ಪ್ರಧಾನ ಮಂತ್ರಿಯವರ ಕಛೇರಿ
ವಾರಾಣಸಿಯಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ
ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಮತ್ತು ಈ ಪ್ರದೇಶದ ರೈತರಿಗೆ ಸಹಾಯ ಮಾಡುವ ಪ್ರಯತ್ನವಾಗಿ ಪ್ರಧಾನಮಂತ್ರಿಯವರು 'ಬನಾಸ್ ಡೈರಿ ಸಂಕುಲ್'ಗೆ ಶಂಕುಸ್ಥಾಪನೆ ನೆರವೇರಿಸಿದರು.
ಉತ್ತರ ಪ್ರದೇಶದ 20 ಲಕ್ಷಕ್ಕೂ ಹೆಚ್ಚು ನಿವಾಸಿಗಳಿಗೆ ಗ್ರಾಮೀಣ ವಸತಿ ಹಕ್ಕುಗಳ ದಾಖಲೆ 'ಘರೌನಿ' ವಿತರಿಸಿದ ಪ್ರಧಾನಿ
ವಾರಾಣಸಿಯಲ್ಲಿ 1500 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಮಂತ್ರಿಗಳು
ರೈತರ ದಿನದ ಅಂಗವಾಗಿ ಚೌಧರಿ ಚರಣ್ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸಿದ ಪ್ರಧಾನಿ
"ಭಾರತದ ಹೈನು ವಲಯವನ್ನು ಬಲಪಡಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ"
"ಹಸು-ಎಮ್ಮೆಗಳನ್ನು ಗೇಲಿ ಮಾಡುವ ಜನರು, ದೇಶದ 8 ಕೋಟಿ ಕುಟುಂಬಗಳ ಜೀವನೋಪಾಯ ಅಂತಹ ಜಾನುವಾರುಗಳಿಂದಲೇ ನಡೆಯುತ್ತದೆ ಎಂಬ ವಿಷಯವನ್ನು ಮರೆತುಬಿಡುತ್ತಾರೆ."
"ಇಂದು ಉತ್ತರ ಪ್ರದೇಶ ವು ದೇಶದ ಅತಿದೊಡ್ಡ ಹಾಲು ಉತ್ಪಾದಿಸುವ ರಾಜ್ಯ ಮಾತ್ರವಲ್ಲ, ಹೈನು ವಲಯದ ವಿಸ್ತರಣೆಯಲ್ಲೂ ಮುಂಚೂಣಿಯಾಗಿದೆ"
"ಹೈನುಗಾರಿಕೆ ವಲಯ, ಪಶುಸಂಗೋಪನೆ ಮತ್ತು ಶ್ವೇತ ಕ್ರಾಂತಿಗೆ ಹೊಸ ಉತ್ತೇಜನವು ರೈತರ ಜೀವನವನ್ನು ಪರಿವರ್ತಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಲಿದೆ"
ಭೂತಾಯಿಯ ಪುನಶ್ಚೇತನಕ್ಕಾಗಿ, ನಮ್ಮ ಮಣ್ಣನ್ನು ರಕ್ಷಿಸಲು, ಮುಂಬರುವ ಪೀಳಿಗೆಯ ಭವಿಷ್ಯವನ್ನು ಭದ್ರಪಡಿಸಲು, ನಾವು ಮತ್ತೊಮ್ಮೆ ನೈಸರ್ಗಿಕ ಕೃಷಿಯ ಕಡೆಗೆ ಹೊರಳಬೇಕು. ಇದು ಇಂದಿನ ತುರ್ತು ಅಗತ್ಯವಾಗಿದೆ"
"ವಾರಾಣಸಿಯು ತ್ವರಿತ ಗತಿಯಲ್ಲಿ ಅಭಿವೃದ್ಧಿಯ ಮಾದರಿಯಾಗಿ ಬದಲಾಗುತ್ತಿದೆ. ಹೊಸ ಯೋಜನೆಗಳು ವಾರಾಣಸಿಯ ಜನರಿಗೆ ಅಭೂತಪೂರ್ವ ಅನುಕೂಲವನ್ನು ಮತ್ತು ಸುಲಭ ಸೌಲಭ್ಯವನ್ನು ಒದಗಿಸುತ್ತಿವೆ"
Posted On:
23 DEC 2021 3:11PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಾರಾಣಸಿಯ ಕರ್ಖಿಯಾನ್‌ನಲ್ಲಿರುವ ʻಉತ್ತರ ಪ್ರದೇಶ ರಾಜ್ಯ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರʼದ ಫುಡ್ ಪಾರ್ಕ್‌ನಲ್ಲಿ 'ಬನಾಸ್ ಡೈರಿ ಸಂಕುಲ್'ಗೆ ಶಂಕುಸ್ಥಾಪನೆ ನೆರವೇರಿಸಿದರು. 30 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಡೈರಿಯನ್ನು ಸುಮಾರು 475 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು. ದಿನಕ್ಕೆ 5 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಘಟಕವನ್ನು ಇದು ಹೊಂದಿರಲಿದೆ. ʻಬನಾಸ್ ಡೈರಿʼ ವ್ಯಾಪ್ತಿಗೆ ಸೇರಿದ 1.2 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕರ ಬ್ಯಾಂಕ್ ಖಾತೆಗಳಿಗೆ ಸುಮಾರು 35 ಕೋಟಿ ರೂ.ಗಳ ಬೋನಸ್ ಅನ್ನು ಪ್ರಧಾನ ಮಂತ್ರಿಯವರು ಡಿಜಿಟಲ್ ರೂಪದಲ್ಲಿ ವರ್ಗಾಯಿಸಿದರು. ವಾರಾಣಸಿಯ ರಾಮನಗರದ ಹಾಲು ಉತ್ಪಾದಕರ ಸಹಕಾರ ಯೂನಿಯನ್ ಘಟಕ ಹಾಗೂ ಜೈವಿಕ ಅನಿಲ ಆಧಾರಿತ ವಿದ್ಯುತ್ ಉತ್ಪಾದನಾ ಘಟಕಕ್ಕೆ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಿದರು. ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಸಹಾಯದಿಂದ ಭಾರತೀಯ ಗುಣಮಟ್ಟ ಸಂಸ್ಥೆಯು(ಬಿಐಎಸ್) ಅಭಿವೃದ್ಧಿಪಡಿಸಿದ ʻಹಾಲಿನ ಉತ್ಪನ್ನಗಳ ಅನುಸರಣೆ ಮೌಲ್ಯಮಾಪನ ಯೋಜನೆʼಗೆ ಮೀಸಲಾದ ಪೋರ್ಟಲ್ ಮತ್ತು ಲೋಗೋವನ್ನು ಪ್ರಧಾನಮಂತ್ರಿಯವರು ಬಿಡುಗಡೆ ಮಾಡಿದರು.
ತಳಮಟ್ಟದಲ್ಲಿ ಭೂ ಮಾಲೀಕತ್ವದ ಸಮಸ್ಯೆಗಳನ್ನು ಕಡಿಮೆ ಮಾಡುವ ಮತ್ತೊಂದು ಪ್ರಯತ್ನದಲ್ಲಿ, ಪ್ರಧಾನಮಂತ್ರಿಯವರು ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ವಸತಿ ಹಕ್ಕುಗಳ ದಾಖಲೆ 'ಘರೌನಿ'ಯನ್ನು ಉತ್ತರ ಪ್ರದೇಶದ 20ಲಕ್ಷಕ್ಕೂ ಹೆಚ್ಚು ನಿವಾಸಿಗಳಿಗೆ ವರ್ಚ್ಯುಯಲ್ ರೂಪದಲ್ಲಿ ವಿತರಿಸಿದರು.
ವಾರಾಣಸಿಯಲ್ಲಿ 1500 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಪ್ರಧಾನಮಂತ್ರಿ
ಯವರು ಉದ್ಘಾಟಿಸಿದರು ಮತ್ತು ಶಂಕುಸ್ಥಾಪನೆ ನೆರವೇರಿಸಿದರು. ಇದು ವಾರಾಣಸಿಯು ಪ್ರಸ್ತುತ ಹೊಂದುತ್ತಿರುವ ಸಮಗ್ರ ಪರಿವರ್ತನೆಯನ್ನು ಮತ್ತಷ್ಟು ಬಲಪಡಿಸುತ್ತದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಸಚಿವ ಡಾ. ಮಹೇಂದ್ರ ನಾಥ್ ಪಾಂಡೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ರಾಷ್ಟ್ರೀಯ ರೈತರ ದಿನಾಚರಣೆ ಅಂಗವಾಗಿ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಗೌರವ ನಮನ ಸಲ್ಲಿಸಿದರು. ಚರಣ್ ಸಿಂಗ್ ಅವರ ಗೌರವಾರ್ಥವಾಗಿ ಅವರ ಜನ್ಮದಿನವನ್ನು ʻರೈತರ ದಿನʼವಾಗಿ ಆಚರಿಸಲಾಗುತ್ತದೆ
ಎಂದು ಮಾತು ಮುಂದುವರಿಸಿದ ಪ್ರಧಾನಿಯವರು ಜಾನುವಾರುಗಳ ಮಹತ್ವವನ್ನು ಒತ್ತಿ ಹೇಳಿದರು. "ಕೆಲವರಿಗಂತೂ ಹಸುಗಳ ಬಗ್ಗೆ ಮಾತನಾಡುವುದೇ ಅಪರಾಧ. ಆದರೆ, ಹಸುಗಳನ್ನು ನಮ್ಮ ಪಾಲಿಗೆ ಮಾತೃಸ್ವರೂಪ. ದೇಶದ 8 ಕೋಟಿ ಕುಟುಂಬಗಳ ಜೀವನೋಪಾಯವನ್ನು ಇಂತಹ ಜಾನುವಾರುಗಳು ನಡೆಸುತ್ತಿವೆ ಎಂಬ ವಿಷಯವನ್ನು ಹಸು-ಎಮ್ಮೆಗಳ ಬಗ್ಗೆ ಗೇಲಿ ಮಾಡುವ ಜನರು ಮರೆತುಬಿಡುತ್ತಾರೆ,ʼʼ ಎಂದರು. "ಭಾರತದ ಹೈನಗಾರಿಕಾ ವಲಯವನ್ನು ಬಲಪಡಿಸುವುದು ನಮ್ಮ ಸರ್ಕಾರದ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಈ ಸರಣಿಯಲ್ಲಿ, ʻಬನಾಸ್ ಕಾಶಿ ಸಂಕುಲ್ʼಗೆ ಇಂದು ಇಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿದೆ,ʼʼ ಎಂದರು. ಜಾನುವಾರುಗಳಲ್ಲಿ ಕಾಲು ಬಾಯಿ ರೋಗ ನಿಯಂತ್ರಣಕ್ಕಾಗಿ ರಾಷ್ಟ್ರವ್ಯಾಪಿ ಜಾರಿಗೊಳಿಸಲಾದ ರೋಗನಿರೋಧಕ ಕಾರ್ಯಕ್ರಮದ ಬಗ್ಗೆಯೂ ಅವರು ಮಾತನಾಡಿದರು. 6-7 ವರ್ಷಗಳ ಹಿಂದಿನ ದಿನಗಳಿಗೆ ಹೋಲಿಸಿದರೆ ದೇಶದಲ್ಲಿ ಹಾಲಿನ ಉತ್ಪಾದನೆ ಸುಮಾರು 45 ಪ್ರತಿಶತ ಹೆಚ್ಚಾಗಿದೆ. ಇಂದು ಭಾರತವು ವಿಶ್ವದ ಶೇಕಡಾ 22 ರಷ್ಟು ಹಾಲನ್ನು ಉತ್ಪಾದಿಸುತ್ತದೆ. "ಇಂದು ಉತ್ತರ ಪ್ರದೇಶವು ದೇಶದ ಅತಿದೊಡ್ಡ ಹಾಲು ಉತ್ಪಾದಿಸುವ ರಾಜ್ಯಮಾತ್ರವಲ್ಲ, ಹೈನುಗಾರಿಕಾ ವಲಯದ ವಿಸ್ತರಣೆಯಲ್ಲೂ ಸಾಕಷ್ಟು ಮುಂಚೂಣಿಯಲ್ಲಿರುವ ನನಗೆ ಸಂತೋಷ ತಂದಿದೆ" ಎಂದು ಪ್ರಧಾನಿ ಹೇಳಿದರು.
ಹೈನುಗಾರಿಕೆ, ಪಶುಸಂಗೋಪನೆ ಮತ್ತು ʻಶ್ವೇತ ಕ್ರಾಂತಿʼಗೆ ಹೊಸ ಒತ್ತು ನೀಡುವ ಮೂಲಕ ರೈತರ ಜೀವನವನ್ನು ಪರಿವರ್ತನೆಯಲ್ಲಿ ತಮ್ಮ ದೃಢ ನಂಬಿಕೆಯನ್ನು ಪ್ರಧಾನಿ ವ್ಯಕ್ತಪಡಿಸಿದರು. ಮೊದಲನೆಯದಾಗಿ, ಪಶುಸಂಗೋಪನೆಯು ದೇಶದ ಸಣ್ಣ ರೈತರಿಗೆ ಹೆಚ್ಚುವರಿ ಆದಾಯದ ದೊಡ್ಡ ಮೂಲವಾಗಬಲ್ಲದು. ಅಂತಹ ರೈತರ ಸಂಖ್ಯೆ 100 ದಶಲಕ್ಷಕ್ಕಿಂತಲೂ ಹೆಚ್ಚಾಗಿದೆ ಎಂದು ಅವರು ಹೇಳಿದರು. ಎರಡನೆಯದಾಗಿ, ಭಾರತದ ಹೈನು ಉತ್ಪನ್ನಗಳು ವಿದೇಶಗಳಲ್ಲಿ ದೊಡ್ಡ ಮಾರುಕಟ್ಟೆಯನ್ನು ಹೊಂದಿದ್ದು, ಈ ಕ್ಷೇತ್ರವು ಉತ್ತಮ ಬೆಳವಣಿಗೆ ಸಾಮರ್ಥ್ಯವನ್ನು ಹೊಂದಿದೆ. ಮೂರನೆಯದಾಗಿ, ಮಹಿಳೆಯರ ಆರ್ಥಿಕ ಉನ್ನತಿಗೆ, ಅವರ ಉದ್ಯಮಶೀಲತೆಯನ್ನು ಮುಂದುವರಿಸಲು ಪಶುಸಂಗೋಪನೆ ಉತ್ತಮ ಮಾರ್ಗವಾಗಿದೆ ಎಂದು ಪ್ರಧಾನಿ ಹೇಳಿದರು. ನಾಲ್ಕನೆಯದಾಗಿ, ಜೈವಿಕ ಅನಿಲ, ಸಾವಯವ ಕೃಷಿ ಮತ್ತು ನೈಸರ್ಗಿಕ ಕೃಷಿಗೆ ಜಾನುವಾರುಗಳು ದೊಡ್ಡ ಆಧಾರವಾಗಿವೆ. ʻಭಾರತೀಯ ಪ್ರಮಾಣೀಕರಣ ಸಂಸ್ಥೆʼಯು ದೇಶಕ್ಕೆ ಏಕೀಕೃತ ವ್ಯವಸ್ಥೆಯನ್ನು ನೀಡಿದೆ. ಪ್ರಮಾಣೀಕರಣಕ್ಕಾಗಿ ಕಾಮಧೇನು ಹಸುಗಳನ್ನು ಒಳಗೊಂಡ ಏಕೀಕೃತ ಲೋಗೋವನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ಪುರಾವೆ, ಈ ಲಾಂಛನವು ಕಂಡು ಬಂದರೆ, ಉತ್ಪನ್ನದ ಪರಿಶುದ್ಧತೆಯನ್ನು ಗುರುತಿಸುವುದು ಸುಲಭವಾಗುತ್ತದೆ ಮತ್ತು ಭಾರತದ ಹಾಲಿನ ಉತ್ಪನ್ನಗಳ ವಿಶ್ವಾಸಾರ್ಹತೆಯೂ ಹೆಚ್ಚಾಗುತ್ತದೆ ಎಂದು ಪ್ರಧಾನಿ ಒತ್ತಿ ಹೇಳಿದರು.
ನೈಸರ್ಗಿಕ ಕೃಷಿಗೆ ಒತ್ತು ನೀಡುವುದನ್ನು ಮುಂದುವರಿಸಿದ ಪ್ರಧಾನಮಂತ್ರಿಯವರು, ಸಮಯ ಕಳೆದಂತೆ ನೈಸರ್ಗಿಕ ಕೃಷಿಯ ವ್ಯಾಪ್ತಿ ಕಡಿಮೆಯಾಯಿತು ಮತ್ತು ರಾಸಾಯನಿಕ ಕೃಷಿಯ ಪ್ರಾಬಲ್ಯ ಹೆಚ್ಚಿತು ಎಂದರು. "ಭೂತಾಯಿಯ ಪುನಶ್ಚೇತನಕ್ಕಾಗಿ, ನಮ್ಮ ಮಣ್ಣನ್ನು ರಕ್ಷಿಸಲು, ಮುಂಬರುವ ಪೀಳಿಗೆಯ ಭವಿಷ್ಯವನ್ನು ಭದ್ರಪಡಿಸಲು, ನಾವು ಮತ್ತೊಮ್ಮೆ ನೈಸರ್ಗಿಕ ಕೃಷಿಯ ಕಡೆಗೆ ಹೊರಳಬೇಕು. ಇದು ಇಂದಿನ ತುರ್ತು ಅಗತ್ಯವಾಗಿದೆ", ಎಂದು ಅವರು ಹೇಳಿದರು. ನೈಸರ್ಗಿಕ ಕೃಷಿ ಮತ್ತು ಸಾವಯವ ಬೆಳೆಗಳನ್ನು ಅಳವಡಿಸಿಕೊಳ್ಳುವಂತೆ ರೈತರಿಗೆ ಪ್ರಧಾನಿ ಮನವಿ ಮಾಡಿದರು. ಇದು ನಮ್ಮ ಕೃಷಿ ಸ್ವಾವಲಂಬನೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಪಂಚಾಯತ್ ರಾಜ್ ಸಚಿವಾಲಯದ ಸ್ವಾಮಿತ್ವ ಯೋಜನೆಯಡಿ ಗ್ರಾಮೀಣ ವಸತಿ ಹಕ್ಕುಗಳ ದಾಖಲೆ 'ಘರೌನಿʼಯನ್ನು ಉತ್ತರ ಪ್ರದೇಶದ 20 ಲಕ್ಷಕ್ಕೂ ಹೆಚ್ಚು ನಿವಾಸಿಗಳಿಗೆ ಪ್ರಧಾನಮಂತ್ರಿಯವರು ವರ್ಚ್ಯುಯಲ್ ರೂಪದಲ್ಲಿ ವಿತರಿಸಿದರು. ಇದು ಗ್ರಾಮೀಣ ಬಡವರ ಅಭಿವೃದ್ಧಿ ಮತ್ತು ಘನತೆಯ ವಿಸ್ತಾರವನ್ನು ಹೆಚ್ಚಿಸುತ್ತದೆ ಮತ್ತು ಅವರನ್ನು ಅಭಿವೃದ್ಧಿ ಯಶೋಗಾಥೆಯ ಭಾಗವನ್ನಾಗಿ ಮಾಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ವಾರಾಣಸಿಯು ತ್ವರಿತ ಗತಿಯಲ್ಲಿ ಅಭಿವೃದ್ಧಿಯ ಹೊಸ ಮಾದರಿಯಾಗಿ ಬದಲಾಗುತ್ತಿದೆ. ಹೊಸ ಯೋಜನೆಗಳು ವಾರಾಣಸಿಯ ಜನರಿಗೆ ಅಭೂತಪೂರ್ವ ಅನುಕೂಲ ಮತ್ತು ಸುಲಭ ಸೌಕರ್ಯಗಳನ್ನು ಒದಗಿಸುತ್ತಿವೆ. ಇಂದು ಉದ್ಘಾಟನೆಗೊಂಡ ಮತ್ತು ಶಂಕುಸ್ಥಾಪನೆ ನೆರವೇರಿಸಲಾದ ಯೋಜನೆಗಳು ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯ ಸಂಬಂಧಿತ ಚಿತ್ರಣವನ್ನು ಮತ್ತಷ್ಟು ಬಲಪಡಿಸುತ್ತವೆ ಎಂದರು.
ಉತ್ತರ ಪ್ರದೇಶದ ರಾಜಕೀಯವನ್ನು ಕೇವಲ ಜಾತಿ, ಮತ, ಧರ್ಮದ ಮಸೂರದಿಂದ ನೋಡಿದ ಜನರು ಅವಳಿ ಎಂಜಿನ್‌ನ ಸರಕಾರದ ಅವಳಿ ಶಕ್ತಿಯ ಮಾತುಗಳಿಂದ ಅಸಮಾಧಾನಗೊಳ್ಳುತ್ತಾರೆ. ಅಂತಹ ಜನರು ಶಾಲೆಗಳು, ಕಾಲೇಜುಗಳು, ರಸ್ತೆಗಳು, ನೀರು, ಬಡವರಿಗೆ ವಸತಿ, ಅನಿಲ ಸಂಪರ್ಕ ಮತ್ತು ಶೌಚಾಲಯಗಳನ್ನು ಅಭಿವೃದ್ಧಿಯ ಭಾಗವೆಂದು ಪರಿಗಣಿಸುವುದಿಲ್ಲ ಎಂದು ಮೋದಿ ಹೇಳಿದರು. "ಉತ್ತರ ಪ್ರದೇಶ ಜನರು ಈ ಹಿಂದೆ ಏನನ್ನು ಪಡೆದರು ಮತ್ತು ಇಂದು ನಮ್ಮ ಸರ್ಕಾರದಿಂದ ರಾಜ್ಯದ ಜನರು ಪಡೆಯುತ್ತಿದ್ದಾರೆ ಎಂಬುದರ ನಡುವಿನ ವ್ಯತ್ಯಾಸ ಸ್ಪಷ್ಟವಾಗಿದೆ. ನಾವು ಉತ್ತರ ಪ್ರದೇಶ ಪರಂಪರೆಯನ್ನು ವೃದ್ಧಿಸುತ್ತಿದ್ದೇವೆ ಮತ್ತು ನಾವು ಉತ್ತರ ಪ್ರದೇಶವನ್ನೂ ಅಭಿವೃದ್ಧಿಪಡಿಸುತ್ತಿದ್ದೇವೆ", ಎಂದು ಪ್ರಧಾನಿ ಮಾತು ಮುಗಿಸಿದರು.
ಪ್ರಧಾನಮಂತ್ರಿಯವರು ಉದ್ಘಾಟಿಸಿದ ಶಿಕ್ಷಣ ಕ್ಷೇತ್ರದ ಯೋಜನೆಗಳ ಪೈಕಿ ಸುಮಾರು 107 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕೇಂದ್ರ ಶಿಕ್ಷಣ ಸಚಿವಾಲಯದ ʻಶಿಕ್ಷಕರ ತರಬೇತಿಯ ಅಂತರ ವಿಶ್ವವಿದ್ಯಾಲಯ ಕೇಂದ್ರʼ, 7 ಕೋಟಿ ರೂ.ಗಿಂತಲೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ʻಟಿಬೆಟಿಯನ್ನರ ಉನ್ನತ ಶಿಕ್ಷಣದ ಕೇಂದ್ರೀಯ ಸಂಸ್ಥೆʼ ಸೇರಿವೆ. ಇದಲ್ಲದೆ, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸಿಬ್ಬಂದಿಯ ವಸತಿ ಸಂಕೀರ್ಣ, ಐಟಿಐ ಕರೌಂಡಿಯನ್ನೂ ಪ್ರಧಾನಿ ಉದ್ಘಾಟಿಸಿದರು.
ಪ್ರಧಾನಿ ಉದ್ಘಾಟಿಸಿದ ಆರೋಗ್ಯ ಕ್ಷೇತ್ರದ ಯೋಜನೆಗಳ ಪೈಕಿ ಮಹಾಮನ ಪಂಡಿತ್ ಮದನ್ ಮೋಹನ್ ಮಾಳ್ವಿಯಾ ಕ್ಯಾನ್ಸರ್ ಕೇಂದ್ರದಲ್ಲಿ 130 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ವೈದ್ಯರ ವಸತಿಗೃಹ, ದಾದಿಯರ ವಸತಿಗೃಹ ಮತ್ತು ಆ‍್ರಯ ಕೇಂದ್ರ ಸೇರಿವೆ. ಭದ್ರಸಿಯಲ್ಲಿ ಅವರು 50 ಹಾಸಿಗೆಗಳ ಸಮಗ್ರ ಆಯುಷ್ ಆಸ್ಪತ್ರೆಯನ್ನು ಉದ್ಘಾಟಿಸಿದರು. ಆಯುಷ್ ಯೋಜನೆ ಅಡಿಯಲ್ಲಿ ಪಿಂಡ್ರಾ ತಾಲೂಕಿನಲ್ಲಿ 49 ಕೋಟಿ ರೂ.ಗಳ ಸರ್ಕಾರಿ ಹೋಮಿಯೋಪತಿಕ್ ವೈದ್ಯಕೀಯ ಕಾಲೇಜಿಗೆ ಪ್ರಧಾನಿ ಅಡಿಪಾಯ ಹಾಕಿದರು.
ರಸ್ತೆ ವಲಯಕ್ಕೆ ಸಂಬಂಧಿಸಿದಂತೆ ಪ್ರಯಾಗ್ ರಾಜ್ ಮತ್ತು ಭದೋಹಿಗಾಗಿ '4 ರಿಂದ 6 ಪಥ'ಕ್ಕೆ ರಸ್ತೆ ಅಗಲೀಕರಣ ಮಾಡುವ ಎರಡು ಯೋಜನೆಗಳಿಗೆ ಪ್ರಧಾನಮಂತ್ರಿ ಯವರು ಶಂಕುಸ್ಥಾಪನೆ ನೆರವೇರಿಸಿದರು. ಇದು ವಾರಾಣಸಿಯ ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ನಗರದ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಲಿದೆ.
ಪವಿತ್ರ ನಗರ ವಾರಾಣಸಿಯ ಪ್ರವಾಸೋದ್ಯಮ ಸಾಮರ್ಥ್ಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು ವಾರಾಣಸಿಯ ʻಸೀರ್ ಗೋವರ್ಧನ್ʼ, ಶ್ರೀ ಗುರು ರವಿದಾಸ್ ಜೀ ದೇವಾಲಯʼಕ್ಕೆ ಸಂಬಂಧಿಸಿದ ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಿದರು.
ಪ್ರಧಾನಮಂತ್ರಿಯವರು ಉದ್ಘಾಟಿಸಿದ ಇತರ ಯೋಜನೆಗಳ ಪೈಕಿ ವಾರಾಣಸಿಯ ಅಂತಾರಾಷ್ಟ್ರೀಯ ಅಕ್ಕಿ ಸಂಶೋಧನಾ ಸಂಸ್ಥೆಯಲ್ಲಿ ವೇಗ ಸಂತಾನೋತ್ಪತ್ತಿ ಘಟಕ, ವಾರಾಣಸಿಯಲ್ಲಿ ದಕ್ಷಿಣ ಏಷ್ಯಾ ಪ್ರಾದೇಶಿಕ ಕೇಂದ್ರ, ಪಯಕ್‌ಪುರ ಗ್ರಾಮದಲ್ಲಿ ಪ್ರಾದೇಶಿಕ ಪರಾಮರ್ಶೆ ಮಾನದಂಡಗಳ ಪ್ರಯೋಗಾಲಯ ಮತ್ತು ಪಿಂಡ್ರಾ ತಾಲೂಕಿನಲ್ಲಿ ವಕೀಲರ ಭವನ ಸೇರಿವೆ.
***
(Release ID: 1784698)
Visitor Counter : 192
Read this release in:
English
,
Urdu
,
Marathi
,
Hindi
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam