ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್ನ ಜುನಾಗಢದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಇಂಗ್ಲಿಷ್ ಭಾಷಾಂತರ
Posted On:
19 OCT 2022 10:30PM by PIB Bengaluru
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ದೀಪಾವಳಿ ನಿಮಗೆ ಮುಂಚಿತವಾಗಿಯೇ ಬಂದಿದೆ ಎಂದು ತೋರುತ್ತದೆ. ಅದು ಯಾವುದೇ ಹಬ್ಬದ ದಿನವಾಗಿರಲಿ, ಧನ್ತೇರಸ್ ಮತ್ತು ದೀಪಾವಳಿ ತುಂಬಾ ಹತ್ತಿರದಲ್ಲಿವೆ, ಹೊಸ ವರ್ಷದ ಸಿದ್ಧತೆಗಳು ಪ್ರಾರಂಭವಾಗಿವೆ ಮತ್ತು ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ಮುಳುಗಿದ್ದಾರೆ. ಆದರೂ ಅನೇಕ ಜನರು ಇಲ್ಲಿ ನೆರೆದಿದ್ದಾರೆ. ನಾನು ಎಲ್ಲಿಯವರೆಗೆ ನೋಡಬಲ್ಲೆನೋ ಅಲ್ಲಿಯವರೆಗೆ, ಆಶೀರ್ವಾದಗಳ ಗಂಗೆ ಹರಿಯುತ್ತಿರುವಂತೆ ತೋರುತ್ತದೆ. ಜೈ ಗಿರ್ನಾರಿ! ಇದಕ್ಕಿಂತ ದೊಡ್ಡ ಉತ್ಸಾಹವೆಂದರೆ ಸಂತರು ಮತ್ತು ಸಾಧುಗಳು ನನ್ನನ್ನು ಆಶೀರ್ವದಿಸಲು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದಿದ್ದಾರೆ. ಇದು ಸಿಂಹಗಳು ಮತ್ತು ನರಸಿಂಹನ ನಾಡು ಕೂಡ ಆಗಿದೆ. ವಿಶೇಷವಾಗಿ ನನ್ನನ್ನು ಆಶೀರ್ವದಿಸಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ತಾಯಂದಿರು ಮತ್ತು ಸಹೋದರಿಯರಿಗೆ ನಾನು ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಸಹೋದರ-ಸಹೋದರಿಯರೇ,
ಜುನಾಗಢ, ಗಿರ್ ಸೋಮನಾಥ್ ಮತ್ತು ಪೋರ್ಬಂದರ್ಗಾಗಿ 4,000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಅಥವಾ ಅವುಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಅಂಕಿಅಂಶವು ಜನರಿಗೆ ಆಶ್ಚರ್ಯ ತಂದಿರಬಹುದು. ಈ ಮೊತ್ತವು ಒಂದು ಕಾಲದಲ್ಲಿ ಇಡೀ ಗುಜರಾತ್ನ ವಾರ್ಷಿಕ ಆಯವ್ಯಯದ ಮೊತ್ತವು ಇಷ್ಟಿರುತ್ತಿತ್ತು. ಇಂದು, ನಾನು ಗುಜರಾತ್ ನಾಡಿಗೆ ನನ್ನ ಒಂದು ದಿನದ ಭೇಟಿಯ ಸಂದರ್ಭದಲ್ಲಿ, ಈ ಹಿಂದಿನ ಇಡೀ ರಾಜ್ಯದ ಆಯವ್ಯಯಕ್ಕಿಂತಲೂ ಹೆಚ್ಚಿನ ಮೌಲ್ಯದ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುತ್ತಿದ್ದೇನೆ. ಇದು ನಿಮ್ಮ ಆಶೀರ್ವಾದದ ಫಲವಾಗಿದೆ. ಈ ಅಭಿವೃದ್ಧಿ ಯೋಜನೆಗಳ ಪ್ರಯೋಜನಗಳು ನನ್ನ ಮೀನುಗಾರ ಸಹೋದರ -ಸಹೋದರಿಯರ ಜೀವನವನ್ನು ಸುಲಭಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಲಿವೆ. ಗುಜರಾತಿನ ಪ್ರವಾಸೋದ್ಯಮ ಕ್ಷೇತ್ರದ ರಾಜಧಾನಿಯಾದ ಜುನಾಗಢದ ಜತೆಗೆ ಗಿರ್ ಸೋಮನಾಥ್ ಮತ್ತು ಪೋರ್ಬಂದರ್ ಅಪಾರ ಸಾಮರ್ಥ್ಯವನ್ನು ಹೊಂದಿವೆ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ಈ ಯೋಜನೆಗಳು ಅನೇಕ ಉದ್ಯೋಗ ಮತ್ತು ಸ್ವಯಂ-ಉದ್ಯೋಗಾವಕಾಶಗಳಿಗೆ ಕಾರಣವಾಗುತ್ತವೆ. ರಾಜ್ಯದಲ್ಲಿ ಅಭಿವೃದ್ಧಿಯ ಮಳೆಗರೆಯುವ ಈ ದೀಪಾವಳಿ ಉಡುಗೊರೆಗಳಿಗಾಗಿ ನಾನು ನಿಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಶುಭಾಶಯಗಳನ್ನು ಕೋರುತ್ತಿದ್ದೇನೆ.
ಸಹೋದರ-ಸಹೋದರಿಯರೇ,
ನಿಮ್ಮ ಆಶೀರ್ವಾದದಿಂದಾಗಿ ಇಂದು ನನ್ನ ಎದೆಯು ಹೆಮ್ಮೆಯಿಂದ ಉಬ್ಬಿದೆ. ನಾನು ಗುಜರಾತ್ನಿಂದ ದೆಹಲಿಗೆ ತೆರಳಿದ ನಂತರ ನಮ್ಮ ತಂಡವು ಗುಜರಾತ್ಅನ್ನು ನಿರ್ವಹಿಸಿದ ರೀತಿ ಮತ್ತು ಭೂಪೇಂದ್ರಭಾಯಿ ಮತ್ತು ಅವರ ತಂಡವು ಗುಜರಾತ್ನಲ್ಲಿ ತ್ವರಿತ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿರುವ ರೀತಿಯನ್ನು ಕಂಡು ನನಗೆ ಸಂತೋಷವಾಗಿದೆ. ಅದಕ್ಕಿಂತ ಹೆಚ್ಚಿನ ಸಂತೋಷದ ಸಂಗತಿಯೆಂದರೆ, ಇಂದು ಗುಜರಾತ್ ಎಲ್ಲಾ ಕ್ಷೇತ್ರಗಳಲ್ಲೂ ಬಹಳ ವೇಗವಾಗಿ ಬೆಳೆಯುತ್ತಿದೆ.
ಸಹೋದರ-ಸಹೋದರಿಯರೇ,
ನಾವು ಹಳೆಯ ದಿನಗಳನ್ನು ಮೆಲುಕು ಹಾಕುವುದಾದರೆ, ಇಲ್ಲಿ ಕುಳಿತಿರುವ ಅನೇಕ ಹಿರಿಯರಿಗೆ ನಾವು ಆ ದಿನಗಳನ್ನು ಹೇಗೆ ಕಳೆದಿದ್ದೇವೆಂದು ತಿಳಿದಿದೆ. 10 ವರ್ಷಗಳ ಪೈಕಿ ಏಳು ವರ್ಷಗಳಲ್ಲಿ ಬರಗಾಲವಿರುತ್ತಿತ್ತು. ನಾವು ನೀರಿಗಾಗಿ ಹಾತೊರೆಯುತ್ತಿದ್ದೆವು. ಒಂದು ಕಡೆ, ಈ ಉಪ್ಪು ಸಮುದ್ರದ ನೀರು ಭೂಮಿಯ ಆಳಕ್ಕೆ ಹೋಗುವುದರಿಂದ ಪ್ರಕೃತಿಯು ಕೋಪಗೊಳ್ಳುತ್ತಿತ್ತು. ನಮ್ಮ ಭೂಮಿಯ ಸ್ಥಿತಿ ಹೇಗಿತ್ತೆಂದರೆ, ಇಲ್ಲಿ ಏನನ್ನೂ ಉತ್ಪಾದಿಸಲು ಸಾಧ್ಯವಿರಲಿಲ್ಲ. ಹಳ್ಳಿಗಳಿಂದ ಜನರು ತಮ್ಮ ಜೀವನೋಪಾಯಕ್ಕಾಗಿ ಸೂರತ್ ಮತ್ತು ಭಾರತದ ಇತರ ಭಾಗಗಳಿಗೆ ವಲಸೆ ಹೋಗುತ್ತಿದ್ದದರಿಂದ ಕಾಥೇವಾಡ ನಿರ್ಜನ ಪ್ರದೇಶವಾಗಿ ಮಾರ್ಪಟ್ಟಿತ್ತು. ಆದರೆ ನಾವೆಲ್ಲರೂ ಹಾಕಿದ ಕಠಿಣ ಪರಿಶ್ರಮವು ಈಗ ಪರಿಸ್ಥಿತಿಯನ್ನು ಬದಲಾಯಿಸಿದೆ. ನಾವು ಸಮರ್ಪಣಾ ಭಾವದಿಂದ ಕಠಿಣ ಪರಿಶ್ರಮವನ್ನು ಮಾಡಿದರೆ, ಆಗ ಪ್ರಕೃತಿ ನಮ್ಮನ್ನು ಆಶೀರ್ವದಿಸುತ್ತದೆ. ಸಹೋದರರೇ, ನೀವು ಹೆಮ್ಮೆ ಪಡಬೇಕು. 2001ರ ನಂತರ ದೇವರ ಅನುಗ್ರಹ ಹೇಗಿದೆ ನೋಡಿ. ಈಗಾಗಲೇ 20 ವರ್ಷಗಳಿಗಿಂತ ಹೆಚ್ಚು ಕಾಲ ಸಂದಿದೆ, ಒಂದು ವರ್ಷವೂ ಬರಗಾಲವಿಲ್ಲ. ಇದು ಆಶೀರ್ವಾದವವಲ್ಲದೆ, ಮತ್ತೇನು? ಒಂದು ಕಡೆ, ನಿಮ್ಮ ಆಶೀರ್ವಾದವಿದೆ ಮತ್ತು ಮತ್ತೊಂದೆಡೆ, ಪ್ರಕೃತಿಯ ಆಶೀರ್ವಾದವಿದೆ. ಪರಿಣಾಮವಾಗಿ, ಅಭಿವೃದ್ಧಿಯ ಕೊಡುಗೆಗಳೊಂದಿಗೆ ಪ್ರತಿಯೊಬ್ಬರೂ ಜೀವನವನ್ನು ಆನಂದಿಸಬಹುದು.
ಒಂದು ಕಾಲದಲ್ಲಿ ಜನರು ನರ್ಮದಾ ಮಾತೆಯನ್ನು ನೋಡಲು ವಿಶೇಷ ಬಸ್ಸುಗಳಲ್ಲಿ ಪ್ರಯಾಣಿಸಬೇಕಿತ್ತು. ಆದರೆ ಕಾಲ ಬದಲಾಗಿದೆ. ಇಂದು ನರ್ಮದಾ ಮಾತೆಯು ತನ್ನ ಆಶೀರ್ವಾದವನ್ನು ನೀಡಲು ಸೌರಾಷ್ಟ್ರದ ಪ್ರತಿಯೊಂದು ಹಳ್ಳಿಯನ್ನು ತಲುಪುತ್ತಿದ್ದಾಳೆ. ಸಹೋದರರೇ, ಕಠಿಣ ಪರಿಶ್ರಮದ ಸಿಹಿಫಲದಿಂದ ಇದೆಲ್ಲಾ ಸಾಧ್ಯವಾಗಿದೆ. ನೀರು ಹಳ್ಳಿಗಳನ್ನು ತಲುಪಲು ಪ್ರಾರಂಭಿಸಿದೆ, ರಸ್ತೆಗಳು ಉತ್ತಮಗೊಳ್ಳಲು ಪ್ರಾರಂಭಿಸಿವೆ ಮತ್ತು ಹಣ್ಣುಗಳು ಮತ್ತು ತರಕಾರಿಗಳನ್ನು ಬೆಳೆಯುವ ರೈತರ ಜೀವನವು ಬದಲಾಗಿದೆ. ʻಜುನಾಗಢದ ರೈತರು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ ಮತ್ತು ಅದರಲ್ಲಿ ಪೂರ್ಣ ಶಕ್ತಿಯಿಂದ ತೊಡಗಿದ್ದಾರೆʼ ಎಂದು ನಮ್ಮ ಗೌರವಾನ್ವಿತ ರಾಜ್ಯಪಾಲ ಆಚಾರ್ಯ ದೇವವ್ರತ್ ಅವರು ನನಗೆ ಹೇಳುತ್ತಿದ್ದರು. ಸಹೋದರ-ಸಹೋದರಿಯರೇ, ಜುನಾಗಢದ ʻಕೇಸರ್ʼ ಮಾವಿನ ಹಣ್ಣಿನ ಮಾಧುರ್ಯವು ಭಾರತದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ತಲುಪುತ್ತಿದೆ. ಭಾರತವು ಸುದೀರ್ಘ ಸಮುದ್ರ ತೀರವನ್ನು ಹೊಂದಿದೆ ಮತ್ತು ಗುಜರಾತ್ ಅದರ ಹೆಚ್ಚಿನ ಭಾಗವನ್ನು ಹಂಚಿಕೊಂಡಿದೆ. ಆದರೆ ಈ ಸಮುದ್ರವು ಹಿಂದೆ ನಮಗೆ ಹೊರೆಯಾಗಿತ್ತು. ಈ ಉಪ್ಪು ಪ್ರದೇಶ ಮತ್ತು ಉಪ್ಪಿನ ಗಾಳಿ ನಮಗೆ ವಿಷದಂತೆ ತೋರಿತ್ತು. ಆದರೆ ಸಹೋದರರೇ, ಸಮಯ ಹೇಗೆ ಬದಲಾಗಿದೆ ನೋಡಿ. ನಮಗೆ ಹೊರೆಯಾಗಿದ್ದ ಸಮುದ್ರವು ಇಂದು ನಮಗೆ ಕಠಿಣ ಪರಿಶ್ರಮದ ಫಲವನ್ನು ನೀಡುತ್ತಿದೆ.
ʻರಣ್ ಆಫ್ ಕಛ್ʼನ ಧೂಳಿನ ಕಣಗಳು ನಮ್ಮನ್ನು ತೊಂದರೆಗೀಡು ಮಾಡುತ್ತಿದ್ದ ಕಾಲವೊಂದಿತ್ತು. ಇಂದು ಅದೇ ಕಛ್ ಗುಜರಾತ್ನ ಅಭಿವೃದ್ಧಿಗೆ ಅಡಿಪಾಯ ಹಾಕಿದೆ. ಸಹೋದರರೇ, ಗುಜರಾತ್ ನೈಸರ್ಗಿಕ ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿದೆ. ಆದರೆ ಅದು ಈಗ ಪ್ರಗತಿಯ ಹೊಸ ಎತ್ತರವನ್ನು ಸಾಧಿಸಿದೆ. ಸುಮಾರು 20-25 ವರ್ಷಗಳ ಹಿಂದೆ, ನಾವು ಪರಿಸ್ಥಿತಿಯನ್ನು ಬದಲಾಯಿಸಲು ನಿರ್ಧರಿಸಿದ್ದೆವು, ಉಪಕ್ರಮವನ್ನು ತೆಗೆದುಕೊಂಡಿದ್ದೇವೆ ಮತ್ತು ಪ್ರತಿ ಕ್ಷಣವನ್ನು ಈ ಇದಕ್ಕಾಗಿ ವ್ಯಯಿಸಿದ್ದೇವೆ. ಇಂದು 20-25 ವರ್ಷ ವಯಸ್ಸಿನ ಯುವಕರು ಆಗ ಇದ್ದ ಪರಿಸ್ಥಿತಿಯನ್ನು ಊಹಿಸಲು ಸಹ ಸಾಧ್ಯವಿಲ್ಲ. ಸ್ನೇಹಿತರೇ, ನಾವು ಉತ್ತಮ ದಿನಗಳನ್ನು ತರಲು ಪ್ರಯತ್ನಿಸಿದ್ದೇವೆ. ನಮ್ಮ ಮೀನುಗಾರರ ಸಹೋದರ- ಸಹೋದರಿಯರ ಅಭಿವೃದ್ಧಿಗಾಗಿ ನಾವು ಗುಜರಾತ್ನಲ್ಲಿ ʻಸಾಗರ್ಖೇಡು ಯೋಜನೆʼಯನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಯಡಿ, ನಾವು ನಮ್ಮ ಮೀನುಗಾರರ ಸುರಕ್ಷತೆ, ಅವರ ಅನುಕೂಲತೆ ಮತ್ತು ಅವರ ವ್ಯವಹಾರಕ್ಕೆ ಅಗತ್ಯವಾದ ಮೂಲಸೌಕರ್ಯಗಳಿಗೆ ಒತ್ತು ನೀಡಿದ್ದೇವೆ. ಇದರ ಪರಿಣಾಮವಾಗಿ, ಮೀನುಗಳ ರಫ್ತು 20 ವರ್ಷಗಳಲ್ಲಿ ಏಳು ಪಟ್ಟು ಹೆಚ್ಚಾಗಿದೆ.
ಸಹೋದರ ಸಹೋದರಿಯರೇ, ಮೀನಿನ ರಫ್ತಿನ ಬಗ್ಗೆ ಮಾತನಾಡುವಾಗ, ನನಗೆ ಒಂದು ಹಳೆಯ ಘಟನೆ ನೆನಪಿಗೆ ಬರುತ್ತದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಜಪಾನ್ನಿಂದ ನಿಯೋಗವೊಂದು ಗುಜರಾತಿಗೆ ಬಂದಿತ್ತು. ನಾನು ಗುಜರಾತಿನ ಅಭಿವೃದ್ಧಿಯ ಸಾಕ್ಷ್ಯಚಿತ್ರವನ್ನು ಅವರಿಗೆ ತೋರಿಸುತ್ತಿದ್ದೆ. ಅದರಲ್ಲಿ ಜಪಾನೀ ಭಾಷೆಯಲ್ಲಿ ವ್ಯಾಖ್ಯಾನವೂ ಇತ್ತು. ಅವರೆಲ್ಲರೂ ಅದರಲ್ಲಿ ಆಳವಾಗಿ ತಲ್ಲೀನರಾಗಿದ್ದರು. ನಂತರ ಇದ್ದಕ್ಕಿದ್ದಂತೆ, ಆ ನಿಯೋಗದ ಕೆಲವು ಸದಸ್ಯರು ಸಾಕ್ಷ್ಯಚಿತ್ರವನ್ನು ನಿಲ್ಲಿಸುವಂತೆ ನನ್ನನ್ನು ಕೋರಿದರು. ಸಾಕ್ಷ್ಯಚಿತ್ರವನ್ನು ನಿಲ್ಲಿಸುವಂತೆ ಅವರು ನನ್ನನ್ನು ಏಕೆ ಕೇಳುತ್ತಿದ್ದಾರೆ ಎಂದು ನಾನು ಗೊಂದಲಕ್ಕೊಳಗಾದೆ. ಸಾಕ್ಷ್ಯಚಿತ್ರದಲ್ಲಿ ತೋರಿಸಲಾದ ಸಮುದ್ರ ತೀರ ಮತ್ತು ಮೀನುಗಾರರ ಜೊತೆಗೆ ʻಸುರಿಮಿ ಮೀನುʼಗಳೂ ಇದ್ದವು. ಅವರು ಸುರಿಮಿ ಮೀನುಗಳನ್ನು ಸವಿಯಲು ಬಯಸುತ್ತಿರುವುದಾಗಿಯೂ ಮತ್ತು ಅವುಗಳನ್ನು ನೋಡಿದ ಬಳಿಕ ಸವಿಯುವ ಆಸೆಯನ್ನು ತಡೆಹಿಡಿದು ಇಲ್ಲಿ ಕುಳಿತುಕೊಳ್ಳಲು ಕಷ್ಟವಾಗುತ್ತಿದೆ ಎಂದೂ ಅವರು ನನಗೆ ಹೇಳಿದರು. ಸುರಿಮಿ ಮೀನಿನ ಜನಪ್ರಿಯತೆ ಅಂಥದ್ದು. ಸುರಿಮಿ ಮೀನಿನ ಬಗ್ಗೆ ಕೇಳಿದ ಬಳಿಕ ಅದನ್ನು ಸವಿಯುವ ಬಯಕೆಯನ್ನು ಪ್ರತಿರೋಧಿಸುವುದು ತುಂಬಾ ಕಷ್ಟ. ಸಹೋದರರೇ, ಇಂದು ಸುರಿಮಿ ಮೀನು ಗುಜರಾತಿನ ಮಾರುಕಟ್ಟೆಗಳಲ್ಲಿ ಬಹಳ ಜನಪ್ರಿಯವಾಗಿದೆ. ಪ್ರತಿ ವರ್ಷ, ಸುರಿಮಿ ಮೀನು ನೂರಾರು ಕೋಟಿ ರೂಪಾಯಿಗಳಷ್ಟು ರಫ್ತಾಗುತ್ತದೆ. ಈಗ ವಲ್ಸಾದ್ನಲ್ಲಿ ಸಮುದ್ರ-ಆಹಾರ ಉದ್ಯಾನವನವಿದೆ, ಅಲ್ಲಿಂದ ಮೀನುಗಳನ್ನು ರಫ್ತು ಮಾಡಲಾಗುತ್ತದೆ. ನಾವು ಮೀನುಗಾರಿಕೆ ಕ್ಷೇತ್ರದಲ್ಲಿ ಹೊಸ ಸಾಧನೆಗಳನ್ನು ಮಾಡುತ್ತಿದ್ದೇವೆ.
ಸಹೋದರ-ಸಹೋದರಿಯರೇ,
ನನ್ನ ಗುಜರಾತ್ನ ಕಡಲತೀರವು ಕಳೆದ ಎಂಟು ವರ್ಷಗಳಲ್ಲಿ ಡಬಲ್ ಎಂಜಿನ್ ಸರಕಾರದ ಎರಡು ಪ್ರಯೋಜನಗಳನ್ನು ಪಡೆದಿದೆ. ಮೀನು ಮತ್ತು ಸಮುದ್ರಾಹಾರದ ವ್ಯಾಪಾರ ಹೆಚ್ಚಾಗಿದೆ. ಈ ಮೊದಲು, ನಮ್ಮ ಮೀನುಗಾರರು ಸಮುದ್ರ ತೀರವು ಆಳವಿಲ್ಲದ ಕಾರಣ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ತಮ್ಮ ಮೀನುಗಳನ್ನು ಸಮುದ್ರ ತೀರಕ್ಕೆ ತರುವುದು ಅವರಿಗೆ ತುಂಬಾ ಕಷ್ಟಕರವಾಗಿತ್ತು. ನಾವು ಗುಜರಾತಿನಲ್ಲಿ ಮೀನುಗಾರಿಕಾ ಬಂದರನ್ನು ನಿರ್ಮಿಸುವ ಅಭಿಯಾನವನ್ನು ಪ್ರಾರಂಭಿಸಿದೆವು ಮತ್ತು ʻಸಾಗರ ಖೇಡುʼವಿನ ಸಮಸ್ಯೆಗಳನ್ನು ನಿವಾರಿಸಲು ಪ್ರಯತ್ನಿಸಿದೆವು. ಕಳೆದ ಎರಡು ದಶಕಗಳಲ್ಲಿ ಅನೇಕ ದೊಡ್ಡ ಮೀನುಗಾರಿಕಾ ಬಂದರುಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಹಳೆಯ ಬಂದರುಗಳನ್ನು ಸಹ ಮೇಲ್ದರ್ಜೆಗೇರಿಸಲಾಗಿದೆ. ಡಬಲ್ ಎಂಜಿನ್ ಸರಕಾರ ರಚನೆಯಾದ ನಂತರ ಈ ಕೆಲಸದ ವೇಗವು ದ್ವಿಗುಣಗೊಂಡಿದೆ. ಇಂದಿಗೂ ಸಹ, ಮೂರು ಮೀನುಗಾರಿಕಾ ಬಂದರುಗಳನ್ನು ಅಭಿವೃದ್ಧಿಪಡಿಸಲು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಸಹೋದರರೇ. ನಿಮ್ಮ ಪ್ರದೇಶದಲ್ಲಿ ಆಗಲಿರುವ ಆರ್ಥಿಕ ಪ್ರಗತಿಯನ್ನು ನೀವು ಊಹಿಸಬಹುದು. ಮೀನುಗಾರರ ಜೀವನದಲ್ಲಿ ಎಂಥಾ ದೊಡ್ಡ ಬದಲಾವಣೆ ಬರಲಿದೆ! ಮೀನುಗಾರಿಕಾ ಬಂದರಿನಿಂದ ಮೀನುಗಳ ಸಾಗಣೆಯು ತುಂಬಾ ಸುಲಭವಾಗಿರುತ್ತದೆ ಮತ್ತು ರಫ್ತಿನ ವೇಗ ಸಹ ಹೆಚ್ಚುತ್ತದೆ. ನಾವು ಡ್ರೋನ್ ನೀತಿಯನ್ನು ಸಹ ತಂದಿದ್ದೇವೆ. ಈಗ ಡ್ರೋನ್ಗಳು 20ರಿಂದ 50 ಕೆಜಿ ತೂಕದ ಸರಕುಗಳನ್ನು ಸಾಗಿಸಬಲ್ಲವು. ಸಹೋದರರೇ, ಸಾಗರಗಳಿಲ್ಲದ ಪ್ರದೇಶಗಳಿಗೆ ಡ್ರೋನ್ಗಳು ತಾಜಾ ಮೀನುಗಳನ್ನು ತಲುಪಿಸುವ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ಸಹೋದರರೇ, ಅಭಿವೃದ್ಧಿಯಿಂದಾಗುವ ಪ್ರಯೋಜನಗಳಿಗೆ ಇದು ಒಂದು ಉದಾಹರಣೆಯಾಗಿದೆ.
ಸಹೋದರ-ಸಹೋದರಿಯರೇ,
ಡಬಲ್ ಇಂಜಿನ್ ಸರಕಾರವು ನನ್ನ ರೈತ ಸಹೋದರರು ಮತ್ತು ನಮ್ಮ ಹಳ್ಳಿಗಳ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತದೆ. ಅಂತಹ ಒಂದು ಉದಾಹರಣೆಯೆಂದರೆ ನಮ್ಮ ಸರಕಾರದ ʻಪಿಎಂ ಕಿಸಾನ್ ಸಮ್ಮಾನ್ ನಿಧಿʼ. ಎರಡು ದಿನಗಳ ಹಿಂದೆ, ನಾನು ದೆಹಲಿಯಿಂದ ಪ್ರತಿಯೊಬ್ಬ ರೈತನ ಖಾತೆಗೆ ಎರಡು ಸಾವಿರ ರೂಪಾಯಿಗಳನ್ನು ಜಮಾ ಮಾಡಿದೆ. ಇಲ್ಲಿಯವರೆಗೆ, ನಾವು ನಮ್ಮ ರೈತರು, ಸಹೋದರರ ಖಾತೆಗೆ ಸುಮಾರು 2.25 ಲಕ್ಷ ಕೋಟಿ ರೂ.ಗಳನ್ನು ಜಮಾ ಮಾಡಿದ್ದೇವೆ.
ಸಹೋದರ-ಸಹೋದರಿಯರೇ,
ಇದು ಗುಜರಾತಿನ ನಮ್ಮ ರೈತರಿಗೂ ಪ್ರಯೋಜನಕಾರಿಯಾಗಿದೆ ಮತ್ತು ಸಾವಿರಾರು ಕೋಟಿ ರೂಪಾಯಿಗಳನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗಿದೆ. ಅದರಲ್ಲೂ ಕೇವಲ ಒಂದು ಅಥವಾ ಎರಡು ಹೆಕ್ಟೇರ್ ಭೂಮಿಯನ್ನು ಹೊಂದಿರುವ ನಮ್ಮ ಸಣ್ಣ ರೈತರಿಗೆ ಇದು ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಹಣವು ನೀರಾವರಿಗೆ ಯಾವುದೇ ಮಾರ್ಗಗಳಿಲ್ಲದ ಮತ್ತು ಮಳೆಯ ಮೇಲೆ ಅವಲಂಬಿತವಾಗಿರುವ ರೈತರಿಗೆ ತುಂಬಾ ಉಪಯುಕ್ತವಾಗಿದೆ. ಮೊದಲ ಬಾರಿಗೆ, ನಮ್ಮ ಸರಕಾರವು ರೈತರಿಗೆ, ಪಶುಸಂಗೋಪನೆಯಲ್ಲಿ ತೊಡಗಿರುವವರಿಗೆ ಮತ್ತು ʻಸಾಗರ ಖೇಡುʼವಿನ ನಮ್ಮ ಮೀನುಗಾರರಿಗೆ ʻಕಿಸಾನ್ ಕ್ರೆಡಿಟ್ ಕಾರ್ಡ್ʼಗಳ ಪ್ರಯೋಜನಗಳನ್ನು ಒದಗಿಸಿದೆ. ಈ ಮೊದಲು, ಈ ಕಾರ್ಡ್ ರೈತರಿಗೆ ಮಾತ್ರ ಸೀಮಿತವಾಗಿತ್ತು. ನಾವು ಈ ಯೋಜನೆಯನ್ನು ವಿಸ್ತರಿಸಿದ್ದೇವೆ ಮತ್ತು ಈ ಪ್ರಯೋಜನವನ್ನು ಮೀನುಗಾರರಿಗೆ ಮತ್ತು ಪಶುಸಂಗೋಪನೆಯಲ್ಲಿ ತೊಡಗಿರುವವರಿಗೂ ವಿಸ್ತರಿಸಿದ್ದೇವೆ. ಇದರ ಪರಿಣಾಮವಾಗಿ, ನಮ್ಮ ಮೀನುಗಾರರು ಮತ್ತು ಪಶುಸಂಗೋಪನೆಯಲ್ಲಿ ತೊಡಗಿರುವವರಿಗೆ ಬ್ಯಾಂಕುಗಳಿಂದ ಸಾಲ ಪಡೆಯುವುದು ತುಂಬಾ ಸುಲಭವಾಗಿದೆ. ಸಹೋದರ-ಸಹೋದರಿಯರೇ, ಸುಮಾರು 3.5 ಕೋಟಿ ಜನರು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿದ್ದಾರೆ. ಅವರು ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲಗಳನ್ನು ಪಡೆಯುತ್ತಿದ್ದಾರೆ. ಈಗ ಅವರು ಲೇವಾದೇವಿಗಾರರ ಸಾಲದ ಬಲೆಗೆ ಸಿಲುಕಿ ಜೀವನ ಪರ್ಯಂತ ಋಣಿಯಾಗಿ ಉಳಿಯುವ ಅಗತ್ಯವಿಲ್ಲ. ಅವರು ಈಗ ಈ ಹಣವನ್ನು ತಮ್ಮ ವ್ಯವಹಾರದ ವಿಸ್ತರಣೆಗೆ ಸೂಕ್ತ ರೀತಿಯಲ್ಲಿ ಬಳಸಬಹುದು. ದೋಣಿಗಳು, ಜಾಕೆಟ್ಗಳು, ಡೀಸೆಲ್, ತೈಲ ಮುಂತಾದವುಗಳ ಖರೀದಿಗೆ ಈ ಹಣವು ಅವರಿಗೆ ತುಂಬಾ ಉಪಯುಕ್ತವಾಗಿದೆ. ಜೊತೆಗೆ ಸ್ನೇಹಿತರೇ, ನಿಗದಿತ ಸಮಯದೊಳಗೆ ಹಣವನ್ನು ಹಿಂದಿರುಗಿಸುವವರು ಈ ಸಾಲಕ್ಕೆ ಬಡ್ಡಿಯನ್ನು ಸಹ ಪಾವತಿಸಬೇಕಾಗಿಲ್ಲ. ಇದು ಶೂನ್ಯ ಬಡ್ಡಿ ಸಾಲ. ಸ್ನೇಹಿತರೇ, ಇದಕ್ಕಿಂತ ದೊಡ್ಡ ಪ್ರಯೋಜನ ಇನ್ನೇನು ಬೇಕು? ಕಿಸಾನ್ ಕ್ರೆಡಿಟ್ ಕಾರ್ಡ್ಗಳು ಹೈನುಗಾರಿಕೆಯಲ್ಲಿ ತೊಡಗಿರುವವರ ಜೀವನವನ್ನು ತುಂಬಾ ಸುಲಭಗೊಳಿಸಿವೆ. ಕಳೆದ ಎರಡು ದಶಕಗಳಲ್ಲಿ ಗುಜರಾತ್ನ ಬಂದರುಗಳ ಅಭಿವೃದ್ಧಿಯಿಂದಾಗಿ, ಗುಜರಾತ್ನ ಅಭಿವೃದ್ಧಿಗೆ ಸಮೃದ್ಧಿಯ ಹೆಬ್ಬಾಗಿಲು ತೆರೆದಿದೆ ಮತ್ತು ಹೊಸ ಸಾಮರ್ಥ್ಯಗಳು ತೆರೆದುಕೊಂಡಿವೆ.
ದೇಶದ ಇಡೀ ಕರಾವಳಿಯ ಮೂಲಸೌಕರ್ಯವನ್ನು ಬಲಪಡಿಸುವುದರ ಜೊತೆಗೆ, ನಾವು ʻಸಾಗರ ಮಾಲಾʼ ಯೋಜನೆಯಡಿ ಬಂದರುಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಅಷ್ಟೇ ಅಲ್ಲದೆ, ಬಂದರು ಆಧಾರಿತ ಅಭಿವೃದ್ಧಿಗೆ ಒತ್ತು ನೀಡಿದ್ದೇವೆ. ಇಂದು ನೀವು ಗುಜರಾತಿನ ಸಮುದ್ರ ತೀರದಲ್ಲಿ ʻಸಾಗರ್ ಮಾಲಾʼ ಎಂಬ ಬೃಹತ್ ಅಭಿಯಾನ ಪ್ರಾರಂಭಿಸಿದ್ದನ್ನು ನೋಡಿದ್ದೀರಿ. ಜುನಾಗಢ್ ಜೊತೆಗೆ ಪೋರ್ಬಂದರ್, ಜಾಮ್ನಗರ್, ದೇವಭೂಮಿ ದ್ವಾರಕಾ, ಮೊರ್ಬಿ ಒಳಗೊಂಡಂತೆ ಕರಾವಳಿ ಹೆದ್ದಾರಿಯನ್ನು ಕೇಂದ್ರ ಗುಜರಾತ್ನಿಂದ ದಕ್ಷಿಣ ಗುಜರಾತ್ಗೆ ವಿಸ್ತರಿಸಲಾಗಿದೆ. ಸೋದರ-ಸೋದರಿಯರೇ, ಇದರರ್ಥ ಗುಜರಾತ್ನ ಇಡೀ ಕರಾವಳಿಯ ಸಂಪರ್ಕ ಬಲಗೊಳ್ಳಲಿದೆ.
ಸಹೋದರ-ಸಹೋದರಿಯರೇ,
ಕಳೆದ ಎಂಟು ವರ್ಷಗಳಲ್ಲಿ ಸರಕಾರ ಕೈಗೊಂಡ ಹಲವಾರು ಕ್ರಮಗಳು ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ಘನತೆಯ ಬದುಕನ್ನು ಖಾತರಿಪಡಿಸಿವೆ. ಗುಜರಾತ್ನ ಲಕ್ಷಾಂತರ ನನ್ನ ತಾಯಂದಿರು ಮತ್ತು ಸಹೋದರಿಯರಿಗೆ ಪ್ರಯೋಜನಕಾರಿಯಾಗುವ ರೀತಿಯಲ್ಲಿ ನಾವು ವ್ಯವಸ್ಥೆಗಳನ್ನು ಮಾಡಿದ್ದೇವೆ. ಆದ್ದರಿಂದ, ಗುಜರಾತ್ ನನಗೆ 'ಶಕ್ತಿ ಕವಚ'ವಾಗಿ ಮಾರ್ಪಟ್ಟಿದೆ. ಈ ತಾಯಂದಿರು ಮತ್ತು ಸಹೋದರಿಯರಿಗೆ ನಾನು ಚಿರ ಋಣಿಯಾಗಿರುತ್ತೇನೆ. ದೇಶಕ್ಕಾಗಿ ಅನೇಕ ಅಭಿಯಾನಗಳನ್ನು ಪ್ರಾರಂಭಿಸಲಾಗಿದ್ದು, ಅವು ಈ ತಾಯಂದಿರು ಮತ್ತು ಸಹೋದರಿಯರಿಗೆ ನೇರವಾಗಿ ಪ್ರಯೋಜನವನ್ನು ನೀಡುತ್ತಿವೆ. ʻಸ್ವಚ್ಛ ಭಾರತʼ ಅಭಿಯಾನದಡಿ ಲಕ್ಷಾಂತರ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಉತ್ತರ ಭಾರತದ ನಮ್ಮ ಸಹೋದರಿಯರು ಇದು ನಮಗೆ ಹೆಮ್ಮೆ ಮತ್ತು ಗೌರವದ ವ್ಯವಸ್ಥೆ ಎಂದು ಹೇಳುತ್ತಾರೆ. ಕೋಟ್ಯಂತರ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ನಾವು ನಮ್ಮ ಸಹೋದರಿಯರ ಸಮಸ್ಯೆಗಳನ್ನು ನಿವಾರಿಸಿದ್ದೇವೆ. ಇದರ ಪರಿಣಾಮವಾಗಿ, ಅವರ ಆರೋಗ್ಯವೂ ಸುಧಾರಿಸಿದೆ. ʻಉಜ್ವಲ ಯೋಜನೆʼ ಮೂಲಕ ಅಡುಗೆ ಅನಿಲವನ್ನು ತಲುಪಿಸಲು ನಾವು ವ್ಯವಸ್ಥೆ ಮಾಡಿದ್ದೇವೆ. ನಮ್ಮ ಬಡವರ ಮನೆಗಳಲ್ಲಿಯೂ ದೀಪಾವಳಿಯನ್ನು ಆಚರಿಸಲು ಅನುಕೂಲವಾಗುವಂತೆ ಎರಡು ಗ್ಯಾಸ್ ಸಿಲಿಂಡರ್ಗಳನ್ನು ಉಚಿತವಾಗಿ ನೀಡಲು ನಿರ್ಧರಿಸಿದ್ದಕ್ಕಾಗಿ ನಾನು ಭೂಪೇಂದ್ರಭಾಯಿ ಸರಕಾರವನ್ನು ಅಭಿನಂದಿಸುತ್ತೇನೆ.
ಸಹೋದರ-ಸಹೋದರಿಯರೇ,
ಪ್ರತಿಯೊಬ್ಬರೂ ನಲ್ಲಿ ನೀರಿನ ಸೌಲಭ್ಯವನ್ನು ಪಡೆಯುವಂತೆ ನಾವು ಖಾತರಿಪಡಿಸಿದ್ದೇವೆ. ಒಂದು ಕಾಲದಲ್ಲಿ ಶಾಸಕರು ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತಿದ್ದರು. ನಾನು ಉಲ್ಲೇಖಿಸುತ್ತಿರುವುದು ಈ ಹಿಂದಿನ ಸರಕಾರಗಳ ಬಗ್ಗೆ. ಐದು ಹಳ್ಳಿಗಳಲ್ಲಿ ಕೈಪಂಪುಗಳನ್ನು ಅಳವಡಿಸುವಂತೆ ಶಾಸಕರು ಒತ್ತಾಯಿಸುತ್ತಿದ್ದರು. ಈ ಬೇಡಿಕೆಯನ್ನು ಒಪ್ಪಿಕೊಳ್ಳುತ್ತಿದ್ದ ಮುಖ್ಯಮಂತ್ರಿಗಳಿಗೆ ಭವ್ಯ ಸ್ವಾಗತ ಸಿಗುತ್ತಿತ್ತು. ಒಂದು ಕಾಲದಲ್ಲಿ ಜನರು ಕೈಪಂಪುಗಾಗಿ ಕಾಯುತ್ತಿದ್ದರು. ಇಂದು ನಿಮ್ಮ ಮಗ ಪ್ರತಿ ಮನೆಗೂ ನಲ್ಲಿ ನೀರು ದೊರೆಯುವಂತೆ ಖಾತರಿಪಡಿಸಿದ್ದಾನೆ. ಶುದ್ಧ ನೀರು ಲಭ್ಯವಿದ್ದಾಗ, ರೋಗಗಳು ಕಡಿಮೆಯಾಗುತ್ತವೆ. ಮಕ್ಕಳಿಗೂ ತೊಂದರೆ ಕಡಿಮೆಯಾಗುತ್ತದೆ. ಜೊತೆಗೆ ನಮ್ಮ ತಾಯಂದಿರು ಮತ್ತು ಸಹೋದರಿಯರು ಸಹ ಅನೇಕ ಸಮಸ್ಯೆಗಳಿಂದ ಮುಕ್ತರಾಗುತ್ತಾರೆ.
ʻಪ್ರಧಾನ ಮಂತ್ರಿ ಮಾತೃ ವಂದನಾʼ ಯೋಜನೆಯನ್ನು ಪರಿಚಯಿಸಲಾಗಿದೆ. ನನ್ನ ತಾಯಂದಿರು ಮತ್ತು ಸಹೋದರಿಯರು ಗರ್ಭಾವಸ್ಥೆಯಲ್ಲಿ ತಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆಯನ್ನು ಎದುರಿಸದಂತೆ, ತಾಯಿಯ ಗರ್ಭದಲ್ಲಿರುವ ಶಿಶುವು ಸರಿಯಾದ ಬೆಳವಣಿಗೆಯನ್ನು ಹೊಂದುವಂತೆ ಮತ್ತು ಮಗುವು ಅಂಗವೈಕಲ್ಯ ಹೊಂದದಂತೆ ಇದು ಖಾತರಿಪಡಿಸಲಿದೆ. ತಾಯಂದಿರ ಆರೋಗ್ಯದ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಈ ಮಾತೃ ವಂದನಾ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಆರೋಗ್ಯವಂತ ಮಗು ಜನಿಸಿದರೆ ಮತ್ತು ತಾಯಿಯೂ ಆರೋಗ್ಯವಾಗಿದ್ದರೆ, ಆಗ ಭಾರತದ ಭವಿಷ್ಯವೂ ಆರೋಗ್ಯಕರವಾಗಿರುತ್ತದೆ. ʻಪಿಎಂ ಆವಾಸ್ ಯೋಜನೆʼ ಅಡಿಯಲ್ಲಿ ಕೇವಲ ಸಹೋದರಿಯರಿಗೆ ಮನೆಗಳನ್ನು ಒದಗಿಸಲಾಗಿದೆ. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ನನ್ನ ಸಹೋದರಿಯರ ಹೆಸರಿನಲ್ಲಿ ಎಲ್ಲ ಸರಕಾರಿ ಸೌಲಭ್ಯಗಳನ್ನು ದೊರೆಯುವಂತೆ ಖಚಿತಪಡಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಭೂಕಂಪದ ನಂತರ ನೀಡಿದ ಮನೆಗಳನ್ನು ಸಹ ಸಹೋದರಿಯರ ಹೆಸರಿಗೆ ನೀಡಲಾಯಿತು. ನಮ್ಮ ತಾಯಂದಿರು ಮತ್ತು ಸಹೋದರಿಯರ ಪರಿಸ್ಥಿತಿಯ ಬಗ್ಗೆ ನಮಗೆ ತಿಳಿದಿದೆ. ಒಂದು ಹೊಲವಿದ್ದರೆ, ಅದು ಕುಟುಂಬದ ಪುರುಷ ಸದಸ್ಯನ ಹೆಸರಿನಲ್ಲಿರುತ್ತದೆ. ಅಂಗಡಿಗಳು ಮತ್ತು ವಾಹನಗಳ ವಿಷಯದಲ್ಲೂ ಹಾಗೆಯೇ. ಗಂಡ ತೀರಿಕೊಂಡರೆ, ಈ ಎಲ್ಲಾ ಆಸ್ತಿಗಳು ಮಗನ ಹೆಸರಿಗೆ ವರ್ಗಾಯಿಸಲ್ಪಡುತ್ತವೆ. ನಮ್ಮ ತಾಯಂದಿರು ಮತ್ತು ಸಹೋದರಿಯರ ಹೆಸರಿನಲ್ಲಿ ಏನೂ ಇರುವುದಿಲ್ಲ. ಯಾವುದಾದರೂ ತುರ್ತು ಪರಿಸ್ಥಿತಿ ಎದುರಾದರೆ ಅವರು ಎಲ್ಲಿಗೆ ಹೋಗಬೇಕು? ಆದ್ದರಿಂದ, ಯಾವುದೇ ಸರಕಾರಿ ಮನೆ ಅಥವಾ ಇತರ ಯಾವುದೇ ಸೌಲಭ್ಯವಿರಲಿ ಅದು ನಮ್ಮ ತಾಯಂದಿರು ಮತ್ತು ಸಹೋದರಿಯರ ಹೆಸರಿನಲ್ಲಿರಬೇಕೆಂದು ನಿಮ್ಮ ಮಗ ನಿರ್ಧರಿಸಿದ್ದಾನೆ. ಇಂದು ಮನೆಗಳನ್ನು ಮಂಜೂರು ಮಾಡಲಾದ ನಮ್ಮ ತಾಯಂದಿರು ಮತ್ತು ಸಹೋದರಿಯರು ಇಂದು 'ಲಕ್ಷಾಧಿಪತಿ'ಗಳಾಗಿದ್ದಾರೆ. ಇಂದು ನಮ್ಮ ಸರಕಾರವು ಸ್ವಸಹಾಯ ಗುಂಪುಗಳು ಮತ್ತು ʻಸಖಿ ಮಂಡಲʼಗಳ ಮೂಲಕ ಹಳ್ಳಿಗಳಲ್ಲಿ ಮಹಿಳಾ ಉದ್ಯಮಶೀಲತೆಯನ್ನು ವಿಸ್ತರಿಸುತ್ತಿದೆ. ದೇಶಾದ್ಯಂತ ಎಂಟು ಕೋಟಿಗೂ ಹೆಚ್ಚು ಸಹೋದರಿಯರು ಸ್ವಸಹಾಯ ಗುಂಪುಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಗುಜರಾತಿನ ಲಕ್ಷಾಂತರ ಸಹೋದರಿಯರು ಗುಜರಾತಿನಲ್ಲಿ ʻಸಖಿ ಮಂಡಲ್ʼ ಎಂದು ಕರೆಯಲ್ಪಡುವ ಸ್ವಸಹಾಯ ಗುಂಪುಗಳ ಲಾಭವನ್ನು ಪಡೆಯುತ್ತಿದ್ದಾರೆ. ಸಹೋದರಿಯರು ʻಮುದ್ರಾ ಯೋಜನೆʼಯಿಂದ ಜಾಮೀನು ರಹಿತ ಸಾಲವನ್ನು ಪಡೆಯಬೇಕೆಂಬುದು ಇದರ ಉದ್ದೇಶ. ಈ ಸಾಲವು ಎಲ್ಲರಿಗೂ ದೊರೆಯುತ್ತಿದೆ ಎಂಬುದು ನನ್ನ ಪಾಲಿಗೆ ಸಂತೋಷದ ವಿಷಯವಾಗಿದೆ. 70 ಪ್ರತಿಶತದಷ್ಟು ಸಹೋದರಿಯರು ಸಾಲವನ್ನು ಈ ಯೋಜನೆಯಡಿ ತೆಗೆದುಕೊಂಡಿದ್ದಾರೆ ಮತ್ತು ಸಣ್ಣ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ 2-3 ಜನರಿಗೆ ಉದ್ಯೋಗವನ್ನು ಸಹ ಒದಗಿಸುತ್ತಿದ್ದಾರೆ.
ಸಹೋದರ-ಸಹೋದರಿಯರೇ,
ನನ್ನ ಯುವ ಸ್ನೇಹಿತರ ಉಜ್ವಲ ಭವಿಷ್ಯವನ್ನು ನಾನು ನೋಡಿದಾಗ, ಅವರ ಮೇಲೆ ವಿಶ್ವಾಸವು ಹೆಚ್ಚಾಗುತ್ತದೆ ಮತ್ತು ಹೊಸ ಭರವಸೆಯ ಬೆಳಕು ಮೂಡುತ್ತದೆ. ಗುಜರಾತ್ನ ಕ್ಷಿಪ್ರ ಅಭಿವೃದ್ಧಿಯಿಂದ ಗುಜರಾತ್ನ ಯುವಕರ ಭವಿಷ್ಯವು ಈಗ ಸುರಕ್ಷಿತವಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಗುಜರಾತ್ ಸೇರಿದಂತೆ ದೇಶದ ಯುವಜನರ ಸಾಮರ್ಥ್ಯವನ್ನು ಹೆಚ್ಚಿಸಲು ನಾನು ಹಲವಾರು ಕ್ರಮಗಳನ್ನು ಕೈಗೊಂಡಿದ್ದೇನೆ. ನಾವು ಶಿಕ್ಷಣದಿಂದ ಉದ್ಯೋಗ ಮತ್ತು ಸ್ವ-ಉದ್ಯೋಗದವರೆಗೆ ಅನೇಕ ಅವಕಾಶಗಳನ್ನು ಸೃಷ್ಟಿಸಿದ್ದೇವೆ. ಇತ್ತೀಚೆಗಷ್ಟೇ, ನಾನು ಗುಜರಾತ್ನಲ್ಲಿ ʻಡಿಫೆನ್ಸ್ ಎಕ್ಸ್ʼ ಉದ್ಘಾಟಿಸಿದೆ. ಇದು ಯುವಕರಿಗೆ ಅನೇಕ ಅವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ಗುಜರಾತ್ ಅಗ್ರಸ್ಥಾನದಲ್ಲಿ ಉಳಿಯುವಂತೆ ಖಚಿತಪಡಿಸುತ್ತದೆ.
ಕಳೆದ ಎಂಟು ವರ್ಷಗಳಲ್ಲಿ ನಾವು ದೇಶದಲ್ಲಿ ನೂರಾರು ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದೇವೆ. ಈ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ತಮ್ಮ ಕುಟುಂಬ, ಗ್ರಾಮಗಳು, ರಾಜ್ಯ ಮತ್ತು ದೇಶದ ಹೆಸರನ್ನು ಬೆಳಗುವಂತಾಗಲು ಗುಜರಾತ್ನಲ್ಲಿಯೂ ಅನೇಕ ಹೊಸ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ನಾವು ಇಂದು ಅದೃಷ್ಟವಂತರು. ಈ ಮೊದಲು, ಗುಜರಾತ್ನ ಯುವಕರು ಉನ್ನತ ಶಿಕ್ಷಣಕ್ಕಾಗಿ ರಾಜ್ಯದಿಂದ ಹೊರಗೆ ಹೋಗಬೇಕಾಗಿತ್ತು. ಕಳೆದ 20 ವರ್ಷಗಳಲ್ಲಿ ಮಾಡಿದ ಪ್ರಯತ್ನಗಳು ರಾಜ್ಯದಲ್ಲಿ ಅತ್ಯುತ್ತಮ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸ್ಥಾಪನೆಗೆ ದಾರಿ ಮಾಡಿವೆ.
ʻರಾಷ್ಟ್ರೀಯ ಶಿಕ್ಷಣ ನೀತಿʼ ಎಂಬ ಹೊಸ ಶಿಕ್ಷಣ ನೀತಿಯನ್ನು ಸಹ ಈಗ ಜಾರಿಗೆ ತರಲಾಗಿದೆ. ಈಗ ನಮ್ಮ ವಿದ್ಯಾರ್ಥಿಗಳು ರಾಜ್ಯದಲ್ಲಿಯೇ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಅಧ್ಯಯನವನ್ನು ಮುಂದುವರಿಸಲು ಸಾಧ್ಯವಾಗುತ್ತದೆ. ಈ ಹಿಂದೆ, ನಮಗೆ ಹಳ್ಳಿಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಇರಲಿಲ್ಲ. ಒಂದು ಮಗುವು ಎಂಟನೇ ಅಥವಾ ಹತ್ತನೇ ತರಗತಿಯಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಅಧ್ಯಯನ ಮಾಡದಿದ್ದರೆ, ಅವರು ಎಂಜಿನಿಯರಿಂಗ್ ಅಥವಾ ವೈದ್ಯಕೀಯ ವಿಜ್ಞಾನವನ್ನು ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ. ಎಂಜಿನಿಯರ್ ಅಥವಾ ವೈದ್ಯರಾಗಲು ಸಾಧ್ಯವಾಗುತ್ತಿರಲಿಲ್ಲ. ಏಕೆ ಹೀಗೆ? ಬಡ ಪೋಷಕರ ಮಕ್ಕಳಿಗೆ ವೈದ್ಯರಾಗುವ ಹಕ್ಕಿಲ್ಲವೇ? ಅವರಿಗೆ ಎಂಜಿನಿಯರುಗಳಾಗುವ ಹಕ್ಕಿಲ್ಲವೇ? ಆದರೆ ಅವರಿಗೆ ಇಂಗ್ಲಿಷ್ ತಿಳಿದಿದ್ದರೆ ಮಾತ್ರ ಅವರು ಹಾಗೆ ಮಾಡಬಹುದು ಎಂಬ ಷರತ್ತನ್ನು ವಿಧಿಸಲಾಯಿತು. ವೈದ್ಯಕೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಅನ್ನು ತಮ್ಮದೇ ಆದ ಮಾತೃಭಾಷೆಯಲ್ಲಿ ಅಧ್ಯಯನ ಮಾಡಿದರೂ ಅವರು ವೈದ್ಯರು ಮತ್ತು ಎಂಜಿನಿಯರ್ಗಳಾಗಬಹುದೆಂದು ಈಗ ನಾವು ಖಾತರಿಪಡಿಸಿದ್ದೇವೆ. ಈ ಗುಲಾಮ ಮನಸ್ಥಿತಿ ಹೋಗಬೇಕು. ಅವರಿಗೆ ಇಂಗ್ಲಿಷ್ ಗೊತ್ತಿಲ್ಲದ ಕಾರಣ, ಮಧ್ಯಮವರ್ಗ ಮತ್ತು ಹಳ್ಳಿಗಳ ಬಡವರ ಅಭಿವೃದ್ಧಿಯ ಪ್ರಯಾಣವನ್ನು ನಿಲ್ಲಿಸಬಾರದು. ಅವರು ಸಹ ಅಷ್ಟೇ ಸಮರ್ಥರಾಗಿದ್ದಾರೆ. ಅವರಿಂದಾಗಿಯೇ ಇಂದು ಭಾರತವು ವಿಶ್ವದಲ್ಲಿ ಹೆಸರು ಮಾಡುತ್ತಿದೆ. ಈಗ ಹಳ್ಳಿಗಳಾದ್ಯಂತ ನಮ್ಮ ಯುವಕರು ʻಡಿಜಿಟಲ್ ಇಂಡಿಯಾʼ ಅಭಿಯಾನದ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ದೇಶದಲ್ಲಿ ಸುಮಾರು 5-6 ಲಕ್ಷ ʻಸಾಮಾನ್ಯ ಸೇವಾ ಕೇಂದ್ರʼಗಳನ್ನು ಸ್ಥಾಪಿಸಲಾಗಿದೆ ಮತ್ತು ಹಳ್ಳಿಗಳ ಜನರು ಈಗ ಅನೇಕ ಸೇವೆಗಳನ್ನು ನೀಡುತ್ತಿದ್ದಾರೆ. ಕೈಗೆಟುಕುವ ಇಂಟರ್ನೆಟ್ ಸೇವೆಗಳಿಂದಾಗಿ ಹಳ್ಳಿಗಳಲ್ಲಿನ ಬಡ ಜನರು ಈಗ ತಮ್ಮ ಮೊಬೈಲ್ ಫೋನ್ಗಳಲ್ಲಿ ವಿಶ್ವದ ಅತ್ಯುತ್ತಮ ಪುಸ್ತಕಗಳನ್ನು ಸಹ ಪಡೆದುಕೊಂಡಿದ್ದಾರೆ. ಯುವಕರು ಅಲ್ಲಿಗೆ ಬಂದು ಅಧ್ಯಯನ ಮಾಡಲು ಅನುಕೂಲವಾಗುವಂತೆ ರೈಲ್ವೆ ಫ್ಲಾಟ್ಫಾರಂಗಳಲ್ಲಿ ಉಚಿತ ವೈ-ಫೈ ಸೇವೆಗಳನ್ನು ಸಹ ಖಚಿತಪಡಿಸಲಾಗಿದೆ. ಯುಪಿಎಸ್ಸಿ ಮತ್ತು ಜಿಪಿಎಸ್ಸಿ ಪರೀಕ್ಷೆಗಳಿಗೆ ತಯಾರಿ ನಡೆಸಿ, ಅವುಗಳಲ್ಲಿ ತೇರ್ಗಡೆಗೊಳ್ಳಲು ತಮ್ಮ ಮೊಬೈಲ್ ಫೋನ್ಗಳೊಂದಿಗೆ ಪ್ಲಾಟ್ಫಾರ್ಮ್ನಲ್ಲಿ ಕೂತಿರುವ ಅನೇಕ ಮಕ್ಕಳನ್ನು ನಾನು ನೋಡಿದ್ದೇನೆ. ಇಂದು, ʻಡಿಜಿಟಲ್ ಇಂಡಿಯಾʼದ ಮೂಲಕ ಅತ್ಯುತ್ತಮ ಶಿಕ್ಷಣವು ಲಭ್ಯವಿದೆ. ಇದು ಹಳ್ಳಿಗಳಲ್ಲಿ ಮಕ್ಕಳು ತಮ್ಮ ಅಧ್ಯಯನ ಮುಂದುವರಿಸುವುದನ್ನು ಖಚಿತಪಡಿಸಿದೆ. ʻಡಿಜಿಟಲ್ ಇಂಡಿಯಾʼ, ಯುವಕರಿಗೆ ತಮ್ಮ ಪ್ರತಿಭೆಯನ್ನು ತೀಕ್ಷ್ಣಗೊಳಿಸಲು ಅವಕಾಶವನ್ನು ನೀಡುತ್ತಿದೆ. ಯಾರೇ ಆಗಲೀ, ಯಾವುದೇ ಕ್ಷೇತ್ರದಲ್ಲಿ ಅಧ್ಯಯನ ಮುಂದುವರಿಸಲು ಬಯಸಿದರೂ ಅದನ್ನು ʻಡಿಜಿಟಲ್ ಇಂಡಿಯಾʼದ ಮೂಲಕ ಮಾಡಬಹುದು. ವರ್ಣಚಿತ್ರಕಾರ, ಗಾಯಕ ಮತ್ತು ಬಡಗಿಯಾಗಬಹುದು ಅಥವಾ ನೃತ್ಯ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮಾಡಬಹುದು. ಅವರು ತಮ್ಮ ಮನೆಯಲ್ಲಿ ಕುಳಿತು ಏನು ಬೇಕಾದರೂ ಕಲಿಯಬಹುದು.
ಸಹೋದರ-ಸಹೋದರಿಯರೇ,
ʻಡಿಜಿಟಲ್ ಇಂಡಿಯಾʼದಿಂದಾಗಿ ಇಂದು ಉದ್ಯೋಗದ ಸಾಧ್ಯತೆಗಳು ಹೆಚ್ಚಾಗಿವೆ. ಭಾರತದ ಯುವಕರು ಈಗ ವಿಶ್ವ ಮಾರುಕಟ್ಟೆಗಳತ್ತ ಗುರಿಯಿಡುತ್ತಿದ್ದಾರೆ. ʻಮೇಡ್ ಇನ್ ಇಂಡಿಯಾʼ ಉತ್ಪನ್ನಗಳಿಗೆ ಇದು ಸಕಾಲ. ಈ ಮೊದಲು ಮೊಬೈಲ್ ಫೋನ್ಗಳಿಗಾಗಿ ಕೇವಲ ಎರಡು ಉತ್ಪಾದನಾ ಘಟಕಗಳು ಮಾತ್ರ ಇದ್ದವು. ಇದು ಕೇವಲ ಎಂಟು ವರ್ಷಗಳಲ್ಲಿ ಇವುಗಳ ಸಂಖ್ಯೆ 200ಕ್ಕಿಂತ ಹೆಚ್ಚಾಗಿದೆ. ಭಾರತವು ಈ ವರ್ಷ ಇತರ ದೇಶಗಳಿಗೆ ಒಂದು ದಶಲಕ್ಷ ಮೊಬೈಲ್ ಫೋನ್ಗಳನ್ನು ರಫ್ತು ಮಾಡಿದೆ. ಇದೇ ನಮ್ಮ ಶಕ್ತಿ. ಪ್ರವಾಸೋದ್ಯಮದ ಬೆಳವಣಿಗೆಯು ನಾವು ಸೃಷ್ಟಿಸಿದ ಮೂಲಸೌಕರ್ಯದೊಂದಿಗೆ ನೇರವಾಗಿ ಸಂಬಂಧ ಹೊಂದಿದೆ. ನಮ್ಮ ಮಾಧವಪುರ ಜಾತ್ರೆ, ಶ್ರೀಕೃಷ್ಣನಿಗೆ ಸಂಬಂಧಿಸಿದ ಕಾರ್ಯಕ್ರಮಗಳು ಹೇಗೆ ಜಾಗತಿಕ ಮಟ್ಟಕ್ಕೆ ಪಸರಿಸಿದವು ಎಂಬುದನ್ನು ಊಹಿಸಿಕೊಳ್ಳಿ. ಈಶಾನ್ಯದ ಹಲವಾರು ಮುಖ್ಯಮಂತ್ರಿಗಳು ಮಾಧವಪುರ ಜಾತ್ರೆಗೆ ಬಂದು ಸುಮಾರು ಒಂದು ವಾರಗಳ ಕಾಲ ಅದನ್ನು ಆನಂದಿಸಿದರು. ಹಲವಾರು ಅಡೆತಡೆಗಳನ್ನು ದಾಟಿದ ನಂತರ ಗಿರ್ನಾರ್ ಹಗ್ಗದ ಸೇತವೆ ಸಾಧ್ಯವಾಯಿತು. ಹಿಂದಿನ ಸರಕಾರಗಳು ಈ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಸಮಸ್ಯೆಗಳನ್ನು ಹೊಂದಿದ್ದವು. ನೀವು ನನ್ನನ್ನು ದೆಹಲಿಗೆ ಕಳುಹಿಸಿದ ನಂತರ ಈ ಹಗ್ಗದ ಸೇತುವೆ ನಿರ್ಮಾಣ ಸಾಧ್ಯವಾಯಿತು. ಈಗ, ಅನೇಕ ಜನರು ತಮ್ಮ 80 ವರ್ಷದ ಅಜ್ಜಿಯು ಗಿರ್ನಾರ್ನಲ್ಲಿ ಮಾ ಅಂಬಾ ಪಾದಗಳಿಗೆ ನಮಸ್ಕರಿಸುತ್ತಿರುವ ಛಾಯಾಚಿತ್ರಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಾರೆ. ʻಹಗ್ಗದ ಸೇತುವೆʼ ಮಾಡಿದ ನಂತರ ತಮ್ಮ ತಾಯಂದಿರ ಆಸೆಗಳನ್ನು ಪೂರೈಸಿದ್ದಕ್ಕಾಗಿ ಅವರು ನನಗೆ ಧನ್ಯವಾದ ಅರ್ಪಿಸುತ್ತಾರೆ. ಈಗ ನೀವು ನನಗೆ ಹೇಳಿ, ಆ ತಾಯಿಯ ಆಶೀರ್ವಾದವನ್ನು ನಾನು ಪಡೆಯಲಾರೆನೇ?
ಸಹೋದರ-ಸಹೋದರಿಯರೇ,
ಸುಮಾರು ಎರಡು ದಶಕಗಳ ಹಿಂದೆ ನಾವು ಈ ಪರಿಸ್ಥಿತಿಯನ್ನು ಬದಲಾಯಿಸಲು ನಿರ್ಧರಿಸಿದ್ದೆವು. ಇಂದು ಗಿರ್ನಾರ್ ಹಗ್ಗದ ಸೇತುವೆ ಏಷ್ಯಾದ ಅತಿ ಉದ್ದದ ರೋಪ್ ವೇಗಳಲ್ಲಿ ಒಂದಾಗಿದೆ. ಜುನಾಗಢ ಜಿಲ್ಲೆಯು ತನ್ನ ಕೃಷಿ ಉತ್ಪನ್ನಗಳು ಮತ್ತು ಮೀನುಗಾರಿಕೆ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಕೇಶೋಡ್ ವಿಮಾನ ನಿಲ್ದಾಣವನ್ನು ನವೀಕರಿಸಲಾಗಿದೆ. ಇತ್ತೀಚೆಗೆ, ನಾನು ಹಲವಾರು ಅಧಿಕಾರಿಗಳೊಂದಿಗೆ ಸಭೆ ನಡೆಸಿದೆ. ಮಾವು, ಇತರ ಹಣ್ಣುಗಳು ಮತ್ತು ತರಕಾರಿಗಳನ್ನು ಇಲ್ಲಿಂದ ರಫ್ತು ಮಾಡಲು ನಾವು ವಿಮಾನ ನಿಲ್ದಾಣವನ್ನು ವಿಸ್ತರಿಸಬಹುದೇ ಎಂದು ನಾನು ಅವರನ್ನು ಕೇಳಿದೆ. ನಾವು ವಿಮಾನ ನಿಲ್ದಾಣವನ್ನು ವಿಸ್ತರಿಸಿದರೆ ವಿದೇಶಿ ಪ್ರವಾಸಿಗರು ಗಿರ್ ಸಿಂಹಗಳನ್ನು ನೋಡಲು ಬರಬಹುದು, ಸೋಮನಾಥ ಮತ್ತು ಗಿರ್ನಾರ್ಗೂ ಭೇಟಿ ನೀಡಬಹುದು. ಈ ಬಗ್ಗೆ ವಿವರವಾದ ನೀಲನಕ್ಷೆಯನ್ನು ತಯಾರಿಸಲು ಅವರು ಸ್ವಲ್ಪ ಸಮಯವನ್ನು ಕೇಳಿದರು. ನಾನು ಜುನಾಗಢಕ್ಕೆ ಹೋಗಬೇಕಾಗಿರುವುದರಿಂದ ಕೊಂಚ ತ್ವರಿತಗೊಳಿಸುವಂತೆ ನಾನು ಅವರಿಗೆ ಹೇಳಿದೆ. ಸಹೋದರ-ಸಹೋದರಿಯರೇ, ನನ್ನ ಮನಸ್ಸಿನಲ್ಲಿ ಯಾವುದೇ ವಿಚಾರ ಬಂದಾಗ ನಾನು ಅದನ್ನು ಕಾರ್ಯಗತಗೊಳಿಸಲು ನನ್ನ ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸುತ್ತೇನೆ. ಅದಕ್ಕಾಗಿ ಯಾವುದಾದರೂ ಒಂದು ಮಾರ್ಗವನ್ನು ಹುಡುಕಲು ಪ್ರಯತ್ನಿಸುತ್ತೇನೆ. ನನ್ನನ್ನು ನಂಬಿ, ಭಾರತದ ಉನ್ನತ ನಗರಗಳಿಗೆ ಲಭ್ಯವಿರುವ ಎಲ್ಲ ಅಭಿವೃದ್ಧಿ ಕಾರ್ಯಗಳ ಪ್ರಯೋಜನಗಳು ಸಹ ಜುನಾಗಢಕ್ಕೂ ಸಿಗಬೇಕು. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತಿದ್ದೇನೆ.
ಗಿರ್ ಸೋಮನಾಥ್ ಸೇರಿದಂತೆ ಈ ಇಡೀ ಪ್ರದೇಶವನ್ನು ಸನ್ಯಾಸಿಗಳ ನಾಡು ಮತ್ತು ಜೈನಾಚಾರ್ಯರ ತಪೋಭೂಮಿ ಎಂದು ಕರೆಯಲಾಗುತ್ತದೆ. ಒಂದು ಕಾಲದಲ್ಲಿ ನಾನು ಕೂಡ ಗಿರ್ನಾರ್ನ ತಪ್ಪಲಿನಲ್ಲಿ ಅಲೆದಾಡುತ್ತಿದ್ದೆ. ಸಂತರೊಂದಿಗೆ ಸಮಯ ಕಳೆಯುವ ಸೌಭಾಗ್ಯ ನನಗೆ ಒದಗಿಬಂದಿದೆ. ನಮ್ಮ ದೇವಾಲಯಗಳಿಗೆ, ಜೈನರಿಗೆ ಮತ್ತು ದತ್ತಾತ್ರೇಯನ ಆರಾಧಕರಿಗೆ ಇಲ್ಲಿ ಯಾವುದು ಇಲ್ಲ? ಸಹೋದರ- ಸಹೋದರಿಯರಿಯರೇ ಇಡೀ ದೇಶವನ್ನು ಆಕರ್ಷಿಸುವ ಶಕ್ತಿ ನನ್ನ ಗಿರ್ ಭೂಮಿಯಲ್ಲಿದೆ. ಆದ್ದರಿಂದ, ನಾವು ಪ್ರತಿಯೊಬ್ಬ ಭಾರತೀಯನನ್ನು ಇಲ್ಲಿಗೆ ಸೆಳೆಯಬೇಕು. ನಾವು ಈ ನಿಟ್ಟಿನಲ್ಲಿ ವ್ಯವಸ್ಥೆಗಳನ್ನು ನಿರ್ಮಿಸಬೇಕಾಗಿದೆ ಮತ್ತು ನಾವು ಇದನ್ನು ಮಾಡಬಹುದು ಎಂಬ ನಂಬಿಕೆ ನನಗಿದೆ. ಇಡೀ ಪ್ರಪಂಚದ ಜನರು ನಮ್ಮ ಗಿರ್ ನ ಸಿಂಹಗಳ ಘರ್ಜನೆಯನ್ನು ಕೇಳಲು ಬಯಸುತ್ತಾರೆ. ಗಿರ್ ಸಿಂಹಗಳ ಗರ್ಜನೆಯಲ್ಲಿ, ಅವರು ಗುಜರಾತ್ನ ಘರ್ಜನೆಯನ್ನೂ ಕೇಳುತ್ತಾರೆ.
ಕಳೆದ 20 ವರ್ಷಗಳಲ್ಲಿ ಗಿರ್ ಸಿಂಹಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂದು ಜಗತ್ತು ಹೆಮ್ಮೆಯಿಂದ ನೋಡುತ್ತಿದೆ. ಸಹೋದರ-ಸಹೋದರಿಯರೇ ನಾವು ಅವುಗಳತ್ತ ಎಷ್ಟು ಕಾಳಜಿ ವಹಿಸಿದ್ದೇವೆಂದರೆ, ಪ್ರತಿಯೊಬ್ಬ ಭಾರತೀಯನೂ ಈ ಬಗ್ಗೆ ಹೆಮ್ಮೆಪಡುತ್ತಾನೆ. ಒಮ್ಮೆ ನಮ್ಮ ಕೆಶೋಡ್ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಿದ ನಂತರ, ಇಡೀ ಪ್ರದೇಶದ ಅಭಿವೃದ್ಧಿಯು ಹೊಸ ಎತ್ತರವನ್ನು ತಲುಪಲಿದೆ. ಅನೇಕ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಹೋಟೆಲ್ಗಳು, ರೆಸ್ಟೋರೆಂಟ್ಗಳು, ಟ್ಯಾಕ್ಸಿಗಳು ಮತ್ತು ಆಟೋಗಳು ಹೀಗೆ ಸಹೋದರ ಮತ್ತು ಸಹೋದರಿಯರಿಗೆ ಅನೇಕ ಸಾಧ್ಯತೆಗಳು ತೆರೆದುಕೊಳ್ಳಲಿವೆ. ಗುಜರಾತ್ನ ನಮ್ಮ ಸೌರಾಷ್ಟ್ರ, ಕಛ್, ಕಾಥೇವಾಡ ದೇಶಭಕ್ತರ ನಾಡು. ಇದು ರಾಷ್ಟ್ರದ ಹಿತಾಸಕ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡುವ ಭೂಮಿಯಾಗಿದೆ. ಇಂದು, ನಾನು ನಿಮ್ಮೊಂದಿಗೆ ಒಂದು ಗಂಭೀರ ವಿಷಯವನ್ನು ಚರ್ಚಿಸಲು ಬಯಸುತ್ತೇನೆ. ಗಿರ್ ಸಿಂಹಗಳ ಗರ್ಜನೆಯ ನಡುವೆ ಬೆಳೆದವರು ಸಹ ಏನನ್ನಾದರೂ ಎದುರಿಸುವ ಶಕ್ತಿಯನ್ನು ಹೊಂದಿದ್ದಾರೆ. ಯಾವುದೇ ಸವಾಲನ್ನು ಎದುರಿಸುವ ಧೈರ್ಯವನ್ನು ಹೊಂದಿರುವವರೊಂದಿಗೆ ಒಬ್ಬರ ಮನಸ್ಸಿನಲ್ಲಿರುವುದನ್ನು ಹೇಳುವುದು ಸಂತೋಷದ ವಿಷಯ.
ಸಹೋದರ-ಸಹೋದರಿಯರೇ,
ಅದರ ಬಗ್ಗೆ ಯೋಚಿಸಿ! ಬಾಹ್ಯಾಕಾಶದಲ್ಲಿ ಮಂಗಳಯಾನ ಅಥವಾ ಚಂದ್ರಯಾನದ ಯಶಸ್ವಿ ಉಡಾವಣೆಯನ್ನು ನೀವು ಆನಂದಿಸುವುದಿಲ್ಲವೇ? ನಮ್ಮ ವಿಜ್ಞಾನಿಗಳ ಯಶಸ್ಸನ್ನು ನೀವು ಆನಂದಿಸುವುದಿಲ್ಲವೇ? ನೀವು ಅದನ್ನು ಆನಂದಿಸುತ್ತೀರೋ ಇಲ್ಲವೋ ಅಥವಾ ನೀವು ಹೆಮ್ಮೆ ಪಡುತ್ತೀರೋ ಇಲ್ಲವೋ ಎಂದು ಜೋರಾಗಿ ಮಾತನಾಡಿ. ಈ ಕಾರ್ಯಾಚರಣೆಯಲ್ಲಿ ಗುಜರಾತಿ ವಿಜ್ಞಾನಿ ಯಾರೂ ಇರಲಿಲ್ಲ. ಅದರಲ್ಲಿದ್ದ ಎಲ್ಲ ವಿಜ್ಞಾನಿಗಳು ದಕ್ಷಿಣದವರಾಗಿದ್ದರು ತಮಿಳುನಾಡು, ಕೇರಳ ಮತ್ತು ಬೆಂಗಳೂರಿನವರು ಎಂಬ ಕಾರಣಕ್ಕೆ ನೀವು ನಿಮ್ಮ ಹೆಮ್ಮೆ ಕಡಿಮೆಯಾಗಬೇಕೇ? ದೇಶಕ್ಕೆ ಉಪಯುಕ್ತವಾದದ್ದನ್ನು ಮಾಡಿದ ಭಾರತದ ಯಾವುದೇ ಭಾಗದ ಯಾವುದೇ ವ್ಯಕ್ತಿಯ ಬಗ್ಗೆ ನಾವು ಹೆಮ್ಮೆಪಡಬೇಕಲ್ಲವೇ? ಉದಾಹರಣೆಗೆ, ಹರಿಯಾಣದ ಯುವಕನೊಬ್ಬ ಒಲಿಂಪಿಕ್ಸ್ನಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತದ ಧ್ವಜವನ್ನು ಹಾರಿಸುತ್ತಿದ್ದರೆ, ಆ ಹುಡುಗ ಅಥವಾ ಹುಡುಗಿ ಹರಿಯಾಣಕ್ಕೆ ಸೇರಿದವರಾಗಿದ್ದರೂ ಸಹ ನೀವು ಅದನ್ನು ಆನಂದಿಸುವುದಿಲ್ಲವೇ? ಅವರು ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆಯೇ ಅಥವಾ ಇಲ್ಲವೇ? ಅವರ ಸಾಧನೆಯ ಬಗ್ಗೆ ನಿಮಗೆ ಹೆಮ್ಮೆಯಿಲ್ಲವೇ?
ಸಹೋದರರೇ,
ಕಾಶಿಯಲ್ಲಿ ಯಾರಾದರೂ ಸಂಗೀತವನ್ನು ಅಭ್ಯಾಸ ಮಾಡಿದರೆ ಮತ್ತು ಜಗತ್ತು ಅವರ ಸಂಗೀತವನ್ನು ಹೊಗಳಿದರೆ, ನಾವು ಅವರ ಬಗ್ಗೆ ಹೆಮ್ಮೆಪಡುತ್ತೇವೆಯೋ ಅಥವಾ ಇಲ್ಲವೋ? ನಮ್ಮ ಪಶ್ಚಿಮ ಬಂಗಾಳ ಮಹಾನ್ ವಿದ್ವಾಂಸರ ನಾಡು, ಶ್ರೇಷ್ಠ ಸಾಹಿತ್ಯದ ನಾಡು, ಕ್ರಾಂತಿಕಾರಿಗಳ ನಾಡು, ಅಲ್ಲಿನವರು ಏನಾದರೂ ಒಳ್ಳೆಯ ಕೆಲಸವನ್ನು ಮಾಡಿದರೆ, ನಾವು ಸಂತೋಷಪಡುತ್ತೇವೆಯೇ ಅಥವಾ ಇಲ್ಲವೇ? ಇತ್ತೀಚಿನ ದಿನಗಳಲ್ಲಿ, ದಕ್ಷಿಣದ ನಮ್ಮ ಚಲನಚಿತ್ರಗಳು ಜಗತ್ತಿನಲ್ಲಿ ಅದ್ಭುತಗಳನ್ನು ಮಾಡುತ್ತಿವೆ. ನಮಗೆ ದಕ್ಷಿಣ ಭಾರತದ ಭಾಷೆ ಗೊತ್ತಿಲ್ಲದಿದ್ದರೂ, ದಕ್ಷಿಣ ಭಾರತದ ಚಲನಚಿತ್ರೋದ್ಯಮದ ತಯಾರಕರು ಜಗತ್ತಿನಲ್ಲಿ ದಾಖಲೆಗಳನ್ನು ನಿರ್ಮಿಸಿದರೆ ಮತ್ತು ಭಾರಿ ಲಾಭವನ್ನು ಗಳಿಸಿದರೆ, ನಾವು ಅವರ ಬಗ್ಗೆ ಹೆಮ್ಮೆ ಪಡುತ್ತೇವೆಯೇ ಅಥವಾ ಇಲ್ಲವೇ? ಇದನ್ನು ಇಡೀ ಭಾರತವೇ ಸ್ವಾಗತಿಸಬೇಕಲ್ಲವೇ? ಭಾರತದ ವಿವಿಧ ಭಾಗಗಳ ಜನರು ಈ ಸಿನಿಮಾಗಳನ್ನು ನೋಡದಿರಬಹುದು ಅಥವಾ ಅರ್ಥಮಾಡಿಕೊಳ್ಳದಿರ ಬಹುದು, ಆದರೆ ಅವರು ಸಂತೋಷಪಡುತ್ತಾರೆ. ಭಾರತದ ಯಾವುದೇ ಸ್ಥಳದಿಂದ, ಯಾವುದೇ ಜಾತಿ ಅಥವಾ ಭಾಷೆಯ ಯಾವುದೇ ವ್ಯಕ್ತಿಯು ಏನಾದರೂ ಒಳ್ಳೆಯದನ್ನು ಮಾಡಿದರೆ, ಈ ದೇಶದ ಎಲ್ಲ ಜನರು ಹೆಮ್ಮೆಪಡುತ್ತಾರೆ. ಆದರೆ ಎಂತಹ ಅವನತಿ ನೋಡಿ! ವಿಕೃತ ಮನಸ್ಥಿತಿ ಮತ್ತು ಸಂಪೂರ್ಣವಾಗಿ ವಿಭಿನ್ನ ಆಲೋಚನೆಯನ್ನು ಹೊಂದಿರುವ ಜನರು ಕಳೆದ ಎರಡು ದಶಕಗಳಲ್ಲಿ ಕಾಣಿಸಿಕೊಂಡಿದ್ದಾರೆ. ಗುಜರಾತ್ನಲ್ಲಿ ಏನಾದರೂ ಒಳ್ಳೆಯ ಪ್ರಯತ್ನಗಳು ನಡೆದರೆ, ಗುಜರಾತಿನಿಂದ ಯಾರಾದರೂ ಹೆಸರು ಮಾಡಿದರೆ, ಗುಜರಾತ್ನ ಯಾರಾದರೂ ಪ್ರಗತಿ ಸಾಧಿಸಿದರೆ ಮತ್ತು ಗುಜರಾತ್ ರಾಜ್ಯ ಪ್ರಗತಿ ಸಾಧಿಸಿದರೆ ಆ ವಿಕೃತ ಮನಸ್ಸಿನವರಿಗೆ ನೋವಾಗುತ್ತದೆ. ಕೆಲವು ರಾಜಕೀಯ ಪಕ್ಷಗಳ ಪಾಲಿಗೆ ಗುಜರಾತ್ ಮತ್ತು ಗುಜರಾತಿನ ಜನರನ್ನು, ಸಹೋದರ ಸಹೋದರಿಯರನ್ನು ನಿಂದಿಸುವವರೆಗೆ ಮತ್ತು ಅವಮಾನಿಸುವವರೆಗೆ ಅವರ ರಾಜಕೀಯ ಸಿದ್ಧಾಂತವು ಅಪೂರ್ಣವಾಗಿಯೇ ಉಳಿಯುತ್ತದೆ. ಗುಜರಾತ್ ಅವರನ್ನು ಎದುರಿಸುವ ಅಗತ್ಯವಿದೆಯೇ ಅಥವಾ ಇಲ್ಲವೇ?
ಗುಜರಾತಿಗಳು ಕಷ್ಟಪಟ್ಟು ದುಡಿಯಬೇಕು, ಗುಜರಾತಿಗಳು ತಪಸ್ಸು ಮಾಡಬೇಕು ಮತ್ತು ದೇಶದ ಜನರಿಗೆ ಜೀವನೋಪಾಯವನ್ನು ಒದಗಿಸಲು ಕೆಲಸ ಮಾಡಬೇಕು. ಆದರೆ, ಗುಜರಾತ್ ಬಗ್ಗೆ ಈ ರೀತಿ ಅಪಪ್ರಚಾರ ನಡೆಯುತ್ತಿದೆ. ಸಹೋದರರೇ, ನಾವು ಇದನ್ನು ಸಹಿಸಿಕೊಳ್ಳಬೇಕೇ? ಗುಜರಾತಿಗಳು ಮತ್ತು ಅವರ ರಾಜ್ಯಕ್ಕೆ ಅಪಮಾನವನ್ನು ಗುಜರಾತ್ ಎಂದಿಗೂ ಸಹಿಸುವುದಿಲ್ಲ ಎಂದು ನಾನು ಕೆಚ್ಚೆದೆಯ ವೀರರ ನೆಲದಿಂದ ಕರೆ ನೀಡುತ್ತಿದ್ದೇನೆ. ಈ ದೇಶದಲ್ಲಿ ಯಾರನ್ನೂ ಅವಮಾನಿಸಬಾರದು. ಬಂಗಾಳಿಗಳನ್ನು ಕೂಡ ಅವಮಾನಿಸಬಾರದು. ತಮಿಳರಿಗೂ ಅವಮಾನವಾಗಬಾರದು. ಕೇರಳದ ಸಹೋದರರಿಗೂ ಅವಮಾನವಾಗಬಾರದು. ದೇಶದ ಪ್ರತಿಯೊಬ್ಬ ನಾಗರಿಕನ ಪ್ರಯತ್ನಗಳು, ಶೌರ್ಯ ಮತ್ತು ಸಾಧನೆಗಳು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಬೇಕು. ಅವರನ್ನು ರಾಜಕೀಯಕ್ಕೆ ಕಟ್ಟಿಹಾಕುವ ಸಂಸ್ಕೃತಿ ನಿಲ್ಲಬೇಕು. 'ಏಕ್ ಭಾರತ್, ಶ್ರೇಷ್ಠ ಭಾರತ'ದ ಕನಸನ್ನು ನುಚ್ಚುನೂರು ಮಾಡಲು ನಾವು ಬಿಡುವುದಿಲ್ಲ. ಸರ್ದಾರ್ ಸಾಹೇಬರಂತಹ ಜನರು ಮಾಡಿದ ಕಠಿಣ ಪರಿಶ್ರಮ ವ್ಯರ್ಥವಾಗಲು ಬಿಡಬಾರದು. ಸಹೋದರ-ಸಹೋದರಿಯರೇ, ಹತಾಶೆಯನ್ನು ಹರಡುವ ಮತ್ತು ತಮ್ಮ ನಿರಾಶೆ ಮತ್ತು ಸುಳ್ಳುಗಳನ್ನು ಗುಜರಾತಿನ ಮನಸ್ಸಿನ ಮೇಲೆ ಹೇರಲು ಪ್ರಯತ್ನಿಸುತ್ತಿರುವ ಜನರ ಬಗ್ಗೆ ಗುಜರಾತ್ಗೆ ಅರಿವು ಮೂಡಿಸಬೇಕಾಗಿದೆ. ಗುಜರಾತ್ನ ಏಕತೆಯೇ ಗುಜರಾತ್ನ ಶಕ್ತಿ. ಏಕೀಕೃತ ಗುಜರಾತ್ ಎಂದಿಗೂ ದೇಶದ ಒಳಿತಿಗಾಗಿ ಹಿಂದೆ ಸರಿದಿಲ್ಲ.
ನಾನು ಗುಜರಾತ್ ಮತ್ತು ಗುಜರಾತ್ ಜನತೆಗೆ ತಲೆಬಾಗಿ, ಈ ಏಕತೆಯನ್ನು ಕಾಪಾಡಿಕೊಳ್ಳುವಂತೆ, ಅಭಿವೃದ್ಧಿಯ ಮಾತನ್ನು ಹರಡುತ್ತಲೇ ಇರುವಂತೆ ಮತ್ತು ಅಭಿವೃದ್ಧಿ ಹೊಂದುತ್ತಲೇ ಇರುವಂತೆ ಅವರನ್ನು ಒತ್ತಾಯಿಸುತ್ತೇನೆ. ಇಂದು ನಿಮಗೆ ದೊರೆತ ಅಭಿವೃದ್ಧಿಯ ಅವಕಾಶಗಳಿಗಾಗಿ ನಿಮಗೆ ನನ್ನ ಶುಭ ಹಾರೈಕೆಗಳು. ನಿಮಗೆ ದೀಪಾವಳಿಯ ಶುಭಾಶಯಗಳು! ಹೊಸ ವರ್ಷವೂ ಸಮೀಪಿಸುತ್ತಿದೆ. ಹೊಸ ಸಂಕಲ್ಪಗಳೊಂದಿಗೆ, ಮತ್ತೊಮ್ಮೆ ಎಲ್ಲರಿಗೂ ಶುಭ ಹಾರೈಕೆಗಳು.
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಭಾರತ್ ಮಾತಾ ಕಿ - ಜೈ!
ಸಹೋದರ ಸಹೋದರಿಯರೇ, ತುಂಬಾ ಧನ್ಯವಾದಗಳು.
ಗಮನಿಸಿ: ಪ್ರಧಾನ ಮಂತ್ರಿಯವರ ಮೂಲ ಭಾಷಣ ಗುಜರಾತಿ ಭಾಷೆಯಲ್ಲಿತ್ತು, ಇದು ಅದರ ಭಾಷಾಂತರ.
******
(Release ID: 1870325)
Read this release in:
English
,
Urdu
,
Marathi
,
Hindi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam