ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಂಧ್ರಪ್ರದೇಶದ ಭೀಮಾವರಂನಲ್ಲಿ ವರ್ಷವಿಡೀ ನಡೆಯಲಿರುವ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜಯಂತಿಗೆ ಚಾಲನೆ ನೀಡಿದ ಪ್ರಧಾನಿ 


ಅಲ್ಲೂರಿ ಸೀತಾರಾಮ ರಾಜು ಅವರ 30 ಅಡಿ ಎತ್ತರ ಕಂಚಿನ ಪ್ರತಿಮೆ ಅನಾವರಣ ಮಾಡಿದ ಪ್ರಧಾನಿ 


“ಸ್ವಾತಂತ್ರ್ಯ ಹೋರಾಟವೆಂದರೆ ಕೆಲವು ವರ್ಷಗಳ, ಕೆಲವು ಪ್ರದೇಶಗಳ ಅಥವಾ ಕೆಲವೇ ಜನರ ಇತಿಹಾಸವಲ್ಲ’’


“ಅಲ್ಲೂರಿ ಸೀತಾರಾಮ ರಾಜು ಅವರು ಭಾರತದ ಸಂಸ್ಕೃತಿ, ಬುಡಕಟ್ಟು ಅಸ್ಮಿತೆ, ಶೌರ್ಯ, ಆದರ್ಶಗಳ ಮತ್ತು ಮೌಲ್ಯಗಳ ಸಂಕೇತ’’ 


“ನಮ್ಮ ನವ ಭಾರತ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಕಂಡ ಕನಸಿನ ಭಾರತವಾಗಬೇಕು. ಆ ಭಾರತದಲ್ಲಿ- ಬಡವರು, ರೈತರು, ಕಾರ್ಮಿಕರು, ಆದಿವಾಸಿಗಳು ಎಲ್ಲರಿಗೂ ಸಮಾನ ಅವಕಾಶಗಳು ಲಭಿಸಬೇಕು’’


“ನವ ಭಾರತದಲ್ಲಿ ಇಂದು ಹೊಸ ಅವಕಾಶಗಳು, ಮಾರ್ಗಗಳು ಮತ್ತು ಚಿಂತನಾ ಪ್ರಕ್ರಿಯೆ ಹಾಗೂ ಸಂಭವನೀಯತೆಗಳಿವೆ ಮತ್ತು ನಮ್ಮ ಯುವಕರು ಆ ಸಾಧತ್ಯೆಗಳನ್ನು ಸಾಕಾರಗೊಳಿಸುವ ಹೊಣೆ ವಹಿಸಿಕೊಳ್ಳಬೇಕು’’


“ಆಂಧ್ರಪ್ರದೇಶ ನಾಯಕರು ಮತ್ತು ದೇಶಭಕ್ತರ ನಾಡು’


“”130 ಕೋಟಿ ಭಾರತೀಯರು ಪ್ರತಿಯೊಂದು ಸವಾಲಿಗೂ,  'ಸಾಧ್ಯವಾದರೆ ನೀವು ನಮ್ಮನ್ನು ತಡೆಯಿರಿ’ ಎಂದು ಹೇಳುತ್ತಿದ್ದಾರೆ’’

Posted On: 04 JUL 2022 1:13PM by PIB Bengaluru

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ಭೀಮಾವರಂನಲ್ಲಿ ವರ್ಷವಿಡೀ ನಡೆಯಲಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ ವರ್ಷದ 125 ನೇ ಜನ್ಮದಿನಾಚರಣೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಆಂಧ್ರಪ್ರದೇಶದ ರಾಜ್ಯಪಾಲ ಶ್ರೀ ಬಿಸ್ವಭೂಷಣ ಹರಿಚಂದನ್, ಮುಖ್ಯಮಂತ್ರಿ ಶ್ರೀ ವೈ.ಎಸ್.ಜಗನ್ ಮೋಹನ್ ರೆಡ್ಡಿ, ಕೇಂದ್ರ ಸಚಿವ ಶ್ರೀ ಜಿ.ಕಿಶನ್ ರೆಡ್ಡಿ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಂತಹ ಶ್ರೀಮಂತ ಪರಂಪರೆಯನ್ನು ಹೊಂದಿರುವ ಆಂಧ್ರಪ್ರದೇಶದ ಭವ್ಯ ಭೂಮಿಗೆ ನಮನ ಸಲ್ಲಿಸುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ ಎಂದು ಹೇಳಿದರು. ಆಜಾದಿ ಕಾ ಅಮೃತ್ ಮಹೋತ್ಸವ, ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮದಿನಾಚರಣೆ ಮತ್ತು ರಾಂಪ ಬಂಡಾಯದ 100ನೇ ವರ್ಷಾಚರಣೆಯಂತಹ ಪ್ರಮುಖ ಘಟನೆಗಳ ಸಮಾಗಮವನ್ನು ಅವರು ಉಲ್ಲೇಖಿಸಿದರು. ಶ್ರೇಷ್ಠ  ‘ಮಾನ್ಯಂ ವೀರುಡು’ ಅಲ್ಲೂರಿ ಸೀತಾರಾಮ ರಾಜು ಅವರ ಸ್ಮರಣಾರ್ಥ ನಮನ ಸಲ್ಲಿಸಿದ ಪ್ರಧಾನಮಂತ್ರಿ ಅವರು, ಇಡೀ ದೇಶದ ಪರವಾಗಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದುದಕ್ಕಾಗಿ ಅವರು ಸಂತಸ ವ್ಯಕ್ತಪಡಿಸಿದರು. ಆಂಧ್ರಪ್ರದೇಶದ ಪರಂಪರೆಯಿಂದ ಉದಯಿಸಿದ ‘ಆದಿವಾಸಿ ಪರಂಪರೆ’ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರಧಾನಿ ಗೌರವ ನಮನ ಸಲ್ಲಿಸಿದರು. 
ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮದಿನಾಚರಣೆ ಹಾಗೂ ರಾಂಪ ಕ್ರಾಂತಿಯ 100ನೇ ವರ್ಷಾಚರಣೆ ಇಡೀ ವರ್ಷ ಆಚರಿಸಲಾಗುವುದು ಎಂದು ಪ್ರಧಾನಿ ತಿಳಿಸಿದರು. ಪಾಂಡ್ರಂಗಿಯಲ್ಲಿ ಅವರ ಜನ್ಮಸ್ಥಳ ಜೀರ್ಣೋದ್ಧಾರ, ಚಿಂತಪಲ್ಲಿ ಪೊಲೀಸ್ ಠಾಣೆ ನವೀಕರಣ, ಮೊಗಲ್ಲು ಅಲ್ಲೂರಿಯಲ್ಲಿ ಧ್ಯಾನ ಮಂದಿರ ನಿರ್ಮಾಣ ಈ ಕಾರ್ಯಗಳು ಅಮೃತ ಮಹೋತ್ಸವದ ಸಂಕೇತವಾಗಿದೆ ಎಂದು ಹೇಳಿದರು. ಇಂದಿನ ಕಾರ್ಯಕ್ರಮವು ಎಲ್ಲರಿಗೂ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಪರಾಕ್ರಮದ ಬಗ್ಗೆ ಅರಿವು ಮೂಡಿಸುವ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. 
ಸ್ವಾತಂತ್ರ್ಯ ಹೋರಾಟವು ಕೇವಲ ಕೆಲವು ವರ್ಷಗಳ, ಕೆಲವು ಪ್ರದೇಶಗಳ ಅಥವಾ ಕೆಲವು ಜನರ ಇತಿಹಾಸವಲ್ಲ ಎಂದು ಪ್ರಧಾನಿ ಉಲ್ಲೇಖಿಸಿದರು. ಈ ಇತಿಹಾಸವು ಭಾರತದ ಪ್ರತಿಯೊಂದು ಮೂಲೆ ಮೂಲೆಯ ತ್ಯಾಗ, ದೃಢತೆ ಮತ್ತು ತ್ಯಾಗದ ಇತಿಹಾಸವಾಗಿದೆ. “ನಮ್ಮ ಸ್ವಾತಂತ್ರ್ಯ ಚಳವಳಿಯ ಇತಿಹಾಸವು ನಮ್ಮ ವೈವಿಧ್ಯ, ಸಂಸ್ಕೃತಿ ಮತ್ತು ರಾಷ್ಟ್ರವಾಗಿ ನಮ್ಮ ಒಗ್ಗಟ್ಟಿನ ಶಕ್ತಿಯ ಸಂಕೇತವಾಗಿದೆ’ ಎಂದು ಅವರು ಹೇಳಿದರು. 
ಅಲ್ಲೂರಿ ಸೀತಾರಾಮ ರಾಜು ಅವರು ಭಾರತದ ಸಂಸ್ಕೃತಿ, ಬುಡಕಟ್ಟು ಅಸ್ಮಿತೆ, ಶೌರ್ಯ, ಆದರ್ಶಗಳು ಮತ್ತು ಮೌಲ್ಯಗಳ ಪ್ರತೀಕ ಎಂದು ಬಣ್ಣಿಸಿದ ಪ್ರಧಾನಿ, ಸೀತಾರಾಮ ರಾಜು ಅವರ ಹುಟ್ಟಿನಿಂದ ಅವರ ತ್ಯಾಗದವರೆಗೆ ಅವರ ಜೀವನ ಪಯಣ ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದರು. ಅವರು ತಮ್ಮ ಜೀವನವನ್ನು ಬುಡಕಟ್ಟು ಸಮಾಜದ ಹಕ್ಕುಗಳಿಗಾಗಿ, ಅವರ ಸಂತೋಷ ಮತ್ತು ದುಃಖಕ್ಕಾಗಿ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಟ್ಟಿದ್ದರು. “ಅಲ್ಲೂರಿ ಸೀತಾರಾಮ ರಾಜು ಅವರು ದೇಶವನ್ನು ಏಕತೆಯ ಬೆಸುಗೆಯಲ್ಲಿ ಒಗ್ಗೂಡಿಸುವ ‘ಏಕ ಭಾರತ ಶ್ರೇಷ್ಠ ಭಾರತ’ ದ ಸ್ಫೂರ್ತಿಯನ್ನು ಪ್ರತಿನಿಧಿಸುತ್ತಾರೆ’ ಎಂದು ಪ್ರಧಾನಮಂತ್ರಿ ಹೇಳಿದರು. 
ಭಾರತದ ಆಧ್ಯಾತ್ಮಿಕತೆಯು ಅಲ್ಲೂರಿ ಸೀತಾರಾಮ ರಾಜು ಅವರಿಗೆ ಸಹಾನುಭೂತಿ ಮತ್ತು ಕರುಣೆ, ಬುಡಕಟ್ಟು ಸಮಾಜವನ್ನು ಗುರುತಿಸುವುದು ಮತ್ತು ಸಮಾನತೆಯ ಭಾವನೆ, ಜ್ಞಾನ ಮತ್ತು ಧೈರ್ಯ ನೀಡಿತು ಎಂದು ಪ್ರಧಾನಮಂತ್ರಿ ಹೇಳಿದರು.ಅಲ್ಲೂರಿ ಸೀತಾರಾಮ ರಾಜು ಅವರಲ್ಲಿ ಯುವಕತನ ಮತ್ತು ರಾಂಪಾ ಬಂಡಾಯದಲ್ಲಿ ಪ್ರಾಣ ತ್ಯಾಗ ಮಾಡಿದವರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ರಾಜು ಅವರ ತ್ಯಾಗ ಇಂದಿಗೂ ಇಡೀ ರಾಷ್ಟ್ರಕ್ಕೆ ಶಕ್ತಿ ಮತ್ತು ಸ್ಫೂರ್ತಿಯ ಮೂಲವಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದರು. 
“ದೇಶದ ಯುವಕರು ಸ್ವಾತಂತ್ರ್ಯ ಹೋರಾಟವನ್ನು ಮುನ್ನಡೆಸಿದರು. ಇಂದು ಯುವಜನತೆ ದೇಶದ ಅಭಿವೃದ್ಧಿಗಾಗಿ ಮುಂದೆ ಬರಲು ಇದೊಂದು ಉತ್ತಮ ಅವಕಾಶವಾಗಿದೆ’’ ಎಂದು ಪ್ರಧಾನಮಂತ್ರಿ ಹೇಳಿದರು. “ನವ ಭಾರತದಲ್ಲಿ ಇಂದು ಹೊಸ ಅವಕಾಶಗಳು, ಮಾರ್ಗಗಳು, ಚಿಂತನೆಯ ಪ್ರಕ್ರಿಯೆಗಳು ಮತ್ತು ಸಾಧ್ಯತೆಗಳು ಇವೆ ಮತ್ತು ನಮ್ಮ ಯುವಕರು ಈ ಸಾಧ್ಯತೆಗಳನ್ನು ಅರಿತುಕೊಳ್ಳುವ ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದಾರೆ’’ಎಂದು ಅವರು ಸೂಚ್ಯವಾಗಿ ಹೇಳಿದರು.  
ಆಂಧ್ರಪ್ರದೇಶ ವೀರರು ಮತ್ತು ದೇಶಭಕ್ತರ ನಾಡು ಎಂದು ಪ್ರಧಾನಮಂತ್ರಿ ಹೇಳಿದರು. ಇಲ್ಲಿ ದೇಶದ ಧ್ವಜವನ್ನು ಸಿದ್ಧಪಡಿಸಿದ ಪಿಂಗಲಿ ವೆಂಕಯ್ಯನಂತಹ ಸ್ವಾತಂತ್ರ್ಯ ವೀರರಿದ್ದರು, ಕನೇಗಂಟಿ ಹನುಮಂತು, ಕಂದುಕುರಿ ವೀರೇಸಲಿಂಗಂ ಪಂತುಲು, ಪೊಟ್ಟಿ ಶ್ರೀರಾಮುಲು ಮತ್ತಿತರರ ವೀರರ ನಾಡು ಇದಾಗಿತ್ತು. ಇಂದು ಅಮೃತ ಕಾಲದಲ್ಲಿ, ಈ ಹೋರಾಟಗಾರರ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ನಮ್ಮೆಲ್ಲ ದೇಶವಾಸಿಗಳ ಮೇಲಿದೆ ಎಂದು ಪ್ರಧಾನಮಂತ್ರಿ ಕರೆ ನೀಡಿದರು. ನಮ್ಮ ನವ ಭಾರತ ಅವರ ಕನಸಿನ ಭಾರತವಾಗಬೇಕು, ಭಾರತ - ಅದರಲ್ಲಿ ಬಡವರು, ರೈತರು, ಕಾರ್ಮಿಕರು, ಹಿಂದುಳಿದವರು, ಆದಿವಾಸಿಗಳು ಎಲ್ಲರಿಗೂ ಸಮಾನ ಅವಕಾಶಗಳಿರಬೇಕು. ಕಳೆದ 8 ವರ್ಷಗಳಲ್ಲಿ ಸರ್ಕಾರವು ದೇಶದ ಬುಡಕಟ್ಟು ಸಮುದಾಯದ ಕಲ್ಯಾಣಕ್ಕಾಗಿ ಅವಿರತವಾಗಿ ಶ್ರಮಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. 
ಸ್ವಾತಂತ್ರ್ಯಾ ನಂತರ ಮೊದಲ ಬಾರಿಗೆ ದೇಶದಲ್ಲಿ ಬುಡಕಟ್ಟು ಜನಾಂಗದ ಹೆಮ್ಮೆ ಮತ್ತು ಪರಂಪರೆ ಪ್ರದರ್ಶನಕ್ಕೆ ಬುಡಕಟ್ಟು ವಸ್ತು ಸಂಗ್ರಹಾಲಯಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಅಲ್ಲೂರಿ ಸೀತಾರಾಮ ರಾಜು ಸ್ಮಾರಕ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಮ್ಯೂಸಿಯಂ’’ ಅನ್ನು ಆಂಧ್ರಪ್ರದೇಶದ ಲಂಬಸಿಂಗಿಯಲ್ಲಿಯೂ ನಿರ್ಮಿಸಲಾಗುತ್ತಿದೆ. ಅದೇ ರೀತಿ ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ ನವೆಂಬರ್ 15 ಅನ್ನು ರಾಷ್ಟ್ರೀಯ ಜನಜಾತಿಯ ಗೌರವ್ ದಿವಸ್ ಎಂದು ಗುರುತಿಸಲಾಗಿದೆ ಎಂದರು. ವಿದೇಶಿ ಆಡಳಿತಗಾರರು ಬುಡಕಟ್ಟು ಸಮುದಾಯದ ಮೇಲೆ ಗರಿಷ್ಠ ದೌರ್ಜನ್ಯವೆಸಗಿದ್ದಾರೆ ಮತ್ತು ಅವರ ಸಂಸ್ಕೃತಿಯನ್ನು ನಾಶಪಡಿಸಲು ಪ್ರಯತ್ನಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. 
ಸ್ಕಿಲ್ ಇಂಡಿಯಾ ಮಿಷನ್ ಮೂಲಕ ಇಂದು ಬುಡಕಟ್ಟು ಕಲೆ ಮತ್ತು ಕೌಶಲ್ಯಗಳು ಹೊಸ ಗುರುತನ್ನು ಪಡೆದುಕೊಳ್ಳುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು. ‘ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗಿ’ (ವೋಕಲ್ ಫಾರ್ ಲೋಕಲ್) ಬುಡಕಟ್ಟು ಕಲೆಯ ಕೌಶಲ್ಯವನ್ನು ಆದಾಯದ ಮಾಧ್ಯಮವನ್ನಾಗಿ ಮಾಡುತ್ತಿದೆ. ಆದಿವಾಸಿಗಳು ಬಿದಿರು ಮುಂತಾದ ಅರಣ್ಯ ಉತ್ಪನ್ನಗಳನ್ನು ಕತ್ತರಿಸುವುದನ್ನು ತಡೆಯುವ ದಶಕಗಳಷ್ಟು ಹಳೆಯ ಕಾನೂನುಗಳನ್ನು ನಾವು ಬದಲಾಯಿಸಿದ್ದೇವೆ ಮತ್ತು ಅರಣ್ಯ ಉತ್ಪನ್ನಗಳ ಮೇಲಿನ ಹಕ್ಕುಗಳನ್ನು ಅವರಿಗೆ ನೀಡಿದ್ದೇವೆ ಎಂದು ಅವರು ಹೇಳಿದರು. 
ಅಂತೆಯೇ, ಎಂಎಸ್ ಅಡಿ ಖರೀದಿಸುವ ಅರಣ್ಯ ಉತ್ಪನ್ನಗಳ ಸಂಖ್ಯೆಯನ್ನು 12 ರಿಂದ 90 ಕ್ಕಿಂತ ಹೆಚ್ಚಳ ಮಾಡಲಾಗಿದೆ. 3000 ಕ್ಕೂ ಹೆಚ್ಚು ವನ ಗಣ ವಿಕಾಸ ಕೇಂದ್ರ ಮತ್ತು 50,000 ಕ್ಕೂ ಹೆಚ್ಚು ವನ ಗಣ ಸ್ವಸಹಾಯ ಗುಂಪುಗಳು ಆಧುನಿಕ ಅವಕಾಶಗಳೊಂದಿಗೆ ಬುಡಕಟ್ಟು ಉತ್ಪನ್ನಗಳು ಮತ್ತು ಕಲೆಯನ್ನು ಸಂಪರ್ಕಿಸುತ್ತಿವೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳ ಯೋಜನೆಗಳು ಆದಿವಾಸಿಗಳ ಜಿಲ್ಲೆಗಳಿಗೆ ಹೆಚ್ಚು ಪ್ರಯೋಜನವನ್ನು ನೀಡುತ್ತವೆ ಮತ್ತು ಶಿಕ್ಷಣ ವಲಯದಲ್ಲಿ 750 ಕ್ಕೂ ಅಧಿಕ ಏಕಲವ್ಯ ಮಾದರಿ ಶಾಲೆಗಳನ್ನು ಸ್ಥಾಪಿಸಲಾಗುತ್ತಿದೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಅವರೇ ಮಾತೃಭಾಷಯಲ್ಲಿಯೇ ಶಿಕ್ಷಣವನ್ನು ಉತ್ತೇಜಿಸಲಾಗುತ್ತಿದೆ. 
 ಅಲ್ಲೂರಿ ಸೀತಾರಾಮ ರಾಜು ಅವರನ್ನು ‘ಮಾನ್ಯಂ ವೀರುಡು’ ಎಂದ ಪ್ರಧಾನಿ ಅವರು ಬ್ರಿಟಿಷರೊಂದಿಗಿನ ಹೋರಾಟದ ಸಂದರ್ಭದಲ್ಲಿ ‘ದಮ್ ಹೈ ತೊ ಮುಝೆ ರೋಕ್ ಲೋ’- ಸಾಧ್ಯವಾದರೆ ನನ್ನನ್ನು ಹಿಡಿದು ನಿಲ್ಲಿಸಿ ಎಂದು ಧೈರ್ಯವನ್ನು ಮರೆದಿದ್ದರು. ಇಂದು ದೇಶವು ತನ್ನ ಮುಂದಿರುವ ಸವಾಲುಗಳನ್ನು ಎದುರಿಸುತ್ತಿದೆ. ಅದೇ ಧೈರ್ಯದಿಂದ 130 ಕೋಟಿ ದೇಶವಾಸಿಗಳು, ಒಗ್ಗಟ್ಟು ಮತ್ತು ಶಕ್ತಿಯೊಂದಿಗೆ ಪ್ರತಿ ಸವಾಲನ್ನು ಹೇಳುತ್ತಿದ್ದಾರೆ - 'ದಮ್ ಹೈ ತೊ ಹಮೈನ್ ರೋಕ್ ಲೋ' ಎಂದು ಪ್ರಧಾನಮಂತ್ರಿ ತಮ್ಮ ಮಾತು ಮುಗಿಸಿದರು. 
ಕಾರ್ಯಕ್ರಮದ ಹಿನ್ನೆಲೆ
ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಸ್ವಾತಂತ್ರ್ಯ ಹೋರಾಟಗಾರರ ಕೊಡುಗೆಗೆ ಸೂಕ್ತ ಮನ್ನಣೆ ನೀಡಲು ಮತ್ತು ದೇಶಾದ್ಯಂತ ಜನರಿಗೆ ಅವರ ಬಗ್ಗೆ ಅರಿವು ಮೂಡಿಸಲು ಸರ್ಕಾರ ಬದ್ಧವಾಗಿದೆ. ಆ ಪ್ರಯತ್ನದ ಭಾಗವಾಗಿ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭೀಮಾವರಂನಲ್ಲಿ ಖ್ಯಾತ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ ವರ್ಷವೀಡಿ ನಡೆಯುವ 125 ನೇ ಜನ್ಮ ದಿನಾಚರಣೆಗೆ ಚಾಲನೆ ನೀಡಿದರು. 1897ರ ಜುಲೈ 4ರಂದು ಜನಿಸಿದ ಅಲ್ಲೂರಿ ಸೀತಾರಾಮ ರಾಜು ಅವರು ಪೂರ್ವ ಘಟ್ಟಗಳ ಪ್ರದೇಶದ ಬುಡಕಟ್ಟು ಸಮುದಾಯಗಳ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟದಿಂದ ಸ್ಮರಿಸಲಾಗುತ್ತಿದೆ. 1922ರಲ್ಲಿ ಆರಂಭವಾದ ರಾಂಪಾ ಬಂಡಾದ ನೇತೃತ್ವವನ್ನು ಅವರು ವಹಿಸಿದ್ದರು. ಸ್ಥಳೀಯ ಜನರು ಅವರನ್ನು ‘ಮಾನ್ಯಂ ವೀರುಡು’ (ಕಾಡುಗಳ ವೀರ) ಎಂದು ಕರೆಯುತ್ತಾರೆ. 
ಒಂದು ವರ್ಷದ ಆಚರಣೆಯ ಭಾಗವಾಗಿ ಸರ್ಕಾರವು ಹಲವು ಉಪಕ್ರಮಗಳನ್ನು ಆಯೋಜಿಸಿದೆ. ಅಲ್ಲೂರಿ ಸೀತಾರಾಮ ರಾಜು ಅವರ ಜನ್ಮಸ್ಥಳ ವಿಜಯನಗರಂ ಜಿಲ್ಲೆಯ ಪಂಡ್ರಂಗಿ ಮತ್ತು ಚಿಂತಪಲ್ಲಿ ಪೊಲೀಸ್ ಠಾಣೆ ( 100 ವರ್ಷ ಪೂರೈಸಿದ ರಾಂಪಾ ದಂಗೆ - ಈ ಪೊಲೀಸ್ ಠಾಣೆಯ ಮೇಲಿನ ದಾಳಿಯು ರಾಂಪ ಬಂಡಾಯಕ್ಕೆ ನಾಂದಿ ಹಾಡಿತು) ಪುನರುಜ್ಜೀವನಗೊಳಿಸಲಾಗುವುದು. ಗೋಡೆಯ ಮೇಲೆ ಭಿತ್ತಿಚಿತ್ರಗಳು ಮತ್ತು ಆರ್ಟಿಫಿಷಿಯಲ್ ಇಂಟಲಿಜೆನ್ಸ್-ಆಧಾರಿತ ಸಂವಾದಾತ್ಮಕ ವ್ಯವಸ್ಥೆಯ ಮೂಲಕ ಸ್ವಾತಂತ್ರ್ಯ ಹೋರಾಟಗಾರನ ಜೀವನ ಕಥೆಯನ್ನು ಚಿತ್ರಿಸುವ ಧ್ಯಾನ ಮುದ್ರೆಯಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರ ಪ್ರತಿಮೆಯೊಂದಿಗೆ ಮೊಗಲ್ಲುನಲ್ಲಿ ಅಲ್ಲೂರಿ ಧ್ಯಾನ ಮಂದಿರವನ್ನು ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ.

 

*****


(Release ID: 1839138) Visitor Counter : 238