ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸೂರತ್ ನಲ್ಲಿ ಸೌರಾಷ್ಟ್ರ ಪಟೇಲ್ ಸೇವಾ ಸಮಾಜ ನಿರ್ಮಿಸುತ್ತಿರುವ ವಿದ್ಯಾರ್ಥಿ ನಿಲಯದ ಹಂತ-1ಕ್ಕೆ ಭೂಮಿ ಪೂಜೆ ನೆರವೇರಿಸಿದ ಪ್ರಧಾನಮಂತ್ರಿ


ಗುಜರಾತ್ ಜನರ ಸೇವಾ ಮನೋಭಾವಕ್ಕೆ ಪ್ರಶಂಸೆ

“ನಾವು ಸರ್ದಾರ್ ಪಟೇಲ್ ಅವರ ನುಡಿದಂತೆ ನಡೆಯಬೇಕು, ನಮ್ಮ ದೇಶವನ್ನು ಪ್ರೀತಿಸಬೇಕು,  ಪರಸ್ಪರ ಪ್ರೀತಿ ಮತ್ತು ಸಹಕಾರದಿಂದ ಭವಿಷ್ಯ ರೂಪಿಸಬೇಕು”.

“ಸಾರ್ವಜನಿಕ ಪ್ರಜ್ಞೆಯನ್ನು ಜಾಗೃತಗೊಳಿಸಲು ಶ್ರಮಿಸಿದವರನ್ನು ಸ್ಮರಿಸಲು ನಮಗೆ ಅಮೃತ ಕಾಲ ಪ್ರೇರಣೆ ನೀಡುತ್ತದೆ. ಅವರ ಬಗ್ಗೆ ತಿಳಿಯುವುದು ಇಂದಿನ ಪೀಳಿಗೆಗೆ ಅಗತ್ಯ”

“ದೇಶ ಈಗ ತನ್ನ ಸಾಂಪ್ರಾದಾಯಿಕ ಕೌಶಲಗಳನ್ನು ಆಧುನಿಕ ಸಾಧ್ಯತೆಗಳೊಂದಿಗೆ ಸಂಪರ್ಕಿಸುತ್ತಿದೆ”

“ಎಲ್ಲರೊಂದಿಗೆ ಎಲ್ಲರ ವಿಕಾಸದ ಶಕ್ತಿ ಏನು ಎಂಬುದನ್ನು ನಾನು ಗುಜರಾತ್ ನಿಂದ ಕಲಿತೆ”

“ಕೊರೊನಾ ಸಂಕಷ್ಟದ ಬಳಿಕ ದೇಶದ ಆರ್ಥಿಕತೆ ಮತ್ತೆ ಹಳಿಗೆ ಮರಳಿದ ವೇಗದಿಂದ ಇಡೀ ವಿಶ್ವ ಭಾರತದ ಬಗ್ಗೆ ಪೂರ್ಣ ವಿಶ್ವಾಸ ಹೊಂದಿದೆ”

Posted On: 15 OCT 2021 12:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸೂರತ್ ನಲ್ಲಿ ಸೌರಾಷ್ಟ್ರ ಪಟೇಲ್ ಸೇವಾ ಸಮಾಜ ನಿರ್ಮಿಸುತ್ತಿರುವ ವಿದ್ಯಾರ್ಥಿ ನಿಲಯದ ಹಂತ-1ಕ್ಕೆ ಭೂಮಿಪೂಜೆ ನೆರವೇರಿಸಿದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು ಗುಜರಾತ್ ಜನರ ಮನೋಭಾವವನ್ನು ಶ್ಲಾಘಿಸಿದರು ಮತ್ತು ಸಾಮಾಜಿಕ ಅಭಿವೃದ್ಧಿಯ ಕಾರ್ಯಗಳಲ್ಲಿ ಗುಜರಾತ್ ಸದಾ ಮುಂಚೂಣಿಯಲ್ಲಿರುವುದು  ಹೆಮ್ಮೆಯ ಸಂಗತಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಟೇಲರನ್ನು ಸ್ಮರಿಸಿದ ಅವರು, ರಾಷ್ಟ್ರದ ಅಭಿವೃದ್ಧಿಯ ಕಾರ್ಯಕ್ಕೆ ಜಾತಿ ಮತ್ತು ಪಂಥ ಅಡ್ಡಿಯಾಗಲು ಅವಕಾಶ ನೀಡಬಾರದು ಎಂದು ಹೇಳಿದರು, ಮಹಾನ್ ನಾಯಕನನ್ನು ಉಲ್ಲೇಖಿಸಿದ ಅವರು, “ನಾವೆಲ್ಲರೂ ಭಾರತದ ಪುತ್ರರು ಮತ್ತು ಪುತ್ರಿಯರು. ನಾವೆಲ್ಲರೂ ನಮ್ಮ ದೇಶವನ್ನು ಪ್ರೀತಿಸಬೇಕು, ನಮ್ಮ ಭವಿಷ್ಯವನ್ನು ಪರಸ್ಪರ ಪ್ರೀತಿ ಮತ್ತು ಸಹಕಾರದಿಂದ ರೂಪಿಸಬೇಕು" ಎಂದು ಸರ್ದಾರ್ ಪಟೇಲರು ಹೇಳುತ್ತಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತ ಪ್ರಸ್ತುತ ಸ್ವಾತಂತ್ರ್ಯದ 75ನೇ ವರ್ಷದಲ್ಲಿದೆ. ಹೊಸ ಸಂಕಲ್ಪಗಳೊಂದಿಗೆ, ಈ ಅಮೃತ ಕಾಲ ನಮಗೆ ಸಾರ್ವಜನಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದವರನ್ನು ಸ್ಮರಿಸಲು ನಮಗೆ ಪ್ರೇರಣೆ ನೀಡುತ್ತದೆ. ಅವರ ಬಗ್ಗೆ ತಿಳಿಯುವುದು ಇಂದಿನ ಪೀಳಿಗೆಗೆ ಮಹತ್ವದ್ದಾಗಿದೆ ಎಂದರು.

ವಲ್ಲಭ್ ವಿದ್ಯಾನಗರದ ಬಗ್ಗೆ ಮಾತನಾಡಿದ  ಪ್ರಧಾನಮಂತ್ರಿಯವರು, ಶಿಕ್ಷಣವನ್ನು ಪಸರಿಸಲು, ಗ್ರಾಮ ಅಭಿವೃದ್ಧಿ ಕಾರ್ಯಗಳನ್ನು ವೇಗಗೊಳಿಸಲು ಈ ಸ್ಥಳವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು. ಅವರು ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅನುಭವವನ್ನು ಸ್ಮರಿಸಿ, ರಾಜಕೀಯದಲ್ಲಿ ಯಾವುದೇ ಜಾತಿಯ ಬೆಂಬಲವಿಲ್ಲದ ತಮ್ಮಂತಹ ವ್ಯಕ್ತಿಗೆ 2001ರಲ್ಲಿ ರಾಜ್ಯದ ಸೇವೆ ಮಾಡಲು ಜನರು ಆಶೀರ್ವದಿಸಿದರು ಎಂದು ಹೇಳಿದರು. ತಮಗೆ ರಾಜ್ಯದಲ್ಲಿ ಮತ್ತು ನಂತರ ರಾಷ್ಟ್ರಕ್ಕೆ ಇಪ್ಪತ್ತು ವರ್ಷಕ್ಕೂ ಹೆಚ್ಚು ಕಾಲ ಬಿಡುವಿಲ್ಲದೆ ಸೇವೆ ಮುಂದುವರಿಸಲು ಸಾಧ್ಯವಾಗಿದ್ದು, ಜನರ  ಆಶೀರ್ವಾದದ ಬಲದಿಂದ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. "ಎಲ್ಲರೊಂದಿಗೆ ಎಲ್ಲರ ವಿಕಾಸ'ದ ಶಕ್ತಿ ಏನು ಎಂಬುದನ್ನು, ತಾವು ಗುಜರಾತಿನಿಂದಲೇ ಕಲಿತಿದ್ದಾಗಿ" ತಿಳಿಸಿದ ಅವರು, ಹಿಂದೆ ಗುಜರಾತ್‌ ನಲ್ಲಿ ಉತ್ತಮ ಶಾಲೆಗಳ ಕೊರತೆಯಿತ್ತು, ಉತ್ತಮ ಶಿಕ್ಷಣಕ್ಕಾಗಿ ಶಿಕ್ಷಕರ ಕೊರತೆಯಿತ್ತು. ಈ ಸಮಸ್ಯೆಯನ್ನು ಪರಿಹರಿಸಲು ತಾವು ಜನರನ್ನು  ಸಂಪರ್ಕಿಸಿದ್ದು ಹೇಗೆ ಎಂಬುದನ್ನು ಪ್ರಧಾನಮಂತ್ರಿ ವಿವರಿಸಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಭಾಷೆಯಲ್ಲಿ ವೃತ್ತಿಪರ ಕೋರ್ಸ್ ಗಳ ಬೋಧನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಈಗ ವಿದ್ಯಾರ್ಥಿಗಳು ಕೇವಲ ಪದವಿಗೆ ಸೀಮಿತರಾಗಿಲ್ಲ, ಜೊತೆಗೆ ಕಲಿಕೆಯನ್ನು ಕೌಶಲದೊಂದಿಗೆ ಸಂಪರ್ಕಿಸಲಾಗಿದೆ ಎಂದರು. ದೇಶ ಈಗ ಸಾಂಪ್ರದಾಯಿಕ ಕೌಶಲವನ್ನು ಆಧುನಿಕ ಸಾಧ್ಯತೆಗಳ ಜೊತೆಗೆ ಸಂಪರ್ಕಿಸುತ್ತಿದೆ ಎಂದರು.

ಸಾಂಕ್ರಾಮಿಕದಿಂದ ಅದ್ಭುತ ಚೇತರಿಕೆಯ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಕೊರೋನಾ ಸಂಕಷ್ಟದ ಸಮಯದ ಬಳಿಕ ದೇಶದ ಆರ್ಥಿಕತೆ ಸರಿ ದಾರಿಗೆ ಬರುತ್ತಿರುವ ವೇಗದಿಂದ ಇಡೀ ವಿಶ್ವ ಭಾರತದ ಬಗ್ಗೆ ನಂಬಿಕೆ ಇಟ್ಟಿದೆ ಎಂದರು. ಭಾರತವು ಮತ್ತೊಮ್ಮೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಲಿದೆ ಎಂಬ ವಿಶ್ವ ಸಂಸ್ಥೆಯ ಪ್ರತಿಪಾದನೆಯನ್ನು ಅವರು ಉಲ್ಲೇಖಿಸಿದರು.

ಗುಜರಾತ್ ಮುಖ್ಯಮಂತ್ರಿಯವರ  ತಂತ್ರಜ್ಞಾನ ಮತ್ತು  ವಾಸ್ತವತೆಗಳೊಂದಿಗಿನ ಅವರ ಸಂಪರ್ಕವನ್ನು ಪ್ರಧಾನ ಮಮತ್ರಿಯವರು ಗುರುತಿಸಿದರು. "ವಿವಿಧ ಹಂತಗಳಲ್ಲಿ ಕೆಲಸ ಮಾಡಿದ ಅವರ ಅನುಭವವು ಗುಜರಾತ್‌ನ ಅಭಿವೃದ್ಧಿಗೆ ಬಹಳ ಉಪಯುಕ್ತವಾಗಿದೆ" ಎಂದು ಪ್ರಧಾನಮಂತ್ರಿ ಹೇಳಿದರು.

***


(Release ID: 1764300) Visitor Counter : 236