ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav g20-india-2023

11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 2022ರ ಜನವರಿ-ಮಾರ್ಚ್ ಅವಧಿಯಲ್ಲಿ ಭಾರತದಲ್ಲಿ ದೇಶೀಯ ಪೇಟೆಂಟ್ ಸಲ್ಲಿಕೆಯ ಸಂಖ್ಯೆಯು ಅಂತರರಾಷ್ಟ್ರೀಯ ಪೇಟೆಂಟ್ ಸಲ್ಲಿಕೆಯ ಸಂಖ್ಯೆಯನ್ನು ಮೀರಿಸಿದೆ


ಭಾರತದಲ್ಲಿ ʻಐಪಿಆರ್ʼ ಆಡಳಿತವನ್ನು ಬಲಪಡಿಸಲು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಮಾಡಿದ ನಿರಂತರ ಪ್ರಯತ್ನಗಳನ್ನು ಶ್ರೀ ಪಿಯೂಷ್ ಗೋಯಲ್ ಶ್ಲಾಘಿಸಿದ್ದಾರೆ

ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಮತ್ತು ಬೌದ್ಧಿಕ ಆಸ್ತಿ (ಐಪಿ) ಕಚೇರಿಯ ಸಂಘಟಿತ ಪ್ರಯತ್ನಗಳು ಭಾರತವನ್ನು ʻಜಾಗತಿಕ ಆವಿಷ್ಕಾರ ಸೂಚ್ಯಂಕʼದಲ್ಲಿ ಅಗ್ರ 25 ಸ್ಥಾನಕ್ಕೆ ಕೊಂಡೊಯ್ಯಲಿವೆ- ಶ್ರೀ ಗೋಯಲ್

ಪೇಟೆಂಟ್ ಸಲ್ಲಿಕೆಯು ಕಳೆದ 7 ವರ್ಷಗಳಲ್ಲಿ 50% ಕ್ಕಿಂತಲೂ ಅಧಿಕ ಹೆಚ್ಚಳವಾಗಿದೆ

2014-15ಕ್ಕೆ ಹೋಲಿಸಿದರೆ 2021-22ನೇ ಸಾಲಿನ ಪೇಟೆಂಟ್‌ಗಳ ಅನುದಾನದಲ್ಲಿ ಸುಮಾರು ಐದು ಪಟ್ಟು ಹೆಚ್ಚಳವಾಗಿದೆ

Posted On: 12 APR 2022 10:11AM by PIB Bengaluru

ʻಐಪಿʼ ನಾವೀನ್ಯತೆ ಪರಿಸರ ವ್ಯವಸ್ಥೆಯ ಹಿನ್ನೆಲೆಯಲ್ಲಿ ಭಾರತವು ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಕಳೆದ 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ, ಜನವರಿ-ಮಾರ್ಚ್ 2022ರ ತ್ರೈಮಾಸಿಕದಲ್ಲಿ ಭಾರತೀಯ ಪೇಟೆಂಟ್ ಕಚೇರಿಯಲ್ಲಿ ದೇಶೀಯ ಪೇಟೆಂಟ್ ಸಲ್ಲಿಕೆಯ ಸಂಖ್ಯೆಯು ಅಂತರರಾಷ್ಟ್ರೀಯ ಪೇಟೆಂಟ್ ಸಲ್ಲಿಕೆಯ ಸಂಖ್ಯೆಯನ್ನು ಮೀರಿಸಿದೆ. ಅಂದರೆ ಒಟ್ಟು 19796 ಪೇಟೆಂಟ್ ಅರ್ಜಿಗಳಲ್ಲಿ, 10706 ಅನ್ನು ಭಾರತೀಯ ಅರ್ಜಿದಾರರು ಸಲ್ಲಿಸಿದರೆ, 9090 ಅರ್ಜಿಗಳನ್ನು ವಿದೇಶಿಗರು ಸಲ್ಲಿಸಿದ್ದಾರೆ. ಇದನ್ನು ಈ ಕೆಳಗಿನಂತೆ ಸೂಚಿಸಲಾಗಿದೆ:

Image

ರೇಖಾಚಿತ್ರ: ಭಾರತೀಯ ಅರ್ಜಿದಾರರು ಮತ್ತು ಭಾರತೀಯೇತರ ಅರ್ಜಿದಾರರು ಸಲ್ಲಿಸಿದ ತ್ರೈಮಾಸಿಕವಾರು ಪೇಟೆಂಟ್ ಅರ್ಜಿಗಳು.

ನಾವಿನ್ಯತೆಯನ್ನು ಉತ್ತೇಜಿಸಿ ಅನುಸರಣೆಯ ಹೊರೆಯನ್ನು ಕಡಿಮೆ ಮಾಡುವ ಮೂಲಕ ಭಾರತದಲ್ಲಿ ʻಐಪಿಆರ್ʼ ಆಡಳಿತವನ್ನು ಬಲಪಡಿಸಲು ಕೈಗಾರಿಕೆ ಹಾಗು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (ಡಿಪಿಐಐಟಿ) ಮಾಡಿದ ನಿರಂತರ ಪ್ರಯತ್ನಗಳನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳು, ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು ಶ್ಲಾಘಿಸಿದ್ದಾರೆ. ʻಡಿಪಿಐಐಟಿʼ ಮತ್ತು ʻಐಪಿʼ ಕಚೇರಿಯ ಸಂಘಟಿತ ಪ್ರಯತ್ನವು ಸಮಾಜದ ಎಲ್ಲಾ ಸ್ತರಗಳಲ್ಲಿ ʻಐಪಿʼ ಜಾಗೃತಿಯನ್ನು ಹೆಚ್ಚಿಸಿದೆ. ಈ ಪ್ರಯತ್ನಗಳು ಒಂದು ಕಡೆ ʻಐಪಿಆರ್ʼ ಸಲ್ಲಿಕೆಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ʻಐಪಿʼ ಕಚೇರಿಗಳಲ್ಲಿ ಪೇಟೆಂಟ್ ಅರ್ಜಿಗಳ ಬಾಕಿಯನ್ನು ಕಡಿಮೆ ಮಾಡಿದೆ. ಈ ಪ್ರಯತ್ನವು ʻಜಾಗತಿಕ ನಾವಿನ್ಯತೆ ಸೂಚ್ಯಂಕʼದ ಅಗ್ರ 25 ರಾಷ್ಟ್ರಗಳಲ್ಲಿ ಸ್ಥಾನ ಪಡೆಯುವ ಭಾರತದ ಮಹತ್ವಾಕಾಂಕ್ಷೆಯ ಗುರಿಯತ್ತ ದೇಶವನ್ನು ಒಂದು ಹೆಜ್ಜೆ ಹತ್ತಿರಕ್ಕೆ ಕೊಂಡೊಯ್ಯುತ್ತದೆ ಎಂದು ಅವರು ಉಲ್ಲೇಖಿಸಿದರು.

ಭಾರತದ ಐಪಿ ಆಡಳಿತವನ್ನು ಪುಷ್ಟೀಕರಿಸಲು ಕಳೆದ ಹಲವು ವರ್ಷಗಳಲ್ಲಿ ಸರಕಾರವು ಕೆಲವು ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದ್ದು, ಇವುಗಳಲ್ಲಿ ಆನ್‌ಲೈನ್ ಫೈಲಿಂಗ್ ಮೇಲೆ ಶೇ.10ರಷ್ಟು ರಿಯಾಯಿತಿ; ನವೋದ್ಯಮಗಳು, ಸಣ್ಣ ಘಟಕಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಶೇ.80ರಷ್ಟು ಶುಲ್ಕ ರಿಯಾಯಿತಿ; ನವೋದ್ಯಮಗಳು ಮತ್ತು ʻಎಂಎಸ್‌ಎಂಇʼಗಳ ಜೊತೆಗೆ ಇತರ ವಿಭಾಗಗಳಿಗೆ ತ್ವರಿತ ಪರೀಕ್ಷೆಯ ನಿಬಂಧನೆಗಳು ಮಂತಾದವು ಸೇರಿವೆ.

ರಾಷ್ಟ್ರೀಯ ʻಐಪಿಆರ್ʼ ನೀತಿ ಮತ್ತು ಸರಕಾರವು ಮಾಡಿದ ಪ್ರಯತ್ನಗಳಿಂದಾಗಿ ಈ ಕೆಳಗಿನ ಸಾಧನೆಗಳ ಸಾಕಾರ ಸಾಧ್ಯವಾಗಿದೆ:

•        ಪೇಟೆಂಟ್ ಸಲ್ಲಿಕೆಯು 2014-15 ರಲ್ಲಿ 42763 ರಿಂದ 2021-22 ರಲ್ಲಿ 66440 ಕ್ಕೆ ಏರಿದೆ, ಇದು 7 ವರ್ಷಗಳ ಅವಧಿಯಲ್ಲಿ 50% ರಷ್ಟು ಹೆಚ್ಚಾಗಿದೆ

•        2014-15 (5978)ಕ್ಕೆ ಹೋಲಿಸಿದರೆ 2021-22ರಲ್ಲಿ (30,074) ಪೇಟೆಂಟ್‌ಗಳ ಮಂಜೂರಾತಿಯಲ್ಲಿ ಸುಮಾರು ಐದು ಪಟ್ಟು ಹೆಚ್ಚಳವಾಗಿದೆ.

•        ವಿವಿಧ ತಾಂತ್ರಿಕ ಕ್ಷೇತ್ರಗಳಿಗೆ ಪೇಟೆಂಟ್ ಪರೀಕ್ಷೆಯ ಸಮಯವನ್ನು ಡಿಸೆಂಬರ್ 2016ರಲ್ಲಿ 72 ತಿಂಗಳುಗಳಿಂದ ಪ್ರಸ್ತುತ 5-23 ತಿಂಗಳಿಗೆ ತಗ್ಗಿಸಲಾಗಿದೆ.

•        ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತದ ಶ್ರೇಯಾಂಕವು 2015-16ರಲ್ಲಿ 81ನೇ ಸ್ಥಾನದಿಂದ 2021ರಲ್ಲಿ 46ನೇ ಸ್ಥಾನಕ್ಕೆ (+35 ಶ್ರೇಯಾಂಕಗಳು) ಏರಿದೆ.

ರೇಖಾಚಿತ್ರ: ಹಲವು ವರ್ಷಗಳಲ್ಲಿ ಪೇಟೆಂಟ್ ಅರ್ಜಿಗಳ ಸಲ್ಲಿಕೆ ಮತ್ತು ಮಂಜೂರಾತಿ

***(Release ID: 1816016) Visitor Counter : 177