ಪ್ರಧಾನ ಮಂತ್ರಿಯವರ ಕಛೇರಿ

ಮಧ್ಯಪ್ರದೇಶದಲ್ಲಿ ಪಿಎಂಎವೈ-ಜಿ ಯ 4.5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ 'ಗೃಹಪ್ರವೇಶ' ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಕನ್ನಡ ಭಾಷಾಂತರ

Posted On: 22 OCT 2022 7:36PM by PIB Bengaluru

ನಮಸ್ಕಾರ!

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೇ, ರಾಜ್ಯ ಸರ್ಕಾರದ ಸಚಿವರೇ ಮತ್ತು ಶಾಸಕರೇ, ಪಂಚಾಯತ್ ಸದಸ್ಯರೇ, ಇತರ ಗಣ್ಯರೇ ಮತ್ತು ಮಧ್ಯಪ್ರದೇಶದ ಎಲ್ಲ ಸಹೋದರ ಮತ್ತು ಸಹೋದರಿಯರೇ!

ಮೊದಲನೆಯದಾಗಿ, ನಿಮಗೆಲ್ಲರಿಗೂ ಧನ್ ತೇರಸ್ ಮತ್ತು ದೀಪಾವಳಿಯ ಶುಭಾಶಯಗಳು. ಧನ್ ತೇರಸ್ ಮತ್ತು ದೀಪಾವಳಿಯ ಸಮಯದಲ್ಲಿ, ನಾವು ಹೊಸ ಪ್ರಾರಂಭವನ್ನು ಮಾಡಿದಾಗ, ಮನೆಗೆ ಹೊಸ ಬಣ್ಣ ಹೊಡೆಸುವಾಗ, ಹೊಸ ಪಾತ್ರೆಗಳನ್ನು ಖರೀದಿಸಿ ಮತ್ತು ಹೊಸದನ್ನು ಸೇರಿಸುವಾಗ, ನಾವು ಹೊಸ ಸಂಕಲ್ಪಗಳನ್ನು ಸಹ ಮಾಡುತ್ತೇವೆ. ಹೊಸ ಆರಂಭದೊಂದಿಗೆ, ನಾವು ನಮ್ಮ ಜೀವನಕ್ಕೆ ತಾಜಾತನ ತುಂಬುತ್ತೇವೆ ಮತ್ತು ಸಂತಸ ಹಾಗೂ ಸಮೃದ್ಧಿಗೆ ಹೊಸ ದ್ವಾರ ತೆರೆಯುತ್ತೇವೆ. ಇಂದು ಮಧ್ಯಪ್ರದೇಶದ 4.5 ಲಕ್ಷ ಬಡ ಸಹೋದರಿಯರು ಮತ್ತು ಸಹೋದರರು ಹೊಸ ಆರಂಭವನ್ನು ಮಾಡುತ್ತಿದ್ದಾರೆ. ಇಂದು ಈ ಎಲ್ಲಾ ಸ್ನೇಹಿತರಿಗೆ ಅವರ ಹೊಸ ಪಕ್ಕಾ ಮನೆಗಳ 'ಗೃಹಪ್ರವೇಶ' ಸಮಾರಂಭವನ್ನು ಆಯೋಜಿಸಲಾಗಿದೆ. ಧನ್ ತೇರಸ್ ನಲ್ಲಿ ಕಾರುಗಳು ಮತ್ತು ಮನೆಗಳಂತಹ ದೊಡ್ಡ ಮತ್ತು ದುಬಾರಿ ಆಸ್ತಿ ಖರೀದಿಸಲು ಹಣ ಮತ್ತು ಸಂಪನ್ಮೂಲ ಇರುವ ಕೆಲವರಿಗೆ ಮಾತ್ರ ಸಾಧ್ಯವಾಗುವ ಕಾಲವೊಂದಿತ್ತು. ಆದರೆ ಇಂದು, ದೇಶದ ಬಡವರು ಸಹ ಧನ್ ತೇರಸ್ ದಿನದಂದು 'ಗೃಹಪ್ರವೇಶ'ವನ್ನು ಮಾಡಲು ಸಮರ್ಥರಾಗಿದ್ದಾರೆ. ಈಗ ನೀವು ಲಕ್ಷಾಂತರ ರೂಪಾಯಿ ಮೌಲ್ಯದ ಮನೆಗಳಿಂದಾಗಿ ಲಕ್ಷಾಧಿಪತಿಗಳಾಗಿದ್ದೀರಿ. ಇಂದು ಮನೆಗಳ ಮಾಲೀಕರಾದ ಮಧ್ಯಪ್ರದೇಶದ ಲಕ್ಷಾಂತರ ಸಹೋದರಿಯರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! 

ಸಹೋದರ, ಸಹೋದರಿಯರೇ,
ತಂತ್ರಜ್ಞಾನದ ಮೂಲಕ ನನ್ನ ಮುಂದಿರುವ ಅಸಂಖ್ಯಾತ ಜನರು ಅನಂತ ಆಕಾಂಕ್ಷೆಗಳಿಂದ ತುಂಬಿರುವುದನ್ನು ನಾನು ನೋಡಲು ಸಾಧ್ಯವಾಗಿದೆ. ಈ ಮೊದಲು ಈ ಆಕಾಂಕ್ಷೆಗಳು ಮತ್ತು ಕನಸುಗಳು ಮುನ್ನೆಲೆಗೆ ಬರುತ್ತಿರಲಿಲ್ಲ, ಏಕೆಂದರೆ ಮನೆಯಿಲ್ಲದ ಕಾರಣ ಈ ಭಾವನೆಗಳನ್ನು ಹತ್ತಿಕ್ಕಲಾಗುತ್ತಿತ್ತು, ಮರೆಮಾಚಲಾಗುತ್ತಿತ್ತು, ನಂತರ ಅದು ಕಾಣೆಯಾಗುತ್ತಿತ್ತು. ಈಗ ಈ ಸ್ನೇಹಿತರು ಈ ಹೊಸ ಮನೆಗಳನ್ನು ಪಡೆದಿದ್ದಾರೆ, ಅವರು ತಮ್ಮ ಕನಸುಗಳನ್ನು ನನಸಾಗಿಸಲು ಹೊಸ ಶಕ್ತಿಯನ್ನು ಸಹ ಪಡೆದಿದ್ದಾರೆ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ, ಈ ದಿನವು 'ಗೃಹಪ್ರವೇಶ' ಮಾತ್ರವೇ ಅಲ್ಲ, ಸಂತಸ, ಹೊಸ ಸಂಕಲ್ಪ, ಹೊಸ ಕನಸುಗಳು, ಹೊಸ ಚೈತನ್ಯ ಮತ್ತು ಹೊಸ ಅದೃಷ್ಟವನ್ನು ತರುತ್ತದೆ. ನಮ್ಮ ಸರ್ಕಾರದ ಕಳೆದ 8 ವರ್ಷಗಳಲ್ಲಿ, ಪಿಎಂ ವಸತಿ ಯೋಜನೆ ಅಡಿಯಲ್ಲಿ 3.5 ಕೋಟಿ ಬಡ ಕುಟುಂಬಗಳ ಜೀವನದ ದೊಡ್ಡ ಕನಸನ್ನು ಈಡೇರಿಸಲು ಸಾಧ್ಯವಾಗಿದೆ ಇದು ನಮ್ಮ ಸೌಭಾಗ್ಯ. ನಾವು ನಮ್ಮ ವಾಗ್ದಾನವನ್ನು ಈಡೇರಿಸಲು ಕೇವಲ ನಾಲ್ಕು ಗೋಡೆಗಳನ್ನು ನಿರ್ಮಿಸಿ, ಅವರಿಗೆ ಹಸ್ತಾಂತರಿಸಿಲ್ಲ. ನಮ್ಮ ಸರ್ಕಾರ ಬಡವರಿಗೆ ಸಮರ್ಪಿತವಾಗಿದೆ. ಆದ್ದರಿಂದ ಇದು ಬಡವರ ಆಕಾಂಕ್ಷೆಗಳು ಮತ್ತು ಅಗತ್ಯಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದೆ. ನಮ್ಮ ಸರ್ಕಾರವು ಒದಗಿಸುವ ಮನೆಗಳು ಶೌಚಾಲಯಗಳು, ವಿದ್ಯುತ್, ನೀರು ಮತ್ತು ಅನಿಲ ಸಂಪರ್ಕದಂತಹ ಇತರ ಸೌಲಭ್ಯಗಳನ್ನು ಸಹ ಒಳಗೊಂಡಿದೆ. ಆದ್ದರಿಂದ, ಈ ಸೌಲಭ್ಯಗಳು ಮತ್ತು ಸರ್ಕಾರದ ವಿವಿಧ ಯೋಜನೆಗಳು ಪ್ರಧಾನಮಂತ್ರಿ ವಸತಿ ಯೋಜನೆ ಅಡಿಯಲ್ಲಿ ಈ ಕೋಟ್ಯಂತರ ಮನೆಗಳಲ್ಲಿ ಸಾಕಾರಗೊಳ್ಳುತ್ತವೆ.

ಸ್ನೇಹಿತರೇ,
ನಿಮ್ಮೊಂದಿಗೆ ಮಾತನಾಡುವಾಗ, ನನಗೆ ಹಿಂದಿನ ಪರಿಸ್ಥಿತಿಯೂ ನೆನಪಾಗುತ್ತದೆ. ಈ ಹಿಂದೆ ಬಡವರಿಗೆ ಮನೆಯನ್ನು ಘೋಷಿಸಿದರೂ, ಅವರು ಸ್ವಂತವಾಗಿ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಬೇಕಾಗಿತ್ತು. ವಿದ್ಯುತ್, ನೀರು ಮತ್ತು ಅನಿಲ ಸಂಪರ್ಕಗಳನ್ನು ಪಡೆಯಲು ಅವರು ಹಲವಾರು ಬಾರಿ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತಿತ್ತು. ಹಿಂದಿನ ಸರ್ಕಾರಗಳ ಆಡಳಿತಾವಧಿಯಲ್ಲಿ, ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಬಡವರು ಲಂಚವನ್ನು ಪಾವತಿಸಬೇಕಾಗಿತ್ತು. ಜೊತೆಗೆ, ಬಡವರಿಗೆ ಮನೆಗಳನ್ನು ಘೋಷಿಸಿದ ನಂತರ, ಸರ್ಕಾರವು ಯಾವ ರೀತಿಯ ಮನೆಯನ್ನು ನಿರ್ಮಿಸಬೇಕೆಂದು ನಿರ್ದೇಶಿಸುತ್ತಿತ್ತು. ಅದರ ವಿನ್ಯಾಸವನ್ನು ಒದಗಿಸಲಾಗುತ್ತಿತ್ತು, ಮತ್ತು ನಿರ್ಮಾಣ ಸಾಮಗ್ರಿಗಳನ್ನು ಎಲ್ಲಿ ಪಡೆಯಬೇಕೆಂದೂ ಅವರಿಗೆ ಹೇಳಲಾಗುತ್ತಿತ್ತು. ಹೀಗಾಗಿ, ಮನೆಯಲ್ಲಿ ವಾಸಿಸಬೇಕಾದ ವ್ಯಕ್ತಿ ವಿಭಿನ್ನ ಅಭಿರುಚಿಗಳು, ಇಷ್ಟಾನಿಷ್ಟಗಳು ಮತ್ತು ಸಾಮಾಜಿಕ ಸಂಪ್ರದಾಯಗಳನ್ನು ಹೊಂದಿರುತ್ತಾರೆ. ಆದರೆ ಈ ವಿಷಯಗಳ ಬಗ್ಗೆ ಬಡವರನ್ನು ಕೇಳಲಾಗುತ್ತಿರಲಿಲ್ಲ. ಹೀಗಾಗಿಯೇ, ಈ ಹಿಂದೆ ನಿರ್ಮಿಸಲಾದ ಕೆಲವು ಮನೆಗಳಲ್ಲಿ ಗೃಹಪ್ರವೇಶ ಎಂದಿಗೂ ಸಾಧ್ಯವಾಗಲಿಲ್ಲ. ಆದರೆ ನಾವು ಈ ಸ್ವಾತಂತ್ರ್ಯವನ್ನು ಮನೆಯ ಮಾಲೀಕರಿಗೆ ನೀಡಿದ್ದೇವೆ. ಅದಕ್ಕಾಗಿಯೇ ಇಂದು ಪಿಎಂ ವಸತಿ ಯೋಜನೆ ಬೃಹತ್ ಸಾಮಾಜಿಕ-ಆರ್ಥಿಕ ಬದಲಾವಣೆಯ ಮಾಧ್ಯಮವಾಗುತ್ತಿದೆ.

ಸಹೋದರ, ಸಹೋದರಿಯರೇ,
ಒಂದು ಪೀಳಿಗೆಯು ತಾನು ಸಂಪಾದಿಸಿದ ಸಂಪತ್ತನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವುದನ್ನು ನಾವು ಆಗಾಗ್ಗೆ ನೋಡುತ್ತೇವೆ. ಆದರೆ ನಮ್ಮ ಹಿಂದಿನ ಸರ್ಕಾರಗಳ ತಪ್ಪು ನೀತಿಗಳಿಂದಾಗಿ, ಜನರು ನಿರ್ವಸತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವಂತಾಗುತ್ತಿತ್ತು. ಹಲವಾರು ತಲೆಮಾರುಗಳ ಈ ವಿಷವರ್ತುಲವನ್ನು ಮಣಿಸುತ್ತಿದ್ದ ವ್ಯಕ್ತಿಯನ್ನು ಹೆಚ್ಚು ಹೊಗಳಲಾಗುತ್ತಿತ್ತು ಮತ್ತು ವೈಭವೀಕರಿಸಲಾಗುತ್ತಿತ್ತು. ದೇಶದ ಸೇವಕನಾಗಿ, ದೇಶದ ಕೋಟ್ಯಂತರ ತಾಯಂದಿರ ಮಗನಾಗಿ, ನನ್ನ ಕೋಟ್ಯಂತರ ಬಡ ಕುಟುಂಬಗಳನ್ನು ಈ ವಿಷವರ್ತುಲದಿಂದ ಹೊರತರುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಸೌಭಾಗ್ಯ. ಪ್ರತಿಯೊಬ್ಬ ಬಡವರಿಗೂ ಪಕ್ಕಾ ಮನೆಗಳನ್ನು ಒದಗಿಸಲು ನಮ್ಮ ಸರ್ಕಾರ ಹಗಲಿರುಳು ಶ್ರಮಿಸುತ್ತಿದೆ. ಅದಕ್ಕಾಗಿಯೇ ಇಂದು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮಧ್ಯಪ್ರದೇಶದಲ್ಲಿಯೂ ಪಿಎಂ ವಸತಿ ಯೋಜನೆಯಡಿ ಸುಮಾರು 30 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಪ್ರಸ್ತುತ ಇನ್ನೂ 9-1೦ ಲಕ್ಷ ಮನೆಗಳ ಕಾಮಗಾರಿ ಪ್ರಗತಿಯಲ್ಲಿದೆ.

ಸ್ನೇಹಿತರೇ,
ಈ ಲಕ್ಷಾಂತರ ಮನೆಗಳು ದೇಶದ ಮೂಲೆಮೂಲೆಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿವೆ. ಇಂದು ಬೆಳಗ್ಗೆ ನಾನು ಉದ್ಯೋಗ ಮೇಳಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿದ್ದಾಗ, ನಾನು ಸಂಜೆ ಗೃಹಪ್ರವೇಶ ಸಮಾರಂಭದಲ್ಲಿ ಭಾಗಿಯಾಗಲಿದ್ದೇನೆ ಎಂದು ಅವರಿಗೆ ಹೇಳಿದ್ದೆ. ಈಗ ನಾನು ಉದ್ಯೋಗವು ಇದರೊಂದಿಗೆ ಹೇಗೆ ಸಂಬಂಧ ಹೊಂದಿದೆ ಎಂಬುದನ್ನು ವಿವರವಾಗಿ ಹೇಳಲಿದ್ದೇನೆ.

ಸ್ನೇಹಿತರೇ,
ಮನೆಗಳನ್ನು ನಿರ್ಮಿಸಿದಾಗ, ಇಟ್ಟಿಗೆಗಳು, ಸಿಮೆಂಟ್, ಮರಳು, ಜಲ್ಲಿಕಲ್ಲು, ಉಕ್ಕು, ಬಣ್ಣ, ವಿದ್ಯುತ್ ಉಪಕರಗಳು, ಶೌಚಾಲಯದ ಆಸನಗಳು, ನಲ್ಲಿಗಳು, ಕೊಳವೆಗಳಂತಹ ನಿರ್ಮಾಣಕ್ಕೆ ಸಂಬಂಧಿಸಿದ ಸಾಮಗ್ರಿಗಳ ಬೇಡಿಕೆ ಹೆಚ್ಚಾಗುತ್ತದೆ ಎಂದು ನಿಮಗೆ ತಿಳಿದಿದೆ. ಈ ಬೇಡಿಕೆ ಹೆಚ್ಚಾದಾಗ, ಈ ವಸ್ತುಗಳನ್ನು ತಯಾರಿಸುವ ಕಾರ್ಖಾನೆಗಳು ಹೆಚ್ಚಿನ ಜನರನ್ನು ನೇಮಿಸಿಕೊಳ್ಳುತ್ತವೆ. ಸರಕುಗಳನ್ನು ಸಾಗಿಸಲು ಹೆಚ್ಚಿನ ಜನರ ಅಗತ್ಯವಿರುತ್ತದೆ. ಈ ಸರಕುಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ಕೂಡ ಹೆಚ್ಚಿನ ಜನರು ಉದ್ಯೋಗ ಪಡೆಯುತ್ತಾರೆ. ಇದನ್ನು ಸತ್ನಾ ಚೆನ್ನಾಗಿ ಅರ್ಥಮಾಡಿಕೊಂಡಿದೆ. ಸತ್ನಾ ಸುಣ್ಣದಕಲ್ಲು ಮತ್ತು ಸಿಮೆಂಟ್ ಗೆ ಹೆಸರುವಾಸಿಯಾಗಿದೆ. ಮನೆಗಳನ್ನು ನಿರ್ಮಿಸಿದಾಗ, ಸತ್ನಾ  ಸಿಮೆಂಟ್ ಗೆ ಬೇಡಿಕೆಯೂ ಹೆಚ್ಚಾಗುತ್ತದೆ. ಮನೆಗಳ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರು, ಗಾರೆ ಕೆಲಸಗಾರರು, ಬಡಗಿಗಳು, ಪ್ಲಂಬರ್ ಗಳು, ಸುಣ್ಣ ಬಣ್ಣ ಹೊಡೆಯುವವರು, ಪೀಠೋಪಕರಣಗಳ ತಯಾರಕರು ಸಹ ಸಾಕಷ್ಟು ಕೆಲಸವನ್ನು ಪಡೆಯುತ್ತಾರೆ. ಮಧ್ಯಪ್ರದೇಶದಲ್ಲಿಯೇ 5೦ ಸಾವಿರಕ್ಕೂ ಹೆಚ್ಚು ಗಾರೆ ಕೆಲಸಗಾರರಿಗೆ ತರಬೇತಿ ನೀಡಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಇವರಲ್ಲಿ 9,000-10,000 ಮಂದಿ ನಮ್ಮ ತಾಯಂದಿರು ಮತ್ತು ಸಹೋದರಿಯರು. ಅವರು 'ರಾಜ್ ಮೇಸ್ತ್ರಿ' ಅಥವಾ ನುರಿತ ಗಾರೆ ಕೆಲಸಗಾರರಾಗಿದ್ದಾರೆ. ಕೆಲವರು ಅವರನ್ನು 'ರಾಣಿ ಮೇಸ್ತ್ರಿ' ಅಥವಾ ಗಾರೆ ಕೆಲಸಗಾರರಲ್ಲಿ ರಾಣಿ ಎಂದು ಕರೆಯುತ್ತಾರೆ. ಅಂದರೆ, ಪಿಎಂ ವಸತಿ ಯೋಜನೆಯು ನಮ್ಮ ಸಹೋದರಿಯರನ್ನು ಹೊಸ ಕೌಶಲ್ಯ ಮತ್ತು ಹೊಸ ಉದ್ಯೋಗಾವಕಾಶಗಳೊಂದಿಗೆ ಸಂಪರ್ಕ ಕಲ್ಪಿಸುವ ಪ್ರಶಂಸನೀಯ ಕೆಲಸವನ್ನು ಮಾಡುತ್ತಿದೆ. ಇಲ್ಲದಿದ್ದರೆ, ನಿರ್ಮಾಣ ಕ್ಷೇತ್ರದಲ್ಲಿ, ಸಹೋದರಿಯರನ್ನು ಕೌಶಲ್ಯರಹಿತ ಕಾರ್ಮಿಕರೆಂದು ಪರಿಗಣಿಸಲಾಗುತ್ತಿತ್ತು. ಮಧ್ಯಪ್ರದೇಶದಲ್ಲಿಯೇ ಈವರೆಗೆ ಈ ಮನೆಗಳ ನಿರ್ಮಾಣಕ್ಕೆ 22 ಸಾವಿರ ಕೋಟಿ ರೂ. ವೆಚ್ಚ ಮಾಡಿದೆ. ಈಗ ನೀವು 22 ಸಾವಿರ ಕೋಟಿ ರೂ.ಗಳು ಎಲ್ಲಿಗೆ ಹೋಯಿತು ಎಂದು ಯೋಚಿಸುತ್ತಿರಬಹುದು? ಹಣದ ಒಂದು ಭಾಗವನ್ನು ಮನೆಗಳನ್ನು ಕಟ್ಟಲು ಬಳಸಲಾಗುತ್ತಿತ್ತು ಮತ್ತು ಅದರ ಒಂದು ಭಾಗವನ್ನು ಅಂಗಡಿಗಳಿಂದ ವಸ್ತುಗಳನ್ನು ಖರೀದಿಸುವಂತಹ ವಿವಿಧ ಸಂಬಂಧಿತ ಕೆಲಸಗಳಿಗೆ ಬಳಸಲಾಯಿತು ಮತ್ತು ಭಾಗಶಃ ಕಾರ್ಖಾನೆಗಳಲ್ಲಿಯೂ ಸಹ ಬಳಸಲಾಯಿತು. ಆದ್ದರಿಂದ, ಈ ಮನೆಗಳು ಎಲ್ಲರಿಗೂ ಪ್ರಗತಿಯನ್ನು ತರುತ್ತಿವೆ. ಮನೆಗಳನ್ನು ಪಡೆಯುವವರು ಮಾತ್ರವಲ್ಲ, ಮನೆಗಳನ್ನು ನಿರ್ಮಿಸುವ ಇಡೀ ಹಳ್ಳಿಯೂ ಪ್ರಗತಿ ಹೊಂದುತ್ತಿದೆ.

ಸಹೋದರ, ಸಹೋದರಿಯರೇ,
ಹಿಂದಿನ ಸರ್ಕಾರಗಳಿಗೂ ನಮಗೂ ಒಂದು ಪ್ರಮುಖ ವ್ಯತ್ಯಾಸವಿದೆ. ಹಿಂದಿನ ಸರ್ಕಾರಗಳು ಬಡವರಿಗೆ ಕಿರುಕುಳ ನೀಡುತ್ತಿದ್ದವು. ಅವರು ತಮ್ಮ ಕಚೇರಿಗಳಿಗೆ ಮತ್ತೆ ಮತ್ತೆ ಭೇಟಿ ನೀಡುವಂತೆ ಮಾಡಿದ್ದರು. ಆದರೆ, ನಮ್ಮ ಸರ್ಕಾರವು ಸ್ವತಃ ಬಡವರನ್ನು ತಲುಪುತ್ತಿದೆ ಮತ್ತು ಬಡವರು ಪ್ರತಿಯೊಂದು ಯೋಜನೆಯ ಲಾಭವನ್ನು ಪಡೆಯಲು ಒಂದು ಅಭಿಯಾನವನ್ನು ನಡೆಸುತ್ತಿದೆ. ಇಂದು ನಾವು ಗರಿಷ್ಠಮಟ್ಟದ ಬಗ್ಗೆ ಮಾತನಾಡುತ್ತಿದ್ದೇವೆ, ಅಂದರೆ, ಪ್ರತಿ ಸಾರ್ವಜನಿಕ ಕಲ್ಯಾಣ ಯೋಜನೆಯ ಪ್ರಯೋಜನಗಳನ್ನು ಶೇ.100ರಷ್ಟು ಫಲಾನುಭವಿಗಳಿಗೆ ಹೇಗೆ ತಲುಪಿಸುವುದು? ಯಾವುದೇ ಸ್ವಜನ ಪಕ್ಷಪಾತ ಅಥವಾ ಪಕ್ಷಪಾತವಿಲ್ಲ. ಇದನ್ನು ಪ್ರತಿಯೊಬ್ಬ ನ್ಯಾಯಸಮ್ಮತ ಫಲಾನುಭವಿಗೆ ನೀಡಲಾಗುತ್ತದೆ. ಪ್ರತಿಯೊಬ್ಬರಿಗೂ ಪಕ್ಕಾ ಮನೆಗಳು, ಅನಿಲ-ನೀರು-ವಿದ್ಯುತ್ ಸಂಪರ್ಕಗಳು, ಆಯುಷ್ಮಾನ್ ಭಾರತ್ ಅಡಿಯಲ್ಲಿ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ, ಉತ್ತಮ ರಸ್ತೆಗಳು, ಉತ್ತಮ ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು ಮತ್ತು ಆಪ್ಟಿಕಲ್ ಫೈಬರ್ ನೆಟ್ವರ್ಕ್ ಅನ್ನು ಕಡಿಮೆ ಸಮಯದಲ್ಲಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ನಾವು ಹಗಲಿರುಳು ಶ್ರಮಿಸುತ್ತಿದ್ದೇವೆ. ನಾವು ಈ ಅವಸರದಲ್ಲಿ ಏಕೆ ಇದ್ದೇವೆ? ಈ ಕೆಲಸಗಳನ್ನು ಮಾಡಲು ನಾವು ಏಕೆ ಅಸಹನೆ ಹೊಂದಿದ್ದೇವೆ? ಇದರ ಹಿಂದೆ ಗತಕಾಲದಿಂದ ಒಂದು ನಿರ್ಣಾಯಕ ಪಾಠವಿದೆ. ಕಳೆದ ಹಲವಾರು ದಶಕಗಳಿಂದ ಅಂತಹ ಪ್ರತಿಯೊಂದು ಮೂಲಭೂತ ಸೌಲಭ್ಯಗಳು ಅತಂತ್ರ ಸ್ಥಿತಿಯಲ್ಲಿದ್ದವು. ದೇಶದ ದೊಡ್ಡ ಜನಸಂಖ್ಯೆಯು ಈ ಮೂಲಭೂತ ಸೌಲಭ್ಯಗಳಿಗಾಗಿ ಹೋರಾಡುತ್ತಿತ್ತು. ಇತರ ವಿಷಯಗಳ ಬಗ್ಗೆ ಯೋಚಿಸಲು ಸಹ ಅವರಿಗೆ ಸಮಯವಿರಲಿಲ್ಲ. ಆದ್ದರಿಂದ, ಬಡತನ ನಿವಾರಣೆಯ ಪ್ರತಿಯೊಂದು ಭರವಸೆ ಮತ್ತು ಪ್ರತಿಯೊಂದು ಹೇಳಿಕೆಯೂ ಕೇವಲ ರಾಜಕೀಯವಾಗಿತ್ತು. ಅವರು ಯಾರ ಬಳಿಯೂ ಕೆಲಸ ಮಾಡಲಿಲ್ಲ. ಕಮಾಂಡರ್ ಎಷ್ಟೇ ಭಾವೋದ್ರಿಕ್ತನಾಗಿದ್ದರೂ, ಸೈನಿಕರ ಬಳಿ ಹೋರಾಡಲು ಮೂಲಭೂತ ಸಾಧನಗಳಿಲ್ಲದಿದ್ದರೆ, ಯುದ್ಧವನ್ನು ಗೆಲ್ಲುವುದು ಅಸಾಧ್ಯ. ಅದಕ್ಕಾಗಿಯೇ ನಾವು ದೇಶದ ಪ್ರತಿಯೊಬ್ಬ ನಾಗರಿಕನನ್ನು ಆ ಮೂಲಭೂತ ಸೌಲಭ್ಯಗಳೊಂದಿಗೆ ತ್ವರಿತವಾಗಿ ಸಂಪರ್ಕಿಸಲು ನಿರ್ಧರಿಸಿದ್ದೇವೆ, ಅವರು ಬಡತನದಿಂದ ಹೊರಬರಲು ಮತ್ತು ಬಡತನವನ್ನು ಮಣಿಸಲು ಸಹಾಯ ಮಾಡುತ್ತದೆ. ಈಗ ಬಡವರು, ಸೌಲಭ್ಯಗಳನ್ನು ಹೊಂದಿರುವುದರಿಂದ, ಬಡತನದಿಂದ ವೇಗವಾಗಿ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಮತ್ತು ನಿಮಗೆ ನೀಡಲಾದ ಈ ಮನೆ ಕೇವಲ ವಾಸಿಸಲು, ತಿನ್ನಲು, ಕುಡಿಯಲು ಮತ್ತು ಮಲಗಲು ಇರುವ ಸ್ಥಳ ಮಾತ್ರವೇ ಅಲ್ಲ. ನಿಮ್ಮ ಮನೆ ಬಡತನವನ್ನು ಪ್ರವೇಶಿಸಲು ಅವಕಾಶ ನೀಡದ ಕೋಟೆಯಂತಿದೆ ಎಂದು ನಾನು ಹೇಳುತ್ತೇನೆ. ಉಳಿದ ಬಡತನವನ್ನೂ ನಿವಾರಣೆ ಮಾಡಲಾಗುವುದು.

ಸಹೋದರ, ಸಹೋದರಿಯರೇ,
ಕಳೆದ ಹಲವಾರು ತಿಂಗಳುಗಳಿಂದ, ಕೇಂದ್ರ ಸರ್ಕಾರವು 80 ಕೋಟಿಗೂ ಹೆಚ್ಚು ದೇಶವಾಸಿಗಳಿಗೆ ಉಚಿತ ಪಡಿತರವನ್ನು ನೀಡುತ್ತಿದೆ, ಇದರಿಂದಾಗಿ ಅವರು ಸಾಂಕ್ರಾಮಿಕ ರೋಗದ ಸಮಯದಲ್ಲೂ ಹಸಿವಿನಿಂದ ಬಳಲಲಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರವು ಪಿಎಂ ಗರೀಬ್ ಕಲ್ಯಾಣ್ ಅನ್ನ ಯೋಜನೆಗಾಗಿ ಇದುವರೆಗೆ 3 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಖರ್ಚು ಮಾಡಿದೆ. ಮತ್ತು ನಾನು ನಿಮಗೆ ಇನ್ನೂ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ತೆರಿಗೆದಾರನು ತನ್ನ ಹಣವನ್ನು ಸರಿಯಾದ ಸ್ಥಳದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಖರ್ಚು ಮಾಡಲಾಗುತ್ತಿದೆ ಎಂದು ಭಾವಿಸಿದಾಗ, ಆಗ ತೆರಿಗೆದಾರನು ಸಹ ಸಂತೋಷ, ಸಂತೃಪ್ತಿಯನ್ನು ಅನುಭವಿಸುತ್ತಾನೆ ಮತ್ತು ಹೆಚ್ಚಿನ ತೆರಿಗೆಯನ್ನು ಪಾವತಿಸುತ್ತಲೇ ಇರುತ್ತಾನೆ. ಇಂದು, ದೇಶದ ಕೋಟ್ಯಂತರ ತೆರಿಗೆದಾರರು ತೆರಿಗೆಗಳನ್ನು ಪಾವತಿಸುವ ಮೂಲಕ ಕೊರೊನಾ ಅವಧಿಯಲ್ಲಿ ಕೋಟ್ಯಂತರ ಜನರಿಗೆ ಆಹಾರ ನೀಡಲು ಸಹಾಯ ಮಾಡಿದ್ದಾರೆ ಎಂಬ ಅಂಶದಿಂದ ತೃಪ್ತರಾಗಿದ್ದಾರೆ. ಇಂದು, ನಾನು ನಾಲ್ಕು ಲಕ್ಷ ಮನೆಗಳನ್ನು ಹಸ್ತಾಂತರಿಸುತ್ತಿರುವಾಗ, ಪ್ರತಿಯೊಬ್ಬ ತೆರಿಗೆದಾರನು ನನ್ನೊಂದಿಗೆ ಮಧ್ಯಪ್ರದೇಶದ ನನ್ನ ಬಡ ಸಹೋದರ ಕೂಡ ದೀಪಾವಳಿಯನ್ನು ಚೆನ್ನಾಗಿ ಆಚರಿಸುತ್ತಿದ್ದಾನೆ ಎಂದು ಯೋಚಿಸುತ್ತಿರುತ್ತಾನೆ. ಈಗ ಅವರ ಮಗಳ ಜೀವನವೂ ಸಂತೋಷದಿಂದ ತುಂಬಿರುತ್ತದೆ.

ಆದರೆ ಸ್ನೇಹಿತರೇ,
ಅದೇ ತೆರಿಗೆದಾರನು ತನ್ನಿಂದ ಸಂಗ್ರಹಿಸಿದ ಹಣದಿಂದ ಉಚಿತ ಕೊಡುಗೆಗಳನ್ನು ವಿತರಿಸಲಾಗುತ್ತಿದೆ ಎಂಬುದನ್ನು ನೋಡಿದಾಗ, ನಿರಾಶೆಗೊಳ್ಳುತ್ತಾನೆ. ಇಂದು ಅಂತಹ ಅನೇಕ ತೆರಿಗೆದಾರರು ನನಗೆ ಬಹಿರಂಗವಾಗಿ ಪತ್ರಗಳನ್ನು ಬರೆಯುತ್ತಿದ್ದಾರೆ. ದೇಶದ ಒಂದು ದೊಡ್ಡ ವರ್ಗವು ಈ 'ರೇವಡಿ' ಸಂಸ್ಕೃತಿ ಅಥವಾ ಉಚಿತ ಉಡುಗೊರೆ ಸಂಸ್ಕೃತಿಯಿಂದ ದೇಶವನ್ನು ತೊಡೆದುಹಾಕಲು ಸಜ್ಜಾಗುತ್ತಿದೆ ಎಂದು ನನಗೆ ಸಂತೋಷವಾಗಿದೆ.

ಸ್ನೇಹಿತರೇ,
ನಮ್ಮ ಸರ್ಕಾರದ ಗುರಿ, ನಾಗರಿಕರ ಆಕಾಂಕ್ಷೆಗಳನ್ನು ಪೂರೈಸುವುದರ ಜೊತೆಗೆ, ಬಡವರು ಮತ್ತು ಮಧ್ಯಮ ವರ್ಗದವರಿಗೆ ಹಣವನ್ನು ಉಳಿಸಲು ಸಹಾಯ ಮಾಡುವುದಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಈವರೆಗೆ ಸುಮಾರು 4 ಕೋಟಿ ಬಡ ರೋಗಿಗಳು ಉಚಿತ ಚಿಕಿತ್ಸೆಯ ಪ್ರಯೋಜನ ಪಡೆದಿದ್ದಾರೆ. ಇದರ ವೆಚ್ಚವನ್ನು ಸರ್ಕಾರವು ಭರಿಸಿದ್ದರಿಂದ ಈ ಕುಟುಂಬಗಳು ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸಲು ಸಾಧ್ಯವಾಯಿತು. ಕೊರೊನಾದ ಹಠಾತ್ ಬಿಕ್ಕಟ್ಟಿನ ಪರಿಣಾಮವಾಗಿ ಬಡವರು ಮತ್ತು ಮಧ್ಯಮ ವರ್ಗದವರು ಲಸಿಕೆಗೆ ಹಣವನ್ನು ಖರ್ಚು ಮಾಡಬೇಕಾಗಿ ಬರಲಿಲ್ಲ ಅಥವಾ ಸಾಲ ತೆಗೆದುಕೊಳ್ಳುವ ಸ್ಥಿತಿ ಇರಲಿಲ್ಲ, ಕರೋನಾ ಅವಧಿಯಲ್ಲಿ ಉಚಿತ ಲಸಿಕೆಗಾಗಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿತು. ಮೊದಲು ಕೊರೊನಾ ನಮ್ಮನ್ನು ಬಾಧಿಸಿತ್ತು ಮತ್ತು ನಂತರ ನೆರೆಹೊರೆಯಲ್ಲಿನ ಯುದ್ಧ. ತತ್ಪರಿಣಾಮವಾಗಿ, ನಾವು ಇಂದು ಜಗತ್ತಿನ ದುಬಾರಿ ರಸಗೊಬ್ಬರಗಳನ್ನು ಖರೀದಿಸುವಂತಾಯಿತು. ನಾವು ಇಂದು 2,000 ರೂ.ಗಳಿಗಿಂತ ಹೆಚ್ಚು ಬೆಲೆಯ ಯೂರಿಯಾದ ಚೀಲವನ್ನು ರೈತರಿಗೆ ಕೇವಲ 266 ರೂ.ಗಳಿಗೆ ನೀಡುತ್ತಿದ್ದೇವೆ. 2000 ರೂ.ಗಳ ಮೌಲ್ಯದ ಚೀಲಗಳನ್ನು 300 ರೂ.ಗಿಂತ ಕಡಿಮೆ ಬೆಲೆಗೆ ನೀಡಲಾಗುತ್ತದೆ! ರೈತರಿಗೆ ಹೊರೆಯಾಗದಂತೆ ನೋಡಿಕೊಳ್ಳಲು, ಈ ವರ್ಷ ಸರ್ಕಾರವು ಇದಕ್ಕಾಗಿ 2 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಮಾಡುತ್ತಿದೆ.  ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಕೂಡ ರೈತರಿಗೆ ವರದಾನವಾಗಿದೆ. ಕೆಲವು ದಿನಗಳ ಹಿಂದೆ ವರ್ಗಾವಣೆಯಾದ 16 ಸಾವಿರ ಕೋಟಿ ರೂ.ಗಳ ಕಂತು ಪ್ರತಿಯೊಬ್ಬ ಫಲಾನುಭವಿ ರೈತನನ್ನು ತಕ್ಷಣವೇ ತಲುಪಿರುವುದನ್ನು ನೀವು ನೋಡಿರಬಹುದು. ಇದೀಗ ನಮ್ಮ ಸರ್ಕಾರವು ರೈತರ ಬ್ಯಾಂಕ್ ಖಾತೆಗಳಿಗೆ 2 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ಜಮಾ ಮಾಡಿದೆ. ಮತ್ತು ಈ ಸಹಾಯವು ರೈತರಿಗೆ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಅಗತ್ಯವಿರುವಾಗ ಅವರ ಬಿತ್ತನೆ ಸಮಯಕ್ಕೆ ಸ್ವಲ್ಪ ಮುಂಚಿತವಾಗಿ ರೈತರನ್ನು ತಲುಪುತ್ತಿದೆ. ರೈತರು ಬೆಳೆಯನ್ನು ಮಾರಾಟ ಮಾಡಿದರೆ, ಹಣವು ಈಗ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಬರುತ್ತದೆ. ಮನ್ರೇಗಾ ಹಣವನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ನಮ್ಮ ಗರ್ಭಿಣಿ ತಾಯಂದಿರಿಗೆ ಪೌಷ್ಟಿಕ ಆಹಾರದ ಅಗತ್ಯವಿದ್ದಾಗ, ಮಾತೃವಂದನಾ ಯೋಜನೆಯಡಿ ಸಾವಿರಾರು ರೂಪಾಯಿಗಳು ನೇರವಾಗಿ ಅವರನ್ನು ತಲುಪುತ್ತವೆ.

ಸಹೋದರ, ಸಹೋದರಿಯರೇ,
ಸರ್ಕಾರವು ಅದರ ಸೇವಾ ಮನೋಭಾವ ಮತ್ತು ನಿಮ್ಮೆಲ್ಲರ ಬಗ್ಗೆ ಇರುವ ಸಮರ್ಪಣೆ!ಯಿಂದ ಇಂದು ಈ ಕಾರ್ಯಗಳನ್ನು ಸಾಧಿಸಲು ಸಮರ್ಥವಾಗಿದೆ, ಯಾರೇ ನಮ್ಮನ್ನು ಎಷ್ಟೇ ಟೀಕಿಸಿದರೂ, ನಾವು ಸಮರ್ಪಣೆ, ನಿಮ್ಮ ಆಶೀರ್ವಾದಿಂದ ಬಡವರ ಕಲ್ಯಾಣಕ್ಕಾಗಿ ರಾಜಕೀಯ ಇಚ್ಛಾಶಕ್ತಿಯೊಂದಿಗೆ ಮುಂದುವರಿಯುತ್ತಿದ್ದೇವೆ. ಅದಕ್ಕಾಗಿಯೇ ಇಂದು ತಂತ್ರಜ್ಞಾನವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ನಮ್ಮ ವಿಜ್ಞಾನಿಗಳು ಮತ್ತು ಯುವಕರು ಯಾವುದೇ ಹೊಸ ತಂತ್ರಜ್ಞಾನದೊಂದಿಗೆ ಬಂದರೂ ಅದನ್ನು ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸಲು ಬಳಸಲಾಗುತ್ತಿದೆ. ಇಂದು, ಡ್ರೋನ್ ಗಳೊಂದಿಗೆ ಹಳ್ಳಿಯಿಂದ ಹಳ್ಳಿಗೆ ಮನೆಗಳ ಸಮೀಕ್ಷೆಯನ್ನು ಮಾಡಲಾಗುತ್ತಿದೆ. ಈ ಮೊದಲು, ಪಟ್ವಾರಿ ಮತ್ತು ಕಂದಾಯ ಇಲಾಖೆ ಮಾಡುತ್ತಿದ್ದ ಕೆಲಸವನ್ನು ಈಗ ಡ್ರೋನ್ ಗಳು ಅಥವಾ ತಂತ್ರಜ್ಞಾನದ ಮೂಲಕ ಮಾಡಲಾಗುತ್ತಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಸ್ವಾಮಿತ್ವ ಯೋಜನೆಯಡಿ ಗ್ರಾಮದ ಮನೆಗಳ ನಕ್ಷೆಗಳನ್ನು ತಯಾರಿಸಲಾಗುತ್ತಿದ್ದು, ಗ್ರಾಮಸ್ಥರಿಗೆ ಮಾಲೀಕತ್ವದ ಪ್ರಮಾಣಪತ್ರಗಳನ್ನು ನೀಡಲಾಗುತ್ತಿದೆ, ಇದರಿಂದ ಯಾವುದೇ ವಿವಾದಗಳು ಮತ್ತು ಮನೆಗಳ ಅಕ್ರಮ ಆಸ್ತಿಗಳು ಇರುವುದಿಲ್ಲ. ಅಗತ್ಯವಿದ್ದರೆ ಅವರು ಬ್ಯಾಂಕುಗಳಿಂದ ಸಾಲಗಳನ್ನು ಸಹ ಪಡೆಯಬಹುದು. ಅಂತೆಯೇ, ಕೃಷಿಯಲ್ಲಿ ಡ್ರೋನ್ ಗಳ ಬಳಕೆಗೆ ದೊಡ್ಡ ಪ್ರಮಾಣದಲ್ಲಿ ಒತ್ತು ನೀಡಲಾಗುತ್ತಿದೆ ಮತ್ತು ರೈತರು ಡ್ರೋನ್ ಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನಾವು ರೈತರಿಗಾಗಿ ಒಂದು ಪ್ರಮುಖ ಹೆಜ್ಜೆ ಇಟ್ಟಿದ್ದೇವೆ. ದೇಶಾದ್ಯಂತ ಇರುವ ಲಕ್ಷಾಂತರ ರಸಗೊಬ್ಬರ ಅಂಗಡಿಗಳನ್ನು ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈಗ ರೈತರು ಈ ಕಿಸಾನ್ ಕೇಂದ್ರಗಳಲ್ಲಿ ಒಂದೇ ಸ್ಥಳದಲ್ಲಿ ತಮಗೆ ಬೇಕಾದ ಎಲ್ಲವನ್ನೂ ಪಡೆಯುತ್ತಾರೆ. ಭವಿಷ್ಯದಲ್ಲಿ ಈ ಕೇಂದ್ರಗಳಲ್ಲಿ ಅನೇಕ ಕೃಷಿ ಉಪಕರಣಗಳು ಮತ್ತು ಡ್ರೋನ್ ಗಳು ಬಾಡಿಗೆಗೆ ಲಭ್ಯವಿರುತ್ತವೆ. ಯೂರಿಯಾಗೆ ಸಂಬಂಧಿಸಿದಂತೆ ಪ್ರಮುಖ ಹೆಜ್ಜೆಯನ್ನು ಸಹ ತೆಗೆದುಕೊಳ್ಳಲಾಗಿದೆ. ಈಗ ಯೂರಿಯಾವನ್ನು ಯಾವ ಕಂಪನಿಯಿಂದ ಖರೀದಿಸಬೇಕು ಎಂಬ ಸಂದಿಗ್ಧತೆಯಿಂದ ರೈತರನ್ನು ಮುಕ್ತಗೊಳಿಸಲಾಗಿದೆ? ಈಗ ರಸಗೊಬ್ಬರಗಳು 'ಭಾರತ್' ಎಂಬ ಒಂದು ಬ್ರಾಂಡ್ ಹೆಸರಿನಲ್ಲಿ ಲಭ್ಯವಿರುತ್ತವೆ. ಅದರ ಮೇಲೆ ಬೆಲೆಯನ್ನು ಸಹ ಸ್ಪಷ್ಟವಾಗಿ ಬರೆಯಲಾಗುತ್ತದೆ. ರೈತರು ಅದರ ಮೇಲೆ ಬರೆದ ಈ ಬೆಲೆಗಿಂತ ಹೆಚ್ಚಿನದನ್ನು ಪಾವತಿಸುವ ಅಗತ್ಯವಿರುವುದಿಲ್ಲ. ಅಂತಹ ಪ್ರಯತ್ನಗಳಿಂದ, ರೈತರು ಮತ್ತು ಬಡವರ ಜೀವನವು ಸುಗಮಗೊಳಿಸಲಾಗುತ್ತದೆ ಎಂಬ ಖಾತ್ರಿ ನನಗಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸುತ್ತಿದ್ದೇವೆ. ಮತ್ತೊಮ್ಮೆ ನಾನು ಪಕ್ಕಾ ಮನೆಗಳ ಎಲ್ಲಾ ಫಲಾನುಭವಿಗಳನ್ನು ಅಭಿನಂದಿಸುತ್ತೇನೆ ಮತ್ತು ನೀವು ಎಷ್ಟು ಉತ್ಸುಕರಾಗಿದ್ದೀರಿ ಎಂದು ನಾನು ಊಹಿಸಬಲ್ಲೆ! ಇದು ನಿಮ್ಮ ಮನೆ. ಬಹುಶಃ ಕಳೆದ 3-4 ತಲೆಮಾರುಗಳು ತಮ್ಮ ಸ್ವಂತ ಮನೆಯಲ್ಲಿ ದೀಪಾವಳಿಯನ್ನು ಆಚರಿಸಿಲ್ಲ. ಇಂದು, ನೀವು ನಿಮ್ಮ ಮಕ್ಕಳೊಂದಿಗೆ ನಿಮ್ಮ ಸ್ವಂತ ಮನೆಗಳಲ್ಲಿ ಧಂತೇರಸ್ ಮತ್ತು ದೀಪಾವಳಿಯನ್ನು ಆಚರಿಸುತ್ತಿರುವಾಗ, ಈ ದೀಪದ ಹೊಳಪು ನಿಮ್ಮ ಜೀವನವನ್ನು ಬೆಳಗಿಸುತ್ತದೆ. ನಾನು ನಿಮಗೆ ಶುಭ ಹಾರೈಸುತ್ತೇನೆ! ದೇವರ ಆಶೀರ್ವಾದವು ನಿಮ್ಮ ಮೇಲಿರಲಿ ಮತ್ತು ಈ ಹೊಸ ಮನೆ ಹೊಸ ಪ್ರಗತಿಗೆ ಕಾರಣವಾಗಲಿ! ತುಂಬಾ ಧನ್ಯವಾದಗಳು!

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಯಿತು.

******



(Release ID: 1870703) Visitor Counter : 167