ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಮಾಹಿತಿಯ ಮುಕ್ತ ಹರಿವು ಮತ್ತು ಅಗತ್ಯವಿರುವ ಸರಿಯಾದ ಮಾಹಿತಿ ಜೊತೆಜೊತೆಯಾಗಿ ಸಾಗುತ್ತದೆ : ಶ್ರೀ ಅನುರಾಗ್ ಠಾಕೂರ್
17 ನೇ ಮಾಧ್ಯಮ ಶೃಂಗ ಸಭೆ ಉದ್ದೇಶಿಸಿ ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಭಾಷಣ: ಕೋವಿಡ್ – 19 ಕುರಿತು ಶಿಕ್ಷಣ ನೀಡಿದ ಭಾರತೀಯ ಮಾಧ್ಯಮಗಳ ಬಗ್ಗೆ ಮೆಚ್ಚುಗೆ
ಸಾರ್ವಜನಿಕ ಗ್ರಹಿಕೆಯನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿ ರೂಪದಲ್ಲಿ ಸಬಲೀಕರಣಗೊಳಿಸುವ ಸಾಮರ್ಥ್ಯವನ್ನು ಭಾರತೀಯ ಮಾಧ್ಯಮಗಳು ಹೊಂದಿವೆ : ಶ್ರೀ ಅನುರಾಗ್ ಸಿಂಗ್ ಠಾಕೂರ್
ಪಿಐಬಿಯ ಫ್ಯಾಕ್ಟ್ ಚೆಕ್ ಘಟಕದ ಮೂಲಕ ಸರ್ಕಾರದ ವಿರುದ್ಧದ ಸುಳ್ಳು ಸುದ್ದಿ ಬೆದರಿಕೆ ವಿರುದ್ಧ ಪರಿಣಾಮಕಾರಿ ಹೋರಾಟ
Posted On:
25 MAY 2022 4:41PM by PIB Bengaluru
ಕೋವಿಡ್ – 19 ಸಾಂಕ್ರಾಮಿಕ ಸೋಂಕಿನ ಸಂಕಷ್ಟ ಸಮಯದಲ್ಲಿ ಭಾರತೀಯ ಮಾಧ್ಯಮಗಳು ವಹಿಸಿದ ಪಾತ್ರವನ್ನು ಕೇಂದ್ರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಶ್ಲಾಘಿಸಿದ್ದಾರೆ.
ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ 17 ನೇ ಏಷ್ಯಾ ಮಾಧ್ಯಮ ಶೃಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಜಾಗೃತಿ ಸಂದೇಶಗಳು, ಸರ್ಕಾರದ ಪ್ರಮುಖ ಮಾರ್ಗಸೂಚಿಗಳು ಮತ್ತು ದೇಶದ ಪ್ರತಿಯೊಬ್ಬರಿಗೂ ವೈದ್ಯರೊಂದಿಗೆ ಉಚಿತವಾಗಿ ಸಮಾಲೋಚನೆ ನಡೆಸಲು ಇರುವ ಸೌಲಭ್ಯಗಳ ಕುರಿತು ಅರಿವು ಮೂಡಿಸಿರುವುದನ್ನು ಭಾರತೀಯ ಮಾಧ್ಯಮಗಳು ಖಚಿತಪಡಿಸಿವೆ ಎಂದರು.
ಸಾರ್ವಜನಿಕ ಸೇವಾ ವಲಯದ ಜನಾದೇಶವನ್ನು ದೂರದರ್ಶನ ಮತ್ತು ಆಕಾಶವಾಣಿ ವಾಹಿನಿಗಳು ಗಮನಾರ್ಹವಾಗಿ ತಲುಪಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿವೆ. ತಳಮಟ್ಟದಲ್ಲಿ ವರದಿ, ತ್ವರಿತ ಪ್ರಸಾರ, ಸಾರ್ವಜನಿಕ ಆರೋಗ್ಯದ ಬಗ್ಗೆ ಕಾರ್ಯಕ್ರಮಗಳನ್ನು ಸಿದ್ಧಪಡಿಸಿ ತಮ್ಮ ಪಾತ್ರವನ್ನು ಇವು ಸಾಬೀತುಪಡಿಸಿವೆ ಎಂದರು.
ಇತರೆ ಸಾಂಕ್ರಾಮಿಕ ಸಮಸ್ಯೆಗಳ ಬಗ್ಗೆ ಮಾತನಾಡಿದ ಸಚಿವರು, “ಪರಿಶೀಲಿಸದೇ ಮಾಧ್ಯಮಗಳು ತಪ್ಪು ವಿಷಯವನ್ನು ಪ್ರಸಾರ ಮಾಡಿದರೆ ಜನರಲ್ಲಿ ತೀವ್ರ ಭೀತಿಯ ವಾತಾವರಣ ನಿರ್ಮಿಸಿದಂತಾಗುತ್ತದೆ”. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ವಾರ್ತಾ ಶಾಖೆ – ಪಿಐಬಿಯ ಫ್ಯಾಕ್ಟ್ ಚೆಕ್ ಘಟಕ ನಿರ್ವಹಿಸಿದ ಪಾತ್ರವನ್ನು ಶ್ಲಾಘಿಸಿದರು. ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಯ ಪಿಡುಗಿನ ವಿರುದ್ಧ ನೈಜ ಸಮಯದಲ್ಲಿ ಸಿಡಿದೇಳುವ ಮೂಲಕ ಬಲವಾಗಿ ಹೋರಾಟ ಮಾಡಿದೆ ಎಂದರು.
ಕೋವಿಡ್-19 ವಿರುದ್ಧದ ಹೋರಾಟದ ಸಾಧನೆಗಳ ಕುರಿತು ಬೆಳಕು ಚೆಲ್ಲಿದ ಶ್ರೀ ಅನುರಾಗ್ ಠಾಕೂರ್, 1.3 ಶತಕೋಟಿ ಜನರಿಗೆ ಲಸಿಕೆ ನೀಡುವುದು ನಿಜಕ್ಕೂ ಸವಾಲಿನ ಕೆಲಸ, ಸರ್ಕಾರ, ಕೊರೋನಾ ಸೇನಾನಿಗಳು ಮತ್ತು ನಾಗರಿಕ ಸಮಾಜದ ಸಾಮೂಹಿಕ ಪ್ರಯತ್ನಗಳ ಮೂಲಕ ಭಾರತದ ಬಹುತೇಕ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಹೇಳಿದರು.
ಮಾಹಿತಿಯನ್ನು ಪ್ರಸಾರ ಮಾಡುವ ಮತ್ತು ಸರ್ಕಾರದ ಮೇಲಿನ ಭಾರವನ್ನು ಹಂಚಿಕೊಳ್ಳುವಲ್ಲಿ ಮಾಧ್ಯಮಗಳು ವಹಿಸಿದ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, “ಕೊರೋನಾ ವೈರಾಣು ವಿರುದ್ಧ ಹೋರಾಡಲು ಲಸಿಕೆ ಪಡೆಯುವ ಮಹತ್ವ ಮತ್ತು ಪ್ರಯೋಜನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವಲ್ಲಿ ಮಾಧ್ಯಮಗಳು ಬಹಳ ಮುಖ್ಯ ಪಾತ್ರ ವಹಿಸಿವೆ. ನಾವು ಈ ಹಾದಿಯಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿದ್ದೇವೆ. ಅದರಲ್ಲಿ ಮುಖ್ಯವಾದ ಸವಾಲೆಂದರೆ ಲಸಿಕೆ ಪಡೆಯಲು ಹಿಂಜರಿಕೆ ತೋರಿದ್ದು. ಸೂಕ್ತ ಸಂದೇಶ ಮತ್ತು ಶಿಕ್ಷಣದ ಮೂಲಕ ಹಿಂಜರಿಕೆಯನ್ನು ಮಾಧ್ಯಮಗಳು ತೊಡೆದುಹಾಕಿವೆ. ನಮ್ಮ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನಾಗರಿಕರನ್ನು ಉದ್ದೇಶಿಸಿ ಆಕಾಶವಾಣಿ ಕಾರ್ಯಕ್ರಮಗಳು ಅಥವಾ ಟಿ.ವಿ. ವಾಹಿನಿಗಳ ಮೂಲಕ ಮಾಡಿದ ಭಾಷಣಗಳನ್ನು ಸೂಕ್ತ ರೀತಿಯಲ್ಲಿ ಮಾಧ್ಯಮಗಳು ತಲುಪಿಸಿವೆ ಮತ್ತು ಲಸಿಕೆ ಕುರಿತು ಸ್ಪಷ್ಟವಾದ ಸಂದೇಶವನ್ನು ನೀಡಿವೆ” ಎಂದರು.
ಈ ವರ್ಷದ ಏಷ್ಯಾ ಶೃಂಗ ಸಭೆಯ ದ್ಯೇಯವಾಕ್ಯ “ಭವಿಷ್ಯವನ್ನು ಮುನ್ನಡೆಸುವ, ಮಾಧ್ಯಮವನ್ನು ಮರುರೂಪಿಸುವಿಕೆ” ಎಂಬುದಾಗಿದೆ. ಮಾಧ್ಯಮಗಳಲ್ಲಿ ಬದಲಾಗುತ್ತಿರುವ ಕಾರ್ಯವಿಧಾನ ಕುರಿತು ಒತ್ತಿ ಹೇಳಿದ ಶ್ರೀ ಠಾಕೂರ್, ಇಂದು ಮಾಧ್ಯಮ ಹೆಚ್ಚು ತಾಂತ್ರಿಕ ಚಾಲಿತವಾಗಿದೆ ಮತ್ತು ಇವುಗಳ ತ್ವರಿತ ವೇಗಕ್ಕೆ ನಾವೀನ್ಯತೆಯು ಸಹ ಸಾಕ್ಷಿಯಾಗುತ್ತಿದೆ”. ಕೈಗೆಟುವ ಮೊಬೈಲ್ ಸಾಧನಗಳು ಮತ್ತು ಇಂಟರ್ನೆಟ್ ಬೆಳವಣಿಗೆಯಿಂದಾಗಿ ಮಾಧ್ಯಮ ಕೈಗಾರಿಕೆ ಪುನಃ ಸ್ಥಾಪನೆಯಾದಂತಾಗಿದೆ. 5ಜಿ ತಂತ್ರಜ್ಞಾನದಿಂದ ಬಳಕೆದಾರರ ಅನುಭವ ಮತ್ತಷ್ಟು ಹೆಚ್ಚಾಗಲಿದ್ದು, ಇದರಿಂದ ತ್ವರಿತ ಸೇವೆ ಮತ್ತು ಮಾಧ್ಯಮ ವಿಷಯಗಳ ಗುಣಮಟ್ಟ ಸುಧಾರಣೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ತಂತ್ರಜ್ಞಾನದ ಪ್ರಗತಿ ಏನೇ ಆದರೂ ವಿಷಯದ ಸತ್ಯಾಸತ್ಯತೆ ಯಾವಾಗಲೂ ಪ್ರಮುಖ ವಿಷಯವಾಗಿರುತ್ತದೆ. ಮಾಹಿತಿಯ ಮುಕ್ತ ಹರಿವಿನ ಹಕ್ಕಿನ ಬಗ್ಗೆ ನಾವು ಮಾತನಾಡಬಹುದು, ಆದರೆ ಸರಿಯಾದ ಮಾಹಿತಿ ಪ್ರಸಾರದ ಅಗತ್ಯದ ಬಗ್ಗೆಯೂ ನಾವು ಮಾತನಾಡಬೇಕಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಕಾನ್ ಚಿತ್ರೋತ್ಸವದಲ್ಲಿ ಹಿಂದೆಂದೂ ಇಲ್ಲದ ರೀತಿಯಲ್ಲಿ ಭಾರತೀಯ ಸಿನೆಮಾದ ಶಕ್ತಿ ಪ್ರದರ್ಶನವಾಗಿರುವ ಕುರಿತು ಪುನರುಚ್ಚರಿಸಿದ ಸಚಿವರು, ಭಾರತೀಯ ಸಿನೆಮಾ ಜಗತ್ತಿನಾದ್ಯಂತ ಲಕ್ಷಾಂತರ ಜನರ ಹೃದಯವನ್ನು ಆಳುತ್ತಿದೆ ಮತ್ತು ಭಾರತಕ್ಕೆ ತನ್ನದೇ ಆದ ಗುರುತನ್ನು ಒದಗಿಸಿಕೊಟ್ಟಿದೆ. ಚಿತ್ರೋತ್ಸವದಲ್ಲಿ ಭಾರತೀಯ ಸಿನೆಮಾಗಳಿಗೆ ಪ್ರೇಕ್ಷಕರಿಂದ ಪ್ರಚಂಡ ಚಪ್ಪಾಳೆ ದೊರೆತಿದ್ದು, ಇದು ಸಿನೆಮಾಗಳ ವೈಭವಕ್ಕೆ ಸಾಕ್ಷಿಯಾಗಿದೆ. ಒಟ್ಟಾರೆ 3000 ಚಲನಚಿತ್ರಗಳು ಬಿಡುಗಡೆಯಾಗುತ್ತಿದ್ದು, ಭಾರತದ ನಿರ್ಮಾಪಕರು ಅತಿ ಹೆಚ್ಚು ಸಿನೆಮಾಗಳನ್ನು ಪ್ರತಿವರ್ಷ ನಿರ್ಮಿಸುತ್ತಿದ್ದಾರೆ. ಭಾರತದಲ್ಲಿ ಚಿತ್ರೀಕರಣಕ್ಕಾಗಿ ಘೋಷಿಸಲಾದ ಉತ್ತೇಜನ ಕ್ರಮಗಳನ್ನು ಸಚಿವರು ಇದೇ ವೇಳೆ ಪುನರುಚ್ಚರಿಸಿದರು.
ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಉತ್ತೇಜಿಸುವ ಮತ್ತು ಸಂರಕ್ಷಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆದ್ಯತೆಯ ದೃಷ್ಟಿಕೋನವಾಗಿದೆ. ಇದನ್ನು ಸಾಕಾರಗೊಳಿಸಲು ಸರ್ಕಾರ ರಾಷ್ಟ್ರಿಯ ಚಲನಚಿತ್ರ ಪರಂಪರೆ ಅಭಿಯಾನ ಆರಂಭಿಸುವುದಾಗಿ ಪ್ರಕಟಿಸಿದ್ದು, ಇದರಡಿ ವಿಶ್ವದ ಅತಿದೊಡ್ಡ ಚಲನಚಿತ್ರ ಮರುಸ್ಥಾಪನೆ ಯೋಜನೆಯನ್ನು ಜಾರಿಗೊಳಿಸಲಾಗುವುದು. ಈ ಅಭಿಯಾನದ ಭಾಗವಾಗಿ ವಿವಿಧ ಪ್ರಕಾರಗಳು ಮತ್ತು ಭಾಷೆಗಳ 2200 ಚಲನಚಿತ್ರಗಳನ್ನು ತಮ್ಮ ಹಿಂದಿನ ವೈಭವಕ್ಕೆ ಮರು ಸ್ಥಾಪಿಸಲಾಗುತ್ತದೆ ಎಂದು ಶ್ರೀ ಠಾಕೂರ್ ಮಾಹಿತಿ ನೀಡಿದರು. ನಮ್ಮ ಪೂರ್ವಜನರು ಆದರಿಸಿದ ಮೌಲ್ಯಗಳು, ಜ್ಞಾನವನ್ನು ಹೊಸ ತಲೆಮಾರಿನವರು ತಿಳಿದುಕೊಳ್ಳಬೇಕು ಮತ್ತು ಅಳವಡಿಸಿಕೊಳ್ಳಬೇಕು ಎಂದು ಸಚಿವರು ಕರೆ ನೀಡಿದರು.
ಬ್ರಿಟಿಷರಿಂದ ದೇಶ ಸ್ವಾತಂತ್ರ್ಯ ಪಡೆದ 75 ನೇ ಸ್ವಾತಂತ್ರ್ಯೋತ್ಸವದ ಆಚರಣೆ ಕುರಿತು ಮಾಹಿತಿ ನೀಡಿದ ಸಚಿವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಮ್ಮ ಐತಿಹಾಸಿಕ ಸಾಂಪ್ರದಾಯಿಕ ಮೌಲ್ಯಗಳು, ನೈತಿಕತೆ, ಸಾಂಸ್ಕೃತಿಕ ನೀತಿಗಳೊಂದಿಗೆ ನಾವು ಮರು ಜೀವಿಸುತ್ತಿದ್ದೇವೆ. ಸ್ವಾತಂತ್ರ್ಯ ಪಡೆಯಲು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಮಾಡಿರುವ ತ್ಯಾಗ ಕುರಿತು ನಮ್ಮ ಯುವ ಪೀಳಿಗೆ ಹೆಚ್ಚು ಜಾಗರೂಕತೆಯಿಂದ ತಿಳಿದುಕೊಳ್ಳಬೇಕು ಎಂದು ಹೇಳಿದರು.
ಸಾರ್ವಜನಿಕ ಗ್ರಹಿಕೆಯನ್ನು ಸಮರ್ಪಕವಾಗಿ ಮತ್ತು ಪರಿಣಾಮಕಾರಿ ರೂಪದಲ್ಲಿ ಸಬಲೀಕರಣಗೊಳಿಸುವ ಸಾಮರ್ಥ್ಯವನ್ನು ಭಾರತೀಯ ಮಾಧ್ಯಮಗಳು ಹೊಂದಿವೆ ಎಂದು ಹೇಳಿದ ಸಚಿವರು, ಇದೇ ಸಂದರ್ಭದಲ್ಲಿ ಜಗತ್ತಿನಲ್ಲಿ ಮಾಧ್ಯಮಗಳು ವಹಿಸುವ ಸಕಾರಾತ್ಮಕ ಪಾತ್ರದ ಬಗ್ಗೆಯೂ ಬಲವಾದ ವಿಶ್ವಾಸ ವ್ಯಕ್ತಪಡಿಸಿದರು.
***
(Release ID: 1828397)
Visitor Counter : 203