ಪ್ರಧಾನ ಮಂತ್ರಿಯವರ ಕಛೇರಿ

1800 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ


"ಕಾಶಿಯು ಇಂದು ಪರಂಪರೆಯೊಂದಿಗೆ ಅಭಿವೃದ್ಧಿಯ ಚಿತ್ರಣವನ್ನು ಮುಂದಿಡುತ್ತದೆ"

"ಸಬ್ ಕಾ ಸಾಥ್, ಸಬ್ ಕಾ ವಿಕಾಸ್; ʻಸಬ್ ಕಾ ವಿಶ್ವಾಸ್ ಔರ್ ಸಬ್ ಕಾ ಪ್ರಯಾಸ್ʼಗಳಿಗೆ ನನ್ನ ಕಾಶಿ ಒಂದು ಉತ್ತಮ ಉದಾಹರಣೆಯಾಗಿದೆ"

"ವಾಮ ಮಾರ್ಗಗಳಿಂದ ದೇಶಕ್ಕೆ ಪ್ರಯೋಜನವಾಗುವುದಿಲ್ಲ ಎಂಬ ಸಂದೇಶವನ್ನು ಕಾಶಿಯ ನಾಗರಿಕರು ಇಡೀ ದೇಶಕ್ಕೆ ನೀಡಿದ್ದಾರೆ"

"ಸರಕಾರವು ಸದಾ ಬಡವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ, ಅವರ ಸಂತೋಷ ಮತ್ತು ದುಃಖದಲ್ಲಿ ಅವರನ್ನು ಬೆಂಬಲಿಸಲು ಪ್ರಯತ್ನಿಸುತ್ತದೆ"

"ನಮಗೆ, ಅಭಿವೃದ್ಧಿ ಎಂದರೆ ಕೇವಲ ಥಳುಕಲ್ಲ. ನಮಗೆ ಅಭಿವೃದ್ಧಿ ಎಂದರೆ ಬಡವರು, ದೀನದಲಿತರು, ಅವಕಾಶ ವಂಚಿತರು, ಹಿಂದುಳಿದವರು, ಬುಡಕಟ್ಟು ಜನರು, ತಾಯಂದಿರು ಮತ್ತು ಸಹೋದರಿಯರ ಸಬಲೀಕರಣ".

Posted On: 07 JUL 2022 5:23PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಾರಾಣಸಿಯ ಸಿಗ್ರಾದ ಡಾ. ಸಂಪೂರ್ಣಾನಂದ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 1800 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿಬೆನ್ ಪಟೇಲ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮೊದಲಿಗೆ, ಪ್ರಧಾನಮಂತ್ರಿಯವರು ಇತ್ತೀಚಿನ ಚುನಾವಣೆಗಳಲ್ಲಿ ನೀಡಿದ ಅಪಾರ ಬೆಂಬಲಕ್ಕಾಗಿ ಉತ್ತರ ಪ್ರದೇಶ ಮತ್ತು ಕಾಶಿಯ ಜನತೆಗೆ ಧನ್ಯವಾದ ಅರ್ಪಿಸಿದರು.


ಕಾಶಿ ಸದಾ ಜೀವಂತವಾಗಿರುತ್ತದೆ ಮತ್ತು ಅದೊಂದು ನಿರಂತರ ಪ್ರವಾಹ ಎಂದು ಪ್ರಧಾನಮಂತ್ರಿ ಅವರು ವರ್ಣಿಸಿದರು. ಪರಂಪರೆ ಮತ್ತು ಅಭಿವೃದ್ಧಿ ಎರಡನ್ನೂ ಹೊಂದಿರುವ ಕಾಶಿಯು ಈಗ ಇಡೀ ದೇಶದ ಚಿತ್ರಣವನ್ನು ತೋರಿಸುತ್ತದೆ. ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳು ಮತ್ತು ಉಪಕ್ರಮಗಳು ಪೂರ್ಣಗೊಂಡಿವೆ ಮತ್ತು ಅನೇಕವು ನಡೆಯುತ್ತಿವೆ ಎಂದು ಪ್ರಧಾನಿ ಹೇಳಿದರು. ಕಾಶಿಯ ಆತ್ಮವು ಅಂತರ್ಗತವಾಗಿದೆ, ಆದರೆ, ಕಾಶಿಯ ದೇಹದಲ್ಲಿ ಅವಿರತ ಸುಧಾರಣೆ ನಡೆಯುತ್ತಿದೆ ಎಂದು ಅವರು ಹೇಳಿದರು. ಈ ಬೆಳವಣಿಗೆಯು ಕಾಶಿಯನ್ನು ಹೆಚ್ಚು ಚಲನಶೀಲ, ಪ್ರಗತಿಶೀಲ ಮತ್ತು ಸಂವೇದನಾಶೀಲವಾಗಿಸಿದೆ ಎಂದು ಪ್ರಧಾನಿ ಹೇಳಿದರು. "ಸಬ್ ಕಾ ಸಾಥ್-ಸಬ್ ಕಾ ವಿಕಾಸ್, ʻಸಬ್ ಕಾ ವಿಶ್ವಾಸ್ ಔರ್ ಸಬ್ ಕಾ ಪ್ರಯಾಸ್ʼ ಗಳಿಗೆ ನನ್ನ ಕಾಶಿ ಉತ್ತಮ ಉದಾಹರಣೆಯಾಗಿದೆ," ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. 


ಕಾಶಿಯ ಸಂಸದರೂ ಆಗಿರುವ ಪ್ರಧಾನಮಂತ್ರಿಯವರು, "ಕಾಶಿಯ ಪ್ರಜ್ಞಾವಂತ ನಾಗರಿಕರು ಇಡೀ ದೇಶಕ್ಕೇ ಮಾರ್ಗದರ್ಶನ ನೀಡುವ ರೀತಿಯಲ್ಲಿ ಕೆಲಸ ಮಾಡಿದ್ದು ನೋಡಿ ನನಗೆ ಸಂತೋಷವಾಗಿದೆ. ವಾಮ ಮಾರ್ಗಗಳಿಂದ ದೇಶಕ್ಕೆ ಪ್ರಯೋಜನವಾಗುವುದಿಲ್ಲ ಎಂಬ ಸಂದೇಶವನ್ನು ಕಾಶಿಯ ನಾಗರಿಕರು ಇಡೀ ದೇಶಕ್ಕೆ ಸಾರಿದ್ದಾರೆ. ತಾತ್ಕಾಲಿಕ ಮತ್ತು ವಾಮ ಮಾರ್ಗದ ಪರಿಹಾರಗಳಿಗಿಂತ ದೀರ್ಘಕಾಲೀನ ಪರಿಹಾರಗಳು ಮತ್ತು ಯೋಜನೆಗಳಿಗೆ ಆದ್ಯತೆ ನೀಡಿದ್ದಕ್ಕಾಗಿ ಪ್ರಧಾನಿಯವರು ಸ್ಥಳೀಯ ಜನರನ್ನು ಶ್ಲಾಘಿಸಿದರು. ಮೂಲಸೌಕರ್ಯ ಮತ್ತು ಇತರ ಕ್ಷೇತ್ರಗಳಲ್ಲಿನ ಸುಧಾರಣೆಗಳು ನಗರದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಿವೆ. ಜೊತೆಗೆ, ವ್ಯಾಪಾರ ಮತ್ತು ಸುಗಮ ಜೀವನಕ್ಕೆ ಹೊಸ ಅವಕಾಶಗಳನ್ನು ಸೃಷ್ಟಿಸಿವೆ,ʼʼ ಎಂದು ಅವರು ಹೇಳಿದರು.


ಮುಂಬರುವ ಶ್ರಾವಣ ಮಾಸದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ದೇಶ ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಾಬಾ ವಿಶ್ವನಾಥನ ಭಕ್ತರು ಕಾಶಿಗೆ ಬರಲಿದ್ದಾರೆ ಎಂದರು. ʻವಿಶ್ವನಾಥ ಧಾಮ್ʼ ಯೋಜನೆ ಪೂರ್ಣಗೊಂಡ ನಂತರ ಇದು ಮೊದಲ ಶ್ರಾವಣ ಉತ್ಸವವಾಗಲಿದೆ ಎಂದು ಅವರು ಮಾಹಿತಿ ನೀಡಿದರು. ವಿಶ್ವನಾಥ ಧಾಮದ ಬಗ್ಗೆ ಇಡೀ ಜಗತ್ತಿನಲ್ಲಿ ಎಷ್ಟು ಉತ್ಸಾಹವಿದೆ ಎಂಬುದು ಕಳೆದ ತಿಂಗಳುಗಳಲ್ಲಿ ಜನರ ಅನುಭವಕ್ಕೆ ಬಂದಿದೆ ಎಂದರು. ಭಕ್ತರ ಅನುಭವವನ್ನು ಸಾಧ್ಯವಾದಷ್ಟು ಶ್ರೀಮಂತ ಮತ್ತು ಸುಲಭಗೊಳಿಸುವ ಗುರಿಯೊಂದಿಗೆ ಸರಕಾರ ಕ್ರಮಗಳನ್ನು ಮುಂದುವರಿಸಿದೆ. ವಿವಿಧ ಧಾರ್ಮಿಕ ಯಾತ್ರೆಗಳನ್ನು ಸುಲಭ ಮತ್ತು ಅನುಕೂಲಕರವಾಗಿ ಮಾಡಲಾಗುತ್ತಿದೆ ಎಂದರು.
"ನಮಗೆ ಅಭಿವೃದ್ಧಿ ಎಂದರೆ ಕೇವಲ ತೋರಿಕೆಯ ಥಳುಕು ಎಂದರ್ಥವಲ್ಲ. ನಮಗೆ ಅಭಿವೃದ್ಧಿ ಎಂದರೆ ಬಡವರು, ದೀನದಲಿತರು, ಅವಕಾಶ ವಂಚಿತರು, ಹಿಂದುಳಿದವರು, ಬುಡಕಟ್ಟು ಜನರು, ತಾಯಂದಿರು ಮತ್ತು ಸಹೋದರಿಯರ ಸಬಲೀಕರಣ", ಎಂದು ಪ್ರಧಾನಿ ಹೇಳಿದರು. ಪ್ರತಿ ಕುಟುಂಬಕ್ಕೂ ಸುದೃಢ ಮನೆಗಳು ಮತ್ತು ಕೊಳಾಯಿ ನೀರನ್ನು ಒದಗಿಸಲು ಸರಕಾರ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ನಮ್ಮ ಸರಕಾರವು ಸದಾ ಬಡವರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತದೆ, ಅವರ ಸಂತೋಷ ಮತ್ತು ದುಃಖದಲ್ಲಿ ಅವರ ಬೆನ್ನಿಗೆ ನಿಲ್ಲಲು ಪ್ರಯತ್ನಿಸುತ್ತದೆ ಎಂದು ಪ್ರಧಾನಿ ಹೇಳಿದರು. ಉಚಿತ ಕೋವಿಡ್‌ ಲಸಿಕೆಯಿಂದ ಹಿಡಿದು ಬಡವರಿಗೆ ಉಚಿತ ಪಡಿತರವನ್ನು ಒದಗಿಸುವವರೆಗೆ, ಸರಕಾರವು ಜನರ ಸೇವೆ ಮಾಡಲು ಒದಗಿಬಂದ ಯಾವ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ. ʻಡಿಜಿಟಲ್ ಇಂಡಿಯಾʼ, ʻಆಯುಷ್ಮಾನ್ ಭಾರತ್ʼ ಯೋಜನೆಗಳು, ಹೆಚ್ಚುತ್ತಿರುವ ವೈದ್ಯಕೀಯ ಮೂಲಸೌಕರ್ಯಗಳು ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ ಎಂದು ಪ್ರಧಾನಿ ಹೇಳಿದರು. ಒಂದು ಕಡೆ, ದೇಶದ ನಗರಗಳನ್ನು ಹೊಗೆ ಮುಕ್ತವಾಗಿಸಲು ನಾವು ʻಸಿಎನ್‌ಜಿʼ ಚಾಲಿತ ವಾಹನಗಳ ಸೌಲಭ್ಯಗಳನ್ನು ವಿಸ್ತರಿಸುತ್ತಿದ್ದೇವೆ. ಮತ್ತೊಂದೆಡೆ, ನಮ್ಮ ನಾವಿಕರ ಡೀಸೆಲ್ ಮತ್ತು ಪೆಟ್ರೋಲ್ ಚಾಲಿತ ದೋಣಿಗಳನ್ನು ʻಸಿಎನ್‌ಜಿʼ ಚಾಲಿತವಾಗಿ ಬದಲಾಯಿಸುವ ಹಾಗೂ ಗಂಗಾ ಮಾತೆಯನ್ನು ಮಾಲಿನ್ಯಮುಕ್ತಗೊಳಿಸುವ ಆಯ್ಕೆಯನ್ನು ಸಹ ನಾವು ನೀಡುತ್ತಿದ್ದೇವೆ.
ಹೊಸ ಕ್ರೀಡಾ ಕೇಂದ್ರವನ್ನು ಹೊಂದಲು ಕ್ರೀಡಾಪಟುಗಳ ಉತ್ಸಾಹದ ಬಗ್ಗೆ ಪ್ರಧಾನಮಂತ್ರಿಯವರು ಗಮನ ಸೆಳೆದರು. ಒಲಿಂಪಿಕ್ ಕ್ರೀಡೆಗಳ ಎಲ್ಲಾ ಸೌಲಭ್ಯಗಳನ್ನು ಕಾಶಿಯಲ್ಲಿ ಲಭ್ಯವಾಗುವಂತೆ ಮಾಡಲು ಸರಕಾರ ಕಾರ್ಯೋನ್ಮುಖವಾಗಿದೆ. ಸಿಗ್ರಾದಲ್ಲಿ ಮರು ಅಭಿವೃದ್ಧಿಪಡಿಸಲಾದ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಸೌಲಭ್ಯಗಳನ್ನು ಸೃಷ್ಟಿಸಲಾಗುತ್ತಿದೆ. ಆರು ದಶಕಗಳಷ್ಟು ಹಳೆಯದಾದ ಈ ಕ್ರೀಡಾಂಗಣವು 21ನೇ ಶತಮಾನದ ಸೌಲಭ್ಯಗಳನ್ನು ಹೊಂದಿರುತ್ತದೆ ಎಂದು ಅವರು ಹೇಳಿದರು.
ಗಂಗಾ ಮತ್ತು ವಾರಾಣಸಿಯನ್ನು ಸ್ವಚ್ಛವಾಗಿಡುವಂತೆ ಕಾಶಿಯ ಜನತೆಗೆ ಕರೆ ನೀಡಿದ ಪ್ರಧಾನಮಂತ್ರಿಯವರು, ಜನರ ಬೆಂಬಲ ಮತ್ತು ಬಾಬಾ ವಿಶ್ವನಾಥರ ಆಶೀರ್ವಾದದಿಂದ ನಗರದ ಎಲ್ಲಾ ಸಂಕಲ್ಪಗಳನ್ನು ಈಡೇರಿಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.


ಬಹು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ
ಕಳೆದ ಎಂಟು ವರ್ಷಗಳಲ್ಲಿ, ಪ್ರಧಾನಮಂತ್ರಿಯವರು ವಾರಾಣಸಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸಿದ್ದಾರೆ. ಇದು ನಗರದ ಭೂದೃಶ್ಯದ ಪರಿವರ್ತನೆಗೆ ಕಾರಣವಾಗಿದೆ. ಜನರ ಜೀವನದ ಸುಗಮತೆಯನ್ನು ಹೆಚ್ಚಿಸುವುದೇ ಈ ಪ್ರಯತ್ನದ ಪ್ರಾಥಮಿಕ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿ ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿಯವರು 590 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಿದರು. ಇವುಗಳಲ್ಲಿ ವಾರಾಣಸಿ ಸ್ಮಾರ್ಟ್ ಸಿಟಿ ಮತ್ತು ನಗರ ಯೋಜನೆಗಳ ಅಡಿಯಲ್ಲಿ ಅನೇಕ ಉಪಕ್ರಮಗಳೂ  ಸೇರಿವೆ. ಇದರ ಹಂತ -1 ರಲ್ಲಿ ʻನಮೋ ಘಾಟ್ʼನ ಮರು-ಅಭಿವೃದ್ಧಿ ಮತ್ತು ಸ್ನಾನದ ಜೆಟ್ಟಿ ನಿರ್ಮಾಣವೂ ಸೇರಿದೆ; 500 ಬೋಟ್‌ಗಳ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್‌ಗಳನ್ನು ಸಿಎನ್‌ಜಿಗೆ ಪರಿವರ್ತಿಸುವುದು; ಹಳೆಯ ಕಾಶಿಯ ಕಾಮೇಶ್ವರ ಮಹಾದೇವ ವಾರ್ಡ್ ಮತ್ತು ದಾಸೇಪುರದ ಹರ್ಹುವಾ ಗ್ರಾಮದಲ್ಲಿ ನಿರ್ಮಿಸಲಾದ 600ಕ್ಕೂ ಹೆಚ್ಚು ಇಡಬ್ಲ್ಯೂಎಸ್ ಫ್ಲ್ಯಾಟ್‌ಗಳ ಮರು ಅಭಿವೃದ್ಧಿ; ಲಹರ್ತಾರಾ-ಚೌಕಾ ಘಾಟ್ ಫ್ಲೈಓವರ್ ಅಡಿಯಲ್ಲಿ ಹೊಸ ವೆಂಡಿಂಗ್ ವಲಯ ಮತ್ತು ನಗರ ಸ್ಥಳದ ಅಭಿವೃದ್ಧಿ; ದಶಾಶ್ವಮೇಧ ಘಾಟ್‌ನಲ್ಲಿ ಪ್ರವಾಸಿ ಸೌಲಭ್ಯ ಮತ್ತು ಮಾರುಕಟ್ಟೆ ಸಂಕೀರ್ಣ; ಹಾಘೂ ಐಪಿಡಿಎಸ್ ಕಾಮಗಾರಿ ಹಂತ-3ರ ಅಡಿಯಲ್ಲಿ ನಾಗ್ವಾದಲ್ಲಿ 33/11 ಕೆವಿ ಸಬ್ ಸ್ಟೇಷನ್ ಸಹ ಇದರ ಭಾಗವಾಗಿವೆ.


ಬಬತ್‌ಪುರ-ಕಾಪ್ಸೇಥಿ-ಭದೋಹಿ ರಸ್ತೆಯಲ್ಲಿ ಚತುಷ್ಪಥ ರಸ್ತೆ ಮೇಲ್ಸೇತುವೆ (ಆರ್‌ಒಬಿ) ನಿರ್ಮಾಣ; ಸೆಂಟ್ರಲ್ ಜೈಲ್ ರಸ್ತೆಯಲ್ಲಿ ವರುಣಾ ನದಿಗೆ ಸೇತುವೆ; ಪಿಂದ್ರಾ-ಕಥಿರಾನ್ ರಸ್ತೆ ಅಗಲೀಕರಣ; ಫೂಲ್ಪುರ್-ಸಿಂಧೌರಾ ಸಂಪರ್ಕ ರಸ್ತೆ ಅಗಲೀಕರಣ; 8 ಗ್ರಾಮೀಣ ರಸ್ತೆಗಳ ಬಲವರ್ಧನೆ ಮತ್ತು ನಿರ್ಮಾಣ; 7 ʻಪಿಎಂಜಿಎಸ್‌ವೈʼ ರಸ್ತೆಗಳ ನಿರ್ಮಾಣ ಮತ್ತು ದರ್ಸೌನಾ-ಸಿಂಧೌರಾ ರಸ್ತೆ ಅಗಲೀಕರಣ ಸೇರಿದಂತೆ ವಿವಿಧ ರಸ್ತೆ ಯೋಜನೆಗಳನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಿದರು. 
ಪ್ರಧಾನಮಂತ್ರಿಯವರು ಜಿಲ್ಲೆಯಲ್ಲಿ ಒಳಚರಂಡಿ ಮತ್ತು ನೀರು ಪೂರೈಕೆ ಸುಧಾರಣೆಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನೂ ಉದ್ಘಾಟಿಸಿದರು. ಇವುಗಳಲ್ಲಿ ಗುಂಡಿರಹಿತ ತಂತ್ರಜ್ಞಾನದ ಮೂಲಕ ವಾರಾಣಸಿ ನಗರದ ಹಳೆಯ ಟ್ರಂಕ್ ಒಳಚರಂಡಿ ಮಾರ್ಗದ ಪುನಶ್ಚೇತನ; ಒಳಚರಂಡಿ ಮಾರ್ಗಗಳ ಅಳವಡಿಕೆ; ಟ್ರಾನ್ಸ್ ವರುಣಾ ಪ್ರದೇಶದಲ್ಲಿ 25000ಕ್ಕೂ ಹೆಚ್ಚು ಒಳಚರಂಡಿ ಮನೆ ಸಂಪರ್ಕಗಳು; ನಗರದ ಸಿಸ್ ವರುಣಾ ಪ್ರದೇಶದಲ್ಲಿ ಸೋರಿಕೆ ದುರಸ್ತಿ ಕಾರ್ಯಗಳು; ತಾತೆಪುರ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆ, ಇತ್ಯಾದಿಗಳು ಸೇರಿವೆ. ಮಹಗಾಂವ್ ಗ್ರಾಮದಲ್ಲಿ ಐಟಿಐ, ಬನಾರಸ್‌ ಹಿಂದೂ ವಿವಿಯಲ್ಲಿ ವೈದಿಕ ವಿಜ್ಞಾನ ಕೇಂದ್ರದ ಎರಡನೇ ಹಂತ, ರಾಮನಗರದ ಸರಕಾರಿ  ಬಾಲಕಿಯರ ಗೃಹ, ದುರ್ಗಾಕುಂಡ್‌ನ ಸರಕಾರಿ ವೃದ್ಧಾಶ್ರಮ, ಮಹಿಳಾ ಗೃಹದ ಥೀಮ್ ಪಾರ್ಕ್ ಸೇರಿದಂತೆ ವಿವಿಧ ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳನ್ನೂ ಪ್ರಧಾನಿ ಉದ್ಘಾಟಿಸಲಿದ್ದಾರೆ. 


ಬಡಾ ಲಾಲ್‌ಪುರದ ಡಾ.ಭೀಮ್ ರಾವ್ ಅಂಬೇಡ್ಕರ್ ಕ್ರೀಡಾ ಸಂಕೀರ್ಣದಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಮತ್ತು ಸಿಂಥೆಟಿಕ್ ಬ್ಯಾಸ್ಕೆಟ್ ಬಾಲ್ ಕೋರ್ಟ್; ಹಾಗೂ ಸಿಂಧೌರಾದಲ್ಲಿ ವಸತಿಯೇತರ ಪೊಲೀಸ್ ಠಾಣೆ ಕಟ್ಟಡ, ಹಾಸ್ಟೆಲ್ ಕೊಠಡಿಗಳ ನಿರ್ಮಾಣ, ಮಿರ್ಜಾಮುರಾಡ್, ಚೋಳಾಪುರ, ಜನ್ಸಾ ಮತ್ತು ಕಾಪ್ಸೆಥಿ ಪೊಲೀಸ್ ಠಾಣೆಗಳಲ್ಲಿ ಬ್ಯಾರಕ್‌ಗಳು; ಮತ್ತು ಪಿಂದ್ರಾದಲ್ಲಿ ಅಗ್ನಿ ಶಾಮಕ ಕೇಂದ್ರದ ನಿರ್ಮಾಣ ಸೇರಿದಂತೆ ವಿವಿಧ ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಯ ಯೋಜನೆಗಳನ್ನು ಪ್ರಧಾನಮಂತ್ರಿ ಅವರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು 1200 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಇವುಗಳಲ್ಲಿ ಲಹರ್ತಾರಾ-ʻಬಿಎಚ್‌ಯುʼನಿಂದ ವಿಜಯಾ ಸಿನೆಮಾದವರೆಗೆ ಆರು ಪಥಗಳ ರಸ್ತೆ ಅಗಲೀಕರಣ; ಪಾಂಡೆಪುರ್ ಫ್ಲೈಓವರ್‌ನಿಂದ ರಿಂಗ್ ರಸ್ತೆವರೆಗಿನ ಚತುಷ್ಪಥ ರಸ್ತೆ ಅಗಲೀಕರಣ; ಕುಚಹೇರಿಯಿಂದ ಸಂದಹವರೆಗೆ ನಾಲ್ಕು ಪಥದ ರಸ್ತೆ; ವಾರಾಣಸಿ ಭದೋಹಿ ಗ್ರಾಮೀಣ ರಸ್ತೆಯ ಅಗಲೀಕರಣ ಮತ್ತು ದುರಸ್ತಿ; ವಾರಾಣಸಿ ಗ್ರಾಮೀಣ ಪ್ರದೇಶದಲ್ಲಿ ಐದು ಹೊಸ ರಸ್ತೆಗಳು ಮತ್ತು ನಾಲ್ಕು ಸಿಸಿ ರಸ್ತೆಗಳ ನಿರ್ಮಾಣ; ಬಾಬತ್ಪುರ-ಚೌಬೆಪುರ್ ರಸ್ತೆಯ ಬಾಬತ್ಪುರ ರೈಲ್ವೆ ನಿಲ್ದಾಣದ ಬಳಿ ʻಆರ್‌ಒಬಿʼ ನಿರ್ಮಾಣ ಸೇರಿದಂತೆ ಅನೇಕ ರಸ್ತೆ ಮೂಲಸೌಕರ್ಯ ಯೋಜನೆಗಳು ಸೇರಿವೆ. ಈ ಯೋಜನೆಗಳು ನಗರ ಮತ್ತು ಗ್ರಾಮೀಣ ರಸ್ತೆಗಳಲ್ಲಿನ ಸಂಚಾರ ಹೊರೆಯನ್ನು ಕಡಿಮೆ ಮಾಡಲು ಗಮನಾರ್ಹವಾಗಿ ಸಹಾಯ ಮಾಡುತ್ತವೆ.


ಈ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು, ವಿಶ್ವಬ್ಯಾಂಕ್ ನೆರವಿನ ʻಯುಪಿ ಬಡವರ ಪರ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆʼ ಅಡಿಯಲ್ಲಿ ಸಾರನಾಥ ಬೌದ್ಧ ಸರ್ಕ್ಯೂಟ್‌ನ ಅಭಿವೃದ್ಧಿ ಕಾರ್ಯ, ಅಷ್ಟ ವಿನಾಯಕಕ್ಕೆ ಪಾವನ್ ಪಥ ನಿರ್ಮಾಣ; ದ್ವಾದಶ ಜ್ಯೋತಿರ್ಲಿಂಗ ಯಾತ್ರೆ, ಅಷ್ಟ ಭೈರವ್, ನವಗೌರಿ ಯಾತ್ರೆ, ಪಂಚಕೋಸಿ ಪರಿಕ್ರಮ ಯಾತ್ರಾ ಮಾರ್ಗದಲ್ಲಿ ಐದು ನಿಲುಗಡೆಗಳ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿ ಮತ್ತು ಹಳೆಯ ಕಾಶಿಯ ವಿವಿಧ ವಾರ್ಡ್‌ಗಳ ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಪ್ರಧಾನಮಂತ್ರಿಯವರು ಸಿಗ್ರಾದ ಕ್ರೀಡಾಂಗಣದ ನವೀಕರಣ ಕಾಮಗಾರಿಗಳ 1ನೇ ಹಂತಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.

 

*****



(Release ID: 1840030) Visitor Counter : 214