ಪ್ರಧಾನ ಮಂತ್ರಿಯವರ ಕಛೇರಿ
ಮಣಿಪುರದ ಇಂಫಾಲದಲ್ಲಿ ಹಲವು ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆಯನ್ನು ನೆರವೇರಿಸಿದ ಪ್ರಧಾನಮಂತ್ರಿ
“ಈಶಾನ್ಯ ಭಾಗವನ್ನು ಭಾರತ ಸ್ವಾತಂತ್ರ್ಯದ ಹೆಬ್ಬಾಗಿಲು ಎಂದು ನೇತಾಜಿ ಕರೆದಿದ್ದರು, ಅದು ನವಭಾರತದ ಕನಸನ್ನು ಈಡೇರಿಸುವ ಹೆಬ್ಬಾಗಿಲಾಗುತ್ತಿದೆ”
“ಈಶಾನ್ಯ ರಾಜ್ಯಗಳ ಸಾಧ್ಯತೆಗಳನ್ನು ಅರ್ಥ ಮಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖವಾಗಿದ್ದೇವೆ”
“ಮಣಿಪುರದ ಆಟಗಾರರಿಂದ ದೇಶದ ಹಲವು ಯುವಕರು ಇಂದು ಸ್ಫೂರ್ತಿ ಪಡೆಯುತ್ತಿದ್ದಾರೆ”
“ರಸ್ತೆ ತಡೆ ರಾಜ್ಯ (ಬ್ಲಾಕೇಡ್ ಸ್ಟೇಟ್)ನಿಂದ ಮಣಿಪುರ ಅಂತಾರಾಷ್ಟ್ರೀಯ ವ್ಯಾಪಾರ ಉತ್ತೇಜನ ರಾಜ್ಯವಾಗುತ್ತಿದೆ”
“ಮಣಿಪುರದಲ್ಲಿ ನಾವು ಸ್ಥಿರತೆ ಕಾಯ್ದುಕೊಳ್ಳುತ್ತಿದ್ದೇವೆ ಮತ್ತು ಮಣಿಪುರವನ್ನು ಅಭಿವೃದ್ಧಿಯಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿವೆ. ಈ ಕಾರ್ಯವನ್ನು ಕೇವಲ ಡಬಲ್ ಇಂಜಿನ್ ಸರ್ಕಾರ ಮಾತ್ರ ಮಾಡಲು ಸಾಧ್ಯ”
Posted On:
04 JAN 2022 3:14PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಮಣಿಪುರದ ಇಂಫಾಲದಲ್ಲಿ ಸುಮಾರು 1850 ಕೋಟಿ ರೂ. ಮೌಲ್ಯದ 13 ಹೊಸ ಯೋಜನೆಗಳನ್ನು ಉದ್ಘಾಟಿಸಿದರು ಮತ್ತು 2950 ಕೋಟಿ ರೂ. ಮೊತ್ತದ 9 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. ಈ ಯೋಜನೆಗಳು ರಸ್ತೆ ಮೂಲಸೌಕರ್ಯ, ಕುಡಿಯುವ ನೀರು ಪೂರೈಕೆ, ಆರೋಗ್ಯ, ನಗರಾಭಿವೃದ್ಧಿ, ವಸತಿ, ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ವಲಯಗಳಿಗೆ ಸಂಬಂಧಿಸಿದವುಗಳಾಗಿವೆ.
ಪ್ರಧಾನಮಂತ್ರಿ ಅವರು, ಸುಮಾರು 1700 ಕೋಟಿ ರೂ.ಗೂ ಅಧಿಕ ವೆಚ್ಚದ 5 ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೂ ಕೂಡ ಶಂಕುಸ್ಥಾಪನೆಯನ್ನು ನೆರವೇರಿಸಿದರು. ಅವರು, ಸಿಲ್ಚರ್ ಮತ್ತು ಇಂಫಾಲದ ನಡುವೆ ವಾಹನ ದಟ್ಟಣೆ ತಪ್ಪಿಸಲು ಸುಮಾರು 75 ಕೋಟಿ ರೂ. ವೆಚ್ಚದಲ್ಲಿ ರಾಷ್ಟ್ರೀಯ ಹೆದ್ದಾರಿ 37ಕ್ಕೆ ಬಾರಕ್ ನದಿಯ ಮೇಲೆ ನಿರ್ಮಿಸಿರುವ ಉಕ್ಕಿನ ಸೇತುವೆಯನ್ನು ಉದ್ಘಾಟಿಸಿದರು. ಅಲ್ಲದೆ ಅವರು 1100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ 2387 ಮೊಬೈಲ್ ಟವರ್ ಗಳನ್ನು ಮಣಿಪುರದ ಜನತೆಗೆ ಸಮರ್ಪಿಸಿದರು.
ಪ್ರಧಾನಮಂತ್ರಿ ಅವರು, ಇಂಫಾಲ ನಗರಕ್ಕೆ ಕುಡಿಯುವ ನೀರು ಪೂರೈಸುವ ಸುಮಾರು 280 ಕೋಟಿ ರೂ. ವೆಚ್ಚದ ತೌಬಲ್ ಬಹು ಉದ್ದೇಶದ ನೀರು ಪೂರೈಕೆ ವ್ಯವಸ್ಥೆಯ ಯೋಜನೆಯನ್ನು ಉದ್ಘಾಟಿಸಿದರು. ತೆಮಂಗ್ ಲಾಂಗ್ ಜಿಲ್ಲೆಯ ಹತ್ತು ಜನವಸತಿಗಳ ನಿವಾಸಿಗಳಿಗೆ ಸುರಕ್ಷಿತ ಕುಡಿಯುವ ನೀರು ಪೂರೈಸುವ 65 ಕೋಟಿ ರೂ. ವೆಚ್ಚದ ಯೋಜನೆಯನ್ನು ಮತ್ತು 51 ಕೋಟಿ ರೂ. ವೆಚ್ಚದಲ್ಲಿ ಆ ಪ್ರದೇಶಗಳ ನಿವಾಸಿಗಳಿಗೆ ನಿರಂತರ ನೀರು ಪೂರೈಸುವ ಸೇನಾಪತಿ ಜಿಲ್ಲಾ ಕೇಂದ್ರ ಸ್ಥಾನದ ನೀರು ಪೂರೈಕೆ ಯೋಜನೆಯನ್ನೂ ಸಹ ಪ್ರಧಾನಮಂತ್ರಿ ಉದ್ಘಾಟಿಸಿದರು.
ಅಲ್ಲದೆ ಪ್ರಧಾನಮಂತ್ರಿ ಅವರು, ಪಿಪಿಪಿ ಆಧಾರದಲ್ಲಿ 160 ಕೋಟಿ ರೂ. ವೆಚ್ಚದಲ್ಲಿ ಇಂಫಾಲದಲ್ಲಿ ನಿರ್ಮಿಸಲಿರುವ ಅತ್ಯಾಧುನಿಕ ಕ್ಯಾನ್ಸರ್ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಿದರು. ಅವರು, ಡಿಆರ್ ಡಿಒ ಸಹಭಾಗಿತ್ವದಲ್ಲಿ 37 ಕೋಟಿ ರೂ. ವೆಚ್ಚದಲ್ಲಿ ಕಿಯಂ ಗೈನಲ್ಲಿ ಸ್ಥಾಪಿಸಿರುವ 200 ಹಾಸಿಗೆಗಳ ಕೋವಿಡ್ ಆಸ್ಪತ್ರೆಯನ್ನು ಉದ್ಘಾಟಿಸಿದರು. ಜತೆಗೆ 170 ಕೋಟಿಗೂ ಅಧಿಕ ವೆಚ್ಚದಲ್ಲಿ ಇಂಫಾಲ ಸ್ಮಾರ್ಟ್ ಸಿಟಿ ಯೋಜನೆ ಅಡಿ ಕೈಗೊಂಡಿರುವ ಮೂರು ಯೋಜನೆಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು. ಅವುಗಳಲ್ಲಿ ಸಮಗ್ರ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ(ಐಸಿಸಿಸಿ), ಇಂಫಾಲ ನದಿ ಪಶ್ಚಿಮ ಭಾಗದ ನದಿತಟ ಅಭಿವೃದ್ಧಿ(1ನೇ ಹಂತ ಮತ್ತು ತಂಗಲ್ ಬಜಾರ್ ನ ಮಾಲ್ ರೋಡ್ ಅಭಿವೃದ್ಧಿ(1ನೇ ಹಂತ) ಇವು ಸೇರಿವೆ.
ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿ ನಿರ್ಮಿಸಲಿರುವ ಅತ್ಯಾಧುನಿಕ ಅನ್ವೇಷಣೆ, ಆವಿಷ್ಕಾರ, ಸಂಪೋಷಣೆ ಮತ್ತು ತರಬೇತಿ ಕೇಂದ್ರ(ಸಿಐಐಐಟಿ)ದ ನಿರ್ಮಾಣಕ್ಕೆ ಪ್ರಧಾನಮಂತ್ರಿ ಶಂಕುಸ್ಥಾಪನೆ ನೆರವೇರಿಸಿದರು. ಅಲ್ಲದೆ ಅವರು, ಹರಿಯಾಣದ ಗುರು ಗ್ರಾಮದಲ್ಲಿ ಸುಮಾರು 240 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಿರುವ ಮಣಿಪುರ ಪ್ರದರ್ಶನಕಲೆಗಳ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇನ್ನು ಕೆಲವೇ ದಿನಗಳಲ್ಲಿ ಜನವರಿ 21ರಂದು ಮಣಿಪುರ ರಾಜ್ಯದ ಸ್ಥಾನಮಾನ ಪಡೆದು 50 ವರ್ಷಗಳು ಪೂರ್ಣಗೊಳ್ಳಲಿವೆ. ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇದು ಸ್ವತಃ ಒಂದು ಪ್ರಮುಖ ಸ್ಫೂರ್ತಿಯ ಸಂದರ್ಭವಾಗಿದೆ ಎಂದರು.
ಮಣಿಪುರದ ಜನರ ಶೌರ್ಯಕ್ಕೆ ನಮನ ಸಲ್ಲಿಸಿದ ಪ್ರಧಾನಮಂತ್ರಿ ಅವರು, ದೇಶದ ಜನರಲ್ಲಿ ಸ್ವಾತಂತ್ರ್ಯದ ಬಗ್ಗೆ ನಂಬಿಕೆ, ಈ ಮೊಯಿರಾಂಗ್ ಭೂಮಿಯಿಂದ ಆರಂಭವಾಯಿತು. ಇಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸೇನೆ ಮೊದಲ ಬಾರಿಗೆ ರಾಷ್ಟ್ರೀಯ ಧ್ವಜನ್ನು ಹಾರಿಸಿತ್ತು. ಈಶಾನ್ಯ ಭಾಗವನ್ನು ನೇತಾಜಿ ಭಾರತದ ಸ್ವಾತಂತ್ರ್ಯದ ಹೆಬ್ಬಾಗಿಲು ಎಂದು ಕರೆದಿದ್ದರು. ಅದು ಇದೀಗ ನವಭಾರತದ ಕನಸುಗಳನ್ನು ಸಾಕಾರಗೊಳಿಸುವ ಹೆಬ್ಬಾಗಿಲಾಗುತ್ತಿದೆ ಎಂದರು. ಭಾರತದ ಪೂರ್ವ ಮತ್ತು ಈಶಾನ್ಯ ಭಾಗಗಳು ಭಾರತದ ಪ್ರಗತಿಯ ಮೂಲವಾಗಲಿವೆ ಎಂಬ ವಿಶ್ವಾಸವನ್ನು ಪುನರುಚ್ಚರಿಸಿದ ಅವರು, ಇಂದು ಈ ಭಾಗದ ಪ್ರಗತಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.
ಇಂದು ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿರುವುದಕ್ಕಾಗಿ ಪ್ರಧಾನಮಂತ್ರಿ ಅವರು, ಮಣಿಪುರದ ಜನತೆಗೆ ಅಭಿನಂದನೆ ಸಲ್ಲಿಸಿದರು. ಸಂಪೂರ್ಣ ಬಹುಮತ ಮತ್ತು ಭಾರೀ ಪ್ರಭಾವದೊಂದಿಗೆ ಸ್ಥಿರ ಸರ್ಕಾರ ರಚನೆಗೆ ಬೆಂಬಲ ನೀಡಿದ್ದಕ್ಕಾಗಿ ಅವರು ಮಣಿಪುರದ ಜನತೆಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಸ್ಥಿರತೆ ಮತ್ತು ಮಣಿಪುರದ ಜನರ ಆಯ್ಕೆಯ ಫಲವಾಗಿ ಮಣಿಪುರ ಹಲವು ಸಾಧನೆ ಮಾಡಿದೆ. ಅವುಗಳೆಂದರೆ ಕಿಸಾನ್ ಸಮ್ಮಾನ್ ನಿಧಿಯಡಿ 6 ಲಕ್ಷ ರೈತ ಕುಟುಂಬಗಳು ಪ್ರಯೋಜನ ಪಡೆದಿದ್ದು; ಪಿಎಂ ಗರೀಬ್ ಕಲ್ಯಾಣ್ ಯೋಜನೆಯಡಿ 6 ಲಕ್ಷ ಬಡ ಕುಟುಂಬಗಳಿಗೆ ಪ್ರಯೋಜನ; ಪಿಎಂಎವೈ ಅಡಿಯಲ್ಲಿ 9 ಸಾವಿರ ಮನೆಗಳು, ಆಯುಷ್ಮಾನ್ ಭಾರತ್ ಅಡಿ 4.25 ಲಕ್ಷ ರೋಗಿಗಳಿಗೆ ಉಚಿತ ವ್ಯದ್ಯಕೀಯ ಚಿಕಿತ್ಸೆ, 1.5 ಲಕ್ಷ ಉಚಿತ ಅನಿಲ ಸಂಪರ್ಕಗಳು; 1.3 ಲಕ್ಷ ಉಚಿತ ವಿದ್ಯುತ್ ಸಂಪರ್ಕಗಳು, 30 ಸಾವಿರ ಶೌಚಾಲಯಗಳೂ 30 ಸಾವಿರಕ್ಕೂ ಅಧಿಕ ಉಚಿತ ಡೋಸ್ ಮತ್ತು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಆಕ್ಷಿಜನ್ ಘಟಕಗಳು ಕಾರ್ಯಾರಂಭ ಮಾಡಿರುವ ಪ್ರಯೋಜನಗಳನ್ನು ಪಡೆದುಕೊಂಡಿದೆ ಎಂದರು.
ತಾವು ಪ್ರಧಾನಿ ಆಗುವ ಮುನ್ನವೂ ಮಣಿಪುರಕ್ಕೆ ಹಲವು ಬಾರಿ ಭೇಟಿ ನೀಡಿದ್ದಾಗಿ ಪ್ರಧಾನಮಂತ್ರಿ ಸ್ಮರಿಸಿದರು. “ನನಗೆ ನಿಮ್ಮ ನೋವು ಅರ್ಥವಾಗಿದೆ. ಹಾಗಾಗಿಯೇ 2014ರ ನಂತರ ದೆಹಲಿಯಲ್ಲಿನ ಭಾರತ ಸರ್ಕಾರವನ್ನು ನಿಮ್ಮ ಮನೆ ಬಾಗಿಲಿಗೆ ತಂದೆ” ಎಂದರು. ಪ್ರತಿಯೊಬ್ಬ ಅಧಿಕಾರಿ ಮತ್ತು ಸಚಿವರಿಗೆ ಈ ಪ್ರದೇಶಕ್ಕೆ ಭೇಟಿ ನೀಡುವಂತೆ ಸೂಚಿಸಲಾಗಿದೆ ಮತ್ತು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಜನರಿಗೆ ಸೇವೆ ಸಲ್ಲಿಸಲು ಸೂಚಿಸಲಾಗಿದೆ. “ಈ ಭಾಗದ 5 ಪ್ರಮುಖ ವ್ಯಕ್ತಿಗಳಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಿರುವುದನ್ನು ನೀವು ಗಮನಿಸಿರಬಹುದು” ಎಂದು ಪ್ರಧಾನಮಂತ್ರಿ ಹೇಳಿದರು.
ತಮ್ಮ ಸರ್ಕಾರ ಕಳೆದ ಏಳು ವರ್ಷಗಳಿಂದ ಕೈಗೊಂಡಿರುವ ಕಠಿಣ ಶ್ರಮದ ಫಲ ಇಡೀ ಈಶಾನ್ಯ ಭಾಗದಲ್ಲಿ ಮತ್ತು ವಿಶೇಷವಾಗಿ ಮಣಿಪುರದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಮಣಿಪುರ ಹೊಸ ಬದಲಾಗುತ್ತಿರುವ ದುಡಿಯುವ ಸಂಸ್ಕೃತಿಯ ಸಂಕೇತವಾಗಿದೆ. ಈ ಬದಲಾವಣೆಗಳು ಮಣಿಪುರದ ಸಂಸ್ಕೃತಿ ಮತ್ತು ಅವುಗಳ ಪೋಷಣೆಗೂ ಅನುಕೂಲವಾಗಿವೆ. ಸಂಪರ್ಕ ಈ ಬದಲಾವಣೆಗೆ ಆದ್ಯತೆಯಾಗಿದೆ ಮತ್ತು ಸೃಜನಶೀಲತೆ ಕೂಡ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ರಸ್ತೆ ಮತ್ತು ಮೂಲಸೌಕರ್ಯ ಯೋಜನೆ ಜತೆಗೆ ಉತ್ತಮ ಮೊಬೈಲ್ ಜಾಲ ಸಂಪರ್ಕವನ್ನು ಬಲವರ್ಧನೆಗೊಳಿಸಿದೆ ಎಂದು ಪ್ರಧಾನಮಂತ್ರಿ ವಿವರಿಸಿದರು. ಸಿಐಐಟಿ ಸ್ಥಳೀಯ ಯುವಕರ ಆವಿಷ್ಕಾರ ಮನೋಭಾವ ಮತ್ತು ಸೃಜನಶೀಲತೆಗೆ ಕೊಡುಗೆ ನೀಡಲಿದೆ. ಆಧುನಿಕ ಕ್ಯಾನ್ಸರ್ ಆಸ್ಪತ್ರೆ ಆರೈಕೆಗೆ ಹೊಸ ಆಯಾಮ ತಂದುಕೊಡಲಿದೆ ಮತ್ತು ಮಣಿಪುರ ಪ್ರದರ್ಶನ ಕಲಾ ಕೇಂದ್ರ ಮತ್ತು ಗೋವಿಂದ ಜಿ ಮಂದಿರ ನವೀಕರಣ, ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲಿವೆ.
ಈಶಾನ್ಯ ರಾಜ್ಯಗಳಿಗಾಗಿ ತಮ್ಮ ಸರ್ಕಾರ ‘ಆಕ್ಟ್ ಈಸ್ಟ್’ನ ಸಂಕಲ್ಪ ಮಾಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇವರು ಸಾಕಷ್ಟು ನೈಸರ್ಗಿಕ ಸಂಪನ್ಮೂಲಗಳನ್ನು ನೀಡಿದ್ದಾನೆ. ಈ ಭಾಗದಲ್ಲಿ ಸಾಕಷ್ಟು ಸಂಪನ್ಮೂಲ ಸಾಮರ್ಥ್ಯವಿದೆ ಎಂದರು. ಇಲ್ಲಿ ಪ್ರವಾಸೋದ್ಯಮ ಮತ್ತು ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ. ಈಶಾನ್ಯ ಭಾಗದಲ್ಲಿ ಈ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳುವ ಕಾರ್ಯ ಇದೀಗ ಆರಂಭವಾಗಿದೆ ಎಂದರು. ಈಶಾನ್ಯ ಭಾಗ ಇದೀಗ ಭಾರತದ ಅಭಿವೃದ್ಧಿಯ ಹೆಬ್ಬಾಗಿಲಾಗುತ್ತಿದೆ ಎಂದು ಅವರು ಹೇಳಿದರು.
ದೇಶಕ್ಕೆ ಅಪರೂಪದ ರತ್ನಗಳನ್ನು ನೀಡಿರುವ ರಾಜ್ಯವಾಗಿದೆ ಮಣಿಪುರ ಎಂದು ಪ್ರಧಾನಮಂತ್ರಿ ಹೇಳಿದರು. ಯುವಕರು ವಿಶೇಷವಾಗಿ ಮಣಿಪುರದ ಯುವತಿಯರು ಜಗತ್ತಿನಾದ್ಯಂತ ದೇಶಕ್ಕೆ ಹೆಮ್ಮೆ ತಂದಿದ್ದಾರೆ. ವಿಶೇಷವಾಗಿ ದೇಶದ ಇಂದಿನ ಯುವಜನರು ಮಣಿಪುರದ ಆಟಗಾರರಿಂದ ಸ್ಫೂರ್ತಿ ಪಡೆಯುತ್ತಿದ್ದಾರೆ ಎಂದರು.
ಇಂದು ಡಬಲ್ ಇಂಜಿನ್ ಸರ್ಕಾರದ ನಿರಂತರ ಪ್ರಯತ್ನಗಳ ಕಾರಣದಿಂದಾಗಿ ಬಂಡುಕೋರರ ಜ್ವಾಲೆ ಕಾಣಿಸುತ್ತಿಲ್ಲ ಮತ್ತು ಈ ಭಾಗದಲ್ಲಿ ಅಭದ್ರತೆ ಕಾಣುತ್ತಿಲ್ಲ, ಆದರೆ ಇಲ್ಲಿ ಶಾಂತಿ ಮತ್ತು ಅಭಿವೃದ್ಧಿಯ ಬೆಳಕು ಕಾಣುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈಶಾನ್ಯ ರಾಜ್ಯಗಳಾದ್ಯಂತ ನೂರಾರು ಯುವಕರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ ಮತ್ತು ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರ್ಪಡೆಗೊಂಡಿದ್ದಾರೆ. ದಶಕಗಳ ಕಾಲ ಬಾಕಿ ಇದ್ದ ಒಪ್ಪಂದಗಳಿಗೆ ಪ್ರಸಕ್ತ ಸರ್ಕಾರ ಐತಿಹಾಸಿಕ ಒಪ್ಪಂದಗಳನ್ನು ಪೂರ್ಣಗೊಳಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ‘ರಸ್ತೆ ತಡೆ ರಾಜ್ಯ’ (ಬ್ಲಾಕೇಡ್ ಸ್ಟೇಟ್) ಎಂದು ಹೆಸರಾಗಿದ್ದ ಮಣಿಪುರ ರಾಜ್ಯ ಇದೀಗ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ದಾರಿ ಮಾಡಿಕೊಟ್ಟಿದೆ.
21ನೇ ಶತಮಾನದ ಈ ದಶಕ, ಮಣಿಪುರಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಈ ಹಿಂದೆ ಸಮಯ ಕಳೆದು ಹೋಗಿದೆ ಎಂದು ಅವರು ವಿಷಾಧಿಸಿದರು. ಈಗ ಒಂದು ಕ್ಷಣವೂ ಇಲ್ಲ ಎಂದರು. “ಮಣಿಪುರದಲ್ಲಿ ನಾವು ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು ಮತ್ತು ಅಭಿವೃದ್ಧಿಯಲ್ಲಿ ಮಣಿಪುರವನ್ನು ನಾವು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು” ಮತ್ತು ಈ ಕಾರ್ಯವನ್ನು ಕೇವಲ ಡಬಲ್ ಇಂಜಿನ್ ಸರ್ಕಾರದಿಂದ ಮಾಡಲು ಮಾತ್ರ ಸಾಧ್ಯ” ಎಂದು ಅವರು ಪ್ರತಿಪಾದಿಸಿದರು.
***
(Release ID: 1787442)
Visitor Counter : 298
Read this release in:
English
,
Urdu
,
Marathi
,
Hindi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam