ಪ್ರಧಾನ ಮಂತ್ರಿಯವರ ಕಛೇರಿ
'ನಾಗ್ಪುರ ಮೆಟ್ರೊ 2ನೇ ಹಂತ'ಕ್ಕೆ ಶಂಕುಸ್ಥಾಪನೆ ನೆರವೇರಿಸಿ 'ನಾಗ್ಪುರ ಮೆಟ್ರೊ ಒಂದನೇ ಹಂತ'ವನ್ನು ದೇಶಕ್ಕೆ ಸಮರ್ಪಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ಫ್ರೀಡಂ ಪಾರ್ಕ್ ಮೆಟ್ರೊ ನಿಲ್ದಾಣದಿಂದ ಖಾಪ್ರಿ ಮೆಟ್ರೊ ನಿಲ್ದಾಣದವರೆಗೆ ಮೆಟ್ರೊ ರೈಲಿನಲ್ಲಿ ಪ್ರಯಾಣಿಸಿದ ಪ್ರಧಾನಿ ಮೋದಿ
Posted On:
11 DEC 2022 11:46AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು 'ನಾಗ್ಪುರ ಮೆಟ್ರೋದ ಒಂದನೇ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸಿ 'ನಾಗ್ಪುರ ಮೆಟ್ರೋ 2ನೇ ಹಂತಕ್ಕೆ ಖಾಪ್ರಿ ಮೆಟ್ರೋ ನಿಲ್ದಾಣದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ಖಾಪ್ರಿಯಿಂದ ಆಟೋಮೋಟಿವ್ ಸ್ಕ್ವೇರ್ ಮತ್ತು ಪ್ರಜಾಪತಿ ನಗರದಿಂದ ಲೋಕಮಾನ್ಯ ನಗರಕ್ಕೆ ಎರಡು ಉದ್ಘಾಟನಾ ಮೆಟ್ರೋ ರೈಲುಗಳಿಗೆ ಪ್ರಧಾನಮಂತ್ರಿಗಳು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು. ನಾಗ್ಪುರ ಮೆಟ್ರೋದ ಒಂದನೇ ಹಂತವನ್ನು 8,650 ಕೋಟಿ ರೂಪಾಯಿಗಿಂತಲೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಎರಡನೇ ಹಂತವನ್ನು 6,700 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು.
ಫ್ರೀಡಂ ಪಾರ್ಕ್ ಮೆಟ್ರೋ ನಿಲ್ದಾಣದಿಂದ ನಾಗ್ಪುರ ಮೆಟ್ರೋದಲ್ಲಿ ಸವಾರಿ ಮಾಡಿದ ನಂತರ ಪ್ರಧಾನಿ ಖಾಪ್ರಿ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದರು. ಫ್ರೀಡಂ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಹತ್ತುವ ಮೊದಲು ಪ್ರಧಾನಮಂತ್ರಿಯವರು ನಾಗ್ಪುರ ಮೆಟ್ರೋ ರೈಲು ಯೋಜನೆಯನ್ನು ಮತ್ತು 'ಸಪ್ನೋ ಸೆ ಬೆಹ್ತಾರ್' ಪ್ರದರ್ಶನವನ್ನು ವೀಕ್ಷಿಸಿದರು. ಎಎಫ್‌ಸಿ ಗೇಟ್‌ನಲ್ಲಿ ಸ್ವತಃ ಇ-ಟಿಕೆಟ್ ಖರೀದಿಸಿದ ಪ್ರಧಾನ ಮಂತ್ರಿಗಳು, ವಿದ್ಯಾರ್ಥಿಗಳು, ನಾಗರಿಕರು ಮತ್ತು ಅಧಿಕಾರಿಗಳ ಜೊತೆ ಪ್ರಯಾಣಿಸಿದರು. ಪ್ರಯಾಣದುದ್ದಕ್ಕೂ ಅವರೊಂದಿಗೆ ಸಂವಾದ ನಡೆಸಿದರು.
ನಂತರ ಪ್ರಧಾನ ಮಂತ್ರಿಗಳು ಟ್ವೀಟ್ ಮಾಡಿ, ನಾಗ್ಪುರ ಮೆಟ್ರೋದ ಒಂದನೇ ಹಂತದ ಉದ್ಘಾಟನೆಯ ಈ ಸಂದರ್ಭದಲ್ಲಿ ನಾನು ನಾಗ್ಪುರದ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎರಡು ಮೆಟ್ರೋ ರೈಲುಗಳ ಸಂಚಾರಕ್ಕೆ ಚಾಲನೆ ನೀಡಿ ಮೆಟ್ರೋದಲ್ಲಿ ಸವಾರಿ ಮಾಡಿದೆನು. ಮೆಟ್ರೋ ಪ್ರಯಾಣ ಆರಾಮದಾಯಕ ಮತ್ತು ಅನುಕೂಲಕರವಾಗಿದೆ ಎಂದು ಬರೆದುಕೊಂಡಿದ್ದಾರೆ.
ಪ್ರಧಾನ ಮಂತ್ರಿಯವರ ಇಂದಿನ ಕಾರ್ಯಕ್ರಮದ ಕುರಿತು ಪ್ರಧಾನಿ ಕಾರ್ಯಾಲಯ ಕೂಡ ಟ್ವೀಟ್ ಮಾಡಿದೆ.
"ನಾಗ್ಪುರ ಮೆಟ್ರೋದಲ್ಲಿ, ಪ್ರಧಾನ ಮಂತ್ರಿ ವಿದ್ಯಾರ್ಥಿಗಳು, ಸ್ಟಾರ್ಟ್-ಅಪ್ ವಲಯದವರು ಮತ್ತು ಬೇರೆ ನಾಗರಿಕರೊಂದಿಗೆ ಸಂವಾದ ನಡೆಸಿದರು." ಎಂದು ಹೇಳಿದೆ.
ಪ್ರಧಾನಮಂತ್ರಿಯವರಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಏಕನಾಥ್ ಶಿಂಧೆ, ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ಭಗತ್ ಸಿಂಗ್ ಕೋಶ್ಯಾರಿ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಮೆಟ್ರೋದಲ್ಲಿ ಖಾಪ್ರಿ ಮೆಟ್ರೋ ನಿಲ್ದಾಣದಲ್ಲಿ ಜೊತೆಯಾದರು.
ಹಿನ್ನೆಲೆ
ನಗರದ ಬೆಳವಣಿಗೆಯನ್ನು ಕ್ರಾಂತಿಗೊಳಿಸುವ ಮತ್ತೊಂದು ಹೆಜ್ಜೆಯಲ್ಲಿ, ಪ್ರಧಾನಮಂತ್ರಿಯವರು ನಾಗ್ಪುರ ಮೆಟ್ರೋದ ಒಂದನೇ ಹಂತವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಖಾಪ್ರಿಯಿಂದ ಆಟೋಮೋಟಿವ್ ಸ್ಕ್ವೇರ್ (Orange line) ಮತ್ತು ಪ್ರಜಾಪತಿ ನಗರದಿಂದ ಲೋಕಮಾನ್ಯ ನಗರಕ್ಕೆ (Aqua line) ಎರಡು ಮೆಟ್ರೋ ರೈಲುಗಳಿಗೆ ಖಾಪ್ರಿ ಮೆಟ್ರೋ ನಿಲ್ದಾಣದಲ್ಲಿ ಚಾಲನೆ ನೀಡಿದರು. ನಾಗ್ಪುರ ಮೆಟ್ರೋದ ಮೊದಲ ಹಂತವನ್ನು 8,650 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ನಾಗ್ಪುರ ಮೆಟ್ರೋದ ಎರಡನೇ ಹಂತವನ್ನು 6,700 ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅದರ ಶಂಕುಸ್ಥಾಪನೆಯನ್ನೂ ಪ್ರಧಾನಮಂತ್ರಿಯವರು ನೆರವೇರಿಸಿದರು.
*****
(Release ID: 1882478)
Visitor Counter : 154
Read this release in:
Tamil
,
Telugu
,
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Malayalam