ಪ್ರಧಾನ ಮಂತ್ರಿಯವರ ಕಛೇರಿ
ಗುಜರಾತ್ ನ ಅಮೋದ್ ನಲ್ಲಿ ವಿವಿಧ ಯೋಜನೆಗಳನ್ನು ಲೋಕಾರ್ಪಣೆಗೊಳಿಸಿದ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಇಂಗ್ಲಿಷ್ ಅವತರಣಿಕೆ.
ಪ್ರಕಟಣಾ ದಿನಾಂಕ:
10 OCT 2022 6:34PM by PIB Bengaluru
ಭಾರತ್ ಮಾತಾ ಕೀ ಜೈ,
ಭಾರತ್ ಮಾತಾ ಕೀ ಜೈ,
ವೇದಿಕೆಯ ಮೇಲೆ ಆಸೀನರಾಗಿರುವ, ಗುಜರಾತಿನ ಜನಪ್ರಿಯ ಮತ್ತು ಧೈರ್ಯಶಾಲಿ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್; 2019 ರ ಚುನಾವಣೆಯಲ್ಲಿ ದೇಶದಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದು ಹೊಸ ದಾಖಲೆ ನಿರ್ಮಿಸಿದ ನನ್ನ ಸಂಸದೀಯ ಸಹೋದ್ಯೋಗಿ ಸಿ.ಆರ್.ಪಾಟೀಲ್, ನನ್ನ ಸಂಪುಟ ಸಹೋದ್ಯೋಗಿ ಮತ್ತು ಗುಜರಾತ್ ನ ಪುತ್ರ ಶ್ರೀ ಮನ್ಸುಖ್ ಭಾಯಿ ಮಾಂಡವೀಯ, ಗುಜರಾತ್ ಸರ್ಕಾರದ ಎಲ್ಲಾ ಮಂತ್ರಿಗಳೇ; ಸಂಸದರೇ, ಶಾಸಕರೇ ಮತ್ತು ನನ್ನ ಮೇಲೆ ಆಶೀರ್ವಾದದ ಮಳೆಗರೆಯಲು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿರುವ ನನ್ನ ಪ್ರೀತಿಯ ಸಹೋದರರೇ ಮತ್ತು ಸಹೋದರಿಯರೇ
ಸ್ನೇಹಿತರೇ,
ಇಂದು ಬೆಳಿಗ್ಗೆ ಇಲ್ಲಿಗೆ ಬರುವಾಗ ನನಗೆ ಒಂದು ದುಃಖದ ಸುದ್ದಿ ಸಿಕ್ಕಿತು. ಮುಲಾಯಂ ಸಿಂಗ್ ಯಾದವ್ ಜೀ ಅವರು ಇಂದು ನಿಧನರಾದರು. ಮುಲಾಯಂ ಸಿಂಗ್ ಯಾದವ್ ಅವರ ನಿಧನದಿಂದ ದೇಶಕ್ಕೆ ದೊಡ್ಡ ನಷ್ಟವಾಗಿದೆ. ಮುಲಾಯಂ ಸಿಂಗ್ ಜೀ ಅವರೊಂದಿಗಿನ ನನ್ನ ಸಂಬಂಧವು ಬಹಳ ವಿಶೇಷತೆಗಳನ್ನು ಒಳಗೊಂಡಿದೆ. ನಾವಿಬ್ಬರೂ ಮುಖ್ಯಮಂತ್ರಿಯಾಗಿದ್ದಾಗ ಭೇಟಿಯಾದಾಗಲೆಲ್ಲಾ, ಪರಸ್ಪರ ವಿಶೇಷ ಬಾಂಧವ್ಯವನ್ನು ಅನುಭವಿಸುತ್ತಿದ್ದೆವು. 2014 ರ ಚುನಾವಣೆಯ ಸಮಯದಲ್ಲಿ ಭಾರತೀಯ ಜನತಾ ಪಕ್ಷವು ನನ್ನನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಿದಾಗ, ನಾನು ನನಗೆ ಅದಾಗಲೇ ತಿಳಿದಿದ್ದ ವಿರೋಧ ಪಕ್ಷದ ಮಹಾನ್ ವ್ಯಕ್ತಿಗಳು, ಹಿರಿಯ ರಾಜಕಾರಣಿಗಳಿಗೆ ಕರೆ ಮಾಡಿ ಆಶೀರ್ವಾದ ಪಡೆಯಲು ಬಯಸಿದ್ದೆ. ನಾನು ಮುಲಾಯಂ ಸಿಂಗ್ ಜೀ ಅವರ ಆಶೀರ್ವಾದವನ್ನು ಕೇಳಿದ ಆ ದಿನ ನನಗೆ ಇನ್ನೂ ನೆನಪಿದೆ. ಅವರ ಸಲಹೆಯ ಮಾತುಗಳನ್ನು ನಾನು ಇಂದಿಗೂ ಅಮೂಲ್ಯ ಸಂಪತ್ತಾಗಿರಿಸಿಕೊಂಡಿದ್ದೇನೆ. ಮುಲಾಯಂ ಸಿಂಗ್ ಅವರ ವಿಶೇಷತೆಯೆಂದರೆ, ತೀವ್ರ ರಾಜಕೀಯ ವಿರೋಧದ ನಡುವೆಯೂ ಅವರು ತಮ್ಮ ಆಶೀರ್ವಾದದಿಂದ ಹಿಂದೆ ಸರಿಯಲಿಲ್ಲ. ಅವರು 2013 ರಲ್ಲಿ ನನ್ನನ್ನು ಆಶೀರ್ವದಿಸಿದ್ದರು ಮತ್ತು ನನ್ನನ್ನು ಆಶೀರ್ವದಿಸುವುದನ್ನು ಮುಂದುವರಿಸಿದರು. 2019 ರಲ್ಲಿ ಸಂಸತ್ತಿನ ಕೊನೆಯ ಅಧಿವೇಶನದಲ್ಲಿ ಅವರು ಮತ್ತೊಮ್ಮೆ ನನ್ನನ್ನು ಆಶೀರ್ವದಿಸಿದ್ದರು. ಮುಲಾಯಂ ಸಿಂಗ್ ಅವರಂತಹ ಹಿರಿಯ ನಾಯಕರು ಸಂಸತ್ತಿನ ಒಳಗೆ ಆಡಿದ ಮಾತುಗಳು ಈ ದೇಶದ ಯಾವುದೇ ರಾಜಕೀಯ ಕಾರ್ಯಕರ್ತನ ಜೀವನದಲ್ಲಿ ದೊಡ್ಡ ಆಶೀರ್ವಾದವಾಗಿರುತ್ತವೆ. ಸಂಸತ್ತಿನಲ್ಲಿ ನಿಂತಾಗ, ಅವರು ಯಾವುದೇ ರಾಜಕೀಯ ಕಾರ್ಯಸೂಚಿಯಿಲ್ಲದೆ ಆ ಮಾತುಗಳನ್ನು ಹೇಳಿದ್ದರು. "ಎಲ್ಲರನ್ನೂ ಗಣನೆಗೆ ತೆಗೆದುಕೊಳ್ಳುವ ಮೂಲಕ ಮೋದಿ ಜೀ ಕೆಲಸ ಮಾಡುತ್ತಾರೆ ಮತ್ತು ಅದಕ್ಕಾಗಿಯೇ ಅವರು 2019 ರಲ್ಲಿ ಮತ್ತೆ ಚುನಾಯಿತರಾಗುತ್ತಾರೆ ಮತ್ತು ದೇಶದ ಪ್ರಧಾನಿಯಾಗುತ್ತಾರೆ ಎಂದು ನನಗೆ ಖಾತ್ರಿಯಿದೆ" ಎಂದು ಅವರು ಹೇಳಿದ್ದರು. ಅವರು ಬಹಳ ದಯಾಪರರೂ ಉದಾರಹೃದಯವುಳ್ಳವರೂ ಆಗಿದ್ದರು! ಅವರು ಬದುಕಿದ್ದಾಗ ನಾನು ಅವರ ಆಶೀರ್ವಾದವನ್ನು ಪಡೆಯುತ್ತಲೇ ಇದ್ದದ್ದು ನನ್ನ ಅದೃಷ್ಟ. ಇಂದು, ನಾನು ನರ್ಮದಾ ಮಾತೆಯ ದಡದಲ್ಲಿರುವ ಗುಜರಾತಿನ ಈ ನೆಲದಿಂದ ಗೌರವಾನ್ವಿತ ಮುಲಾಯಂ ಸಿಂಗ್ ಜೀ ಅವರಿಗೆ ನನ್ನ ಗೌರವ ನಮನಗಳನ್ನು ಸಲ್ಲಿಸುತ್ತೇನೆ. ಈ ನಷ್ಟವನ್ನು ಭರಿಸಲು ಅವರ ಕುಟುಂಬ ಮತ್ತು ಅವರ ಬೆಂಬಲಿಗರಿಗೆ ಶಕ್ತಿ ನೀಡಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಸ್ನೇಹಿತರೇ,
ದೇಶವು 'ಆಜಾದಿ ಕಾ ಅಮೃತ ಮಹೋತ್ಸವ'ವನ್ನು ಆಚರಿಸುತ್ತಿರುವ ಸಮಯದಲ್ಲಿ ನಾನು ಭರೂಚ್ ಗೆ ಬಂದಿದ್ದೇನೆ. ನಾವು ಭಾರತದ ಇತಿಹಾಸವನ್ನು ಓದಿದಾಗಲೆಲ್ಲಾ ಮತ್ತು ಭವಿಷ್ಯದ ಬಗ್ಗೆ ಮಾತನಾಡಿದಾಗಲೆಲ್ಲಾ, ಭರೂಚ್ ಅನ್ನು ಯಾವಾಗಲೂ ಹೆಮ್ಮೆಯಿಂದ ಚರ್ಚಿಸಲಾಗುತ್ತದೆ. ತಮ್ಮ ಕೆಲಸದಿಂದ ದೇಶವನ್ನು ಹೆಮ್ಮೆ ಪಡುವಂತೆ ಮಾಡಿದಂತಹ ಅನೇಕ ವ್ಯಕ್ತಿಗಳಿಗೆ ಈ ಭೂಮಿ ಜನ್ಮ ನೀಡಿದೆ. ಉದಾಹರಣೆಗೆ, ಈ ನೆಲದ ಮಗ ಕನ್ಹಯ್ಯಾಲಾಲ್ ಮನೇಕಲಾಲ್ ಮುನ್ಷಿ ಜೀ. ಸಂವಿಧಾನ ರಚನೆಯಲ್ಲಿ ಅವರ ಕೊಡುಗೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ. ಸೋಮನಾಥ ದೇವಾಲಯದ ಭವ್ಯ ನಿರ್ಮಾಣದಲ್ಲಿ ಸರ್ದಾರ್ ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಡೆದ ಮುನ್ಷಿ ಸಾಹೇಬರ ಪಾತ್ರವನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಅಲ್ಲದೆ, ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಹೆಚ್ಚಿನ ಎತ್ತರವನ್ನು ನೀಡಿದ ಭಾರತೀಯ ಸಂಗೀತದ ಗುರು ಪಂಡಿತ್ ಓಂಕಾರನಾಥ ಠಾಕೂರ್ ಕೂಡ ಈ ಮಣ್ಣಿನೊಂದಿಗೆ ಸಂಬಂಧ ಹೊಂದಿದ್ದರು. ಇಂತಹ ಮಹಾನ್ ವ್ಯಕ್ತಿಗಳ ಕೆಲಸದಿಂದ ಸ್ಫೂರ್ತಿ ಪಡೆದು, ಗುಜರಾತನ್ನು ಅಭಿವೃದ್ಧಿಪಡಿಸಲು ಮತ್ತು ಗುಜರಾತನ್ನು ಇನ್ನಷ್ಟು ಹೆಮ್ಮೆ ಪಡುವಂತೆ ಮಾಡಲು ನಾವು ಕಾರ್ಯನಿರತರಾಗಿದ್ದೇವೆ.
ಸಹೋದರರೇ ಮತ್ತು ಸಹೋದರಿಯರೇ,
ಗುಜರಾತ್ ಮತ್ತು ಇಡೀ ದೇಶದ ಪ್ರಗತಿಯಲ್ಲಿ ಭರೂಚ್ ಕೊಡುಗೆ ಬಹಳ ನಿರ್ಣಾಯಕವಾಗಿದೆ. ಭರೂಚ್ ಕೇವಲ ನೆಲಗಡಲೆಗೆ ಮಾತ್ರ ಹೆಸರುವಾಸಿಯಾಗಿದ್ದ ಕಾಲವೊಂದಿತ್ತು. ಇಂದು ನನ್ನ ಭರೂಚ್ ಕೈಗಾರಿಕೆ, ವ್ಯಾಪಾರ, ವ್ಯವಹಾರ ಮತ್ತು ಬಂದರುಗಳಂತಹ ಇತರ ಅನೇಕ ಅಂಶಗಳಿಗೆ ಹೆಸರುವಾಸಿಯಾಗಿದೆ.
ಗುಜರಾತ್ ನಲ್ಲಿ ಇಂದು ನಡೆಯುತ್ತಿರುವ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಕಾರ್ಯಗಳು ಹಿಂದಿನ ಯಾವುದೇ ಸರ್ಕಾರದ ಗುಜರಾತ್ ನ ಒಟ್ಟು ವಾರ್ಷಿಕ ಬಜೆಟ್ ಗಿಂತ ಹೆಚ್ಚು ಮೌಲ್ಯದ್ದಾಗಿವೆ ಎಂದು ನಾನು ಹೇಳಬಲ್ಲೆ.
ಸಹೋದರರೇ,
ಗುಜರಾತ್ ಭಾರಿ ಪ್ರಗತಿ ಸಾಧಿಸಿ, ಧಾಪುಗಾಲಿಕ್ಕಿದೆ ಮತ್ತು ಈಗ ಭರೂಚ್ ಜಿಲ್ಲೆಯೂ ಸಹ ಕಾಸ್ಮೋಪಾಲಿಟನ್ ಜಿಲ್ಲೆಯಾಗಿ ಮಾರ್ಪಟ್ಟಿದೆ. ಭಾರತದ ಬಹುತೇಕ ಎಲ್ಲಾ ರಾಜ್ಯಗಳಿಂದ ನಮ್ಮ ದೇಶವಾಸಿಗಳು ಇಲ್ಲಿದ್ದಾರೆ ಎಂದು ನಾನು ನಂಬುತ್ತೇನೆ. ಮತ್ತು ಇಡೀ ಭರೂಚ್ ಜಿಲ್ಲೆಯ ಬಗ್ಗೆ ಮಾತನಾಡುವಾಗ, ನೀವು ಕೇರಳ, ಬಂಗಾಳ ಮತ್ತು ಬಿಹಾರದ ಜನರನ್ನು ಸಹ ಕಾಣಬಹುದು. ಈ ಜಿಲ್ಲೆಯಲ್ಲಿ ದೇಶದಾದ್ಯಂತದ ಜನರು ಇದ್ದಾರೆ. ಕಲ್ಕತ್ತಾ, ದೆಹಲಿ ಮತ್ತು ಮುಂಬೈಗಳನ್ನು ಕಾಸ್ಮೋಪಾಲಿಟನ್ ಎಂದು ಕರೆಯುತ್ತಿದ್ದ ಕಾಲವೊಂದಿತ್ತು. ಇಂದು ಗುಜರಾತ್ ಎಷ್ಟು ಅಭಿವೃದ್ಧಿ ಹೊಂದಿದೆಯೆಂದರೆ, ಗುಜರಾತಿನ ಅನೇಕ ಜಿಲ್ಲೆಗಳು ಕಾಸ್ಮೋಪಾಲಿಟನ್ ಆಗಿವೆ ಮತ್ತು ಇಡೀ ದೇಶವನ್ನು ಪ್ರೀತಿಯಿಂದ ಅರಗಿಸಿಕೊಂಡಿವೆ. ಇದು ಗುಜರಾತ್ ನ ಅಭಿವೃದ್ಧಿಯ ಪಯಣದ ಉತ್ತುಂಗ ಶಿಖರ.
ಸಹೋದರರೇ ಮತ್ತು ಸಹೋದರಿಯರೇ
ಇಂದು ಗುಜರಾತ್ ತನ್ನ ಮೊದಲ ಬೃಹತ್ ಔಷಧ ಪಾರ್ಕ್ ಅನ್ನು ಪಡೆದುಕೊಂಡಿದೆ ಮತ್ತು ಅದೂ ಭರೂಚ್ ನಲ್ಲಿದೆ. ರಾಸಾಯನಿಕ ವಲಯಕ್ಕೆ ಸಂಬಂಧಿಸಿದ ಹಲವಾರು ಘಟಕಗಳನ್ನು, ಸ್ಥಾವರಗಳನ್ನು ಸಹ ಉದ್ಘಾಟಿಸಲಾಗಿದೆ. ಇದಲ್ಲದೆ, ಸಂಪರ್ಕಕ್ಕೆ ಸಂಬಂಧಿಸಿದ ಎರಡು ದೊಡ್ಡ ಯೋಜನೆಗಳಾದ ಅಂಕಲೇಶ್ವರ-ರಾಜ್ ಪಿಪ್ಲ ಹಾಗು ಮತ್ತು ಏಕತಾ ಪ್ರತಿಮೆ - ಏಕತಾ ನಗರವನ್ನು ಸಂಪರ್ಕಿಸುವ ರಸ್ತೆಗಳು ಉದ್ಘಾಟನೆಯಾಗಿವೆ. ಹಲವಾರು ವರ್ಷಗಳಿಂದ ಈ ಸಂಪರ್ಕ ರಸ್ತೆಗಳ ಬಗ್ಗೆ ಚರ್ಚೆಯಾಗುತ್ತಿತ್ತು. ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಈ ಯೋಜನೆಯ ಬಗ್ಗೆ ಚರ್ಚೆ ನಡೆಯುತ್ತಿತ್ತು. ಇಲ್ಲಿಯ ಹಲವಾರು ಪ್ರಮುಖ ನಾಯಕರು ದಿಲ್ಲಿಯಲ್ಲಿದ್ದರು. ಆದರೆ ಯಾರೂ ನಮ್ಮ ಮಾತನ್ನು ಕೇಳುತ್ತಿರಲಿಲ್ಲ. ಭರೂಚ್ ಜಿಲ್ಲೆಯು ಅಭಿವೃದ್ಧಿ ಹೊಂದುತ್ತಿರುವ ರೀತಿಯನ್ನು ಪರಿಗಣಿಸಿದರೆ, ಅದು ಬರೋಡಾ ಅಥವಾ ಸೂರತ್ ನ ವಿಮಾನ ನಿಲ್ದಾಣಗಳನ್ನು ಅವಲಂಬಿಸುವುದು ಸಾಧ್ಯವಿಲ್ಲ. ಭರೂಚ್ ತನ್ನದೇ ಆದ ವಿಮಾನ ನಿಲ್ದಾಣವನ್ನು ಹೊಂದಿರಬೇಕು. ಆದ್ದರಿಂದ, ಅಂಕಲೇಶ್ವರದಲ್ಲಿ ಹೊಸ ವಿಮಾನ ನಿಲ್ದಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗುತ್ತಿದೆ.
ಸ್ನೇಹಿತರೇ,
ದೇಶದ ಅನೇಕ ಸಣ್ಣ ರಾಜ್ಯಗಳಿಗಿಂತ ಹೆಚ್ಚಿನ ಕೈಗಾರಿಕೆಗಳನ್ನು ಹೊಂದಿರುವಂತಹ ಜಿಲ್ಲೆ ಭರೂಚ್. ಮತ್ತು ಈ ಒಂದು ಜಿಲ್ಲೆಯ ಕೈಗಾರಿಕೆಗಳು ಉದ್ಯೋಗವನ್ನು ಒದಗಿಸುವ ವಿಷಯದಲ್ಲಿ ಪ್ರಮುಖ ದಾಖಲೆಯನ್ನು ನಿರ್ಮಿಸಿವೆ. ದೇಶ ಮತ್ತು ವಿದೇಶಗಳಲ್ಲಿ ಇಷ್ಟು ದೊಡ್ಡ ಪ್ರಮಾಣದ ವ್ಯಾಪಾರ ಮತ್ತು ವ್ಯವಹಾರ ನಡೆಯುತ್ತಿರುವುದರಿಂದಾಗಿ , ಈ ಹೊಸ ವಿಮಾನ ನಿಲ್ದಾಣವು ಅಭಿವೃದ್ಧಿಯ ಪ್ರಯಾಣವನ್ನು ಹೊಸ ಎತ್ತರ ಮತ್ತು ವೇಗಕ್ಕೆ ಕೊಂಡೊಯ್ಯಲಿದೆ. ನರೇಂದ್ರ-ಭೂಪೇಂದ್ರ ಅವರ ಡಬಲ್ ಎಂಜಿನ್ ಸರ್ಕಾರದೊಂದಿಗೆ, ವಿಮಾನ ನಿಲ್ದಾಣದ ಕೆಲಸವೂ ಸಹ ಬಹಳ ವೇಗವಾಗಿ ಪೂರ್ಣಗೊಳ್ಳಲಿದೆ. ಈ ವಿಮಾನ ನಿಲ್ದಾಣದ ನಿರ್ಮಾಣದೊಂದಿಗೆ, ಈ ಪ್ರದೇಶಕ್ಕೆ ಕೈಗಾರಿಕೋದ್ಯಮಿಗಳು ಮತ್ತು ಪ್ರಮುಖ ಅಧಿಕಾರಿಗಳ ಚಲನವಲನಗಳು ತೀವ್ರಗೊಳ್ಳಲಿವೆ. ಅಭಿವೃದ್ಧಿಯೂ ವೇಗ ಪಡೆದುಕೊಳ್ಳಲಿದೆ. ರಫ್ತಿಗೆ ಮತ್ತಷ್ಟು ಉತ್ತೇಜನ ಸಿಗಲಿದೆ.
ಸಹೋದರರೇ ಮತ್ತು ಸಹೋದರಿಯರೇ,
ಇಂದು ನಾವು ಗುಜರಾತಿನ ವಿಭಿನ್ನ ಚಿತ್ರಣವನ್ನು ನೋಡಬಹುದು. ನಾವು ಹೊಸ ಗುಜರಾತ್ ಹೊಂದಿದ್ದೇವೆ. ಅದು ರೂಪಾಂತರಗೊಂಡಿದೆ ಮತ್ತು ಈಗ ಹೆಚ್ಚಿನ ಎತ್ತರಕ್ಕೆ ಜಿಗಿಯಲು ಅದು ಸರ್ವ ಪ್ರಯತ್ನ ಮಾಡುತ್ತಿದೆ. . ಆದರೆ ಎರಡು ದಶಕಗಳ ಹಿಂದಿನ ಆ ದಿನಗಳನ್ನು ನೆನಪಿಸಿಕೊಳ್ಳಲು ಪ್ರಯತ್ನಿಸಿ. ಅದು ಎಂತಹ ಭಾವನೆಗಳನ್ನು ಉಂಟು ಮಾಡುತ್ತದೆ.? ಎರಡು ದಶಕಗಳ ಹಿಂದೆ ನಮ್ಮ ಗುಜರಾತ್ ನ ಅಸ್ಮಿತೆ ಹೇಗಿತ್ತು? ವ್ಯಾಪಾರಿಗಳು ಒಂದು ಸ್ಥಳದಿಂದ ಸರಕುಗಳನ್ನು ತೆಗೆದುಕೊಂಡು ಮತ್ತೊಂದು ಸ್ಥಳದಲ್ಲಿ ಮಾರಾಟ ಮಾಡುತ್ತಿದ್ದರು ಮತ್ತು ಆ ಬ್ರೋಕರೇಜ್ನೊಂದಿಗೆ ತಮ್ಮ ಜೀವನಕ್ಕೆ ಗಳಿಕೆಯನ್ನು ಮಾಡುತ್ತಿದ್ದರು. ಇದು ನಮ್ಮ ಗುರುತಾಗಿತ್ತು. ನಮ್ಮಲ್ಲಿ ಕಚ್ಚಾವಸ್ತುಗಳು ಇಲ್ಲದ ಕಾರಣ ನಾವು ಕೃಷಿ ಮತ್ತು ಕೈಗಾರಿಕಾ ಬೆಳವಣಿಗೆ ಎರಡರಲ್ಲೂ ಹಿಂದೆ ಬಿದ್ದಿದ್ದೆವು. ಅಂತಹ ಪರಿಸ್ಥಿತಿಯಲ್ಲಿ, ಇಂದು ಗುಜರಾತ್ ಕಠಿಣ ಪರಿಶ್ರಮದ ಮೂಲಕ ಕೈಗಾರಿಕಾ ವಲಯದಲ್ಲಿ ಅಭಿವೃದ್ಧಿಯ ದೊಡ್ಡ ಎತ್ತರವನ್ನು ಎರಡು ದಶಕಗಳಲ್ಲಿ ಸಾಧಿಸಿದೆ. ನಾವೆಲ್ಲರೂ ಬಂದರುಗಳಿಗೆ ಸಂಬಂಧಿಸಿದ ಕೈಗಾರಿಕೆಗಳ ಸಣ್ಣ ಜಾಲಗಳನ್ನು ರಚಿಸಿದ್ದೇವೆ. ನಾವು ನಮ್ಮ ಸ್ವಂತ ಬಂದರುಗಳನ್ನು ಮತ್ತು ನಮ್ಮ ಕರಾವಳಿಯನ್ನು ಅಭಿವೃದ್ಧಿಪಡಿಸಿದ್ದೇವೆ. ಮತ್ತು ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಮತ್ತು ನಮ್ಮ ಮೀನುಗಾರರ ಸಹೋದರ ಮತ್ತು ಸಹೋದರಿಯರು ಬಹಳ ಶೋಚನೀಯ ಸ್ಥಿತಿಯಲ್ಲಿದ್ದರು. ಅವರ ಬಗ್ಗೆ ಯಾರೂ ಕಾಳಜಿ ವಹಿಸುತ್ತಿರಲಿಲ್ಲ. ಇಲ್ಲಿ ಬದುಕಲು ಮಾಡಬೇಕಾಗಿದ್ದಂತಹ ಪ್ರಚಂಡ ಕಠಿಣ ಪರಿಶ್ರಮದ ಬಗ್ಗೆ ಇಂದಿನ 20-22 ಅಥವಾ 25 ವರ್ಷದ ಯುವಜನರಿಗೆ ತಿಳಿದಿಲ್ಲ. ಒಂದು ಕಾಲದಲ್ಲಿ ಗುಜರಾತಿನಲ್ಲಿ ಇಂತಹ ಭಯಾನಕ ಪರಿಸ್ಥಿತಿ ಇತ್ತು ಎಂಬುದೂ ಅವರಿಗೆ ತಿಳಿದಿಲ್ಲ. ಆದರೆ ಪ್ರಚಂಡ ಕಠಿಣ ಪರಿಶ್ರಮದಿಂದ ಮತ್ತು ಗುಜರಾತ್ ಜನರ ಸಹಕಾರದಿಂದ ನಾವು ಇಂದು ಈ ಸ್ಥಾನಕ್ಕೆ ಬಂದಿದ್ದೇವೆ. ಮತ್ತು ಪ್ರತಿಯೊಬ್ಬರೂ ಮುಂದಿನ ಜಿಗಿತಕ್ಕೆ ತಯಾರಾಗಿದ್ದಾರೆ. ಅದರಿಂದಾಗಿಯೇ ಮುಂಬರುವ ದಿನಗಳಲ್ಲಿ ನಾವು ಆ ಜಿಗಿತವನ್ನು ಮಾಡಬೇಕಾಗಿದೆ. 'ಅಮೃತ ಮಹೋತ್ಸವ' ಅಥವಾ ಸ್ವಾತಂತ್ರ್ಯದ 75 ವರ್ಷಗಳೊಂದಿಗೆ “ಅಮೃತ ಕಾಲ” ಪ್ರಾರಂಭವಾಗಿದೆ. ಅದೇ ರೀತಿಯಲ್ಲಿ, ಗುಜರಾತಿನ ಯುವಕರಿಗೆ ಈಗ ಸುವರ್ಣ ಯುಗ ಪ್ರಾರಂಭವಾಗಿದೆ. ಈ ಸುವರ್ಣ ಯುಗವನ್ನು ಹಾಗೆಯೇ ಸಾಗಿ ಹೋಗಲು, ವ್ಯರ್ಥವಾಗಲು ಬಿಡಬೇಡಿ. ಸಹೋದರರೇ, ಯಾವುದೇ ಸ್ಥಳದಲ್ಲಿ ಅಭಿವೃದ್ಧಿಯು ಯಾವಾಗ ಆರಂಭವಾಗುತ್ತದೆ.? ನೀವು ಅಭಿವೃದ್ಧಿ ಹೊಂದಲು ಬಯಸಿದರೆ, ನೀವು ಯಾವುದೇ ಅಡೆತಡೆಗಳಿಲ್ಲದ ಹೊಂದಾಣಿಕೆಯ ವಾತಾವರಣ ಮತ್ತು ಪ್ರೋತ್ಸಾಹದಾಯಕ ವಾತಾವರಣವನ್ನು ಹೊಂದಿರಬೇಕು. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನಿಯಮಗಳು ಮತ್ತು ನಿಬಂಧನೆಗಳು, ಉತ್ತಮ ಗುಣಮಟ್ಟದ ಮೂಲಸೌಕರ್ಯ ಮತ್ತು ನೀತಿಗಳು ಮತ್ತು ಉದ್ದೇಶಗಳ ಅಗತ್ಯವಿದೆ. ಕೇವಲ ನೀತಿಯಿಂದಲೇ ಎಲ್ಲವೂ ಸಾಧ್ಯವಾಗದು. ನೀತಿ ನಿಜವಾಗಿಯೂ ಉತ್ತಮವಾಗಿದ್ದರೂ, ಆದರೆ ಉದ್ದೇಶ ಅಥವಾ ಇಚ್ಛಾಶಕ್ತಿ ಇಲ್ಲದಿದ್ದರೂ, ಇಡೀ ಯೋಜನೆ ದುರ್ಬಲಗೊಳ್ಳುತ್ತದೆ. ಭರೂಚ್ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ? ಸಂಜೆ ಯಾರಾದರೂ 'ಪಂಚ ಬಟ್ಟಿ'ಗೆ ಭೇಟಿ ನೀಡಬೇಕಾದಾಗ, ಅಲ್ಲಿ ಇದ್ದ ಸಮಸ್ಯೆಗಳ ಬಗ್ಗೆ ನಿಮಗೆಲ್ಲರಿಗೆ ತಿಳಿದಿದೆ. ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ನಿಮಗೆ ಚೆನ್ನಾಗಿ ತಿಳಿದಿದೆ. ಯಾರನ್ನಾದರೂ ಅಪಹರಿಸುವ ಅಥವಾ ಮನೆಯನ್ನು ಖಾಲಿ ಮಾಡುವಂತೆ ಬೆದರಿಕೆಗಳನ್ನು ಹಾಕುವ ದಿನಗಳಿದ್ದವು. ಆದರೆ ಇಂದು ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯು ಭರೂಚ್ ನ ಜನರಿಗೆ ಶಾಂತಿಯುತವಾಗಿ ಬದುಕಲು ಅನುವು ಮಾಡಿಕೊಟ್ಟಿದೆ.
ಮತ್ತು ಪ್ರತಿಯೊಬ್ಬರೂ ಅದರ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ, ಹೌದಲ್ಲವೇ?. ಮೊದಲು ಕೆಲವರು ಪ್ರಯೋಜನವನ್ನು ಪಡೆಯುತ್ತಿದ್ದರು ಆದರೆ ಈಗ ಅದು ಹಾಗಲ್ಲ. ಶಾಂತಿಯುತ ಜೀವನ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ಮಾತನಾಡುವಾಗ, ನಮ್ಮ ಬುಡಕಟ್ಟು ಸಹೋದರರು ಮತ್ತು ಬಡವರು ಅದರ ಗರಿಷ್ಠ ಪ್ರಯೋಜನವನ್ನು ಪಡೆಯುತ್ತಾರೆ. ಭರೂಚ್ ನಲ್ಲಿ, ಬುಡಕಟ್ಟು ಹುಡುಗಿಯರಿಗೆ ಕೆಲಸ ನೀಡಿದ ನಂತರ ಅವರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿತ್ತು ಎಂಬುದರ ಬಗ್ಗೆ ನಮಗೆಲ್ಲರಿಗೂ ಚೆನ್ನಾಗಿ ತಿಳಿದಿದೆ. ಇದರ ಪರಿಣಾಮವಾಗಿ, ಬುಡಕಟ್ಟು ಜನರು ಅವರ ವಿರುದ್ಧ ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದರು. ಆದರೆ ನಂತರ ನಾನು ನಮ್ಮ ಬುಡಕಟ್ಟು ಸಹೋದರ, ಸಹೋದರಿಯರ ಬೆಂಬಲವನ್ನು ಪಡೆದಾಗ, ಅವರು ನನ್ನ ಮೇಲೆ ತಮ್ಮ ಆಶೀರ್ವಾದಗಳ ಮಳೆಗರೆಯುತ್ತಲೇ ಇದ್ದರು. ಒಂದು ಕಾಲದಲ್ಲಿ ಆರೋಗ್ಯ ಸೌಲಭ್ಯಗಳು ಇಲ್ಲಿ ಲಭ್ಯವಿರಲಿಲ್ಲ. ಆಸ್ಪತ್ರೆಗಳಿಗಾಗಿ ಸೂರತ್ ಅಥವಾ ಬರೋಡಾಗೆ ಹೋಗಬೇಕಾಗಿತ್ತು. ನರ್ಮದಾ ಮಾತೆಯ ದಡದಲ್ಲಿ ವಾಸಿಸುತ್ತಿದ್ದರೂ, ನಾವು ನೀರಿಗಾಗಿ ಹಾತೊರೆಯಬೇಕಾಗಿತ್ತು. ಅಂತಹ ಶೋಚನೀಯ ದಿನಗಳನ್ನು ನಾನು ನೋಡಿದ್ದೇನೆ. ವರ್ಷಗಳ ಹಿಂದೆ ಭರೂಚ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ತು ಎಂದು ನನಗೆ ಇನ್ನೂ ನೆನಪಿದೆ. ಇದಲ್ಲದೆ, ಭರೂಚ್ ಜಿಲ್ಲೆಯಲ್ಲಿ ಅನೇಕ ಧಾರ್ಮಿಕ ಸ್ಥಳಗಳಿವೆ. ನರ್ಮದಾ ನದಿಯ ಉಪಸ್ಥಿತಿಯ, ಹಾಜರಾತಿಯ ಹೊರತಾಗಿಯೂ, ಜನರು ಅದನ್ನು ಅಭಿವೃದ್ಧಿಪಡಿಸಲು ಹಿಂಜರಿಯುತ್ತಿದ್ದರು. ಭಾರತದ ಆತ್ಮವನ್ನು ಕೊಲ್ಲುವ ಪ್ರಯತ್ನವೂ ನಡೆಯಿತು. ಸಹೋದರರೇ ಮತ್ತು ಸಹೋದರಿಯರೇ, ಇದೆಲ್ಲವೂ ಸುಮಾರು 20 ವರ್ಷಗಳ ಹಿಂದಿನ ಮಾತು. 20-25 ವರ್ಷ ವಯಸ್ಸಿನ ಯುವಕರಿಗೆ ಅದರ ಬಗ್ಗೆ ತಿಳಿದಿಲ್ಲದೇ ಇರುವುದು ಸ್ವಾಭಾವಿಕ. ಆದರೆ ನೀವು ನಿಮ್ಮ ಸೇವೆ ಮಾಡಲು ನನಗೆ ಒಂದು ಅವಕಾಶವನ್ನು ನೀಡಿದಾಗ, ನಾವು ಪ್ರತಿಯೊಂದು ಸಮಸ್ಯೆಯನ್ನು ಗಮನಿಸಿದ್ದೇವೆ ಮತ್ತು ಸಮಸ್ಯೆಗಳನ್ನು ಪರಿಹರಿಸುತ್ತಲೇ ಇದ್ದೆವು. ನಾವು ಪರಿಹಾರಗಳನ್ನು ಹುಡುಕಲು ಪ್ರಾರಂಭಿಸಿದೆವು ಮತ್ತು ಪರಿಸ್ಥಿತಿ ಉತ್ತಮವಾಗಿ ಬದಲಾಗಲು ಪ್ರಾರಂಭಿಸಿತು. ಕಾನೂನು ಮತ್ತು ಸುವ್ಯವಸ್ಥೆಯ ವಿಷಯಕ್ಕೆ ಬಂದಾಗ, ದೊಡ್ಡ ಅಪರಾಧಿಗಳು ಮತ್ತು ಭಾರಿ ಅಪರಾಧಗಳನ್ನು ಮಾಡುತ್ತಿದ್ದವರನ್ನು ಜೈಲಿಗೆ ತಳ್ಳಲಾಯಿತು. ಕ್ರಮೇಣ ಅವರು ಸರಿಯಾದ ಮಾರ್ಗದಲ್ಲಿ ನಡೆಯಬೇಕು ಎಂಬುದನ್ನು ಅರಿತುಕೊಂಡರು. ಆದ್ದರಿಂದ, ಇಂದಿನ ಗುಜರಾತಿನ ಮಕ್ಕಳಿಗೆ 'ಕರ್ಫ್ಯೂ' ಎಂಬ ಪದ ತಿಳಿದಿಲ್ಲ. ಇಲ್ಲದಿದ್ದರೆ, ಭರೂಚ್ ನಲ್ಲಿ ಆಗಾಗ್ಗೆ ಕರ್ಫ್ಯೂ ವಿಧಿಸಲಾಗುತ್ತಿತ್ತು. ಮತ್ತು ಇಂದಿನ ಮಹಿಳೆಯರಿಗೆ ತಮ್ಮ ಮನೆಯ ಹಿರಿಯರು ಈ ಹಿಂದೆ ಗಾರ್ಬಾ ಆಡಲು ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು ಎಂಬುದೂ ಸಹ ತಿಳಿದಿಲ್ಲ. ಇಂದು ಗುಜರಾತಿನಲ್ಲಿ, ಬರೋಡಾದ ಶಾಲೆಗಳು ಮತ್ತು ಕಾಲೇಜುಗಳಿಗೆ ಬಾಲಕಿಯರಿಗೆ ಸುರಕ್ಷಿತವಾಗಿ ಹೋಗಲು ಸಾಧ್ಯವಾಗುತ್ತದೆ. ಶಿಕ್ಷಣಕ್ಕಾಗಿ ರಾಜ್ಯದ ವಿವಿಧ ಸ್ಥಳಗಳಿಗೆ ಪ್ರಯಾಣಿಸಲು ಸಾಧ್ಯವಾಗುತ್ತಿದೆ. ಈಗ ಭರೂಚ್ ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿಯೂ ಅದ್ಭುತ ಅಭಿವೃದ್ಧಿ ಸಾಧಿಸಿದೆ. ಒಬ್ಬ ಹುಡುಗಿ ತಡರಾತ್ರಿಯವರೆಗೆ ಕೆಲಸ ಮಾಡಲು ಬಯಸಿದರೆ ಮತ್ತು ರೈಲ್ವೆ ನಿಲ್ದಾಣ ಅಥವಾ ಬಸ್ ನಿಲ್ದಾಣದಿಂದ ಮನೆಗೆ ಹೋಗಲು ಬಯಸಿದರೆ, ಆಕೆಯ ಮನಸ್ಸಿನಲ್ಲಿ ಭಯದ ಯಾವುದೇ ಕುರುಹು, ಶಂಕೆ ಇರುವುದಿಲ್ಲ. ನಾವೆಲ್ಲರೂ ಆ ಪರಿಸ್ಥಿತಿಯನ್ನು ಸೃಷ್ಟಿಸಿದ್ದೇವೆ. ಇದೀಗ ಇಲ್ಲಿ ರಾಷ್ಟ್ರೀಯ ಕ್ರೀಡಾ ಉತ್ಸವ ನಡೆಯುತ್ತಿದೆ. ದೇಶಾದ್ಯಂತದ ಸಾವಿರಾರು ಆಟಗಾರರು ಪ್ರಸ್ತುತ ಗುಜರಾತ್ ನಲ್ಲಿ ಉಪಸ್ಥಿತರಿದ್ದಾರೆ. ಆಟವನ್ನು ಮುಗಿಸಿದ ನಂತರ, ಅವರು ಸಂಜೆ ಗಾರ್ಬಾವನ್ನು ನೋಡಲು ಹೋದಾಗ, ಇಡೀ ರಾತ್ರಿ ಆಚರಣೆಗಳನ್ನು ನೋಡಿ ಅವರು ಮಂತ್ರಮುಗ್ಧರಾಗುತ್ತಾರೆ. ಅಲ್ಲಿ ರಾತ್ರಿಯೇ ಇಲ್ಲವೆಂಬಂತೆ ಭಾಸವಾಗುತ್ತದೆ. ಸಹೋದರ ಸಹೋದರಿಯರೇ, ಭರೂಚ್ ಅನ್ನು ಅಭಿವೃದ್ಧಿಪಡಿಸಬೇಕಾದರೆ ಔದ್ಯಮಿಕ ಅಭಿವೃದ್ಧಿ ಅತ್ಯಗತ್ಯವಾಗಿತ್ತು. ಮತ್ತು ಈ ಸಮಯದಲ್ಲಿ ಬರೋಡಾ-ವಾಪಿ ಮುಖ್ಯ ಹೆದ್ದಾರಿಯಾಗಿತ್ತು. ಹತ್ತಿರದ ಕೆಲವು ಕಾರ್ಖಾನೆಗಳನ್ನು ನೋಡಿ ಜನರು ಹರ್ಷೋದ್ಗಾರ ಮಾಡುತ್ತಿದ್ದರು ಮತ್ತು ಅದನ್ನು ಕೈಗಾರಿಕಾ ಅಭಿವೃದ್ಧಿ ಎಂದು ಭಾವಿಸುತ್ತಿದ್ದರು. ಆದರೆ ನಾವು ಅಭಿವೃದ್ಧಿಪಡಿಸಬೇಕಾದ ಮತ್ತು ಅಭಿವೃದ್ಧಿ ಹೊಂದದೇ ಇರುವ ಪ್ರದೇಶಗಳ ಕೆಲವು ಪಾಕೆಟ್ ಗಳಿವೆ ಎಂಬುದನ್ನು ಗಮನಿಸಿದ್ದೆವು. ಮತ್ತು ಬುಡಕಟ್ಟು ಪ್ರದೇಶಗಳನ್ನು ಅಭಿವೃದ್ಧಿಪಡಿಸಲು, ನಾವು ಕೈಗಾರಿಕಾ ಅಭಿವೃದ್ಧಿಯನ್ನು ಜಗಾಡಿಯಾಗೆ ತಂದಿದ್ದೇವೆ. ನಾವು ಕೈಗಾರಿಕೆಗಳನ್ನು ಒಣ ಪ್ರದೇಶಗಳಿಗೆ ಕೊಂಡೊಯ್ದೆವು, ಇದರಿಂದಾಗಿ ಕೃಷಿ ಭೂಮಿ ಸುರಕ್ಷಿತವಾಗಿ ಉಳಿಯಿತು ಮತ್ತು ಅದೇ ಸಮಯದಲ್ಲಿ ಕೈಗಾರಿಕಾ ಅಭಿವೃದ್ಧಿಯೂ ನಡೆಯಿತು. ಮತ್ತು ಇಂದು ಗುಜರಾತ್ ಉತ್ಪಾದನಾ ಕೇಂದ್ರ ಮತ್ತು ರಫ್ತು ಕೇಂದ್ರವಾಗಿ ಮಾರ್ಪಟ್ಟಿದೆ. ಎರಡು ದಶಕಗಳ ಹಿಂದೆ, ಯಾರೂ ಅದನ್ನು ಊಹಿಸಿರಲಿಲ್ಲ. ಆಧುನಿಕ ಹೆದ್ದಾರಿಗಳ ವಿಷಯಕ್ಕೆ ಬಂದಾಗ ಇಂದು, ದಹೇಜ್-2, ದಹೇಜ್-3, ಸೈಖಾ, ವಿಲಾಯತ್ ಗಳು ಅಭಿವೃದ್ಧಿಯ ಹೊಸ ಬಾಗಿಲುಗಳಾಗಿವೆ. ರೋ-ರೋ ಫೆರ್ರಿ ಸೇವೆಯು ಅಭಿವೃದ್ಧಿಯ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ದಹೇಜ್ ವಿಶೇಷ ಹೂಡಿಕಾ ವಲಯವಾಗಿದೆ. ಅದರ ಶಕ್ತಿ ಈಗ ಹಲವಾರು ಪಟ್ಟು ವಿಸ್ತರಿಸಲಿದೆ. ಇದೇ ವೇಳೆ, ಗುಜರಾತ್ ಸರ್ಕಾರದ ಉದಾರ ನೀತಿಗಳ ಪ್ರಯೋಜನಗಳನ್ನು ಪಡೆಯಲಾಗುತ್ತಿದೆ. ಮತ್ತು ಪೆಟ್ರೋಲಿಯಂ, ರಾಸಾಯನಿಕ ಮತ್ತು ಪೆಟ್ರೋ-ರಾಸಾಯನಿಕ ಕ್ಷೇತ್ರದಲ್ಲಿ ನಡೆಯುತ್ತಿದ್ದ ಕೆಲಸದ ಪ್ರಯೋಜನಗಳನ್ನು ನಾವು ವಿಶೇಷವಾಗಿ ಪಡೆಯುತ್ತಿದ್ದೇವೆ. ಕ್ರಮೇಣ, ಸಾವಿರಾರು ಕೋಟಿ ರೂಪಾಯಿಗಳ ಮುದ್ರಾ ಹೂಡಿಕೆಯು ಮತ್ತು ವಿಶ್ವದಾದ್ಯಂತದಿಂದ ಹೂಡಿಕೆಯು ದಹೇಜ್ ಮತ್ತು ಇಡೀ ಭರೂಚ್ ಜಿಲ್ಲೆಗೆ ಹರಿದುಬಂದಿದೆ, ಸಹೋದರರೇ. ಮತ್ತು 80 ಪ್ರತಿಶತದಷ್ಟು ಉತ್ಪಾದನೆಯು ವಿಶ್ವದ ಇತರ ದೇಶಗಳಿಗೂ ಹೋಗುತ್ತದೆ. ನಾವು ಕಷ್ಟಪಟ್ಟು ಕೆಲಸ ಮಾಡುತ್ತೇವೆ ಮತ್ತು ಹಣ ಅಥವಾ ಲಾಭವು ಡಾಲರ್ ಗಳಲ್ಲಿ ಹಿಂತಿರುಗುತ್ತದೆ. ಇದು ದಹೇಜ್ ಮತ್ತು ಭರೂಚ್ ಜಿಲ್ಲೆಯು ನೀಡುತ್ತಿರುವ ಪ್ರಮುಖ ಕೊಡುಗೆಯಾಗಿದೆ. ಇಂದು, ದಹೇಜ್ ಇಡೀ ದೇಶಕ್ಕೆ ಮತ್ತು ರಾಸಾಯನಿಕ ಮತ್ತು ಪೆಟ್ರೋಲಿಯಂಗೆ ಸಂಬಂಧಿಸಿದ ಇಡೀ ವಲಯಕ್ಕೆ ಮಾದರಿಯಾಗಿದೆ.
ಸಹೋದರರೇ ಸಹೋದರಿಯರೇ,
ಇಂದು ಪ್ರಾರಂಭಿಸಲಾದ ಹೊಸ ಯೋಜನೆಗಳು ನನ್ನ ಗುಜರಾತ್ ನ ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ನನ್ನ ಭರೂಚ್ ಜಿಲ್ಲೆಯನ್ನು ಅತ್ಯಂತ ರೋಮಾಂಚಕವಾಗಿಸಿವೆ. ಮತ್ತು ಇಲ್ಲಿ ಅಭಿವೃದ್ಧಿಪಡಿಸಲಾದ ಹೊಸ ಸ್ಥಾವರಗಳನ್ನು ಗಣನೆಗೆ ತೆಗೆದುಕೊಂಡರೆ, ಈ ಡಬಲ್ ಎಂಜಿನ್ ಸರ್ಕಾರವು ಡಬಲ್ ಪ್ರಯೋಜನಗಳಿಗೆ ಪರಿಪೂರ್ಣ ಉದಾಹರಣೆಯಾಗಿದೆ. ಗುಜರಾತ್ ಮತ್ತು ಕೇಂದ್ರ ಸರ್ಕಾರದ ಕಂಪನಿಗಳು ಸಹ ಈ ರಾಸಾಯನಿಕ ಘಟಕಗಳಲ್ಲಿ, ಸ್ಥಾವರಗಳಲ್ಲಿ ಭಾಗವಹಿಸುತ್ತಿವೆ. ಇಲ್ಲಿ ಸ್ಥಾಪಿಸಲಾಗುತ್ತಿರುವ ರಾಸಾಯನಿಕ ಉತ್ಪಾದನಾ ಕೈಗಾರಿಕೆಗಳು ಜವಳಿ ಉದ್ಯಮಕ್ಕೂ ಪ್ರಯೋಜನಕಾರಿಯಾಗಲಿವೆ. ಜವಳಿ ಉದ್ಯಮವು ಪ್ರಯೋಜನವನ್ನು ಪಡೆದರೆ, ಹತ್ತಿಯನ್ನು ಉತ್ಪಾದಿಸುವ ರೈತನೂ ಸಹ ಪ್ರಯೋಜನ ಪಡೆಯುತ್ತಾನೆ ಎಂದು ನಿಮಗೆ ಚೆನ್ನಾಗಿ ತಿಳಿದಿದೆ. ಈ ವಲಯವು ಅತಿ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ನಮ್ಮ ನೇಕಾರ ಸಹೋದರ ಸಹೋದರಿಯರು ಇದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತಾರೆ. ರಸಗೊಬ್ಬರಗಳಿಗೂ ಇದು ಅನ್ವಯಿಸುತ್ತದೆ. ಮತ್ತು ನಾವು ರಸಗೊಬ್ಬರಗಳಿಗೆ ಹೆಸರುವಾಸಿಯಾಗಿದ್ದೇವೆ. ಭರೂಚ್ ನಲ್ಲಿ ಉತ್ಪಾದಿಸಲಾದ ಅಗತ್ಯ ರಾಸಾಯನಿಕಗಳು ಮತ್ತು ರಸಗೊಬ್ಬರಗಳು ದೇಶದಾದ್ಯಂತ ತಲುಪುತ್ತವೆ. ಜಿಎಸಿಎಲ್ ರಾಸಾಯನಿಕ ಸ್ಥಾವರದಿಂದಾಗಿ, 700 ಕೋಟಿ ರೂ.ಗಳ ವಿದೇಶಿ ವಿನಿಮಯದೊಂದಿಗೆ 2500 ಕೋಟಿ ರೂ.ಗಳಿಗೂ ಹೆಚ್ಚು ಹೊಸ ವಹಿವಾಟು ನಡೆಯಲಿದೆ. ಇದು ದೇಶಕ್ಕೆ ದೊಡ್ಡ ಸೇವೆಯಾಗಲಿದೆ. ಇದು ಒಂದು ರೀತಿಯಲ್ಲಿ ದೇಶಭಕ್ತಿಯ ಕಾರ್ಯ. ಮತ್ತು ಭರೂಚ್ ಅದನ್ನೇ ಮಾಡುತ್ತಿದೆ. ಭರೂಚ್ ಗೆ ಬಂದರೆ, ಇಂದು ದೇಶವನ್ನು ತ್ವರಿತ ಗತಿಯಲ್ಲಿ ಮುನ್ನಡೆಸಬೇಕಾದರೆ ಪ್ರತಿಯೊಬ್ಬ ನಾಗರಿಕನೂ ದೊಡ್ಡ ಕೊಡುಗೆಯನ್ನು ನೀಡಲು ಸಾಧ್ಯವಿದೆ ಎಂದು ನಾನು ನಿಮಗೆ ನೆನಪಿಸಲು ಬಯಸುತ್ತೇನೆ. ಸಾಮಾನ್ಯ ನಾಗರಿಕರು ದೇಶವನ್ನು ಮುಂದೆ ಕೊಂಡೊಯ್ಯಬಹುದು. ಒಬ್ಬ ವ್ಯಕ್ತಿಯು ತನಗಾಗಿ ಶ್ರಮಿಸುತ್ತಿದ್ದರೆ, ಅವನು ದೇಶವನ್ನು ಹೇಗೆ ಮುಂದಕ್ಕೆ ಕೊಂಡೊಯ್ಯುತ್ತಾನೆ ಎಂದು ನೀವು ಈಗ ಆಶ್ಚರ್ಯ ಪಡುತ್ತಿರಬಹುದು? 'ವೋಕಲ್ ಫಾರ್ ಲೋಕಲ್' ಎಂಬ ಮಂತ್ರವನ್ನು ತೆಗೆದುಕೊಳ್ಳೋಣ. ಯಾವುದೇ ರೀತಿಯ ವಿದೇಶಿ ಉತ್ಪನ್ನದಿಂದ ದೂರವಿರಲು ಒಬ್ಬರು ನಿರ್ಧರಿಸಬಹುದು. ದೀಪಾವಳಿ ಇನ್ನೇನು ಹತ್ತಿರದಲ್ಲಿದೆ. ಆಕಾಶವನ್ನು ಬೆಳಗಿಸುವ ಪಟಾಕಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ ಅವು ವಿದೇಶಿ ನಿರ್ಮಿತ. ಇವು ನಮ್ಮ ದೇಶದ ಹಲವಾರು ಬಡ ಜನರ ಕಠಿಣ ಪರಿಶ್ರಮವನ್ನು ಹಾಳುಮಾಡುತ್ತವೆ. ಆದರೆ ನಾವು 'ಭಾರತದಲ್ಲಿ ತಯಾರಿಸಿದ' ಪಟಾಕಿಗಳನ್ನು ಖರೀದಿಸಿದರೆ, ಬಹುಶಃ ಅವುಗಳ ಬೆಳಕು, ಹೊಳಪು ಅಥವಾ ಶಬ್ದವು ಸ್ವಲ್ಪ ಕಡಿಮೆಯಾಗಿರಬಹುದು ಆದರೆ ನಿಮ್ಮ ಈ ಮನೋಭಾವವು ನನ್ನ ಬಡ ಸಹೋದರರ ಮನೆಗಳನ್ನು ಬೆಳಗಿಸುತ್ತದೆ. ಆ ಪಟಾಕಿಗಳು ಆಕಾಶವನ್ನು ಹೆಚ್ಚು ಕಾಲ ಬೆಳಗಿಸಬಹುದು ಅಥವಾ ಬೆಳಗಿಸದೇ ಇರಬಹುದು ಆದರೆ ಬಡವರ ಮುಂಬರುವ 12 ತಿಂಗಳುಗಳು ಬೆಳಕಿನಲ್ಲಿ ಬೆಳಗುತ್ತವೆ. ಹಾಗಾದರೆ ನಾವು ಭಾರತೀಯ ಸರಕುಗಳನ್ನು ಏಕೆ ಖರೀದಿಸಬಾರದು? ಇಲ್ಲಿ ಒಂದೇ ಕಾರ್ಖಾನೆಯಿಂದ 700 ಕೋಟಿ ರೂ.ಗಳನ್ನು ಉಳಿಸಬಹುದು. ನನ್ನ ಭರೂಚ್ ಜಿಲ್ಲೆಯ ನಾಗರಿಕರು ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕು. ಅವರು ಕೂಡ ನನ್ನ ದೇಶದ ಬಂಡವಾಳವನ್ನು ಈ ರೀತಿಯಾಗಿ ಉಳಿಸಬಹುದು.
ಸಹೋದರರೇ ಮತ್ತು ಸಹೋದರಿಯರೇ,
ನೀವು ಒಂದು ವಿಷಯವನ್ನು ತಿಳಿದುಕೊಂಡರೆ ಸಂತೋಷಪಡುತ್ತೀರಿ. 2014 ರಲ್ಲಿ, ನೀವು ನನ್ನನ್ನು ನಿಮ್ಮ ಆಶೀರ್ವಾದದೊಂದಿಗೆ ದೆಹಲಿಗೆ ಕಳುಹಿಸಿದ್ದೀರಿ. ನಿಮ್ಮ ಆಶೀರ್ವಾದ ಮತ್ತು ಮೌಲ್ಯಗಳ ಜೊತೆಗೆ ಗುಜರಾತ್ ನಲ್ಲಿ ಈ ಹಿಂದೆ ಮಾಡಿದ ಕೆಲಸದ ಅನುಭವವನ್ನು ನಾನು ಹೊಂದಿದ್ದೇನೆ. ಆದ್ದರಿಂದ 2014 ರಲ್ಲಿ ನಾನು ದೆಹಲಿಗೆ ಹೋದಾಗ, ವಿಶ್ವ ಆರ್ಥಿಕತೆಯ ವಿಷಯದಲ್ಲಿ ಭಾರತವು 10 ನೇ ಸ್ಥಾನದಲ್ಲಿತ್ತು. ಇಂದು ಭಾರತ 5ನೇ ಸ್ಥಾನಕ್ಕೆ ತಲುಪಿದೆ. ಇದಲ್ಲದೆ, ಶ್ರೇಯಾಂಕವು 6 ರಿಂದ 5 ಕ್ಕೆ ಏರಿದಾಗ ದೇಶದ ಹೆಮ್ಮೆ ಮತ್ತು ವೈಭವವು ಅನೇಕ ಪಟ್ಟು ಬೆಳೆಯಿತು, ಏಕೆಂದರೆ 250 ವರ್ಷಗಳ ಕಾಲ ನಮ್ಮನ್ನು ಆಳಿದ ದೇಶವು ಈ ಹಿಂದೆ 5 ನೇ ಸ್ಥಾನದಲ್ಲಿತ್ತು. ಈಗ ಅವರನ್ನು ಹಿಂದಿಕ್ಕಿ, ನನ್ನ ದೇಶದ ಈ ಉತ್ಸಾಹಿ ಯುವಕರು ನನ್ನ ದೇಶವನ್ನು ಮುಂದೆ ಕೊಂಡೊಯ್ದಿದ್ದಾರೆ. ಮತ್ತು ಯುವ ಪೀಳಿಗೆ, ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು, ಸಣ್ಣ ನವೋದ್ಯಮಗಳು ಇಂದು ಈ ಸಾಧನೆಗೆ ಕಾರಣವಾಗಿವೆ. ಮತ್ತು ದೇಶವನ್ನು 10 ರಿಂದ 5 ನೇ ಸ್ಥಾನಕ್ಕೆ ಕೊಂಡೊಯ್ದ ಕೀರ್ತಿ ನಿಮ್ಮ ಕಠಿಣ ಪರಿಶ್ರಮಕ್ಕೆ ಸಲ್ಲುತ್ತದೆ. ಮತ್ತು ದೇಶದ ಅಂತಹ ಕಠಿಣ ಪರಿಶ್ರಮಿ ಜನರಿಗೆ ನಾನು ನಮಸ್ಕರಿಸುತ್ತೇನೆ.
ಸಹೋದರರೇ ಮತ್ತು ಸಹೋದರಿಯರೇ,
ಭರೂಚ್ ನಲ್ಲಿ ಮತ್ತೊಂದು ಕೆಲಸ ನಡೆಯುತ್ತಿದೆ, ಅದರ ಬಗ್ಗೆ ನಾವು ಹೆಮ್ಮೆ ಪಡಬಹುದು. ಈ ಹಿಂದೆ ಪ್ರಯಾಣಿಕರಿಗೆ ಕುಡಿಯುವ ನೀರನ್ನು ನೀಡಲು ಯಾರಾದರೂ ಸ್ಥಳವನ್ನು ಸೃಷ್ಟಿಸುತ್ತಿದ್ದರೆ, ಜನರು ತಲೆಮಾರುಗಳಿಂದ ಆ ಮನೋಭಾವವನ್ನು, ದಾನಪ್ರವೃತ್ತಿಯನ್ನು ನೆನಪಿಸಿಕೊಳ್ಳುತ್ತಿದ್ದರು ಎಂಬುದು ನಮಗೆ ತಿಳಿದಿದೆ. ಯಾರಿಗಾದರೂ ಅಲ್ಲಿ ಅವನ ಅಥವಾ ಅವಳ ಬಾಯಾರಿಕೆಯನ್ನು ತಣಿಸಲು ಸಾಧ್ಯವಾದರೆ, ಅವರು ಆಶೀರ್ವಾದಗಳ ಮಳೆಗರೆಯುತ್ತಿದ್ದರು, ಏಕೆಂದರೆ ಅದು ಜೀವನಕ್ಕೆ ಅತ್ಯವಶ್ಯ. ಅಂತೆಯೇ ಇಂದು ಭಾರತ ಸರ್ಕಾರವು ಜನರ ಜೀವಗಳನ್ನು ಉಳಿಸುವ ಔಷಧಗಳ ಉತ್ಪಾದನೆಗಾಗಿ ಒಂದು ಬೃಹತ್ ಪಾರ್ಕ್ ಸ್ಥಾಪಿಸುತ್ತಿದೆ. ಆದ್ದರಿಂದ, ಭರೂಚ್ ನ ಜನರು ದೊಡ್ಡ ಮಾನವೀಯ ಕೆಲಸವನ್ನು ಮಾಡುತ್ತಿದ್ದಾರೆ. ನಿಮ್ಮಿಂದಾಗಿ ಅಸಂಖ್ಯಾತ ಜೀವಗಳು ಉಳಿಯಲಿವೆ ಎಂಬ ಭಾವನೆಯಿಂದ ನೀವು ಹೆಮ್ಮೆ ಪಡುತ್ತೀರಿ. ಇದಲ್ಲದೆ, ಸಾವಿರಾರು ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ. ಕೊರೋನಾ ಬಿಕ್ಕಟ್ಟು ಇಡೀ ಜಗತ್ತನ್ನು ಆವರಿಸಿದ ರೀತಿಯನ್ನು ನಾವು ನೋಡಿದ್ದೇವೆ. ಅದೆಷ್ಟು ದೊಡ್ಡ ಬಿಕ್ಕಟ್ಟೊಂದು ನಮ್ಮನ್ನು ಬಾಧಿಸಿತ್ತು! ಎಲ್ಲರಿಗೂ ಒಂದೇ ಒಂದು ಪ್ರಶ್ನೆ ಇತ್ತು - 'ಈ ಬಿಕ್ಕಟ್ಟಿನಲ್ಲಿ ಹೇಗೆ ಬದುಕುವುದು ?' ಆಗ ನಾವು ಈ ಫಾರ್ಮಾ (ಔಷಧ ತಯಾರಿಕಾ) ಕ್ಷೇತ್ರವು ಎಷ್ಟು ಮುಖ್ಯ ಎಂದು ಅರಿತುಕೊಂಡೆವು! ಮತ್ತು ಕಳೆದ ಎರಡು ದಶಕಗಳಲ್ಲಿ ಗುಜರಾತ್ ಮಾಡಿದ ಜಿಗಿತ ಮತ್ತು ಈ ವ್ಯವಸ್ಥೆಯು ಕೊರೊನಾ ವಿರುದ್ಧದ ಯುದ್ಧದಲ್ಲಿ ಹೋರಾಡಲು ಗುಜರಾತಿಗೆ ಸಹಾಯ ಮಾಡಿದೆ. ಗುಜರಾತಿನಲ್ಲಿ ತಯಾರಿಸಿದ ಔಷಧಿಗಳು ಮತ್ತು ಲಸಿಕೆಗಳು ಲಕ್ಷಾಂತರ ಜನರ ಜೀವಗಳನ್ನು ಉಳಿಸಿವೆ. ಇಂದು ದೇಶದ 25 ಪ್ರತಿಶತದಷ್ಟು ಫಾರ್ಮಾ ಕಂಪನಿಗಳು ಗುಜರಾತ್ ನಿಂದ ಬಂದಿರುವಂತಹವು ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಇಂದು ನಿಮ್ಮೊಂದಿಗೆ ಮಾತನಾಡುವಾಗ, ಭರೂಚ್ ನ ಅಭಿವೃದ್ಧಿಯನ್ನು ನಿಲ್ಲಿಸಲು ಕೆಲವರು ಸಾಧ್ಯವಿರುವ ಎಲ್ಲವನ್ನೂ ಮಾಡಿದ ಆ ದಿನಗಳನ್ನು ಸಹ ನಾನು ನೆನಪಿಸಿಕೊಳ್ಳುತ್ತೇನೆ. ಭರೂಚ್-ಅಂಕಲೇಶ್ವರದಲ್ಲಿ ಕೈಗಾರಿಕೆಗಳ ವಿಸ್ತರಣೆಗೆ ಹಲವಾರು ಅಡೆತಡೆಗಳು ಮತ್ತು ಅಡ್ಡಿಗಳನ್ನು ತಂದೊಡ್ಡಲಾಯಿತು. ಆದರೆ ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾದಾಗ ಗುಜರಾತ್ ಗೆ 'ನರೇಂದ್ರ-ಭೂಪೇಂದ್ರ' ಎಂಬ ಡಬಲ್ ಎಂಜಿನ್ ಶಕ್ತಿ ದೊರೆಯಿತು ಮತ್ತು ನಂತರ ನಾವು ಈ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಿದೆವು. ಸಹೋದರರೇ, ನಿಮ್ಮ ಕಠಿಣ ಪರಿಶ್ರಮದ ಶಕ್ತಿಯನ್ನು ನೋಡಿ. ಈ ಮೊದಲು ಕೆಲವರು ಭದ್ಭುತ್ ಬ್ಯಾರೇಜ್ ನ ಕೆಲಸವನ್ನು ನಿಲ್ಲಿಸಲು ಪ್ರಯತ್ನಿಸಿದರು. ಭರೂಚ್ ಗಾಗಿ ಕೆಲಸ ಮಾಡಲಾಗುತ್ತಿದೆ, ಇದರಿಂದಾಗಿ ಇಲ್ಲಿ ವಾಸಿಸುವ ಜನರು 24 ಗಂಟೆಗಳ ಕಾಲ ಕುಡಿಯುವ ನೀರನ್ನು ಪಡೆಯಬಹುದು ಮತ್ತು ಭರೂಚ್ ಜಿಲ್ಲೆಯ ಹೊಲಗಳಿಗೆ ನೀರುಣಿಸಬಹುದು. ಅದರಲ್ಲಿಯೂ ಒಂದು ಅಡೆತಡೆ ಇತ್ತು. ನಕ್ಸಲೀಯ ಮನೋಭಾವದ ಕೆಲವು ಜನರು ಸರ್ದಾರ್ ಸರೋವರ್ ಅಣೆಕಟ್ಟು ನಿರ್ಮಾಣವನ್ನು ನಿಲ್ಲಿಸಲು ಮೊದಲು ಶ್ರಮಿಸಿದ್ದರು, ಮತ್ತು ನಂತರ ಈ ನಗರ ನಕ್ಸಲರು ಈ ಯೋಜನೆಯನ್ನು ಹೊಸ ರೂಪದಲ್ಲಿ ತಡೆಯಲು ಪ್ರಯತ್ನಿಸುತ್ತಿದ್ದರು. ಅವರು ತಮ್ಮ ಉಡುಗೆ ತೊಡುಗೆಗಳು ಮತ್ತು ರೂಪವನ್ನು ಬದಲಾಯಿಸಿ ಉತ್ಸಾಹೀ ಯುವಕರ ಒಂದು ವಿಭಾಗವನ್ನು ಆಕರ್ಷಿಸುತ್ತಿದ್ದಾರೆ. ಬಂಗಾಳದಲ್ಲಿ ಪ್ರಾರಂಭವಾಗಿ ನಂತರ ಜಾರ್ಖಂಡ್, ಬಿಹಾರ, ಛತ್ತೀಸ್ ಗಢ, ಮಧ್ಯಪ್ರದೇಶದ ಕೆಲವು ಭಾಗಗಳು, ಒಡಿಶಾ, ಆಂಧ್ರ, ತೆಲಂಗಾಣ ಮತ್ತು ಮಹಾರಾಷ್ಟ್ರದ ಗಡ್ ಚಿರೋಲಿಗೆ ಹರಡಿದ್ದ ನಕ್ಸಲಿಸಂ ನಮ್ಮ ಬುಡಕಟ್ಟು ಯುವಕರ ಜೀವನವನ್ನು ನಾಶಪಡಿಸಿದೆ ಎಂಬುದನ್ನು ನಾನು ವಿಶೇಷವಾಗಿ ನನ್ನ ಬುಡಕಟ್ಟು ಸಹೋದರರಿಗೆ ತಿಳಿಸಲು ಬಯಸುತ್ತೇನೆ. ಅವರು ಅವರಿಗೆ ಬಂದೂಕುಗಳನ್ನು ನೀಡಿದ್ದಾರೆ ಮತ್ತು ಸಾವಿನ ಆಟವನ್ನು ಆಡಲು ಅವರನ್ನು ಪ್ರಚೋದಿಸಿದ್ದಾರೆ. ಪರಿಣಾಮವಾಗಿ, ಬಿಕ್ಕಟ್ಟು ಇಡೀ ಪ್ರದೇಶವನ್ನು ಆವರಿಸಿತ್ತು. ಆ ಸಮಯದಲ್ಲಿ ನನ್ನ ಮುಂದಿದ್ದ ಸವಾಲು ಏನೆಂದರೆ, ಪೂರ್ವ ಭಾಗದಿಂದ ಅಂದರೆ ಉಮರ್ ಗಾಂವ್ ನಿಂದ ಅಂಬಾಜಿಯವರೆಗಿನ ಇಡೀ ವಲಯದಿಂದ ನಕ್ಸಲಿಸಂನ ಪ್ರವೇಶ ಮತ್ತು ವಿಸ್ತರಣೆಗೆ ಅವಕಾಶ ನೀಡದಿರುವುದು. ನಾನು ನನ್ನ ಬುಡಕಟ್ಟು ಸಹೋದರ ಸಹೋದರಿಯರನ್ನು ಉಳಿಸಬೇಕಾಗಿತ್ತು. ಆ ರೀತಿಯ ರೋಗವು ಅವರ ಜೀವನವನ್ನು ಪ್ರವೇಶಿಸಲು ನಾನು ಬಿಡಲಿಲ್ಲ. ಆದ್ದರಿಂದ, ನಾವು ಉಮರ್ ಗಾಂವ್ ನಿಂದ ಅಂಬಾಜಿಯವರೆಗಿನ ಭೂಭಾಗವನ್ನು ಅಭಿವೃದ್ಧಿಪಡಿಸಿದ್ದೇವೆ. ಮತ್ತು ನನ್ನ ಬುಡಕಟ್ಟು ಸಹೋದರ ಸಹೋದರಿಯರು ನನ್ನ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿದರು ಮತ್ತು "ಒಳ್ಳೆಯ ದಿನಗಳು ಬರಲಿವೆ" ಎಂದು ನಂಬಿದ್ದರು ಎಂಬುದನ್ನು ನಾನು ಬಹಳ ಸಂತೃಪ್ತಿಯಿಂದ ಹೇಳಲೇಬೇಕು. ಪರಿಣಾಮವಾಗಿ, ನಕ್ಸಲಿಸಂ ಆ ಮಾರ್ಗದ ಮೂಲಕ ಗುಜರಾತ್ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ನಾನು ನನ್ನ ಬುಡಕಟ್ಟು ಸಹೋದರ- ಸಹೋದರಿಯರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆದರೆ ಈಗ ನಗರ ನಕ್ಸಲರು ಮೇಲಿನಿಂದ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಗುಜರಾತ್ ನ ಯುವ ಪೀಳಿಗೆ ನಾಶವಾಗುವುದನ್ನು ನಾನು ಬಯಸುವುದಿಲ್ಲ. ನಗರ ನಕ್ಸಲರು ದೇಶವನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ನಾವು ನಮ್ಮ ಮಕ್ಕಳಿಗೆ ಎಚ್ಚರಿಕೆ ನೀಡಬೇಕು. ಅವರು ವಿದೇಶಿ ಶಕ್ತಿಗಳ ಏಜೆಂಟರಾಗಿ ಇಲ್ಲಿಗೆ ಬಂದಿದ್ದಾರೆ. ಗುಜರಾತ್ ಎಂದಿಗೂ ಅವರಿಗೆ ಶರಣಾಗುವುದಿಲ್ಲ. ಗುಜರಾತ್ ಅವರನ್ನು ನಾಶಪಡಿಸುತ್ತದೆ ಎಂಬ ನಂಬಿಕೆಯೊಂದಿಗೆ ನಾವು ಮುಂದುವರಿಯಬೇಕು. ನಾವು ಇಲ್ಲಿ ಬುಡಕಟ್ಟು ಮುಖ್ಯಮಂತ್ರಿಗಳನ್ನು ಹೊಂದಿದ್ದೆವು, ಆದರೂ ಉಮರ್ ಗಾಂವ್ ಮತ್ತು ಅಂಬಾಜಿ ನಡುವೆ ಯಾವುದೇ ವಿಜ್ಞಾನ ವಿಭಾಗದ ಶಾಲೆಗಳು ಇರಲಿಲ್ಲ. ಈಗ ನೀವು ಹೇಳಿ, ಬುಡಕಟ್ಟು ಜನಾಂಗದವರಿಗೆ ಮೀಸಲಾತಿ ಇದ್ದರೂ, 10 ಮತ್ತು 12 ನೇ ತರಗತಿಯಲ್ಲಿ ವಿಜ್ಞಾನವಿಲ್ಲದಿದ್ದರೆ, ಹುಡುಗ ಅಥವಾ ಹುಡುಗಿ ಹೇಗೆ ವೈದ್ಯರಾಗುತ್ತಾರೆ? ಒಬ್ಬ ವಿದ್ಯಾರ್ಥಿಯು ಡಾಕ್ಟರ್ ಅಥವಾ ಎಂಜಿನಿಯರ್ ಆಗಲು ಬಯಸಿದರೆ, ಮೊದಲು ಅವನಿಗೆ / ಅವಳಿಗೆ 10 ನೇ ಮತ್ತು 12 ನೇ ತರಗತಿಯಲ್ಲಿ ವಿಜ್ಞಾನ ಶಾಲೆಯ ಅಗತ್ಯವಿದೆ. ಆದರೆ ಅದೂ ಆಗಲಿಲ್ಲ. ಇಲ್ಲಿ ಬುಡಕಟ್ಟು ಮುಖ್ಯಮಂತ್ರಿಗಳಿದ್ದರು, ಆದರೆ ಉಮರ್ ಗಾಂವ್ ನಿಂದ ಅಂಬಾಜಿಯವರೆಗೆ ಸಾಕಷ್ಟು ಶಾಲೆಗಳು ಇರಲಿಲ್ಲ. ನಾನು ಅಧಿಕಾರಕ್ಕೆ ಬಂದ ನಂತರ, 10 ರಿಂದ 12 ನೇ ತರಗತಿಗಳಿಗೆ ಸಾಕಷ್ಟು ವಿಜ್ಞಾನ ಶಾಲೆಗಳು ಇರುವಂತೆ ನೋಡಿಕೊಂಡೆ. ಮತ್ತು ಇಂದು ನನ್ನ ಬುಡಕಟ್ಟು ಸಹೋದರ ಸಹೋದರಿಯರು ಪೈಲೆಟ್ ಪ್ರಾಯೋಗಿಕ ತರಬೇತಿಗಾಗಿ ಕೆನಡಾಕ್ಕೆ ಹೋಗುತ್ತಾರೆ ಅಥವಾ ವೈದ್ಯರು ಮತ್ತು ವಕೀಲರಾಗುತ್ತಿದ್ದಾರೆ. ನನ್ನ ಬುಡಕಟ್ಟು ಮಕ್ಕಳು ಗುಜರಾತಿಗೆ ಕೀರ್ತಿ ತರುತ್ತಿದ್ದಾರೆ ಎಂದು ನಾನು ಹೆಮ್ಮೆಯಿಂದ ಹೇಳುತ್ತಿದ್ದೇನೆ. ಬಿರ್ಸಾ ಮುಂಡಾ ವಿಶ್ವವಿದ್ಯಾಲಯ ಎಂಬ ಬುಡಕಟ್ಟು ಜನಾಂಗದ ಹೆಸರಿನಲ್ಲಿ ಒಂದು ವಿಶ್ವವಿದ್ಯಾಲಯವಿದೆ ಎಂದು ಯಾರೂ ಊಹಿಸಲು ಸಹ ಸಾಧ್ಯವಿಲ್ಲ. ಅಂತೆಯೇ, ಗುಜರಾತಿನ ಗುರು ಗೋವಿಂದ ವಿಶ್ವವಿದ್ಯಾಲಯವು ಬುಡಕಟ್ಟು ಯುವಕರಿಗೆ ಹೊಸ ವಿಶ್ವಾಸ ಮತ್ತು ಹೊಸ ಅವಕಾಶಗಳನ್ನು ನೀಡಿದೆ.
ಸಹೋದರರೇ ಮತ್ತು ಸಹೋದರಿಯರೇ,
ಗುಜರಾತಿನಲ್ಲಿ, ಬುಡಕಟ್ಟು ಸಮಾಜದ ಸಬಲೀಕರಣದಲ್ಲಿ ವನ ಬಂಧು ಯೋಜನೆ ಪ್ರಮುಖ ಪಾತ್ರ ವಹಿಸಿದೆ. ನನ್ನ ಬುಡಕಟ್ಟು ಸಮುದಾಯವು ಪಶುಸಂಗೋಪನೆಯಲ್ಲಿ ತೊಡಗಬಹುದು ಮತ್ತು ರೈತರು ಆಧುನಿಕ ಕೃಷಿಯಲ್ಲಿ ತೊಡಗಬಹುದು ಎಂದು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸಿದೆವು, ಇದರಿಂದ ಅವರ ಜೀವನವು ಬದಲಾಗಬಹುದು. ಬುಡಕಟ್ಟು ಜನರಿಗಾಗಿ ನಡೆಯುತ್ತಿದ್ದ ಯೋಜನೆಗಳ ಒಂದು ಉದಾಹರಣೆಯನ್ನು ನಾನು ನಿಮಗೆ ನೀಡುತ್ತೇನೆ. ಹಿಂದಿನ ಸರ್ಕಾರಗಳ ಆಡಳಿತಾವಧಿಯಲ್ಲಿ, ಐದು ಕೋಳಿಗಳಿಗೆ ಸಾಲ ನೀಡುವ ಯೋಜನೆ ಇತ್ತು. ಮತ್ತು ಬುಡಕಟ್ಟು ಜನರು ಈ ಕೋಳಿಗಳು ಹೆಚ್ಚು ಕೋಳಿಗಳನ್ನು ರೂಪಿಸುವ ಮೊಟ್ಟೆಗಳನ್ನು ಉತ್ಪಾದಿಸುತ್ತವೆ ಮತ್ತು ಅದರಿಂದಾಗಿ ತಾವು ಕೆಲವೇ ದಿನಗಳಲ್ಲಿ ಪಕ್ಕಾ ಮನೆಯನ್ನು ನಿರ್ಮಿಸುವ ಸ್ಥಿತಿಯಲ್ಲಿರುತ್ತೇವೆ ಎಂದು ಭಾವಿಸಿ ಸಂತೋಷಪಡುತ್ತಾರೆ. ಆದರೆ, ವಾಸ್ತವವು ಅದರಿಂದ ದೂರವಿತ್ತು. ಯೋಜನೆಯ ಪ್ರಯೋಜನವನ್ನು ಪಡೆದ ನಂತರ, ಅದೇ ದಿನ ಕೆಲವು ವಿಐಪಿಗಳು ಕೆಂಪು ದೀಪದೊಂದಿಗೆ ಕಾರಿನಲ್ಲಿ ಅವರ ಹಳ್ಳಿಗೆ ಆಗಮಿಸುತ್ತಾರೆ ಮತ್ತು ಅಲ್ಲಿಯೇ ಉಳಿಯಲು ನಿರ್ಧರಿಸುತ್ತಾರೆ. ಈಗ ಬುಡಕಟ್ಟು ಸಹೋದರರು ಆತಿಥ್ಯದ ವಿಷಯದಲ್ಲಿ ಯಾವಾಗಲೂ ಮುಂದೆ. ಆದ್ದರಿಂದ, ಅವರು ಕೋಳಿಗಳಲ್ಲಿ ಒಂದನ್ನು ಬೇಯಿಸಿ ಆ ಅತಿಥಿಗೆ ಬಡಿಸುತ್ತಿದ್ದರು. ನಮ್ಮ ಬುಡಕಟ್ಟು ಸಹೋದರರು ತಮ್ಮ ಆತಿಥ್ಯಕ್ಕೆ ವಿರಳ ಸಂಪನ್ಮೂಲಗಳು ಅಥವಾ ಹಣದ ಕೊರತೆ ಅಡ್ಡಿ ಎಂಬುದಾಗಿ ಎಂದಿಗೂ ಭಾವಿಸುವುದಿಲ್ಲ. ಇದು 2-4 ತಿಂಗಳುಗಳವರೆಗೆ ಮುಂದುವರಿಯುತ್ತದೆ ಮತ್ತು ಅವರು ತಮ್ಮ ಎಲ್ಲಾ ಕೋಳಿಗಳು ಮತ್ತು ಮೊಟ್ಟೆಗಳನ್ನು ಕಳೆದುಕೊಳ್ಳುತ್ತಾರೆ. ಹೀಗಿರುವಾಗ ನಾವು ಬಂದು ನಮ್ಮ ಬುಡಕಟ್ಟು ಸಹೋದರ ಸಹೋದರಿಯರ ಜೀವನವನ್ನು ಬದಲಾಯಿಸಿದೆವು.
ಸಹೋದರರೇ ಮತ್ತು ಸಹೋದರಿಯರೇ,
ಈ ಅಭಿವೃದ್ಧಿ ಪ್ರಯಾಣದಲ್ಲಿ ನಮ್ಮ ಬುಡಕಟ್ಟು ಜನರ ಕೊಡುಗೆ ಅಪಾರವಾಗಿದೆ. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ನಮ್ಮ ಬುಡಕಟ್ಟು ದೇವರೆಂದು ಪೂಜಿಸಲು ನಾವು ಬುಡಕಟ್ಟು ದಿನವನ್ನು ಘೋಷಿಸಿದೆವು. ಗುಜರಾತ್ ಸೇರಿದಂತೆ ಇಡೀ ದೇಶದಲ್ಲಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಬುಡಕಟ್ಟು ಜನರ ನೆನಪಿಗಾಗಿ ಸ್ಮಾರಕಗಳನ್ನು ನಿರ್ಮಿಸಲಾಯಿತು. ಇಂದಿಗೂ, ನಾವು ಬುಡಕಟ್ಟು ಪ್ರದೇಶಗಳಲ್ಲಿನ ಉತ್ಪಾದನೆಯ ಬಗ್ಗೆ ಚಿಂತಿಸಿದ್ದೇವೆ. ನನ್ನ ಬುಡಕಟ್ಟು ಸಹೋದರರು ಮತ್ತು ನನ್ನ ಮೀನುಗಾರ ಸಹೋದರರಿಗಾಗಿ ನಾವು ಕೆಲಸವನ್ನು ಚುರುಕುಗೊಳಿಸಿದ್ದೇವೆ. ಮುಂಬರುವ ದಿನಗಳಲ್ಲಿ, ಭರೂಚ್-ಅಂಕಲೇಶ್ವರ ಕೂಡ ಅಹಮದಾಬಾದ್-ಗಾಂಧಿನಗರದಂತೆ ಅಭಿವೃದ್ಧಿ ಹೊಂದಲಿದೆ. ನ್ಯೂಯಾರ್ಕ್-ನ್ಯೂಜೆರ್ಸಿಯಂತೆ ಭರೂಚ್ ಅಂಕಲೇಶ್ವರದ ಬಗ್ಗೆಯೂ ಜನರು ಮಾತನಾಡುತ್ತಾರೆ. ಇದು ನಮ್ಮ ಸಾಮರ್ಥ್ಯವನ್ನು ಪರಿಚಯಿಸುವ ವ್ಯವಸ್ಥೆಯಾಗಿದೆ. ಮತ್ತು ಮುಂಬರುವ 25 ವರ್ಷಗಳು ನಿಮಗಾಗಿ ಇವೆ ಎಂದು ನಾನು ಯುವಜನರಿಗೆ ಹೇಳಲು ಬಯಸುತ್ತೇನೆ. ಇಲ್ಲಿಗೆ ಬನ್ನಿ ಮತ್ತು ಅಭಿವೃದ್ಧಿಯ ಪ್ರಯಾಣವನ್ನು ಪ್ರಾರಂಭಿಸಿ. ಭುಜಕ್ಕೆ ಭುಜ ಕೊಟ್ಟು ಮುಂದೆ ಸಾಗೋಣ. ಇಂದು ನೀವು ಇಷ್ಟು ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದಿದ್ದೀರಿ! ಗುಜರಾತ್ ನ ಅಭಿವೃದ್ಧಿಯ ಪಯಣದಲ್ಲಿ ಹೊಸ ಪ್ರತಿಜ್ಞೆಯನ್ನು ಈಡೇರಿಸಲು ನಾವು ಸಂಕಲ್ಪ ಮಾಡಿದ್ದೇವೆ. ಆದ್ದರಿಂದ, ನರ್ಮದಾ ದಡದಲ್ಲಿ ವಾಸಿಸುತ್ತಿರುವ ನನ್ನ ಸಹೋದರರೇ ಮತ್ತು ಸಹೋದರಿಯರೇ, ನಿಮಗೆ ನನ್ನ ಶುಭ ಹಾರೈಕೆಗಳು! ಭರೂಚ್ ಜಿಲ್ಲೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯೋಣ! ನನ್ನೊಂದಿಗೆ ಹೇಳಿ - ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ, ಭಾರತ್ ಮಾತಾ ಕಿ ಜೈ!
ಘೋಷಣೆ: ಇದು ಪ್ರಧಾನ ಮಂತ್ರಿಯವರ ಭಾಷಣದ ಸರಿಸುಮಾರಾದ ಭಾಷಾಂತರವಾಗಿದೆ. ಮೂಲ ಭಾಷಣದ ಬಹುಪಾಲು ಗುಜರಾತಿ ಭಾಷೆಯಲ್ಲಿತ್ತು.
*******
(ಪ್ರಕಟಣೆ ಐ.ಡಿ.: 1867302)
ವಿಸಿಟರ್ ಕೌಂಟರ್ : 266
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam