ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ಸ್ಥಳಾಂತರ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಂತರರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿಯನ್ನು ಪರಿಷ್ಕರಿಸಿದ್ದು, ಉಕ್ರೇನ್‌ನಿಂದ ಸ್ಥಳಾಂತರಗೊಳ್ಳುವ ಭಾರತೀಯರಿಗೆ ವಿವಿಧ ವಿನಾಯಿತಿಗಳನ್ನು ಒದಗಿಸಿದೆ
ವಿಮಾನ ಹತ್ತು ಮೊದಲು ಕಡ್ಡಾಯ ನೆಗೆಟಿವ್ ʻಆರ್‌ಟಿಪಿಸಿಆರ್ʼ ಪರೀಕ್ಷೆ ಮತ್ತು ಭಾರತೀಯ ಪ್ರಜೆಗಳಿಗೆ ಲಸಿಕೆ ಪ್ರಮಾಣಪತ್ರಕ್ಕೆ ವಿನಾಯಿತಿ; ಹೊರಡುವ ಮೊದಲು ʻಏರ್-ಸುವಿಧಾʼ ಪೋರ್ಟಲ್‌ನಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡುವುದಕ್ಕೆ ವಿನಾಯಿತಿ ನೀಡಲಾಗಿದೆ
ಒಂದು ವೇಳೆ ಪ್ರಯಾಣಿಕರು ಆಗಮನ ಪೂರ್ವ ʻಆರ್‌ಟಿಪಿಸಿಆರ್ʼ ಪರೀಕ್ಷಾ ವರದಿಯನ್ನು ಸಲ್ಲಿಸಲು ಸಾಧ್ಯವಾಗದಿದ್ದರೆ ಅಥವಾ ತಮ್ಮ ಕೋವಿಡ್-19 ಲಸಿಕೆಯನ್ನು ಪೂರ್ಣಗೊಳಿಸದಿದ್ದರೆ, ಭಾರತಕ್ಕೆ ಬಂದ ನಂತರ 14 ದಿನಗಳ ವರೆಗೆ ತಮ್ಮ ಮಾದರಿಗಳನ್ನು ಸಲ್ಲಿಸಲು ಅನುಮತಿಸಲಾಗಿದೆ ಮತ್ತು ಆರೋಗ್ಯವನ್ನು ಸ್ವಯಂ ಮೇಲ್ವಿಚಾರಣೆ ಮಾಡಿಕೊಳ್ಳಲು ಸೂಚಿಸಲಾಗಿದೆ
2022ರ ಫೆಬ್ರವರಿ 28ರವರೆಗೆ ಉಕ್ರೇನ್‌ನಿಂದ 1156 ಭಾರತೀಯರು ಭಾರತಕ್ಕೆ ಆಗಮಿಸಿದ್ದಾರೆ, ಯಾವುದೇ ಪ್ರಯಾಣಿಕರನ್ನು ಪ್ರತ್ಯೇಕವಾಗಿ ಇರಿಸಲಾಗಿಲ್ಲ
Posted On:
28 FEB 2022 2:40PM by PIB Bengaluru
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ಗೃಹ ವ್ಯವಹಾರಗಳ ಸಚಿವಾಲಯದ ನಿಕಟ ಸಹಯೋಗದೊಂದಿಗೆ ಉಕ್ರೇನ್‌ನಿಂದ ಭಾರತೀಯರನ್ನು ಸ್ಥಳಾಂತರಿಸಲು ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಡ್ಡಾಯ ʻಅಂತಾರಾಷ್ಟ್ರೀಯ ಪ್ರಯಾಣ ಮಾರ್ಗಸೂಚಿʼಗಳನ್ನು ಪರಿಷ್ಕರಿಸಿದೆ ಮತ್ತು ಮಾನವೀಯ ಆಧಾರದ ಮೇಲೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಾರ್ಗಸೂಚಿಯಲ್ಲಿ ಈ ಕೆಳಗಿನ ವಿನಾಯಿತಿಗಳನ್ನು ಅನುಮತಿಸಲಾಗಿದೆ:
- ಪ್ರಸ್ತುತ 'ಅಂತಾರಾಷ್ಟ್ರೀಯ ಆಗಮನಕ್ಕಾಗಿ ಮಾರ್ಗಸೂಚಿಗಳ' ಭಾಗವಾಗಿ ನಿಗದಿಪಡಿಸಲಾಗಿರುವ ಕಡ್ಡಾಯ ಅವಶ್ಯಕತೆಗಳಲ್ಲಿ (ಪ್ರಿ-ಬೋರ್ಡಿಂಗ್ ನೆಗೆಟಿವ್ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿ ಅಥವಾ ಸಂಪೂರ್ಣವಾಗಿ ಲಸಿಕೆ ಪಡೆದ ಪ್ರಮಾಣಪತ್ರ) ಯಾವುದನ್ನೂ ಪೂರೈಸದ ಭಾರತೀಯ ಪ್ರಜೆಗಳಿಗೆ ಭಾರತಕ್ಕೆ ತೆರಳುವ ಮೊದಲು ʻಏರ್-ಸುವಿಧಾʼ ಪೋರ್ಟಲ್‌ನಲ್ಲಿ ಈ ದಾಖಲೆಗಳನ್ನು ಅಪ್‌ಲೋಡ್ ಮಾಡುವುದರಿಂದ ವಿನಾಯಿತಿ ನೀಡಲಾಗಿದೆ.
- ಇದಲ್ಲದೆ, ತಮ್ಮ ಕೋವಿಡ್-19 ಲಸಿಕೆಯನ್ನು ಪೂರ್ಣಗೊಳಿಸಿದ ವ್ಯಕ್ತಿಗಳಿಗೆ (ನಿರ್ಗಮನ/ಲಸಿಕೆಯ ದೇಶವನ್ನು ಲೆಕ್ಕಿಸದೆ) ಮುಂದಿನ 14 ದಿನಗಳ ವರೆಗೆ ತಮ್ಮ ಆರೋಗ್ಯವನ್ನು ಸ್ವಯಂ ಮೇಲ್ವಿಚಾರಣೆ ಮಾಡುವ ಸಲಹೆಯೊಂದಿಗೆ ಭಾರತಕ್ಕೆ ತಲುಪುವ ವಿಮಾನ ನಿಲ್ದಾಣದಿಂದ ನಿರ್ಗಮಿಸಲು ಅನುಮತಿ ನೀಡಲಾಗಿದೆ.
- ಒಂದು ವೇಳೆ ಪ್ರಯಾಣಿಕರಿಗೆ ಆಗಮನ ಪೂರ್ವ ʻಆರ್‌ಟಿಪಿಸಿಆರ್ʼ ಪರೀಕ್ಷಾ ವರದಿಯನ್ನು ಸಲ್ಲಿಸಲು ಸಾಧ್ಯವಾಗದಿದ್ದರೆ ಅಥವಾ ತಮ್ಮ ಕೋವಿಡ್-19 ಲಸಿಕೆಯನ್ನು ಪೂರ್ಣಗೊಳಿಸದಿದ್ದರೆ, ಭಾರತಕ್ಕೆ ಬಂದ ನಂತರ 14 ದಿನಗಳವರೆಗೆ ತಮ್ಮ ಆರೋಗ್ಯವನ್ನು ಸ್ವಯಂ ಮೇಲ್ವಿಚಾರಣೆ ಮಾಡಿಕೊಳ್ಳುವ ಸಲಹೆಯೊಂದಿಗೆ, ದೇಶಕ್ಕೆ ಆಗಮಿಸಿದಾಗ ತಮ್ಮ ಮಾದರಿಗಳನ್ನು ಸಲ್ಲಿಸಲು ಅವರಿಗೆ ಅನುಮತಿ ನೀಡಲಾಗಿದೆ. ಅಂಥವರ ವರದಿ ಪಾಸಿಟಿವ್ ಎಂದು ಬಂದರೆ, ಅಂತಹ ಪ್ರಕರಣಗಳನ್ನು ನಿಗದಿಪಡಿಸಿದ ಪ್ರೊಟೋಕಾಲ್ ಪ್ರಕಾರ ಅವರನ್ನು ವೈದ್ಯಕೀಯವಾಗಿ ನಿರ್ವಹಿಸಲಾಗುತ್ತದೆ.
ದೊಡ್ಡ ಸಂಖ್ಯೆಯ ವಲಸಿಗರು ಹಾಗೂ ಭಾರತೀಯ ಪ್ರಜೆಗಳು (ಮುಖ್ಯವಾಗಿ ವಿದ್ಯಾರ್ಥಿಗಳು) ಉಕ್ರೇನ್ ದೇಶವು ಎದುರಿಸುತ್ತಿರುವ ರಾಜಕೀಯ ಪ್ರಕ್ಷುಬ್ಧತೆಯಲ್ಲಿ ಸಿಲುಕಿಕೊಂಡಿದ್ದಾರೆ. ಉಕ್ರೇನ್‌ನಲ್ಲಿ ʻಏರ್‌ಮೆನ್‌ಗಳಿಗೆ ನೋಟಿಸ್ʼ ಅಥವಾ ʻಏರ್‌ಮಿಷನ್‌ಗಳಿಗೆ ನೋಟಿಸ್ʼ (ಎನ್‌ಒಟಿಎಎಂ) ಹೊರಡಿಸಿದ ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿಕೊಂಡಿರುವ ಈ ಭಾರತೀಯರನ್ನು ವಿಮಾನಗಳ ಮೂಲಕ ನೇರವಾಗಿ ಸ್ಥಳಾಂತರಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಪೋಲೆಂಡ್, ರೊಮೇನಿಯಾ, ಸ್ಲೊವಾಕಿಯಾ ಮತ್ತು ಹಂಗೇರಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಭಾರತೀಯ ಪ್ರಜೆಗಳನ್ನು ಉಕ್ರೇನ್‌ನಿಂದ ಕರೆತರಲು ಮತ್ತು ʻಆಪರೇಶನ್ ಗಂಗಾ ವಿಮಾನಗಳʼ ಅಡಿಯಲ್ಲಿ ತಮ್ಮ ದೇಶಗಳಿಂದ ಅವರನ್ನು ಕಳುಹಿಸುವ ವ್ಯವಸ್ಥೆ ಮಾಡುತ್ತಿವೆ.
2022ರ ಫೆಬ್ರವರಿ 28ರವರೆಗೆ (12:00 ಗಂಟೆಯವರೆಗೆ) ಉಕ್ರೇನ್‌ನಿಂದ ಭಾರತೀಯರನ್ನು ಹೊತ್ತ 5 ವಿಮಾನಗಳು (ಮುಂಬೈನಲ್ಲಿ ಒಂದು ಮತ್ತು ದೆಹಲಿಯಲ್ಲಿ ನಾಲ್ಕು) ಒಟ್ಟು 1156 ಪ್ರಯಾಣಿಕರೊಂದಿಗೆ ಭಾರತಕ್ಕೆ ಬಂದಿಳಿದಿವೆ. ಇಲ್ಲಿಯವರೆಗೆ ಯಾವುದೇ ಪ್ರಯಾಣಿಕರನ್ನು ಪ್ರತ್ಯೇಕವಾಗಿ ಇರಿಸಲಾಗಿಲ್ಲ.
***
(Release ID: 1801818)
Visitor Counter : 243
Read this release in:
English
,
Urdu
,
Hindi
,
Marathi
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam