ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತ್‌ನಲ್ಲಿ ವಿವಿಧ ಯೋಜನೆಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ


ಕೇವಲ ಕಾಂಕ್ರೀಟ್ ರಚನೆಯಲ್ಲ, ತನ್ನದೇ ಆದ ಗುಣಲಕ್ಷಣ ಹೊಂದಿರುವ ಮೂಲಸೌಕರ್ಯ ನಮ್ಮ ಗುರಿ: ಪ್ರಧಾನಿ

ಭಾರತದ 21 ನೇ ಶತಮಾನದ ಅಗತ್ಯಗಳನ್ನು 20 ನೇ ಶತಮಾನದ ಕಾರ್ಯವೈಖರಿಯಿಂದ ಈಡೇರಿಸಲಾಗುವುದಿಲ್ಲ: ಪ್ರಧಾನಿ

ಮನರಂಜನಾ ಚಟುವಟಿಕೆಗಳನ್ನು ಹೊಂದಿರುವ ಸೈನ್ಸ್ ಸಿಟಿಯು ಮಕ್ಕಳಲ್ಲಿ ಸೃಜನಶೀಲತೆಯನ್ನು ಪ್ರೋತ್ಸಾಹಿಸುತ್ತದೆ: ಪ್ರಧಾನಿ

ನಾವು ರೈಲ್ವೆಗಳನ್ನು ಸೇವೆಯಾಗಿ ಮಾತ್ರವಲ್ಲದೆ ಆಸ್ತಿಯಾಗಿಯೂ ಅಭಿವೃದ್ಧಿಪಡಿಸಿದ್ದೇವೆ: ಪ್ರಧಾನಿ

2 ಮತ್ತು 3 ನೇ ಶ್ರೇಣಿ ನಗರಗಳ ರೈಲು ನಿಲ್ದಾಣಗಳು ಸಹ ಸುಧಾರಿತ ಸೌಲಭ್ಯಗಳನ್ನು ಹೊಂದಿವೆ: ಪ್ರಧಾನಿ

Posted On: 16 JUL 2021 5:45PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನಲ್ಲಿನ ರೈಲ್ವೆಯ ಹಲವಾರು ಪ್ರಮುಖ ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು ಮತ್ತು ರಾಷ್ಟ್ರಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಅವರು ಅಕ್ವಾಟಿಕ್ಸ್ ಮತ್ತು ರೊಬೊಟಿಕ್ಸ್ ಗ್ಯಾಲರಿ ಮತ್ತು ಗುಜರಾತ್ ಸೈನ್ಸ್ ಸಿಟಿಯಲ್ಲಿನ ನೇಚರ್ ಪಾರ್ಕ್ ಅನ್ನು ಉದ್ಘಾಟಿಸಿದರು. ಅವರು ಗಾಂಧಿನಗರ ಕ್ಯಾಪಿಟಲ್ - ವಾರಾಣಸಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಮತ್ತು ಗಾಂಧಿನಗರ ಕ್ಯಾಪಿಟಲ್ ಮತ್ತು ವಾರೆಥಾ ನಡುವಿನ ಮೆಮು ರೈಲುಗಳಿಗೆ ಹಸಿರು ನಿಶಾನೆ ತೋರಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಯವರು, ಕೇವಲ ಕಾಂಕ್ರೀಟ್ ರಚನೆ ಮಾತ್ರವಲ್ಲ, ತನ್ನದೇ ಆದ ಗುಣಲಕ್ಷಣವನ್ನು ಹೊಂದಿರುವ ಮೂಲಸೌಕರ್ಯವನ್ನು ಸೃಷ್ಟಿಸುವುದು ಇಂದು ದೇಶದ ಗುರಿಯಾಗಿದೆ ಎಂದರು. ಮಕ್ಕಳ ಸಹಜ ಅಭಿವೃದ್ಧಿಗೆ ಕಲಿಕೆ ಮತ್ತು ಸೃಜನಶೀಲತೆಯು ಮನರಂಜನೆಯೊಂದಿಗೆ ಜಾಗವನ್ನು ಪಡೆಯಬೇಕು ಎಂದು ಅವರು ಹೇಳಿದರು. ಸೈನ್ಸ್ ಸಿಟಿಯು ಮರು-ರಚನೆ ಮತ್ತು ಮರು-ಸೃಜನಶೀಲತೆಯನ್ನು ಸಂಯೋಜಿಸುವ ಯೋಜನೆಯಾಗಿದೆ ಎಂದು ಅವರು ಹೇಳಿದರು. ಇದು ಮಕ್ಕಳಲ್ಲಿ ಸೃಜನಶೀಲತೆಯನ್ನು ಪ್ರೋತ್ಸಾಹಿದಸುವ ಅಂತಹ ಮರು-ಸೃಜನಶೀಲ ಚಟುವಟಿಕೆಗಳನ್ನು ಹೊಂದಿದೆ ಎಂದರು.

ಸೈನ್ಸ್ ಸಿಟಿಯಲ್ಲಿ ನಿರ್ಮಿಸಲಾದ ಅಕ್ವಾಟಿಕ್ಸ್ ಗ್ಯಾಲರಿ ಇನ್ನಷ್ಟು ಆನಂದದಾಯಕವಾಗಲಿದೆ ಎಂದು ಪ್ರಧಾನಿ ಹೇಳಿದರು. ಇದು ದೇಶದಲ್ಲಿ ಮಾತ್ರವಲ್ಲದೆ ಏಷ್ಯಾದ ಅಗ್ರ ಮತ್ಸಾಲಯಗಳಲ್ಲಿ ಒಂದಾಗಿದೆ. ಪ್ರಪಂಚದಾದ್ಯಂತದ ಸಾಗರ ಜೀವವೈವಿಧ್ಯವನ್ನು ಒಂದೇ ಸ್ಥಳದಲ್ಲಿ ನೋಡುವುದು ಅದ್ಭುತ ಅನುಭವವಾಗಿದೆ ಎಂದು ಅವರು ಹೇಳಿದರು.

ರೊಬೊಟಿಕ್ಸ್ ಗ್ಯಾಲರಿಯಲ್ಲಿ ರೋಬೋಟ್‌ಗಳೊಂದಿಗಿನ ಸಂವಹನವು ಆಕರ್ಷಣೆಯ ಕೇಂದ್ರ ಮಾತ್ರವಲ್ಲದೆ ನಮ್ಮ ಯುವಕರಿಗೆ ರೊಬೊಟಿಕ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ ಮತ್ತು ಅವರಲ್ಲಿ ಕುತೂಹಲವನ್ನು ಮೂಡಿಸುತ್ತದೆ ಎಂದು ಪ್ರಧಾನಿ ಹೇಳಿದರು.

21 ನೇ ಶತಮಾನದ ಭಾರತದ ಅಗತ್ಯಗಳನ್ನು 20 ನೇ ಶತಮಾನದ ಕಾರ್ಯವೈಖರಿಯಿಂದ ಈಡೇರಿಸಲಾಗುವುದಿಲ್ಲ ಎಂದು ಪ್ರಧಾನಿ ಒತ್ತಿ ಹೇಳಿದರು. ರೈಲ್ವೆಯಲ್ಲಿ ಹೊಸ ಸುಧಾರಣೆಯ ಅಗತ್ಯವಿತ್ತು. ರೈಲ್ವೆಯನ್ನು ಕೇವಲ ಸೇವೆಯಾಗಿ ಮಾತ್ರವಲ್ಲದೆ ಆಸ್ತಿಯಾಗಿಯೂ ಅಭಿವೃದ್ಧಿಪಡಿಸುವ ಪ್ರಯತ್ನಗಳ ಫಲಿತಾಂಶಗಳು ಇಂದು ಗೋಚರಿಸುತ್ತಿವೆ ಎಂದು ಅವರು ಹೇಳಿದರು. ಇಂದು ದೇಶಾದ್ಯಂತದ ಪ್ರಮುಖ ರೈಲು ನಿಲ್ದಾಣಗಳನ್ನು ಆಧುನೀಕರಿಸಲಾಗುತ್ತಿದೆ. 2 ಮತ್ತು 3 ನೇ ಶ್ರೇಣಿ ನಗರಗಳಲ್ಲಿನ ರೈಲ್ವೆ ನಿಲ್ದಾಣಗಳು ಸಹ ಈಗ ವೈ-ಫೈ ಸೌಲಭ್ಯಗಳನ್ನು ಹೊಂದಿವೆ. ಜನರ ಸುರಕ್ಷತೆಯನ್ನು ಹೆಚ್ಚಿಸಲು ಬ್ರಾಡ್ ಗೇಜ್‌ ಮಾರ್ಗದಲ್ಲಿರುವ ಮಾನವರಹಿತ ರೈಲ್ವೆ ಕ್ರಾಸಿಂಗ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದರು.

ಭಾರತದಂತಹ ವಿಶಾಲವಾದ ದೇಶದಲ್ಲಿ ರೈಲ್ವೆ ವಹಿಸಿರುವ ನಿರ್ಣಾಯಕ ಪಾತ್ರವನ್ನು ಪ್ರಧಾನಿ ಒತ್ತಿ ಹೇಳಿದರು. ರೈಲ್ವೆಯು ಅಭಿವೃದ್ಧಿಯಲ್ಲಿ ಹೊಸ ಆಯಾಮಗಳು ಹಾಗೂ ಸೌಲಭ್ಯಗಳಲ್ಲಿ ಹೊಸ ಆಯಾಮಗಳನ್ನು ತಂದಿದೆ ಎಂದು ಅವರು ಹೇಳಿದರು. ಕಳೆದ ಕೆಲವು ವರ್ಷಗಳ ಪ್ರಯತ್ನದಿಂದಾಗಿ, ಇಂದು ರೈಲುಗಳು ಮೊದಲ ಬಾರಿಗೆ ದೇಶದ ಈಶಾನ್ಯ ಭಾಗದ ರಾಜಧಾನಿಗಳನ್ನು ತಲುಪುತ್ತಿವೆ. “ಇಂದು ವಡ್ನಾಗರ ಕೂಡ ಈ ವಿಸ್ತರಣೆಯ ಒಂದು ಭಾಗವಾಗಿದೆ. ವಡ್ನಾಗರ ನಿಲ್ದಾಣದ ಬಗ್ಗೆ ನನಗೆ ಹಲವಾರು ನೆನಪುಗಳಿವೆ. ಹೊಸ ನಿಲ್ದಾಣವು ನಿಜವಾಗಿಯೂ ಆಕರ್ಷಕವಾಗಿ ಕಾಣುತ್ತಿದೆ. ಈ ಹೊಸ ಬ್ರಾಡ್ ಗೇಜ್ ಮಾರ್ಗವನ್ನು ನಿರ್ಮಿಸುವುದರೊಂದಿಗೆ, ವಡ್ನಗರ್-ಮೊಧೇರಾ-ಪಟಾನ್ ಹೆರಿಟೇಜ್ ಸರ್ಕ್ಯೂಟ್ ಈಗ ಉತ್ತಮ ರೈಲು ಸೇವೆಯೊಂದಿಗೆ ಸಂಪರ್ಕ ಹೊಂದಿದೆ ”ಎಂದು ಪ್ರಧಾನಿ ಹೇಳಿದರು.

ಏಕಕಾಲದಲ್ಲಿ ಎರಡು ಹಳಿಗಳ ಮೇಲೂ ಚಲಿಸುವ ಮೂಲಕ ಮಾತ್ರ ನವ ಭಾರತದ ಅಭಿವೃದ್ಧಿಯ ವಾಹನವು ಮುಂದುವರಿಯುತ್ತದೆ ಎಂದು ಪ್ರಧಾನಿ ಹೇಳಿದರು. ಆಧುನಿಕತೆ ಒಂದು ಹಳಿಯಾದರೆ ಇನ್ನೊಂದು ಬಡವರು, ರೈತರು ಮತ್ತು ಮಧ್ಯಮ ವರ್ಗದವರ ಕಲ್ಯಾಣವಾಗಿದೆ ಎಂದು ಅವರು ಹೇಳಿದರು.

***



(Release ID: 1736269) Visitor Counter : 272