ಪ್ರಧಾನ ಮಂತ್ರಿಯವರ ಕಛೇರಿ

ಭಾರತೀಯ ಪ್ಯಾರಾಲಿಂಪಿಕ್ ತಂಡಕ್ಕೆ ತಮ್ಮ ನಿವಾಸದಲ್ಲಿ ಆತಿಥ್ಯ ನೀಡಿದ ಪ್ರಧಾನಮಂತ್ರಿ


ನೀವು ದೇಶದ ರಾಯಭಾರಿಗಳು ಮತ್ತು ಜಾಗತಿಕ ವೇದಿಕೆಯಲ್ಲಿ ದೇಶದ ಪ್ರತಿಷ್ಠೆ ಹೆಚ್ಚಿಸಿದ್ದೀರಿ: ಪ್ರಧಾನಮಂತ್ರಿ

ಇಡೀ ತಂಡದ ಇಚ್ಛಾಶಕ್ತಿ ಮತ್ತು  ಅದಮ್ಯ ಚೈತನ್ಯವನ್ನು ಶ್ಲಾಘಿಸಿದ ಪ್ರಧಾನಮಂತ್ರಿ

ಕ್ರೀಡೆ ಹೊರತುಪಡಿಸಿ ಇತರೆ ವಲಯಗಳನ್ನು ಗುರುತಿಸಿ, ಕಾರ್ಯ ನಿರ್ವಹಿಸುವ ಮೂಲಕ ಜನರನ್ನು ಪ್ರೇರೇಪಿಸಬೇಕು ಮತ್ತು ಬದಲಾವಣೆ ತರಲು ಸಹಕರಿಸುವಂತೆ ಪ್ಯಾರಾ ಅಥ್ಲೀಟ್ ಗಳು ಪ್ರಧಾನಮಂತ್ರಿ ತಾಕೀತು

ಪ್ರಧಾನಮಂತ್ರಿ ಅವರ ನಿರಂತರ ಮಾರ್ಗದರ್ಶನ, ಉತ್ತೇಜನ ಮತ್ತು ಬೆಂಬಲಕ್ಕೆ ಧನ್ಯವಾದ ಸಲ್ಲಿಸಿದ ಆಟಗಾರರು

Posted On: 09 SEP 2021 1:59PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಟೋಕಿಯೊ 2020 ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಭಾರತೀಯ ತಂಡಕ್ಕೆ ಆತಿಥ್ಯ ನೀಡಿದರು. ತಂಡದಲ್ಲಿ ಪ್ಯಾರಾ ಅಥ್ಲೀಟ್ ಗಳು ಮಾತ್ರವಲ್ಲದೆ, ಅವರ ತರಬೇತುದಾರರು ಸಹ ಇದ್ದರು.

ಪ್ರಧಾನಮಂತ್ರಿ ಅವರು ಇಡೀ ತಂಡದೊಂದಿಗೆ ಅನೌಪಚಾರಿಕ ಹಾಗೂ ಸಹಜ ರೀತಿಯಲ್ಲಿ ಮಾತುಕತೆ ನಡೆಸಿದರು. ಅವರು ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆ ಮಾಡಿ, ದಾಖಲೆ ನಿರ್ಮಿಸಿದ್ದಕ್ಕಾಗಿ ಆಟಗಾರರನ್ನು ಅಭಿನಂದಿಸಿದರು. ಅವರ ಸಾಧನೆಯಿಂದ ದೇಶದ ಇಡೀ ಕ್ರೀಡಾ ಸಮುದಾಯದ ನೈತಿಕಸ್ಥೈರ್ಯ ಗಮನಾರ್ಹವಾಗಿ ಉತ್ತೇಜನಗೊಂಡಿದೆ ಮತ್ತು ಯುವ ಉದಯೋನ್ಮುಖ ಕ್ರೀಡಾ ವ್ಯಕ್ತಿಗಳು ಕ್ರೀಡೆಯಲ್ಲಿ ವೃತ್ತಿ ಮುಂದುವರಿಸಲು ಉತ್ತೇಜನಗೊಂಡಿದ್ದಾರೆ ಎಂದು ಹೇಳಿದರು. ಅವರ ಸಾಧನೆಯಿಂದ ಕ್ರೀಡೆಯ ಹೆಚ್ಚಿನ ಅರಿವು ಮೂಡಿಸಲು ಕಾರಣವಾಗಿದೆ ಎಂದರು.

ಪ್ರಧಾನಮಂತ್ರಿ ಅವರು, ತಂಡದ ಇಚ್ಛಾಶಕ್ತಿ ಮತ್ತು ಅದಮ್ಯ ಸ್ಫೂರ್ತಿಯನ್ನು ವಿಶೇಷವಾಗಿ ಶ್ಲಾಘಿಸಿದರು ಮತ್ತು ಪ್ಯಾರಾ ಅಥ್ಲೀಟ್ ಗಳು ತಮ್ಮ ಜೀವನದಲ್ಲಿ ಸಾಕಷ್ಟು ಅಡೆ-ತಡೆಗಳನ್ನು ಎದುರಿಸಿರುವುದರ ನಡುವೆಯೂ ಶ್ಲಾಘನೀಯ ಸಾಧನೆ ಮಾಡಿದ್ದಾರೆ ಎಂದು ಹೇಳಿದರು. ಪದಕ ಗೆಲ್ಲಲಾಗದ ಅಥ್ಲೀಟ್ ಗಳಿಗೆ ನೈತಿಕ ಸ್ಥೈರ್ಯ ತುಂಬಿದ ಪ್ರಧಾನಮಂತ್ರಿ ಅವರು, ನಿಜವಾದ ಕ್ರೀಡಾ ವ್ಯಕ್ತಿ ಸೋಲು ಅಥವಾ ಗೆಲುವಿನಿಂದ ಕುಗ್ಗುವುದಿಲ್ಲ ಮತ್ತು ಮುನ್ನಡೆಯುತ್ತಲೇ ಇರುತ್ತಾರೆ ಎಂದು ಹೇಳಿದರು. ನೀವೆಲ್ಲಾ ದೇಶದ ರಾಯಭಾರಿಗಳು ಎಂದು ಹೇಳಿದ ಪ್ರಧಾನಮಂತ್ರಿ ಅವರು, ನಿಮ್ಮ ಗಮನಾರ್ಹ ಸಾಧನೆಯ ಮೂಲಕ ಜಾಗತಿಕ ವೇದಿಕೆಯಲ್ಲಿ ರಾಷ್ಟ್ರದ ಪ್ರತಿಷ್ಠೆಯನ್ನು ಹೆಚ್ಚಿಸಿದ್ದೀರಿ ಎಂದು ಹೇಳಿದರು.

ಪ್ಯಾರಾ ಅಥ್ಲೀಟ್ ಗಳುತಪಸ್ಯ, ಪುರುಷಾರ್ಥ ಮತ್ತು ಪರಾಕ್ರಮಗಳ ಮೂಲಕ ಜನರು ತಮ್ಮನ್ನು ನೋಡುವ ರೀತಿಯನ್ನೇ ಬದಲಾಯಿಸಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಪ್ಯಾರಾ ಅಥ್ಲೀಟ್ ಗಳು ಕ್ರೀಡಾ ಜಗತ್ತು ಹೊರತುಪಡಿಸಿ, ಇತರೆ ವಲಯಗಳನ್ನು ಗುರುತಿಸಬೇಕು ಮತ್ತು ಹೇಗೆ ಜನರನ್ನು ಉತ್ತೇಜಿಸಬೇಕು ಮತ್ತು ಬದಲಾವಣೆ ತರಲು ಸಹಕರಿಸಬೇಕು ಎಂಬ ಅವಕಾಶಗಳನ್ನು ಹುಡುಕಬೇಕು ಎಂದು ಹೇಳಿದರು.

ತಮ್ಮನ್ನು ಆಹ್ವಾನಿಸಿದ್ದಕ್ಕಾಗಿ ಪ್ರಧಾನಮಂತ್ರಿ ಅವರಿಗೆ ಪ್ಯಾರಾ ಅಥ್ಲೀಟ್ ಗಳು ಧನ್ಯವಾದಗಳನ್ನು ಹೇಳಿದರು ಮತ್ತು ಒಂದೇ ಟೇಬಲ್ ನಲ್ಲಿ ಅವರ ಜತೆ ಕುಳಿತುಕೊಂಡಿದ್ದೇ ತಮಗೆ ಒಂದು ದೊಡ್ಡ ಸಾಧನೆಯಾಗಿದೆ ಎಂದರುನಿರಂತರ ಮಾರ್ಗದರ್ಶನ, ಉತ್ತೇಜನ ಮತ್ತು ಇಡೀ ಟೂರ್ನಿಯುದ್ದಕ್ಕೂ ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಮಂತ್ರಿ ಅವರಿಗೆ ವಿಶೇಷ ಧನ್ಯವಾದಗಳನ್ನು ಹೇಳಿದರು ಹಾಗೂ ಭಾರತೀಯ ಪ್ಯಾರಾ ಅಥ್ಲೀಟ್ ಗಳನ್ನು ಅಭಿನಂದಿಸಿ, ಪ್ರಧಾನಮಂತ್ರಿ ಅವರೇ ದೂರವಾಣಿ ಮಾಡಿದ್ದನ್ನು ತಿಳಿದು ಇತರೆ ರಾಷ್ಟ್ರಗಳ ಅಥ್ಲೀಟ್ ಗಳು ಆಶ್ಚರ್ಯಚಕಿತರಾದರು ಎಂದು ಹೇಳಿದರು. ಸರ್ಕಾರ ತಮಗೆ ಉತ್ತಮ ತರಬೇತಿ ಸೌಕರ್ಯವನ್ನು ಕಲ್ಪಿಸಲು ಯಾವೊಂದು ಅವಕಾಶವನ್ನೂ ಬಿಡದೆ ಎಲ್ಲ ಕ್ರಮಗಳನ್ನು ಕೈಗೊಂಡಿತು ಎಂದು  ಅಥ್ಲೀಟ್ ಗಳು ಹೇಳಿದರು.

ಹಲವು ಆಟಗಾರರು ತಾವು ಪದಕಗಳನ್ನು ಗೆದ್ದ ಕ್ರೀಡಾ ಸಾಧನಗಳಿಗೆ ಸಹಿ ಹಾಕಿ, ಪ್ರಧಾನಮಂತ್ರಿ ಅವರಿಗೆ ಉಡುಗೊರೆಯಾಗಿ ನೀಡಿದರು. ಎಲ್ಲ ಪದಕ ವಿಜೇತರು ಸಹಿ ಹಾಕಿದ ಸ್ಟೋಲ್ ಅನ್ನು - ಚಾದರವನ್ನು ಪ್ರಧಾನಮಂತ್ರಿ ಅವರಿಗೆ ಉಡುಗೊರೆಯಾಗಿ ನೀಡಿದರು. ಪ್ರಧಾನಮಂತ್ರಿ ಅವರು ಕ್ರೀಡಾ ಸಾಧನಗಳನ್ನು ಹರಾಜಿಗಿಡುವುದಾಗಿ ಹೇಳಿದರು ಮತ್ತು ಅದನ್ನು ಅಥ್ಲೀಟ್ ಗಳು ಸ್ವಾಗತಿಸಿದರು. ಕೇಂದ್ರ ಕ್ರೀಡಾ ಸಚಿವರು ಮತ್ತು ಕೇಂದ್ರ ಕಾನೂನು ಸಚಿವರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

***



(Release ID: 1753495) Visitor Counter : 205