ರಾಷ್ಟ್ರಪತಿಗಳ ಕಾರ್ಯಾಲಯ
ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಭಾರತದ ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಭಾಷಣ
Posted On:
31 JAN 2023 12:23PM by PIB Bengaluru
ಗೌರವಾನ್ವಿತ ಸದಸ್ಯರೇ,
1. ಸಂಸತ್ತಿನ ಉಭಯ ಸದನಗಳನ್ನುದ್ದೇಶಿಸಿ ಮಾತನಾಡಲು ನನಗೆ ಬಹಳ ಸಂತೋಷವಾಗುತ್ತಿದೆ. ಕೆಲವು ತಿಂಗಳ ಹಿಂದೆ, ನಮ್ಮ ದೇಶವು ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸಿ, ʻಅಮೃತ್ ಕಾಲ' ಅನ್ನು ಪ್ರವೇಶಿಸಿದೆ. ಈ 'ಸ್ವಾತಂತ್ರ್ಯದ ಅಮೃತ ಕಾಲ'ವು ನಮ್ಮ ಸಾವಿರಾರು ವರ್ಷಗಳ ಭವ್ಯ ಪರಂಪರೆಯ ಹೆಮ್ಮೆ, ಭಾರತೀಯ ಸ್ವಾತಂತ್ರ್ಯ ಹೋರಾಟದ ಸ್ಫೂರ್ತಿ ಮತ್ತು ಸುವರ್ಣ ಭವಿಷ್ಯಕ್ಕಾಗಿ ಭಾರತದ ಸಂಕಲ್ಪವನ್ನು ಸಮೀಕರಿಸುತ್ತದೆ.
2. 25 ವರ್ಷಗಳ ಈ 'ಅಮೃತ ಕಾಲ'ವು ಸ್ವಾತಂತ್ರ್ಯದ ಸುವರ್ಣ ಶತಮಾನೋತ್ಸವ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ಕಟ್ಟುವಂತಹ ಅವಧಿಯಾಗಿದೆ. ಈ 25 ವರ್ಷಗಳ ಅವಧಿಯಲ್ಲಿ ನಾವೆಲ್ಲರೂ ಮತ್ತು ದೇಶದ ಪ್ರತಿಯೊಬ್ಬ ನಾಗರಿಕರು ತಮ್ಮ ಕರ್ತವ್ಯಗಳನ್ನು ಅತ್ಯುನ್ನತ ಮಟ್ಟದಲ್ಲಿ ನಿರ್ವಹಿಸಬೇಕಾಗಿದೆ. ಒಂದು ಹೊಸ ಶಕೆಯನ್ನು ನಿರ್ಮಿಸುವ ಅವಕಾಶವು ನಮ್ಮನ್ನು ಆಹ್ವಾನಿಸುತ್ತಿದೆ. ಅದಕ್ಕಾಗಿ ನಾವು ನಮ್ಮ ಪೂರ್ಣ ಸಾಮರ್ಥ್ಯದೊಂದಿಗೆ ನಿರಂತರವಾಗಿ ಕೆಲಸ ಮಾಡಬೇಕಾಗಿದೆ.
• 2047ರ ವೇಳೆಗೆ ನಾವು ಭವ್ಯವಾದ ರಾಷ್ಟ್ರವೊಂದನ್ನು ನಿರ್ಮಾಣ ಮಾಡಬೇಕಿದೆ. ಆ ರಾಷ್ಟ್ರವು ಹೇಗಿರಬೇಕೆಂದರೆ ನಮ್ಮ ಭವ್ಯವಾದ ಇತಿಹಾಸದ ಜೊತೆಗೆ ಆಧುನಿಕತೆಯ ಪ್ರತಿಯೊಂದು ಸುವರ್ಣ ಅಂಶವನ್ನೂ ಅದು ಮೇಳೈಸಿಕೊಂಡಿರಬೇಕು.
• ಸ್ವಾವಲಂಬಿ ಮತ್ತು ಮಾನವೀಯ ಬಾಧ್ಯತೆಗಳನ್ನು ಪೂರೈಸಬಲ್ಲ ಭಾರತವನ್ನು ನಾವು ನಿರ್ಮಿಸಬೇಕಾಗಿದೆ.
• ಬಡತನವಿಲ್ಲದ ಮತ್ತು ಮಧ್ಯಮ ವರ್ಗದವರೂ ಸಮೃದ್ಧವಾಗಿರುವ ಭಾರತ ಅದಾಗಿರಬೇಕು.
• ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಮಾರ್ಗದರ್ಶನ ನೀಡುವಲ್ಲಿ ಯುವ ಮತ್ತು ಮಹಿಳಾ ಶಕ್ತಿ ಮುಂಚೂಣಿಯಲ್ಲಿರುವ ಹಾಗೂ ದೇಶದ ಯುವಕರು ಪ್ರಸ್ತುತ ಸಮಯಕ್ಕಿಂತಲೂ ಸಾಕಷ್ಟು ಮುಂದಿರುವಂತಹ ಭಾರತ ಅದಾಗಿರಬೇಕು.
• ಭಾರತದ ವೈವಿಧ್ಯತೆ ಇನ್ನೂ ಹೆಚ್ಚು ಸುಸ್ಪಷ್ಟವಾಗಬೇಕು ಜತೆಗೆ ದೇಶದ ಏಕತೆ ಮತ್ತಷ್ಟು ಅಚಲವಾಗಿರಬೇಕು.
3. 2047ರಲ್ಲಿ ಭಾರತವು ಈ ವಾಸ್ತವವನ್ನು ಸಾಕಾರಗೊಳಿಸಿದಾಗ, ದೇಶವು ಖಂಡಿತವಾಗಿಯೂ ಅದರ ಭವ್ಯ ನಿರ್ಮಾಣದ ಹಿಂದಿರುವ ಬುನಾದಿಯನ್ನು ಗುರುತಿಸುತ್ತದೆ. ಆ ಸಮಯದಲ್ಲಿ, ʻಸ್ವಾತಂತ್ರ್ಯದ ಅಮೃತ ಕಾಲʼದ ಈ ಆರಂಭಿಕ ಕ್ಷಣಗಳನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲಾಗುತ್ತದೆ. ಆದ್ದರಿಂದ, ಈ ಸಮಯ ಮತ್ತು 'ಅಮೃತ ಕಾಲ'ದ ಈ ಅವಧಿಯು ಹೆಚ್ಚು ಮಹತ್ವದ್ದಾಗಿದೆ.
ಗೌರವಾನ್ವಿತ ಸದಸ್ಯರೇ,
4. ನನ್ನ ಸರಕಾರಕ್ಕೆ ಮೊದಲ ಬಾರಿಗೆ ಈ ದೇಶದ ಜನರು ಅವರ ಸೇವೆ ಮಾಡಲು ಅವಕಾಶ ನೀಡಿದಾಗ, ನಾವು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ ಮಂತ್ರದೊಂದಿಗೆ ಪ್ರಾರಂಭಿಸಿದೆವು. ಸಮಯ ಕಳೆದಂತೆ ಅದಕ್ಕೆ 'ಸಬ್ ಕಾ ವಿಶ್ವಾಸ್' ಮತ್ತು 'ಸಬ್ ಕಾ ಪ್ರಯಾಸ್' ಅನ್ನು ಸಹ ಸೇರಿಸಲಾಯಿತು. ಈ ಮಂತ್ರವು ಈಗ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಸ್ಫೂರ್ತಿಯಾಗಿದೆ. ಕೆಲವೇ ತಿಂಗಳಲ್ಲಿ, ನನ್ನ ಸರಕಾರವು ಈ ಅಭಿವೃದ್ಧಿಯ ʻಕರ್ತವ್ಯ ಪಥʼದಲ್ಲಿ ಒಂಬತ್ತು ವರ್ಷಗಳನ್ನು ಪೂರ್ಣಗೊಳಿಸಲಿದೆ.
5. ನನ್ನ ಸರಕಾರದ ಸುಮಾರು ಒಂಬತ್ತು ವರ್ಷಗಳ ಅವಧಿಯಲ್ಲಿ, ಭಾರತದ ಜನರು ಮೊದಲ ಬಾರಿಗೆ ಅನೇಕ ಸಕಾರಾತ್ಮಕ ಬದಲಾವಣೆಗಳಿಗೆ ಸಾಕ್ಷಿಯಾಗಿದ್ದಾರೆ. ಈ ಪೈಕಿ ಅತಿದೊಡ್ಡ ಬದಲಾವಣೆಯೆಂದರೆ, ಇಂದು ಪ್ರತಿಯೊಬ್ಬ ಭಾರತೀಯನ ಆತ್ಮವಿಶ್ವಾಸವು ಉತ್ತುಂಗದಲ್ಲಿದೆ ಮತ್ತು ಭಾರತದ ಬಗ್ಗೆ ವಿಶ್ವದ ದೃಷ್ಟಿಕೋನ ಬದಲಾಗಿದೆ.
• ಒಂದು ಕಾಲದಲ್ಲಿ ತನ್ನ ಹೆಚ್ಚಿನ ಸಮಸ್ಯೆಗಳ ಪರಿಹಾರಕ್ಕಾಗಿ ಇತರರತ್ತ ನೋಡುತ್ತಿದ್ದ ಭಾರತ, ಇಂದು ಜಗತ್ತು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುವ ದೇಶವಾಗಿ ಹೊರಹೊಮ್ಮುತ್ತಿದೆ.
• ಈ ಒಂಬತ್ತು ವರ್ಷಗಳಲ್ಲಿ, ದಶಕಗಳಿಂದ ಕಾಯುತ್ತಿದ್ದ ದೇಶದ ಜನಸಂಖ್ಯೆಯ ದೊಡ್ಡ ಭಾಗಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.
• ದೇಶದಲ್ಲಿ ನಾವು ಬಹುಕಾಲದಿಂದ ಆಶಿಸುತ್ತಿದ್ದ ಆಧುನಿಕ ಮೂಲಸೌಕರ್ಯಗಳು ಈ ವರ್ಷಗಳಲ್ಲಿ ತಲೆ ಎತ್ತಲಾರಂಭಿಸಿವೆ.
• ಭಾರತ ನಿರ್ಮಿಸಿದ ʻಡಿಜಿಟಲ್ ನೆಟ್‌ವರ್ಕ್ʼ, ಅಭಿವೃದ್ಧಿ ಹೊಂದಿದ ದೇಶಗಳಿಗೂ ಸ್ಫೂರ್ತಿಯ ಸೆಲೆಯಾಗಿದೆ.
• ಬೃಹತ್ ಹಗರಣಗಳು ಮತ್ತು ಸರಕಾರಿ ಯೋಜನೆಗಳಲ್ಲಿನ ಭ್ರಷ್ಟಾಚಾರದ ಪಿಡುಗನ್ನು ತೊಡೆದುಹಾಕಬೇಕೆಂಬ ದೀರ್ಘ ಕಾಲದ ಹಂಬಲ ಈಗ ಸಾಕಾರಗೊಳ್ಳುತ್ತಿದೆ.
• ಇಂದಿನ ಚರ್ಚೆಯು ನೀತಿ ವೈಫಲ್ಯಗಳ ಕುರಿತಾದ ಸಂವಾದವಾಗಿ ಉಳಿದಿಲ್ಲ, ಬದಲಿಗೆ ಅದನ್ನು ಮೀರಿ, ಭಾರತವನ್ನು ಅದರ ಕ್ಷಿಪ್ರ ಅಭಿವೃದ್ಧಿ ಮತ್ತು ಅದರ ನಿರ್ಧಾರಗಳ ದೂರದೃಷ್ಟಿಯಿಂದ ಗುರುತಿಸಲಾಗುತ್ತಿದೆ.
• ಹಾಗಾಗಿಯೇ ಇಂದು ನಾವು ಜಗತ್ತಿನ 10ನೇ ಅತಿದೊಡ್ಡ ಆರ್ಥಿಕತೆಯ ಸ್ಥಾನದಿಂದ 5ನೇ ಅತಿದೊಡ್ಡ ಆರ್ಥಿಕತೆ ಸ್ಥಾನಕ್ಕೆ ಬೆಳೆದಿದ್ದೇವೆ.
ಇದು ಮುಂದಿನ 25 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಆತ್ಮವಿಶ್ವಾಸವನ್ನು ಹೆಚ್ಚಿಸುವ ಅಡಿಪಾಯವಾಗಿದೆ.
ಗೌರವಾನ್ವಿತ ಸದಸ್ಯರೇ,
6. ಭಗವಾನ್ ಬಸವೇಶ್ವರರು 'ಕಾಯಕವೇ ಕೈಲಾಸ' ಎಂದು ಹೇಳಿದ್ದಾರೆ. ಅಂದರೆ, ʻಕರ್ಮವನ್ನು ಪೂಜಿಸು ಮತ್ತು ಕರ್ಮದಲ್ಲಿಯೇ ಶಿವನು ಅಡಗಿದ್ದಾನೆʼ. ಈ ಮಾರ್ಗವನ್ನು ಅನುಸರಿಸಿ, ನನ್ನ ಸರಕಾರವು ರಾಷ್ಟ್ರ ನಿರ್ಮಾಣದ ಕರ್ತವ್ಯವನ್ನು ನಿರ್ವಹಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ.
• ಇಂದು ಭಾರತವು ಸ್ಥಿರ, ನಿರ್ಭೀತ, ನಿರ್ಣಾಯಕ ಮತ್ತು ಉನ್ನತ ಮಹತ್ವಾಕಾಂಕ್ಷೆಗಳೊಂದಿಗೆ ಕೆಲಸ ಮಾಡುವ ಸರಕಾರವನ್ನು ಹೊಂದಿದೆ.
• ಇಂದು ಭಾರತವು ಪ್ರಾಮಾಣಿಕರನ್ನು ಗೌರವಿಸುವ ಸರಕಾರವನ್ನು ಹೊಂದಿದೆ.
• ಇಂದು ಭಾರತದಲ್ಲಿ ಬಡವರ ಸಮಸ್ಯೆಗಳ ಶಾಶ್ವತ ಪರಿಹಾರ ಮತ್ತು ಅವರ ಶಾಶ್ವತ ಸಬಲೀಕರಣಕ್ಕಾಗಿ ಕೆಲಸ ಮಾಡುವ ಸರಕಾರವಿದೆ.
• ಇಂದು ಭಾರತವು ಅಭೂತಪೂರ್ವ ವೇಗ ಮತ್ತು ಪ್ರಮಾಣದಲ್ಲಿ ಕೆಲಸ ಮಾಡುವ ಸರಕಾರವನ್ನು ಹೊಂದಿದೆ.
• ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಸಾರ್ವಜನಿಕ ಕಲ್ಯಾಣಕ್ಕೆ ಆದ್ಯತೆ ನೀಡುವ ಸರಕಾರವನ್ನು ಇಂದು ಭಾರತ ಹೊಂದಿದೆ.
• ಇಂದು ಮಹಿಳೆಯರು ಎದುರಿಸುತ್ತಿರುವ ಪ್ರತಿಯೊಂದು ಅಡೆತಡೆಗಳನ್ನು ನಿವಾರಿಸಲು ಬದ್ಧವಾಗಿರುವ ಸರಕಾರವನ್ನು ಭಾರತ ಹೊಂದಿದೆ.
• ಇಂದು ಭಾರತದಲ್ಲಿ ಪ್ರಗತಿ ಮತ್ತು ಪ್ರಕೃತಿಯ ರಕ್ಷಣೆಗೆ ಬದ್ಧವಾಗಿರುವ ಸರಕಾರವಿದೆ.
• ಇಂದು ಆಧುನಿಕತೆಯನ್ನು ಸ್ವೀಕರಿಸುತ್ತಲೇ ಪರಂಪರೆಯನ್ನೂ ಸಂರಕ್ಷಿಸುವಂತಹ ಸರಕಾರವನ್ನು ಭಾರತ ಹೊಂದಿದೆ.
• ಇಂದು ಜಾಗತಿಕ ವೇದಿಕೆಯಲ್ಲಿ ತನ್ನ ಸರಿಯಾದ ಪಾತ್ರವನ್ನು ನಿರ್ವಹಿಸಲು ಆತ್ಮವಿಶ್ವಾಸದಿಂದ ಮುಂದುವರಿಯುತ್ತಿರುವ ಸರಕಾರವನ್ನು ಭಾರತವು ಹೊಂದಿದೆ.
ಗೌರವಾನ್ವಿತ ಸದಸ್ಯರೇ,
7. ಇಂದು, ಈ ಅಧಿವೇಶನದ ಮೂಲಕ ಸತತ ಎರಡು ಅವಧಿಗೆ ಸ್ಥಿರ ಸರಕಾರವನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ದೇಶದ ಜನರಿಗೆ ನನ್ನ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನನ್ನ ನಿರ್ಣಾಯಕ ಸರಕಾರವು ಸದಾ ದೇಶದ ಹಿತಾಸಕ್ತಿಯನ್ನು ಪ್ರಮುಖವಾಗಿರಿಸಿಕೊಂಡಿದೆ ಮತ್ತು ಅಗತ್ಯವಿದ್ದಾಗ ನೀತಿಗಳು ಹಾಗೂ ಕಾರ್ಯತಂತ್ರಗಳನ್ನು ಸಂಪೂರ್ಣವಾಗಿ ಪರಿವರ್ತಿಸುವ ಇಚ್ಛಾಶಕ್ತಿಯನ್ನು ತೋರಿದೆ. ʻಸರ್ಜಿಕಲ್ ಸ್ಟ್ರೈಕ್ʼನಿಂದ ಹಿಡಿದು ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮದವರೆಗೆ, ʻಎಲ್‌ಒಸಿʼಯಿಂದ ʻಎಲ್‌ಎಸಿʼವರೆಗಿನ ಪ್ರತಿಯೊಂದು ದುಷ್ಕೃತ್ಯಕ್ಕೆ ದಿಟ್ಟ ತಿರುಗೇಟು ನೀಡುವವರೆಗೆ; 370 ನೇ ವಿಧಿಯನ್ನು ರದ್ದುಪಡಿಸುವುದರಿಂದ ಹಿಡಿದು ʻತ್ರಿವಳಿ ತಲಾಖ್ʼವರೆಗೆ, ನನ್ನ ಸರಕಾರವನ್ನು ನಿರ್ಣಾಯಕ ಸರಕಾರವೆಂದು ಗುರುತಿಸಲಾಗಿದೆ.
8. ಸ್ಥಿರ ಮತ್ತು ನಿರ್ಣಾಯಕ ಸರಕಾರವು 100 ವರ್ಷಗಳಲ್ಲೇ ಅತಿದೊಡ್ಡ ವಿಪತ್ತನ್ನು ಎದುರಿಸಲು ಮತ್ತು ಆ ಬಳಿಕ ಉದ್ಭವಿಸಿದ ಪರಿಸ್ಥಿತಿಯನ್ನು ನಿಭಾಯಿಸಲು ನಮಗೆ ಅನುವು ಮಾಡಿಕೊಟ್ಟಿದೆ. ಜಗತ್ತಿನಲ್ಲಿ ಎಲ್ಲಿ ರಾಜಕೀಯ ಅಸ್ಥಿರತೆ ಇದೆಯೋ, ಆ ದೇಶಗಳು ಇಂದು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿವೆ. ಆದರೆ ರಾಷ್ಟ್ರೀಯ ಹಿತದೃಷ್ಟಿಯಿಂದ ನನ್ನ ಸರಕಾರ ತೆಗೆದುಕೊಂಡ ನಿರ್ಧಾರಗಳಿಂದಾಗಿ ಭಾರತವು ವಿಶ್ವದ ಇತರ ಭಾಗಗಳಿಗಿಂತ ಉತ್ತಮ ಸ್ಥಾನದಲ್ಲಿದೆ.
ಗೌರವಾನ್ವಿತ ಸದಸ್ಯರೇ,
9. ಭ್ರಷ್ಟಾಚಾರವು ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಅತಿದೊಡ್ಡ ಶತ್ರು ಎಂಬ ದೃಢ ಅಭಿಪ್ರಾಯವನ್ನು ನನ್ನ ಸರಕಾರ ಹೊಂದಿದೆ. ಆದ್ದರಿಂದ, ಕಳೆದ ಕೆಲವು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಅವಿರತ ಹೋರಾಟ ನಡೆಯುತ್ತಿದೆ. ವ್ಯವಸ್ಥೆಯಲ್ಲಿ ಪ್ರಾಮಾಣಿಕರನ್ನು ಗೌರವಿಸಲಾಗುವುದು ಎಂದು ನಾವು ಖಾತರಿಪಡಿಸಿದ್ದೇವೆ. ಸಮಾಜದಲ್ಲಿ ಭ್ರಷ್ಟರ ಬಗ್ಗೆ ಸಹಾನುಭೂತಿ ಇರಬಾರದು ಎಂಬ ಸಾಮಾಜಿಕ ಪ್ರಜ್ಞೆ ದೇಶದಲ್ಲಿ ಹೆಚ್ಚುತ್ತಿದೆ.
10. ಭ್ರಷ್ಟಾಚಾರ ಮುಕ್ತ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವ ಉದ್ದೇಶದಿಂದ ಕಳೆದ ಕೆಲವು ವರ್ಷಗಳಲ್ಲಿ ಬೇನಾಮಿ ಆಸ್ತಿ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆರ್ಥಿಕ ಅಪರಾಧಗಳನ್ನು ಮಾಡಿದ ನಂತರ ತಲೆಮರೆಸಿಕೊಂಡ ತಪ್ಪಿತಸ್ಥರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ʻತಲೆಮರೆಸಿಕೊಂಡ ಆರ್ಥಿಕ ಅಪರಾಧಿಗಳ ಕಾಯ್ದೆʼಯನ್ನು ಅಂಗೀಕರಿಸಲಾಗಿದೆ. ಸರ್ಕಾರಿ ಯಂತ್ರದಲ್ಲಿ ಪಕ್ಷಪಾತ ಮತ್ತು ಭ್ರಷ್ಟಾಚಾರದ ಅಭ್ಯಾಸವನ್ನು ಕೊನೆಗೊಳಿಸಲು ಪರಿಣಾಮಕಾರಿ ವ್ಯವಸ್ಥೆಯನ್ನು ಸಹ ಜಾರಿಗೆ ತರಲಾಗಿದೆ. ಇಂದು ಟೆಂಡರ್ ಮತ್ತು ಸರ್ಕಾರಿ ಖರೀದಿಗಾಗಿ ಸರ್ಕಾರಿ-ಇ-ಮಾರುಕಟ್ಟೆ (ಜಿಇಎಂ) ವ್ಯವಸ್ಥೆ ಇದೆ, ಇದರಲ್ಲಿ ಇದುವರೆಗೆ 3 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ವಹಿವಾಟು ನಡೆದಿದೆ.
11. ಇಂದು, ರಾಷ್ಟ್ರ ನಿರ್ಮಾಣದಲ್ಲಿ ಪ್ರಾಮಾಣಿಕ ಕೊಡುಗೆ ನೀಡುವವರಿಗೆ ವಿಶೇಷ ಗೌರವವನ್ನು ನೀಡಲಾಗುತ್ತಿದೆ. ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವಲ್ಲಿನ ಸಂಕೀರ್ಣತೆಗಳನ್ನು ತೊಡೆದುಹಾಕುವ ಮೂಲಕ ನಮ್ಮ ದೇಶವಾಸಿಗಳ ಜೀವನವನ್ನು ಸುಲಭಗೊಳಿಸಲಾಗಿದೆ. ʻಸಂಪರ್ಕರಹಿತ ಮೌಲ್ಯಮಾಪನʼವನ್ನು(ಫೇಸ್‌ಲೆಸ್ ಅಸೆಸ್‌ಮೆಂಟ್) ಉತ್ತೇಜಿಸುವ ಮೂಲಕ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವ ತರಲಾಗಿದೆ. ಈ ಮೊದಲು ತೆರಿಗೆ ಮರುಪಾವತಿಗಾಗಿ ದೀರ್ಘ ಕಾಯುವಿಕೆ ಇತ್ತು. ಇಂದು, ʻಐಟಿಆರ್ʼ ಸಲ್ಲಿಸಿದ ಕೆಲವೇ ದಿನಗಳಲ್ಲಿ ಮರುಪಾವತಿಯನ್ನು ಸ್ವೀಕರಿಸಲಾಗುತ್ತಿದೆ. ಇಂದು ʻಜಿಎಸ್‌ಟಿʼ ವ್ಯವಸ್ಥೆಯು ತೆರಿಗೆದಾರರ ಘನತೆಯನ್ನು ಖಾತರಿಪಡಿಸುವುದರ ಜೊತೆಗೆ ಪಾರದರ್ಶಕತೆಯನ್ನು ಒದಗಿಸಿದೆ.
12. ನಕಲಿ ಫಲಾನುಭವಿಗಳನ್ನು ನಿರ್ಮೂಲನೆ ಮಾಡುತ್ತಿರುವ ʻಜನ್‌ಧನ್-ಆಧಾರ್-ಮೊಬೈಲ್ʼ ತ್ರಿವಳಿ ವ್ಯವಸ್ಥೆಯಿಂದ (ಟ್ರಿನಿಟಿ) ಹಿಡಿದು ʻಒಂದು ದೇಶ, ಒಂದು ಪಡಿತರ ಕಾರ್ಡ್ʼ ಪ್ರಾರಂಭದವರೆಗೆ ನಾವು ಪ್ರಮುಖ ಸುಧಾರಣೆಗಳನ್ನು ಕೈಗೊಂಡಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ, ದೇಶವು ʻಫಲಾನುಭವಿಗಳಿಗೆ ನೇರ ವರ್ಗಾವಣೆʼ (ಡಿಬಿಟಿ) ಮತ್ತು ʻಡಿಜಿಟಲ್ ಇಂಡಿಯಾʼ ರೂಪದಲ್ಲಿ ಸ್ಥಿರ ಮತ್ತು ಪಾರದರ್ಶಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇಂದು 300ಕ್ಕೂ ಹೆಚ್ಚು ಯೋಜನೆಗಳ ವಿತ್ತೀಯ ಪ್ರಯೋಜನಗಳು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ತಲುಪುತ್ತಿವೆ. ಇಲ್ಲಿಯವರೆಗೆ, ಸಂಪೂರ್ಣ ಪಾರದರ್ಶಕತೆಯೊಂದಿಗೆ 27 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತವು ಕೋಟ್ಯಂತರ ಫಲಾನುಭವಿಗಳನ್ನು ತಲುಪಿದೆ. ಇಂತಹ ಯೋಜನೆಗಳು ಮತ್ತು ಕಾರ್ಯವಿಧಾನಗಳಿಂದಾಗಿಯೇ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕೋಟ್ಯಂತರ ಜನರು ಬಡತನ ರೇಖೆಗಿಂತ ಕೆಳಗಿಳಿಯದಂತೆ ತಡೆಯಲು ಭಾರತಕ್ಕೆ ಸಾಧ್ಯವಾಯಿತು ಎಂದು ʻವಿಶ್ವ ಬ್ಯಾಂಕ್ʼ ವರದಿ ಒಪ್ಪಿಕೊಂಡಿದೆ.
13. ಭ್ರಷ್ಟಾಚಾರವನ್ನು ನಿಗ್ರಹಿಸಿದಾಗ ಮತ್ತು ತೆರಿಗೆಯ ಪ್ರತಿ ಪೈಸೆಯನ್ನು ಉತ್ತಮವಾಗಿ ಬಳಸಿದಾಗ ಪ್ರತಿಯೊಬ್ಬ ತೆರಿಗೆದಾರನು ಹೆಮ್ಮೆಪಡುತ್ತಾನೆ.
ಗೌರವಾನ್ವಿತ ಸದಸ್ಯರೇ,
14. ಇಂದು ದೇಶದ ಪ್ರಾಮಾಣಿಕ ತೆರಿಗೆದಾರನು ಸರಕಾರಗಳು ವಾಮಮಾರ್ಗ ರಾಜಕೀಯದಿಂದ ದೂರವಿರಬೇಕೆಂದು ಬಯಸುತ್ತಾನೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರಗಳನ್ನು ಉತ್ತೇಜಿಸುವ ಮತ್ತು ಸಾಮಾನ್ಯ ಜನರನ್ನು ಸಬಲೀಕರಣಗೊಳಿಸುವ ಯೋಜನೆಗಳನ್ನು ಅವರು ಬಯಸುತ್ತಾರೆ. ಆದ್ದರಿಂದ, ಪ್ರಸ್ತುತ ಸವಾಲುಗಳನ್ನು ಎದುರಿಸುವಾಗ ನನ್ನ ಸರಕಾರವು ದೇಶವಾಸಿಗಳ ದೀರ್ಘಕಾಲೀನ ಸಬಲೀಕರಣಕ್ಕೆ ಒತ್ತು ನೀಡಿದೆ.
15. 'ಬಡತನ ನಿರ್ಮೂಲನೆ' ಈಗ ಕೇವಲ ಘೋಷಣೆಯಾಗಿ ಉಳಿದಿಲ್ಲ. ಈಗ ನನ್ನ ಸರಕಾರವು ಬಡವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.
16. ಉದಾಹರಣೆಗೆ, ಬಡತನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದೆಂದರೆ ಅನಾರೋಗ್ಯ. ಗಂಭೀರ ಕಾಯಿಲೆಯು ಬಡ ಕುಟುಂಬದ ನೈತಿಕ ಸ್ಥೈರ್ಯವನ್ನು ಸಂಪೂರ್ಣವಾಗಿ ಛಿದ್ರಗೊಳಿಸುತ್ತದೆ, ತಲೆಮಾರುಗಳನ್ನು ಸಾಲದ ಕೂಪಕ್ಕೆ ತಳ್ಳುತ್ತದೆ. ಬಡವರನ್ನು ಈ ಚಿಂತೆಯಿಂದ ಮುಕ್ತಗೊಳಿಸಲು, ರಾಷ್ಟ್ರ ವ್ಯಾಪಿ ʻಆಯುಷ್ಮಾನ್ ಭಾರತ್ʼ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿ, 50 ಕೋಟಿಗೂ ಹೆಚ್ಚು ದೇಶವಾಸಿಗಳಿಗೆ ಉಚಿತ ಚಿಕಿತ್ಸೆಯ ಸೌಲಭ್ಯವನ್ನು ಒದಗಿಸಲಾಗಿದೆ. ʻಆಯುಷ್ಮಾನ್ ಭಾರತ್ʼ ಯೋಜನೆಯು ಕೋಟ್ಯಂತರ ಬಡವರನ್ನು ಮತ್ತಷ್ಟು ಬಡವರಾಗದಂತೆ ಉಳಿಸಿದೆ, ಅವರು ಒಟ್ಟಾರೆಯಾಗಿ 80,000 ಕೋಟಿ ರೂ. ಖರ್ಚು ಮಾಡುವುದನ್ನು ತಡೆದಿದೆ. ಇಂದು ದೇಶಾದ್ಯಂತ ಹರಡಿರುವ ಸುಮಾರು 9,000 ಜನೌಷಧ ಕೇಂದ್ರಗಳಲ್ಲಿ ಔಷಧಗಳನ್ನು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಇದರ ಪರಿಣಾಮವಾಗಿ, ಕಳೆದ ಕೆಲವು ವರ್ಷಗಳಲ್ಲಿ ಬಡವರಿಗೆ ಸುಮಾರು 20,000 ಕೋಟಿ ರೂ.ಗಳ ಉಳಿತಾಯ ಮಾಡಲಾಗಿದೆ. ಅಂದರೆ, ʻಆಯುಷ್ಮಾನ್ ಭಾರತ್ʼ ಮತ್ತು ʻಜನೌಷಧʼ - ಈ ಎರಡು ಯೋಜನೆಗಳಿಂದಲೇ ದೇಶವಾಸಿಗಳು ಒಂದು ಲಕ್ಷ ಕೋಟಿ ರೂ.ನಷ್ಟು ನೆರವು ಪಡೆದಿದ್ದಾರೆ.
17. ನಾಗರಿಕರ ಜೀವನದಲ್ಲಿ ಅತ್ಯಂತ ಪ್ರಮುಖ ಸಂಪನ್ಮೂಲವಾದ ನೀರಿನ ಉದಾಹರಣೆಯನ್ನು ನಿಮ್ಮೆಲ್ಲರ ಮುಂದಿಡಲು ನಾನು ಬಯಸುತ್ತೇನೆ. ಪ್ರತಿ ಮನೆಗೆ ನೀರು ('ಹರ್ ಘರ್ ಜಲ್)' ಒದಗಿಸಲು, ನನ್ನ ಸರಕಾರ 'ಜಲ ಜೀವನ್ ಮಿಷನ್' ಅನ್ನು ಪ್ರಾರಂಭಿಸಿದೆ. ಯೋಜನೆ ಪ್ರಾರಂಭವಾಗುವ ಏಳು ದಶಕಗಳ ಮೊದಲು, ದೇಶದಲ್ಲಿ ಸುಮಾರು 3.25 ಕೋಟಿ ಮನೆಗಳಿಗೆ ಮಾತ್ರ ನೀರಿನ ಸಂಪರ್ಕಗಳು ಲಭ್ಯವಿದ್ದವು. ಆದಾಗ್ಯೂ, ಈ ಮೂರು ವರ್ಷಗಳಲ್ಲಿ, ಸುಮಾರು 11 ಕೋಟಿ ಕುಟುಂಬಗಳಿಗೆ ʻಜಲ ಜೀವನ್ ಮಿಷನ್ʼ ಅಡಿಯಲ್ಲಿ ಕೊಳವೆ ಮೂಲಕ ನೀರು ಸರಬರಾಜು ಮಾಡಲಾಗಿದೆ. ಬಡ ಕುಟುಂಬಗಳು ಈ ಯೋಜನೆಯಿಂದ ಹೆಚ್ಚು ಪ್ರಯೋಜನ ಪಡೆಯುತ್ತಿವೆ ಮತ್ತು ಇದು ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸುತ್ತಿದೆ.
18. ಕಳೆದ ಕೆಲವು ವರ್ಷಗಳಲ್ಲಿ, ಸರಕಾರವು ಮೂರೂವರೆ ಕೋಟಿಗೂ ಹೆಚ್ಚು ಬಡ ಕುಟುಂಬಗಳಿಗೆ ಪಕ್ಕಾ ಮನೆಗಳನ್ನು ಒದಗಿಸಿದೆ. ಮನೆಯೊಂದಿಗೆ ಜನರಿಗೆ ಹೊಸ ಆತ್ಮವಿಶ್ವಾಸ ಬರುತ್ತದೆ. ಇದು ಕುಟುಂಬದ ಪ್ರಸ್ತುತ ಸ್ಥಿತಿಯನ್ನು ಸುಧಾರಿಸುವುದಲ್ಲದೆ, ಆ ಮನೆಯಲ್ಲಿ ಬೆಳೆಯುವ ಮಗುವಿನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಶೌಚಾಲಯ, ವಿದ್ಯುತ್, ನೀರು, ಅಡುಗೆ ಅನಿಲ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಬಡವರನ್ನು ಅವರ ಚಿಂತೆಗಳಿಂದ ಮುಕ್ತಗೊಳಿಸಲು ಸರಕಾರ ಪ್ರಯತ್ನಿಸಿದೆ. ಇದರ ಪರಿಣಾಮವಾಗಿ, ಸರಕಾರದ ಯೋಜನೆಗಳು ಮತ್ತು ಪ್ರಯೋಜನಗಳು ನಿಜವಾಗಿಯೂ ಅಗತ್ಯವಿರುವವರಿಗೆ ತಲುಪುತ್ತವೆ ಮತ್ತು ಭಾರತದಂತಹ ವಿಶಾಲ ದೇಶದಲ್ಲಿಯೂ ಸಹ 100 ಪ್ರತಿಶತ ವ್ಯಾಪ್ತಿ ಅಥವಾ ಪರಿಪೂರ್ಣತೆ ಸಾಧ್ಯ ಎಂದು ದೇಶದ ಜನರಲ್ಲಿ ವಿಶ್ವಾಸ ಮೂಡಿದೆ.
19. ಇದನ್ನು ನಮ್ಮ ಧರ್ಮಗ್ರಂಥಗಳಲ್ಲಿ ಬರೆಯಲಾಗಿದೆ-
`ಆಯಂ ನಿಜಃ ಪರೋವೆತಿ ಜ್ಞಾನ ಲಘುಚೇತಸಂʼ
ಇದರರ್ಥ ʻಇದು ನನ್ನದು ಮತ್ತು ಅದು ನಿಮ್ಮದು ಎಂಬ ಮನೋಭಾವವು ಸರಿಯಲ್ಲʼ. ಕಳೆದ 9 ವರ್ಷಗಳಲ್ಲಿ, ನನ್ನ ಸರಕಾರವು ಯಾವುದೇ ತಾರತಮ್ಯವಿಲ್ಲದೆ ಎಲ್ಲಾ ವರ್ಗದ ನಾಗರಿಕರಿಗಾಗಿ ಕೆಲಸ ಮಾಡಿದೆ. ಕಳೆದ ಕೆಲವು ವರ್ಷಗಳಲ್ಲಿ ನನ್ನ ಸರಕಾರದ ಪ್ರಯತ್ನಗಳ ಪರಿಣಾಮವಾಗಿ, ಅನೇಕ ಮೂಲಭೂತ ಸೌಲಭ್ಯಗಳು ಜನಸಂಖ್ಯೆಯ ನೂರು ಪ್ರತಿಶತವನ್ನು ತಲುಪಿವೆ ಅಥವಾ ಆ ಗುರಿಗೆ ಬಹಳ ಹತ್ತಿರದಲ್ಲಿವೆ.
20. ನನ್ನ ಸರಕಾರವು ಎಲ್ಲಾ ಯೋಜನೆಗಳ ಗರಿಷ್ಠ ಪ್ರಯೋಜನಕ್ಕೆ ಮತ್ತು ಅಂತ್ಯೋದಯಕ್ಕೆ ಸಂಪೂರ್ಣವಾಗಿ ಬದ್ಧವಾಗಿದೆ. ಎಲ್ಲಾ ಅರ್ಹ ಫಲಾನುಭವಿಗಳು ಸರಕಾರದ ಯೋಜನೆಗಳ ಪ್ರಯೋಜನಗಳನ್ನು ಪಡೆಯಬೇಕು ಮತ್ತು ಯಾರೂ ಅದರಿಂದ ವಂಚಿತರಾಗಬಾರದು ಎಂಬುದು ನಮ್ಮ ಪ್ರಯತ್ನವಾಗಿದೆ.
ಗೌರವಾನ್ವಿತ ಸದಸ್ಯರೇ,
21. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ, ನಾವು ಪ್ರಪಂಚದಾದ್ಯಂತದ ಬಡವರ ತೊಂದರೆಗಳನ್ನು ನೋಡಿದ್ದೇವೆ. ಆದರೆ ಬಡವರ ಜೀವ ಉಳಿಸಲು ಮತ್ತು ಬಡವರು ಆಹಾರದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಹೆಚ್ಚಿನ ಆದ್ಯತೆ ನೀಡಿದ ದೇಶಗಳಲ್ಲಿ ಭಾರತವೂ ಒಂದಾಗಿದೆ. ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಅನುಗುಣವಾಗಿ ʻಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆʼಯನ್ನು ಜಾರಿಗೆ ತರಲು ನನ್ನ ಸರಕಾರ ನಿರ್ಧರಿಸಿರುವುದು ನನಗೆ ಸಂತೋಷವಾಗಿದೆ. ಇದು ಸೂಕ್ಷ್ಮ ಮತ್ತು ಬಡವರ ಪರ ಸರಕಾರದ ಹೆಗ್ಗುರುತಾಗಿದೆ. ʻಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆʼ ಅಡಿಯಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯಗಳಿಗಾಗಿ ಸರಕಾರ ಸುಮಾರು 3.5 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಇಂದು ಈ ಯೋಜನೆಯನ್ನು ಪ್ರಪಂಚದಾದ್ಯಂತ ಶ್ಲಾಘಿಸಲಾಗುತ್ತಿದೆ. ತಂತ್ರಜ್ಞಾನದ ಸಹಾಯದಿಂದ ನಿರ್ಮಿಸಲಾದ ಪಾರದರ್ಶಕ ಕಾರ್ಯವಿಧಾನವು ಪ್ರತಿಯೊಬ್ಬ ಫಲಾನುಭವಿಗೆ ಆಹಾರ ಧಾನ್ಯಗಳ ಸಂಪೂರ್ಣ ವಿತರಣೆಯನ್ನು ಖಚಿತಪಡಿಸಿದೆ ಎಂಬುದು ಈ ಮೆಚ್ಚುಗೆಗೆ ಕಾರಣವಾಗಿದೆ.
ಗೌರವಾನ್ವಿತ ಸದಸ್ಯರೇ,
22. ದೇಶದ ನಾನಾ ವರ್ಗಗಳು ಹಾಗೂ ಪ್ರದೇಶಗಳ ಆಶಯಗಳು ಮತ್ತು ಆಕಾಂಕ್ಷೆಗಳಿಗೆ ಸೂಕ್ತ ಗಮನ ನೀಡುವ ಮೂಲಕ ಮಾತ್ರ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನವನ್ನು ಸಾಧಿಸಬಹುದು. ಈಗ ನನ್ನ ಸರಕಾರವು ಅಂತಹ ಪ್ರತಿಯೊಂದು ವಂಚಿತ ವರ್ಗ ಮತ್ತು ವಂಚಿತ ಪ್ರದೇಶಕ್ಕೆ ಆದ್ಯತೆ ನೀಡುತ್ತಿದೆ.
23. ಶತಮಾನಗಳಿಂದ ಅವಕಾಶ ವಂಚಿತವಾಗಿದ್ದ ಸಮಾಜದ ಪ್ರತಿಯೊಂದು ವರ್ಗದ ಆಶಯಗಳನ್ನು ನನ್ನ ಸರಕಾರ ಈಡೇರಿಸಿದೆ. ನಾವು ಬಡವರು, ದಲಿತರು, ಹಿಂದುಳಿದವರು ಮತ್ತು ಬುಡಕಟ್ಟು ಸಮುದಾಯಗಳ ಆಶಯಗಳನ್ನು ಈಡೇರಿಸಿದ್ದೇವೆ ಮತ್ತು ಅವರಿಗೆ ಕನಸು ಕಾಣುವ ಧೈರ್ಯವನ್ನು ನೀಡಿದ್ದೇವೆ. ಯಾವ ಕೆಲಸವೂ ಸಣ್ಣದಲ್ಲ, ಯಾವುದೇ ಪ್ರಯತ್ನವು ಚಿಕ್ಕದಲ್ಲ. ಅಭಿವೃದ್ಧಿಯ ಪಥದಲ್ಲಿ ಪ್ರತಿಯೊಂದೂ ತನ್ನದೇ ಆದ ಪಾತ್ರವನ್ನು ಹೊಂದಿದೆ. ಈ ಆಶಯದೊಂದಿಗೆ, ವಂಚಿತ ವರ್ಗಗಳು ಮತ್ತು ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ.
24. ಹೆಚ್ಚಿನ ಸಂಖ್ಯೆಯ ನಮ್ಮ ಸಣ್ಣ ಉದ್ಯಮಿಗಳು ಫುಟ್‌ಪಾಥ್‌ಗಳಲ್ಲಿ, ತಳ್ಳುವ ಗಾಡಿಗಳಲ್ಲಿ ಮತ್ತು ಬೀದಿ ಬದಿ ಮಾರಾಟದ ಮೂಲಕ ತಮ್ಮ ವ್ಯಾಪಾರ-ವ್ಯವಹಾರ ಚಟುವಟಿಕೆಗಳನ್ನು ನಡೆಸುತ್ತಾರೆ. ಅಭಿವೃದ್ಧಿಯಲ್ಲಿ ಈ ಪಾಲುದಾರರ ಪಾತ್ರವನ್ನು ನನ್ನ ಸರಕಾರ ಶ್ಲಾಘಿಸಿದೆ. ಆದ್ದರಿಂದ, ಅವರನ್ನು ಮೊದಲ ಬಾರಿಗೆ ಔಪಚಾರಿಕ ಬ್ಯಾಂಕಿಂಗ್‌ಗೆ ಸಂಪರ್ಕಿಸಲಾಗಿದೆ. ʻಪಿಎಂ ಸ್ವನಿಧಿʼ ಯೋಜನೆಯ ಮೂಲಕ ಅವರಿಗೆ ಕೈಗೆಟುಕುವ ಮತ್ತು ಅಡಮಾನರಹಿತ ಸಾಲಗಳನ್ನು ಲಭ್ಯವಾಗುವಂತೆ ಮಾಡಲಾಗಿದೆ. ಈ ಯೋಜನೆಯಡಿ ಬೀದಿ ಬದಿ ವ್ಯಾಪಾರಿಗಳಿಗೆ ಡಿಜಿಟಲ್ ವಹಿವಾಟು ನಡೆಸಲು ಪ್ರೋತ್ಸಾಹಧನ ನೀಡಲಾಗುತ್ತಿದೆ. ಇಲ್ಲಿಯವರೆಗೆ, ಸುಮಾರು 40 ಲಕ್ಷ ಮಾರಾಟಗಾರ ಪಾಲುದಾರರಿಗೆ ಈ ಯೋಜನೆಯಡಿ ಸಾಲ ನೀಡಲಾಗಿದೆ.
25. ದೇಶದ 11 ಕೋಟಿ ಸಣ್ಣ ರೈತರು ಕೂಡ ನನ್ನ ಸರಕಾರದ ಆದ್ಯತೆಯ ಪಟ್ಟಿಯಲ್ಲಿದ್ದಾರೆ. ಈ ಸಣ್ಣ ರೈತರು ದಶಕಗಳ ಕಾಲದಿಂದಲೂ ಸರಕಾರದ ಆದ್ಯತೆಯಿಂದ ವಂಚಿತರಾಗಿದ್ದರು. ಈಗ ಅವರನ್ನು ಸಶಕ್ತ ಮತ್ತು ಸಮೃದ್ಧರನ್ನಾಗಿ ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ಸಣ್ಣ ರೈತರಿಗೆ ʻಪಿಎಂ ಕಿಸಾನ್ ಸಮ್ಮಾನ್ ನಿಧಿʼಯಡಿ 2.25 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಆರ್ಥಿಕ ನೆರವು ನೀಡಲಾಗಿದೆ. ಇದರ ಒಂದು ಪ್ರಮುಖ ಅಂಶವೆಂದರೆ ಈ ಫಲಾನುಭವಿಗಳಲ್ಲಿ ಸುಮಾರು ಮೂರು ಕೋಟಿ ಮಹಿಳೆಯರಿದ್ದಾರೆ. ಇಲ್ಲಿಯವರೆಗೆ, ಮಹಿಳಾ ರೈತರು ಈ ಯೋಜನೆಯಡಿ ಸುಮಾರು 54,000 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಅಂತೆಯೇ, ಸಣ್ಣ ರೈತರಿಗೆ ಬೆಳೆ ವಿಮೆ, ʻಮಣ್ಣಿನ ಆರೋಗ್ಯ ಕಾರ್ಡ್ʼ ಮತ್ತು ʻಕಿಸಾನ್ ಕ್ರೆಡಿಟ್ ಕಾರ್ಡ್ʼ (ಕೆಸಿಸಿ) ವ್ಯಾಪ್ತಿಯನ್ನು ಹೆಚ್ಚಿಸಲಾಗಿದೆ. ನನ್ನ ಸರಕಾರವು ಮೊದಲ ಬಾರಿಗೆ ಜಾನುವಾರು ಸಾಗಿಸುವವರು ಮತ್ತು ಮೀನುಗಾರರಿಗೂ ʻಕಿಸಾನ್ ಕ್ರೆಡಿಟ್ ಕಾರ್ಡ್ʼ ಸೌಲಭ್ಯವನ್ನು ವಿಸ್ತರಿಸಿದೆ. ʻಎಫ್‌ಪಿಒʼಗಳನ್ನು ಅಂದರೆ, ʻರೈತ ಉತ್ಪಾದಕ ಸಂಸ್ಥೆʼಗಳನ್ನು ಸ್ಥಾಪಿಸುವುದರಿಂದ ಹಿಡಿದು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವವರೆಗೆ ಸಣ್ಣ ರೈತರ ಸಾಮರ್ಥ್ಯವನ್ನು ಹೆಚ್ಚಿಸಲು ನನ್ನ ಸರಕಾರ ಸಾಕಷ್ಟು ಬೆಂಬಲ ಒದಗಿಸಿದೆ.
ಗೌರವಾನ್ವಿತ ಸದಸ್ಯರೇ,
26. ನನ್ನ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಆಶೋತ್ತರಗಳನ್ನು ಜಾಗೃತಗೊಳಿಸಿದೆ. ಈ ವರ್ಗಗಳು ಅಭಿವೃದ್ಧಿಯ ಪ್ರಯೋಜನಗಳಿಂದ ಹೆಚ್ಚು ವಂಚಿತವಾಗಿದ್ದವು. ಈಗ ಮೂಲಭೂತ ಸೌಲಭ್ಯಗಳು ಈ ವರ್ಗವನ್ನು ತಲುಪುತ್ತಿರುವುದರಿಂದ, ಈ ಜನರು ಹೊಸ ಕನಸುಗಳನ್ನು ಹೊಂದಲು ಸಮರ್ಥರಾಗುತ್ತಿದ್ದಾರೆ. ಪರಿಶಿಷ್ಟ ಜಾತಿಗಳ ಸಾಮಾಜಿಕ-ಆರ್ಥಿಕ ಸಬಲೀಕರಣಕ್ಕಾಗಿ ʻಡಾ.ಅಂಬೇಡ್ಕರ್ ಉತ್ಸವ ಧಾಮʼ, ʻಅಮೃತ ಜಲಧಾರʼ ಮತ್ತು ʻಯುವ ಉದ್ಯೋಗಿ ಯೋಜನೆʼಯಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಬುಡಕಟ್ಟು ಸಮುದಾಯಗಲ್ಲಿ ಹೆಮ್ಮೆಯ ಭಾವ ಮೂಡಿಸಲು ನನ್ನ ಸರಕಾರ ಅಭೂತಪೂರ್ವ ನಿರ್ಧಾರಗಳನ್ನು ತೆಗೆದುಕೊಂಡಿದೆ. ದೇಶವು ಮೊದಲ ಬಾರಿಗೆ ʻಭಗವಾನ್ ಬಿರ್ಸಾ ಮುಂಡಾʼ ಅವರ ಜನ್ಮದಿನವನ್ನು 'ಜನಜಾತಿಯ ಗೌರವ್ ದಿವಾಸ್' ಎಂದು ಆಚರಿಸಲು ಪ್ರಾರಂಭಿಸಿತು. ಇತ್ತೀಚೆಗೆ, ಸರಕಾರವು ಮೊದಲ ಬಾರಿಗೆ ಮಂಗರ್ ಧಾಮ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ಬುಡಕಟ್ಟು ಕ್ರಾಂತಿಕಾರಿಗಳಿಗೆ ಗೌರವ ಸಲ್ಲಿಸಿತು. ಇಂದು, ʻಪ್ರಧಾನ ಮಂತ್ರಿ ಆದಿ ಆದರ್ಶ ಗ್ರಾಮʼ ಯೋಜನೆ ಅಡಿಯಲ್ಲಿ 36,000ಕ್ಕೂ ಹೆಚ್ಚು ಬುಡಕಟ್ಟು ಪ್ರಾಬಲ್ಯದ ಗ್ರಾಮಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇಂದು ದೇಶದ ಬುಡಕಟ್ಟು ಪ್ರದೇಶಗಳಲ್ಲಿ 400ಕ್ಕೂ ಹೆಚ್ಚು ʻಏಕಲವ್ಯ ಮಾದರಿ ಶಾಲೆʼಗಳನ್ನು ತೆರೆಯಲಾಗಿದೆ. ದೇಶಾದ್ಯಂತ 3,000ಕ್ಕೂ ಹೆಚ್ಚು ʻವನ್ ಧನ್ ವಿಕಾಸ್ ಕೇಂದ್ರʼಗಳು ಜೀವನೋಪಾಯದ ಹೊಸ ಸಾಧನಗಳಾಗಿವೆ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡುವ ಮೂಲಕ ನನ್ನ ಸರಕಾರ ʻಒಬಿಸಿʼಗಳ ಕಲ್ಯಾಣಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಇದೇ ಮೊದಲ ಬಾರಿಗೆ ಬಂಜಾರ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗಾಗಿ ಕಲ್ಯಾಣ ಮತ್ತು ಅಭಿವೃದ್ಧಿ ಮಂಡಳಿಯನ್ನು ರಚಿಸಲಾಗಿದೆ.
ಗೌರವಾನ್ವಿತ ಸದಸ್ಯರೇ,
27. ದೇಶದಲ್ಲಿ 100ಕ್ಕೂ ಹೆಚ್ಚು ಜಿಲ್ಲೆಗಳು ಅಭಿವೃದ್ಧಿಯ ಹಲವು ಮಾನದಂಡಗಳಲ್ಲಿ ಹಿಂದುಳಿದಿವೆ. ಈ ಜಿಲ್ಲೆಗಳನ್ನು ʻಮಹತ್ವಾಕಾಂಕ್ಷೆಯ ಜಿಲ್ಲೆಗಳುʼ ಎಂದು ಘೋಷಿಸುವ ಮೂಲಕ ಸರಕಾರವು ಅವುಗಳ ಅಭಿವೃದ್ಧಿಯತ್ತ ಗಮನ ಹರಿಸಿದೆ. ಇಂದು ಈ ಜಿಲ್ಲೆಗಳು ದೇಶದ ಇತರ ಜಿಲ್ಲೆಗಳೊಂದಿಗೆ ಸಮಾನವಾಗುವತ್ತ ಸಾಗುತ್ತಿವೆ. ನನ್ನ ಸರಕಾರ ಈಗ ʻಮಹತ್ವಾಕಾಂಕ್ಷೆಯ ಜಿಲ್ಲೆʼಗಳ ಯಶಸ್ಸನ್ನು ಬ್ಲಾಕ್ ಮಟ್ಟದಲ್ಲಿ ಪುನರಾವರ್ತಿಸಲು ಕೆಲಸ ಮಾಡುತ್ತಿದೆ ಮತ್ತು ಇದಕ್ಕಾಗಿ, ದೇಶದಲ್ಲಿ 500 ಬ್ಲಾಕ್‌ಗಳನ್ನು ʻಮಹತ್ವಾಕಾಂಕ್ಷೆಯ ಬ್ಲಾಕ್ʼಗಳಾಗಿ ಅಭಿವೃದ್ಧಿಪಡಿಸುವ ಕೆಲಸವನ್ನು ಪ್ರಾರಂಭಿಸಲಾಗಿದೆ. ಈ ʻಮಹತ್ವಾಕಾಂಕ್ಷೆಯ ಬ್ಲಾಕ್ʼಗಳನ್ನು ಸಾಮಾಜಿಕ ನ್ಯಾಯಕ್ಕಾಗಿ ಸಾಂಸ್ಥಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.
28. ದೇಶದ ಬುಡಕಟ್ಟು, ಗುಡ್ಡಗಾಡು, ಕರಾವಳಿ ಮತ್ತು ಗಡಿ ಪ್ರದೇಶಗಳು ಕಳೆದ ಕೆಲವು ದಶಕಗಳಲ್ಲಿ ಅಭಿವೃದ್ಧಿಯ ಸೀಮಿತ ಪ್ರಯೋಜನಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿತ್ತು. ದುರ್ಗಮ ಭೂಪ್ರದೇಶದ ಜೊತೆಗೆ ಅಶಾಂತಿ ಮತ್ತು ಭಯೋತ್ಪಾದನೆ ಈಶಾನ್ಯ ಭಾಗ ಹಾಗೂ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಪ್ರಮುಖ ಸವಾಲಾಗಿದ್ದವು. ಶಾಶ್ವತ ಶಾಂತಿಗಾಗಿ ನನ್ನ ಸರಕಾರ ಹಲವಾರು ಯಶಸ್ವಿ ಕ್ರಮಗಳನ್ನು ಕೈಗೊಂಡಿದೆ ಮತ್ತು ಭೌಗೋಳಿಕ ಸವಾಲುಗಳನ್ನು ಎದುರಿಸಿದೆ. ಇದರ ಪರಿಣಾಮವಾಗಿ, ಈಶಾನ್ಯ ಮತ್ತು ನಮ್ಮ ಗಡಿ ಪ್ರದೇಶಗಳು ಅಭಿವೃದ್ಧಿಯ ಹೊಸ ವೇಗಕ್ಕೆ ಸಾಕ್ಷಿಯಾಗುತ್ತಿವೆ.
29. ಗಡಿ ಗ್ರಾಮಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸಲು ನನ್ನ ಸರಕಾರ ʻವೈಬ್ರೆಂಟ್ ವಿಲೇಜ್ʼ ಕಾರ್ಯಕ್ರಮ ಪ್ರಾರಂಭಿಸಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದಲೂ, ಕಳೆದ ಕೆಲವು ವರ್ಷಗಳಲ್ಲಿ ಗಡಿ ಪ್ರದೇಶಗಳಲ್ಲಿ ಅಭೂತಪೂರ್ವ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಯೋಜನೆಯು ಅಂತಹ ಪ್ರದೇಶಗಳಲ್ಲಿ ಅಭಿವೃದ್ಧಿಯನ್ನು ವೇಗಗೊಳಿಸಿದೆ. ಕಳೆದ ಕೆಲವು ದಶಕಗಳಲ್ಲಿ ರಾಷ್ಟ್ರೀಯ ಭದ್ರತೆಗೆ ಪ್ರಮುಖ ಬೆದರಿಕೆಯಾಗಿ ಮಾರ್ಪಟ್ಟಿದ್ದ ಎಡಪಂಥೀಯ ಉಗ್ರವಾದವು ಈಗ ಕೆಲವೇ ಜಿಲ್ಲೆಗಳಿಗೆ ಸೀಮಿತವಾಗಿದೆ.
ಗೌರವಾನ್ವಿತ ಸದಸ್ಯರೇ,
30. ನನ್ನ ಸರಕಾರದ ಪ್ರಮುಖ ಸಾಧನೆಗಳಲ್ಲಿ ಮಹಿಳಾ ಸಬಲೀಕರಣವೂ ಒಂದಾಗಿದೆ. ಈ ಸಂದರ್ಭದಲ್ಲಿ, ಭಾರತೀಯ ಸಾಹಿತ್ಯದ ಅಮರ ಜೀವಿ, ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಪ್ರಸಿದ್ಧ ಒಡಿಯಾ ಕವಯತ್ರಿ ಕುಂತಲಾ ಕುಮಾರಿ ಸಾಬತ್ ಅವರು ಬರೆದ 'ನಾರಿ-ಶಕ್ತಿ' ಎಂಬ ಸ್ಫೂರ್ತಿದಾಯಕ ಕವಿತೆ ನನಗೆ ನೆನಪಾಗುತ್ತದೆ. ಸುಮಾರು ನೂರು ವರ್ಷಗಳ ಹಿಂದೆ ಅವರು ಹೀಗೆ ಹೇಳಿದ್ದರು:
ʻʻಬಸುಂಧರಾ-ತಲೇ ಭಾರತ್-ರಮಣಿ ನುಹೆ ಹೀನ್ ನುಹೆ ದೀನ್
ಅಮರ್ ಕೀರ್ತಿ ಕೋಟಿ ಯುಗೆ ಕೆಭೇನ್ ಜಗ್ತುನ್ ನೊಹಿಬ್ ಲೀನ್ʼʼ.
ಇದನ್ನು ಮತ್ತೊಂದು ರೀತಿಯಲ್ಲಿ ಹೇಳುವುದಾದರೆ:
“ಭಾರತದ ಮಹಿಳೆ ಬೇರೆಯವರಿಗಿಂತ ಕೀಳಲ್ಲ ಅಥವಾ ದುರ್ಬಲಳೂ ಅಲ್ಲ. ಅವಳ ಅಮರ ವೈಭವವು ಯುಗಗಳವರೆಗೆ ಎಂದಿಗೂ ಕಣ್ಮರೆಯಾಗುವುದಿಲ್ಲ ಮತ್ತು ಇಡೀ ಜಗತ್ತಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ”.
31. ʻಉತ್ಕಲ ಭಾರತಿʼಯ ಕನಸಿನಂತೆ ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ವಿಶ್ವ ಮಟ್ಟದಲ್ಲಿ ಕೀರ್ತಿ ತರುತ್ತಿರುವುದನ್ನು ನೋಡಲು ನನಗೆ ಹೆಮ್ಮೆ ಎನಿಸುತ್ತದೆ. ನನ್ನ ಸರಕಾರದ ಪ್ರಯತ್ನಗಳು ಅಂತಹ ಪ್ರಗತಿಯ ಹಿಂದಿನ ಪ್ರೇರಕ ಶಕ್ತಿಯಾಗಿರುವುದು ನನಗೆ ಸಂತಸ ತಂದಿದೆ.
32. ನನ್ನ ಸರಕಾರ ಪ್ರಾರಂಭಿಸಿದ ಎಲ್ಲಾ ಕಲ್ಯಾಣ ಯೋಜನೆಗಳು ಮಹಿಳೆಯರ ಜೀವನವನ್ನು ಸುಲಭಗೊಳಿಸುವುದು, ಮಹಿಳೆಯರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಹೊಸ ಅವಕಾಶಗಳನ್ನು ಒದಗಿಸುವುದು ಮತ್ತು ಮಹಿಳಾ ಸಬಲೀಕರಣವನ್ನು ಖಚಿತಪಡಿಸುವ ದೃಷ್ಟಿಕೋನವನ್ನು ಹೊಂದಿವೆ. ಮಹಿಳೆಯರ ಉನ್ನತಿಗಾಗಿ, ಹಳೆಯ ನಂಬಿಕೆಗಳು ಮತ್ತು ಹಳೆಯ ಸಂಪ್ರದಾಯಗಳನ್ನು ಮುರಿಯಲೂ ಸರಕಾರ ಹಿಂಜರಿದಿಲ್ಲ.
33. 'ಬೇಟಿ ಬಚಾವೋ, ಬೇಟಿ ಪಡಾವೋ' ಅಭಿಯಾನದ ಯಶಸ್ಸನ್ನು ನಾವು ನೋಡಿದ್ದೇವೆ. ಸರಕಾರದ ಪ್ರಯತ್ನದಿಂದಾಗಿ ಸಮಾಜದಲ್ಲಿ ಮೂಡಿದ ಜಾಗೃತಿಯು ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಸ್ಥಿರ ಹೆಚ್ಚಳಕ್ಕೆ ಕಾರಣವಾಗಿದೆ. ದೇಶದಲ್ಲಿ ಮೊದಲ ಬಾರಿಗೆ, ಮಹಿಳಾ ಜನಸಂಖ್ಯೆ ಈಗ ಪುರುಷರಿಗಿಂತ ಹೆಚ್ಚಾಗಿದೆ ಮತ್ತು ಮಹಿಳೆಯರ ಆರೋಗ್ಯವೂ ಗಣನೀಯವಾಗಿ ಸುಧಾರಿಸಿದೆ. ಅದು ʻಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನʼವಾಗಲಿ ಅಥವಾ ʻಪ್ರಧಾನ ಮಂತ್ರಿ ಮಾತೃವಂದನಾ ಯೋಜನೆʼಯಾಗಲಿ, ತಾಯಿ ಮತ್ತು ಮಗುವಿನ ಜೀವವನ್ನು ಉಳಿಸುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ʻಆಯುಷ್ಮಾನ್ ಭಾರತ್ʼ ಯೋಜನೆಯ ಫಲಾನುಭವಿಗಳಲ್ಲಿ ಸುಮಾರು 50 ಪ್ರತಿಶತದಷ್ಟು ಮಹಿಳೆಯರೇ ಆಗಿದ್ದಾರೆ.
ಗೌರವಾನ್ವಿತ ಸದಸ್ಯರೇ,
34. ಶಿಕ್ಷಣದಿಂದ ಅವರ ವೃತ್ತಿಜೀವನದವರೆಗೆ, ಹೆಣ್ಣುಮಕ್ಕಳ ಹಾದಿಯಲ್ಲಿದ್ದ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಲು ನನ್ನ ಸರಕಾರವು ಪ್ರಯತ್ನಿಸುತ್ತಿದೆ. ದೇಶದ ಸರಕಾರಿ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯಗಳ ನಿರ್ಮಾಣ ಅಥವಾ ಸ್ಯಾನಿಟರಿ ಪ್ಯಾಡ್‌ಗಳ ವಿತರಣೆಗೆ ಸಂಬಂಧಿಸಿದ ಯೋಜನೆಯಂತಹ ಪ್ರಯತ್ನಗಳ ಮೂಲಕ, ಬಾಲಕಿಯರ ಶಾಲೆ ಬಿಡುವ ಪ್ರಮಾಣವು ತೀವ್ರವಾಗಿ ಕಡಿಮೆಯಾಗಿದೆ. ʻಸ್ವಚ್ಛ ಭಾರತ ಅಭಿಯಾನʼವು ಮಹಿಳೆಯರ ಘನತೆಯನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ, ಅವರಿಗೆ ಸುರಕ್ಷಿತ ವಾತಾವರಣವನ್ನು ಒದಗಿಸಿದೆ. ʻಸುಕನ್ಯಾ ಸಮೃದ್ಧಿ ಯೋಜನೆʼ ಅಡಿಯಲ್ಲಿ ದೇಶಾದ್ಯಂತ ಕೋಟ್ಯಂತರ ಹೆಣ್ಣುಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಇದೇ ಮೊದಲ ಬಾರಿಗೆ ಉಳಿತಾಯ ಖಾತೆಗಳನ್ನು ತೆರೆಯಲಾಗಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಅನೇಕ ಪ್ರಮುಖ ಉಪಕ್ರಮಗಳನ್ನು ಕೈಗೊಕೊಳ್ಳಲಾಗಿದೆ.
35. ಮಹಿಳೆಯರನ್ನು ಯಾವುದೇ ಕೆಲಸವನ್ನು ಮಾಡದಂತೆ ನಿರ್ಬಂಧಿಸದಂತೆ ಅಥವಾ ಯಾವುದೇ ಕ್ಷೇತ್ರದಲ್ಲಿ ಅವರ ಭಾಗವಹಿಸುವಿಕೆಯನ್ನು ನಿರ್ಬಂಧಿಸದಂತೆ ನನ್ನ ಸರಕಾರ ಖಚಿತಪಡಿಸಿದೆ. ಈ ಉದ್ದೇಶಕ್ಕಾಗಿ, ಗಣಿಗಾರಿಕೆಯಿಂದ ಹಿಡಿದು ಸೈನ್ಯದ ಮುಂಚೂಣಿ ಹುದ್ದೆಗಳವರೆಗೆ ಪ್ರತಿಯೊಂದು ಕ್ಷೇತ್ರದಲ್ಲೂ ನೇಮಕಾತಿಯನ್ನು ಮಹಿಳೆಯರಿಗೆ ಮುಕ್ತಗೊಳಿಸಲಾಗಿದೆ. ನಮ್ಮ ಹೆಣ್ಣುಮಕ್ಕಳು ಈಗ ಸೈನಿಕ ಶಾಲೆಗಳಲ್ಲಿ ಮತ್ತು ಮಿಲಿಟರಿ ಅಕಾಡೆಮಿಗಳಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಮತ್ತು ತರಬೇತಿ ಪಡೆಯುತ್ತಿದ್ದಾರೆ. ನನ್ನ ಸರಕಾರ ಹೆರಿಗೆ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಿದೆ.
36. ʻಮುದ್ರಾ ಯೋಜನೆʼಯ ಫಲಾನುಭವಿಗಳಲ್ಲಿ ಸುಮಾರು 70 ಪ್ರತಿಶತದಷ್ಟು ಮಹಿಳಾ ಉದ್ಯಮಿಗಳೇ ಇದ್ದಾರೆ. ಈ ಯೋಜನೆಯು ಮಹಿಳೆಯರ ಆರ್ಥಿಕ ಶಕ್ತಿ ಮತ್ತು ಸಾಮಾಜಿಕ ನಿರ್ಧಾರಗಳಲ್ಲಿ ಅವರ ಭಾಗವಹಿಸುವಿಕೆಯನ್ನು ಹೆಚ್ಚಿಸಿದೆ ಎಂದು ಅಧ್ಯಯನವು ಸೂಚಿಸುತ್ತದೆ. ʻಪ್ರಧಾನ ಮಂತ್ರಿ ಆವಾಸ್ ಯೋಜನೆʼ ಅಡಿಯಲ್ಲಿ ಹಂಚಿಕೆಯಾದ ಮನೆಗಳನ್ನು ಅವರ ಹೆಸರಿನಲ್ಲಿ ನೋಂದಾಯಿಸಿದ ನಂತರ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಾಗಿದೆ. ʻಜನ್ ಧನ್ ಯೋಜನೆʼ ದೇಶದಲ್ಲಿ ಮೊದಲ ಬಾರಿಗೆ ಬ್ಯಾಂಕಿಂಗ್ ಸೇವೆಗಳ ಲಭ್ಯತೆಯಲ್ಲಿ ಮಹಿಳೆಯರು ಮತ್ತು ಪುರುಷರ ನಡುವೆ ಸಮಾನತೆಗೆ ಕಾರಣವಾಗಿದೆ. ಪ್ರಸ್ತುತ, ದೇಶದಲ್ಲಿ 80 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ, ಇದರಲ್ಲಿ ಸುಮಾರು ಒಂಬತ್ತು ಕೋಟಿ ಮಹಿಳೆಯರು ತೊಡಗಿಸಿಕೊಂಡಿದ್ದಾರೆ. ಈ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸರಕಾರವು ಲಕ್ಷಾಂತರ ಕೋಟಿ ರೂಪಾಯಿಗಳ ಸಹಾಯವನ್ನು ನೀಡುತ್ತಿದೆ.
ಗೌರವಾನ್ವಿತ ಸದಸ್ಯರೇ,
37. ನಮ್ಮ ಪರಂಪರೆಯು ನಮ್ಮನ್ನು ನಮ್ಮ ಬೇರುಗಳೊಂದಿಗೆ ಸಂಪರ್ಕಿಸುತ್ತದೆ ಮತ್ತು ನಮ್ಮ ಅಭಿವೃದ್ಧಿಯು ನಮಗೆ ಆಕಾಶವನ್ನು ತಲುಪುವ ಧೈರ್ಯವನ್ನು ನೀಡುತ್ತದೆ. ಅದಕ್ಕಾಗಿಯೇ ನನ್ನ ಸರಕಾರವು ಪರಂಪರೆಯನ್ನು ಉಳಿಸಿಕೊಳ್ಳುವ ಮತ್ತು ಅಭಿವೃದ್ಧಿಗೆ ಆದ್ಯತೆ ನೀಡುವ ಮಾರ್ಗವನ್ನು ಆರಿಸಿಕೊಂಡಿದೆ.
38. ಇಂದು, ಒಂದು ಕಡೆ ದೇಶದಲ್ಲಿ ʻಅಯೋಧ್ಯೆ ಧಾಮʼ ನಿರ್ಮಿಸಲಾಗುತ್ತಿದ್ದರೆ ಮತ್ತೊಂದೆಡೆ, ಆಧುನಿಕ ಸಂಸತ್ ಭವನವನ್ನು ಸಹ ನಿರ್ಮಿಸಲಾಗುತ್ತಿದೆ.
39. ಒಂದು ಕಡೆ ನಾವು ʻಕೇದಾರನಾಥ ಧಾಮʼ, ʻಕಾಶಿ ವಿಶ್ವನಾಥ ಧಾಮʼ ಮತ್ತು ʻಮಹಾಕಾಲ್ ಮಹಾಲೋಕ್ʼ ಅನ್ನು ನಿರ್ಮಿಸಿದ್ದೇವೆ, ಮತ್ತೊಂದೆಡೆ, ನಮ್ಮ ಸರಕಾರವು ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜುಗಳನ್ನೂ ನಿರ್ಮಿಸುತ್ತಿದೆ.
40. ಒಂದೆಡೆ, ನಾವು ನಮ್ಮ ಯಾತ್ರಾ ಸ್ಥಳಗಳು ಮತ್ತು ಐತಿಹಾಸಿಕ ಪರಂಪರೆಯನ್ನು ಅಭಿವೃದ್ಧಿಪಡಿಸುತ್ತಿದ್ದೇವೆ, ಮತ್ತೊಂದೆಡೆ, ಭಾರತವು ವಿಶ್ವದ ಪ್ರಮುಖ ಬಾಹ್ಯಾಕಾಶ ಶಕ್ತಿಯಾಗುತ್ತಿದೆ. ಭಾರತವು ತನ್ನ ಮೊದಲ ಖಾಸಗಿ ಉಪಗ್ರಹವನ್ನು ಸಹ ಉಡಾವಣೆ ಮಾಡಿದೆ.
41. ಒಂದೆಡೆ, ಆದಿ ಶಂಕರಾಚಾರ್ಯರು, ಭಗವಾನ್ ಬಸವೇಶ್ವರ, ತಿರುವಳ್ಳುವರ್, ಗುರುನಾನಕ್ ದೇವ್ ಅವರಂತಹ ಸಂತರು ತೋರಿಸಿದ ಮಾರ್ಗವನ್ನು ನಾವು ಅನುಸರಿಸುತ್ತಿದ್ದೇವೆ ಮತ್ತು ಮತ್ತೊಂದೆಡೆ, ಇಂದು ಭಾರತವು ಹೈಟೆಕ್ ಜ್ಞಾನದ ಕೇಂದ್ರವಾಗುತ್ತಿದೆ.
42. ಒಂದೆಡೆ ನಾವು ʻಕಾಶಿ-ತಮಿಳು ಸಂಗಮʼದ ಮೂಲಕ ʻಏಕ ಭಾರತ-ಶ್ರೇಷ್ಠ ಭಾರತʼದ ಆಶಯವನ್ನು ಬಲಪಡಿಸುತ್ತಿದ್ದೇವೆ, ಮತ್ತೊಂದೆಡೆ, ನಾವು ʻಒಂದು ದೇಶ, ಒಂದು ಪಡಿತರ ಚೀಟಿʼಯಂತಹ ಆಧುನಿಕ ವ್ಯವಸ್ಥೆಗಳನ್ನು ಸಹ ಅಭಿವೃದ್ಧಿಪಡಿಸುತ್ತಿದ್ದೇವೆ. ʻಡಿಜಿಟಲ್ ಇಂಡಿಯಾʼ ಮತ್ತು ʻ5ಜಿʼ ತಂತ್ರಜ್ಞಾನದಲ್ಲಿ ಭಾರತದ ಶಕ್ತಿಯನ್ನು ಇಂದು ಜಗತ್ತು ಗುರುತಿಸುತ್ತಿದೆ.
43. ಇಂದು, ಭಾರತವು ತನ್ನ ಪ್ರಾಚೀನ ವಿಧಾನಗಳಾದ ಯೋಗ ಮತ್ತು ಆಯುರ್ವೇದವನ್ನು ಇಡೀ ಜಗತ್ತಿಗೆ ಕೊಂಡೊಯ್ಯುತ್ತಿದೆ. ಮತ್ತೊಂದೆಡೆ, ಈ ಕ್ರಮವು ʻವಿಶ್ವದ ಔಷಧ ಕೇಂದ್ರʼವಾಗಿಯೂ ದೇಶದ ಹೊಸ ಗುರುತನ್ನು ಬಲಪಡಿಸುತ್ತಿದೆ.
44. ಇಂದು, ಒಂದೆಡೆ ಭಾರತವು ನೈಸರ್ಗಿಕ ಕೃಷಿ ಮತ್ತು ದೇಶದ ಸಾಂಪ್ರದಾಯಿಕ ಸಿರಿಧಾನ್ಯ ಬೆಳೆಗಳನ್ನು ಪ್ರೋತ್ಸಾಹಿಸುತ್ತಿದ್ದರೆ, ಮತ್ತೊಂದೆಡೆ ನ್ಯಾನೊ ಯೂರಿಯಾದಂತಹ ಆಧುನಿಕ ತಂತ್ರಜ್ಞಾನವನ್ನು ಸಹ ನಾವು ಅಭಿವೃದ್ಧಿಪಡಿಸಿದ್ದೇವೆ.
45. ಒಂದೆಡೆ, ನಾವು ಕೃಷಿಗಾಗಿ ಗ್ರಾಮೀಣ ಮೂಲಸೌಕರ್ಯಗಳನ್ನು ಸುಧಾರಿಸುತ್ತಿದ್ದರೆ, ಮತ್ತೊಂದೆಡೆ, ನಾವು ಡ್ರೋನ್ ತಂತ್ರಜ್ಞಾನ ಮತ್ತು ಸೌರ ಶಕ್ತಿಯ ಮೂಲಕ ರೈತರನ್ನು ಸಬಲೀಕರಣಗೊಳಿಸುತ್ತಿದ್ದೇವೆ.
46. ನಗರಗಳಲ್ಲಿ ಸ್ಮಾರ್ಟ್ ಸೌಲಭ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಇದೇ ಮೊದಲ ಬಾರಿಗೆ ʻಸ್ವಾಮಿತ್ವʼ ಯೋಜನೆಯಡಿ ಡ್ರೋನ್‌ಗಳ ಮೂಲಕ ಗ್ರಾಮೀಣ ಮನೆಗಳ ಮ್ಯಾಪಿಂಗ್ ಮಾಡಲಾಗುತ್ತಿದೆ.
47. ʻಸ್ವಾತಂತ್ರ್ಯದ ಅಮೃತ ಮಹೋತ್ಸವʼದ ಸಂದರ್ಭದಲ್ಲಿ ಪ್ರತಿ ಜಿಲ್ಲೆಯಲ್ಲಿ 75 ʻಅಮೃತ ಸರೋವರʼಗಳನ್ನು ನಿರ್ಮಿಸಲಾಗುತ್ತಿದ್ದು, ಅದೇ ಸಮಯದಲ್ಲಿ ನೂರಾರು ಆಧುನಿಕ ʻವಂದೇ ಭಾರತ್ʼ ರೈಲುಗಳನ್ನು ಸಹ ಪ್ರಾರಂಭಿಸಲಾಗುತ್ತಿದೆ.
48. ಒಂದೆಡೆ, ನಮ್ಮ ವ್ಯಾಪಾರದ ಸಾಂಪ್ರದಾಯಿಕ ಶಕ್ತಿಯಾದ ನದಿ ಜಲಮಾರ್ಗಗಳು ಮತ್ತು ಬಂದರುಗಳನ್ನು ಆಧುನೀಕರಿಸಲಾಗುತ್ತಿದೆ, ಇದರೊಂದಿಗೆ ಈ ಬಹು ಮಾದರಿ ಸಂಪರ್ಕ ಮತ್ತು ಲಾಜಿಸ್ಟಿಕ್ ಕಾರ್ಕ್‌ಗಳ ಜಾಲವನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ.
ಗೌರವಾನ್ವಿತ ಸದಸ್ಯರೇ,
49. ʻಸ್ವಾತಂತ್ರ್ಯದ ಅಮೃತ ಕಾಲʼದಲ್ಲಿ 'ಪಂಚಪ್ರಾಣʼದ ಆಶಯದೊಂದಿಗೆ ದೇಶ ಮುನ್ನಡೆಯುತ್ತಿದೆ. ಗುಲಾಮ ಮನಸ್ಥಿತಿಯ ಪ್ರತಿಯೊಂದು ಚಿಹ್ನೆಯನ್ನು ತೊಡೆದುಹಾಕಲು ನನ್ನ ಸರಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ.
50. ಒಂದು ಕಾಲದಲ್ಲಿ ರಾಜಪಥವಾಗಿದ್ದ ಮಾರ್ಗವು ಈಗ ʻಕರ್ತವ್ಯ ಪಥʼವಾಗಿದೆ!
51. ಇಂದು, ʻಕರ್ತವ್ಯ ಪಥʼದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುತ್ತಿದೆ ಮತ್ತು ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ನೇತಾಜಿ ಅವರ ಶೌರ್ಯ ಮತ್ತು ʻಆಜಾದ್ ಹಿಂದ್ ಫೌಜ್ʼ ಅನ್ನು ನಾವು ಗೌರವಿಸಿದ್ದೇವೆ. ಕೆಲವು ದಿನಗಳ ಹಿಂದೆ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರಿನಲ್ಲಿ ಭವ್ಯವಾದ ಸ್ಮಾರಕ ಮತ್ತು ವಸ್ತುಸಂಗ್ರಹಾಲಯಕ್ಕೆ ನನ್ನ ಸರಕಾರ ಅಡಿಪಾಯ ಹಾಕಿತು.
52. ಅಂಡಮಾನ್ ಮತ್ತು ನಿಕೋಬಾರ್‌ನ 21 ದ್ವೀಪಗಳಿಗೆ ಭಾರತೀಯ ಸೇನೆಯ ʻಪರಮವೀರ ಚಕ್ರʼ ಪ್ರಶಸ್ತಿ ಪುರಸ್ಕೃತರ ಹೆಸರನ್ನು ನಾಮಕರಣ ಮಾಡಲಾಗಿದೆ.
53. ಒಂದೆಡೆ, ʻರಾಷ್ಟ್ರೀಯ ಯುದ್ಧ ಸ್ಮಾರಕʼವು ರಾಷ್ಟ್ರೀಯ ಶೌರ್ಯದ ಸಂಕೇತವಾಗಿದ್ದರೆ, ಮತ್ತೊಂದೆಡೆ, ನಮ್ಮ ನೌಕಾಪಡೆಯು ಛತ್ರಪತಿ ವೀರ್ ಶಿವಾಜಿ ಮಹಾರಾಜ್ ನೀಡಿದ ಚಿಹ್ನೆಯನ್ನು ಪಡೆದಿದೆ.
54. ಒಂದೆಡೆ ಭಗವಾನ್ ಬಿರ್ಸಾ ಮುಂಡಾ ಸೇರಿದಂತೆ ಎಲ್ಲಾ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಲಾಗುತ್ತಿದ್ದರೆ, ಮತ್ತೊಂದೆಡೆ, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ʻಪಂಚತೀರ್ಥʼವನ್ನು ಸಹ ನಿರ್ಮಿಸಲಾಗಿದೆ. ಅಂತೆಯೇ, ಪ್ರತಿಯೊಬ್ಬ ಪ್ರಧಾನ ಮಂತ್ರಿಯ ಕೊಡುಗೆಯನ್ನು ಪ್ರದರ್ಶಿಸುವ ʻಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲʼಯವನ್ನು ಸಹ ನಿರ್ಮಿಸಲಾಗಿದೆ.
55. ದೇಶವು ಮೊದಲ 'ವೀರ ಬಾಲ ದಿವಸ್' ಅನ್ನು ಹೆಮ್ಮೆ ಮತ್ತು ಪೂಜ್ಯಭಾವದಿಂದ ಆಚರಿಸಿದೆ. ನನ್ನ ಸರಕಾರವು ಇತಿಹಾಸದ ಯಾತನೆ ಮತ್ತು ಅದಕ್ಕೆ ಸಂಬಂಧಿಸಿದ ಕಲಿಕೆಗಳನ್ನು ಜೀವಂತವಾಗಿಡಲು ದೇಶದಲ್ಲಿ 'ವಿಭಜನ್ ವಿಭೀಷಿಕ ಸ್ಮೃತಿ ದಿವಸ್' ಆಚರಣೆಯನ್ನು ಪ್ರಾರಂಭಿಸಿದೆ.
ಗೌರವಾನ್ವಿತ ಸದಸ್ಯರೇ,
56. ದೇಶದಲ್ಲಿ ʻಮೇಕ್ ಇನ್ ಇಂಡಿಯಾʼ ಮತ್ತು ʻಆತ್ಮನಿರ್ಭರ ಭಾರತʼ ಅಭಿಯಾನದ ಯಶಸ್ಸು ಫಲ ನೀಡಲು ಆರಂಭಿಸಿದೆ. ಇಂದು ಭಾರತದ ಉತ್ಪಾದನಾ ಸಾಮರ್ಥ್ಯ ಹೆಚ್ಚುತ್ತಿದೆ ಮತ್ತು ಪ್ರಪಂಚದ ನಾನಾ ಭಾಗಗಳಿಂದ ಉತ್ಪಾದನಾ ಕಂಪನಿಗಳು ಸಹ ಭಾರತಕ್ಕೆ ಬರುತ್ತಿವೆ.
57. ಇಂದು ನಾವು ಭಾರತದಲ್ಲಿ ʻಸೆಮಿ ಕಂಡಕ್ಟರ್ʼ ಮತ್ತು ವಿಮಾನಗಳ ತಯಾರಿಕೆಯ ಪ್ರಯತ್ನಗಳನ್ನು ಪ್ರಾರಂಭಿಸಿದ್ದೇವೆ. ಅಂತಹ ಪ್ರಯತ್ನಗಳ ಪರಿಣಾಮವಾಗಿ ಭಾರತದಲ್ಲಿ ತಯಾರಿಸಿದ ಸರಕುಗಳ ರಫ್ತು ನಿರಂತರವಾಗಿ ಹೆಚ್ಚುತ್ತಿದೆ. ಕೆಲವು ವರ್ಷಗಳ ಹಿಂದೆ, ನಾವು ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್ ಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು. ಇಂದು ಭಾರತವು ಜಗತ್ತಿಗೆ ಮೊಬೈಲ್ ಫೋನ್‌ಗಳನ್ನು ರಫ್ತು ಮಾಡುವ ಪ್ರಮುಖ ದೇಶವಾಗಿ ಮಾರ್ಪಟ್ಟಿದೆ. ದೇಶದಲ್ಲಿ ಆಟಿಕೆಗಳ ಆಮದು ಶೇಕಡಾ 70ರಷ್ಟು ಕಡಿಮೆಯಾಗಿದೆ, ಆದರೆ ಅವುಗಳ ರಫ್ತು ಶೇಕಡಾ 60 ಕ್ಕಿಂತ ಹೆಚ್ಚಾಗಿದೆ.
58. ನನ್ನ ಸರಕಾರದ ಹೊಸ ಉಪಕ್ರಮದ ಪರಿಣಾಮವಾಗಿ, ನಮ್ಮ ರಕ್ಷಣಾ ಸಾಮಗ್ರಿ ರಫ್ತು 6 ಪಟ್ಟು ಹೆಚ್ಚಾಗಿದೆ. ಮೊದಲ ಸ್ವದೇಶಿ ವಿಮಾನವಾಹಕ ನೌಕೆ ʻಐಎನ್ಎಸ್ ವಿಕ್ರಾಂತ್ʼ ಕೂಡ ನಮ್ಮ ಪಡೆಗಳ ಸೇವೆಗೆ ಸೇರ್ಪಡೆಯಾಗಿರುವುದು ನನಗೆ ಹೆಮ್ಮೆ ತಂದಿದೆ. ನಾವು ಉತ್ಪಾದನೆಯ ಹೊಸ ವಲಯಗಳಿಗೆ ಪ್ರವೇಶಿಸುತ್ತಿರುವುದು ಮಾತ್ರವಲ್ಲದೆ, ಖಾದಿ ಮತ್ತು ಗ್ರಾಮೋದ್ಯೋಗಗಳಂತಹ ನಮ್ಮ ಸಾಂಪ್ರದಾಯಿಕ ವಲಯಗಳಲ್ಲಿಯೂ ಶ್ಲಾಘನೀಯ ಕೆಲಸ ಮಾಡುತ್ತಿದ್ದೇವೆ. ʻಸ್ವಾತಂತ್ರ್ಯದ ಅಮೃತ ಮಹೋತ್ಸವʼದ ಸಂದರ್ಭದಲ್ಲಿ ಖಾದಿ ಮತ್ತು ಗ್ರಾಮೀಣ ಕೈಗಾರಿಕೆಗಳ ವಹಿವಾಟು 1 ಲಕ್ಷ ಕೋಟಿ ರೂ.ಗಳನ್ನು ದಾಟಿರುವುದು ನಮಗೆಲ್ಲರ ಪಾಲಿಗೆ ಸಂತೋಷದ ವಿಷಯವಾಗಿದೆ. ನನ್ನ ಸರಕಾರದ ಪ್ರಯತ್ನದಿಂದಾಗಿ ಖಾದಿ ಮಾರಾಟವೂ 4 ಪಟ್ಟು ಹೆಚ್ಚಾಗಿದೆ.
ಗೌರವಾನ್ವಿತ ಸದಸ್ಯರೇ,
59. ನನ್ನ ಸರಕಾರವು ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ನಿರಂತರವಾಗಿ ಅಭೂತಪೂರ್ವ ಒತ್ತು ನೀಡುತ್ತಿದೆ. ಆ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶದ ಜನಶಕ್ತಿಯನ್ನು ಸರಕಾರ ಬಳಸಿಕೊಳ್ಳುತ್ತಿದೆ. ಇಂದು ನಮ್ಮ ಯುವಕರು ತಮ್ಮ ಆವಿಷ್ಕಾರದ ಶಕ್ತಿಯನ್ನು ಜಗತ್ತಿಗೆ ಪ್ರದರ್ಶಿಸುತ್ತಿದ್ದಾರೆ. 2015ರಲ್ಲಿ ʻಜಾಗತಿಕ ಆವಿಷ್ಕಾರ ಸೂಚ್ಯಂಕʼದಲ್ಲಿ ಭಾರತ 81ನೇ ಸ್ಥಾನದಲ್ಲಿತ್ತು. ಈಗ ಅದು 40ನೇ ಸ್ಥಾನಕ್ಕೆ ತಲುಪಿದೆ. ಏಳು ವರ್ಷಗಳ ಹಿಂದೆ, ಭಾರತದಲ್ಲಿ ಕೆಲವೇ ನೂರು ನೋಂದಾಯಿತ ನವೋದ್ಯಮಗಳಿದ್ದವು, ಇಂದು ಈ ಸಂಖ್ಯೆ ಸುಮಾರು 90,000 ಆಗಿದೆ.
60. ಇಂದಿನ ಯುಗದಲ್ಲಿ, ನಮ್ಮ ಸೇನಾಪಡೆಗಳು ಯುವ ಶಕ್ತಿಯಿಂದ ಬಲವರ್ಧನೆಯಾಗುವುದು, ಯುದ್ಧದಲ್ಲಿ ಪ್ರವೀಣರಾಗಿರುವುದು ಮತ್ತು ತಂತ್ರಜ್ಞಾನದ ಶಕ್ತಿಯೊಂದಿಗೆ ಸಜ್ಜುಗೊಳ್ಳುವುದು ಬಹಳ ಮುಖ್ಯ. ಈ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ʻಅಗ್ನಿವೀರ್ʼ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಇದು ಸಶಸ್ತ್ರ ಪಡೆಗಳ ಮೂಲಕ ರಾಷ್ಟ್ರದ ಸೇವೆ ಮಾಡಲು ದೇಶದ ಯುವಕರಿಗೆ ಗರಿಷ್ಠ ಅವಕಾಶವನ್ನು ಒದಗಿಸುತ್ತದೆ.
61. ನನ್ನ ಸರಕಾರವು ಕ್ರೀಡೆಯ ಮೂಲಕ ಯುವ ಶಕ್ತಿಯನ್ನು ದೇಶದ ಗೌರವದೊಂದಿಗೆ ನಂಟು ಮಾಡುತ್ತಿದೆ. ನಮ್ಮ ಕ್ರೀಡಾಪಟುಗಳು ʻಕಾಮನ್ವೆಲ್ತ್ ಗೇಮ್ಸ್ʼ, ʻಒಲಿಂಪಿಕ್ಸ್ʼ ಮತ್ತು ʻಪ್ಯಾರಾ ಗೇಮ್ಸ್ʼನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತಮ್ಮ ಪ್ರತಿಭೆ ಯಾರಿಗಿಂತಲೂ ಕಡಿಮೆಯಿಲ್ಲ ಎಂದು ಸಾಬೀತುಪಡಿಸಿದ್ದಾರೆ. ʻಖೇಲೋ ಇಂಡಿಯಾ ಗೇಮ್ಸ್ʼ ಮತ್ತು ʻಖೇಲೋ ಇಂಡಿಯಾ ಸೆಂಟರ್ʼಗಳ ಜೊತೆಗೆ, ದೇಶದ ಮೂಲೆ ಮೂಲೆಗಳಲ್ಲಿ ಇಂತಹ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪೋಷಿಸಲು ʻಟಾಪ್ಸ್ʼ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.
62. ನಮ್ಮ ಸರಕಾರವು ದಿವ್ಯಾಂಗರ ಕಲ್ಯಾಣದ ಬಗ್ಗೆ ಸಂಪೂರ್ಣ ಸಂವೇದನಾಶೀಲವಾಗಿದೆ. ಒಂದು ಸಂಕೇತ ಭಾಷೆ ಮತ್ತು ʻಸುಗಮ್ಯ ಭಾರತ್ ಅಭಿಯಾನʼವು ದೇಶದಲ್ಲಿ ದಿವ್ಯಾಂಗ ಯುವಕರಿಗೆ ಅಪಾರವಾಗಿ ಸಹಾಯ ಮಾಡಿದೆ.
ಗೌರವಾನ್ವಿತ ಸದಸ್ಯರೇ,
63. ಕಳೆದ ದಶಕಗಳಲ್ಲಿ, ಭಾರತದಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುವಲ್ಲಿ ಎರಡು ಪ್ರಮುಖ ಸವಾಲುಗಳನ್ನು ನಾವು ಗಮನಿಸಿದ್ದೇವೆ. ಮೊದಲನೆಯದಾಗಿ, ದೊಡ್ಡ ಮೂಲಸೌಕರ್ಯ ಯೋಜನೆಗಳನ್ನು ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿರಲಿಲ್ಲ. ಎರಡನೆಯದಾಗಿ, ವಿವಿಧ ಇಲಾಖೆಗಳು ಮತ್ತು ಸರಕಾರಗಳು ತಮ್ಮದೇ ಆದ ಅನುಕೂಲಕ್ಕೆ ಅನುಗುಣವಾಗಿ ಕೆಲಸ ಮಾಡಿದವು. ಇದು ಸರ್ಕಾರಿ ಸಂಪನ್ಮೂಲಗಳ ದುರುಪಯೋಗ ಮತ್ತು ಸಮಯದ ಲಂಬನಕ್ಕೆ ಕಾರಣವಾಗಿದ್ದಲ್ಲದೆ, ಸಾಮಾನ್ಯ ಜನರಿಗೆ ಅನಾನುಕೂಲ ಉಂಟುಮಾಡುತ್ತಿತ್ತು. ʻಪಿಎಂ ಗತಿ-ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼ ರೂಪಿಸುವ ಮೂಲಕ ಈ ಸವಾಲುಗಳನ್ನು ಎದುರಿಸಲು ನನ್ನ ಸರಕಾರ ದೃಢವಾದ ಕ್ರಮಗಳನ್ನು ಕೈಗೊಂಡಿದೆ. ʻಪಿಎಂ ಗತಿ-ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ʼ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಹ ಉತ್ಸಾಹವನ್ನು ತೋರಿಸಿವೆ. ಇದು ದೇಶದಲ್ಲಿ ಬಹು ಮಾದರಿ ಸಂಪರ್ಕವನ್ನು ವಿಸ್ತರಿಸುತ್ತದೆ.
64. ಭಾರತವನ್ನು ವಿಶ್ವದ ಅತ್ಯಂತ ಸ್ಪರ್ಧಾತ್ಮಕ ಲಾಜಿಸ್ಟಿಕ್ಸ್ ಕೇಂದ್ರವನ್ನಾಗಿ ಮಾಡಲು ನನ್ನ ಸರಕಾರ ಶ್ರಮಿಸುತ್ತಿದೆ. ಇದಕ್ಕಾಗಿ, ಕಳೆದ ವರ್ಷ ದೇಶದಲ್ಲಿ ʻರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿʼಯನ್ನು ಪ್ರಾರಂಭಿಸಲಾಯಿತು. ಈ ನೀತಿಯ ಅನುಷ್ಠಾನವು ಸರಕು ಸಾಗಣೆ ವೆಚ್ಚವನ್ನು ಕಡಿಮೆ ಮಾಡುತ್ತದೆ.
65. ದೇಶದ ಅಭಿವೃದ್ಧಿಗಾಗಿ ನನ್ನ ಸರಕಾರ ಅಭೂತಪೂರ್ವ ಮತ್ತು ಸಾಟಿಯಿಲ್ಲದ ವೇಗ ಹಾಗೂ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ.
• ನನ್ನ ಸರಕಾರ ರಚನೆಯಾದ ನಂತರ, ʻಆವಾಸ್ ಯೋಜನೆʼಯಡಿ ಭಾರತದಲ್ಲಿ ಬಡವರಿಗಾಗಿ ಪ್ರತಿದಿನ ಸರಾಸರಿ 11,000 ಮನೆಗಳನ್ನು ನಿರ್ಮಿಸಲಾಗಿದೆ.
• ಇದೇ ಅವಧಿಯಲ್ಲಿ, ಭಾರತದಲ್ಲಿ ಪ್ರತಿದಿನ ಸರಾಸರಿ 2.5 ಲಕ್ಷ ಜನರು ಬ್ರಾಡ್ ಬ್ಯಾಂಡ್ ಸಂಪರ್ಕ ಪಡೆದಿದ್ದಾರೆ.
• ಪ್ರತಿದಿನ 55,000ಕ್ಕೂ ಹೆಚ್ಚು ಅನಿಲ ಸಂಪರ್ಕಗಳನ್ನು ನೀಡಲಾಯಿತು.
• ʻಮುದ್ರಾ ಯೋಜನೆʼ ಅಡಿಯಲ್ಲಿ ಪ್ರತಿದಿನ 700 ಕೋಟಿ ರೂ.ಗಿಂತ ಹೆಚ್ಚಿನ ಸಾಲವನ್ನು ವಿತರಿಸಲಾಗಿದೆ.
• ಭಾರತದಲ್ಲಿ, ಕಳೆದ ಎಂಟು-ಒಂಬತ್ತು ವರ್ಷಗಳಲ್ಲಿ ಪ್ರತಿ ತಿಂಗಳು ಸುಮಾರು ಒಂದು ವೈದ್ಯಕೀಯ ಕಾಲೇಜು ತಲೆ ಎತ್ತಿದೆ.
• ಈ ಅವಧಿಯಲ್ಲಿ, ಪ್ರತಿದಿನ ಎರಡು ಕಾಲೇಜುಗಳನ್ನು ಸ್ಥಾಪಿಸಲಾಗಿದೆ ಮತ್ತು ಪ್ರತಿ ವಾರ ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದೆ.
• ಕೇವಲ 2 ವರ್ಷಗಳಲ್ಲಿ, ಭಾರತವು 220 ಕೋಟಿಗೂ ಹೆಚ್ಚು ಲಸಿಕೆ ಡೋಸ್‌ಗಳನ್ನು ನೀಡಿದೆ.
66. ಸಾಮಾಜಿಕ ಮೂಲಸೌಕರ್ಯಗಳ ಬಗ್ಗೆ ಮಾತನಾಡುವುದಾದರೆ, 2004 ಮತ್ತು 2014ರ ನಡುವೆ ದೇಶದಲ್ಲಿ 145 ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದ್ದರೆ, 2014 ರಿಂದ 2022 ರವರೆಗೆ ನನ್ನ ಸರಕಾರದ ಅವಧಿಯಲ್ಲಿ 260ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗಿದೆ. ಹಿಂದಿನ ಅವಧಿಗೆ ಹೋಲಿಸಿದರೆ ದೇಶದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಪದವಿ ಮತ್ತು ಸ್ನಾತಕೋತ್ತರ ಸೀಟುಗಳ ಸಂಖ್ಯೆ ಈಗ ದ್ವಿಗುಣಗೊಂಡಿದೆ. 2014ರ ಮೊದಲು ದೇಶದಲ್ಲಿ ಸುಮಾರು 725 ವಿಶ್ವವಿದ್ಯಾಲಯಗಳಿದ್ದರೆ, ಕಳೆದ ಎಂಟು ವರ್ಷಗಳಲ್ಲಿ 300ಕ್ಕೂ ಹೆಚ್ಚು ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗಿದೆ. ಈ ಅವಧಿಯಲ್ಲಿ ದೇಶದಲ್ಲಿ 5000ಕ್ಕೂ ಹೆಚ್ಚು ಕಾಲೇಜುಗಳನ್ನು ತೆರೆಯಲಾಗಿದೆ.
67. ಅಂತೆಯೇ, ಭೌತಿಕ ಮೂಲಸೌಕರ್ಯದ ವಿಷಯದಲ್ಲಿ ದೇಶವು ಹೊಸ ದಾಖಲೆಗಳಿಗೆ ಸಾಕ್ಷಿಯಾಗಿದೆ. ʻಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆʼಯಡಿ 2013-14ರವರೆಗೆ ದೇಶದಲ್ಲಿ ಸುಮಾರು 3.81 ಲಕ್ಷ ಕಿ.ಮೀ ರಸ್ತೆಗಳನ್ನು ನಿರ್ಮಿಸಲಾಗಿದೆ. ಆದರೆ, 2021-22ರ ವೇಳೆಗೆ, ಗ್ರಾಮೀಣ ರಸ್ತೆಗಳ ಈ ಜಾಲವು 7 ಲಕ್ಷ ಕಿ.ಮೀ.ಗಿಂತಲೂ ಹೆಚ್ಚಾಗಿದೆ. ಇಲ್ಲಿಯವರೆಗೆ, ದೇಶದ 99 ಪ್ರತಿಶತಕ್ಕೂ ಹೆಚ್ಚು ಜನವಸತಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಹಳ್ಳಿಗಳಲ್ಲಿ ಉದ್ಯೋಗ, ಕೃಷಿ, ಶಿಕ್ಷಣ ಮತ್ತು ಆರೋಗ್ಯದ ಮೇಲೆ ಗ್ರಾಮೀಣ ರಸ್ತೆಗಳು ಬಹಳ ಸಕಾರಾತ್ಮಕ ಪರಿಣಾಮ ಬೀರಿವೆ ಎಂದು ʻವಿಶ್ವ ಬ್ಯಾಂಕ್ʼ ಸೇರಿದಂತೆ ಅನೇಕ ಸಂಸ್ಥೆಗಳ ಅಧ್ಯಯನ ವರದಿಗಳು ಸೂಚಿಸಿವೆ.
68. ಕಳೆದ ಎಂಟು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಜಾಲವು ಶೇಕಡಾ 55ಕ್ಕಿಂತ ಹೆಚ್ಚಾಗಿದೆ. ಶೀಘ್ರದಲ್ಲೇ, ʻಭಾರತ್ ಮಾಲಾʼ ಯೋಜನೆಯಡಿ ದೇಶದ 550ಕ್ಕೂ ಹೆಚ್ಚು ಜಿಲ್ಲೆಗಳನ್ನು ಹೆದ್ದಾರಿಗಳ ಮೂಲಕ ಸಂಪರ್ಕಿಸಲಾಗುವುದು. ಆರ್ಥಿಕತೆಗೆ ಉತ್ತೇಜನ ನೀಡುವ ಕಾರಿಡಾರ್‌ಗಳ ಸಂಖ್ಯೆ 6ರಿಂದ 50ಕ್ಕೆ ಹೆಚ್ಚಾಗಲಿದೆ.
69. ಅಂತೆಯೇ, ದೇಶದ ವಾಯುಯಾನ ಕ್ಷೇತ್ರವೂ ವೇಗವಾಗಿ ಬೆಳೆಯುತ್ತಿದೆ. 2014ರವರೆಗೆ ದೇಶದಲ್ಲಿ 74 ವಿಮಾನ ನಿಲ್ದಾಣಗಳಿದ್ದವು, ಈ ಸಂಖ್ಯೆ ಈಗ 147ಕ್ಕೆ ಏರಿದೆ. ಇಂದು ಭಾರತವು ವಿಶ್ವದ ಮೂರನೇ ಅತಿದೊಡ್ಡ ವಾಯುಯಾನ ಮಾರುಕಟ್ಟೆಯಾಗಿದೆ. ಈ ನಿಟ್ಟಿನಲ್ಲಿ ʻಉಡಾನ್ʼ ಯೋಜನೆ ಪ್ರಮುಖ ಪಾತ್ರ ವಹಿಸಿದೆ. ಭಾರತೀಯ ರೈಲ್ವೆ ಸಹ ಆಧುನಿಕ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ. ಅನೇಕ ದುರ್ಗಮ ಪ್ರದೇಶಗಳನ್ನೂ ದೇಶದ ರೈಲು ನಕ್ಷೆಯಲ್ಲಿ ಸೇರಿಸಲಾಗುತ್ತಿದೆ. ಭಾರತೀಯ ರೈಲ್ವೆಗೆ ಅತ್ಯಾಧುನಿಕ ಮತ್ತು ಸೆಮಿ ಹೈಸ್ಪೀಡ್ ರೈಲು ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ಸೇರ್ಪಡೆಗೊಂಡಿದೆ. ಜಮ್ಮು ಕಾಶ್ಮೀರ ಮತ್ತು ಈಶಾನ್ಯದ ದುರ್ಗಮ ಪ್ರದೇಶಗಳಿಗೆ ರೈಲ್ವೆ ಸಂಪರ್ಕ ಕಲ್ಪಿಸಲಾಗುತ್ತಿದೆ. ದೇಶದ ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ. ಭಾರತೀಯ ರೈಲ್ವೆ ವಿಶ್ವದ ಅತಿದೊಡ್ಡ ಎಲೆಕ್ಟ್ರಿಕ್ ರೈಲ್ವೆ ಜಾಲವಾಗುವತ್ತ ವೇಗವಾಗಿ ಸಾಗುತ್ತಿದೆ. ಭಾರತೀಯ ರೈಲ್ವೆಯನ್ನು ಸುರಕ್ಷಿತವಾಗಿಸಲು ನಾವು ದೇಶೀಯ ತಂತ್ರಜ್ಞಾನವಾದ ʻಕವಚ್ʼ ಅನ್ನು ವೇಗವಾಗಿ ವಿಸ್ತರಿಸುತ್ತಿದ್ದೇವೆ.
ಗೌರವಾನ್ವಿತ ಸದಸ್ಯರೇ,
70. ಪ್ರಗತಿ ಮತ್ತು ಪ್ರಕೃತಿಯನ್ನು ವಿರೋಧಾಭಾಸವೆಂದು ಪರಿಗಣಿಸುವ ಗ್ರಹಿಕೆಯನ್ನು ಭಾರತವು ಬದಲಾಯಿಸಿದೆ. ನನ್ನ ಸರಕಾರವು ಹಸಿರು ಬೆಳವಣಿಗೆಯತ್ತ ಗಮನ ಹರಿಸುತ್ತಿದೆ ಮತ್ತು ಇಡೀ ಜಗತ್ತನ್ನು ʻಮಿಷನ್ ಲೈಫ್ʼ(Mission LiFE) ಜೊತೆ ಸಂಪರ್ಕಿಸಲು ಒತ್ತು ನೀಡುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಸರಕಾರವು ಸೌರ ವಿದ್ಯುತ್ ಸಾಮರ್ಥ್ಯವನ್ನು ಸುಮಾರು 20 ಪಟ್ಟು ಹೆಚ್ಚಿಸಿದೆ. ಇಂದು, ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ಭಾರತವು ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಪಳೆಯುಳಿಕೆಯೇತರ ಇಂಧನ ಮೂಲಗಳಿಂದ ತನ್ನ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ 40 ಪ್ರತಿಶತವನ್ನು ತಯಾರಿಸುವ ಗುರಿಯನ್ನು ದೇಶವು ಈಗಾಗಲೇ ಸಾಧಿಸಿದೆ, ನಿಗದಿತ ಗುರಿಗಿಂತ ಒಂಬತ್ತು ವರ್ಷ ಮುಂಚಿತವಾಗಿ ಈ ಸಾಧನೆ ಸಾಧ್ಯವಾಗಿದೆ. ಈ ಯಶಸ್ಸು, 2070ರ ವೇಳೆಗೆ ನಿವ್ವಳ ಇಂಗಾಲ ಶೂನ್ಯ ದೇಶವಾಗುವ ನಮ್ಮ ಸಂಕಲ್ಪವನ್ನು ಬಲಪಡಿಸಲಿದೆ. ಪೆಟ್ರೋಲ್‌ನಲ್ಲಿ ಶೇಕಡಾ 20ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿಯತ್ತ ದೇಶವು ವೇಗವಾಗಿ ಸಾಗುತ್ತಿದೆ.
71. ʻಹೈಡ್ರೋಜನ್ ಮಿಷನ್ʼ ಅನ್ನು ಸರಕಾರ ಇತ್ತೀಚೆಗೆ ಅನುಮೋದಿಸಿದೆ. ಇದು ಹಸಿರು ಇಂಧನ ಕ್ಷೇತ್ರದಲ್ಲಿ ಭಾರತದಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸಲಿದೆ. ಇದು ಶುದ್ಧ ಇಂಧನಕ್ಕಾಗಿ ಮತ್ತು ಇಂಧನ ಭದ್ರತೆಗಾಗಿ ವಿದೇಶಗಳ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡುತ್ತದೆ. ನಮ್ಮ ನಗರಗಳಲ್ಲಿ ಮಾಲಿನ್ಯವನ್ನು ಕಡಿಮೆ ಮಾಡುವುದು ಸಹ ನಮ್ಮ ಮೊದಲ ಆದ್ಯತೆಯಾಗಿದೆ. ಆದ್ದರಿಂದ, ಎಲೆಕ್ಟ್ರಿಕ್ ವಾಹನಗಳ ಬಳಕೆಗಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ಕೆಲಸ ನಡೆಯುತ್ತಿದೆ. ʻಫೇಮ್ʼ ಯೋಜನೆಯಡಿ, ರಾಜಧಾನಿ ದೆಹಲಿ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ ಕೇಂದ್ರ ಸರಕಾರವು 7,000ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್ಸುಗಳನ್ನು ಸಾರ್ವಜನಿಕ ಸಾರಿಗೆಗೆ ಸೇರಿಸುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ, ದೇಶದಲ್ಲಿ ಮೆಟ್ರೋ ಜಾಲವು 3 ಪಟ್ಟು ಹೆಚ್ಚಾಗಿದೆ. ಇಂದು, 27 ನಗರಗಳಲ್ಲಿ ಮೆಟ್ರೋ ಯೋಜನೆಗಳು ನಡೆಯುತ್ತಿವೆ. ಅಂತೆಯೇ, ದೇಶಾದ್ಯಂತ 100ಕ್ಕೂ ಹೆಚ್ಚು ಹೊಸ ಜಲಮಾರ್ಗಗಳನ್ನು ಸಹ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಹೊಸ ಜಲಮಾರ್ಗಗಳು ದೇಶದ ಸಾರಿಗೆ ವಲಯವನ್ನು ಪರಿವರ್ತಿಸಲು ಸಹಾಯ ಮಾಡುತ್ತವೆ.
ಗೌರವಾನ್ವಿತ ಸದಸ್ಯರೇ,
72. ಇಂದಿನ ಜಗತ್ತು ಅನೇಕ ಸವಾಲುಗಳಿಗೆ ಸಾಕ್ಷಿಯಾಗಿದೆ. ದಶಕಗಳ ಹಿಂದೆ ಸ್ಥಾಪಿಸಲಾದ ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರಸ್ತುತತೆ ಮತ್ತು ಪರಿಣಾಮಕಾರಿತ್ವವನ್ನು ಸಹ ಪ್ರಶ್ನಿಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಭಾರತವು ಇಂದಿನ ವಿಭಜಿತ ಜಗತ್ತನ್ನು ಒಂದಲ್ಲ ಒಂದು ರೂಪದಲ್ಲಿ ಸಂಪರ್ಕಿಸುವ ದೇಶವಾಗಿ ಹೊರಹೊಮ್ಮಿದೆ. ಜಾಗತಿಕ ಪೂರೈಕೆ ಸರಪಳಿಯ ಮೇಲಿನ ವಿಶ್ವಾಸವನ್ನು ಬಲಪಡಿಸುತ್ತಿರುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಆದ್ದರಿಂದ, ಇಂದು, ಜಗತ್ತು ಹೆಚ್ಚಿನ ಭರವಸೆಗಳೊಂದಿಗೆ ಭಾರತದತ್ತ ನೋಡುತ್ತಿದೆ.
73. ಈ ವರ್ಷ, ʻಜಿ -20ʼಯಂತಹ ಪ್ರಭಾವಶಾಲಿ ಜಾಗತಿಕ ಗುಂಪಿನ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ. ʻಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯʼ ಎಂಬ ಮಂತ್ರದೊಂದಿಗೆ, ʻಜಿ -20ʼ ಸದಸ್ಯ ರಾಷ್ಟ್ರಗಳ ಸಹಯೋಗದೊಂದಿಗೆ ಪ್ರಸ್ತುತ ಜಾಗತಿಕ ಸವಾಲುಗಳಿಗೆ ಸಾಮೂಹಿಕ ಪರಿಹಾರಗಳನ್ನು ಕಂಡುಹಿಡಿಯಲು ಭಾರತ ಪ್ರಯತ್ನಿಸುತ್ತಿದೆ. ನನ್ನ ಸರಕಾರ ಇದನ್ನು ಕೇವಲ ಒಂದು ರಾಜತಾಂತ್ರಿಕ ಕಾರ್ಯಕ್ರಮಕ್ಕೆ ಸೀಮಿತಗೊಳಿಸಲು ಬಯಸುವುದಿಲ್ಲ. ಬದಲಿಗೆ, ಇಡೀ ದೇಶದ ಪ್ರಯತ್ನಗಳ ಮೂಲಕ ಭಾರತದ ಸಾಮರ್ಥ್ಯ ಮತ್ತು ಸಂಸ್ಕೃತಿಯನ್ನು ಪ್ರದರ್ಶಿಸಲು ಇದು ಒಂದು ಅವಕಾಶವಾಗಿದೆ. ಆದ್ದರಿಂದ, ದೇಶಾದ್ಯಂತ ಹತ್ತಾರು ನಗರಗಳಲ್ಲಿ ʻಜಿ-20ʼ ಸಭೆಗಳನ್ನು ವರ್ಷಪೂರ್ತಿ ನಡೆಸಲಾಗುತ್ತಿದೆ.
ಗೌರವಾನ್ವಿತ ಸದಸ್ಯರೇ,
74. ಜಾಗತಿಕ ಸಂಬಂಧಗಳ ವಿಚಾರದಲ್ಲಿ ಭಾರತವು ಇಂದು ಅತ್ಯುತ್ತಮ ಸ್ಥಿತಿಯಲ್ಲಿದೆ. ನಾವು ವಿಶ್ವದ ವಿವಿಧ ರಾಷ್ಟ್ರಗಳೊಂದಿಗೆ ನಮ್ಮ ಸಹಕಾರ ಮತ್ತು ಸ್ನೇಹವನ್ನು ಬಲಪಡಿಸಿದ್ದೇವೆ. ಒಂದೆಡೆ, ನಾವು ಈ ವರ್ಷ ʻಎಸ್‌ಸಿಒʼಅಧ್ಯಕ್ಷತೆ ವಹಿಸುತ್ತಿದ್ದೇವೆ, ಮತ್ತೊಂದೆಡೆ, ʻಕ್ವಾಡ್ʼನ ಸದಸ್ಯರಾಗಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ, ಸಮೃದ್ಧಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ.
75. ನಮ್ಮ ರಾಷ್ಟ್ರೀಯ ಹಿತಾಸಕ್ತಿಗಳನ್ನು ಪ್ರಮುಖವಾಗಿಟ್ಟುಕೊಂಡು ನಾವು ನಮ್ಮ ಪಾತ್ರವನ್ನು ವಿಸ್ತರಿಸಿದ್ದೇವೆ. ಅದು ಅಫ್ಘಾನಿಸ್ತಾನದ ಭೂಕಂಪವಾಗಿರಲಿ ಅಥವಾ ಶ್ರೀಲಂಕಾದ ಬಿಕ್ಕಟ್ಟಾಗಿರಲಿ, ಮಾನವೀಯ ನೆರವು ನೀಡಿದವರಲ್ಲಿ ನಾವು ಮೊದಲಿಗರು.
76. ಅಫ್ಘಾನಿಸ್ತಾನ ಮತ್ತು ಉಕ್ರೇನ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ಸೃಷ್ಟಿಸಿದ ಸದ್ಭಾವನೆಯು ನಮಗೆ ಪ್ರಯೋಜನವನ್ನು ನೀಡಿತು. ಈ ದೇಶಗಳಲ್ಲಿ ತೊಂದರೆಗೀಡಾದ ನಮ್ಮ ನಾಗರಿಕರನ್ನು ನಾವು ಸುರಕ್ಷಿತವಾಗಿ ಸ್ಥಳಾಂತರಿಸಿದ್ದೇವೆ. ಇತರ ಅನೇಕ ದೇಶಗಳ ನಾಗರಿಕರಿಗೆ ಸಹಾಯ ಮಾಡುವ ಮೂಲಕ, ಭಾರತವು ಮತ್ತೊಮ್ಮೆ ತನ್ನ ಮಾನವೀಯ ನಡೆಯನ್ನು ಜಗತ್ತಿಗೆ ಪ್ರದರ್ಶಿಸಿದೆ.
ಗೌರವಾನ್ವಿತ ಸದಸ್ಯರೇ,
77. ಭಯೋತ್ಪಾದನೆಯ ವಿರುದ್ಧ ಭಾರತದ ಕಠಿಣ ನಿಲುವನ್ನು ಇಂದು ಜಗತ್ತು ಸಹ ಒಪ್ಪಿಕೊಂಡಿದೆ. ಈ ಕಾರಣದಿಂದಾಗಿ, ಭಯೋತ್ಪಾದನೆಯ ವಿರುದ್ಧದ ಭಾರತದ ಧ್ವನಿಯನ್ನು ಪ್ರತಿ ಜಾಗತಿಕ ವೇದಿಕೆಯಲ್ಲಿ ಗಂಭೀರವಾಗಿ ಕೇಳಲಾಗುತ್ತಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ʻವಿಶ್ವಸಂಸ್ಥೆ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿʼಯ ವಿಶೇಷ ಸಭೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿತ್ತು. ಈ ಸಭೆಯಲ್ಲೂ ಭಾರತವು ಭಯೋತ್ಪಾದನೆಯ ವಿರುದ್ಧ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ನನ್ನ ಸರಕಾರವು ಸೈಬರ್ ಭದ್ರತೆಗೆ ಸಂಬಂಧಿಸಿದ ಕಳವಳಗಳನ್ನು ಇಡೀ ವಿಶ್ವದ ಮುಂದೆ ಪ್ರಾಮಾಣಿಕವಾಗಿ ಪ್ರಸ್ತುತಪಡಿಸುತ್ತಿದೆ.
78. ನಾವು ರಾಜಕೀಯವಾಗಿ ಮತ್ತು ವ್ಯೂಹಾತ್ಮಕವಾಗಿ ಪ್ರಬಲರಾದಾಗ ಮಾತ್ರ ಶಾಶ್ವತ ಶಾಂತಿ ಸಾಧ್ಯ ಎಂದು ನನ್ನ ಸರಕಾರ ದೃಢವಾಗಿ ನಂಬಿದೆ. ಆದ್ದರಿಂದ, ನಾವು ನಮ್ಮ ಮಿಲಿಟರಿ ಶಕ್ತಿಯ ಆಧುನೀಕರಣಕ್ಕೆ ನಿರಂತರವಾಗಿ ಒತ್ತು ನೀಡುತ್ತಿದ್ದೇವೆ.
ಗೌರವಾನ್ವಿತ ಸದಸ್ಯರೇ,
- . ಪ್ರಜಾಪ್ರಭುತ್ವದ ತಾಯಿಯಾಗಿ ಭಾರತದ ಅನಂತ ಪ್ರಯಾಣವು ಅಪರಿಮಿತ ಹೆಮ್ಮೆಯಿಂದ ತುಂಬಿದೆ. ನಾವು ಪ್ರಜಾಪ್ರಭುತ್ವವನ್ನು ಮಾನವೀಯ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದೇವೆ ಮತ್ತು ಶ್ರೀಮಂತಗೊಳಿಸಿದ್ದೇವೆ. ಭಾರತದ ಮಾನವೀಯ ನಾಗರಿಕತೆಯು ತನ್ನ ಸಾವಿರಾರು ವರ್ಷಗಳ ವೈಭವಯುತ ಇತಿಹಾಸದ ಮಾದರಿಯಲ್ಲೇ, ಮುಂಬರುವ ಶತಮಾನಗಳಲ್ಲೂ ಶಾಶ್ವತವಾಗಿ ಹರಿಯುವ ಹೊಳೆಯಂತೆ ಮುಂದುವರಿಯುತ್ತದೆ.
- ಭಾರತದ ಪ್ರಜಾಪ್ರಭುತ್ವವು ಸಮೃದ್ಧವಾದುದು, ಪ್ರಬಲವಾದುದು ಮತ್ತು ಭವಿಷ್ಯದಲ್ಲೂ ಬಲಿಷ್ಠವಾಗಿ ಮುಂದುವರಿಯುತ್ತದೆ.
- ಭಾರತದ ಸಾಕ್ಷಿಪ್ರಜ್ಞೆ ಅಮರವಾದುದು ಮತ್ತು ಅದು ಅಮರವಾಗಿ ಮುಂದುವರಿಯುತ್ತದೆ.
- ಭಾರತದ ಜ್ಞಾನ, ವಿಜ್ಞಾನ ಮತ್ತು ಆಧ್ಯಾತ್ಮಿಕತೆಯು ಶತಮಾನಗಳಿಂದ ಜಗತ್ತಿಗೆ ಮಾರ್ಗದರ್ಶನ ನೀಡುತ್ತಿದೆ ಮತ್ತು ಮುಂಬರುವ ಶತಮಾನಗಳಲ್ಲಿಯೂ ಅದೇ ರೀತಿಯಲ್ಲಿ ಜಗತ್ತಿಗೆ ಮಾರ್ಗದರ್ಶನ ನೀಡುವುದನ್ನು ಮುಂದುವರಿಸುತ್ತದೆ.
- ಗುಲಾಮಗಿರಿಯ ಕರಾಳ ಅವಧಿಯಲ್ಲೂ ಭಾರತದ ಆದರ್ಶಗಳು ಮತ್ತು ಮೌಲ್ಯಗಳು ಹಾಗೇ ಉಳಿದಿವೆ ಮತ್ತು ಮುಂದೆಯೂ ಅವು ಹಾಗೇ ಉಳಿಯುತ್ತವೆ.
- ಒಂದು ರಾಷ್ಟ್ರವಾಗಿ ಭಾರತದ ಅಸ್ಮಿತೆ ಹಿಂದೆ ಅಮರವಾಗಿತ್ತು ಮತ್ತು ಭವಿಷ್ಯದಲ್ಲಿಯೂ ಅಮರವಾಗಿ ಉಳಿಯುತ್ತದೆ.
80. ನಮ್ಮ ಪ್ರಜಾಪ್ರಭುತ್ವದ ಹೃದಯಭಾಗವಾಗಿರುವ ಈ ಸಂಸತ್ತಿನಲ್ಲಿ, ಕಷ್ಟಕರವೆಂದು ತೋರುವ ಗುರಿಗಳನ್ನು ನಿಗದಿಪಡಿಸುವುದು ಮತ್ತು ಅವುಗಳನ್ನು ಸಾಧಿಸುವುದು ನಮ್ಮ ಪ್ರಯತ್ನವಾಗಬೇಕು. ನಾಳೆ ಏನು ಮಾಡಬೇಕೋ ಅದನ್ನು ನಾವು ಇಂದು ಸಾಧಿಸಲು ಪ್ರಯತ್ನಿಸಬೇಕು. ಇತರರು ಏನಾದರೂ ಮಾಡಬೇಕೆಂದು ಇನ್ನೂ ಯೋಚಿಸುತ್ತಿರುವಾಗಲೇ, ನಾವು ಭಾರತೀಯರು ಅವರಿಗಿಂತ ಮುನ್ನವೇ ಅದನ್ನು ಸಾಧಿಸಬೇಕು.
81. "ಸಂಗಚ್ಛಧ್ವಂ ಸಂವದಾಧ್ವಂ ಸಮ್ ವೊ ಮನಾಮ್ಸಿ ಜನತಂ" ಎಂಬ ವೇದಸೂಕ್ತಿಗೆ ಅನುಗುಣವಾಗಿ ಬದುಕುವ ಮೂಲಕ ನಮ್ಮ ಪ್ರಜಾಪ್ರಭುತ್ವವನ್ನು ಶ್ರೀಮಂತಗೊಳಿಸೋಣ. ಅಂದರೆ, ನಾವು ಹೆಜ್ಜೆ ಹೆಜ್ಜೆಯಲ್ಲೂ ಒಟ್ಟಿಗೆ ನಡೆಯೋಣ, ಪರಸ್ಪರರ ಮನಸ್ಸನ್ನು ಅರ್ಥಮಾಡಿಕೊಳ್ಳೋಣ ಮತ್ತು ನಮ್ಮ ನಿರ್ಣಯಗಳಲ್ಲಿ ಏಕತೆಯ ಹರಿವು ಕಾಯ್ದುಕೊಳ್ಳೋಣ.
82. ರಾಷ್ಟ್ರ ನಿರ್ಮಾಣದ ಈ ʻಮಹಾಯಜ್ಞʼದಲ್ಲಿ ನಮ್ಮ ʻಕರ್ತವ್ಯ ಪಥʼದಲ್ಲಿ ನಡೆಯುವ ಮೂಲಕ ಸಂವಿಧಾನದ ಪ್ರತಿಜ್ಞೆಯನ್ನು ಪೂರೈಸೋಣ.
ಧನ್ಯವಾದಗಳು!
ಜೈ ಹಿಂದ್!
ಜೈ ಭಾರತ್!
*****
(Release ID: 1895195)
Visitor Counter : 301
Read this release in:
English
,
Urdu
,
Hindi
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Malayalam