ಪ್ರಧಾನ ಮಂತ್ರಿಯವರ ಕಛೇರಿ

ಭವ್ಯ ದೀಪೋತ್ಸವ ಆಚರಣೆಗೆ ಚಾಲನೆ ನೀಡಿದ ಪ್ರಧಾನ ಮಂತ್ರಿ


"ಇಂದು ಅಯೋಧ್ಯೆ ಭಾರತದ ಸಾಂಸ್ಕೃತಿಕ ಪುನರುಜ್ಜೀವದ ಸುವರ್ಣ ಅಧ್ಯಾಯದ ಪ್ರತಿಬಿಂಬವಾಗಿದೆ 

"ಈ ದೀಪಗಳ ಬೆಳಕು ಮತ್ತು ಪರಿಣಾಮಗಳು 'ಸತ್ಯಮೇವ ಜಯತೆ' ಎಂಬ ಭಾರತದ ಮೂಲ ಮಂತ್ರದ ಘೋಷಣೆಯಾಗಿದೆ” 

"ದೀಪಾವಳಿಯ ದೀಪಗಳು ಭಾರತದ ಆದರ್ಶಗಳು, ಮೌಲ್ಯಗಳು ಮತ್ತು ತತ್ವಶಾಸ್ತ್ರದ ಜೀವಂತ ಶಕ್ತಿಯಾಗಿವೆ"

"ಅಂಧಕಾರವನ್ನು ಹೋಗಲಾಡಿಸುವ 'ದಿಯಾ' ಕತ್ತಲನ್ನು ಸುಡುತ್ತದೆ, ಇದು ಸಮರ್ಪಣಾ ಭಾವವನ್ನು ಸೃಷ್ಟಿಸುತ್ತದೆ"

Posted On: 23 OCT 2022 8:00PM by PIB Bengaluru

ದೀಪಾವಳಿಯ ಮುನ್ನಾದಿನದಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭವ್ಯ ದೀಪೋತ್ಸವ ಆಚರಣೆಗೆ ಚಾಲನೆ ನೀಡಿದರು. ಗ್ರ್ಯಾಂಡ್ ಮ್ಯೂಸಿಕಲ್ ಲೇಸರ್ ಶೋ ಜೊತೆಗೆ ಸರಯೂ ನದಿಯ ದಡದಲ್ಲಿರುವ ರಾಮ್ ಕಿ ಪೈಡಿಯಲ್ಲಿ 3-ಡಿ ಹೋಲೋಗ್ರಾಫಿಕ್ ಪ್ರೊಜೆಕ್ಷನ್ ಮ್ಯಾಪಿಂಗ್ ಶೋಗೆ ಪ್ರಧಾನಮಂತ್ರಿಯವರು ಸಾಕ್ಷಿಯಾದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಶ್ರೀರಾಮನನ್ನು ಶ್ಲಾಘಿಸಿದರು ಮತ್ತು ಇಂದು ಅಯೋಧ್ಯೆ ಹಣತೆ ದೀಪದ ಬೆಳಕಿನಿಂದ ದೈವಿಕವಾಗಿದೆ ಮತ್ತು ಭಾವನೆಗಳಿಂದ ಭವ್ಯವಾಗಿದೆ ಎಂದು ಹೇಳಿದರು. "ಇಂದು ಅಯೋಧ್ಯೆಯು ಭಾರತದ ಸಾಂಸ್ಕೃತಿಕ ಪುನರುಜ್ಜೀವದ ಸುವರ್ಣ ಅಧ್ಯಾಯದ ಪ್ರತಿಬಿಂಬವಾಗಿದೆ" ಎಂದು ಪ್ರಧಾನಿ ಹೇಳಿದರು. ಈ ಮೊದಲು ತಾವು ರಾಜ್ಯಭೀಷೇಕ ಕಾರ್ಯಕ್ರಮಕ್ಕಾಗಿ  ಇಲ್ಲಿಗೆ ಬಂದಾಗ ತಮ್ಮಲ್ಲಿ ಭಾವನೆಗಳ ಮಹಾಪೂರವೇ ಉಂಟಾಗಿತ್ತು ಎಂದು ಪ್ರಧಾನಿ ಹೇಳಿದರು. ಭಗವಾನ್ ಶ್ರೀ ರಾಮನು 14 ವರ್ಷಗಳ ವನವಾಸದ ನಂತರ ಹಿಂದಿರುಗಿದಾಗ ಅಯೋಧ್ಯೆಯನ್ನು ಹೇಗೆ ಅಲಂಕರಿಸುತ್ತಿದ್ದಿರಬಹುದು ಎಂಬ ಬಗ್ಗೆ  ಪ್ರಧಾನಮಂತ್ರಿಯವರು ಅಚ್ಚರಿ ವ್ಯಕ್ತಪಡಿಸಿದರಲ್ಲದೆ ಇಂದಿನ ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯನ್ನೂ  ವ್ಯಕ್ತಪಡಿಸಿದರು. "ಇಂದು ಈ ಅಮೃತ ಕಾಲದಲ್ಲಿ, ಭಗವಾನ್ ರಾಮನ ಆಶೀರ್ವಾದದೊಂದಿಗೆ, ನಾವು ಅಯೋಧ್ಯೆಯ ದೈವಿಕತೆ  ಮತ್ತು ಅಮರತ್ವವನ್ನು ಸಾಕ್ಷೀಕರಿಸುತ್ತಿದ್ದೇವೆ" ಎಂದು ಪ್ರಧಾನಿ ಹೇಳಿದರು.

ಹಬ್ಬಗಳು ಮತ್ತು ಆಚರಣೆಗಳು ಜೀವನದಲ್ಲಿ ಸ್ವಾಭಾವಿಕ ಭಾಗವಾಗಿರುವಂತಹ ಜನರ ಸಂಪ್ರದಾಯಗಳು ಮತ್ತು ಸಂಸ್ಕೃತಿಗಳ ವಾಹಕರು ನಾವು ಎಂದು ಅವರು ಹೇಳಿದರು. "ಪ್ರತಿಯೊಂದು ಸತ್ಯದ ವಿಜಯ ಮತ್ತು ಪ್ರತಿಯೊಂದು ಸುಳ್ಳಿನ ಸೋಲಿನ ಬಗ್ಗೆ ಮಾನವೀಯತೆಯ ಸಂದೇಶವನ್ನು ಜೀವಂತವಾಗಿರಿಸುವಲ್ಲಿ  ಭಾರತಕ್ಕೆ ಸರಿಸಾಟಿ ಯಾರೂ ಇಲ್ಲ" ಎಂದು ಪ್ರಧಾನಿ ಹೇಳಿದರು. "ದೀಪಾವಳಿ ದೀಪಗಳು ಭಾರತದ ಆದರ್ಶಗಳು, ಮೌಲ್ಯಗಳು ಮತ್ತು ತತ್ವಶಾಸ್ತ್ರದ ಜೀವಂತ ಶಕ್ತಿಯಾಗಿವೆ" ಎಂದು ನುಡಿದ ಪ್ರಧಾನಮಂತ್ರಿಯವರು, "ಈ ಬೆಳಕಿನ ಬೆಳಕು ಮತ್ತು ಪರಿಣಾಮಗಳು ಭಾರತದ ಪ್ರಮುಖ ಮಂತ್ರವಾದ 'ಸತ್ಯಮೇವ ಜಯತೇ'ಯ ಘೋಷಣೆಯಾಗಿದೆ” ಎಂದೂ  ಅಭಿಪ್ರಾಯಪಟ್ಟರು. 

ಉಪನಿಷತ್ ಉಲ್ಲೇಖಿಸಿದ ಪ್ರಧಾನ ಮಂತ್ರಿಗಳು, "ಸತ್ಯಮೇವ ಜಯತೇ ನಾನೃತಂ ಸತ್ಯೇನ್ ಪಂಥಾ ವಿತತೋ ದೇವಾಯಣಃ" ಅಂದರೆ ವಿಜಯವು ಸತ್ಯಕ್ಕೆ ಸೇರಿದ್ದೇ ಹೊರತು ಅಸತ್ಯಕ್ಕಲ್ಲ ಎಂದರು. "ರಾಮೋ ರಾಜಮಣಿ ಸದಾ ವಿಜಯತೇ" ಅಂದರೆ ಗೆಲುವು ಯಾವಾಗಲೂ ರಾಮನ ಸನ್ನಡತೆಗಾಗಿಯೇ ಹೊರತು ರಾವಣನ ದುರ್ನಡತೆಗಾಗಿ ಅಲ್ಲ ಎಂದು ನಮ್ಮ ಋಷಿಮುನಿಗಳ ಮಾತುಗಳನ್ನೂ  ಪ್ರಧಾನ ಮಂತ್ರಿ ಅವರು ಉಲ್ಲೇಖಿಸಿದರು. ಭೌತಿಕ ದೀಪದಲ್ಲಿರುವ ಪ್ರಜ್ಞಾಶಕ್ತಿಯ ಮೇಲೆ ಬೆಳಕು ಚೆಲ್ಲುತ್ತಾ, "ದೀಪಂ ಜ್ಯೋತಿಃ ಪರಬ್ರಹ್ಮ ದೀಪಂ ಜ್ಯೋತಿ ಜನಾರ್ದನ" ಅಂದರೆ ದೀಪದ ಬೆಳಕು ಬ್ರಹ್ಮನ ರೂಪವಾಗಿದೆ ಎಂದು ಋಷಿಮುನಿಗಳನ್ನು ಉಲ್ಲೇಖಿಸಿ ಅವರು ನುಡಿದರು. ಈ ಆಧ್ಯಾತ್ಮಿಕ ಬೆಳಕು ಭಾರತದ ಪ್ರಗತಿ ಮತ್ತು ಉನ್ನತಿಗೆ ಮಾರ್ಗದರ್ಶನ ನೀಡುತ್ತದೆ ಎಂಬ ತಮ್ಮ ನಂಬಿಕೆಯನ್ನು ಶ್ರೀ ಮೋದಿ ಅವರು ಪುನರುಚ್ಚರಿಸಿದರು.

ಗೋಸ್ವಾಮಿ ತುಳಸೀದಾಸರು ರಾಮಚರಿತ ಮಾನಸದಲ್ಲಿ ಹೇಳಿದ್ದನ್ನು ಎಲ್ಲರಿಗೂ ನೆನಪಿಸಲು ಈ ಅವಕಾಶವನ್ನು ಬಳಸಿಕೊಂಡ ಪ್ರಧಾನಮಂತ್ರಿಯವರು, "ಜಗತ್ ಪ್ರಕಾಶ್ ಪ್ರಕಾಶಕ ರಾಮು" ಅಂದರೆ ಭಗವಾನ್ ರಾಮನು ಇಡೀ ಜಗತ್ತಿಗೆ ಬೆಳಕನ್ನು ನೀಡುವವನು ಮತ್ತು ಇಡೀ ವಿಶ್ವಕ್ಕೆ ದಾರಿದೀಪವಿದ್ದಂತೆ ಎಂದರು. "ಇದು ದಯೆ ಮತ್ತು ಸಹಾನುಭೂತಿ, ಮಾನವೀಯತೆ ಮತ್ತು ಘನತೆಯ ಬೆಳಕು, ಸಮಚಿತ್ತತೆಯ ಬೆಳಕು ಮತ್ತು ಇದು ಸಬ್ ಕಾ ಸಾಥ್ ನ ಸಂದೇಶವಾಗಿದೆ" ಎಂದು ಹೇಳಿದರು.

ಪ್ರಧಾನಮಂತ್ರಿಯವರು ಅನೇಕ ವರ್ಷಗಳ ಹಿಂದೆ ಗುಜರಾತಿ ಭಾಷೆಯಲ್ಲಿ ದೀಪದ ಬಗ್ಗೆ ಬರೆದಿದ್ದ ತಮ್ಮ ಕವಿತೆ 'ದಿಯಾ'ದ ಕೆಲವು ಸಾಲುಗಳನ್ನು ವಾಚಿಸಿದರು.  ದೀಪವು ಭರವಸೆ ಮತ್ತು ಶಾಖ, ಬೆಂಕಿ ಮತ್ತು ವಿಶ್ರಾಂತಿಯನ್ನು ನೀಡುತ್ತದೆ ಎಂದು ಅರ್ಥೈಸುವ ಕವಿತೆಯ ಅರ್ಥವನ್ನು ಅವರು ವಿವರಿಸುತ್ತಾ ಹೋದರು. ಪ್ರತಿಯೊಬ್ಬರೂ ಉದಯಿಸುತ್ತಿರುವ ಸೂರ್ಯನನ್ನು ಪೂಜಿಸಿದರೂ ಸಹ ಸಂಜೆಯ ಕತ್ತಲೆಯನ್ನು ದೂರ ಮಾಡುವುದು ದೀಪ. ಅಂಧಕಾರವನ್ನು ಹೋಗಲಾಡಿಸಲು ದೀಪವು ಸ್ವತಃ ಉರಿಯುತ್ತದೆ ಮತ್ತು ಜನರ ಮನಸ್ಸಿನಲ್ಲಿ ಸಮರ್ಪಣೆಯ ಪ್ರಜ್ಞೆಯನ್ನು ತರುತ್ತದೆ ಎಂದು ಅವರು ಹೇಳಿದರು.

ನಾವು ಸ್ವಾರ್ಥದಿಂದ ಹೊರಬಂದಾಗ, ಎಲ್ಲರನ್ನೂ ಒಳಗೊಳ್ಳುವ ಸಂಕಲ್ಪವು ಸ್ವಯಂಚಾಲಿತವಾಗಿ ಅದರಲ್ಲಿ ಸೇರುತ್ತದೆ ಎಂಬುದನ್ನು ಪ್ರಧಾನ ಮಂತ್ರಿಯವರು ಒತ್ತಿ ಹೇಳಿದರು. "ನಮ್ಮ ಆಲೋಚನೆಗಳು, ಚಿಂತನೆಗಳು ಸಾಕಾರಗೊಂಡಾಗ, ಈ ಸಾಧನೆಯು ನನಗಾಗಿ ಅಲ್ಲ, ಅದು ಮಾನವಕುಲದ ಕಲ್ಯಾಣಕ್ಕಾಗಿ ಎಂದು ನಾವು ಹೇಳುತ್ತೇವೆ. ದೀಪದಿಂದ ದೀಪಾವಳಿಯವರೆಗೆ, ಇದು ಭಾರತದ ತತ್ವಶಾಸ್ತ್ರ, ಇದು ಭಾರತದ ಚಿಂತನೆ ಮತ್ತು ಭಾರತದ ಚಿರಂತನ  ಸಂಸ್ಕೃತಿಯಾಗಿದೆ. ಮಧ್ಯಯುಗ ಮತ್ತು ಆಧುನಿಕ ಯುಗದಲ್ಲಿ ಭಾರತವು ಕರಾಳ ಯುಗದ ದುಷ್ಪರಿಣಾಮಗಳನ್ನು ಎದುರಿಸಿದರೂ, ದೇಶವಾಸಿಗಳು ದೀಪಗಳನ್ನು ಬೆಳಗಿಸುವುದನ್ನು ಎಂದಿಗೂ ನಿಲ್ಲಿಸಲಿಲ್ಲ ಮತ್ತು ನಂಬಿಕೆಯನ್ನು ಬೆಳೆಸುವುದನ್ನು ಎಂದಿಗೂ ನಿಲ್ಲಿಸಲಿಲ್ಲ ಎಂದು ಪ್ರಧಾನಿ ಹೇಳಿದರು. ಕೊರೊನಾ ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬ ಭಾರತೀಯರೂ ಅದೇ ಉತ್ಸಾಹದಲ್ಲಿ ದೀಪದೊಂದಿಗೆ ಎದ್ದು ನಿಂತಿದ್ದಾರೆ ಮತ್ತು ಈ ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧದ ಭಾರತದ ಹೋರಾಟಕ್ಕೆ ಜಗತ್ತು ಸಾಕ್ಷಿಯಾಗಿದೆ ಎಂದೂ ಅವರು ನೆನಪಿಸಿಕೊಂಡರು. "ಭಾರತವು ಹಿಂದಿನ ಪ್ರತಿಯೊಂದು ಅಂಧಕಾರದಿಂದ, ಕತ್ತಲೆಯ ಪರಿಸ್ಥಿತಿಯಿಂದ  ಹೊರಬಂದು ತನ್ನ ಶಕ್ತಿಯ ಬೆಳಕನ್ನು ಪ್ರಗತಿಯ ಪಥದಲ್ಲಿ ಹರಡಿತು" ಎಂದು ಪ್ರಧಾನಮಂತ್ರಿ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ಹಿನ್ನೆಲೆ
ದೀಪೋತ್ಸವದ ಆರನೇ ಆವೃತ್ತಿಯಲ್ಲಿ  ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿಗಳು ವೈಯಕ್ತಿಕವಾಗಿ   ಈ ಆಚರಣೆಯ ಭಾಗವಾಗಿದ್ದಾರೆ. ಈ ಸಂದರ್ಭದಲ್ಲಿ, 15 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಲಾಗುವುದು ಮತ್ತು ಐದು ಅನಿಮೇಟೆಡ್ ಸ್ತಬ್ಧಚಿತ್ರಗಳು ಹಾಗು  ವಿವಿಧ ರಾಜ್ಯಗಳ ವಿವಿಧ ನೃತ್ಯ ಪ್ರಕಾರಗಳೊಂದಿಗೆ ಹನ್ನೊಂದು ರಾಮಲೀಲಾ ಸ್ತಬ್ಧಚಿತ್ರಗಳನ್ನು ಪ್ರದರ್ಶಿಸಲಾಗುವುದು.

 

*****



(Release ID: 1870648) Visitor Counter : 111