ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತಿನ ಗಾಂಧಿನಗರದಲ್ಲಿರುವ ಮಹಾತ್ಮ ಮಂದಿರ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್‌ನಲ್ಲಿ ʼಡಿಫೆಕ್ಸ್‌ಪೋ 2022ʼ ರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಮಂತ್ರಿಯವರ ಭಾಷಣ

Posted On: 19 OCT 2022 2:59PM by PIB Bengaluru

ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಜಿ, ದೇಶದ ರಕ್ಷಣಾ ಸಚಿವ ಶ್ರೀ ರಾಜನಾಥ್ ಸಿಂಗ್ ಜಿ, ಗುಜರಾತ್ ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಜಿ, ಗುಜರಾತ್ ಸರ್ಕಾರದ ಸಚಿವ ಜಗದೀಶ್ ಭಾಯ್, ಸಚಿವ ಸಂಪುಟದ ಇತರ ಎಲ್ಲ ಹಿರಿಯ ಸದಸ್ಯರು, ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಜಿ, ಏರ್ ಸ್ಟಾಫ್ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್.ಹರಿ ಕುಮಾರ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ಇತರ ಎಲ್ಲ ಗಣ್ಯರು, ಎಲ್ಲಾ ವಿದೇಶಿ ಗಣ್ಯರು, ಮಹಿಳೆರೇ ಮತ್ತು ಮಹನೀಯರೇ!

ಗುಜರಾತಿನ  ನೆಲದಲ್ಲಿ ಬಲಿಷ್ಠ, ಸಮರ್ಥ ಮತ್ತು ಸ್ವಾವಲಂಬಿ ಭಾರತದ ಈ ಹಬ್ಬದಲ್ಲಿ ನಿಮಗೆಲ್ಲರಿಗೂ ಆತ್ಮೀಯ ಸ್ವಾಗತ. ದೇಶದ ಪ್ರಧಾನಮಂತ್ರಿಯಾಗಿ ನಿಮ್ಮನ್ನು ಸ್ವಾಗತಿಸುತ್ತಿರುವಾಗ, ಈ ಮಣ್ಣಿನ ಮಗನಾಗಿ ನಿಮ್ಮೆಲ್ಲರನ್ನು ಸ್ವಾಗತಿಸಲು ನನಗೆ ಹೆಮ್ಮೆಯೆನಿಸುತ್ತದೆ.  ಡಿಫೆಕ್ಸ್ಪೋ 2022ʼ  ರ ಕಾರ್ಯಕ್ರಮವು ಅಮೃತಕಾಲದಲ್ಲಿ ನಾವು ತೆಗೆದುಕೊಂಡಿರುವ ನಿರ್ಣಯವು ನವಭಾರತದ ಅಂತಹ ಭವ್ಯವಾದ ಚಿತ್ರವನ್ನು ಚಿತ್ರಿಸುತ್ತಿದೆ. ಇದು ರಾಷ್ಟ್ರದ ಅಭಿವೃದ್ಧಿಯನ್ನು ಮಾತ್ರವಲ್ಲದೆ ರಾಜ್ಯಗಳ ಸಹಭಾಗಿತ್ವವನ್ನೂ ತೋರಿಸುತ್ತದೆ. ಇದು ಯುವಕರ ಶಕ್ತಿ, ಅವರ ಯುವ ಕನಸುಗಳು, ನಿರ್ಣಯ, ಧೈರ್ಯ ಮತ್ತು ಅವರ ಶಕ್ತಿಯನ್ನು ಸಹ ಹೊಂದಿದೆ. ಇದಲ್ಲದೆ, ಜಗತ್ತಿಗೆ ಭರವಸೆಯೂ ಇದೆ, ಸೌಹಾರ್ದ ದೇಶಗಳಿಗೆ ಸಹಕಾರಕ್ಕಾಗಿ ಹಲವು ಅವಕಾಶಗಳಿವೆ. 

ಸ್ನೇಹಿತರೇ,
 
ನಮ್ಮ ದೇಶದಲ್ಲಿ ಈ ಮೊದಲೂ ರಕ್ಷಣಾ ಸಂಬಂಧಿತ ಪ್ರದರ್ಶನ ಡಿಫೆನ್ಸ್ ಎಕ್ಸ್‌ಪೋ ನಡೆಯುತ್ತಿತ್ತು, ಆದರೆ ಈ ಬಾರಿಯ ಡಿಫೆನ್ಸ್ ಎಕ್ಸ್‌ಪೋ ಅಭೂತಪೂರ್ವವಾಗಿದೆ! ಇದು ಹೊಸ ಆರಂಭವನ್ನು ಸೂಚಿಸುತ್ತದೆ. ಇದು ದೇಶದ ಕೇವಲ 'ಮೇಡ್ ಇನ್ ಇಂಡಿಯಾ' ರಕ್ಷಣಾ ಸಾಧನಗಳೊಂದಿಗೆ ಭಾರತೀಯ ಕಂಪನಿಗಳು ಮಾತ್ರ ಭಾಗವಹಿಸುತ್ತಿರುವ ಮೊದಲ ಡಿಫೆನ್ಸ್ ಎಕ್ಸ್‌ಪೋ ಆಗಿದೆ. ಡಿಫೆನ್ಸ್ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ, ನಾವು ಭಾರತದ ಜನರು, ಭಾರತೀಯ ಕಂಪನಿಗಳು, ಭಾರತೀಯ ವಿಜ್ಞಾನಿಗಳು ಮತ್ತು ನಮ್ಮ ಬೆವರು ಮತ್ತು ಶ್ರಮದಿಂದ ಭಾರತದ ನೆಲದಲ್ಲಿ ಅಭಿವೃದ್ಧಿಪಡಿಸಿದ ವಿವಿಧ ಉತ್ಪನ್ನಗಳನ್ನು ಉಕ್ಕಿನ ಮನುಷ್ಯ ಸರ್ದಾರ್ ಪಟೇಲರ ನೆಲದಿಂದ ಜಗತ್ತಿಗೆ ಪ್ರಸ್ತುತಪಡಿಸುತ್ತಿದ್ದೇವೆ. ಇಂದು ಯುವಕರು. ಇದು ಭಾರತೀಯ ಕೈಗಾರಿಕೆಗಳು, ಭಾರತೀಯ ಕೈಗಾರಿಕೆಗಳಿಗೆ ಸಂಬಂಧಿಸಿದ ಕೆಲವು ಜಂಟಿ ಉದ್ಯಮಗಳು, ಎಂಎಸ್‌ಎಂಇ (ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳು), ಮತ್ತು 100 ಕ್ಕೂ ಹೆಚ್ಚು ನವೋದ್ಯಮಗಳನ್ನು ಒಳಗೊಂಡಿರುವ 1300 ಕ್ಕೂ ಹೆಚ್ಚು ಪ್ರದರ್ಶಕರನ್ನು ಒಳಗೊಂಡಿದೆ. ಒಂದು ರೀತಿಯಲ್ಲಿ, ಇಲ್ಲಿರುವ ನೀವೆಲ್ಲರೂ ಮತ್ತು ದೇಶವಾಸಿಗಳು ಮತ್ತು ಪ್ರಪಂಚದ ಜನರು ನಮ್ಮ ಸಾಮರ್ಥ್ಯ ಮತ್ತು ಸಾಧ್ಯತೆಗಳೆರಡನ್ನೂ ಒಮ್ಮೆಗೇ ನೋಡುತ್ತಿದ್ದಾರೆ. ಇದಕ್ಕಾಗಿ, ಮೊದಲ ಬಾರಿಗೆ, 450 ಕ್ಕೂ ಹೆಚ್ಚು ತಿಳಿವಳಿಕೆ ಒಪ್ಪಂದಗಳು ಮತ್ತು ಒಪ್ಪಂದಗಳಿಗೆ ಸಹಿ ಹಾಕಲಾಗುತ್ತಿದೆ.

ಸ್ನೇಹಿತರೇ,

ನಾವು ಬಹಳ ಹಿಂದೆಯೇ ಈ ಕಾರ್ಯಕ್ರಮವನ್ನು ಆಯೋಜಿಸಲು ಬಯಸಿದ್ದೇವು. ಇದು ಗುಜರಾತ್ ಜನತೆಗೆ ಚೆನ್ನಾಗಿ ಗೊತ್ತು. ಕೆಲವು ಸಂದರ್ಭಗಳಿಂದಾಗಿ ನಾವು ಸಮಯವನ್ನು ಬದಲಾಯಿಸಬೇಕಾಗಿತ್ತು, ಇದರಿಂದಾಗಿ ಸ್ವಲ್ಪ ವಿಳಂಬವಾಯಿತು. ವಿದೇಶದಿಂದ ಬರಬೇಕಾಗಿದ್ದ ಅತಿಥಿಗಳು ಸಹ ಅನಾನುಕೂಲತೆಯನ್ನು ಅನುಭವಿಸಿದರು, ಆದರೆ ದೇಶದ ಅತಿದೊಡ್ಡ ಡಿಫೆನ್ಸ್ ಎಕ್ಸ್‌ಪೋ ಬಲವಾದ ಹೊಸ ಭವಿಷ್ಯಕ್ಕೆ ನಾಂದಿ ಹಾಡಿದೆ. ಇದು ಕೆಲವು ದೇಶಗಳಿಗೆ ಅನಾನುಕೂಲತೆಯನ್ನು ಉಂಟುಮಾಡಿದೆ ಎಂದು ನನಗೆ ತಿಳಿದಿದೆ, ಆದರೆ ಹೆಚ್ಚಿನ ಸಂಖ್ಯೆಯ ದೇಶಗಳು ಸಕಾರಾತ್ಮಕ ಮನೋಭಾವದಿಂದ ನಮ್ಮನ್ನು ಬೆಂಬಲಿಸಿವೆ.

ಸ್ನೇಹಿತರೇ,

ಭಾರತವು ಈ ಭವಿಷ್ಯದ ಅವಕಾಶಗಳನ್ನು ರೂಪಿಸುತ್ತಿರುವಾಗ ಆಫ್ರಿಕಾದ 53 ಸ್ನೇಹಪರ ದೇಶಗಳು ನಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವುದಕ್ಕೆ ನನಗೆ ಸಂತೋಷವಾಗಿದೆ. ಇದೇ ಸಂದರ್ಭದಲ್ಲಿ ಎರಡನೇ ಭಾರತ-ಆಫ್ರಿಕಾ ರಕ್ಷಣಾ ಸಂವಾದವೂ ಆರಂಭವಾಗಲಿದೆ. ಭಾರತ ಮತ್ತು ಆಫ್ರಿಕನ್ ದೇಶಗಳ ನಡುವಿನ ಈ ಸ್ನೇಹ ಅಥವಾ ಸಂಬಂಧವು ಹಳೆಯ ವಿ‍ಶ್ವಾಸದ ಮೇಲೆ ನಿಂತಿದೆ, ಅದು ಸಮಯದೊಂದಿಗೆ ಬಲಗೊಳ್ಳುತ್ತಿದೆ ಮತ್ತು ಹೊಸ ಆಯಾಮಗಳನ್ನು ಮುಟ್ಟುತ್ತಿದೆ. ನೀವು ಇಂದು ಬಂದಿರುವ ಗುಜರಾತ್ ಭೂಮಿ ಆಫ್ರಿಕಾದೊಂದಿಗೆ ಬಹಳ ಹಳೆಯ ಮತ್ತು ನಿಕಟ ಸಂಬಂಧವನ್ನು ಹೊಂದಿದೆ ಎಂದು ನಾನು ಆಫ್ರಿಕಾದ ನನ್ನ ಸ್ನೇಹಿತರಿಗೆ ತಿಳಿಸಲು ಬಯಸುತ್ತೇನೆ. ಆಫ್ರಿಕಾದಲ್ಲಿ ಮೊದಲ ರೈಲಿನ ನಿರ್ಮಾಣದ ಸಮಯದಲ್ಲಿ, ಗುಜರಾತ್‌ನ ಕಚ್‌ನ ಜನರು ಆಫ್ರಿಕಾಕ್ಕೆ ಹೋಗಿದ್ದರು, ಮತ್ತು ಕಠಿಣ ಸಂದರ್ಭಗಳಲ್ಲಿ ನಮ್ಮ ಕಾರ್ಮಿಕರು ಶ್ರದ್ಧೆಯಿಂದ ಕೆಲಸ ಮಾಡಿದರು ಮತ್ತು ಆಫ್ರಿಕಾದಲ್ಲಿ ಆಧುನಿಕ ರೈಲುಮಾರ್ಗಗಳಿಗೆ ಅಡಿಪಾಯ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇಷ್ಟೇ ಅಲ್ಲ, ನೀವು ಇಂದು ಆಫ್ರಿಕಾಕ್ಕೆ ಹೋದರೆ, ಮೂಲತಃ ಗುಜರಾತಿ ಪದವಾದ 'ದುಕಾನ್' ಪದವು ಸಾಮಾನ್ಯವಾಗಿ ಬಳಸಲ್ಪಡುತ್ತದೆ. 'ರೋಟಿ', 'ಭಾಜಿ' ಕೂಡ ಈಗ ಆಫ್ರಿಕನ್ ಜೀವನಕ್ಕೆ ಸಂಬಂಧಿಸಿದ ಪದಗಳಾಗಿವೆ. ಮಹಾತ್ಮಾ ಗಾಂಧಿಯಂತಹ ಜಾಗತಿಕ ನಾಯಕರಿಗೂ ಸಹ ಗುಜರಾತ್ ಅವರ ಜನ್ಮಸ್ಥಳವಾಗಿದ್ದರೆ ಆಫ್ರಿಕಾ ಅವರ ಮೊದಲ ಕರ್ಮಭೂಮಿಯಾಗಿತ್ತು. ಆಫ್ರಿಕಾದ ಮೇಲಿನ ಈ ಪ್ರೀತಿ ಭಾರತದ ವಿದೇಶಾಂಗ ನೀತಿಯ ಹೃದಯದಲ್ಲಿ ಇನ್ನೂ ಇದೆ. ಕೊರೊನಾ ಅವಧಿಯಲ್ಲಿ, ಇಡೀ ಜಗತ್ತು ಲಸಿಕೆಗಳನ್ನು ಪಡೆಯುವ ಬಗ್ಗೆ ಚಿಂತಿಸುತ್ತಿದ್ದಾಗ, ಭಾರತವು ನಮ್ಮ ಆಫ್ರಿಕನ್ ಮಿತ್ರ ರಾಷ್ಟ್ರಗಳಿಗೆ ಆದ್ಯತೆ ನೀಡಿ ಲಸಿಕೆಗಳನ್ನು ಅಲ್ಲಿಗೆ ತಲುಪಿಸಿತು. ಔಷಧಗಳಿಂದ ಹಿಡಿದು ಶಾಂತಿ ಧ್ಯೇಯಗಳವರೆಗೆ ಪ್ರತಿಯೊಂದು ಅಗತ್ಯದಲ್ಲೂ ನಾವು ಆಫ್ರಿಕಾದೊಂದಿಗೆ ಜೊತೆಗೆ ನಿಲ್ಲಲು ಪ್ರಯತ್ನಿಸಿದ್ದೇವೆ. ಈಗ ರಕ್ಷಣಾ ವಲಯದಲ್ಲಿ ನಮ್ಮ ನಡುವಿನ ಸಹಕಾರ ಮತ್ತು ಸಮನ್ವಯವು ಈ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ.

ಸ್ನೇಹಿತರೇ,

'ಇಂಡಿಯನ್ ಓಷನ್ ರೀಜನ್ ಪ್ಲಸ್' (ಐಒಆರ್+) ನ ರಕ್ಷಣಾ ಮಂತ್ರಿಗಳ ಸಮಾವೇಶವು ಈ ಘಟನೆಯ ಪ್ರಮುಖ ಆಯಾಮವಾಗಿದೆ. ನಮ್ಮ 46 ಮಿತ್ರ ರಾಷ್ಟ್ರಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿವೆ. ಇಂದು, ಅಂತರಾಷ್ಟ್ರೀಯ ಭದ್ರತೆಯಿಂದ ಜಾಗತಿಕ ವ್ಯಾಪಾರದವರೆಗೆ, ಕರಾವಳಿ ಭದ್ರತೆಯು ಜಾಗತಿಕ ಆದ್ಯತೆಯಾಗಿ ಹೊರಹೊಮ್ಮಿದೆ. 2015ರಲ್ಲಿ, ನಾನು ಮಾರಿಷಸ್‌ನಲ್ಲಿರುವ 'ಸಾಗರ್' ಪ್ರದೇಶದಲ್ಲಿ ಎಲ್ಲರಿಗೂ ಭದ್ರತೆ ಮತ್ತು ಬೆಳವಣಿಗೆಯ ದೃಷ್ಟಿಯನ್ನು ಮುಂದಿಟ್ಟಿದ್ದೆ. ಸಿಂಗಾಪುರದ ಶಾಂಗ್ರಿಲಾ ಸಂವಾದದಲ್ಲಿ ನಾನು ಹೇಳಿದಂತೆ, ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಆಫ್ರಿಕನ್ ಕರಾವಳಿಯಿಂದ ಅಮೆರಿಕದವರೆಗೆ ಭಾರತದ ಕಾರ್ಯಕ್ರಮವು ಒಳಗೊಳ್ಳುತ್ತದೆ. ಇಂದು ಜಾಗತೀಕರಣದ ಯುಗದಲ್ಲಿ ವ್ಯಾಪಾರಿ ನೌಕಾಪಡೆಯ ಪಾತ್ರವೂ ವಿಸ್ತರಿಸಿದೆ. ಭಾರತದಿಂದ ಪ್ರಪಂಚದ ನಿರೀಕ್ಷೆಗಳು ಬಹುಪಟ್ಟು ಹೆಚ್ಚಿವೆ ಮತ್ತು ನಿಮ್ಮ ನಿರೀಕ್ಷೆಗಳನ್ನು ಪೂರೈಸಲು ಭಾರತವು ಎಲ್ಲ ಪ್ರಯತ್ನಗಳನ್ನು ಮಾಡುವುದನ್ನು ಮುಂದುವರಿಸುತ್ತದೆ ಎಂದು ನಾನು ಜಗತ್ತಿಗೆ ಭರವಸೆ ನೀಡಲು ಬಯಸುತ್ತೇನೆ. ನಾವು ಎಂದಿಗೂ ನಿಲ್ಲಿಸುವುದಿಲ್ಲ. ಆದ್ದರಿಂದ, ಈ ಡಿಫೆನ್ಸ್ ಎಕ್ಸ್‌ಪೋ ಭಾರತದಲ್ಲಿ ಜಾಗತಿಕ ನಂಬಿಕೆಯ ಸಂಕೇತವಾಗಿದೆ. ಹಲವು ದೇಶಗಳ ಉಪಸ್ಥಿತಿಯೊಂದಿಗೆ, ವಿಶ್ವದ ಬೃಹತ್ ಸಾಮರ್ಥ್ಯವು ಗುಜರಾತ್ ನೆಲದಲ್ಲಿ ಸಂಗ್ರಹವಾಗಿದೆ. ಈ ಕಾರ್ಯಕ್ರಮಕ್ಕೆ ನಾನು ಭಾರತದ ಎಲ್ಲಾ ಮಿತ್ರರಾಷ್ಟ್ರಗಳನ್ನು ಮತ್ತು ಅವರ ಪ್ರತಿನಿಧಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಈ ಭವ್ಯ ಕಾರ್ಯಕ್ರಮಕ್ಕಾಗಿ ನಾನು ಗುಜರಾತ್ ಜನತೆಗೆ ವಿಶೇಷವಾಗಿ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ. ಇಂದಿನ ಡಿಫೆನ್ಸ್ ಎಕ್ಸ್‌ಪೋ ಗುಜರಾತ್‌ನ ಅಸ್ಮಿತೆಗೆ ಹೊಸ ಎತ್ತರವನ್ನು ನೀಡುತ್ತಿದೆ, ಅದರ ಅಭಿವೃದ್ಧಿ ಮತ್ತು ದೇಶ ಮತ್ತು ಪ್ರಪಂಚದಾದ್ಯಂತ ಕೈಗಾರಿಕಾ ಸಾಮರ್ಥ್ಯದ ದೃಷ್ಟಿಯಿಂದ. ಮುಂಬರುವ ದಿನಗಳಲ್ಲಿ ಗುಜರಾತ್ ರಕ್ಷಣಾ ಉದ್ಯಮದ ಪ್ರಮುಖ ಕೇಂದ್ರವಾಗಲಿದೆ, ಇದು ಭಾರತದ ಭದ್ರತೆ ಮತ್ತು ಕಾರ್ಯತಂತ್ರದ ಸಾಮರ್ಥ್ಯಕ್ಕೆ ಸಾಕಷ್ಟು ಕೊಡುಗೆ ನೀಡಲಿದೆ ಎಂದು ನನಗೆ ಖಾತ್ರಿಯಿದೆ.
 
ಸ್ನೇಹಿತರೇ,
 
ನಾನು ಪರದೆಯ ಮೇಲೆ ನೋಡುತ್ತಿದ್ದೆ ಮತ್ತು ಡೀಸಾದ ಜನರು ಉತ್ಸಾಹದಿಂದ ತುಂಬಿರುವಂತೆ ತೋರುತ್ತಿತ್ತು.  ಅಲ್ಲಿ ಉತ್ಸಾಹ ಮತ್ತು ಹುರುಪು ಇತ್ತು. ಡೀಸಾ ವಾಯುನೆಲೆಯ  ನಿರ್ಮಾಣವು ದೇಶದ ಭದ್ರತೆ ಮತ್ತು ಪ್ರದೇಶದ ಅಭಿವೃದ್ಧಿಗೆ ಮಹತ್ವದ ಸಾಧನೆಯಾಗಿದೆ. ಡೀಸಾ ಅಂತರಾಷ್ಟ್ರೀಯ ಗಡಿಯಿಂದ ಕೇವಲ 130 ಕಿ.ಮೀ. ನಮ್ಮ ಪಡೆಗಳು, ವಿಶೇಷವಾಗಿ ನಮ್ಮ ವಾಯುಪಡೆಯು ಡೀಸಾದಲ್ಲಿ ನೆಲೆಗೊಂಡಿದ್ದರೆ, ಪಶ್ಚಿಮ ಗಡಿಯಲ್ಲಿ ಯಾವುದೇ ಸವಾಲು ಎದುರಾದರೂ ನಾವು ಉತ್ತಮವಾಗಿ ಎದುರಿಸಲು ಸಾಧ್ಯವಾಗುತ್ತದೆ. ಡೀಸಾದಲ್ಲಿರುವ ಸಹೋದರ ಸಹೋದರಿಯರೇ, ಗಾಂಧಿನಗರದಿಂದ ನಿಮಗೆ ನನ್ನ ಶುಭಾಶಯಗಳು! ಈಗ ಡೀಸಾ, ಬನಸ್ಕಾಂತ ಮತ್ತು ಪಟಾನ್ ಜಿಲ್ಲೆಗಳ ಭವಿಷ್ಯವು ಉಜ್ವಲವಾಗಿದೆ! 2000ನೇ ಇಸವಿಯಲ್ಲಿಯೇ ಈ ವಾಯುನೆಲೆಗಾಗಿ ಗುಜರಾತ್‌ನ ಪರವಾಗಿ ಈ ಭೂಮಿಯನ್ನು ಡೀಸಾಗೆ ನೀಡಲಾಯಿತು. ನಾನು ಇಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಇದರ ನಿರ್ಮಾಣ ಕಾಮಗಾರಿ ಆರಂಭಿಸಲು ನಿರಂತರವಾಗಿ ಪ್ರಯತ್ನಿಸಿದ್ದೆ. ಅದರ ಮಹತ್ವವನ್ನು ಆಗಿನ ಕೇಂದ್ರ ಸರ್ಕಾರಕ್ಕೆ ಪದೇ ಪದೇ ವಿವರಿಸುತ್ತಿದ್ದೆ. ಇದಕ್ಕಾಗಿ ಸಾಕಷ್ಟು ಜಮೀನು ನೀಡಿದ್ದೆವು ಆದರೆ 14 ವರ್ಷಗಳಿಂದ ಏನೂ ಆಗಿಲ್ಲ. ಕಡತಗಳ ಮೇಲೆ ಎಷ್ಟೊಂದು ಪ್ರಶ್ನೆಗಳನ್ನು ಹಾಕಲಾಯಿತು ಎಂದರೆ ನಾನು ಅಲ್ಲಿಗೆ (ಕೇಂದ್ರದಲ್ಲಿ) ಹೋದ ನಂತರವೂ ವಿಷಯಗಳನ್ನು ಸರಿಯಾದ ದೃಷ್ಟಿಕೋನದಲ್ಲಿ ಇರಿಸಲು ಸಮಯ ಹಿಡಿಯಿತು. ನಾವು ಸರ್ಕಾರವನ್ನು ರಚಿಸಿದ ನಂತರ, ನಾವು ಡೀಸಾದಲ್ಲಿ ಕಾರ್ಯಾಚರಣೆಯ ನೆಲೆಯನ್ನು ಮಾಡಲು ನಿರ್ಧರಿಸಿದ್ದೇವೆ ಮತ್ತು ನಮ್ಮ ಪಡೆಗಳ ನಿರೀಕ್ಷೆಗಳನ್ನು ಇಂದು ಪೂರೈಸಲಾಗುತ್ತಿದೆ. ರಕ್ಷಣಾ ವಿಭಾಗದ ನನ್ನ ಸ್ನೇಹಿತರು, ರಕ್ಷಣಾ ಮುಖ್ಯಸ್ಥರು ಮತ್ತು ಎಲ್ಲರೂ ಇದನ್ನು ನನಗೆ ಯಾವಾಗಲೂ ನೆನಪಿಸುತ್ತಿದ್ದರು ಮತ್ತು ಇಂದು ಚೌಧರಿ ಅವರ ನೇತೃತ್ವದಲ್ಲಿ ಈ ಯೋಜನೆಯು ಸಾಕಾರಗೊಳ್ಳುತ್ತಿದೆ. ಡೀಸಾ ಹಾಗೂ ವಾಯುಸೇನೆಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು! ಈ ಪ್ರದೇಶವು ಈಗ ದೇಶದ ರಕ್ಷಣೆ ಮತ್ತು ಭದ್ರತೆಯ ಪರಿಣಾಮಕಾರಿ ಕೇಂದ್ರವಾಗಲಿದೆ. ಗುಜರಾತ್‌ನಲ್ಲಿ ಬನಸ್ಕಾಂತ ಮತ್ತು ಪಟಾನ್‌ಗಳು 'ಸೂರ್ಯಶಕ್ತಿ' ಅಥವಾ ಸೌರಶಕ್ತಿಯ ಕೇಂದ್ರವಾಗಿ ಹೊರಹೊಮ್ಮಿದಂತೆಯೇ, ಅದೇ ಬನಸ್ಕಾಂತ ಮತ್ತು ಪಟಾನ್ ಈಗ ದೇಶಕ್ಕೆ 'ವಾಯುಶಕ್ತಿ' ಕೇಂದ್ರವಾಗಲಿವೆ.

ಸ್ನೇಹಿತರೇ,
 
ಯಾವುದೇ ಬಲಿಷ್ಠ ರಾಷ್ಟ್ರದ ಭವಿಷ್ಯದ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬಾಹ್ಯಾಕಾಶ ತಂತ್ರಜ್ಞಾನವು ಉತ್ತಮ ಉದಾಹರಣೆಯಾಗಿದೆ. ಈ ಪ್ರದೇಶದಲ್ಲಿನ ವಿವಿಧ ಸವಾಲುಗಳನ್ನು ಮೂರು ಸೇವೆಗಳಿಂದ ಪರಿಶೀಲಿಸಲಾಗಿದೆ ಮತ್ತು ಗುರುತಿಸಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಅವುಗಳನ್ನು ಪರಿಹರಿಸಲು ನಾವು ವೇಗವಾಗಿ ಕೆಲಸ ಮಾಡಬೇಕು. 'ಮಿಷನ್ ಡಿಫೆನ್ಸ್ ಸ್ಪೇಸ್' ದೇಶದ ಖಾಸಗಿ ವಲಯಕ್ಕೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಲು ಅವಕಾಶವನ್ನು ನೀಡುತ್ತದೆ. ಬಾಹ್ಯಾಕಾಶದಲ್ಲಿ ಭವಿಷ್ಯದ ಸಾಧ್ಯತೆಗಳನ್ನು ನೋಡಿದರೆ, ಭಾರತವು ತನ್ನ ಸಿದ್ಧತೆಯನ್ನು ಮತ್ತಷ್ಟು ಹೆಚ್ಚಿಸಬೇಕಾಗಿದೆ. ನಮ್ಮ ರಕ್ಷಣಾ ಪಡೆಗಳು ಹೊಸ ನವೀನ ಪರಿಹಾರಗಳನ್ನು ಕಂಡುಹಿಡಿಯಬೇಕು. ಬಾಹ್ಯಾಕಾಶದಲ್ಲಿ ಭಾರತದ ಶಕ್ತಿ ಸೀಮಿತವಾಗಿರಬಾರದು ಮತ್ತು ಅದರ ಪ್ರಯೋಜನಗಳು ಕೇವಲ ಭಾರತದ ಜನರಿಗೆ ಮಾತ್ರ ಸೀಮಿತವಾಗಬಾರದು. ಇದು ನಮ್ಮ ಧ್ಯೇಯ ಮತ್ತು ದೃಷ್ಟಿ ಕೂಡ ಆಗಿದೆ. ಬಾಹ್ಯಾಕಾಶ ತಂತ್ರಜ್ಞಾನವು ಭಾರತದ ಉದಾರ ಮನೋಭಾವದ ಬಾಹ್ಯಾಕಾಶ ರಾಜತಾಂತ್ರಿಕತೆಯನ್ನು ರೂಪಿಸುತ್ತಿದೆ, ಹೊಸ ಸಾಧ್ಯತೆಗಳಿಗೆ ಜನ್ಮ ನೀಡುತ್ತಿದೆ. ಅನೇಕ ಆಫ್ರಿಕನ್ ದೇಶಗಳು ಮತ್ತು ಸಣ್ಣ ದೇಶಗಳು ಇದರಿಂದ ಪ್ರಯೋಜನ ಪಡೆಯುತ್ತಿವೆ. ಭಾರತವು ತನ್ನ ಬಾಹ್ಯಾಕಾಶ ವಿಜ್ಞಾನವನ್ನು 60ಕ್ಕೂ ಹೆಚ್ಚು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹಂಚುತ್ತಿದೆ. ದಕ್ಷಿಣ ಏಷ್ಯಾದ ಉಪಗ್ರಹವು ಇದಕ್ಕೆ ಪರಿಣಾಮಕಾರಿ ಉದಾಹರಣೆಯಾಗಿದೆ. ಮುಂದಿನ ವರ್ಷದ ವೇಳೆಗೆ, ಹತ್ತು ಏಸಿಯಾನ್‌ (ASEAN) ದೇಶಗಳು ಭಾರತದ ಉಪಗ್ರಹ ದತ್ತಾಂಶಕ್ಕೆ ನೈಜ-ಸಮಯದ ಪ್ರವೇಶವನ್ನು ಪಡೆಯುತ್ತವೆ. ಯುರೋಪ್ ಮತ್ತು ಅಮೆರಿಕದಂತಹ ಅಭಿವೃದ್ಧಿ ಹೊಂದಿದ ದೇಶಗಳು ಸಹ ನಮ್ಮ ಉಪಗ್ರಹದ ದತ್ತಾಂಶವನ್ನು ಬಳಸುತ್ತಿವೆ. ಇದಲ್ಲದೆ, ಈ ಕ್ಷೇತ್ರವು ಸಮುದ್ರ ವ್ಯಾಪಾರಕ್ಕೆ ಅಪಾರ ಸಾಮರ್ಥ್ಯವನ್ನು ಹೊಂದಿದೆ. ಈ ಮೂಲಕ ನಮ್ಮ ಮೀನುಗಾರರ ಉತ್ತಮ ಆದಾಯ ಮತ್ತು ಉತ್ತಮ ಭದ್ರತೆಗಾಗಿ ನೈಜ ಸಮಯದ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಸಮಯದ ಮಿತಿ ಮತ್ತು ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು, ಈ ಬಾಹ್ಯಾಕಾಶ ಸಂಬಂಧಿತ ಸಾಧ್ಯತೆಗಳನ್ನು ಅನಂತ ಕನಸುಗಳನ್ನು ಹೊಂದಿರುವ ನನ್ನ ದೇಶದ ಯುವಕರು ಅರಿತುಕೊಳ್ಳುತ್ತಾರೆ ಎಂದು ನಮಗೆ ತಿಳಿದಿದೆ. ಭವಿಷ್ಯವನ್ನು ನಿರ್ಮಿಸುವ ಯುವಕರು ಬಾಹ್ಯಾಕಾಶ ತಂತ್ರಜ್ಞಾನವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ. ಆದ್ದರಿಂದ, ಈ ವಿಷಯಗಳು ಡಿಫೆನ್ಸ್ ಎಕ್ಸ್ಪೋದ ಆದ್ಯತೆಯಾಗಿದೆ. ಡಾ.ವಿಕ್ರಮ್ ಸಾರಾಭಾಯ್ ಅವರಂಥ ವಿಜ್ಞಾನಿಗಳ ಸ್ಫೂರ್ತಿ ಮತ್ತು ಕೀರ್ತಿಯು ಈ ಗುಜರಾತ್ ನೆಲಕ್ಕೂ ಅಂಟಿಕೊಂಡಿದೆ. ಆ ಸ್ಫೂರ್ತಿ ನಮ್ಮ ನಿರ್ಣಯಗಳಿಗೆ ಹೊಸ ಉತ್ತೇಜನವನ್ನು ನೀಡುತ್ತದೆ.

ಮತ್ತೆ ಸ್ನೇಹಿತರೇ,
 
ಇಂದು, ರಕ್ಷಣಾ ಕ್ಷೇತ್ರ ಮತ್ತು ಭವಿಷ್ಯದ ಯುದ್ಧದ ವಿಷಯಕ್ಕೆ ಬಂದಾಗ, ಅದು ಒಂದು ರೀತಿಯಲ್ಲಿ ಯುವಕರ ಕೈಯಲ್ಲಿದೆ. ಅದರಲ್ಲಿ ಭಾರತದ ಯುವಕರ ಆವಿಷ್ಕಾರ ಮತ್ತು ಸಂಶೋಧನೆಯ ಪಾತ್ರ ದೊಡ್ಡದು. ಆದ್ದರಿಂದ, ಈ ಡಿಫೆನ್ಸ್ ಎಕ್ಸ್‌ಪೋ ಭಾರತದ ಯುವಕರಿಗೆ ಭವಿಷ್ಯದ ಕಿಟಕಿಯಂತಿದೆ.
 
ಸ್ನೇಹಿತರೇ,
 

ರಕ್ಷಣಾ ವಲಯದಲ್ಲಿ ಭಾರತವು ಉದ್ದೇಶ, ನಾವೀನ್ಯತೆ ಮತ್ತು ಅನುಷ್ಠಾನದ ಮಂತ್ರದೊಂದಿಗೆ ಮುನ್ನಡೆಯುತ್ತಿದೆ. 8 ವರ್ಷಗಳ ಹಿಂದೆ, ಭಾರತವು ವಿಶ್ವದ ಅತಿದೊಡ್ಡ ರಕ್ಷಣಾ ಸಾಧನಗಳ ಆಮದುದಾರ ಎಂದು ಗುರುತಿಸಲ್ಪಟ್ಟಿತ್ತು. ನಾವು ಜಗತ್ತಿನ ಎಲ್ಲೆಡೆಯಿಂದ ರಕ್ಷಣಾ ಸಾಧನಗಳನ್ನು ಖರೀದಿಸಿ ಹಣ ಪಾವತಿಸುತ್ತಿದ್ದೆವು. ಆದರೆ ನವ ಭಾರತವು ತನ್ನ ಉದ್ದೇಶ ಮತ್ತು ಇಚ್ಛಾಶಕ್ತಿಯನ್ನು ತೋರಿಸಿತು. ಈಗ 'ಮೇಕ್ ಇನ್ ಇಂಡಿಯಾ' ಇಂದು ರಕ್ಷಣಾ ಕ್ಷೇತ್ರದ ಯಶೋಗಾಥೆಯಾಗುತ್ತಿದೆ. ಕಳೆದ 5 ವರ್ಷಗಳಲ್ಲಿ ನಮ್ಮ ರಕ್ಷಣಾ ಸಲಕರಣೆಗಳ ರಫ್ತು 8 ಪಟ್ಟು ಹೆಚ್ಚಾಗಿದೆ. ನಾವು ವಿಶ್ವದ 75 ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಸಾಧನಗಳನ್ನು ರಫ್ತು ಮಾಡುತ್ತಿದ್ದೇವೆ. 2021-22 ರಲ್ಲಿ, ಭಾರತದ ರಕ್ಷಣಾ ಸಲಕರಣೆಗಳ ರಫ್ತು $ 1.59 ಶತಕೋಟಿ ಅಂದರೆ ಸುಮಾರು 13 ಸಾವಿರ ಕೋಟಿ ರೂಪಾಯಿಗಳನ್ನು ತಲುಪಿದೆ ಮತ್ತು ಮುಂಬರುವ ಸಮಯದಲ್ಲಿ ನಾವು ಅದನ್ನು 5 ಶತಕೋಟಿ ಡಾಲರ್‌ಗಳಿಗೆ ಅಂದರೆ 40 ಸಾವಿರ ಕೋಟಿ ರೂಪಾಯಿಗಳಿಗೆ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದೇವೆ. ಈ ರಫ್ತುಗಳು ಕೆಲವು ಉಪಕರಣಗಳು ಮತ್ತು ಕೆಲವು ದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ. ಭಾರತೀಯ ರಕ್ಷಣಾ ಕಂಪನಿಗಳು ಇಂದು ಜಾಗತಿಕ ಪೂರೈಕೆ ಸರಪಳಿಯ ಪ್ರಮುಖ ಭಾಗವಾಗುತ್ತಿವೆ. ನಾವು ಜಾಗತಿಕ ಗುಣಮಟ್ಟದ 'ಅತ್ಯಾಧುನಿಕ' ಸಲಕರಣೆಗಳನ್ನು ಪೂರೈಸುತ್ತಿದ್ದೇವೆ. ಇಂದು ಒಂದೆಡೆ ಭಾರತದ ತೇಜಸ್‌ನಂತಹ ಆಧುನಿಕ ಯುದ್ಧವಿಮಾನಗಳ ಬಗ್ಗೆ ಹಲವು ದೇಶಗಳು ಆಸಕ್ತಿ ತೋರುತ್ತಿದ್ದರೆ ಇನ್ನೊಂದೆಡೆ ನಮ್ಮ ಕಂಪನಿಗಳು ಅಮೆರಿಕ, ಇಸ್ರೇಲ್, ಇಟಲಿಯಂತಹ ದೇಶಗಳಿಗೆ ರಕ್ಷಣಾ ಉಪಕರಣಗಳ ಬಿಡಿಭಾಗಗಳನ್ನು ಪೂರೈಸುತ್ತಿವೆ.
 
ಸ್ನೇಹಿತರೇ,
 
ಬ್ರಹ್ಮೋಸ್ ಕ್ಷಿಪಣಿ 'ಮೇಡ್ ಇನ್ ಇಂಡಿಯಾ' ಅನ್ನು ಅದರ ಶ್ರೇಣಿಯಲ್ಲಿ ಅತ್ಯಂತ ಮಾರಕ ಮತ್ತು ಅತ್ಯಂತ ಮುಂದುವರಿದ ಕ್ಷಿಪಣಿ ಎಂದು ಪರಿಗಣಿಸಲಾಗಿದೆ ಎಂದು ಕೇಳಿದಾಗ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ. ಅನೇಕ ದೇಶಗಳಿಗೆ, ಬ್ರಹ್ಮೋಸ್ ಕ್ಷಿಪಣಿಯು ಅವರ ಆದ್ಯತೆಯ ಆಯ್ಕೆಯಾಗಿ ಹೊರಹೊಮ್ಮಿದೆ.
 
ಸ್ನೇಹಿತರೇ,

 
ಜಗತ್ತು ಇಂದು ಭಾರತದ ತಂತ್ರಜ್ಞಾನವನ್ನು ಅವಲಂಬಿಸಿದೆ, ಏಕೆಂದರೆ ಭಾರತದ ಸಶಸ್ತ್ರ ಪಡೆಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿವೆ. ಭಾರತೀಯ ನೌಕಾಪಡೆಯು ಐಎನ್‌ಎಸ್-ವಿಕ್ರಾಂತ್‌ನಂತಹ ಅತ್ಯಾಧುನಿಕ ವಿಮಾನವಾಹಕ ನೌಕೆಗಳನ್ನು ತನ್ನ ಪಡೆಗೆ ಸೇರಿಸಿದೆ. ಈ ಎಂಜಿನಿಯರಿಂಗ್ ದೈತ್ಯ ಮತ್ತು ಬೃಹತ್ ಮೇರುಕೃತಿಯನ್ನು ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಸ್ಥಳೀಯ ತಂತ್ರಜ್ಞಾನವನ್ನು ಬಳಸಿಕೊಂಡು ತಯಾರಿಸಿದೆ.  ಭಾರತೀಯ ವಾಯುಪಡೆಯು 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮದ ಅಡಿಯಲ್ಲಿ ತಯಾರಿಸಲಾದ ಶಕ್ತಿಯುತ ಲಘು ಯುದ್ಧ ಹೆಲಿಕಾಪ್ಟರ್‌ಗಳನ್ನು ಸೇರ್ಪಡೆಗೊಳಿಸಿದೆ. ಅದೇ ರೀತಿ ನಮ್ಮ ಸೇನೆ ಕೂಡ ಇಂದು ಭಾರತೀಯ ಕಂಪನಿಗಳಿಂದ ಸ್ವದೇಶಿ ಶಸ್ತ್ರಾಸ್ತ್ರಗಳು ಮತ್ತು  ಕಾಳಗದ ಬಂದೂಕುಗಳನ್ನು ಖರೀದಿಸುತ್ತಿದೆ. ಇಲ್ಲಿ ಗುಜರಾತ್ ನ ಹಜೀರಾದಲ್ಲಿ ನಿರ್ಮಾಣವಾಗುತ್ತಿರುವ ಆಧುನಿಕ ಫಿರಂಗಿಗಳು ಇಂದು ದೇಶದ ಗಡಿಯ ಭದ್ರತೆಯನ್ನು ಹೆಚ್ಚಿಸುತ್ತಿವೆ.

ಸ್ನೇಹಿತರೇ,

ನಮ್ಮ ನೀತಿಗಳು, ಸುಧಾರಣೆಗಳು ಮತ್ತು ವ್ಯವಹಾರವನ್ನು ಸುಲಭಗೊಳಿಸುವ ನೀತಿ ದೇಶವನ್ನು ಈ ಹಂತಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಭಾರತವು ತನ್ನ ರಕ್ಷಣಾ ಖರೀದಿ ಬಜೆಟ್‌ನ 68 ಪ್ರತಿಶತವನ್ನು ಭಾರತೀಯ ಕಂಪನಿಗಳಿಗೆ ಮೀಸಲಿಟ್ಟಿದೆ. ಅಂದರೆ, ರಕ್ಷಣಾ ಬಜೆಟ್‌ನಲ್ಲಿ ಶೇ.68ರಷ್ಟು ಹಣವನ್ನು ಸ್ವದೇಶೀ ವಸ್ತುಗಳಿಗೆ ಮೀಸಲಿಟ್ಟಿದ್ದೇವೆ. ಇದು ಅತ್ಯಂತ ನಿರ್ಣಾಯಕ ನಿರ್ಧಾರವಾಗಿದ್ದು, ಪ್ರಗತಿಪರ ನಾಯಕತ್ವ ಮತ್ತು ಭಾರತದ ಸಶಸ್ತ್ರ ಪಡೆಗಳ ಧೈರ್ಯದಿಂದಾಗಿ ಈ ನಿರ್ಧಾರ ಸಾಧ್ಯವಾಗಿದೆ. ಇದು ರಾಜಕೀಯ ಉದ್ದೇಶದಿಂದ ಪ್ರೇರಿತವಾಗಿಲ್ಲ. ಸೇನೆಯ ಇಚ್ಛೆಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಂತಹ ಮಹತ್ವದ ನಿರ್ಧಾರಗಳನ್ನು ಮುಂದಕ್ಕೆ ತೆಗೆದುಕೊಳ್ಳುತ್ತಿರುವ ಇಂತಹ ಸೈನಿಕರು ಮತ್ತು ಅಧಿಕಾರಿಗಳು ನನ್ನ ಸೇನೆಯಲ್ಲಿ ಇದ್ದಾರೆ ಎಂಬುದಕ್ಕೆ ಇಂದು ನಾನು ಹೆಮ್ಮೆಪಡುತ್ತೇನೆ. ಇದರ ಹೊರತಾಗಿ, ಸಂಶೋಧನೆ ಮತ್ತು ನಾವೀನ್ಯಕ್ಕಾಗಿ ನಾವು ರಕ್ಷಣಾ ವಲಯವನ್ನು ನವೋದ್ಯಮಗಳು, ಉದ್ಯಮ ಮತ್ತು ಅಕಾಡೆಮಿಗಳಿಗೆ ತೆರೆದಿದ್ದೇವೆ.  ಖಾಸಗಿ ಶೈಕ್ಷಣಿಕ ವಲಯದ ಹೊಸ ಪೀಳಿಗೆಗೆ ಸಂಶೋಧನಾ ಬಜೆಟ್‌ನ 25 ಪ್ರತಿಶತವನ್ನು ಹಸ್ತಾಂತರಿಸುವ ದಿಟ್ಟ ನಿರ್ಧಾರವನ್ನು ನಾವು ತೆಗೆದುಕೊಂಡಿದ್ದೇವೆ ಮತ್ತು ನನ್ನ ದೇಶದ ಯುವ ಪೀಳಿಗೆಯನ್ನು ನಾನು ನಂಬುತ್ತೇನೆ.  ಭಾರತ ಸರ್ಕಾರ ಅವರಿಗೆ 100 ರೂಪಾಯಿ ನೀಡಿದರೆ, ಅವರು ದೇಶಕ್ಕೆ 10,000 ರೂಪಾಯಿಗಳನ್ನು ಹಿಂದಿರುಗಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಇದು ನನ್ನ ದೇಶದ ಯುವ ಪೀಳಿಗೆಯ ಶಕ್ತಿ.

ಸರ್ಕಾರದ ಪ್ರಯತ್ನಗಳ ಜೊತೆಗೆ, ನಮ್ಮ ಪಡೆಗಳು ಸಹ ಮುಂದೆ ಬಂದು ರಕ್ಷಣೆಗಾಗಿ ದೇಶದೊಳಗೆ ಹೆಚ್ಚು ಹೆಚ್ಚು ಉಪಕರಣಗಳನ್ನು ಖರೀದಿಸಲು ನಿರ್ಧರಿಸಿದೆ ಎಂದು ನನಗೆ ಸಂತೋಷವಾಗಿದೆ. ಸಶಸ್ತ್ರ ಪಡೆಗಳು ಒಟ್ಟಾಗಿ ವಿವಿಧ ಸಲಕರಣೆಗಳ ಎರಡು ಪಟ್ಟಿಗಳನ್ನು ಸಹ ತಂದಿವೆ. ಒಂದು ಪಟ್ಟಿಯು ಭಾರತೀಯ ಕಂಪನಿಗಳಿಂದ ಖರೀದಿಸಲ್ಪಡುವ ಉಪಕರಣಗಳನ್ನು ಮಾತ್ರ ಒಳಗೊಂಡಿರುತ್ತದೆ ಮತ್ತು ಇತರವು ಅಗತ್ಯವಿದ್ದರೆ ನಾವು ಇತರ ದೇಶಗಳಿಂದ ಖರೀದಿಸಬಹುದಾದ ಕೆಲವು ಉಪಕರಣಗಳನ್ನು ಒಳಗೊಂಡಿರುತ್ತದೆ. ಇಂದು ಅವರು ಮೊದಲ ಪ್ರಕಾರದ ಪಟ್ಟಿಗೆ ಅಥವಾ 'ಭಾರತದಲ್ಲಿ ಮಾತ್ರ ತಯಾರಿಸಿದ' ಪಟ್ಟಿಗೆ ಇನ್ನೂ 101  ವಸ್ತುಗಳನ್ನು ಸೇರಿಸಿದ್ದಾರೆ ಎಂದು ಹೇಳಲು ನನಗೆ ಸಂತೋಷವಾಗಿದೆ. ಈ ನಿರ್ಧಾರಗಳು ಸ್ವಾವಲಂಬಿ ಭಾರತದ ಸಾಮರ್ಥ್ಯವನ್ನು ತೋರಿಸುತ್ತವೆ ಮತ್ತು ದೇಶದ ಸೈನಿಕರು ತಮ್ಮ ದೇಶದ ಮಿಲಿಟರಿ ಉಪಕರಣಗಳ ಮೇಲೆ ಹೆಚ್ಚುತ್ತಿರುವ ವಿಶ್ವಾಸದ ಸಂಕೇತವಾಗಿದೆ. ಈಗ ರಕ್ಷಣಾ ವಲಯದ ಅಂತಹ 411 ಉಪಕರಣಗಳು ಮತ್ತು ಉತ್ಪನ್ನಗಳನ್ನು ಭಾರತವು 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ಮಾತ್ರ ಖರೀದಿಸಲಿದೆ. ಇದು ಭಾರತೀಯ ಕಂಪನಿಗಳ ಅಡಿಪಾಯವನ್ನು ಬಲಪಡಿಸುವ ವಿಧಾನವನ್ನು ಊಹಿಸಿ, ನಮ್ಮ ಸಂಶೋಧನೆ ಮತ್ತು ನಾವೀನ್ಯವನ್ನು ಹೆಚ್ಚಿಸುತ್ತದೆ ಮತ್ತು ನಮ್ಮ ರಕ್ಷಣಾ ಉತ್ಪಾದನಾ ವಲಯವನ್ನು ದೊಡ್ಡ ಎತ್ತರಕ್ಕೆ ಕೊಂಡೊಯ್ಯುತ್ತದೆ! ಇದು ನನ್ನ ದೇಶದ ಯುವ ಪೀಳಿಗೆಗೆ ದೊಡ್ಡ ಲಾಭವನ್ನು ತರಲಿದೆ.
 
ಸ್ನೇಹಿತರೇ,
 
ಈ ಚರ್ಚೆಯ ಮಧ್ಯೆ ನಾನು ಇನ್ನೊಂದು ವಿಷಯವನ್ನು ಪ್ರಸ್ತಾಪಿಸಬಯಸುತ್ತೇನೆ. ನಮಗೆ ಸಾಕಷ್ಟು ಜೀವನ ಅನುಭವವಿದೆ. ಒಂದು ಉದಾಹರಣೆಯನ್ನು ತೆಗೆದುಕೊಳ್ಳೋಣ. ರೈಲಿನ ಬರ್ತ್‌ನಲ್ಲಿ, ಆ ಸೀಟಿನಲ್ಲಿ ನಾಲ್ಕು ಜನರು ಕುಳಿತಿದ್ದರೆ, ಈ ನಾಲ್ವರು ಯಾವುದೇ ಐದನೇ ವ್ಯಕ್ತಿಯನ್ನು ಅಲ್ಲಿ ಕುಳಿತುಕೊಳ್ಳಲು ಅನುಮತಿಸುವುದಿಲ್ಲ. ಅದೇ ಪರಿಸ್ಥಿತಿ ವಿಶ್ವದ ರಕ್ಷಣಾ ಉತ್ಪಾದನಾ ಕಂಪನಿಗಳಲ್ಲಿದೆ. ವಿಶ್ವದಲ್ಲಿ ರಕ್ಷಣಾ ಪೂರೈಕೆ ಕ್ಷೇತ್ರದಲ್ಲಿ ಕೆಲವು ಕಂಪನಿಗಳ ಏಕಸ್ವಾಮ್ಯವಿತ್ತು. ಯಾವುದೇ ಹೊಸ ಕಂಪನಿಯನ್ನು ಪ್ರವೇಶಿಸಲು ಅವರು ಅನುಮತಿಸಲಿಲ್ಲ. ಆದರೆ ಭಾರತ ತನ್ನ ಸ್ಥಾನವನ್ನು ಧೈರ್ಯದಿಂದ ಗಳಿಸಿಕೊಂಡಿದೆ. ಇಂದು ಭಾರತದ ಯುವಕರ ಈ ಕೌಶಲ್ಯ ಜಗತ್ತಿಗೆ ಆಯ್ಕೆಯಾಗಿ ಹೊರಹೊಮ್ಮುತ್ತಿದೆ ಸ್ನೇಹಿತರೇ. ರಕ್ಷಣಾ ಕ್ಷೇತ್ರದಲ್ಲಿ ಭಾರತದ ಯುವಕರ ಸಾಮರ್ಥ್ಯವು ಮುಂಚೂಣಿಗೆ ಬರುತ್ತಿದೆ ಮತ್ತು ಇದು ಪ್ರಪಂಚದ ಕಲ್ಯಾಣಕ್ಕಾಗಿ. ಆದ್ದರಿಂದ, ಇದು ಜಗತ್ತಿಗೆ ಹೊಸ ಅವಕಾಶಗಳು ಮತ್ತು ಆಯ್ಕೆಗಳನ್ನು ಒದಗಿಸುತ್ತಿದೆ. ಯುವಕರ ಪ್ರಯತ್ನದಿಂದ ಮುಂದಿನ ದಿನಗಳಲ್ಲಿ ದೇಶದ ರಕ್ಷಣಾ ಕ್ಷೇತ್ರ ಬಲಗೊಳ್ಳಲಿದೆ ಎಂಬ ನಂಬಿಕೆ ನನಗಿದೆ. ಆದರೆ ಅದೇ ಸಮಯದಲ್ಲಿ ದೇಶದ ಶಕ್ತಿ ಮತ್ತು ದೇಶದ ಯುವಕರ ಸಾಮರ್ಥ್ಯಗಳು ಅನೇಕ ಪಟ್ಟು ಹೆಚ್ಚಾಗುತ್ತವೆ. ಡಿಫೆನ್ಸ್ ಎಕ್ಸ್‌ಪೋದಲ್ಲಿ ನಾವು ಇಂದು ಪ್ರದರ್ಶಿಸುತ್ತಿರುವ ವಸ್ತುಗಳಲ್ಲಿ ನಾನು ಜಗತ್ತಿನ ಒಳಿತನ್ನು  ನೋಡಬಲ್ಲೆ. ಸಂಪನ್ಮೂಲಗಳ ಕೊರತೆಯಿಂದ ಸಾಮಾನ್ಯವಾಗಿ ರಕ್ಷಣೆ ಮತ್ತು ಭದ್ರತೆಯ ವಿಷಯದಲ್ಲಿ ಹಿಂದೆ ಉಳಿದಿರುವ ಪ್ರಪಂಚದ ಸಣ್ಣ ದೇಶಗಳಿಗೆ ಇದು ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ.

ಸ್ನೇಹಿತರೇ,
 
ಭಾರತವು ರಕ್ಷಣಾ ಕ್ಷೇತ್ರವನ್ನು ಅವಕಾಶಗಳು ಮತ್ತು ಸಕಾರಾತ್ಮಕ ಸಾಧ್ಯತೆಗಳ ಅನಂತ ಆಕಾಶವಾಗಿ ನೋಡುತ್ತದೆ. ಇಂದು ನಾವು ಎರಡು ರಕ್ಷಣಾ ಕಾರಿಡಾರ್‌ಗಳನ್ನು ಹೊಂದಿದ್ದೇವೆ, ಉತ್ತರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ತಲಾ ಒಂದೊಂದು ಕ್ಷಿಪ್ರಗತಿಯಲ್ಲಿ ಅಭಿವೃದ್ಧಿಯ ದಿಕ್ಕಿನಲ್ಲಿ ಮುನ್ನಡೆಯುತ್ತಿದೆ. ಪ್ರಪಂಚದಾದ್ಯಂತ ಹಲವಾರು ದೊಡ್ಡ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲು ಬರುತ್ತಿವೆ. ಈ ಹೂಡಿಕೆಯ ಹಿಂದೆ ಪೂರೈಕೆ ಸರಪಳಿಗಳ ದೊಡ್ಡ ಜಾಲವು ಅಭಿವೃದ್ಧಿಗೊಳ್ಳುತ್ತಿದೆ. ಈ ದೊಡ್ಡ ಕಂಪನಿಗಳು, ನಮ್ಮ ಎಂಎಸ್‌ಎಂಇಗಳು ಮತ್ತು ಸಣ್ಣ ಕೈಗಾರಿಕೆಗಳು ಇದರಿಂದ ಉತ್ತೇಜನ ಪಡೆಯುತ್ತಿವೆ. ನಮ್ಮ ಎಂಎಸ್‌ಎಂಇಗಳು ಸಹಕರಿಸುತ್ತವೆ; ಮತ್ತು ಬಂಡವಾಳವು ಈ ಸಣ್ಣ ಕೈಗಾರಿಕೆಗಳಿಗೂ ತಲುಪಲಿದೆ ಎಂದು ನನಗೆ ಖಾತ್ರಿಯಿದೆ. ಈ ವಲಯದಲ್ಲಿ ಲಕ್ಷಾಂತರ ಕೋಟಿ ಹೂಡಿಕೆಯು ಆ ಪ್ರದೇಶಗಳಲ್ಲಿನ ಯುವಕರಿಗೆ ದೊಡ್ಡ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಆದ್ದರಿಂದ, ಬೆಳವಣಿಗೆಯ ಹೊಸ ಎತ್ತರವನ್ನು ಸಾಧಿಸುವ ಸಾಧ್ಯತೆಯಿದೆ. ಭವಿಷ್ಯದ ಭಾರತವನ್ನು ಗಮನದಲ್ಲಿಟ್ಟುಕೊಂಡು ಈ ಅವಕಾಶಗಳನ್ನು ರೂಪಿಸಲು ಗುಜರಾತ್ ಡಿಫೆನ್ಸ್ ಎಕ್ಸ್‌ಪೋದಲ್ಲಿರುವ ಎಲ್ಲ ಕಂಪನಿಗಳಿಗೆ ನಾನು ಕರೆ ನೀಡಲು ಬಯಸುತ್ತೇನೆ. ನಿಮ್ಮ ಅವಕಾಶವನ್ನು ಕಳೆದುಕೊಳ್ಳಬೇಡಿ! ಆವಿಷ್ಕಾರ ಮಾಡಿ, ವಿಶ್ವದಲ್ಲೇ ಅತ್ಯುತ್ತಮವಾಗಲು ಪ್ರತಿಜ್ಞೆ ಮಾಡಿ ಮತ್ತು ಬಲಿಷ್ಠ ಅಭಿವೃದ್ಧಿ ಹೊಂದಿದ ಭಾರತದ ಕನಸುಗಳಿಗೆ ರೂಪ ನೀಡಿ. ನಾನು ನಿಮ್ಮೊಂದಿಗಿದ್ದೇನೆ ಎಂದು ಯುವಕರು, ಸಂಶೋಧಕರು ಮತ್ತು ನವೋದ್ಯಮಿಗಳಿಗೆ ಭರವಸೆ ನೀಡುತ್ತೇನೆ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ, ನಾನು ಇಂದು ಬಹಳ ಶ್ರಮ ಪಡಲು ಸಿದ್ಧನಿದ್ದೇನೆ.
 
ಸ್ನೇಹಿತರೇ,
 
ದೇಶವು ವೇಗವಾಗಿ ಬದಲಾಗುತ್ತಿದೆ.  ಅದು ನಿಮ್ಮ ಅನುಭವಕ್ಕೂ ಬಂದಿರಬಹುದು ಎಂದು ನಾನು ನಂಬುತ್ತೇನೆ.  ಮೊದಲು ನಾವು ಪಾರಿವಾಳಗಳನ್ನು ಬಿಡುವ ಕಾಲವಿತ್ತು; ಆದರೆ ಈಗ ಚೀತಾಗಳನ್ನು ಬಿಡುತ್ತಿದ್ದೇವೆ. ಈ ಸಾಮರ್ಥ್ಯದಿಂದ ಘಟನೆಗಳು ಚಿಕ್ಕದಾಗಿ ಕಾಣಿಸಬಹುದು ಆದರೆ ಸಂದೇಶವು ಪ್ರಬಲವಾಗಿದೆ. ಪದಗಳು ಸರಳವಾಗಿರಬಹುದು, ಆದರೆ ಶಕ್ತಿಗೆ ಸಾಟಿಯಿಲ್ಲ. ಇಂದು ಭಾರತದ ಯುವ ಶಕ್ತಿ, ಭಾರತದ ಶಕ್ತಿ ಜಗತ್ತಿನ ಭರವಸೆಯ ಕೇಂದ್ರವಾಗುತ್ತಿದೆ. ಮತ್ತು ಇಂದಿನ ಡಿಫೆನ್ಸ್ ಎಕ್ಸ್‌ಪೋವನ್ನು ಇದೇ ರೂಪದಲ್ಲಿ ನಿಮ್ಮ ಮುಂದೆ ಪ್ರದರ್ಶಿಸಲಾಗಿದೆ. ನಮ್ಮ ರಕ್ಷಣಾ ಸಚಿವರಾದ ರಾಜನಾಥ್ ಜಿ ಅವರನ್ನು ನನ್ನ ಹೃದಯದಾಳದಿಂದ ನಾನು ಅಭಿನಂದಿಸುತ್ತೇನೆ ಅವರು ಮಾಡಿದ ಕಠಿಣ ಪರಿಶ್ರಮ ಮತ್ತು ಪ್ರಯತ್ನಕ್ಕಾಗಿ ಅವರು ಕಡಿಮೆ ಮಾತನಾಡುತ್ತಾರೆ, ಆದರೆ ಅವರ ಕಾರ್ಯಗಳು ಹೆಚ್ಚು ಮಾತನಾಡುತ್ತವೆ. ನಾನು ಅವರನ್ನು ಮತ್ತು ಅವರ ಇಡೀ ತಂಡವನ್ನು ಅಭಿನಂದಿಸುತ್ತೇನೆ. ನಿಮಗೆ ಶುಭ ಹಾರೈಸುತ್ತೇನೆ ಮತ್ತು ದೀಪಾವಳಿಯ ಶುಭಾಶಯಗಳು! ಗುಜರಾತ್ ಜನತೆಗೆ ಹೊಸ ಗುಜರಾತಿ ವರ್ಷದ ಶುಭಾಶಯಗಳು.
 
ಧನ್ಯವಾದಗಳು.
 ಸೂಚನೆ: ಪ್ರಧಾನಮಂತ್ರಿಯವರ ಭಾಷಣದ ಕೆಲವು ಭಾಗಗಳು ಗುಜರಾತಿ ಭಾಷೆಯಲ್ಲಿಯೂ ಇವೆ, ಅದನ್ನು ಇಲ್ಲಿ ಅನುವಾದಿಸಲಾಗಿದೆ.

******



(Release ID: 1870288) Visitor Counter : 113