ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತಿನ ಅಹ್ಮದಾಬಾದಿನಲ್ಲಿರುವ ಎಸ್.ಜಿ.ವಿ.ಪಿ. ಗುರುಕುಲದಲ್ಲಿ ಭಾವ ವಂದನ ಪರ್ವದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಸಂದೇಶದ ಕನ್ನಡ ಅವತರಣಿಕೆ

Posted On: 20 MAR 2022 10:30PM by PIB Bengaluru

ಜೈ ಸ್ವಾಮಿನಾರಾಯಣ!

ಪೂಜ್ಯ ಸಂತರೇ ಮತ್ತು ಎಲ್ಲಾ ಸಹೋದರಿಯರೇ ಮತ್ತು ಸಹೋದರಿಯರೇ,

ಇಂದು ನಾನು “ಭಾವ ವಂದನ” ಎಂಬ ಪವಿತ್ರ ಹಬ್ಬವನ್ನು ನೋಡುತ್ತಿದ್ದೇನೆ. ಪೂಜ್ಯ ಮಾಧವ ಪ್ರಿಯ ದಾಸ್ ಜೀ ಮಹಾರಾಜ್ ಅವರು ಪ್ರೇರಣಾದಾಯಕವಾದಂತಹ ಪುಸ್ತಕ “ಶ್ರೀ ಧರ್ಮಜೀವನ ಗಾಥಾ”ದಲ್ಲಿ ಬಹಳ ಸುಂದರವಾಗಿ ಗುರುದೇವ್ ಶಾಸ್ತ್ರೀಜಿ ಅವರ ಸಾಧನೆಗಳು, ಸಂಯಮ ಮತ್ತು ಸಮಾಜಕ್ಕೆ ಅವರ ಅರ್ಪಣಾಭಾವದ ಬಗ್ಗೆ ಬರೆದಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸಂತೋಷದಿಂದ ಪಾಲ್ಗೊಂಡಿರುವ ನಿಮ್ಮಲ್ಲಿ ಒಬ್ಬನಾಗಿರುವುದು  ನನಗೆ ಬಹಳ ಸಂತೋಷದ ಸಂಗತಿಯಾಗಿರುತ್ತಿತ್ತು, ಆದರೆ ಸಮಯದ ಮಿತಿಯಿಂದಾಗಿ, ಕೆಲವೊಮ್ಮೆ ಇಂತಹ ಆಸೆಗಳನ್ನು ಕೈಬಿಡಬೇಕಾಗುತ್ತದೆ. ಪೂಜ್ಯ ಶಾಸ್ತ್ರೀ ಜೀ ಕರ್ತವ್ಯಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದಾರೆ ಮತ್ತು ನಾನದಕ್ಕೆ ಬದ್ಧನಾಗಿದ್ದೇನೆ.

ಇಲ್ಲಿ, ಈ ಪವಿತ್ರ ಸಭೆಯಲ್ಲಿರುವ ಪ್ರತಿಯೊಬ್ಬರಿಗೂ ವಿಶೇಷವಾಗಿ ಪೂಜ್ಯ ಮಾಧವಪ್ರಿಯ ದಾಸ್ ಜೀ  ಅವರಿಗೆ ಈ ಪ್ರಯತ್ನಗಳಿಗಾಗಿ ನಾನು ನನ್ನ ಅಭಿನಂದನೆಗಳು ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ವೃತ್ತಾಂತ ಎಂದು ದಾಖಲಾಗದ ಅನೇಕ ಸುಂದರ ಸಂಗತಿಗಳು ನಮ್ಮ ಭಾರತದಲ್ಲಿವೆ. ಇವು ಸ್ಮರಣೆಯಲ್ಲಿರುತ್ತವೆ ಮತ್ತು ತಲೆಮಾರುಗಳ ಮೂಲಕ ರವಾನೆಯಾಗುತ್ತವೆ. ಆದರೆ ಅವೆಲ್ಲವುಗಳನ್ನು ದಾಖಲೀಕರಣ ಮಾಡಬೇಕು ಮತ್ತು ಅದು ಸಾಹಿತ್ಯದ ರೂಪದಲ್ಲಿರಬೇಕು. ಶಾಸ್ತ್ರೀಜಿ ಮಹಾರಾಜರು ನಮ್ಮೊಂದಿಗೆ ಇದ್ದಾರೆ ಎಂಬ ಭಾವನೆ ಬರುತ್ತದೆ. ನಾವು (ಈ ಪುಸ್ತಕವನ್ನು ) ಓದಿದಾಗ ಶಾಸ್ತ್ರೀಜಿ ಮಹಾರಾಜ್ ಏನು ಹೇಳಿರುವರೆಂಬುದನ್ನು ಅರ್ಥ ಮಾಡಿಕೊಳ್ಳುತ್ತೇವೆ. ಮತ್ತು ನಾವು ಅವರನ್ನು ಅನುಸರಿಸಬೇಕು. ಅದೇ ರೀತಿ ನಾವು ಶಾಸ್ತ್ರೀಜಿ ಅವರು ಏನು ಮಾಡಬಾರದು ಎಂದು ಹೇಳಿದ್ದಾರೋ, ನಿಷೇಧಿಸಿದ್ದಾರೋ  ಅದನ್ನು ನಾವು ಮಾಡಲಾಗದು. ಅದು ಬಹಳ ಸೂಕ್ಷ್ಮ ವಿವರಗಳನ್ನು ಒಳಗೊಂಡಿದೆ.  ಅದರಲ್ಲೂ ವಿಶೇಷವಾಗಿ “ಸತ್ಸಂಗ” (ಪವಿತ್ರ ಸಮಾವೇಶ) ಮತ್ತು ತಪಸ್ಸಿನ ಹುರುಪನ್ನು ಒಳಗೊಂಡ ಉತ್ಸಾಹಭರಿತ ಜೀವನದ ಬಗ್ಗೆ ಮತ್ತು ಸದಾ ಸಮಾಜದ ಬಗ್ಗೆ ಕಳಕಳಿ ಇರುವ, ಮತ್ತು ಅದಕ್ಕೆ ಪ್ರೇರೇಪಣೆ ನೀಡುವ ಬಗ್ಗೆ  ಸಹಿತ ಅನೇಕ ಸಣ್ಣ ವಿವರಗಳೂ ಇದರಲ್ಲಿವೆ. ಹೀಗೆ ಈ ಸಾಹಿತ್ಯ ಬಹಳ ಅಮೂಲ್ಯ ಹೂವಿನ ರೂಪದಲ್ಲಿ ನಮಗೆ ಹಸ್ತಾಂತರಿಸಲ್ಪಟ್ಟಿದೆ. ಇದರ ಮೂಲಕ ನಾವು ಅಪರಿಮಿತ ಜ್ಞಾನವನ್ನು ಪಡೆಯಬಹುದು. ನಮ್ಮ ಕುಟುಂಬಗಳು ಮತ್ತು ತಲೆಮಾರುಗಳು ಶಾಸ್ತ್ರೀಜಿ ಮಹಾರಾಜ್ ಅವರ ಜೀವನವನ್ನು ತಿಳಿದುಕೊಳ್ಳುವುದು ನಮ್ಮ ಆಶಯವಾಗಬೇಕಾಗಿದೆ. ಶಾಸ್ತ್ರೀಜಿ ಮಹಾರಾಜ್ ಅವರ ಬೋಧನೆಗಳಲ್ಲಿ ಎರಡು ಬಹಳ ಮುಖ್ಯ ಸಂಗತಿಗಳಿವೆ. ಅವುಗಳನ್ನು ನಾವು ಜೀವನ ಮಂತ್ರಗಳೆಂದು ಕರೆಯಬಹುದು. ನಾವು ಏನನ್ನೇ ಮಾಡಲಿ ಅದರಲ್ಲಿ ಅವರು ಸದಾ ’ಸರ್ವಜನ ಹಿತಾಯ” (ಸರ್ವರ ಕಲ್ಯಾಣ) ಇರಬೇಕು ಎಂಬುದನ್ನು ಒತ್ತಿ ಹೇಳುತ್ತಿದರು.

ಬಹಳ ಪ್ರಾಮುಖ್ಯತೆ ನೀಡಿ ಹೇಳಲಾಗಿರುವ ಇನ್ನೊಂದು ಸಂಗತಿ ಎಂದರೆ “ಸದ್ವಿದ್ಯಾ ಪ್ರವರ್ತನಾಯ”. ನನ್ನ “ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್” ಚಿಂತನೆ ಕೂಡಾ ಎಲ್ಲರ ಕಲ್ಯಾಣವನ್ನು ಒಳಗೊಂಡಿದೆ. ಶಾಸ್ತ್ರೀಜಿ ಕೂಡಾ “ಸರ್ವಜನ್ ಹಿತಾಯ” (ಎಲ್ಲರ ಕಲ್ಯಾಣ) ಮತ್ತು “ಸರ್ವಜನ ಸುಖಾಯ” (ಎಲ್ಲರ ಸಂತೋಷ) ಎಂಬ ತತ್ವಜ್ಞಾನವನ್ನು ಆಧರಿಸಿ ಇದನ್ನೇ ಹೇಳಿದ್ದಾರೆ. ಜ್ಞಾನ, ಆರಾಧನೆ ಮತ್ತು ಕಲಿಕೆ ಶತಮಾನಗಳಿಂದ ನಮ್ಮ ರಾಷ್ಟ್ರದ ಪ್ರಧಾನ ಮಂತ್ರವಾಗಿದೆ ಎಂಬುದು ಒಂದು ಸಹಜ ವಸ್ತುಸ್ಥಿತಿ.ನಮ್ಮ ಎಲ್ಲಾ ಋಷಿ ಮುನಿಗಳು ಒಂದಲ್ಲ ಒಂದು “ಗುರುಕುಲ” ಸಂಪ್ರದಾಯಗಳಿಗೆ ಸೇರಿದವರಾಗಿದ್ದಾರೆ ಮತ್ತು ಅದು ಒಂದು ರೀತಿಯಲ್ಲಿ ಸಾಂಪ್ರದಾಯಿಕ ವಿಶ್ವವಿದ್ಯಾಲಯ.

ಈ “ಗುರುಕುಲ” ಸಂಪ್ರದಾಯದಲ್ಲಿ, ಸಮಾಜದ ಎಲ್ಲಾ ವಲಯಗಳ ಜನರು, ರಾಜರ ಮಕ್ಕಳು ಮತ್ತು ಜನಸಾಮಾನ್ಯರ ಮಕ್ಕಳೂ ಜೊತೆಯಲ್ಲಿ ಓದುತ್ತಿದ್ದರು. ಸ್ವಾಮಿನಾರಾಯಣ ಸಂಸ್ಥೆಗಳಲ್ಲಿ ಗುರುಕುಲ ಸಂಪ್ರದಾಯದ ಸಂಪರ್ಕ ಕೊಂಡಿ ನಮ್ಮ ಭವ್ಯ ಭೂತಕಾಲ ಮತ್ತು ಉಜ್ವಲ ಭವಿಷ್ಯವನ್ನು ಜೋಡಿಸುತ್ತದೆ. ಈ ಸಂಪ್ರದಾಯ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಪ್ರೇರಣೆಯನ್ನು ಈ ದೇಶದ ಜನಸಾಮಾನ್ಯರಿಗೆ ನೀಡುತ್ತದೆ. ಗುರುಕುಲವು ಈಗ ವಿಶ್ವದಾದ್ಯಂತ ಹರಡಿ ಹೋಗಿರುವ ಅನೇಕ ಅಮೂಲ್ಯ ರತ್ನಗಳನ್ನು ನೀಡಿದೆ. ಇದು ಶಾಸ್ತ್ರೀಜಿ ಮಹಾರಾಜ್ ಅವರ ದೈವಿಕ ಚಿಂತನೆ. ಯಾರೇ ಆದರೂ ವಿಶ್ವದ ಯಾವುದೇ ಭಾಗಕ್ಕೆ ಹೋದರೂ ಮತ್ತು ಭಾರತೀಯ ಸಮುದಾಯವನ್ನು ಅವರು ಭೇಟಿಯಾದರೆ ಅಲ್ಲಿರುವ ಒಂದಿಬ್ಬರು ವ್ಯಕ್ತಿಗಳಾದರೂ ತಾವು ಬಡ ಕುಟುಂಬಕ್ಕೆ ಸೇರಿದವರು ಮತ್ತು ಗುರುಕುಲದಲ್ಲಿ ಬೆಳೆದವರು ಎಂದು ಹೇಳುತ್ತಾರೆ ಹಾಗು ಅವರ ಬೆಳವಣಿಗೆಯ ಖ್ಯಾತಿಯನ್ನು ಗುರುಕುಲಕ್ಕೆ ನೀಡುತ್ತಾರೆ.

ನಾನು ಏನನ್ನು ಹೇಳಲು ಬಯಸುತ್ತಿದ್ದೇನೆ ಎಂದರೆ, ಶಾಸ್ತ್ರೀಜಿ ಅವರು ಬರೇ ಬೋಧಿಸಿದ್ದಲ್ಲ, ಧರ್ಮೋಪದೇಶ ನೀಡಿದ್ದಲ್ಲ, ಅವರ ಬದುಕೇ ಶಿಸ್ತಿನ ಮತ್ತು ಸಂಯಮದ ನಿರಂತರ ಧಾರೆ. ಇದರ ಪರಿಣಾಮವಾಗಿ, ಶಾಸ್ತ್ರೀಜಿ ಮಹಾರಾಜ್ ಆಧ್ಯಾತ್ಮಿಕ ರೂಪದಲ್ಲಿ ನಿರಂತರವಾಗಿ ನಮ್ಮೊಂದಿಗೆ ಇದ್ದಾರೆ. ಈ ಸಾಹಿತ್ಯ ನಮಗೆ ಶಾಸ್ತ್ರೀಜಿ ಮಹಾರಾಜರ ಬೋಧನೆಯನ್ನು ನೆನಪಿಸುವುದಲ್ಲದೆ ನಮ್ಮ ಕರ್ತವ್ಯಗಳ ಬಗ್ಗೆಯೂ ಪ್ರೇರಣೆಯನ್ನು ನೀಡುತ್ತದೆ.

ನಿಮ್ಮೊಂದಿಗೆ ನಾನು ಬಹಳ ನಿಕಟವಾದ ಸಂಬಂಧವನ್ನು ಹೊಂದಿದ್ದೇನೆ.ನಾನು ಎಸ್.ಜಿ.ವಿ.ಪಿ.ಗೆ ಆಗಾಗ ನಿಯಮಿತವಾಗಿ ಭೇಟಿ ಕೊಡುತ್ತಿದ್ದೇನೆ ಮತ್ತು ನಮ್ಮ ಮಾಜಿ ಶಾಸಕರು ಆಯೋಜಿಸುತ್ತಿದ್ದ ಅಭ್ಯಾಸ ವರ್ಗದಲ್ಲಿಯೂ ಪಾಲ್ಗೊಂಡಿದ್ದೇನೆ. ಇದು ಕಂಪನದ ಅನುಭವ ನೀಡುವಂತಹ ಪವಿತ್ರ ಸ್ಥಳ. ನಾನು ಕೂಡಾ ಆಧುನಿಕತೆಯನ್ನು ಬಯಸುತ್ತೇನೆ ಮತ್ತು ಗುರುಕುಲಗಳೂ ಆಧುನೀಕರಣಗೊಂಡಿರುವುದನ್ನು ನಾನು ಕಂಡಿದ್ದೇನೆ. ಧಾರ್ಮಿಕ ಕಾರ್ಯಕ್ರಮಗಳು, ಸಭೆಗಳು ಇತ್ಯಾದಿಗಳು ನಡೆಯುವಾಗ ಏಕ ಕಾಲಕ್ಕೆ ಮಕ್ಕಳು ಎಸ್.ಜಿ.ರಸ್ತೆಯ ಬೆಳಕಿನಲ್ಲಿ ಕ್ರಿಕೆಟ್ ಆಡುವುದನ್ನು  ಮತ್ತು ವಾಲಿಬಾಲ್  ಆಡುವುದನ್ನು ನೋಡುವಾಗ ನನಗೆ ಸಂತೋಷವಾಗುತ್ತದೆ. ಇದು ಶಾಸ್ತ್ರೀಜಿ ಮಹಾರಾಜ್ ಅವರ ಪ್ರೇರಣೆ ಮತ್ತು ಸಂಪ್ರದಾಯ ಮತ್ತು ಪ್ರತೀ ತಲೆಮಾರು ಕೂಡಾ ಅದರಂತೆ ಬದಲಾವಣೆಗಳನ್ನು ಮಾಡಿಕೊಂಡಿದೆ. ನಿಂತ ನೀರಾಗುವುದಕ್ಕೆ ಬದಲು ಅವರು ಪರಿವರ್ತನೆಯನ್ನು ಅಳವಡಿಸಿಕೊಂಡಿದ್ದಾರೆ. ಪ್ರಾಯೋಗಿಕ ಪರಿಹಾರಗಳಿಗಾಗಿ ಎದುರು ನೋಡುವುದು ಸ್ವಾಮಿನಾರಾಯಣ್ ಅವರ ವೈಶಿಷ್ಟ್ಯ.

ಪ್ರತಿಯೊಬ್ಬರೂ ಕಾಣಬಹುದಾದಂತಹ ಸುಂದರ ಫಲಿತಾಂಶ ಅಲ್ಲಿದೆ. ಅಲ್ಲಿ ಈಗ ಬಹಳ ದೊಡ್ಡ “ಸತ್ಸಂಗ” ಕುಟುಂಬವಿದೆ. ನಿಮಗೆ ಗೊತ್ತಿದೆ, ಈ ಬಾರಿ ವೈಯಕ್ತಿಕವಾಗಿ ಹಾಜರಿಲ್ಲದಿದ್ದರೂ,  ನಾನು ನಿಮ್ಮಲ್ಲಿ ಒಬ್ಬನಾಗಿರುವಾಗ ಖಾಲಿ ಕೈಯಲ್ಲಿ ಮರಳಿ ಬಂದದ್ದಿಲ್ಲ. ನಾನು ಏನನ್ನಾದರೂ ಕೇಳುತ್ತೇನೆ ಮತ್ತು ಮಾಧವಪ್ರಿಯ ದಾಸ್ ಜೀ ಅವರು ಮತ್ತು ಬಾಲಸ್ವಾಮಿ ನನಗೆ ಬೆಂಬಲ ನೀಡುತ್ತಾರೆ ಎಂಬುದು ನನಗೆ ಖಚಿತವಾಗಿ ಗೊತ್ತಿದೆ. ನಾನು ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿದ್ದರೆ ನಾನಿದನ್ನು ಗಟ್ಟಿಯಾಗಿ ಹೇಳುತ್ತಿದ್ದೆ. ಆದರೆ ಇಂದು ಇದನ್ನು ನಾನು ಗುರುಕುಲದಿಂದ ಪದವೀಧರರಾಗಿ ಹೊರಬರುತ್ತಿರುವವರಿಗೆ ಮತ್ತು ಅವರ ಕುಟುಂಬದವರಿಗೆ ಹೇಳುತ್ತಿದ್ದೇನೆ. ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಸಂತರು ಕೂಡಾ ಸೂಕ್ತ ವಾತಾವರಣ ನಿರ್ಮಾಣದ ಮೂಲಕ ತಮ್ಮ ಕೊಡುಗೆ ನೀಡಿದ್ದಾರೆ. ಸ್ವಾಮಿನಾರಾಯಣರ ಬೋಧನೆಗಳಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ನೀಡಿದಂತಹ ಸಮಾಜ ಸೇವೆ ಇದೆ.ಇಂದು ನಾನು ಗುರುಕುಲಕ್ಕೆ, ಧಾರ್ಮಿಕ ಸಮಾವೇಶಗಳಿಗೆ, ವಿದ್ಯಾರ್ಥಿಗಳಿಗೆ ಮತ್ತು ಅವರ ಕುಟುಂಬದವರಿಗೆ ನಮ್ಮ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಒಂದು ಕೋರಿಕೆಯನ್ನು ಮಾಡಲು ಬಯಸುತ್ತೇನೆ. ಕೊರೊನಾ ಅಥವಾ ಉಕ್ರೇನ್ –ರಶ್ಯಾ ಘಟನೆಗಳಿಂದಾಗಿ ಜಗತ್ತು ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಅಲ್ಲಿ ಬಹಳ ಅನಿರ್ದಿಷ್ಟತೆ ಇದೆ ಮತ್ತು ನಮ್ಮ ಮೇಲೆ ಇದರ ಪರಿಣಾಮ ಏನು ಎಂಬುದನ್ನು ಕಲ್ಪಿಸಿಕೊಳ್ಳಲು ಕಷ್ಟವಾಗುತ್ತಿದೆ. ಯಾರೊಬ್ಬರೂ ಇದರ ಪರಿಣಾಮಗಳಿಂದ ತಪ್ಪಿಸಿಕೊಳ್ಳಲಾಗದಷ್ಟು ಜಗತ್ತು ಸಣ್ಣದಾಗಿದೆ.

ಸ್ವಾವಲಂಬನೆಯೊಂದೇ ದಾರಿ. ನಾವು ನಮ್ಮ ಆವಶ್ಯಕತೆಗಳನ್ನು ಈಡೇರಿಸಲು ನಮ್ಮನ್ನು ನಾವು ಬಲಿಷ್ಟಗೊಳಿಸಿಕೊಳ್ಳಬೇಕು. ಮತ್ತು ಆಗ ಮಾತ್ರ ದೇಶ ಉಳಿಯುತ್ತದೆ. ಆತ್ಮ ನಿರ್ಭರ ಭಾರತ್ ಆಂದೋಲನ ಶಾಸ್ತ್ರೀಜಿ ಮಹಾರಾಜ್ ಅವರ ಪ್ರೇರಣೆಯೊಂದಿಗೆ ಮುಂದುವರಿಸಿಕೊಂಡು ಹೋಗಲು ಸಾಧ್ಯವಿದೆ. ನಾನು ಮತ್ತೊಂದು ಸಂಗತಿಯನ್ನು ಪುನರುಚ್ಛರಿಸುತ್ತೇನೆ, ಅದೆಂದರೆ ವೋಕಲ್ ಫಾರ್ ಲೋಕಲ್. ಗುರುಕುಲದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಅವರ ಕುಟುಂಬದವರಿಗೆ ಪ್ರತೀ ದಿನ ಬಳಸುವ ವಸ್ತುಗಳ ಪಟ್ಟಿ ಮಾಡಿಕೊಳ್ಳುವಂತೆ  ನಾನು ಹೇಳಲಿಚ್ಛಿಸುತ್ತೇನೆ. ಅದರಲ್ಲಿ ನಮ್ಮ ಮನೆಯಲ್ಲಿರುವಂತಹ ಆಮದಿತ ವಸ್ತುಗಳನ್ನು ಕಂಡು ಹುಡುಕಿ. ಇವುಗಳಲ್ಲಿ ಅನೇಕ ಉತ್ಪಾದನೆಗಳು ನಮ್ಮ ದೇಶದಲ್ಲಿ ದೊರೆಯುತ್ತವೆ. ಆದರೆ ಅವುಗಳ ಬಗ್ಗೆ ನಮಗೆ ಅರಿವಿಲ್ಲ.

ನಾವು ಸುಡುವಂತಹ ಸುಡುಮದ್ದುಗಳು, ಪಟಾಕಿಗಳು ವಿದೇಶಿ ನಿರ್ಮಿತ ಎಂಬುದು ಕೂಡಾ ನಮಗೆ ಗೊತ್ತಿಲ್ಲ. ಪಟ್ಟಿ ಮಾಡಿದರೆ ನಿಮಗೆ ಆಶ್ಚರ್ಯವಾಗಬಹುದು.ಗುರುಕುಲದೊಂದಿಗೆ ಇರುವವರು ಭಾರತದ ಮಣ್ಣಿನ ಸುವಾಸನೆ ಇರುವ, ಭಾರತೀಯರ ಬೆವರನ್ನು ಹೊಂದಿರುವ  ಉತ್ಪಾದನೆಗಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂಬುದು ನನ್ನ ನಿರೀಕ್ಷೆಯಾಗಿದೆ. ಮತ್ತು ಅವುಗಳು ಭಾರತದ ಮಣ್ಣಿನಲ್ಲಿ ತಯಾರಾದಂತಹವಾಗಿರಬೇಕು. ನಾವು ಅಂತಹ ಉತ್ಪಾದನೆಗಳನ್ನು ಯಾಕೆ ಬಳಸಬಾರದು?. ವೋಕಲ್ ಫಾರ್ ಲೋಕಲ್ ಎಂಬುದು ದೀಪಾವಳಿ ದೀಪಗಳನ್ನು ಕೊಳ್ಳುವುದಕ್ಕಷ್ಟೇ ಸೀಮಿತವಾಗಬಾರದು. ನಾವು ಸ್ಥಳಿಯವಾಗಿ ತಯಾರಾದಂತಹ ಎಲ್ಲ ಉತ್ಪನ್ನಗಳನ್ನು ಖರೀದಿಸಬೇಕು. ಇದರಿಂದ ಅನೇಕ ಮಂದಿಗೆ ಉದ್ಯೋಗ ಸಿಗುತ್ತದೆ. ಸ್ವಾವಲಂಬನೆಯ ವೇಗ ಹೆಚ್ಚುತ್ತದೆ ಮತ್ತು  ದೇಶ ಕೂಡಾ ಬಲಿಷ್ಟವಾಗುತ್ತದೆ.

ಎರಡನೇಯದಾಗಿ, ಏಕ ಬಳಕೆ ಪ್ಲಾಸ್ಟಿಕ್ ಗೆ ಸಂಬಂಧಿಸಿ ನಿಮ್ಮ ಸಹಾಯ ಬೇಕಾಗುತ್ತದೆ. ಸ್ವಚ್ಛತಾ ಆಂದೋಲನ ಎಂದರೆ ಗುರುಕುಲದಲ್ಲಿಯ ನಮ್ಮ ಕ್ಯಾಂಪಸ್ ಗಳನ್ನು, ದೇವಾಲಯಗಳನ್ನು  ಸ್ವಚ್ಛವಾಗಿಟ್ಟುಕೊಂಡಿರುವುದು ಮಾತ್ರ ಅಲ್ಲ. ನಾವು ಒಂದು ತಂಡವಾಗಿ ವಾರದಲ್ಲೊಂದು ದಿನ ಅಥವಾ ತಿಂಗಳಲ್ಲಿ ಒಂದು ದಿನದಲ್ಲಿ ಎರಡು ಗಂಟೆಗಳನ್ನು ಅಲ್ಲಿ ಸ್ವಚ್ಛತೆಗಾಗಿ ವಿನಿಯೋಗಿಸಬೇಕು. ನಮ್ಮಲ್ಲಿ ಯಾವುದಕ್ಕೂ ಕೊರತೆ ಇಲ್ಲ. ನಿಮ್ಮಲ್ಲಿ ವಾಹನಗಳಿವೆ, ಎಲ್ಲವೂ ಇವೆ. ಕೆಲವೊಮ್ಮೆ ನೀವು ಏಕತಾ ಪ್ರತಿಮೆಗೆ ಭೇಟಿ ನೀಡುವುದಕ್ಕೆ ನಿರ್ಧಾರ ಮಾಡಬಹುದು, ಆದರೆ ಅದು ಆ ಸ್ಥಳ ನೋಡುವುದಕ್ಕೆ ಬದಲು ಅಲ್ಲಿಯ ಸ್ವಚ್ಛತೆ ನೋಡುವುದಕ್ಕಾಗಿ. ಮುಂದಿನ ಬಾರಿ ಅದು ಅಂಬಾಜಿ ಭೇಟಿಗೂ ಆಗಬಹುದು. ನಮ್ಮ ನಗರದಲ್ಲಿ ಹಲವಾರು ಪ್ರತಿಮೆಗಳಿವೆ. ಬಾಬಾ ಅಂಬೇಡ್ಕರ್,ಲಾಲ್ ಬಹಾದ್ದೂರ್ ಶಾಸ್ತ್ರಿ, ಮತ್ತು ಭಗತ್ ಸಿಂಗ್ ಅವರ ಪ್ರತಿಮೆಗಳನ್ನು ಸ್ವಚ್ಛವಾಗಿಡುವುದು ನಮ್ಮ ಜವಾಬ್ದಾರಿ. ಸ್ವಚ್ಛತೆಗೆ ಅನೇಕ ಮಾದರಿಗಳಿವೆ. ನಾವು ಪ್ರಸಾದವನ್ನು ಯಾಕೆ ಪ್ಲಾಸ್ಟಿಕ್ ಚೀಲಗಳಲ್ಲಿ ನೀಡಬೇಕು. ನಮ್ಮ ಮನೆಗಳಲ್ಲಿ ಪ್ಲಾಸ್ಟಿಕ್ ಬ್ಯಾಗ್ ಗಳು ಯಾಕಿರಬೇಕು?.’ಸತ್ಸಂಗ”ದ ಸಂಸ್ಕೃತಿಯಲ್ಲಿ ನಂಬಿಕೆ  ಇಟ್ಟಿರುವವರು ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಬಳಸಬಾರದು.

ಗುರುಕುಲದ ಎಲ್ಲಾ ಮಕ್ಕಳೂ ಮತ್ತು ಮಾಧವಪ್ರಿಯ ದಾಸ್ ಜೀ ಅಥವಾ ಯಾವುದೇ ಬೇರೆ ಸ್ವಾಮೀಜಿಗಳು ಗ್ರಾಮೀಣ ಹಿನ್ನೆಲೆಯವರು. ನಮ್ಮ ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ ಅವರು ಸಹಜ ಕೃಷಿಯ ಪ್ರಚಾರಕರು. ಭೂಮಿ ನಮ್ಮ ತಾಯಿ. ಮಾತೆಗೆ, ತಾಯಿಗೆ ಸೇವೆ ಮಾಡುವುದು ನಮ್ಮ ಜವಾಬ್ದಾರಿಯಲ್ಲವೇ? ನಾವು ಇನ್ನೆಷ್ಟು ಕಾಲ ಭೂ ಮಾತೆಗೆ ವಿಷವನ್ನು ನೀಡುತ್ತ ಆಕೆಯ  ಮೇಲೆ ದೌರ್ಜನ್ಯ ನಡೆಸುತ್ತಲೇ ಹೋಗುವುದು  ಎಂದು ಶಾಸ್ತ್ರೀಜಿ ಮಹಾರಾಜ್  ಕೇಳಿದ್ದಾರೆ.

ನಾವು ಭೂಮಿ ತಾಯಿಯನ್ನು ರಾಸಾಯನಿಕಗಳಿಂದ ಮುಕ್ತಗೊಳಿಸಬೇಕು. ಗಿರ್ ನ ಗೋವುಗಳಿಗಾಗಿ ನೀವು ಹಟ್ಟಿಯನ್ನು ಹೊಂದಿರಬಹುದು. ಮತ್ತು ಸಹಜ ಕೃಷಿಯ ವಿಧಾನದ ಬಗ್ಗೆ ಗುರುಕುಲದಲ್ಲಿ ನಿಮಗೆ ಹೇಳಿಕೊಟ್ಟಿರಬಹುದು. ಗುರುಕುಲದ ಜನರು ವಾರಕ್ಕೊಮ್ಮೆ ಹಳ್ಳಿಗಳಿಗೆ, ಗ್ರಾಮಗಳಿಗೆ ಈ ಆಂದೋಲನದ ಅಂಗವಾಗಿ ಭೇಟಿ  ನೀಡಿ ರೈತರಲ್ಲಿ ರಸಗೊಬ್ಬರಗಳ ಬಳಕೆಯ ವಿರುದ್ಧ, ರಾಸಾಯನಿಕಗಳ ಬಳಕೆ ಅಥವಾ ಕೀಟನಾಶಕಗಳ ಬಳಕೆಯ ವಿರುದ್ಧ ಜಾಗೃತಿ ಮೂಡಿಸಬೇಕು. ಇದು ಗುಜರಾತಿಗೆ ಮತ್ತು ದೇಶಕ್ಕೆ ಮಾಡುವ ಬಹಳ ದೊಡ್ಡ ಸೇವೆ ಎಂಬುದಾಗಿ ನಾನು ನಂಬುತ್ತೇನೆ. ಮತ್ತು ಇದು ಶಾಸ್ತ್ರೀಜಿ ಮಹಾರಾಜ್ ಅವರಿಗೆ ಸಲ್ಲಿಸುವ ನೈಜ ಶ್ರದ್ಧಾಂಜಲಿ. ಇಂದು ನಾನು ನಿಮ್ಮ ಮಧ್ಯದಲ್ಲಿರುವಾಗ, ನಾನು ನಿಮ್ಮಲ್ಲಿ ಕೋರಿಕೆಯೊಂದನ್ನು ಮಂಡಿಸಲು ಬಯಸುತ್ತೇನೆ. ನಾನಿದನ್ನು ಮಾಧವಪ್ರಿಯ ದಾಸ್ ಜೀ ಅವರ ಅಧಿಕಾರದೊಂದಿಗೆ ಹೇಳಬಲ್ಲೆ. ಇದು ನನ್ನ ಅಭ್ಯಾಸ, ಹವ್ಯಾಸ ಎಂದು ಹೇಳಿದರೆ ತಪ್ಪಾಗಲಾರದು. ಆದುದರಿಂದ ನಾನು ನಮ್ಮ ಗುರುಕುಲ, ಸತ್ಸಂಗಿಗಳಿಗೆ ಮತ್ತು ಅವರ ಕುಟುಂಬ ಸದಸ್ಯರಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಹೊಸ ರೀತಿಯಲ್ಲಿ ಆಚರಿಸಿ ಎಂದು ನಾನು ಹಕ್ಕಿನಿಂದ ಕರೆ ಕೊಡುತ್ತೇನೆ.

ನಾವು ಶಾಸ್ತ್ರೀಜಿ ಮಹಾರಾಜರ “ಸರ್ವಜನ ಹಿತಾಯ, ಸರ್ವಜನ ಸುಖಾಯ” ನಿರ್ಧಾರವನ್ನು ಈಡೇರಿಸಲು ಪ್ರಯತ್ನಿಸಬೇಕು. ವೈಯಕ್ತಿಕವಾಗಿ ಬರಲು ಸಾಧ್ಯವಾಗದೇ ಇರುವುದಕ್ಕಾಗಿ ನಾನು ಕ್ಷಮೆ ಕೋರುತ್ತೇನೆ. ಪ್ರತಿಯೊಬ್ಬರಿಗೂ ಭಾವ ವಂದನಾ ಪರ್ವದ ಶುಭಾಶಯಗಳು! ಎಲ್ಲರಿಗೂ ಧನ್ಯವಾದಗಳು.

ಜೈ ಶ್ರೀ ಸ್ವಾಮಿನಾರಾಯಣ!

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಸಂದೇಶದ ಭಾಷಾಂತರ. ಮೂಲ ಭಾಷಣವನ್ನು ಗುಜರಾತಿ ಭಾಷೆಯಲ್ಲಿ ಮಾಡಲಾಗಿದೆ.

***



(Release ID: 1809147) Visitor Counter : 169