ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸಾಬರ್‌ಕಾಂಠಾದ ಸಾಬರ್ ಡೈರಿಯಲ್ಲಿ 1,000 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ


ಈ ಪ್ರದೇಶದಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸಲು ಹಾಗೂ ಸ್ಥಳೀಯ ರೈತರು ಮತ್ತು ಹಾಲು ಉತ್ಪಾದಕರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುವ ಯೋಜನೆಗಳು ಇವಾಗಿವೆ

"ಎಫ್.ಪಿ.ಓ.ಗಳ ಮೂಲಕ ಆಹಾರ ಸಂಸ್ಕರಣೆ, ಮೌಲ್ಯಾಧಾರಿತ ರಫ್ತು ಮತ್ತು ಪೂರೈಕೆ ಸರಪಳಿಯೊಂದಿಗೆ ಸಣ್ಣ ರೈತರು ಸಂಪರ್ಕ ಸಾಧಿಸುತ್ತಿದ್ದಾರೆ"

"ರೈತರಿಗೆ ಪರ್ಯಾಯ ಆದಾಯದ ಮೂಲಗಳನ್ನು ಸೃಷ್ಟಿಸುವ ಕಾರ್ಯತಂತ್ರವು ಫಲ ನೀಡುತ್ತಿದೆ"

Posted On: 28 JUL 2022 2:34PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತ್‌ನ ಸಾಬರ್‌ಕಾಂಠಾದ ಗಧೋಡಾ ಚೌಕಿಯಲ್ಲಿರುವ ಸಾಬರ್ ಡೈರಿಯಲ್ಲಿ 1,000 ರೂ.ಗಳಿಗೂ ಹೆಚ್ಚಿನ ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ಸ್ಥಳೀಯ ರೈತರು ಮತ್ತು ಹಾಲು ಉತ್ಪಾದಕರನ್ನು ಸಶಕ್ತಗೊಳಿಸುವುದರ ಜೊತೆಗೆ ಅವರ ಆದಾಯವನ್ನು ಹೆಚ್ಚಿಸುತ್ತವೆ. ಇದರಿಂದ ಈ ಪ್ರದೇಶದ ಗ್ರಾಮೀಣ ಆರ್ಥಿಕತೆಗೆ ಉತ್ತೇಜನ ದೊರೆಯಲಿದೆ. ಪ್ರಧಾನಮಂತ್ರಿಯವರು ʻಸುಕನ್ಯಾ ಸಮೃದ್ಧಿ ಯೋಜನೆʼಯ ಫಲಾನುಭವಿಗಳು ಮತ್ತು ಉನ್ನತ ಮಹಿಳಾ ಹಾಲು ಉತ್ಪಾದಕರನ್ನು ಸನ್ಮಾನಿಸಿದರು. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್‌ ಹಾಗೂ ಮತ್ತಿತರ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, "ಇಂದು ಸಾಬರ್ ಡೈರಿಯನ್ನು ವಿಸ್ತರಣೆ ಮಾಡಲಾಗಿದೆ. ನೂರಾರು ಕೋಟಿ ಮೌಲ್ಯದ ಹೊಸ ಯೋಜನೆಗಳನ್ನು ಇಲ್ಲಿ ಸ್ಥಾಪಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ಹಾಲಿನ ಪುಡಿ ಘಟಕ ಮತ್ತು ಅಸೆಪ್ಟಿಕ್ ಪ್ಯಾಕಿಂಗ್ ವಿಭಾಗದಲ್ಲಿ ಮತ್ತೊಂದು ಸಾಲು ಸೇರಿಸುವುದರೊಂದಿಗೆ ಸಾಬರ್ ಡೈರಿಯ ಸಾಮರ್ಥ್ಯವು ಮತ್ತಷ್ಟು ಹೆಚ್ಚಾಗಲಿದೆ. ಸಾಬರ್ ಡೈರಿಯ ಸಂಸ್ಥಾಪಕರಲ್ಲಿ ಒಬ್ಬರಾದ ಶ್ರೀ ಭೂರಾಭಾಯಿ ಪಟೇಲ್ ಅವರನ್ನೂ ಪ್ರಧಾನಮಂತ್ರಿಯವರು ಸ್ಮರಿಸಿದರು. ಈ ಪ್ರದೇಶ ಮತ್ತು ಸ್ಥಳೀಯ ಜನರೊಂದಿಗಿನ ತಮ್ಮ ದೀರ್ಘಕಾಲದ ಒಡನಾಟವನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು.
ಪ್ರಧಾನಮಂತ್ರಿ ಅವರು ಎರಡು ದಶಕಗಳ ಹಿಂದಿನ ಅಭಾವ ಮತ್ತು ಬರಗಾಲದ ಪರಿಸ್ಥಿತಿಯನ್ನು ನೆನಪಿಸಿಕೊಂಡರು. ತಾವು ಮುಖ್ಯಮಂತ್ರಿಯಾಗಿ ಜನರ ಸಹಕಾರವನ್ನು ಹೇಗೆ ಪಡೆದುಕೊಂಡರು ಮತ್ತು ಈ ಪ್ರದೇಶದ ಪರಿಸ್ಥಿತಿಯನ್ನು ಸುಧಾರಿಸಲು ಹೇಗೆ ಪ್ರಯತ್ನಿಸಿದರು ಎಂಬುದನ್ನು ಅವರು ನೆನಪಿಸಿಕೊಂಡರು. ಜಾನುವಾರು ಸಾಕಾಣಿಕೆ ಮತ್ತು ಹೈನುಗಾರಿಕೆ ಆ ಪ್ರಯತ್ನಗಳ ಪ್ರಮುಖ ಅಂಶವಾಗಿದೆ ಎಂದು ಅವರು ಹೇಳಿದರು. ಮೇವು, ಔಷಧಗಳನ್ನು ಒದಗಿಸುವ ಮೂಲಕ ಪಶುಸಂಗೋಪನೆಯನ್ನು ಉತ್ತೇಜಿಸುವ ಹಾಗೂ ಜಾನುವಾರುಗಳಿಗೆ ಆಯುರ್ವೇದ ಚಿಕಿತ್ಸೆಯನ್ನು ಪ್ರೋತ್ಸಾಹಿಸುವ ಕ್ರಮಗಳ ಬಗ್ಗೆಯೂ ಅವರು ಮಾತನಾಡಿದರು. ʻಗುಜರಾತ್ ಜ್ಯೋತಿಗ್ರಾಮ ಯೋಜನೆʼಯು ಅಭಿವೃದ್ಧಿಯ ವೇಗವರ್ಧಕವಾಗಿದೆ ಎಂದು ಅವರು ಉಲ್ಲೇಖಿಸಿದರು.
ಕಳೆದ ಎರಡು ದಶಕಗಳಲ್ಲಿ ಕೈಗೊಂಡ ಕ್ರಮಗಳಿಂದಾಗಿ ಗುಜರಾತ್‌ನಲ್ಲಿ ಡೈರಿ ಮಾರುಕಟ್ಟೆ ಮೌಲ್ಯವು 1 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದೆ ಎಂದು ಪ್ರಧಾನಮಂತ್ರಿ ಅವರು ಹೆಮ್ಮೆಯಿಂದ ಉಲ್ಲೇಖಿಸಿದರು. 2007 ಮತ್ತು 2011ರಲ್ಲಿ ತಾವು ಈ ಹಿಂದೆ ಭೇಟಿ ನೀಡಿದ್ದನ್ನು ಮತ್ತು ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವಂತೆ ತಾವು ಮಾಡಿದ ಮನವಿಯನ್ನು ಅವರು ನೆನಪಿಸಿಕೊಂಡರು. ಈಗ ಹೆಚ್ಚಿನ ಸಮಿತಿಗಳು ಉತ್ತಮ ಮಹಿಳಾ ಪ್ರಾತಿನಿಧ್ಯವನ್ನು ಹೊಂದಿವೆ. ಹಾಲಿನ ಪಾವತಿಯನ್ನು ಹೆಚ್ಚಾಗಿ ಮಹಿಳೆಯರಿಗೇ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಈ ಪ್ರಯೋಗಗಳನ್ನು ಇತರ ಕ್ಷೇತ್ರಗಳಲ್ಲೂ ಬಳಸಲಾಗುತ್ತಿದೆ ಎಂದು ಅವರು ಹೇಳಿದರು. ಇಂದು, ದೇಶದಲ್ಲಿ 10,000 ʻರೈತ ಉತ್ಪಾದಕ ಸಂಘʼ(ಎಪ್‌.ಪಿ.ಓ)ಗಳನ್ನು ಸ್ಥಾಪಿಸುವ ಕೆಲಸ ಭರದಿಂದ ಸಾಗುತ್ತಿದೆ. ಈ ʻಎಫ್.ಪಿ.ಓ.ʼಗಳ ಮೂಲಕ, ಆಹಾರ ಸಂಸ್ಕರಣೆ, ಮೌಲ್ಯಾಧಾರಿತ ರಫ್ತು ಮತ್ತು ಪೂರೈಕೆ ಸರಪಳಿಯೊಂದಿಗೆ ಸಣ್ಣ ರೈತರು ನೇರವಾಗಿ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. ಇದರಿಂದ ಗುಜರಾತ್‌ನ ರೈತರಿಗೂ ಸಾಕಷ್ಟು ಲಾಭವಾಗಲಿದೆ ಎಂದರು.
ರೈತರಿಗೆ ಪರ್ಯಾಯ ಆದಾಯದ ಮೂಲಗಳನ್ನು ಸೃಷ್ಟಿಸುವ ಕಾರ್ಯತಂತ್ರವು ಫಲ ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು. ತೋಟಗಾರಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆಗಳು ರೈತರಿಗೆ ಉತ್ತಮ ಆದಾಯವನ್ನು ನೀಡುತ್ತಿವೆ. ಖಾದಿ ಮತ್ತು ಗ್ರಾಮೋದ್ಯೋಗ ವಹಿವಾಟು ಮೊದಲ ಬಾರಿಗೆ ಒಂದು ಲಕ್ಷ ಕೋಟಿ ರೂ.ಗಿಂತಲೂ ಹೆಚ್ಚಾಗಿದೆ. ಹಳ್ಳಿಗಳಲ್ಲಿ ಈ ವಲಯದಲ್ಲಿ 1.5 ಕೋಟಿಗೂ ಹೆಚ್ಚು ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಪೆಟ್ರೋಲ್‌ನಲ್ಲಿ ಎಥೆನಾಲ್ ಮಿಶ್ರಣವನ್ನು ಹೆಚ್ಚಿಸುವಂತಹ ಕ್ರಮಗಳು ರೈತರಿಗೆ ಹೊಸ ಆದಾಯದ ಮಾರ್ಗಗಳನ್ನು ಸೃಷ್ಟಿಸುತ್ತಿವೆ. "2014 ರವರೆಗೆ, ದೇಶದಲ್ಲಿ 400 ಮಿಲಿಯನ್ ಲೀಟರ್‌ಗಿಂತಲೂ ಕಡಿಮೆ ಎಥೆನಾಲ್ ಅನ್ನು ಪೆಟ್ರೋಲ್‌ ಜೊತೆ ಮಿಶ್ರಣ ಮಾಡಲಾಗಿದೆ. ಆದರೆ, ಇಂದು ಈ ಪ್ರಮಾಣ ಸುಮಾರು 400 ಕೋಟಿ ಲೀಟರ್ ಅನ್ನು ತಲುಪುತ್ತಿದೆ. ನಮ್ಮ ಸರಕಾರವು ಕಳೆದ 2 ವರ್ಷಗಳಲ್ಲಿ ವಿಶೇಷ ಅಭಿಯಾನವನ್ನು ನಡೆಸುವ ಮೂಲಕ 3 ಕೋಟಿಗೂ ಅಧಿಕ ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಿದೆ" ಎಂದು ಅವರು ಹೇಳಿದರು.
ಯೂರಿಯಾಕ್ಕೆ ಬೇವಿನ ಲೇಪನ, ಮುಚ್ಚಿದ ರಸಗೊಬ್ಬರ ಘಟಕಗಳನ್ನು ತೆರೆಯುವುದು ಮತ್ತು ನ್ಯಾನೊ ರಸಗೊಬ್ಬರಗಳನ್ನು ಉತ್ತೇಜಿಸುವುದು ಹಾಗೂ ಜಾಗತಿಕ ಬೆಲೆ ಏರಿಕೆಯ ಹೊರತಾಗಿಯೂ ಕೈಗೆಟುಕುವ ದರದಲ್ಲಿ ಯೂರಿಯಾ ಲಭ್ಯತೆಯನ್ನು ಖಾತ್ರಿಪಡಿಸುವುದು ಮುಂತಾದ ಕ್ರಮಗಳು ದೇಶದ ಹಾಗೂ ಗುಜರಾತ್‌ನ ರೈತರಿಗೆ ಪ್ರಯೋಜನಕಾರಿಯಾಗಿವೆ ಎಂದು ಪ್ರಧಾನಿ ಹೇಳಿದರು. ʻಸುಜಲಮ್‌, ಸುಫಲಮ್‌ ಯೋಜನೆʼಯು ಸಾಬರ್‌ಕಾಂಠಾ ಜಿಲ್ಲೆಯ ಅನೇಕ ತಾಲ್ಲೂಕುಗಳಿಗೆ ನೀರು ಲಭ್ಯವಾಗುವಂತೆ ಮಾಡಿದೆ. ಅಂತೆಯೇ, ಜಿಲ್ಲೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಭೂತಪೂರ್ವ ಪ್ರಮಾಣದಲ್ಲಿ ಸಂಪರ್ಕ ಜಾಲವನ್ನು ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ರೈಲ್ವೆ ಮತ್ತು ಹೆದ್ದಾರಿ ಯೋಜನೆಗಳು ಈ ಪ್ರದೇಶದ ಸಂಪರ್ಕವನ್ನು ಸುಧಾರಿಸಿವೆ. ಈ ಸಂಪರ್ಕವು ಪ್ರವಾಸೋದ್ಯಮಕ್ಕೆ ಮತ್ತು ಯುವಕರಿಗೆ ಉದ್ಯೋಗಗಳ ಖಾತರಿಗೆ ಸಹಾಯ ಮಾಡುತ್ತಿದೆ ಎಂದು ಅವರು ಹೇಳಿದರು.
ʻಆಜಾದಿ ಕಾ ಅಮೃತ ಮಹೋತ್ಸವʼದ ಮಹತ್ವವನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ಸ್ಥಳೀಯ ಬುಡಕಟ್ಟು ನಾಯಕರ ತ್ಯಾಗವನ್ನು ಸ್ಮರಿಸಿದರು. ನವೆಂಬರ್ 15ರಂದು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವನ್ನು ಸರಕಾರವು ʻಜನಜಾತಿಯ ಗೌರವ್ ದಿವಸ್ʼ ಎಂದು ಘೋಷಿಸಿದೆ ಎಂದು ಪ್ರಧಾನಮಂತ್ರಿ ಅವರು ಮಾಹಿತಿ ನೀಡಿದರು. "ನಮ್ಮ ಸರಕಾರವು ದೇಶಾದ್ಯಂತ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣಾರ್ಥ ವಿಶೇಷ ವಸ್ತುಸಂಗ್ರಹಾಲಯವನ್ನು ನಿರ್ಮಿಸುತ್ತಿದೆ. ಬುಡಕಟ್ಟು ಸಮಾಜದಿಂದ ಬಂದ ದೇಶದ ಮಗಳು ಇದೇ ಮೊದಲ ಬಾರಿಗೆ ಭಾರತದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿದ್ದಾರೆ. ದೇಶವು ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದೆ. ಇದು 130 ಕೋಟಿಗೂ ಹೆಚ್ಚು ಭಾರತೀಯರ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ,ʼʼ ಎಂದರು.

ʻಹರ್ ಘರ್ ತಿರಂಗಾʼ ಅಭಿಯಾನದಲ್ಲಿ ದೇಶದ ಜನರು ಉತ್ಸಾಹದಿಂದ ಭಾಗವಹಿಸಬೇಕು ಎಂದು ಅವರು ವಿನಂತಿಸಿದರು.
 
ಯೋಜನೆಗಳ ವಿವರ:
ಸಾಬರ್ ಡೈರಿಯಲ್ಲಿ ದಿನಕ್ಕೆ ಸುಮಾರು 120 ಮೆಟ್ರಿಕ್ ಟನ್ (ಎಂ.ಟಿ.ಪಿ.ಡಿ) ಸಾಮರ್ಥ್ಯದ ʻಪೌಡರ್ ಪ್ಲಾಂಟ್ʼ (ಹಾಲಿನ ಪುಡಿ ಘಟಕ) ಅನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು.  ಇಡೀ ಯೋಜನೆಯ ಒಟ್ಟು ವೆಚ್ಚ 300 ಕೋಟಿ ರೂ.ಗಳಿಗೂ ಅಧಿಕ. ಸ್ಥಾವರದ ವಿನ್ಯಾಸವು ಜಾಗತಿಕ ಆಹಾರ ಸುರಕ್ಷತಾ ಮಾನದಂಡಗಳನ್ನು ಪೂರೈಸುವಂತಿದೆ. ಇದು ಬಹುತೇಕ ಶೂನ್ಯ ಹೊರಸೂಸುವಿಕೆಯ ಜೊತೆಗೆ ಹೆಚ್ಚು ಶಕ್ತಿ ದಕ್ಷತೆಯನ್ನು ಹೊಂದಿದೆ. ಸ್ಥಾವರವು ಇತ್ತೀಚಿನ ಮತ್ತು ಸಂಪೂರ್ಣ ಸ್ವಯಂಚಾಲಿತ ʻಬಲ್ಕ್ ಪ್ಯಾಕಿಂಗ್ ಲೈನ್ʼ ಅನ್ನು ಹೊಂದಿದೆ.
ಪ್ರಧಾನಮಂತ್ರಿಯವರು ಸಾಬರ್ ಡೈರಿಯಲ್ಲಿ ಅಸೆಪ್ಟಿಕ್ ಹಾಲಿನ ಪ್ಯಾಕೇಜಿಂಗ್ ಘಟಕವನ್ನು ಸಹ ಉದ್ಘಾಟಿಸಿದರು. ಇದು ದಿನಕ್ಕೆ 3 ಲಕ್ಷ ಲೀಟರ್ ಸಾಮರ್ಥ್ಯವನ್ನು ಹೊಂದಿರುವ ಅತ್ಯಾಧುನಿಕ ಘಟಕವಾಗಿದೆ. ಈ ಯೋಜನೆಯನ್ನು ಸುಮಾರು 125 ಕೋಟಿ ರೂ.ಗಳ ಒಟ್ಟು ಹೂಡಿಕೆಯೊಂದಿಗೆ ಕಾರ್ಯಗತಗೊಳಿಸಲಾಗಿದೆ. ಈ ಸ್ಥಾವರವು ಹೆಚ್ಚು ಇಂಧನ ದಕ್ಷತೆ ಮತ್ತು ಪರಿಸರ ಸ್ನೇಹಿ ತಂತ್ರಜ್ಞಾನದೊಂದಿಗೆ ಇತ್ತೀಚಿನ ಆಟೋಮೇಷನ್ ವ್ಯವಸ್ಥೆಯನ್ನು ಹೊಂದಿದೆ. ಹಾಲು ಉತ್ಪಾದಕರಿಗೆ ಉತ್ತಮ ವೇತನವನ್ನು ಖಚಿತಪಡಿಸಿಕೊಳ್ಳಲು ಈ ಯೋಜನೆ ಸಹಾಯ ಮಾಡುತ್ತದೆ.
ಪ್ರಧಾನಮಂತ್ರಿಯವರು ಸಾಬರ್ ಚೀಸ್ ಮತ್ತು ವ್ಹೇ ಡ್ರೈಯಿಂಗ್ ಪ್ಲಾಂಟ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಯ ಅಂದಾಜು ವೆಚ್ಚ ಸುಮಾರು 600 ಕೋಟಿ ರೂ.ಗಳಾಗಿದೆ. ಈ ಘಟಕವು ಚೆಡ್ಡಾರ್ ಚೀಸ್ (20 ಎಂ.ಟಿ.ಪಿ.ಡಿ.), ಮೊಝರೆಲ್ಲಾ ಚೀಸ್ (10 ಎಂ.ಟಿ.ಪಿ.ಡಿ) ಮತ್ತು ಸಂಸ್ಕರಿಸಿದ ಚೀಸ್ (16 ಎಂ.ಟಿ.ಪಿ.ಡಿ) ಅನ್ನು ಉತ್ಪಾದಿಸಲಿದೆ. ಚೀಸ್ ತಯಾರಿಸುವಾಗ ಉತ್ಪತ್ತಿಯಾದ ʻವ್ಹೇʼ ಅನ್ನು ʻವ್ಹೇ ಡ್ರೈಯಿಂಗ್‌ ಘಟಕದಲ್ಲಿ ಒಣಗಿಸಬಹುದು. ಈ ಘಟಕವು 40 ಎಂ.ಟಿ.ಪಿ.ಡಿ ಸಾಮರ್ಥ್ಯವನ್ನು ಹೊಂದಿದೆ.
ಸಾಬರ್ ಡೈರಿಯು  ʻಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟʼದ (ಜಿ.ಸಿ.ಎಂ.ಎಂ.ಎಫ್) ಒಂದು ಭಾಗವಾಗಿದ್ದು, ʻಅಮೂಲ್ʼ ಬ್ರಾಂಡ್ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಸಂಪೂರ್ಣ ಶ್ರೇಣಿಯನ್ನು ತಯಾರಿಸುತ್ತದೆ ಹಾಗೂ ಮಾರಾಟ ಮಾಡುತ್ತದೆ.

 

**********


(Release ID: 1845841) Visitor Counter : 192