ಪ್ರಧಾನ ಮಂತ್ರಿಯವರ ಕಛೇರಿ

ನಿರ್ಗತಿಕ ಪ್ರಾಣಿಗಳಿಗೆ ಬೆಂಬಲ ನೀಡಿದ್ದಕ್ಕಾಗಿ ನಿವೃತ್ತ ಸೇನಾ ಅಧಿಕಾರಿಯನ್ನು ಪ್ರಶಂಸಿಸಿದ ಪ್ರಧಾನಮಂತ್ರಿ ಮೋದಿ


ತಮ್ಮ ಉಳಿತಾಯದಿಂದ ಪ್ರಾಣಿಗಳಿಗೆ ಆಹಾರ ಮತ್ತು ಚಿಕಿತ್ಸೆ ವ್ಯವಸ್ಥೆ ಮಾಡಿದ ಮೇಜರ್ ಪ್ರಮಿಳಾ ಸಿಂಗ್ (ನಿವೃತ್ತ)

ನಿಮ್ಮ ಉಪಕ್ರಮ ಸಮಾಜಕ್ಕೆ ಸ್ಫೂರ್ತಿಯ ಸೆಲೆ ಎಂದು ಪತ್ರ ಬರೆದ ಪ್ರಧಾನಮಂತ್ರಿ

ಈ ಹಿಂದೆಂದೂ ಕಾಣದ ಸಂಕಷ್ಟ ಪ್ರಾಣಿಗಳಿಗೂ ಕಷ್ಟ ತಂದೊಡ್ಡಿದೆ ಮತ್ತು ನಾವು ಅವುಗಳ ಅಗತ್ಯಕ್ಕೆ ಮತ್ತು ನೋವಿಗೆ ಸ್ಪಂದಿಸಬೇಕು -ಪ್ರಧಾನಮಂತ್ರಿ

Posted On: 18 JUL 2021 12:44PM by PIB Bengaluru

ಭಾರತೀಯ ಸೇನೆಯಿಂದ ಮೇಜರ್ ಆಗಿ ನಿವೃತ್ತರಾಗಿರುವ ರಾಜಾಸ್ಥಾನದ ಕೋಟ ನಿವಾಸಿ ಪ್ರಮೀಳಾ ಸಿಂಗ್ ಅವರಿಗೆ ಪತ್ರ ಬರೆದಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಅವರ ಕರುಣೆ ಮತ್ತು ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೊನಾ ಲಾಕ್ ಡೌನ್ ವೇಳೆ, ಮೇಜರ್ ಪ್ರಮೀಳಾ ಸಿಂಗ್ (ನಿವೃತ್ತ), ತಮ್ಮ ತಂದೆ ಶ್ಯಾಮ್ ವೀರ್ ಸಿಂಗ್ ಅವರೊಂದಿಗೆ ನಿರ್ಗತಿಕ ಪ್ರಾಣಿಗಳ ನೋವು ಅರ್ಥಮಾಡಿಕೊಂಡು, ಕಾಳಜಿ ವಹಿಸಿ, ನೆರವು ನೀಡಿದರು. ಮೇಜರ್ ಪ್ರಮೀಳಾ ಸಿಂಗ್ ಮತ್ತು ಅವರ ತಂದೆ, ರಸ್ತೆಯಲ್ಲಿ ಅಲೆಯುತ್ತಿದ್ದ ಬೀದಿ ಪ್ರಾಣಿಗಳಿಗೆ ಆಹಾರವನ್ನು ತಮ್ಮ ಸ್ವಂತ ವೆಚ್ಚದಿಂದ ಒದಗಿಸಿದ್ದರು. ಮೇಜರ್ ಪ್ರಮೀಳಾ ಅವರನ್ನು ಶ್ಲಾಘಿಸಿರುವ ಪ್ರಧಾನಮಂತ್ರಿ ಮೋದಿ, ಅವರ ಪ್ರಯತ್ನ ಸಮಾಜಕ್ಕೆ ಸ್ಫೂರ್ತಿಯ ಸೆಲೆಯಾಗಿದೆ ಎಂದು ಹೇಳಿದ್ದಾರೆ.  

ಪ್ರಧಾನಮಂತ್ರಿಯವರು ತಮ್ಮ ಪತ್ರದಲ್ಲಿ, 'ಕಳೆದ ಒಂದೂವರೆ ವರ್ಷಗಳ ಅವಧಿಯಲ್ಲಿ, ನಾವು ಹಿಂದೆಂದೂ ಕಾಣದಂತಹ ಪರಿಸ್ಥಿತಿಯನ್ನು ನೋಡಿದ್ದೇವೆ ಮತ್ತು ಎದುರಿಸಿದ್ದೇವೆ. ಇದು ಜನ ತಮ್ಮ ಜೀವಿತದಲ್ಲಿ ಮರೆಯಲಾಗದ ಐತಿಹಾಸಿಕ ಕಾಲಘಟ್ಟವಾಗಿದೆ. ಇದು ಮನುಷ್ಯರಿಗೆ ಮಾತ್ರ ಸಂಕಷ್ಟದ ಸಮಯವಲ್ಲ, ಜೊತೆಗೆ ಮನುಷ್ಯನ ಸುತ್ತ ಬದುಕುತ್ತಿರುವ ಹಲವು ಜೀವಿಗಳಿಗೂ ಸಂಕಷ್ಟದ ಕಾಲವಾಗಿದೆ. ಇಂತಹ ಸನ್ನಿವೇಶದಲ್ಲಿ, ನಿರ್ಗತಿಕ ಪ್ರಾಣಿಗಳ ನೋವು ಅರ್ಥ ಮಾಡಿಕೊಂಡು, ಅವುಗಳ ಕಲ್ಯಾಣಕ್ಕಾಗಿ ವೈಯಕ್ತಿಕ ಸಾಮರ್ಥ್ಯದೊಂದಿಗೆ ಸ್ಪಂದಿಸಿದ ನಿಮ್ಮ ಕಾರ್ಯ ಶ್ಲಾಘನಾರ್ಹವಾದ್ದು ಎಂದು ತಿಳಿಸಿದ್ದಾರೆ

ಅದೇ ವೇಳೆ ಪ್ರಧಾನಮಂತ್ರಿ ಮೋದಿ ಅವರು ತಮ್ಮ ಪತ್ರದಲ್ಲಿ, ಸಂಕಷ್ಟದ ಸಮಯದಲ್ಲಿ, ಇಂತಹ ಹಲವು ಉದಾಹರಣೆಗಳನ್ನು ನೋಡಬಹುದಾಗಿದ್ದು, ಅವು ನಮಗೆ ಮಾನವೀಯತೆಯ ಬಗ್ಗೆ ಹೆಮ್ಮೆ ಪಡುವಂತೆ ಮಾಡುತ್ತವೆ ಎಂದು ತಿಳಿಸಿದ್ದಾರೆ. ಮೇಜರ್ ಪ್ರಮೀಳಾ ಮತ್ತು ಅವರ ತಂದೆ, ತಮ್ಮ ಉಪಕ್ರಮಗಳಿಂದ ಸಮಾಜದಲ್ಲಿ ಜಾಗೃತಿ ಮೂಡಿಸುವ ತಮ್ಮ ಕಾರ್ಯದ ಮೂಲಕ ಜನರಿಗೆ ಪ್ರೇರಣೆ ನೀಡುತ್ತಲೇ ಇರುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇದಕ್ಕೂ ಮುನ್ನ, ಮೇಜರ್ ಪ್ರಮೀಳಾ ಸಿಂಗ್ ಅವರು ಪ್ರಧಾನಮಂತ್ರಿಯವರಿಗೆ ಪತ್ರ ಬರೆದು, ಲಾಕ್ ಡೌನ್ ಸಮಯದಲ್ಲಿ ಪ್ರಾಣಿಗಳ ಕಾಳಜಿಗಾಗಿ ತಾವು ಕೈಗೊಂಡ ಕಾರ್ಯ ನಿರಂತರವಾಗಿ ಮುಂದುವರಿದಿದೆ ಎಂದು ತಿಳಿಸಿದ್ದಾರೆ. ತಮ್ಮ ಪತ್ರದಲ್ಲಿ ಅಸಹಾಯಕ ಪ್ರಾಣಿಗಳ ನೋವಿನ ಬಗ್ಗೆ ಪ್ರಸ್ತಾಪಿಸಿರುವ ಅವರು, ಹೆಚ್ಚಿನ ಜನರು ಅಂತಹ ಪ್ರಾಣಿಗಳಿಗೆ ನೆರವಾಗಲು ಮುಂದೆ ಬರಬೇಕು ಎಂದು ಕೋರಿದ್ದಾರೆ

***


(Release ID: 1736577) Visitor Counter : 289