ಪ್ರಧಾನ ಮಂತ್ರಿಯವರ ಕಛೇರಿ

44ನೇ ಚೆಸ್ ಒಲಿಂಪಿಯಾಡ್‌ಗಾಗಿ ಐತಿಹಾಸಿಕ ಕ್ರೀಡಾ ಜ್ಯೋತಿ ರಿಲೇಗೆ ಪ್ರಧಾನ ಮಂತ್ರಿ ಅವರಿಂದ ಚಾಲನೆ.


ಭಾರತವು ಇದೇ ಮೊದಲ ಬಾರಿಗೆ ಚೆಸ್ ಒಲಿಂಪಿಯಾಡ್ ಗೆ ಆತಿಥ್ಯ ಒದಗಿಸಲಿದೆ.

ಪ್ರಧಾನ ಮಂತ್ರಿ ಅವರ ನಾಯಕತ್ವಕ್ಕಾಗಿ ಪ್ರಧಾನ ಮಂತ್ರಿ ಅವರಿಗೆ ಧನ್ಯವಾದ ಸಲ್ಲಿಸಿದ ಫಿಡೆ ಅಧ್ಯಕ್ಷರು

"ಈ ಗೌರವವು ಕೇವಲ ಭಾರತಕ್ಕೆ ಸಂದ ಗೌರವವಲ್ಲ, ಇದು ವೈಭವದ ಚೆಸ್ ಪರಂಪರೆಗೆ ಸಂದ ಗೌರವವೂ ಆಗಿದೆ"

"ಭಾರತವು ಈ ವರ್ಷ ಪದಕಗಳ ಹೊಸ ದಾಖಲೆಯನ್ನು ನಿರ್ಮಾಣ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ"

"ಸೂಕ್ತ ಬೆಂಬಲ ಮತ್ತು ಸೂಕ್ತ ಪರಿಸರವನ್ನು ಒದಗಿಸಿದರೆ ದುರ್ಬಲರಿಗೂ ಯಾವುದೇ ಗುರಿ ಸಾಧನೆ ಅಸಾಧ್ಯವೇನಲ್ಲ"

"ದೂರದೃಷ್ಟಿಯು ಭಾರತದ ಕ್ರೀಡಾ ನೀತಿಯನ್ನು ವಿವರಿಸುತ್ತದೆ ಮತ್ತು ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್ (ಟಿ.ಒ.ಪಿ.ಎಸ್.) ನಂತಹ ಯೋಜನೆಗಳು ಫಲಿತಾಂಶಗಳನ್ನು ನೀಡಲಾರಂಭಿಸಿವೆ"

“ಹಿಂದೆ ಯುವಕರು ಸರಿಯಾದ ವೇದಿಕೆಗಾಗಿ ಕಾಯಬೇಕಾಗಿತ್ತು. ಇಂದು, 'ಖೇಲೋ ಇಂಡಿಯಾ' ಅಭಿಯಾನದ ಅಡಿಯಲ್ಲಿ, ದೇಶವು ಈ ಪ್ರತಿಭೆಗಳನ್ನು ಹುಡುಕುತ್ತಿದೆ ಮತ್ತು ರೂಪಿಸುತ್ತಿದೆ”.

"ಶೂನ್ಯ ಶೇಕಡಾ ಉದ್ವಿಗ್ನತೆ ಅಥವಾ ಒತ್ತಡದೊಂದಿಗೆ ನಿಮ್ಮ ನೂರು ಪ್ರತಿಶತ ಪ್ರಯತ್ನವನ್ನು ಮಾಡಿ”

Posted On: 19 JUN 2022 6:50PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹೊಸದಿಲ್ಲಿಯ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ 44ನೇ ಚೆಸ್ ಒಲಿಂಪಿಯಾಡ್‌ನ ಐತಿಹಾಸಿಕ ಕ್ರೀಡಾ ಜ್ಯೋತಿ ರಿಲೇಗೆ ಚಾಲನೆ ನೀಡಿದರು. ಫಿಡೆ ಅಧ್ಯಕ್ಷ ಅರ್ಕಾಡಿ ಡ್ವೊರ್ಕೊವಿಚ್ ಅವರು ಜ್ಯೋತಿಯನ್ನು ಪ್ರಧಾನಿಗೆ ಹಸ್ತಾಂತರಿಸಿದರು, ಅವರು ಅದನ್ನು ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಅವರಿಗೆ ಹಸ್ತಾಂತರಿಸಿದರು. ಚೆನ್ನೈ ಬಳಿಯ ಮಹಾಬಲಿಪುರಂನಲ್ಲಿ ಸಮಾಪನಗೊಳ್ಳುವುದಕ್ಕೆ ಮುನ್ನ ಈ ಜ್ಯೋತಿಯನ್ನು 40 ದಿನಗಳ ಅವಧಿಯಲ್ಲಿ 75 ನಗರಗಳಿಗೆ ಕೊಂಡೊಯ್ಯಲಾಗುತ್ತದೆ. ಪ್ರತಿ ಸ್ಥಳದಲ್ಲಿ, ರಾಜ್ಯದ ಚೆಸ್ ಗ್ರ್ಯಾಂಡ್‌ಮಾಸ್ಟರ್‌ಗಳು ಜ್ಯೋತಿಯನ್ನು ಸ್ವೀಕರಿಸುತ್ತಾರೆ. ಪ್ರಧಾನಿ ಮೋದಿ ಅವರು ಖೇಲೋ ಚೆಸ್ ಸಮಾರಂಭದ ನಡೆಯನ್ನು ವಿಧ್ಯುಕ್ತವಾಗಿ ನೆರವೇರಿಸಿದರು ಮತ್ತು ಶ್ರೀಮತಿ ಕೊನೆರು ಹಂಪಿ ಅದನ್ನು ಮುಂದುವರೆಸಿದರು. ಕೇಂದ್ರ ಸಚಿವರಾದ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಶ್ರೀ ನಿಸಿತ್ ಪ್ರಮಾಣಿಕ್, ಚೆಸ್ ಆಟಗಾರರು ಮತ್ತು ಕ್ರೀಡಾಸಕ್ತರು, ರಾಯಭಾರಿಗಳು, ಚೆಸ್ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

ಫಿಡೆ ಅಧ್ಯಕ್ಷ ಅರ್ಕಾಡಿ ಡ್ವೊರ್ಕೊವಿಚ್ ಅವರು ಕ್ರೀಡಾ ಜ್ಯೋತಿ ರಿಲೇಯ ಹೊಸ ಸಂಪ್ರದಾಯದ ಪ್ರಾರಂಭದ ಉಪಕ್ರಮವನ್ನು ತೆಗೆದುಕೊಂಡಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದರು, ಇದು ಪ್ರಪಂಚದಾದ್ಯಂತ ಈ ಆಟವನ್ನು ಜನಪ್ರಿಯಗೊಳಿಸಲಿದೆ ಮತ್ತು ಉತ್ತೇಜಿಸಲಿದೆ. “ಪ್ರಧಾನಿ ನರೇಂದ್ರ ಮೋದಿಯವರ ಉಪಸ್ಥಿತಿಗಾಗಿ ಮತ್ತು ನಮ್ಮನ್ನು ಗೌರವಿಸಿದ್ದಕ್ಕಾಗಿ ಫಿಡೆ ಅವರಿಗೆ ಕೃತಜ್ಞರಾಗಿರಬೇಕು” ಎಂದು ಅವರು ಹೇಳಿದರು. 2010 ರಲ್ಲಿ ಹೆಚ್ಚಿನ ಆಟಗಾರರು ಒಂದೇ ಸ್ಥಳದಲ್ಲಿ ಚೆಸ್ ಆಡುವ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರು ಹೊಸ ಸಾಮರ್ಥ್ಯ ವರ್ಧನೆಯಲ್ಲಿ ಚೆಸ್ ಆಟದ ಮಹತ್ವ ಮತ್ತು ಶಿಕ್ಷಣ ಹಾಗು ಕ್ರೀಡೆಗಳ ಸಂಗಮದಿಂದ ಯಶಸ್ಸು ಲಭಿಸುವ ಕುರಿತು ಮಾಡಿದ ಭಾಷಣವನ್ನು ಅವರು ನೆನಪಿಸಿಕೊಂಡರು. ಚೆಸ್ ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ ಎಲ್ಲಾ ಶಾಲೆಗಳ ಅಂಗವಾಗಬೇಕು ಎಂಬ ಆಶಯವನ್ನು ಫಿಡೆ ಅಧ್ಯಕ್ಷರು ವ್ಯಕ್ತಪಡಿಸಿದರು. “ಭಾರತವು ಇಂದು ವೇಗವಾಗಿ ಬೆಳೆಯುತ್ತಿರುವ ಚೆಸ್ ದೇಶವಾಗಿದೆ ಮತ್ತು ನೀವು ಅದರ ಬಗ್ಗೆ ಹೆಮ್ಮೆಪಡಲು ಎಲ್ಲಾ ಆಧಾರಗಳಿವೆ. ಚೆಸ್‌ನ ಹಿತಾಸಕ್ತಿಗಾಗಿ ನೀವು ಮಾಡುತ್ತಿರುವ ಎಲ್ಲಾ ಅದ್ಭುತ ಕೆಲಸಗಳಿಗಾಗಿ ನಿಮ್ಮ ನಾಯಕತ್ವಕ್ಕೆ ನಾವು ಕೃತಜ್ಞರಾಗಿರುತ್ತೇವೆ” ಎಂದೂ ಅವರು ಹೇಳಿದರು.

 

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು “ಇಂದು ಚೆಸ್ ಒಲಿಂಪಿಯಾಡ್ ಕ್ರೀಡಾಕೂಟದ ಮೊದಲ ಕ್ರೀಡಾ ಜ್ಯೋತಿ ರಿಲೇ ಭಾರತದಿಂದ ಪ್ರಾರಂಭವಾಗುತ್ತಿದೆ. ಮೊದಲ ಬಾರಿಗೆ, ಈ ವರ್ಷ ಭಾರತವು ಚೆಸ್ ಒಲಿಂಪಿಯಾಡ್ ಆಟಗಳನ್ನು ಆಯೋಜಿಸಲಿದೆ. ಒಂದು ಕ್ರೀಡೆಯು ತನ್ನ ಜನ್ಮಸ್ಥಳದಿಂದ ಪ್ರಾರಂಭವಾಗಿ ಪ್ರಪಂಚದಾದ್ಯಂತ ತನ್ನ ಛಾಪನ್ನು ಮೂಡಿಸಿದ್ದು, ಅನೇಕ ದೇಶಗಳಿಗೆ ಒಂದು ಅದು ಒಂದು ಹವ್ಯಾಸದ ಉತ್ಸಾಹವಾಗಿದೆ. ಇದರ ಬಗ್ಗೆ ನಾವು ಹೆಮ್ಮೆಪಡುತ್ತೇವೆ” ಎಂದರು. “ಶತಮಾನಗಳ ಹಿಂದೆ, ಈ ಕ್ರೀಡೆಯ ಜ್ಯೋತಿ ಇಡೀ ಜಗತ್ತಿಗೆ ಚದುರಂಗದ ರೂಪದಲ್ಲಿ ಭಾರತದಿಂದ ಹೋಯಿತು. ಇಂದು ಚದುರಂಗದ ಮೊದಲ ಒಲಿಂಪಿಯಾಡ್ ಕ್ರೀಡಾ ಜ್ಯೋತಿ ಕೂಡ ಭಾರತದಿಂದ ಹೊರಡುತ್ತಿದೆ. ಇಂದು, ಭಾರತವು ತನ್ನ ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವಾಗ, ಈ ಚೆಸ್ ಒಲಿಂಪಿಯಾಡ್ ಜ್ಯೋತಿಯು ದೇಶದ 75 ನಗರಗಳಿಗೆ ಹೋಗಲಿದೆ” ಎಂದೂ ಅವರು ಹೇಳಿದರು “ಪ್ರತಿ ಚೆಸ್ ಒಲಿಂಪಿಯಾಡ್ ಆಟಕ್ಕೆ ಕ್ರೀಡಾ ಜ್ಯೋತಿ ರಿಲೇ ಭಾರತದಿಂದಲೇ ಪ್ರಾರಂಭವಾಗಲಿದೆ ಎಂಬುದಾಗಿ ಫಿಡೆ ನಿರ್ಧರಿಸಿದೆ. ಈ ಗೌರವವು ಕೇವಲ ಭಾರತದ ಗೌರವ ಮಾತ್ರವಲ್ಲ, ಅದು ಚದುರಂಗದ ಈ ಭವ್ಯ ಪರಂಪರೆಗೆ ಸಂದ ಗೌರವವೂ ಆಗಿದೆ. ಇದಕ್ಕಾಗಿ ನಾನು ಫಿಡೆ ಮತ್ತು ಅದರ ಎಲ್ಲಾ ಸದಸ್ಯರನ್ನು ಅಭಿನಂದಿಸುತ್ತೇನೆ” ಎಂದವರು ನುಡಿದರು.

 

ಚೆಸ್‌ನಲ್ಲಿ ಭಾರತದ ಪರಂಪರೆಯ ಬಗ್ಗೆ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. "ನಮ್ಮ ಪೂರ್ವಜರು ವಿಶ್ಲೇಷಣಾತ್ಮಕ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಮಿದುಳುಗಳಿಗಾಗಿ ಚದುರಂಗ ಅಥವಾ ಚೆಸ್‌ನಂತಹ ಆಟಗಳನ್ನು ಕಂಡುಹಿಡಿದರು. ಚೆಸ್, ಭಾರತದ ಮೂಲಕ, ಪ್ರಪಂಚದ ಅನೇಕ ದೇಶಗಳನ್ನು ತಲುಪಿತು ಮತ್ತು ಬಹಳ ಜನಪ್ರಿಯವಾಯಿತು. ಇಂದು, ಚೆಸ್ ನ್ನು ಶಾಲೆಗಳಲ್ಲಿ ಯುವಜನರಿಗೆ, ಮಕ್ಕಳಿಗೆ ಶಿಕ್ಷಣದ ಸಾಧನವಾಗಿ ಬಳಸಲಾಗುತ್ತಿದೆ” ಎಂದವರು ವಿವರಿಸಿದರು. ಇತ್ತೀಚಿನ ವರ್ಷಗಳಲ್ಲಿ ಭಾರತವು ಚೆಸ್‌ನಲ್ಲಿ ತನ್ನ ಸಾಧನೆಯನ್ನು ನಿರಂತರವಾಗಿ ಸುಧಾರಿಸಿಕೊಳ್ಳುತ್ತಿದೆ ಎಂಬುದರತ್ತ ಅವರು ಗಮನ ಸೆಳೆದರು. ಈ ವರ್ಷ, ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ತಂಡ ಹಿಂದೆಂದಿಗಿಂತಲೂ ದೊಡ್ಡದಾಗಿದೆ ಎಂದರು. ಭಾರತವು ಈ ವರ್ಷ ಪದಕಗಳ ಹೊಸ ದಾಖಲೆಯನ್ನು ನಿರ್ಮಾಣ ಮಾಡುವುದೆಂಬ ಭರವಸೆಯನ್ನು ಪ್ರಧಾನಿ ವ್ಯಕ್ತಪಡಿಸಿದರು.

 

ನಮ್ಮ ಜೀವನದಲ್ಲಿ ಚೆಸ್ ನಮಗೆ ಕಲಿಸುವ ಅನೇಕ ಪಾಠಗಳ ಬಗ್ಗೆ ಪ್ರಧಾನಿ ಮಾತನಾಡಿದರು. ಜೀವನದಲ್ಲಿ ಯಾರೊಬ್ಬರ ಪಾತ್ರವಿದ್ದರೂ ಅದಕ್ಕೆ ಪೂರಕವಾಗಿ ಪ್ರತಿಯೊಬ್ಬರಿಗೂ ಸರಿಯಾದ ಬೆಂಬಲದ ಅಗತ್ಯವನ್ನು ಒತ್ತಿಹೇಳಿದ ಪ್ರಧಾನ ಮಂತ್ರಿ ಅವರು " ಚದುರಂಗದ ಪ್ರತಿಯೊಂದು ತುಣುಕಿನಂತೆಯೇ ಅದು ತನ್ನದೇ ಆದ ವಿಶಿಷ್ಟ ಶಕ್ತಿ ಮತ್ತು ಅನನ್ಯ ಸಾಮರ್ಥ್ಯವನ್ನು ಹೊಂದಿದೆ. ನೀವು ತುಣುಕಿನೊಂದಿಗೆ ಪ್ರತೀ ಹಂತದಲ್ಲಿ ಸರಿಯಾದ ಚಲನೆಯನ್ನು ನಡೆಸಿದರೆ ಮತ್ತು ಅದರ ಶಕ್ತಿಯನ್ನು ಸೂಕ್ತವಾಗಿ ಬಳಸಿದರೆ, ಅದು ಅತ್ಯಂತ ಶಕ್ತಿಶಾಲಿಯಾಗುತ್ತದೆ. ಚೆಸ್‌ಬೋರ್ಡ್‌ನ ಈ ವಿಶೇಷತೆಯು ನಮಗೆ ಜೀವನದ ದೊಡ್ಡ ಸಂದೇಶವನ್ನು ನೀಡುತ್ತದೆ. ಸರಿಯಾದ ಬೆಂಬಲ ಮತ್ತು ಸೂಕ್ತವಾದ ವಾತಾವರಣವನ್ನು ಒದಗಿಸಿದರೆ ದುರ್ಬಲರಿಗೂ ಯಾವುದೇ ಗುರಿ ಸಾಧನೆ ಅಸಾಧ್ಯವಲ್ಲ” ಎಂದರು.

 

ಚೆಸ್‌ನಿಂದ ಇನ್ನೊಂದು ಪಾಠವನ್ನು ಕಲಿಯಬಹುದು ಎಂಬ ಅಂಶದತ್ತ ಗಮನ ಸೆಳೆದ ಪ್ರಧಾನಮಂತ್ರಿಯವರು “ಚೆಸ್ ಆಟದ ಇನ್ನೊಂದು ಶ್ರೇಷ್ಠ ಲಕ್ಷಣವೆಂದರೆ ದೂರದೃಷ್ಟಿ. ದೂರದೃಷ್ಟಿ ಇದ್ದರೆ ನಿಜವಾದ ಯಶಸ್ಸು ಬರುತ್ತದೆ ಎಂದು ಚೆಸ್ ನಮಗೆ ಹೇಳುತ್ತದೆ” ಎಂದರು. ಭಾರತದ ಕ್ರೀಡಾ ನೀತಿಗೆ ಇದೊಂದು ಪಾಠದಂತಿದೆ ಮತ್ತು ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕೀಮ್ (ಟಿ.ಒ.ಪಿ.ಎಸ್.) ನಂತಹ ಯೋಜನೆಗಳು ಫಲಿತಾಂಶಗಳನ್ನು ನೀಡಲು ಆರಂಭಿಸಿವೆ ಎಂಬುದರತ್ತಲೂ ಪ್ರಧಾನ ಮಂತ್ರಿ ಅವರು ಬೆಟ್ಟು ಮಾಡಿದರು.

 

ಟೋಕಿಯೊ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಥಾಮಸ್ ಕಪ್ ಮತ್ತು ಬಾಕ್ಸಿಂಗ್‌ಗಳಲ್ಲಿ ಭಾರತದ ಇತ್ತೀಚಿನ ಯಶಸ್ಸನ್ನು ಉಲ್ಲೇಖಿಸಿದ ಪ್ರಧಾನ ಮಂತ್ರಿ ಅವರು, “ನಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ದೇಶದ ಯುವಕರಲ್ಲಿ ಧೈರ್ಯ, ಸಮರ್ಪಣಾ ಮನೋಭಾವ, ಶಕ್ತಿಗೂ ಕೊರತೆಯಿಲ್ಲ. ಮೊದಲು ನಮ್ಮ ಈ ಯುವಕರು ಸರಿಯಾದ ವೇದಿಕೆಗಾಗಿ ಕಾಯಬೇಕಿತ್ತು. ಇಂದು, 'ಖೇಲೋ ಇಂಡಿಯಾ' ಅಭಿಯಾನದ ಅಡಿಯಲ್ಲಿ, ದೇಶವು ಈ ಪ್ರತಿಭೆಗಳನ್ನು ಹುಡುಕುತ್ತಿದೆ ಮತ್ತು ರೂಪಿಸುತ್ತಿದೆ. ಖೇಲೋ ಇಂಡಿಯಾದ ಅಡಿಯಲ್ಲಿ ದೇಶದ ದೂರ ಪ್ರದೇಶಗಳಿಂದ ಕ್ರೀಡಾ ಪ್ರತಿಭೆಗಳು ಹೊರಹೊಮ್ಮುತ್ತಿವೆ ಮತ್ತು ದೇಶದ ವಿವಿಧ ಪಟ್ಟಣಗಳು ಹಾಗು ಜಿಲ್ಲೆಗಳಲ್ಲಿ ಆಧುನಿಕ ಕ್ರೀಡಾ ಮೂಲಸೌಕರ್ಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು. ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ ಕ್ರೀಡೆಯನ್ನು ಇತರ ಶೈಕ್ಷಣಿಕ ವಿಷಯವಾಗಿ ಪರಿಗಣಿಸಲಾಗಿದೆ ಎಂಬುದರತ್ತಲೂ ಅವರು ಬೆಟ್ಟು ಮಾಡಿದರು. ಫಿಸಿಯೋ, ಕ್ರೀಡಾ ವಿಜ್ಞಾನದಂತಹ ಕ್ರೀಡೆಗಳ ಹಲವು ಹೊಸ ಆಯಾಮಗಳು ಮುನ್ನೆಲೆಗೆ ಬರುತ್ತಿವೆ ಮತ್ತು ದೇಶದಲ್ಲಿ ಹಲವು ಕ್ರೀಡಾ ವಿಶ್ವವಿದ್ಯಾಲಯಗಳು ಆರಂಭಗೊಳ್ಳುತ್ತಿವೆ ಎಂದರು.

 

ಆಟಗಾರರ ಮೇಲೆ ನಿರೀಕ್ಷೆಗಳ ಒತ್ತಡವಿರುವುದನ್ನು ಒಪ್ಪಿಕೊಂಡ ಪ್ರಧಾನ ಮಂತ್ರಿ ಅವರು ಪೂರ್ಣವಾಗಿ ಶೂನ್ಯ ಪ್ರತಿಶತ ಉದ್ವಿಗ್ನತೆ ಅಥವಾ ಶೂನ್ಯ ಒತ್ತಡದಲ್ಲಿ ತಮ್ಮ ನೂರಕ್ಕೆ ನೂರು ಪ್ರತಿಶತದಷ್ಟು ಪ್ರಯತ್ನವನ್ನು ಮಾಡಲು ಸಲಹೆ ನೀಡಿದರು. ನಿಮ್ಮ ಶ್ರಮ ಮತ್ತು ಸಮರ್ಪಣಾ ಮನೋಭಾವವನ್ನು ದೇಶ ನೋಡುತ್ತಿದೆ ಎಂದರು. ಆಟದಲ್ಲಿ ಗೆಲುವು ಅದರ ಭಾಗವಾಗಿರುವಂತೆಯೇ, ಗೆಲುವು ಸಾಧಿಸಲು ನಡೆಸುವ ತಯಾರಿಯೂ ಕೂಡಾ ಆಟದ ಭಾಗವಾಗಿದೆ ಎಂದವರು ನುಡಿದರು. ಚೆಸ್‌ನಲ್ಲಿ ಒಂದು ತಪ್ಪು ನಡೆಯಿಂದಾಗಬಹುದಾದ ಹಾನಿಯನ್ನು ಉಲ್ಲೇಖಿಸಿದ ಪ್ರಧಾನಿ, ಆಟವು ಒಂದು ತಪ್ಪು ನಡೆಯಿಂದ ಹೋಗಬಹುದಾದರೆ, ಮೆದುಳಿನ ಶಕ್ತಿಯನ್ನು ಬಳಸಿಕೊಂಡು ಪರಿಸ್ಥಿತಿಯನ್ನು ಹತೋಟಿಗೆ ತರಬಹುದು, ಆದುದರಿಂದ ಶಾಂತ ಮನಸ್ಥಿತಿಯಲ್ಲಿರುವುದು ಬಹಳ ಮುಖ್ಯ ಎಂದೂ ಹೇಳಿದರು. ಯೋಗ ಮತ್ತು ಧ್ಯಾನವು ಇದಕ್ಕೆ ಹೆಚ್ಚಿನ ಸಹಾಯ ಮಾಡುತ್ತದೆ ಎಂದವರು ಸಲಹೆ ನೀಡಿದರು. ಯೋಗವನ್ನು ದೈನಂದಿನ ಜೀವನದ ಭಾಗವನ್ನಾಗಿ ಮಾಡಿಕೊಳ್ಳುವಂತೆ ಮತ್ತು ಮುಂಬರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಂತೆಯೂ ಅವರು ಮನವಿ ಮಾಡಿದರು.

 

ಈ ವರ್ಷ, ಮೊಟ್ಟಮೊದಲ ಬಾರಿಗೆ, ಅಂತರರಾಷ್ಟ್ರೀಯ ಚೆಸ್ ಮಂಡಳಿಯಾದ, ಫಿಡೆಯು ಒಲಿಂಪಿಕ್ ಸಂಪ್ರದಾಯದ ಭಾಗವಾಗಿರುವ ಚೆಸ್ ಒಲಂಪಿಯಾಡ್ ಕ್ರೀಡಾ ಜ್ಯೋತಿಯನ್ನು ಸ್ಥಾಪಿಸಿದೆ, ಇದನ್ನು ಚೆಸ್ ಒಲಿಂಪಿಯಾಡ್‌ನಲ್ಲಿ ಹಿಂದೆಂದೂ ಮಾಡಿರಲಿಲ್ಲ. ಭಾರತವು ಚೆಸ್ ಒಲಿಂಪಿಯಾಡ್ ಕ್ರೀಡಾ ಜ್ಯೋತಿ ರಿಲೇ ಹೊಂದಿರುವ ಮೊದಲ ದೇಶವಾಗಿದೆ. ಮುಖ್ಯವಾಗಿ ಚೆಸ್‌ನ ಭಾರತೀಯ ಬೇರುಗಳನ್ನು ಇನ್ನಷ್ಟು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವುದಕ್ಕಾಗಿ, ಚೆಸ್ ಒಲಿಂಪಿಯಾಡ್‌ನ ಕ್ರೀಡಾ ಜ್ಯೋತಿ ರಿಲೇಯ ಈ ಸಂಪ್ರದಾಯವು ಭಾರತದಲ್ಲಿ ಪ್ರಾರಂಭವಾಗಿದೆ ಮತ್ತು ಆತಿಥೇಯ ದೇಶವನ್ನು ತಲುಪುವ ಮೊದಲು ಎಲ್ಲಾ ಖಂಡಗಳಾದ್ಯಂತ ಅದು ಸಾಗುತ್ತದೆ.

 

44ನೇ ಚೆಸ್ ಒಲಿಂಪಿಯಾಡ್ 2022ರ ಜುಲೈ 28 ರಿಂದ ಆಗಸ್ಟ್ 10 ರವರೆಗೆ ಚೆನ್ನೈನಲ್ಲಿ ನಡೆಯಲಿದೆ. 1927 ರಿಂದ ಆಯೋಜಿಸಲಾಗುತ್ತಿರುವ ಈ ಪ್ರತಿಷ್ಠಿತ ಸ್ಪರ್ಧೆಯನ್ನು ಭಾರತದಲ್ಲಿ ಮೊದಲ ಬಾರಿಗೆ ಮತ್ತು 30 ವರ್ಷಗಳ ನಂತರ ಏಷ್ಯಾದಲ್ಲಿ ಆಯೋಜಿಸಲಾಗುತ್ತಿದೆ. 189 ದೇಶಗಳು ಭಾಗವಹಿಸುವ ಮೂಲಕ, ಇದು ಹಿಂದಿನ ಚೆಸ್ ಒಲಿಂಪಿಯಾಡ್‌ಗಳಿಗೆ ಹೋಲಿಸಿದರೆ ಅತಿ ದೊಡ್ಡ ಸಂಖ್ಯೆಯಲ್ಲಿ ದೇಶಗಳು ಪಾಲ್ಗೊಳ್ಳುತ್ತಿರುವ ಒಲಿಂಪಿಯಾಡ್ ಆಗಲಿದೆ. 

 

 

******(Release ID: 1835419) Visitor Counter : 223