ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಹಮದಾಬಾದ್ ನ ಅಸರ್ವದಲ್ಲಿ 2,900 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ರೈಲ್ವೆ ಯೋಜನೆಗಳನ್ನು ಲೋಕಾರ್ಪಣೆ ಮಾಡಿದ ಪ್ರಧಾನಮಂತ್ರಿ


" ಏಕ್ತಾ ದಿವಸ್ ನಲ್ಲಿ ಈ ಯೋಜನೆಯನ್ನು ಸಮರ್ಪಿಸುವುದು ಹೆಚ್ಚು ವಿಶೇಷವಾಗಿದೆ "

" ಡಬಲ್ ಇಂಜಿನ್ ಸರ್ಕಾರದಿಂದಾಗಿ 'ಗತಿ' ಮತ್ತು ಅಭಿವೃದ್ಧಿಯ 'ಶಕ್ತಿ' ಹೆಚ್ಚುತ್ತಿದೆ "

" ದೇಶಾದ್ಯಂತದ ರೈಲ್ವೆ ನಿಲ್ದಾಣಗಳ ಪರಿಸ್ಥಿತಿಯಲ್ಲಿ ಸುಧಾರಣೆ ಇಂದು ಸ್ಪಷ್ಟವಾಗಿ ಗೋಚರಿಸುತ್ತಿದೆ"

" ಬಡವರು ಮತ್ತು ಮಧ್ಯಮ ವರ್ಗದವರು ಒಂದು ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಲಭ್ಯವಿದ್ದ ವಾತಾವರಣವನ್ನು ಹೊಂದುತ್ತಿದ್ದಾರೆ"

" ಅಸಮತೋಲನದ ಅಭಿವೃದ್ಧಿ ನಮ್ಮ ದೇಶದಲ್ಲಿ ದೊಡ್ಡ ಸವಾಲಾಗಿದೆ. ಇದನ್ನು ಪರಿಹರಿಸಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ "

Posted On: 31 OCT 2022 8:06PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್ ನ ಅಸರ್ವದಲ್ಲಿ 2,900 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಎರಡು ರೈಲ್ವೆ ಯೋಜನೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

ಬಳಿಕ ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂದು ಗುಜರಾತಿನ ಅಭಿವೃದ್ಧಿ ಮತ್ತು ಸಂಪರ್ಕಕ್ಕೆ ಒಂದು ದೊಡ್ಡ ದಿನವಾಗಿದೆ ಎಂದು ಹೇಳಿದರು. ದೊಡ್ಡ ಪ್ರದೇಶದಲ್ಲಿ ಬ್ರಾಡ್ ಗೇಜ್ ಮಾರ್ಗದ ಕೊರತೆಯಿಂದಾಗಿ ತೊಂದರೆಗೀಡಾಗಿದ್ದ ಗುಜರಾತ್ ನ ಲಕ್ಷಾಂತರ ಜನರು ಇಂದಿನಿಂದ ಸಾಕಷ್ಟು ಪರಿಹಾರವನ್ನು ಪಡೆಯಲಿದ್ದಾರೆ ಎಂದು ಅವರು ಒತ್ತಿ ಹೇಳಿದರು. ದಶಕಗಳ ಕಾಲ ಕಾದು ಕುಳಿತ ನಂತರ ಈ ಮಾರ್ಗವನ್ನು ಸಮರ್ಪಿಸುವ ಅವಕಾಶ ದೊರೆತಿರುವುದಕ್ಕೆ ಪ್ರಧಾನಮಂತ್ರಿ ಅವರು ಹರ್ಷ ವ್ಯಕ್ತಪಡಿಸಿದರು. ಇಡೀ ಮಾರ್ಗವನ್ನು ಪುನರುಜ್ಜೀವನಗೊಳಿಸಲಾಗಿದ್ದು, ಅಸರ್ವದಿಂದ ಹಿಮ್ಮತ್ ನಗರ ಮಾರ್ಗವಾಗಿ ಉದಯಪುರಕ್ಕೆ ಮೀಟರ್ ಗೇಜ್ ಮಾರ್ಗವನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸಲಾಗಿದೆ ಎಂದು ಪ್ರಧಾನಮಂತ್ರಿ ಅವರು ಒತ್ತಿ ಹೇಳಿದರು. ಗುಜರಾತ್ ನ ಈ ಭಾಗವು ಈಗ ನೆರೆಯ ರಾಜ್ಯವಾದ ರಾಜಸ್ಥಾನ ಮತ್ತು ಇಡೀ ದೇಶದೊಂದಿಗೆ ನೇರವಾಗಿ ಸಂಪರ್ಕ ಹೊಂದಲಿದೆ ಎಂದು ಅವರು ಮಾಹಿತಿ ನೀಡಿದರು. ಲುನಿಧರ್-ಜೆಟಲ್ಸರ್ ನಡುವೆ ಮಾಡಲಾದ ಗೇಜ್ ಪರಿವರ್ತನೆ ಕಾರ್ಯವು ಈ ಪ್ರದೇಶದಲ್ಲಿ ರೈಲು ಸಂಪರ್ಕವನ್ನು ಸುಲಭಗೊಳಿಸುತ್ತದೆ ಮತ್ತು ಇಲ್ಲಿಂದ ಹೊರಡುವ ರೈಲುಗಳು ದೇಶದ ಯಾವುದೇ ಭಾಗಕ್ಕೆ ಹೋಗಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

"ಮಾರ್ಗದ ಮೀಟರ್ ಗೇಜ್ ಲೈನ್ ಅನ್ನು ಬ್ರಾಡ್ ಗೇಜ್ ಗೆ ಬದಲಾಯಿಸಿದಾಗ, ಅದು ಅನೇಕ ಹೊಸ ಸಾಧ್ಯತೆಗಳನ್ನು ತರುತ್ತದೆ," ಎಂದು ಪ್ರಧಾನಮಂತ್ರಿ ಹೇಳಿದರು. ಅಸರ್ವದಿಂದ ಉದಯಪುರವರೆಗಿನ 300 ಕಿ.ಮೀ ಉದ್ದದ ರೈಲು ಮಾರ್ಗವನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸುವುದರೊಂದಿಗೆ, ಗುಜರಾತ್ ಮತ್ತು ರಾಜಸ್ಥಾನದ ಬುಡಕಟ್ಟು ಪ್ರದೇಶಗಳನ್ನು ದೆಹಲಿ ಮತ್ತು ಉತ್ತರ ಭಾರತದೊಂದಿಗೆ ಸಂಪರ್ಕಿಸಲಾಗುವುದು. ಈ ರೈಲು ಮಾರ್ಗವನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸಿರುವುದು ಅಹಮ ದಾಬಾದ್ ಮತ್ತು ದೆಹಲಿಗೆ ಪರ್ಯಾಯ ಮಾರ್ಗವನ್ನು ಲಭ್ಯವಾಗುವಂತೆ ಮಾಡಿದೆ. ಈಗ, ಕಚ್ ನ ಪ್ರವಾಸಿ ಸ್ಥಳಗಳು ಮತ್ತು ಉದಯಪುರದ ಪ್ರವಾಸಿ ಸ್ಥಳಗಳ ನಡುವೆ ನೇರ ರೈಲು ಸಂಪರ್ಕವನ್ನು ಸಹ ಕಲ್ಪಿಸಲಾಗಿದೆ. ಇದು ಕಚ್, ಉದಯಪುರ, ಚಿತ್ತೋರ್ಗಢ ಮತ್ತು ನಾಥದ್ವಾರದ ಪ್ರವಾಸಿ ಸ್ಥಳಗಳಿಗೆ ದೊಡ್ಡ ಉತ್ತೇಜನವನ್ನು ನೀಡುತ್ತದೆ. ಈ ಪ್ರದೇಶದ ವ್ಯಾಪಾರಿಗಳು ದೆಹಲಿ, ಮುಂಬೈ ಮತ್ತು ಅಹಮದಾಬಾದ್ ನಂತಹ ದೊಡ್ಡ ಕೈಗಾರಿಕಾ ಕೇಂದ್ರಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸುವ ಪ್ರಯೋಜನವನ್ನು ಸಹ ಪಡೆಯುತ್ತಾರೆ ಎಂದು ಅವರು ಹೇಳಿದರು. "ವಿಶೇಷವಾಗಿ, ಹಿಮತ್ ನಗರದ ಟೈಲ್ಸ್ ಉದ್ಯಮವು ಸಾಕಷ್ಟು ಸಹಾಯವನ್ನು ಪಡೆಯುತ್ತದೆ," ಎಂದು ಅವರು ತಿಳಿಸಿದರು. ಅಂತೆಯೇ, ಲುನಿಧರ್-ಜೆಟಲ್ಸರ್ ರೈಲು ಮಾರ್ಗವನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸುವುದರೊಂದಿಗೆ, ಧಾಸಾ-ಜೆಟಲ್ಸರ್ ವಿಭಾಗವನ್ನು ಈಗ ಸಂಪೂರ್ಣವಾಗಿ ಬ್ರಾಡ್ ಗೇಜ್ ಆಗಿ ಪರಿವರ್ತಿಸಲಾಗಿದೆ. ಈ ರೈಲು ಮಾರ್ಗವು ಬೊಟಾಡ್, ಅಮ್ರೇಲಿ ಮತ್ತು ರಾಜ್ ಕೋಟ್  ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ, ಇದು ಇಲ್ಲಿಯವರೆಗೆ ಸೀಮಿತ ರೈಲು ಸಂಪರ್ಕವನ್ನು ಹೊಂದಿತ್ತು. ಈ ಮಾರ್ಗ ಪೂರ್ಣಗೊಂಡ ನಂತರ, ಭಾವನಗರ ಮತ್ತು ಅಮ್ರೇಲಿ ಪ್ರದೇಶದ ಜನರು ಈಗ ಸೋಮನಾಥ ಮತ್ತು ಪೋರ್ ಬಂದರ್ ಗೆ ನೇರ ಸಂಪರ್ಕದ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು.

ಈ ಮಾರ್ಗವು ಭಾವನಗರ-ವೆರಾವಲ್ ನಡುವಿನ ದೂರವನ್ನು ಸುಮಾರು 470 ಕಿಲೋಮೀಟರ್ ಗಳಿಂದ 290 ಕಿಲೋಮೀಟರ್ ಗಳಿಗಿಂತ ಕಡಿಮೆಗೆ ಇಳಿಸುತ್ತದೆ, ಆ ಮೂಲಕ ಪ್ರಯಾಣದ ಸಮಯವನ್ನು ಹನ್ನೆರಡು ಗಂಟೆಗಳಿಂದ ಕೇವಲ ಆರೂವರೆ ಗಂಟೆಗಳಿಗೆ ಇಳಿಸುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು. ಅಂತೆಯೇ, ಭಾವನಗರ-ಪೋರ್ ಬಂದರ್ ನಡುವಿನ ದೂರವು ಸುಮಾರು 200 ಕಿಲೋಮೀಟರ್ ಗಳಷ್ಟು ಕಡಿಮೆಯಾಗಿದೆ ಮತ್ತು ಭಾವನಗರ-ರಾಜ್ ಕೋಟ್ ನಡುವಿನ ದೂರವು ಸುಮಾರು 30 ಕಿಲೋಮೀಟರ್ ಗಳಷ್ಟು ಕಡಿಮೆಯಾಗಿದೆ ಎಂದು ಅವರು ಹೇಳಿದರು. ಬ್ರಾಡ್ ಗೇಜ್ ಮಾರ್ಗದಲ್ಲಿ ಚಲಿಸುವ ರೈಲುಗಳು ಗುಜರಾತ್ ನ ಕೈಗಾರಿಕಾ ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ ಮತ್ತು ಪ್ರವಾಸೋದ್ಯಮವನ್ನು ಪ್ರವೇಶಿಸುವಂತೆ ಮಾಡುತ್ತದೆ ಮತ್ತು ಸಂಪರ್ಕ ಕಡಿತಗೊಂಡ ಪ್ರದೇಶಗಳನ್ನು ಸಂಪರ್ಕಿಸುತ್ತದೆ. "ಏಕ್ತಾ ದಿವಸ್ ದಿನದಂದು ಇಂದು ಈ ಯೋಜನೆಯನ್ನು ಸಮರ್ಪಿಸುವುದರಿಂದ ಇದು ಹೆಚ್ಚು ವಿಶೇಷವಾಗಿದೆ," ಎಂದು ಅವರು ಹೇಳಿದರು.

"ಡಬಲ್ ಎಂಜಿನ್ ನ ಸರ್ಕಾರವು ಕೆಲಸ ಮಾಡಿದಾಗ, ಅದರ ಪರಿಣಾಮವು ದುಪ್ಪಟ್ಟು ಮಾತ್ರವಲ್ಲ, ಅದು ಅನೇಕ ಪಟ್ಟು ಇರುತ್ತದೆ," ಎಂದು ಅವರು ಪ್ರತಿಪಾದಿಸಿದರು. ಇಲ್ಲಿ ಒಂದು ಮತ್ತು ಒಂದು ಒಟ್ಟಾಗಿ 2 ಅಲ್ಲ, ಆದರೆ 11 ರ ಶಕ್ತಿಯನ್ನು ಪಡೆದುಕೊಳ್ಳುತ್ತವೆ," " ಡಬಲ್ ಇಂಜಿನ್ ಸರ್ಕಾರದೊಂದಿಗೆ, ಗುಜರಾತ್ ನಲ್ಲಿ ಕೆಲಸದ ವೇಗವು ಹೆಚ್ಚಾಗಿದೆ ಮಾತ್ರವಲ್ಲ, ಅದನ್ನು ವಿಸ್ತರಿಸುವ ಶಕ್ತಿಯೂ ದೊರೆತಿದೆ," ಎಂದು ಅವರು ಹೇಳಿದರು. 2009 ಮತ್ತು 2014 ರ ನಡುವೆ, 125 ಕಿಲೋಮೀಟರ್ ಗಿಂತ ಕಡಿಮೆ ರೈಲ್ವೆ ಮಾರ್ಗಗಳನ್ನು ದ್ವಿಗುಣಗೊಳಿಸಲಾಗಿದೆ ಮತ್ತು 2014 ಮತ್ತು 2022 ರ ನಡುವೆ, ಐದೂವರೆ ಕಿಲೋಮೀಟರ್ ಗಿಂತ ಹೆಚ್ಚು ರೈಲ್ವೆ ಮಾರ್ಗಗಳನ್ನು ದ್ವಿಗುಣಗೊಳಿಸಲಾಗಿದೆ ಎಂದು ಅವರು ಹೇಳಿದರು. ಅಂತೆಯೇ, 2009 ಮತ್ತು 2014 ರ ನಡುವೆ ಗುಜರಾತ್ನಲ್ಲಿ ಕೇವಲ 60 ಕಿ.ಮೀ ಟ್ರ್ಯಾಕ್ ಅನ್ನು ಮಾತ್ರ ವಿದ್ಯುದ್ದೀಕರಣಗೊಳಿಸಲಾಗಿದೆ. ಆದರೆ, 2014 ಮತ್ತು 2022 ರ ನಡುವೆ, 1700 ಕಿ.ಮೀ.ಗಿಂತ ಹೆಚ್ಚು ಟ್ರ್ಯಾಕ್ ಅನ್ನು ವಿದ್ಯುದ್ದೀಕರಣಗೊಳಿಸಲಾಗಿದೆ.

ಪ್ರಮಾಣ ಮತ್ತು ವೇಗವನ್ನು ಸುಧಾರಿಸುವುದರ ಜೊತೆಗೆ, ಗುಣಮಟ್ಟ, ಅನುಕೂಲತೆ, ಸುರಕ್ಷತೆ ಮತ್ತು ಸ್ವಚ್ಛತೆಯಲ್ಲಿ ಸುಧಾರಣೆಯಾಗುತ್ತಿದೆ ಎಂದು ಅವರು ಹೇಳಿದರು. ದೇಶಾದ್ಯಂತ ರೈಲು ನಿಲ್ದಾಣಗಳ ಪರಿಸ್ಥಿತಿಯಲ್ಲಿನ ಸುಧಾರಣೆ ಕುರಿತು ಅವರು ಬೆಳಕು ಚೆಲ್ಲಿದರು. " ಬಡವರು ಮತ್ತು ಮಧ್ಯಮ ವರ್ಗದವರಿಗೆ ಒಂದೇ ರೀತಿಯ ವಾತಾವರಣವನ್ನು ಕಲ್ಪಿಸಲಾಗುತ್ತಿದೆ, ಇದು ಒಂದು ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಲಭ್ಯವಿತ್ತು," ಎಂದು ಅವರು ಹೇಳಿದರು, " ಗಾಂಧಿನಗರ ನಿಲ್ದಾಣ, ಅಹಮದಾಬಾದ್, ಸೂರತ್, ಉಧ್ನಾ, ಸಬರಮತಿ, ಸೋಮನಾಥ ಮತ್ತು ಹೊಸ ಭುಜ್ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ," ಎಂದು ಅವರು ಹೇಳಿದರು. ಡಬಲ್ ಇಂಜಿನ್ ಸರ್ಕಾರದಿಂದಾಗಿ ಮಾತ್ರ ಸಾಧ್ಯವಾಗಿರುವ ಸಾಧನೆಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಗಾಂಧಿನಗರ ಮತ್ತು ಮುಂಬೈ ನಡುವೆ ಪ್ರಾರಂಭವಾದ ಹೊಸ ವಂದೇ ಭಾರತ್ ಎಕ್ಸ್ ಪ್ರೆಸ್ ಸೇವೆಯ ಉದಾಹರಣೆಯನ್ನು ನೀಡಿದರು. ಪಶ್ಚಿಮ ರೈಲ್ವೆಯ ಅಭಿವೃದ್ಧಿಗೆ ಹೊಸ ಆಯಾಮ ನೀಡಲು 12 ಗತಿ ಶಕ್ತಿ ಕಾರ್ಗೋ ಟರ್ಮಿನಲ್ ಗಳನ್ನು ಸಹ ಯೋಜಿಸಲಾಗಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು. " ಮೊದಲ ಗತಿ ಶಕ್ತಿ ಬಹುಮಾದರಿ ಕಾರ್ಗೋ ಟರ್ಮಿನಲ್ ಅನ್ನು ವಡೋದರಾ ವೃತ್ತದಲ್ಲಿ ಪ್ರಾರಂಭಿಸಲಾಗಿದೆ. ಶೀಘ್ರದಲ್ಲೇ ಉಳಿದ ಟರ್ಮಿನಲ್ ಗಳು ಸಹ ತಮ್ಮ ಸೇವೆಗಳನ್ನು ಒದಗಿಸಲು ಸಿದ್ಧವಾಗಿರುತ್ತವೆ," ಎಂದು ಅವರು ಹೇಳಿದರು.

" ಸ್ವಾತಂತ್ರ್ಯದ ದಶಕಗಳ ನಂತರ " ಪ್ರಧಾನಮಂತ್ರಿ ಅವರು, " ಶ್ರೀಮಂತ-ಬಡವರ ನಡುವಿನ ಅಂತರ, ಗ್ರಾಮ ಮತ್ತು ನಗರಗಳ ನಡುವಿನ ಕಂದಕ ಮತ್ತು ಅಸಮತೋಲಿತ ಅಭಿವೃದ್ಧಿ ದೇಶಕ್ಕೆ ಒಂದು ದೊಡ್ಡ ಸವಾಲಾಗಿದೆ. ಇದನ್ನು ಪರಿಹರಿಸಲು ಸರ್ಕಾರ ಕೆಲಸ ಮಾಡುತ್ತಿದೆ. ' ಸಬ್ ಕಾ ವಿಕಾಸ್ ' ನೀತಿಯು ಮಧ್ಯಮ ವರ್ಗದವರಿಗೆ ಮೂಲಸೌಕರ್ಯ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವುದನ್ನು ಒತ್ತಿಹೇಳುತ್ತದೆ ಮತ್ತು ಬಡವರಿಗೆ ಬಡತನದ ವಿರುದ್ಧ ಹೋರಾಡುವ ಮಾರ್ಗವನ್ನು ನೀಡುತ್ತದೆ. " ಪಕ್ಕಾ ಮನೆಗಳು, ಶೌಚಾಲಯಗಳು, ವಿದ್ಯುತ್, ನೀರು, ಅನಿಲ, ಬಡವರಿಗೆ ಉಚಿತ ಚಿಕಿತ್ಸೆ ಮತ್ತು ವಿಮಾ ಸೌಲಭ್ಯಗಳು ಇಂದು ಉತ್ತಮ ಆಡಳಿತದ ಲಕ್ಷಣಗಳಾಗಿವೆ, " ಎಂದು ಅವರು ಹೇಳಿದರು.

ದೇಶದಲ್ಲಿ ಸಂಪರ್ಕ ಮೂಲಸೌಲಭ್ಯಗಳ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ತೀವ್ರ ಬದಲಾವಣೆಯನ್ನು ಪ್ರಧಾನಮಂತ್ರಿ ಅವರು ಗಮನಿಸಿದರು. ಈಗ ಯೋಜಿತವಲ್ಲದ ನಿರ್ಮಾಣಗಳ ಬದಲಿಗೆ, ರೈಲು, ಮೆಟ್ರೋ ಮತ್ತು ಬಸ್ ಗಳಂತಹ ಸಂಪರ್ಕ ಸೌಲಭ್ಯಗಳಿಗೆ ಸಮನ್ವಯಾತ್ಮಕ ವಿಧಾನವಿದೆ. ಮಾರ್ಗಗಳು ಮತ್ತು ವಿಧಾನಗಳ ಒಡಂಬಡಿಕೆಯನ್ನು ಗುರಿಯಾಗಿಸಲಾಗಿದೆ ಎಂದು ಅವರು ಹೇಳಿದರು. ಗುಜರಾತ್ ನ ಕೈಗಾರಿಕಾ ಸ್ವರೂಪ ಕುರಿತು ಒತ್ತಿ ಹೇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಗುಜರಾತಿನ ಬಂದರುಗಳು ಸಶಕ್ತಗೊಂಡಾಗ, ಅದು ಇಡೀ ದೇಶದ ಆರ್ಥಿಕತೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದರು. " ಕಳೆದ 8 ವರ್ಷಗಳಲ್ಲಿ, ಗುಜರಾತ್ ನ ಬಂದರುಗಳ ಸಾಮರ್ಥ್ಯವು ಬಹುತೇಕ ದುಪ್ಪಟ್ಟಾಗಿದೆ," ಎಂದು ಅವರು ಮಾಹಿತಿ ನೀಡಿದರು. ಅಭಿವೃದ್ಧಿ ಪ್ರಕ್ರಿಯೆಯ ನಿರಂತರ ಸ್ವರೂಪವನ್ನು ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, " ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಅಭಿವೃದ್ಧಿ ಹೊಂದಿದ ಗುಜರಾತ್ ಅನ್ನು ನಿರ್ಮಿಸುವುದು ನಮ್ಮ ಧ್ಯೇಯವಾಗಿದೆ," ಎಂದು ಹೇಳಿದರು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿ ಅವರು ಸರ್ದಾರ್ ಪಟೇಲರ ಜಯಂತಿಯನ್ನು ಶ್ಲಾಘಿಸಿದರು ಮತ್ತು ಭಾರತದ ಮೊದಲ ಗೃಹ ಸಚಿವರ ಸಾಧನೆಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುತ್ತಾನೆ ಎಂದು ಹೇಳಿದರು. ರಾಜಸ್ಥಾನ ಸರ್ಕಾರವು ಕೆಲವು ಗುಜರಾತಿ ಪತ್ರಿಕೆಗಳಲ್ಲಿ ಪ್ರಕಟವಾದ ಕೆಲವು ಜಾಹೀರಾತುಗಳಲ್ಲಿ ಸರ್ದಾರ್ ಪಟೇಲರ ಹೆಸರು ಮತ್ತು ಚಿತ್ರ ಇಲ್ಲದಿರುವುದನ್ನು ಪ್ರಧಾನಮಂತ್ರಿ ಅವರು ಟೀಕಿಸಿದರು. " ಸರ್ದಾರ್ ಪಟೇಲರಿಗೆ ಮಾಡಿದ ಇಂತಹ ಅವಮಾನವನ್ನು ಎಂದಿಗೂ ಸಹಿಸಲಾಗುವುದಿಲ್ಲ, ಅದೂ ಗುಜರಾತ್ ನೆಲದಲ್ಲಿ," ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. " ಸರ್ದಾರ್ ಪಟೇಲರಂತೆ ರೈಲ್ವೆಯೂ ಭಾರತವನ್ನು ಸಂಪರ್ಕಿಸುತ್ತದೆ ಮತ್ತು ಈ ಪ್ರಕ್ರಿಯೆಯು ವೇಗ ಮತ್ತು ದಿಕ್ಕಿನೊಂದಿಗೆ ನಿರಂತರವಾಗಿ ಮುಂದುವರಿಯುತ್ತದೆ," ಎಂದು ಪ್ರಧಾನಮಂತ್ರಿ ಮಾತು ಮುಕ್ತಾಯಗೊಳಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ಶ್ರೀಮತಿ ದರ್ಶನ ಜರ್ದೋಶ್, ಸಂಸತ್ ಸದಸ್ಯರು ಮತ್ತು ರಾಜ್ಯ ಸಚಿವರು ಉಪಸ್ಥಿತರಿದ್ದರು.

ಹಿನ್ನೆಲೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಹಮದಾಬಾದ್ ನ ಅಸರ್ವದಲ್ಲಿ 2,900 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಎರಡು ರೈಲ್ವೆ ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು. ಈ ಯೋಜನೆಗಳಲ್ಲಿ ಅಹಮದಾಬಾದ್ (ಅಸರ್ವ)-ಹಿಮ್ಮತ್ ನಗರ - ಉದಯಪುರ ಗೇಜ್ ಕನ್ವರ್ಟೆಡ್ ಲೈನ್ ಮತ್ತು ಲುನಿಧರ್-ಜೆಟಲ್ಸರ್ ಗೇಜ್ ಕನ್ವರ್ಟೆಡ್ ಲೈನ್ ಸೇರಿವೆ. ಭಾವನಗರ-ಜೆತಲ್ಸರ್ ಮತ್ತು ಅಸರ್ವ-ಉದಯಪುರ ನಡುವಿನ ಹೊಸ ರೈಲುಗಳಿಗೆ ಪ್ರಧಾನಮಂತ್ರಿ ಅವರು ಹಸಿರು ನಿಶಾನೆ ತೋರಿದರು.

ದೇಶಾದ್ಯಂತ ಯುನಿ-ಗೇಜ್ ರೈಲು ವ್ಯವಸ್ಥೆಯನ್ನು ಹೊಂದುವ ದೃಷ್ಟಿಯಿಂದ, ರೈಲ್ವೆಯು ಅಸ್ತಿತ್ವದಲ್ಲಿರುವ ಬ್ರಾಡ್ ಗೇಜ್ ಅಲ್ಲದ ರೈಲ್ವೆ ಮಾರ್ಗಗಳನ್ನು ಬ್ರಾಡ್ ಗೇಜ್ ಆಗಿ ಪರಿವರ್ತಿಸುತ್ತಿದೆ. ಪ್ರಧಾನ ಮಂತ್ರಿ ಅವರು ಸಮರ್ಪಿಸುತ್ತಿರುವ ಯೋಜನೆಗಳು ಈ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿವೆ. ಅಹಮದಾಬಾದ್ (ಅಸರ್ವ)-ಹಿಮ್ಮತ್ ನಗರ-ಉದಯಪುರ ಗೇಜ್ ಪರಿವರ್ತಿತ ಮಾರ್ಗವು ಸುಮಾರು 300 ಕಿ.ಮೀ ಉದ್ದವಿದೆ. ಇದು ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಈ ಪ್ರದೇಶದ ಪ್ರವಾಸಿಗರು, ವ್ಯಾಪಾರಿಗಳು, ಉತ್ಪಾದನಾ ಘಟಕಗಳು ಮತ್ತು ಕೈಗಾರಿಕೆಗಳಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ, ಇದು ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಮತ್ತು ಈ ಪ್ರದೇಶದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. 58 ಕಿ.ಮೀ ಉದ್ದದ ಲುನಿಧರ್-ಜೆಟಲ್ಸರ್ ಗೇಜ್ ಕನ್ವರ್ಟೆಡ್ ಲೈನ್ ಪಿಪವಾವ್ ಬಂದರು ಮತ್ತು ಭಾವನಗರಗೆ ವೆರಾವಲ್ ಮತ್ತು ಪೋರ್ ಬಂದರ್ ನಿಂದ ಕಡಿಮೆ ಮಾರ್ಗವನ್ನು ಒದಗಿಸುತ್ತದೆ. ಈ ಯೋಜನೆಯು ಈ ವಿಭಾಗದಲ್ಲಿ ಸರಕು ಸಾಗಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ಇದರಿಂದಾಗಿ ಕಾರ್ಯನಿರತ ಕನಾಲುಗಳು – ರಾಜ್ ಕೋಟ್ - ವಿರಾಮ್ಗಾಮ್ ಮಾರ್ಗದ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಇದು ಈಗ ಗಿರ್ ಅಭಯಾರಣ್ಯ, ಸೋಮನಾಥ ದೇವಾಲಯ, ದಿಯು ಮತ್ತು ಗಿರ್ನಾರ್ ಬೆಟ್ಟಗಳಿಗೆ ತಡೆರಹಿತ ಸಂಪರ್ಕವನ್ನು ಸುಗಮಗೊಳಿಸುತ್ತದೆ, ಇದರಿಂದಾಗಿ ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ.

*****


(Release ID: 1872927) Visitor Counter : 157