ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕೆವಾಡಿಯಾದಲ್ಲಿ ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಭಾಗವಹಿಸಿದ ಪ್ರಧಾನಮಂತ್ರಿ


" ಕರ್ತವ್ಯದ ಮಾರ್ಗ ಮತ್ತು ಜವಾಬ್ದಾರಿಯ ಮಾರ್ಗವು ನಾನು ಇಲ್ಲಿರಲು ಕಾರಣವಾಗಿದೆ ಆದರೆ ನನ್ನ ಹೃದಯವು ಮೊರ್ಬಿ ಅಪಘಾತದ ಸಂತ್ರಸ್ತರೊಂದಿಗೆ ಇದೆ "

" ಸರ್ದಾರ್ ಪಟೇಲರ ದೃಢ ನಿಶ್ಚಯದಿಂದ ಇಡೀ ದೇಶವೇ ಸ್ಫೂರ್ತಿ ಪಡೆಯುತ್ತಿದೆ."

" ಸರ್ದಾರ್ ಪಟೇಲರ ಜಯಂತಿ ಮತ್ತು ಏಕತಾ ದಿವಸ್ ನಮಗೆ ಕ್ಯಾಲೆಂಡರ್ ನಲ್ಲಿ ಕೇವಲ ದಿನಾಂಕಗಳಲ್ಲ, ಅವು ಭಾರತದ ಸಾಂಸ್ಕೃತಿಕ ಶಕ್ತಿಯ ಭವ್ಯ ಆಚರಣೆಗಳಾಗಿವೆ "

" ಗುಲಾಮರ ಮನಃಸ್ಥಿತಿ, ಸ್ವಾರ್ಥ, ತುಷ್ಟೀಕರಣ, ಸ್ವಜನಪಕ್ಷಪಾತ, ದುರಾಸೆ ಮತ್ತು ಭ್ರಷ್ಟಾಚಾರವು ದೇಶವನ್ನು ವಿಭಜಿಸಬಹುದು ಮತ್ತು ದುರ್ಬಲಗೊಳಿಸಬಹುದು "

" ನಾವು ವಿಭಜಕತೆಯ ವಿಷವನ್ನು ಏಕತೆಯ ಅಮೃತದೊಂದಿಗೆ ಎದುರಿಸಬೇಕಾಗಿದೆ "

" ಸರ್ಕಾರದ ಯೋಜನೆಗಳು ಭಾರತದ ಪ್ರತಿಯೊಂದು ಭಾಗವನ್ನೂ ತಲುಪುತ್ತಿವೆ, ಆದರೆ ತಾರತಮ್ಯವಿಲ್ಲದೆ ಕಟ್ಟಕಡೆಯ ವ್ಯಕ್ತಿಯನ್ನು ಸಂಪರ್ಕಿಸುತ್ತಿವೆ "

" ಮೂಲಸೌಕರ್ಯಗಳ ನಡುವಿನ ಅಂತರವು ಕಡಿಮೆಯಾದಷ್ಟೂ, ಏಕತೆಯು ಬಲಗೊಳ್ಳುತ್ತದೆ" 

" ದೇಶದ ಏಕತೆಗಾಗಿ ತಮ್ಮ ಹಕ್ಕುಗಳನ್ನು ತ್ಯಾಗ ಮಾಡಿದ ರಾಜಮನೆತನಗಳ ತ್ಯಾಗಕ್ಕೆ ಸಮರ್ಪಿತವಾದ  ವಸ್ತುಸಂಗ್ರಹಾಲಯವನ್ನು 
ಏಕತಾ ನಗರದಲ್ಲಿ ನಿರ್ಮಿಸಲಾಗುವುದು" 

Posted On: 31 OCT 2022 10:54AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಏಕತೆಯ ಪ್ರತಿಮೆ - ಸರ್ದಾರ್ ಪಟೇಲ್ ಅವರಿಗೆ ಗೌರವ ನಮನ ಸಲ್ಲಿಸಿದರು ಮತ್ತು ರಾಷ್ಟ್ರೀಯ ದಿವಸ್ ಸಂಬಂಧಿತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಆರಂಭದಲ್ಲಿ, ಪ್ರಧಾನಮಂತ್ರಿ ಅವರು ನಿನ್ನೆ (ಭಾನುವಾರ) ಮೊರ್ಬಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದರು. ತಾವು ಕೆವಾಡಿಯಾದಲ್ಲಿದ್ದರೂ, ಮೊರ್ಬಿಯಲ್ಲಿ ಸಂಭವಿಸಿದ ಅಪಘಾತದ ಸಂತ್ರಸ್ತರೊಂದಿಗೆ ನನ್ನ ಹೃದಯವು ಮಿಡಿಯುತ್ತಿದೆ ಎಂದು ಅವರು ಹೇಳಿದರು. " ಒಂದು ಕಡೆ ದುಃಖದಿಂದ ತುಂಬಿದ ಹೃದಯವಿದೆ, ಮತ್ತೊಂದೆಡೆ ಕರ್ಮ ಮತ್ತು ಕರ್ತವ್ಯದ ಮಾರ್ಗವಿದೆ," ಎಂದು ಅವರು ಹೇಳಿದರು. ರಾಷ್ಟ್ರೀಯ ಏಕತಾ ದಿವಸ್ ನಲ್ಲಿ ಕರ್ತವ್ಯ ಮತ್ತು ಜವಾಬ್ದಾರಿಯ ಮಾರ್ಗವೇ ತಮ್ಮನ್ನು ಇಲ್ಲಿಗೆ ಕರೆತಂದಿದೆ ಎಂದು ಅವರು ಒತ್ತಿ ಹೇಳಿದರು. ನಿನ್ನೆಯ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಎಲ್ಲರಿಗೂ ತೀವ್ರ ಸಂತಾಪ ಸೂಚಿಸಿದ ಪ್ರಧಾನಮಂತ್ರಿ ಅವರು, ಮೃತರ ಕುಟುಂಬಗಳೊಂದಿಗೆ ಸರ್ಕಾರ ಹೆಗಲಿಗೆ ಹೆಗಲು ಕೊಟ್ಟು ನಿಂತಿದೆ ಎಂದು ಭರವಸೆ ನೀಡಿದರು. ರಾಜ್ಯ ಸರ್ಕಾರವು ರಕ್ಷಣಾ ಕಾರ್ಯದಲ್ಲಿ ತೊಡಗಿದೆ ಮತ್ತು ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲ ನೆರವನ್ನು ಒದಗಿಸುತ್ತಿದೆ. ಸೇನೆ ಮತ್ತು ವಾಯುಪಡೆಯ ತಂಡಗಳನ್ನು ಹೊರತುಪಡಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದೆ ಮತ್ತು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳಿಗೆ ಸಹ ನೆರವು ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ಮಾಹಿತಿ ನೀಡಿದರು.

ರಕ್ಷಣಾ ಕಾರ್ಯಾಚರಣೆಗಳನ್ನು ಕಾರ್ಯಗತಗೊಳಿಸಲು ಮುಂದಾಳತ್ವ ವಹಿಸಲು ಗುಜರಾತ್ ಮುಖ್ಯಮಂತ್ರಿ ಮೊರ್ಬಿಯನ್ನು ತಲುಪಿದರು ಮತ್ತು ಘಟನೆಗಳ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿದರು ಎಂದು ಅವರು ಈ ವೇಳೆ ಆ ವಿಷಯದ‌ ಕುರಿತು ಗಮನ ಸೆಳೆದರು. ರಕ್ಷಣಾ ಕಾರ್ಯಾಚರಣೆಯ ವಿಷಯಕ್ಕೆ ಬಂದಾಗ ಯಾವುದೇ ನ್ಯೂನತೆಗಳು ಇರುವುದಿಲ್ಲ ಎಂದು ಪ್ರಧಾನಮಂತ್ರಿಯ ಅವರು ದೇಶದ ಜನತೆಗೆ ಭರವಸೆ ನೀಡಿದರು. ದುರಂತದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮ ವಿಭಾಗವನ್ನು ರದ್ದುಗೊಳಿಸಲಾಯಿತು.

2022 ರಲ್ಲಿ ಏಕತಾ ದಿವಸ್ ನ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಅವರು, " ನಾವು ನಮ್ಮ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರೈಸಿದ ವರ್ಷ ಇದಾಗಿದೆ ಮತ್ತು ನಾವು ಹೊಸ ನಿರ್ಣಯಗಳೊಂದಿಗೆ ಮುಂದುವರಿಯುತ್ತಿದ್ದೇವೆ," ಎಂದು ಪ್ರತಿಪಾದಿಸಿದರು. ಕುಟುಂಬ, ಸಮಾಜ ಅಥವಾ ರಾಷ್ಟ್ರ ಯಾವುದೇ ಇರಲಿ, ಪ್ರತಿಯೊಂದು ಹಂತದಲ್ಲೂ ಏಕತೆ ಅತ್ಯಗತ್ಯ ಎಂದು ಪ್ರಧಾನಮಂತ್ರಿ ಹೇಳಿದರು. ಈ ಭಾವನೆಯು ದೇಶಾದ್ಯಂತ 75,000 ಏಕ್ತಾ ಓಟಗಳ ರೂಪದಲ್ಲಿ ಎಲ್ಲೆಡೆ ವ್ಯಕ್ತವಾಗಿದೆ ಎಂದು ಅವರು ಹೇಳಿದರು. " ಸರ್ದಾರ್ ಪಟೇಲ್ ಅವರ ದೃಢ ನಿಶ್ಚಯದಿಂದ ಇಡೀ ದೇಶವು ಸ್ಫೂರ್ತಿ ಪಡೆಯುತ್ತಿದೆ. ಪ್ರತಿಯೊಬ್ಬ ನಾಗರಿಕನೂ ದೇಶದ ಏಕತೆಗಾಗಿ ಮತ್ತು 'ಪಂಚ ಪ್ರಾಣ'ವನ್ನು ಉದ್ದೀಪನಗೊಳಿಸುವ ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಿದ್ದಾನೆ," ಎಂದು ಅವರು ಹೇಳಿದರು.

"ನಮ್ಮ ಸ್ವಾತಂತ್ರ್ಯ ಸಂಗ್ರಾಮವನ್ನು ಸರ್ದಾರ್ ಪಟೇಲರಂತಹ ನಾಯಕರು ಮುನ್ನಡೆಸದಿದ್ದರೆ ಪರಿಸ್ಥಿತಿಯನ್ನು ಊಹಿಸಿಕೊಳ್ಳುವುದು ಕಷ್ಟ. 550 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ವಿಲೀನಗೊಳಿಸದಿದ್ದರೆ ಏನಾಗುತ್ತಿತ್ತು? " ನಮ್ಮ ಸಂಸ್ಥಾನಗಳು ಮಾ ಭಾರತಿಯಲ್ಲಿ ಆಳವಾದ ತ್ಯಾಗ ಮತ್ತು ನಂಬಿಕೆಯನ್ನು ತೋರಿಸದಿದ್ದರೆ ಏನಾಗುತ್ತಿತ್ತು," ಎಂದು ಪ್ರಧಾನಮಂತ್ರಿ ಅವರು ಕೇಳಿದರು. ಈ ಅಸಾಧ್ಯವಾದ ಕಾರ್ಯವನ್ನು ಸರ್ದಾರ್ ಪಟೇಲರು ಪೂರ್ಣಗೊಳಿಸಿದರು ಎಂದು ಅವರು ಹೇಳಿದರು. " ಸರ್ದಾರ್ ಪಟೇಲ್ ಅವರ ಜಯಂತಿ ಮತ್ತು ಏಕತಾ ದಿವಸಗಳು ನಮಗೆ ಕ್ಯಾಲೆಂಡರ್ ನಲ್ಲಿ ಕೇವಲ ದಿನಾಂಕಗಳಲ್ಲ, ಅವು ಭಾರತದ ಸಾಂಸ್ಕೃತಿಕ ಶಕ್ತಿಯ ಭವ್ಯ ಆಚರಣೆಗಳಾಗಿವೆ. ಭಾರತದ ಮಟ್ಟಿಗೆ ಏಕತೆ ಎಂದಿಗೂ ಒತ್ತಾಯವಾಗಿರಲಿಲ್ಲ, ಅದು ಯಾವಾಗಲೂ ನಮ್ಮ ದೇಶದ ಒಂದು ಲಕ್ಷಣವಾಗಿತ್ತು. ಏಕತೆಯೇ ನಮ್ಮ ಅನನ್ಯತೆಯಾಗಿದೆ," ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ನಿನ್ನೆ ಮೊರ್ಬಿಯಲ್ಲಿ ಸಂಭವಿಸಿದಂತಹ ವಿಪತ್ತಿನಲ್ಲಿ, ಇಡೀ ದೇಶವು ಒಂದಾಗಿ ಮುಂದೆ ಬರುತ್ತದೆ ಮತ್ತು ಜನರು ದೇಶದ ಪ್ರತಿಯೊಂದು ಭಾಗದಿಂದ ಪ್ರಾರ್ಥನೆ ಮತ್ತು ಸಹಾಯವನ್ನು ನೀಡುತ್ತಾರೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ರೋಗದ ಸಮಯದಲ್ಲಿ, ಈ ಏಕತೆಯು ಔಷಧ, ಪಡಿತರ ಮತ್ತು ಲಸಿಕೆಯಲ್ಲಿನ ಸಹಕಾರಕ್ಕಾಗಿ 'ತಾಳಿ-ಥಾಲಿ' (ಚಪ್ಪಾಳೆ -ತಟ್ಟೆ) ಎಂಬ ಭಾವನಾತ್ಮಕ ಏಕತೆಯಲ್ಲಿ ಸಂಪೂರ್ಣ ಪ್ರದರ್ಶನಗೊಂಡಿತು. ಕ್ರೀಡಾ ಯಶಸ್ಸುಗಳು ಮತ್ತು ಹಬ್ಬಗಳಲ್ಲಿ ಮತ್ತು ನಮ್ಮ ಗಡಿಗಳು ಬೆದರಿಕೆಗೆ ಒಳಗಾದಾಗ ಮತ್ತು ನಮ್ಮ ಸೈನಿಕರು ಅವುಗಳನ್ನು ರಕ್ಷಿಸಿದಾಗ ಇದೇ ಭಾವನೆಗಳನ್ನು ಕಾಣಬಹುದು. ಇದೆಲ್ಲವೂ ಭಾರತದ ಏಕತೆಯ ಆಳವನ್ನು ಸಂಕೇತಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಏಕತೆಯು ಶತಮಾನಗಳಿಂದ ಆಕ್ರಮಣಕಾರರ ಪಾರ್ಶ್ವಗಳಲ್ಲಿ ಮುಳ್ಳಾಗಿತ್ತು ಮತ್ತು ವಿಭಜನೆಯನ್ನು ಬಿತ್ತುವ ಮೂಲಕ ಅದನ್ನು ದುರ್ಬಲಗೊಳಿಸಲು ಅವರು ಪ್ರಯತ್ನಿಸಿದರು, ಆದಾಗ್ಯೂ, ನಮ್ಮ ಪ್ರಜ್ಞೆಯಲ್ಲಿ ಜೀವಂತ ಪ್ರವಾಹವಾಗಿದ್ದ ಏಕತೆಯ ಅಮೃತದಿಂದ ಅವರ ವಿನ್ಯಾಸಗಳು ವಿಫಲಗೊಂಡವು. ಭಾರತದ ಬೆಳವಣಿಗೆ ಮತ್ತು ಪ್ರಗತಿಯ ಬಗ್ಗೆ ಅಸೂಯೆಪಡುವ ಶಕ್ತಿಗಳು ಇನ್ನೂ ಸಕ್ರಿಯವಾಗಿರುವುದರಿಂದ ಮತ್ತು ಜಾತಿ, ಪ್ರದೇಶ, ಭಾಷೆ ಮತ್ತು ಇತಿಹಾಸದ ಆಧಾರದ ಮೇಲೆ ವಿಭಜನೆಯನ್ನು ಪ್ರಚೋದಿಸುವ ಪ್ರಯತ್ನಗಳು ನಡೆಯುತ್ತಿರುವುದರಿಂದ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಎಂದು ಅವರು ಹೇಳಿದರು. ಗುಲಾಮ ಮನಃಸ್ಥಿತಿ, ಸ್ವಾರ್ಥ, ತುಷ್ಟೀಕರಣ, ಸ್ವಜನಪಕ್ಷಪಾತ, ದುರಾಸೆ ಮತ್ತು ಭ್ರಷ್ಟಾಚಾರದ ವಿರುದ್ಧವೂ ಅವರು ಎಚ್ಚರಿಕೆ ನೀಡಿದರು, ಅದು ದೇಶವನ್ನು ವಿಭಜಿಸಬಹುದು ಮತ್ತು ದುರ್ಬಲಗೊಳಿಸಬಹುದು. " ನಾವು ವಿಭಜನೆಯ ವಿಷವನ್ನು ಏಕತೆಯ ಅಮೃತದೊಂದಿಗೆ ಎದುರಿಸಬೇಕಾಗಿದೆ," ಎಂದು ಅವರು ಹೇಳಿದರು.

" ಏಕತಾ ದಿವಸ್ ಸಂದರ್ಭದಲ್ಲಿ, ಸರ್ದಾರ್ ಸಾಹೇಬರು ನೀಡಿದ ಜವಾಬ್ದಾರಿಯನ್ನು ನಾನು ಪುನರುಚ್ಚರಿಸಲು ಬಯಸುತ್ತೇನೆ," ಎಂದು ಪ್ರಧಾನ ಮಂತ್ರಿ ಹೇಳಿದರು. ರಾಷ್ಟ್ರದ ಏಕತೆಯನ್ನು ಬಲಪಡಿಸುವುದು ನಾಗರಿಕರ ಜವಾಬ್ದಾರಿಯಾಗಿದೆ ಮತ್ತು ದೇಶದ ಪ್ರತಿಯೊಬ್ಬ ನಾಗರಿಕನು ಜವಾಬ್ದಾರಿಯ ಪ್ರಜ್ಞೆಯೊಂದಿಗೆ ಕರ್ತವ್ಯಗಳನ್ನು ನಿರ್ವಹಿಸಲು ಸಿದ್ಧರಾದಾಗ ಮಾತ್ರ ಇದು ಸಂಭವಿಸುತ್ತದೆ ಎಂದು ಅವರು ಹೇಳಿದರು. " ಈ ಜವಾಬ್ದಾರಿಯ ಪ್ರಜ್ಞೆಯೊಂದಿಗೆ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಗಳು ನನಸಾಗುತ್ತವೆ ಮತ್ತು ಭಾರತವು ಅಭಿವೃದ್ಧಿಯ ಪಥದಲ್ಲಿ ಮುಂದುವರಿಯುತ್ತದೆ," ಎಂದು ಪ್ರಧಾನಿ ಹೇಳಿದರು. ಸರ್ಕಾರದ ನೀತಿಗಳು ಯಾವುದೇ ತಾರತಮ್ಯವಿಲ್ಲದೆ ದೇಶದ ಪ್ರತಿಯೊಬ್ಬ ವ್ಯಕ್ತಿಯನ್ನು ತಲುಪುತ್ತಿವೆ ಎಂದು ಅವರು ಹೇಳಿದರು. ಗುಜರಾತ್ ನ ಸೂರತ್ ನ ಜನರಿಗೆ ಸಿಗುವಷ್ಟೇ ಸುಲಭವಾಗಿ ಅರುಣಾಚಲ ಪ್ರದೇಶದ ಸಿಯಾಂಗ್ ನ ಜನರಿಗೆ ಉಚಿತ ಲಸಿಕೆಗಳು ಲಭ್ಯವಾಗುತ್ತವೆ ಎಂದು ಪ್ರಧಾನಮಂತ್ರಿ ಅವರು ಉದಾಹರಣೆಗಳನ್ನು ನೀಡಿದರು. ಏಮ್ಸ್ ನಂತಹ ವೈದ್ಯಕೀಯ ಸಂಸ್ಥೆಗಳನ್ನು ಗೋರಖ್ ಪುರ್ ನಲ್ಲಿ ಮಾತ್ರವಲ್ಲದೆ ಬಿಲಾಸ್ ಪುರ, ದರ್ಭಾಂಗ, ಗುವಾಹಟಿ, ರಾಜ್ ಕೋಟ್ ಮತ್ತು ದೇಶದ ಇತರ ಭಾಗಗಳಲ್ಲಿಯೂ ಕಾಣಬಹುದು. ರಕ್ಷಣಾ ಕಾರಿಡಾರ್ ಗಳ ಅಭಿವೃದ್ಧಿ ಕಾರ್ಯಗಳು ತಮಿಳುನಾಡಿನಲ್ಲಿ ಮಾತ್ರವಲ್ಲದೆ ಉತ್ತರ ಪ್ರದೇಶದಲ್ಲೂ ಭರದಿಂದ ಸಾಗಿವೆ ಎಂದು ಅವರು ಮಾಹಿತಿ ನೀಡಿದರು. ವಿವಿಧ ಪ್ರದೇಶಗಳಲ್ಲಿ ವಿವಿಧ ಭಾಷೆಗಳನ್ನು ಮಾತನಾಡಲಾಗುತ್ತಿದ್ದರೂ ಸಹ, ಸರದಿಯಲ್ಲಿರುವ ಕಟ್ಟಕಡೆಯ ವ್ಯಕ್ತಿಯನ್ನು ಸಂಪರ್ಕಿಸುವಾಗ ಸರ್ಕಾರದ ಯೋಜನೆಗಳು ಭಾರತದ ಪ್ರತಿಯೊಂದು ಭಾಗವನ್ನೂ ತಲುಪುತ್ತಿವೆ ಎಂದು ಪ್ರಧಾನಮಂತ್ರಿ ನುಡಿದರು.

ನಮ್ಮ ದೇಶದ ಲಕ್ಷಾಂತರ ಜನರು ಮೂಲಭೂತ ಅಗತ್ಯ ಸೌಲಭ್ಯಗಳನ್ನು ಪಡೆಯಲು ದಶಕಗಳಿಂದ ಹೇಗೆ ಕಾಯುತ್ತಿದ್ದಾರೆ ಎಂಬುದರ ಮೇಲೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, " ಮೂಲಸೌಕರ್ಯಗಳ ನಡುವಿನ ಅಂತರವು ಕಡಿಮೆಯಾದಷ್ಟೂ, ಏಕತೆ ಬಲಗೊಳ್ಳುತ್ತದೆ," ಎಂದರು.  ಪ್ರತಿಯೊಂದು ಯೋಜನೆಯ ಪ್ರಯೋಜನವು ಪ್ರತಿಯೊಬ್ಬ ಫಲಾನುಭವಿಯನ್ನು ತಲುಪಬೇಕು ಎಂಬ ಉದ್ದೇಶದಿಂದ ಭಾರತವು ಸಂತೃಪ್ತಿಯ ತತ್ವದ ಮೇಲೆ ಕೆಲಸ ಮಾಡುತ್ತಿದೆ ಎಂದು ಹೇಳಿದರು. ಸರ್ವರಿಗೂ ವಸತಿ, ಎಲ್ಲರಿಗೂ ಡಿಜಿಟಲ್ ಸಂಪರ್ಕ, ಎಲ್ಲರಿಗೂ ಸ್ವಚ್ಛ ಅಡುಗೆ ಮತ್ತು ಎಲ್ಲರಿಗೂ ವಿದ್ಯುತ್ ನಂತಹ ಯೋಜನೆಗಳ ಉದಾಹರಣೆಗಳನ್ನು ಪ್ರಧಾನಮಂತ್ರಿ ಅವರು ನೀಡಿದರು. ಶೇ.100ರಷ್ಟು ನಾಗರಿಕರನ್ನು ತಲುಪುವ ಧ್ಯೇಯವು ಇದೇ ರೀತಿಯ ಸೌಲಭ್ಯಗಳಿಗೆ ಮಾತ್ರ ಸೀಮಿತವಾಗಿರದೆ, ಒಗ್ಗಟ್ಟಿನ ಗುರಿಗಳು, ಏಕೀಕೃತ ಅಭಿವೃದ್ಧಿ ಮತ್ತು ಒಗ್ಗಟ್ಟಿನ ಪ್ರಯತ್ನದ ಸಾಮಾನ್ಯ ಉದ್ದೇಶವನ್ನು ಒತ್ತಿಹೇಳುತ್ತದೆ ಎಂದು ನರೇಂದ್ರ ಮೋದಿ ಅವರು ಹೇಳಿದರು. ಜೀವನದ ಮೂಲಭೂತ ಅವಶ್ಯಕತೆಗಳು ದೇಶ ಮತ್ತು ಸಂವಿಧಾನದ ಬಗ್ಗೆ ಸಾಮಾನ್ಯ ಮನುಷ್ಯನ ನಂಬಿಕೆಗೆ ಮಾಧ್ಯಮವಾಗುತ್ತಿವೆ ಮತ್ತು ಶ್ರೀಸಾಮಾನ್ಯನ ವಿಶ್ವಾಸಕ್ಕೆ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಇದು ಸರ್ದಾರ್ ಪಟೇಲರ ಭಾರತದ ದೃಷ್ಟಿಕೋನವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು, " ಪ್ರತಿಯೊಬ್ಬ ಭಾರತೀಯನಿಗೂ ಸಮಾನ ಅವಕಾಶಗಳು ಸಿಗುತ್ತವೆ ಮತ್ತು ಸಮಾನತೆಯ ಪ್ರಜ್ಞೆ ಇರುತ್ತದೆ. ಇಂದು ದೇಶವು ಆ ದೂರದೃಷ್ಟಿಯನ್ನು ನನಸಾಗಿಸಲು ಸಾಕ್ಷಿಯಾಗುತ್ತಿದೆ," ಎಂದು ಹೇಳಿದರು.

ಕಳೆದ 8 ವರ್ಷಗಳಲ್ಲಿ, ದಶಕಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪ್ರತಿಯೊಂದು ವರ್ಗಕ್ಕೂ ದೇಶವು ಆದ್ಯತೆ ನೀಡಿದೆ ಎಂದು ಸ್ಮರಿಸಿದ ಪ್ರಧಾನಮಂತ್ರಿ ಅವರು, ಬುಡಕಟ್ಟು ಜನರ ಹೆಮ್ಮೆಯನ್ನು ಸ್ಮರಿಸಲು ದೇಶವು ಬುಡಕಟ್ಟು ಹೆಮ್ಮೆಯ ದಿನವನ್ನು ಆಚರಿಸುವ ಸಂಪ್ರದಾಯವನ್ನು ಪ್ರಾರಂಭಿಸಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ದೇಶದ ಅನೇಕ ರಾಜ್ಯಗಳಲ್ಲಿ ಬುಡಕಟ್ಟು ವಸ್ತುಸಂಗ್ರಹಾಲಯಗಳನ್ನು ನಿರ್ಮಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. ಮಂಗರ್ ಧಾಮ್ ಮತ್ತು ಜಂಬುಗೋಡದ ಇತಿಹಾಸವನ್ನು ತಿಳಿದುಕೊಳ್ಳುವಂತೆ ದೇಶವಾಸಿಗಳಿಗೆ ಕರೆ ನೀಡಿದ ಪ್ರಧಾನಮಂತ್ರಿ ಅವರು, ವಿದೇಶಿ ಆಕ್ರಮಣಕಾರರು ನಡೆಸಿದ ಅನೇಕ ಹತ್ಯಾಕಾಂಡಗಳ ಮುಂದೆ ಸ್ವಾತಂತ್ರ್ಯವನ್ನು ಸಾಧಿಸಲಾಗಿದೆ ಎಂದು ಹೇಳಿದರು. ಆಗ ಮಾತ್ರ ನಾವು ಸ್ವಾತಂತ್ರ್ಯದ ಮೌಲ್ಯ ಮತ್ತು ಒಗ್ಗಟ್ಟಿನ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಏಕ್ತಾ ನಗರವು ಭಾರತದ ಮಾದರಿ ನಗರವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಇದು ದೇಶದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದಲ್ಲಿ ಅಭೂತಪೂರ್ವವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಜನರು ಮತ್ತು ನಗರದ ಏಕತೆಯು ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ಶಕ್ತಿಯೊಂದಿಗೆ ಅಭಿವೃದ್ಧಿ ಹೊಂದುತ್ತಿದೆ ಎಂದು ಅವರು ಒತ್ತಿ ಹೇಳಿದರು, ಆದರೆ ಅದು ಕೇವಲ ಭವ್ಯವಲ್ಲದೆ, ದೈವಿಕ ದೃಷ್ಟಿಕೋನವನ್ನು ನೀಡುತ್ತದೆ. " ಏಕತಾ ಪ್ರತಿಮೆಯ ರೂಪದಲ್ಲಿ ವಿಶ್ವದ ಅತಿದೊಡ್ಡ ಪ್ರತಿಮೆಯ ಸ್ಫೂರ್ತಿ ನಮ್ಮ ನಡುವೆ ಇದೆ," ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು.

ಏಕ್ತಾ ನಗರದ ಅಭಿವೃದ್ಧಿ ಮಾದರಿಯ ಬಗ್ಗೆ ಬೆಳಕು ಚೆಲ್ಲಿದ ಪ್ರಧಾನಮಂತ್ರಿ ಅವರು, ಪರಿಸರ ಸ್ನೇಹಿ ಮಾದರಿ, ದೇಶವನ್ನು ಬೆಳಗಿಸುವ ಎಲ್.ಇ.ಡಿ.ಗಳೊಂದಿಗೆ ವಿದ್ಯುತ್ ಉಳಿತಾಯದ ಮಾದರಿ, ಸೌರಶಕ್ತಿಯಿಂದ ಚಲಿಸುವ ಸ್ವಚ್ಛ ಸಾರಿಗೆ ವ್ಯವಸ್ಥೆಯ ಮಾದರಿ ಮತ್ತು ವಿವಿಧ ಜಾತಿಯ ಪ್ರಾಣಿಗಳು ಮತ್ತು ಪಕ್ಷಿಗಳ ಸಂರಕ್ಷಣೆಯ ಮಾದರಿಗಳ ಬಗ್ಗೆ ಜನರು ಮಾತನಾಡುವಾಗ ನಗರದ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು. ಮಿಯಾವಾಕಿ ಅರಣ್ಯ ಮತ್ತು ಮೇಜ್ ಗಾರ್ಡನ್ ಅನ್ನು ಇಲ್ಲಿ ಉದ್ಘಾಟಿಸುವ ಅವಕಾಶ ದೊರೆತಿದ್ದನ್ನು ಪ್ರಧಾನಮಂತ್ರಿ ಅವರು ಸ್ಮರಿಸಿದರು. ಏಕ್ತಾ ಮಾಲ್, ಏಕ್ತಾ ನರ್ಸರಿ, ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ವರ್ಲ್ಡ್ ಫಾರೆಸ್ಟ್, ಏಕ್ತಾ ಫೆರ್ರಿ, ಏಕ್ತಾ ರೈಲ್ವೆ ನಿಲ್ದಾಣ ಮತ್ತು ಈ ಎಲ್ಲ ಉಪಕ್ರಮಗಳು ರಾಷ್ಟ್ರೀಯ ಏಕತೆಯನ್ನು ಬಲಪಡಿಸಲು ಸ್ಫೂರ್ತಿಯಾಗಿವೆ ಎಂದು ಅವರು ಒತ್ತಿ ಹೇಳಿದರು.

ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿ ಅವರು, ಸ್ವಾತಂತ್ರ್ಯಾನಂತರ ದೇಶದ ಏಕತೆಯಲ್ಲಿ ಸರ್ದಾರ್ ಸಾಹೇಬರು ವಹಿಸಿದ ಪಾತ್ರವನ್ನು ಪ್ರತಿಪಾದಿಸಿದರು. ಶತಶತಮಾನಗಳ ಕಾಲ ಅಧಿಕಾರದಲ್ಲಿದ್ದ ರಾಜಕುಟುಂಬಗಳು ಸರ್ದಾರ್ ಪಟೇಲರ ಪ್ರಯತ್ನದಿಂದಾಗಿ ದೇಶದ ಏಕತೆಗಾಗಿ ಹೊಸ ವ್ಯವಸ್ಥೆಗೆ ತಮ್ಮ ಹಕ್ಕುಗಳನ್ನು ಕರ್ತವ್ಯನಿಷ್ಠೆಯಿಂದ ತ್ಯಾಗ ಮಾಡಿವೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. ಸ್ವಾತಂತ್ರ್ಯದ ನಂತರ ದಶಕಗಳವರೆಗೆ ಈ ಕೊಡುಗೆಯನ್ನು ನಿರ್ಲಕ್ಷಿಸಲಾಗಿದೆ. " ಈಗ ಆ ರಾಜಮನೆತನಗಳ ತ್ಯಾಗಕ್ಕೆ ಸಮರ್ಪಿತವಾದ ವಸ್ತುಸಂಗ್ರಹಾಲಯವನ್ನು ಏಕ್ತಾ ನಗರದಲ್ಲಿ ನಿರ್ಮಿಸಲಾಗುವುದು. ಇದು ದೇಶದ ಏಕತೆಗಾಗಿ ತ್ಯಾಗ ಮಾಡುವ ಸಂಪ್ರದಾಯವನ್ನು ಹೊಸ ತಲೆಮಾರಿಗೆ ವರ್ಗಾಯಿಸುತ್ತದೆ,", ಎಂದು ಪ್ರಧಾನ ಮಂತ್ರಿ ಅವರು ತಮ್ಮ ಮಾತು ಮುಕ್ತಾಯಗೊಳಿಸಿದರು.

ಹಿನ್ನೆಲೆ

ಪ್ರಧಾನ ಮಂತ್ರಿ ಅವರ ದೂರದೃಷ್ಟಿಯ ಮಾರ್ಗದರ್ಶನದಲ್ಲಿ, ದೇಶದ ಏಕತೆ, ಸಮಗ್ರತೆ ಮತ್ತು ಭದ್ರತೆಯನ್ನು ಸಂರಕ್ಷಿಸಲು ಮತ್ತು ಬಲಪಡಿಸಲು ನಮ್ಮ ಸಮರ್ಪಣೆಯನ್ನು ಬಲಪಡಿಸಲು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನವನ್ನು ಅಂದರೆ ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತಾ ದಿನವನ್ನಾಗಿ ಆಚರಿಸಲು 2014 ರಲ್ಲಿ ನಿರ್ಧರಿಸಲಾಯಿತು. ಪ್ರಧಾನಮಂತ್ರಿ ಅವರು ಕೆವಾಡಿಯಾದಲ್ಲಿ ನಡೆದ ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಏಕತಾ ದಿವಸ್ ಪರೇಡ್ ಆಯೋಜಿಸಲಾಗಿತ್ತು, ಇದರಲ್ಲಿ ಬಿಎಸ್ಎಫ್ ಮತ್ತು ಐದು ರಾಜ್ಯ ಪೊಲೀಸ್ ಪಡೆಗಳ ತುಕಡಿಗಳು, ಉತ್ತರ ವಲಯ (ಹರಿಯಾಣ), ಪಶ್ಚಿಮ ವಲಯ (ಮಧ್ಯಪ್ರದೇಶ), ದಕ್ಷಿಣ ವಲಯ (ತೆಲಂಗಾಣ), ಪೂರ್ವ ವಲಯ (ಒಡಿಶಾ) ಮತ್ತು ಈಶಾನ್ಯ ವಲಯ (ತ್ರಿಪುರಾ) ಗಳಿಂದ ತಲಾ ಒಂದು ತುಕಡಿಗಳು ಸೇರಿದ್ದವು. ಇವುಗಳಲ್ಲದೆ,  2022 ರ ಕಾಮನ್ವೆಲ್ತ್ ಕ್ರೀಡಾಕೂಟದ ಆರು ಪೊಲೀಸ್ ಕ್ರೀಡಾ ಪದಕ ವಿಜೇತರು ಸಹ ಪರೇಡ್ ನಲ್ಲಿ ಭಾಗವಹಿಸಿದ್ದರು.

.

*****


(Release ID: 1872288) Visitor Counter : 185