ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಇಂಡಿಯಾ ಗೇಟ್ ನಲ್ಲಿ ನೇತಾಜಿ ಪುತ್ಥಳಿಯ ಹೋಲೋಗ್ರಾಮ್ ಅನಾವರಣ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯರ ಭಾಷಣ

Posted On: 23 JAN 2022 10:36PM by PIB Bengaluru

ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಮಂತ್ರಿಪರಿಷತ್ತಿನ ನನ್ನ ಸಹೋದ್ಯೋಗಿಗಳಾದ ಶ್ರೀ ಅಮಿತ್ ಶಾ, ಶ‍್ರೀ ಹರ್ದಿಪ್ ಪುರಿ ಜಿ, ಇತರೆ ಸದಸ್ಯರೇ, ಐಎನ್ಎ ಟ್ರಸ್ಟಿಗಳೇ, ಎನ್.ಡಿ.ಎಂ.ಎ ಸದಸ್ಯರೇ, ತೀರ್ಪುಗಾರರೇ, ಎನ್.ಡಿ.ಆರ್.ಎಫ್ ನ ಮಹಾ ನಿರ್ದೇಶಕರೇ, ಇತರೇ ಗೌರವಾನ್ವಿತರೇ, ಸಹೋದರರೇ ಮತ್ತು ಸಹೋದರಿಯರೇ!

ಭಾರತ ಮಾತೆಯ ವೀರ ಪುತ್ರ ನೇತಾಜಿ ಸುಬಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದಂದು ಇಡೀ ದೇಶದ ಪರವಾಗಿ ಅವರಿಗೆ ನಮನ ಸಲ್ಲಿಸುತ್ತೇನೆ. ಇಂದಿನ ದಿನ ಐತಿಹಾಸಿ, ಇಂದಿನ ಅವಧಿ ಕೂಡ ಚಾರಿತ್ರಿಕ, ಈ ಪ್ರದೇಶ, ಇಲ್ಲಿ ನಾವೆಲ್ಲರೂ ಸಮಾವೇಶಗೊಂಡಿರುವುದು ಸಹ ಐತಿಹಾಸಿಕವೇ. ಇದು ಭಾರತದ ಪ್ರಜಾಪ್ರಭುತ್ವದ ಸಂಕೇತ, ನಮ್ಮ ಸಂಸತ್, ನಮ್ಮ ಚಟುವಟಿಕೆ ಮತ್ತು ಜನರಿಗಾಗಿಯೇ ಅರ್ಪಣೆಗೊಂಡಿರುವುದನ್ನು ಸಂಕೇತಿಸುವ ಅನೇಕ ಕಟ್ಟಡಗಳು ಮತ್ತು ವೀರ ಹುತಾತ್ಮರಿಗೆ ಸಮರ್ಪಿತವಾದ ರಾಷ್ಟ್ರೀಯ ಯುದ್ಧ ಸ್ಮಾರಕವೂ ನಮ್ಮ ಹತ್ತಿರದಲ್ಲಿದೆ.  ಈ ದಿಸೆಯಲ್ಲಿ ಇಂದು ನಾವು ಇಂಡಿಯಾ ಗೇಟ್ ಬಳಿ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವಯುತವಾಗಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇವೆ. ಬ್ರಿಟಿಷರ ಆಡಳಿತಕ್ಕೆ ಅವರು ಬಹಳ ಆತ್ಮವಿಶ್ವಾಸ ಮತ್ತು ದೈರ್ಯದಿಂದ, ಹೆಮ್ಮೆಯಿಂದ ನಮಗೆ ಸ್ವತಂತ್ರ್ಯ ಮತ್ತು ಸಾರ್ವಭೌಮ ಭಾರತದ ವಿಶ್ವಾಸ ನೀಡಿದ್ದರು – “ ನಾವು ಸ್ವಾತಂತ್ರ್ಯಕ್ಕಾಗಿ ಬೇಡುವುದಿಲ್ಲ, ಇದನ್ನು ನಾವು ಪಡೆಯುತ್ತೇವೆ” ಎಂದು ಹೇಳಿ ಭಾರತದ ನೆಲದಲ್ಲಿ ಮೊದಲ ಸ್ವಾಯತ್ತ ಸರ್ಕಾರವನ್ನು ಸ್ಥಾಪಿಸಿದ ನಮ್ಮ ನೇತಾಜಿ  ಅವರ ಭವ್ಯವಾದ ಪ್ರತಿಮೆಯನ್ನು ಇಂಡಿಯಾ ಗೇಟ್ ಬಳಿ ಡಿಜಿಟಲ್ ರೂಪದಲ್ಲಿ ಸ್ಥಾಪಿಸಲಾಗುತ್ತಿದೆ. ಈ ಹೋಲೋಗ್ರಾಮ್ ಪುತ್ಥಳಿಯ ಬದಲಿಗೆ ಇಷ್ಟರಲ್ಲೇ ಇಲ್ಲಿ ಗ್ರಾನೈಟ್ ಪ್ರತಿಮೆ ತಲೆಎತ್ತಲಿದೆ. ಈ ಪ್ರತಿಮೆ ಮಹಾನ್ ರಾಷ್ಟ್ರದಿಂದ ನೇತಾಜಿ ಸುಭಾಷರಂತಹ ಅಪ್ರತಿಮ ನಾಯಕನಿಗೆ ಸಲ್ಲಿಸುವ ಗೌರವವಾಗಿದೆ. ನೇತಾಜಿ ಸುಭಾಷರ ಈ ಪ್ರತಿಮೆ ನಮ್ಮ ಪ್ರಜಾಸತ್ತಾತ್ಮಕ ಸಂಸ್ಥೆಗಳಿಗೆ ಮತ್ತು ನಮ್ಮ ಪೀಳಿಗೆಗೆ ರಾಷ್ಟ್ರೀಯ ಭಾಧ್ಯತೆಯ ಭಾವವನ್ನು ನೀಡುತ್ತದೆ. ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಗೆ ಸ್ಪೂರ್ತಿ ನೀಡುವುದನ್ನು ಮುಂದುವರಿಸುತ್ತದೆ.     

ಸ್ನೇಹಿತರೇ,

ಕಳೆದ ವರ್ಷದಿಂದ ದೇಶದಲ್ಲಿ ನೇತಾಜಿ ಜನ್ಮದಿನವನ್ನು ಪರಾಕ್ರಮ ದಿನವನ್ನಾಗಿ ಆಚರಿಸಲಾಗಿದೆ. ಪರಾಕ್ರಮ ದಿನದ ಹಿನ್ನೆಲೆಯಲ್ಲಿಂದು ಅಪ್ ದಾ ಪ್ರಬಂಧನ್ ಪುರಸ್ಕಾರ [ವಿಪತ್ತು ನಿರ್ವಹಣಾ ಪ್ರಶಸ್ತಿಗಳು] ಗಳನ್ನು ನೀಡಲಾಗುತ್ತಿದೆ. ಇದಕ್ಕೆ ನೇತಾಜಿ ಅವರ ಜೀವನದಿಂದ ಸ್ಫೂರ್ತಿ ಪಡೆದು ಈ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಇಂದು ಗೌರವಿಸಲ್ಪಟ್ಟ 2019 ಮತ್ತು 2022 ರ ವರೆಗಿನ ಎಲ್ಲಾ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ನಾನು ಅಭಿನಂದಿಸುತ್ತೇನೆ.  

ಸ್ನೇಹಿತರೇ,

ನಮ್ಮ ದೇಶದಲ್ಲಿ ವಿಪತ್ತು ನಿರ್ವಹಣೆ ಬಗೆಗಿನ ಮನೋಭಾವನೆಗೆ “ಬಾಯಾರಿದಾಗ ಬಾವಿ ತೋಡು” ಎಂಬ ಗಾದೆ ಮಾತು ಚೆನ್ನಾಗಿ ಹೊಂದುತ್ತದೆ. ಕಾಶಿ ಭಾಗದಲ್ಲಿ ಮತ್ತೊಂದು ಗಾದೆ ಮಾತು ಹೇಳುತ್ತಾರೆ ನಾನು ಅದನ್ನು ಹೀಗೆ ಹೇಳುತ್ತೇನೆ.  भोज घड़ी कोहड़ा रोपे.  ಹಬ್ಬದ ಸಂದರ್ಭದಲ್ಲಿ ಕೊಹ್ಡಾ ತರಕಾರಿ ಬೆಳೆಯಲು ಪ್ರಾರಂಭಿಸು. ಅಂದರೆ ದುರಂತದ ಸಮಯದಲ್ಲಿ ಮಾತ್ರ ಪರಿಹಾರ ಕ್ರಮಗಳನ್ನು ಅನ್ವೇಷಿಸಲಾಗಿದೆ. ಇಷ್ಟೇ ಅಲ್ಲ ಕೆಲವೇ ಜನರಿಗೆ ತಿಳಿದಿರುವ ಗೊಂದಲಕಾರಿ ವ್ಯವಸ್ಥೆಯು ಅಸ್ಥಿತ್ವದಲ್ಲಿದೆ. ವರ್ಷಗಳ ಹಿಂದೆ ಕೃಷಿ ಇಲಾಖೆ ವಿಪತ್ತುಗಳ ನಿರ್ವಹಣೆಯನ್ನು ಆರಂಭಿಸಿತು. ಇದಕ್ಕೆ ಮೂಲ ಕಾರಣವೆಂದರೆ ಪ್ರವಾಹ, ಭಾರೀ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಉಂಟಾಗುವ ಪರಿಸ್ಥಿತಿಯನ್ನು ನಿಭಾಯಿಸುವ ಪಾತ್ರವನ್ನು ಕೃಷಿ ಸಚಿವಾಲಯಕ್ಕೆ ವಹಿಸಲಾಗಿದೆ. ವಿಪತ್ತು ನಿರ್ವಹಣೆ ವ್ಯವಸ್ಥೆ ದೇಶದಲ್ಲಿ ಈ ರೀತಿ ಆರಂಭವಾಯಿತು. 2001 ರಲ್ಲಿ ಗುಜರಾತ್ ನಲ್ಲಿ ಭೂಕಂಪ ಸಂಭವಿಸಿದಾಗ ದೇಶ ಈ ಬಗ್ಗೆ ಹೊಸದಾಗಿ ಯೋಚಿಸಲು ಆರಂಭಿಸಿತು. ಎಲ್ಲಾ ಸಚಿವಾಲಗಳು ಮತ್ತು ಇಲಾಖೆಗಳನ್ನು ಪರಿಹಾರ ಹಾಗೂ ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಯಿತು. 2003ರ ಆಗಿನ ಕಾಲದಲ್ಲಿ ಈ ಅನುಭವದಿಂದ ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಕಾಯ್ದೆಯನ್ನು ಜಾರಿಗೆ ತಂದಿತು. ವಿಪತ್ತುಗಳನ್ನು ನಿಭಾಯಿಸಲು ಇಡೀ ದೇಶದಲ್ಲಿ ಗುಜರಾತ್ ನಲ್ಲಿ ಮೊದಲ ಬಾರಿಗೆ ಕಾನೂನು ಜಾರಿಗೆ ತರಲಾಯಿತು. ನಂತರ ಕೇಂದ್ರ ಸರ್ಕಾರ ಗುಜರಾತ್ ನಿಂದ ಪಾಠ ಕಲಿತುಕೊಂಡು 2005 ರಲ್ಲಿ ಇದೇ ರೀತಿಯ  ಕಾನೂನು ಜಾರಿಗೆ ತಂದಿತು.  ಈ ಕಾನೂನಿನ ನಂತರವೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ರಚನೆಯಾಯಿತು. ಇದು ದೇಶದಲ್ಲಿ ಇತ್ತೀಚೆಗೆ ಕೊರೋನಾ ವಿರುದ್ಧ ಹೋರಾಟ ಮಾಡಲು ಸಹ ನೆರವಾಯಿತು.

ಸ್ನೇಹಿತರೇ,

2014 ರಿಂದ ನಮ್ಮ ಸರ್ಕಾರ ವಿಪತ್ತು ನಿರ್ವಹಣೆಯನ್ನು ಪರಿಣಾಮಕಾರಿಯಾಗಿಸಲು ರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಕ್ರಮಗಳನ್ನು ಕೈಗೊಂಡಿದೆ. ಪರಿಹಾರ ರಕ್ಷಣೆ, ಪುನರ್ವಸತಿಯಷ್ಟೇ ಅಲ್ಲದೇ ಸುಧಾರಣೆಗೆ ನಾವು ಒತ್ತು ನೀಡಿದ್ದೇವೆ. ದೇಶಾದ್ಯಂತ ಎನ್.ಡಿ.ಆರ್.ಎಫ್ ಅನ್ನು ನಾವು ವಲವರ್ಧನೆ, ಆಧುನೀಕರಣ ಮತ್ತು ವಿಸ್ತರಣೆಗೊಳಿಸಿದ್ದೇವೆ. ಯೋಜನೆ ಮತ್ತು ನಿರ್ವಹಣೆಗಾಗಿ ನಾವು ಬಾಹ್ಯಾಕಾಶ ತಂತ್ರಜ್ಞಾನದಂತಹ ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಂಡಿದ್ದೇವೆ. ನಮ್ಮ ಎನ್,ಡಿ.ಆರ್.ಎಫ್, ಎಸ್.ಡಿ.ಆರ್.ಎಫ್ ಮತ್ತು ಭದ್ರತಾ ಪಡೆಗಳ ಸಿಬ್ಬಂದಿ ಪ್ರತಿಯೊಂದು ಜೀವ ಉಳಿಸಲು ತಮ್ಮ ಜೀವವನ್ನೇ ಪಣಕ್ಕಿಟಿದ್ದಾರೆ. ತಮ್ಮ ಜೀವವನ್ನು ಅಪಾಯದಲ್ಲಿರಿಸಿಕೊಂಡು ಕೆಲಸ ಮಾಡುವ ನಮ್ಮ ಎನ್.ಡಿ.ಆರ್.ಎಫ್ ಅಥವಾ ಎಸ್.ಡಿ.ಆರ್.ಎಫ್ ಸಿಬ್ಬಂದಿ ಅಥವಾ ನಮ್ಮ ಭದ್ರತಾ ಪಡೆಗಳಿಗೆ ಕೃತಜ್ಞತೆ ಸಲ್ಲಿಸುವ ಮತ್ತು ನಮಿಸುವ ಸಂದರ್ಭ ಇದಾಗಿದೆ.  

ಸ್ನೇಹಿತರೇ

ನಮ್ಮ ವ್ಯವಸ್ಥೆಯನ್ನು ಬಲಗೊಳಿಸುವುದನ್ನು ನಾವು ಮುಂದುವರೆಸಿದರೆ ಇದೇ ಸಂದರ್ಭದಲ್ಲಿ ವಿಪತ್ತು ನಿಭಾಯಿಸುವ ಸಾಮರ್ಥ್ಯ ಕೂಡ ವೃದ್ಧಿಯಾಗಲಿದೆ. ಒಂದು ವೇಳೆ ನಾವು ಒಂದು ಅಥವಾ ಎರಡು ವರ್ಷಗಳ ಕೊರೋನಾ ಅವಧಿ ಬಗ್ಗೆ ಮಾತನಾಡಿದರೆ ಸಾಂಕ್ರಾಮಿಕದಿಂದ ಜನರ ಮನಸ್ಸಿನಲ್ಲಿ ಹಲವಾರು ವಿಪತ್ತುಗಳಾಗಿವೆ. ಒಂದು ಕಡೆ ನಾವು ಕೊರೋನಾ ವಿರುದ್ಧ ಹೋರಾಟ ಮಾಡುತ್ತಿದ್ದರೆ ಮತ್ತೊಂದು ಬದಿಯಲ್ಲಿ ಹಲವೆಡೆ ಭೂಕಂಪ ಮತ್ತು ಪ್ರವಾಹಗಳು ಸಂಭವಿಸಿವೆ. ಒಡಿಶಾ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಪೂರ್ವ ಕರಾವಳಿ ಮತ್ತು ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ಒಳಗೊಂಡಂತೆ ಪಶ್ಚಿಮ ಕರಾವಳಿಗಳಿಗೆ ಚಂಡಮಾರುತ ಅಪ್ಪಳಿಸಿತು. ಇದಕ್ಕೂ ಮುನ್ನ ಚಂಡಮಾರುತ ಸಂದರ್ಭದಲ್ಲಿ ನೂರಾರು ಜನ ಜೀವ ಕಳೆದುಕೊಳ್ಳುತ್ತಿದ್ದರು. ಆದರೆ ಈ ಸಮಯದಲ್ಲಿ ಅಂತಹ ಪರಿಸ್ಥಿತಿ ಉದ್ಭವಿಸಲಿಲ್ಲ. ಪ್ರತಿಯೊಂದು ಸವಾಲುಗಳಿಗೆ ಹೊಸ ಶಕ್ತಿಯೊಂದಿಗೆ ದೇಶ ಉತ್ತರ ಕಂಡುಕೊಂಡಿದೆ. ಇದರ ಫಲಿತಾಂಶದಿಂದಾಗಿ ವಿಪತ್ತು ಸಂದರ್ಭದಲ್ಲಿ ನಾವು ಗರಿಷ್ಠ ಜೀವಗಳನ್ನು ಉಳಿಸಲು ಸಮರ್ಥರಾಗಿದ್ದೇವೆ.  ಈ ಸಾಮರ್ಥ್ಯ ಮತ್ತು ಭಾರತದಲ್ಲಿ ಆದ ಬದಲಾವಣೆ ಬಗ್ಗೆ ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಇಂದು ದೇಶದಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು, ಸ್ಥಳೀಯ ಆಡಳಿತ ಮತ್ತು ಎಲ್ಲಾ ಏಜನ್ಸಿಗಳು ಒಟ್ಟಿಗೆ  ಕೆಲಸ ಮಾಡುತ್ತಿವೆ. ಚಂಡಮಾರುತ, ಪ್ರವಾಹ ಮತ್ತು ಅಭಾವ ಪರಿಸ್ಥಿತಿಗೆ ಮುನ್ನೆಚ್ಚರಿಕೆ ನೀಡುವ ವ್ಯವಸ್ಥೆಯಲ್ಲಿ ಸುಧಾರಣೆಯಾಗಿದೆ. ವಿಪತ್ತು ಅಪಾಯದ ವಿಶ‍್ಲೇಷಣೆಗಾಗಿ ಸುಧಾರಿತ ಸಾಧನಗಳು ಮತ್ತು ವಿವಿಧ ಪ್ರದೇಶಗಳಿಗೆ ವಿಪತ್ತು ಅಪಾಯದ ನಕ್ಷೆಗಳನ್ನು ರಾಜ್ಯಗಳ ನೆರವಿನಿಂದ ರಚಿಸಲಾಗಿದೆ. ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ವಿಪತ್ತು ನಿರ್ವಹಣೆ ದೇಶದಲ್ಲಿ ಸಾರ್ವಜನಿಕ ನಂಬಿಕೆ ಮತ್ತು ಸಾರ್ವಜನಿಕ ಸಹಭಾಗಿತ್ವದ ಮೂಲಕ ಕಾರ್ಯನಿರ್ವಹಿಸುತ್ತಿದೆ. ಯುವ ಸಮೂಹ ಇದೀಗ ಎನ್.ಡಿ.ಎಂ.ಎ ನ “ಆಪ್ತಮಿತ್ರ”ದಂತಹ ಕಾರ್ಯಕ್ರಮಗಳ ಭಾಗವಾಗುತ್ತಿದ್ದಾರೆ ಮತ್ತು ಜವಾಬ್ದಾರಿ ಹೊರುತ್ತಿದ್ದಾರೆ ಎಂದು ತಮಗೆ ಮಾಹಿತಿ ನೀಡಲಾಗಿದೆ. ಇದರಿಂದಾಗಿ ಸಾರ್ವಜನಿಕ ಸಹಭಾಗಿತ್ವ ಹೆಚ್ಚಾಗುತ್ತಿದೆ. “ಎಲ್ಲೋ ಒಂದು ದುರಂತ ಸಂಭವಿಸಿದರೆ ಜನ ಬಲಿಪಶುಗಳಾಗಿ ಉಳಿಯವುದಿಲ್ಲ, ಬದಲಿಗೆ ಅವರು ಸ್ವಯಂಪ್ರೇರಿತವಾಗಿ ವಿಪತ್ತು ಎದುರಿಸುತ್ತಾರೆ. ಅದರಿಂದಾಗಿ ವಿಪತ್ತು ನಿರ್ವಹಣೆ ಇಂದು ಕೇವಲ ಸರ್ಕಾರದ ಜವಾಬ್ದಾರಿಯಾಗಿ ಉಳಿದಿಲ್ಲ, ಆದರೆ ಎಲ್ಲರ ಪ್ರಯತ್ನದ ಮಾದರಿಯಾಗಿದೆ”  

ಮತ್ತು ಸ್ನೇಹಿತರೇ

ನಾನು “ಸಬ್ ಕಾ ಪ್ರಯಾಸ್” ಬಗ್ಗೆ ಮಾತನಾಡುವಾಗ ಅದು ಒಂದು ಸಮಗ್ರ ವಿಧಾನದ ಮೂಲಕ ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಯತ್ನಗಳನ್ನು ಒಳಗೊಂಡಿರುತ್ತದೆ. ನಾವು ವಿಪತ್ತು ನಿರ್ವಹಣೆಗೆ ಆದ್ಯತೆ ನೀಡುವಾಗ ನಾವು ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೂ ಹಲವಾರು ಬದಲಾವಣೆಗಳನ್ನು ಮಾಡಿದ್ದೇವೆ.   ಸಿವಿಲ್ ಎಂಜಿನಿಯರಿಂಗ್ ಮತ್ತು ವಾಸ್ತುಶಿಲ್ಪ ವಿಭಾಗದಲ್ಲಿ ವಿಪತ್ತು ನಿರ್ವಹಣೆ ಮತ್ತು ಮೂಲ ಸೌಕರ್ಯ ಕುರಿತ ವಿಷಯಗಳನ್ನು ಪಠ್ಯದಲ್ಲಿ ಸೇರ್ಪಡೆ ಮಾಡುವ ಕುರಿತ ಪ್ರಯತ್ನಗಳು ಪ್ರಗತಿಯಲ್ಲಿವೆ. ಆಣೆಕಟ್ಟು ವೈಫಲ್ಯದಿಂದ ಎದುರಾಗುವ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಆಣೆಕಟ್ಟು ಸುರಕ್ಷತಾ ಕಾಯ್ದೆಯನ್ನು ಸಹ ಜಾರಿಗೊಳಿಸಿದೆ. 

ಸ್ನೇಹಿತರೇ

ಜಗತ್ತಿನ ಎಲ್ಲಿಯೇ ಆದರೂ ವಿಪತ್ತು ಸಂಭವಿಸಿದಾಗ ದೊಡ್ಡ ಮಟ್ಟದ ಆರ್ಥಿಕ ನಷ್ಟದ ಜತೆಗೆ ದುರಂತ ಸಾವುಗಳು ಮತ್ತು ತೆರವು ಕಾರ್ಯಾಚರಣೆ ಬಗ್ಗೆ ಚರ್ಚೆಗಳು ನಡೆಯುತ್ತವೆ. ಈ ನಿಟ್ಟಿನಲ್ಲಿ ಭಾರತ ಇಂದು ತ್ವರಿತವಾಗಿ ಮುನ್ನಡೆಯುತ್ತಿದೆ. ಭೂಕಂಪ, ಪ್ರವಾಹ ಮತ್ತು ಚಂಡಮಾರುತದಂತಹ ಹೆಚ್ಚಿನ ಅಪಾಯವಿರುವ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳು ಈ ಕಾಳಜಿ ವಹಿಸುತ್ತವೆ. ಉತ್ತರಾಖಂಡದಲ್ಲಿ ನಿರ್ಮಾಣವಾಗುತ್ತಿರುವ ಚಾರ್ ಧಾಮ್ ನಲ್ಲಿ ವಿಪತ್ತು ನಿರ್ಹಣೆಗೆ ಒತ್ತು ನೀಡಲಾಗಿದೆ.  ಉತ್ತರ ಪ್ರದೇಶದಲ್ಲಿ ನಿರ್ಮಿಸುತ್ತಿರುವ ಹೊಸ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ನಿರ್ದಿಷ್ಟವಾಗಿ ವಿಪತ್ತು ನಿರ್ಹಣೆಗೆ ಸಂಬಂಧಿಸಿದ ಅಂಶಗಳಿಗೆ ಆದ್ಯತೆ ನೀಡಲಾಗಿದೆ. ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಅಗತ್ಯಬಿದ್ದಲ್ಲಿ ವಿಮಾನಗಳನ್ನು ಇಳಿಸುವ ವ್ಯವಸ್ಥೆಯನ್ನು ಸಹ ಅಡಕಗೊಳಿಸಲಾಗಿದೆ. ಇದು ನವ ಭಾರತದ ಚಿಂತನೆ ಮತ್ತು ದೃಷ್ಟಿಕೋನವಾಗಿದೆ.

ಸ್ನೇಹಿತರೇ

ವಿಪತ್ತು ಪ್ರತಿಬಂಧಿಸುವ ಮೂಲ ಸೌಕರ್ಯದ ದೃಷ್ಟಿಯಿಂದ ಭಾರತ ತನ್ನ ವಿಪತ್ತು ನಿರ್ವಹಣೆ ಮೂಲ ಸೌಕರ್ಯ ಹೊಂದಾಣಿಕೆ ಸಂಸ್ಥೆ - ಸಿ.ಡಿ.ಆರ್.ಐ  ವಿಶ‍್ವಕ್ಕೆ ಬಹಳದೊಡ್ಡ ಪರಿಕಲ್ಪನೆಯನ್ನು ನೀಡಿದೆ. ಭಾರತದ ಈ ಕ್ರಮದಲ್ಲಿ ಬ್ರಿಟನ್ ಮುಖ್ಯ ಸಹಭಾಗಿತ್ವ ಹೊಂದಿದೆ ಮತ್ತು ಇಂದು ಜಗತ್ತಿನ 35 ದೇಶಗಳು ಭಾರತದೊಂದಿಗೆ ಕೈಜೋಡಿಸಿವೆ. ಜಗತ್ತಿನ ವಿವಿಧ ದೇಶಗಳೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ನಾವು ಸೇನಾ ಪಡೆಗಳ ಜಂಟಿ ಸಮರಾಭ್ಯಾಸಗಳನ್ನು ನಡೆಸುತ್ತಿದ್ದೇವೆ. ಇದು ಹಳೆಯ ಸಂಪ್ರದಾಯವಾಗಿದೆ ಮತ್ತು ಆಗಿಂದಾಗ್ಗೆ ಚರ್ಚಿಸಲಾಗುತ್ತಿದೆ. ಆದರೆ ಭಾರತ ಮೊದಲ ಬಾರಿಗೆ ವಿಪತ್ತು ನಿರ್ವಹಣೆಗಾಗಿ ಜಂಟಿ ಅಭ್ಯಾಸದ ಸಂಪ್ರದಾಯವನ್ನು ಪ್ರಾರಂಭಿಸಿದೆ. ನಮ್ಮ ವಿಪತ್ತು ನಿರ್ವಹಣಾ ಸಂಸ್ಥೆಗಳು ವಿವಿಧ ದೇಶಗಳಿಗೆ ವಿವಿಧ ಸಂದರ್ಭಗಳಲ್ಲಿ ತಮ್ಮ ಸೇವೆ ಒದಗಿಸಿದ್ದು, ಮಾನವೀಯತೆಯಿಂದ ತಮ್ಮ ಕರ್ತವ್ಯ ನಿರ್ವಹಿಸಿವೆ. ಭೂಕಂಪನದಿಂದಾಗಿ ನೇಪಾಳದಲ್ಲಿ ಧ್ವಂಸವಾದಾಗ ಭಾರತ ತನ್ನ ಆಪ್ತ ದೇಶದ ವಿಚಾರದಲ್ಲಿ ನೋವು ಹಂಚಿಕೊಳ್ಳಲು ಸಮಯ ವ್ಯರ್ಥಮಾಡಲಿಲ್ಲ. ನಮ್ಮ ಎನ್.ಡಿ.ಆರ್.ಎಫ್ ಸಿಬ್ಬಂದಿ ತಕ್ಷಣವೇ ಅಲ್ಲಿಗೆ ತಲುಪಿತು. ವಿಪತ್ತು ನಿರ್ವಹಣೆಯ ಅನುಭವ ಭಾರತಕ್ಕೆ ಮಾತ್ರ ಸೀಮಿತವಲ್ಲ. ಇದು ಇಡೀ ಮನುಕುಲಕ್ಕೆ ಸಂಬಂಧಿಸಿದ್ದಾಗಿದೆ. 2017 ರಲ್ಲಿ ಭಾರತ ದಕ್ಷಿಣ ಏಷ್ಯಾ ಭೂ ಸ್ಥಿರ ಸಂವಹನ ಉಪಗ್ರಹ ಉಡಾವಣೆ ಮಾಡಿದ್ದು ನಿಮಗೆ ನೆನಪಿರಬಹುದು. ನಮ್ಮ ದಕ್ಷಿಣ ಏಷ್ಯಾ ರಾಷ್ಟ್ರಗಳು ಹವಾಮಾನ ಮತ್ತು ಸಂಪರ್ಕ ವಲಯದಲ್ಲಿ ಈ ಉಪಗ್ರಹದಿಂದ ಲಾಭ ಪಡೆಯುತ್ತಿವೆ.

ಸ್ನೇಹಿತರೇ

ಯಾವುದೇ ರೀತಿಯ ಪರಿಸ್ಥಿತಿ ಎದುರಾದರೂ, ಧೈರ್ಯವಿದ್ದರೆ ಅದನ್ನು ಅವಕಾಶವನ್ನಾಗಿ ಮಾಡಿಕೊಳ್ಳಬಹುದು. ಈ ಸಂದೇಶವನ್ನು ನೇತಾಜಿ ಅವರು ನಮಗೆ ಸ್ವಾತಂತ್ರ್ಯ ಸಂಗ್ರಾಮ ಸಂದರ್ಭದಲ್ಲಿ ನೀಡಿದ್ದಾರೆ. ನೇತಾಜಿ ಅವರು “ಸ್ವಾತಂತ್ರ್ಯ ಭಾರತದ ಬಗ್ಗೆ ನಂಬಿಕೆ ಕಳೆದುಕೊಳ್ಳಬೇಡ. ಜಗತ್ತಿನ ಯಾವುದೇ ಶಕ್ತಿ ಭಾರತವನ್ನು ಅಲುಗಾಡಿಸಲು ಆಗದು” ಎಂದು ಹೇಳಿದ್ದಾರೆ. ಇಂದು ನಾವು ನಮ್ಮ ಸ್ವಾತಂತ್ರ್ಯ ಭಾರತದ ಕನಸುಗಳನ್ನು ನನಸು ಮಾಡಬೇಕಿದೆ. ನಮ್ಮ ಮುಂದೆ ಸ್ವಾತಂತ್ರ್ಯೋತ್ಸವದ ನೂರನೇ ವರ್ಷಾಚರಣೆಯ 2047 ರ ವೇಳೆಗೆ ನವ ಭಾರತವನ್ನು ನಿರ್ಮಿಸಬೇಕಿದೆ. ನೇತಾಜಿ ಅವರು ದೇಶದ ಮೇಲೆ ಹೊಂದಿದ್ದ ನಂಬಿಕೆ, ಅವರ ಭಾವನೆಗಳ ಆಧಾರದ ಮೇಲೆ ಭಾರತವನ್ನು  ಕಟ್ಟುವ ನಿಟ್ಟಿನಲ್ಲಿ ಗುರಿ ತಲುಪದಂತೆ ತಡೆಯುವ ಯಾವುದೇ ಶಕ್ತಿ ಜಗತ್ತಿನಲ್ಲಿ ಇಲ್ಲ ಎಂದು ಹೇಳಬಲ್ಲ. ನಮ್ಮ ಯಶಸ್ಸು ದೃಢ ನಿಶ್ಚಯಕ್ಕೆ ಪುರಾವೆಯಾಗಿವೆ. ಆದರೆ ಈ ಯಾನ ಈಗಲೂ ದೀರ್ಘವಾದದ್ದು. ನಾವು ಈಗಲೂ ಹಲವು ಶಿಖರಗಳನ್ನು ಏರಬೇಕಿದೆ. ಇದಕ್ಕಾಗಿ ದೇಶದ ಇತಿಹಾಸ, ಸಹಸ್ರಾರು ವರ್ಷಗಳ ಪಯಣದಲ್ಲಿ ನಮ್ಮ ನಿಷ್ಠುರತೆ ಮತ್ತು ತ್ಯಾಗವನ್ನು ಅರಿತುಕೊಳ್ಳುವ ಅವಶ‍್ಯಕತೆಯಿದೆ.     

ಸಹೋದರರೇ ಮತ್ತು ಸಹೋದರಿಯರೇ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಭಾರತ ತನ್ನ ಅಸ್ಮಿತೆ ಮತ್ತು ಸ್ಪೂರ್ತಿಯನ್ನು ಪುನರುಜ್ಜೀವನಗೊಳಿಸುವ ಸಂಕಲ್ಪ ಹೊಂದಿದೆ. ಸ್ವಾತಂತ್ರ್ಯೋತ್ತರದ ನಂತರ ದೇಶದ ಸಂಸ್ಕೃತಿ, ಸಂಸ್ಕಾರದ ಜತೆಗೆ ಅನೇಕ ಮಹಾನ್ ವ್ಯಕ್ತಿಗಳ ಕೊಡುಗೆಯನ್ನು ಅಳಿಸಿಹಾಕುವ ಪ್ರಯತ್ನಗಳು ನಡೆದಿರುವುದು ದುರದೃಷ್ಟಕರ. ಸ್ವಾತಂತ್ರ್ಯ ಹೋರಾಟ ಲಕ್ಷಾಂತರ ದೇಶವಾಸಿಗಳ ತಪಸ್ಸನ್ನು ಒಳಗೊಂಡಿತ್ತು. ಆದರೆ ಅವರ ಇತಿಹಾಸವನ್ನು ಸೀಮಿತಗೊಳಿಸುವ ಪ್ರಯತ್ನಗಳನ್ನು ಮಾಡಲಾಯಿತು. ಆದರೆ ಇಂದು ಸ್ವಾತಂತ್ರ್ಯ ಪಡೆದ ದಶಕಗಳ ನಂತರ ದೇಶ ಆ ತಪ್ಪುಗಳನ್ನು ಸರಿಪಡಿಸುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ “ಪಂಚತೀರ್ಥ”ಗಳನ್ನು ಅವರ ಘನತೆಗೆ ತಕ್ಕಂತೆ ಅಭಿವೃದ್ಧಿಪಡಿಸುತ್ತಿದೆ. ಇಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ ವೈಭವದ ತೀರ್ಥಯಾತ್ರೆಯ ಸ್ಥಳವಾಗಿದೆ. ನಾವು ಇಂದು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ದಿನವನ್ನು ಜನಜಾತಿಯ ಗೌರವ ದಿನವನ್ನಾಗಿ ಆಚರಿಸುತ್ತಿದ್ದೇವೆ. ಬುಡಕಟ್ಟು ಸಮುದಾಯಗಳ ಕೊಡುಗೆ ಮತ್ತು ಇತಿಹಾಸವನ್ನು ಪ್ರತಿಬಿಂಬಿಸುವ ಆದಿವಾಸಿ [ಬುಡಕಟ್ಟು] ವಸ್ತು ಸಂಗ್ರಹಾಲಯಗಳನ್ನು ವಿವಿಧ ಜಿಲ್ಲೆಗಳಲ್ಲಿ ನಿರ್ಮಿಸುತ್ತಿದ್ದೇವೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನಕ್ಕೆ ಸಂಬಂಧಿಸಿದ ಪ್ರತಿಯೊಂದು ಪರಂಪರೆಯನ್ನು ದೇಶ ಸಂಪೂರ್ಣ ಹೆಮ್ಮೆಯಿಂದ ಪಾಲಿಸುತ್ತಿದೆ. ಅಂಡಮಾನ್ ನಲ್ಲಿ ನೇತಾಜಿ ಅವರು ತ್ರಿವರ್ಣ ಧ್ವಜ ಹಾರಿಸಿದ 75 ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಂಡಮಾನ್ ನಲ್ಲಿರುವ ಒಂದು ದ್ವೀಪಕ್ಕೆ ಅವರ ಹೆಸರನ್ನು ಇಡಲಾಗಿದೆ.  ಅಂಡಮಾನ್ ನಲ್ಲಿ ಡಿಸೆಂಬರ್ ನಲ್ಲಿ ವಿಶೇಷವಾದ “ಸಂಕಲ್ಪ್ ಸ್ಮಾರಕ್” ಅನ್ನು ಸಮರ್ಪಿಸಲಾಗಿದೆ. ಈ ಸ್ಮಾರಕ ನೇತಾಜಿ ಅವರಿಗೆ ಮತ್ತು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಇಂಡಿಯನ್ ಆರ್ಮಿ ಸೇನೆಯ ಸೈನಿಕರಿಗೆ ಸಲ್ಲಿಸಿದ ಗೌರವವಾಗಿದೆ. ಕಳೆದ ವರ್ಷ ಇದೇ ದಿನ ಕೋಲ್ಕತ್ತಾದಲ್ಲಿರುವ ನೇತಾಜಿ ಅವರ ಪೂರ್ವಜರ ಮನೆಗೆ ಭೇಟಿ ನೀಡುವ ಸೌಭಾಗ್ಯ ತಮ್ಮದಾಗಿತ್ತು. ಅವರು ಕೋಲ್ಕತ್ತಾದಲ್ಲಿದ್ದ ರೀತಿ, ಓದುತ್ತಿದ್ದ ಕೊಠಡಿ, ಮನೆಯ ಮೆಟ್ಟಿಲು, ಅಲ್ಲಿನ ಗೋಡೆಗಳ ಅನುಭವ ಪದಗಳಿಗೆ ನಿಲುಕದ್ದಾಗಿದೆ.  

ಸ್ನೇಹಿತರೇ

ಆಜಾದ್ ಹಿಂದ್ ಸರ್ಕಾರಕ್ಕೆ 2018 ರ ಅಕ್ಟೋಬರ್ 21 ಕ್ಕೆ 75 ವರ್ಷಗಳ ತುಂಬಿದ ದಿನವನ್ನು ಮರೆಯಲು ಸಾಧ್ಯವಿಲ್ಲ. ಕೆಂಪುಕೋಟೆಯಲ್ಲಿ ಜರುಗಿದ ವಿಶೇಷ ಸಮಾರಂಭದಲ್ಲಿ ಅಜಾದ್ ಹಿಂದ್ ಪೌಜ್ ನ ಟೋಪಿ ಧರಿಸಿ ತ್ರಿವರ್ಣ ಧ್ವಜ ಹಾರಿಸಿದ್ದೇನೆ. ಆ ಕ್ಷಣ ಅಪೂರ್ವ ಮತ್ತು ಅವಿಸ್ಮರಣೀಯ. ಆಜಾದ್ ಹಿಂದ್ ಫೌಜ್ ಗೆ ಸಂಬಂಧಿಸಿದ ಸ್ಮಾರಕವನ್ನು ಕೆಂಪು ಕೋಟೆಯಲ್ಲಿಯೇ ನಿರ್ಮಿಸುತ್ತಿರುವುದು ತಮಗೆ ಸಂತೋಷ ತಂದಿದೆ. 2019 ರ ಜನವರಿ 26 ರ ಫರೇಡ್ ನಲ್ಲಿ ಆಜಾದ್ ಹಿಂದ್ ಫೌಜ್ ನ ಮಾಜಿ ಸೈನಿಕರನ್ನು ನೋಡಿದ್ದು ತಮ್ಮ ಅಮೂಲ್ಯ ಸ್ಮರಣೆಯಾಗಿದೆ. ನೇತಾಜಿ ಅವರಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗಪಡಿಸಲು ನಮ್ಮ ಸರ್ಕಾರಕ್ಕೆ ಅವಕಾಶ ದೊರೆತಿರುವುದು ಸಹ ನಮ್ಮ ಸೌಭಾಗ್ಯವಾಗಿದೆ. 

ಸ್ನೇಹಿತರೇ

ನೇತಾಜಿ ಸುಭಾಷ್ ಅವರು ಏನನ್ನಾದರೂ ಮಾಡಲು ನಿರ್ಧರಿಸಿದರೆ ಯಾವುದೇ ಶಕ್ತಿ ಅವರನ್ನು ತಡೆಯಲು ಸಾಧ್ಯವಿಲ್ಲ. ನೇತಾಜಿ ಸುಭಾಷ್ ಚಂದ್ರಬೋಸ್ ಅವರ “ಮಾಡಬಹುದು, ಮಾಡಬಲ್ಲೆವು” ಎಂಬ ನುಡಿಯಿಂದ ಸ್ಫೂರ್ತಿ ಪಡೆದು ಮುನ್ನಡೆಯಬೇಕು. ಇದನ್ನು ಅವರು ಅರಿತಿದ್ದರು. ಶತಮಾನಗಳಿಂದ ಜನರಲ್ಲಿದ್ದ ಸೃಜನಶೀಲ ಶಕ್ತಿಯಲ್ಲಿ ರಾಷ್ಟ್ರೀಯತೆ ತುಂಬಿದೆ ಎಂದು ಅವರು ಯಾವಾಗಲೂ ಹೇಳುತ್ತಿದ್ದರು. ನಾವು ರಾಷ್ಟ್ರೀಯತೆಯನ್ನು ಜೀವಂತವಾಗಿಡಬೇಕು. ಹಾಗೆಯೇ ರಾಷ್ಟ್ರೀಯ ಪ್ರಜ್ಞೆಯೂ ಜಾಗೃತವಾಗಬೇಕಿದೆ. ನಾವೆಲ್ಲರೂ ಸೇರಿ ಭಾರತವನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಕನಸಿನ ಭಾರತವನ್ನಾಗಿ ಮಾಡಲು ಸಾಧ್ಯವಿದೆ ಎಂಬ ವಿಶ್ವಾಸ ತಮ್ಮದಾಗಿದೆ. ಮತ್ತೊಮ್ಮೆ ಪರಾಕ್ರಮ ದಿನದ ಶುಭಾಶಯಗಳು. ಇಂದು ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ಕಡಿಮೆ ಸಮಯದಲ್ಲಿ ವಿಶೇಷ ಸಾಧನೆ ಮಾಡಿದ್ದು, ಇದಕ್ಕೆ ಅಭಿನಂದನೆಗಳು. ಇಂದು ಎಲ್ಲೆಲ್ಲಿ ವಿಪತ್ತು ಅಥವಾ ಚಂಡಮಾರುತದಂತಹ ದುರಂತದ ಸಾಧ್ಯತೆಗಳು ಇದ್ದಾಗ ಸಾಮಾನ್ಯ ಜನತೆ ಎನ್.ಡಿ.ಆರ್.ಎಫ್ ಸಿಬ್ಬಂದಿಯನ್ನು ನೋಡಿದಾಗ ಸಹಾಯದ ಭರವಸೆ ದೊರೆಯುತ್ತದೆ. ಯಾವುದೇ ಅನಾಹುತ ಸಂಭವಿಸಿದಾಗ ರಕ್ಷಣಾ ಕಾರ್ಯಕ್ಕೆ ಆಗಮಿಸುವ  ಸೇನಾ ಸಿಬ್ಬಂದಿಯನ್ನು ಕಂಡಾಗಲೂ ಇದೇ ಅನುಭವಾಗುತ್ತದೆ. ಅದೇ ರೀತಿ ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ಯೋಧರು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಪರಾಕ್ರಮ ದಿನದ ಸಂದರ್ಭದಲ್ಲಿ ನೇತಾಜಿ ಅವರನ್ನು ನೆನಪಿಸಿಕೊಳ್ಳುತ್ತಿದ್ದೇವೆ. ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ಸಹಾನುಭೂತಿ  ಮತ್ತು ಸೂಕ್ಷ್ಮತೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಇವರಿಗೆ ನನ್ನ ಪ್ರಣಾಮಗಳು. ತಮಗೆ ಗೊತ್ತು ವಿಪತ್ತು ನಿರ್ವಹಣಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಹಲವರು  ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ಮತ್ತೊಬ್ಬರ ಜೀವ ರಕ್ಷಣೆಗಾಗಿ ತಮ್ಮ  ಜೀವ ಕೊಟ್ಟ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇನೆ. ಇಂತಹ ಎಲ್ಲರಿಗೂ ಗೌರವಪೂರ್ವಕವಾಗಿ ನಮಸ್ಕರಿಸುತ್ತಾ ನಿಮಗೆಲ್ಲರಿಗೂ ಪರಾಕ್ರಮ್ ದಿನದ ಶುಭಾಶಯಗಳನ್ನು ಕೋರುತ್ತಾ ನನ್ನ ಭಾಷಣ ಕೊನೆಗೊಳಿಸುತ್ತೇನೆ. ತುಂಬಾ ಧನ್ಯವಾದಗಳು.

ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಅವರು ಹಿಂದಿಯಲ್ಲಿ ಮಾಡಿದರು.

***(Release ID: 1792455) Visitor Counter : 73