ಪ್ರಧಾನ ಮಂತ್ರಿಯವರ ಕಛೇರಿ
ವಾಣಿಜ್ಯ ಭವನ ಉದ್ಘಾಟನೆ ಮತ್ತು ನಿರ್ಯಾತ್ ಪೋರ್ಟಲ್ ಗೆ ಚಾಲನೆ ನೀಡಿದ ಸಮಾರಂಭ ಉದ್ದೇಶಿಸಿ ಪ್ರಧಾನಿ ಮಾಡಿದ ಭಾಷಣದ ಅನುವಾದ.
Posted On:
23 JUN 2022 12:53PM by PIB Bengaluru
ಸಚಿವ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾದ ಶ್ರೀ ಪಿಯೂಷ್ ಗೋಯಲ್, ಶ್ರೀ ಸೋಮ್ ಪ್ರಕಾಶ್ ಜಿ ಮತ್ತು ಶ್ರೀಮತಿ ಅನುಪ್ರಿಯಾ ಪಟೇಲ್ ಜಿ , ಉದ್ಯಮ ಮತ್ತು ರಫ್ತು ವಲಯದ ಎಲ್ಲ ಸಹೋದ್ಯೋಗಿಗಳೇ, ಇತರೆ ಗಣ್ಯರೇ, ಮಹಿಳೆಯರೇ ಮತ್ತು ಮಹನೀಯರೇ, !
ಕಳೆದ ಎಂಟು ವರ್ಷಗಳಿಂದ ದೇಶವು ನವಭಾರತ ನಿರ್ಮಾಣದತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ ಜನಸ್ನೇಹಿ ಆಡಳಿತದ ಪಯಣದಲ್ಲಿ ಇಂದು ಮತ್ತೊಂದು ಪ್ರಮುಖ ಹೆಜ್ಜೆಯಾಗಿದೆ. ದೇಶವು ಹೊಸ ಮತ್ತು ಆಧುನಿಕ ವಾಣಿಜ್ಯ ಭವನ ಮತ್ತು ರಫ್ತು ಪೋರ್ಟಲ್ ರೂಪದಲ್ಲಿ ಹೊಸ ಉಡುಗೊರೆ ಪಡೆದುಕೊಂಡಿದೆ. ಇವುಗಳಲ್ಲಿ ಒಂದು ಭೌತಿಕ ಮೂಲಸೌಕರ್ಯದ ಸಂಕೇತವಾದರೆ, ಮತ್ತೊಂದು ಡಿಜಿಟಲ್ ಮೂಲಸೌಕರ್ಯದ ಸಂಕೇತವಾಗಿದೆ, ವ್ಯಾಪಾರ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದ ನಮ್ಮ ಆಡಳಿತದಲ್ಲಿ ಧನಾತ್ಮಕ ಬದಲಾವಣೆಯನ್ನು ಮತ್ತು ಸ್ವಾವಲಂಬಿ ಭಾರತಕ್ಕಾಗಿ ನಮ್ಮ ಆಶೋತ್ತರಗಳನ್ನು ಪ್ರತಿನಿಧಿಸುತ್ತದೆ. ಈ ಸಂದರ್ಭದಲ್ಲಿ ನಾನು ನಿಮ್ಮೆಲ್ಲರನ್ನೂ, ವ್ಯಾಪಾರ ಮತ್ತು ವಾಣಿಜ್ಯಕ್ಕೆ ಸಂಬಂಧಿಸಿದ ಇಡೀ ಸಮುದಾಯವನ್ನು ಮತ್ತು ವಿಶೇಷವಾಗಿ ನಮ್ಮ ಎಂಎಸ್ಎಂಇ ಗಳನ್ನು ಅಭಿನಂದಿಸುತ್ತೇನೆ. ದೇಶದ ಮೊದಲ ಕೈಗಾರಿಕಾ ಸಚಿವ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರ ಪುಣ್ಯತಿಥಿ ಇಂದು. ಅವರ ನೀತಿ, ನಿರ್ಧಾರಗಳು, ಸಂಕಲ್ಪ ಮತ್ತು ಅವರ ನಿರ್ಣಯಗಳ ಸಾಧನೆಗಳು ಸ್ವತಂತ್ರ ಭಾರತಕ್ಕೆ ಮಾರ್ಗದರ್ಶನ ನೀಡುವಲ್ಲಿ ಅತ್ಯಂತ ಮುಖ್ಯವಾಗಿವೆ. ಇಂದು ದೇಶವು ಅವರಿಗೆ ಗೌರವಪೂರ್ವಕವಾಗಿ ನಮನ ಸಲ್ಲಿಸುತ್ತಿದೆ.
ಮಿತ್ರರೇ,
ಹೊಸ ವಾಣಿಜ್ಯ ಭವನವನ್ನು ಹೊಸ ಸ್ಫೂರ್ತಿ ಮತ್ತು ದೃಢಸಂಕಲ್ಪದೊಂದಿಗೆ ನೀವು ಪ್ರವೇಶಿಸುತ್ತಿದ್ದೀರಿ ಎಂಬ ಖಾತ್ರಿ ನನಗಿದೆ. ಈ ನಿರ್ಣಯ, ವ್ಯಾಪಾರಕ್ಕೆ ಸುಗಮ ವಾತಾವರಣ ನಿರ್ಮಾಣ ಮತ್ತು ವ್ಯಾಪಾರಕ್ಕೆ ಸುಗಮ ವಾತಾವರಣದ ಮೂಲಕ ಸುಲಭ ಜೀವನ ನಡೆಸುವುದಕ್ಕಾಗಿ ಮತ್ತು ಈ ಎರಡರ ನಡುವಿನ ಸಂಪರ್ಕವು ಸುಲಭವಾಗಿ ಲಭ್ಯವಾಗುತ್ತಿದೆ. ಸರ್ಕಾರದೊಂದಿಗೆ ಸಂವಹನ ನಡೆಸುವಾಗ ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ಯಾರಿಗೂ ತೊಂದರೆಯಾಗಬಾರದು ಅಂತಹ ಸುಲಭ ಲಭ್ಯತೆ, ಸಗುಮ ವಾತಾವರಣ ನಿರ್ಮಾಣ ದೇಶದ ಆದ್ಯತೆಯಾಗಿದೆ. ಕಳೆದ ಎಂಟು ವರ್ಷಗಳಲ್ಲಿ ಸರ್ಕಾರದ ಆಡಳಿತ ಮಾದರಿಯ ಪ್ರಮುಖ ಅಂಶ ಎಂದರೆ ದೇಶದ ನಾಗರಿಕರಿಗೆ ಮೂಲಭೂತ ಸೌಲಭ್ಯಗಳು, ಬ್ಯಾಂಕಿಂಗ್ ಮತ್ತು ಸರ್ಕಾರದ ನೀತಿ ನಿರೂಪಣೆ ಸುಲಭವಾಗಿಸುವುದು. ಈ ದೂರದೃಷ್ಟಿಯು ದೇಶದ ಆರ್ಥಿಕ ಅಭಿವೃದ್ಧಿಗಾಗಿ ಭಾರತದ ನೀತಿಗಳು ಮತ್ತು ನಿರ್ಧಾರಗಳನ್ನು ಪ್ರತಿಬಿಂಬಿಸುತ್ತದೆ. ಮುದ್ರಾ ಯೋಜನೆಯಡಿ ಕೋಟ್ಯಾಂತರ ಉದ್ಯಮಿಗಳ ಹೊರಹೊಮ್ಮಿದ್ದಾರೆ, ನೀತಿ ಮತ್ತು ಬ್ಯಾಂಕ್ ಸಾಲದ ಮೂಲಕ ಲಕ್ಷಾಂತರ ಎಂಎಸ್‌ಎಂಇಗಳಿಗೆ ಉತ್ತೇಜನ ದೊರೆತಿದೆ, ಗ್ರಾಮಗಳು ಮತ್ತು ಸಣ್ಣಪುಟ್ಟ ಪಟ್ಟಣಗಳ ಲಕ್ಷಾಂತರ ಬೀದಿ ಬದಿ ವ್ಯಾಪಾರಿಗಳಿಗೆ ಬ್ಯಾಂಕ್ ಸಾಲ ಸುಲಭವಾಗಿ ಲಭ್ಯವಾಗುತ್ತಿದೆ ಮತ್ತು ಸಹಸ್ರಾರು ನವೋದ್ಯಮಗಳ ಬೆಳವಣಿಗೆಗೆ ನಿರಂತರ ಪ್ರಯತ್ನಗಳ ಹಿಂದಿನ ಮೂಲ ಉದ್ದೇಶ ಸುಲಭವಾಗಿ ಲಭ್ಯವಾಗುವಂತೆ ಮಾಡುವುದು. ಸರ್ಕಾರದ ಯೋಜನೆಗಳ ಲಾಭ ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ತಲುಪಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ. ಈ ಹೊಸ ವಾಣಿಜ್ಯ ಭವನದಲ್ಲಿ ಎಲ್ಲರಿಗೂ ಸುಲಭವಾಗಿ ಲಭ್ಯವಾಗಿ ಮತ್ತು ಸರ್ವರ ಅಭಿವೃದ್ಧಿಯ ಮನೋಭಾವವು ಪ್ರತಿಬಿಂಬಿಸುತ್ತದೆ ಎಂಬುದು ನನಗೆ ಸಂತಸ ತಂದಿದೆ.
ಮಿತ್ರರೇ,
ಎಸ್ ಒಪಿ ಎಂಬ ಪದ- ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್-ಪ್ರಮಾಣೀಕೃತ ಕಾರ್ಯವಿಧಾನ ನಿಮ್ಮೆಲ್ಲರಿಗೂ ಚಿರಪರಿಚಿತವಾಗಿದೆ. ಅಂದರೆ ಕೆಲಸ ಮಾಡುವ ಒಂದು ನಿರ್ದಿಷ್ಟ ವಿಧಾನ ಇದಾಗಿದೆ. ಈ ಹಿಂದೆ, ಸರ್ಕಾರಗಳ ಎಸ್ ಒಪಿ ಎಂದರೆ ಯೋಜನೆಯನ್ನು ಪ್ರಾರಂಭಿಸುವುದು, ಆದರೆ ಅದು ಪೂರ್ಣಗೊಳ್ಳುವ ಖಾತ್ರಿ ಇಲ್ಲ. ರಾಜಕೀಯ ಹಿತಾಸಕ್ತಿಗಳಿಗಾಗಿ ಘೋಷಣೆಗಳನ್ನು ಮಾಡಲಾಗುತ್ತಿತ್ತು, ಆದರೆ ಅವುಗಳನ್ನು ಸಕಾಲಿಕದಲ್ಲಿ ಪೂರ್ಣಗೊಳಿಸುವ ಬಗ್ಗೆ ಯಾವುದೇ ಗಂಭೀರತೆ ಇರಲಿಲ್ಲ. ನಾವು ಆ ಗ್ರಹಿಕೆಯನ್ನು ಹೇಗೆ ಬದಲಾಯಿಸಿದ್ದೇವೆ ಎಂಬುದಕ್ಕೆ ಈ ಕಟ್ಟಡವು ಮತ್ತೊಂದು ಉದಾಹರಣೆಯಾಗಿದೆ. ಮತ್ತು ನಾನು ಈಗಷ್ಟೇ ಹೇಳಿದಂತೆ, ಈ ಕಟ್ಟಡದ ಶಂಕುಸ್ಥಾಪನೆಯನ್ನು 2018ರ ಜೂನ್ 22ರಂದು ನಾನು ಮಾಡಿದ್ದೆ ಮತ್ತು ಇಂದು 2022ರ ಜೂನ್ 23ರಂದು ಉದ್ಘಾಟನೆ ಮಾಡುತ್ತಿರುವುದು ಕಾಕತಾಳೀಯವಷ್ಟೇ. ಈ ಮಧ್ಯೆ, ಕೊರೋನಾದಿಂದ ಹಲವಾರು ಅಡತಡೆಗಳು ಎದುರಾಗಿವೆ. ಆದರೆ ಅವುಗಳೆಲ್ಲದರ ನಡುವೆಯೂ ಸಂಕಲ್ಪ ಇಂದು ಸಾಧನೆಯ ರೂಪದಲ್ಲಿ ನಮ್ಮ ಮುಂದಿದೆ. ಇದು ನವ ಭಾರತದ ಹೊಸ ಎಸ್ ಒಪಿ ಆಗಿದ್ದು, ಯಾವುದೇ ಯೋಜನೆಯ ಉದ್ಘಾಟನೆಯ ಸಮಯ ನಿಗದಿಯ ಪ್ರಾಮಾಣಿಕ ಪ್ರಯತ್ನಗಳು ಅದರ ಶಂಕುಸ್ಥಾಪನೆ ಮಾಡುವ ದಿನದಿಂದ ಪ್ರಾರಂಭವಾಗುತ್ತವೆ. ಕಳೆದ ಕೆಲವು ವರ್ಷಗಳಲ್ಲಿ ದೆಹಲಿಯಲ್ಲಿಯೇ ಇಂತಹ ಅನೇಕ ಉದಾಹರಣೆಗಳನ್ನು ನೀವು ಕಾಣಬಹುದು. ಕಳೆದ ಕೆಲವೇ ದಿನಗಳ ಹಿಂದೆ ಪ್ರಗತಿ ಮೈದಾನದ ಬಳಿ ಇಂಟಿಗ್ರೇಟೆಡ್ ಟ್ರಾನ್ಸಿಟ್ ಕಾರಿಡಾರ್ ಉದ್ಘಾಟನೆ ಮಾಡುವ ಸೌಭಾಗ್ಯ ನನಗೆ ಲಭಿಸಿತ್ತು. ಸರ್ಕಾರದ ಯೋಜನೆಗಳು ವರ್ಷಗಟ್ಟಲೆ ನೆನಗುದಿಗೆ ಬೀಳುವುದಿಲ್ಲ, ಸರಿಯಾದ ಸಮಯಕ್ಕೆ ಪೂರ್ಣಗೊಳ್ಳಬೇಕು ಮತ್ತು ಸರ್ಕಾರದ ಯೋಜನೆಗಳು ತಮ್ಮ ಗುರಿಗಳನ್ನು ತಲುಪಬೇಕು, ಆಗ ದೇಶದ ತೆರಿಗೆದಾರರಿಗೆ ಮಾತ್ರ ಗೌರವ ಸಲ್ಲಿಸಿದಂತಾಗುತ್ತದೆ. ನಾವು ಇದೀಗ ಪ್ರಧಾನಮಂತ್ರಿ ಗತಿಶಕ್ತಿ ರಾಷ್ಟ್ರೀಯ ಕ್ರಿಯಾ ಯೋಜನೆ ರೂಪದಲ್ಲಿ ಆಧುನಿಕ ವೇದಿಕೆಯನ್ನು ಹೊಂದಿದ್ದೇವೆ. ನವಭಾರತದ ಆಶಯಗಳನ್ನು ಗಮನದಲ್ಲಿಟ್ಟುಕೊಂಡು ಈ ನೂತನ ವಾಣಿಜ್ಯ ಭವನವು ಪ್ರತಿಯೊಂದು ಕ್ಷೇತ್ರದಲ್ಲೂ ದೇಶದ ಪ್ರಗತಿಗೆ ಮತ್ತಷ್ಟು ಒತ್ತು ನೀಡಬೇಕಿದೆ.
ಮಿತ್ರರೇ,
ಶಂಕುಸ್ಥಾಪನೆಯಿಂದ ಉದ್ಘಾಟನೆಯವರೆಗೂ ವಾಣಿಜ್ಯ ಭವನವು ಈ ಸಮಯದಲ್ಲಿ ವಾಣಿಜ್ಯ ವಲಯದಲ್ಲಿನ ನಮ್ಮ ಸಾಧನೆಗಳ ಸಂಕೇತವಾಗಿದೆ. ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ನಾನು ಜಾಗತಿಕ ಅನುಶೋಧನೆ ಸೂಚ್ಯಂಕದಲ್ಲಿ ನಾವೀನ್ಯತೆ ಮತ್ತು ಸುಧಾರಣೆಯ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ್ದುದು ನನಗೆ ನೆನಪಿದೆ. ಇಂದು ನಾವು ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ 46 ನೇ ಸ್ಥಾನದಲ್ಲಿದ್ದೇವೆ ಮತ್ತು ನಿರಂತರವಾಗಿ ಸುಧಾರಿಸುತ್ತಿದ್ದೇವೆ. ಶಿಲಾನ್ಯಾ ಸಮಾರಂಭದ ದಿನದಂದು ಸುಲಭ ವ್ಯಾಪಾರ ಮಾಡುವ ವಾತಾವರಣವನ್ನು ಸುಧಾರಿಸುವ ಅಗತ್ಯವನ್ನು ನಾವು ಚರ್ಚಿಸಿದ್ದೇವು. ಇಂದು ಈ ಕಟ್ಟಡವನ್ನು ಉದ್ಘಾಟನೆ ಮಾಡುವ ವೇಳೆಗೆ ಅಂದಿನಿಂದ 32,000 ಕ್ಕೂ ಅಧಿಕ ಅನಗತ್ಯ ಅನುಸರಣೆಗಳನ್ನು ತೆಗೆದುಹಾಕಲಾಗಿದೆ. 32,000 ಅನುಸರಣೆಗಳನ್ನು ನೀವು ಕಲ್ಪಿಸಿಕೊಳ್ಳಬಲ್ಲಿರಾ? ಶಂಕುಸ್ಥಾಪನೆಯ ಸಮಯದಲ್ಲಿ ಜಿಎಸ್‌ಟಿ ಜಾರಿಯಾಗಿ ಕೆಲವೇ ತಿಂಗಳುಗಳು ಕಳೆದಿದ್ದವು ಮತ್ತು ಎಲ್ಲಾ ಬಗೆಯ ಅನುಮಾನ ಮತ್ತು ಆತಂಕಗಳಿದ್ದವು. ಇಂದು ಸಾಮಾನ್ಯವಾಗಿ ಪ್ರತಿ ತಿಂಗಳು 1 ಲಕ್ಷ ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗುತ್ತಿದೆ. ವಾಣಿಜ್ಯ ಭವನದ ಶಂಕುಸ್ಥಾಪನೆಯ ಸಂದರ್ಭದಲ್ಲಿ, ನಾವು ಜಿಇಎಂ-ಜೆಮ್ ಪೋರ್ಟಲ್‌ನಲ್ಲಿ ಸುಮಾರು 9,000 ಕೋಟಿ ರೂ. ಖರೀದಿ ಆದೇಶಗಳ ಬಗ್ಗೆ ಚರ್ಚಿಸಿದ್ದೇವು, ಇಂದು, 45 ಲಕ್ಷ ಸಣ್ಣ ಉದ್ಯಮಿಗಳು ಈ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ ಮತ್ತು ರೂ.ಗಿಂತ ಜಿಇಎಂನಲ್ಲಿ 2.25 ಲಕ್ಷ ಕೋಟಿ ರೂ. ಗೂ ಅಧಿಕ ಮೌಲ್ಯದ ಖರೀದಿ ಆದೇಶಗಳನ್ನು ಸಲ್ಲಿಸಲಾಗಿದೆ.
ಮಿತ್ರರೇ,
ಆ ಸಮಯದಲ್ಲಿ ನಾನು 2014ರ ನಂತರ ಮೊಬೈಲ್ ತಯಾರಿಕಾ ಘಟಕಗಳ ಸಂಖ್ಯೆ 2ರಿಂದ 120ಕ್ಕೆ ಏರಿಕೆಯಾಗಿರುವುದನ್ನು ಪ್ರಸ್ತಾಪಿಸಿದ್ದೆ. ಇಂದು ಆ ಸಂಖ್ಯೆ 200ಕ್ಕೂ ಅಧಿಕವಾಗಿದೆ ಮತ್ತು ಆಮದುದಾರರಿಂದ ಹಿಡಿದು ಜಗತ್ತಿನ ಅತಿ ದೊಡ್ಡ ಮೊಬೈಲ್ ಫೋನ್ ರಫ್ತುದಾರರಿಗೆ ಶಕ್ತಿಯಾಗಿ ಹೊರಹೊಮ್ಮಿದ್ದೇವೆ. ನಾಲ್ಕು ವರ್ಷಗಳ ಹಿಂದೆ, ಭಾರತದಲ್ಲಿ 500 ಕ್ಕಿಂತ ಕಡಿಮೆ ನೋಂದಾಯಿತ ಫಿನ್‌ಟೆಕ್ (ಹಣಕಾಸು ತಂತ್ರಜ್ಞಾನ) ನವೋದ್ಯಮಗಳಿದ್ದವು. ಇಂದು ಅವುಗಳ ಸಂಖ್ಯೆ ಸುಮಾರು 2300 ದಾಟಿದೆ. ಅಂದು ನಾವು ಪ್ರತಿ ವರ್ಷ 8,000 ಸ್ಟಾರ್ಟ್‌ಅಪ್‌ಗಳನ್ನು ಗುರುತಿಸುತ್ತಿದ್ದೆವು, ಇಂದು ಅವುಗಳ ಸಂಖ್ಯೆ 15,000ಕ್ಕೆ ಏರಿಕೆಯಾಗುತ್ತಿದೆ. ಜಾಗತಿಕ ಸಾಂಕ್ರಾಮಿಕದ ಹೊರತಾಗಿಯೂ ನಾವು ನಿರ್ದಿಷ್ಟ ಗುರಿಗಳನ್ನು ಹೊಂದುವ ಮೂಲಕ ಮತ್ತು ಪ್ರಾಮಾಣಿಕ ಪ್ರಯತ್ನಗಳಿಂದ ಅವುಗಳನ್ನು ಸಾಧಿಸುವ ಮೂಲಕ ಸಾಕಷ್ಟು ಸಾಧನೆ ಮಾಡಿದ್ದೇವೆ.
ಮಿತ್ರರೇ,
ನಮ್ಮ ರಫ್ತು ಪೂರಕ ವ್ಯವಸ್ಥೆಯು ಇಂದಿನ ನವ ಭಾರತದಲ್ಲಿ ಸಂಕಲ್ಪದೊಂದಿಗೆ ನಮ್ಮ ಸಾಧನೆಯ ವಿಧಾನದ ಅತ್ಯುತ್ತಮ ಉದಾಹರಣೆಯಾಗಿದೆ. ಶಿಲಾನ್ಯಾಸ ಸಮಾರಂಭದ ವೇಳೆ, ಜಾಗತಿಕ ರಫ್ತು ಪ್ರಮಾಣ ಹೆಚ್ಚಿಸಲು ಭಾರತವನ್ನು ಆದ್ಯತೆಯ ಉತ್ಪಾದನಾ ತಾಣವನ್ನಾಗಿ ಮಾಡಲು ನಾವು ಸಂಕಲ್ಪ ಮಾಡಿದ್ದೆವು. ಕಳೆದ ವರ್ಷ ಸಂಪೂರ್ಣ ಪೂರೈಕೆ ಸರಪಳಿ ನಾಶಪಡಿಸಿದ ಐತಿಹಾಸಿಕ ಜಾಗತಿಕ ಅಡೆತಡೆಗಳ ಹೊರತಾಗಿಯೂ, ಭಾರತದ ರಫ್ತು 670 ಶತಕೋಟಿ ಅಮೆರಿಕನ್ ಡಾಲರ್, ಅಂದರೆ 50 ಲಕ್ಷ ಕೋಟಿ ರೂಪಾಯಿಗಳಷ್ಟಿತ್ತು. ಈ ಅಂಕಿ ಅಂಶ ನಿರೀಕ್ಷೆಯನ್ನೂ ಮೀರಿದ್ದು ಎಂಬುದು ನಿಮಗೂ ತಿಳಿದಿದೆ. ಕಳೆದ ವರ್ಷ, ದೇಶವು ಪ್ರತಿಕೂಲ ಸವಾಲುಗಳ ನಡುವೆಯೂ 400 ಶತಕೋಟಿ ಅಂದರೆ 30 ಲಕ್ಷ ಕೋಟಿ ರೂಪಾಯಿಗಳ ಸರಕು ರಫ್ತು ಮೈಲಿಗಲ್ಲನ್ನು ಸಾಧಿಸಲು ನಿರ್ಧರಿಸಿತ್ತು. ನಾವು ಆ ಗುರಿಯನ್ನು ದಾಟಿ 418 ಬಿಲಿಯನ್ ಡಾಲರ್ ಅಂದರೆ 31 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ರಫ್ತು ಮಾಡಿದ್ದೇವೆ.
ಮಿತ್ರರೇ,
ಕಳೆದ ಕೆಲವು ವರ್ಷಗಳ ಯಶಸ್ಸಿನಿಂದ ಉತ್ತೇಜಿತರಾಗಿ, ನಾವು ಇದೀಗ ನಮ್ಮ ರಫ್ತು ಗುರಿಗಳನ್ನು ಹೆಚ್ಚಿಸಿದ್ದೇವೆ ಮತ್ತು ಅವುಗಳನ್ನು ಸಾಧಿಸಲು ನಮ್ಮ ಪ್ರಯತ್ನಗಳನ್ನು ದುಪಟ್ಟುಗೊಳಿಸಿದ್ದೇವೆ. ಈ ಹೊಸ ಗುರಿಗಳನ್ನು ಸಾಧಿಸಲು ಪ್ರತಿಯೊಬ್ಬರ ಸಾಮೂಹಿಕ ಪ್ರಯತ್ನವು ಅತ್ಯಗತ್ಯವಾಗಿದೆ. ಕೈಗಾರಿಕೆ ಮತ್ತು ರಫ್ತು ಉತ್ತೇಜನಾ ಮಂಡಳಿಗಳ ಸದಸ್ಯರು ಸಹ ಇಲ್ಲಿದ್ದೀರಿ, ನಿಮ್ಮ ಮಟ್ಟದಲ್ಲಿ ಅಲ್ಪಾವಧಿಯ ಮಾತ್ರವಲ್ಲ, ದೀರ್ಘಾವಧಿಯ ರಫ್ತು ಗುರಿಗಳನ್ನು ಸಾಧಿಸಲು ನಾನು ನಿಮ್ಮನ್ನು ಆಗ್ರಹಿಸುತ್ತೇನೆ. ಆ ಗುರಿಗಳನ್ನು ಹೇಗೆ ತಲುಪುವುದು ಮತ್ತು ಈ ನಿಟ್ಟಿನಲ್ಲಿ ಸರ್ಕಾರವು ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತು ಒಟ್ಟಾಗಿ ಕೆಲಸ ಮಾಡುವುದು ಕೂಡ ಬಹಳ ಮುಖ್ಯ.
ಮಿತ್ರರೇ,
ರಾಷ್ಟ್ರೀಯ ಆಮದು-ರಫ್ತು ವ್ಯಾಪಾರದ ವಾರ್ಷಿಕ ವಿಶ್ಲೇಷಣೆಗಾಗಿ, ಅಂದರೆ ನಿರ್ಯಾತ ವೇದಿಕೆಯು ಆ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ. ರಫ್ತುದಾರರು, ಸರ್ಕಾರದ ವಿವಿಧ ಇಲಾಖೆಗಳು, ರಾಜ್ಯ ಸರ್ಕಾರಗಳು ಮತ್ತು ಎಲ್ಲಾ ಪಾಲುದಾರರು ಸೇರಿದಂತೆ ಪ್ರತಿಯೊಬ್ಬರೂ ರಿಯಲ್ ಟೈಮ್ ದತ್ತಾಂಶವನ್ನು ಪಡೆಯಬಹುದಾಗಿದೆ. ಇದು ನಮ್ಮ ಉದ್ಯಮ ಮತ್ತು ರಫ್ತುದಾರರಿಗೆ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುವ ಅನೇಕ ಬೆಂಬಲಗಳನ್ನು ನೀಡಲು ಸಹಾಯ ಮಾಡುತ್ತದೆ. ಪ್ರಪಂಚದ 200 ಕ್ಕೂ ಅಧಿಕ ದೇಶಗಳಿಗೆ ರಫ್ತು ಮಾಡುತ್ತಿರುವ 30ಕ್ಕೂ ಹೆಚ್ಚು ಸರಕು ಗುಂಪುಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯು ಈ ಪೋರ್ಟಲ್‌ನಲ್ಲಿ ನಿಮಗೆ ಲಭ್ಯವಿದೆ.
ಈ ಪೋರ್ಟಲ್‌ನಲ್ಲಿ ಶೀಘ್ರದಲ್ಲಿಯೇ ಜಿಲ್ಲಾವಾರು ರಫ್ತಿಗೆ ಸಂಬಂಧಿಸಿದ ಮಾಹಿತಿಯೂ ಲಭ್ಯವಾಗಲಿದೆ. ಮತ್ತು “ಒಂದು ಜಿಲ್ಲೆ-ಒಂದು ಉತ್ಪನ್ನ” ದ ಮಾಹಿತಿಯನ್ನೂ ಸೇರಿಸುವ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ. ಇದು ಜಿಲ್ಲೆಗಳನ್ನು ಪ್ರಮುಖ ರಫ್ತು ಕೇಂದ್ರಗಳನ್ನಾಗಿಸುವ ಪ್ರಯತ್ನಗಳನ್ನು ಬಲವರ್ಧನೆಗೊಳಿಸುತ್ತದೆ. ರಫ್ತು ಕ್ಷೇತ್ರದಲ್ಲಿ ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆಯನ್ನು ಉತ್ತೇಜಿಸಲು ಈ ಪೋರ್ಟಲ್ ಸಹಾಯ ಮಾಡುತ್ತದೆ ಎಂಬ ಖಾತ್ರಿ ನನಗಿದೆ. ನಾವು ರಾಜ್ಯಗಳ ನಡುವೆ ಆರೋಗ್ಯಕರ ಸ್ಪರ್ಧೆ ಬಯಸುತ್ತೇವೆ--ಯಾವ ರಾಜ್ಯವು ಎಷ್ಟು ರಫ್ತು ಮಾಡುತ್ತದೆ, ಎಷ್ಟು ಸ್ಥಳಗಳನ್ನು ವ್ಯಾಪಿಸುತ್ತದೆ ಮತ್ತು ಎಷ್ಟು ವಿಭಿನ್ನ ಸರಕುಗಳನ್ನು ರಫ್ತು ಮಾಡುತ್ತದೆ ಎಂಬ ಮಾಹಿತಿಯೂ ದೊರಕುತ್ತದೆ.
ಮಿತ್ರರೇ,
ನಾವು ವಿವಿಧ ದೇಶಗಳ ಅಭಿವೃದ್ಧಿ ಪಯಣವನ್ನು ಅಧ್ಯಯನ ಮಾಡಿದಾಗ, ಆ ದೇಶಗಳ ರಫ್ತು ಹೆಚ್ಚಾದಾಗ ಮಾತ್ರ ಅವು ಪ್ರಗತಿ ಸಾಧಿಸಿರುವುದು ಕಂಡುಬಂದಿದೆ. ಅಂದರೆ, ಅಭಿವೃದ್ಧಿಶೀಲ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವಲ್ಲಿ ರಫ್ತು ದೊಡ್ಡ ಪಾತ್ರವನ್ನು ವಹಿಸುತ್ತದೆ. ಇದರಿಂದಾಗಿ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳೂ ಹೆಚ್ಚುತ್ತವೆ. ಕಳೆದ ಎಂಟು ವರ್ಷಗಳಲ್ಲಿ, ಭಾರತವು ತನ್ನ ರಫ್ತುಗಳನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುತ್ತಿದೆ ಮತ್ತು ರಫ್ತು ಗುರಿಗಳನ್ನು ಸಾಧಿಸುತ್ತಿದೆ. ಆ ನಿಟ್ಟಿನಲ್ಲಿ ರಫ್ತುಗಳನ್ನು ಹೆಚ್ಚಿಸಲು ಉತ್ತಮ ನೀತಿಗಳು, ಪ್ರಕ್ರಿಯೆ ಸರಳಗೊಳಿಸುವುದು ಮತ್ತು ಉತ್ಪನ್ನಗಳನ್ನು ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸುವುದು ಸಾಕಷ್ಟು ಸಹಾಯ ಮಾಡಿದೆ. ಮತ್ತು ಇದೀಗ ನಾವು ನಮ್ಮ ರಫ್ತುದಾರರಿಗೆ ಕಡಿಮೆ ಬೆಲೆಯಲ್ಲಿ ಸರಕುಗಳ ಸಾಗಾಣೆಗೆ ನೆರವಾಗಲು ಸಮಾನವಾಗಿ ಗಮನಹರಿಸುತ್ತಿದ್ದೇವೆ. ನಿಮಗೆಲ್ಲಾ ತಿಳಿದಿರುವಂತೆ ಪಿಎಲ್ ಐ ಯೋಜನೆಯು ಉತ್ಪಾದನೆಯನ್ನು ಹೆಚ್ಚಿಸಲು ಹೇಗೆ ಸಹಾಯ ಮಾಡುತ್ತಿದೆ. ನಮ್ಮ ರಫ್ತು ಪಾಲುದಾರರಿಂದ ಪ್ರತಿಕ್ರಿಯೆಯ ಆಧಾರದ ಮೇಲೆ ನೀತಿ ಬದಲಾವಣೆ ಮಾಡಿರುವುದು ಸಹ ಬಹಳಷ್ಟು ಸಹಾಯ ಮಾಡಿದೆ. ಇಂದು, ಸರ್ಕಾರದ ಪ್ರತಿಯೊಂದು ಸಚಿವಾಲಯ, ಪ್ರತಿ ಇಲಾಖೆ, 'ಒಟ್ಟು ಸರ್ಕಾರದ' ಧೋರಣೆಯೊಂದಿಗೆ ರಫ್ತು ಹೆಚ್ಚಿಸಲು ಆದ್ಯತೆ ನೀಡುತ್ತಿದೆ. ಅದು ಎಂಎಸ್ ಎಂಇ ಸಚಿವಾಲಯ ಅಥವಾ ವಿದೇಶಾಂಗ ವ್ಯವಹಾರಗಳು, ಕೃಷಿ ಅಥವಾ ವಾಣಿಜ್ಯ ಸಚಿವಾಲಯವಾಗಿರಲಿ, ಎಲ್ಲರೂ ಒಂದೇ ಗುರಿಗಾಗಿ ಸಾಮಾನ್ಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ.
ಹೆಚ್ಚಿನ ಸಂಖ್ಯೆಯ ಎಂಜಿನಿಯರಿಂಗ್ ಸರಕುಗಳು ನಮ್ಮ ರಫ್ತಿಗೆ ಕಾರಣವಾಗಿವೆ ಮತ್ತು ನಿರ್ದಿಷ್ಟವಾಗಿ ಎಂಎಸ್ ಎಂಇ ವಲಯವು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ದೇಶದ ಹೊಸ ಹೊಸ ಪ್ರದೇಶಗಳಿಂದಲೂ ರಫ್ತು ಹೆಚ್ಚುತ್ತಿದೆ ಮತ್ತು ಹಲವು ಮಹತ್ವಾಕಾಂಕ್ಷೆಯ ಜಿಲ್ಲೆಗಳಿಂದಲೂ ರಫ್ತು ಇದೀಗ ಹಲವು ಪಟ್ಟು ಹೆಚ್ಚಾಗಿದೆ. ಹತ್ತಿ ಮತ್ತು ಕೈಮಗ್ಗ ಉತ್ಪನ್ನಗಳ ರಫ್ತು ಶೇ. 55 ರಷ್ಟು ಹೆಚ್ಚಳವಾಗಿರುವುದು ತಳಮಟ್ಟದಲ್ಲಿ ಹೇಗೆ ಕೆಲಸ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ‘ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗಿ (ಲೋಕಲ್ ಫಾರ್ ಲೊಕಲ್)’ ಮತ್ತು ‘ಒಂದು ರಾಷ್ಟ್ರ- ಒಂದು ಉತ್ಪನ್ನ’ ಅಭಿಯಾನಗಳ ಮೂಲಕ ಸ್ಥಳೀಯ ಉತ್ಪನ್ನಗಳಿಗೆ ಸರ್ಕಾರ ಒತ್ತು ನೀಡಿರುವುದು ರಫ್ತು ಹೆಚ್ಚಳಕ್ಕೆ ಸಹಕಾರಿಯಾಗಿದೆ. ಈಗ ನಮ್ಮ ಅನೇಕ ಉತ್ಪನ್ನಗಳನ್ನು ಹೊಸ ದೇಶಗಳಿಗೆ ಮತ್ತು ಪ್ರಪಂಚದ ಹೊಸ ಜಾಗಗಳಿಗೆ ಮೊದಲ ಬಾರಿಗೆ ರಫ್ತು ಮಾಡಲಾಗುತ್ತಿದೆ. ಈಗ ನಮ್ಮ ಸ್ಥಳೀಯ ಉತ್ಪನ್ನಗಳು ಅತ್ಯಂತ ವೇಗವಾಗಿ ನಿಜವಾಗಿಯೂ ಜಾಗತಿಕವಾಗುವತ್ತ ಸಾಗುತ್ತಿವೆ. ಸೀತಾಭೋಗ್ ಸಿಹಿತಿಂಡಿಗಳು ಮತ್ತು ನರ್ಕೆಲ್ ನಾರು ಅಂದರೆ ತೆಂಗಿನಕಾಯಿ ಮತ್ತು ಬೆಲ್ಲದ ಲಡ್ಡುಗಳ ಮೊದಲ ಕನೈನ್ ಮೆಂಟ್ ಅನ್ನು ಬಹ್ರೇನ್‌ಗೆ ರಫ್ತು ಮಾಡಲಾಗಿದೆ. ನಾಗಾಲ್ಯಾಂಡ್‌ನಿಂದ ಫ್ರೆಶ್ ಕಿಂಗ್ ಚಿಲ್ಲಿ (ಮೆಣಸಿನಕಾಯಿ) ಲಂಡನ್‌ನ ಮಾರುಕಟ್ಟೆಗೆ ಹೋಗುತ್ತಿದ್ದರೆ, ಅಸ್ಸಾಂನಿಂದ ತಾಜಾ ಬರ್ಮಾ ದ್ರಾಕ್ಷಿಯನ್ನು ದುಬೈಗೆ ರಫ್ತು ಮಾಡಲಾಗುತ್ತಿದೆ. ಛತ್ತೀಸ್‌ಗಢದ ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರ ಅರಣ್ಯ ಉತ್ಪನ್ನವಾದ ಮಹುವಾ ಹೂವುಗಳನ್ನು ಫ್ರಾನ್ಸ್‌ಗೆ ಮತ್ತು ದುಬೈನ ಕಾರ್ಗಿಲ್‌ನ ಖುಮಾನಿಗೆ ರಫ್ತು ಮಾಡಲಾಗುತ್ತಿದೆ. ಅರುಬಾ, ಬೆಲೀಜ್, ಬರ್ಮುಡಾ, ಗ್ರೆನಡಾ ಮತ್ತು ಸ್ವಿಡ್ಜರ್ ಲ್ಯಾಂಡ್ ನಂತಹ ಹೊಸ ಮಾರುಕಟ್ಟೆಗಳಿಗೆ ಕೈಮಗ್ಗ ಉತ್ಪನ್ನಗಳನ್ನು ಪರಿಚಯಿಸಲಾಗಿದೆ. ನಮ್ಮ ರೈತರು, ನೇಕಾರರು ಮತ್ತು ಸಾಂಪ್ರದಾಯಿಕ ಉತ್ಪನ್ನಗಳನ್ನು ರಫ್ತು ಪೂರಕ ವ್ಯವಸ್ಥೆಯೊಂದಿಗೆ ಸಂಪರ್ಕಿಸಲು ನಾವು ಜಿಐ ಟ್ಯಾಗಿಂಗ್‌ಗೆ ಸಹಾಯ ಮಾಡುತ್ತಿದ್ದೇವೆ ಮತ್ತು ಒತ್ತು ನೀಡುತ್ತಿದ್ದೇವೆ. ಕಳೆದ ವರ್ಷ ನಾವು ಯುಎಇ ಮತ್ತು ಆಸ್ಟ್ರೇಲಿಯಾದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಅಂತಿಮಗೊಳಿಸಿದ್ದೇವೆ ಮತ್ತು ಇತರ ದೇಶಗಳ ಜೊತೆಗಿನ ಒಪ್ಪಂದಗಳ ಕುರಿತು ಸಾಕಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ವಿದೇಶದಲ್ಲಿನ ನಮ್ಮ ರಾಜತಾಂತ್ರಿಕ ಕಚೇರಿಗಳ ಕಾರ್ಯವನ್ನು ನಾನು ಪ್ರಶಂಸಿಸಲು ಬಯಸುತ್ತೇನೆ. ಅತ್ಯಂತ ಸವಾಲಿನ ವಾತಾವರಣವನ್ನು ಭಾರತಕ್ಕೆ ಅವಕಾಶಗಳಾಗಿ ಪರಿವರ್ತಿಸುವುದಕ್ಕಾಗಿ ಕೆಲಸ ಮಾಡಿರುವ ನಮ್ಮೆಲ್ಲಾ ರಾಯಭಾರ ಕಚೇರಿಗಳು ಅಭಿನಂದನೆಗೆ ಅರ್ಹವಾಗಿವೆ.
ಮಿತ್ರರೇ,
ವ್ಯಾಪಾರಕ್ಕೆ ಹೊಸ ಮಾರುಕಟ್ಟೆಗಳನ್ನು ಗುರುತಿಸುವುದು ಮತ್ತು ಅವುಗಳ ಅಗತ್ಯತೆಗಳನ್ನು ಗುರುತಿಸುವುದು ಮತ್ತು ಆಂತಹ ಉತ್ಪನ್ನಗಳನ್ನು ಉತ್ಪಾದಿಸುವುದು ದೇಶದ ಪ್ರಗತಿಗೆ ಬಹು ಮುಖ್ಯವಾಗಿದೆ. ಈ ಹಿಂದೆ ನಮ್ಮ ವ್ಯಾಪಾರಿಗಳು ಪರಸ್ಪರ ಪಾಲುದಾರಿಕೆ ಮತ್ತು ನಂಬಿಕೆ ಆಧಾರಿತ ವ್ಯಾಪಾರವು ಹೇಗೆ ಬೆಳವಣಿಗೆ ಹೊಂದಬಹುದು ಎಂಬುದನ್ನು ತೋರಿಸಿದ್ದಾರೆ. ಸ್ವಾತಂತ್ರ್ಯದ ‘ಅಮೃತ ಕಾಲ’ದಲ್ಲಿ ನಾವು ಮೌಲ್ಯ ಮತ್ತು ಪೂರೈಕೆ ಸರಣಿಯ ಈ ಕಲಿಕೆಯನ್ನು ಬಲವರ್ಧನೆಗೊಳಿಸಬೇಕಾಗಿದೆ. ಒಂದೇ ರೀತಿಯ ಮೌಲ್ಯಗಳ ಆಧಾರದ ಮೇಲೆ, ನಾವು ಯುಎಇ ಮತ್ತು ಆಸ್ಟ್ರೇಲಿಯಾದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಪೂರ್ಣಗೊಳಿಸಿದ್ದೇವೆ. ನಾವು ಅನೇಕ ದೇಶಗಳು ಮತ್ತು ಪ್ರದೇಶಗಳೊಂದಿಗೆ ಅಂತಹ ಒಪ್ಪಂದಗಳ ನಿಟ್ಟಿನಲ್ಲಿ ಕ್ಷಿಪ್ರವಾಗಿ ಸಾಗುತ್ತಿದ್ದೇವೆ.
ಮಿತ್ರರೇ,
ಕಳೆದ ಎಂಟು ವರ್ಷಗಳ ದೇಶದ ಸಾಧನೆಗಳು ಪ್ರತಿಯೊಬ್ಬ ಭಾರತೀಯರಲ್ಲೂ ಹೆಮ್ಮೆ ಮೂಡಿಸಿವೆ. ಅದೇ ಸ್ಫೂರ್ತಿಯೊಂದಿಗೆ ನಾವು ಸ್ವಾತಂತ್ರ್ಯದ ಈ ಅಮೃತ ಕಾಲದಲ್ಲಿ ಮುಂದಿನ 25 ವರ್ಷಗಳ ಸಂಕಲ್ಪಗಳಿಗಾಗಿ ಕಾರ್ಯನಿರ್ವಹಿಸಬೇಕಿದೆ. ಇಂದು ಹೊಸ ಕಟ್ಟಡವನ್ನು ನಿರ್ಮಿಸಲಾಗಿದೆ ಮತ್ತು ಹೊಸ ಪೋರ್ಟಲ್ ಅನ್ನು ಸಹ ಪ್ರಾರಂಭಿಸಲಾಗಿದೆ. ಆದರೆ ನಮ್ಮ ಜವಾಬ್ದಾರಿ ಮುಗಿದಿಲ್ಲ. ಒಂದು ರೀತಿಯಲ್ಲಿ, ಇದು ಹೊಸ ಸಂಕಲ್ಪಗಳು ಮತ್ತು ಶಕ್ತಿಯೊಂದಿಗೆ ಕ್ಷಿಪ್ರ ಗತಿಯಲ್ಲಿ ಹೊಸ ಸಾಧನೆಗಳನ್ನು ಮಾಡುವ ಆರಂಭವಷ್ಟೇ. ಕಾಲಕಾಲಕ್ಕೆ ನಾವು ರಚಿಸಿರುವ ಪೋರ್ಟಲ್ ಮತ್ತು ಪ್ಲಾಟ್‌ಫಾರ್ಮ್‌ಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ನಾನು ಪ್ರತಿ ಇಲಾಖೆಗೆ ಕರೆ ನೀಡುತ್ತೇನೆ.ನಾವು ಈ ಸಾಧನಗಳನ್ನು ಅಭಿವೃದ್ಧಿಪಡಿಸಿದ ಗುರಿಗಳನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನ ಮಾಡಬೇಕು ಮತ್ತು ಸಮಸ್ಯೆಗಳಿದ್ದರೆ ಅವುಗಳನ್ನು ತಕ್ಷಣ ಪರಿಹರಿಸಬೇಕು. ಉದ್ಯಮದ ಸಹೋದ್ಯೋಗಿಗಳು ಮತ್ತು ರಫ್ತುದಾರರು ತಮ್ಮ ಅಂಶಗಳನ್ನು ಮುಕ್ತವಾಗಿ ಸರ್ಕಾರದ ಮುಂದೆ ಮಂಡಿಸಬೇಕು ಮತ್ತು ನವೀನ ಸಲಹೆಗಳು ಮತ್ತು ಪರಿಹಾರಗಳೊಂದಿಗೆ ಬರಬೇಕೆಂದು ನಾನು ಆಗ್ರಹಿಸುತ್ತೇನೆ.
ಒಟ್ಟಾರೆ ನಾವು ಪರಿಹಾರವನ್ನು ಕಂಡುಕೊಳ್ಳಲು ಬಯಸುತ್ತೇವೆ. ನೀವು ನಿರ್ಯಾತ್ ಪೋರ್ಟಲ್‌ಗೆ ಭೇಟಿ ನೀಡಿ ಮತ್ತು ಏನನ್ನು ಸೇರಿಸಬೇಕು ಅಥವಾ ಯಾವುದನ್ನು ತೆಗೆದುಹಾಕಬೇಕು ಎಂಬುದನ್ನು ಸೂಚಿಸಿ. ಜಿಲ್ಲಾ ಮಟ್ಟದಲ್ಲಿ ರಫ್ತು ಹೆಚ್ಚಿಸಲು ಯಾವ ನಿಯಮಗಳನ್ನು ಮಾಡಬಹುದು? ಜಿಲ್ಲಾ ಮಟ್ಟದಲ್ಲಿ ರಫ್ತು ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ನಾವು ಮೂಡಿಸಬೇಕಿದೆ. ನಾವು ನಮ್ಮ ಉತ್ಪಾದಕರ ನಡುವೆ ವಿಶ್ವ ದರ್ಜೆಯ ಪ್ಯಾಕೇಜಿಂಗ್‌ನಲ್ಲಿ 'ಶೂನ್ಯ ದೋಷ, ಶೂನ್ಯ ಪರಿಣಾಮ'ದ ಸ್ಪರ್ಧೆಯನ್ನು ಸಹ ತರಬೇಕಾಗಿದೆ. ಪ್ರತಿಯೊಬ್ಬರ ಅನಿಸಿಕೆ- ಅಭಿಪ್ರಾಯ, ಪ್ರತಿಯೊಬ್ಬರ ಸಲಹೆಗಳೊಂದಿಗೆ ಅಂದರೆ ‘ಸಬ್ ಕಾ ಪ್ರಯಾಸ್’ (ಎಲ್ಲರ ಪ್ರಯತ್ನ) ದೊಂದಿಗೆ ನಾವು ನಮ್ಮ ಬೃಹತ್ ಸಂಕಲ್ಪಗಳನ್ನು ಸಾಕಾರಗೊಳಿಸಬಹುದು. ಮತ್ತೊಮ್ಮೆ, ಹೊಸ ಕಟ್ಟಡಕ್ಕಾಗಿ ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ ಮತ್ತು ಈ ಶುಭ ಯೋಜನೆಯಲ್ಲಿ ಭಾಗವಹಿಸಲು ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ಇಲಾಖೆಗೆ ತುಂಬಾ ಕೃತಜ್ಞನಾಗಿದ್ದೇನೆ. ತುಂಬಾ ತುಂಬಾ ಧನ್ಯವಾದಗಳು! ಎಲ್ಲರಿಗೂ ಶುಭಾಶಯಗಳು.
ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿಗಳ ಭಾಷಣ ಯಥಾವತ್ ಅನುವಾದವಲ್ಲ. ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.
******
(Release ID: 1836862)
Visitor Counter : 187
Read this release in:
Bengali
,
Marathi
,
Assamese
,
Punjabi
,
Gujarati
,
Tamil
,
Urdu
,
English
,
Hindi
,
Manipuri
,
Odia
,
Telugu
,
Malayalam