ರಾಷ್ಟ್ರಪತಿಗಳ ಕಾರ್ಯಾಲಯ
azadi ka amrit mahotsav g20-india-2023

ಗಣರಾಜ್ಯೋತ್ಸವ ದಿನಾಚರಣೆ 2022ರ ಮುನ್ನಾ ದಿನದಂದು ದೇಶವನ್ನುದ್ದೇಶಿಸಿ ಘನತೆವೆತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣ

Posted On: 25 JAN 2022 7:45PM by PIB Bengaluru

ಪ್ರೀತಿಯ ದೇಶ ಬಾಂಧವರೇ

ನಮಸ್ಕಾರ!

1.         ಭಾರತದಲ್ಲಿ ಮತ್ತು ವಿದೇಶಗಳಲ್ಲಿ ನೆಲೆಸಿರುವ ನಿಮ್ಮೆಲ್ಲರಿಗೂ 73ನೇ ಗಣರಾಜ್ಯೋತ್ಸವದ ಮುನ್ನಾ ದಿನವಾದ ಇಂದು ನನ್ನ ತುಂಬು ಹೃದಯದ ಶುಭ ಕಾಮನೆಗಳು. ನಮ್ಮೆಲ್ಲರನ್ನು ಏಕಮಾತ್ರ ಸೂತ್ರದಡಿ ಬೆಸೆದಿರುವ ಭಾರತೀಯತೆಯನ್ನು ಸಂಭ್ರಮಿಸುವ ಸುಸಂದರ್ಭ ಇದು. 1950ರ ಈ ದಿನ, ನಮ್ಮೆಲ್ಲರ ಗೌರವಯುತ ಬದುಕಿಗೆ ಔಪಚಾರಿಕ ಸ್ವರೂಪ ಪ್ರಾಪ್ತವಾದ ದಿನ. ಆ ದಿನ ಭಾರತ ಬೃಹತ್ ಪ್ರಜಾತಾಂತ್ರಿಕ ಗಣರಾಜ್ಯವಾಗಿ ರೂಪು ತಳೆಯಿತು. ಭಾರತೀಯರಾದ ನಮ್ಮೆಲ್ಲರ ಸಾಮೂಹಿಕ ದೃಷ್ಟಿಕೋನದ ಪ್ರೇರಣೆಯಿಂದ ಮೈದಳೆದ ಸಂವಿಧಾನವನ್ನು ಅನುಷ್ಠಾನಗೊಳಿಸಿದ ದಿನ. ನಮ್ಮ ಪ್ರಜಾತಂತ್ರದ ವೈವಿಧ್ಯ ಮತ್ತು ಸ್ಪಂದನಶೀಲತೆ, ಜಗತ್ತಿನೆಲ್ಲೆಡೆ ಮನ್ನಣೆ ಪಡೆದಿದೆ. ಏಕತೆ ಮತ್ತು ಒಂದು ದೇಶ ಎಂಬ ಮನೋಭಾವನೆಯನ್ನು ಪ್ರತಿವರ್ಷ ಗಣರಾಜ್ಯ ದಿನವಾಗಿ ಆಚರಿಸಲಾಗುತ್ತಿದೆ. ಸಾಂಕ್ರಾಮಿಕದಿಂದಾಗಿ ಈ ವರ್ಷದ ಗಣರಾಜ್ಯೋತ್ಸವ ಸಂಭ್ರಮ ಕಳೆಗುಂದಿರಬಹುದು, ಆದರೆ ಆ ಹುರುಪು ಎಂದಿನಂತೆ ಚೈತನ್ಯ ಶೀಲ.

2.         ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಲು, ಕೆಚ್ಚೆದೆಯ ಹೋರಾಟ ನಡೆಸಿದ ಮತ್ತು ಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ ಮಹಾನ್ ಸ್ವಾತಂತ್ರ ಸೇನಾನಿಗಳನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸೋಣ. ಜನತೆಯನ್ನು ಬಡಿದೆಬ್ಬಿಸುವಂತಹ ಜೈ ಹಿಂದ್ ಘೋಷಣೆ ಮೊಳಗಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯನ್ನು ಎರಡು ದಿನಗಳ ಹಿಂದೆ ಜನವರಿ 23ರಂದು ನಾವೆಲ್ಲ ಆಚರಿಸಿದ್ದೇವೆ. ಸ್ವಾತಂತ್ರ್ಯಕ್ಕಾಗಿ ಅವರ ಹೋರಾಟ ಮತ್ತು ಭಾರತದ ಘನತೆಯ ಅವರ ಪ್ರತೀಕ್ಷೆ ನಮ್ಮೆಲ್ಲರಿಗೂ ಸ್ಫೂರ್ತಿದಾಯಕ.

3.         ಅಂದಿನ ಪೀಳಿಗೆಯ ಕೆಲ ಶ್ರೇಷ್ಠ ಜ್ಞಾನವೇತ್ತರು, ಸಂವಿಧಾನವನ್ನು ರೂಪಿಸಿದ ಸಂವಿಧಾನ ರಚನಾ ಸಮಿತಿಯಲ್ಲಿದ್ದರು ಎಂಬುದು ನಮ್ಮ ಪರಮ ಸೌಭಾಗ್ಯವೇ ಸರಿ. ಅವರು ನಮ್ಮ ಮಹಾನ್ ಸ್ವಾತಂತ್ರ್ಯ ಸಂಗ್ರಾಮದ ದಾರಿದೀಪಗಳು. ಸುದೀರ್ಘ ವರ್ಷಗಳ ಬಳಿಕ ಭಾರತದ ಆತ್ಮ ಪುನಶ್ಚೇತನಗೊಂಡಿತು. ಈ ಅಸಾಧಾರಣ ಮಹನೀಯರು ಮತ್ತು ಮಹಿಳೆಯರು ನವೋದಯದ ಹರಿಕಾರರು. ಪ್ರತಿಯೊಂದು ವಿಧಿ, ಪ್ರತಿಯೊಂದು ನುಡಿಗಟ್ಟು, ಪ್ರತಿಯೊಂದು ಪದವನ್ನು ಜನತೆಯ ಪರವಾಗಿ ಅವರು ಕೂಲಂಕಷವಾಗಿ ವಿಮರ್ಶಿಸಿದರು. ಈ ಚಿಂತನ-ಮಂಥನ ಹತ್ತಿರ ಹತ್ತಿರ ಮೂರು ವರ್ಷಗಳ ಕಾಲ ನಡೆಯಿತು. ಕೊನೆಗೆ ಕರಡು ನಿರೂಪಣಾ ಸಮಿತಿಯ ಅಧ್ಯಕ್ಷರಾದ ಡಾ. ಬಿ.ಆರ್. ಅಂಬೇಡ್ಕರ್ ಅವರು ಅಂತಿಮ ಆವೃತ್ತಿಯನ್ನು ಸಿದ್ಧಪಡಿಸಿದರು. ಅದು ನಮ್ಮ ಸ್ಥಾಪಕ ದಾಖಲೆಯಾಗಿ ಮಾನ್ಯವಾಯಿತು.

4.         ದೇಶದ ಕಾರ್ಯ ವಿಧಾನದ ಅಂಶಗಳನ್ನು ವಿಶದಪಡಿಸುವ ಸಂವಿಧಾನದ ಪಠ್ಯ, ಸುದೀರ್ಘವಾಗಿದ್ದು - ಪ್ರಜಾತಂತ್ರ, ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮಾರ್ಗದರ್ಶಿ ತತ್ವಗಳನ್ನು, ಅದರ ಮುನ್ನುಡಿ ಪ್ರತಿಬಿಂಬಿಸುತ್ತದೆ. ನಮ್ಮ ಗಣತಂತ್ರದ ನಿಲುವಿಗೆ ಇವು ಬುನಾದಿಯಾಗಿದೆ. ಈ ಮೌಲ್ಯಗಳೇ ನಮ್ಮ ಉತ್ತರದಾಯಿತ್ವದ ದ್ಯೋತಕಗಳಾಗಿವೆ.

5.         ಪ್ರಜೆಗಳ ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳ ರೂಪದಲ್ಲಿ ನಮ್ಮ ಸಂವಿಧಾನದಲ್ಲಿ ಈ ಮೌಲ್ಯಗಳು ಪರಮೋಚ್ಚ ಸ್ಥಾನ ಪಡೆದಿದೆ. ಹಕ್ಕುಗಳು ಮತ್ತು ಕರ್ತವ್ಯಗಳ ಪಾಲನೆ, ನಾಗರಿಕರು ಮೂಲಭೂತ ಹಕ್ಕುಗಳನ್ನು ಅನುಭವಿಸಲು ಸೂಕ್ತ ಪರಿಸರವನ್ನು ನಿರ್ಮಿಸಿಕೊಡುತ್ತವೆ. ರಾಷ್ಟ್ರೀಯ ಸೇವೆಗೆ ಕರೆ ಕೊಟ್ಟಾಗ, ತಮ್ಮ ಮೂಲಭೂತ ಕರ್ತವ್ಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೋಟ್ಯಂತರ ಜನರು, ಸ್ವಚ್ಛಭಾರತ್ ಅಭಿಯಾನ್ ಮತ್ತು ಕೋವಿಡ್ ಲಸಿಕಾ ಅಭಿಯಾನವನ್ನು ಜನಾಂದೋಲನವಾಗಿ ಪರಿವರ್ತಿಸಿದರು. ಇಂತಹ ಆಂದೋಲನಗಳ ಯಶಸ್ಸಿನ  ಮಹಾನ್ ಕೀರ್ತಿ ನಮ್ಮ ಕರ್ತವ್ಯ ನಿಷ್ಠ ಜನತೆಗೆ ಸಲ್ಲಬೇಕು. ನಮ್ಮ ಜನರು ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ರಾಷ್ಟ್ರೀಯ ಹಿತಾಸಕ್ತಿಯ ಆಂದೋಲನಗಳನ್ನು ಬಲಗೊಳಿಸುವ ಕಾರ್ಯವನ್ನು ಮುಂದುವರಿಸುವರು ಹಾಗೂ ಅದೇ ಸಮರ್ಪಣಾ ಭಾವವನ್ನು ಪ್ರದರ್ಶಿಸುವರು ಎಂಬುದು ನನ್ನ ವಿಶ್ವಾಸ.

6.         ಸಂವಿಧಾನ ರಚನಾ ಸಭೆ 1949ರ ನವೆಂಬರ್ 26ರಂದು ಭಾರತೀಯ ಸಂವಿಧಾನವನ್ನು ಜಾರಿಗೊಳಿಸಿ ಅಂಗೀಕರಿಸಿದ್ದು, ನಾವೀಗ ಅದನ್ನು ಸಂವಿಧಾನ ದಿನವಾಗಿ ಆಚರಿಸುತ್ತಿದ್ದೇವೆ. ಆದರೆ ಇದನ್ನು ಪರಿಣಾಮಕಾರಿಗೊಳಿಸಿದ್ದು ಎರಡು ತಿಂಗಳ ನಂತರ, ಭಾರತ ಸಂಪೂರ್ಣ ಸ್ವಾತಂತ್ರ್ಯ ಪಡೆಯಬೇಕೆಂಬ ನಿರ್ಣಯ ಮಾಡಿದ 1930ರ ಈ ದಿನದ ಕುರುಹಾಗಿ ಆ ರೀತಿ ಮಾಡಲಾಯಿತು. 1930ರಿಂದ 1947ರ ವರೆಗೆ ಪ್ರತಿವರ್ಷ ಜನವರಿ 26ರಂದು ಪೂರ್ಣ ಸ್ವರಾಜ್ ದಿನ ಆಚರಿಸಲಾಗುತ್ತಿತ್ತು. ಹಾಗಾಗಿ ಸಂವಿಧಾನವನ್ನು ಅನುಷ್ಠಾನಗೊಳಿಸುವುದಕ್ಕಾಗಿ ಆ ದಿನವನ್ನು ಆಯ್ಕೆ ಮಾಡಿಕೊಳ್ಳಲಾಯಿತು.

7.         ಪೂರ್ಣ ಸ್ವರಾಜ್ ದಿನವನ್ನು ಹೇಗೆ ಆಚರಿಸಬೇಕೆಂಬ ಬಗ್ಗೆ ಸಹ ದೇಶವಾಸಿಗಳಿಗೆ ಮಹಾತ್ಮಗಾಂಧಿಯವರು ಕೆಲ ಸಲಹೆಗಳನ್ನು ಬರೆದಿದ್ದಾರೆ. ಅವರು ಹೇಳಿರುವುದನ್ನು ನಾನು ಉಲ್ಲೇಖಿಸುತ್ತಿದ್ದೇನೆ - ನೆನಪಿಡಿ, ನಾವು ನಮ್ಮ ಗುರಿಯನ್ನು ಅಹಿಂಸಾತ್ಮಕವಾಗಿ ಮತ್ತು ಸತ್ಯಮಾರ್ಗಗಳ ಮೂಲಕ ಸ್ಥಾಪಿಸಬೇಕೆಂಬ ಬಯಕೆ ಹೊಂದಿದ್ದೇವೆ. ಆತ್ಮ ಪರಿಶುದ್ಧತೆಯಿಂದ ಮಾತ್ರ ನಾವಿದನ್ನು ಮಾಡಬಹುದಾಗಿದೆ. ಆದ್ದರಿಂದ ಈ ದಿನವನ್ನು ನಮ್ಮ ಸಾಮರ್ಥ್ಯಕ್ಕನುಸಾರ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಮರ್ಪಿಸಿಕೊಳ್ಳೋಣ.

8.         ಗಾಂಧೀಜಿಯವರ ಸಲಹೆಗೆ ಕಾಲದ ಚೌಕಟ್ಟಿಲ್ಲ ಎಂದು ಹೇಳಬೇಕಾದ ಅವಶ್ಯಕತೆ ಇಲ್ಲ. ನಾವು ಗಣರಾಜ್ಯೋತ್ಸವವನ್ನು ಅದೇ ರೀತಿ ಆಚರಿಸಬೇಕೆಂದು ಅವರು ಬಯಸಿದ್ದಿರಬಹುದು. ನಾವು ನಮ್ಮ ಅಂತರಂಗವನ್ನು ನೋಡಿಕೊಳ್ಳಬೇಕು, ಆತ್ಮಾವಲೋಕನ ಮಾಡಿಕೊಳ್ಳಬೇಕು ಹಾಗೂ ಉತ್ತಮ ಮಾನವರಾಗಲು ಪ್ರಯತ್ನಿಸಬೇಕು. ಆ ಬಳಿಕ ಬಹಿರಂಗವನ್ನು ನೋಡಬೇಕು, ಇತರರೊಂದಿಗೆ ಕೈಜೋಡಿಸಿ ಉತ್ತಮ ಭಾರತ ಮತ್ತು ಉತ್ತಮ ಜಗತ್ತು ನಿರ್ಮಾಣಕ್ಕೆ ಕೊಡುಗೆ ಸಲ್ಲಿಸಬೇಕು ಎಂದು ಅವರು ಅಪೇಕ್ಷಿಸಿದ್ದರು.

 

ಪ್ರೀತಿಯ ದೇಶವಾಸಿಗಳೇ,

9.         ಜಗತ್ತು ಈಗಿನಂತೆ, ಹಿಂದೆಂದೂ ಇಷ್ಟೊಂದು ನೆರವಿನ ಅಗತ್ಯ ಎಣಿಸಿರಲಿಲ್ಲ. ಎರಡು ವರ್ಷಗಳಿಗೂ ಹೆಚ್ಚು ಕಾಲದಿಂದ ಮಾನವಕುಲ ಕೊರೋನಾ ವೈರಾಣು ವಿರುದ್ಧ ಸೆಣೆಸುತ್ತಲೇ ಇದೆ. ನೂರಾರು ಸಾವಿರಾರು ಜೀವಗಳನ್ನು ಕಳೆದುಕೊಂಡಿದ್ದೇವೆ. ಇದರ ದುಷ್ಪರಿಣಾಮದಿಂದ ಆರ್ಥಿಕತೆ ತತ್ತರಿಸಿದೆ. ಹಿಂದೆಂದೂ ಇಲ್ಲದಂತಹ ದುರ್ದೆಸೆ ಮತ್ತು ಮೇಲಿಂದ ಮೇಲೆ ರೂಪಾಂತರಿ ವೈರಾಣುಗಳು ಹೊಸ ಸಂಕಷ್ಟಗಳನ್ನು ಒಡ್ಡುತ್ತಿವೆ. ಮನುಕುಲಕ್ಕೆ ಇದೊಂದು ಅಸಾಧಾರಣ ಸವಾಲಾಗಿದೆ.

10.       ಭಾರತಕ್ಕೆ ಈ ಸಾಂಕ್ರಾಮಿಕ ನಿರ್ವಹಣೆ ಎಲ್ಲಕ್ಕಿಂತ ಹೆಚ್ಚಿನ ತ್ರಾಸದಾಯಕವಾಗಬಹುದಿತ್ತು. ನಮ್ಮಲ್ಲಿ ಜನಸಂಖ್ಯೆ ಸಾಂದ್ರತೆ ವಿಪರೀತ, ಜೊತೆಗೆ ಒಂದು ಅಭಿವೃದ್ಧಿಶೀಲ ದೇಶವಾಗಿದ್ದು, ಕಣ್ಣಿಗೆ ಕಾಣದ ಈ ವೈರಾಣು ವಿರುದ್ಧ ಹೋರಾಡುವಷ್ಟು ಸಂಪನ್ಮೂಲ - ಮೂಲಸೌಕರ್ಯ ನಮ್ಮಲ್ಲಿಲ್ಲ. ಆದರೆ ಇಂತಹ ಸಂಕಷ್ಟದ ಸಮಯಗಳಲ್ಲೇ ದೇಶದ ಅಂತಃಶಕ್ತಿ ಪ್ರಜ್ವಲಿಸಬೇಕಾಗಿರುವುದು. ಕೊರೋನಾ ವೈರಾಣು ವಿರುದ್ಧ ನಾವು ಸಾಟಿಯಿಲ್ಲದ ಸಾಮರ್ಥ್ಯ ಮೆರೆದಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ ಎನಿಸಿಸುತ್ತದೆ. ಮೊದಲ ವರ್ಷದಲ್ಲೇ ನಾವು ಆರೋಗ್ಯ ಮೂಲ ಸೌಕರ್ಯಗಳನ್ನು ಹೆಚ್ಚಿಸಿದ್ದೇವೆ ಮತ್ತು ಇತರರ ನೆರವಿಗೆ ಮುಂದಾಗಿದ್ದೇವೆ. ಎರಡನೇ ವರ್ಷದ ವೇಳೆಗೆ ನಾವು ದೇಶೀಯವಾಗಿ ಲಸಿಕೆಗಳನ್ನು ಅಭಿವೃದ್ಧಿಪಡಿಸಿ, ಜಗತ್ತಿನ ಇತಿಹಾಸದಲ್ಲೇ ಬೃಹತ್ ಲಸಿಕಾ ಆಂದೋಲನ ಆರಂಭಿಸಿದೆವು. ದೇಶದಲ್ಲಿ ಲಸಿಕಾ ಆಂದೋಲನ ತ್ವರಿತ ಗತಿಯಲ್ಲಿ ಸಾಗುತ್ತಿದೆ. ಸಾಂಕ್ರಾಮಿಕ ಸಂದರ್ಭದಲ್ಲಿ ಲಸಿಕೆಗಳು ಮತ್ತು ಇತರ ವೈದ್ಯಕೀಯ ಸಹಾಯದ ಮೂಲಕ ಹಲವಾರು ದೇಶಗಳ ನೆರವಿಗೆ ನಾವು ಧಾವಿಸಿದ್ದೇವೆ. ಭಾರತದ ಈ ಕೊಡುಗೆಯನ್ನು ಅಂತಾರಾಷ್ಟ್ರೀಯ ಸಂಘಟನೆಗಳು ಕೊಂಡಾಡಿವೆ.

11.       ದುರದೃಷ್ಟವಶಾತ್ ವೈರಾಣು ಹೊಸ ರೂಪಾಂತರಗಳಲ್ಲಿ ಮತ್ತೆ ಕಾಣಿಸಿಕೊಂಡಿರುವುದರಿಂದ ಕೆಲ ಹಿನ್ನಡೆಗಳಾದವು. ಅಸಂಖ್ಯ ಕುಟುಂಬಗಳು ಸಂಕಟದ ಪರಿಸ್ಥಿತಿ ಎದುರಿಸಬೇಕಾಯಿತು. ಆ ಯಾತನೆಯನ್ನು ಹೇಳಿಕೊಳ್ಳಲು ಪದಗಳೇ ಇಲ್ಲ. ಸಮಾಧಾನದ ಸಂಗತಿ ಎಂದರೆ ಅದೆಷ್ಟೋ ಜೀವಗಳನ್ನು ಉಳಿಸಲು ಸಾಧ್ಯವಾದದ್ದು, ಸಾಂಕ್ರಾಮಿಕ ಈಗಲೂ ವ್ಯಾಪಕವಾಗಿರುವುದರಿಂದ ನಾವು ಜಾಗೃತರಾಗೇ ಇರಬೇಕು. ಅಸಡ್ಡೆ ಸಲ್ಲದು. ಈವರೆಗೆ ಅನುಸರಿಸಿದ ಮುನ್ನೆಚ್ಚರಿಕೆಗಳನ್ನು ಮುಂದುವರಿಸಬೇಕು. ಮುಖಗವಸು ಧರಿಸುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಸೂಕ್ತ ಕೋವಿಡ್ ನಡಾವಳಿಯ ಅವಶ್ಯ ಅಂಶಗಳು, ಕೋವಿಡ್ ಸಾಂಕ್ರಾಮಿಕ ವಿರುದ್ಧದ ಸಮರದಲ್ಲಿ ನಮ್ಮ ವಿಜ್ಞಾನಿಗಳು, ಪರಿಣತರು ನೀಡಿರುವ ಮುನ್ನೆಚ್ಚರಿಕಾ ಸಲಹೆಗಳನ್ನು ಪಾಲಿಸುವುದು, ಪ್ರತಿಯೊಬ್ಬ ನಾಗರಿಕನ ಪವಿತ್ರ ರಾಷ್ಟ್ರೀಯ ಕರ್ತವ್ಯವಾಗಿದೆ. ಈ ಬಿಕ್ಕಟ್ಟನ್ನು ಹಿಮ್ಮೆಟ್ಟಿಸುವವರೆಗೆ ನಾವು ನಮ್ಮ ಕರ್ತವ್ಯವನ್ನು ಪಾಲಿಸಲೇಬೇಕು.

12.       ಭಾರತೀಯರಾದ ನಾವೆಲ್ಲ ಒಂದು ಕುಟುಂಬವಾಗಿ ಹೇಗೆ ಬೆಸೆದುಕೊಂಡಿದ್ದೇವೆ ಎಂಬುದನ್ನು, ಸಂದಿಗ್ಧದ ಸಮಯ ತೋರಿಸಿಕೊಟ್ಟಿದೆ. ಸಾಮಾಜಿಕ ಅಂತರ ಪಾಲನೆಯ ಈ ಸಮಯ, ನಮ್ಮನ್ನು ಪರಸ್ಪರ ಸನಿಹಗೊಳಿಸಿದೆ. ಒಬ್ಬರಿಗೊಬ್ಬರು ನಾವು ಎಷ್ಟು ಅವಲಂಬಿತರು ಎಂಬುದನ್ನು ಮನಗಂಡಿದ್ದೇವೆ. ವೈದ್ಯರು, ಶುಶ್ರೂಷಕರು, ಅರೆವೈದ್ಯಕೀಯ ಸಿಬ್ಬಂದಿ, ಸವಾಲಿನ ಪರಿಸ್ಥಿತಿಗೆ ಅನುಗುಣವಾಗಿ ಮೇಲೆದ್ದು, ರೋಗಿಗಳ ಆರೈಕೆಯಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೇ, ಕಠಿಣ ಪರಿಸ್ಥಿತಿಯಲ್ಲೂ ಸುದೀರ್ಘಕಾಲ ಸೇವೆ ಸಲ್ಲಿಸುತ್ತಿದ್ದಾರೆ. ಇತರರು ಪೂರೈಕೆ ಸರಪಳಿ ಮತ್ತು ಉಪಯುಕ್ತತೆಗಳ ನಿರ್ವಹಣೆ ಮೂಲಕ, ದೇಶದ ಚಲನಶೀಲತೆಯನ್ನು ಕಾಯ್ದುಕೊಂಡಿದ್ದಾರೆ. ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ನಾಯಕತ್ವ, ನೀತಿ ನಿರೂಪಕರು, ಆಡಳಿತಗಾರರು ಮತ್ತಿತರರು ಸಮಯೋಚಿತವಾಗಿ ಕಾರ್ಯ ಪ್ರವೃತ್ತರಾಗುತ್ತಿದ್ದಾರೆ.

13.       ಇಂತಹ ಕೆಲಸಕಾರ್ಯಗಳಿಂದಾಗಿ ಆರ್ಥಿಕತೆ ಮತ್ತೆ ಗತಿಶೀಲವಾಗಿದೆ. ಕಳೆದ ವರ್ಷದ ತಲ್ಲಣದ ನಂತರ, ಆರ್ಥಿಕತೆ ಈ ವರ್ಷ ಗಮನಾರ್ಹ ದರದಲ್ಲಿ ಬೆಳವಣಿಗೆಯಾಗುತ್ತಿದೆ ಎಂಬ ಅಂಕಿ ಅಂಶಗಳು, ಪ್ರತಿಕೂಲ ಪರಿಸ್ಥಿತಿಯಲ್ಲೂ ಭಾರತದ ಅಂತಃಶಕ್ತಿ ಎಂತಹದ್ದು ಎಂಬುದಕ್ಕೆ ಸಾಕ್ಷಿಯಾಗಿದೆ. ಹಿಂದಿನ ವರ್ಷ ಆರಂಭಿಸಿದ ಆತ್ಮ ನಿರ್ಭರ್ ಭಾರತ್ ಅಭಿಯಾನದ ಯಶಸ್ಸನ್ನು ಇದು ಸಾದರ ಪಡಿಸುತ್ತದೆ. ಪ್ರತಿಯೊಂದು ಆರ್ಥಿಕ ವಲಯದ ಸುಧಾರಣೆಗೆ ಹಾಗೂ ಅಗತ್ಯವಿರುವೆಡೆ ನೆರವಿನ ಹಸ್ತ ಚಾಚಲು ಸರ್ಕಾರ ಗಮನ ಕೇಂದ್ರೀಕರಿಸಿದೆ. ಕೃಷಿ ಹಾಗೂ ತಯಾರಿಕಾ ವಲಯಗಳಲ್ಲಿನ ಸುಧಾರಣೆ, ಈ ಅದ್ಭುತ ಆರ್ಥಿಕ ಕಾರ್ಯ ಕ್ಷಮತೆಯನ್ನು ಸಾಧ್ಯವಾಗಿಸಿದೆ. ಸಣ್ಣ ಹಿಡುವಳಿ ಹೊಂದಿರುವ ನಮ್ಮ ರೈತರು ಅದರಲ್ಲೂ ವಿಶೇಷವಾಗಿ ಯುವ ರೈತರು ಉತ್ಸಾಹದಿಂದ ಸಹಜಕೃಷಿಯನ್ನು ಅಳವಡಿಸಿಕೊಳ್ಳುತ್ತಿರುವುದು ನನಗೆ ಸಂತಸವನ್ನು ಉಂಟುಮಾಡಿದೆ.

14.       ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು ಜನರಿಗೆ ಉದ್ಯೋಗಗಳನ್ನು ಒದಗಿಸುವಲ್ಲಿ ಹಾಗೂ ಆರ್ಥಿಕತೆಗೆ ಶಕ್ತಿ ತುಂಬುವಲ್ಲಿ ಮಹತ್ತರ ಪಾತ್ರ ವಹಿಸುತ್ತಿವೆ. ನವೋದ್ಯಮ ಪರಿಸರ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ, ವಿನೂತನ ಚಿಂತನೆಯ ನಮ್ಮ ಯುವ ಉದ್ಯಮಶೀಲರು ಯಶಸ್ಸಿನ ಹೊಸ ಮಾನದಂಡಗಳನ್ನೇ ಸ್ಥಾಪಿಸಿದ್ದಾರೆ. ಪ್ರತಿ ತಿಂಗಳು ಲಕ್ಷ ಲಕ್ಷ ಡಿಜಿಟಲ್ ವಹಿವಾಟುಗಳು ನಡೆಯುತ್ತಿರುವುದು, ದೇಶದ ಬೃಹತ್ ಮತ್ತು ಸದೃಢ ಡಿಜಿಟಲ್ ಪಾವತಿ ವೇದಿಕೆಯ ಯಶಸ್ಸನ್ನು ಸಾಕ್ಷೀಕರಿಸುತ್ತದೆ.

15.       ನಮ್ಮ ಜನಸಂಖ್ಯೆಯ ಪ್ರಯೋಜನ ಪಡೆಯಲು, ಸಾಂಪ್ರದಾಯಿಕ ಮೌಲ್ಯಗಳು ಮತ್ತು ಆಧುನಿಕ ಕೌಶಲಗಳ ಸಮರ್ಪಕ ಸಮ್ಮಿಳಿತದ, ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸುವುದರೊಂದಿಗೆ ಸರ್ಕಾರ, ಸೂಕ್ತ ವಾತಾವರಣವನ್ನು ಸೃಷ್ಟಿ ಮಾಡಿದೆ. ವಿನೂತನ ಆರ್ಥಿಕತೆಯ 50 ಅಗ್ರಗಣ್ಯ ದೇಶಗಳ ಪಟ್ಟಿಯಲ್ಲಿ ಭಾರತ ಸ್ಥಾನ ಗಿಟ್ಟಿಸಿದೆ ಎಂದು ಹೇಳಲು ಹರ್ಷವೆನಿಸುತ್ತದೆ. ಸರ್ವಾಂಗೀಣ ಒಳಗೊಳ್ಳುವಿಕೆಗೆ ಒತ್ತು ನೀಡುತ್ತಲೇ, ಯೋಗ್ಯತೆಯನ್ನು ಉತ್ತೇಜಿಸುವುದು ನಮಗೆ ಸಾಧ್ಯವಾಗಿದೆ ಎಂಬುದು ತೃಪ್ತಿಕರ ಸಂಗತಿ.

ಮಹಿಳೆಯರೇ ಮತ್ತು ಮಹನೀಯರೇ,

16.       ಕಳೆದ ವರ್ಷ ಒಲಿಂಪಿಕ್ಸ್ ನಲ್ಲಿ ತಮ್ಮ ಗುರುತು ಮೂಡಿಸುವ ಮೂಲಕ ನಮ್ಮ ಕ್ರೀಡಾ ಪಟುಗಳು ಹಿರಿಮೆ-ಗರಿಮೆಗಳನ್ನು ಮೆರೆದಿದ್ದಾರೆ. ಈ ಯುವ ಚಾಂಪಿಯನ್ ಗಳ ಆತ್ಮ ವಿಶ್ವಾಸ ಇಂದು ಲಕ್ಷಾಂತರ ಮಂದಿಗೆ ಸ್ಫೂರ್ತಿದಾಯಕ.

17.       ವೈವಿಧ್ಯಮಯ ಕ್ಷೇತ್ರಗಳಲ್ಲಿ ತಮ್ಮ ಬದ್ಧತೆ ಮತ್ತು ಕ್ರಿಯಾಶೀಲತೆಯೊಂದಿಗೆ ದೇಶ ಮತ್ತು ಸಮಾಜವನ್ನು ಬಲಿಷ್ಠಗೊಳಿಸುತ್ತಿರುವ ನಮ್ಮ ಜನರ ಗಮನಾರ್ಹ ನಿದರ್ಶನಗಳನ್ನು ನಾನು ಇತ್ತೀಚಿನ ತಿಂಗಳುಗಳಲ್ಲಿ ಕಂಡಿದ್ದೇನೆ. ಆದರೆ ಅಂತಹ ಎರಡು ಸಂಗತಿಗಳನ್ನು ಮಾತ್ರ ನಾನು ಪ್ರಸ್ತಾಪಿಸುತ್ತಿದ್ದೇನೆ. ಭಾರತೀಯ ನೌಕಾಪಡೆ ಮತ್ತು ಕೊಚ್ಚಿನ್ ಷಿಪ್ ಯಾರ್ಡ್ ಸಂಸ್ಥೆಯ ನಿಷ್ಠಾವಂತ ತಂಡಗಳು ದೇಶೀಯ ತಂತ್ರಜ್ಞಾನದ ವಿಮಾನ ಸಾಗಣೆಯ ಐಎಸಿ ವಿಕ್ರಾಂತ್ ಅನ್ನು  ನಿರ್ಮಿಸಿದ್ದು, ಇಷ್ಟರಲ್ಲೇ ಅದನ್ನು ನಮ್ಮ ನೌಕಾಪಡೆಗೆ ಸೇರಿಸಿಕೊಳ್ಳಲಾಗುವುದು. ಇಂತಹ ಆಧುನಿಕ ಸೇನಾ ಸಾಮರ್ಥ್ಯಗಳಿಂದಾಗಿ ಭಾರತವನ್ನು ಈಗ ಜಗತ್ತಿನ ಮುಂಚೂಣಿ ನೌಕಾ ಶಕ್ತಿಗಳ ಸಾಲಿನಲ್ಲಿ ಪರಿಗಣಿಸುವಂತಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯತ್ತ ಸಾಗುತ್ತಿರುವುದಕ್ಕೆ ಇದು ಒಂದು ಅತ್ಯುತ್ತಮ ಉದಾಹರಣೆಯಾಗಿದೆ. ಇದಲ್ಲದೇ ಮನಮುಟ್ಟುವಂತಹ ವಿಶೇಷ ಅನುಭವವೊಂದು ನನಗಾಗಿದೆ. ಹರಿಯಾಣದ ಭಿವಾನಿ ಜಿಲ್ಲೆಯ ಸುಯಿ ಎಂಬ ಗ್ರಾಮದ ಕೆಲ ತಿಳಿವಳಿಕಸ್ತ ನಾಗರಿಕರು, ಸ್ವಪ್ರೇರಿತ್ ಅದರ್ಶ್ ಗ್ರಾಮ್ ಯೋಜನೆ ಅಡಿಯಲ್ಲಿ ಆ ಗ್ರಾಮವನ್ನು ಪರಿವರ್ತಿಸಿ, ಸಂವೇದನೆ ಮತ್ತು ಶ್ರದ್ಧಾ-ನಿಷ್ಠೆಗಳನ್ನು ಮೆರೆದಿದ್ದಾರೆ. ತಮ್ಮ ಗ್ರಾಮ ಅಥವಾ ತಮ್ಮ ಸ್ವಂತ ಸ್ಥಳದ ಬಗ್ಗೆ ಆದರಾಭಿಮಾನಗಳನ್ನು ತೋರುವ ಈ ನಿದರ್ಶನ, ಖಂಡಿತ ಅನುಕರಣೀಯವಾದುದು. ಕೃತಜ್ಞತಾಪೂರ್ವಕ ಜನರ ಹೃನ್ಮನಗಳಲ್ಲಿ ತಮ್ಮ ತಾಯ್ನೆಲದ ಬಗ್ಗೆ ಜೀವನ ಪರ್ಯಂತ ಪ್ರೀತಿ-ಗೌರವಗಳು ನೆಲೆಸಿ ಬಿಟ್ಟಿರುತ್ತವೆ. ನವಭಾರತ ಉದ್ಭವಿಸುತ್ತಿದೆ ಎಂಬ ನನ್ನ ನಂಬಿಕೆಗೆ ಈ ನಿದರ್ಶನ ಪುಷ್ಟಿ ನೀಡುತ್ತಿದೆ:  ಸಶಕ್ತ ಭಾರತ - ಸಂವೇದನಾ ಶೀಲ ಭಾರತ. ಇನ್ನಿತರ ಸಂಪನ್ಮೂಲ ವ್ಯಕ್ತಿಗಳು ಈ ಉದಾಹರಣೆಯಿಂದ ಪ್ರೇರೇಪಿತರಾಗಿ ತಮ್ಮ ತಮ್ಮ ಗ್ರಾಮ - ನಗರಗಳ ಅಭಿವೃದ್ಧಿಗೆ ಖಂಡಿತ ಕೊಡುಗೆ ಸಲ್ಲಿಸುತ್ತಾರೆ ಎಂದು ಭಾವಿಸಿದ್ದೇನೆ.

18.       ಈ ಸಂದರ್ಭದಲ್ಲಿ ವೈಯಕ್ತಿಕ ಅನುಭವವೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಕಳೆದ ವರ್ಷದ ಜೂನ್ ನಲ್ಲಿ ಕಾನ್ಪುರ್ ದೆಹಾತ್ ಜಿಲ್ಲೆಯ ನನ್ನ ಹುಟ್ಟೂರು ಪರೌಂಖ್ಗೆಕ ಭೇಟಿ ನೀಡುವ ಸದವಕಾಶ ಲಭಿಸಿತ್ತು. ಅಲ್ಲಿಗೆ ಕಾಲಿಟ್ಟ ಕೂಡಲೇ ಸಹಜವಾಗಿಯೇ ನಾನು ನನ್ನೂರಿನ ಪವಿತ್ರ ಮಣ್ಣಿಗೆ ಗೌರವ ತೋರಿದೆ, ಆ ಮಣ್ಣನ್ನು ನನ್ನ ಹಣೆಗೆ ಹಚ್ಚಿಕೊಂಡೆ, ಏಕೆಂದರೆ ನನ್ನೂರಿನ ಆಶೀರ್ವಾದದಿಂದ ಮಾತ್ರವೇ ನಾನು ರಾಷ್ಟ್ರಪತಿ ಭವನದವರೆಗೆ ಬರಲು ಸಾಧ್ಯವಾಯಿತು ಎಂದು ನಂಬಿದವನು. ನಾನು ಜಗತ್ತಿನ ಎಲ್ಲೇ ಇರಲಿ ನನ್ನ ಊರು - ನನ್ನ ದೇಶ ನನ್ನ ಹೃದಯದಲ್ಲಿ ಇದ್ದೇ ಇರುತ್ತದೆ. ತಮ್ಮ ಪರಿಶ್ರಮ-ಪ್ರತಿಭೆಗಳಿಂದ ಜೀವನದಲ್ಲಿ ಯಶಸ್ಸು ಕಂಡಂತಹ ಭಾರತೀಯರು ಸದಾ ತಮ್ಮ ಬೇರುಗಳನ್ನು, ತಮ್ಮ ಗ್ರಾಮ, ಪಟ್ಟಣ ಅಥವಾ ನಗರವನ್ನು ನೆನಪಿನಲ್ಲಿಟ್ಟುಕೊಂಡಿರಬೇಕು ಎಂದು ವಿನಂತಿಸುತ್ತೇನೆ. ಜೊತೆಗೆ ನೀವೆಲ್ಲರೂ ನಿಮಗೆ ತೋರಿದ ರೀತಿಯಲ್ಲಿ ನಿಮ್ಮ ಹುಟ್ಟೂರು ಮತ್ತು ನಿಮ್ಮ ದೇಶಕ್ಕೆ ಸೇವೆ ಸಲ್ಲಿಸಲೇಬೇಕು. ಭಾರತದ ಎಲ್ಲ ಯಶಸ್ವೀ ಜನರು ತಮ್ಮ ಜನ್ಮಸ್ಥಳಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದಲ್ಲಿ, ಅಂತಹ ಸ್ಥಳೀಯ ಅಭಿವೃದ್ಧಿಯ ಫಲಶ್ರುತಿ ಇಡೀ ದೇಶಕ್ಕೆ ಪ್ರಯೋಜನಕಾರಿಯಾಗುವುದು.

ಪ್ರೀತಿಯ ದೇಶ ಬಾಂಧವರೇ,

19.       ರಾಷ್ಟ್ರ ಘನತೆಯ ಪರಂಪರೆಯನ್ನು ಇಂದು ಮುಂದುವರಿಸಿಕೊಂಡು ಹೋಗುತ್ತಿರುವವರು ನಮ್ಮ ಯೋಧರು ಮತ್ತು ಭದ್ರತಾ ಸಿಬ್ಬಂದಿ. ತಮ್ಮ ಕುಟುಂಬ-ಪರಿವಾರಗಳಿಂದ ಬಹುದೂರ ಹೋಗಿ, ಹಿಮಾಲಯದ ಸಹಿಸಲಸಾಧ್ಯವಾದ ಛಳಿಯಲ್ಲಿ, ಮರುಭೂಮಿಯ ಸುಡುಸುಡುವ ಬಿಸಿಲ ಬೇಗೆಯಲ್ಲಿ ನಿಂತು, ಇವರು ತಾಯ್ನಾಡಿನ ರಕ್ಷಣೆಯಲ್ಲಿ ತೊಡಗಿದ್ದಾರೆ. ತಮ್ಮ ಸಹದೇಶವಾಸಿಗಳ ನೆಮ್ಮದಿಯ ಬದುಕಿಗಾಗಿ, ದೇಶದ ಗಡಿಗಳ ರಕ್ಷಣೆಯ ಹೊಣೆ ಹೊತ್ತು ನಿರಂತರ ನಿಗಾವಹಿಸುತ್ತಿರುವ ನಮ್ಮ ಸಶಸ್ತ್ರ ಪಡೆಗಳು ಹಾಗೂ ದೇಶದೊಳಗೆ ಆಂತರಿಕ ಭದ್ರತೆಯನ್ನು ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಧನ್ಯವಾದಗಳು. ಕರ್ತವ್ಯದ ಮೇಲಿದ್ದ ವೀರಯೋಧ ಮೃತಪಟ್ಟರೆ ಇಡೀ ದೇಶ ಮರುಗುತ್ತದೆ. ಕಳೆದ ತಿಂಗಳು ದುರದೃಷ್ಟಕರ ದುರ್ಘಟನೆಯೊಂದರಲ್ಲಿ ನಾವು, ದೇಶದ ಅತ್ಯಂತ ಕೆಚ್ಚೆದೆಯ ಕಲಿಗಳಲ್ಲಿ ಒಬ್ಬರಾದ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಹಾಗೂ ಇನ್ನೂ ಹಲವು ವೀರ ಯೋಧರನ್ನು ಕಳೆದುಕೊಂಡೆವು. ಈ ದುರಂತದ ಬಗ್ಗೆ ಇಡೀ ದೇಶ ತುಂಬಾ ನೊಂದಿತು.

ಮಹಿಳೆಯರೇ ಮತ್ತು ಮಹನೀಯರೇ,

20.       ದೇಶಪ್ರೇಮ ಎಂಬುದು ನಾಗರಿಕರಲ್ಲಿನ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ. ನೀವು ವೈದ್ಯರಿರಬಹುದು, ವಕೀಲರಿರಬಹುದು, ವ್ಯಾಪಾರಸ್ಥರಿರಬಹುದು ಅಥವ ಕಚೇರಿ ಉದ್ಯೋಗಿ, ಪೌರಕಾರ್ಮಿಕ ಏನೇ ಇರಬಹುದು, ನಿಮ್ಮ ನಿಮ್ಮ ಕರ್ತವ್ಯಗಳನ್ನು ಉತ್ತಮವಾಗಿ ದಕ್ಷತೆಯಿಂದ ಮಾಡಿದಲ್ಲಿ, ಅದು ದೇಶಕ್ಕೆ ನೀವು ನೀಡುವ ಎಲ್ಲಕ್ಕಿಂತ ದೊಡ್ಡ ಕಾಣಿಕೆಯಾಗುತ್ತದೆ.

21.       ಸಶಸ್ತ್ರ ಪಡೆಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಇದು ಪರ್ವಕಾಲ ವರ್ಷ ಎಂದು ತಿಳಿಸಲು ಸಶಸ್ತ್ರ ಪಡೆಗಳ ಪರಮೋಚ್ಚ ಕಮಾಂಡರ್ ಆಗಿ ನನಗೆ ಸಂತಸವೆನಿಸುತ್ತಿದೆ. ನಮ್ಮ ಪುತ್ರಿಯರು ಗಾಜಿನ ಅಡ್ಡಪರದೆಯನ್ನು ಭೇದಿಸಿದ್ದು, ಹೊಸ ವಲಯಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ಪರ್ಮನೆಂಟ್ ಕಮೀಶನ್ ಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ಸೈನಿಕ ಶಾಲೆಗಳು ಮತ್ತು ಪ್ರತಿಷ್ಠಿತ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮೂಲಕ ಮಹಿಳೆಯರ ಆಗಮನದೊಂದಿಗೆ, ಪಡೆಗಳಿಗೆ ಪ್ರತಿಭಾ ಪ್ರವೇಶಮಾರ್ಗ ಸದೃಢಗೊಳ್ಳುವುದು, ಪರಿಣಾಮ - ನಮ್ಮ ಸಶಸ್ತ್ರ ಪಡೆಗಳಿಗೆ, ಉತ್ತಮ ಲಿಂಗ ಸಮತೋಲನದ ಪ್ರಯೋಜನವಾಗುವುದು.

22.       ಭವಿಷ್ಯದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ಈಗ ಉತ್ತಮ ಸ್ಥಿತಿಯಿಲ್ಲಿದೆ ಎಂಬುದು ನನ್ನ ವಿಶ್ವಾಸ. 21ನೇ ಶತಮಾನ ಹವಾಮಾನ ಬದಲಾವಣೆಯ ಯುಗವಾಗಿ ಪರಿವರ್ತನೆಯಾಗುತ್ತಿದೆ. ವಿಶೇಷವಾಗಿ ಪುನರ್ ನವೀಕರಣ ಇಂಧನ ಕುರಿತಂತೆ ಭಾರತ ತನ್ನ ದಿಟ್ಟ ಮತ್ತು ಮಹತ್ವಾಕಾಂಕ್ಷಿ ಕ್ರಮದಿಂದಾಗಿ, ಜಾಗತಿಕ ವೇದಿಕೆಯಲ್ಲಿ ನಾಯಕತ್ವದ ಸ್ಥಾನ ವಹಿಸಿ, ದಾರಿ ತೋರುತ್ತಿದೆ. ವೈಯಕ್ತಿಕ ನೆಲೆಗಟ್ಟಿನಲ್ಲಿ ನಾವು ಒಬ್ಬೊಬ್ಬರೂ ನಮ್ಮ ಸುತ್ತಲ ಜಗತ್ತಿನ ಸುಧಾರಣೆಗೆ ನೆರವಾಗಲು, ಗಾಂಧೀಜಿಯವರ ಸಲಹೆಯನ್ನು ಸ್ಮರಿಸಿಕೊಳ್ಳಬಹುದಾಗಿದೆ. ಇಡೀ ವಿಶ್ವ, ಒಂದು ಕುಟುಂಬ ಎಂದೇ ಭಾರತ ಸದಾ ಭಾವಿಸಿದೆ. ವಿಶ್ವ ಭ್ರಾತೃತ್ವ ಮನೋಭಾವನೆಯಿಂದ ಪ್ರೇರಣೆಗೊಂಡು, ನಮ್ಮ ದೇಶ ಹಾಗೂ ಇಡೀ ಜಾಗತಿಕ ಸಮುದಾಯ, ಸಮತೆಯಿಂದ ಕೂಡಿದ ಸಮೃದ್ಧ ಭವಿಷ್ಯದತ್ತ ಸಾಗುವುದೆಂಬುದು ನನ್ನ ನಂಬುಗೆ.

ಪ್ರೀತಿಯ ದೇಶ ವಾಸಿಗಳೇ,

23.       ಭಾರತ ಈ ವರ್ಷ ಸ್ವಾತಂತ್ರ್ಯದ 75 ವರ್ಷಗಳನ್ನು ಪೂರ್ಣಗೊಳಿಸುವುದರೊಂದಿಗೆ, ಮೈಲಿಗಲ್ಲೊಂದನ್ನು ದಾಟಲಿದೆ. ಈ ಸಂದರ್ಭವನ್ನು ನಾವು ‘ಆಜಾದಿ ಕಾ ಅಮೃತ್ ಮಹೋತ್ಸವ್’ ಆಗಿ ಸಂಭ್ರಮಿಸುತ್ತಿದ್ದೇವೆ. ಈ ಮಹೋನ್ನತ ವರ್ಷದ ಸಂಸ್ಮರಣೆಗಾಗಿ ಆಯೋಜಿಸಿರುವ ವೈವಿಧ್ಯಪೂರ್ಣ ಸ್ಪರ್ಧೆ-ಕಾರ್ಯಕ್ರಮಗಳಲ್ಲಿ, ನಮ್ಮ ಜನರು ವಿಶೇಷವಾಗಿ ಯುವ ಜನರು ಉತ್ಸಾಹಭರಿತರಾಗಿ ಪಾಲ್ಗೊಳ್ಳುತ್ತಿರುವುದು ಹೃದಯ ವೇದ್ಯವಾದದ್ದು. ನಮ್ಮ ಮುಂದಿನ ಪೀಳಿಗೆಯವರಿಗಷ್ಟೇ ಅಲ್ಲ, ನಮ್ಮೆಲ್ಲರಿಗೂ ನಮ್ಮ ಗತ ಇತಿಹಾಸದೊಂದಿಗೆ ಮರುಸಂಪರ್ಕ ಹೊಂದಲು ಇದೊಂದು ಅದ್ಭುತ ಸದವಕಾಶ. ನಮ್ಮ ಭವ್ಯ ಸಾಹಸಗಾಥೆಯಲ್ಲಿ ನಮ್ಮ ಸ್ವಾತಂತ್ರ್ಯ ಸಂಗ್ರಾಮ, ಚೇತೋಹಾರಿ ಅಧ್ಯಾಯ. ಸ್ವಾತಂತ್ರ್ಯದ 75ನೇ ವರ್ಷಾಚರಣೆ, ನಮ್ಮ ಮಹತ್ವಪೂರ್ಣ ರಾಷ್ಟ್ರೀಯ ಚಳವಳಿಯಲ್ಲಿ ಅಂತರ್ಗತವಾಗಿದ್ದ ಮೌಲ್ಯಗಳನ್ನು ಮರುಶೋಧಿಸುವ ಸಂದರ್ಭ. ನಮ್ಮ ಸ್ವಾತಂತ್ರ್ಯಕ್ಕಾಗಿ ಅನೇಕ ಮಹನೀಯರು, ಮಹಿಳೆಯರು ಬಲಿದಾನಗೈದಿದ್ದಾರೆ. ನಾವು ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವಗಳ ಸಂಭ್ರಮಾನಂದಗಳನ್ನು ಅನುಭವಿಸುವಂತಾಗಲು, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಊಹಿಸಲಸಾಧ್ಯವಾದಂತಹ ಹಿಂಸೆ-ವೇದನೆಗಳನ್ನು ಅನುಭವಿಸಿದ್ದಾರೆ, ಅಪಾರ ತ್ಯಾಗ ಮಾಡಿದ್ದಾರೆ. ಗಣರಾಜ್ಯೋತ್ಸವದ ಈ ಸಂದರ್ಭದಲ್ಲಿ ಇವರ ಅಮರ ತ್ಯಾಗಗಳನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸೋಣ.

ಮಹಿಳೆಯರೇ ಮತ್ತು ಮಹನೀಯರೇ,

24.       ಭಾರತ ಒಂದು ಪುರಾತನ ನಾಗರಿಕತೆಯ, ಆದರೆ ಯುವ ಗಣತಂತ್ರ ದೇಶ. ನಮಗೆ ದೇಶ ನಿರ್ಮಾಣ ಒಂದು ನಿರಂತರ ಕಾಯಕ. ಕುಟುಂಬದಂತೆಯೇ ದೇಶವೂ ಕೂಡ, ಒಂದು ಪೀಳಿಗೆ ತನ್ನ ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ಖಾತರಿ ಪಡಿಸಲು ಪರಿಶ್ರಮವಹಿಸುತ್ತದೆ. ನಾವು ಸ್ವಾತಂತ್ರ್ಯಗಳಿಸಿದಾಗ, ವಸಾಹತು ಆಡಳಿತದ ಶೋಷಣೆ ನಮ್ಮನ್ನು ದಾರಿದ್ರ್ಯದ ಕೂಪಕ್ಕೆ ತಳ್ಳಿತ್ತು. ಆದರೆ 75 ವರ್ಷಗಳಲ್ಲಿ ನಾವು ಬೆರಗಾಗಿಸುವಷ್ಟು ಏಳ್ಗೆ ಸಾಧಿಸಿದ್ದೇವೆ. ಮುಂದಿನ ಪೀಳಿಗೆಗೆ ಹೊಸ ಹೊಸ ಅವಕಾಶಗಳು ಕಾಯುತ್ತಿವೆ. ನಮ್ಮ ಯುವಜನರು ಈ ಸದವಕಾಶಗಳ ಪ್ರಯೋಜನ ಪಡೆದು, ಯಶಸ್ಸಿನ ಹೊಸ ವಿಕ್ರಮಗಳನ್ನು ಸ್ಥಾಪಿಸಿದ್ದಾರೆ. ಇದೇ ಚೈತನ್ಯ, ಆತ್ಮಬಲ, ಉದ್ಯಮಶೀಲತೆಯೊಂದಿಗೆ ನಮ್ಮ ದೇಶ ಪ್ರಗತಿಯ ಹಾದಿಯಲ್ಲಿ ಮುನ್ನಡೆಯುವುದು, ಜಾಗತಿಕ ಸಮುದಾಯದಲ್ಲಿ ತನ್ನ ಶಕ್ತಿ-ಸಾಮರ್ಥ್ಯಕ್ಕೆ ತಕ್ಕುದಾದ ಯೋಗ್ಯ ಸ್ಥಾನವನ್ನು ಪಡೆದೇ ತೀರುವುದೆಂಬುದು ನನ್ನ ನಂಬಿಕೆ.

25.       ಮತ್ತೊಮ್ಮೆ ನಿಮ್ಮೆಲ್ಲರಿಗೂ ಗಣರಾಜ್ಯೋತ್ಸವದ ಶುಭಾಶಯಗಳು.

ಧನ್ಯವಾದಗಳು

ಜೈ ಹಿಂದ್.

***(Release ID: 1792637) Visitor Counter : 328