ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನ ಮಂತ್ರಿ ಅವರ ಕಚೇರಿ ಗುಜರಾತಿನ ಅಟ್ಕೋಟ್ ನಲ್ಲಿ ಮಾತುಶ್ರೀ ಕೆ.ಡಿ.ಪಿ. ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ
Posted On:
28 MAY 2022 3:59PM by PIB Bengaluru
ಭಾರತ್ ಮಾತಾ ಕೀ-ಜೈ
ಭಾರತ್ ಮಾತಾ ಕೀ-ಜೈ
ಗುಜರಾತಿನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್ ಜೀ, ಗುಜರಾತ್ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸಿ.ಆರ್. ಪಾಟೀಲ್, ಕೇಂದ್ರ ಸಂಪುಟದಲ್ಲಿ ನನ್ನ ಸಹೋದ್ಯೋಗಿಗಳಾಗಿರುವ ಪರಶೋತ್ತಮ ರೂಪಾಲ ಜೀ, ಮನ್ಸುಖ್ ಮಾಂಡವೀಯಾ ಜೀ ಮತ್ತು ಡಾ. ಮಹೇಂದ್ರ ಮುಂಜಪಾರಾ ಜೀ, ನಮ್ಮ ಹಿರಿಯ ನಾಯಕರಾದ ಶ್ರೀ ವಜುಭಾಯಿ ವಾಲಾ ಜೀ, ಮತ್ತು ಶ್ರೀ ವಿಜಯ ರೂಪಾನಿ ಜೀ, ಪಟೇಲ್ ಸೇವಾ ಸಮಾಜ ಟ್ರಸ್ಟಿನ ಎಲ್ಲಾ ವಿಶ್ವಸ್ಥರೇ, ಎಲ್ಲಾ ದಾನಿಗಳೇ, ನಮ್ಮನ್ನು ಆಶೀರ್ವದಿಸಲು ಇಲ್ಲಿ ಬಹು ಸಂಖ್ಯೆಯಲ್ಲಿ ಬಂದಿರುವ ಪೂಜ್ಯ ಸಂತರೇ, ಗುಜರಾತ್ ಸರಕಾರದ ಇತರ ಸಚಿವರೇ, ಸಂಸತ್ ಸದಸ್ಯರೇ, ಶಾಸಕರೇ ಮತ್ತು ಅಟ್ಕೋಟ್ ನಲ್ಲಿ ಭಾರೀ ಸೆಕೆ, ಬಿಸಿಲು ಇದ್ದರೂ ತಮ್ಮ ಆಶೀರ್ವಾದವನ್ನು ನೀಡಲು ಬಹು ಸಂಖ್ಯೆಯಲ್ಲಿ ಬಂದಿರುವ ನನ್ನ ಸಹೋದರರೇ ಮತ್ತು ಸಹೋದರಿಯರೇ
ಮಾತುಶ್ರೀ ಕೆ.ಡಿ.ಪಿ. ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಇಂದು ಆರಂಭವಾಗಿರುವುದಕ್ಕೆ ನಾನು ಹರ್ಷಿತನಾಗಿದ್ದೇನೆ. ಈ ಆಸ್ಪತ್ರೆಯು ಸೌರಾಷ್ಟ್ರದಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸುವಲ್ಲಿ ಸಹಾಯ ಮಾಡಲಿದೆ. ಸರಕಾರದ ಪ್ರಯತ್ನಗಳ ಜೊತೆ ಜನತೆಯ ಪ್ರಯತ್ನಗಳೂ ಸೇರಿದಾಗ, ಸೇವೆ ಮಾಡುವ ನಮ್ಮ ಶಕ್ತಿಯೂ ಹಲವು ಪಟ್ಟು ಅಧಿಕವಾಗುತ್ತದೆ. ರಾಜಕೋಟದಲ್ಲಿ ಕಟ್ಟಲಾಗಿರುವ ಈ ಆಧುನಿಕ ಆಸ್ಪತ್ರೆ ಇದಕ್ಕೆ ಬಹಳ ದೊಡ್ಡ ಉದಾಹರಣೆ.
ಸಹೋದರರೇ ಮತ್ತು ಸಹೋದರಿಯರೇ,
ಕೇಂದ್ರದಲ್ಲಿರುವ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ.ಸರಕಾರ ರಾಷ್ಟ್ರ ಸೇವೆಯ ಎಂಟು ವರ್ಷಗಳನ್ನು ಪೂರ್ಣಗೊಳಿಸುತ್ತಿದೆ. ನೀವೆಲ್ಲ ಎಂಟು ವರ್ಷಗಳ ಹಿಂದೆ ನನ್ನನ್ನು (ಗುಜರಾತಿನಿಂದ) ಕಳುಹಿಸಿದಿರಿ, ಆದರೆ ನಿಮ್ಮ ಪ್ರೀತಿ ನಿರಂತರವಾಗಿ ಅಧಿಕವಾಗುತ್ತಿದೆ. ಇಂದು ನಾನು ಗುಜರಾತಿನ ಭೂಮಿಗೆ ಬಂದಾಗ, ಗುಜರಾತಿನ ಸರ್ವ ನಾಗರಿಕರ ಗೌರವಾರ್ಥ ನಾನು ನನ್ನ ಶಿರವನ್ನು ಬಾಗಿ ನಮಿಸಲು ಇಚ್ಛಿಸುತ್ತೇನೆ. ಸಮಾಜಕ್ಕಾಗಿ ಹೇಗೆ ಬದುಕಬೇಕು ಎಂದು ನೀವು ತಿಳಿಸಿಕೊಟ್ಟದ್ದರಿಂದ ಮತ್ತು ನಿಮ್ಮ ಮೌಲ್ಯಗಳಿಂದಾಗಿ ಕಳೆದ ಎಂಟು ವರ್ಷಗಳಲ್ಲಿ ನಾನು ತಾಯ್ನಾಡಿನ ಸೇವೆಗೆ ಸಾಧ್ಯವಾದ ಎಲ್ಲವನ್ನೂ ಮಾಡಿದ್ದೇನೆ. ನಿಮ್ಮ ಸಂಸ್ಕೃತಿಯಿಂದಾಗಿ, ಈ ಮಣ್ಣಿನ ಸಂಸ್ಕೃತಿಯಿಂದಾಗಿ, ಮತ್ತು ಗೌರಾವಾನ್ವಿತ ಬಾಪು ಮತ್ತು ಸರ್ದಾರ್ ವಲ್ಲಭಭಾಯಿ ಅವರ ಈ ಪವಿತ್ರ ಭೂಮಿಯ ಸಂಸ್ಕೃತಿಯಿಂದಾಗಿ ನಾನು ಕಳೆದ ಎಂಟು ವರ್ಷಗಳಲ್ಲಿ ಭಾರತದ ಯಾವುದೇ ಓರ್ವ ವ್ಯಕ್ತಿ ತಲೆ ತಗ್ಗಿಸುವಂತಹ ಕೆಲಸವನ್ನು ವೈಯಕ್ತಿಕವಾಗಿ ಮಾಡಿಲ್ಲ ಮತ್ತು ಇತರರು ಮಾಡಲು ಅವಕಾಶ ಕೊಟ್ಟಿಲ್ಲ.
ವರ್ಷಗಳಿಂದ ನಾವು ಬಡವರ ಸೇವೆಗೆ, ಉತ್ತಮ ಆಡಳಿತಕ್ಕೆ ಮತ್ತು ಬಡವರ ಕಲ್ಯಾಣಕ್ಕೆ ಅತ್ಯಂತ ಗರಿಷ್ಟ ಆದ್ಯತೆ ನೀಡುತ್ತಾ ಬಂದಿದ್ದೇವೆ. “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್” ಮಂತ್ರವನ್ನು ಅನುಸರಿಸಿ ದೇಶದ ಅಭಿವೃದ್ಧಿಗೆ ನಾವು ಹೊಸ ವೇಗವನ್ನು ನೀಡಿದ್ದೇವೆ. ಬಾಪು ಮತ್ತು ಸರ್ದಾರ್ ಪಟೇಲ್ ಕನಸು ಕಂಡಂತಹ ಭಾರತವನ್ನು ನಿರ್ಮಾಣ ಮಾಡಲು ಕಳೆದ ಎಂಟು ವರ್ಷಗಳಲ್ಲಿ ನಾವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿದ್ದೇವೆ. ಬಡವರನ್ನು ಸಶಕ್ತೀಕರಣಗೊಳಿಸುವ, ತಳ ಮಟ್ಟದಲ್ಲಿರುವವರನ್ನು, ಅವಕಾಶ ವಂಚಿತರನ್ನು, ನಮ್ಮ ಬುಡಕಟ್ಟು ಸಹೋದರರು ಮತ್ತು ಸಹೋದರಿಯರು ಹಾಗು ನಮ್ಮ ಮಾತೆಯರು ಮತ್ತು ಸಹೋದರಿಯರನ್ನು ಸಶಕ್ತೀಕರಣಗೊಳಿಸುವ ಭಾರತದ ನಿರ್ಮಾಣವಾಗಬೇಕು ಎಂದು ಅವರು ಆಶಿಸಿದ್ದರು. ಸ್ವಚ್ಛತೆ ಮತ್ತು ಆರೋಗ್ಯವು ಜೀವನ ವಿಧಾನದ ಭಾಗವಾಗಿರುವ ಮತ್ತು ದೇಶೀಯ ಪರಿಹಾರಗಳನ್ನು ಒಳಗೊಂಡ ಶಕ್ತಿಯುತ ಆರ್ಥಿಕತೆಯುಳ್ಳ ಭಾರತ ರೂಪುಗೊಳ್ಳಬೇಕು ಎಂದಾಶಿಸಿದ್ದರು. ಆ ನಿಟ್ಟಿನಲ್ಲಿ ನಾವು ಪ್ರಯತ್ನಗಳನ್ನು ಮಾಡಿದ್ದೇವೆ.
ಸ್ನೇಹಿತರೇ,
ಮೂರು ಕೋಟಿಗೂ ಅಧಿಕ ಬಡವರಿಗೆ ಪಕ್ಕಾ ಮನೆಗಳು, 10 ಕೋಟಿಗೂ ಅಧಿಕ ಕುಟುಂಬಗಳಿಗೆ ಬಯಲು ಶೌಚ ತಡೆಗಟ್ಟುವ ಸೌಲಭ್ಯಗಳು, 9 ಕೋಟಿಗೂ ಅಧಿಕ ಬಡ ಸಹೋದರಿಯರಿಗೆ ಹೊಗೆಯಿಂದ ಮುಕ್ತಗೊಳಿಸುವ ವ್ಯವಸ್ಥೆ, 2.5 ಕೋಟಿಗೂ ಅಧಿಕ ಬಡ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ, 6 ಕೋಟಿಗೂ ಅಧಿಕ ಕುಟುಂಬಗಳಿಗೆ ನಳ್ಳಿ ನೀರು ಸೌಲಭ್ಯ, 50 ಕೋಟಿಗೂ ಅಧಿಕ ಭಾರತೀಯರಿಗೆ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆ!. ಇವು ಬರೇ ಅಂಕಿ ಅಂಶಗಳಲ್ಲ, ನನ್ನ ಸಹೋದರರೇ ಮತ್ತು ಸಹೋದರಿಯರೇ, ಇದು ಬಡವರ ಘನತೆಯನ್ನು ಖಾತ್ರಿಪಡಿಸುವ ನಮ್ಮ ಬದ್ಧತೆಗೆ ಸಾಕ್ಷಿ.
ಸಹೋದರರೇ ಮತ್ತು ಸಹೋದರಿಯರೇ,
ಬಡವರ ಪರ ಸರಕಾರ ಇರುವಾಗ, ಅವರ ಸೇವೆಯನ್ನು ಅದು ಹೇಗೆ ಮಾಡುತ್ತಿದೆ ಮತ್ತು ಅವರನ್ನು ಸಶಕ್ತೀಕರಣಗೊಳಿಸಲು ಅದು ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಇಡೀ ದೇಶವೇ ಇಂದು ನೋಡುತ್ತಿದೆ. 100 ವರ್ಷಗಳಲ್ಲಿಯೇ ಅತ್ಯಂತ ದೊಡ್ಡದಾದ ಬಿಕ್ಕಟ್ಟು ಕೊರೊನಾ ಜಾಗತಿಕ ಸಾಂಕ್ರಾಮಿಕ ಕಾಲಘಟ್ಟದಲ್ಲಿಯೂ ದೇಶವು ಇದರ ಅನುಭವವನ್ನು ಪಡೆದಿದೆ. ಜಾಗತಿಕ ಸಾಂಕ್ರಾಮಿಕ ಆರಂಭಗೊಂಡಾಗ ಬಡವರಿಗೆ ಆಹಾರದ ಸಮಸ್ಯೆಯಾಯಿತು. ಆಗ ನಾವು ದೇಶವಾಸಿಗಳಿಗೆ ದೇಶದ ಉಗ್ರಾಣಗಳನ್ನು ತೆರೆದಿಟ್ಟೆವು. ನಮ್ಮ ತಾಯಂದಿರು ಮತ್ತು ಸಹೋದರಿಯರು ಘನತೆಯಿಂದ ಬದುಕಲು, ನಾವು ಅವರ ಜನ ಧನ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ಜಮಾ ಮಾಡಿದೆವು. ರೈತರ ಮತ್ತು ಕಾರ್ಮಿಕರ ಬ್ಯಾಂಕ್ ಖಾತೆಗಳಿಗೂ ಹಣ ವರ್ಗಾಯಿಸಿದೆವು. ಮತ್ತು ಬಡವರ ಅಡುಗೆ ಕೋಣೆಗಳು ಯಾವುದೇ ಅಡ್ಡಿ ಆತಂಕಗಳಿಲ್ಲದೆ ಕಾರ್ಯಾಚರಿಸುವಂತೆ ಮಾಡಲು ನಾವು ಉಚಿತ ಅನಿಲ ಸಿಲಿಂಡರುಗಳನ್ನು ವ್ಯವಸ್ಥೆ ಮಾಡಿದೆವು. ಚಿಕಿತ್ಸೆಯಲ್ಲಿ ಸವಾಲುಗಳನ್ನು ಎದುರಿಸಲು ಬಡವರಿಗೆ ಪರೀಕ್ಷೆಯಿಂದ ಚಿಕಿತ್ಸೆವರೆಗೆ ಸೌಲಭ್ಯಗಳು ಲಭ್ಯವಾಗುವಂತೆ ಮಾಡಿದೆವು. ಲಸಿಕೆ ಲಭ್ಯವಾದಾಗ, ಪ್ರತಿಯೊಬ್ಬ ಭಾರತೀಯರಿಗೂ ಅದು ಉಚಿತವಾಗಿ ಲಭ್ಯವಾಗುವಂತೆ ಖಾತ್ರಿಪಡಿಸಿದೆವು. ನೀವೆಲ್ಲರೂ ಲಸಿಕೆಪಡೆದಿರುವಿರಲ್ಲವೇ?.ನಿಮ್ಮ ಲಸಿಕಾಕರಣ ಆಗಿಲ್ಲವೇ? ಯಾರಿಗಾದರೂ ಒಂದು ಪೈಸೆ ಕೊಡಬೇಕಾಯಿತೇ? ನೀವು ಒಂದು ರೂಪಾಯಿಯಾದರೂ ಖರ್ಚು ಮಾಡಬೇಕಾಯಿತೇ ?.
ಸಹೋದರರೇ ಮತ್ತು ಸಹೋದರಿಯರೇ,
ಜಾಗತಿಕ ಸಾಂಕ್ರಾಮಿಕ ಕೊರೊನಾದಂತಹ ಸಂಕೀರ್ಣ ಪರಿಸ್ಥಿತಿಯ ಕಾಲಘಟ್ಟ ಒಂದೆಡೆ ಮತ್ತು ಈಗ ಯುದ್ಧ ಕೂಡಾ ನಡೆಯುತ್ತಿದೆ. ಟಿ.ವಿ.ಯಲ್ಲಿ ಅರ್ಧಾಂಶ ಸಮಯವನ್ನು ಕಬಳಿಸುತ್ತಿರುವ ಯುದ್ಧದ ಸುದ್ದಿಗಳು ಪ್ರತಿಯೊಬ್ಬರನ್ನೂ ಕಂಗೆಡಿಸುತ್ತಿವೆ. ಇಂತಹ ಸಂದರ್ಭಗಳಲ್ಲಿಯೂ ಕೂಡಾ ನಾವು ನಮ್ಮ ಬಡ ಸಹೋದರರು ಮತು ಸಹೋದರಿಯರು, ಹಾಗು ಮಧ್ಯಮ ವರ್ಗದ ಸಹೋದರರು ಮತ್ತು ಸಹೋದರಿಯರು ಸಂಕಷ್ಟಗಳಿಗೆ ಸಿಲುಕದಂತೆ ಖಾತ್ರಿಪಡಿಸಲು ನಿರಂತರ ಪ್ರಯತ್ನಗಳನ್ನು ಮಾಡಿದ್ದೇವೆ. ಈಗ ನಮ್ಮ ಸರಕಾರ ಸೌಲಭ್ಯಗಳು 100% ನಷ್ಟು ನಾಗರಿಕರಿಗೆ ಲಭ್ಯವಾಗುವಂತೆ ಮಾಡಲು ಆಂದೋಲನವನ್ನು ಕೈಗೊಂಡಿದೆ. ಅರ್ಹತೆ ಇದ್ದವರಿಗೆಲ್ಲ ಸೌಲಭ್ಯಗಳು ದೊರೆಯಬೇಕು.
ಪ್ರತಿಯೊಬ್ಬ ನಾಗರಿಕರಿಗೂ ಸೌಲಭ್ಯಗಳನ್ನು ಒದಗಿಸುವುದು ಗುರಿಯಾಗಿರುವಾಗ, ಅಲ್ಲಿ ತಾರತಮ್ಯ ಕೂಡಾ ಕೊನೆಗೊಳ್ಳುತ್ತದೆ. ಮತ್ತು ಅಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ. ಅಲ್ಲಿ ಸ್ವಜನ ಪಕ್ಷಪಾತ ಇರುವುದಿಲ್ಲ ಮತ್ತು ಜಾತಿ ಮತ್ತು ನಂಬಿಕೆಗಳ ವಿಭಜನೆ ಇರುವುದಿಲ್ಲ. ಆದುದರಿಂದ ನಮ್ಮ ಸರಕಾರ ಮೂಲ ಸೌಕರ್ಯಗಳಿಗೆ ಸಂಬಂಧಪಟ್ಟ ಯೋಜನೆಗಳನ್ನು ಪೂರ್ಣ ಪ್ರಮಾಣದಲ್ಲಿ ಸರ್ವ ಜನರಿಗೂ ಲಭ್ಯವಾಗುವಂತೆ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಈ ನಿಟ್ಟಿನಲ್ಲಿ ನಾವು ನಿರಂತರವಾಗಿ ರಾಜ್ಯ ಸರಕಾರಗಳಿಗೆ ಪ್ರೇರಣೆ ನೀಡುತ್ತಿದ್ದೇವೆ ಮತ್ತು ಸಹಾಯ ಮಾಡುತ್ತಿದ್ದೇವೆ. ದೇಶದ ಬಡವರನ್ನು, ದೇಶದ ಮಧ್ಯಮ ವರ್ಗದವರನ್ನು ಸಶಕ್ತೀಕರಣಗೊಳಿಸುವ ಮತ್ತು ಅವರ ಬದುಕನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನಗಳು ಸಾಗುತ್ತಿವೆ.
ಇಂದು ಇಲ್ಲಿ ಜಸ್ದಾನ್ ಮತ್ತು ಅಟ್ಕೋಟ್ ನಲ್ಲಿ ಮೊದಲ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡುವ ಅವಕಾಶ ಲಭಿಸಿತು ಮತ್ತು ಅನೇಕ ದಾನಿಗಳನ್ನು ಹಾಗು ವಿಶ್ವಸ್ಥರನ್ನು ಭೇಟಿಯಾಗುವ ಅವಕಾಶ ದೊರಕಿತು. ಮತ್ತು ಟ್ರಸ್ಟಿಗಳು ನನಗೆ ಹೇಳಿದರು “ಸರ್, ಹಿಂತಿರುಗಿ ನೋಡಬೇಡಿ, ಇಲ್ಲಿಗೆ ಯಾರೇ ಬರಲಿ ಅವರು ಚಿಕಿತ್ಸೆ ಇಲ್ಲದೆ ಹಿಂತಿರುಗಿ ಹೋಗುವುದಿಲ್ಲ” ಎಂಬುದಾಗಿ. ಇದು ವಿಶ್ವಸ್ಥರ ಮಾತುಗಳು ಮತ್ತು ಅವರ ಉತ್ಸಾಹ ಹಾಗು ಈ ಆಧುನಿಕ ಅಸ್ಪತ್ರೆ ತನ್ನದೇ ಆವರಣದಲ್ಲಿದೆ. ನಾನು ಭರತ್ ಭಾಯಿ ಬೋಗ್ರಾ ಮತ್ತು ಪಟೇಲ್ ಸೇವಾ ಸಮಾಜದ ಎಲ್ಲಾ ಸಂಗಾತಿಗಳನ್ನು ಅಭಿನಂದಿಸುತ್ತೇನೆ. ಪಟೇಲ್ ಸೇವಾ ಸಮಾಜ ಇಂದು ಅರ್ಪಣಾಭಾವದಿಂದ ಮಾಡಿರುವಂತಹ ಬಹಳ ದೊಡ್ಡ ಕೆಲಸಕ್ಕೆ ನಿಮಗೆಲ್ಲರಿಗೂ ಅಭಿನಂದನೆಗಳು ಸಲ್ಲಬೇಕು.ಮತು ಇದರಿಂದ ಪ್ರೇರಣೆ ಪಡೆದು ಸಮಾಜಕ್ಕೆ ಏನನ್ನಾದರೂ ಮಾಡುವಂತಹ ಆಶಯ ನಿಮ್ಮೆಲ್ಲರಲ್ಲೂ ಮೂಡಲಿ.
ಸಾಮಾನ್ಯವಾಗಿ ನೀವು ಕೈಗಾರಿಕಾ ಘಟಕವನ್ನು, ಬಸ್ ನಿಲ್ದಾಣವನ್ನು, ಅಥವಾ ರೈಲು ನಿಲ್ದಾಣವನ್ನು ಉದ್ಘಾಟಿಸಿದರೆ ನೀವು ಅಭಿವೃದ್ಧಿಯಾಗುತ್ತೀರಿ ಮತ್ತು ಜನರು ಕೂಡಾ ಕೈಗಾರಿಕಾ ಘಟಕದಲ್ಲಿ ಉತ್ತಮ ಉತ್ಪಾದನೆಯಾಗಲು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಆದರೆ ಆಸ್ಪತ್ರೆಗಾಗುವಾಗ ಏನು ಹೇಳಬೇಕು?. ಆಸ್ಪತ್ರೆ ಸದಾ ಜನರಿಂದ ತುಂಬಿರಲಿ ಎಂದು ನಾನು ಹೇಳಲಾರೆ. ನಾನು ಇದನ್ನು ಉದ್ಘಾಟಿಸಿದ್ದರೂ. ಆಸ್ಪತ್ರೆಗಳು ಖಾಲಿಯಾಗಿರುವಂತಹ ಆರೋಗ್ಯ ಪರಿಸರವನ್ನು ನಾವು ಸಮಾಜದಲ್ಲಿ ನಿರ್ಮಾಣ ಮಾಡಬೇಕು. ಯಾರೂ ಬರುವಂತಹ ಅವಶ್ಯಕತೆ ಉದ್ಭವಿಸಬಾರದು. ಮತ್ತು ಎಲ್ಲರೂ ಆರೋಗ್ಯವಂತರಾಗಿದ್ದರೆ ಆಗ ಯಾರಿಗೂ (ಆಸ್ಪತ್ರೆಗೆ) ಬರುವ ಅವಶ್ಯಕತೆ ಇರುವುದಿಲ್ಲ. ಮತ್ತು (ಆಸ್ಪತ್ರೆಗೆ ಬರುವ) ಅವಶ್ಯಕತೆ ಉದ್ಭವಿಸಿದಾಗ ಅವರು ಆಸ್ಪತ್ರೆಯಿಂದ ಮರಳಿ ಹೋಗುವಾಗ ಮೊದಲಿದ್ದುದಕ್ಕಿಂತ ಹೆಚ್ಚು ಆರೋಗ್ಯವಂತರಾಗಿ ಹೋಗುವಂತಾಗಬೇಕು. ಈ ಆಸ್ಪತ್ರೆಯಲ್ಲಿ ಇಂತಹ ಕೆಲಸ ಆಗಲಿದೆ. ಗುಜರಾತಿನ ಆರೋಗ್ಯ ಕ್ಷೇತ್ರದಲ್ಲಿ ಈ ವೇಗಕ್ಕಾಗಿ ಮೂಲಸೌಕರ್ಯವನ್ನು ತಯಾರು ಮಾಡಿರುವುದಕ್ಕಾಗಿ ಮತ್ತು ಆ ಮಟ್ಟದಲ್ಲಿ ಕೆಲಸ ಮಾಡಿರುವುದಕ್ಕಾಗಿ ಭೂಪೇಂದ್ರ ಭಾಯಿ ಮತ್ತು ಅವರ ಇಡೀ ತಂಡವನ್ನು ನಾನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ. ಮತ್ತು ಇದರಿಂದ ಗುಜರಾತಿನ ಪ್ರತೀ ಮೂಲೆಯಲ್ಲಿರುವ ಜನ ಸಾಮಾನ್ಯರಿಗೆ ಪ್ರಯೋಜನಗಳು ಲಭಿಸಲಿವೆ. ಇಂದು ರಾಜಕೋಟ್ ಸುತ್ತಮುತ್ತಲಿನ ಮೂರು ಅಥವಾ ನಾಲ್ಕು ಜಿಲ್ಲೆಗಳು ಅದು ತಮಗೆ ಹತ್ತಿರವಿದೆ ಎಂಬ ಭಾವನೆ ಮೂಡಿಸುವಂತಹ ಸ್ಥಳವಾಗಿ ಮೂಡಿ ಬಂದಿದೆ. ನೀವಿಲ್ಲಿಗೆ ಅರ್ಧ ಅಥವಾ ಒಂದು ಗಂಟೆಯಲ್ಲಿ ತಲುಪಬಹುದು. ಗುಜರಾತಿನ ರಾಜಕೋಟಾಕ್ಕೆ ಎ.ಐ.ಐ.ಎಂ.ಎಸ್. ಮಂಜೂರಾಗಿರುವುದು ನಿಮಗೆಲ್ಲ ಗೊತ್ತಿದೆ ಮತ್ತು ಅದರ ಕಾಮಗಾರಿ ತ್ವರಿತಗತಿಯಿಂದ ಸಾಗುತ್ತಿದೆ.
ಕೆಲ ಸಮಯದ ಹಿಂದೆ ಡಬ್ಲ್ಯು.ಎಚ್.ಒ.ವತಿಯಿಂದ ವಿಶ್ವದ ಸಾಂಪ್ರದಾಯಿಕ ವೈದ್ಯ ಕೇಂದ್ರಕ್ಕೆ ಶಿಲಾನ್ಯಾಸ ಮಾಡುವಾಗ ನಾನು ಜಾಮನಗರಕ್ಕೆ ಬಂದಿದ್ದೆ. ಜಾಮನಗರದಲ್ಲಿ ಒಂದೆಡೆ ಆಯುರ್ವೇದ (ಕೇಂದ್ರ) ಮತ್ತು ಇನ್ನೊಂದೆಡೆ ರಾಜಕೋಟೆಯಲ್ಲಿ ಎ.ಐ.ಐ.ಎಂ.ಎಸ್. ಮತ್ತು ಈಗ ಅಟ್ಕೋಟ್ ನಲ್ಲಿ ಈ ಆಸ್ಪತ್ರೆ!. ಬಾಪು ಅವರ ಹೆಮ್ಮೆ ಇನ್ನಷ್ಟು ವಿಸ್ತಾರವಾಗಿದೆ. ಸ್ನೇಹಿತರೇ, ನೀವು ಎರಡು ದಶಕಗಳ ಹಿಂದೆ ನಿಮಗೆ ಸೇವೆ ಮಾಡುವ ಅವಕಾಶ ಒದಗಿಸಿದಿರಿ. 2001ರಲ್ಲಿ ಗುಜರಾತಿನಲ್ಲಿ ಬರೇ ಒಂಬತ್ತು ವೈದ್ಯಕೀಯ ಕಾಲೇಜುಗಳಿದ್ದವು. ಇದೆಲ್ಲ ನಿಮಗೆ ನೆನಪಿದೆಯೇ ಅಥವಾ ನೀವು ಮರೆತಿರುವಿರೋ? ಇದನ್ನು ಹೊಸ ತಲೆಮಾರಿನವರಿಗೆ ಹೇಳಿ. ಇಲ್ಲದಿದ್ದರೆ ಇಲ್ಲಿ ಪರಿಸ್ಥಿತಿ ಏನಿತ್ತು? ಎಂಬುದು ಅವರಿಗೆ ತಿಳಿದಿರುವುದಿಲ್ಲ. ಇಲ್ಲಿ ಬರೇ ಒಂಬತ್ತು ವೈದ್ಯಕೀಯ ಕಾಲೇಜುಗಳಿದ್ದವು ಮತ್ತು ಅನೇಕ ಮಂದಿ ವೈದ್ಯರಾಗಲು ಬಯಸುತ್ತಿದ್ದರು. ಅಲ್ಲಿ ಬರೇ 1100 ವೈದ್ಯಕೀಯ ಸೀಟುಗಳಿದ್ದವು. ಗುಜರಾತಿನಂತಹ ದೊಡ್ಡ ರಾಜ್ಯಕ್ಕೆ 2001 ಕ್ಕೆ ಮೊದಲು ಬರೇ 1100 ಸೀಟುಗಳಿದ್ದವು!. ಇಂದು ಗುಜರಾತಿನಲ್ಲಿ ಸರಕಾರಿ ಮತ್ತು ಖಾಸಗಿ ಸಹಿತ 30 ವೈದ್ಯಕೀಯ ಕಾಲೇಜುಗಳಿವೆ ಎಂಬುದನ್ನು ಅರಿತರೆ ನಿಮಗೆ ಬಹಳ ಸಂತೋಷವಾಗಬಹುದು. ಇವೆಲ್ಲಕ್ಕಿಂತ ಮಿಗಿಲಾಗಿ ಗುಜರಾತಿನ ಹಾಗು ದೇಶದ ಪ್ರತೀ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಸ್ಥಾಪಿಸುವ ಯೋಜನೆ ಇದೆ. ಒಂದು ಕಾಲದಲ್ಲಿ ಬರೇ 1100 ಎಂ.ಬಿ.ಬಿ.ಎಸ್. ಮತ್ತು ಪಿ.ಜಿ. ಸೀಟುಗಳಿದ್ದವು ಮತ್ತು ಇಂದು ಅಲ್ಲಿ 8000 ಸೀಟುಗಳಿವೆ.
ಸಹೋದರರೇ ಮತ್ತು ಸಹೋದರಿಯರೇ, ನಾವು ಬಹಳ ಧೈರ್ಯದ ಹೆಜ್ಜೆ ಇಟ್ಟಿದ್ದೇವೆ. ಬಡ ಪೋಷಕರ ಮಗು ವೈದ್ಯನಾಗಬೇಕೇ, ಬೇಡವೇ?, ಹೇಳಿ. ಹೌದು ಅಥವಾ ಇಲ್ಲ ಎಂಬುದನ್ನು ನನಗೆ ಹೇಳಿ. ಆದರೆ ನೀವು ಅವರಿಗೆ ಮೊದಲು ಅವರು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತವರೋ ಅಥವಾ ಗುಜರಾತಿ ಮಾಧ್ಯಮದಲ್ಲಿ ಕಲಿತವರೋ ಎಂದು ಕೇಳಿ. ನೀವು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತಿದ್ದರೆ ವೈದ್ಯರಾಗಲು ಬಾಗಿಲುಗಳು ತೆರೆಯಲ್ಪಡುತ್ತವೆ. ನೀವು ಗುಜರಾತಿ ಮಾಧ್ಯಮದಲ್ಲಿ ಕಲಿತಿದ್ದರೆ ವೈದ್ಯರಾಗುವ ಎಲ್ಲಾ ದಾರಿಗಳೂ ಮುಚ್ಚಲ್ಪಟ್ಟಿರುತ್ತವೆ. ಇದು ಅನ್ಯಾಯ ಹೌದೇ ಅಲ್ಲವೇ? ನಾವು ನಿಯಮಗಳನ್ನು ಬದಲಾಯಿಸಿದೆವು ಮತ್ತು ಯಾರೇ ವೈದ್ಯರಾಗಲು ಬಯಸಿದರೂ ಅಥವಾ ಇಂಜಿನಿಯರ್ ಆಗಲು ಬಯಸಿದರೂ ಅವರು ಅವರ ಮಾತೃಭಾಷೆಯಲ್ಲಿ ಅದನ್ನು ಕಲಿಯಲು ಮತ್ತು ಜನರಿಗೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಡಲು ನಿರ್ಧರಿಸಿದೆವು.
ಸ್ನೇಹಿತರೇ, ಎರಡು ಇಂಜಿನ್ ಗಳ ಸರಕಾರ ಇದಾಗ ಅಲ್ಲಿ ದುಪ್ಪಟ್ಟು ಪ್ರಯೋಜನಗಳಾಗುತ್ತವೆ. ಹೌದಲ್ಲವೇ?.ನೀವು ಸೋದರ ಮಾವನ ಮನೆಗೆ ಊಟಕ್ಕೆ ಹೋಗಿದ್ದರೆ ಮತ್ತು ನಿಮ್ಮ ತಾಯಿ ಅಲ್ಲಿ ನಿಮಗೆ ಊಟ ಬಡಿಸಲು ಅಲ್ಲಿರುತ್ತಿದ್ದರೆ ಎಂಬ ಬಗ್ಗೆ ನಾನು ಗುಜರಾತಿನ ಯಾರಿಗೂ ವಿವರಿಸಬೇಕಾಗಿಲ್ಲ. ಇದರರ್ಥವನ್ನು ತಿಳಿದುಕೊಳ್ಳಬೇಕು. ಈ ಎರಡು ಇಂಜಿನ್ ಸರಕಾರ ಅಡೆತಡೆಗಳನ್ನು ನಿವಾರಿಸುವ ಮೂಲಕ ಗುಜರಾತಿನ ಅಭಿವೃದ್ಧಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದೆ. ಇಂದು ತ್ವರಿತಗತಿಯ ಅಭಿವೃದ್ಧಿಯ ಪ್ರಯೋಜನ ಗುಜರಾತಿಗೆ ಲಭಿಸುತ್ತಿದೆ. 2014ಕ್ಕೆ ಮೊದಲು ದಿಲ್ಲಿಯಲ್ಲಿರುವ ಸರಕಾರ ಪರಿಗಣನೆಗೆ ತೆದುಕೊಳ್ಳದೇ ಇದ್ದಂತಹ ಅನೇಕ ಯೋಜನೆಗಳು ಅಲ್ಲಿವೆ. ಅವರು ಈ ಯೋಜನೆಗಳಲ್ಲಿ ಮೋದಿಯನ್ನು ಕಂಡರು. ಅವರು ಮನೋಸ್ಥಿಮಿತ ಕಳೆದುಕೊಂಡು ಆ ಯೋಜನೆಗಳನ್ನು ಒಂದೋ ತಕ್ಷಣವೇ ರದ್ದು ಮಾಡುತ್ತಿದ್ದರು ಇಲ್ಲವೇ ತಿರಸ್ಕರಿಸುತ್ತಿದ್ದರು. ಅದು ಅನೇಕ ಯೋಜನೆಗಳ ಪ್ರಗತಿಯಲ್ಲಿ ಅಡ್ಡಿಯನ್ನುಂಟು ಮಾಡುತ್ತಿತ್ತು. ಅಷ್ಟೊಂದು ಭಿನ್ನಮತ!. ಈ ಜನರು ಮಾತೆ ನರ್ಮದಾ ಮೇಲಿನ ಸರ್ದಾರ್ ಸರೋವರ ಅಣೆಕಟ್ಟೆಯ ನಿರ್ಮಾಣ ಕಾರ್ಯವನ್ನು ಸ್ಥಗಿತ ಮಾಡಿದ್ದರು. ನಾವು ಸರ್ದಾರ್ ಸರೋವರ ಅಣೆಕಟ್ಟೆಗಾಗಿ ಉಪವಾಸ ಕುಳಿತೆವು. ನಿಮಗೆ ಇದು ನೆನಪಿದೆಯೋ ಇಲ್ಲವೋ?. ಮತ್ತು ಉಪವಾಸ ಫಲಪ್ರದವಾಯಿತು ಹಾಗು ಸರ್ದಾರ್ ಸರೋವರ ಅಣೆಕಟ್ಟೆ ಆಯಿತು. ಸೌನಿ ಯೋಜನಾ ಸಾಕಾರಗೊಂಡಿತು. ಮತ್ತು ನರ್ಮದಾ ಮಾತೆ ಕಚ್-ಕಥಿಯಾವಾರ್ ಭೂಮಿಗೆ ಬಂದಳು ಮತ್ತು ನಮ್ಮ ಬದುಕನ್ನು ಉಜ್ವಲಗೊಳಿಸಿದಳು. ಇಲ್ಲಿ ಹೇಗೆ ಕೆಲಸ ಮಾಡಲಾಯಿತು ಎಂಬುದಕ್ಕಿದು ಉದಾಹರಣೆ. ಮತ್ತು ಈಗ ಸರ್ದಾರ್ ಸರೋವರ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಹೆಸರು ಜಗತ್ತಿನ ಅತ್ಯಂತ ದೊಡ್ಡ ಪ್ರತಿಮೆಯ ಕಾರಣದಿಂದಾಗಿ ಜಗತ್ತಿನಾದ್ಯಂತ ಪ್ರತಿಧ್ವನಿಸುತ್ತಿದೆ. ಆಲ್ಲಿಗೆ ಹೋಗುವ ಜನರು ಗುಜರಾತಿನಲ್ಲಿ ಇಷ್ಟು ಬೇಗ ಇಂತಹ ಬೃಹತ್ ಪ್ರತಿಮೆ ಸಿದ್ಧವಾದುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಾರೆ. ಇದು ಗುಜರಾತಿನ ಶಕ್ತಿ.
ಮೂಲ ಸೌಕರ್ಯ ಅಭಿವೃದ್ಧಿಯಿಂದ ಗುಜರಾತ್ ಗೆ ಬಹಳ ಪ್ರಯೋಜನಗಳಾಗಿವೆ. ಇಂದು ಮೂಲಸೌಕರ್ಯ ಯೋಜನೆಗಳು ಅಭೂತಪೂರ್ವ ವೇಗದಲ್ಲಿ ಮತ್ತು ಪ್ರಮಾಣದಲ್ಲಿ ಮುನ್ನಡೆಯುತ್ತಿವೆ. ಅದು ಗುಜರಾತಿನ ಎಲ್ಲಾ ವಿಸ್ತರಣೆಗಳಿಗೂ ಲಾಭ ತಂದಿದೆ. ವಡೋದರದಿಂದ ವಾಪಿ ನಡುವಣ ವ್ಯಾಪ್ತಿಯಲ್ಲಿ ಕೈಗಾರಿಕೋದ್ಯಮಗಳು ಕೇಂದ್ರೀಕೃತಗೊಂಡ ಕಾಲವೊಂದಿತ್ತು. ರಾಷ್ಟ್ರೀಯ ಹೆದ್ದಾರಿಗಳ ಉದ್ದಕ್ಕೂ ಕೈಗಾರಿಕೆಗಳು ಇರುತ್ತಿದ್ದುದನ್ನು ಯಾರೂ ನೋಡಬಹುದಾಗಿತ್ತು. ನಮ್ಮ ಕೈಗಾರಿಕಾಭಿವೃದ್ಧಿ ಈ ವಲಯಕ್ಕಷ್ಟೇ ಸೀಮಿತವಾಗಿತ್ತು. ಇಂದು ನೀವು ಗುಜರಾತಿನ ಯಾವ ದಿಕ್ಕಿನಲ್ಲಾದರೂ ಹೋಗಿ, ನೀವು ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳನ್ನು ನೋಡುತ್ತೀರಿ. ರಾಜಕೋಟೆಯ ಇಂಜಿನಿಯರಿಂಗ್ ಕೈಗಾರಿಕೋದ್ಯಮ ದೊಡ್ಡ ಮತ್ತು ಸಣ್ಣ ವಾಹನಗಳಿಗೆ ಅವುಗಳು ಎಲ್ಲಿಯೇ ತಯಾರಾಗಲಿ, ಅವುಗಳಿಗೆ ಸಣ್ಣ ಬಿಡಿ ಭಾಗಗಳನ್ನು ಒದಗಿಸುತ್ತಿದೆ. ಇಂದು ಅಹ್ಮದಾಬಾದ್-ಮುಂಬಯಿ ನಡುವಣ ಹೈಸ್ಪೀಡ್ ಬುಲೆಟ್ ರೈಲು ಯೋಜನೆ ತ್ವರಿತಗತಿಯಿಂದ ಅನುಷ್ಟಾನಕ್ಕೆ ಬರುತ್ತಿದೆ. ಮುಂಬಯಿ ಮತ್ತು ದಿಲ್ಲಿ ನಡುವಣ ಪಶ್ಚಿಮದ ಪ್ರತ್ಯೇಕ ಕಾರಿಡಾರ್ ಕ್ಷಿಪ್ರಗತಿಯಿಂದ ಸಾಗಿದೆ. ಗುಜರಾತಿನ ಹೆದ್ದಾರಿಗಳು ಎರಡು-ಮೂರು ಪಥಗಳ ಹೆದ್ದಾರಿಗಳಾಗಿ ವಿಸ್ತರಣೆಗೊಂಡಾಗ ಅದು ಗುಜರಾತಿನ ಬಂದರುಗಳ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಇಂದು ಗುಜರಾತ್ ವಾಯು ಸಂಪರ್ಕದ ಅಭೂತಪೂರ್ವ ವಿಸ್ತರಣೆಯನ್ನು ಕೂಡಾ ಕಾಣುತ್ತಿದೆ. ಮತ್ತು ರೋ-ರೋ ಹಡಗು ಸೇವೆ!. ನೆನಪಿಡಿ ನಾವು ಯುವಕರಿದ್ದಾಗ ರೋ ರೋ ಹಡಗು ಸೇವೆಯ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದೆವು. ನಾನು ಮುಖ್ಯಮಂತ್ರಿಯಾದಾಗ, ನಾನು ಅದರ ಬಗ್ಗೆ ಕೇಳಿದೆ ಮತ್ತು ಅದು ಎಲ್ಲಿದೆ ಎಂದು ಕೇಳಿದೆ. ನಾವು ಬಾಲ್ಯ ಕಾಲದಿಂದ ಕೇಳುತ್ತಿದ್ದ ಈ ರೋ –ರೋ ಹಡಗು ಸೇವೆ ಆರಂಭವಾಗಿದೆ. ಈ ಮೊದಲಿನ 300-350 ಕಿ.ಮೀ ದೂರಕ್ಕೆ ಬದಲಾಗಿ ಜನರಿಗೆ ಈಗ ಸೂರತ್ ನಿಂದ ಕಾಥಿಯವಾರ್ ತಲುಪಲು ಎಂಟು ಗಂಟೆಗಳಷ್ಟು ಅವಧಿ ಕಡಿಮೆಯಾಗಿದೆ.
ಇಂದು ಅಭಿವೃದ್ಧಿ ಹೇಗೆ ಆಗುತ್ತಿದೆ ಎಂಬುದನ್ನು ನಾವು ನೋಡುತ್ತಿದ್ದೇವೆ. ಎಂ.ಎಸ್.ಎಂ.ಇ.ಯು ಗುಜರಾತಿನ ಬಹಳ ದೊಡ್ಡ ಶಕ್ತಿಯಾಗಿ ಮೂಡಿ ಬಂದಿದೆ. ಇಡೀ ಸೌರಾಷ್ಟ್ರದಲ್ಲಿ ಉಪ್ಪಿನ ಕೈಗಾರಿಕೆಗೆ ಹೊರತಾಗಿ ಯಾವುದೇ ಕೈಗಾರಿಕೋದ್ಯಮ ಇಲ್ಲದಂತಹ ಕಾಲವೊಂದಿತ್ತು. ಕಚ್-ಕಥಿಯಾವಾರದ ಜನರು ಜೀವನೋಪಾಯ ಹುಡುಕಿಕೊಂಡು ಭಾರತದ ಮೂಲೆ ಮೂಲೆ ಅಲೆಯುತ್ತಿದ್ದರು. ಇಂದು ಭಾರತದ ಜನತೆ ಕಚ್- ಕಥಿಯಾವಾರಕ್ಕೆ ಬರಲು ಇಚ್ಛಿಸುತ್ತಾರೆ. ಬಂದರುಗಳು ಬೆಳೆಯುತ್ತಿವೆ. ಇಂದು ಗುಜರಾತಿನ ಇಮೇಜ್ ಬದಲಾಗಿದೆ ಸ್ನೇಹಿತರೇ. ಮೋರ್ಬಿ ಟೈಲ್ ಕೈಗಾರಿಕೋದ್ಯಮ ಜಗತ್ತಿನಲ್ಲಿ ತನ್ನದೇ ಸ್ಥಾನವನ್ನು ಗಳಿಸಿಕೊಳ್ಳುತ್ತಿದೆ.
ಜಾಮ್ ನಗರದ ಕಂಚಿನ ಉದ್ಯಮ ಜಗತ್ತಿನಾದ್ಯಂತ ಪಸರಿಸಿದೆ. ಅದೇ ರೀತಿ ಔಷಧಿ ಉದ್ಯಮಗಳು. ಸುರೇಂದ್ರನಗರದಲ್ಲಿ ಔಷದಿ ಕಂಪೆನಿಗಳಿಗೆ ಗುಜರಾತ್ ಸರಕಾರ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದ್ದ ಕಾಲವೊಂದಿತ್ತು. ಆದರೆ ಯಾವುದೂ ಆಗುತ್ತಿರಲಿಲ್ಲ. ಇಂದು ಪ್ರಮುಖ ಔಷಧಿ ಕಂಪೆನಿಗಳು ಗುಜರಾತಿನ ಮತ್ತು ಸೌರಾಷ್ಟ್ರದ ನೆಲದಿಂದ ದೃಢವಾಗಿ ಮುನ್ನಡೆ ಸಾಧಿಸುತ್ತಿವೆ. ಗುಜರಾತ್ ಮೊದಲ ಸ್ಥಾನದಲ್ಲಿದ್ದುಕೊಂಡು ಮುನ್ನಡೆ ಸಾಧಿಸುತ್ತಿರುವ ಅನೇಕ ಕ್ಷೇತ್ರಗಳಿವೆ. ದೇಶಾದ್ಯಂತ ಒಂದು ಜಿಲ್ಲೆ-ಒಂದು ಉತ್ಪನ್ನ ಆಂದೋಲನ ಗುಜರಾತಿನ ಕೈಗಾರಿಕಾಭಿವೃದ್ಧಿಗೆ ಪ್ರಯೋಜನಕಾರಿಯಾಗಿದೆ. ಸೌರಾಷ್ಟ್ರ ತನ್ನದೇ ಆದ ಗುರುತಿಸುವಿಕೆಯನ್ನು ಹೊಂದಿದೆ ಮತ್ತು ಕಥಿಯಾವಾರ, ಕಚ್ ಹಾಗು ಗುಜರಾತ್ ಅವುಗಳ ಸಾಹಸದ ಪ್ರವೃತ್ತಿಯಿಂದಾಗಿ ಗುರುತಿಸಲ್ಪಟ್ಟಿವೆ. ಮತ್ತು ಗುಜರಾತಿನ ಜನರು ನೀರಿನ ಕೊರತೆಯ ನಡುವೆಯೂ ಬದುಕಬಲ್ಲರು. ಇಂದು ಗುಜರಾತಿನ ಜನರು ಕೃಷಿಯಲ್ಲಿ ಕೂಡಾ ಅದ್ಭುತಗಳನ್ನು ಮಾಡುತ್ತಿದ್ದಾರೆ. ಇದು ಗುಜರಾತಿನ ಶಕ್ತಿ ಮತ್ತು ಪ್ರಗತಿಯತ್ತ ಮುನ್ನಡೆ ಸಾಧಿಸಲು ಗಾಂಧೀನಗರ ಹಾಗು ದಿಲ್ಲಿಯಲ್ಲಿರುವ ಸರಕಾರಗಳು ನಾಲ್ಕು ದಿಕ್ಕುಗಳಲ್ಲೂ ಶ್ರಮಿಸುತ್ತಿವೆ.
ಆರೋಗ್ಯ ಸೌಲಭ್ಯಗಳ ವಿಸ್ತರಣೆಗಾಗಿ ಎಲ್ಲಾ ನಾಗರಿಕರನ್ನೂ ನಾನು ಅಭಿನಂದಿಸುತ್ತೇನೆ. ಇಲ್ಲಿ ಜಾರಿಯಲ್ಲಿರುವ ಪಿ.ಎಂ.ಜೆ.ಎ.ವೈ ಮತ್ತು ಆಯುಷ್ಮಾನ್ ಯೋಜನೆಗಳು ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಯೋಜನೆಗಳು ಎಂದು ಭೂಪೇಂದ್ರ ಭಾಯಿ ಅವರು ಈಗಷ್ಟೇ ಹೇಳುತ್ತಿದ್ದರು.ಅಮೆರಿಕಾದ ಒಟ್ಟು ಜನಸಂಖ್ಯೆ ಮತ್ತು ಯುರೋಪಿನ ರಾಷ್ಟ್ರಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚು ಜನರಿಗೆ ಈ ಯೋಜನೆಗಳಿಂದ ಪ್ರಯೋಜನಗಳು ಲಭಿಸುತ್ತಿವೆ. ಆಯುಷ್ಮಾನ್ ಯೋಜನೆ ಅಡಿಯಲ್ಲಿ ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವ 50 ಕೋಟಿ ಜನರ ಐದು ಲಕ್ಷ ರೂಪಾಯಿಗಳವರೆಗಿನ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸುತ್ತದೆ.
ಸಹೋದರರೇ, ಬಡತನ ಎಂದರೇನು ಮತ್ತು ಬಡವರ ಸಮಸ್ಯೆಗಳು ಏನು ಎಂಬುದನ್ನು ತಿಳಿಯಲು ನನಗೆ ಪುಸ್ತಕಗಳನ್ನು ಓದಬೇಕಾದ ಅಥವಾ ಟಿ.ವಿ. ನೋಡಿ ತಿಳಿದುಕೊಳ್ಳಬೇಕಾದ ಅಗತ್ಯವಿಲ್ಲ. ಬಡತನದಲ್ಲಿ ಜೀವನ ಸಾಗಿಸುವುದು ಹೇಗೆ ಎಂಬುದು ನನಗೆ ಗೊತ್ತಿದೆ. ನಮ್ಮ ಸಮಾಜದಲ್ಲಿ ಇಂದು ಕೂಡಾ ತಾಯಂದಿರು ಅಥವಾ ಸಹೋದರಿಯರು ರೋಗಪೀಡಿತರಾದರೆ, ಅವರು ಕುಟುಂಬದಲ್ಲಿರುವ ಯಾರಿಗೂ ಹೇಳುವುದಿಲ್ಲ. ಅವರು ನೋವನ್ನು ಅನುಭವಿಸುತ್ತಲೇ ಇರುತ್ತಾರೆ ಮತ್ತು ಅವರ ಗೃಹ ಕೃತ್ಯಗಳನ್ನು ಮಾಡಿಕೊಂಡು ಹೋಗುತ್ತಿರುತ್ತಾರೆ. ಮತ್ತು ಕುಟುಂಬದಲ್ಲಿ ಯಾರಿಗಾದರೂ ಅನಾರೋಗ್ಯವಾದರೆ ಅವರ ಆರೈಕೆಯನ್ನೂ ಅವರು ಮಾಡುತ್ತಿರುತ್ತಾರೆ. ನಮ್ಮ ತಾಯಂದಿರು ಮತ್ತು ಸಹೋದರಿಯರು ತಮ್ಮ ನೋವನ್ನು ಯಾರೊಂದಿಗೂ ಹೇಳಿಕೊಳ್ಳುವುದಿಲ್ಲ. ಅದು ಸಹಿಸಲಸಾಧ್ಯವಾದಾಗ ಅವರು ದೇವರನ್ನು ತಮ್ಮನ್ನು ಹಿಂದಕ್ಕೆ ಕರೆಸಿಕೊಳ್ಳು ಎಂದು ಪ್ರಾರ್ಥಿಸುತ್ತಿರುತ್ತಾರೆ, ಯಾಕೆಂದರೆ ತಮ್ಮ ಮಕ್ಕಳು ತಮ್ಮಿಂದಾಗಿ ತೊಂದರೆ ಅನುಭವಿಸುವುದು ಬೇಡ ಎಂಬ ಕಾರಣದಿಂದ. ಮಗ ಅಥವಾ ಮಗಳಿಗೆ ಇದರ ಬಗ್ಗೆ ತಿಳಿದಾಗ ಅವರು ಒಳ್ಳೆಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯುವುದಾಗಿ ಹೇಳಿದಾಗಲೂ , ಅವರ ತಾಯಿ ಇದರಿಂದ ಸಾಲವಾಗುತ್ತದೆ ಹೇಳುತ್ತಾಳೆ ಮತ್ತು ತನ್ನ ಬದುಕಿನಲ್ಲಿ ಹೆಚ್ಚು ವರ್ಷಗಳು ಉಳಿದಿಲ್ಲ ಎಂದು ಹೇಳುತ್ತಾಳೆ. “ನೀವು ಸಾಲದಲ್ಲಿ ಮುಳುಗುತ್ತೀರಿ ಮತ್ತು ನಿಮ್ಮ ತಲೆಮಾರು ಪೂರ್ಣವಾಗಿ ಸಾಲದಲ್ಲಿ ಮುಳುಗುತ್ತದೆ. ನಾನು ದೇವರು ಕೊಟ್ಟಷ್ಟು ದಿನ ಬದುಕುತ್ತೇನೆ ಮತ್ತು ಆಸ್ಪತ್ರೆಗೆ ಹೋಗುವುದಿಲ್ಲ. ಸಾಲ ಪಡೆದು ಚಿಕಿತ್ಸೆ ಮಾಡಬೇಕಾದ ಅಗತ್ಯ ನನಗಿಲ್ಲ” ಎನ್ನುತ್ತಾರೆ. ನಮ್ಮ ದೇಶದ ತಾಯಂದಿರು ಮತ್ತು ಸಹೋದರಿಯರು ಹಣಕಾಸಿನ ಕಾರಣದಿಂದ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ. ಅವರ ಮಗ ಸಾಲದಲ್ಲಿ ಸುಳಿಯಲ್ಲಿ ಸಿಲುಕುತ್ತಾನೆ ಎಂಬ ಕಾರಣಕ್ಕೆ ಅವರು ಆಸ್ಪತ್ರೆಗೆ ಹೋಗಲು ಹೆದರುತ್ತಾರೆ.
ಇಂದು ದಿಲ್ಲಿಯಲ್ಲಿ ಕುಳಿತಿರುವ ಮಗ ಇಂತಹ ತಾಯಂದಿರಿಗೆ ಅವರು ಅನಾರೋಗ್ಯದಿಂದ ಬಳಲಬಾರದು ಮತ್ತು ಅವರಿಗೆ ಶಸ್ತ್ರಚಿಕಿತ್ಸೆ ಆಗಬೇಕಿದ್ದರೆ ಹಣ ಸಮಸ್ಯೆಯಾಗಿ ಕಾಡಬಾರದು ಎಂದು ಆಯುಷ್ ಯೋಜನೆಯನ್ನು ಜಾರಿಗೆ ತಂದಿದ್ದಾನೆ. ಈ ಆಸ್ಪತ್ರೆಯಲ್ಲಿಯೂ ಆಯುಷ್ಮಾನ್ ಕಾರ್ಡ್ ಇರುವ ಯಾವುದೇ ವ್ಯಕ್ತಿಗೂ ಸರಕಾರದ ಯೋಜನೆಯ ಪೂರ್ಣ ಪ್ರಯೋಜನ ಲಭಿಸಲು ಸರ್ವ ವ್ಯವಸ್ಥೆಗಳನ್ನು ಮಾಡಲಾಗಿರುವುದು ನನಗೆ ಸಂತೋಷ ತಂದಿದೆ. ಆದುದರಿಂದ ಚಿಕಿತ್ಸೆಗೆ ಕಿಸೆಯಿಂದ ಪಾವತಿ ಮಾಡಬೇಕಾದ ದಿನ ಬರಲಾರದು. ನಿಗದಿತ ಆದಾಯ ಇರುವ ಮಧ್ಯಮ ವರ್ಗದ ಕುಟುಂಬದ ಹಿರಿಯ ವ್ಯಕ್ತಿಗೆ ಮಧುಮೇಹ ಇದ್ದರೆ, ಅವರು ಪ್ರತೀ ತಿಂಗಳೂ ಔಷಧಿಗಾಗಿ 1000-1500 ರೂ ಖರ್ಚು ಮಾಡಬೇಕಾದಂತಹ ಸ್ಥಿತಿ ಇರುವುದನ್ನು ಒಮ್ಮೆ ಕಲ್ಪಿಸಿಕೊಳ್ಳಿ. ಅವರು ದಿನನಿತ್ಯ ಇಂಜೆಕ್ಷನ್ ಅಥವಾ ಮಾತ್ರೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಂತಹ ದುಬಾರಿ ಔಷಧಿಗಳನ್ನು ಖರೀದಿಸಬೇಕಾದರೆ, ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಸ್ಥಿತಿ ಏನಾಗುತ್ತದೆ?. ಭಾರತದ ಮೂಲೆ ಮೂಲೆಗಳಲ್ಲಿಯೂ ಜನ ಔಷಧಿ ಕೇಂದ್ರಗಳನ್ನು ತೆರೆಯಲಾಗಿದೆ ಮತ್ತು ಮಾರುಕಟ್ಟೆಯಲ್ಲಿ 2000 ರೂಪಾಯಿ ವೆಚ್ಚದ ಔಷಧಿಗಳು ಅಲ್ಲಿ ಬರೇ 100 ರೂಪಾಯಿಗಳಿಗೆ ಲಭಿಸುತ್ತವೆ. ಭಾರತದಲ್ಲಿ ನೂರಾರು ಜನ ಔಷಧಿ ಕೇಂದ್ರಗಳು ನಡೆಸಲ್ಪಡುತ್ತಿರುವುದರಿಂದ ಜನರಿಗೆ ಔಷಧಿಗೆ ಸಂಬಂಧಿಸಿ ಸಮಸ್ಯೆಗಳಿಲ್ಲ. ಇದರ ಪರಿಣಾಮವಾಗಿ ಯಾರು ಕೂಡಾ ಕೈಗೆಟಕುವ ದರದಲ್ಲಿ ಔಷಧಿಗಳನ್ನು ಖರೀದಿಸಬಹುದು ಮತ್ತು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬಹುದು. ಮತ್ತು ಯಾವುದೇ ಹೊರೆ ಇಲ್ಲದೆ ಯಾವುದೇ ಪರಿಸ್ಥಿತಿಯನ್ನು ನಿಭಾಯಿಸಬಹುದು.
ಸ್ವಚ್ಛತೆ, ನೀರು ಮತ್ತು ಪರಿಸರ ಆರೋಗ್ಯಕ್ಕೆ ಬಹಳ ಅವಶ್ಯಕ. ನಾವು ಉತ್ತಮ ಆರೋಗ್ಯಕ್ಕಾಗಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತಿದ್ದೇವೆ. ನಿಮ್ಮೆಲ್ಲರಿಗೂ, ಗುಜರಾತಿನ ಪ್ರತಿ ಮಗುವಿಗೂ ಉತ್ತಮ ಆರೋಗ್ಯ ಇರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಮತ್ತು ಗುಜರಾತಿನ ಭವಿಷ್ಯ ಕೂಡಾ ಆರೋಗ್ಯದಿಂದಿರಬೇಕು. ಈ ಪವಿತ್ರ ಸಂದರ್ಭದಲ್ಲಿ ನಾನು ದಾನಿಗಳನ್ನು ಮತ್ತು ಇಂತಹ ಮೌಲ್ಯಗಳೊಂದಿಗೆ ಆ ಮಕ್ಕಳನ್ನು ಬೆಳೆಸಿದ ಅವರ ಮಾತೆಯರನ್ನು ಮತ್ತು ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಿದವರನ್ನು ಅಭಿನಂದಿಸುತ್ತೇನೆ. ಅವರಿಗೆ ನನ್ನ ಶುಭಾಶಯಗಳು ಮತ್ತು ನಿಮ್ಮೆಲ್ಲರಿಗೂ ನಮಸ್ಕಾರಗಳು. ನೀವೆಲ್ಲರೂ ನನ್ನ ಮೇಲೆ ಇಷ್ಟೆಲ್ಲಾ ಪ್ರೀತಿಯನ್ನು ತೋರಿಸಿದ್ದೀರಿ. ಈ ಬಿರು ಬಿಸಿಲಿನಲ್ಲಿ ನನ್ನನ್ನು ಆಶೀರ್ವದಿಸಲು ಲಕ್ಷಾಂತರ ಜನರು ಬಂದಿದ್ದಾರೆ. ಈ ಆಶೀರ್ವಾದವೇ ನನ್ನ ಅತಿ ದೊಡ್ಡ ಶಕ್ತಿ. ಇದು ನನ್ನ ಸಂಪತ್ತು. ಸಾವಿರಾರು ಮಂದಿ ಸಹೋದರಿಯರು ಬಿಸಿಲಿನಲ್ಲಿ ನಿಂತು, ತಮ್ಮ ತಲೆಯ ಮೇಲೆ ಹೂಜಿ ಇಟ್ಟುಕೊಂಡು ಅವರ ಕಾಥಿಯಾವಾರಿ ಸಂಪ್ರದಾಯದ ಪ್ರಕಾರ ನನ್ನನ್ನು ಆಶೀರ್ವದಿಸಿದ್ದಾರೆ. ತಮ್ಮ ಕುಟುಂಬದಲ್ಲಿ ಯಾವುದೇ ಸಂದರ್ಭವುಂಟಾದಾಗ ಹರಸುವಂತೆ ನನ್ನ ತಾಯಂದಿರು ಮತ್ತು ಸಹೋದರಿಯರು ನನ್ನನ್ನು ಆಶೀರ್ವದಿಸಿದ್ದಾರೆ. ಆ ಎಲ್ಲಾ ತಾಯಂದಿರಿಗೆ ಮತ್ತು ಸಹೋದರಿಯರಿಗೆ ನಾನು ವಂದಿಸುತ್ತೇನೆ.ಅವರ ಆಶೀರ್ವಾದಗಳೊಂದಿಗೆ ಗುಜರಾತ್ ಮತ್ತು ಭಾರತಕ್ಕೆ ನಾನು ಸೇವೆ ಮಾಡುವುದನ್ನು ಮುಂದುವರೆಸುತ್ತೇನೆ! ಬಹಳ ಧನ್ಯವಾದಗಳು.
ಭಾರತ್ ಮಾತಾ ಕೀ-ಜೈ
ಭಾರತ್ ಮಾತಾ ಕೀ-ಜೈ
ಬಹಳ ಧನ್ಯವಾದಗಳು!
ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ
***
(Release ID: 1829795)
Visitor Counter : 211
Read this release in:
English
,
Urdu
,
Hindi
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam