ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವೆಂಬರ್ 19ರಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಿ, 6250 ಕೋಟಿ ರೂ.ಗೂ ಅಧಿಕ ಮೌಲ್ಯದ ಬಹು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಮಂತ್ರಿ


ನೀರಿನ ಕೊರತೆಯ ಸಮಸ್ಯೆ ನೀಗಿಸಲು ನೆರವಾಗುವ ಮತ್ತು ರೈತರಿಗೆ ಅತ್ಯಗತ್ಯವಾದ ನಿರಾಳ ನೀಡುವ ಮಹೋಬಾ ಯೋಜನೆಯನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ

600 ಮೆ.ವ್ಯಾ. ಅಲ್ಟ್ರಾ ಮೆಗಾ ಸೌರ ವಿದ್ಯುತ್ ಉದ್ಯಾನಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಜಾನ್ಸಿಯಲ್ಲಿ ಅಟಲ್ ಏಕ್ತಾ ಪಾರ್ಕ್ ಉದ್ಘಾಟಿಸಲಿರುವ ಪ್ರಧಾನಮಂತ್ರಿ

Posted On: 17 NOV 2021 1:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2021ರ ನವೆಂಬರ್ 19ರಂದು  ಉತ್ತರ ಪ್ರದೇಶದ ಮಹೋಬಾ ಮತ್ತು ಜಾನ್ಸಿ ಜಿಲ್ಲೆಗಳಿಗೆ ಭೇಟಿ ನೀಡಲಿದ್ದಾರೆ. 

ನೀರಿನ ಕೊರತೆ ನೀಗಿಸುವ ಮಹತ್ವದ ಉಪಕ್ರಮದಲ್ಲಿ ಪ್ರಧಾನಮಂತ್ರಿಯವರು ಮಧ್ಯಾಹ್ನ 2.45ರ ಹೊತ್ತಿಗೆ ಮಹೋಬಾದಲ್ಲಿ ಬಹು ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.  ಈ ಯೋಜನೆಗಳು ವಲಯದ ನೀರಿನ ಸಮಸ್ಯೆ ಪರಿಹರಿಸಲು ನೆರವಾಗಲಿವೆ ಮತ್ತು ರೈತರಿಗೆ ಅತ್ಯಗತ್ಯವಾಗಿದ್ದ ನಿರಾಳವನ್ನು ನೀಡುತ್ತವೆ. ಈ ಯೋಜನೆಗಳಲ್ಲಿ ಅರ್ಜುನ್ ಸಹಾಯಕ್ ಯೋಜನೆ, ರತೌಲಿ ಅಣೆಕಟ್ಟೆ ಯೋಜನೆ, ಬಹೌನಿ ಅಣೆಕಟ್ಟೆ ಯೋಜನೆ ಮತ್ತು ಮಜಗಾವ್ –ಚಿಲ್ಲಿ ತುಂತುರು ನೀರಾವರಿ ಯೋಜನೆ ಸೇರಿದೆ. ಈ ಯೋಜನೆಗಳ ಒಟ್ಟು ವೆಚ್ಚ 3250 ಕೋಟಿ ರೂ.ಗೂ ಹೆಚ್ಚಾಗಿದ್ದು, ಅವುಗಳ ಕಾರ್ಯಾಚರಣೆಯು ಮಹೋಬಾ, ಹಮೀರ್‌ಪುರ್, ಬಂಡಾ ಮತ್ತು ಲಲಿತ್‌ ಪುರ ಜಿಲ್ಲೆಗಳ ಸುಮಾರು 65000 ಹೆಕ್ಟೇರ್ ಭೂಮಿಗೆ ನೀರಾವರಿ ಕಲ್ಪಿಸಲು ಸಹಾಯ ಮಾಡುತ್ತದೆ, ಈ ಪ್ರದೇಶದ ಲಕ್ಷಾಂತರ ರೈತರಿಗೆ ಪ್ರಯೋಜನವಾಗಲಿದೆ. ಈ ಯೋಜನೆಗಳು ಈ ಪ್ರದೇಶಕ್ಕೆ ಕುಡಿಯುವ ನೀರನ್ನು ಸಹ ಒದಗಿಸುತ್ತವೆ.

ಸಂಜೆ 5:15 ರ ಸುಮಾರಿಗೆ, ಪ್ರಧಾನಮಂತ್ರಿಯವರು ಝಾನ್ಸಿಯ ಗರೌಥಾದಲ್ಲಿ 600 ಮೆಗಾವ್ಯಾಟ್ ಅಲ್ಟ್ರಾಮೆಗಾ ಸೌರ ವಿದ್ಯುತ್ ಉದ್ಯಾನಕ್ಕೆ ಶಂಕುಸ್ಥಾಪನೆ ಮಾಡುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದನ್ನು 3000 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಮತ್ತು ಅಗ್ಗದ ವಿದ್ಯುತ್ ಮತ್ತು ಗ್ರಿಡ್ ಸ್ಥಿರತೆಯ ಎರಡೂ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ. 

ಪ್ರಧಾನಮಂತ್ರಿಯವರು ಝಾನ್ಸಿಯಲ್ಲಿ ಅಟಲ್ ಏಕತಾ ಉದ್ಯಾನವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇದಕ್ಕೆ ಇಡಲಾಗಿದ್ದು, ಸುಮಾರು 40,000 ಚದರ ಮೀಟರ್ ವಿಸ್ತೀರ್ಣದಲ್ಲಿ ಸುಮಾರು 11 ಕೋಟಿ ರೂಪಾಯಿ ವೆಚ್ಚದಲ್ಲಿ ಉದ್ಯಾನವನವನ್ನು ನಿರ್ಮಿಸಲಾಗಿದೆ. ಇದು ಗ್ರಂಥಾಲಯ ಮತ್ತು ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನು ಸಹ ಒಳಗೊಂಡಿದೆ. ಏಕತೆಯ ಪ್ರತಿಮೆಯ ಹಿಂದಿನ ರೂವಾರಿ ಪ್ರಸಿದ್ಧ ಶಿಲ್ಪಿ ಶ್ರೀ ರಾಮ್ ಸುತಾರ್ ಅವರೇ ಈ ಪ್ರತಿಮೆಯನ್ನೂ ನಿರ್ಮಿಸಿದ್ದಾರೆ.

***


(Release ID: 1772574) Visitor Counter : 266