ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ದಿಯೋಘರ್‌ನಲ್ಲಿ 16,800 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ


ಈ ಎಲ್ಲಾ ಯೋಜನೆಗಳು ಮೂಲಸೌಕರ್ಯ ಅಭಿವೃದ್ಧಿಯನ್ನು ಗಮನಾರ್ಹವಾಗಿ ಹೆಚ್ಚಿಸುವ ಜತೆಗೆ ಸಂಪರ್ಕ ಸುಧಾರಿಸಲಿವೆ ಮತ್ತು ಈ ಭಾಗದ ಜನರ ಜೀವನ ಸುಲಭಗೊಳಿಸಲು ಉತ್ತೇಜನ ನೀಡಲಿವೆ

ದಿಯೋಘರ್ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ ಪ್ರಧಾನಿ; ಇದು ಬಾಬಾ ಬೈದ್ಯನಾಥ ಧಾಮಕ್ಕೆ ನೇರ ವಿಮಾನ ಸಂಪರ್ಕ ಕಲ್ಪಿಸಲಿದೆ

ದಿಯೋಘರ್ ನ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆ(ಎಐಐಎಂಎಸ್)ಯಲ್ಲಿ ಒಳರೋಗಿಗಳ ವಿಭಾಗ ಮತ್ತು ಶಸ್ತ್ರಚಿಕಿತ್ಸಾ ಸೌಲಭ್ಯ ಲೋಕಾರ್ಪಣೆ ಮಾಡಿದ ಪ್ರಧಾನಿ

"ರಾಜ್ಯಗಳ ಅಭಿವೃದ್ಧಿಯಿಂದ ರಾಷ್ಟ್ರದ ಅಭಿವೃದ್ಧಿ ಎಂಬ ತತ್ವದ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ"

"ಒಂದು ಸಮಗ್ರ ವಿಧಾನವು ಯೋಜನೆಗಳಿಗೆ ಮಾರ್ಗದರ್ಶನ ನೀಡಿದಾಗ, ಸಮಾಜದ ವಿವಿಧ ವಲಯಗಳಿಗೆ ಆದಾಯದ ಹೊಸ ಮಾರ್ಗಗಳು ಸೃಷ್ಟಿಯಾಗುತ್ತವೆ"


"ಕೊರತೆಗಳನ್ನು ಅವಕಾಶಗಳಾಗಿ ಪರಿವರ್ತಿಸಲು ನಾವು ಅನೇಕ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ"

"ಸಾಮಾನ್ಯ ನಾಗರಿಕರ ಜೀವನವನ್ನು ಸುಲಭಗೊಳಿಸಲು ಕ್ರಮಗಳನ್ನು ತೆಗೆದುಕೊಂಡಾಗ, ರಾಷ್ಟ್ರೀಯ ಸ್ವತ್ತುಗಳು ಸೃಜನೆಯಾಗುತ್ತವೆ, ಜತೆಗೆ ರಾಷ್ಟ್ರೀಯ ಅಭಿವೃದ್ಧಿಯ ಹೊಸ ಅವಕಾಶಗಳು ಹೊರಹೊಮ್ಮುತ್ತವೆ"

Posted On: 12 JUL 2022 2:56PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದಿಯೋಘರ್‌ನಲ್ಲಿ 16,800 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಜಾರ್ಖಂಡ್ ರಾಜ್ಯಪಾಲ ಶ್ರೀ ರಮೇಶ್ ಬೈಸ್, ಮುಖ್ಯಮಂತ್ರಿ ಶ್ರೀ ಹೇಮಂತ್ ಸೊರೆನ್, ಕೇಂದ್ರ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ, ರಾಜ್ಯ ಸಚಿವರು ಮತ್ತು ಜನಪ್ರತಿನಿಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ಅವರು, ಬಾಬಾ ಬೈದ್ಯನಾಥರ ಆಶೀರ್ವಾದದಿಂದ ಇಂದು 16,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಯೋಜನೆಗಳನ್ನು ಉದ್ಘಾಟಿಸಲಾಗಿದೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇವು ಜಾರ್ಖಂಡ್‌ನ ಆಧುನಿಕ ಸಂಪರ್ಕ, ಇಂಧನ, ಆರೋಗ್ಯ, ಧಾರ್ಮಿಕ ಕ್ಷೇತ್ರಗಳು ಮತ್ತು ಪ್ರವಾಸೋದ್ಯಮ ವಲಯದ ಅಭಿವೃದ್ಧಿಗೆ ಭಾರಿ ಉತ್ತೇಜನ ನೀಡಲಿವೆ ಎಂದರು.

‘ರಾಜ್ಯಗಳ ಅಭಿವೃದ್ಧಿಯಿಂದ ರಾಷ್ಟ್ರದ ಅಭಿವೃದ್ಧಿ’ ಎಂಬ ಚಿಂತನೆಯೊಂದಿಗೆ ದೇಶವು ಕಳೆದ 8 ವರ್ಷಗಳಿಂದ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ತಿಳಿಸಿದರು. ಕಳೆದ 8 ವರ್ಷಗಳಲ್ಲಿ ಹೆದ್ದಾರಿಗಳು, ರೈಲು ಮಾರ್ಗಗಳು,, ವಾಯು ಮಾರ್ಗಗಳು, ಜಲಮಾರ್ಗಗಳ ಮೂಲಕ ಜಾರ್ಖಂಡ್ ಅನ್ನು ಸಂಪರ್ಕಿಸುವ ನಮ್ಮ ಪ್ರಯತ್ನಗಳ ಹಾದಿಯಲ್ಲಿ ಅದೇ ಚಿಂತನೆ ಮತ್ತು ಮನೋಭಾವ ಮುಂದುವರೆದಿದೆ, ಅದು ಅತಿಮುಖ್ಯವೂ ಆಗಿದೆ. ಈ ಎಲ್ಲಾ ಸೌಲಭ್ಯಗಳು ರಾಜ್ಯದ ಆರ್ಥಿಕ ಅಭಿವೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿವೆ ಎಂದರು.

ಜಾರ್ಖಂಡ್ ಇಂದು ತನ್ನ 2ನೇ ವಿಮಾನ ನಿಲ್ದಾಣ ಪಡೆಯುತ್ತಿದೆಇದು ಬಾಬಾ ಬೈದ್ಯನಾಥರ ಭಕ್ತರಿಗೆ ಅಗಾಧವಾದ ನಿರಾಳತೆಗೆ ಕಾರಣವಾಗಲಿದೆ. ಉಡಾನ್ ಯೋಜನೆಯ ಮೂಲಕ ಸಾಮಾನ್ಯ ಜನರಿಗೆ ವಿಮಾನ ಪ್ರಯಾಣವನ್ನು ಕೈಗೆಟುಕುವಂತೆ ಮಾಡಿರುವ ಸಂದರ್ಭದಲ್ಲಿ, ಸರ್ಕಾರದ ಪ್ರಯತ್ನಗಳ ಪ್ರಯೋಜನಗಳು ಇಂದು ದೇಶಾದ್ಯಂತ ಗೋಚರಿಸುತ್ತಿವೆ ಎಂದು ಪ್ರಧಾನಿ ತಿಳಿಸಿದರು. ಉಡಾನ್ ಯೋಜನೆಯಡಿ ಕಳೆದ 5-6 ವರ್ಷಗಳಲ್ಲಿ ವಿಮಾನ ನಿಲ್ದಾಣಗಳು, ಹೆಲಿಪೋರ್ಟ್‌ಗಳು ಮತ್ತು ವಾಟರ್ ಏರೋಡ್ರೋಮ್‌ಗಳ ಮೂಲಕ ಸುಮಾರು 70 ಹೊಸ ಸ್ಥಳಗಳನ್ನು ಸೇರಿಸಲಾಗಿದೆ. ಇಂದು ಸಾಮಾನ್ಯ ನಾಗರಿಕರು 400ಕ್ಕೂ ಹೆಚ್ಚು ಹೊಸ ಮಾರ್ಗಗಳಲ್ಲಿ ವಿಮಾನ ಪ್ರಯಾಣದ ಸೌಲಭ್ಯ ಪಡೆಯುತ್ತಿದ್ದಾರೆ. 1 ಕೋಟಿಗೂ ಹೆಚ್ಚು ಜನರು ಅತ್ಯಂತ ಕೈಗೆಟುಕುವ ದರದಲ್ಲಿ ಅನೇಕರು ಮೊದಲ ಬಾರಿಗೆ ವಿಮಾನ ಪ್ರಯಾಣ ಅನುಭವಿಸಿದ್ದಾರೆ. ಇಂದು ದಿಯೋಘರ್‌ನಿಂದ ಕೋಲ್ಕತ್ತಾಗೆ ವಿಮಾನ ಹಾರಾಟ ಆರಂಭವಾಗಿದ್ದು, ರಾಂಚಿ, ದೆಹಲಿ ಮತ್ತು ಪಾಟ್ನಾಗೆ ಶೀಘ್ರವೇ ವಿಮಾನ ಹಾರಾಟ ಆರಂಭವಾಗಲಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಬೊಕಾರೊ ಮತ್ತು ದುಮ್ಕಾದಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ಅವರು ಹೇಳಿದರು.

ಸಾರಿಗೆ ಸಂಪರ್ಕದ ಜೊತೆಗೆ, ಕೇಂದ್ರ ಸರ್ಕಾರವು ದೇಶದ ಧಾರ್ಮಿಕ, ನಂಬಿಕೆ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದ ಪ್ರಮುಖ ಸ್ಥಳಗಳಲ್ಲಿ ಸೌಲಭ್ಯಗಳ ಸೃಷ್ಟಿಗೆ ಗಮನ ಹರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಪ್ರಸಾದ ಯೋಜನೆಯಡಿ ಬಾಬಾ ಬೈದ್ಯನಾಥ ಧಾಮದಲ್ಲಿ ಆಧುನಿಕ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ಸಮಗ್ರ ವಿಧಾನವು ಯೋಜನೆಗಳಿಗೆ ಮಾರ್ಗದರ್ಶನ ನೀಡಿದಾಗ, ಸಮಾಜದ ವಿವಿಧ ವಲಯಗಳಲ್ಲಿ ಆದಾಯದ ಹೊಸ ಮಾರ್ಗಗಳು ಸೃಷ್ಟಿಯಾಗುತ್ತವೆ ಮತ್ತು ಹೊಸ ಸೌಲಭ್ಯಗಳು ಹೊಸ ಅವಕಾಶಗಳನ್ನು ಸೃಷ್ಟಿಸುತ್ತವೆ ಎಂದು ಪ್ರಧಾನಿ ತಿಳಿಸಿದರು.

ಜಾರ್ಖಂಡ್ ರಾಜ್ಯಕ್ಕೆ ಅನಿಲ ಆಧಾರಿತ ಆರ್ಥಿಕತೆ ಹೆಚ್ಚಿಸುವ ದೇಶದ ಪ್ರಯತ್ನದ ಪ್ರಯೋಜನಗಳನ್ನು ಪ್ರಧಾನಮಂತ್ರಿ ವಿವರಿಸಿದರು. ಪ್ರಧಾನಮಂತ್ರಿ ಊರ್ಜಗಂಗಾ ಯೋಜನೆ ಹಳೆಯ ಚಿತ್ರಣವನ್ನು ಬದಲಾಯಿಸುತ್ತಿದೆ. "ನಾವು ಕೊರತೆಗಳನ್ನು ಅವಕಾಶಗಳಾಗಿ ಪರಿವರ್ತಿಸಲು ಅನೇಕ ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದೇವೆ" ಎಂದು ಅವರು ಹೇಳಿದರು. ಗೇಲ್(ಜಿಎಐಎಲ್)ನ ಜಗದೀಶ್‌ಪುರ-ಹಲ್ದಿಯಾ-ಬೊಕಾರೊ-ಧಮ್ರಾ ಪೈಪ್‌ಲೈನ್‌ನ ಬೊಕಾರೊ-ಅಂಗುಲ್ ವಿಭಾಗವು ಜಾರ್ಖಂಡ್ ಮತ್ತು ಒಡಿಶಾದ 11 ಜಿಲ್ಲೆಗಳಲ್ಲಿ ನಗರ ಅನಿಲ ವಿತರಣಾ ಜಾಲವನ್ನು ವಿಸ್ತರಿಸಲಿದೆ ಎಂದು ಅವರು ತಿಳಿಸಿದರು.

ನಾವು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ಮಂತ್ರವನ್ನು ಅನುಸರಿಸುತ್ತಿದ್ದೇವೆ. ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಅಭಿವೃದ್ಧಿ, ಉದ್ಯೋಗ, ಸ್ವ-ಉದ್ಯೋಗದ ಹೊಸ ಮಾರ್ಗಗಳನ್ನು ಕಂಡುಹಿಡಿಯಲಾಗುತ್ತಿದೆ. ನಾವು ಅಭಿವೃದ್ಧಿಯ ಮಹತ್ವಾಕಾಂಕ್ಷೆಗೆ ಒತ್ತು ನೀಡಿದ್ದೇವೆ. ಮಹತ್ವಾಕಾಂಕ್ಷಿ ಜಿಲ್ಲೆಗಳ ಮೇಲೆ ಕೇಂದ್ರೀಕರಿಸಿದ್ದೇವ. ಈ ಎಲ್ಲಾ ಉಪಕ್ರಮಗಳು ಜಾರ್ಖಂಡ್‌ಗೆ ಪ್ರಯೋಜನಗಳನ್ನು ಒದಗಿಸಲಿವೆ. ಸ್ವಾತಂತ್ರ್ಯಾ ನಂತರ ದುರ್ಗಮ ಮತ್ತು ದೂರದ ಪ್ರದೇಶಗಳಲ್ಲಿರುವ 18,000 ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ. ನಲ್ಲಿ ನೀರು, ರಸ್ತೆಗಳು ಮತ್ತು ಗ್ಯಾಸ್ ಸಂಪರ್ಕವನ್ನು ತರಲು ಸರ್ಕಾರವು ಕಳೆದ 8 ವರ್ಷಗಳಲ್ಲಿ ಕಾರ್ಯಾಚರಣೆ ಮಾದರಿಯಲ್ಲಿ (ಮಿಷನ್ ಮೋಡ್‌) ಕೆಲಸ ಮಾಡಿದೆ ಎಂದು ಅವರು ಹೇಳಿದರು.

ಬೃಹತ್ (ಮೆಟ್ರೊ) ನಗರಗಳನ್ನು ದಾಟಿ ಇತರೆ ಎಲ್ಲಾ ನಗರ ಪಟ್ಟಣಗಳಿಗೂ ಆಧುನಿಕ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಉಲ್ಲೇಖಿಸಿದ ಪ್ರಧಾನಿ, ಸಾಮಾನ್ಯ ನಾಗರಿಕರ ಜೀವನ ಸುಧಾರಿಸಲು ಕ್ರಮಗಳನ್ನು ಕೈಗೊಂಡಾಗ, ರಾಷ್ಟ್ರೀಯ ಆಸ್ತಿಗಳು ಸೃಷ್ಟಿಯಾಗುತ್ತವೆ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಹೊಸ ಅವಕಾಶಗಳು ಹೊರಹೊಮ್ಮುತ್ತವೆ ಎಂಬುದಕ್ಕೆ ಈ ಯೋಜನೆಗಳು ಪುರಾವೆಗಳಾಗಿವೆ ಎಂದು ಹೇಳಿದರು. "ಇದು ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿರುವ ಬೆಳವಣಿಗೆಯಾಗಿದೆ ಮತ್ತು ನಾವು ಒಟ್ಟಾಗಿ (ಸಂಘಟಿತರಾಗಿ) ಈ ಅಭಿವೃದ್ಧಿಯನ್ನು ವೇಗಗೊಳಿಸಬೇಕಾಗಿದೆ" ಎಂದು ಪ್ರಧಾನಿ ಹೇಳಿದರು.

ದಿಯೋಘರ್‌ನಲ್ಲಿ ಅಭಿವೃದ್ಧಿ ಯೋಜನೆಗಳು

ಬಾಬಾ ಬೈದ್ಯನಾಥ ಧಾಮಕ್ಕೆ ನೇರ ಸಂಪರ್ಕ ಕಲ್ಪಿಸುವ ಪ್ರಮುಖ ಹೆಜ್ಜೆಯಾಗಿ, ಪ್ರಧಾನ ಮಂತ್ರಿ ಅವರು ದಿಯೋಘರ್ ವಿಮಾನ ನಿಲ್ದಾಣ ಉದ್ಘಾಟಿಸಿದರು. ಇದು ದೇಶಾದ್ಯಂತ ಭಕ್ತರ ಪ್ರಮುಖ ಧಾರ್ಮಿಕ ಸ್ಥಳವಾಗಿದೆ. 400 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವು ವಾರ್ಷಿಕ 5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ನಿಭಾಯಿಸಲು ಸಜ್ಜಾಗಿದೆ.

ದಿಯೋಘರ್‌ನಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಮಹಾಸಂಸ್ಥೆ(ಎಐಐಎಂಎಸ್-ಏಮ್ಸ್) ಈ ಭಾಗದ ಆರೋಗ್ಯ ಕ್ಷೇತ್ರಕ್ಕೆ ವರದಾನವಾಗಿದೆ. ದಿಯೋಘರ್‌ ಏಮ್ಸ್‌ನಲ್ಲಿರುವ ಒಳರೋಗಿಗಳ ವಿಭಾಗ (ಐಪಿಡಿ) ಮತ್ತು ಆಪರೇಷನ್ ಥಿಯೇಟರ್ ಸೇವೆಗಳನ್ನು ಪ್ರಧಾನಿ ಅವರು ದೇಶಕ್ಕೆ ಸಮರ್ಪಿಸಿದರು. ಇದು ದೇಶದ ಎಲ್ಲಾ ಭಾಗಗಳಲ್ಲಿ ಅತ್ಯುತ್ತಮ ಆರೋಗ್ಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವ ಪ್ರಧಾನ ಮಂತ್ರಿ ಅವರ ದೃಷ್ಟಿಗೆ ಅನುಗುಣವಾಗಿದೆ. ಪ್ರಧಾನ ಮಂತ್ರಿ ಅವರು 2018 ಮಾರ್ಚ್ 25 ರಂದು ಏಮ್ಸ್ ದಿಯೋಘರ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.

ದೇಶಾದ್ಯಂತ ಧಾರ್ಮಿಕ ಪ್ರಾಮುಖ್ಯತೆಯ ಸ್ಥಳಗಳಲ್ಲಿ ವಿಶ್ವ ದರ್ಜೆಯ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮತ್ತು ಅಂತಹ ಎಲ್ಲಾ ಸ್ಥಳಗಳಲ್ಲಿ ಪ್ರವಾಸಿಗರಿಗೆ ಸೌಕರ್ಯಗಳನ್ನು ಸುಧಾರಿಸುವ ಪ್ರಧಾನ ಮಂತ್ರಿ ಅವರ ಬದ್ಧತೆಯಂತೆ, ಪ್ರವಾಸೋದ್ಯಮ ಸಚಿವಾಲಯದ ಪ್ರಸಾದ್ ಯೋಜನೆಯಡಿ ಮಂಜೂರಾದ “ದಿಯೋಘರ್ ನ ಬೈದ್ಯನಾಥ ಧಾಮ್ ಅಭಿವೃದ್ಧಿ” ಯೋಜನೆ ಮತ್ತಷ್ಟು ಉತ್ತೇಜನ ಪಡೆಯಲಿದ್ದು, ಉದ್ಘಾಟನೆ ನಡೆಯಲಿದೆ. ಪ್ರಧಾನಮಂತ್ರಿ ಅವರು ಉದ್ಘಾಟಿಸುತ್ತಿರುವ ಯೋಜನೆಗಳು ತಲಾ 2,000 ಯಾತ್ರಿಕರ ಸಾಮರ್ಥ್ಯದ 2 ಬೃಹತ್ ಯಾತ್ರಾ ಸಭಾ ಭವನಗಳ ಅಭಿವೃದ್ಧಿ; ಜಾಲ್ಸಾರ್ ಕೆರೆ ಮುಂಭಾಗ ಅಭಿವೃದ್ಧಿ; ಶಿವಗಂಗಾ ಕೊಳ ಅಭಿವೃದ್ಧಿ ಒಳಗೊಂಡಿವೆ. ಹೊಸ ಸೌಕರ್ಯಗಳು ಬಾಬಾ ಬೈದ್ಯನಾಥ ಧಾಮಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ಪ್ರವಾಸೋದ್ಯಮದ ಅನುಭವವನ್ನು ಇನ್ನಷ್ಟು ಉತ್ಕೃಷ್ಟಗೊಳಿಸಲಿದೆ.

10,000 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಬಹುರಸ್ತೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ಅವರು ನೆರವೇರಿಸಿದರು. ಉದ್ಘಾಟನೆಯಾದ ಯೋಜನೆಗಳಲ್ಲಿ ಎನ್ಎಚ್-2ರಲ್ಲಿ ಗೋರಾರ್‌ನಿಂದ ಬರ್ವಾಡದವರೆಗೆ ಆರು ಫಥಗಳ ಮಾರ್ಗ, ಎನ್ಎಚ್-32 ರಲ್ಲಿ ಪಶ್ಚಿಮ ಬಂಗಾಳದ ಗಡಿ ಭಾಗದವರೆಗೆ ರಾಜ್‌ಗಂಜ್‌-ಚಾಸ್ ಮಾರ್ಗದ ಅಭಿವೃದ್ಧಿ ಸೇರಿವೆ. ಪ್ರಧಾನ ಮಂತ್ರಿ ಶಂಕುಸ್ಥಾಪನೆ ನೆರವೇರಿಸಿದ ಪ್ರಮುಖ ಯೋಜನೆಗಳಲ್ಲಿ ಎನ್‌ಎಚ್-80ರಲ್ಲಿ ಮಿರ್ಜಾಚೌಕಿ-ಫರಕ್ಕಾ ಮಾರ್ಗದಲ್ಲಿ ಚತುಷ್ಪಥ ರಸ್ತೆ, ಎನ್ಎಚ್-98ರಲ್ಲಿ ಹರಿಹರಗಂಜ್‌ನಿಂದ ಪರ್ವಾ ಮೋರ್ ವರೆಗೆ ಚತುಷ್ಪಥ ರಸ್ತೆ, ಎನ್ಎಚ್-23ರಲ್ಲಿ ಪಾಲ್ಮಾದಿಂದ ಗುಮ್ಲಾದವರೆಗೆ ಚತುಷ್ಪಥ ರಸ್ತೆ, ಎನ್‌ಎಚ್-75ರ ಕಚ್ಚೇರಿ ಚೌಕ್‌ನಿಂದ ಎಲಿವೇಟೆಡ್ ಕಾರಿಡಾರ್‌ನಿಂದ ಪಿಸ್ಕಾ ಮೋರ್ ವಿಭಾಗ ಒಳಗೊಂಡಿವೆ. ಈ ಎಲ್ಲಾ ಯೋಜನೆಗಳು ಈ ಭಾಗದಲ್ಲಿ ಸಂಪರ್ಕ ಸುಧಾರಣೆಗೆ ಮತ್ತಷ್ಟು ಉತ್ತೇಜನವನ್ನು ನೀಡಲಿವೆ. ಸಾಮಾನ್ಯ ಜನರ ಸಂಚಾರ ಸುಲಭಗೊಳಿಸಲಿದೆ.

ಪ್ರಧಾನ ಮಂತ್ರಿ ಅವರು 3,000 ಕೋಟಿ ರೂ. ವೆಚ್ಚದ ವಿವಿಧ ಇಂಧನ ಮೂಲಸೌಕರ್ಯ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಉದ್ಘಾಟನೆಯಾದ ಯೋಜನೆಗಳಲ್ಲಿ ಬೊಕಾರೊ - ಅಂಗುಲ್ ವಿಭಾಗದಲ್ಲಿ ಗೇಲ್ ನ ಜಗದೀಶ್‌ಪುರ-ಹಲ್ದಿಯಾ-ಬೊಕಾರೊ-ಧಮ್ರಾ ಪೈಪ್‌ಲೈನ್‌ ಒಳಗೊಂಡಿವೆ. ಬರಿ, ಹಜಾರಿಬಾಗ್‌ನಲ್ಲಿ ಎಚ್ ಪಿಸಿಎಲ್ ನ ಹೊಸ ಎಲ್ಪಿಜಿ ಬಾಟ್ಲಿಂಗ್ ಘಟಕ ಮತ್ತು ಬಿಪಿಸಿಎಲ್ ನ ಬೊಕಾರೊ ಎಲ್ಪಿಜಿ ಬಾಟ್ಲಿಂಗ್ ಘಟಕ ಸಹ ಸೇರಿವೆ. ಪರ್ಬತ್‌ಪುರ ಅನಿಲ ಸಂಗ್ರಹಣಾ ಕೇಂದ್ರ, ಝರಿಯಾ ಬ್ಲಾಕ್, ಒಎನ್‌ಜಿಸಿಗೆ ಕೋಲ್ ಬೆಡ್ ಮೀಥೇನ್ (ಸಿಬಿಎಂ) ಘಟಕಗಳಿಗೆ ಪ್ರಧಾನಿ ಶಂಕುಸ್ಥಾಪನೆ ನೆರವೇರಿಸಿದರು.

ಪ್ರಧಾನ ಮಂತ್ರಿ ಅವರು 2 ಪ್ರಮುಖ ರೈಲ್ವೆ ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು. ಗೊಡ್ಡಾ – ಹನ್ಸ್ ದಿಹಾ ಮಾರ್ಗದ ವಿದ್ಯುಚ್ಚಾಲಿತ ರೈಲು ಯೋಜನೆ ಮತ್ತು ಗರ್ವಾ-ಮಹುರಿಯಾ ಜೋಡಿ ಮಾರ್ಗ ಯೋಜನೆಯನ್ನು ಲೋಕಾರ್ಪಣೆ ಮಾಡಿದರು. ಈ ಯೋಜನೆಗಳು ಕೈಗಾರಿಕೆಗಳು ಮತ್ತು ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಉದ್ಯಮಗಳಿಗೆ ಸರಕುಗಳ ತಡೆರಹಿತ ಸಂಚಾರ ಸುಲಭಗೊಳಿಸಲು ಸಹಾಯ ಮಾಡುತ್ತದೆ. ಈ ರೈಲು ಯೋಜನೆಗಳು ದುಮ್ಕಾದಿಂದ ಅಸನ್ಸೋಲ್‌ಗೆ ರೈಲು ಸಂಚಾರವನ್ನು ಸುಲಭಗೊಳಿಸಲಿವೆ. ಪ್ರಧಾನ ಮಂತ್ರಿ ಅವರು 3 ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ರಾಂಚಿ ರೈಲು ನಿಲ್ದಾಣದ ಪುನಾಭಿವೃದ್ಧಿ; ಜಸಿದಿಹ್ ಬೈಪಾಸ್ ಮಾರ್ಗ ಮತ್ತು ಗೊಡ್ಡಾದಲ್ಲಿ ಎಲ್ ಎಚ್ ಬಿ ಕೋಚ್ ನಿರ್ವಹಣೆ ಡಿಪೋ ನಿರ್ಮಾಣ ಇವಾಗಿವೆ. ಪ್ರಸ್ತಾವಿತ ಪುನರಾಭಿವೃದ್ಧಿ ರಾಂಚಿ ನಿಲ್ದಾಣವು ಫುಡ್ ಕೋರ್ಟ್, ಎಕ್ಸಿಕ್ಯುಟಿವ್ ಲಾಂಜ್, ಕೆಫೆಟೇರಿಯಾ, ಹವಾನಿಯಂತ್ರಿತ ವಿಶ್ರಾಂತಿ ಕೊಠಡಿಗಳು ಇತ್ಯಾದಿ ಒಳಗೊಂಡಂತೆ ವಿಶ್ವದರ್ಜೆಯ ಪ್ರಯಾಣಿಕರ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿದ್ದು, ಪ್ರಯಾಣದ ಸುಲಭತೆ ಮತ್ತು ಪ್ರಯಾಣಿಕರ ಸೌಕರ್ಯವನ್ನು ಖಚಿತಪಡಿಸಲಿದೆ.

​​

*********

 

 

 

 

 

 

 

 

 

 

 


(Release ID: 1841332) Visitor Counter : 201