ಪ್ರಧಾನ ಮಂತ್ರಿಯವರ ಕಛೇರಿ

ಮಕ್ಕಳಿಗಾಗಿ ಪಿಎಂ-ಕೇರ್ಸ್ ಯೋಜನೆಯಡಿ ಸೌಲಭ್ಯಗಳನ್ನು ಬಿಡುಗಡೆ ಮಾಡಿದ ಪ್ರಧಾನಮಂತ್ರಿ


“ಪ್ರತಿಯೊಬ್ಬ ದೇಶವಾಸಿಯೂ ಅತ್ಯಂತ ಸಂವೇದನೆಯಿಂದ ನಿಮ್ಮೊಂದಿಗಿದ್ದಾರೆ ಎಂಬುದರ ಪ್ರತಿಬಿಂಬವೇ ಮಕ್ಕಳಿಗಾಗಿ ಪಿಎಂ ಕೇರ್ಸ್”

"ಈ ಕಷ್ಟದ ಸಮಯದಲ್ಲಿ ಭಾರತ ಮಾತೆಯು ಎಲ್ಲ ಮಕ್ಕಳೊಂದಿಗೆ ಇದ್ದಾಳೆ"

"ಈ ಸಂಕಷ್ಟದ ಸಮಯದಲ್ಲಿ, ಒಳ್ಳೆಯ ಪುಸ್ತಕಗಳು ನಿಮ್ಮ ವಿಶ್ವಾಸಾರ್ಹ ಸ್ನೇಹಿತರಾಗಬಹುದು"

"ಇಂದು, ನಮ್ಮ ಸರ್ಕಾರವು 8 ವರ್ಷಗಳನ್ನು ಪೂರೈಸುತ್ತಿರುವಾಗ, ದೇಶದ ವಿಶ್ವಾಸ ಮತ್ತು ದೇಶವಾಸಿಗಳ ವಿಶ್ವಾಸವು ಅಸಾಧಾರಣವಾಗಿದೆ"
"ಕಳೆದ 8 ವರ್ಷಗಳನ್ನು ಬಡವರ ಕಲ್ಯಾಣ ಮತ್ತು ಸೇವೆಗೆ ಮೀಸಲಿಡಲಾಯಿತು"

“ಈಗ ಕಡು ಬಡವರು ಪ್ರಯೋಜನಗಳನ್ನು ಪಡೆಯುವ ವಿಶ್ವಾಸ ಹೊಂದಿದ್ದಾರೆ. ಈ ನಂಬಿಕೆಯನ್ನು ಹೆಚ್ಚಿಸಲು, ನಮ್ಮ ಸರ್ಕಾರವು ಈಗ ಶೇ.100 ರಷ್ಟು ಸಬಲೀಕರಣದ ಅಭಿಯಾನವನ್ನು ನಡೆಸುತ್ತಿದೆ.”

Posted On: 30 MAY 2022 11:35AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆಯ ಸೌಲಭ್ಯಗಳನ್ನು ಬಿಡುಗಡೆ ಮಾಡಿದರು. ಕೇಂದ್ರ ಸಚಿವೆ ಶ್ರೀಮತಿ ಸ್ಮೃತಿ ಇರಾನಿ, ಸಂಪುಟದ ಅನೇಕ ಸದಸ್ಯರು ಮತ್ತು ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. 
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕೊರೊನಾದಿಂದ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಮಕ್ಕಳ ಜೀವನದ ಕಷ್ಟಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರು. “ಪ್ರತಿದಿನದ ಹೋರಾಟ, ಪ್ರತಿ ದಿನದ ಸವಾಲುಗಳು. ಯಾರಿಗಾಗಿ ಈ ಕಾರ್ಯಕ್ರಮ ನಡೆಯುತ್ತಿದೆಯೋ, ಇಂದು ನಮ್ಮೊಂದಿಗಿರುವ ಆ ಮಕ್ಕಳ ನೋವನ್ನು ಪದಗಳಲ್ಲಿ ಹೇಳುವುದು ಕಷ್ಟವಾಗುತ್ತದೆ”ಎಂದು ಪ್ರಧಾನಿ ಭಾವುಕರಾದರು. ತಾವು ಪ್ರಧಾನಿಯಾಗಿ ಅಲ್ಲ, ನಿಮ್ಮ ಕುಟುಂಬದ ಸದಸ್ಯನಾಗಿ ಮಾತನಾಡುತ್ತಿದ್ದೇನೆ ಎಂದರು.
ಇಂತಹ ಸನ್ನಿವೇಶದಲ್ಲಿ, ಮಕ್ಕಳಿಗಾಗಿ ಪಿಎಂ ಕೇರ್ಸ್ ಎಂಬುದು ಕೊರೊನಾದಿಂದಾಗಿ ತಮ್ಮ ತಾಯಿ ಮತ್ತು ತಂದೆ ಇಬ್ಬರನ್ನೂ ಕಳೆದುಕೊಂಡಿರುವ ಮಕ್ಕಳ ಕಷ್ಟಗಳನ್ನು ಕಡಿಮೆ ಮಾಡಲು ಒಂದು ಸಣ್ಣ ಪ್ರಯತ್ನವಾಗಿದೆ ಎಂದು ಪ್ರಧಾನಿ ಹೇಳಿದರು. ಮಕ್ಕಳಿಗಾಗಿ ಪಿಎಂ ಕೇರ್ಸ್ ಪ್ರತಿ ದೇಶವಾಸಿಯೂ ನಿಮ್ಮೊಂದಿಗೆ ಅತ್ಯಂತ ಸಂವೇದನೆಯಿಂದ ಇದ್ದಾರೆ ಎಂಬುದರ ಪ್ರತಿಬಿಂಬವಾಗಿದೆ. ವೃತ್ತಿಪರ ಕೋರ್ಸ್‌ಗಳು ಅಥವಾ ಉನ್ನತ ಶಿಕ್ಷಣಕ್ಕಾಗಿ ಯಾರಿಗಾದರೂ ಶಿಕ್ಷಣ ಸಾಲದ ಅಗತ್ಯವಿದ್ದರೆ, ಅದಕ್ಕೆ ಪಿಎಂ-ಕೇರ್ಸ್P ಸಹಾಯ ಮಾಡುತ್ತದೆ ಎಂದರು. ದಿನನಿತ್ಯದ ಇತರ ಅಗತ್ಯಗಳಿಗಾಗಿ, ಇತರ ಯೋಜನೆಗಳ ಮೂಲಕ ಅವರಿಗೆ ಪ್ರತಿ ತಿಂಗಳು 4 ಸಾವಿರ ರೂಪಾಯಿಗಳ ನೆರವಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಮಕ್ಕಳು 23 ವರ್ಷ ವಯಸ್ಸು ಮುಗಿಸಿದಾಗ 10 ಲಕ್ಷ ರೂಪಾಯಿಗಳನ್ನು ನೀಡಲಾಗುವುದು, ಜೊತೆಗೆ ಆಯುಷ್ಮಾನ್ ಕಾರ್ಡ್ ಮೂಲಕ ಆರೋಗ್ಯ ರಕ್ಷಣೆ ಮತ್ತು ಮಾನಸಿಕ ಮತ್ತು ಭಾವನಾತ್ಮಕ ಸಹಾಯಕ್ಕಾಗಿ ಸಂವಾದ ಸಹಾಯವಾಣಿ ಮೂಲಕ ಭಾವನಾತ್ಮಕ ಸಲಹೆಯನ್ನು ನೀಡಲಾಗುತ್ತದೆ ಎಂದರು.
ಸಾಂಕ್ರಾಮಿಕ ರೋಗದ ಅತ್ಯಂತ ನೋವನ್ನು ಧೈರ್ಯದಿಂದ ಎದುರಿಸಿದ್ದಕ್ಕಾಗಿ ಮಕ್ಕಳಿಗೆ ವಂದಿಸಿದ ಪ್ರಧಾನಮಂತ್ರಿಯವರು, ಪೋಷಕರ ಪ್ರೀತಿಯನ್ನು ಯಾವುದೂ ಸರಿದೂಗಿಸಲು ಸಾಧ್ಯವಿಲ್ಲ ಎಂದರು. ಈ ಕಷ್ಟದ ಸಮಯದಲ್ಲಿ ಭಾರತ ಮಾತೆಯು ನಿಮ್ಮೊಂದಿಗಿದ್ದಾಳೆ. ಮಕ್ಕಳಿಗಾಗಿ ಪಿಎಂ ಕೇರ್ಸ್ ಮೂಲಕ ರಾಷ್ಟ್ರವು ತನ್ನ ಜವಾಬ್ದಾರಿಯನ್ನು ಪೂರೈಸಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕ ಸಮಯದಲ್ಲಿ ಜನತೆಯ ಸಂವೇದನಾಶೀಲತೆಯ ನಿದರ್ಶನಗಳನ್ನು, ವಿಶೇಷವಾಗಿ ಜನರು ಸಂತ್ರಸ್ತ  ಜನರ ಕಲ್ಯಾಣಕ್ಕೆ ಕೊಡುಗೆ ನೀಡಿದ್ದನ್ನು ಪ್ರಧಾನಿ ನೆನಪಿಸಿಕೊಂಡರು. ಕೊರೊನಾ ಅವಧಿಯಲ್ಲಿ ಆಸ್ಪತ್ರೆಗಳನ್ನು ಸಿದ್ಧಪಡಿಸಲು, ವೆಂಟಿಲೇಟರ್‌ಗಳನ್ನು ಖರೀದಿಸಲು ಮತ್ತು ಆಮ್ಲಜನಕ ಘಟಕಗಳನ್ನು ಸ್ಥಾಪಿಸಲು ಈ ನಿಧಿಯು ಸಾಕಷ್ಟು ಸಹಾಯ ಮಾಡಿದೆ ಎಂದು ಪ್ರಧಾನಿ ಹೇಳಿದರು. ಇದರಿಂದಾಗಿ ಅನೇಕ ಜೀವಗಳನ್ನು ಉಳಿಸಲಾಯಿತು ಮತ್ತು ಅನೇಕ ಕುಟುಂಬಗಳ ಭವಿಷ್ಯವನ್ನು ಉಳಿಸಲಾಯಿತು ಎಂದರು.
ಹತಾಶೆಯ ಕಾರ್ಮೋಡದ ಕವಿದಾಗಲೂ ನಮ್ಮನ್ನು ನಾವು ನಂಬಿದರೆ ಬೆಳಕಿನ ಕಿರಣವು ಖಂಡಿತವಾಗಿಯೂ ಗೋಚರಿಸುತ್ತದೆ ಎಂದು ಪ್ರಧಾನಿ ಹೇಳಿದರು. ಇದಕ್ಕೆ ನಮ್ಮ ದೇಶವೇ  ಬಹುದೊಡ್ಡ ಉದಾಹರಣೆ ಎಂದರು. ಹತಾಶೆಯು ಸೋಲಾಗಿ ಪರಿವರ್ತನೆಯಾಗಲು ಬಿಡಬೇಡಿ ಎಂದು ಪ್ರಧಾನಿ ಮಕ್ಕಳಿಗೆ ಸಲಹೆ ನೀಡಿದರು. ಹಿರಿಯರು ಮತ್ತು ಗುರುಗಳ ಮಾತನ್ನು ಕೇಳಬೇಕು. ಈ ಕಷ್ಟದ ಸಮಯದಲ್ಲಿ ಉತ್ತಮ ಪುಸ್ತಕಗಳು ನಿಮಗೆ ವಿಶ್ವಾಸಾರ್ಹ ಸ್ನೇಹಿತರಾಗಬಹುದು ಎಂದು ಅವರು ಹೇಳಿದರು. ಮಕ್ಕಳು ರೋಗ ಮುಕ್ತರಾಗಿರುವಂತೆ ಮತ್ತು ಚಟುವಟಿಕೆಯಿಂದಿರುವಂತೆ ಖೇಲೋ ಇಂಡಿಯಾ ಮತ್ತು ಫಿಟ್ ಇಂಡಿಯಾ ಆಂದೋಲನವನ್ನು ಮುನ್ನಡೆಸುವಂತೆ ಕೇಳಿಕೊಂಡರು. ಅಲ್ಲದೆ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು. ಆ ಋಣಾತ್ಮಕ ವಾತಾವರಣದಲ್ಲಿ ಭಾರತವು ತನ್ನ ಶಕ್ತಿಯನ್ನು ನೆಚ್ಚಿಕೊಂಡಿತ್ತು ಎಂದು ಅವರು ಹೇಳಿದರು. ನಾವು ನಮ್ಮ ವಿಜ್ಞಾನಿಗಳು, ವೈದ್ಯರು ಮತ್ತು ಯುವಕರನ್ನು ನಂಬಿದೆವು ಮತ್ತು  ನಾವು ಜಗತ್ತಿಗೆ ಚಿಂತೆಯಾಗಲಿಲ್ಲ, ಭರವಸೆಯ ಕಿರಣವಾಗಿ ಹೊರಬಂದೆವು. ನಾವು ಸಮಸ್ಯೆಯಾಗಲಿಲ್ಲ ಬದಲಿಗೆ ಪರಿಹಾರ ನೀಡುವವರಾಗಿ ಹೊರಬಂದಿದ್ದೇವೆ. ನಾವು ಪ್ರಪಂಚದಾದ್ಯಂತದ ದೇಶಗಳಿಗೆ ಔಷಧಿಗಳನ್ನು ಮತ್ತು ಲಸಿಕೆಗಳನ್ನು ಕಳುಹಿಸಿದ್ದೇವೆ. ಇಷ್ಟು ದೊಡ್ಡ ದೇಶದಲ್ಲಿಯೂ ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆಯನ್ನು ತೆಗೆದುಕೊಂಡಿದ್ದೇವೆ ಎಂದು ಅವರು ಹೇಳಿದರು. ನಮ್ಮ ದೇಶವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಮತ್ತು ಜಗತ್ತು ಹೊಸ ಭರವಸೆ ಮತ್ತು ನಂಬಿಕೆಯೊಂದಿಗೆ ನಮ್ಮತ್ತ ನೋಡುತ್ತಿದೆ ಎಂದು ಪ್ರಧಾನಿ ಹೇಳಿದರು.
ಇಂದು ತಮ್ಮ ಸರ್ಕಾರ 8 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ದೇಶದ ವಿಶ್ವಾಸ, ದೇಶವಾಸಿಗಳ ವಿಶ್ವಾಸ ಅಸಾಧಾರಣವಾಗಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಭ್ರಷ್ಟಾಚಾರ, ಸಾವಿರಾರು ಕೋಟಿ ಹಗರಣಗಳು, ಸ್ವಜನಪಕ್ಷಪಾತ, ದೇಶಾದ್ಯಂತ ಭಯೋತ್ಪಾದಕ ಹರಡಿದ್ದ ಸಂಘಟನೆಗಳು ಮತ್ತು ಪ್ರಾದೇಶಿಕ ತಾರತಮ್ಯದಿಂದ ದೇಶವು 2014 ಕ್ಕಿಂತ ಮೊದಲು ಸಿಲುಕಿದ್ದ ವಿಷವರ್ತುಲದಿಂದ ಹೊರಬರುತ್ತಿದೆ. ಮಕ್ಕಳಾದ ನಿಮಗೆ ಇದೂ ಒಂದು ಉದಾಹರಣೆ. ಅತ್ಯಂತ ಕಷ್ಟಕರವಾದ ದಿನಗಳು ಸಹ ಹಾದುಹೋಗುತ್ತವೆ ಎಂದು ಅವರು ಹೇಳಿದರು.
ಸ್ವಚ್ಛ ಭಾರತ್ ಮಿಷನ್, ಜನ್ ಧನ್ ಯೋಜನೆ ಅಥವಾ ಹರ್ ಘರ್ ಜಲ ಅಭಿಯಾನದಂತಹ ಕಲ್ಯಾಣ ಕಾರ್ಯಕ್ರಮಗಳನ್ನು ಉಲ್ಲೇಖಿಸಿದ ಪ್ರಧಾನಿ, ಸರ್ಕಾರವು ಸಬ್ಕಾ ಸಾಥ್ ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್ ಮನೋಭಾವದೊಂದಿಗೆ ಸಾಗುತ್ತಿದೆ ಎಂದು ಹೇಳಿದರು. ಕಳೆದ 8 ವರ್ಷಗಳನ್ನು ಬಡವರ ಕಲ್ಯಾಣ ಮತ್ತು ಸೇವೆಗೆ ಮುಡಿಪಾಗಿಡಲಾಯಿತು ಎಂದರು. ಕುಟುಂಬದ ಒಬ್ಬ ಸದಸ್ಯರಾಗಿ, ನಾವು ಕಷ್ಟಗಳನ್ನು ಕಡಿಮೆ ಮಾಡಲು ಮತ್ತು ದೇಶದ ಬಡವರ ಜೀವನವನ್ನು ಸುಧಾರಿಸಲು ಪ್ರಯತ್ನಿಸಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು.
ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸುವ ಮೂಲಕ ಸರ್ಕಾರವು ಬಡವರ ಹಕ್ಕುಗಳನ್ನು ಖಾತ್ರಿಪಡಿಸಿದೆ. ಈಗ ಬಡವರಲ್ಲಿ ಬಡವರು ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ, ಅದು ನಿರಂತರವಾಗಿ ಸಿಗುತ್ತದೆ ಎಂಬ ವಿಶ್ವಾಸ ಅವರಲ್ಲಿದೆ. ಈ ನಂಬಿಕೆಯನ್ನು ಹೆಚ್ಚಿಸಲು, ನಮ್ಮ ಸರ್ಕಾರವು ಈಗ ಶೇ.100 ರಷ್ಟು ಸಬಲೀಕರಣದ ಅಭಿಯಾನವನ್ನು ನಡೆಸುತ್ತಿದೆ ಎಂದು ಹೇಳಿದರು.
ಕಳೆದ ಎಂಟು ವರ್ಷಗಳಲ್ಲಿ ಭಾರತ ಸಾಧಿಸಿರುವ ಎತ್ತರವನ್ನು ಈ ಹಿಂದೆ ಯಾರೂ ಊಹಿಸಿರಲಿಲ್ಲ ಎಂದು ಪ್ರಧಾನಿ ಹೇಳಿದರು. ಇಂದು ಜಗತ್ತಿನಾದ್ಯಂತ ಭಾರತದ ಹೆಮ್ಮೆ ಹೆಚ್ಚಿದೆ, ಜಾಗತಿಕ ವೇದಿಕೆಗಳಲ್ಲಿ ಭಾರತದ ಶಕ್ತಿ ಹೆಚ್ಚಿದೆ. ಯುವಶಕ್ತಿ ಭಾರತದ ಈ ಪಯಣವನ್ನು ಮುನ್ನಡೆಸುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ನಿಮ್ಮ ಕನಸುಗಳಿಗೆ ನಿಮ್ಮ ಜೀವನವನ್ನು ಮುಡಿಪಾಗಿಡಿ, ಅವು ನನಸಾಗುತ್ತವೆ ಎಂದು ಪ್ರಧಾನಿ ಹೇಳಿದರು.

 

 

 

***



(Release ID: 1829509) Visitor Counter : 146