಗಳು ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ, ಆ ಮೂಲಕ ದೊಡ್ಡ ಜನಸಂಖ್ಯೆಗೆ ಹೊಸ ಆದಾಯದ ಅವಕಾಶಗಳನ್ನು ಒದಗಿಸುತ್ತವೆ ಎಂದು ಅವರು ಮಾಹಿತಿ ನೀಡಿದರು.

ಕೈಗಾರಿಕೆಗಳಿಗೆ ಸಾಲ ಬೆಂಬಲ ಮತ್ತು ಸುಧಾರಣೆಗಳ ಅಭಿಯಾನದ ಮೂಲಕ ಸುಗಮವಾಗಿ ವಾಣಿಜ್ಯ ನಡೆಸುವ ಬಗ್ಗೆಯೂ ಪ್ರಧಾನಮಂತ್ರಿ ಪ್ರಸ್ತಾಪಿಸಿದರು. "ಎಂಎಸ್ಎಂಇಗಳಿಗೆ 2 ಲಕ್ಷ ಕೋಟಿ ರೂ.ಗಳ ಹೆಚ್ಚುವರಿ ಸಾಲ ಖಾತರಿಯನ್ನು ವ್ಯವಸ್ಥೆ ಮಾಡಲಾಗಿದೆ" ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಊಹಾತ್ಮಕ ತೆರಿಗೆಯ ಮಿತಿಯನ್ನು ಹೆಚ್ಚಿಸುವುದರಿಂದ ಎಂಎಸ್ಎಂಇಗಳು ಬೆಳೆಯಲು ಸಹಾಯ ಮಾಡುತ್ತದೆ ಎಂದು ಹೇಳಿದರು. ದೊಡ್ಡ ಕಂಪನಿಗಳು ಎಂಎಸ್ಎಂಇಗಳಿಗೆ ಸಕಾಲದಲ್ಲಿ ಹಣ ಪಾವತಿ ಮಾಡಲು ಹೊಸ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

2047ರ ಕನಸುಗಳನ್ನು ನನಸು ಮಾಡುವಲ್ಲಿ ಮಧ್ಯಮ ವರ್ಗದ ಸಾಮರ್ಥ್ಯವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಮಧ್ಯಮ ವರ್ಗದವರನ್ನು ಸಶಕ್ತಗೊಳಿಸುವ ಸಲುವಾಗಿ, ಕಳೆದ ವರ್ಷಗಳಲ್ಲಿ ಸರ್ಕಾರವು ಅನೇಕ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ, ಅದು ಸುಗಮ ಜೀವನವನ್ನು ಖಾತ್ರಿಪಡಿಸಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ತೆರಿಗೆ ದರಗಳ ಕಡಿತ ಮತ್ತು ಸರಳೀಕರಣ, ಪಾರದರ್ಶಕತೆ ಮತ್ತು ಪ್ರಕ್ರಿಯೆಗಳ ವೇಗವನ್ನು ಅವರು ಪ್ರತಿಪಾದಿಸಿದರು. "ಸದಾ ಮಧ್ಯಮ ವರ್ಗದವರೊಂದಿಗೆ ನಿಲ್ಲುವ ನಮ್ಮ ಸರ್ಕಾರವು ಅವರಿಗೆ ಭಾರಿ ತೆರಿಗೆ ವಿನಾಯಿತಿ ನೀಡಿದೆ" ಎಂದು ಪ್ರಧಾನಮಂತ್ರಿ ತಮ್ಮ ಪ್ರತಿಕ್ರಿಯೆ ಮುಕ್ತಾಯಗೊಳಿಸಿದರು.

*****

 

 

 



(Release ID: 1895882) Visitor Counter : 138