ಪ್ರಧಾನ ಮಂತ್ರಿಯವರ ಕಛೇರಿ

ರಾಜ್ಯ ಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನ ಮಂತ್ರಿ ಅವರ ಉತ್ತರ

Posted On: 08 FEB 2022 9:50PM by PIB Bengaluru

ಗೌರವಾನ್ವಿತ ಅಧ್ಯಕ್ಷರೇ,

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಇಲ್ಲಿ ವ್ಯಾಪಕ ಚರ್ಚೆಗಳಾಗಿವೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ನನಗೆ ಅವಕಾಶ ನೀಡಿದ್ದಕ್ಕಾಗಿ ನಾನು ಬಹಳ ಕೃತಜ್ಞನಾಗಿದ್ದೇನೆ. ಗೌರವಾನ್ವಿತ ರಾಷ್ಟ್ರಪತಿಗಳು ದೇಶದಲ್ಲಿ ಜಾಗತಿಕ ಸಾಂಕ್ರಾಮಿಕದಂತಹ ಕಠಿಣ ಪರಿಸ್ಥಿತಿಯಲ್ಲಿ ಕೈಗೊಂಡ ಹಲವಾರು ಉಪಕ್ರಮಗಳ ಬಗ್ಗೆ ಸಂಕ್ಷಿಪ್ತ ವಿವರಗಳನ್ನು ಒದಗಿಸಿದ್ದಾರೆ. ಮತ್ತು ದಲಿತರ, ಬಡವರ, ಶೋಷಿತರ, ಮಹಿಳೆಯರ ಹಾಗು ದೇಶದ ಯುವಜನತೆಯ ಬದುಕಿನಲ್ಲಿ ಬದಲಾವಣೆ ತರಲು ಮತ್ತು ಅವರನ್ನು ಸಶಕ್ತರನ್ನಾಗಿಸಲು ಕೈಗೊಂಡ ಕ್ರಮಗಳನ್ನು ವಿವರಿಸಿದ್ದಾರೆ. ಇದು ಭರವಸೆ, ನಂಬಿಕೆ,ದೃಢ ನಿರ್ಧಾರ ಮತ್ತು ಅರ್ಪಣಾಭಾವದ ಆಶಯವನ್ನು ಎತ್ತಿ ಹಿಡಿದಿದೆ. ಹಲವಾರು ಗೌರವಾನ್ವಿತ ಸದಸ್ಯರು ಇದನ್ನು ವಿವರವಾಗಿ ಚರ್ಚಿಸಿದ್ದಾರೆ. ಗೌರವಾನ್ವಿತ ಖರ್ಗೇ ಜೀ ಬಹಳಷ್ಟು ಸಂಗತಿಗಳ ಬಗ್ಗೆ ಹೇಳಿದ್ದಾರೆ. ಆಂಶಿಕವಾಗಿ ದೇಶದ ಬಗ್ಗೆ, ಆಂಶಿಕವಾಗಿ ಪಕ್ಷದ ಬಗ್ಗೆ, ಮತ್ತು ಆಂಶಿಕವಾಗಿ ಅವರ ಬಗ್ಗೆ ಹೇಳಿದ್ದಾರೆ. ಸಮಯದ ಮಿತಿಯ ನಡುವೆಯೂ ಆನಂಧ ಶರ್ಮಾ ಜೀ, ತಮ್ಮ ಮಟ್ಟಿಗೆ ಉತ್ತಮ ಪ್ರಯತ್ನ ಮಾಡಿದ್ದಾರೆ. ಮತ್ತು ಅವರು ಹೇಳಿದ್ದಾರೆ, ದೇಶದ ಸಾಧನೆಗಳು ಗಮನಿಸಲ್ಪಡಬೇಕು ಎಂದಿದ್ದಾರೆ. ಶ್ರೀ ಮನೋಜ್ ಝಾ ಜೀ ಅವರು ಭಾಷಣ ರಾಜಕೀಯದಿಂದ ದೂರ ಇರಬೇಕು ಎಂಬ ಬಗ್ಗೆ ಕೆಲವು ಉತ್ತಮ ಸಲಹೆಗಳನ್ನು ಕೊಟ್ಟಿದ್ದಾರೆ. ಪ್ರಸನ್ನ ಆಚಾರ್ಯ ಜೀ ಅವರು ಕೂಡಾ ವೀರ ಬಾಲ ದಿವಸವನ್ನು ಶ್ಲಾಘಿಸಿದ್ದಾರೆ ಮತ್ತು ನೇತಾಜಿ ಅವರಿಗೆ ಸಂಬಂಧಿಸಿದ ವಿಷಯಗಳನ್ನು ಬಹಳ ವಿವರವಾಗಿ ಪ್ರಸ್ತಾಪಿಸಿದ್ದಾರೆ. . ಡಾ. ಫೌಜಿಯಾ ಖಾನ್ ಜೀ ಅವರು ಸಂವಿಧಾನದ ಭವ್ಯತೆಯನ್ನು ವಿವರವಾಗಿ ಚರ್ಚಿಸಿದ್ದಾರೆ. ಎಲ್ಲ ಸದಸ್ಯರೂ ಅವರ ಅನುಭವಗಳು, ಆಯಾ ರಾಜಕೀಯ ಅಭಿಮತಗಳನ್ನು ಮತ್ತು ರಾಜಕೀಯ ಸ್ಥಿತಿಗತಿಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಇದಕ್ಕಾಗಿ ನಾನು ಎಲ್ಲಾ ಗೌರವಾನ್ವಿತ ಸದಸ್ಯರಿಗೆ ನನ್ನ ಹೃದಯಸ್ಪರ್ಶೀ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ

ಗೌರವಾನ್ವಿತ ಅಧ್ಯಕ್ಷರೇ

ಇಂದು ದೇಶವು ಅಜಾದಿ ಕಾ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯದ 75 ವರ್ಷಗಳ ಅವಧಿಯಲ್ಲಿ ದೇಶಕ್ಕೆ ವೇಗ ಮತ್ತು ದಿಕ್ಕು ದಿಶೆಗಳನ್ನು ನೀಡಲು ವಿವಿಧ ಸ್ಥರಗಳಲ್ಲಿ ಪ್ರಯತ್ನಗಳನ್ನು ಮಾಡಲಾಗಿದೆ.ಮತ್ತು ಪ್ರತಿಯೊಂದನ್ನೂ ಪರಿಗಣನೆಗೆ ತೆಗೆದುಕೊಂಡು ನಾವು ಉತ್ತಮ ಸಂಗತಿಗಳನ್ನು ಮುಂದಕ್ಕೆ ಕೊಂಡೊಯ್ಯಬೇಕು, ಕೊರತೆಗಳನ್ನು ಗಮನಿಸಿ, ಅವಶ್ಯ ಇದ್ದಲ್ಲಿ ಹೊಸ ಉಪಕ್ರಮಗಳನ್ನು ಕೈಗೊಳ್ಳಬೇಕು. ಮತ್ತು ಇದು ದೇಶವು ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವಾಗ ದೇಶವು ಯಾವ ಮಟ್ಟಕ್ಕೆ ತಲುಪಬೇಕು, ಅದನ್ನು ಹೇಗೆ ಸಾಧಿಸಬೇಕು ಮತ್ತು ಅದನ್ನು ಯಾವ ಯೋಜನೆಗಳ ಸಹಾಯದಿಂದ ಸಾಧಿಸಬಹುದು  ಎಂಬುದನ್ನು ನಿರ್ಧರಿಸಲು ನಮಗೆ ಇರುವ ಬಹಳ ಮುಖ್ಯ ಕಾಲಾವಧಿ. ಮತ್ತು ನಮ್ಮಂತಹ ಎಲ್ಲಾ ರಾಜಕೀಯ ನಾಯಕರು, ರಾಜಕೀಯ ವಲಯದ ಎಲ್ಲಾ ಕಾರ್ಯಕರ್ತರು ಮುಂದಿನ 25 ವರ್ಷಗಳಲ್ಲಿ ದೇಶವನ್ನು ಹೇಗೆ ಮುಂದೆ ಕೊಂಡೊಯ್ಯಬೇಕು ಎಂಬ ಬಗ್ಗೆ ತಮ್ಮ ಮತ್ತು ದೇಶದ ಗಮನವನ್ನು ಕೇಂದ್ರೀಕರಿಸಬೇಕು. ಇದರಿಂದ ಉದ್ಭವಿಸುವ ದೃಢ ನಿರ್ಧಾರಗಳಲ್ಲಿ ಸಾಮೂಹಿಕ ಸಹಭಾಗಿತ್ವ ಇರಲಿದೆ ಎಂದು ನಾನು ಭಾವಿಸುತ್ತೇನೆ. ಅಲ್ಲಿ ಎಲ್ಲರಿಗೂ ಮಾಲಕತ್ವ ಮತ್ತು ಉತ್ತರದಾಯಿತ್ವ ಇದೆ. ಮತ್ತು ಇದೇ ವೇಳೆ ಕಳೆದ 75 ವರ್ಷಗಳಲ್ಲಿ ದೇಶವು ಏನಾಗಿದೆಯೋ ಅದಕ್ಕಿಂತ ವೇಗವಾಗಿ ದೇಶಕ್ಕೆ ಬಹಳಷ್ಟನ್ನು ಕೊಡಲು ನಮಗೆ ಸಾಧ್ಯವಿದೆ

ಗೌರವಾನ್ವಿತ ಅಧ್ಯಕ್ಷರೇ

ಕೊರೊನಾ ಒಂದು ಜಾಗತಿಕ ಸಾಂಕ್ರಾಮಿಕ ಮತ್ತು ಮಾನವ ಕುಲವು ಇಂತಹ ದೊಡ್ಡ ಸಂಕಷ್ಟವನ್ನು ಕಳೆದ ನೂರು ವರ್ಷಗಳಲ್ಲಿ ಕಂಡದ್ದಿಲ್ಲ. ಮತ್ತು ಸಂಕಷ್ಟದ ತೀವ್ರತೆಯನ್ನು ನೋಡಿ. ಅನಾರೋಗ್ಯದಿಂದ ತಾಯಿ ಕೊಠಡಿಯೊಳಗೆ ಬಂಧಿಯಂತಿರಬೇಕಾದರೆ ಮಗನಿಗೆ ಅದರಲ್ಲಿ ಹೋಗಲು ಸಾಧ್ಯವಿರಲಿಲ್ಲ. ಇಡೀ ಮನುಕುಲಕ್ಕೆ ಇದು ಎಂತಹ ಪ್ರಮುಖ ಬಿಕ್ಕಟ್ಟನ್ನು ತಂದಿಟ್ಟಿತ್ತು!. ಮತ್ತು ಈಗ ಕೂಡಾ ಬಿಕ್ಕಟ್ಟು ಬಹುರೂಪಿ ಅಗಿದೆ. ಅದು ಮರಳಿ ಬಂದು ಹೊಸ ರೂಪಾಂತರ ಮತ್ತು ಆಕಾರಗಳೊಂದಿಗೆ ಅಪಾಯಗಳನ್ನು ವಿಕೋಪಗಳನ್ನು ಒಂದಲ್ಲ ಒಂದು ರೀತಿಯಲ್ಲಿ ತಂದೊಡ್ಡುತ್ತಿದೆ. ಮತ್ತು ಇಡೀ ದೇಶ, ಇಡೀ ಜಗತ್ತು ಮತ್ತು ಇಡೀ ಮಾನವ ಕುಲ ಅದರ ವಿರುದ್ಧ ಹೋರಾಡುತ್ತಿದೆ. ಪ್ರತಿಯೊಬ್ಬರೂ ದಾರಿಯನ್ನು ಹುಡುಕುತ್ತಿದ್ದಾರೆ. ಕೊರೊನಾದ ಆರಂಭಿಕ ದಿನಗಳಲ್ಲಿ ಜಗತ್ತು 130 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಭಾರತದ ಬಗ್ಗೆ ಕಳವಳವನ್ನು ಹೊಂದಿತ್ತು. ಭಾರತಕ್ಕೆ ಏನಾಗುತದೆ?. ಭಾರತದಿಂದಾಗಿ ಜಗತ್ತು ಎಷ್ಟು ಪ್ರಮಾಣದ ಹಾನಿಯನ್ನು ಎದುರಿಸಬೇಕಾಗುತ್ತದೆ? ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿತ್ತು. ಆದರೆ 130 ಕೋಟಿ ಜನರ ದೃಢ ನಿರ್ಧಾರದ ಶಕ್ತಿಯಿಂದಾಗಿ  ಅವರು ತಮ್ಮ ಬದುಕಿನಲ್ಲಿ ಶಿಸ್ತನ್ನು ತರಲು ಪ್ರಯತ್ನಿಸಿದರು. ಇಂದು ಭಾರತದ ಪ್ರಯತ್ನಗಳನ್ನು ಜಗತ್ತಿನಾದ್ಯಂತ ಶ್ಲಾಘಿಸಲಾಗುತ್ತಿದೆ. ಇದರಲ್ಲಿ ಯಾವುದೇ ರಾಜಕೀಯ ಪಕ್ಷಗಳ ಪಾಲು ಏನೂ ಇಲ್ಲ. ಸಾಧನೆ ಮತ್ತು ಹೆಮ್ಮೆ 130 ಕೋಟಿ ಭಾರತೀಯರಿಗೆ ಸೇರಿದ್ದು. ಇದನ್ನು ಗುರುತಿಸಲು ನೀವೂ ಪ್ರಯತ್ನಪಟ್ಟಿದ್ದರೆ ನಿಮಗೆ ಬಹಳ ಉತ್ತಮವಿತ್ತು. ಇದರಲ್ಲಿ ಕೆಲಮಟ್ಟಿನ ಗೌರವ ನಿಮಗೂ ಸಿಕ್ಕಿದೆ.ಆದರೆ ಸಂಗತಿಯನ್ನು ಹೇಳಬೇಕಾಗಿತ್ತು.!. ಇರಲಿ ಲಸಿಕಾಕರಣಕ್ಕೆ ಸಂಬಂಧಿಸಿ ನಮ್ಮ ಗೌರವಾನ್ವಿತ ಸಚಿವರು ಪ್ರಶ್ನೋತ್ತರ ಸಮಯದಲ್ಲಿ ಬಹಳ ವಿವರವಾಗಿ ಹೇಳಿದ್ದಾರೆ. ಲಸಿಕೆಗಳನ್ನು ತಯಾರಿಸುವಲ್ಲಿ ಭಾರತ ಹೇಗೆ ಅನ್ವೇಷಣೆಗಳನ್ನು ನಡೆಸುತ್ತಿದೆ, ಸಂಶೋಧನೆ ಮತ್ತು ಅದರ ಅನುಷ್ಟಾನದಲ್ಲಿ ಅನ್ವೇಷಣೆಗಳು ಹೇಗೆ ಜರುಗುತ್ತಿವೆ ಎಂಬುದನ್ನೂ ವಿವರಿಸಿದ್ದಾರೆ. ಇಂದೂ ಕೂಡಾ ಜಗತ್ತಿನಲ್ಲಿ ಲಸಿಕೆ ವಿರುದ್ಧ ದೊಡ್ಡ ಆಂದೋಲನಗಳು ನಡೆಯುತ್ತಿವೆ. ಆದರೆ ಲಸಿಕೆಯಿಂದ ಯಾರೊಬ್ಬರಿಗೆ ಪ್ರಯೋಜನವಾಗುತ್ತದೆಯೋ ಇಲ್ಲವೋ, ಒಬ್ಬರು ಲಸಿಕೆಯನ್ನು ತೆಗೆದುಕೊಂಡರೆ ಕನಿಷ್ಟ ಇತರರಿಗೆ ಹಾನಿಯಾಗುವುದಿಲ್ಲ. ಭಾವನೆ 130 ಕೋಟಿ ದೇಶವಾಸಿಗಳಿಗೆ ಲಸಿಕೆ ತೆಗೆದುಕೊಳ್ಳಲು ಪ್ರೇರಣೆಯಾಯಿತು. ಇದು ಭಾರತದ ಮೂಲ ಮನೋಸ್ಥಿತಿಯ ಪ್ರತಿಫಲನ. ಮತ್ತು ಇದು ಜಗತ್ತಿನ ಜನರೆದುರು ಆದರ್ಶವನ್ನು ಮುಂದಿಡುವುದು ಪ್ರತೀ ಭಾರತೀಯರ ಕರ್ತವ್ಯ.ತಮ್ಮನ್ನು ರಕ್ಷಿಸಿಕೊಳ್ಳುವ ವಿಷಯ ಮಾತ್ರವಾಗಿದ್ದರೆ ಆಗ ಲಸಿಕೆ ಹಾಕಿಸಿಕೊಳ್ಳುವುದರ ಬಗ್ಗೆ ಚರ್ಚೆ ನಡೆಯಬಹುದಾಗಿತ್ತು. ಆದರೆ ಯಾವಾಗ ವ್ಯಕ್ತಿಯಿಂದಾಗಿ ಯಾರೊಬ್ಬರೂ ತೊಂದರೆಗೆ ಒಳಗಾಗಬಾರದು, ಅನಾರೋಗ್ಯ ಪೀಡಿತರಾಗಬಾರದು ಎಂಬುದು ಸ್ಪಷ್ಟವಾಗಿದ್ದರೆ ಮತ್ತು ವ್ಯಕ್ತಿಗಳು ಇತರರ ರಕ್ಷಣೆಗಾಗಿ ಲಸಿಕಾ ಡೋಸುಗಳನ್ನು ಪಡೆದುಕೊಳ್ಳಬೇಕು. ಜನರು ಡೋಸುಗಳನ್ನು ಪಡೆದುಕೊಳ್ಳಲು ಮುಂದೆ ಬಂದರು. ಇದು ಭಾರತದ ಮನಸ್ಥಿತಿ. ಭಾರತದ ಮಾನವತೆಯ ಪ್ರತಿಫಲನ. ನಾವಿದನ್ನು ಜಗತ್ತಿನ ಎದುರು ಹೆಮ್ಮೆಯಿಂದ ಹೇಳಬಹುದು. ಇಂದು ನಾವು 100% ಲಸಿಕಾ ವ್ಯಾಪ್ತಿಯತ್ತ ಬಹಳ ತ್ವರಿತಗತಿಯಿಂದ ಸಾಗುತ್ತಿದ್ದೇವೆ. ನಮ್ಮ ಮುಂಚೂಣಿ ಕಾರ್ಯಕರ್ತರು, ನಮ್ಮ ಆರೋಗ್ಯ ಕಾರ್ಯಕರ್ತರು, ನಮ್ಮ ವಿಜ್ಞಾನಿಗಳು ಮಾಡಿದ ಬಹಳ ದೊಡ್ಡ ಕೆಲಸವನ್ನು ಗೌರವಿಸುವುದಕ್ಕಾಗಿ ಗೌರವಾನ್ವಿತ ಸದಸ್ಯರು ಕರತಾಡನ ಮಾಡಬೇಕು ಎಂದು ನಾನು ಕೋರಿಕೊಳ್ಳುತ್ತೇನೆ. ಇದರಿಂದ ಭಾರತದ ಪ್ರತಿಭೆ ಅರಳಲು ಸಹಾಯವಾಗುತ್ತದೆ ಮಾತ್ರವಲ್ಲ  ಅವರಿಗೆ ಪ್ರೇರಣೆಯನ್ನೂ ಉನ್ನತ ಮಟ್ಟದಲ್ಲಿರಿಸಿಕೊಳ್ಳಲು ಸಹಾಯವಾಗುತ್ತದೆ. ಆದುದರಿಂದ ಅವರನ್ನು ಅಭಿನಂದಿಸುವ ಮೂಲಕ ಸದನವು ಗೌರವಿಸಲ್ಪಟ್ಟಿದೆ. ನಾವು ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ.

ಗೌರವಾನ್ವಿತ ಅಧ್ಯಕ್ಷರೇ

ಕೊರೊನಾ ಜಾಗತಿಕ ಸಾಂಕ್ರಾಮಿಕದಲ್ಲಿ 80 ಕೋಟಿಗೂ ಅಧಿಕ ದೇಶವಾಸಿಗಳಿಗೆ ಬಹಳ ದೀರ್ಘ ಅವಧಿಯವರೆಗೆ ಅವರು ದಿನನಿತ್ಯ ಅಡುಗೆ ಮಾಡಲು ಅನುಕೂಲವಾಗುವಂತೆ ಮಾಡಲು ಉಚಿತ ಪಡಿತರವನ್ನು ಒದಗಿಸುವ ವ್ಯವಸ್ಥೆಗಳನ್ನು ಮಾಡಲಾಯಿತು. ಉಪಕ್ರಮದಿಂದ ಭಾರತವು ಜಗತ್ತಿನೆದುರು ಮಾದರಿಯೊಂದನ್ನು ಇಟ್ಟಿತು. ಕೊರೊನಾ ಅವಧಿಯಲ್ಲಿ ವಿವಿಧ ಸವಾಲುಗಳ ನಡುವೆಯೂ, ಅಡೆ ತಡೆಗಳ ನಡುವೆಯೂ, ನಾವು ಲಕ್ಷಾಂತರ ಬಡವರಿಗೆ ಪಕ್ಕಾ ಮನೆಗಳನ್ನು ಕೊಡುವ ನಮ್ಮ ಭರವಸೆಯನ್ನು ಪೂರೈಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆವು. ಇಂದು ಮನೆಗಳನ್ನು ಪಡೆದಿರುವ ಕೋಟ್ಯಾಂತರ ಕುಟುಂಬಗಳು ಬಡವರಾಗಿ ಉಳಿದಿಲ್ಲ. ಅವರನ್ನು ಇಂದು ಲಕ್ಷಾಧಿಪತಿಗಳು ಎಂದು ಕರೆಯಬಹುದು.

ಗೌರವಾನ್ವಿತ ಅಧ್ಯಕ್ಷರೇ

ಜಾಗತಿಕ ಸಾಂಕ್ರಾಮಿಕದ ಕಾಲಘಟ್ಟದಲ್ಲಿ, ಐದು ಕೋಟಿ ಗ್ರಾಮೀಣ ಕುಟುಂಬಗಳಿಗೆ ನಳ್ಳಿ ನೀರು ಒದಗಿಸುವ ಮೂಲಕ ದಾಖಲೆ ಮಾಡಲಾಗಿದೆ. ಮೊದಲ ಲಾಕ್ ಡೌನ್ ಅವಧಿಯಲ್ಲಿ, ಹಲವು ತಜ್ಞರ ಜೊತೆ ಚರ್ಚಿಸಿ, ಗ್ರಾಮಗಳಲ್ಲಿರುವ ರೈತರನ್ನು ಲಾಕ್ ಡೌನ್ ನಿಂದ ಮುಕ್ತರನ್ನಾಗಿಸುವ ನಿರ್ಧಾರ ಕೈಗೊಳ್ಳಲು ಸ್ವಲ್ಪ ಧೈರ್ಯ ಬೇಕಾಗಿತ್ತು. ನಿರ್ಧಾರ ಬಹಳ ಪ್ರಮುಖವಾದು ಮತ್ತು ಕಠಿಣತಮವಾದುದು, ಆದಾಗ್ಯೂ ಅದನ್ನು ಕೈಗೊಳ್ಳಲಾಯಿತು. ಪರಿಣಾಮವಾಗಿ ನಮ್ಮ ರೈತರು  ಕೊರೊನಾ ಅವಧಿಯಲ್ಲಿಯೂ ಬಂಪರ್ ಬೆಳೆ ಬೆಳೆದರು ಮತ್ತು ಎಂ.ಎಸ್.ಪಿ.ಯಲ್ಲಿ ದಾಖಲೆ ಖರೀದಿ ಮಾಡಲಾಯಿತು. ಜಾಗತಿಕ ಸಾಂಕ್ರಾಮಿಕದಲ್ಲಿ ಮೂಲಸೌಕರ್ಯಕ್ಕೆ ಸಂಬಂಧಪಟ್ಟ ಹಲವಾರು ಯೋಜನೆಗಳನ್ನು ಪೂರ್ಣಗೊಳಿಸಲಾಯಿತು. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಮೂಲಸೌಕರ್ಯದ ಮೇಲಿನ ಹೂಡಿಕೆ ಉದ್ಯೋಗ ಸೃಷ್ಟಿ ಮಾಡುತ್ತದೆ ಎಂಬುದನ್ನು ನಾವು ಅರಿತುಕೊಂಡಿದ್ದೆವು. ಮತ್ತು ಅದರಿಂದಾಗಿ ನಾವು ಜನರಿಗೆ ಕೆಲಸ ಸಿಗಲಿ ಎಂಬ ಕಾರಣಕ್ಕೆ ಯೋಜನೆಗಳಿಗೆ ಒತ್ತು ಕೊಟ್ಟೆವು. ಮತ್ತು ನಮಗೆ ಎಲ್ಲಾ ಯೋಜನೆಗಳನ್ನು ಪೂರ್ಣಗೊಳಿಸಲು ಸಾಧ್ಯವಾಯಿತು. ನಾವು ಸವಾಲುಗಳನ್ನು ಎದುರಿಸಿದೆವಾದರೂ ಅದನ್ನು ಪೂರ್ಣಗೊಳಿಸಿದೆವು. ಮತ್ತು ಇದೇ ಕಾಲ ಘಟ್ಟದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿರಲಿ, ಅಥವಾ ಈಶಾನ್ಯದಲ್ಲಿರಲಿ ಅಭಿವೃದ್ಧಿಯ ಪ್ರಯಾಣ ಮುನ್ನಡೆಯಿತು ಮತ್ತು ವಿಸ್ತರಿಸಲ್ಪಟ್ಟಿತು. ಜಾಗತಿಕ ಸಾಂಕ್ರಾಮಿಕದಲ್ಲಿ ನಮ್ಮ ದೇಶದ ಯುವ ಜನರು ಕ್ರೀಡಾ ಕ್ಷೇತ್ರದಲ್ಲಿ ಶ್ಲಾಘನೀಯ ಕೆಲಸ ಮಾಡಿದರು ಮತ್ತು ದೇಶಕ್ಕೆ ವೈಭವವನ್ನು, ಕೀರ್ತಿಯನ್ನು ತಂದರು. ಇಂದು ಕೊರೊನಾದಿಂದ ಉದ್ಭವಿಸಿರುವ ಮಿತಿಗಳ ಹೊರತಾಗಿಯೂ ನಮ್ಮ ಯುವಜನತೆ ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಅರ್ಪಣಾಭಾವ ಮತ್ತು ತಪಸ್ಸು ಒಂದಿನಿತೂ ಕಡಿಮೆಯಾಗಲು ಅವಕಾಶ ನೀಡಿಲ್ಲ. ಮತ್ತು ಅವರು ದೇಶವು ಹೆಮ್ಮೆಪಡುವಂತೆ ಮಾಡಿದ್ದಾರೆ

ಗೌರವಾನ್ವಿತ ಅಧ್ಯಕ್ಷರೇ,

ಕೊರೊನಾ ಕಾಲದಲ್ಲಿ ನವೋದ್ಯಮಗಳು ನಮ್ಮ ದೇಶದ, ಭಾರತದ ಯುವಜನತೆಯ ಗುರುತಾಗಿವೆ. ನವೋದ್ಯಮಗಳು ನಮ್ಮ ಯುವಜನತೆಯ ಇನ್ನೊಂದು ಹೆಸರು ಎಂಬಂತಾಗಿದೆ. ಇಂದು ಭಾರತವು ನಮ್ಮ ಯುವಜನತೆಯಿಂದಾಗಿ ನವೋದ್ಯಮಗಳಲ್ಲಿ ಜಗತ್ತಿನಲ್ಲಿಯೇ ಅತ್ಯುನ್ನತ 3 ರಾಷ್ಟ್ರಗಳಲ್ಲಿ ಒಂದಾಗಿದೆ.

ಗೌರವಾನ್ವಿತ ಅಧ್ಯಕ್ಷರೇ,

ಜಾಗತಿಕ ಸಾಂಕ್ರಾಮಿಕದಲ್ಲಿ , ಸಿ..ಪಿ 26 , ಜಿ.20 ಗುಂಪುಗಳಿಗೆ ಸಂಬಂಧಿಸಿದ್ದಾಗಿರಲಿ, ಸಮಾಜದೊಳಗೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಕಾರ್ಯಗಳು, ಅಥವಾ ಜಗತ್ತಿನ 150 ದೇಶಗಳಿಗೆ ಔಷಧಿಯನ್ನು ಪೂರೈಸುವ ಕೆಲಸದಲ್ಲಾಗಲೀ, ಭಾರತವು ನಾಯಕತ್ವದ ಪಾತ್ರವನ್ನು ವಹಿಸಿದೆ. ಇಂದು ಭಾರತದ ನಾಯಕತ್ವವನ್ನು ಶ್ಲಾಘಿಸಲಾಗುತ್ತಿದೆ ಮತ್ತು ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ

ಗೌರವಾನ್ವಿತ ಅಧ್ಯಕ್ಷರೇ,

ಬಿಕ್ಕಟ್ಟಿನ ಅವಧಿಯಲ್ಲಿ, ಸವಾಲುಗಳು ಅನೇಕವಿದ್ದವು. ಪ್ರತೀ ಶಕ್ತಿ, ಜಗತ್ತಿನಲ್ಲಿಯ ಪ್ರತೀ ದೇಶ ತನ್ನ ರಕ್ಷಣೆಯತ್ತಲೇ ಆದ್ಯ ಗಮನವನ್ನು ಕೊಟ್ಟಿತ್ತು. ಯಾರೊಬ್ಬರೂ ಯಾರೊಬ್ಬರಿಗೂ ಸಹಾಯ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಇಂತಹ ಪರೀಕ್ಷಾ ಸಮಯದಲ್ಲಿ, ಬಿಕ್ಕಟ್ಟಿನಿಂದ ಪಾರಾಗಲು, ಅಟಲ್ ಬಿಹಾರಿ ವಾಜಪೇಯಿ ಅವರ ಕವನದ ಸಾಲುಗಳು ನಮಗೆಲ್ಲ ಪ್ರೇರಣಾದಾಯಕ. ಅಟಲ್ ಜೀ ಬರೆದಿದ್ದಾರೆ- व्याप्त हुआ बर्बर अंधियारा, किन्तु चीर कर तम की छाती, चमका हिन्दुस्तान हमारा।शत-शत आघातों को सहकर, जीवित हिन्दुस्तान हमारा। जग के मस्तक पर रोली सा, शोभित हिन्दुस्तान हमारा।

ಇಂದಿನ ಕಾಲಮಾನದಲ್ಲಿ ಅಟಲ್ ಜೀ ಅವರ ಮಾತುಗಳು ಭಾರತದ ಸಾಮರ್ಥ್ಯವನ್ನು ಪ್ರತಿಫಲಿಸುತ್ತವೆ

ಗೌರವಾನ್ವಿತ ಅಧ್ಯಕ್ಷರೇ,

ಕೊರೊನಾ ಜಾಗತಿಕ ಸಾಂಕ್ರಾಮಿಕದ ಕಾಲಘಟ್ಟದಲ್ಲಿ, ಅಡೆ ತಡೆಗಳಿದ್ದರೂ ಎಲ್ಲಾ ವಲಯಗಳಲ್ಲಿ ಮುನ್ನಡೆ ಸಾಧಿಸುವ ಪ್ರಯತ್ನಗಳನ್ನು ನಡೆಸಲಾಯಿತು. ಆದರೆ ಅಲ್ಲಿ ಕೆಲವು ಕ್ಷೇತ್ರಗಳಲ್ಲಿ ವಿಶೇಷ ಒತ್ತನ್ನು ನೀಡಲಾಯಿತು, ಏಕೆಂದರೆ ವಿಸ್ತಾರ ಸಾರ್ವಜನಿಕ ಹಿತಾಸಕ್ತಿಯ ಕಾರಣದಿಂದಾಗಿ ಇದು ಅಗತ್ಯವಾಯಿತು. ಇದು ಯುವ ತಲೆಮಾರಿಗೆ ಅಗತ್ಯವಾಗಿತ್ತು. ಕೊರೊನಾ ಅವಧಿಯಲ್ಲಿ ಹೆಚ್ಚಿನ  ಆದ್ಯತೆಯನ್ನು ನೀಡಲಾದ ಎರಡು ವಿಶೇಷ ಕ್ಷೇತ್ರಗಳ ಬಗ್ಗೆ ನಾನು ಚರ್ಚಿಸಲು ಬಯಸುತ್ತೇನೆ. ಮೊದಲನೆಯದಾಗಿ ಎಂ.ಎಸ್.ಎಂ.. ವಲಯವು ಬಹಳ ದೊಡ್ಡ ಉದ್ಯೋಗ ಸೃಷ್ಟಿಯ ವಲಯವಾಗಿದೆ. ಅದೇ ರೀತಿ ಕೃಷಿ ವಲಯದಲ್ಲಿಯೂ ನಾವದನ್ನು ಮಾಡಿದೆವು, ಅಲ್ಲಿ ಯಾವುದೇ ಅಡೆ ತಡೆಗಳಿಲ್ಲದಂತೆ ನೋಡಿಕೊಂಡೆವು. ಆದುದರಿಂದಾಗಿ ನಾನು ಬಂಪರ್ ಬೆಳೆಯ ಬಗ್ಗೆ ಪ್ರಸ್ತಾಪಿಸಿದೆ. ಮತ್ತು ಸರಕಾರ ಮಾಡಿದ ದಾಖಲೆ ಪ್ರಮಾಣದ ಖರೀದಿಯನ್ನು ಉಲ್ಲೇಖಿಸಿದೆ. ಜಾಗತಿಕ ಸಾಂಕ್ರಾಮಿಕ ಇದ್ದರೂ ಗೋಧಿ ಮತ್ತು ಭತ್ತ ಖರೀದಿಯಲ್ಲಿ ಹೊಸ ದಾಖಲೆಗಳನ್ನು ಮಾಡಲಾಗಿದೆ. ರೈತರಿಗೆ ಅವರ ಬೆಳೆಗಳಿಗೆ ಹೆಚ್ಚಿನ ಎಂ.ಎಸ್.ಪಿ. ಲಭಿಸಿದೆ. ಮತ್ತು ಅದೂ ನೇರ ನಗದು ವರ್ಗಾವಣೆ ಯೋಜನೆಯ ಮೂಲಕ. ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಮತ್ತು ನಾನು ಪಂಜಾಬಿನ ರೈತರ ಅನೇಕ ವೀಡಿಯೋಗಳನ್ನು ನೋಡಿದ್ದೇನೆ. ಪಂಜಾಬಿಗೆ ಇದೇ ಮೊದಲ ಬಾರಿಗೆ ಹಣ ನೇರ ನಗದು ವರ್ಗಾವಣೆಯ ಮೂಲಕ ಹೋದಾಗ  ರೈತರು ಹೇಳಿದರುಸರ್ ಫಾರ್ಮ್ ಅಷ್ಟೇ ಗಾತ್ರದ್ದಿದೆ, ನಮ್ಮ ಪ್ರಯತ್ನಗಳೂ ಅಷ್ಟೇ ಪ್ರಮಾಣದ್ದಾಗಿವೆ.ಆದರೆ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತವನ್ನು ಖಾತೆಗೆ ಜಮಾ ಮಾಡಲಾಗಿದೆ”. ಇದರ ಪರಿಣಾಮವಾಗಿ ರೈತರಿಗೆ ಸಂಕಷ್ಟದ ಸಮಯದಲ್ಲಿ ಹಣಕಾಸು ತಕ್ಷಣವೇ ಲಭ್ಯವಾಗುತ್ತದೆ. ಇಂತಹ ಕ್ರಮಗಳ ಮೂಲಕ ನಾವು ಇಂತಹ ಬೃಹತ್ ಕ್ಷೇತ್ರವನ್ನು ದಿಗ್ಭ್ರಮೆ ಮತ್ತು ಅಸ್ತವ್ಯಸ್ತ ಪರಿಸ್ಥಿತಿಯಿಂದ ಪಾರು ಮಾಡುವುದಕ್ಕೆ ಸಾಧ್ಯವಾಯಿತು. ಅದೇ ರೀತಿ, ಎಂ.ಎಸ್.ಎಂ.. ವಲಯ ಕೂಡಾ ಆತ್ಮ ನಿರ್ಭರ ಭಾರತ ಪ್ಯಾಕೇಜಿನ ಗರಿಷ್ಟ ಪ್ರಯೋಜನ ಪಡೆದ ವಲಯಗಳಲ್ಲಿ ಒಂದಾಗಿದೆ. ವಿವಿಧ ಸಚಿವಾಲಯಗಳು ಪಿ.ಎಲ್.. ಯೋಜನೆಯನ್ನು ಆರಂಭ ಮಾಡಿವೆ, ಇದರಿಂದ ಉತ್ಪಾದನಾ ವಲಯಕ್ಕೆ ಉತ್ತೇಜನ ದೊರಕಿತು. ಭಾರತವು ಈಗ ಪ್ರಮುಖ ಮೊಬೈಲ್ ತಯಾರಕ ರಾಷ್ಟ್ರವಾಗಿದೆ ಮತ್ತು ರಫ್ತಿಗೆ ಅದರ ಕೊಡುಗೆ ಕೂಡಾ ಹೆಚ್ಚುತ್ತಿದೆ. ಪಿ..ಎಲ್ ಯೋಜನೆ ಅಟೋಮೊಬೈಲ್ ಮತ್ತು ಬ್ಯಾಟರಿಗಳ ವಲಯದಲ್ಲಿ ಉತ್ತೇಜನಕಾರಿ ಫಲಿತಾಂಶಗಳನ್ನು ತೋರಿಸಿದೆ. ಎಂ.ಎಸ್.ಎಂ..ಗಳು ಇಷ್ಟೊಂದು ದೊಡ್ದ ಪ್ರಮಾಣದಲ್ಲಿ ಉತ್ಪನ್ನಗಳನ್ನು ತಯಾರಿಸಿದಾಗ ಸಹಜವಾಗಿ ಜಗತ್ತಿನ ಇತರ ದೇಶಗಳಿಂದ ಬೇಡಿಕೆ ಆದೇಶಗಳೂ ಬಂದು ಹೆಚ್ಚು ಅವಕಾಶಗಳ ಬಾಗಿಲುಗಳು ತೆರೆಯಲ್ಪಡುತ್ತವೆ. ವಾಸ್ತವವಾಗಿ ಎಂ.ಎಸ್.ಎಂ.. ಗಳು ತಯಾರಿಸಿದ ಇಂಜಿನಿಯರಿಂಗ್ ಉತ್ಪನ್ನಗಳು ರಫ್ತು ಅಂಕಿಗಳು ಹೆಚ್ಚುವಲ್ಲಿ ಬಾರಿ ಬಹಳ ದೊಡ್ಡ ಕಾಣಿಕೆ ನೀಡಿವೆ. ಇದು ಭಾರತದ ಜನತೆಯ ಕೌಶಲ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಭಾರತದ ಎಂ.ಎಸ್.ಎಂ..ಗಳ ಶಕ್ತಿಯನ್ನು ತೋರಿಸುತ್ತದೆ. ನಮ್ಮ ರಕ್ಷಣಾ ಉತ್ಪಾದನಾ ಉದ್ಯಮದತ್ತ ನೋಡಿ. ನಾವು ಉತ್ತರ ಪ್ರದೇಶದಲ್ಲಿ ಮತ್ತು ತಮಿಳುನಾಡಿನಲ್ಲಿ ರಕ್ಷಣಾ ಕಾರಿಡಾರುಗಳನ್ನು ನಿರ್ಮಾಣ ಮಾಡುತ್ತಿದ್ದೇವೆ. ಎಂ..ಯು.ಗಳು ಮತ್ತು ಕ್ಷೇತ್ರಕ್ಕೆ ಬರುತ್ತಿರುವ ಜನರು, ಎಂ.ಎಸ್.ಎಂ..ವಲಯದ ಜನರು ರಕ್ಷಣಾ ವಲಯದ ಜೊತೆ ಸಂಪರ್ಕಿಸಲ್ಪಡುತ್ತಿರುವ ರೀತಿ ನೋಡಿದರೆ ದೇಶದ ಜನರು ತಮ್ಮಲ್ಲೇ ಸಾಮರ್ಥ್ಯ ಹೊಂದಿದ್ದಾರೆ ಎಂಬ ಪ್ರೇರಣಾದಾಯಕ ಅಂಶ ಕಾಣಸಿಗುತ್ತದೆ. ಮತ್ತು ದೇಶದ ರಕ್ಷಣಾ ವಲಯವನ್ನು ಸ್ವಾವಲಂಬಿಯಾಗಿಸಲು ನಮ್ಮ ಎಂ.ಎಸ್.ಎಂ.. ವಲಯದ ಜನರು ವಲಯಕ್ಕೆ ಮುಂದೆ ಬಂದು ಸೇರುವ ಮೂಲಕ ಬಹಳಷ್ಟು ಧೈರ್ಯ ತೋರಿಸುತ್ತಿದ್ದಾರೆ.

ಗೌರವಾನ್ವಿತ ಅಧ್ಯಕ್ಷರೇ,

ಜಿ..ಎಂ.ವೇದಿಕೆ ಮೂಲಕ ಸರಕಾರ ಖರೀದಿಸುತ್ತಿರುವ ಸರಕುಗಳು ಇಂದು ಎಂ.ಎಸ್.ಎಂ..ಗಳಿಗೆ ಒದಗುತ್ತಿರುವ ಬಹಳ ದೊಡ್ಡ ಸೌಲಭ್ಯವಾಗಿದೆ. ಅದೇ ರೀತಿ ನಾವು ಬಹಳ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದ್ದೇವೆ. ಮತು ಅದೆಂದರೆ, ಸರಕಾರ ನೀಡುವ 200 ಕೋ.ರೂ.ಗಳವರೆಗಿನ ಟೆಂಡರ್ ಗಳು ಜಾಗತಿಕವಾಗಿರುವುದಿಲ್ಲ. ಭಾರತದ ಜನತೆ ಮಾತ್ರ ಅವಕಾಶ ಪಡೆಯುತ್ತಾರೆ. ಇದರಿಂದ ನಮ್ಮ ನಮ್ಮ ಎಂ.ಎಸ್.ಎಂ.. ವಲಯಕ್ಕೆ ಬಹಳ ಪ್ರಯೋಜನವಾಗುತ್ತದೆ. ಮತು ನಮ್ಮ ಉದ್ಯೋಗ ಸೃಷ್ಟಿಗೂ ಅದರ ಮೂಲಕ ಉತ್ತೇಜನ ದೊರೆಯುತ್ತದೆ.

ಗೌರವಾನ್ವಿತ ಅಧ್ಯಕ್ಷರೇ,

ಸದನದ ಗೌರವಾನ್ವಿತ ಸದಸ್ಯರು ಉದ್ಯೋಗಕ್ಕೆ ಸಂಬಂಧಿಸಿ ಕೆಲವು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.ಕೆಲವರು ಸಲಹೆಗಳನ್ನು ಕೂಡಾ ನೀಡಿದ್ದಾರೆ. .ಪಿ.ಎಫ್.. ವೇತನ ಪಟ್ಟಿಯನ್ನು ನಿರ್ಮಾಣವಾದ ಉದ್ಯೋಗಗಳ ಸಂಖ್ಯೆಯ ಮಾಹಿತಿಯನ್ನು ತಿಳಿದುಕೊಳ್ಳಲು ಬಹಳ ಮುಖ್ಯವಾದ ನಂಬಲರ್ಹ ಮೂಲ ಎಂದು ಪರಿಗಣಿಸಲಾಗುತ್ತದೆ. 2021ರಲ್ಲಿ ಸುಮಾರು ಒಂದು ಕೋಟಿ ಮತ್ತು 20 ಲಕ್ಷ ಮಂದಿ .ಪಿ.ಎಫ್. ವೇತನ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಮತ್ತು ಇವೆಲ್ಲಾ ಔಪಚಾರಿಕ ಉದ್ಯೋಗಗಳು ಎಂಬುದನ್ನು ನಾವು ಮರೆಯಬಾರದು. ನಾನು ಅನೌಪಚಾರಿಕ ಉದ್ಯೋಗಗಳ ಬಗ್ಗೆ ಮಾತನಾಡುತ್ತಿಲ್ಲ. ಇವೆಲ್ಲ ಔಪಚಾರಿಕ ಉದ್ಯೋಗಗಳು. ಮತ್ತು ಇವುಗಳಲ್ಲಿ ಸುಮಾರು 60-65 ಲಕ್ಷ ಮಂದಿ 18-25 ವರ್ಷ ವಯೋಗುಂಪಿನವರು. ಇದರರ್ಥ ವಯೋಮಾನದವರು ತಮ್ಮ ಮೊದಲ ಉದ್ಯೋಗಕ್ಕೆ ಸೇರಿದ್ದಾರೆ ಎಂಬುದಾಗಿದೆ. ಅಂದರೆ, ಇದೇ ಮೊದಲ ಬಾರಿಗೆ ಅವರು ಉದ್ಯೋಗ ಮಾರುಕಟ್ಟೆಗೆ ಪ್ರವೇಶ ಮಾಡಿದ್ದಾರೆ.  

ಗೌರವಾನ್ವಿತ ಅಧ್ಯಕ್ಷರೇ,

ಕೋವಿಡ್ ಪೂರ್ವದ ಅವಧಿಗೆ ಹೋಲಿಸಿದರೆ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಿದ ಬಳಿಕ ಉದ್ಯೋಗಾವಕಾಶಗಳಿಗೆ ನೇಮಕ  ಎರಡು ಪಟ್ಟು ಹೆಚ್ಚಿದೆ ಎಂದು ವರದಿಗಳು ಹೇಳುತ್ತವೆ. ಅದೇ ಪ್ರವೃತಿಯನ್ನು ನಾಸ್ಕಾಂ ವರದಿಯಲ್ಲೂ ಚರ್ಚಿಸಲಾಗಿದೆ. ಇದರನ್ವಯ 2017 ಬಳಿಕ ನೇರ ಹಾಗು ಪರೋಕ್ಷವಾಗಿ 27 ಲಕ್ಷ ಉದ್ಯೋಗಗಳು ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಉದ್ಭವಿಸಿವೆ. ಮತ್ತು ಇದು ಕೌಶಲ್ಯದ ವಿಷಯಕ್ಕೆ ಮಾತ್ರ ಸೀಮಿತವಾದುದಲ್ಲ. ಉನ್ನತ ಮಟ್ಟದಲ್ಲಿದ್ದವರೂ ಉದ್ಯೋಗಾವಕಾಶಗಳನ್ನು ಪಡೆದಿದ್ದಾರೆ. ಉತ್ಪಾದನೆಯಲ್ಲಾಗಿರುವ ಹೆಚ್ಚಳದಿಂದಾಗಿ, ಭಾರತದ ಜಾಗತಿಕ ರಫ್ತು ಪ್ರಮಾಣ ಕೂಡಾ ಹೆಚ್ಚಿದೆ. ಮತ್ತು ಅದರ ಪ್ರಯೋಜನಗಳು ನೇರವಾಗಿ ಉದ್ಯೋಗ ಸೃಷ್ಟಿ ಕ್ಷೇತ್ರಕ್ಕೆ ತಲುಪುತ್ತಿವೆ

ಗೌರವಾನ್ವಿತ ಅಧ್ಯಕ್ಷರೇ,

ಬರೇ ಒಂದು ವರ್ಷದಲ್ಲಿ ಅಂದರೆ 2021ರಲ್ಲಿ ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ಯೂನಿಕಾರ್ನ್ ಗಳ ಸಂಖ್ಯೆ ಮೊದಲಿನ ವರ್ಷಗಳಲ್ಲಿ ಅಸ್ತಿತ್ವಕ್ಕೆ ಬಂದ ಒಟ್ಟು ಯೂನಿಕಾರ್ನ್ ಗಳ ಸಂಖ್ಯೆಗಿಂತ ಹೆಚ್ಚು. ಮತ್ತು ನಾವು ಇವುಗಳನ್ನು ಉದ್ಯೋಗ ಎಂದು ಲೆಕ್ಕಕ್ಕೆ ತೆಗೆದುಕೊಳ್ಳದಿದ್ದರೆ ಆಗ ಅದರರ್ಥ ಉದ್ಯೋಗಕ್ಕಿಂತ ರಾಜಕೀಯ ಚರ್ಚೆಗೇ ಆದ್ಯತೆ ಎಂಬುದಾಗಿ.

ಗೌರವಾನ್ವಿತ ಅಧ್ಯಕ್ಷರೇ,

ಅನೇಕ ಗೌರವಾನ್ವಿತ ಸದಸ್ಯರು ಹಣದುಬ್ಬರದ ಬಗ್ಗೆ ಚರ್ಚಿಸಿದರು. 100 ವರ್ಷಗಳಲ್ಲಿ ಅತ್ಯಂತ ಭೀಕರವಾದ ಜಾಗತಿಕ ಸಾಂಕ್ರಾಮಿಕ, ಕೊರೊನಾವೈರಸ್ ಸಾಂಕ್ರಾಮಿಕ ಇಡೀ ಜಗತ್ತನ್ನೇ ಪೀಡಿಸಿದೆನಾವು ಹಣದುಬ್ಬರದ ಬಗೆಗೆ ಮಾತನಾಡುವುದಾದರೆ ಆಗ ಅಮೇರಿಕಾ ಕಳೆದ 40 ವರ್ಷಗಳಲ್ಲಿ ಅತ್ಯಂತ ಗರಿಷ್ಟ ಹಣದುಬ್ಬರವನ್ನು ಹೊಂದಿದ ದೇಶಗಳಲ್ಲಿ ಒಂದಾಗಿದೆ. ಬ್ರಿಟನ್ ಇಂದು 30 ವರ್ಷಗಳಲ್ಲಿಯೇ ಅತ್ಯಂತ ಕೆಟ್ಟದಾದ ಹಣದುಬ್ಬರದಿಂದ ತೊಂದರೆಗೀಡಾಗಿದೆ. ಯೂರೋ ಕರೆನ್ಸಿಯಾಗಿರುವ ವಿಶ್ವದ 19 ದೇಶಗಳಲ್ಲಿ  ಹಣದುಬ್ಬರದ ದರ  ಚಾರಿತ್ರಿಕವಾಗಿ  ಗರಿಷ್ಟ ಪ್ರಮಾಣದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ, ಜಾಗತಿಕ ಸಾಂಕ್ರಾಮಿಕದ ಒತ್ತಡದ ನಡುವೆಯೂ ನಾವು ಹಣದುಬ್ಬರವನ್ನು ತಡೆಯಲು ಬಹಳಷ್ಟು ವಿಸ್ತಾರವಾದ ಪ್ರಯತ್ನಗಳನ್ನು ಮಾಡಿದೆವು. ಮತ್ತು ಪ್ರಾಮಾಣಿಕವಾಗಿ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಿದೆವು. 2014ರಿಂದ 2020 ರವರೆಗೆ ದರ 4-5% ನಷ್ಟಿತ್ತು. ಇದನ್ನು ನೀವು ಯು.ಪಿ.. ಕಾಲಕ್ಕೆ ಹೋಲಿಸಿದರೆ ಆಗ ನಿಮಗೆ ಹಣದುಬ್ಬರ ಏನೆಂಬುದು ಗೊತ್ತಾಗುತ್ತದೆ!.ಯು.ಪಿ..ಯಲ್ಲಿ ಹಣದುಬ್ಬರ ಎರಡಂಕಿ ತಲುಪಿತ್ತು. ಇಂದು ಹೆಚ್ಚಿನ ಬೆಳವಣಿಗೆ ಮತ್ತು ಮಧ್ಯಮ ಹಣದುಬ್ಬರ ಅನುಭವಿಸುತ್ತಿರುವ ಏಕೈಕ ಪ್ರಮುಖ ಆರ್ಥಿಕತೆ ನಮ್ಮದಾಗಿದೆ. ನಾವು ಜಗತ್ತಿನ ಇತರ ಆರ್ಥಿಕತೆಯತ್ತ ನೋಡಿದರೆ ಒಂದೋ ಆರ್ಥಿಕತೆಯ ಬೆಳವಣಿಗೆ ನಿಧಾನವಾಗಿದೆ ಅಥವಾ ಹಣದುಬ್ಬರ ದಶಕಗಳ ದಾಖಲೆಗಳನ್ನು ಮುರಿದಿದೆ.

ಗೌರವಾನ್ವಿತ ಅಧ್ಯಕ್ಷರೇ,

ನನ್ನ ಕೆಲವು ಸಹೋದ್ಯೋಗಿಗಳು ಸದನದಲ್ಲಿ ಭಾರತದ ನಿರಾಶಾದಾಯಕ ಚಿತ್ರವನ್ನು ಮಂಡಿಸಿದರು. ಮತ್ತು ಇದನ್ನು ಮಂಡಿಸುವುದು ಅವರಿಗೆ ಸಂತೋಷದ ಸಂಗತಿಯಾಗಿರುವಂತೆ ಕಾಣುತ್ತಿತ್ತು. ನಾನು ಇಂತಹ ಹತಾಶೆಗಳನ್ನು ಕಂಡಾಗ ನನ್ನ ಮನಸ್ಸಿಗೆ ಚಿಂತನೆಯೊಂದು ಬಂದಿತು. ಸಾರ್ವಜನಿಕ ಜೀವನದಲ್ಲಿ ಏರು ತಗ್ಗುಗಳು ಇರುತ್ತವೆ. ಅಲ್ಲಿ ಗೆಲುವುಗಳು ಮತ್ತು ಸೋಲುಗಳು ಇರುತ್ತವೆ. ಆದರೆ ವೈಯಕ್ತಿಕ ಬದುಕಿನ ನಿರಾಶೆಗಳು ಮತ್ತು ಹತಾಶೆಗಳು ದೇಶದ ಮೇಲೆ ಹೇರಲ್ಪಡಬಾರದು. ಗುಜರಾತಿನಲ್ಲಿ ಒಂದು ಹೇಳಿಕೆ ಇದೆ, ಮಹಾರಾಷ್ಟ್ರದಲ್ಲಿಯೂ ಇದು ಸಾಮಾನ್ಯವಾಗಿರುವುದರಿಂದ ಶರದ್ ರಾವ್ ಅವರಿಗೂ ಇದರ ಬಗ್ಗೆ ಸಾಕಷ್ಟು ಗೊತ್ತಿರಬಹುದು. ಅಲ್ಲಿ ಹಸಿರು ಇದ್ದರೆ ಮತ್ತು ಭೂಮಿಯಲ್ಲಿ ಸಮೃದ್ಧ ಹಸಿರು ಇದ್ದರೆ, ಯಾರಾದರೂ ಅದನ್ನು ನೋಡಿದರೆ; ಮತ್ತು ಬಳಿಕ ಅವರೇನಾದರೂ ಯಾವುದಾದರೂ ಅವಘಡದಲ್ಲಿ ದೃಷ್ಟಿ ಕಳೆದುಕೊಂಡರೆ, ಕೊನೆಯದಾಗಿ ನೋಡಿದ ದಟ್ಟ ಹಸಿರಿನ ಸ್ಥಳದ ಚಿತ್ರ ಅವರಲ್ಲಿ ಶಾಶ್ವತವಾಗಿ ಮೂಡಿರುತ್ತದೆ. ಅದೇ ರೀತಿ 2013ರವರೆಗೆ ಬಹಳ ದೀರ್ಘ ಅವಧಿ ತೊಂದರೆಗಳನ್ನು ಅನುಭವಿಸುವ ಅವಧಿಯಾಗಿತ್ತು. 2014ರಲ್ಲಿ ದೇಶದ ಜನತೆ ಭರವಸೆಯ ಕಿರಣವನ್ನು ಕಂಡರು. ಕೆಲವು ಜನರು ಪ್ರಖರ ಕಿರಣದಿಂದಾಗಿ ಕುರುಡರಾದರು, ಅವರು ಈಗಲೂ ಅದೇ ನಿರಾಶಾದಾಯಕ ಮತ್ತು  ತೊಂದರೆಗಳಿಂದ ಬಾಧೆ ಪಡುವ ದೃಶ್ಯಗಳನ್ನು ಕಾಣುತ್ತಿದ್ದಾರೆ.

ಗೌರವಾನ್ವಿತ ಅಧ್ಯಕ್ಷರೇ,

ಇಲ್ಲಿ ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ- महाजनो येन गतः पन्थाः  ಅಂದರೆ, ಬಹಳ ಶ್ರೇಷ್ಟ ವ್ಯಕ್ತಿಗಳು ನಡೆದ ಹಾದಿ ಬಳಿಕ ಅನುಸರಿಸುವ ಹಾದಿಯಾಗುತ್ತದೆ.

 

ಗೌರವಾನ್ವಿತ ಅಧ್ಯಕ್ಷರೇ,

ಸದನದಲ್ಲಿ ನಾನು ಒಂದು ಸಂಗತಿಯನ್ನು ಹೇಳಲು ಇಚ್ಛಿಸುತ್ತೇನೆ. ಇಲ್ಲಿ ಹಾಜರಿರುವ ಯಾರೇ ಇರಬಹುದು; ಆವರು ಎಲ್ಲಿಯವರೂ ಆಗಿರಬಹುದು, ಯಾವುದೇ ಪಕ್ಷದವರು ಆಗಿರಬಹುದು, ಸರಕಾರದ ಕಡೆಯವರು ಅಥವಾ ವಿಪಕ್ಷದವರು ಆಗಿರಬಹುದು. ಜನ ಪ್ರತಿನಿಧಿಗಳು ಯಾವ ಸ್ತರದವರೂ ಆಗಿರಬಹುದು ಕೆಳ ಸ್ತರದವರು ಅಥವಾ ಉನತ ಸ್ತರದವರು ಯಾರೇ ಆಗಿದ್ದರೂ ಬಾಧಕವಿಲ್ಲ. ಆದರೆ ಜನ ಪ್ರತಿನಿಧಿ ವಲಯದ ಮುಖ್ಯಸ್ಥರಾಗಿದ್ದರೆ, ಅವರು ನಾಯಕತ್ವ ವಹಿಸುತ್ತಾರೆ. ಅವರ ಪ್ರಭಾವ ವಲಯದ ಜನರು ಅವರನ್ನು ನಾಯಕರೆಂದು ಪರಿಗಣಿಸುತ್ತಾರೆ ಮತ್ತು ಅವರ ಮಾತುಗಳನ್ನು ಕೇಳುತ್ತಾರೆ. ಮತ್ತು ಪರಿಸ್ಥಿತಿಯ ಬಗ್ಗೆ ನಕಾರಾತ್ಮಕವಾಗಿ ಯೋಚಿಸುವುದು ಸರಿಯಲ್ಲ. ನಾವು ಅಧಿಕಾರದಲ್ಲಿದ್ದಾಗ ನಾವು ನಾಯಕರು. ಅಲ್ಲಿ ಬೇರೆ ಯಾರಾದರೂ ಕುಳಿತುಕೊಂಡಿದ್ದರೆ ಅವರು ನಾಯಕರಲ್ಲ ಎಂದು ಹೇಳಲಾಗದು. ನೀವು ಎಲ್ಲಿಯವರಾಗಿದ್ದರೂ, ನೀವು ಜನಪ್ರತಿನಿಧಿಯಾಗಿದ್ದರೆ ನೀವು ನಿಜವಾದ ನಾಯಕ. ಮತ್ತು ನಾಯಕರು ರೀತಿ ಯೋಚನೆ ಮಾಡಿದರೆ ಮತ್ತು ನಾಯಕರು ಪೂರ್ಣವಾಗಿ ಹತಾಶರಾದರೆ ಏನಾಗುತ್ತದೆ?. ನೀವು ಇಲ್ಲಿ (ಸರಕಾರದಲ್ಲಿ) ಕುಳಿತಾಗ ಮಾತ್ರ ದೇಶದ ಬಗ್ಗೆ ಮತ್ತು ನಿಮ್ಮ ಪ್ರದೇಶದ ಜನರ ಬಗೆಗೆ ಕಾಳಜಿ ವಹಿಸಬೇಕು ಮತ್ತು ನೀವು ಅಲ್ಲಿ (ವಿಪಕ್ಷದಲ್ಲಿ) ಕುಳಿತರೆ ಕಾಳಜಿ ವಹಿಸಬೇಕಾಗಿಲ್ಲ ಎನ್ನುತ್ತಿರೋ?. ಕನಿಷ್ಟ ಶರದ್ ರಾವ್ ಅವರಿಂದಲಾದರೂ ಕಲಿಯಿರಿ. ಶರದ್ ರಾವ್ ಜೀ ಅವರು ವಯಸ್ಸಿನಲ್ಲಿ ಹಲವಾರು ಖಾಯಿಲೆಗಳಿದ್ದಾಗ್ಯೂ ಕೂಡಾ ವಲಯದ ಜನರನ್ನು ಪ್ರೇರೇಪಿಸುತ್ತಿರುವುದನ್ನು ನಾನು ನೋಡಿದ್ದೇನೆ. ನಾವು ನಿರಾಶರಾಗಬೇಕಾಗಿಲ್ಲ, ಸಹೋದರ. ಏನೆಲ್ಲಾ ಆಗುತ್ತದೋ, ನಾವೆಲ್ಲರೂ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. ಖರ್ಗೇ ಜೀ ನೀವು ಕೂಡಾ ಅಧೀರ್ ರಂಜನ್ ಜೀ ಅವರಂತೆ ತಪ್ಪುಗಳನ್ನು ಮಾಡುತ್ತಿರುವಿರಿ. ನಿಮ್ಮ ಹಿಂದೆ ನೋಡಿ. ಜೈರಾಂ ಜೀ ಅವರು ಕೆಲಸಕ್ಕೆ ಮೂರು ನಾಲ್ಕು ಮಂದಿಯನ್ನು ತಯಾರು ಮಾಡಿದ್ದಾರೆ. ದಯವಿಟ್ಟು ನಿಮ್ಮ ಘನತೆಯನ್ನು ಎತ್ತಿ ಹಿಡಿಯಿರಿ. ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಜೈರಾಂ ಜೀ ಅವರು ಹೊರಗೆ ಹೋಗಿದ್ದರು. ಅವರು ಮಾಹಿತಿಯೊಂದಿಗೆ ಮರಳಿ ಬಂದಿದ್ದಾರೆ. ಅವರು ವಿವರಿಸುತ್ತಿದ್ದರು. ಇದು ಇನ್ನಷ್ಟೇ ಆರಂಭವಾಗುವುದರಲ್ಲಿತ್ತು. ಆದರೆ ನೀವು ಗೌರವಾನ್ವಿತ ನಾಯಕರು

ಗೌರವಾನ್ವಿತ ಅಧ್ಯಕ್ಷರೇ,

ಅಧಿಕಾರದಲ್ಲಿರುವ ಪಕ್ಷ ಯಾವುದೇ ಆಗಿರಲಿ, ದೇಶದ ಸಾಮರ್ಥ್ಯವನ್ನು ಕೀಳಂದಾಜು ಮಾಡಬಾರದು. ನಾವು ಇಡೀ ಜಗತ್ತಿನ ಎದುರು ಮುಕ್ತ ಮನಸ್ಸಿನಿಂದ ನಮ್ಮ ಬಲವನ್ನು ಹೆಮ್ಮೆಯಿಂದ ತೋರ್ಪಡಿಸಬೇಕು.ದೇಶಕ್ಕೆ ಇದು ಬಹಳ ಅವಶ್ಯ.

ಗೌರವಾನ್ವಿತ ಅಧ್ಯಕ್ಷರೇ,

ನಮ್ಮ ಒಬ್ಬರು ಸಹೋದ್ಯೋಗಿಗಳು ಸದನದಲ್ಲಿ ಹೇಳಿದರುಲಸಿಕಾಕರಣ ಬಹಳ ದೊಡ್ದ ಸಂಗತಿ ಅಲ್ಲಎಂಬುದಾಗಿ. ಭಾರತದ ಸಾಧನೆ ಎಷ್ಟು ದೊಡ್ಡದು! ಎಂಬುದನ್ನು ಕೆಲವು ಜನರು ಕಂಡುಕೊಳ್ಳುತ್ತಿಲ್ಲ ಎಂಬ ಸಂಗತಿ ನನಗೆ ಆಶ್ಚರ್ಯ ತಂದಿದೆ. ಓರ್ವ ಸಹೋದ್ಯೋಗಿ ಲಸಿಕಾಕರಣದ ಮೇಲೆ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಲಾಗುತ್ತಿದೆ ಎಂದರು. ದೇಶ ಇಂತಹ ಸಂಗತಿಗಳನ್ನು ಆಲಿಸಿದರೆ ಇಂತಹ ಜನರ ಬಗ್ಗೆ ಎಂತಹ ಭಾವನೆ ಮೂಡಬಹುದು?.

ಗೌರವಾನ್ವಿತ ಅಧ್ಯಕ್ಷರೇ,

ಕೊರೊನಾ ಮಾನವ ಕುಲವನ್ನು ಬಾಧಿಸಲು ಆರಂಭ ಮಾಡಿದಂದಿನಿಂದ, ಸರಕಾರವು ದೇಶದಲ್ಲಿ ಮತ್ತು ಜಗತ್ತಿನಲ್ಲಿ  ಲಭ್ಯ ಇರುವ ಪ್ರತಿಯೊಂದೂ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಆರಂಭ ಮಾಡಿತು. ದೇಶದ ನಾಗರಿಕರನ್ನು ರಕ್ಷಿಸಲು ನಮ್ಮ ಸಾಮರ್ಥ್ಯಗಳನ್ನು, ತಿಳುವಳಿಕೆಗಳನ್ನು, ಶಕ್ತಿ ಮತ್ತು ಸಂಪನ್ಮೂಲಗಳನ್ನು ಒಟ್ಟು ಸೇರಿಸಿ ನಾವು ಸಾಧ್ಯ ಇರುವ ಪ್ರತಿಯೊಂದು ಕ್ರಮಗಳನ್ನೂ ಕೈಗೊಂಡೆವು. ಮತ್ತು ಜಾಗತಿಕ ಸಾಂಕ್ರಾಮಿಕ ಇರುವಷ್ಟು ಕಾಲವೂ ಸರಕಾರವು ಬಡವರಲ್ಲಿ ಬಡವರ ಜೀವಗಳನ್ನು ರಕ್ಷಿಸಲು ಸಾಧ್ಯವಾದಷ್ಟನ್ನು ಖರ್ಚು ಮಾಡಲು ಬದ್ಧವಿದೆ.ಆದರೆ ಕಳೆದ ಎರಡು ವರ್ಷಗಳಲ್ಲಿ ಕೆಲವು ಪಕ್ಷಗಳ ನಾಯಕರ ಅಪಕ್ವತೆಯ ಕಾರಣದಿಂದಾಗಿ ದೇಶ ಬಹಳ ನಿರಾಶಾದಯಕ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ರಾಜಕೀಯ ಲಾಭಕ್ಕಾಗಿ ಹೇಗೆ ಆಟಗಳನ್ನು ಆಡಲಾಯಿತು ಎಂಬುದನ್ನು ನಾವು ನೋಡಿದ್ದೇವೆ. ಭಾರತೀಯ ಲಸಿಕೆಯ ವಿರುದ್ಧ ಆಂದೋಲನವನ್ನು ಆರಂಭ ಮಾಡಲಾಯಿತು. ನೀವು ಮೊದಲು ಏನು ಹೇಳಿದ್ದೀರಿ ಮತ್ತು ಈಗ ಏನಾಗುತ್ತಿದೆ ಎಂಬುದನ್ನು ಆಲೋಚಿಸಲು ಪ್ರಯತ್ನ ಮಾಡಿರಿ. ಸಂಗತಿಗಳನ್ನು ಸರಿ ಹೊಂದಿಸಲು ಪ್ರಯತ್ನಿಸಿ. ಅಲ್ಲಿ ಸುಧಾರಣೆಯ ಸಾಧ್ಯತೆ ಇರಬಲ್ಲುದು.ಉಪಯುಕ್ತವಾದುದೇನಾದರೂ ಲಭಿಸಬಹುದು

ಗೌರವಾನ್ವಿತ ಅಧ್ಯಕ್ಷರೇ,

ದೇಶದ ಜನರಿಗೆ ಬಹಳ ಸ್ಪಷ್ಟವಾಗಿ ಗೊತ್ತಿದೆ. ದೇಶದ ಜನರು ನಾಯಕರ ನಕಾರಾತ್ಮಕ ವಿವರಣೆಯನ್ನು ಆಲಿಸದೇ ಇರುವುದಕ್ಕಾಗಿ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಅವರ ನಾಯಕರು ಮಾಡಿರುವ ತಪ್ಪುಗಳ ನಡುವೆಯೂ ಲಸಿಕೆಗಳನ್ನು ಪಡೆದುಕೊಂಡುದಕ್ಕಾಗಿ ನಾನವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಇದಾಗಿರದಿದ್ದರೆ, ಅಲ್ಲಿ ಬಹಳ ದೊಡ್ದ ಅಪಾಯ ಇರುತ್ತಿತ್ತು. ಆದರೆ ದೇಶದ ಜನರು ಕೆಲವು ನಾಯಕರನ್ನು ಮೀರಿ ಮುಂದುವರೆದಿರುವುದು ಬಹಳ ಒಳ್ಳೆಯದು. ಇದು ದೇಶಕ್ಕೂ ಒಳ್ಳೆಯದು.

ಗೌರವಾನ್ವಿತ ಅಧ್ಯಕ್ಷರೇ,

ರೀತಿಯಲ್ಲಿ ಇಡೀ ಕೊರೊನಾ ಅವಧಿ ನಮ್ಮ ಒಕ್ಕೂಟ ವ್ಯವಸ್ಥೆಯನ್ನು ಉತ್ತಮ ಉದಾಹರಣೆಯಾಗಿ ಚಿತ್ರಿಸಿತು. ಒಂದು ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿಗಳ ಜೊತೆ 23 ಬಾರಿ ಸಭೆಗಳನ್ನು ನಡೆಸುವ ಅವಕಾಶ ಸಿಕ್ಕಿದ ಪ್ರಧಾನ ಮಂತ್ರಿ ಬೇರೆ ಯಾರೂ ಇರಲಾರರು. ಮುಖ್ಯಮಂತ್ರಿಗಳ ಜೊತೆ 23 ಬಾರಿ ಸಭೆಗಳನ್ನು ನಡೆಸಲಾಯಿತು ಮತ್ತು ವಿವರವಾದ ಚರ್ಚೆಗಳನ್ನು ನಡೆಸಲಾಯಿತು. ನಾವು ಮುಖ್ಯಮಂತ್ರಿಗಳಿಂದ ಸಲಹೆಗಳನ್ನು ಪಡೆದೆವು ಮತ್ತು ಅವುಗಳನ್ನು ಭಾರತ ಸರಕಾರದ ಜೊತೆ ಇರುವ ಮಾಹಿತಿಯ ಜೊತೆ ಜೋಡಿಸಿಕೊಂಡೆವು. ವಿವಿಧ ರಾಜ್ಯಗಳ ಹಿರಿಯ ನಾಯಕರು ಇಲ್ಲಿ ಸದನದಲ್ಲಿ ಕುಳಿತಿದ್ದಾರೆ. ಆದುದರಿಂದ ನಾನು ಹೇಳುತ್ತೇನೆ ಕಾಲಘಟ್ಟದಲ್ಲಿ 23 ಸಭೆಗಳನ್ನು ನಡೆಸುವುದು ಮತ್ತು ಬಹಳಷ್ಟು ವಿವರವಾದ ಚರ್ಚೆಯ ಬಳಿಕ ತಂತ್ರಗಳನ್ನು ರೂಪಿಸುವುದು ಮತ್ತು ಪ್ರತಿಯೊಬ್ಬರನ್ನೂ ಒಟ್ಟಿಗೆ ಕರೆದೊಯ್ಯುವುದು  ಬಹಳ ಪ್ರಯಾಸದ ಕೆಲಸ. ಅದು ಕೇಂದ್ರ ಸರಕಾರವಾಗಿರಲಿ, ರಾಜ್ಯ ಸರಕಾರವಾಗಿರಲಿ, ಅಥವಾ ಸ್ಥಳೀಯಾಡಳಿತವಾಗಿರಲಿ, ಪ್ರತಿಯೊಬ್ಬರೂ ಒಗ್ಗೂಡಿ ಕೆಲಸ ಮಾಡಿದ್ದಾರೆ. ಸಮಾನ ಪ್ರಯತ್ನಗಳನ್ನು ಮಾಡಿದ್ದಾರೆ. ನಾವು ಯಾರೊಬ್ಬರ ಕೊಡುಗೆಯನ್ನೂ ಕೀಳಂದಾಜು ಮಾಡುವುದಿಲ್ಲ. ನಾವು ಅದನ್ನು ದೇಶದ ಶಕ್ತಿ ಎಂದು ಪರಿಗಣಿಸುತ್ತೇವೆ.

ಆದರೆ ಗೌರವಾನ್ವಿತ ಅಧ್ಯಕ್ಷರೇ,

ಕೆಲವು ಜನರು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಕೊರೊನಾ ಜಾಗತಿಕ ಸಾಂಕ್ರಾಮಿಕಕ್ಕೆ ಸಂಬಂಧಿಸಿ ಸರ್ವ ಪಕ್ಷ ಸಭೆ ಕರೆದಾಗ ಮತ್ತು ಸರಕಾರ ವಿವರವಾದ ಮಾಹಿತಿ ಒದಗಿಸುವಾಗ ಕೆಲವು ಪಕ್ಷಗಳು ಸಭೆಯಲ್ಲಿ ಭಾಗವಹಿಸದಂತೆ ಮಾಡುವ ಪ್ರಯತ್ನಗಳು ನಡೆದವು.ಮತ್ತು ಪ್ರಯತ್ನಗಳನ್ನು ಮಾಡಿದವರು ಅವರ ಮುಖವನ್ನೂ ತೋರಿಸಲಿಲ್ಲ. ಅವರು ಸರ್ವ ಪಕ್ಷ ಸಭೆಯನ್ನು ಬಹಿಷ್ಕರಿಸಿದರು. ಮತ್ತು ನಾನು ಶರದ್ ರಾವ್ ಜೀ ಅವರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ಶರದ್ ರಾವ್ ಜೀ ಅವರು ಇದು ಯು.ಪಿ.. ನಿರ್ಧಾರ ಅಲ್ಲ ಎಂದಿದ್ದರು. ಮತ್ತು ತಾವು ಸಭೆಗೆ ಹಾಜರಾಗುವಂತೆ ಕೆಲವು ಜನರ ಮನವೊಲಿಸುವ ಬಗ್ಗೆ ಪ್ರಯತ್ನ ಮಾಡುತ್ತೇನೆ ಎಂದಿದ್ದರು. ಶರದ್ ರಾವ್ ಜೀ ಅವರು ಸಭೆಯಲ್ಲಿ ಭಾಗವಹಿಸಿದ್ದರು. ಟಿ.ಎಂ.ಸಿ. ಸಹಿತ ಉಳಿದ ಎಲ್ಲಾ ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು. ಮತ್ತು ತಮ್ಮ ಮೌಲ್ಯಯುತವಾದ ಸಲಹೆಗಳನ್ನು ನೀಡಿದ್ದವು. ಬಿಕ್ಕಟ್ಟು ಇಡೀ ದೇಶವನ್ನು ಬಾಧಿಸುತ್ತಿತ್ತು, ಅದು ಇಡೀ ಮನುಕುಲವನ್ನು ಬಾಧಿಸುವ ಸಂಕಷ್ಟವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿಯೂ ನೀವು ಸಭೆಯನ್ನು ಬಹಿಷ್ಕರಿಸಿದಿರಿ?. ನೀವು ಎಲ್ಲಿಂದ ಸಲಹೆಗಳನ್ನು ಪಡೆಯುತ್ತೀರಿ ಎಂಬುದು ನನಗೆ ತಿಳಿದಿಲ್ಲ.ಆದರೆ ಅವರು ನಿಮಗೆ ಹಾನಿ ಮಾಡುತ್ತಿದ್ದಾರೆ. ದೇಶ ಅಲ್ಲಿ ಸ್ಥಗಿತಗೊಳ್ಳಲಿಲ್ಲ. ಅದು ಮುನ್ನಡೆಯುತ್ತಿದೆ. ಆದರೆ ನೀವು ಅಲ್ಲಿ ಸ್ಥಗಿತಗೊಂಡಿರುವಿರಿ. ಪ್ರತಿಯೊಬ್ಬರಿಗೂ ಆಶ್ಚರ್ಯವಾಗಿದೆ!. ನೀವು ಮರು ದಿನದ ಪತ್ರಿಕೆಗಳನ್ನು ಓದಿರುವಿರೋ? ಟೀಕೆಯನ್ನು ನೋಡಿರುವಿರೋ? ನೀವಿದನ್ನು ಯಾಕೆ ಮಾಡಿದಿರಿ?. ಇರಲಿ..

ಗೌರವಾನ್ವಿತ ಅಧ್ಯಕ್ಷರೇ,

ನಾವು ಸಮಗ್ರ ಆರೋಗ್ಯ ರಕ್ಷಣೆಯ ಬಗ್ಗೆ ಗಮನ ಕೇಂದ್ರೀಕರಿಸಿದೆವು. ಆಯುಷ್ ಸಚಿವಾಲಯ ಕೂಡಾ ಆಧುನಿಕ ವೈದ್ಯ ಪದ್ಧತಿ ಮತ್ತು ಸಾಂಪ್ರದಾಯಿಕ ವೈದ್ಯ ಪದ್ಧತಿ ಬಗ್ಗೆ ಬಹಳಷ್ಟು ಕೆಲಸ ಮಾಡಿತು. ಕೆಲವೊಮ್ಮೆ ಇಂತಹ ಸಚಿವಾಲಯಗಳ ಕಾರ್ಯ ಚಟುವಟಿಕೆಗಳನ್ನು ಸದನದಲ್ಲಿ ಕೂಡಾ ಚರ್ಚಿಸಲಾಗಿಲ್ಲ. ಆದರೆ ಇಂದು ಆಂಧ್ರದ ಜನತೆ, ತೆಲಂಗಾಣದ ಜನತೆ ನಮ್ಮ ಅರಶಿನದ ರಫ್ತು ಹೆಚ್ಚುತ್ತಿರುವುದನ್ನು ಹೇಳುತ್ತಾರೆ. ಕೊರೊನಾ ಜಾಗತಿಕ ಸಾಂಕ್ರಾಮಿಕದ ಕಾರಣ ಜಗತ್ತಿನಾದ್ಯಂತ ಜನರು ಭಾರತದ ಚಿಕಿತ್ಸಾ ವಿಧಾನಗಳಿಗೆ ಆಕರ್ಷಿತರಾಗಿದ್ದಾರೆ. ಇಂದು ಕೊರೊನಾ ಅವಧಿಯಲ್ಲಿ ಭಾರತ ತನ್ನ ಔಷಧ ಉದ್ಯಮವನ್ನು ಬಲಪಡಿಸಿದೆ. ಕಳೆದ ಏಳು ವರ್ಷಗಳಲ್ಲಿ ನಮ್ಮ ಆಯುಷ್ ಉತ್ಪಾದನೆ ಮತ್ತು ರಫ್ತು ಗಮನೀಯವಾಗಿ ಹೆಚ್ಚಿದೆ. ಮತ್ತು ಅವುಗಳು ಹೊಸ ಹೊಸ ಪ್ರದೇಶಗಳನ್ನು ತಲುಪುತ್ತಿವೆ. ಇದರರ್ಥ ಭಾರತದ ಸಾಂಪ್ರದಾಯಿಕ ವೈದ್ಯ ಪದ್ಧತಿ ಜಗತ್ತಿನಲ್ಲಿ ತನ್ನ ಗುರುತನ್ನು ಮೂಡಿಸಲು ತೊಡಗಿದೆ. ಕ್ಷೇತ್ರ ದಮನಕ್ಕೆ ಒಳಗಾಗಿರುವುದರಿಂದ ನಮಗೆ ಸಾಧ್ಯವಾದಾಗೆಲ್ಲ ಇದನ್ನು ಒತ್ತಿ ಹೇಳಬೇಕು ಎಂದು ಬಯಸುತ್ತೇನೆ. ಅವಶ್ಯವಾದುದನ್ನು ನಾವು ಮಾಡಿದೆವಾದರೆ, ಬಾರಿ ಅದು ಬಹಳ ಸುಲಭದಲ್ಲಿ ಅಂಗೀಕಾರಾರ್ಹವಾಗುತ್ತದೆ. ಆಗ ಭಾರತದ ಸಾಂಪ್ರದಾಯಿಕ ಔಷಧಿ ಮತ್ತು ಅದರ ಶಕ್ತಿ ಜಗತ್ತಿಗೆ ತಲುಪುತ್ತದೆ ಮತ್ತು ಅದರ ಅದ್ಭುತಗಳನ್ನು ತೋರಿಸಲಾರಂಭಿಸುತ್ತದೆ.

ಗೌರವಾನ್ವಿತ ಅಧ್ಯಕ್ಷರೇ,

ಇಂದು 80 ಸಾವಿರಕ್ಕೂ ಅಧಿಕ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಆಯುಷ್ಮಾನ್ ಭಾರತ್ ಅಡಿಯಲ್ಲಿ ಕಾರ್ಯಾಚರಿಸುತ್ತಿವೆ. ಮತ್ತು ಅವುಗಳಲ್ಲಿ ಎಲ್ಲಾ ಆಧುನಿಕ ಸೇವೆಗಳನ್ನು ಒದಗಿಸುವಂತೆ ಸಲಕರಣೆಗಳನ್ನು ಅಳವಡಿಸಲಾಗಿದೆ. ಕೇಂದ್ರಗಳು ಹಳ್ಳಿಗಳಲ್ಲಿ, ಮನೆಗಳ ಸಮೀಪದಲ್ಲಿ ಉಚಿತ ಪರೀಕ್ಷೆಗಳನ್ನು ನಡೆಸುವುದೂ ಸೇರಿದಂತೆ ಉತ್ತಮ ಪ್ರಾಥಮಿಕ ಆರೋಗ್ಯ ರಕ್ಷಣಾ ಸೌಲಭ್ಯಗಳನ್ನು ಒದಗಿಸುತ್ತಿವೆ. ಕೇಂದ್ರಗಳು ಕ್ಯಾನ್ಸರ್, ಮಧುಮೇಹ, ಮತ್ತು ಇತರ ಗಂಭೀರ ಖಾಯಿಲೆಗಳನ್ನು ಮುಂಚಿತವಾಗಿ ಪತ್ತೆ ಹಚ್ಚಲು ಸಹಾಯ ಮಾಡುತ್ತಿವೆ. 80 ಸಾವಿರ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಮತ್ತು ನಾವು ಅವುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಬಹಳ ತ್ವರಿತಗತಿಯಿಂದ ಕಾರ್ಯನಿರತರಾಗಿದ್ದೇವೆ. ಅಂದರೆ, ಗಂಭೀರ ಅನಾರೋಗ್ಯದ ಸಂದರ್ಭದಲ್ಲಿಯೂ ಸ್ಥಳೀಯ ಮಟ್ಟದಲ್ಲಿ ಸಹಾಯದ ಭರವಸೆ ಇರುತ್ತದೆ

ಗೌರವಾನ್ವಿತ ಅಧ್ಯಕ್ಷರೇ,

ಬಜೆಟಿಗೆ ಮೊದಲು ಕೆಲವು ತೆರಿಗೆಗಳನ್ನು ವಿಧಿಸುವ ಹಳೆಯ ಪದ್ಧತಿ ಚಾಲ್ತಿಯಲ್ಲಿತ್ತು. ಮತ್ತು ಅದರ ಬಗ್ಗೆ ಬಜೆಟಿನಲ್ಲಿ ಯಾವುದೇ ಚರ್ಚೆ ಇರುತ್ತಿರಲಿಲ್ಲ. ಆದುದರಿಂದ ಅದು ಬಜೆಟಿನಲ್ಲಿ ಕಾಣುತ್ತಿರಲಿಲ್ಲ ಮತ್ತು ಸ್ಟಾಕ್ ಮಾರ್ಕೆಟ್ ದಿನದಂದು ಬೀಳುತ್ತಿರಲಿಲ್ಲ. ನಾವದನ್ನು ಮಾಡುವುದಿಲ್ಲ. ಬದಲು, ನಾವದಕ್ಕೆ ವಿರುದ್ಧವಾಗಿ ಮಾಡಿದೆವು. ಬಜೆಟಿಗೆ ಮೊದಲು, ನಾವು 64 ಸಾವಿರ ಕೋ.ರೂ.ಗಳನ್ನು ಪ್ರಧಾನ ಮಂತ್ರಿ ಆತ್ಮ ನಿರ್ಭರ ಸ್ವಾಸ್ಥ್ಯ ಭಾರತ್ ಯೋಜನಾ ಅಡಿಯಲ್ಲಿ ಸಂಕೀರ್ಣ ಆರೋಗ್ಯ ಮೂಲಸೌಕರ್ಯ ನಿರ್ಮಾಣಕ್ಕಾಗಿ ವಿತರಣೆ ಮಾಡಿದೆವು. ನಾವು ಸಂಗತಿಯನ್ನು ಬಜೆಟಿನಲ್ಲಿ ಅಡಕಗೊಳಿಸಿದ್ದರೆ, ಈಗಾಗಲೇ ಉತ್ತಮ ಬಜೆಟ್ ಆಗಿರುವ ಅದು ಇನ್ನಷ್ಟು ದೊಡ್ಡ ಬಜೆಟ್ ಆಗಿ ಹೆಚ್ಚು ಪರಿಣಾಮಕಾರಿಯಾಗಿ, ಆಕರ್ಷಕವಾಗಿ ಕಾಣುತ್ತಿತ್ತು. ಆದರೆ ಅದನ್ನು ಭ್ರಮೆಯಾಗಿ ಬಳಸುವುದಕ್ಕೆ ಪ್ರಯತ್ನ ಮಾಡುವ ಮೊದಲು, ಕೊರೊನಾ ಸಮಯದಲ್ಲಿ ತುರ್ತು ಆವಶ್ಯಕತೆಗಳಿಗಾಗಿ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ನಾವದನ್ನು ಜಾರಿಗೆ ತಂದೆವು. ಮತ್ತು ನಾವು 64 ಸಾವಿರ ಕೋ.ರೂ. ಗಳನ್ನು ಕಾರ್ಯಕ್ಕಾಗಿ ತೆಗೆದಿಟ್ಟೆವು

ಗೌರವಾನ್ವಿತ ಅಧ್ಯಕ್ಷರೇ,

ಬಾರಿ ಖರ್ಗೇ ಜೀ ಅವರು ಬಹಳ ವಿಶೇಷ ಭಾಷಣ ಮಾಡಿದರು. ಮತ್ತು ಅವರು ಪೊದೆಯನ್ನು ಝಾಡಿಸುವುದಕ್ಕೆ (ಸುತ್ತು ಬಳಸಿ ಮಾತನಾಡುವುದಕ್ಕೆ) ಬದಲು ನಾನು ಪ್ರತಿಕ್ರಿಯೆ ನೀಡಬೇಕು ಎಂದು ಹೇಳಿದರು. ಅವರು ಏನು ಹೇಳಿದ್ದಾರೆ ಎಂಬುದನ್ನು ಒಮ್ಮೆ ಹಿಂತಿರುಗಿ ನೋಡೋಣ. ಇದನ್ನು ಸದನದಲ್ಲಿ ಹೇಳಲಾಗಿದೆ, ಕಾಂಗ್ರೆಸ್ ಭಾರತಕ್ಕೆ ಅಸ್ತಿಭಾರ ಹಾಕಿತು ಆದರೆ ಬಿ.ಜೆ.ಪಿ. ಅದರ ಧ್ವಜವನ್ನು ಅದರ ಮೇಲೆ ಅರಳಿಸಿತು ಎಂದು.

ಗೌರವಾನ್ವಿತ ಅಧ್ಯಕ್ಷರೇ,

ಇದನ್ನು ಸದನದಲ್ಲಿ ಲಘುವಾದ ಧಾಟಿಯಲ್ಲಿ ಹೇಳಿದ್ದಲ್ಲ. ಇದು ಅಪಾಯಕಾರಿ ಮನಸ್ಥಿತಿಯ ಫಲಿತಾಂಶ ಮತ್ತು ಅದು ದೇಶಕ್ಕೆ ಅಪಾಯಕಾರಿ. ಮತ್ತು ಅದು ಕೆಲವು ಜನರು ಭಾರತ 1947ರಲ್ಲಿ ಹುಟ್ಟಿದೆ ಎಂದು ನಂಬಿದ್ದಾರೆ. ಈಗ ಅದು ಸಮಸ್ಯೆಯಾಗಿದೆ. ಮತ್ತು ಚಿಂತನೆಯ ಫಲಿತಾಂಶ ಏನೆಂದರೆ ಭಾರತದಲ್ಲಿ 75 ವರ್ಷಗಳಲ್ಲಿ 50 ವರ್ಷಗಳ ಕಾಲ ಕೆಲಸ ಮಾಡುವ ಅವಕಾಶ ಪಡೆದುಕೊಂಡಿದ್ದವರ ನೀತಿಗಳು ಮನಸ್ಥಿತಿಯಿಂದಾಗಿ ತೊಂದರೆಗೀಡಾಗುತ್ತಿವೆ. ಮತ್ತು ಹಲವು ಜಾಡ್ಯಗಳು.ಉದ್ಭವಿಸಿವೆ.

ಪ್ರಜಾಪ್ರಭುತ್ವ ನಿಮ್ಮ ದಯೆಯಲ್ಲ, ಮತ್ತು ನೀವು, 1975ರಲ್ಲಿ ಪ್ರಜಾಪ್ರಭುತ್ವವನ್ನು ತಡೆಹಿಡಿದವರು, ದಮನ ಮಾಡಿದವರು ಪ್ರಜಾಪ್ರಭುತ್ವದ ವೈಭವ, ಭವ್ಯತೆಯ ಬಗ್ಗೆ ಮಾತನಾಡಬಾರದು.

ಗೌರವಾನ್ವಿತ ಅಧ್ಯಕ್ಷರೇ,

ಇಂತಹ ಸಣ್ಣ ಮಟ್ಟಿನ ಚಿಂತನೆ, ಯೋಚನೆ ಹೊಂದಿರುವ ಜನರು ಜಗತ್ತಿನೆದುರು ಉತ್ಸಾಹದಿಂದ ಒಂದು ಮಾತು ಹೇಳಬೇಕಿತ್ತು, ಆದರೆ ಅದನ್ನು ಹೇಳಲು ಹಿಂಜರಿದರು. ನಾವು ಭಾರತವನ್ನು ಹೆಮ್ಮೆಯಿಂದ, ಭಾರತ ಮಾತೆಯನ್ನು ಪ್ರಜಾಪ್ರಭುತ್ವದ ತಾಯಿ ಎಂದು ಹೇಳಬೇಕಿತ್ತು. ಭಾರತವು ವರ್ಷಗಳಿಂದ ಅದರ ಪ್ರಜಾಪ್ರಭುತ್ವಕ್ಕಾಗಿ ಮತ್ತು ಚರ್ಚೆಯ ಶಕ್ತಿಗಾಗಿ ಹೆಸರುವಾಸಿಯಾಗಿದೆ. ಮತ್ತು ಕಾಂಗ್ರೆಸ್ಸಿನ ಸಮಸ್ಯೆ ಏನೆಂದರೆ ಅವರುರಾಜವಂಶವನ್ನು ಹೊರತುಪಡಿಸಿ ಅದಕ್ಕಿಂತ ಮುಂದೆ ಯಾವುದನ್ನೂ ಯೋಚಿಸಲಿಲ್ಲ. ಮತ್ತು ಪಕ್ಷದಲ್ಲಿಯೂ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವವರು, ಭಾರತದ ಪ್ರಜಾಪ್ರಭುತ್ವಕ್ಕೆ ರಾಜವಂಶ ರಾಜಕೀಯವೇ ಬಹಳ ದೊಡ್ಡ ಬೆದರಿಕೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಇದನ್ನು ಒಪ್ಪಿಕೊಳ್ಳಬೇಕು. ಮತ್ತು ಪಕ್ಷದಲ್ಲಿ ಕೂಡಾ ಒಂದು ಕುಟುಂಬವೇ ಶ್ರೇಷ್ಟವಾಗಿದ್ದಾಗ ಪ್ರತಿಭೆ ಮೊದಲು ತೀವ್ರವಾಗಿ ಗಾಯಗೊಳ್ಳುತ್ತದೆ. ಮನಸ್ಥಿತಿಯಿಂದಾಗಿ ದೇಶವು ಬಹಳ ದೀರ್ಘ ಕಾಲದಿಂದ ತೊಂದರೆ ಅನುಭವಿಸುತ್ತಿದೆ. ಪ್ರಜಾಸತ್ತಾತ್ಮಕ ಆದರ್ಶಗಳನ್ನು ಮತ್ತು ಮೌಲ್ಯಗಳನ್ನು ಅವರ ಪಕ್ಷಗಳಲ್ಲಿ ಮೈಗೂಢಿಸಿಕೊಳ್ಳುವಂತೆ ನಾನು  ಎಲ್ಲಾ ಪಕ್ಷಗಳಿಗೂ ಮನವಿ ಮಾಡಿಕೊಳ್ಳುತ್ತೇನೆ. ಮತ್ತು ಭಾರತದ ಹಳೆಯ ಪಕ್ಷವಾಗಿ ಕಾಂಗ್ರೆಸ್ಸು ಅದಕ್ಕಾಗಿ ಎಲ್ಲಕ್ಕಿಂತ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕು

ಗೌರವಾನ್ವಿತ ಅಧ್ಯಕ್ಷರೇ,

ಇದನ್ನು ಇಲ್ಲಿ ಹೇಳಲಾಗಿದೆ-ಕಾಂಗ್ರೆಸ್ ಅಲ್ಲಿ ಇಲ್ಲದಿದ್ದರೆ ಏನಾಗುತ್ತಿತ್ತು?. “ಇಂಡಿಯಾ ಎಂದರೆ ಇಂದಿರಾ, ಇಂದಿರಾ ಎಂದರೆ ಇಂಡಿಯಾಎಂಬುದು ರೀತಿಯ ಚಿಂತನಾಕ್ರಮದ ಫಲಿತಾಂಶ.

ಗೌರವಾನ್ವಿತ ಅಧ್ಯಕ್ಷರೇ,

ಸದನದಲ್ಲಿ ಏನು ಹೇಳಲಾಗಿದೆಯೋ ಅದನ್ನು ನಾನು ಪುನರಾವರ್ತಿಸಲು ಬಯಸುತ್ತೇನೆ-“ಕಾಂಗ್ರೆಸ್ಸು ಅಲ್ಲಿಲ್ಲದಿದ್ದರೆ ಏನಾಗುತ್ತಿತ್ತು ಎಂದು ನಾನು ಆಶ್ಚರ್ಯಪಡುತ್ತಿದ್ದೇನೆ”. ನಾನು ನಿಮಗೆ ಹೇಳುತ್ತೇನೆ, ಗಾಂಧೀಜಿ ಅವರಿಗೆ ಕಾಂಗ್ರೆಸ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅಲ್ಲಿ ಏನಾಗುತ್ತದೆ ಎಂಬ ಬಗ್ಗೆ ಅರಿತಿದ್ದರು. ಮತ್ತು ಅವರು ಮುಂಚಿತವಾಗಿಯೇ ಎಚ್ಚರಿಸಿದ್ದರು- ಅವರಿಗೆ ಇದನ್ನು ಕೊನೆಗೊಳಿಸಿ ಎಂದು. ಮಹಾತ್ಮಾ ಗಾಂಧೀಜಿ ಅವರ ಆಶಯದಂತೆ ಎಲ್ಲವೂ ನಡೆದಿದ್ದರೆ, ಮಹಾತ್ಮಾ ಗಾಂಧಿ ಅವರ ಆಶಯದ ಪ್ರಕಾರ ಕಾಂಗ್ರೆಸ್ ಇರುತ್ತಿರಲಿಲ್ಲ-ಪ್ರಜಾಪ್ರಭುತ್ವವು ಕುಟುಂಬ ರಾಜಕೀಯದಿಂದ ಮುಕ್ತವಾಗಿರುತ್ತಿತ್ತು. ಭಾರತವು ವಿದೇಶೀ ಕನ್ನಡಕ ಧರಿಸುವುದಕ್ಕೆ ಬದಲು ದೇಶೀಯ ನಿರ್ಧಾರಗಳನ್ನು ಕೈಗೊಳ್ಳುವ ಹಾದಿಯನ್ನು ಅನುಸರಿಸುತ್ತಿತ್ತು. ಅಲ್ಲಿ ಕಾಂಗ್ರೆಸ್ ಇಲ್ಲದಿದ್ದರೆ ಜಾತೀಯತೆಯ ಬೇರುಗಳು, ಪ್ರಾದೇಶಿಕತೆ ಇಷ್ಟೊಂದು ಅಳಕ್ಕೆ ಇಳಿಯುತ್ತಿರಲಿಲ್ಲ.ಅಲ್ಲಿ ಕಾಂಗ್ರೆಸ್ ಇಲ್ಲದಿದ್ದರೆ ಸಿಖ್ ಜನರ ಸಾಮೂಹಿಕ ಕಗ್ಗೊಲೆ ನಡೆಯುತ್ತಿರಲಿಲ್ಲ. ಹಲವಾರು ವರ್ಷಗಳ ಕಾಲ ಪಂಜಾಬ್ ಭಯದ ಬೆಂಕಿಯಲ್ಲಿ ಬೇಯುತ್ತಿರಲಿಲ್ಲ. ಕಾಂಗ್ರೆಸ್ ಅಲ್ಲಿ ಇಲ್ಲದಿದ್ದರೆ, ಕಾಶ್ಮೀರದ ಪಂಡಿತರು ಕಾಶ್ಮೀರವನ್ನು ಬಿಡಬೇಕಾಗುತ್ತಿರಲಿಲ್ಲ. ಕಾಂಗ್ರೆಸ್ ಇಲ್ಲದಿದ್ದರೆ ದೇಶದ ಸಾಮಾನ್ಯ ಜನತೆ ಮನೆಗಳಿಗಾಗಿ, ರಸ್ತೆಗಳಿಗಾಗಿ, ವಿದ್ಯುತ್ತಿಗಾಗಿ, ನೀರಿಗಾಗಿ, ಶೌಚಾಲಯಗಳಿಗಾಗಿ ಮತ್ತು ಮೂಲ ಸೌಕರ್ಯಗಳಿಗಾಗಿ ಹಲವಾರು ವರ್ಷ ಕಾಯಬೇಕಾಗುತ್ತಿರಲಿಲ್ಲ

ಗೌರವಾನ್ವಿತ ಅಧ್ಯಕ್ಷರೇ,

ನಾನು ಹೇಳುತ್ತಾ ಹೋಗಬಹುದು.

ಗೌರವಾನ್ವಿತ ಅಧ್ಯಕ್ಷರೇ,

ಕಾಂಗ್ರೆಸ್ಸು ಅಧಿಕಾರದಲ್ಲಿ ಇದ್ದಾಗ, ಅದು ದೇಶದ ಅಭಿವೃದ್ಧಿಯನ್ನು ಮಾಡಲಿಲ್ಲ; ಈಗ ಅದು ವಿಪಕ್ಷದಲ್ಲಿದೆ. ಅದು ಮತ್ತೆ ದೇಶದ ಅಭಿವೃದ್ಧಿಗೆ ಅಡ್ಡಿಯುಂಟು ಮಾಡುತ್ತಿದೆ. ಮತ್ತು ಈಗ ಕಾಂಗ್ರೆಸ್ಸಿಗೆರಾಷ್ಟ್ರಎಂಬುದಕ್ಕೂ ಆಕ್ಷೇಪವಿದೆ. “ರಾಷ್ಟ್ರಎಂಬ ಚಿಂತನೆ ಅಸಾಂವಿಧಾನಿಕವಾಗಿದ್ದರೆ ಆಗ ನಿಮ್ಮ ಪಕ್ಷಕ್ಕೇಕೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಎಂದು ಹೆಸರಿಡಲಾಯಿತು?. ಹಾಗಿದ್ದರೆ ಹೆಸರನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂಬ ಹೆಸರಿನಿಂದ ಕಾಂಗ್ರೆಸ್ ಫೆಡರೇಶನ್ ಎಂದು ಬದಲಾಯಿಸಿ. ನಿಮ್ಮ ಪೂರ್ವಜರ ತಪ್ಪನ್ನು ಸರಿಪಡಿಸಿ.

ಗೌರವಾನ್ವಿತ ಅಧ್ಯಕ್ಷರೇ,

ಇಲ್ಲಿ, ಕಾಂಗ್ರೆಸ್, ಟಿ.ಎಂ.ಸಿ ಮತ್ತು ಎಡ ಪಕ್ಷಗಳ ಹಲವಾರು ಸಹೋದ್ಯೋಗಿಗಳು ಒಕ್ಕೂಟ ವ್ಯವಸ್ಥೆಯ ಬಗ್ಗೆ ಬಹಳ ದೀರ್ಘ ಉಪನ್ಯಾಸಗಳನ್ನು ನೀಡಿದರು. ಇದು ಅವಶ್ಯ, ಯಾಕೆಂದರೆ ಇದು ವಿವಿಧ ರಾಜ್ಯಗಳ ಹಿರಿಯರ ಸದನ, ಆದರೆ ನನ್ನೆಲ್ಲಾ ಮಿತ್ರರೇ...

ಗೌರವಾನ್ವಿತ ಅಧ್ಯಕ್ಷರೇ,

ವಂದನೆಗಳು ಗೌರವಾನ್ವಿತ ಅಧ್ಯಕ್ಷರೇ, ಪ್ರಜಾಪ್ರಭುತ್ವ ಎಂದರೆ ಬರೇ ಬೋಧಿಸುವುದಲ್ಲ. ಕೇಳುವುದು, ಆಲಿಸುವುದು ಕೂಡಾ ಪ್ರಜಾಪ್ರಭುತ್ವದ ಭಾಗ. ಆದರೆ ವರ್ಷಗಳಿಂದ ಅವರು ಬೋಧಿಸುವ ಅಭ್ಯಾಸ ಮಾಡಿಕೊಂಡು ಬಂದಿದ್ದಾರೆ, ಹಾಗಾಗಿ ಕೆಲವು ಸಂಗತಿಗಳನ್ನು ಆಲಿಸುವುದಕ್ಕೆ ಕಷ್ಟವಾಗುತ್ತಿದೆ.

ಗೌರವಾನ್ವಿತ ಅಧ್ಯಕ್ಷರೇ,

ಕಾಂಗ್ರೆಸ್, ಟಿ.ಎಂ.ಸಿ ಮತ್ತು ಎಡ ಪಕ್ಷಗಳ  ಸಹಿತ ಅನೇಕ ಸಹೋದ್ಯೋಗಿಗಳು ಒಕ್ಕೂಟ ವ್ಯವಸ್ಥೆಗೆ ಸಂಬಂಧಿಸಿ ಹಲವಾರು ಚಿಂತನೆಗಳನ್ನು ಮಂಡಿಸಿದರು. ಮತ್ತು ಇದನ್ನು ಸದನದಲ್ಲಿ ಚರ್ಚಿಸುವುದು ಬಹಳ ಸಹಜ ಯಾಕೆಂದರೆ ಸದನವು ವಿವಿಧ ರಾಜ್ಯಗಳ ಹಿರಿಯ ನಾಯಕರನ್ನು ಒಳಗೊಂಡ ಸದನ ಮತ್ತು ಸದನದಲ್ಲಿ ನಾವು ಅವರ ಮಾರ್ಗದರ್ಶನವನ್ನು ಸದಾ ಸ್ವೀಕರಿಸುತ್ತೇವೆ. ಆದರೆ, ನಾವು ಒಕ್ಕೂಟ ವ್ಯವಸ್ಥೆಯ ವಿಷಯವನ್ನು ಚರ್ಚಿಸುವಾಗ, ವಿಷಯಕ್ಕೆ ಸಂಬಂಧಿಸಿದ ನಮ್ಮ ಚಿಂತನೆಗಳ ಜೊತೆಗೆ ನಾನು ಇಂದು ಪ್ರತಿಯೊಬ್ಬರಿಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಓದಲು ಮನವಿ ಮಾಡುತ್ತೇನೆ ಮತ್ತು ಬಾಬಾಸಾಹೇಬ್ ಅವರ ಮಾತುಗಳನ್ನು ನೆನಪಿಸಿಕೊಳ್ಳಬೇಕು ಎಂದು ಕೋರುತ್ತೇನೆ. ..ಸಭೆಯಲ್ಲಿ, ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದಾರೆ, ಮತ್ತು ನಾನವರನ್ನು ಉಲ್ಲೇಖಿಸುತ್ತೇನೆ:

ಒಕ್ಕೂಟವು ಸಮಗ್ರತೆಯಿಂದಾದ ಒಕ್ಕೂಟವಾಗಿದೆ. ಆಡಳಿತಾತ್ಮಕ ಅನುಕೂಲತೆಗಾಗಿ, ದೇಶವನ್ನು ಮತ್ತು ಜನರನ್ನು ವಿವಿಧ ರಾಜ್ಯಗಳನ್ನಾಗಿ ವಿಂಗಡಿಸಬಹುದಾಗಿದೆ. ಆಡಳಿತಾತ್ಮಕ ಉದ್ದೇಶಕ್ಕಾಗಿ ಅದನ್ನು ವಿಭಜಿಸಬಹುದಾಗಿದೆ, ಆದರೆ ದೇಶವು ಸಮಗ್ರವಾಗಿ ಒಂದೇ ಆಗಿರುತ್ತದೆ

ಅವರು ಆಡಳಿತಾತ್ಮಕ ವ್ಯವಸ್ಥೆಗಳ ತಾತ್ವಿಕತೆಯನ್ನು ಮತ್ತುರಾಷ್ಟ್ರವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಮತ್ತು ಇದನ್ನು ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲೇ ಹೇಳಿದ್ದಾರೆ. ಒಕ್ಕೂಟ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಳವಾದ ವಿವರಣೆಯ ಮೂಲಕದ ಮಾರ್ಗದರ್ಶನದ ಹೊರತಾಗಿ ಬೇರಾವುದೂ ಬೇಕಾಗಿಲ್ಲ ಎಂಬುದಾಗಿ ನಾನು ನಂಬುತ್ತೇನೆ. ಆದರೆ ನಮ್ಮ ದೇಶದಲ್ಲಿ ಏನಾಗುತ್ತಿದೆ?. ಒಕ್ಕೂಟ ವ್ಯವಸ್ಥೆಯ ಬಗ್ಗೆ ಬಹಳಷ್ಟು ದೊಡ್ಡ ಭಾಷಣಗಳನ್ನು ಮಾಡಲಾಗಿದೆ. ಅಲ್ಲಿ ಹಲವಾರು ಉಪನ್ಯಾಸಗಳಾಗಿವೆ. ಬಹಳ ಸಣ್ಣ ಸಣ್ಣ ಕಾರಣಗಳಿಗಾಗಿ ಮುಖ್ಯಮಂತ್ರಿಗಳನ್ನು ವಿಮಾನ ನಿಲ್ದಾಣದಲ್ಲಿಯೇ ತೆಗೆದು ಹಾಕಿದ ದಿನಗಳನ್ನು ನಾವು ಮರೆಯುವಂತಾಯಿತೇ?. ಆಂಧ್ರಪ್ರದೇಶದ ಮಾಜಿ ಮುಖಮಂತ್ರಿ ಟಿ. ಅಂಜಯ್ಯ ಅವರಿಗೆ ಏನಾಯಿತು?. ಸದನದಲ್ಲಿರುವ ಅನೇಕರಿಗೆ ಘಟನೆ ಬಹಳ ಚೆನ್ನಾಗಿ ಗೊತ್ತಿದೆ. ಪ್ರಧಾನ ಮಂತ್ರಿ ಅವರ ಮಗ ವಿಮಾನ ನಿಲ್ದಾಣದಲ್ಲಿ ಮಾಡಲಾದ ವ್ಯವಸ್ಥೆಯ ಬಗ್ಗೆ ಮೆಚ್ಚಿಕೊಳ್ಳದ್ದರಿಂದ ಮುಖ್ಯಮಂತ್ರಿಗಳನ್ನು ವಜಾ ಮಾಡಲಾಯಿತು. ಇದು ಆಂಧ್ರಪ್ರದೇಶದ ಕೋಟ್ಯಾಂತರ ಜನತೆಯ ಭಾವನೆಗಳನ್ನು ಘಾಸಿಗೊಳಿಸಿತು. ಅದೇ ರೀತಿ ಕರ್ನಾಟಕದ ಜನಪ್ರಿಯ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಜೀ ಅವರನ್ನು ಅವರು ಅನಾರೋಗ್ಯಪೀಡಿತರಾಗಿದ್ದ ಸಮಯದಲ್ಲಿ ಅವಮಾನಕರ ರೀತಿಯಲ್ಲಿ ಹುದ್ದೆಯಿಂದ ತೆಗೆದುಹಾಕಲಾಯಿತು. ನಮ್ಮ ಚಿಂತನೆ ಕಾಂಗ್ರೆಸ್ಸಿನಷ್ಟು ಸಂಕುಚಿತವಾದುದಲ್ಲ. ನಾವು ಸಂಕುಚಿತ ಮನಸ್ಸಿನ ಜನರಲ್ಲ. ರಾಷ್ಟ್ರೀಯ ಗುರಿಗಳು ಮತ್ತು ಪ್ರಾದೇಶಿಕ ಆಶೋತ್ತರಗಳ ನಡುವೆ ನಮಗೆ ಯಾವುದೇ ಬಿಕ್ಕಟ್ಟು ಗೋಚರಿಸುವುದಿಲ್ಲ. ಪ್ರಾದೇಶಿಕ ಆಶೋತ್ತರಗಳನ್ನೂ ಸಮಾನ ಗೌರವದೊಂದಿಗೆ ನಿಭಾಯಿಸಬೇಕು ಮತ್ತು ಸಮಸ್ಯೆಗಳನ್ನು ಸಮಾನ ಮಹತ್ವ ನೀಡಿ ಪರಿಹರಿಸಬೇಕು. ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಪ್ರಾದೇಶಿಕ ಆಶೋತ್ತರಗಳಿಗೆ ಸ್ಪಂದಿಸಿದರೆ ಭಾರತದ ಪ್ರಗತಿ ಸಾಧ್ಯವಾಗುತ್ತದೆ. ದೇಶ ಮುಂದುವರೆಯಬೇಕು ಎಂದು ಹೇಳುವಾಗ ಇದು ನಮ್ಮ ಬದ್ಧತೆ, ಇದು ರಾಜ್ಯಗಳು ಪ್ರಗತಿ ಹೊಂದಿದರೆ ಆಗ ಮಾತ್ರ ದೇಶ ಪ್ರಗತಿ ಹೊಂದುವುದು ಸಾಧ್ಯವಾಗುತ್ತದೆ ಎಂಬುದು ಇಲ್ಲಿರುವ ಪರಿಸ್ಥಿತಿ. ರಾಜ್ಯಗಳು ಪ್ರಗತಿ ಸಾಧಿಸದೇ ಇದ್ದರೆ ನಾವು ದೇಶದ ಪ್ರಗತಿಯ ಬಗೆಗೆ ಯೋಚಿಸುವುದು ಸಾಧ್ಯವಿಲ್ಲ. ಆದುದರಿಂದ ಮೊದಲ ಶರತ್ತು ಎಂದರೆ: ರಾಜ್ಯ ಪ್ರಗತಿ ಸಾಧಿಸಬೇಕು. ಆಗ ಮಾತ್ರ ದೇಶವೂ ಪ್ರಗತಿ ಸಾಧಿಸುವುದು ಸಾಧ್ಯವಾಗುತ್ತದೆ.ದೇಶ ಪ್ರಗತಿ ಸಾಧಿಸಿದಾಗ, ದೇಶ ಸಮೃದ್ಧವಾಗುತ್ತದೆ. ಸಮೃದ್ಧಿ ರಾಜ್ಯಗಳ ಮಟ್ಟಕ್ಕೂ ತಲುಪುತ್ತದೆ.ಆದುದರಿಂದ ದೇಶ ಸಮೃದ್ಧವಾಗುತ್ತದೆ. ನಾವು ಚಿಂತನೆಯೊಂದಿಗೆ ಮುಂದುವರೆಯುತ್ತೇವೆ. ಮತ್ತು ನನಗೆ ಗೊತ್ತಿದೆ, ನಾನು ಗುಜರಾತಿನಲ್ಲಿ ಇದ್ದೆ. ದಿಲ್ಲಿಯಲ್ಲಿದ್ದ (ಕೇಂದ್ರ) ಸರಕಾರ ನನಗೆ ಮಾಡಿದ ಅನ್ಯಾಯಕ್ಕೆ ಚರಿತ್ರೆ ಸಾಕ್ಷಿಯಾಗಿದೆ. ನನಗೇನು ಮಾಡಲಾಯಿತು?. ಗುಜರಾತಿಗೆ ಏನು ಮಾಡಲಾಯಿತು?. ಆದರೆ ಎಲ್ಲಾ ಸಮಸ್ಯೆಗಳ ನಡುವೆ, ಅವಧಿಯಲ್ಲೂ ನೀವು ನನ್ನ ದಾಖಲೆಗಳನ್ನು ನೋಡಿದರೆ, ಪ್ರತೀ ದಿನ ಮುಖ್ಯಮಂತ್ರಿಯಾಗಿ, ನಾನು ಸದಾ ಒಂದು ಸಂಗತಿಯನ್ನು ಹೇಳುತ್ತಿದ್ದೆ. ಗುಜರಾತಿನ ಮಂತ್ರವೆಂದರೆಗುಜರಾತಿನ ಅಭಿವೃದ್ಧಿ ದೇಶಕ್ಕಾಗಿ ಅಭಿವೃದ್ಧಿ”. ನಮ್ಮ ಕೆಲಸ ಕಾರ್ಯಗಳು ಕೇಂದ್ರದಲ್ಲಿ ಯಾವ ಪಕ್ಷ ಇದೆ ಎಂಬುದನ್ನು ಅವಲಂಬಿಸಿ ಇರುತ್ತಿರಲಿಲ್ಲ. ಬದಲುಗುಜರಾತಿನ ಅಭಿವೃದ್ಧಿ, ದೇಶಕ್ಕಾಗಿರುವ ಅಭಿವೃದ್ಧಿಎಂಬುದು ನಮ್ಮ ಮಂತ್ರವಾಗಿತ್ತು. ದೇಶದ ಅಭಿವೃದ್ಧಿಗಾಗಿ ನಾವು ನಮ್ಮ ರಾಜ್ಯಗಳನ್ನು ಅಭಿವೃದ್ಧಿ ಮಾಡುವುದು ಒಕ್ಕೂಟ ವ್ಯವಸ್ಥೆಯಲ್ಲಿರುವ ನಮ್ಮೆಲ್ಲರ ಜವಾಬ್ದಾರಿ.ಅದರಿಂದ ನಾವು ಒಗ್ಗೂಡಿ ದೇಶವನ್ನು ಹೊಸ ಎತ್ತರಕ್ಕೆ ಒಯ್ಯಬಹುದು. ಇದು ಸರಿಯಾದ ದಾರಿ. ದಾರಿಯನ್ನು ಅನುಸರಿಸುವುದು ನಮಗೆ ಬಹಳ ಅವಶ್ಯ. ದಶಕಗಳ ಕಾಲ ಸರಕಾರಗಳನ್ನು ನಡೆಸುವ ಅವಕಾಶವನ್ನು ಪಡೆದವರು ರಾಜ್ಯಗಳನ್ನು ಅವಕಾಶವಂಚಿತವನ್ನಾಗಿಸಿದರು, ದಮನಿಸಿದರು. ಇದು ಬಹಳ ದುರದೃಷ್ಟಕರ ಸಂಗತಿ. ಇಲ್ಲಿ ಪ್ರತಿಯೊಬ್ಬರೂ ಹಾಜರಿದ್ದಾರೆ; ತೊಂದರೆ ಅನುಭವಿಸಿದವರೂ ಇಲ್ಲಿ ಹಾಜರಿದ್ದಾರೆ. ಅವರು ಹೇಗೆ ದಮನಿಸಿಡುತ್ತಿದ್ದರು?. ಕನಿಷ್ಟ ನೂರು ಬಾರಿಯಾದರೂ ಚುನಾಯಿತ ಸರಕಾರಗಳನ್ನು ರಾಷ್ಟ್ರಪತಿ ಆಡಳಿತ ಜಾರಿ ಮಾಡುವ ಮೂಲಕ ಪತನಗೊಳಿಸಲಾಯಿತು. ಅದರ ಬಗ್ಗೆ ಮಾತನಾಡಲು ನಿಮಗೇನಾದರೂ ಹಕ್ಕಿದೆಯೇ?. ಮತ್ತು ಅದರಿಂದಾಗಿಯೇ ನೀವು ಪ್ರಜಾಪ್ರಭುತ್ವಕ್ಕೂ ಬೆಲೆ ಕೊಡುವುದಿಲ್ಲ. 50 ರಾಜ್ಯ ಸರಕಾರಗಳನ್ನು ಅವುಗಳ ಅವಧಿಯಲ್ಲಿಯೇ ಕಿತ್ತೊಗೆದಾಗ ಯಾರು ಪ್ರಧಾನ ಮಂತ್ರಿ ಆಗಿದ್ದರು?.

ಗೌರವಾನ್ವಿತ ಅಧ್ಯಕ್ಷರೇ,

ಎಲ್ಲಾ ಪ್ರಶ್ನೆಗಳಿಗೆ ಪ್ರತಿಯೊಬ್ಬ ಭಾರತೀಯರಿಗೆ ಉತ್ತರ ತಿಳಿದಿದೆ ಮತ್ತು ಇಂದು ಅವರು ಇದರಿಂದಾಗಿ ಬಳಲುತ್ತಿದ್ದಾರೆ.

ಗೌರವಾನ್ವಿತ ಅಧ್ಯಕ್ಷರೇ,

ಕಾಂಗ್ರೆಸ್ ಹೈಕಮಾಂಡಿನ ನೀತಿ ಮೂರು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ, ಮೊದಲು ಅಪಖ್ಯಾತಿ ಬಳಿಕ ಅಸ್ಥಿರಗೊಳಿಸುವುದು ಮತ್ತು ಬಳಿಕ ವಜಾ ಮಾಡುವುದು. ರೀತಿಯಲ್ಲಿ ಅಪನಂಬಿಕೆ ಸೃಷ್ಟಿ ಮಾಡುವುದು, ಅಸ್ಥಿರತೆ ಉಂಟು ಮಾಡಿ ಬಳಿಕ ವಜಾ ಮಾಡುವುದು. ಇದು ಅವರು ಕಾರ್ಯನಿರ್ವಹಿಸಿದ ರೀತಿ

ಗೌರವಾನ್ವಿತ ಅಧ್ಯಕ್ಷರೇ,

ನಾನಿಂದು ಕೆಲವು ಪ್ರಶ್ನೆಗಳನ್ನು ಎತ್ತಲು ಇಚ್ಛಿಸುತ್ತೇನೆ. ಫಾರೂಕ್ ಅಬ್ದುಲ್ಲಾ ಸರಕಾರವನ್ನು ಅಸ್ಥಿರಗೊಳಿಸಿದವರು ಯಾರು? ಚೌಧರಿ ದೇವಿಲಾಲ್ ಜೀ ಅವರ ಸರಕಾರವನ್ನು ಬೀಳಿಸಿದವರು ಯಾರು?. ಚೌಧರಿ ಚರಣ್ ಸಿಂಗ್ ಅವರ ಜೀ ಅವರ ಸರಕಾರವನ್ನು ವಜಾ ಮಾಡಿದವರು ಯಾರು?. ಪಂಜಾಬಿನಲ್ಲಿ ಸರ್ದಾರ್ ಬಾದಲ್ ಸಿಂಗ್ ಸರಕಾರವನ್ನು ವಜಾ ಮಾಡಿದವರು ಯಾರು?. ಮಹಾರಾಷ್ಟ್ರದಲ್ಲಿ ಬಾಳಾಸಾಹೇಬ್ ಠಾಕ್ರೆ ಅವರನ್ನು ಅಪಮಾನ ಮಾಡಲು ಕೊಳಕು ತಂತ್ರಗಳನ್ನು ಬಳಸಿದವರು ಯಾರು? ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ ಮತ್ತು ಎಸ್.ಆರ್. ಬೊಮ್ಮಾಯಿ ಸರಕಾರಗಳನ್ನು ವಜಾ ಮಾಡಿದವರು ಯಾರು?. 50 ದಶಕದಲ್ಲಿ ಕೇರಳದಲ್ಲಿ ಚುನಾಯಿತ ಕಮ್ಯೂನಿಸ್ಟ್ ಸರಕಾರವನ್ನು ಕೆಳಗಿಳಿಸಿದವರು ಯಾರು?ತುರ್ತುಪರಿಸ್ಥಿತಿಯಲ್ಲಿ ತಮಿಳುನಾಡಿನಲ್ಲಿ ಕರುಣಾನಿಧಿ ಜೀ ಅವರ ಸರಕಾರವನ್ನು ವಜಾಗೊಳಿಸಿದ್ದು ಯಾರು?.1980 ರಲ್ಲಿ ಎಂ.ಜಿ.ಆರ್. ಸರಕಾರವನ್ನು ವಜಾ ಮಾಡಿದ್ದು ಯಾರು?. ಆಂಧ್ರ ಪ್ರದೇಶದಲ್ಲಿ ಎನ್.ಟಿ.ಆರ್. ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದ್ದು ಯಾರು?.ಅದೂ ಅವರು ಅನಾರೋಗ್ಯದಿಂದ ಇದ್ದಾಗ?. ಕೇಂದ್ರದೊಂದಿಗೆ ಸಹಮತ ಹೊಂದಿರಲಿಲ್ಲ ಎಂಬ ಕಾರಣಕ್ಕೆ ಮುಲಾಯಂ ಸಿಂಗ್ ಜೀ ಯಾದವ್ ಅವರಿಗೆ ಕಿರುಕುಳ ಕೊಟ್ಟ ಪಕ್ಷ ಯಾವುದು?.ಕಾಂಗ್ರೆಸ್ಸು ತನ್ನದೇ ನಾಯಕರನ್ನೂ ಸಹಿಸಿಕೊಳ್ಳಲಿಲ್ಲ. ಆಂಧ್ರ ಪ್ರದೇಶದ ಕಾಂಗ್ರೆಸ್ ಸರಕಾರ ಬಹಳ ಮುಖ್ಯವಾದ ಪಾತ್ರವನ್ನು ನಿಭಾಯಿಸಿತ್ತು. ಆಗ ಅವರು ಅವರಿಗೇನು ಮಾಡಿದರು?. ಅವರು ಆಂಧ್ರಪ್ರದೇಶವನ್ನು ಬಹಳ ಅವಮಾನಕಾರಕ ರೀತಿಯಲ್ಲಿ ವಿಭಜಿಸಿದರು. ಮೈಕ್ ಗಳನ್ನು ಸ್ವಿಚ್ ಆಫ್ ಮಾಡಲಾಯಿತು. ಮೆಣಸಿನ ಹುಡಿಯನ್ನು ಎರಚಲಾಯಿತು. ಯಾವುದೇ ಚರ್ಚೆ ನಡೆಯಲಿಲ್ಲ. ಇದು ಸರಿಯಾದ ದಾರಿಯೇ?.ಇದು ಪ್ರಜಾಪ್ರಭುತ್ವವೇ?.ಅಟಲ್ ಜೀ ಅವರ ಸರಕಾರವೂ ಮೂರು ರಾಜ್ಯಗಳನ್ನು ರಚಿಸಿತು. ನಾವು ರಾಜ್ಯದ ರಚನೆಯನ್ನು ಎಂದೂ ವಿರೋಧಿಸಿದವರಲ್ಲ. ಆದರೆ ದಾರಿ ಯಾವುದು?.  ಅಟಲ್ ಜೀ ಅವರು ಮೂರು ರಾಜ್ಯಗಳನ್ನು ರಚಿಸಿದರು.ಛತ್ತೀಸ್ ಗಢ, ಜಾರ್ಖಂಡ, ಉತ್ತರಾಖಂಡ; ಆದರೆ ಅದರ ಬಗ್ಗೆ ಹೋರಾಟ, ಕದನಗಳು ಇರಲಿಲ್ಲ. ಪ್ರತಿಯೊಂದನ್ನೂ ಚರ್ಚಿಸಲಾಗಿತ್ತು ಮತ್ತು ಚರ್ಚೆ ಶಾಂತಿಯುತವಾಗಿತ್ತುಪ್ರತಿಯೊಬ್ಬರೂ ಕುಳಿತು ಅದರ ಬಗ್ಗೆ ಚರ್ಚಿಸಿದರು. ಆಂಧ್ರ ಮತ್ತು ತೆಲಂಗಾಣ ವಿಷಯದಲ್ಲಿಯೂ ಇದನ್ನು ಮಾಡಬಹುದಾಗಿತ್ತು. ನಾವು ತೆಲಂಗಾಣ ವಿರೋಧಿಗಳಲ್ಲ. ಇದನ್ನು ಒಟ್ಟಾಗಿ ಕಾರ್ಯ ರೂಪಕ್ಕೆ ತರಬಹುದಾಗಿತ್ತು. ಆದರೆ ನಿಮ್ಮ ಅಹಂಕಾರ, ಅಧಿಕಾರದ ಅಮಲು ದೇಶದಲ್ಲಿ ಹಗೆತನವನ್ನು ಸೃಷ್ಟಿ ಮಾಡಿತು. ಮತ್ತು ಇಂದೂ ಕೂಡಾ ತೆಲಂಗಾಣ ಮತ್ತು ಆಂಧ್ರಪ್ರದೇಶದ ನಡುವೆ ಕಹಿ ಭಾವನೆಯ ಬೀಜಗಳು ತೆಲಂಗಾಣ ಮತ್ತು ಆಂಧ್ರಕ್ಕೆ ಹಾನಿ ಉಂಟು ಮಾಡುತ್ತಿವೆ. ಮತ್ತು ನಿಮಗೆ ಯಾವುದೇ ರಾಜಕೀಯ ಪ್ರಯೋಜನಗಳು ಲಭಿಸುತ್ತಿಲ್ಲ. ಮತ್ತು ನೀವು ನಮಗೆ ಉಪನ್ಯಾಸ ಕೊಡಲು ಪ್ರಯತ್ನಿಸುತ್ತಿದ್ದೀರಿ.

ಗೌರವಾನ್ವಿತ ಅಧ್ಯಕ್ಷರೇ,

ನಾವು ಸಹಕಾರಿ ಒಕ್ಕೂಟ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಯ ಮೂಲಕ ಮುನ್ನಡೆಯುತ್ತಿದ್ದೇವೆ. ಮತ್ತು ನಾವು ಸಹಕಾರಿ ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡಿದ್ದೇವೆ. ನಮ್ಮ ರಾಜ್ಯಗಳಲ್ಲಿ ಅಭಿವೃದ್ಧಿಗೆ ಸಂಬಂಧಿಸಿ ಆರೋಗ್ಯಪೂರ್ಣವಾದ ಸ್ಪರ್ಧೆ ಇರಬೇಕು. ನಾವು ಮುನ್ನಡೆಯಲು ಪ್ರಯತ್ನಿಸೋಣ. ಯಾವ ರಾಜ್ಯವನ್ನು ಯಾವ ಪಕ್ಷದ ಸರಕಾರವಾದರೂ ನಡೆಸುತ್ತಿರಲಿ, ಚಿಂತೆ ಇಲ್ಲ. ಅವರನ್ನು ಪ್ರೋತ್ಸಾಹಿಸುವುದು ನಮ್ಮ ಕೆಲಸ ಮತ್ತು ನಾವದನ್ನು ಮಾಡುತ್ತಿದ್ದೇವೆ.

ಗೌರವಾನ್ವಿತ ಅಧ್ಯಕ್ಷರೇ,

ನಾನಿಂದು ಒಂದು ಉದಾಹರಣೆಯನ್ನು ಕೊಡಲು ಬಯಸುತ್ತೇನೆ. ಭಾರತದಲ್ಲಿ ಬಲಿಷ್ಟ ಒಕ್ಕೂಟ ವ್ಯವಸ್ಥೆಗೆ ಜಿ.ಎಸ್.ಟಿ. ಮಂದಳಿ ರಚನೆಯೇ ಒಂದು ಉತ್ತಮ ಉದಾಹರಣೆ. ಆದಾಯಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಜಿ.ಎಸ್.ಟಿ. ಮಂಡಳಿಯಲ್ಲಿ ಕೈಗೊಳ್ಳಲಾಗುತ್ತದೆ. ಮತ್ತು ರಾಜ್ಯಗಳ ಹಣಕಾಸು ಸಚಿವರು ಹಾಗು ಭಾರತದ ಹಣಕಾಸು ಸಚಿವರು ಒಟ್ಟಾಗಿ ಅದೇ ಮೇಜಿನ ಸುತ್ತ ಕುಳಿತು ಚರ್ಚಿಸುತ್ತಾರೆ. ಎಲ್ಲರೂ ಸಮಾನರು. ಯಾರೂ ಮುಂದಿಲ್ಲ, ಯಾರೂ ಹಿಂದಿಲ್ಲ. ಪ್ರತಿಯೊಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಾರೆ. ಮತ್ತು ದೇಶ ಹೆಮ್ಮೆಪಡಬೇಕು. ಜಿ.ಎಸ್.ಟಿ.ಗೆ ಸಂಬಂಧಪಟ್ಟ ಎಲ್ಲಾ ನಿರ್ಧಾರಗಳನ್ನು ಒಟ್ಟಾಭಿಪ್ರಾಯದ ಮೂಲಕ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ಸದನ ಹೆಮ್ಮೆಪಡಬೇಕು. ಎಲ್ಲಾ ರಾಜ್ಯಗಳ ಹಣಕಾಸು ಸಚಿವರು ಮತ್ತು ಭಾರತದ ಹಣಕಾಸು ಸಚಿವರು ಇದನ್ನು ಒಗ್ಗೂಡಿ ಮಾಡಿದ್ದಾರೆ. ಇದಕ್ಕಿಂತ ಉತ್ತಮ ಒಕ್ಕೂಟದ ಮಾದರಿ ಯಾವುದಿದ್ದೀತು?.ಇದರ ಬಗ್ಗೆ ಹೆಮ್ಮೆ ಪಡದಿರುವವರಾರು?.ಆದರೆ ನಾವಿದರಲ್ಲಿ ಹೆಮ್ಮೆ ಪಡೆಯುವುದಿಲ್ಲ

ಗೌರವಾನ್ವಿತ ಅಧ್ಯಕ್ಷರೇ,

ಒಕ್ಕೂಟ ವ್ಯವಸ್ಥೆಯ ಬಗ್ಗೆ ನಾನು ಮತ್ತೊಂದು ಉದಾಹರಣೆಯನ್ನು ನೀಡಲು ಬಯಸುತ್ತೇನೆ. ದೇಶದಲ್ಲಿ ಸಾಮಾಜಿಕ ನ್ಯಾಯ ಬಹಳ ಅವಶ್ಯ ಎಂಬುದು ನಮಗೆ ಗೊತ್ತಿದೆ. ಅದಿಲ್ಲದಿದ್ದರೆ ದೇಶ ಪ್ರಗತಿ ಸಾಧಿಸಲು ಅಸಮರ್ಥವಾಗುತ್ತದೆ. ಅದೇ ರೀತಿ ಪ್ರಾದೇಶಿಕ ನ್ಯಾಯ ಕೂಡಾ ಅಷ್ಟೇ ಮುಖ್ಯ. ಅಭಿವೃದ್ಧಿಯ ವಿಷಯದಲ್ಲಿ ಯಾವುದೇ ಪ್ರದೇಶ ಹೊರಗೆ ಉಳಿದರೆ, ದೇಶವು ಮುನ್ನಡೆ ಸಾಧಿಸಲಾರದು. ಅದಕ್ಕಾಗಿ ನಾವುಆಶೋತ್ತರಗಳ ಜಿಲ್ಲೆಗಳುಎಂಬ ಯೋಜನೆಯನ್ನು ರೂಪಿಸಿದೆವು. ದೇಶದಲ್ಲಿ ವಿವಿಧ ಮಾನದಂಡಗಳ ಆಧಾರದಲ್ಲಿ 100 ಜಿಲ್ಲೆಗಳನ್ನು ಆಯ್ಕೆ ಮಾಡಲಾಯಿತು. ಜಿಲ್ಲೆಗಳನ್ನು ರಾಜ್ಯಗಳ ಜೊತೆ ಸಮಾಲೋಚನೆ ಮಾಡುವ ಮೂಲಕ ಆಯ್ಕೆ ಮಾಡಲಾಯಿತು. ನೂರಕ್ಕೂ ಅಧಿಕ ಜಿಲ್ಲೆಗಳು ಆಯಾ ರಾಜ್ಯಗಳ ಸರಾಸರಿ ಜಿಲ್ಲೆಗಳ ಮಟ್ಟಕ್ಕೆ ಬರಬೇಕು ಎಂಬುದು ನಮ್ಮ ಇರಾದೆಯಾಗಿತ್ತು. ರೀತಿಯಲ್ಲಿ ಹೊರೆ ಬಹಳ ಕಡಿಮೆ. ಮತ್ತು ನಾವು ಕೆಲಸವನ್ನು ಮಾಡಿದೆವು. ಇಂದು ನಾನು ಬಹಳ ಸಂತೋಷದಿಂದ ಮತ್ತು ಹೆಮ್ಮೆಯಿಂದ ಹೇಳುತ್ತೇನೆ ಭಾರತ ಸರಕಾರ ರೂಪಿಸಿದ ಯೋಜನೆಯ ಚಿಂತನೆಯನ್ನು ಒಂದು ಹೊರತುಪಡಿಸಿ ಉಳಿದೆಲ್ಲಾ ಅಂಗೀಕರಿಸಿವೆ. ಕೇಂದ್ರ ಸರಕಾರ, ರಾಜ್ಯ ಸರಕಾರಗಳು ಮತ್ತು ಜಿಲ್ಲಾ ಘಟಕಗಳು ಇಂದು ಒಗ್ಗೂಡಿ ನೂರು ಜಿಲ್ಲೆಗಳ ಪರಿಸ್ಥಿತಿಯನ್ನು ಬದಲಾಯಿಸಲು ಕೆಲಸ ಮಾಡುತ್ತಿವೆ. ಮತ್ತು ಇದರಲ್ಲಿ ಬೇರೆ ಬೇರೆ ಪಕ್ಷಗಳ ಸರಕಾರ ಇರುವ ರಾಜ್ಯಗಳಿವೆ. ಪ್ರತಿಯೊಂದು ರಾಜ್ಯ ಸರಕಾರ ಬಿ.ಜೆ.ಪಿ.ಗೆ ಸೇರಿದ್ದೆನ್ನುವಂತಿಲ್ಲ. ಮತ್ತು ಅವರೆಲ್ಲ ಒಟ್ಟಾಗಿ ಬಹಳ ಸಣ್ಣ ಅವಧಿಯಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಪಡೆದಿದ್ದಾರೆ, ಆಶೋತ್ತರಗಳ ಜಿಲ್ಲೆಗಳು ಆಯಾ ರಾಜ್ಯಗಳ ಸರಾಸರಿ ಜಿಲ್ಲೆಗಳ ಅನೇಕ ಮಾನದಂಡಗಳನ್ನು ದಾಟಿ ಸಾಧನೆ ಮಾಡಿವೆ. ಮತ್ತು ಇದು ಅತ್ಯುತ್ತಮ ಕೆಲಸಗಳಲ್ಲಿ ಒಂದು ಎಂದು ನಾನು ಭಾವಿಸುತ್ತೇನೆ. ಮತ್ತು ನಾನು ನಿಮಗೆ ಹೇಳುತ್ತೇನೆ, ಕೆಲವು ಆಶೋತ್ತರ ಜಿಲ್ಲೆಗಳಲ್ಲಿ ಹಿಂದಿಗಿಂತ ನಾಲ್ಕು ಪಟ್ಟು ಹೆಚ್ಚು ಜನ ಧನ ಖಾತೆಗಳನ್ನು ತೆರೆಯಲಾಗಿದೆ. ಎಲ್ಲಾ ರಾಜ್ಯಗಳೂ ಆಶೋತ್ತರಗಳ ಜಿಲ್ಲೆಗಳಲ್ಲಿ ಪ್ರತೀ ಕುಟುಂಬಕ್ಕೂ ಶೌಚಾಲಯಗಳನ್ನು ಮತ್ತು ವಿದ್ಯುತ್ ಒದಗಿಸುವ ಶ್ಲಾಘನೀಯ ಕೆಲಸ ಮಾಡಿವೆ. ಇದು ಒಕ್ಕೂಟ ರಚನೆಗೆ ಸಂಬಂಧಿಸಿದ ಅತ್ಯುತ್ತಮ ಮಾದರಿಯಾಗಿದೆ ಎಂದು ನಾನು ನಂಬುತ್ತೇನೆ. ಮತ್ತು ದೇಶದ ಪ್ರಗತಿಗೆ ಒಕ್ಕೂಟ ವ್ಯವಸ್ಥೆಯನ್ನು ಹೇಗೆ ಅತ್ಯುತ್ತಮವಾಗಿ ಬಳಸಿಕೊಳ್ಳಬಹುದು ಎಂಬುದಕ್ಕೆ ಇದು ಒಂದು ಉದಾಹರಣೆ.

ಗೌರವಾನ್ವಿತ ಅಧ್ಯಕ್ಷರೇ,

ಇಂದು, ನಾನು ರಾಜ್ಯಗಳಿಗೆ ಹಣಕಾಸು ಸಹಾಯವನ್ನು ಹೇಗೆ ನೀಡಲಾಗುತ್ತಿತ್ತು ಎಂಬ ಇನ್ನೊಂದು ಉದಾಹರಣೆಯನ್ನು ಹಂಚಿಕೊಳ್ಳಲು ಬಯಸುತ್ತೇನೆ. ನೀತಿಗಳನ್ನು ಸುಧಾರಿಸುವ ಮೂಲಕ ಯಾವ ರೀತಿಯ ಬದಲಾವಣೆಗಳಾಗಿವೆ ಎಂಬುದನ್ನೂ ಹಂಚಿಕೊಳ್ಳುತ್ತೇನೆ. ಮೊದಲು ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ಕೆಲವರ ತಿಜೋರಿ ತುಂಬಿಸುವುದಕ್ಕಷ್ಟೇ ಬಳಸಲಾಗುತ್ತಿತ್ತು. ನಾವು ಸ್ಥಿತಿಯನ್ನು ನೋಡಿದ್ದೇವೆ. ಅದು ಸುದ್ದಿಯಲ್ಲಿತ್ತು. ಈಗ ಸಂಪನ್ಮೂಲಗಳು ದೇಶದ ಖಜಾನೆಯನ್ನು ತುಂಬಿಸುತ್ತಿವೆ. ನಾವು ಕಲ್ಲಿದ್ದಲು ಮತ್ತು ಗಣಿಗಾರಿಕೆ ವಲಯದಲ್ಲಿ ಸುಧಾರಣೆಗಳನ್ನು ಆರಂಭ ಮಾಡಿದೆವು. ನಾವು ಖನಿಜ ಸಂಪನ್ಮೂಲಗಳನ್ನು ಪಾರದರ್ಶಕ ಪ್ರಕ್ರಿಯೆಯ ಮೂಲಕ  ಹರಾಜು ಹಾಕಿದೆವು. ನಾವು ಸುಧಾರಣಾ ಪ್ರಕ್ರಿಯೆಯನ್ನು ಮುಂದುವರೆಸಿದೆವು. ಶುಲ್ಕ ಇಲ್ಲದೆ ಮಾನ್ಯತಾ ಪರವಾನಗಿಯ ವರ್ಗಾವಣೆ, 50% ನಷ್ಟು ಉತ್ಪಾದನೆಯನ್ನು  ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪ್ರಕ್ರಿಯೆ, ಅವಧಿಗೆ ಮುಂಚಿತವಾಗಿ ಕಾರ್ಯಾರಂಭ ಮಾಡಿದರೆ 50% ರಿಯಾಯತಿಯಂತಹ ಸುಧಾರಣಾ ಪ್ರಕ್ರಿಯೆಗಳನ್ನು ಮುಂದುವರೆಸಿದೆವು. ಕಳೆದ ಒಂದು ವರ್ಷದಲ್ಲಿ ಗಣಿಗಾರಿಕೆ ಆದಾಯ ಸುಮಾರು 14 ಸಾವಿರ ಕೋ.ರೂ.ಗಳಿಂದ 35 ಸಾವಿರ ಕೋ.ರೂ.ಗಳಿಗೆ ಏರಿಕೆಯಾಗಿದೆ. ಹರಾಜಿನಿಂದ ಬರುವ ಆದಾಯವನ್ನು ರಾಜ್ಯ ಸರಕಾರಗಳು ಪಡೆದುಕೊಂಡಿವೆ. ಬಹಳ ಮುಖ್ಯ ಸಂಗತಿ ಎಂದರೆ ಜಾರಿಗೆ ತಂದ ಸುಧಾರಣೆಗಳಿಂದಾಗಿ ರಾಜ್ಯಗಳಿಗೆ ಲಾಭವಾಗಿದೆ. ಮತ್ತು ರಾಜ್ಯಗಳಿಗೆ ಏನಾದರೂ ಲಾಭವಾದರೆ ಅದರಿಂದ ಖಂಡಿತವಾಗಿ ದೇಶಕ್ಕೂ ಲಾಭವಾಗುತ್ತದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯ ಇಂತಹ ಬಹಳ ಪ್ರಮುಖವಾದಂತಹ ನಿರ್ಧಾರವನ್ನು ಕೈಗೊಳ್ಳಲಾಯಿತು ಮತ್ತು ಒಡಿಶಾ ಸುಧಾರಣೆಗಳನ್ನು ಜಾರಿಗೆ ತಂದ ಮೊದಲ ರಾಜ್ಯವಾಗಿದೆ. ಎಲ್ಲಾ ಸುಧಾರಣೆಗಳನ್ನು ಜಾರಿಗೆ ತಂದುದಕ್ಕಾಗಿ ಮತ್ತು ಹೆಗಲೆಣೆಯಾಗಿ ದುಡಿದುದಕ್ಕೆ ನಾನು ಒಡಿಶಾದ ಮುಖ್ಯಮಂತ್ರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.   

ಗೌರವಾನ್ವಿತ ಅಧ್ಯಕ್ಷರೇ,

ಇಲ್ಲಿ ಕೆಲವರು ನಾವು ಚರಿತ್ರೆಯನ್ನು ಬದಲಾಯಿಸುತ್ತಿದೇವೆ ಎಂದು ಆರೋಪ ಮಾಡಿದರು. ಅವರಿದನ್ನು ಹೊರಗೆ ಮಿಲಿಯನ್ ಬಾರಿ ಹೇಳಿದ್ದಾರೆ. ಮತ್ತು ಕೆಲವರು ಅದನ್ನು ಬರೆದಿದ್ದಾರೆ ಕೂಡಾ. ಕಾಂಗ್ರೆಸ್ಸು ನಗರ ನಕ್ಸಲರ ಹಿಡಿತದಲ್ಲಿ ಸಿಕ್ಕಿಬಿದ್ದಂತೆ ನನಗೆ ಕಾಣುತ್ತದೆ. ಅವರ ಇಡೀ ಚಿಂತನಾ ಕ್ರಮವೇ ನಗರ ನಕ್ಸಲರ ಪ್ರಭಾವಕ್ಕೆ ಒಳಗಾಗಿದೆ. ಮತ್ತು ಅದರಿಂದಾಗಿ ಅವರ ಮನಸ್ಥಿತಿ ಹಾಳುಗೆಡಹುವಂತಹದಾಗಿದೆ. ಮತ್ತು ಇದು ದೇಶಕ್ಕೆ ಬಹಳ ಕಳವಳದ ಸಂಗತಿಯಾಗಿದೆ. ನಾವಿದರ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ಕಾಂಗ್ರೆಸ್ಸಿನ ಸ್ಥಿತಿಯಿಂದ ನಗರ ನಕ್ಸಲರು ಬಹಳ ಜಾಣ್ಮೆಯಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ಮತ್ತು ಅದರ ಮನಸ್ಸನ್ನು ಸಂಪೂರ್ಣ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅವರ ತಲೆ ಕೆಡಿಸಲಾಗಿದೆ, ಬ್ರೈನ್ ವಾಶ್ ಮಾಡಲಾಗಿದೆ. ಮತ್ತು ಅದರಿಂದಾಗಿ ಅವರು ಪದೇ ಪದೇ ಚರಿತ್ರೆಯನ್ನು ಬದಲಾಯಿಸಲಾಗುತ್ತಿದೆ ಎನ್ನುತ್ತಿದ್ದಾರೆ.

ಗೌರವಾನ್ವಿತ ಅಧ್ಯಕ್ಷರೇ,

ನಾವು ಕೆಲವು ಜನರ ನೆನಪನ್ನು ಸ್ಥಿರಗೊಳಿಸಲು ಮತ್ತು ಅದನ್ನು ಮರುಚೇತನಗೊಳಿಸಲು ಬಯಸುತ್ತೇವೆ. ನಾವು ಯಾವುದೇ ಚರಿತ್ರೆಯನ್ನು ಬದಲಾಯಿಸುವುದಿಲ್ಲ. ಕೆಲವು ಜನರಿಗೆ, ಚರಿತ್ರೆ ಕೆಲವು ವರ್ಷಗಳ ಹಿಂದಷ್ಟೇ ಆರಂಭವಾಗಿದೆ. ನಾವು ಅವರನ್ನು ಇನ್ನೂ ಕೆಲವು ವರ್ಷಗಳ ಹಿಂದೆ ಕರೆದೊಯ್ಯುತ್ತಿದ್ದೇವೆಯೇ ಹೊರತು ಬೇರೇನಲ್ಲ. ಅವರು 50 ವರ್ಷಗಳ ಚರಿತ್ರೆಯ ಸಂತೋಷವನ್ನು ಅನುಭವಿಸಬಲ್ಲವರಾದರೆ, ನಾವು ಅವರಿಗೆ ನೂರು ವರ್ಷಗಳ ಚರಿತ್ರೆಯನ್ನು ತೋರಿಸುತ್ತೇವೆ. ಅವರು ಬರೇ ನೂರು ವರ್ಷಗಳವರೆಗೆ ಮಾತ್ರ ಕಾಳಜಿ ಹೊಂದಿದವರಾದರೆ, ನಾವು 200 ವರ್ಷ ಹಳೆಯ ಚರಿತ್ರೆಯನ್ನು ತೋರಿಸುತ್ತೇವೆ. ಅವರು ಬರೇ 200 ವರ್ಷ ಮಾತ್ರ ಬಲ್ಲವರಾದರೆ ನಾವು ಅವರಿಗೆ 300 ವರ್ಷ ಹಳೆಯ ಚರಿತ್ರೆಯನ್ನು ಹೇಳುತ್ತೇವೆ. ಈಗ ನಾವು 300-350 ವರ್ಷಗಳ ಹಿಂದೆ ಹೋಗಿ ಮಾತನಾಡುವುದಾದರೆ, ಛತ್ರಪತಿ ಶಿವಾಜಿಯವರನ್ನೂ ನೆನಪಿಸಬೇಕಾಗುತ್ತದೆ. ನಾವು ನಮ್ಮ ನೆನಪನ್ನು ಚುರುಕು ಮಾಡಲು ಪ್ರಯತ್ನಿಸುತ್ತಿದ್ದೇವೆ. ನಾವು ಚರಿತ್ರೆಯನ್ನು ಬದಲಾಯಿಸುತ್ತಿಲ್ಲ. ಕೆಲವರಿಗೆ ಚರಿತ್ರೆ ಎಂದರೆ ಬರೇ ಒಂದು ಕುಟುಂಬಕ್ಕೆ ಸೀಮಿತವಾಗಿದೆ, ಆದರೆ ಚರಿತ್ರೆ ವಿಶಾಲವಾದುದು. ಅಲ್ಲಿ ಹಲವಾರು ಮುಖ್ಯ ಸಂಗತಿಗಳಿವೆ. ಅಲ್ಲಿ ಏರಿಳಿತಗಳಿವೆ. ದೇಶದ ಭವಿಷ್ಯದ ದೃಷ್ಟಿಯಿಂದ ಭವ್ಯ ಇತಿಹಾಸವನ್ನು ಮರೆಯುವುದು ಸರಿಯಲ್ಲ ಎಂಬ ಕಾರಣಕ್ಕಾಗಿ ನಾವು ಬಹಳ  ದೀರ್ಘಾವಧಿಯ ಚರಿತ್ರೆಯನ್ನು ನೆನಪಿಸಿಕೊಳ್ಳಲು ನಾವು ಪ್ರಯತ್ನಿಸುತ್ತಿದ್ದೇವೆ. ಇದು ನಮ್ಮ ಜವಾಬ್ದಾರಿ ಎಂದು ನಾವು ಪರಿಗಣಿಸುತ್ತೇವೆ. ಚರಿತ್ರೆಯಿಂದ ಪಾಠಗಳನ್ನು ಕಲಿಯುವ ಮೂಲಕ ಬರಲಿರುವ 25 ವರ್ಷಗಳಲ್ಲಿ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ನಂಬಿಕೆಯನ್ನು ಬೆಳೆಸಿಕೊಳ್ಳೋಣ. ಮತ್ತು ಅಮೃತ ಕಾಲದ ಅವಧಿ ಅದರಿಂದಾಗಿ ಬೆಳೆಯುತ್ತದೆ ಎಂಬುದು ನನ್ನ ನಂಬಿಕೆ. ಅವಧಿಯಲ್ಲಿ ನಮ್ಮ ಹೆಣ್ಣು ಮಕ್ಕಳು, ನಮ್ಮ ಯುವ ಜನರು, ನಮ್ಮ ರೈತರು, ನಮ್ಮ ಗ್ರಾಮಗಳು, ನಮ್ಮ ದಲಿತರು, ನಮ್ಮ ಆದಿವಾಸಿಗಳು, ಸಮಾಜದ ಪ್ರತೀ ವರ್ಗದವರೂ ಪಾಲ್ಗೊಂಡು ಕಾಣಿಕೆ ನೀಡಬೇಕು. ನಾವು ಚಿಂತನೆಯೊಂದಿಗೆ ಮುಂದುವರೆಯಬೇಕು. ನಾವು 1857 ಸ್ವಾತಂತ್ರ್ಯ ಹೋರಾಟದತ್ತ ನೋಡಿದರೆ, 1857 ಬಗ್ಗೆ ನಾವು ಓದಲು ಮಾಹಿತಿ ಸಿಗುವುದು ಕಡಿಮೆ. ನಾವು ಚರಿತ್ರೆಯ ಸುವರ್ಣ ಪುಟಗಳನ್ನು ಮರೆಯುವುದಾದರೂ ಹೇಗೆ?. ನಾವು ಸಂಗತಿಗಳ ಬಗ್ಗೆ ನಿಮಗೆ ನೆನಪು ಮಾಡಲು ಪ್ರಯತ್ನಿಸುತ್ತಿದ್ದೇವೆ ಅಷ್ಟೇ. ದೇಶವು ಆತ್ಮಾಭಿಮಾನದಿಂದ ಬೀಗುವುದನ್ನು ಮತ್ತು ಮುನ್ನಡೆಯ ದಾಪುಗಾಲಿಡುವುದನ್ನು ಖಾತ್ರಿಪಡಿಸುವುದಕ್ಕೆ ನಾವು ಪ್ರಯತ್ನಿಸುತ್ತಿದ್ದೇವೆ.

ಗೌರವಾನ್ವಿತ ಅಧ್ಯಕ್ಷರೇ,

ಮಹಿಳಾ ಸಬಲೀಕರಣ ಕೂಡಾ ನಮಗೆ ಬಹಳ ಆದ್ಯತೆಯ ಕ್ಷೇತ್ರ. ಭಾರತದಂತಹ ದೇಶದಲ್ಲಿ ಅಭಿವೃದ್ಧಿಯ ಹಾದಿಯಲ್ಲಿ ಪ್ರತಿಯೊಬ್ಬರ ಪ್ರಯತ್ನಗಳು ಲೆಕ್ಕಕ್ಕೆ ಬರುತ್ತವೆ. ಪ್ರಯತ್ನದಲ್ಲಿ ನಮ್ಮ ತಾಯಂದಿರು ಮತ್ತು ಸಹೋದರಿಯರು ಬಹಳ ದೊಡ್ಡ ಸಹಭಾಗಿಗಳು. ಅವರು ದೇಶದ 50% ಜನಸಂಖ್ಯೆಯನ್ನು ಒಳಗೊಂಡಿದ್ದಾರೆ. ಆದುದರಿಂದ ನಾವು ಭಾರತದ ಸಮಾಜದಲ್ಲಿ ಸುಧಾರಣೆಗಳನ್ನು ತಂದಿದ್ದೇವೆ. ಇದು ರೋಮಾಂಚಕ ಸಮಾಜ. ಪ್ರತೀ ಕಾಲಮಾನದಲ್ಲಿಯೂ ಕೆಲವು ಶ್ರೇಷ್ಟ ವ್ಯಕ್ತಿಗಳು ಬಂದು ದುಷ್ಟಶಕ್ತಿಗಳಿಂದ ಸಮಾಜವನ್ನು ಮುಕ್ತ ಮಾಡಿದ್ದಾರೆ. ಮತ್ತು ಇಂದು ನಾವು ತಿಳಿದುಕೊಂಡಿದ್ದೇವೆ ಮಹಿಳಾ ಸಬಲೀಕರಣದ ಚಿಂತನೆ ದೇಶಕ್ಕೆ ಹೊಸತಲ್ಲ. ನಾವು ಅವರ ಸಬಲೀಕರಣಕ್ಕೆ ಆದ್ಯತೆ ಕೊಡುತ್ತಿದ್ದೇವೆ. ಉದಾಹರಣೆಗೆ ಹೆರಿಗೆ ರಜೆ ಹೆಚ್ಚಳ ಮಹಿಳೆಯರನ್ನು ಮತ್ತು ಅವರ ಕುಟುಂಬವನ್ನು ಸಶಕ್ತರನ್ನಾಗಿಸುವ ಪ್ರಯತ್ನದ ಹಾದಿ. ಮತ್ತು ನಾವು ದಿಕ್ಕಿನಲ್ಲಿ ಕಾರ್ಯಾಚರಿಸುತ್ತಿದ್ದೇವೆನಮ್ಮ ಇಂದು ಬೇಟಿ ಬಚಾವೋ-ಬೇಟಿ ಪಡಾವೋ  ಆಂದೋಲನದ ಮೂಲಕ ನಾವು ಮಹಿಳಾ ಮತ್ತು ಪುರುಷರ ಅನುಪಾತದಲ್ಲಿದ್ದ ಅಸಮಾನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸಿದ್ದೇವೆ.ಮತ್ತು ಕೆಲವು ವರದಿಗಳ ಪ್ರಕಾರ ಇಂದು ಕೆಲವು ಸ್ಥಳಗಳಲ್ಲಿ ಮಹಿಳೆಯರ ಸಂಖ್ಯೆ ಪುರುಷರ ಸಂಖ್ಯೆಗಿಂತ ಹೆಚ್ಚಾಗಿದೆ.ಇದು ಬಹಳ ದೊಡ್ಡ ಸಂತೋಷದ ಮತ್ತು ಹೆಮ್ಮೆಯ ಸಂಗತಿ.ನಾವು ನಿರಾಶಾದಾಯಕ ದಿನಗಳಿಂದ ಹೊರ ಬಂದಿದ್ದೇವೆ. ಮತ್ತು ನಾವು ಪ್ರಯತ್ನಿಸುತ್ತಲೇ ಇರಬೇಕಾಗುತ್ತದೆ. ಇಂದು ನಮ್ಮ ಹೆಣ್ಣು ಮಕ್ಕಳು ಎನ್.ಸಿ.ಸಿ. ಸೇರುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳು ಸೇನೆ ಸೇರುತ್ತಿದ್ದಾರೆ. ವಾಯು ಪಡೆಯಲ್ಲಿಯೂ ನಮ್ಮ ಹೆಣ್ಣು ಮಕ್ಕಳಿದ್ದಾರೆ. ನೌಕಾದಳದಲ್ಲಿಯೂ ನಮ್ಮ ಹೆಣ್ಣು ಮಕ್ಕಳಿದ್ದಾರೆ. ನಾವು ತ್ರಿವಳಿ ತಲಾಖಿನ ಕ್ರೂರ ಪದ್ಧತಿಯನ್ನು ಅಂತ್ಯಗೊಳಿಸಿದ್ದೇವೆ. ನಾನು ಎಲ್ಲೆಲ್ಲಿ ಹೋಗುತ್ತೇನೋ ಅಲ್ಲಿ ನನಗೆ ನಮ್ಮ ತಾಯಂದಿರ ಮತ್ತು ಸಹೋದರಿಯರ ಆಶೀರ್ವಾದ ಲಭಿಸುತ್ತಿದೆ, ಇದಕ್ಕೆ ಕಾರಣ ತ್ರಿವಳಿ ತಲಾಖ್ ಅಂತ್ಯಗೊಳಿಸಿರುವುದು. ಅದರಿಂದ ಪುತ್ರಿಯರಿಗೆ ಮಾತ್ರವಲ್ಲ ತ್ರಿವಳಿ ತಲಾಖ್ ನಿಂದ ಮನೆಗೆ ಮರಳಿರುವ ಮಕ್ಕಳ ತಂದೆ ಮತ್ತು ಸಹೋದರರಿಗೂ ನ್ಯಾಯ ಒದಗಿದೆ. ಇದು ಇಡೀ ಸಮಾಜದ ಕಲ್ಯಾಣಕ್ಕಾಗಿ. ಇದು ಮಹಿಳಾ ಪರವಾದ ಕ್ರಮವೇ ಹೊರತು ಪುರುಷ ವಿರೋಧಿ ಕ್ರಮವಲ್ಲ. ಹೆಣ್ಣು ಮಕ್ಕಳ ತಂದೆಯಾಗಿರುವ ಮುಸ್ಲಿಂ ಪುರುಷನಿಗೂ, ಸಹೋದರಿಯ ಸಹೋದರನಿಗೂ ಅಷ್ಟೇ ಉಪಯುಕ್ತ ಇದು.ಹಾಗಾಗಿ ಕ್ರಮ ಅವರಿಗೂ ಪ್ರಯೋಜನಕಾರಿ. ಅದು ಅವರಿಗೆ ರಕ್ಷಣೆ ನೀಡುತ್ತದೆ. ಏನಾದರೂ ಕಾರಣಗಳಿಗಾಗಿ ಅವರದನ್ನು ವ್ಯಕ್ತಪಡಿಸದಿದ್ದರೂ ಕ್ರಮ ಪ್ರತಿಯೊಬ್ಬರಲ್ಲಿಯೂ ಸಂತೋಷ ಮತ್ತು ಹೆಮ್ಮೆಯನ್ನು ತಂದಿದೆ. ಕಾಶ್ಮೀರದಲ್ಲಿ ಸಂವಿಧಾನದ ವಿಧಿ 370 ರದ್ಧತಿ ಅಲ್ಲಿಯ ತಾಯಂದಿರು ಮತ್ತು ಸಹೋದರಿಯರನ್ನು ಸಬಲರನ್ನಾಗಿ ಮಾಡಿದೆ. ನಾವು ಅವರಿಗೆ ಇದುವರೆಗೆ ಇಲ್ಲದ ಹಕ್ಕುಗಳನ್ನು ನೀಡಿದ್ದೇವೆಮತ್ತು ಹಕ್ಕುಗಳ ಕಾರಣದಿಂದಾಗಿ ಇಂದು ಅವರ ಶಕ್ತಿ ಹೆಚ್ಚಾಗಿದೆ. ಕಾಲದಲ್ಲಿಯೂ ಪುರುಷರಿಗೆ ಮತ್ತು ಮಹಿಳೆಯರಿಗೆ ಮದುವೆಯ ವಯಸ್ಸು ಬೇರೆ ಬೇರೆ ಯಾಕಿರಬೇಕು?. ನಮ್ಮ ಪುತ್ರರು ಮತ್ತು ಪುತ್ರಿಯರು ಸಮಾನರು ಎಂದಾದರೆ, ಸಮಾನತೆ ಎಲ್ಲ ಕಡೆಯೂ ಪ್ರತಿಫಲಿಸುತ್ತಿರಬೇಕು. ಆದುದರಿಂದ ನಾವು ನಿಟ್ಟಿನಲ್ಲಿ ಮುಂದುವರೆದು ನಮ್ಮ ಪುತ್ರರ ಮತ್ತು ಪುತ್ರಿಯರ ಮದುವೆ ವಯಸ್ಸು ಒಂದೇ ಆಗಿರುವಂತೆ ಮಾಡುತ್ತಿದ್ದೇವೆ. ಬಹಳ ಬೇಗ ಸದನವು ಇದರ ಬಗ್ಗೆ ಸರಿಯಾದ ನಿರ್ಧಾರ ಕೈಗೊಂಡು ನಮ್ಮ ತಾಯಂದಿರ ಮತ್ತು ಪುತ್ರಿಯರ ಕಲ್ಯಾಣದ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುತ್ತದೆ ಎಂಬ ಬಗ್ಗೆ ನನಗೆ ಖಚಿತ ವಿಶ್ವಾಸವಿದೆ.   

ಗೌರವಾನ್ವಿತ ಅಧ್ಯಕ್ಷರೇ,

ಗೋವಾಕ್ಕೆ ವರ್ಷ ಬಹಳ ಮುಖ್ಯ. ವರ್ಷ ಗೋವಾ ವಿಮೋಚನೆಯ 60ನೇ ವರ್ಷಾಚರಣೆ. ನಾನು ಇಂದು ಕೆಲವಂಶಗಳನ್ನು ಹೇಳಲು ಇಚ್ಛಿಸುತ್ತೇನೆ. ನಮ್ಮ ಕಾಂಗ್ರೆಸ್ ಸದಸ್ಯರು ಎಲ್ಲಿಲ್ಲಿ ಇದ್ದಾರೋ ಅವರು ಕೇಳಿಕೊಳ್ಳಬೇಕು. ಗೋವಾದ ಜನತೆಯೂ ಕೇಳುತ್ತಿರಬೇಕು. ಸರ್ದಾರ್ ಪಟೇಲ್ ಅವರು ಹೈದರಾಬಾದ್ ಮತ್ತು ಜುನಾಘಡ್ ಗಳಿಗೆ ಸಂಬಂಧಿಸಿದಂತೆ ವ್ಯೂಹ ರಚಿಸಿದ ರೀತಿ; ಸರ್ದಾರ್ ಸಾಹೇಬ್ ಅವರು ಉಪಕ್ರಮಗಳನ್ನು ಕೈಗೊಂಡ ರೀತಿ, ಅವರಿಂದ ಪ್ರೇರಣೆ ಪಡೆದು ಇದನ್ನೇ  ಗೋವಾಕ್ಕೂ ಮಾಡಿದ್ದರೆ, ಗೋವಾ ಭಾರತವು ಸ್ವತಂತ್ರಗೊಂಡ ಬಳಿಕ ಹದಿನೈದು ವರ್ಷ ಗುಲಾಮಗಿರಿಯಲ್ಲಿ ಬದುಕಬೇಕಾಗುತ್ತಿರಲಿಲ್ಲ. ಭಾರತ ಸ್ವಾತಂತ್ರ್ಯ ಪಡೆದ 15 ವರ್ಷಗಳ ಬಳಿಕ  ಗೋವಾ ಸ್ವತಂತ್ರವಾಯಿತು. ಕಾಲದ 60 ವರ್ಷ ಹಳೆಯ ಪತ್ರಿಕೆಗಳ ಮತ್ತು ಮಾಧ್ಯಮಗಳ ವರದಿಗಳು ಹೇಳುತ್ತವೆ- ಆಗಿನ ಪ್ರಧಾನ ಮಂತ್ರಿ ಪಂಡಿತ್ ನೆಹರೂ ಅವರ ಬಹಳ ದೊಡ್ಡ ಕಳವಳ –“ಪ್ರಧಾನ ಮಂತ್ರಿ ಅವರ ಅಂತಾರಾಷ್ಟ್ರೀಯ ಇಮೇಜಿಗೆ ಏನಾಗುತ್ತದೆ?, ಜಗತ್ತಿನಲ್ಲಿ ನನ್ನ ಇಮೇಜ್ ಗೆ ಕಳಂಕ ಬಂದರೆ ಏನು ಮಾಡುವುದು?, ಎಂಬುದಾಗಿತ್ತು. ಮತ್ತು ಅದರಿಂದಾಗಿ ಗೋವಾದ ವಸಾಹತುಶಾಹಿ ಸರಕಾರದ ಮೇಲೆ ದಾಳಿ ಮಾಡುವುದರಿಂದ ಶಾಂತಿ ಪ್ರಿಯ ಜಾಗತಿಕ ನಾಯಕರೆಂಬ ತಮ್ಮ ಇಮೇಜಿಗೆ ಕುತ್ತು ಬರುತ್ತದೆ ಎಂದು ಭಾವಿಸಿ ಅವರು- ನಾವು ಗೋವಾವನ್ನು ಅದರಷ್ಟಕ್ಕೆ ಬಿಟ್ಟು ಬಿಡುವ, ಗೋವಾ ಅನುಭವಿಸಲಿ, ನನ್ನ ಇಮೇಜಿಗೆ ಯಾವುದೇ ಹಾನಿ ಆಗಬಾರದು ಎಂಬ ನಿಲುವು ತಳೆದರು ಎಂಬುದಾಗಿ. ಸತ್ಯಾಗ್ರಹಿಗಳ ಮೇಲೆ ಗೋಳಿಬಾರ್ ಆದಾಗ, ವಸಾಹತುಶಾಹಿ ಆಡಳಿತಗಾರರು ಹಿಂದೂಸ್ಥಾನದ ನನ್ನ ಸಹೋದರರು ಮತ್ತು ಸಹೋದರಿಯರ ಮೇಲೆ ಗುಂಡು ಹಾರಿಸುತ್ತಿರುವಾಗ ನಮ್ಮ ದೇಶದ ಪ್ರಧಾನ ಮಂತ್ರಿ ಹೇಳುತ್ತಿದ್ದರು ತಾನು ಸೇನೆ ಕಳುಹಿಸುವುದಿಲ್ಲ ಎಂದು. ಅವರು ಸತ್ಯಾಗ್ರಹಿಗಳಿಗೆ ಸಹಾಯ ಮಾಡಲು ನಿರಾಕರಿಸಿದರು. ಇಂತಹ ಅನ್ಯಾಯವನ್ನು ಕಾಂಗ್ರೆಸ್ಸು ಗೋವಾಕ್ಕೆ ಮಾಡಿತು. ಇದರಿಂದ ಗೋವಾ ಮತ್ತೆ 15 ವರ್ಷಗಳ ಕಾಲ ಗುಲಾಮಗಿರಿಯ ಹಿಡಿತದಲ್ಲಿ ಉಳಿಯುವಂತಾಯಿತು. ಮತ್ತು ಗೋವಾದ ಅನೇಕ ವೀರ ಪುರುಷರು  ಪ್ರಾಣತ್ಯಾಗ ಮಾಡಬೇಕಾಯಿತು. ಅವರು ಬೆತ್ತ ಮತ್ತು ಗುಂಡುಗಳಿಗೆ ಬಲಿಯಾದರು. ಇಂತಹ ಘಟನೆಗಳು ನಡೆದವು. 1955 ಆಗಸ್ಟ್ 15 ರಂದು ನೆಹರೂ ಜೀ ಅವರು ಕೆಂಪು ಕೋಟೆಯಲ್ಲಿ ಕೆಲವಂಶಗಳನ್ನು ಹೇಳಿದರು. ಅದನ್ನು ನಾನು ಉಲ್ಲೇಖಿಸಲು ಇಚ್ಛಿಸುತ್ತೇನೆ. ಕಾಂಗ್ರೆಸ್ಸಿನ ನನ್ನ ಸ್ನೇಹಿತರು ಇಲ್ಲಿ ಇದ್ದಾರೆ ಎಂದು ನಾನು ಭಾವಿಸುತ್ತೇನೆ. ನೆಹರೂ ಜೀ ಅವರ ಹೆಸರು ಕೇಳಿ ಅವರಿಗೆ ಸಂತೋಷವಾಗಿರಬಹುದು ಮತ್ತು ಅದರಿಂದಾಗಿ ನಾನು ಆಗಾಗ ಅವರ ಬಾಯರಿಕೆಯನ್ನು ಹಿಂಗಿಸಲು ನೆಹರೂ ಜೀ ಅವರನ್ನು ಉಲ್ಲೇಖಿಸುತ್ತೇನೆ. ನಾನು ನೆಹರೂ ಜೀ ಅವರನ್ನು ಉಲ್ಲೇಖಿಸುತ್ತೇನೆ. ಭಾಷೆಯನ್ನು ಗಮನಿಸಿ. ಅವರು ಕೆಂಪು ಕೋಟೆಯಲ್ಲಿ ಹೇಳಿದ್ದರು,- ನಾವಲ್ಲಿ ಮಿಲಿಟರಿ ಕ್ರಮ ತೆಗೆದುಕೊಳ್ಳುತ್ತೇವೆ ಎಂಬ ಭ್ರಮೆ ಯಾರಿಗೂ ಬೇಡ. ಗೋವಾದ ಸುತ್ತ ಮುತ್ತ ಯಾವುದೇ ಸೇನೆ ಇಲ್ಲ. ಒಳಗಿರುವ ಜನರು ನಾವು ಸೇನೆ ಕಳುಹಿಸಬೇಕಾದಂತಹ ಸ್ಥಿತಿಯನ್ನು ನಿರ್ಮಾಣ ಮಾಡಲು ಇಚ್ಛಿಸುತ್ತಿದ್ದಾರೆ. ನಾವು ಸೇನೆಯನ್ನು ಕಳುಹಿಸುವುದಿಲ್ಲ, ನಾವು ಶಾಂತಿಯುತವಾಗಿ ಕ್ರಮ ಕೈಗೊಳ್ಳುತ್ತೇವೆ. ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳಬೇಕುಗೋವನ್ನರ ಆಶೋತ್ತರಗಳಿಗೆ ವಿರುದ್ಧವಾಗಿ ಕಾಂಗ್ರೆಸ್ ನಾಯಕರು ಆಗಸ್ಟ್ 15 ರಂದು ಮಾಡಿದ ಹೇಳಿಕೆಗಳಿವು. ಅಲ್ಲಿ ಸತ್ಯಾಗ್ರಹ ಮಾಡಿತ್ತಿದ್ದವರ ಬಗ್ಗೆ ಪಂಡಿತ್ ನೆಹರೂ ಮುಂದುವರೆದು ಹೇಳಿದ್ದಾರೆ. ಲೋಹಿಯಾ ಜೀ ಕೂಡಾ ಅಲ್ಲಿ ಸತ್ಯಾಗ್ರಹದಲ್ಲಿದ್ದರು. ದೇಶದ ಸತ್ಯಾಗ್ರಹಿಗಳು ಗೋವಾಕ್ಕೆ ಹೋಗುತ್ತಿದ್ದರು. ಸತ್ಯಾಗ್ರಹವು ಕರ್ನಾಟಕದ ಜಗನ್ನಾಥ ರಾಜ್ ಜೋಶಿ ಅವರ ನಾಯಕತ್ವದಲ್ಲಿ ನಡೆಯುತ್ತಿತ್ತು. ಆದರೆ ಪಂಡಿತ್ ನೆಹರೂ ಹೇಳಿದ್ದೇನು? “ಅಲ್ಲಿಗೆ ಯಾರಾದರೂ ಹೋಗುವವರಿದ್ದರೆ ಸಂತೋಷದಿಂದ ಹೋಗಬಹುದು”. ಅಣಕ ನೋಡಿ.ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ನನ್ನದೇ ದೇಶವಾಸಿಗಳ ಬಗ್ಗೆ ಎಂತಹ ಅಹಂಕಾರದ ಭಾಷೆ ಬಳಸಲಾಗಿದೆ ನೋಡಿ. ಆದರೆ ಅವರ ಮಾತುಗಳತ್ತ ನೋಡಿಯಾರಾದರೊಬ್ಬರು ತಮ್ಮನ್ನು ಸತ್ಯಾಗ್ರಹಿಗಳೆಂದು ಕರೆದುಕೊಂಡರೆ, ಆಗ ಅವರು ಸತ್ಯಾಗ್ರಹದ ತತ್ವ ಮತ್ತು ದಾರಿಗಳನ್ನೂ ನೆನಪಿಟ್ಟುಕೊಳ್ಳಬೇಕು. ಸತ್ಯಾಗ್ರಹಿಗಳಿಗೆ ಅಲ್ಲಿ ಸೇನೆಯಿಂದ ಯಾವುದೇ ನೆರವು ಲಭಿಸುವುದಿಲ್ಲ ಎಂಬುದೂ ನೆನಪಿನಲ್ಲಿಟ್ಟಿರಬೇಕುನನ್ನದೇ ದೇಶದ ಜನರನ್ನು ಅಸಹಾಯಕರನ್ನಾಗಿ ಮಾಡಲಾಯಿತು. ಗೋವಾದ ಜನರು ಕಾಂಗ್ರೆಸ್ಸಿನ ಧೋರಣೆಯನ್ನು ಮರೆಯಲಾರರು.

ಗೌರವಾನ್ವಿತ ಅಧ್ಯಕ್ಷರೇ,

ಇಲ್ಲಿ ಪ್ರತಿ ದಿನವೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಬಹಳ ದೊಡ್ಡ ಉಪನ್ಯಾಸಗಳನ್ನು ನೀಡಲಾಯಿತು. ಇಂದು ನಾನೊಂದು ಘಟನೆಯನ್ನು ವಿವರಿಸಲು ಬಯಸುತ್ತೇನೆ. ಮತ್ತು ಘಟನೆ ಗೋವಾದ ಪುತ್ರರೊಬ್ಬರನ್ನು ಕುರಿತದ್ದು. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೇಗೆ ಹಿಂಪಡೆಯಲಾಯಿತು ಎಂಬುದಕ್ಕೆ ಒಂದು ಉದಾಹರಣೆಯನ್ನು ನಾನು ಕೊಡ ಬಯಸುತ್ತೇನೆ. ಇಂದು ನಾನು ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಜನರ ಚರಿತ್ರೆಯನ್ನು ತೆರೆಯುತ್ತಿದ್ದೇನೆ. ಲತಾ ಮಂಗೇಶ್ಕರ್ ಅವರ ನಿಧನದಿಂದ ಇಡೀ ದೇಶ ಸಂತಾಪದಲ್ಲಿದೆ. ಲತಾ ಮಂಗೇಶ್ಕರ್ ಜೀ ಅವರ ಕುಟುಂಬ ಗೋವಾದಿಂದ ಬಂದದ್ದು. ಆದರೆ ಅವರ ಕುಟುಂಬವನ್ನು ಯಾವ ರೀತಿಯಲ್ಲಿ ನೋಡಲಾಯಿತು?. ದೇಶ ಇದರ ಬಗ್ಗೆ ಅರಿತುಕೊಳ್ಳಬೇಕು. ಲತಾ ಮಂಗೇಶ್ಕರ್ ಅವರ ಕಿರಿಯ ಸಹೋದರ, ಪಂಡಿತ್ ಹೃದಯನಾಥ್ ಮಂಗೇಶ್ಕರ್ ಗೋವಾದ ಗೌರವಾನ್ವಿತ ಮಗು, ಗೋವಾ ನೆಲದ ಹೆಮ್ಮೆಯ ಪುತ್ರ. ಅವರನ್ನು ಆಕಾಶವಾಣಿಯಿಂದ ತೆಗೆದು ಹಾಕಲಾಯಿತು. ಅವರು ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಅಪರಾಧ ಏನು? ಅವರ ಅಪರಾಧ ಏನು ಎಂದರೆ ಅವರು ಆಕಾಶವಾಣಿಯಲ್ಲಿ ವೀರ ಸಾವರ್ಕರ್ ಅವರ ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿದ್ದು. ಹೃದಯನಾಥ ಜೀ ಅವರು ಸಂದರ್ಶನದಲ್ಲಿ ಇದನ್ನು ಹೇಳಿದ್ದಾರೆ. ಅವರ ಸಂದರ್ಶನ ಲಭ್ಯವಿದೆ. ಅವರು ಸಂದರ್ಶನದಲ್ಲಿ ಹೇಳಿದ್ದಾರೆ, ಅವರು ಒಮ್ಮೆ ಸಾರ್ವಕರ್ ಜೀ ಅವರನ್ನು ಭೇಟಿಯಾದಾಗ ಅವರ ಕವನವನ್ನು ಹಾಡುವ ಅಭಿಲಾಷೆ ವ್ಯಕ್ತಪಡಿದರು, ಸಾರ್ವರ್ಕರ್ ಜೀ ಅವರಿಗೆ ಉತ್ತರ ಕೊಟ್ಟರು-“ನಿಮಗೆ ಜೈಲಿಗೆ ಹೋಗುವ ಆಸೆ ಇದೆಯೇ? ನನ್ನ ಕವನವನ್ನು  ಪ್ರಸ್ತುತ ಪ್ರಸ್ತುತಪಡಿಸಿದ ಬಳಿಕ ಜೈಲಿಗೆ ಹೋಗುವ ಹೋಗುವ ಆಸೆ ಹೊಂದಿರುವಿರೋ?. ಬಳಿಕ ಹೃದಯನಾಥ್ ಜೀ ಅವರು ಅವರ ದೇಶಭಕ್ತಿಯ ಕವನವನ್ನಾಧರಿಸಿದ ಹಾಡನ್ನು ಸಂಯೋಜನೆ ಮಾಡಿದರು. ಎಂಟು ದಿನಗಳಲ್ಲಿ ಅವರನ್ನು ಆಕಾಶವಾಣಿಯಿಂದ ಹೊರಗೆ ಹಾಕಲಾಯಿತು. ಇದು ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವೇ?. ನೀವು ಇಂತಹ ಅಭಿವ್ಯಕ್ತಿ ಸ್ವಾತಂತ್ರ್ಯದ ಸುಳ್ಳುಗಳನ್ನು ದೇಶದ ಮುಂದಿಟ್ಟಿದ್ದೀರಿ. ಇಂತಹ ದೌರ್ಜನ್ಯಗಳನ್ನು ಗೋವಾದ ಪುತ್ರ ಹೃದಯನಾಥ್ ಮಂಗೇಶ್ಕರ್ ಜೀ ಅವರ  ಮೇಲೆ ಮಾತ್ರ ಮಾಡಿದ್ದಲ್ಲ, ಕಾಂಗ್ರೆಸ್ ಆಳ್ವಿಕೆಯಲ್ಲಿ ಉದ್ದಕ್ಕೂ ಹಲವರ ಮೇಲೆ ಇಂತಹ ದೌರ್ಜನ್ಯಗಳನ್ನು ಮಾಡಲಾಯಿತು. ಪಟ್ಟಿ ಸಾಕಷ್ಟು ದೊಡ್ಡದಿದೆ. ಮಜ್ರೂಹ್ ಸುಲ್ತಾನ್ಪುರಿ ಅವರನ್ನು ಪಂಡಿತ್ ನೆಹರೂ ಅವರನ್ನು ಟೀಕಿಸಿದ್ದಕ್ಕಾಗಿ ವರ್ಷ ಕಾಲ ಜೈಲಿಗೆ ಹಾಕಲಾಯಿತು. ಪ್ರೊ. ಧರ್ಮಪಾಲ ಜೀ ಅವರನ್ನು ನೆಹರೂ ಧೋರಣೆಯನ್ನು ಟೀಕಿಸಿದ್ದಕ್ಕಾಗಿ ಜೈಲಿಗೆ ಹಾಕಲಾಯಿತು. ಪ್ರಖ್ಯಾತ ಸಂಗೀತಗಾರ ಕಿಶೋರ್ ಕುಮಾರ್ ಜೀ ಅವರನ್ನು ತುರ್ತು ಪರಿಸ್ಥಿತಿಯಲ್ಲಿ ಅದರ ಪರವಾಗಿ ಮಾತನಾಡದಿದ್ದುದಕ್ಕಾಗಿ ಮತ್ತು ಇಂದಿರಾ ಗಾಂಧಿ ಅವರಿಗೆ ನಡು ಬಗ್ಗಿಸದಿದ್ದುದಕ್ಕಾಗಿ ಹೊರಗೆ ಹಾಕಲಾಯಿತು. ಒಂದು ನಿರ್ದಿಷ್ಟ ಕುಟುಂಬದ ಬಗ್ಗೆ ಯಾರಾದರೂ ಸಣ್ಣ ಧ್ವನಿ ಎತ್ತಿದರೂ ಅಥವಾ ಕಣ್ಣಿನ ಹುಬ್ಬು ಎತ್ತಿದರೂ  ಏನಾಗುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ನಮಗೆ ಸೀತಾರಾಂ ಕೇಸರಿ ಅವರ ಬಗ್ಗೆ ಬಹಳ ಚೆನ್ನಾಗಿ ಗೊತ್ತಿದೆ. ಅವರಿಗೆ ಏನಾಯಿತು ಎಂಬುದೂ ನಮಗೆಲ್ಲರಿಗೂ ತಿಳಿದಿದೆ.

ಗೌರವಾನ್ವಿತ ಅಧ್ಯಕ್ಷರೇ,

ಭಾರತದ ಭವ್ಯ ಭವಿತವ್ಯದ ಬಗ್ಗೆ ನಂಬಿಕೆ ಇಡಿ ಎಂದು ನಾನು ಸದನದ ಎಲ್ಲಾ ಸದಸ್ಯರನ್ನೂ ಕೋರುತ್ತೇನೆ. ನಾವು 130 ಕೋಟಿ ದೇಶವಾಸಿಗಳ ಶಕ್ತಿಯ ಮೇಲೆ ವಿಶ್ವಾಸವಿಡೋಣ. ಸಾಮರ್ಥ್ಯವನ್ನು ಆಧರಿಸಿ ದೊಡ್ಡ ಗುರಿಗಳನ್ನು ಹಾಕಿಕೊಳ್ಳುವ ಮೂಲಕ ನಮ್ಮ ದೇಶವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ದೃಢ ನಿರ್ಧಾರ ಮಾಡೋಣ.

ಗೌರವಾನ್ವಿತ ಅಧ್ಯಕ್ಷರೇ,

ನಾವು ನಿನ್ನದನ್ನುನೋಡಿಕೋಸಂಪ್ರದಾಯಕ್ಕೆ ಕೊನೆ ಹಾಡಬೇಕು. ಮತ್ತು ಇದು ಒಂದು ಮತ ಮತ್ತು ಒಂದು ಭಾವನೆಯ ಒಂದು ಗುರಿಯೊಂದಿಗೆ ದೇಶವು ಮುನ್ನಡೆ ಸಾಧಿಸಲು ಹೊತ್ತಿನ ಅವಶ್ಯಕತೆಯಾಗಿದೆ. ಇದು ಸುವರ್ಣ ಯುಗ, ಇಡೀ ಜಗತ್ತೇ ಬಹಳ ಭರವಸೆ ಮತ್ತು ಹೆಮ್ಮೆಯೊಂದಿಗೆ ಭಾರತದತ್ತ ನೋಡುತ್ತಿದೆ. ಇಂತಹ ಅವಕಾಶವನ್ನು ಕಳೆದುಕೊಳ್ಳಬೇಡಿ. ದೇಶವಾಸಿಗಳ ಕಲ್ಯಾಣಕ್ಕೆ ಇದಕ್ಕಿಂತ ದೊಡ್ಡ ಅವಕಾಶ ಮತ್ತೊಂದಿಲ್ಲ. 25 ವರ್ಷಗಳ ಪ್ರಯಾಣ ನಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬಲ್ಲಂತಹದಾದುದರಿಂದ ಅವಕಾಶವನ್ನು ನಾವು ದಕ್ಕಿಸಿಕೊಳ್ಳೋಣ. ನಮ್ಮ ದೇಶದ ಸಂಪ್ರದಾಯಗಳ ಬಗ್ಗೆ ನಾವು ಹೆಮ್ಮೆ ಹೊಂದಿರಬೇಕು.ಮತ್ತು ನಾವು ಬಹಳ ದೊಡ್ಡ ವಿಶ್ವಾಸದೊಂದಿಗೆ ಮುನ್ನಡೆಯಬೇಕು. ಮತ್ತು ಇದನ್ನು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆसम गच्छध्वं सम वदध्वम् सं वो मनांसि जानताम्। , ಅಂದರೆ ನಾವು ಜೊತೆಯಾಗಿ ಮುಂದೆ ಸಾಗೋಣ, ಚರ್ಚಿಸೋಣ, ಮತ್ತು ಪ್ರತಿಯೊಂದನ್ನೂ ಜೊತೆಯಾಗಿ ಮಾಡೋಣ.ಇದರೊಂದಿಗೆ ನಾನು ರಾಷ್ಟ್ರಪತಿಗಳ ಭಾಷಣವನ್ನು ಅಂಗೀಕರಿಸುತ್ತೇನೆ. ನಾನವರಿಗೆ ನನ್ನ ಹೃದಯಾಂತರಾಳದಿಂದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮತ್ತು ನಾನು ಎಲ್ಲಾ ಗೌರವಾನ್ವಿತ ಸದಸ್ಯರಿಗೆ ಅವರ ಸಹಕಾರಕ್ಕಾಗಿ ಮತ್ತು ಚಿಂತನೆಗಾಗಿ, ಅಭಿಪ್ರಾಯಗಳಿಗಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಬಹಳ ಬಹಳ ಧನ್ಯವಾದಗಳು!.

ಘೋಷಣೆ: ಇದು ಪ್ರಧಾನ ಮಂತ್ರಿ ಅವರ ಭಾಷಣದ ಸರಿಸುಮಾರಾದ ಭಾಷಾಂತರ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

***



(Release ID: 1799200) Visitor Counter : 232