ಪ್ರಧಾನ ಮಂತ್ರಿಯವರ ಕಛೇರಿ

ಇಂಡೋನೇಷ್ಯಾದ ಬಾಲಿಯಲ್ಲಿ ಭಾರತೀಯ ಸಮುದಾಯದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 15 NOV 2022 4:40PM by PIB Bengaluru

ನಮಸ್ತೆ! ವಣಕ್ಕಮ್ !

ಎಲ್ಲರಿಗೂ ನಮಸ್ಕಾರ!   ಇಂಡೋನೇಷ್ಯಾದ ಬಾಲಿಗೆ ಬಂದಾಗ ಪ್ರತಿಯೊಬ್ಬ ಭಾರತೀಯನಲ್ಲೂ ವಿಭಿನ್ನ ಭಾವನೆ ಇರುತ್ತದೆ. ನಾನು ಕೂಡ ಅದೇ ಭಾವನೆಗಳನ್ನು ಅನುಭವಿಸುತ್ತಿದ್ದೇನೆ.  ಭಾರತವು ಸಾವಿರಾರು ವರ್ಷಗಳಿಂದ ಬಾಂಧವ್ಯವನ್ನು ಹೊಂದಿರುವ ಜನರು ಮತ್ತು ಸ್ಥಳವು ಮತ್ತು ಅದರ ಬಗ್ಗೆ ಅನೇಕ ತಲೆಮಾರುಗಳು ಸಾವಿರಾರು ವರ್ಷಗಳಿಂದ ಬಂದು ಹೋಗಿವೆ ಎಂದು ಕೇಳುತ್ತಲೇ ಇರುತ್ತಾರೆ, ಆದರೆ ಅದೇ ಸಂಪ್ರದಾಯವು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದಿದೆ, ಇದು ವಿಭಿನ್ನ ಭಾವನೆಯ  ಸಂತೋಷವನ್ನು ನೀಡುತ್ತದೆ 
 
ಬಾಲಿಯಿಂದ ಸುಮಾರು 1500 ಕಿಲೋಮೀಟರ್ ದೂರದಲ್ಲಿರುವ ಇಲ್ಲಿ ಬಾಲಿಯ ಸಂಪ್ರದಾಯಗಳನ್ನು ಆಚರಿಸುತ್ತಿರುವಾಗ ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ, ಭಾರತದ ಕಟಕ್ ನಗರದಲ್ಲಿ ಮಹಾನದಿ ನದಿಯ ದಡದಲ್ಲಿ ಬಾಲಿ ಜಾತ್ರೆಯ ಹಬ್ಬವನ್ನು ಆಚರಿಸಲಾಗುತ್ತದೆ. ಏನಿದು ಬಾಲಿ ಜಾತ್ರೆ? ಈ ಹಬ್ಬವು ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಾವಿರಾರು ವರ್ಷಗಳ ವ್ಯಾಪಾರ ಸಂಬಂಧವನ್ನು ಆಚರಿಸುತ್ತದೆ. ಇಂಡೋನೇಷ್ಯಾದ ಜನರು  ಈ ವರ್ಷದ ಬಾಲಿ ಜಾತ್ರೆಯ ಛಾಯಾಚಿತ್ರಗಳನ್ನು ಅಂತರ್ಜಾಲದಲ್ಲಿ ನೋಡಿದಾಗ, ಅವರು ನಿಜವಾಗಿಯೂ ಹೆಮ್ಮೆ ಮತ್ತು ಸಂತೋಷ ಪಡುತ್ತಾರೆ . ಕೊರೊನಾದಿಂದಾಗಿ ಜಾತ್ರೆಯು ಸಮಸ್ಯೆಗಳನ್ನು ಎದುರಿಸಿತು, ಆದರೆ ಈಗ ಒಡಿಶಾದಲ್ಲಿ ಬಾಲಿ ಜಾತ್ರೆಯನ್ನು ಹಲವಾರು ವರ್ಷಗಳ ನಂತರ ವೈಭವ, ದಿವ್ಯತೆ ಮತ್ತು ಲಕ್ಷಾಂತರ ಜನರ ಭಾಗವಹಿಸುವಿಕೆಯೊಂದಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತಿದೆ. ಅಲ್ಲಿಯ ಜನರು ಬಾಲಿ ಜಾತ್ರೆಯ ನೆನಪಿಗಾಗಿ ಸ್ಪರ್ಧೆ ನಡೆಸುತ್ತಿದ್ದಾರೆ ಎಂದು ನನಗೆ ಹೇಳಿದರು. ಅವರು ವಿಶ್ವ ದಾಖಲೆಯನ್ನು ನಿರ್ಮಿಸಲು ಕಾಗದದ ದೋಣಿಗಳನ್ನು ತೇಲಿ ಬಿಡಲು ಯೋಜಿಸಿದ್ದಾರೆ. ಇಂದು ಒಡಿಶಾದಲ್ಲಿ ನೆರೆದಿರುವ ಜನರು ಭೌತಿಕವಾಗಿ ಅಲ್ಲಿದ್ದಾರೆ ಆದರೆ ಅವರ ಮನಸ್ಸು ನಿಮ್ಮೊಂದಿಗೆ ಬಾಲಿಯಲ್ಲಿದೆ ಎಂದು ಅರ್ಥ,.

ಸ್ನೇಹಿತರೇ,

ನಮ್ಮ ಮಾತುಕತೆಯ ಸಮಯದಲ್ಲಿ, ನಾವು ಆಗಾಗ್ಗೆ 'ಈ ಪ್ರಪಂಚ ಬಹಳ ಚಿಕ್ಕದು' ಎಂದು ಹೇಳುತ್ತೇವೆ. ನಾವು ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಂಬಂಧವನ್ನು ನೋಡಿದರೆ, ಇದು ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಸಮುದ್ರದ ಬೃಹತ್ ಅಲೆಗಳು ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಂಬಂಧವನ್ನು ದಣಿವರಿಯದ ಉತ್ಸಾಹದಿಂದ ತುಂಬಿವೆ.  ನಮ್ಮ ಸಂಬಂಧಗಳು ಕೂಡ ಆ ಅಲೆಗಳಂತೆ ತೇಲುತ್ತಲೇ ಇರುತ್ತವೆ.  ಕಳಿಂಗ ಮತ್ತು ಮೇಡಂಗ್‌ನಂತಹ ಸಾಮ್ರಾಜ್ಯಗಳ ಮೂಲಕ ಭಾರತದ ತತ್ವಶಾಸ್ತ್ರ ಮತ್ತು ಸಂಸ್ಕೃತಿ ಇಂಡೋನೇಷ್ಯಾದ ನೆಲವನ್ನು ತಲುಪಿದ ಸಮಯವಿತ್ತು.  ಮತ್ತು ಇಂದು ಭಾರತ ಮತ್ತು ಇಂಡೋನೇಷ್ಯಾ 21ನೇ ಶತಮಾನದಲ್ಲಿ ಅಭಿವೃದ್ಧಿಗಾಗಿ ಪರಸ್ಪರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿವೆ. 

ಇಂಡೋನೇಷ್ಯಾ ದೇಶವು ಭಾರತದಿಂದ ಬಂದ ಜನರನ್ನು ಪ್ರೀತಿಯಿಂದ ಸ್ವೀಕರಿಸಿತು ಮತ್ತು ಅವರನ್ನು ತನ್ನ ಸಮಾಜದೊಳಗೆ ಸೇರಿಸಿಕೊಂಡಿತು. ಅದಕ್ಕಾಗಿಯೇ ಇಂದು ನೀವೆಲ್ಲರೂ ಇಂಡೋನೇಷ್ಯಾದ ಅಭಿವೃದ್ಧಿ ಮತ್ತು ಸಮೃದ್ಧಿಗೆ ಕೊಡುಗೆ ನೀಡುತ್ತಿದ್ದೀರಿ. ನಮ್ಮ ಅನೇಕ ಸಿಂಧಿ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಮತ್ತು ಭಾರತದಿಂದ ಬಂದ ನಮ್ಮ ಸಿಂಧಿ ಕುಟುಂಬದ ಸಹೋದರರು ಮತ್ತು ಸಹೋದರಿಯರು ಜವಳಿ ಮತ್ತು ಕ್ರೀಡಾ ವಸ್ತುಗಳ ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಚಲನಚಿತ್ರ ಮತ್ತು ಟಿವಿ ಉದ್ಯಮದಲ್ಲಿಯೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ರತ್ನಗಳು, ವಜ್ರಗಳು, ಗಣಿಗಳು ಮತ್ತು ಕೃಷಿಯಲ್ಲಿ ತೊಡಗಿರುವ ಗುಜರಾತ್‌ನ ಅನೇಕ ಜನರಿದ್ದಾರೆ. ಇಂಜಿನಿಯರ್‌ಗಳು, ಚಾರ್ಟರ್ಡ್ ಅಕೌಂಟೆಂಟ್‌ಗಳು, ಭಾರತದ ವೃತ್ತಿಪರರು ಇಂಡೋನೇಷ್ಯಾದ ಅಭಿವೃದ್ಧಿಯಲ್ಲಿ ಭಾಗಿಗಳಾಗಿದ್ದಾರೆ. ಇಲ್ಲಿಯ ಸಂಸ್ಕೃತಿ ಮತ್ತು ಕಲೆಗಳನ್ನು ಮತ್ತಷ್ಟು ಶ್ರೀಮಂತಗೊಳಿಸಲು ಕೊಡುಗೆ ನೀಡುತ್ತಿರುವ ಅನೇಕ ತಮಿಳು ಮಾತನಾಡುವ ಕಲಾವಿದರಿದ್ದಾರೆ. ಸುಮಾರು 3-4 ವರ್ಷಗಳ ಹಿಂದೆ ಭಾರತವು ಇಂಡೋನೇಷ್ಯಾದ ನ್ಯೋಮನ್ ನುವಾರ್ತಾ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಿದಾಗ ಭಾರತದ ರಾಷ್ಟ್ರಪತಿ ಭವನವು ಚಪ್ಪಾಳೆಯಿಂದ ಪ್ರತಿಧ್ವನಿಸುತ್ತಿತ್ತು ಎಂದು ನನಗೆ ನೆನಪಿದೆ. ಅವರ ‘ಗರುಡ ವಿಷ್ಣು ಕೆಂಚನ’ ಕಲಾಕೃತಿಯನ್ನು ಮೆಚ್ಚದ ಭಾರತೀಯರೇ ಇರಲಾರರು. ಅದೇ ರೀತಿ ಇಂಡೋನೇಷ್ಯಾದ ವಯಾನ್ ಡಿಬಿಯಾ ಮತ್ತು ಆಗಸ್ ಇಂದ್ರ ಉದಯನ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದಾಗ ಅವರ ಬಗ್ಗೆ ಸಾಕಷ್ಟು ತಿಳಿದುಕೊಂಡೆ. ಇಂದು ಇಲ್ಲಿ ಉಪಸ್ಥಿತರಿರುವ ಅಗಸ್ ಇಂದ್ರ ಉದಯನ ಜಿಯವರ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಬಾಲಿಯಲ್ಲಿ ಮಹಾತ್ಮ ಗಾಂಧಿಯವರ ವಿಚಾರಗಳನ್ನು ಮುಂದಕ್ಕೆ ಕೊಂಡೊಯ್ಯಲು ಅವರು ಶ್ರಮಿಸುತ್ತಿದ್ದಾರೆ. ಅವರ ಸಂದರ್ಶನವೊಂದರಲ್ಲಿ, ಅವರು ಭಾರತದ ಅತಿದೊಡ್ಡ ವಿಶೇಷತೆ ಎಂದರೆ ಪ್ರತಿಯೊಬ್ಬ ಭಾರತೀಯನ ರಕ್ತನಾಳಗಳಲ್ಲಿ ಇರುವ ‘ಅತಿಥಿ ದೇವೋ ಭವ’ ಎಂದು ಹೇಳಿದರು.  ನಾನು ಸಂದರ್ಶನವನ್ನು ಓದಿದ್ದೇನೆ, ಆದರೆ ನಾನು ಇನ್ನೊಂದು ವಿಷಯವನ್ನು ಹೇಳಲು ಬಯಸುತ್ತೇನೆ, ಭಾರತವು ಅದರ ಬಾಂಧವ್ಯಕ್ಕಾಗಿ ಪ್ರಶಂಸಿಸಲ್ಪಟ್ಟಿರಬಹುದು, ಆದರೆ ಇಂಡೋನೇಷ್ಯಾದ ಜನರ ಪ್ರೀತಿಯೇನೂ ಕಡಿಮೆಯಿಲ್ಲ. ಕಳೆದ ಬಾರಿ ಜಕಾರ್ತಾಕ್ಕೆ ಬಂದಾಗ ಇಂಡೋನೇಷ್ಯಾದ ಜನರ ಆತ್ಮೀಯತೆ ಮತ್ತು ಪ್ರೀತಿಯನ್ನು ನಾನು ನೋಡಿದೆ ಮತ್ತು ಅನುಭವಿಸಿದೆ. ನನ್ನ ಬಗ್ಗೆ ತುಂಬಾ ಮರ್ಯಾದೆ, ಗೌರವ, ಪ್ರೀತಿ, ವಾತ್ಸಲ್ಯ ಮತ್ತು ಬಾಂಧವ್ಯ ಇತ್ತು. ಅಧ್ಯಕ್ಷ ಜೋಕೊ ವಿಡೋಡೊ ಅವರೊಂದಿಗೆ ನಾನು ಗಾಳಿಪಟಗಳನ್ನು ಹಾರಿಸಿದ  ಸಂತಸದ ಘಳಿಗೆಯನ್ನು ನಾನು ನೆನಪಿಸಿಕೊಳ್ಳುತ್ತೇನೆ. ನಾವಿಬ್ಬರೂ ಗಾಳಿಪಟ ಹಾರಿಸಲು ಹೋಗಿದ್ದೆವು. ಅದು ಅದ್ಭುತವಾಗಿತ್ತು. ನನಗೆ ಗುಜರಾತ್‌ನಲ್ಲಿ ಸಂಕ್ರಾಂತಿಯಂದು ಗಾಳಿಪಟ ಹಾರಿಸಿದ ಅನುಭವವಿದೆ ಮತ್ತು ಇಂಡೋನೇಷ್ಯಾದಲ್ಲಿ ಜನರು ಸಂಕ್ರಾಂತಿಯಂದು ಸಾಕಷ್ಟು ಗಾಳಿಪಟಗಳನ್ನು ಹಾರಿಸುತ್ತಾರೆ ಎಂದು ನನಗೆ ತಿಳಿದಿದೆ.
ಭಾರತ ಮತ್ತು ಇಂಡೋನೇಷ್ಯಾ ಸಂಬಂಧವು ಕೇವಲ ಸಂತೋಷದ ಸಮಯದಲ್ಲಿ ಮಾತ್ರ ಅಲ್ಲ. ಸುಖ ದುಃಖಗಳೆರಡರಲ್ಲೂ ನಾವು ಜೊತೆಯಲ್ಲಿರುವವರು. 2018 ರಲ್ಲಿ ಇಂಡೋನೇಷ್ಯಾದಲ್ಲಿ ಭಾರಿ ಭೂಕಂಪ ಸಂಭವಿಸಿದಾಗ, ಭಾರತವು ತಕ್ಷಣವೇ ಆಪರೇಷನ್ ಸಮುದ್ರ ಮೈತ್ರಿಯನ್ನು ಪ್ರಾರಂಭಿಸಿತು. ಆ ವರ್ಷ ನಾನು ಜಕಾರ್ತಕ್ಕೆ ಬಂದಾಗ ನಾನು ಒಂದು ವಿಷಯ ಹೇಳಿದೆ ಭಾರತ ಮತ್ತು ಇಂಡೋನೇಷ್ಯಾ ನಡುವೆ 90 ನಾಟಿಕಲ್ ಮೈಲುಗಳ ಅಂತರವಿರಬಹುದು ಆದರೆ ವಾಸ್ತವದಲ್ಲಿ ನಾವು 90 ನಾಟಿಕಲ್ ಮೈಲುಗಳಷ್ಟು ದೂರದಲ್ಲಿಲ್ಲ, ನಾವು 90 ನಾಟಿಕಲ್ ಮೈಲುಗಳಷ್ಟು ಹತ್ತಿರವಿದ್ದೇವೆ ಎಂದು.

ಸ್ನೇಹಿತರೇ,

ಭಾರತ ಮತ್ತು ಇಂಡೋನೇಷ್ಯಾ ಒಟ್ಟಾಗಿ ಪ್ರತಿ ಕ್ಷಣವನ್ನು ಸಂರಕ್ಷಿಸಿರುವುದು ತುಂಬಾ ಇದೆ. ಬಾಲಿಯ ಈ ಭೂಮಿ ಮಹರ್ಷಿ ಮಾರ್ಕಂಡೇಯ ಮತ್ತು ಮಹರ್ಷಿ ಅಗಸ್ತ್ಯರ ತಪಸ್ಸಿನಿಂದ ಪವಿತ್ರವಾಗಿದೆ. ಭಾರತದಲ್ಲಿ ಹಿಮಾಲಯ ಇದ್ದರೆ, ಬಾಲಿಯಲ್ಲಿ ಅಗುಂಗ್ ಪರ್ವತವಿದೆ. ಭಾರತದಲ್ಲಿ ಗಂಗೆ ಇದ್ದರೆ, ಬಾಲಿಯಲ್ಲಿ ತೀರ್ಥ ಗಂಗೆ ಇದೆ. ನಾವು ಭಾರತದಲ್ಲಿ ಪ್ರತಿಯೊಂದು ಶುಭ ಕಾರ್ಯಗಳಿಗೆ ಗಣಪತಿಯನ್ನು ಪೂಜಿಸುತ್ತೇವೆ ಮತ್ತು ಇಲ್ಲಿಯೂ ಸಹ ಗಣೇಶನು ಪ್ರತಿ ಮನೆಯಲ್ಲೂ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶುಭವನ್ನು ಹರಡುತ್ತಾನೆ. ಹುಣ್ಣಿಮೆಯ ಉಪವಾಸ, ಏಕಾದಶಿಯ ಮಹಿಮೆ, ತ್ರಿಕಾಲ ಸಂಧ್ಯಾ ಮೂಲಕ ಸೂರ್ಯಾರಾಧನೆಯ ಸಂಪ್ರದಾಯ, ನಮ್ಮನ್ನು ಸಂಪರ್ಕಿಸುವ ಮಾ ಸರಸ್ವತಿಯ ರೂಪದಲ್ಲಿ ಜ್ಞಾನದ ಆರಾಧನೆ ಮುಂತಾದ ಅಸಂಖ್ಯಾತ ವಿಷಯಗಳಿವೆ. ಬಾಲಿಯ ಜನರು ಮಹಾಭಾರತದ ಕಥೆಗಳೊಂದಿಗೆ ಬೆಳೆಯುತ್ತಾರೆ. ಮತ್ತು ನಾನು ಗುಜರಾತ್‌ನ ಶ್ರೀಕೃಷ್ಣನ ಭೂಮಿಯಾದ ದ್ವಾರಕಾಧೀಶದಲ್ಲಿ ಬೆಳೆದಿದ್ದೇನೆ. ನನ್ನ ಜೀವನ ಅಲ್ಲಿಯೇ ಕಳೆಯಿತು. ಬಾಲಿಯ ಜನರು ಮಹಾಭಾರತದ ಬಗ್ಗೆ ಯಾವ ರೀತಿಯ ನಂಬಿಕೆಯನ್ನು ಹೊಂದಿದ್ದಾರೆ, ಭಾರತದ ಜನರು ಬಾಲಿಯ ಜನರ ಬಗ್ಗೆ ಅದೇ ರೀತಿಯ ಬಾಂಧವ್ಯವನ್ನು ಹೊಂದಿದ್ದಾರೆ. ನೀವು ಇಲ್ಲಿ ಭಗವಾನ್ ವಿಷ್ಣು ಮತ್ತು ರಾಮನನ್ನು ಪೂಜಿಸುತ್ತೀರಿ ಮತ್ತು ಭಾರತದಲ್ಲಿ ರಾಮನ ಜನ್ಮಸ್ಥಳದ ಮೇಲೆ ಭವ್ಯವಾದ ರಾಮಮಂದಿರದ ಅಡಿಪಾಯವನ್ನು ಹಾಕಿದಾಗ ನಾವು ಇಂಡೋನೇಷ್ಯಾದ ರಾಮಾಯಣ ಸಂಪ್ರದಾಯವನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇವೆ. ಕೆಲವು ವರ್ಷಗಳ ಹಿಂದೆ, ನಾವು ರಾಮಾಯಣ ಉತ್ಸವವನ್ನು ಆಯೋಜಿಸಿದಾಗ ಇಂಡೋನೇಷ್ಯಾದ ಅನೇಕ ಕಲಾವಿದರು ಭಾರತಕ್ಕೆ ಬಂದರು. ಅವರು ತಮ್ಮ ಯಾತ್ರೆಯ ಅಂತಿಮ ಹಂತದಲ್ಲಿ ಅಯೋಧ್ಯೆಗೆ ಬರುವ ಮೊದಲು ಅಹಮದಾಬಾದ್, ಹೈದರಾಬಾದ್ ಮತ್ತು ಲಕ್ನೋದಲ್ಲಿ ಪ್ರದರ್ಶನ ನೀಡಿದರು. ಸಮಾರೋಪ ಸಮಾರಂಭ ಅಯೋಧ್ಯೆಯಲ್ಲಿ ನಡೆದಿದ್ದು, ಭಾರಿ ಚಪ್ಪಾಳೆ ಗಿಟ್ಟಿಸಿತು. ಭಾರತದಾದ್ಯಂತ ಪತ್ರಿಕೆಗಳು ಅವರ ಪ್ರದರ್ಶನಗಳನ್ನು ಪ್ರಶಂಸಿಸಿದವು.

ಸಹೋದರ ಸಹೋದರಿಯರೇ,

ಬಾಲಿಯಲ್ಲಿ ತನ್ನ ಜೀವಿತಾವಧಿಯಲ್ಲಿ ಒಮ್ಮೆ ಅಯೋಧ್ಯೆ ಅಥವಾ ದ್ವಾರಕೆಗೆ ಭೇಟಿ ನೀಡಲು ಇಷ್ಟಪಡದ ಯಾವುದೇ ವ್ಯಕ್ತಿ ಇರುವುದಿಲ್ಲ. ಭಾರತದಲ್ಲಿಯೂ ಸಹ, ಜನರು ಪ್ರಂಬನನ್ ದೇವಾಲಯಗಳು ಮತ್ತು ಗರುಡ ವಿಷ್ಣು ಕೆಂಚನ ಭವ್ಯವಾದ ಪ್ರತಿಮೆಗೆ ಭೇಟಿ ನೀಡಲು ಉತ್ಸುಕರಾಗಿದ್ದಾರೆ. ಕೊರೊನಾ ಅವಧಿಯ ಮೊದಲು ಒಂದು ವರ್ಷದಲ್ಲಿ ಐದು ಲಕ್ಷಕ್ಕೂ ಹೆಚ್ಚು ಭಾರತೀಯರು ಬಾಲಿಗೆ ಭೇಟಿ ನೀಡಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಸ್ನೇಹಿತರೇ,

ಪರಂಪರೆ ಒಂದೇ ರೀತಿ ಇದ್ದಾಗ, ಮಾನವೀಯತೆಯ ಮೇಲಿನ ನಂಬಿಕೆ ಸಾಮಾನ್ಯವಾದಾಗ, ಪ್ರಗತಿಗೆ ಸಾಮಾನ್ಯ ಮಾರ್ಗಗಳನ್ನು ಮಾಡಲಾಗುತ್ತದೆ. ಕೆಲವು ತಿಂಗಳ ಹಿಂದೆ, ಭಾರತವು ಆಗಸ್ಟ್ 15 ರಂದು ತನ್ನ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿತು. ಇಂಡೋನೇಷ್ಯಾದ ಸ್ವಾತಂತ್ರ್ಯ ದಿನವು ಆಗಸ್ಟ್ 17 ರಂದು ಬರುತ್ತದೆ, ಭಾರತದ ಸ್ವಾತಂತ್ರ್ಯ ದಿನದ ಎರಡು ದಿನಗಳ ನಂತರ, ಆದರೆ ಇಂಡೋನೇಷ್ಯಾವು ಭಾರತಕ್ಕಿಂತ ಎರಡು ವರ್ಷಗಳ ಹಿಂದೆ ಸ್ವತಂತ್ರವಾಗುವ ಅನುಕೂಲ ಹೊಂದಿತ್ತು.  ಭಾರತವು ಇಂಡೋನೇಷ್ಯಾದಿಂದ ಕಲಿಯಲು ಬಹಳಷ್ಟಿದೆ ಮತ್ತು ಭಾರತವು ತನ್ನ 75 ವರ್ಷಗಳ ಅಭಿವೃದ್ಧಿ ಪಯಣದಿಂದ ಇಂಡೋನೇಷ್ಯಾಕ್ಕೆ ಸಾಕಷ್ಟು ಕೊಡುಗೆಯನ್ನು ನೀಡುತ್ತದೆ.  ಭಾರತದ ಪ್ರತಿಭೆ, ತಂತ್ರಜ್ಞಾನ, ನಾವೀನ್ಯ ಮತ್ತು ಉದ್ಯಮಗಳು ಪ್ರಪಂಚದಲ್ಲಿ ತಮ್ಮದೇ ಆದ ಗುರುತನ್ನು ಸೃಷ್ಟಿಸಿವೆ. ಇಂದು ಜಗತ್ತಿನಲ್ಲಿ ಅಸಂಖ್ಯಾತ ಕಂಪನಿಗಳಿವೆ, ಅವರ ಸಿಇಒಗಳು ಭಾರತೀಯ ಮೂಲದವರು. ಇಂದು ವಿಶ್ವದ ಹತ್ತು ಯುನಿಕಾರ್ನ್‌ಗಳಲ್ಲಿ ಒಂದು ಭಾರತದ್ದು. ಇಂದು ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಇಂದು ಡಿಜಿಟಲ್ ವಹಿವಾಟಿನಲ್ಲಿ ಭಾರತ ವಿಶ್ವದಲ್ಲೇ ಅಗ್ರಸ್ಥಾನದಲ್ಲಿದೆ. ಜಾಗತಿಕ ಫಿನ್‌ಟೆಕ್‌ನಲ್ಲಿ ಇಂದು ಭಾರತವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ. ಇಂದು ಭಾರತವು ಐಟಿಬಿಪಿಎನ್‌ ಗಾಗಿ ಹೊರಗುತ್ತಿಗೆಯಲ್ಲಿ ಪ್ರಪಂಚದಲ್ಲೇ ಮುಂದೆ ಇದೆ. ಇಂದು ಭಾರತವು ಸ್ಮಾರ್ಟ್‌ಫೋನ್ ದತ್ತಾಂಶ ಬಳಕೆಯಲ್ಲಿ ವಿಶ್ವದಲ್ಲಿ ಅಗ್ರಸ್ಥಾನದಲ್ಲಿದೆ. ಇಂದು ಭಾರತವು ಅನೇಕ ಔಷಧಿಗಳ ಪೂರೈಕೆಯಲ್ಲಿ ಮತ್ತು ಅನೇಕ ಲಸಿಕೆಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದೆ.

ಸ್ನೇಹಿತರೇ,

2014ಕ್ಕಿಂತ ಮೊದಲು ಮತ್ತು 2014 ರ ನಂತರದ ಭಾರತಕ್ಕೂ ದೊಡ್ಡ ವ್ಯತ್ಯಾಸವಿದೆ, ದೊಡ್ಡ ವ್ಯತ್ಯಾಸ ಮೋದಿಯವರಿಂದಲ್ಲ. ದೊಡ್ಡ ವ್ಯತ್ಯಾಸವೆಂದರೆ ವೇಗ ಮತ್ತು ಕೌಶಲ್ಯದಲ್ಲಿ. ಇಂದು ಭಾರತವು ಅಭೂತಪೂರ್ವ ವೇಗದಲ್ಲಿ ಮತ್ತು ಊಹಿಸಲಾಗದ ಪ್ರಮಾಣದಲ್ಲಿ ಕೆಲಸ ಮಾಡುತ್ತಿದೆ. ಈಗ ಭಾರತ ಸಣ್ಣದಾಗಿ ಯೋಚಿಸುವುದಿಲ್ಲ. ಒಂದು ವೇಳೆ ಪ್ರತಿಮೆ ನಿರ್ಮಿಸಿದರೆ ಅದು ವಿಶ್ವದಲ್ಲೇ ಅತಿ ದೊಡ್ಡದು. ಇದು ಒಂದು ಕ್ರೀಡಾಂಗಣವನ್ನು ನಿರ್ಮಿಸಿದರೆ, ಅದು ವಿಶ್ವದಲ್ಲೇ ದೊಡ್ಡದಾಗಿರುತ್ತದೆ. ಭಾರತವು 2014 ರಿಂದ 320 ದಶಲಕ್ಷಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆದಿದೆ. ಇದರರ್ಥ ನಾವು ಅಮೆರಿಕದ ಒಟ್ಟು ಜನಸಂಖ್ಯೆಯಷ್ಟು ಬ್ಯಾಂಕ್ ಖಾತೆಗಳನ್ನು ತೆರೆದಿದ್ದೇವೆ.

ಭಾರತವು 2014 ರಿಂದ ಸುಮಾರು 30 ದಶಲಕ್ಷ ಬಡವರಿಗೆ ಉಚಿತ ಮನೆಗಳನ್ನು ನಿರ್ಮಿಸಿದೆ. ಒಬ್ಬ ವ್ಯಕ್ತಿಯು ಮನೆ ಹೊಂದಿದ್ದಾಗ, ಅವನು 'ಲಕ್ಷಾಧಿಪತಿʼ  ಆಗುತ್ತಾನೆ. ಮತ್ತು ನಾನು 30 ದಶಲಕ್ಷ ಮನೆಗಳ ಬಗ್ಗೆ ಮಾತನಾಡುವಾಗ, ಇದರ ಅರ್ಥವೇನು? ಇದರರ್ಥ ನಾವು ಪ್ರತಿ ಕುಟುಂಬಕ್ಕೆ ಮಾತ್ರವಲ್ಲ, ಆಸ್ಟ್ರೇಲಿಯಾದ ಪ್ರತಿಯೊಬ್ಬ ನಾಗರಿಕರಿಗೂ ಸಮಾನವಾದ ಮನೆಗಳನ್ನು ನಿರ್ಮಿಸಿದ್ದೇವೆ. ಕಳೆದ ಏಳು-ಎಂಟು ವರ್ಷಗಳಲ್ಲಿ ಭಾರತವು 55,000 ಕಿಲೋಮೀಟರ್ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಿದೆ.  ನಾನು ಪ್ರಮಾಣದ ಬಗ್ಗೆ ಮಾತನಾಡುತ್ತಿದ್ದೇನೆ ಮತ್ತು ಅದು ಭೂಮಿಯ ಒಂದೂವರೆ ಸುತ್ತುಗಳಿಗೆ ಸಮನಾಗಿರುತ್ತದೆ. ಇಂದು ಭಾರತವು ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಎಲ್ಲ ಜನರಿಗೆ 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ನೀಡುತ್ತಿದೆ.  5 ಲಕ್ಷದವರೆಗಿನ ವೈದ್ಯಕೀಯ ಬಿಲ್‌ಗಳ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ.. ಈ ಯೋಜನೆಯ ಲಾಭ ಎಷ್ಟು ಜನ ಪಡೆಯುತ್ತಾರೆ? 5 ಲಕ್ಷದವರೆಗಿನ ವೈದ್ಯಕೀಯ ಸೌಲಭ್ಯಗಳು ಇಡೀ ಯುರೋಪಿಯನ್ ಒಕ್ಕೂಟದ ಒಟ್ಟು ಜನಸಂಖ್ಯೆಗಿಂತ ಹೆಚ್ಚಿನ ಜನರಿಗೆ ಲಭ್ಯವಿದೆ. ಕೊರೊನಾ ಅವಧಿಯಲ್ಲಿ ಭಾರತವು ತನ್ನ ನಾಗರಿಕರಿಗೆ ನೀಡಿದ ಉಚಿತ ಲಸಿಕೆ ಡೋಸ್‌ಗಳ ಸಂಖ್ಯೆಯನ್ನು ನಾನು ಲೆಕ್ಕ ಹಾಕಿದರೆ, ಅದು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಒಟ್ಟು ಜನಸಂಖ್ಯೆಗಿಂತ ಎರಡೂವರೆ ಪಟ್ಟು ಹೆಚ್ಚು. ಇದನ್ನು ಕೇಳಿದಾಗ ಹೆಮ್ಮೆಯಿಂದ ಎದೆಯುಬ್ಬುವುದಲ್ಲವೇ? ನಿಮಗೆ ಹೆಮ್ಮೆಯೆನಿಸುವುದಿಲ್ಲವೇ?  ಹಾಗಾಗಿ ಭಾರತ ಬದಲಾಗಿದೆ ಎಂದು ನಾನು ಹೇಳುತ್ತೇನೆ.

ಸ್ನೇಹಿತರೇ,

ತನ್ನ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಾ, ತನ್ನ ಪರಂಪರೆಯನ್ನು ಶ್ರೀಮಂತಗೊಳಿಸುತ್ತಾ, ತನ್ನ ಬೇರುಗಳೊಂದಿಗೆ ಸಂಪರ್ಕವನ್ನು ಉಳಿಸಿಕೊಂಡು, ಭಾರತವು ಈಗ ಆಕಾಶವನ್ನು ಮುಟ್ಟುವ ಗುರಿಯೊಂದಿಗೆ ಅಭಿವೃದ್ಧಿ ಹೊಂದಿದ ದೇಶವಾಗುವ  ಗುರಿಯೊಂದಿಗೆ ಹೊರಟಿದೆ. ಆದರೆ ಭಾರತದ ಈ ಗುರಿ ನಮಗೆ ಮಾತ್ರ ಅಲ್ಲ.  ನಾವು ಸ್ವಾರ್ಥಿಗಳಲ್ಲ ಮತ್ತು ಅದು ನಮ್ಮ ಸಂಸ್ಕಾರವಲ್ಲ.  ಇಂದು, 21 ನೇ ಶತಮಾನದಲ್ಲಿ ಭಾರತದಿಂದ ಜಗತ್ತು ನಿರೀಕ್ಷೆಗಳನ್ನು ಹೊಂದಿದೆ. ಭಾರತವು ಈ ನಿರೀಕ್ಷೆಗಳನ್ನು ತನ್ನ ಜವಾಬ್ದಾರಿ ಎಂದು ಪರಿಗಣಿಸುತ್ತದೆ ಮತ್ತು ನಾವು ಪ್ರಪಂಚದ ಒಳಿತಿಗಾಗಿ ಮುಂದುವರಿಯಲು ನಿರ್ಧರಿಸಿದ್ದೇವೆ. ಇಂದು ಭಾರತವು ತನ್ನ ಅಭಿವೃದ್ಧಿಗಾಗಿ ‘ಅಮೃತ ಕಾಲ’ದ ಮಾರ್ಗಸೂಚಿಯನ್ನು ಸಿದ್ಧಪಡಿಸಿದಾಗ, ಅದು ಪ್ರಪಂಚದ ಆರ್ಥಿಕ ಮತ್ತು ರಾಜಕೀಯ ಆಕಾಂಕ್ಷೆಗಳನ್ನು ಸಹ ಒಳಗೊಂಡಿದೆ.

ಇಂದು, ಭಾರತವು ಸ್ವಾವಲಂಬಿ ಭಾರತದ ದೃಷ್ಟಿಕೋನವನ್ನು ಮುಂದಿಟ್ಟಾಗ, ಅದು ಜಾಗತಿಕ ಕಲ್ಯಾಣದ ಮನೋಭಾವವನ್ನೂ ಒಳಗೊಂಡಿದೆ. ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತವು ‘ಒಂದು ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್’ ಎನ್ನುವ ಮಂತ್ರವನ್ನು ನೀಡಿದೆ. ಜಾಗತಿಕ ಯೋಗಕ್ಷೇಮವನ್ನು ಬಲಪಡಿಸಲು ಭಾರತವು ‘ಒಂದು ಭೂಮಿ, ಒಂದು ಆರೋಗ್ಯ’ ಅಭಿಯಾನವನ್ನು ಪ್ರಾರಂಭಿಸಿದೆ. ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸುವಾಗ ಭಾರತವು ದ್ವೀಪ ರಾಷ್ಟ್ರಗಳಿಗೆ ವರದಾನವಾಗಿ ಕೆಲಸ ಮಾಡುತ್ತಿದೆ. ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಎದುರಿಸಲು, ಭಾರತವು ವಿಶ್ವಕ್ಕೆ ‘ಮಿಷನ್ ಲೈಫ್’ ರೂಪದಲ್ಲಿ ಪರಿಹಾರವನ್ನು ನೀಡಿದೆ. 'ಮಿಷನ್ ಲೈಫ್' ಎಂದರೆ ಪರಿಸರಕ್ಕಾಗಿ ಜೀವನಶೈಲಿ, ಅಂದರೆ, ಭೂಮಿಯ ಪ್ರತಿಯೊಬ್ಬ ನಾಗರಿಕನು ಪರಿಸರ ಸ್ನೇಹಿ ಮತ್ತು ಹವಾಮಾನ ಬದಲಾವಣೆಯ ಸವಾಲನ್ನು ಪ್ರತಿ ಕ್ಷಣವೂ ಎದುರಿಸುವ ಅಂತಹ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು. ಇಂದು, ಇಡೀ ಪ್ರಪಂಚವು ಪರಿಸರ ಸ್ನೇಹಿ ಮತ್ತು ಸಮಗ್ರ ಆರೋಗ್ಯ ರಕ್ಷಣೆಯತ್ತ ಆಕರ್ಷಿತವಾಗುತ್ತಿರುವಾಗ, ಭಾರತದ ಯೋಗ ಮತ್ತು ಆಯುರ್ವೇದವು ಇಡೀ ಮಾನವಕುಲಕ್ಕೆ ಕೊಡುಗೆಯಾಗಿದೆ. ಸ್ನೇಹಿತರೇ, ಆಯುರ್ವೇದದ ವಿಷಯಕ್ಕೆ ಬಂದಾಗ, ಭಾರತ ಮತ್ತು ಇಂಡೋನೇಷ್ಯಾ ನಡುವಿನ ಮತ್ತೊಂದು ಸಂಪರ್ಕವನ್ನು ನಾನು ನೆನಪಿಸಿಕೊಳ್ಳುತ್ತೇನೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಆಯುರ್ವೇದಿಕ್ ವಿಶ್ವವಿದ್ಯಾಲಯ ಮತ್ತು ಯೂನಿವರ್ಸಿಟೀಸ್ ಹಿಂದೂ ಇಂಡೋನೇಷಿಯಾ ನಡುವೆ ಒಪ್ಪಂದವಾಗಿತ್ತು. ಕೆಲವು ವರ್ಷಗಳ ನಂತರ ಇಲ್ಲಿನ ವಿಶ್ವವಿದ್ಯಾನಿಲಯದಲ್ಲಿ ಆಯುರ್ವೇದ ಆಸ್ಪತ್ರೆಯೂ ಸ್ಥಾಪನೆಯಾಗಿರುವುದು ನನಗೆ ಸಂತಸ ತಂದಿದೆ.

ಸ್ನೇಹಿತರೇ,

ʼವಸುಧೈವ ಕುಟುಂಬಕಂ’ ಅಂದರೆ, ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಪರಿಗಣಿಸುವ ಭಾರತದ ಈ ಮನೋಭಾವವು ಜಾಗತಿಕ ಕಲ್ಯಾಣಕ್ಕೆ ದಾರಿ ಮಾಡಿಕೊಡುತ್ತದೆ. ಕೊರೊನಾ ಅವಧಿಯಲ್ಲಿ ಭಾರತವು ಔಷಧಿಗಳಿಂದ ಲಸಿಕೆಗಳವರೆಗೆ ಅಗತ್ಯವಾದ ಸಂಪನ್ಮೂಲಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸಿದೆ ಮತ್ತು ಇಡೀ ಜಗತ್ತು ಅದರ ಪ್ರಯೋಜನವನ್ನು ಪಡೆದುಕೊಂಡಿದೆ. ಭಾರತದ ಸಾಮರ್ಥ್ಯವು ಅನೇಕ ದೇಶಗಳಿಗೆ , ರಕ್ಷಾಕವಚದಂತೆ ಕೆಲಸ ಮಾಡಿದೆ. ನಾವು ವಿಶೇಷವಾಗಿ ನಮ್ಮ ನೆರೆಹೊರೆಯವರು ಮತ್ತು ಇಂಡೋನೇಷ್ಯಾದಂತಹ ಸ್ನೇಹಪರ ದೇಶಗಳೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದೇವೆ.  ಅಂತೆಯೇ, ಇಂದು ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಸೂಪರ್ ಪವರ್ ಆಗಿ ಹೊರಹೊಮ್ಮುತ್ತಿದೆ ಮತ್ತು ದಕ್ಷಿಣ ಏಷ್ಯಾದ ದೇಶಗಳು ವಿಶೇಷವಾಗಿ ಅದರ ಪ್ರಯೋಜನಗಳನ್ನು ಪಡೆಯುತ್ತಿವೆ.

ರಕ್ಷಣಾ ಕ್ಷೇತ್ರದಲ್ಲಿ ದಶಕಗಳ ಕಾಲ ವಿದೇಶಿ ಆಮದಿನ ಮೇಲೆ ಅವಲಂಬಿತವಾಗಿದ್ದ ಭಾರತ ಇಂದು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. ವಿಶ್ವದಲ್ಲಿ ಬ್ರಹ್ಮೋಸ್ ಕ್ಷಿಪಣಿ ಅಥವಾ ತೇಜಸ್ ಯುದ್ಧ ವಿಮಾನದ ಆಕರ್ಷಣೆ ನಿರಂತರವಾಗಿ ಹೆಚ್ಚುತ್ತಿದೆ. ಇಂದು ಭಾರತವು ದೊಡ್ಡ ಗುರಿಗಳನ್ನು ಹಾಕಿಕೊಳ್ಳುತ್ತಿದೆ ಮತ್ತು ಅವುಗಳನ್ನು ಸಾಧಿಸಲು ಶ್ರಮಿಸುತ್ತಿದೆ. ನಿರ್ಣಯದ ಮೂಲಕ ಈ ಯಶಸ್ಸಿನ ಮಂತ್ರವು 21 ನೇ ಶತಮಾನದ ನವ ಭಾರತಕ್ಕೆ ಸ್ಫೂರ್ತಿಯಾಗಿದೆ.  ಇಂದು, ಈ ಸಂದರ್ಭದಲ್ಲಿ, ಮುಂದಿನ ‘ಪ್ರವಾಸಿ ಭಾರತೀಯ ಸಮ್ಮೇಳನʼಕ್ಕೂ ನಾನು ನಿಮ್ಮನ್ನು ಆಹ್ವಾನಿಸುತ್ತೇನೆ. ಈ ಕಾರ್ಯಕ್ರಮವು ಜನವರಿ 9 ರಂದು ನಡೆಯುತ್ತದೆ. ಈ ಬಾರಿ ಮಧ್ಯಪ್ರದೇಶದ ಇಂದೋರ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕಳೆದ 5-6 ಸಲ ದೇಶದ ಸ್ವಚ್ಛ ನಗರಿ ಎಂಬ ಹೆಗ್ಗಳಿಕೆಗೆ ಇಂದೋರ್ ಪಾತ್ರವಾಗಿದೆ. ನೀವು ಇಂದೋರ್‌ನಲ್ಲಿರುವ ಪ್ರವಾಸಿ ಭಾರತೀಯ ಕಾರ್ಯಕ್ರಮಕ್ಕೆ ಬರಬೇಕು ಮತ್ತು ಅದಕ್ಕೆ ಅನುಗುಣವಾಗಿ ನಿಮ್ಮ ದಿನಾಂಕಗಳನ್ನು ಹೊಂದಿಸಿಕೊಳ್ಳಬೇಕು. ಇಂದೋರ್‌ ಗೆ ಬಂದಾಗ ಅಹಮದಾಬಾದ್‌ನಲ್ಲಿ 1-2 ದಿನಗಳ ನಂತರ ಗಾಳಿಪಟ ಉತ್ಸವವಿದೆ.  ಇಂಡೋನೇಷ್ಯಾದ ಜನರು ಗಾಳಿಪಟ ಉತ್ಸವದಲ್ಲಿ ಭಾಗವಹಿಸದಿರಲು ಸಾಧ್ಯವೇ? ಮತ್ತು ನೀವು ಬಂದಾಗ, ಒಬ್ಬಂಟಿಯಾಗಿ ಬರಬೇಡಿ,  ನಿಮ್ಮ ಕುಟುಂಬದೊಂದಿಗೆ ಮಾತ್ರವಲ್ಲದೆ ಕೆಲವು ಇಂಡೋನೇಷಿಯನ್ ಕುಟುಂಬಗಳನ್ನು ಸಹ ಕರೆ ತನ್ನಿ. ಭಾರತ ಮತ್ತು ಇಂಡೋನೇಷ್ಯಾ ನಡುವಿನ ಸಂಬಂಧಗಳನ್ನು ಬಲಪಡಿಸುವಲ್ಲಿ ನಿಮ್ಮ ಸಹಕಾರ ಮತ್ತು ಸಕ್ರಿಯ ಕೊಡುಗೆ ಮುಂದುವರಿಯುತ್ತದೆ ಎಂದು ನನಗೆ ಖಾತ್ರಿಯಿದೆ. ನೀವೆಲ್ಲರೂ ನಿಮ್ಮ ‘ಕರ್ಮಭೂಮಿ’ಯ ಶ್ರೇಯೋಭಿವೃದ್ಧಿಗಾಗಿ ಮುಂದುವರಿಯಬೇಕು ಮತ್ತು ನಿಮ್ಮ ಕೈಲಾದಷ್ಟು ಕೊಡುಗೆ ನೀಡಬೇಕು. ಇದು ಭಾರತದ ತತ್ತ್ವ. ಇದು ನಮ್ಮ ಜವಾಬ್ದಾರಿಯೂ ಹೌದು. ನಾನು ಇಲ್ಲಿ ಬೋಹ್ರಾ ಸಮಾಜದ ಅನೇಕ ಸ್ನೇಹಿತರನ್ನು ನೋಡಬಹುದು. ಮತ್ತು ನಾನು ಸೈಯದ್ನಾ ಸಾಹಿಬ್ ಅವರೊಂದಿಗೆ ಅತ್ಯಂತ ನಿಕಟ ಒಡನಾಟವನ್ನು ಹೊಂದಿದ್ದು ನನ್ನ ಅದೃಷ್ಟ. ನಾನು ಪ್ರಪಂಚದ ಯಾವುದೇ ಭಾಗಕ್ಕೆ ಭೇಟಿ ನೀಡಿದಾಗ ನನ್ನ ಬೋಹ್ರಾ ಕುಟುಂಬವನ್ನು ನೋಡಿದಾಗ ನನಗೆ ತುಂಬಾ ಸಂತೋಷವಾಗುತ್ತದೆ.

ಸ್ನೇಹಿತರೇ,
ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿದ್ದೀರಿ, ಸಮಯ ಮೀಸಲಿಟ್ಟಿದ್ದೀರಿ ಮತ್ತು ಉತ್ಸಾಹದಿಂದ ತುಂಬಿದ್ದೀರಿ. ಒಡಿಶಾದ ಬಾಲಿ ಜಾತ್ರೆಯಲ್ಲಿ ಇರುವ ಅದೇ ಉತ್ಸಾಹವನ್ನು ಇಲ್ಲಿಯೂ ಕಾಣುತ್ತಿದ್ದೇನೆ. ಭಾರತದ ಬಗೆಗಿನ ನಿಮ್ಮ ಪ್ರೀತಿ, ವಾತ್ಸಲ್ಯ ಮತ್ತು ಭಕ್ತಿಗಾಗಿ ನನ್ನ ಹೃದಯದಾಳದಿಂದ ನಿಮಗೆ ತುಂಬಾ ಧನ್ಯವಾದಗಳು.  ನಿಮಗೆ ಅನೇಕ ಶುಭಾಶಯಗಳು!

ಧನ್ಯವಾದಗಳು, ಸ್ನೇಹಿತರೇ.
 
ಸೂಚನೆ:    ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

****



(Release ID: 1878043) Visitor Counter : 119