ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿಯವರ ಇಟಲಿ ಭೇಟಿಯ ಕುರಿತು ವಿದೇಶಾಂಗ ಕಾರ್ಯದರ್ಶಿಯವರ ವಿಶೇಷ ಸುದ್ದಿಗೋಷ್ಠಿ

Posted On: 30 OCT 2021 2:27PM by PIB Bengaluru

ಶ್ರೀ ಅರಿಂದಮ್ ಬಾಗ್ಚಿ, ಅಧಿಕೃತ ವಕ್ತಾರರು: ಎಲ್ಲರಿಗೂ ಶುಭ ಸಂಜೆ. ತಡಹೊತ್ತಿನಲ್ಲೂ ನಮ್ಮೊಂದಿಗೆ ಸೇರಿದ್ದಕ್ಕಾಗಿ ಮತ್ತು ಭಾರತದಲ್ಲಿ ನಮ್ಮ ಲೈವ್ ವೀಡಿಯೊ ಸ್ಟ್ರೀಮ್‌ನಲ್ಲಿ ಸೇರುತ್ತಿರುವವರಿಗೆ ನಮಸ್ಕಾರ ಮತ್ತು ಸ್ವಾಗತ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೋಮ್‌ನಲ್ಲಿದ್ದಾರೆ, ಇದು ಅವರ ಭೇಟಿಯ ಮೊದಲ ದಿನವಾಗಿದೆ. ಇಲ್ಲಿ ಏನಾಗುತ್ತಿದೆ ಮತ್ತು ನಾವು ಏನು ಯೋಜಿಸಿದ್ದೇವೆ ಎಂಬುದರ ಕುರಿತು ನಿಮ್ಮೊಂದಿಗೆ ಹಂಚಿಕೊಳ್ಳಲು ನಾವಿಲ್ಲಿ ಸೇರಿದ್ದೇವೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಶ್ರೀ ಹರ್ಷವರ್ಧನ್ ಶೃಂಗ್ಲಾ ಅವರು ಈ ಕುರಿತು ವಿವರಗಳನ್ನು ನೀಡುತ್ತಾರೆ. ಈಗ ಮಾನ್ಯ ಕಾರ್ಯದರ್ಶಿಯವರು ಮಾತನಾಡುತ್ತಾರೆ. 
ಶ್ರೀ ಹರ್ಷವರ್ಧನ್ ಶ್ರಿಂಗ್ಲಾ, ವಿದೇಶಾಂಗ ಕಾರ್ಯದರ್ಶಿ: ನಮಸ್ಕಾರ ಮತ್ತು ಶುಭ ಸಂಜೆ ಮತ್ತು ಮಾಧ್ಯಮದ ನಮ್ಮ ಸ್ನೇಹಿತರನ್ನು ಮತ್ತೊಮ್ಮೆ ಭೇಟಿಯಾಗುತ್ತಿರುವುದು ಸಂತಸದ ಸಂಗತಿ. ಪ್ರಧಾನಿಯವರು ಇಂದು ಬೆಳಗ್ಗೆ ರೋಮ್‌ಗೆ ಆಗಮಿಸಿರುವುದು ನಿಮಗೆ ಗೊತ್ತೇ ಇದೆ. 16ನೇ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವುದು ಅವರ ಭೇಟಿಯ ಪ್ರಾಥಮಿಕ ಉದ್ದೇಶವಾಗಿದೆ. ಆದರೆ ಅವರು ದೇಶ ಮತ್ತು ಸರ್ಕಾರಗಳ ಮುಖ್ಯಸ್ಥರೊಂದಿಗೆ ಹಲವಾರು ದ್ವಿಪಕ್ಷೀಯ ಸಭೆಗಳನ್ನು ನಡೆಸಲು ಈ  ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆ. ಆಗಮನದ ನಂತರ, ಪ್ರಧಾನ ಮಂತ್ರಿಯವರು ಐರೋಪ್ಯ ಮಂಡಳಿಯ ಅಧ್ಯಕ್ಷರಾದ ಘನತೆವೆತ್ತ ಶ್ರೀ ಚಾರ್ಲ್ಸ್ ಮೈಕೆಲ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಘನತೆವೆತ್ತ ಶ್ರೀಮತಿ ಉರ್ಸುಲಾ ವಾನ್ ಡೆರ್ ಲೇಯೆನ್ ಅವರನ್ನು ಭೇಟಿಯಾದರು. ಸಾಂಕ್ರಾಮಿಕ, ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆಯಿಂದ ಜಾಗತಿಕ ಆರ್ಥಿಕತೆ ಮತ್ತು ಆರೋಗ್ಯ ಚೇತರಿಕೆಯ ಕುರಿತು ಇತರ ವಿಷಯಗಳ ಜೊತೆಗೆ ಚರ್ಚಿಸಲು ಪ್ರಧಾನಮಂತ್ರಿಯವರು ನಾಳೆ ಇತರ G20 ನಾಯಕರನ್ನು ಭೇಟಿಯಾಗುತ್ತಾರೆ. 
ನಮ್ಮ ಜಿ 20 ತಜ್ಞರಾದ  ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ನಿಮಗೆ ಕೆಲವು ವಿವರಗಳನ್ನು ನೀಡಿದ್ದಾರೆ. ಹಾಗಾಗಿ ಪ್ರಧಾನಮಂತ್ರಿಯವರು ಇಂದು ನಡೆಸಿದ ಕೆಲವು ಸಭೆಗಳ ಮೇಲೆ ನಾನು ಗಮನ ಹರಿಸುತ್ತೇನೆ. ಯುರೋಪಿಯನ್ ಕಮಿಷನ್ ಮತ್ತು ಕೌನ್ಸಿಲ್‌ನ ಅಧ್ಯಕ್ಷರು ಹಾಗೆಯೇ ಇಟಲಿಯ ಪ್ರಧಾನಿ ಘನತೆವೆತ್ತ ಮಾರಿಯೋ ಡ್ರಾಗಿಯವರೊಂದಿಗೆ ಈಗಷ್ಟೇ ನಡೆದ ಸಭೆಯ ಕುರಿತು ವಿವರಿಸುತ್ತೇನೆ.  ಜಿ 20 ಶೃಂಗಸಭೆಗೆ ಸಂಬಂಧಿಸಿದ ಮುಖ್ಯ ವಿಷಯಗಳು ಮತ್ತು ಆರೋಗ್ಯ ಚೇತರಿಕೆ,ಕೋವಿಡ್ ನಿಂದ ಚೇತರಿಕೆ, ಜಾಗತಿಕ ಆರ್ಥಿಕ ಚೇತರಿಕೆಯ ವಿಷಯದ ಕುರಿತು ಚರ್ಚೆಗಳು ನಡೆಯಿತು. ಹವಾಮಾನ ಬದಲಾವಣೆ ಸಮಸ್ಯೆಗಳ ಕುರಿತು ಚರ್ಚೆ ನಡೆಯಿತು ಮತ್ತು ಅಫ್ಘಾನಿಸ್ತಾನ, ಇಂಡೋ ಪೆಸಿಫಿಕ್ ಪರಿಸ್ಥಿತಿ ಸೇರಿದಂತೆ ಪ್ರಾದೇಶಿಕ ಮತ್ತು ಜಾಗತಿಕ ಆಸಕ್ತಿಯ ಕೆಲವು ಕ್ಷೇತ್ರಗಳನ್ನೂ ಕುರಿತು  ಎರಡೂ ಸಭೆಗಳಲ್ಲಿ ಚರ್ಚಿಸಲಾಯಿತು.
ಈಗ, ಮೊದಲಿಗೆ ಇಯು (ಐರೋಪ್ಯ ಒಕ್ಕೂಟ) ಗೆ ಸಂಬಂಧಿಸಿದಂತೆ, ಈ ವರ್ಷ ಮೇನಲ್ಲಿ ಇಯು ಪ್ಲಸ್ 27 ರೂಪದಲ್ಲಿ ಭಾರತ-ಇಯು ನಾಯಕರು ಸಭೆ ಮತ್ತು ಜುಲೈ 2020ರಲ್ಲಿ ನಡೆದ 15 ನೇ ಭಾರತ-ಇಯು ಶೃಂಗಸಭೆಯಲ್ಲಿ ಮಹತ್ವದ ವಿನಿಮಯವನ್ನು ಹೊಂದಿದ್ದರು. ಐರೋಪ್ಯ ಒಕ್ಕೂಟವು ಭಾರತದ ಪ್ರಮುಖ ಪಾಲುದಾರರಲ್ಲಿ ಒಂದಾಗಿದೆ ಮತ್ತು ಇಂದಿನ ಸಭೆಗಳಲ್ಲಿ, ನಾಯಕರು ರಾಜಕೀಯ ಮತ್ತು ಭದ್ರತಾ ಸಂಬಂಧಗಳು, ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ಕುರಿತ ಭಾರತ - ಇಯು ಸಹಕಾರ, ಜೊತೆಗೆ ಕೊನೆಯ ಭಾರತ-ಇಯು ಶೃಂಗಸಭೆಯಲ್ಲಿ ಅಳವಡಿಸಿಕೊಂಡ '2025 ರ ಮುನ್ನೋಟ' ವನ್ನು ಪರಿಶೀಲಿಸಿದರು. ನಾನು ಆಗಲೇ ತಿಳಿಸಿದಂತೆ, ಅವರು ಹವಾಮಾನ ಬದಲಾವಣೆ, ಕೋವಿಡ್-19 ಸಾಂಕ್ರಾಮಿಕ ಮತ್ತು ಸಮಕಾಲೀನ ಜಾಗತಿಕ ಮತ್ತು ಪ್ರಾದೇಶಿಕ ಆಸಕ್ತಿಯ ಬೆಳವಣಿಗೆಗಳನ್ನು ಚರ್ಚಿಸಿದರು.
ಹವಾಮಾನ ಬದಲಾವಣೆ, ಅಫ್ಘಾನಿಸ್ತಾನ, ಇಂಡೋ ಪೆಸಿಫಿಕ್ ಕುರಿತು ಭಾರತದ ದೃಷ್ಟಿಕೋನಗಳನ್ನು ಪ್ರಧಾನಮಂತ್ರಿಯವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಇಯು ನಾಯಕರು ಹಾಗೂ ಇಟಲಿ ಪ್ರಧಾನ ಮಂತ್ರಿಯವರು ಲಸಿಕೆ ಹಾಕುವಲ್ಲಿ ಭಾರತದ ಅತ್ಯುತ್ತಮ ಪ್ರಗತಿಗಾಗಿ ಪ್ರಧಾನ ಮಂತ್ರಿಯವರನ್ನು ಅಭಿನಂದಿಸಿದರು. ಪ್ರಧಾನಿಯವರು ಮಧ್ಯಾಹ್ನ, ಪಿಯಾಝಾ ಗಾಂಧಿಯಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಅಲ್ಲಿಗೆ  ಆಗಮಿಸಿದ್ದ ಭಾರತೀಯ ಸಮುದಾಯದ ಅಪಾರ ಸಂಖ್ಯೆಯ ಸದಸ್ಯರ ಸಮ್ಮುಖದಲ್ಲಿ ಮಹಾತ್ಮ ಗಾಂಧೀಜಿಯವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. 
ನಾವು ಇಲ್ಲಿ ಮಾತನಾಡುತ್ತಿರುವ ಸಮಯದಲ್ಲಿ, ಇಟಲಿಯಲ್ಲಿರುವ ಭಾರತೀಯ ವಲಸಿಗರ ಸದಸ್ಯರನ್ನು ಪ್ರಧಾನಮಂತ್ರಿಯವರು ಪ್ರತ್ಯೇಕವಾಗಿ ಭೇಟಿಯಾಗುತ್ತಿದ್ದಾರೆ. ಇಟಲಿಯ ಹಿಂದೂ ಒಕ್ಕೂಟದ ಪ್ರತಿನಿಧಿಗಳು, ಇಟಲಿಯ ಕೃಷ್ಣ ಕಾನ್ಷಿಯಸ್ ನೆಸ್, ಸಿಖ್ ಸಮುದಾಯ ಮತ್ತು ವಿಶ್ವಯುದ್ಧದ ಸಮಯದಲ್ಲಿ ಇಟಲಿಯಲ್ಲಿ ಹೋರಾಡಿದ ಭಾರತೀಯ ಸೈನಿಕರ ಪ್ರತಿನಿಧಿ ಸಂಸ್ಥೆಗಳು ಸೇರಿದಂತೆ ವಿವಿಧ ಸಂಘಟನೆಗಳನ್ನು ಅವರು ಬೇಟಿಯಾಗುತ್ತಿದ್ದಾರೆ.  ಅವರು ಸಭೆಯಲ್ಲಿ ಹಲವಾರು ಭಾರತೀಯ ಇತಿಹಾಸಕಾರರು ಮತ್ತು ಸಂಸ್ಕೃತ ವಿದ್ವಾಂಸರೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಭಾರತ ಮತ್ತು ಇಟಲಿ ನಡುವಿನ ಬಾಂಧವ್ಯವನ್ನು ಬಲಪಡಿಸುವಲ್ಲಿ ಸಮುದಾಯದ ಸದಸ್ಯರು ವಹಿಸಿದ ಪಾತ್ರವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ.
ಇಟಲಿ ಪ್ರಧಾನ ಮಂತ್ರಿಯವರ ಅಧಿಕೃತ ಕಚೇರಿ ಮತ್ತು ನಿವಾಸವಾದ ಪಲಾಝೊ ಚಿಗಿಯಲ್ಲಿ ಇಟಲಿಯ ಪ್ರಧಾನ ಮಂತ್ರಿಯೊಂದಿಗಿನ ಸಭೆಗೆ ಸಂಬಂಧಿಸಿದಂತೆ, ಇದು ಅವರಿಬ್ಬರ ಮೊದಲ ವೈಯಕ್ತಿಕ ಭೇಟಿಯಾಗಿದೆ. ಇತ್ತೀಚೆಗೆ ಆಗಸ್ಟ್ 27 ರಂದು ಅಫ್ಘಾನಿಸ್ತಾನದ ವಿಷಯದ ಸೇರಿದಂತೆ  ಪ್ರಧಾನಿ ಡ್ರಾಘಿ ಅವರೊಂದಿಗೆ ಹಲವಾರು ಸಂದರ್ಭಗಳಲ್ಲಿ ಮಾತನಾಡಿದ್ದಾರೆ ಮತ್ತು ನಿಮಗೆ ತಿಳಿದಿರುವಂತೆ, ಅಫ್ಘಾನಿಸ್ತಾನದ ಅಂತರರಾಷ್ಟ್ರೀಯ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಡ್ರಾಘಿ ಅವರನ್ನು ಆಹ್ವಾನಿಸಿದ್ದರು. ಮತ್ತು ಪ್ರಧಾನ ಮಂತ್ರಿಯವರು ಅದರಲ್ಲಿ ಭಾಗವಹಿಸಿದ್ದರು.. ನವೆಂಬರ್ 2020 ರಲ್ಲಿ ನಡೆದ ಭಾರತ-ಇಟಲಿ ವರ್ಚುವಲ್ ಶೃಂಗಸಭೆಯ ನಂತರದ ಪ್ರಗತಿಯನ್ನು ಇಬ್ಬರೂ ನಾಯಕರು ಪರಿಶೀಲಿಸಿದರು ಮತ್ತು ಸಹಜವಾಗಿ, ಸಹಕಾರದ ಇತರ ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆಸಿದರು.
ನವೀಕರಿಸಬಹುದಾದ ಮತ್ತು ಶುದ್ಧ ಇಂಧನದಲ್ಲಿ ದ್ವಿಪಕ್ಷೀಯ ಸಹಕಾರಕ್ಕೆ ಹೊಸ ಒತ್ತು ನೀಡಲು, ಭಾರತ ಮತ್ತು ಇಟಲಿ ಇಂಧನ ಪರಿವರ್ತನೆಯ ಮೇಲೆ ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸುವ ಜಂಟಿ ಹೇಳಿಕೆಯನ್ನು ನೀಡಿದವು. ಬೃಹತ್ ಗಾತ್ರದ ಹಸಿರು ಕಾರಿಡಾರ್ ಯೋಜನೆಗಳು, ಸ್ಮಾರ್ಟ್ ಗ್ರಿಡ್ ಗಳು, ಇಂಧನ ಸಂಗ್ರಹ ಪರಿಹಾರ, ಅನಿಲ ಸಾಗಣೆ, ತ್ಯಾಜ್ಯದಿಂದ ಸಂಪತ್ತು ಸೃಷ್ಟಿ ಎಂದು ಕರೆಯಲಾಗುವ ಸಂಯೋಜಿತ ತ್ಯಾಜ್ಯ ನಿರ್ವಹಣೆ, ಅಭಿವೃದ್ಧಿ ಮತ್ತು ಹಸಿರು ಜಲಜನಕದ ನಿಯೋಜನೆ ಮತ್ತು ಜೈವಿಕ ಇಂಧನಗಳ ಉತ್ತೇಜನ ಮತ್ತಿತರ ಕ್ಷೇತ್ರಗಳಲ್ಲಿ ಪಾಲುದಾರಿಕೆಯನ್ನು ಅನ್ವೇಷಿಸಲು ಒಪ್ಪಿಕೊಂಡಿವೆ ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ. ಸಭೆಯಲ್ಲಿ ಭಾರತ ಮತ್ತು ಇಟಲಿ ಜವಳಿ ಸಹಕಾರದ ಕುರಿತಾದ ಒಪ್ಪಂದಕ್ಕೆ ಸಹಿ ಹಾಕಲಾಯಿತು. ದ್ವಿಮುಖ ಹೂಡಿಕೆಗಳ ಕುರಿತು ಉತ್ತಮ ಚರ್ಚೆ ನಡೆಯಿತು, ವಿಶೇಷವಾಗಿ ಶುದ್ಧ ಇಂಧನ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ, ಇಟಲಿಯು ಸಾಕಷ್ಟು ಪರಿಣತಿಯನ್ನು ಹೊಂದಿದೆ ಮತ್ತು ಇದನ್ನು ಮುಂದಕ್ಕೆ ಕೊಂಡೊಯ್ಯುವ ಬಗ್ಗೆ ಪರಿಶೀಲಿಸಲು ಇಬ್ಬರೂ ಪ್ರಧಾನ ಮಂತ್ರಿಗಳು ಒಪ್ಪಿಕೊಂಡಿದ್ದಾರೆ..
ನೀವು ನೋಡಿರುವಂತೆ, ಪ್ರಧಾನಿಯವರಿಗೆ ರೋಮ್‌ನಲ್ಲಿ ಇದು ಅತ್ಯಂತ ಸಕ್ರಿಯವಾದ ಮೊದಲ ದಿನವಾಗಿದೆ. ನಾಳೆ, ಪ್ರಧಾನ ಮಂತ್ರಿಯವರು ವ್ಯಾಟಿಕನ್ ಸಿಟಿಯಲ್ಲಿ ಪೂಜ್ಯ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡುತ್ತಾರೆ ಮತ್ತು ನಂತರ ಅವರು  ಜಿ 20 ಅಧಿವೇಶನಗಳಲ್ಲಿ ಭಾಗವಹಿಸುತ್ತಾರೆ, ಅಲ್ಲಿ ಅವರು ಹೆಚ್ಚಿನ ದ್ವಿಪಕ್ಷೀಯ ಸಭೆಗಳನ್ನು ನಡೆಸುತ್ತಾರೆ. ಅವುಗಳ ಬಗ್ಗೆ ನಿಮಗೆ ಮಾಹಿತಿ ನೀಡಲಾಗುವುದು.
ಶ್ರೀ ಅರಿಂದಮ್ ಬಾಗ್ಚಿ, ಅಧಿಕೃತ ವಕ್ತಾರರು: ತುಂಬಾ ಧನ್ಯವಾದಗಳು ಸರ್. ನಾವು ಕೆಲವು ಪ್ರಶ್ನೆಗಳನ್ನು ತೆಗೆದುಕೊಳ್ಳುತ್ತೇವೆ. ಸಮಯದ ನಿರ್ಬಂಧವಿದೆ ಏಕೆಂದರೆ ವಿದೇಶಾಂಗ ಕಾರ್ಯದರ್ಶಿಯವರು ಮತ್ತೊಂದು ಕಾರ್ಯಕ್ರಮಕ್ಕೆ ಹೋಗಬೇಕು. ಮೊದಲ ಪ್ರಶ್ನೆ  ಸಿದ್ದಾಂತ್ ಅವರದು.
ಸಿದ್ದಾಂತ್: ಹಾಯ್, ನಾನು WION ನಿಂದ ಸಿದ್ದಾಂತ್. ಇಂದು ಬೆಳಿಗ್ಗೆ ಇಯು ನಾಯಕರೊಂದಿಗಿನ ಸಭೆಯ ಕುರಿತು ನನ್ನ ಪ್ರಶ್ನೆಯೆಂದರೆ, ಲಸಿಕೆ ಪ್ರಮಾಣಪತ್ರಗಳ ಪರಸ್ಪರ ಗುರುತಿಸುವಿಕೆಯ ಬಗ್ಗೆ ಗಮನ ಹರಿಸಲಾಯಿತೇ? ಭಾರತದ ಲಸಿಕೆಗಳನ್ನು, ಭಾರತೀಯ ಲಸಿಕೆ ಪ್ರಮಾಣಪತ್ರಗಳನ್ನು ಗುರುತಿಸುವಲ್ಲಿ ಎಷ್ಟು ಗಮನಹರಿಸಲಾಯಿತು? ಅಲ್ಲದೆ, ಭಯೋತ್ಪಾದನೆಯ ವಿಷಯದಲ್ಲಿ ಭಾರತದ ಕಡೆಯಿಂದ ಎಷ್ಟು ಒತ್ತು ನೀಡಲಾಯಿತು?
ಮನೀಶ್ ಚಂದ್: ಸರ್, ಮನೀಶ್ ಚಂದ್, ಇಂಡಿಯಾ ರೈಟ್ಸ್ ನೆಟ್‌ವರ್ಕ್ ನಿಂದ. ನನ್ನ ಪ್ರಶ್ನೆ ಏನೆಂದರೆ, ಕಳೆದ ಶೃಂಗಸಭೆಯಲ್ಲಿ, ಭಾರತ ಮತ್ತು ಇಟಲಿ ಆಫ್ರಿಕಾದಂತಹ ಮೂರನೇ ದೇಶಗಳಲ್ಲಿ ಒಟ್ಟಿಗೆ ಕೆಲಸ ಮಾಡುವ ಬಗ್ಗೆ ಅನ್ವೇಷಿಸುವ ಪ್ರಸ್ತಾಪವಿತ್ತು. ಈಗ ಇಂಡೋ ಪೆಸಿಫಿಕ್ ನಿಮ್ಮ ರಾಜಕೀಯ ಕ್ಷೇತ್ರದಲ್ಲಿರುವ ವಿಷಯವಾಗಿದೆ. ಇಂಡೋ ಪೆಸಿಫಿಕ್ ಮತ್ತು ಮೂರನೇ ದೇಶಗಳಲ್ಲಿ ಸಹಕಾರಕ್ಕಾಗಿ ಕೆಲವು ಬಲವಾದ ಯೋಜನೆಗಳ ಕುರಿತು ಯಾವುದಾದರೂ ಚರ್ಚೆ ನಡೆದಿದೆಯೇ?
ಸ್ಪೀಕರ್ 1 ಬ್ಲೂಮ್‌ಬರ್ಗ್ ನ್ಯೂಸ್: ಸಚಿವರೇ, ಕೋವಿಡ್-19 ವಿರುದ್ಧದ ಲಸಿಕೆಗಳ ಪರಸ್ಪರ ಗುರುತಿಸುವಿಕೆಯ ಕುರಿತು ಜಿ 20 ಸದಸ್ಯರಿಗೆ ಭಾರತದ ಕಡೆಯಿಂದ ನಿಖರವಾದ ಪ್ರಸ್ತಾವನೆ ಏನೆಂಬುದನ್ನು ವಿವರವಾಗಿ ತಿಳಿಸಬಹುದೇ? ನಾಳೆ ಪೋಪ್ ಅವರೊಂದಿಗಿನ ಪ್ರಧಾನ ಮಂತ್ರಿಯವರ ಸಭೆಯ ಕಾರ್ಯಸೂಚಿಯನ್ನು ವಿವರಿಸಬಹುದೇ? ಅವರು ಯಾವ ನಿರ್ದಿಷ್ಟ ಸಮಸ್ಯೆಗಳನ್ನು ಚರ್ಚಿಸಲು ಯೋಜಿಸಿದ್ದಾರೆ, ವಿಶೇಷವಾಗಿ ಭಾರತದಲ್ಲಿನ ಕ್ರಿಶ್ಚಿಯನ್ನರ ಬಗ್ಗೆ ಅಥವಾ ಬೇರೆ ಯಾವುದಾದರೂ? ಇನ್ನೊಂದು ವಿಷಯವೆಂದರೆ…
ಶ್ರೀ ಅರಿಂದಮ್ ಬಾಗ್ಚಿ, ಅಧಿಕೃತ ವಕ್ತಾರರು: ನಮಗೆ ಸಮಯದ ನಿರ್ಬಂಧವಿದೆ. ಆದ್ದರಿಂದ…
ಸ್ಪೀಕರ್ 1: ಮತ್ತು ಸಿಒಪಿ 26 ಶೃಂಗಸಭೆಯ ಮುಂದೆ ನಿಧಿಗಳು ಮತ್ತು ತಂತ್ರಜ್ಞಾನ ವರ್ಗಾವಣೆಯ ಕುರಿತು ನಿಮ್ಮ ನಿರೀಕ್ಷೆಗಳ ಬಗ್ಗೆ, ವಿಶೇಷವಾಗಿ ಅಮೆರಿಕಾ ಜೊತೆಗಿನ ಪಾಲುದಾರಿಕೆಯ ಬಗ್ಗೆ ನೀವು ವಿವರಿಸಬಹುದೇ? ನಾನು ಗಮನಿಸಿದಂತೆ ಅಮೆರಿಕಾವು ಭಾರತಕ್ಕೆ ಫಂಡ್ ಟೆಕ್‌ನೊಂದಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದೆ ಮತ್ತು ಅದು ಹವಾಮಾನ ವಿಷಯದಲ್ಲಿ ಸಹಕಾರವನ್ನು ಬಯಸುತ್ತಿದೆ. ಧನ್ಯವಾದಗಳು..
ಶ್ರೀ ಹರ್ಷ ವರ್ಧನ್ ಶೃಂಗ್ಲಾ, ವಿದೇಶಾಂಗ ಕಾರ್ಯದರ್ಶಿ: ಲಸಿಕೆ ಪ್ರಮಾಣೀಕರಣದೊಂದಿಗೆ ಪ್ರಾರಂಭಿಸೋಣ. ಏಕೆಂದರೆ ಈ ಬಗ್ಗೆ ಸಿಧಾಂತ್ ಮತ್ತು ಬ್ಲೂಮ್‌ಬರ್ಗ್ ಇಬ್ಬರೂ ಕೇಳಿದ್ದಾರೆ. ಲಸಿಕೆಯ ಪ್ರಮಾಣೀಕರಣದ ವಿಷಯವನ್ನು ವಿಶೇಷವಾಗಿ ಇಯು ಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದ ದೇಶಗಳು ಚೇತರಿಸಿಕೊಳ್ಳುತ್ತಿರುವುದರಿಂದ ಸುಲಭ ಪ್ರವೇಶ, ಸಾಮಾನ್ಯೀಕರಣದೊಂದಿಗೆ ಪ್ರಯಾಣದ ಸಮಸ್ಯೆಯನ್ನು ಖಂಡಿತವಾಗಿಯೂ ಚರ್ಚಿಸಲಾಗಿದೆ ಎಂದು ನಾನು ಭಾವಿಸುತ್ತೇನೆ. ಲಸಿಕೆಗಳ ಪರಸ್ಪರ ಗುರುತಿಸುವಿಕೆ ಕುರಿತು ಮಾತುಕತೆ ನಡೆಯಿತು. ನಾವು ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಲಭಗೊಳಿಸುವ ಕಾರ್ಯವಿಧಾನವನ್ನು ಕಂಡುಕೊಳ್ಳಬೇಕಾಗಿದೆ.ಈ ವಿಷಯದಲ್ಲಿ ದ್ವಿಪಕ್ಷೀಯವಾಗಿ ಕೆಲಸ ಮಾಡಬೇಕಾಗುತ್ತದೆ. ಯುರೋಪಿಯನ್ ಯೂನಿಯನ್, ಯುರೋಪಿಯನ್ ಕೌನ್ಸಿಲ್ ಸಾಮಾನ್ಯ ಮಾರ್ಗಸೂಚಿಗಳನ್ನು ಮಾತ್ರ ಒದಗಿಸಬಹುದು ಎಂದು ನನ್ನ ಭಾವನೆ. ನಮ್ಮ ಪ್ರಸ್ತಾಪಕ್ಕೆ ಕೆಲವು ಇಯು ದೇಶಗಳು ಈಗಾಗಲೇ ಪ್ರತಿಕ್ರಿಯಿಸಿವೆ. ನಾವು ಈಗಾಗಲೇ ಆ ನಿಟ್ಟಿನಲ್ಲಿ ಸ್ವಲ್ಪ ಮುನ್ನಡೆ ಸಾಧಿಸುತ್ತಿದ್ದೇವೆ ಮತ್ತು ಈ ಪ್ರಶ್ನೆಯು ಜಿ 20 ನಲ್ಲಿಯೂ ಇತ್ತು. ನಾವು ಜಿ 20 ರಲ್ಲಿಯೂ ಸಹ ಲಸಿಕೆ ಪ್ರಮಾಣೀಕರಣದ ಪರಸ್ಪರ ಗುರುತಿಸುವಿಕೆಯನ್ನು ಪ್ರಸ್ತಾಪಿಸಿದ್ದೇವೆ. ಅದರ ಫಲಿತಾಂಶಗಳು ಇನ್ನೂ ಬರಬೇಕಿದೆ. ಹಾಗಾಗಿ ಹೆಚ್ಚಿನ ದೇಶಗಳು ಅಂತಾರಾಷ್ಟ್ರೀಯ ಪ್ರಯಾಣವನ್ನು ಸುಗಮಗೊಳಿಸುವ ಬಗ್ಗೆ ಸಾಕಷ್ಟು ಉತ್ಸುಕವಾಗಿವೆ ಎಂದು ನಾನು ಭಾವಿಸುತ್ತೇನೆ. ಅದರ ವಿವರಗಳು ಹೊರಬರಬೇಕಿದೆ. ಆದರೆ ಸುಲಭವಾದ ಪ್ರವೇಶ ಮತ್ತು ಸುಲಭವಾದ ಪ್ರಯಾಣವು ನಾವು ಒಟ್ಟಾಗಿ ಕೆಲಸ ಮಾಡಬೇಕಾದ ವಿಷಯ ಎಂದು ಹಲವಾರು ದೇಶಗಳು ಭಾವಿಸಿವೆ. ಪ್ರಧಾನಿಯವರು ಪ್ರಸ್ತಾಪಿಸಿರುವ ಆ ಅಂಶವನ್ನು ಸ್ವೀಕರಿಸಲಾಗಿದೆ ಮತ್ತು ಗಮನಿಸಲಾಗಿದೆ ಎಂದು ನಾನು ಭಾವಿಸುತ್ತೇನೆ.
ಮೂರನೇ ದೇಶಗಳಲ್ಲಿ ಕೆಲಸ ಮಾಡುವ ಬಗ್ಗೆ ಮನೀಶ್ ಅವರ ಪ್ರಶ್ನೆ, ನೀವು ಆಫ್ರಿಕಾ, ಆಸಿಯಾನ್ ದೇಶಗಳು ಇತ್ಯಾದಿಗಳನ್ನು ಉಲ್ಲೇಖಿಸಿದ್ದೀರಿ. ಯುರೋಪಿಯನ್ ಒಕ್ಕೂಟದ ಮಟ್ಟದಲ್ಲಿ, ಇದು ಚರ್ಚಿಸಲ್ಪಟ್ಟ ವಿಷಯ ಎಂದು ನಾನು ಭಾವಿಸುತ್ತೇನೆ. ಯುರೋಪಿಯನ್ ಯೂನಿಯನ್ ಇಂಡೋ ಪೆಸಿಫಿಕ್ ಕುರಿತು ಕಾರ್ಯತಂತ್ರವನ್ನು ಪರಿಚಯಿಸಿದೆ. ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಅವರು ಇಂಡೋ ಪೆಸಿಫಿಕ್‌ಗೆ ನೀಡುವ ಪ್ರಾಮುಖ್ಯದ ಬಗ್ಗೆ ಮತ್ತು ನಿರ್ದಿಷ್ಟವಾಗಿ ಭಾರತದೊಂದಿಗೆ ಕೆಲಸ ಮಾಡುವ ಬಗ್ಗೆ ಮಾತನಾಡಿದರು. ಇದು ನಾವು ಮತ್ತಷ್ಟು ಚರ್ಚಿಸಬೇಕಾದ ವಿಷಯ ಎಂದು ನಾಯಕರು ಭಾವಿಸಿದ್ದಾರೆ. ಈ ಕುರಿತು ಉನ್ನತ ಮಟ್ಟದ ನಿಯೋಗವನ್ನು ಭಾರತಕ್ಕೆ ಕಳುಹಿಸಬಹುದು, ಚರ್ಚಿಸಬಹುದು, ಟಿಪ್ಪಣಿಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಬಹುದು ಮತ್ತು ನಂತರ ಬಹುಶಃ ಕಾರ್ಯಪಡೆಯೊಂದನ್ನು ಸ್ಥಾಪಿಸಬಹುದೆಂದು ಪ್ರಧಾನ ಮಂತ್ರಿಯವರು ಹೇಳಿದರು. ನಿಮಗೆ ತಿಳಿದಿರುವಂತೆ ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳಾದ ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್ ಈಗಾಗಲೇ ಇಂಡೋ ಪೆಸಿಫಿಕ್‌ನಲ್ಲಿ ಕಾರ್ಯತಂತ್ರಗಳನ್ನು ಪರಿಚಯಿಸಿವೆ, ಅವು ಇಂಡೋ ಪೆಸಿಫಿಕ್‌ ಕುರಿಉತು ನೀತಿಯನ್ನು ಹೊಂದಿವೆ. ಇಂಡೋ ಪೆಸಿಫಿಕ್‌ನಲ್ಲಿ ಸಮಾನಮನಸ್ಕ ರಾಷ್ಟ್ರಗಳು ಸಹಕರಿಸುವ ಅಗತ್ಯದ ಬಗ್ಗೆ ಹೆಚ್ಚು ಮಹತ್ವವಿದೆ ಮತ್ತು ಇಂದಿನ ನಾಯಕರೊಂದಿಗಿನ ಪ್ರಧಾನ ಮಂತ್ರಿಯವರ ಮಾತುಕತೆಗಳು ಆ ನಿಟ್ಟಿನಲ್ಲಿರುವ ಆಕರ್ಷಣೆ ಮತ್ತು ಆವೇಗವನ್ನು ಸೂಚಿಸುತ್ತವೆ.
ನಾಳೆ ಪೂಜ್ಯ ಪೋಪ್ ಅವರೊಂದಿಗಿನ ಸಭೆಗೆ ಸಂಬಂಧಿಸಿದಂತೆ, ಪ್ರಧಾನಿಯವರೊಂದಿಗೆ ಪ್ರತ್ಯೇಕ ಸಭೆ ಇರುತ್ತದೆ ಎಂದು ನನಗೆ ತಿಳಿದಿದೆ; ಅವರು ಪೋಪ್ ಅವರೊಂದಿಗೆ ವಿವರವಾದ ಚರ್ಚೆ ನಡೆಸಲಿದ್ದಾರೆ. ಒಂದು ನಿರ್ದಿಷ್ಟ ಅವಧಿಯ ನಂತರ ನಿಯೋಗ ಮಟ್ಟದ ಮಾತುಕತೆಗಳು ನಡೆಯಬಹುದು. ವ್ಯಾಟಿಕನ್ ಯಾವುದೇ ಕಾರ್ಯಸೂಚಿಯನ್ನು ಹೊಂದಿಲ್ಲ. ಪೋಪ್ ಅವರೊಂದಿಗೆ ಸಮಸ್ಯೆಗಳನ್ನು ಚರ್ಚಿಸಲು ಅಜೆಂಡಾ ರೂಪಿಸುವ ಸಂಪ್ರದಾಯ ಇರುವುದಿಲ್ಲ ಮತ್ತು ನಾವು ಅದನ್ನು ಗೌರವಿಸುತ್ತೇವೆ. ಸಾಮಾನ್ಯ ಜಾಗತಿಕ ದೃಷ್ಟಿಕೋನಗಳು ಮತ್ತು ನಮಗೆಲ್ಲರಿಗೂ ಮುಖ್ಯವಾದ ಸಮಸ್ಯೆಗಳು, ಕೋವಿಡ್-19, ಆರೋಗ್ಯ ಸಮಸ್ಯೆಗಳು, ನಾವು ಹೇಗೆ ಒಟ್ಟಿಗೆ ಕೆಲಸ ಮಾಡಬಹುದು, ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡಿಕೊಳ್ಳುವುದು ಮುಂತಾದ ಆಸಕ್ತಿಯ ಕ್ಷೇತ್ರಗಳ ವ್ಯಾಪ್ತಿಯನ್ನು ಮಾತುಕತೆಗಳು ಒಳಗೊಂಡಿರುತ್ತವೆ ಎಂದು ನನಗೆ ಖಾತ್ರಿಯಿದೆ. ಇದು ಚರ್ಚೆಯ ಸಾಮಾನ್ಯ ಪ್ರವೃತ್ತಿ ಎಂದು ನಾನು ಭಾವಿಸುತ್ತೇನೆ.
ಈಗ, ಸಿಒಪಿ 26 ನಲ್ಲಿ ನೀವು ನಿಧಿ ಮತ್ತು ತಂತ್ರಜ್ಞಾನ ವರ್ಗಾವಣೆಯ ಬಗ್ಗೆ ಪ್ರಸ್ತಾಪಿಸಿದ್ದೀರಿ.  ಪ್ರಧಾನ ಮಂತ್ರಿಯವರು ಪ್ಯಾರಿಸ್ ಒಪ್ಪಂದದಲ್ಲಿ ನಿಗದಿಪಡಿಸಿದ ಗುರಿಗಳನ್ನು ಸಾಧಿಸಲು ದೇಶಗಳು ಪ್ರಯತ್ನಿಸುತ್ತಿದ್ದರೂ ಸಹ ಕೆಲವು ಅಭಿವೃದ್ಧಿಶೀಲ ರಾಷ್ಟ್ರಗಳ ಹೆಚ್ಚಿನ ಬದ್ಧತೆಗಳ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ. ನಾವು ಈಗಾಗಲೇ ಗುರಿಯ ಕೇಂದ್ರ ಬದಲಾಗಿರುವುದನ್ನು ನೋಡುತ್ತಿದ್ದೇವೆ, ಹೆಚ್ಚಿನ ಗುರಿಗಳನ್ನು ಹೊಂದಿಸಲಾಗುತ್ತಿದೆ. ಪ್ರಧಾನಿಯವರು ನಮ್ಮದೇ ಉದಾಹರಣೆಯನ್ನು ತೆಗೆದುಕೊಂಡರು ಮತ್ತು ಭಾರತವು ವಾಸ್ತವವಾಗಿ ಪ್ಯಾರಿಸ್‌ ಎನ್‌ಡಿಸಿಗಳನ್ನು ಸಾಧಿಸಲು ಹತ್ತಿರದಲ್ಲಿದೆ, ಬಹುಶಃ ಅವುಗಳಲ್ಲಿ ಹೆಚ್ಚಿನದನ್ನು ಸಾಧಿಸಲಾಗಿದೆ ಎಂದು ಹೇಳಿದರು. ಆದರೆ ಅದೇ ಸಮಯದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳು ತಮ್ಮ ಉದ್ದೇಶಗಳನ್ನು ತಲುಪುವಲ್ಲಿ ನಾವು ಹೇಗೆ ಬೆಂಬಲಿಸುತ್ತೇವೆ ಎಂಬುದರ ವಿಷಯದಲ್ಲಿ ಹೆಚ್ಚಿನ ಹೊಣೆಗಾರಿಕೆ ಇರಬೇಕು, ನಿರ್ದಿಷ್ಟವಾಗಿ, ಹವಾಮಾನ ಹಣಕಾಸು, ಹಸುರು ಹಣಕಾಸು ಮತ್ತು ಹಸುರು ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ, ಅವರು ಕೇವಲ ಬದ್ಧತೆಗಿಂತ ಹೆಚ್ಚಿನದನ್ನು ತೋರಬೇಕು. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನಿಜವಾದ ರಿಯಾಯಿತಿಯ ಹರಿವಿಗೆ ಕಾರಣವಾಗುವ ಭರವಸೆಗಳು ಅವರಿಗೆ ಸಹಾಯ ಮಾಡಲು ಮತ್ತು ನಾವೆಲ್ಲರೂ ಗುರಿಗಳನ್ನು ಸಾಧಿಸುವಲ್ಲಿ ಅವರನ್ನು ಬೆಂಬಲಿಸಲು ಇರಬೇಕು. ಹವಾಮಾನ ಬದಲಾವಣೆಯ ಸಮಸ್ಯೆಗಳನ್ನು ಪರಿಹರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಭಾರತವು ಹೊಂದಾಣಿಕೆ, ತಗ್ಗಿಸುವಿಕೆಯ ವಿಷಯದಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಆದರೆ ಇದಕ್ಕಿಂತ ಹೆಚ್ಚಿನದನ್ನು ಮಾಡಬೇಕಾಗಿದೆ, ಗುರಿಗಳನ್ನು ಸಾಧಿಸಲು ಮಾತ್ರವಲ್ಲದೆ ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾಗಿತ್ತು ಏಕೆಂದರೆ ಅನೇಕ ದೇಶಗಳು ಅದನ್ನು ನೈಜ ಪರಿಭಾಷೆಯಲ್ಲಿ ಮಾಡುತ್ತಿಲ್ಲ ಎಂದು ಪ್ರಧಾನ ಮಂತ್ರಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ನೀವು ಇತರ ಅಂಶಗಳನ್ನು ತರಬೇಕಾಗಿದೆ, ಉದಾಹರಣೆಗೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ತರುವುದು. ಭಾರತವು ಯಾವಾಗಲೂ ಪ್ರಕೃತಿಯೊಂದಿಗೆ ಸಾಮರಸ್ಯವನ್ನು ಹೊಂದಿದೆ, ತಲಾವಾರು ಪರಿಭಾಷೆಯಲ್ಲಿ ನಾವು ಕಡಿಮೆ ಇಂಗಾಲ ಹೊರಸೂಸುವ ದೇಶಗಳಲ್ಲಿ ಒಬ್ಬರಾಗಿದ್ದೇವೆ. ಆದರೆ ಅದೇ ಸಮಯದಲ್ಲಿ, ಹವಾಮಾನ ಬದಲಾವಣೆಯ ವಿಷಯದಲ್ಲಿ ತಾಪಮಾನದ ಮಿತಿಯನ್ನು ಸ್ವಯಂಚಾಲಿತವಾಗಿ ಕಡಿಮೆ ಮಾಡುವ ಜಾಗತಿಕ ಆಧಾರದ ಮೇಲೆ ನಾವು ಸುಸ್ಥಿರ ಜೀವನಶೈಲಿಯನ್ನು ಹೇಗೆ ನಡೆಸಬಹುದು ಎಂಬುದನ್ನು ಕಂಡುಕೊಳ್ಳುವುದು  ಒಂದು ಮಾರ್ಗವಾಗಿದೆ ಎಂದು ನಾವು ನಂಬುತ್ತೇವೆ. ಆದ್ದರಿಂದ ಹವಾಮಾನ ಬದಲಾವಣೆಯಲ್ಲಿ ನಮ್ಮ ಗುರಿಗಳನ್ನು ಸಾಧಿಸಲು ಪೂರ್ವಭಾವಿಯಾಗಿ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು.
ಅಫ್ಘಾನಿಸ್ತಾನದ ಕುರಿತಾದ ಚರ್ಚೆಗಳಲ್ಲಿ ನಿರ್ದಿಷ್ಟವಾಗಿ ಭಯೋತ್ಪಾದನೆ ವಿಷಯವನ್ನು ಸಾಕಷ್ಟು ಚರ್ಚಿಸಲಾಯಿತು. ಹವಾಮಾನ ಬದಲಾವಣೆ ಮತ್ತು ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದ ಎರಡು ವಿಷಯಗಳು ಇಬ್ಬರೂ ನಾಯಕರಿಗೆ ಸಾಕಷ್ಟು ಸಮಯ ತೆಗೆದುಕೊಂಡವು. ಅಫ್ಘಾನಿಸ್ತಾನದ ಪರಿಸ್ಥಿತಿಯನ್ನು ಪ್ರತ್ಯೇಕವಾಗಿ ನೋಡಲಾಗುವುದಿಲ್ಲ ಎಂದು ಪ್ರಧಾನಿ ಸಾಕಷ್ಟು ಸ್ಪಷ್ಟವಾಗಿ ಹೇಳಿದ್ದಾರೆ ಉತ್ತಮ ಆಡಳಿತವನ್ನು ನೀಡುವಲ್ಲಿ ವಿಫಲತೆ ಮತ್ತು ಅಸಮರ್ಥತೆ, ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದಿರುವುದು ಆತ್ಮಾವಲೋಕನದ ವಿಷಯವೂ ಆಗಿರಬೇಕು. ಅಫ್ಘಾನಿಸ್ತಾನದಿಂದ ಹೊರಹೊಮ್ಮುವ ಯಾವುದೇ ರೀತಿಯ ಬೆದರಿಕೆಯು ಅಂತರಾಷ್ಟ್ರೀಯ ಸಮುದಾಯವು ಬಹಳ ಎಚ್ಚರಿಕೆಯಿಂದ ಗಮನಿಸಬೇಕಾದ ಸಂಗತಿಯಾಗಿದೆ. ಅಫ್ಘಾನಿಸ್ತಾನದಲ್ಲಿನ ಸಮಸ್ಯೆಗಳ ಮೂಲ ಕಾರಣಗಳನ್ನು ಮುಖ್ಯವಾಗಿ ಮೂಲಭೂತವಾದ ಮತ್ತು ಭಯೋತ್ಪಾದನೆಯನ್ನು ಸಕ್ರಿಯವಾಗಿ ನೋಡಬೇಕಾಗಿದೆ. ಇವುಗಳ ಪರಿಣಾಮವನ್ನು ಬಹಳ ಎಚ್ಚರಿಕೆಯಿಂದ ಪರಿಶೀಲಿಸಬೇಕು ಎಂದು ಅವರು ಸೂಚಿಸಿದರು. ಹಾಗಾಗಿ ಯುರೋಪಿಯನ್ ಯೂನಿಯನ್ ಮತ್ತು ಇಟಲಿಯಲ್ಲಿನ ನಮ್ಮ ಪಾಲುದಾರರಿಗೆ ಇದು ಸಂಪೂರ್ಣವಾಗಿ ಅರ್ಥವಾಗಿದೆ ಎಂದು ನಾನು ಭಾವಿಸುತ್ತೇನೆ. ಇಬ್ಬರೂ ನಾಯಕರು ಆ ಭಾವನೆಗಳನ್ನು ಸಮರ್ಥಿಸಿದರು ಮತ್ತು ಇದು ಪರಿಶೀಲಿಸಬೇಕಾದ ವಿಷಯ ಎಂದು ಭಾವಿಸಿದರು. ಹಾಗೆಯೇ, ಮಾನವೀಯ ಪರಿಸ್ಥಿತಿಗೆ ಒತ್ತು ನೀಡಿರುವುದು. ನಿರ್ದಿಷ್ಟವಾಗಿ ಪ್ರಧಾನ ಮಂತ್ರಿ ಡ್ರಾಘಿ ಅವರು ಜಿ 20 ಶೃಂಗಸಭೆಯ ಸಂದರ್ಭದಲ್ಲಿ ಅಫ್ಘಾನಿಸ್ತಾನದ ಜನರು ಪ್ರಸ್ತುತ ಪರಿಸ್ಥಿಯ ಪರಿಣಾಮವಾಗಿ ಸಂಕಷ್ಟಕ್ಕೆ ಒಳಗಾಗದಂತೆ ಖಚಿತಪಡಿಸಿಕೊಳ್ಳಲು ಬೆಂಬಲವನ್ನು ಕ್ರೋಡೀಕರಿಸಲು ತಮ್ಮ ಪ್ರಯತ್ನಗಳನ್ನು ಮಾಡಿದ್ದಾರೆ. ಆ ದೇಶದಲ್ಲಿ ಆಡಳಿತ ಮಾಡುವವರು ಮತ್ತು ಜನರು ಎಂಬ ವ್ಯತ್ಯಾಸವಿರಬೇಕು ಮತ್ತು ಜನರಿಗೆ ಸಹಾಯ ಮಾಡಬೇಕು ಎಂದು ಪ್ರಧಾನಿ ಸೂಚಿಸಿದರು. ನಾವು ಮಾನವೀಯ ನೆರವನ್ನು ನೀಡಲು ಮುಂದಾಗಿದ್ದೇವೆ ಎಂದು ಪ್ರಧಾನಮಂತ್ರಿ ಹೇಳಿದರು. ಆದರೆ ನಾವು ಅದನ್ನು ಅಫ್ಘಾನಿಸ್ತಾನಕ್ಕೆ ತಲುಪಿಸಬೇಕಾಗಿದೆ ಮತ್ತು ಅಫ್ಘಾನಿಸ್ತಾನಕ್ಕೆ ಆ ಮಾನವೀಯ ನೆರವಿಗೆ ನೇರ, ಅಡೆತಡೆಯಿಲ್ಲದ ಪ್ರವೇಶವಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಪ್ರಧಾನಿ ಹೇಳಿದರು.
ದ್ವಿಪಕ್ಷೀಯ ಬಾಂಧವ್ಯದ ವಿಷಯಕ್ಕೆ ಬರುವುದಾದರೆ, ಇತ್ತೀಚಿನ ವರ್ಷಗಳಲ್ಲಿ ಇಟಲಿಯೊಂದಿಗಿನ ಸಂಬಂಧವು ಗಮನಾರ್ಹವಾದ ಏರಿಕೆಯನ್ನು ಕಂಡಿದೆ. ದ್ವಿಪಕ್ಷೀಯ ಸಂಬಂಧಗಳು ವಿಶೇಷವಾಗಿ ಹೂಡಿಕೆ, ವ್ಯಾಪಾರ ಮತ್ತು ಜನರೊಂದಿಗಿನ ಜನರ ಸಂಬಂಧಗಳು ಹೂಡಿಕೆಯ ಕ್ಷೇತ್ರಗಳಲ್ಲಿ ಆಪ್ತತೆ ಮತ್ತು ಚೈತನ್ಯವನ್ನು ಕಂಡಿವೆ ಎಂದು ಪ್ರಧಾನಿ ಹೇಳಿದರು. ಪ್ರಧಾನ ಮಂತ್ರಿ ದ್ರಾಘಿ ಕೂಡ ಇದನ್ನು ಬಲವಾಗಿ ಸಮರ್ಥಿಸಿದರು. ಭಾರತಕ್ಕೆ ಭೇಟಿ ನೀಡುವಂತೆ ಅವರನ್ನು ಪ್ರಧಾನಿಯವರು ಆಹ್ವಾನಿಸಿದರು. ಅವರು ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಮತ್ತು ಉರ್ಸುಲಾ ವಾನ್ ಡಿ ಲೇಯೆನ್ ಇಬ್ಬರನ್ನೂ ಭಾರತಕ್ಕೆ ಭೇಟಿ ನೀಡುವಂತೆಯೂ ಆಹ್ವಾನಿಸಿದರು. ಕೋವಿಡ್‌ನಿಂದಾಗಿ ಕೆಲವೇ ಕೆಲವು ವಿನಿಮಯಗಳು ನಡೆದಿವೆ ಎಂದು ನಾನು ಭಾವಿಸುತ್ತೇನೆ. ನಾವು ಮಾತುಕತೆಗಳನ್ನು ಮುಂದುವರಿಸಲು ಬಯಸುತ್ತೇವೆ, ನಮ್ಮ ರಾಜತಾಂತ್ರಿಕ ಸಂಬಂಧಗಳು ವೇಗವನ್ನು ಪಡೆಯಲು ನಾವು ಬಯಸುತ್ತೇವೆ ಮತ್ತು ಆ ಪ್ರಯತ್ನಗಳ ದೃಷ್ಟಿಯಲ್ಲಿ ನೀವು ಪ್ರಧಾನಿಯವರ ಆಹ್ವಾನವನ್ನು ನೋಡಬೇಕು.
ಶ್ರೀ ಅರಿಂದಮ್ ಬಾಗ್ಚಿ, ಅಧಿಕೃತ ವಕ್ತಾರರು: ಧನ್ಯವಾದಗಳು, ಸರ್. ಇನ್ನು ಒಂದೆರಡು ಪ್ರಶ್ನೆಗಳು ಮಾತ್ರ. ಪ್ರಣಯ್.
ಪ್ರಣಯ್ ಉಪಾಧ್ಯಾಯ: ನಾನು ಎಬಿಪಿ ನ್ಯೂಸ್‌ನಿಂದ ಪ್ರಣಯ್ ಉಪಾಧ್ಯಾಯ. ಜಾಗತಿಕ ಪೂರೈಕೆ ಸರಪಳಿ ವೈವಿಧ್ಯೀಕರಣವು ಭಾರತವು ಎತ್ತುತ್ತಿರುವ ಪ್ರಮುಖ ವಿಷಯವಾಗಿದೆ. ಇಯು ಜೊತೆಗಿನ ಸಭೆಯಲ್ಲಿ, ಇಯುಯ ಅಧ್ಯಕ್ಷರೊಂದಿಗಿನ ಸಭೆಯಲ್ಲಿ ಮತ್ತು ಇಟಲಿಯೊಂದಿಗಿನ ದ್ವಿಪಕ್ಷೀಯ ಸಭೆಯಲ್ಲೂ ಈ ವಿಷಯವನ್ನು ಚರ್ಚಿಸಲಾಗಿದೆಯೇ ಮತ್ತು ಭಾರತವು ಯಾವ ರೀತಿಯಲ್ಲಿ ಇದನ್ನು ಮುಂದುವರಿಸಲು ಬಯಸುತ್ತದೆ?
ಸ್ಪೀಕರ್ 2: ಇಂಡೋ-ಇಟಾಲಿಯನ್ ಭೇಟಿಯ ಬಗ್ಗೆ, ವಿಶೇಷವಾಗಿ ಆರ್ಥಿಕ ಸಹಕಾರದ ಹೊಸ ಸಾಧ್ಯತೆಗಳ ಬಗ್ಗೆ ನೀವು ನಮಗೆವಿವರ ನೀಡಬಹುದೇ?
ಶ್ರೀ ಅರಿಂದಮ್ ಬಾಗ್ಚಿ, ಅಧಿಕೃತ ವಕ್ತಾರರು: ಧನ್ಯವಾದಗಳು.
ಶ್ರೀ ಹರ್ಷವರ್ಧನ್ ಶೃಂಗ್ಲಾ, ವಿದೇಶಾಂಗ ಕಾರ್ಯದರ್ಶಿ: ನಾನು ಅದನ್ನು ಮೊದಲು ಒಂದು ಪ್ರಶ್ನೆಗೆ ಉತ್ತರಿಸುತ್ತೇನೆ. ನಾನು ಹೇಳಿದಂತೆ ಇಬ್ಬರು ಪ್ರಧಾನ ಮಂತ್ರಿಗಳು ವ್ಯಾಪಾರ ಮತ್ತು ಹೂಡಿಕೆ ಬಹಳ ಮುಖ್ಯ ಎಂದು ಭಾವಿಸಿದ್ದಾರೆ. ಭಾರತದಲ್ಲಿ ಹೂಡಿಕೆ ಮಾಡಲು, ಭಾರತದಲ್ಲಿ ವ್ಯಾಪಾರ ಮಾಡಲು ಉತ್ಸುಕರಾಗಿರುವ ಇಟಾಲಿಯನ್ ಕಂಪನಿಗಳು ಬಹಳ ದೊಡ್ಡ ಸಂಖ್ಯೆಯಲ್ಲಿವೆ ಎಂದು ಇಟಲಿಯ ಪ್ರಧಾನಿ ಹೇಳಿದರು. ಸಮಯದ ಕೊರತೆಯಿಂದಾಗಿ ಆ ವಿವರಗಳನ್ನು ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಪ್ರಧಾನಿ ಮೋದಿ ಅವರು ಭಾರತ ಮತ್ತು ಇಟಾಲಿಯನ್ ಕಂಪನಿಗಳ ನಡುವಿನ ಸಹಯೋಗವನ್ನು ಹೆಚ್ಚಿಸಲು, ಭಾರತದಲ್ಲಿ ಇಟಾಲಿಯನ್ ಹೂಡಿಕೆಗಳನ್ನು ಆಕರ್ಷಿಸಲು ಉತ್ಸುಕರಾಗಿರುವುದಾಗಿ ವಿಶೇಷವಾಗಿ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಮತ್ತು ಆಟೋಮೊಬೈಲ್ ಕ್ಷೇತ್ರಗಳಲ್ಲಿ ಮತ್ತು ಇಟಲಿಯು ಎಲೆಕ್ಟ್ರಿಕ್ ವಾಹನಗಳಾದ ಉತ್ತಮ ದ್ವಿಚಕ್ರ ವಾಹನಗಳನ್ನು ತಯಾರಿಸುವ ಕೆಲವು ಕಂಪನಿಗಳನ್ನು ಹೊಂದಿದೆ. ಆದ್ದರಿಂದ, ಅವುಗಳಲ್ಲಿ ಹಲವು ಕೆಲಸ ಮಾಡಲು ಅವಕಾಶವಿದೆ ಎಂದು ಹೇಳಿದರು, ಹಾಗಾಗಿ, ವ್ಯಾಪಾರ ಹೂಡಿಕೆ, ಭಾರತ ಮತ್ತು ಇಟಲಿ ನಡುವಿನ ಆರ್ಥಿಕ ವಿನಿಮಯದ ಕ್ಷೇತ್ರವು ಉಭಯ ನಾಯಕರ ನಡುವಿನ ಆ ಸಭೆಯಲ್ಲಿ ಬಹಳಷ್ಟು ಮಹತ್ವ ಪಡೆದುಕೊಂಡಿದೆ ಎಂದು ನಾನು ಭಾವಿಸುತ್ತೇನೆ.
ಪ್ರಣಯ್, ನಿಮ್ಮ ಪ್ರಶ್ನೆಯು ಪೂರೈಕೆ ಸರಪಳಿಗಳ ಕುರಿತಾಗಿತ್ತು. ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳ ಬಗ್ಗೆ ಖಂಡಿತವಾಗಿಯೂ ಚರ್ಚೆ ಇತ್ತು. ಈ ಚರ್ಚೆಯು ಇಯು ಮತ್ತು ಇಟಲಿ ಪ್ರಧಾನಿ ಇಬ್ಬರೊಂದಿಗೂ ನಡೆಯಿತು, ಆದರೆ ನಾವು ಈ ಬಗ್ಗೆ ವಿವರವಾಗಿ ಚರ್ಚಿಸಲು ಸಾಧ್ಯವಾಗಲಿಲ್ಲ. ಆದರೆ ಎರಡೂ ಕಡೆಯವರು ಈ ಕುರಿತು ಹೆಚ್ಚಿನ ಕೆಲಸವನ್ನು ಮಾಡಬೇಕೆಂದು ಬಯಸಿದ್ದಾರೆ. ಎರಡೂ ಕಡೆಯವರು ಒಟ್ಟಾಗಿ ಕೆಲಸ ಮಾಡಬೇಕು ಮತ್ತು ಸುರಕ್ಷಿತ ಪೂರೈಕೆ ಸರಪಳಿಗಳನ್ನು ರಚಿಸಲು ವಿಶೇಷವಾಗಿ ಇಂಡೋ ಪೆಸಿಫಿಕ್ ಸಂದರ್ಭದಲ್ಲಿ ಭವಿಷ್ಯದಲ್ಲಿ ಈ ಇಬ್ಬರು ಪಾಲುದಾರರೊಂದಿಗೆ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. 
ಶ್ರೀ ಅರಿಂದಮ್ ಬಾಗ್ಚಿ, ಅಧಿಕೃತ ವಕ್ತಾರರು: ಇದರೊಂದಿಗೆ ನಾವು ವಿಶೇಷ ಮಾಧ್ಯಮ ಸಂವಾದದ ಅಂತ್ಯಕ್ಕೆ ಬಂದಿದ್ದೇವೆ. ಇಲ್ಲಿ ನಮ್ಮೊಂದಿಗೆ ಜೊತೆಯಾಗಿದ್ದಕ್ಕೆ ತುಂಬಾ ಧನ್ಯವಾದಗಳು. ಸರ್ ನಿಮ್ಮ ಉಪಸ್ಥಿತಿಗಾಗಿ ಧನ್ಯವಾದಗಳು. ನಾವು ನಿಮ್ಮೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಮುಂದುವರೆಸುತ್ತೇವೆ. ದಯವಿಟ್ಟು ನಮ್ಮ ಸಾಮಾಜಿಕ ಮಾಧ್ಯಮ ಮತ್ತು ನಮ್ಮ ವೆಬ್‌ಸೈಟ್ ಚಾನಲ್‌ಗಳನ್ನು ನೋಡುತ್ತಿರಿ. ಧನ್ಯವಾದ. ನಮಸ್ಕಾರ.
ಶ್ರೀ ಹರ್ಷವರ್ಧನ್ ಶ್ರಿಂಗ್ಲಾ, ವಿದೇಶಾಂಗ ಕಾರ್ಯದರ್ಶಿ: ಧನ್ಯವಾದಗಳು.

***



(Release ID: 1767987) Visitor Counter : 205