ಪ್ರಧಾನ ಮಂತ್ರಿಯವರ ಕಛೇರಿ

ಜುಲೈ 7ರಂದು ಪ್ರಧಾನಮಂತ್ರಿ ವಾರಾಣಸಿಗೆ


1800 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಉಪಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಪ್ರಧಾನಮಂತ್ರಿ

ನಗರದಲ್ಲಿ ಮೂಲಸೌಕರ್ಯವನ್ನು ಸುಧಾರಿಸುವ ಮತ್ತು ಸಾಮಾನ್ಯ ಜನರಿಗೆ ಜೀವನಕ್ಕೆ ಅನುಕೂಲಕರ ವಾತಾವರಣವನ್ನು ಒದಗಿಸುವ ಹಾಗು ಹೆಚ್ಚಿಸುವ ನಿಟ್ಟಿನಲ್ಲಿ ಈ ಯೋಜನೆಗಳು ಗಮನ ಕೇಂದ್ರೀಕರಿಸಿವೆ.

ಎನ್.ಇ.ಪಿ. ಅನುಷ್ಠಾನ ಕುರಿತ ಅಖಿಲ ಭಾರತೀಯ ಶಿಕ್ಷಾ ಸಮಾಗಮವನ್ನು ಉದ್ಘಾಟಿಸಲಿದ್ದಾರೆ ಪ್ರಧಾನಮಂತ್ರಿ

ಅಕ್ಷಯ್ ಪಾತ್ರಾ ಮಧ್ಯಾಹ್ನದ ಬಿಸಿಯೂಟ ಅಡುಗೆ ಮನೆಯನ್ನೂ ಪ್ರಧಾನ ಮಂತ್ರಿ ಉದ್ಘಾಟಿಸಲಿದ್ದಾರೆ.

Posted On: 04 JUL 2022 6:35PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022ರ ಜುಲೈ 7 ರಂದು ವಾರಾಣಸಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ವಾರಾಣಸಿಯ ಎಲ್ ಟಿ ಕಾಲೇಜಿನಲ್ಲಿ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸುವ ಸಾಮರ್ಥ್ಯ ಹೊಂದಿರುವ ಅಕ್ಷಯ ಪಾತ್ರಾ ಮಧ್ಯಾಹ್ನದ ಊಟದ ಅಡುಗೆ ಮನೆಯನ್ನು ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ. ಅಪರಾಹ್ನ 2.45ಕ್ಕೆ ಪ್ರಧಾನಮಂತ್ರಿಯವರು ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ-ರುದ್ರಾಕ್ಷ-ಇಲ್ಲಿಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಕುರಿತು ಅಖಿಲ ಭಾರತೀಯ ಶಿಕ್ಷಣ ಸಮಾಗಮವನ್ನು ಉದ್ಘಾಟಿಸುವರು. ತದನಂತರ ಸಂಜೆ 4 ಗಂಟೆಗೆ ಪ್ರಧಾನಮಂತ್ರಿಯವರು ಸಿಗ್ರಾದ ಡಾ. ಸಂಪೂರ್ಣಾನಂದ ಕ್ರೀಡಾಂಗಣವನ್ನು ತಲುಪಲಿದ್ದು, ಅಲ್ಲಿ ಅವರು 1800 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸುವರು.

ಬಹು ಅಭಿವೃದ್ಧಿ ಉಪಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ

ಕಳೆದ ಎಂಟು ವರ್ಷಗಳಲ್ಲಿ, ಪ್ರಧಾನಮಂತ್ರಿಯವರು ವಾರಾಣಸಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಸಾಕಷ್ಟು ಗಮನ ಹರಿಸಿದ್ದಾರೆ. ಇದು ನಗರದ ಭೂದೃಶ್ಯ ಪರಿವರ್ತನೆಗೆ ಕಾರಣವಾಗಿದೆ. ಈ ಪ್ರಯತ್ನದಲ್ಲಿ ಜನರಿಗೆ ಸುಲಭ ಜೀವನಕ್ಕೆ ಅನುಕೂಲಕರ ವ್ಯವಸ್ಥೆಗಳನ್ನು ಒದಗಿಸುವುದಕ್ಕೆ ಆದ್ಯ ಗಮನ ನೀಡಲಾಗಿದೆ. ಈ ದಿಶೆಯಲ್ಲಿ ಮುನ್ನಡೆಯ ಮತ್ತೊಂದು ಹೆಜ್ಜೆಯಾಗಿ, ಸಿಗ್ರಾದ ಡಾ. ಸಂಪೂರ್ಣಾನಂದ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು 590 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಈ ಬಹು ಅಭಿವೃದ್ಧಿ ಉಪಕ್ರಮಗಳಲ್ಲಿ ವಾರಣಾಸಿ ಸ್ಮಾರ್ಟ್ ಸಿಟಿ ಮತ್ತು ನಗರ ಯೋಜನೆಗಳು ಸೇರಿವೆ. ಹಂತ -1 ರಲ್ಲಿ ನಮೋ ಘಾಟ್ ನ ಮರು ಅಭಿವೃದ್ಧಿ ಮತ್ತು ಸ್ನಾನದ ಜೆಟ್ಟಿ ನಿರ್ಮಾಣವೂ ಒಳಗೊಂಡಿದೆ; 500 ಬೋಟ್ ಗಳ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಗಳನ್ನು ಸಿಎನ್ ಜಿಯಾಗಿ ಪರಿವರ್ತಿಸುವುದು; ಹಳೆಯ ಕಾಶಿಯ ಕಾಮೇಶ್ವರ ಮಹಾದೇವ ವಾರ್ಡ್ ಮರು ಅಭಿವೃದ್ಧಿ ಮತ್ತು ದಾಸೇಪುರದ ಹರ್ಹುವಾ ಗ್ರಾಮದಲ್ಲಿ ನಿರ್ಮಿಸಲಾದ 600 ಕ್ಕೂ ಹೆಚ್ಚು ಇಡಬ್ಲ್ಯೂಎಸ್ (ಆರ್ಥಿಕವಾಗಿ ದುರ್ಬಲ ವರ್ಗದವರಿಗಾಗಿರುವ) ಫ್ಲ್ಯಾಟ್ ಗಳ ಮರು ಅಭಿವೃದ್ಧಿ; ಲಹರ್ತಾರಾ-ಚೌಕಾ ಘಾಟ್ ಫ್ಲೈಓವರ್(ಮೇಲ್ಸೇತುವೆ) ಅಡಿಯಲ್ಲಿ ಹೊಸ ವೆಂಡಿಂಗ್ ವಲಯ ಮತ್ತು ನಗರ ಸ್ಥಳ; ದಶಾಶ್ವಮೇಧ ಘಾಟ್ ನಲ್ಲಿ ಪ್ರವಾಸಿ ಸೌಲಭ್ಯ ಮತ್ತು ಮಾರುಕಟ್ಟೆ ಸಂಕೀರ್ಣ; ಮತ್ತು ಐಪಿಡಿಎಸ್ ಕಾಮಗಾರಿ ಹಂತ-3 ರ ಅಡಿಯಲ್ಲಿ ನಾಗ್ವಾದಲ್ಲಿ 33/11 ಕೆವಿ ಸಬ್ ಸ್ಟೇಷನ್ ಇದರಲ್ಲಿ ಸೇರಿದೆ.

ಪ್ರಧಾನಮಂತ್ರಿಯವರು ಬಬತ್ ಪುರ-ಕಾಪ್ಸೆಥಿ-ಭದೋಹಿ ರಸ್ತೆಯಲ್ಲಿ ಚತುಷ್ಪಥ ಮೇಲ್ಸೇತುವೆ (ಆರ್. ಒ.ಬಿ) ಸೇರಿದಂತೆ ವಿವಿಧ ರಸ್ತೆ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಸೆಂಟ್ರಲ್ ಜೈಲ್ ರಸ್ತೆಯ ವರುಣಾ ನದಿಗೆ ಸೇತುವೆ; ಪಿಂದ್ರಾ-ಕಥಿರಾನ್ ರಸ್ತೆ ಅಗಲೀಕರಣ; ಫೂಲ್ಪುರ್-ಸಿಂಧೌರಾ ಸಂಪರ್ಕ ರಸ್ತೆ ಅಗಲೀಕರಣ; 8 ಗ್ರಾಮೀಣ ರಸ್ತೆಗಳ ಬಲವರ್ಧನೆ ಮತ್ತು ನಿರ್ಮಾಣ; 7 ಪಿಎಂಜಿಎಸ್ ವೈ ರಸ್ತೆಗಳ ನಿರ್ಮಾಣ ಮತ್ತು ದರ್ಸೌನಾ-ಸಿಂಧೌರಾ ರಸ್ತೆ ಅಗಲೀಕರಣ ಕಾಮಗಾರಿಗಳು ಇದರಲ್ಲಿ ಸೇರಿವೆ.

ಜಿಲ್ಲೆಯಲ್ಲಿ ಒಳಚರಂಡಿ ಮತ್ತು ನೀರು ಪೂರೈಕೆ ಸುಧಾರಣೆಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಪ್ರಧಾನ ಮಂತ್ರಿ ಅವರು ಉದ್ಘಾಟಿಸಲಿದ್ದಾರೆ. ಟ್ರೆಂಚ್ ಲೆಸ್ ತಂತ್ರಜ್ಞಾನದ ಮೂಲಕ ವಾರಣಾಸಿ ನಗರದ ಹಳೆಯ ಟ್ರಂಕ್ ಒಳಚರಂಡಿ ಮಾರ್ಗದ ಬದಲಾವಣೆಯೂ ಇದರಲ್ಲಿ ಸೇರಿದೆ; ಒಳಚರಂಡಿ ಮಾರ್ಗಗಳ ಅಳವಡಿಕೆ;ನಿರ್ಮಾಣ, ಟ್ರಾನ್ಸ್ ವರುಣಾ ಪ್ರದೇಶದಲ್ಲಿ 25000 ಕ್ಕೂ ಹೆಚ್ಚು ಮನೆಗಳಿಗೆ ಒಳಚರಂಡಿ ಸಂಪರ್ಕಗಳು, ನಗರದ ಸಿಸ್ ವರುಣಾ ಪ್ರದೇಶದಲ್ಲಿ ಸೋರಿಕೆ ದುರಸ್ತಿ ಕಾಮಗಾರಿಗಳು; ತಾತೆಪುರ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆ, ಇತ್ಯಾದಿಗಳು ಇದರಲ್ಲಿ ಸೇರಿವೆ. ಮಹಗಾಂವ್ ಗ್ರಾಮದಲ್ಲಿ ಐಟಿಐ, ಬಿ.ಎಚ್.ಯು.ಯಲ್ಲಿ ವೇದ ವಿಜ್ಞಾನ ಕೇಂದ್ರದ ಎರಡನೇ ಹಂತ, ರಾಮನಗರದಲ್ಲಿ ಬಾಲಕಿಯರ ಸರ್ಕಾರಿ ಗೃಹ, ದುರ್ಗಾಕುಂಡದಲ್ಲಿ ಮಹಿಳೆಯರ ಸರ್ಕಾರಿ ವೃದ್ಧಾಶ್ರಮ ಥೀಮ್ ಪಾರ್ಕ್ ಸೇರಿದಂತೆ ವಿವಿಧ ಸಾಮಾಜಿಕ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳೂ ಉದ್ಘಾಟಿಸಲ್ಪಡಲಿವೆ.

ಬಡಾ ಲಾಲ್ ಪುರದ ಡಾ. ಭೀಮ್ ರಾವ್ ಅಂಬೇಡ್ಕರ್ ಕ್ರೀಡಾ ಸಂಕೀರ್ಣದಲ್ಲಿ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ಮತ್ತು ಸಿಂಥೆಟಿಕ್ ಬ್ಯಾಸ್ಕೆಟ್ ಬಾಲ್ ಕೋರ್ಟ್ ಮತ್ತು ಸಿಂಧೌರಾದಲ್ಲಿ ಪೊಲೀಸ್ ಠಾಣೆ ಕಟ್ಟಡ ಸಹಿತ ವಿವಿಧ ಪೊಲೀಸ್ ಠಾಣೆಗಳು ಮತ್ತು ಅಗ್ನಿ ಸುರಕ್ಷಾ ಯೋಜನೆಗಳನ್ನೂ ಪ್ರಧಾನ ಮಂತ್ರಿ ಅವರು ಉದ್ಘಾಟಿಸುವರು. ವಸತಿ ನಿಲಯದ ಕೊಠಡಿಗಳ ನಿರ್ಮಾಣ, ಮಿರ್ಜಾಮುರಾಡ್, ಚೋಳಾಪುರ, ಜನ್ಸಾ ಮತ್ತು ಕಾಪ್ಸೆತಿ ಪೊಲೀಸ್ ಠಾಣೆಗಳಲ್ಲಿ ಬ್ಯಾರಕ್ ಗಳ ನಿರ್ಮಾಣ ಮತ್ತು ಪಿಂದ್ರಾದಲ್ಲಿ ಅಗ್ನಿ ಶಾಮಕ ಕೇಂದ್ರ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳನ್ನೂ ಪ್ರಧಾನಮಂತ್ರಿಯವರು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು 1200 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುವರು. ಇವುಗಳಲ್ಲಿ ಲಹರ್ತಾರಾ – ಬಿ.ಎಚ್.ಯು.ಯಿಂದ ವಿಜಯ ಸಿನೆಮಾದವರೆಗೆ ಆರು ಪಥಗಳ ರಸ್ತೆ ಅಗಲೀಕರಣ ಸೇರಿದಂತೆ ಅನೇಕ ರಸ್ತೆ ಮೂಲಸೌಕರ್ಯ ಯೋಜನೆಗಳು ಒಳಗೊಂಡಿವೆ. ಪಾಂಡೆಪುರ್ ಮೇಲ್ಸೇತುವೆಯಿಂಡ ವರ್ತುಲ ರಸ್ತೆಯವರೆಗೆ ಚತುಷ್ಪಥ ರಸ್ತೆ ನಿರ್ಮಾಣ; ಕುಚಹೇರಿಯಿಂದ ಸಂದಹಾ ನಡುವಣ ಚತುಷ್ಪಥ ರಸ್ತೆ; ವಾರಣಾಸಿ ಭದೋಹಿ ಗ್ರಾಮೀಣ ರಸ್ತೆಯ ಅಗಲೀಕರಣ ಮತ್ತು ಬಲವರ್ಧನೆ; ವಾರಣಾಸಿ ಗ್ರಾಮೀಣ ಪ್ರದೇಶದಲ್ಲಿ ಐದು ಹೊಸ ರಸ್ತೆಗಳು ಮತ್ತು ನಾಲ್ಕು ಸಿಸಿ ರಸ್ತೆಗಳ ನಿರ್ಮಾಣ; ಬಾಬತ್ಪುರ-ಚೌಬೆಪುರ್ ರಸ್ತೆಯ ಬಾಬತ್ಪುರ ರೈಲ್ವೆ ನಿಲ್ದಾಣದ ಬಳಿ ಆರ್.ಒ.ಬಿ. (ರೋಡ್ ಓವರ್ ಬ್ರಿಡ್ಜ್) ನಿರ್ಮಾಣಕ್ಕೂ ಶಂಕುಸ್ಥಾಪನೆ ನೆರವೇರಲಿದೆ. . ಈ ಯೋಜನೆಗಳು ನಗರ ಮತ್ತು ಗ್ರಾಮೀಣ ರಸ್ತೆಗಳಲ್ಲಿನ ಸಂಚಾರ ಹೊರೆಯನ್ನು ಗಮನಾರ್ಹ ರೀತಿಯಲ್ಲಿ ಕಡಿಮೆ ಮಾಡಲು ಸಹಾಯ ಮಾಡಲಿವೆ.

ಈ ಪ್ರದೇಶದಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು, ವಿಶ್ವಬ್ಯಾಂಕ್ ನೆರವಿನ ಯು.ಪಿ.ಯ ಬಡವರ ಪರ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸಾರನಾಥ ಬೌದ್ಧ ಸರ್ಕ್ಯೂಟ್ ನ ಅಭಿವೃದ್ಧಿ ಕಾರ್ಯ, ಅಷ್ಟ ವಿನಕಾಯ, , ದ್ವಾದಶ ಜ್ಯೋತಿರ್ಲಿಂಗ ಯಾತ್ರೆ, ಅಷ್ಟ ಭೈರವ್, ನವ ಗೌರಿ ಯಾತ್ರೆಗಳಿಗೆ ಪಾವನ ಪಥ ನಿರ್ಮಾಣ, ಪಂಚಕೋಸಿ ಪರಿಕ್ರಮ ಯಾತ್ರಾ ಮಾರ್ಗದಲ್ಲಿ ಐದು ನಿಲುಗಡೆಗಳ ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿ ಮತ್ತು ಹಳೆಯ ಕಾಶಿಯ ವಿವಿಧ ವಾರ್ಡ್ ಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸಿಗ್ರಾ ಕ್ರೀಡಾಂಗಣದ ಮರುಅಭಿವೃದ್ಧಿ ಕಾಮಗಾರಿಗಳ ಹಂತ-1ಕ್ಕೆ ಶಂಕುಸ್ಥಾಪನೆಯನ್ನೂ ಪ್ರಧಾನ ಮಂತ್ರಿ ಅವರು ನೆರವೇರಿಸುವರು.

ಅಖಿಲ ಭಾರತೀಯ ಶಿಕ್ಷಾ ಸಮಾಗಮ

ಪ್ರಧಾನಮಂತ್ರಿಯವರು ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರ-ರುದ್ರಾಕ್ಷಿಯಲ್ಲಿ "ಅಖಿಲ ಭಾರತೀಯ ಶಿಕ್ಷಾ ಸಮಾಗಮ"ವನ್ನು ಉದ್ಘಾಟಿಸಲಿದ್ದಾರೆ. ಶಿಕ್ಷಣ ಸಚಿವಾಲಯವು ಜುಲೈ 7 ರಿಂದ 9 ರವರೆಗೆ ಶಿಕ್ಷಣ ಸಮಾಗಮವನ್ನು ಆಯೋಜಿಸಿದೆ. ಹೆಸರಾಂತ ಶಿಕ್ಷಣ ತಜ್ಞರು, ನೀತಿ ನಿರೂಪಕರು ಮತ್ತು ಶೈಕ್ಷಣಿಕ ನಾಯಕರಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) 2020 ರ ಪರಿಣಾಮಕಾರಿ ಅನುಷ್ಠಾನಕ್ಕೆ ಮಾರ್ಗಸೂಚಿಯನ್ನು ರೂಪಿಸಲು ಇದು ವೇದಿಕೆಯನ್ನು ಒದಗಿಸುತ್ತದೆ. ದೇಶಾದ್ಯಂತದ ವಿಶ್ವವಿದ್ಯಾಲಯಗಳು (ಕೇಂದ್ರೀಯ, ರಾಜ್ಯ, ಡೀಮ್ಡ್, ಖಾಸಗಿ), ರಾಷ್ಟ್ರೀಯ ಮಹತ್ವದ ಸಂಸ್ಥೆಗಳ (ಐಐಟಿ, ಐಐಎಂ, ಎನ್ಐಟಿ, ಐಐಎಸ್ಇಆರ್) 300 ಕ್ಕೂ ಅಧಿಕ ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಸಾಂಸ್ಥಿಕ ಮುಖ್ಯಸ್ಥರ ಸಾಮರ್ಥ್ಯ ವರ್ಧನೆಯ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ವಿವಿಧ ಭಾಗೀದಾರರು ತಮ್ಮ ತಮ್ಮ ಸಂಸ್ಥೆಗಳಲ್ಲಿ ಎನ್ಇಪಿ ಅನುಷ್ಠಾನದ ಪ್ರಗತಿಯನ್ನು ಪ್ರಸ್ತುತಪಡಿಸುತ್ತಾರೆ ಮತ್ತು ಗಮನಾರ್ಹ ಅನುಷ್ಠಾನ ತಂತ್ರಗಳು, ಉತ್ತಮ ಪದ್ಧತಿಗಳು ಹಾಗೂ ಯಶೋಗಾಥೆಗಳನ್ನು ಸಹ ಹಂಚಿಕೊಳ್ಳುತ್ತಾರೆ.

ಮೂರು ದಿನಗಳ ಶಿಕ್ಷಾ ಸಮಾಗಮದ ಅವಧಿಯಲ್ಲಿ, ಎನ್ಇಪಿ 2020 ರ ಅಡಿಯಲ್ಲಿ ಉನ್ನತ ಶಿಕ್ಷಣಕ್ಕಾಗಿ ಗುರುತಿಸಲಾದ ಒಂಬತ್ತು ವಿಷಯಗಳ ಬಗ್ಗೆ ಚರ್ಚೆಗಳನ್ನು ನಡೆಸಲಾಗುವುದು. ಈ ವಿಷಯಗಳೆಂದರೆ- ಬಹುಶಿಸ್ತೀಯ ಮತ್ತು ಸಮಗ್ರ ಶಿಕ್ಷಣ; ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯೋಗಾರ್ಹತೆ; ಸಂಶೋಧನೆ, ಅನ್ವೇಷಣೆ ಹಾಗು ಉದ್ಯಮಶೀಲತೆ; ಗುಣಮಟ್ಟದ ಶಿಕ್ಷಣಕ್ಕಾಗಿ ಶಿಕ್ಷಕರ ಸಾಮರ್ಥ್ಯ ವರ್ಧನೆ; ಗುಣಮಟ್ಟ, ಶ್ರೇಯಾಂಕ ಮತ್ತು ಮಾನ್ಯತೆ; ಡಿಜಿಟಲ್ ಸಬಲೀಕರಣ ಮತ್ತು ಆನ್ಲೈನ್ ಶಿಕ್ಷಣ; ಸಮಾನ ಮತ್ತು ಎಲ್ಲರನ್ನು ಒಳಗೊಳ್ಳುವ ಶಿಕ್ಷಣ; ಭಾರತೀಯ ಜ್ಞಾನ ವ್ಯವಸ್ಥೆ; ಮತ್ತು ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣ.

******

 

 

 

 

 

 

 

 

 

 

 



(Release ID: 1839318) Visitor Counter : 160