ಪ್ರಧಾನ ಮಂತ್ರಿಯವರ ಕಛೇರಿ
ಶ್ರೀ ರಾಮ್ ಬಹದ್ದೂರ್ ರಾಯ್ ಅವರ ಪುಸ್ತಕ ಬಿಡುಗಡೆ ಸಮಾರಂಭ ಉದ್ದೇಶಿಸಿ ಪ್ರಧಾನಿ ನರೇಂದ್ರ ಮಾಡಿದ ಭಾಷಣದ ಕನ್ನಡ ಅನುವಾದ.
Posted On:
18 JUN 2022 9:57PM by PIB Bengaluru
ನಮಸ್ಕಾರ !
ನಮ್ಮ ದೇಶದ ಋಷಿಮುನಿಗಳು ಜನಸಾಮಾನ್ಯರಲ್ಲಿ ಸ್ಪೂರ್ತಿ ತುಂಬಲು - 'ಚರೈವೇತಿ- ಚರೈವೇತಿ' ಎಂಬ ಮಂತ್ರವನ್ನು ನೀಡಿದ್ದರು.
ಈ ಮಂತ್ರ ಪತ್ರಕರ್ತರಿಗೆ, ಹೊಸ ವಿಚಾರಗಳ ಹುಡುಕಾಟ ಹಾಗೂ ಹೊಸತನ್ನು ಸಮಾಜದ ಮುಂದೆ ತರಬೇಕೆಂಬ ತುಡಿತ ಸಹಜ ಅಭ್ಯಾಸಕ್ಕೆ ಕಾರಣವಾಗಿದೆ. ರಾಮ್ ಬಹದ್ದೂರ್ ರಾಯ್ ಜಿ ಅವರು ತಮ್ಮ ಜೀವಿತಾವಧಿಯ ಪಯಣದಲ್ಲಿ ಈ ‘ಸಾಧನೆ’ಯಲ್ಲಿ ತೊಡಗಿಸಿಕೊಂಡಿರುವ ರೀತಿ ನಮ್ಮ ಮುಂದೆ ಅಂತಹದ್ದೇ ಇನ್ನೊಂದು ಸಾಧನೆ ಮಾಡಿರುವುದು ನನಗೆ ಖುಷಿ ಕೊಟ್ಟಿದೆ. ಈ ಪುಸ್ತಕ ‘ಭಾರತೀಯ ಸಂವಿಧಾನ: ಅಂಕಹಿ ಕಹಾನಿ’ ತನ್ನ ಶೀರ್ಷಿಕೆಗೆ ಅನುಗುಣವಾಗಿರುತ್ತದೆ ಮತ್ತು ಸಂವಿಧಾನವನ್ನು ಹೆಚ್ಚು ಸಮಗ್ರ ರೀತಿಯಲ್ಲಿ ದೇಶದ ಮುಂದೆ ಪ್ರಸ್ತುತಪಡಿಸುತ್ತದೆ ಎಂದು ಎಂಬ ಭರವಸೆ ನನಗಿದೆ. ಈ ಆದರ್ಶ ಪ್ರಯತ್ನಕ್ಕಾಗಿ ನಾನು ರಾಮ್ ಬಹದ್ದೂರ್ ರಾಯ್ ಜಿ ಮತ್ತು ಅದರ ಪ್ರಕಟಣೆಯಲ್ಲಿ ತೊಡಗಿರುವ ಎಲ್ಲರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಮಿತ್ರರೇ,
ನೀವೆಲ್ಲರೂ ದೇಶದ ಬೌದ್ಧಿಕ ವರ್ಗವನ್ನು ಪ್ರತಿನಿಧಿಸುತ್ತೀರಿ. ಸ್ವಾಭಾವಿಕವಾಗಿ, ಈ ಪುಸ್ತಕದ ಬಿಡುಗಡೆಗಾಗಿ ನೀವು ವಿಶೇಷ ದಿನ ಮತ್ತು ಸಮಯವನ್ನು ಆಯ್ಕೆ ಮಾಡಿಕೊಂಡಿದ್ದೀರಿ! ಈ ಅವಧಿಯು ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಮಯವಾಗಿದೆ. ನಮ್ಮ ಸಂವಿಧಾನದ ಪ್ರಜಾಸತ್ತಾತ್ಮಕ ಚೈತನ್ಯದ ಮೊದಲ ದಿನವನ್ನಾಗಿ ಗುರುತಿಸುವ ಮೂಲಕ ಅಂದಿನ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಜೂನ್ 18 ರಂದು ಮೂಲ ಸಂವಿಧಾನದ ಮೊದಲ ತಿದ್ದುಪಡಿಗೆ ಸಹಿ ಹಾಕಿದರು. ಮತ್ತು ಈ ದಿನದಂದು ನಾವು ಸಂವಿಧಾನವನ್ನು ವಿಶೇಷ ದೃಷ್ಟಿಕೋನ ಅಥವಾ ಆಯಾಮದಿಂದ ನೋಡುವ ಈ ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದು ನಮ್ಮ ಸಂವಿಧಾನದ ಬಹುದೊಡ್ಡ ಶಕ್ತಿಯಾಗಿದ್ದು, ಇದು ವೈವಿಧ್ಯಮಯ ವಿಚಾರಗಳು ಮತ್ತು ಸತ್ಯಗಳು ಮತ್ತು ವಾಸ್ತವತೆಗಳ ಅನ್ವೇಷಣೆಗೆ ನಮಗೆ ಸ್ಫೂರ್ತಿ ತುಂಬುತ್ತದೆ.
ಮಿತ್ರರೇ,
ದೇಶದ ಹಲವು ತಲೆಮಾರುಗಳ ಕನಸುಗಳನ್ನು ನನಸಾಗಿಸುವ ಸ್ವತಂತ್ರ ಭಾರತದ ದೂರದೃಷ್ಟಿಯಾಗಿ ನಮ್ಮ ಸಂವಿಧಾನ ನಮ್ಮ ಮುಂದಿದೆ. ಸ್ವಾತಂತ್ರ್ಯಕ್ಕೆ ಹಲವು ತಿಂಗಳುಗಳ ಮುಂಚೆ, ಸಂವಿಧಾನವನ್ನು ಸಿದ್ಧಪಡಿಸುವ ಸಂವಿಧಾನಿಕ ಸಭೆಯ ಮೊದಲ ಸಭೆಯು 1946ರ ಡಿಸೆಂಬರ್ 9 ರಂದು ನಡೆಯಿತು ! ಈ ಸಭೆಯ ಹಿಂದೆ ಬಹುದೊಡ್ಡ ಐತಿಹಾಸಿಕ ಸನ್ನಿವೇಶ, ಸಮಯ ಮತ್ತು ಸಂದರ್ಭಗಳಿದ್ದವು ! ಇತಿಹಾಸ ಮತ್ತು ಸಂವಿಧಾನದ ಅರಿವಿರುವ ನಿಮಗೆಲ್ಲರಿಗೂ ಅದು ತಿಳಿದಿದೆ. ಆದರೆ ನಾನು ಅದರ ಹಿಂದಿನ ಭಾವನಾತ್ಮಕ ಅಂಶವನ್ನೂ ನೋಡುತ್ತೇನೆ. ಅದು ಅನಿಶ್ಚಿತತೆಗಳಿಂದ ಕೂಡಿದ ಸಮಯವಾಗಿತ್ತು, ನಮ್ಮ ಸ್ವಾತಂತ್ರ್ಯ ಚಳವಳಿಯು ಅನೇಕ ಸವಾಲುಗಳನ್ನು ಎದುರಿಸುತ್ತಿತ್ತು, ಆದರೂ ಇನ್ನೂ ನಮ್ಮ ದೇಶದ ಆತ್ಮವಿಶ್ವಾಸವು ಎಷ್ಟು ದೃಢವಾಗಿದೆಯೆಂದರೆ ಅದು ತನ್ನ ಸ್ವಾತಂತ್ರ್ಯದಲ್ಲಿ ಸಂಪೂರ್ಣ ನಂಬಿಕೆ ಇರಿಸಿತ್ತು. ಸ್ವಾತಂತ್ರ್ಯಕ್ಕೆ ಬಹಳ ಹಿಂದೆಯೇ, ದೇಶವು ಸ್ವಾತಂತ್ರ್ಯಕ್ಕಾಗಿ ತಯಾರಿಯನ್ನು ಪ್ರಾರಂಭಿಸಿತು ಮತ್ತು ಅದರ ಸಂವಿಧಾನದ ಚೌಕಟ್ಟಿನ ಬಗ್ಗೆ ಚರ್ಚೆಗಳನ್ನು ಆರಂಭಿಸಿತು. ಇದು ಭಾರತದ ಸಂವಿಧಾನವು, ಕೇವಲ ಪುಸ್ತಕವಲ್ಲ ಎಂದು ತೋರಿಸುತ್ತದೆ; ಅದು ಆದರ್ಶ, ಬದ್ಧತೆ ಮತ್ತು ಸ್ವಾತಂತ್ರ್ಯದಲ್ಲಿ ನಂಬಿಕೆಯಾಗಿತ್ತು.
ಮಿತ್ರರೇ,
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇಂದು ಸ್ವಾತಂತ್ರ್ಯ ಚಳವಳಿಯ ಹೇಳಲಾಗದ ಅಧ್ಯಾಯಗಳನ್ನು ಮುನ್ನೆಲೆಗೆ ತರಲು ರಾಷ್ಟ್ರವು ಸಾಮೂಹಿಕ ಪ್ರಯತ್ನ ಮಾಡುತ್ತಿದೆ. ಸರ್ವಸ್ವವನ್ನೂ ತ್ಯಾಗ ಮಾಡಿದರೂ ಮರೆಯಾದ ಯೋಧರು, ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ತಿರುವು ನೀಡಿದ ನಂತರವೂ ಮರೆಯಾದ ಘಟನೆಗಳು, ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಚಿಂತನೆಗಳು, ಸ್ವಾತಂತ್ರ್ಯಾನಂತರವೂ ನಮ್ಮ ಸಂಕಲ್ಪಗಳಿಂದ ದೂರವಾದವು. ಭೂತಕಾಲದ ಪ್ರಜ್ಞೆಯನ್ನು ಭಾರತದ ಭವಿಷ್ಯದಲ್ಲಿ ಬಲವರ್ಧನೆಗೊಳಿಸಲು ದೇಶವು ಈಗ ಅವರನ್ನು ಮತ್ತೆ ಒಟ್ಟಿಗೆ ಸೇರಿಸುತ್ತಿದೆ. ಆದ್ದರಿಂದ ಇಂದು ದೇಶದ ಯುವಕರು ಹೇಳಲಾಗದ ಇತಿಹಾಸದ ಬಗ್ಗೆ ಸಂಶೋಧನೆ ಮತ್ತು ಪುಸ್ತಕಗಳನ್ನು ಬರೆಯುತ್ತಿದ್ದಾರೆ. ಅಮೃತ ಮಹೋತ್ಸವದಡಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ‘ಭಾರತೀಯ ಸಂವಿಧಾನ: ಅಂಕಹಿ ಕಹಾನಿ’ ಪುಸ್ತಕವು ದೇಶದ ಈ ಅಭಿಯಾನಕ್ಕೆ ಹೊಸ ಚೈತನ್ಯ ನೀಡುತ್ತದೆ. ಸ್ವಾತಂತ್ರ್ಯದ ಇತಿಹಾಸದ ಜೊತೆಗೆ, ನಮ್ಮ ಸಂವಿಧಾನದ ಹೇಳಲಾಗದ ಅಧ್ಯಾಯಗಳು ದೇಶದ ಯುವಕರಿಗೆ ಹೊಸ ಚಿಂತನೆಯನ್ನು ನೀಡುತ್ತವೆ ಮತ್ತು ಅವರ ವಿಚಾರಗಳನ್ನು ವಿಸ್ತರಿಸುತ್ತವೆ.
ರಾಮ್ ಬಹದ್ದೂರ್ ಜಿ ಅವರು ಬಹಳ ಹಿಂದೆಯೇ ನನಗೆ ಈ ಪುಸ್ತಕದ ಪ್ರತಿಯನ್ನು ಕಳುಹಿಸಿದ್ದರು. ಕೆಲವು ಪುಟಗಳನ್ನು ತಿರುವಿ ಹಾಕಿದಾಗ, ನನಗೆ ಅನೇಕ ಆಸಕ್ತಿದಾಯಕ ಸಂಗತಿಗಳು ಮತ್ತು ಚಿಂತನೆಗಳು ಕಂಡುಬಂದವು. ನೀವು ಎಲ್ಲೋ ಬರೆದಿದ್ದೀರಿ, “ಭಾರತದ ಸಂವಿಧಾನದ ಇತಿಹಾಸವನ್ನು ಸ್ವಾತಂತ್ರ್ಯ ಹೋರಾಟದ ಕಳೆದುಹೋದ ಕೊನೆಯ ಝರಿಯೆಂದು ಭಾವಿಸಲಾಗಿದೆ, ಆದರೆ ಅದು ಹಾಗಲ್ಲ. ಸಂವಿಧಾನದ ಬಗ್ಗೆ ತಿಳಿದಿರುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ”. ನೀವು ಮೀಸಾ ಅಡಿಯಲ್ಲಿ ಜೈಲಿನಲ್ಲಿದ್ದಾಗ ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂವಿಧಾನದ ಬಗ್ಗೆ ನಿಮ್ಮ ವಿಶೇಷ ಆಸಕ್ತಿ ಜಾಗೃತವಾಯಿತು ಎಂದು ಪುಸ್ತಕದ ಆರಂಭದಲ್ಲಿ ಬರೆದಿದ್ದೀರಿ. ಅಂದರೆ, ಸಂವಿಧಾನವು ನಿಮಗೆ ನಿಮ್ಮ ಹಕ್ಕುಗಳನ್ನು ಪರಿಚಯಿಸಿದೆ ಮತ್ತು ನೀವು ಅದರೊಳಗೆ ಆಳವಾಗಿ ಅಧ್ಯಯನ ಮಾಡಿದಾಗ, ನೀವು ಸಂವಿಧಾನದ ಪರಿಕಲ್ಪನೆಯನ್ನು ನಾಗರಿಕ ಕರ್ತವ್ಯವೆಂದು ಗುರುತಿಸಿದ್ದೀರಿ. ಈ ಹಕ್ಕುಗಳು ಮತ್ತು ಕರ್ತವ್ಯಗಳ ನಡುವಿನ ಸಮನ್ವಯವೇ ನಮ್ಮ ಸಂವಿಧಾನವನ್ನು ತುಂಬಾ ವಿಶೇಷವಾಗಿಸುತ್ತದೆ. ನಮಗೆ ಹಕ್ಕುಗಳಿದ್ದರೆ, ನಮಗೂ ಕರ್ತವ್ಯಗಳೂ ಇರುತ್ತವೆ ಮತ್ತು ನಮ್ಮಲ್ಲಿ ಕರ್ತವ್ಯಗಳಿದ್ದರೆ, ಹಕ್ಕುಗಳು ಸಮಾನವಾಗಿ ಬಲವಾಗಿರುತ್ತವೆ. ಆದ್ದರಿಂದ, ದೇಶವು ಕರ್ತವ್ಯ ಪ್ರಜ್ಞೆಯ ಬಗ್ಗೆ ಮಾತನಾಡುತ್ತಿದೆ ಮತ್ತು ಸ್ವಾತಂತ್ರ್ಯದ ‘ಅಮೃತ ಕಾಲ’ದಲ್ಲಿ ಕರ್ತವ್ಯಗಳಿಗೆ ಹೆಚ್ಚು ಒತ್ತು ನೀಡುತ್ತಿದೆ.
ಮಿತ್ರರೇ,
ನಾವು ಹೊಸ ಸಂಕಲ್ಪದೊಂದಿಗೆ ಮುಂದುವರಿದಾಗ, ನಮ್ಮ ಜ್ಞಾನವೇ ನಮ್ಮ ಜಾಗೃತಿಯಾಗುತ್ತದೆ. ಸಾಕ್ಷಾತ್ಕಾರವು ನಮಗೆ ಜ್ಞಾನೋದಯ ನೀಡುತ್ತದೆ. ಆದ್ದರಿಂದ, ಒಂದು ರಾಷ್ಟ್ರವಾಗಿ, ನಾವು ನಮ್ಮ ಸಂವಿಧಾನವನ್ನು ಎಷ್ಟು ಆಳವಾಗಿ ತಿಳಿದಿರುತ್ತೇವೆಯೋ ಅಷ್ಟರ ಮಟ್ಟಿಗೆ ಆ ಸಂವಿಧಾನದ ಸಾಮರ್ಥ್ಯ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಸಂವಿಧಾನದ ಪರಿಕಲ್ಪನೆಗೆ ಗಾಂಧೀಜಿ ಹೇಗೆ ನಾಯಕತ್ವ ನೀಡಿದರು, ಸರ್ದಾರ್ ಪಟೇಲ್ ಅವರು ಹೇಗೆ ಧರ್ಮದ ಆಧಾರದ ಮೇಲೆ ಪ್ರತ್ಯೇಕ ಚುನಾವಣಾ ವ್ಯವಸ್ಥೆಯನ್ನು ರದ್ದುಪಡಿಸುವ ಮೂಲಕ ಭಾರತೀಯ ಸಂವಿಧಾನವನ್ನು ಕೋಮುವಾದದಿಂದ ಮುಕ್ತಗೊಳಿಸಿದರು, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಪೀಠಿಕೆಯಲ್ಲಿ ಹೇಗೆ ಭ್ರಾತೃತ್ವ ಅಳವಡಿಸಿದರು ಮತ್ತು ‘ಏಕ ಭಾರತ-ಶ್ರೇಷ್ಠ ಭಾರತ’ ರೂಪಿಸಿದರು. ಮತ್ತು ಡಾ. ರಾಜೇಂದ್ರ ಪ್ರಸಾದ್ ಅವರಂತಹ ವಿದ್ವಾಂಸರು ಸಂವಿಧಾನವನ್ನು ಭಾರತದ ಆತ್ಮದೊಂದಿಗೆ ಹೇಗೆ ಬೆಸೆಯಲು ಪ್ರಯತ್ನಿಸಿದರು. ಅಂತಹ ಹೇಳಲಾಗದ ಹಲವು ಅಂಶಗಳನ್ನು ನಮಗೆ ಈ ಪುಸ್ತಕವು ಪರಿಚಯಿಸುತ್ತದೆ. ಈ ಎಲ್ಲಾ ಅಂಶಗಳು ನಮ್ಮ ಭವಿಷ್ಯದ ದಿಕ್ಕು ಹೇಗಿರಬೇಕು ಎಂಬುದಕ್ಕೆ ಸ್ಪಷ್ಟ ಮಾರ್ಗದರ್ಶನ ನೀಡುತ್ತವೆ.
ಮಿತ್ರರೇ!
ಭಾರತವು ಸ್ವಭಾವಿಕವಾಗಿ ಸ್ವತಂತ್ರ ಚಿಂತನೆಯ ದೇಶವಾಗಿದೆ. ಜಡತ್ವವು ನಮ್ಮ ಮೂಲ ಸ್ವಭಾವದ ಭಾಗವಲ್ಲ. ಸಂವಿಧಾನ ಸಭೆಯ ರಚನೆಯಿಂದ ಅದರ ಚರ್ಚೆಗಳವರೆಗೆ, ಸಂವಿಧಾನದ ಅಂಗೀಕಾರದಿಂದ ಅದರ ಸದ್ಯದ ಹಂತದವರೆಗೆ, ನಾವು ನಿರಂತರವಾಗಿ ಸಕ್ರಿಯ ಮತ್ತು ಪ್ರಗತಿಪರ ಸಂವಿಧಾನವನ್ನು ನೋಡಿದ್ದೇವೆ. ನಾವು ವಾದ ಮಾಡಿದ್ದೇವೆ, ಪ್ರಶ್ನೆಗಳನ್ನು ಮಂಡಿಸಿದ್ದೇವೆ, ಚರ್ಚೆ ಮಾಡಿದ್ದೇವೆ ಮತ್ತು ಅಗತ್ಯ ಬದಲಾವಣೆಗಳನ್ನೂ ಮಾಡಿದ್ದೇವೆ. ಇದೇ ನಿರಂತರತೆ ನಮ್ಮ ಜನಸಾಮಾನ್ಯರಲ್ಲಿ ಮತ್ತು ಜನರ ಮನಸ್ಸಿನಲ್ಲಿ ಉಳಿಯುತ್ತದೆ ಎಂಬ ಖಾತ್ರಿ ನನಗಿದೆ. ನಾವು ಹಿಂದೆಂದಿಗಿಂತಲೂ ಉತ್ತಮ ಭವಿಷ್ಯವನ್ನು ನಿರ್ಮಿಸಲು ನಿರಂತರ ಸಂಶೋಧನೆ ಮುಂದುವರೆಸುತ್ತೇವೆ. ದೇಶದ ಪ್ರಜ್ಞಾವಂತರೆಲ್ಲರೂ ಸಹ ಅಷ್ಟೇ ಸಕ್ರಿಯವಾಗಿ ಅದೇ ರೀತಿಯಲ್ಲಿ ತಮ್ಮ ಚೈತನ್ಯ ಮುನ್ನಡೆಸುತ್ತಾರೆ. ಆ ನಂಬಿಕೆಯೊಂದಿಗೆ ಮಾತು ಪೂರ್ಣಗೊಳಿಸುತ್ತೇನೆ. ತುಂಬಾ ತುಂಬಾ ಧನ್ಯವಾದಗಳು!
ಘೋಷಣೆ: ಇದು ಪ್ರಧಾನಮಂತ್ರಿ ಅವರು ಭಾಷಣದ ಯಥಾವತ್ ಅನುವಾದವಲ್ಲ. ಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.
******
(Release ID: 1835267)
Visitor Counter : 171
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam