ಪ್ರಧಾನ ಮಂತ್ರಿಯವರ ಕಛೇರಿ

ರಾಜ್‌ಕೋಟ್‌ನ ಆಟ್‌ಕೋಟ್‌ನಲ್ಲಿರುವ ಮಾತುಶ್ರೀ ಕೆ.ಡಿ.ಪಿ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಪ್ರಧಾನಮಂತ್ರಿ ಭೇಟಿ


"ಜನರ ಜೀವನವನ್ನು ಸುಧಾರಿಸುವ ಪ್ರಯತ್ನದಲ್ಲಿ ಸರ್ಕಾರಿ ಮತ್ತು ಖಾಸಗಿ ನಡುವಿನ ಸಂಯೋಜನೆಗೆ ಈ ಆಸ್ಪತ್ರೆ ಒಂದು ಉದಾಹರಣೆಯಾಗಿದೆ"

"ಕಳೆದ 8 ವರ್ಷಗಳಲ್ಲಿ, ಬಡವರಿಗೆ 'ಸೇವೆ', 'ಸುಶಾಸನ' ಮತ್ತು 'ಗರೀಬ್ ಕಲ್ಯಾಣ್' ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

"ಕಳೆದ 8 ವರ್ಷಗಳಲ್ಲಿ ದೇಶದ ಜನರಿಗೆ ಮುಜುಗರವನ್ನುಂಟುಮಾಡುವ ಯಾವುದೇ ತಪ್ಪು ನಡೆದಿಲ್ಲ"

"ಯೋಜನೆಗಳಲ್ಲಿ ಸಂತೃಪ್ತಿಯನ್ನು ಸಾಧಿಸಲು ಸರ್ಕಾರವು ಅಭಿಯಾನಗಳನ್ನು ಪ್ರಾರಂಭಿಸಿದೆ"

Posted On: 28 MAY 2022 1:36PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ರಾಜ್‌ಕೋಟ್‌ನ ಆಟ್‌ಕೋಟ್‌ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಮಾತುಶ್ರೀ ಕೆ.ಡಿ.ಪಿ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿದರು. ʻಶ್ರೀ ಪಟೇಲ್ ಸೇವಾ ಸಮಾಜʼವು ಆಸ್ಪತ್ರೆಯನ್ನು ನಿರ್ವಹಿಸುತ್ತದೆ. ಈ ಆಸ್ಪತ್ರೆಯು ಉನ್ನತ ಮಟ್ಟದ ವೈದ್ಯಕೀಯ ಉಪಕರಣಗಳ  ಲಭ್ಯತೆಯನ್ನು ಖಾತರಿಪಡಿಸುತ್ತದೆ ಮತ್ತು ಈ ಪ್ರದೇಶದ ಜನರಿಗೆ ವಿಶ್ವದರ್ಜೆಯ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ. ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್, ಕೇಂದ್ರ ಸಚಿವರಾದ ಶ್ರೀ ಪುರುಷೋತ್ತಮ್ ರೂಪಾಲಾ, ಡಾ. ಮನ್ಸುಖ್ ಮಾಂಡವಿಯಾ, ಡಾ. ಮಹೇಂದ್ರ ಮುಂಜಾಪಾರ, ಸಂಸದರು, ಗುಜರಾತ್ ಸರ್ಕಾರದ ಮಂತ್ರಿಗಳು ಮತ್ತು ಸಂತ ಸಮಾಜದ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಆಸ್ಪತ್ರೆಯ ಉದ್ಘಾಟನೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ಈ ಆಸ್ಪತ್ರೆಯು ಸೌರಾಷ್ಟ್ರದಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸಲಿದೆ ಎಂದು ಅವರು ಹೇಳಿದರು. ಜನರ ಜೀವನವನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿ ಸರ್ಕಾರ ಮತ್ತು ಖಾಸಗಿ ನಡುವಿನ ಸಂಯೋಜನೆಗೆ ಈ ಆಸ್ಪತ್ರೆ ಒಂದು ಉದಾಹರಣೆಯಾಗಿದೆ ಎಂದರು.

ʻಎನ್‌ಡಿಎʼ ಸರ್ಕಾರ 8 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಸಂದರ್ಭದ ಹಿನ್ನೆಲೆಯಲ್ಲಿ, ರಾಷ್ಟ್ರ ಸೇವೆ ಮಾಡಲು ತಮಗೆ ಅವಕಾಶ ನೀಡಿದ್ದಕ್ಕಾಗಿ ಪ್ರಧಾನಮಂತ್ರಿಯವರು ಜನತೆಗೆ ಕೃತಜ್ಞತೆ ಸಲ್ಲಿಸಿದರು. ತಾಯ್ನಾಡಿಗೆ 8 ವರ್ಷಗಳ ಸೇವಾವಧಿ ಪೂರೈಸುವ ಮುನ್ನಾದಿನದಂದು ತಾವು ಗುಜರಾತ್ ನೆಲದಲ್ಲಿರುವುದು ಪ್ರಶಸ್ತವಾಗಿದೆ ಎಂದು ಅವರು ಹೇಳಿದರು. ದೇಶಸೇವೆ ಮಾಡಲು ತಮಗೆ ಅವಕಾಶ ಮತ್ತು ಸಂಸ್ಕಾರಗಳನ್ನು ನೀಡಿದ್ದಕ್ಕಾಗಿ ಅವರು ಗುಜರಾತ್ ಜನತೆಗೆ ವಂದನೆ ಅರ್ಪಿಸಿದರು. ಈ ಸೇವೆಯು ನಮ್ಮ ಸಂಸ್ಕೃತಿಯಲ್ಲಿ, ನಮ್ಮ ಮಣ್ಣಿನ ಸಂಸ್ಕೃತಿಯಲ್ಲಿ ಹಾಗೂ ಬಾಪು ಮತ್ತು ಪಟೇಲರ ಸಂಸ್ಕೃತಿಯಲ್ಲಿದೆ ಎಂದು ಅವರು ಹೇಳಿದರು. ಕಳೆದ 8 ವರ್ಷಗಳಲ್ಲಿ ಜನರಿಗೆ ಮುಜುಗರ ಉಂಟುಮಾಡುವ ಯಾವುದೇ ತಪ್ಪು ನಡೆದಿಲ್ಲ ಎಂದರು. ಈ ವರ್ಷಗಳಲ್ಲಿ, ಬಡವರ ಸೇವೆ, 'ಸುಶಾಸನ' ಮತ್ತು 'ಗರೀಬ್ ಕಲ್ಯಾಣ್'ಗಳಿಗೆ ಹೆಚ್ಚಿನ ಆದ್ಯತೆ ನೀಡಲಾಯಿತು. ʻಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ; ʻಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ʼ ಎಂಬ ಮಂತ್ರವು ರಾಷ್ಟ್ರದ ಅಭಿವೃದ್ಧಿಗೆ ಉತ್ತೇಜನ ನೀಡಿದೆ ಎಂದು ಪ್ರಧಾನಿ ಹೇಳಿದರು.

ಪೂಜ್ಯ ಬಾಪು ಮತ್ತು ಸರ್ದಾರ್ ಪಟೇಲರು ಬಡವರು, ದಲಿತರು, ಅವಕಾಶ ವಂಚಿತರು, ಬುಡಕಟ್ಟು ಜನಾಂಗದವರು, ಮಹಿಳೆಯರು ಇತ್ಯಾದಿಗಳ ಸಬಲೀಕರಣಕ್ಕಾಗಿ ಕನಸು ಕಂಡಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದಲ್ಲಿ ʻಸ್ವಚ್ಚತೆ ಮತ್ತು ʻಸ್ವಾಸ್ಥ್ಯʼ ರಾಷ್ಟ್ರ ಪ್ರಜ್ಞೆಯ ಒಂದು ಭಾಗವಾಗಿವೆ. ಸ್ವದೇಶಿ ಪರಿಹಾರಗಳಿಂದ ಆರ್ಥಿಕತೆಯನ್ನು ಬಲಪಡಿಸುವ ಭಾರತವನ್ನು ಬಾಪು ಬಯಸಿದ್ದರು ಎಂದು ಪ್ರಧಾನಿ ಉಲ್ಲೇಖಿಸಿದರು. ಈಗ 3 ಕೋಟಿಗೂ ಹೆಚ್ಚು ಕುಟುಂಬಗಳು ಸದೃಢ ವಸತಿಯನ್ನು ಪಡೆದುಕೊಂಡಿವೆ, 10 ಕೋಟಿಗೂ ಹೆಚ್ಚು ಕುಟುಂಬಗಳು ಬಯಲು ಬಹಿರ್ದೆಸೆಯಿಂದ ಮುಕ್ತವಾಗಿವೆ, 9 ಕೋಟಿಗೂ ಹೆಚ್ಚು ಸಹೋದರಿಯರನ್ನು ಅಡುಗೆಮನೆಯಲ್ಲಿ ಹೊಗೆಯಿಂದ ಮುಕ್ತಗೊಳಿಸಲಾಗಿದೆ ಮತ್ತು 2.5 ಕೋಟಿಗೂ ಹೆಚ್ಚು ಕುಟುಂಬಗಳು ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿವೆ, 6 ಕೋಟಿಗೂ ಹೆಚ್ಚು ಕುಟುಂಬಗಳು ಕುಡಿಯುವ ನೀರಿನ ಸಂಪರ್ಕವನ್ನು ಪಡೆದಿವೆ ಮತ್ತು 50 ಕೋಟಿಗೂ ಹೆಚ್ಚು ಫಲಾನುಭವಿಗಳು 5 ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ರಕ್ಷಣೆಯನ್ನು ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಇವು ಕೇವಲ ಸಂಖ್ಯೆಗಳಲ್ಲ; ಬದಲಿಗೆ ಬಡವರ ಘನತೆ ಮತ್ತು ರಾಷ್ಟ್ರದ ಸೇವೆಯನ್ನು ಖಾತರಿಪಡಿಸುವ ನಮ್ಮ ಸಮರ್ಪಣಾಭಾವಕ್ಕೆ ಪುರಾವೆಗಳಾಗಿವೆ ಎಂದು ಪ್ರಧಾನಿ ಹೇಳಿದರು.

ಕಳೆದ 100 ವರ್ಷಗಳಲ್ಲೇ ಅತಿದೊಡ್ಡ ಸಾಂಕ್ರಾಮಿಕದ ಸಮಯದಲ್ಲಿಯೂ ಸಹ ಬಡವರು ತಮ್ಮ ಜೀವನದಲ್ಲಿ ಯಾವುದೇ ತೊಂದರೆಯನ್ನು ಅನುಭವಿಸದಂತೆ ಸರಕಾರ ನೋಡಿಕೊಂಡಿದೆ ಎಂದು ಪ್ರಧಾನಿ ಹೇಳಿದರು. ʻಜನ್ ಧನ್ ಬ್ಯಾಂಕ್ʼ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಯಿತು, ಬಡವರಿಗೆ ಉಚಿತ ಸಿಲಿಂಡರ್‌ಗಳನ್ನು ನೀಡಲಾಯಿತು ಮತ್ತು ಎಲ್ಲರಿಗೂ ಉಚಿತ ಕೋವಿಡ್‌ ಪರೀಕ್ಷೆ ನಡೆಸಿ, ಲಸಿಕೆಗಳನ್ನು ಉಚಿತವಾಗಿ ನೀಡಲಾಯಿತು ಎಂದರು.

ಪ್ರಸ್ತುತ ಜಗತ್ತಿನಲ್ಲಿ ಒಂದು ಭಾಗದಲ್ಲಿ ಯುದ್ಧ ನಡೆಯುತ್ತಿದ್ದರೂ ನಾವು ಜನರ ಜೀವನವನ್ನು ಸರಾಗಗೊಳಿಸಲು ಪ್ರಯತ್ನಿಸಿದ್ದೇವೆ ಎಂದು ಪ್ರಧಾನಿ ಹೇಳಿದರು. ತಮ್ಮ ಸರ್ಕಾರವು ಯೋಜನೆಗಳಲ್ಲಿ ಸಂತೃಪ್ತಿಯನ್ನು ಸಾಧಿಸಲು ಹಲವು ಅಭಿಯಾನಗಳನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು. ಪ್ರತಿಯೊಬ್ಬರೂ ತಮ್ಮ ಹಕ್ಕುಗಳನ್ನು ಪಡೆದಾಗ, ತಾರತಮ್ಯ ಮತ್ತು ಭ್ರಷ್ಟಾಚಾರಕ್ಕೆ ಯಾವುದೇ ಅವಕಾಶವಿರುವುದಿಲ್ಲ ಎಂದು ಅವರು ಒತ್ತಿ ಹೇಳಿದರು. ಈ ಪ್ರಯತ್ನವು ಬಡ ಮತ್ತು ಮಧ್ಯಮ ವರ್ಗದ ಜೀವನವನ್ನು ಸುಲಭಗೊಳಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.

ಗುಜರಾತಿ ಭಾಷೆಯಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಸಾರ್ವಜನಿಕ ಸೇವೆಯ ಮಹಾನ್ ಕಾರ್ಯಕ್ಕಾಗಿ ಪಟೇಲ್‌ ಸಮುದಾಯವನ್ನು ಶ್ಲಾಘಿಸಿದರು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ದಿನಗಳನ್ನು ಸ್ಮರಿಸಿದ ಪ್ರಧಾನಿ ಮೋದಿ, 2001ರಲ್ಲಿ ಗುಜರಾತ್ ಜನತೆ ತಮಗೆ ಸೇವೆ ಸಲ್ಲಿಸಲು ಅವಕಾಶ ನೀಡಿದಾಗ, ಕೇವಲ 9 ವೈದ್ಯಕೀಯ ಕಾಲೇಜುಗಳಿದ್ದವು, ಈಗ ಗುಜರಾತ್‌ನಲ್ಲಿ 30 ವೈದ್ಯಕೀಯ ಕಾಲೇಜುಗಳಿವೆ ಎಂದರು. "ಗುಜರಾತ್ ಮತ್ತು ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜನ್ನು ನೋಡಲು ನಾನು ಬಯಸುತ್ತೇನೆ. ನಾವು ನೀತಿಗಳನ್ನು ಬದಲಾಯಿಸಿದ್ದೇವೆ ಮತ್ತು ಈಗ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಮಾತೃಭಾಷೆಯಲ್ಲಿ ಅಧ್ಯಯನ ಮಾಡಬಹುದು,"ಎಂದು ಹೇಳಿದರು.

ಕೈಗಾರಿಕೆಯ ಬಗ್ಗೆ ಮಾತನಾಡಿದ ಶ್ರೀ ಮೋದಿ, ಈ ಹಿಂದೆ ವಡೋದರಾದಿಂದ ವಾಪಿಯವರೆಗೆ ಮಾತ್ರ ಕೈಗಾರಿಕೆಗಳು ಗೋಚರಿಸುತ್ತಿದ್ದವು. ಈಗ ಗುಜರಾತ್‌ನಲ್ಲಿ ಎಲ್ಲೆಡೆ ಕೈಗಾರಿಕೆಗಳು ತಲೆ ಎತ್ತುತ್ತಿವೆ ಎಂದರು. ಹೆದ್ದಾರಿಗಳು ವಿಸ್ತಾರಗೊಂಡಿವೆ ಮತ್ತು ʻಎಂಎಸ್ಎಂಇʼ ಗುಜರಾತ್‌ನ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ. ಔಷಧೀಯ ಉದ್ಯಮವೂ ಬೆಳೆಯುತ್ತಿದೆ. ಸೌರಾಷ್ಟ್ರದ ಜನರ ಧೈರ್ಯಶಾಲಿ ಸ್ವಭಾವವು ಅಲ್ಲಿನ ಜನರ ಅಸ್ಮಿತೆಯಾಗಿದೆ ಎಂದು ಅವರು ಹೇಳಿದರು.

ವೈಯಕ್ತಿಕ ಅನುಭವವನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಬಡತನ ಮತ್ತು ಅನಾರೋಗ್ಯದ ಹೊರತಾಗಿಯೂ ಕುಟುಂಬದ ಮಹಿಳೆಯರು ಹೇಗೆ ಕೆಲಸ ಮಾಡುತ್ತಲೇ ಇರುತ್ತಾರೆ ಹಾಗೂ  ಕುಟುಂಬಕ್ಕೆ ಅನಾನುಕೂಲವಾಗುವುದನ್ನು ತಪ್ಪಿಸಲು ಚಿಕಿತ್ಸೆ ತೆಗೆದುಕೊಳ್ಳುವುದನ್ನು ಹೇಗೆ ತಪ್ಪಿಸುತ್ತಾರೆ ಎಂಬುದನ್ನು ತಾವು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದರು. "ಇಂದು ನಿಮ್ಮ ಮಕ್ಕಳು ದಿಲ್ಲಿಯಲ್ಲಿದ್ದರೂ ತವರೂರಿನಲ್ಲಿ ಯಾವೊಬ್ಬ ತಾಯಿಯೂ ಚಿಕಿತ್ಸೆಯಿಂದ ವಂಚಿತಳಾಗುವುದಿಲ್ಲ ಎಂಬ ಖಾತರಿ ಆತನಿಗೆ ಇರುತ್ತದೆ. ಅದಕ್ಕಾಗಿಯೇ ʻಪಿಎಂಜೆಎವೈʼ ಯೋಜನೆಯನ್ನು ಪ್ರಾರಂಭಿಸಲಾಗಿದೆ", ಎಂದು ಅವರು ಹೇಳಿದರು. ಅಂತೆಯೇ, ಕೈಗೆಟುಕುವ ದರದಲ್ಲಿ ಔಷಧಕ್ಕಾಗಿ ಜನೌಷಧಿ ಕೇಂದ್ರಗಳಿವೆ ಮತ್ತು ಪ್ರತಿಯೊಬ್ಬರ ಉತ್ತಮ ಆರೋಗ್ಯಕ್ಕಾಗಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು.

 

****

 (Release ID: 1829071) Visitor Counter : 132