ಪ್ರಧಾನ ಮಂತ್ರಿಯವರ ಕಛೇರಿ

ಮುಂಬೈನ ರಾಜಭವನದಲ್ಲಿ `ಜಲ ಭೂಷಣ್ ಭವನ’ ಮತ್ತು ʻಕ್ರಾಂತಿಕಾರಿಗಳ ಗ್ಯಾಲರಿʼ ಉದ್ಘಾಟಿಸಿದ ಪ್ರಧಾನಮಂತ್ರಿಗಳು.


"ಮಹಾರಾಷ್ಟ್ರವು ಜಗದ್ಗುರು ಶ್ರೀ ಸಂತ ತುಕಾರಾಮ್ ಮಹಾರಾಜ್ ಅವರಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್ ಅವರವರೆಗೆ ಸಮಾಜ ಸುಧಾರಕರ ಶ್ರೀಮಂತ ಪರಂಪರೆಯನ್ನು ಹೊಂದಿದೆ”

"ಸ್ವಾತಂತ್ರ್ಯ ಹೋರಾಟವನ್ನು ಕೆಲವು ಘಟನೆಗಳಿಗೆ ಸೀಮಿತಗೊಳಿಸುವ ಪ್ರವೃತ್ತಿ ಇದೆ, ಆದರೆ ಭಾರತದ ಸ್ವಾತಂತ್ರ್ಯವು ಅಸಂಖ್ಯಾತ ಜನರ 'ತಪಸ್ಸ'ನ್ನು ಒಳಗೊಂಡಿದೆ"

"ಸ್ವಾತಂತ್ರ್ಯ ಚಳವಳಿಯ 'ಲೋಕಲ್‌ ಟು ಗ್ಲೋಬಲ್‌ʼ ಆಶಯವೇ ನಮ್ಮ ʻಆತ್ಮನಿರ್ಭರ ಭಾರತʼ ಅಭಿಯಾನದ ಶಕ್ತಿಯಾಗಿದೆ"

"ಮಹಾರಾಷ್ಟ್ರದ ಅನೇಕ ನಗರಗಳು 21ನೇ ಶತಮಾನದಲ್ಲಿ ದೇಶದ ಅಭಿವೃದ್ಧಿ ಕೇಂದ್ರಗಳಾಗಲಿವೆ

Posted On: 14 JUN 2022 6:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮುಂಬೈನ ರಾಜಭವನದಲ್ಲಿ ʻಜಲ ಭೂಷಣ ಭವನʼ ಮತ್ತು ʻಕ್ರಾಂತಿಕಾರಿಗಳ ಗ್ಯಾಲರಿʼಯನ್ನು ಉದ್ಘಾಟಿಸಿದರು. ಮಹಾರಾಷ್ಟ್ರದ ರಾಜ್ಯಪಾಲ ಶ್ರೀ ಭಗತ್ ಸಿಂಗ್ ಕೋಶ್ಯಾರಿ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಶ್ರೀ ಉದ್ಧವ್ ಠಾಕ್ರೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ, ಪ್ರಧಾನಮಂತ್ರಿಯವರು ಇಂದು ʻವತ ಪೂರ್ಣಿಮಾʼ ಮತ್ತು ʻಕಬೀರ್ ಜಯಂತಿʼ ಅಂಗವಾಗಿ ಜನತೆಗೆ ಶುಭಾಶಯ ಕೋರಿದರು. ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಮಹಾರಾಷ್ಟ್ರವು ಅನೇಕ ಕ್ಷೇತ್ರಗಳಲ್ಲಿ ದೇಶವನ್ನು ಪ್ರೇರೇಪಿಸಿದೆ ಎಂದರು. ಜಗದ್ಗುರು ಶ್ರೀ ಸಂತ ತುಕಾರಾಂ ಮಹಾರಾಜ್ ಅವರಿಂದ ಹಿಡಿದು ಬಾಬಾ ಸಾಹೇಬ್ ಅಂಬೇಡ್ಕರ್‌ವರೆಗೆ ಸಮಾಜ ಸುಧಾರಕರ ಶ್ರೀಮಂತ ಪರಂಪರೆಯೇ ರಾಜ್ಯಕ್ಕಿದೆ ಎಂದು ಅವರು ಹೇಳಿದರು. ಮಹಾರಾಷ್ಟ್ರದಿಂದ ಸಂತ ಜ್ಞಾನೇಶ್ವರ ಮಹಾರಾಜ್, ಸಂತ ನಾಮದೇವ್, ಸಂತ ರಾಮದಾಸ್ ಮತ್ತು ಸಂತ ಚೋಖಮೇಲ ಅವರು ದೇಶಕ್ಕೆ ಶಕ್ತಿ ತುಂಬಿದ್ದಾರೆ ಎಂದು ಪ್ರಧಾನಿ ಸ್ಮರಿಸಿದರು. ನಾವು ಸ್ವರಾಜ್ಯದ ಬಗ್ಗೆ ಮಾತನಾಡಿದರೆ, ಛತ್ರಪತಿ ಶಿವಾಜಿ ಮಹಾರಾಜ್ ಮತ್ತು ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನವು ಇಂದಿಗೂ ಪ್ರತಿಯೊಬ್ಬ ಭಾರತೀಯನಲ್ಲೂ ದೇಶಭಕ್ತಿಯ ಪ್ರಜ್ಞೆಯನ್ನು ಬಲಪಡಿಸುತ್ತದೆ ಎಂದು ಪ್ರಧಾನಿ ಉಲ್ಲೇಖಿಸಿದರು. ರಾಜಭವನದ ವಾಸ್ತುಶಿಲ್ಪದಲ್ಲಿ ಪ್ರಾಚೀನ ಮೌಲ್ಯಗಳು ಮತ್ತು ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಸೇರಿಸಿರುವುದರ ಬಗ್ಗೆ ಗಮನ ಸೆಳೆದ ಪ್ರಧಾನಮಂತ್ರಿಯವರು ರಾಜಭವನವನ್ನು ಲೋಕ ಭವನವನ್ನಾಗಿ ಪರಿವರ್ತಿಸುವ ಉತ್ಸಾಹವನ್ನು ಶ್ಲಾಘಿಸಿದರು.

“ತಿಳಿದೋ ತಿಳಿಯದೆಯೋ ನಾವು ಭಾರತದ ಸ್ವಾತಂತ್ರ್ಯವನ್ನು ಕೆಲವು ಘಟನೆಗಳಿಗೆ ಸೀಮಿತಗೊಳಿಸುತ್ತೇವೆ. ಆದರೆ, ಭಾರತದ ಸ್ವಾತಂತ್ರ್ಯವು ಅಸಂಖ್ಯಾತ ಜನರ 'ತಪಸ್ಸʼನ್ನು ಒಳಗೊಂಡಿತ್ತು ಮತ್ತು ಸ್ಥಳೀಯ ಮಟ್ಟದಲ್ಲಿ ನಡೆದ ಅನೇಕ ಘಟನೆಗಳ ಸಾಮೂಹಿಕ ಪರಿಣಾಮವು ರಾಷ್ಟ್ರೀಯ ಮಟ್ಟದಲ್ಲಿ ಪ್ರಭಾವ ಬೀರಿತು,ʼʼ ಎಂದು ಪ್ರಧಾನಿ ಹೇಳಿದರು. ಇವೆಲ್ಲವುಗಳ ಮಾರ್ಗಗಳು ವಿಭಿನ್ನವಾಗಿದ್ದರೂ, ಸಂಕಲ್ಪವು ಒಂದೇ ಆಗಿತ್ತು ಎಂದರು. ಸಾಮಾಜಿಕ, ಕೌಟುಂಬಿಕ ಅಥವಾ ಸೈದ್ಧಾಂತಿಕ ಹೀಗೆ ಪಾತ್ರಗಳು ಯಾವುದೇ ಇದ್ದರೂ; ಆಂದೋಲನದ ಸ್ಥಳ, ದೇಶದೊಳಗೇ ಇದ್ದರೂ ಅಥವಾ ವಿದೇಶದಲ್ಲೇ ಇದ್ದರೂ, ಅವೆಲ್ಲವುಗಳ ಗುರಿ ಒಂದೇ - ಅದು ಭಾರತದ ಸಂಪೂರ್ಣ ಸ್ವಾತಂತ್ರ್ಯ ಎಂದು ಅವರು ಹೇಳಿದರು. ಬಾಲಗಂಗಾಧರ ತಿಲಕ್, ಚಪೇಕರ್ ಸಹೋದರರು, ವಾಸುದೇವ್ ಬಲವಂತ್ ಫಡ್ಕ್ ಮತ್ತು ಮೇಡಮ್ ಭಿಕೈಜಿ ಕಾಮಾ ಅವರ ಬಹುಮುಖ ಕೊಡುಗೆಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಸ್ವಾತಂತ್ರ್ಯ ಹೋರಾಟವು ಸ್ಥಳೀಯವಾಗಿ ಮತ್ತು ಜಾಗತಿಕವಾಗಿ ವ್ಯಾಪಿಸಿತ್ತು ಎಂದು ಅವರು ಗಮನಸೆಳೆದರು. ಘದರ್‌ ಪಕ್ಷ, ನೇತಾಜಿ ನೇತೃತ್ವದ ʻಆಜಾದ್ ಹಿಂದ್ ಫೌಜ್ʼ ಮತ್ತು ಶ್ಯಾಮ್ ಕೃಷ್ಣ ವರ್ಮಾ ಅವರ ʻಇಂಡಿಯಾ ಹೌಸ್ ಆಫ್ʼ ಸ್ವಾತಂತ್ರ್ಯ ಸಂಗ್ರಾಮದ ಜಾಗತಿಕ ವ್ಯಾಪನೆಗೆ ಉದಾಹರಣೆಗಳಾಗಿವೆ ಎಂದು ಅವರು ಉಲ್ಲೇಖಿಸಿದರು. "ಸ್ಥಳೀಯದಿಂದ ಜಾಗತಿಕ ಮಟ್ಟ ಕುರಿತಾದ (ಲೋಕಲ್‌ ಟು ಗ್ಲೋಬಲ್‌) ಈ ಆಶಯವೇ ನಮ್ಮ ʻಆತ್ಮನಿರ್ಭರ ಭಾರತʼ ಅಭಿಯಾನದ ಆಧಾರವಾಗಿದೆ" ಎಂದು ಅವರು ಹೇಳಿದರು.

ಸ್ವತಂತ್ರ್ಯ ವೀರರ ಬಗ್ಗೆ ಉದಾಸೀನತೆ ಬಹಳ ಕಾಲದವರೆಗೆ ಮುಂದುವರಿದ ಬಗ್ಗೆ ಪ್ರಧಾನಮಂತ್ರಿಯವರು ಪ್ರಸ್ತಾಪಿಸಿದರು. ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಶ್ಯಾಮ್ ಜೀ ಕೃಷ್ಣವರ್ಮ ಅವರ ಅವಶೇಷಗಳನ್ನು ಮೋದಿ ಅವರೇ ಖುದ್ದು ಭಾರತಕ್ಕೆ ಮರಳಿ ತರುವವರೆಗೂ ಅವು ವಿದೇಶದಲ್ಲೇ ಉಳಿದಿದ್ದು ಏಕೆ ಎಂದು ಅವರು ಪ್ರಶ್ನಿಸಿದರು.

ಮುಂಬೈ ಕನಸಿನ ನಗರವಾಗಿದೆ. ಮಹಾರಾಷ್ಟ್ರದಲ್ಲಿ ಅಂತಹ ಅನೇಕ ನಗರಗಳಿವೆ, ಅವು 21 ನೇ ಶತಮಾನದಲ್ಲಿ ದೇಶದ ಬೆಳವಣಿಗೆಯ ಕೇಂದ್ರಗಳಾಗಿವೆ ಎಂದು ಪ್ರಧಾನಿ ಹೇಳಿದರು. ಇಂತಹ ಆಲೋಚನೆಯೊಂದಿಗೆ ಒಂದೆಡೆ ಮುಂಬೈನ ಮೂಲಸೌಕರ್ಯವನ್ನು ಆಧುನೀಕರಣಗೊಳಿಸಲಾಗುತ್ತಿದೆ. ಇದೇ ವೇಳೆ, ಇತರ ನಗರಗಳಲ್ಲಿಯೂ ಆಧುನಿಕ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಅವರು ಗಮನಸೆಳೆದರು.

ಪ್ರತಿಯೊಬ್ಬರೂ ತಮ್ಮ ಪಾತ್ರವೂ ಏನೇ ಇರಲಿ, ಅವರು ರಾಷ್ಟ್ರೀಯ ಸಂಕಲ್ಪಗಳನ್ನು ಬಲಪಡಿಸುವ ಗುರಿಯನ್ನು ಹೊಂದಿರಬೇಕು ಎಂದು ಪ್ರಧಾನಮಂತ್ರಿಯವರು ಮನವಿ ಮಾಡಿದರು. ಇದೇ ವೇಳೆ, ರಾಷ್ಟ್ರೀಯ ಅಭಿವೃದ್ಧಿಯಲ್ಲಿ ʻಸಬ್ ಕಾ ಪ್ರಯಾಸ್ʼನ ತಮ್ಮ ಆಶಯವನ್ನು ಪುನರುಚ್ಚರಿಸಿದರು.

ʻಜಲ ಭೂಷಣ್ʼ 1885ರಿಂದ ಮಹಾರಾಷ್ಟ್ರದ ರಾಜ್ಯಪಾಲರ ಅಧಿಕೃತ ನಿವಾಸವಾಗಿದೆ. ಕಟ್ಟಡದ ಜೀವಿತಾವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದನ್ನು ನೆಲಸಮಗೊಳಿಸಲಾಯಿತು ಮತ್ತು ಅದರ ಜಾಗದಲ್ಲಿ ಹೊಸ ಕಟ್ಟಡವನ್ನು ಮಂಜೂರು ಮಾಡಲಾಯಿತು. ಹೊಸ ಕಟ್ಟಡಕ್ಕೆ ಆಗಸ್ಟ್ 2019ರಲ್ಲಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಶಂಕುಸ್ಥಾಪನೆ ನೆರವೇರಿಸಿದರು. ಹಳೆಯ ಕಟ್ಟಡದ ಎಲ್ಲಾ ವಿಶಿಷ್ಟ ಲಕ್ಷಣಗಳನ್ನು ಹೊಸದಾಗಿ ನಿರ್ಮಿಸಲಾದ ಕಟ್ಟಡದಲ್ಲಿ ಸಂರಕ್ಷಿಸಲಾಗಿದೆ. 2016ರಲ್ಲಿ, ಮಹಾರಾಷ್ಟ್ರದ ಆಗಿನ ರಾಜ್ಯಪಾಲ ಶ್ರೀ ವಿದ್ಯಾಸಾಗರ್ ರಾವ್ ಅವರು ರಾಜಭವನದಲ್ಲಿ ಬಂಕರ್ ಅನ್ನು ಪತ್ತೆ ಮಾಡಿದ್ದರು. ಇದನ್ನು ಈ ಹಿಂದೆ ಬ್ರಿಟಿಷರು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳ ರಹಸ್ಯ ಸಂಗ್ರಹಗಾರವಾಗಿ ಬಳಸುತ್ತಿದ್ದರು. ಬಂಕರ್ ಅನ್ನು 2019ರಲ್ಲಿ ನವೀಕರಿಸಲಾಯಿತು. ಮಹಾರಾಷ್ಟ್ರದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಕ್ರಾಂತಿಕಾರಿಗಳ ಕೊಡುಗೆಗಳನ್ನು ಸ್ಮರಿಸಲು ಬಂಕರ್‌ನಲ್ಲಿ ವಿಶಿಷ್ಟ ವಸ್ತುಸಂಗ್ರಹಾಲಯವಾಗಿ ಈ ಗ್ಯಾಲರಿಯನ್ನು ಅಭಿವೃದ್ಧಿಪಡಿಸಲಾಗಿದೆ. ವಾಸುದೇವ್ ಬಲವಂತ್ ಫಡ್ಕೆ, ಚಪೇಕರ್ ಸಹೋದರರು, ಸಾವರ್ಕರ್ ಸಹೋದರರು, ಮೇಡಮ್ ಭೈಕಾಜಿ ಕಾಮಾ, ವಿ ಬಿ ಗೋಗಟೆ, 1946ರ ನೌಕಾ ದಂಗೆ ಸೇರಿದಂತೆ ಇತರ ಕೊಡುಗೆಗಳನ್ನು ಈ ಗ್ಯಾಲರಿ ಗೌರವಿಸುತ್ತದೆ.

.

 

******



(Release ID: 1835220) Visitor Counter : 140